ಭಾಗ

ಶರಣು ಮಂಗಳ ಶರಣು ಸುಂದರ
ಶರಣು ಭಕ್ತಜನ ಸೇವಕ
ಶರಣು ಸಕಲ ವಿದ್ಯಾದಾಯಕ
ಶರಣು ಶ್ರೀ ಗಣನಾಯಕ

ಗಂಗೆ ಗೌರಿ ಮನ್ನೆ ಪಾರ್ವತಿ
ಸಂಗಮೇಶನ ಭಜಿಸಲು
ಅಂಗಲಿಂಗ ಪ್ರಾಣಲಿಂಗ
ಘನಲಿಂಗನ ಪೂಜೆಯ ಮಾಡಲು

ಆರು ಶಾಸ್ತ್ರವು ನಾಲ್ಕು ವೇದವು
ಆದಿ ಮಲ್ಲನ ಮೂಲೆಯು
ಚೋದಿಗದ ಬಸವಲಿಂಗನ
ಸೇರಿ ನೀ ಸುಖಿ ಬಾಳಲೊ

ಸುರಮುನಿ ಸೇವಿತ ಸುಂದರ ಗಣನಾಯಕ
ಮುಕ್ಕಣ್ಣಯ್ಯನ ಮಗ ವೀರಭದ್ರ ವಿನಾಯಕ
ಪಾಹಿಮಾಂ ಪಾಹಿಮಾಂ ಸೊಂಡಿಲ ಬೆನಕಯ್ಯ

ಹತ್ತು ಮಾರುದ್ದ ಪುಸ್ತಕವ ಹಿಡಕಂಡು
ಎತ್ತುವೆನು ಅವರ ಮೊದಲಿಂದ – ಶಿವನಾರಾಯಣರ
ಈ ಭೂಮಿಗೆ ದೊಡ್ಡೋರ ವಚನವ

ಆರು ಮಾರುದ್ದ ಪುಸ್ತಕವ ಹಿಡಕೊಂಡು
ಹೇಳುವೆ ಅವರ ಮೊದಲಿಂದ – ಕೈಲಾಸದ
ಶಿವನಾರಾಯಣರ ಗುರುವಚನ
ಹೇಳಿದವರಿಗೆ ಹತ್ತುಕೋಟಿ
ಕೇಳಿದವರಿಗನ್ನೊಂದುಕೋಟಿ
ಸುವ್ವಿ ಅಂದರೆ ಪಾಪ ಪರಿಹಾರ

ಸುವ್ವಿ ಸಂಗಯ್ನ ಗುರುವಚನ ಓದುವೆನು
ತೊಡೆ ಮಡಗದೆ ಕೇಳಿ ಹಿರಿಯರೆ

ಉತ್ತರ ದಿಕ್ಕಿನ ಒಳಗೆ ಓರುಗಲ್ಲು ಪಟ್ಟಣ
ಒತ್ತಲ್ಲಿ ಪುರ ಕೈಲಾಸ-ಒಳಗಿರುವ
ಶಿವಭಕ್ತರು ಮೆರೆದ ಕತಕೇಳಿ

ಶಿವನಾರಾಯಣ ಇಬ್ಬರೂವೆ ಈ ಧರೆಗೆ ಕಳ್ಳರಂತೆ
ಪುರದವರಿಗೆಲ್ಲ ಘನಪತಿ- ರಾಜನರಮನೆಯ
ಸಿರಿಯ ಕದ್ದಂಥ ಕತೆಕೇಳಿ

ಕಳ್ಳರ ಗಂಡ ಎಂಬುದರಿಯ ಕಾಲಿಗೆ ಪೆಂಡೆ ಧರಿಸವನೆ
ಬಲ್ಲಿದರಾಜ ಘನಪತಿ-ಅರಮನೆಯಲ್ಲಿ
ಸೊಲ್ಲು ಸೊಲ್ಲಿಗೆ ಕಾಳೆ ಓಂಕರಿಸಿದವು

ನನ್ನ ಮಡದಿಯ ಮೈಮುಟ್ಟ ಒಡವೆಯ ಕದ್ದವನ
ಹಿಡಗಂಡ ಮಾಡಿ ಕುಯಿಸುವೆನು – ಎನುತೇಳಿ
ಕಂಚಿನ ಕಾಳೆ ನುಡಿಸ್ಯಾನೆ

ಕನ್ನೆಯ ಮೈಮುಟ್ಟಿ ಚಿನ್ನದ ಕದ್ದವನ
ಚಿನ್ನಗಂಮಾಡಿ ಕುಯಿಸುವೆ-ಎನುತೇಳಿ
ಚಿನ್ನದ ಕಾಳೆ ಓಂಕರಿಸಿದವು

ಅರಸದೆಸೆಮಾನ್ಯವರ ಮನೆಯ ನುಗ್ಗಿ ಬರಲಿ ನನ್ನ ಬಳಿಗೆ
ಅರಸ ಘನಪತಿರಾಜ ಅರಿತರೆ ಉಂಟಾದರೆ ಅವ
ರೇರೂ ಶೂಲ ನಾನೇರುತೀನಿ

ಮಡದಿ ರಾಮಾಯಿಗೆ ಚಿನ್ನದ ಲಗ. ದೊರೆಗೆ ಮುತ್ತಿನ ಕಾಲು ಪಿಂಡಿ,  ಚಿನ್ನದ ಚಂದ್ರಾಯುಧ,  ಇವನ್ನು ಕದ್ದುಕೊಂಡು ಈ ನರಲೋಕದ ಕಳ್ಳನಾದರು ಬರಲಿ ಸುರಲೋಕದ ಕಳ್ಳನಾದರು ಬರಲಿ,  ಕದ್ದ ಕಳ್ಳನ ನಾ ಕೂಡೋದಿಲ್ಲ. ಕಳ್ಳ ಏರೋ ಶೂಲಕೆ ನಾ ಏರುತೀನಿ

ಮೂರು ಹೊತ್ತಿನ ಕಾಳೆ ಸಾರ್ಯಾವು ಹಗಲಲ್ಲಿ
ದೂರು ಮುಟ್ಟಿದವು ಶಿವನಿಗೆ-ಕೈಲಾಸದಲ್ಲಿ
ಪಾರ್ವತಿ ಕೇಳಿ ನಗುತಾಳೆ

ಪಾರ್ವತಿ ಪರಶಿವರು ದಾಯ ಪಗಡೆ ಆಡುತಾ ಇದ್ದಾರೆ. ಪಾರ್ವತಿ ಪಗಡೆ ಕೈ ನಿಲ್ಲಿಸಿ ನಗೆನಾಡಿದಳು. ಏಕೆ ಎಂದು ಪರಮೇಶ್ವರ ಕೇಳಿದನು. ಎಲ್ಲ ದೇವ ಮಾನ್ಯವರಿಗೆ ಎರಡು ಕಣ್ಣು. ನಿಮಗೆ ಮೂರು ಕಣ್ಣು,  ಹತ್ತುತೋಳು,  ಪಂಚಕಶ. ನಿಮಗಿಂತ ಪುರುಷರು ನಮಗೆ ಬೇಕೆ. ನರಲೋಕದಲ್ಲಿ ಒಂದು ಚೋಜಿಗವಾಯಿತು. ಘನಪತಿರಾಯನ ಪಟ್ಟಣದಲ್ಲಿ ಸೋಜುಗದ ಚಿನ್ನದ ಕಹಳೆಯಾಯಿತು.

ಮಡದಿಯ ಮೈಯಮುಟ್ಟಿ
ಒಡವೆಯ ಕದ್ದವನ
ಹಿಡಿಗಂಡಮಾಡಿ ಕುಯ್ಯುವೆನು

ಕನ್ನೆಯ ಮೈ ಮುಟ್ಟಿ ಚಿನ್ನವ ಕದ್ದವನ
ಚಿನಗಂಡಮಾಡಿ ಕುಯ್ಯುವೆ-ಎನುತೇಳಿ
ಘನಪತಿರಾಯ ಸಾರಿಸಿದ

ಘನಪತಿರಾಯ ಚಿನ್ನದ ಕಹಳೆಯನ್ನು ಸಾರಿಸಿದ ಡಂಗೂರವನ್ನು ಕೇಳಿ ಕೆಳಗೆ ಮಣ್ಣು ಮಡಕೆ ಮಾಡಿಕೊಂಡು ಜೀವನ ಮಾಡೋ ಕುಂಬಾರಶೆಟ್ಟಿ ಕುಂಬಾರ ಗುಂಡಯ್ಯ ಗುಂಡಾಪುರದಲ್ಲಿ ಏನಹೇಳುತ್ತಾನೆ ಅಂತ! ದೆಸೆಮಾನ್ಯವರ ಅರಮನೇಲಿ ಹೋಗಿ ಏಳುಸುತ್ತಿನ ಕೋಟೆಗೆ ಕನ್ನ ಹಾಕಿ ಬರಲಿ ನನ್ನ ಬಳಿಗೆ,  ನನ್ನ ಮರೆಬೀಳಲಿ. ಅವರನ್ನ ಮುಂದಕ್ಕೆ ಕೂಡೋದಿಲ್ಲ. ಕಳ್ಳ ಏರುವ ಶಿಕ್ಷೆ ನಾನು ಏರುತೀನಿ. ಅವನು ಏರುವ ಶೂಲಕೆ ನಾನು ಏರುತೀನಿ. ಅವನ್ನ ಬಿಟ್ಟುಕೊಡೋದಿಲ್ಲ ಅನುತೇಳಿ ಮಣ್ಣಿನ ಕಾಳೆ ನುಡಿಸಿದ್ದಾನೆ. ಇದನ್ನು ಕೇಳಿ ನನಗೆ ನಗುಬಂತು.

ಕಂಡಿರ ಪರಶಿವನ ಶರಣನ ಗುಂಡಿಗೆ ಧೀರ್ಯ
ಮಂಡೇಯ ಹಂಗು ತನಗಿಲ್ಲ – ಗುಂಡಬ್ರಹ್ಮನ
ಗಂಡಾಳುಸ್ತನದ ಬಿರುದಿನ

ಗಂಡಾಳುಸ್ತನದ ಬಿರುದಿನ ತೆಂಡೆ ತರುವ
ದಿಂಡೇದ ಶಕ್ತಿನಿಮಗಿಲ್ಲವೆ
ಸ್ವಾಮಿಗೆ ಕ್ವಾಪ ಬಂದಿತು

ಪಾರ್ವತಿ ಆಡಿದ ಮಾತ ಪರಮೇಶ್ವರ ಕೇಳಿದನು
ಬೊಳಂಬಲಿ ಎದೆಗೆ ಬಡಿದಾಗೆ – ಜಗದೀಶ
ತನ್ನ ನಾರಿ ಸಂಗಟ ಏನು ನುಡಿದನು

ಹಾಳು ಮಾಡುವೆ ಗೌರಿ ಶರಣನ ಶರಣನ ಗಾಳಿಗೆತ್ತಿ ತೂರುವೆ
ಧೂಳಿ ಪಟಮಾಡಿ ಕೆಡಿಸುವೆ – ಗುಂಡುಬ್ರಹ್ಮನ
ಶೂಲದ ಕೊಂಬೆಮೇಲೆ ತಂದು ನಿಲಿಸುವೆ
ಏಳುದಿನದಲಿ ನಾನು ಗುಂಡಬ್ರಹ್ಮಯ್ಯನನು
ಶೂಲದ ಕೊಂಬೆಗೆ ನಿಲ್ಲಿಸುವೆ

ಪಾರ್ವತಿಯೊಂದಿಗೆ ವಾದಪಂತವ ಆಡಿ
ನಂದಿ ಹಜಾರಕ್ಕೆ ತೆರಳಿದರು-ಜಗದೀಶ
ಮಹಾಗಣಂಗಳನೆಲ್ಲ ಕರೆಸಿದರು

ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶರಣಾರು
ಅರವತ್ತಾರು ಕೋಟಿ ಪುರಾತನರು-ಎಲ್ಲರನು
ಒಡ್ಡೋಲಗಕೆ ಸ್ವಾಮಿ ಕರೆಸೀದ

ಸ್ವಾಮಿಯ ಒಡ್ಡೋಲಗ ಎಷ್ಟು ಯೋಜನವಯ್ಯ
ಮುನ್ನೂರ ಮುವತ್ತು ಯೋಜನ ದೂರವಲ್ಲ – ಜಗದೀಶ
ಒಡ್ಡೋಲಗ ನೋಡುತ ನಿಂತುಗೊಂಡ

ನಂದಗೋಕುಲದಿಂದ ನವತಂತ್ರಿ ನಾರಾಯಣ
ಬಂದು ಸ್ವಾಮಿಯವರ ಬಲಚೋರಿ-ನಿಂತುಗೊಂಡು
ಒಡ್ಡೋಲಗವ ಸ್ವಾಮಿ ನಡೆಸ್ಯಾನೆ

ಮಾಗಣಗಳನೆಲ್ಲ ಕರಸಿದರು ಜಗದೀಶ
ಹರನು ಮಲ್ಲಯ್ಯ ವಾಲೆಯ ಓದಿದರು

ಓರುಗಲ್ಲಿಗೆ ಹೋಗಿ ಈರವನು ತಿಳಿದವನು
ಯಾರುಂಟು ದೇವ ನಮ್ಮ ಸಭೆಯಲ್ಲಿ-ಎಂದರೆ
ನಾರಾಯಣ ಬಂದು ಕರವ ನಮಿಸಿದ

ಆಗ ಸ್ವಾಮಿಯವರು “ನವತಂತ್ರಿ ನಾರಾಯಣ ಕೇಳು ಕೀಳೇಳು ಲೋಕ ಮೇಲೇಳು ಲೋಕದಲ್ಲುವೆ ಇಂತೆ ಜಾಗದಲ್ಲಿಯೇ ಇರತದೆ ಅಂತ ನಿನಗೆ ಗೊತ್ತು. ಆದರೆ ನನಗೆ ಸಲುವಾಗಿ ಆ ಪಟ್ಟಣಕ್ಕೆ ಹೋಗಿ ಬಿಟ್ಟು ಬರಬೇಕಲ್ಲ!” ಅಂದರು ಸ್ವಾಮಿಯವರು. ಅಪ್ಪಣೆಯಾದರೆ ಹೋಯಿತೀನಿ ಅಂದ ನಾರಾಯಣ.

ಹರಿಯಾಸದಲ್ಲಿ ಹೋದರೆ ಹೋಗಲೀಸರು ಅವರು
ಆ ಧರಣಿಗಿಳಿವಂತ ಬಗೆ ಹ್ಯಾಗೆ

ನಾ ಏನು ಮಾಡಲಿ ನವತಂತ್ರಿ ನಾರಾಯಣ
ಜಂಗಮರ ಯಾಸವ ಕೊಡುತೀವಿ
ಹಾಗನ್ನುವುದಾಗಿ ಜಗದೀಶನು ಹೇಳಿದ ಮೇಲೆ ನಾರಾಯಣ ತನ್ನ ಅವರಾತವನ್ನೆಲ್ಲ
ಕೈಲಾಸದಲ್ಲಿ ಕಳೆದು ಮಡಗಿ ಈಶ್ವರನ ಅವತಾರ ತಾಳಿದನು

ಬಾರಿಯ ಕಿನ್ನುಡಿ ಬಟುವನಾಕ್ಷಪಾತ್ರೆ
ಆರು ಶಾಸ್ತ್ರಗಳು ಬರೆದೋಲೆ-ಅಕ್ಷಯ ಪಾತ್ರೆಯ
ನಮ್ಮ ಭೋಗಯ್ಯ ಮೆಚ್ಚಿ ಕೊಡುತಾರೆ

ಸೂಕ್ಷ್ಮದ ಚಂಜಡೆ ಸುಲಿಪಲ್ಲು ನಗೆಮುಖ
ರೇಖು ಗಂಧಗಳು ಭಸಿತವು-ಇವುಗಳನೆ
ಬೇಕೆಂದು ಶಿವನು ಕೊಡುತಾರೆ

ಈಶ್ವರನ ಕೈಯ ಬಿರುದುಗಳ ಹಿಡಿದರು
ತಿರುಗಿದರು ಓರುಗಲ್ಲ ಪುರಕಾಗ

ಭಕ್ತರ ಮನದ ದೃಢ ನೋಡುವುದಕೆ
ಮರ್ತ್ಯಲೋಕಕ್ಕೆ ಇಳಿದರು

ಶರಣರ ಮಠದಲ್ಲಿ ಹಿರಿಯ ಸಿಂಹಾಸನ
ಗುಡುಗು ಜಾಗಟೆ ಕೈಯಚಾಳೆ-ಸಪ್ತಕೇಳಿ
ಭರದಿಂದ ನಾರಾಯಣ ಹೊರಟನು

ಬಂದಂಥ ನಾರಾಯಣನ ಕಂಡರು ದ್ವಾರಪಾಲರು
ತಡೆದು ಹಿಂದಕ್ಕೆ ನಿಲ್ಲಿಸಿದರು

ಎಲ್ಲಿಂದ ಬಂದಿರಂತ ಎಲ್ಲಿರುವೆ ಕೇಳಿದರು
ಕಲ್ಯಾಣದಾಚೆ ಕಡೆಯಲ್ಲಿ-ಶಿವಪುರ
ಅಲ್ಲುಂಟು ನಮ್ಮ ಮಠ ಮನೆ

ದಾಸವಾಳದ ಹೂ ತಂದು ಈಸುರಾಚಣೆಮಾಡಿ
ನಾವು ಲೇಸಾಗಿ ಉಂಡು ಮನಗಿದ್ದೊ-ಗೊಲ್ಲರೆ
ನಾವು ಲೋಕವನೆ ನೋಡದುಕ್ಕೆ ತೆರಳಿದ್ದೊ

ಅಂತಪ್ಪ ಶರಣನ ಸಂತೋಷ ನೋಡುವೆವು
ಎಂತವರಿದ್ದಾರು ಮಠದಲ್ಲಿ-ಗುಂಡುಬ್ರಹ್ಮಯ್ಯನ
ಒಂದು ಕಂತೆ ಬೇಡುವೆನು ಬಿಡಿರಯ್ಯ
ಧರ್ಮಕ್ಕೆ ಬಂದವರ ತಡೆಯೋದು ಲೇಸಲ್ಲ
ಹೋಗಯ್ಯ ಶರಣರ ಮಠಕಾಗಿ

“ಸ್ವಾಮಿ ನಮ್ಮ ಶರಣರ ಅಪ್ಪಣೆ ಭಿಕ್ಷೆಗೆ ಬಂದವರನ್ನು ತಡೆಯ ಬೇಡಿ ಎಂದು ಹೇಳಿದ್ದಾರೆ. ನಮ್ಮ ಶರಣರು ಸತ್ಯಶೀಲರು. ಸಣ್ಣ ಪುಟ್ಟದ ಕೇಳಬೇಡಿ. ದೊಡ್ಡದಾಗಿ ಕೇಳಿ” ಅಂದುಬಿಟ್ಟು ದಾರಿಬಿಟ್ಟರು ಅವರು

ಅಲ್ಲಿ ಗೊಲ್ಲರ ಕೈಲಿ ದಾರಿ ಬಿಡಿಸಿಕೊಂಡು
ಗುಂಡುಬ್ರಹ್ಮಯ್ಯನ ಮಠಕೋಗಿ-ನಾರಾಯಣ
ಕಡೆಯ ಬಾಕಲಲ್ಲಿ ನಿಂತುಕೊಂಡ

ಬಂದಂಥ ನಾರಾಯಣನ ಕಂಡನು ಬ್ರಹ್ಮಯ್ಯ
ವಂದಿಸಿ ಕರವ ಮುಗಿದನು

ವಂದಿಸಿ ಕರವನಮಿಸಿ ಬಿನ್ನೈಸಿದ
ನೀವು ಬಂದ ಕಾರಣದ ಬಗೆ ಹೇ

ಮಣ್ಣಿನ ಗುದ್ದುಗೆ ಇಳಿದು ಮಣ್ಣಿನ ಕಾಳೆ ಹಿಡಿದು
ಮಣ್ಣಿನ ಕಾಲಪಿಂಡ ಬಲಗಾಲಿಗೆ-ಗುಂಡುಬ್ರಹ್ಮಯ್ಯ
ಸ್ರಾಷ್ಟಾಂಗವನೆ ತಾನೆ ಮಾಡುತಾನೆ

ಸ್ವಾಮಿ ಅವನೊಂದಿಗೆ ಮಾತಾಡಲಿಲ್ಲ

ಕಟ್ಟ ಕಡೆಯಲಿ ಕುಂತ ಕಾರಂಬಿಯಾಸದಲಿ
ದಿಟ್ಟ ಪಲ್ಲಟವು ಹೊರನೋಟ-ಗುಂಡಬ್ರಹ್ಮಯ್ಯ
ಕಟ್ಟಿದ್ದ ಬಿರುದ ನಮ್ಮ ಮುನಿಕಂಡ

ಯಾವ ಯಾವ ಜಾಗದಲ್ಲಿ ಯಾವ ಪದಾರ್ಥ ಎಂದು ಹುಡುಕಿದ ಸ್ವಾಮಿ

ಮಣ್ಣಿನ ಕಾಲುಪಿಂಡಿ ಕಂಡನು ನಾರಾಯಣ
ಬಿರುದ ಧರಿಸಿದೆ ಏಕೆ ಶರಣ ಎಂದು – ಬ್ರಹ್ಮಯ್ನ
ಕೇಳಿದನು ನಾರಾಯಣ ಅವನ ಆಗ

ಈ ಧರೆಯಲ್ಲಿ ಕದ್ದು ಮರೆಹೊಕ್ಕವನ ನಾನು
ಕೊಡೋದಿಲ್ಲ ಎನ್ನುವಂಥ ಹೆಚ್ಚಿನ ಬಿರುದು –ನನಗುಂಟು
ಕದ್ದ ಕಳ್ಳನ ಶಿಕ್ಷೆ ನಾನು ಪಡೆವೆ

ಅಲ್ಲಿ ಶರಣನ ಮಾತ ಬಲ್ಲಿದ ವರಮುನಿಕೇಳಿ
ಕೊಲ್ಲುವ ಕ್ವಾಪ ಮನದಲ್ಲಿ-ನಾರಾಯಣ
ಅಲ್ಲಿ ತಿರುಸುಲವ ಹಿಡಿದೆದ್ದ

ಗುಂಡಬ್ರಹ್ಮಯ್ಯನಿಗೆ ಐದು ಜನ ಸತಿಯರು. ತಾಮ್ರದ ಚಂಬಿನಲ್ಲಿ ಅಗ್ನಿಹಿಡಿದು ಕಡೆ ಬಾಗಿಲಲ್ಲಿ ನಿಂತಿದ್ದರು. ಗುಂಡಬ್ರಹ್ಮಯ್ಯನನ್ನು ಹೊಡೆಯಲು ಹೋದಾಗ ಅವರು ಐದು ಮಂದಿಯೂ ಬಂದು ಸುತ್ತನಿಂತರು

ಲಿಂಗ ಜಂಗಮರು ನಮ್ಮ ಅಂಗಳಕೆ ಬಂದಮೇಲೆ
ಹಂಗೆ ಹೋಗದಕೆ ತರನಲ್ಲ – ನನ್ನೊಡೆಯ
ಘನಲಿಂಗ ಅಗ್ಗಣಿಕೆ ಕೈಕೊಡಬೇಕು

“ನಮ್ಮ ಮಠದಲ್ಲಿ ಶಿವಪೂಜೆಮಾಡಿ ಮುಂದಕ್ಕೆ ದಯಮಾಡಿಸಿ ಸ್ವಾಮಿ” ಎಂದು ಐದು ಜನ ಸತಿಯರೂ ಬೇಡಿಕೊಳ್ಳುತ್ತಾರೆ. ಸ್ವಾಮಿಯ ಕೋಪ ಇಳಿಯಿತು. ಶಾಂತವಾದನು.

ನಿಮ್ಮಿಂಥ ಭಕ್ತರು ಬಿನ್ನಕ್ಕೆ ಹೇಳುವರೆ
ಅನ್ನವು ಆಗಿ ಮಡಗ್ಯದೆ – ಶರಣೆಯರ
ಮನ್ನಣೆ ಇರಲಿ ನಿಮ್ಮ ಮನದಲ್ಲಿ

ನಾನು ಹೋಗಿ ಬಿನ್ನವಳಿದ ಮೇಲೆ ಅವರು ಊಟಮಾಡುತ್ತಾರೆ.

ನಾನು ನಮ್ಮ ಭಾವನುವೆ ಓರುಗಲ್ಲಿಗೆ ಹೋಗಿ
ಬರುವಾಗ ಇಲ್ಲೆ ಬರುತೀವಿ – ಶರಣೆಯರ
ಈಗಿರುವ ಪ್ರೀತಿ ಆಗ ಇರಬೇಕು

“ಆದರೆ ಈಗ ನಾನೊಬ್ಬನೇ ಬಂದೆ. ಏಳುದಿನ ಸರಿರಾತ್ರಿಗೆ ದೊರೆ ಅರಮನೆಗೆ ಕನ್ನಹಾಕಿ ಬರುತೀವಿ. ಈಗಿನಿಗಿಂತ ಹೆಚ್ಚಾಗಿ ಕಾಣಬೇಕು” ಎಂದು ಗುಂಡುಬ್ರಹ್ಮಯ್ಯನಿಗೆ ನಾರಾಯಣ ಹೇಳಿದನು.

ಆಡಿದ ಮಾತಿಗೆ ಹೇಡಿಗೊಂಬುವನಲ್ಲ
ನನ್ನ ಬಿರುದಿಗೆ ಹಿನಾಯ ತರುವನಲ್ಲ – ನನ್ನೊಡೆಯ
ಈಡು ಮಾಡುವೆ ನನ್ನ ತಲೆಗೊಳ

ಈಡು ಮಾಡುವೆ ನನ್ನ ತಲೆಗೊಳ ನನ್ನೊಡೆಯ
ಸ್ವಾಮಿಗಳು ಮುಂದಕ್ಕೆ ದಯಮಾಡಿ
ದಾಳಿಬಂದ ಅರಸಿಗೆ ಹೇಳುತೀನಿ ಬುದ್ಧೀಯ
ಹೇಳಿದರೆ ದೊರೆಯು ಮುನಿದರೆ ಉಂಟಾದರೆ ನಮ್ಮ
ಬಾಳುವ ತಲೆಯ ಕೊಡುತೀನಿ

ಆ ಶರಣನ ವೊಂದಿಗೆ ಮೂರು ಮಾತ ಆಡಿಕೊಂಡು
ಓರುಗಲ್ಲು ಪಟ್ಟಣಕೆ ಬರುತಾರೆ – ನಾರಾಯಣ
ನಂದಿ ಬಸವಣ್ಣನ ಗುಡಿಗೆ ಬರುತಾರೆ

ಒಂದು ಯೋಚನೆಯನ್ನು ಮಾಡಿದರು ಸ್ವಾಮಿಯವರು. ಶಿವ ನನಗೆ ಬಿರುದನ್ನು ಕೊಟ್ಟಿದ್ದಾನೆ. ಘನಪತಿರಾಯ ಶಿವಭಕ್ತ. ಈ ಪಟ್ಟಣದಲ್ಲಿ ನಾನು ಶಿವತತ್ವ ಹೇಳಿಕೊಂಡರೆ ಇವರು ಕೇಳೋದಿಲ್ಲ ಎಂದು ಕೊಂಡು ಆ ಬಿರುದನ್ನೆಲ್ಲ ಅಲ್ಲೇ ಮಡಗಿಬಿಟ್ಟು

ತಂತ್ರಿಯಾಸನ ತೊಟ್ಟು ನವತಂತ್ರಿ ನಾರಾಯಣ
ಮಂತ್ರದ ಬುಡುಬುಡುಕೆ ಕೈಯಲ್ಲಿ – ಹಿಡಕೊಂಡು
ಈ ತಂತ್ರದ ಲಿ ಕಂಡ ಜಗಕೆಲ್ಲ

ಹಕ್ಕಿಯಾಗಿ ಕೂಗುತ ಬುಡುಬುಡುಕೆ ನುಡಿಸುತ
ಆಳ್ವೇರಿಯ ಮೇಲೆ ಬಂದು ನಿಲ್ಲುತಾರೆ

ಕಡೆಕೋಟೆ ಆಳ್ವೇರಿ ಮೇಲೆ ನಿಂತು ನಾರಾಯಣ
ಕ್ವಾಟೆ ಸಂಭ್ರಮವ ನೋಡೋನು

ಅಗಳುದ್ದ ಹಾಳುವೇರಿ ಮೊಗದುದ್ದ ಕೊತ್ತಾಲ
ಜಗಳಕ್ಕೆ ಮಾರಿ ಹುಲಿಮೊಕ – ಈ ಕೋಟೆ
ಮನಗಾದರೆ ಇದು ಅಸವಲ್ಲ

ಈ ಜಗದ ಕೋಟೆ ಅಸವಲ್ಲ ಕ್ವಾಟೆತೆನೆ
ಇದು ಹೋಗ್ಯದೆ ಮುಗಿಲ ಸೆರಗಿಗೆ – ನಾರಾಯಣ
ಇದ ಬಗೆದು ಕನ್ನ ಇಕ್ಕುವ ಬಗೆ ಹೇಗೆ

ಅದನ್ನು ಬಿಟ್ಟು ಮುಂದಕೆ ಬರುತಾನೆ.

ಕಾದ ಕಂಚಿನ ಕ್ವಾಟೆ ಸೋಸಿದ ಉಕ್ಕಿನ ಗುಂಡು
ಈ ಕೋಟೆ ನಮಗೆ ಅಸವಲ್ಲ – ಕ್ವಾಟೆತೆನೆ
ಇದು ಹೋಗ್ಯಾದೆ ಮುಗಿಲ ಸೆರಗಿಗೆ

ಎಷ್ಟೊತ್ತಾದರೂ ಗಣಗಣನೆ ಕಾಯುತ್ತಾ ಇರುವ ಕೋಟೆ. ಕುಂತಿದೇವತೆಯ ಮಗ ಕರ್ಣ ಹನ್ನೊಂದು ಲಕ್ಷ ರಾಣ್ಯ ಕರಕೊಂಡೋಗಿ ಆ ಕೋಟೆ ಅಂಗಳಲ್ಲಿ ಕಾದಿದ್ದನಂತೆ ಹನೊಂದು ವರ್ಷಗಳ ಕಾಲ. ಹನ್ನೊಂದು ವರ್ಷದ ಮೇಲೆ ಸಿಸ್ತುಕಟ್ಟಿ ಪಿರಂಗಿ ಹೊಡೆದ. ಕ್ವಾಟೆ ಒಂದು ಸಿವರು ಅಳ್ಳಾಡಲಿಲ್ಲ. ಆವಾಗ ಕರ್ಣನಿಗೆ ಅಸಾಧ್ಯವಾಯಿತು. ನಾಚಿಕೊಂಡು ಹಿಂದಕ್ಕೆ ಹೋಗಿದ್ದ. ಹೋಗುವಾಗ ಒಂದು ಶಾಸನ ಹಾಕಿದ್ದ. ಇಂಥ ಘನಪತಿರಾಜ ಎಂಥ ಬಲ್ಲಿದ. ಕರ್ಣನಿಗೆ ಅಸಾಧ್ಯವಾದ ಕೋಟೆ ಇದು. ಆ ಕೋಟೆ ಬಿಟ್ಟು ಮುಂದಿನ ಕೋಟೆಗೆ ಹೋಗುವರು

ಕೆತ್ತುಗಲ್ಲಿನ ಕೋಟೆ ಸುತ್ತ ಅಳ್ವೇರಿಯು
ಮೊತ್ತದ ಬಿದಿರು ಹುಲಸಿಗೆ – ಈ ಕ್ವಾಟೆಗೆ
ಹತ್ತೋನಿಗೆ ಐದು ತಲೆಬೇಕು

ಹತ್ತು ತೋಳು ಪಂಚಕಳಶ ಕಿಡಿಗಣ್ಣು ಇದ್ದರೆ ಸಾಧ್ಯ ಎಂದುಕೊಂಡು ಮುಂದಿನ ಕೋಟೆಗೆ ಬರುತ್ತಾನೆ.

ಮನ್ನಯ್ಯನ ಕೋಟೆಗೆ ಬಿನ್ನವಿಲ್ಲದ ಕಣ್ಣು
ಇನ್ನಾವ ಬುದ್ಧಿ ಇದಕಂದ್ರೆ-ನಾರಾಯಣ
ಕನ್ನಗತ್ತರಿಯ ಮಾಡಿಸಬೇಕು

ಇಸು ಬ್ರಹ್ಮಚಾರಿ ಗೇದ ಕಲ್ಲಲ್ಲ. ಸಜ್ಜೆರಸವನ್ನೆ ಬಿಟ್ಟು ಆ ಬೆಟ್ಟ ಈ ಬೆಟ್ಟಕ್ಕೆ ಸಂಬಂಧವನ್ನು ಮಾಡಿದ್ದಾರೆ. ಗಗನಚುಕ್ಕಿ ಭರಚುಕ್ಕಿ ಎರಡಕ್ಕೂ ಅಡ್ಡೆಗಟ್ಟೆ ಹಾಕಿಸಿ ತನ್ನ ಕೋಟೆಗೆ ನೀರು ತಿರುಗಿಸಿಕೊಂಡಿದ್ದಾರೆ. ಹನ್ನೆರಡು ಸಾವಿರ ಮದ್ದಾನೆ ಹನ್ನೆರಡು ಸಾವಿರ ಗಾರೆ ತೊಟ್ಟಿತುಂಬ ಒಂಬತ್ತು ಬಗೆಯ ರತ್ನವನ್ನು ತುಂಬಿದ್ದಾನೆ. ಅಂಥ ರಾಜನೆ ಭೂಮಿಯಲ್ಲಿಲ್ಲ. ಅಂಥ ಬಲ್ಲಿದ ಅವನು. ಅದಕಾಗಿ ಈ ಕೋಟೆಗೆ ಕನ್ನ ಹಾಕಲು ಪಂಚ ಕಳಸ ಇರುವ ಸ್ವಾಮಿ ಯನ್ನೆವೊಂದಿಗೆ ಕರಕೊಂಡು ಕನ್ನಗತ್ತರಿ ತಂದರೆ ಸಾಧ್ಯ; ಇಲ್ಲವಾದರೆ ಸಾಧ್ಯವಿಲ್ಲ.

ಎಲೆ ತೋಟದ ಹಿಂದೆ ಮೊಳಗುತವೆ ಹುಲಿಕರಡಿ
ತಲೆಯ ಭೈರುಂಡ ಗಜ ಸಿಂಹ-ಹೆಬ್ಬಾವು
ಬೋರುಗುಟ್ಟುತಾವೆ ಬೆಳಗಾನ

ಮೃಗ ಜಾತಿಗಳು ಕೋಟೆ ಅಗಳಲ್ಲಿ ಸದ್ದು ಮಾಡುತಾವೆ. ಏಳು ಸುತ್ತಿನ ಕೋಟೆಗೆ ಒಂದು ಸುತ್ತು ಹಾಕಿಕೊಂಡು ಆ ಕೋಟೆ ಬಾಗಿಲಿಗೆ ತಲೆಹಾಕಿ ಕಾದು ಮಲಗ್ಯದೆ ಘಟಸರ್ಪ.

ಈ ಸರ್ಪನ ಬಾಗಲ ಕಡೆದರು ನಾರಾಯಣ
ಕೆರೆಯ ಏರಿಯಮೇಲೆ ಬಂದು ನಿಲ್ಲುತ್ತಾರೆ
ಏರಿ ಮೂಗಾವುದವು ನೀರು ಮೂಗಾವುದವು
ಆ ನೀರೆಲ್ಲ ಹಾಲು ಜಲದುರ್ಗ

ಏರಿ ಮುತ್ತಿನೇರಿ ನೀರೆಲ್ಲ ಪನ್ನೀರು
ತೂಬೆಲ್ಲ ಹೊನ್ನ ಕಳಶವು – ಕಳಶದೇರಿಯ ಮೇಲೆ
ನಮ್ಮ ನಾರಾಯಣ ಬಂದು ನಿಲ್ಲುತ್ತಾರೆ

ಒಂಬತ್ತು ಬಗೆಯ ರತ್ನ ಕರಗಿಸಿ ಇಟ್ಟಿಗೆ ಕಯ್ಸಿ ಏರಿಕಟ್ಟಿಸಿದ್ದಾರೆ. ಆ ತೂಬಿನ ಹತ್ತಿರ ಹೋಗಿ ಒಂದು ಬೊಗಸೆ ನೀರು ಕುಡಿದ ನಾರಾಯಣ

ಕುಡಲನ್ನ ಹಿಡಿಯನ್ನ ನಡುಡೊಂಕ ಕೆರೆ ಏರಿ
ಏರಿ ಹಿಂದಿರುವ ಎಳೆದೋಟ-ಕಬ್ಬಿಣ ತೋಟ
ಕೋದಂಡ ರಾಮಯ್ಯನ ಕೊನೆಬಾಳೆ

ಕೋದಂಡರಾಮಯ್ನ ಕೊನೆಬಾಳೆ ತಾಳೆಲೆ ಬೆಳೆವ
ಉರಿಗರಾಜಿಣದ ರಸತಾಳೆ-ತಾಳೆಲೆ ಬೆಳೆವ
ಸಾದೇವರು ಬೈಲ ಶಿವಬಲ್ಲ

ಈ ಲೋಕದಲ್ಲಿ ಇರುವ ಹಸುರು ಜಾತಿ ಎಲ್ಲಾ ಅಲ್ಲಿತ್ತು. ಅದನ್ನು ನೋಡಿಕೊಂಡು ಅಲ್ಲಿಂದ ಮುಂದಕ್ಕೆ ಬಂದರು,

ಗಗನ ಚುಕ್ಕಿಗೆ ಅಡ್ಡಗಟ್ಟಿ ಕಟ್ಟಿಸ್ಯವನೆ
ಕ್ವಾಟೆಯ ಕಂದಕಕ್ಕೆ ಬರುತಾನೆ

ರಾತ್ರಿ ಹೊತ್ತು ಆಯಿತಲೆ ಎತ್ತಿ ಬಿಡುವರು ಹಲಗೆಯನ್ನು,  ಚಾಮುಂಡೇಶ್ವರಿ ಬೆಟ್ಟದ ಎತ್ತರದ ಹಲಗೆ ಹಗಲ ಹೊತ್ತಿನಲ್ಲಿ ದಂಡೂ ದಾಳಿ ಎಲ್ಲ ಒಟ್ಟಿಗೆ ಅದರ ಮೇಲೆ ತಿರುಗುವುದು,

ಒಂಕು ವರ್ಣದ ಮುಖ ಕೊಂಕಣಿಯ ಹುಲಿ ಮುಖ
ಅಂಕುಸ್ತ ಮೂಳೆ ಕದವಿಗೆ – ಹೂಡದೆ
ಗುರು ಶಂಕರನ ಕೀಲು ಬೆಸದಾಗೆ

ಅಪರಂಜಿ ಒಳಗೆ ನೆಲಮಾಡಿಸಿದ್ದನಂತೆ ಘನಪತಿ ರಾಜ. ಎರಡು ವ್ಯಾಘ್ರ ಮಡಗಿಸಿದ್ದ. ಎದ್ದು ಬರುವಂತೆ ಕಂಡವು. ಆದರೆ ಅವು ಅಪರಂಜಿ ಹುಲಿಗಳು.

ಬಾಗಿಲವಾಡಕೆ ಬಂದರು ನಾರಾಯಣ
ದ್ವಾರಪಾಲಕರು ಕಂಡು ತಡೆದರು

ಎಲ್ಲಿಂದ ಬಂದಿರಂತ ಕೇಳಿದರು
ಕಲ್ಯಾಣದಾಚೆ ಕಡೆಯಲ್ಲಿ – ಶಿವಪುರ
ಅಲ್ಲುಂಟು ನಮ್ಮ ಮಠ ಮನೆ

ರಾಜ್ಯದ ಮೇಲೆ ಬರುವ ಮೋಡಿ ಶಾಸ್ತ್ರಿಕನಲ್ಲ
ಈ ರಾಜ್ಯ ತಂದಯ್ಯ ನಾ ತಾನೆ

ಕಂಡ ಕನಸನು ಬಲ್ಲೆ ಉಂಡ ಊಟವ ಬಲ್ಲೆ
ಕಂಡಿರೋರ ಮನದ ದೃಢವನ್ನೆ – ನಾ ಬಲ್ಲೆ
ಪಂಡಿತರಿಗೆಲ್ಲ ಒಡೆಯನು

ನಿಮ್ಮ ಮನಸಿನ ಕಳವಳವ ಚಂದಾಗಿ ಹೇಳ್ತೀನಿ
ಧಾನ್ಯದಿಂದ ಕೇಳಿ ಮನದಲ್ಲಿ

ಶಾಸ್ತ್ರವ ಹೇಳುತ್ತ ಸೂಸ್ತ್ರವ ಪಿಡಿಯುತ್ತ
ಕಲ್ಲಿನ ಸಂದಿ ಕದವಿನ – ಮರೆಯಲ್ಲಿ
ಅಲ್ಲೊಂದು ಕಂದಕಕೆ ಹೋಗಿ ಗುರುತಿಟ್ಟ

ನಿನ್ನ ಮನಸಿನ ಕಳವಳವ ಚಂದಾಗಿ ಹೇಳ್ತೀನಯ್ಯ
ಧ್ಯಾನದಿಂದ ಹೇಳ್ತೀನಿ ಕೇಳೀರಿ

ಹಿಂದಕೆ ನಿಮ್ಮವರು ಬಂಧೀಕಾನಿಯಲ್ಲಿದ್ದರು
ಶಂಭು ಶಂಕರನ ನೆನಸಿದ – ಕಾರಣದಿಂದ
ಬಂಧನ ಹರಿದು ಸಿರಿಬಂದೊ

ಘನಪತಿ ರಾಯನ ಚಿನ್ನದ ಕಾಳೆ ದೇವೇಂದ್ರರಾಯನಿಗೆ ಕೇಳಿಸಿ,  ರೆಕ್ಕೆ ಕಳ್ಳರು ಹಾರಿ ಬಂದು ಪಟ್ಟಣಕ್ಕೆ ಇಳಿದಿದ್ದರು. ಮಡದಿ ಒಡವೆಯನ್ನು ಬಿಚ್ಚಿಕೊಂಡು,  ದೊರೆಯ ಚಂದ್ರಾಯುಧವ ತೆಗೆದುಕೊಂಡು ದೊರೆಯ ಪೆಂಡೆಯಕೆ ಕೈಹಾಕಿದರು. ರಾಜ ಹಿಡಿದ. ಅವರು ನಿಜವನ್ನೇ ಹೇಳಿದರು. ಪಹರೆಯವರನ್ನು ಕರೆಸಿ ಶೂಲಕ್ಕೆ ಹಾಕುವಂತೆ ಆಜ್ಞೆ ಮಾಡಿದ. ಅರಮನೆಯ ಪಹರೆಯವರಿಗೆ ಶಿಕ್ಷೆಯಾಯಿತು. ಆರು ತಿಂಗಳ ಬಂದೀಖಾನೆಯಲ್ಲಿದ್ದರು. ಪರಮೇಶ್ವರನ ಸ್ತೋತ್ರ ಮಾಡಿದಾಗ ಆ ಕಳ್ಳರಿಗೆ ಬೇಡಿಕತ್ತರಿಸಿ ಬಿಡುವ ಅಪ್ಪಣೆಯಾಯಿತು. ಇವರು ಐದಾಣಿ ೫೦ ಸಂಬಳಕ್ಕಿದ್ದಾರೆ. ಕಡೆಯ ಪಾರದವರು ಆಗತಾನೆ ಬಂದಿದ್ದರು. ಶಾಸ್ತ್ರಕಾರ ನಿಜವನ್ನೇ ಹೇಳುತ್ತಿದ್ದಾನೆ

ಶಾಸ್ತ್ರಿಕನ ಮಾತ ಕೇಳಿದರು ಗೊಲ್ಲರು
ಜೋಜಿಗವಪಡುತಾರೆ ಮನದಲ್ಲಿ
ಇಂಥ ಶಾಸ್ತ್ರಿಕ ನಮ್ಮ ಪಟ್ಟಣದ ಒಳಗಿಲ್ಲ
ಈಗಂದ ಮಾತು ನಿಜತಾನೆ ಶಾಸ್ತ್ರೀಕ –ನೀವೀಗ
ನಮ್ಮ ತಳವಾರನ ಹತ್ತಿರ ಬರಬೇಕು

ಶಾಸ್ತ್ರಿಕ ಸಯಿವಾಗಿ ಗೊಲ್ಲರು ಸಯಿವಾಗಿ
ಅವರು ಕೇರಿ ತಳವಾರನ ಹತ್ತಿರ ಬರುತ್ತಾರೆ

ಅಪ್ಪ ಧರಗೆ ಪಾತಕ ಇವನು ಯಾತಕ ಕರೆತಂದಿರಿ
ಎಂದು ಕೇಳುತಾನೆ ತಳವಾರ

ಕಂಡ ಕನಸನು ಬಲ್ಲ ಉಂಡ ಊಟವ ಬಲ್ಲ
ಕಂಡಿರೋರ ಮನದ ದೃಢಬಲ್ಲ – ತಳವಾರ
ಇಂಥ ಶಾಸ್ತ್ರಿಕ ನಮ್ಮ ಪಟ್ಟಣದೊಳಗಿಲ್ಲ

“ನಾವೊಂದು ಗುರುತು ಕೊಂಡಿದೀನಿ ಹೇಳಯ್ಯ ಎಂದು ತಳವಾರ ಕೇಳುತ್ತಾನೆ. ”

ಶಾಸ್ತ್ರವ ಹೇಳುತ ಸೂಸ್ತ್ರವ ಪಿಡಿವೂತ
ಚಿತ್ರದಲಿ ಶಿವನ ನೆನೆವೂತ – ಅಲ್ಲೊಂದು
ಕನ್ನಕೆ ಹೋಗಿ ಗುರುತಿಟ್ಟ

ನಿನ್ನ ಮನಸ್ಸಿನ ಕಳವಳ ಚನ್ನಾಗಿ ಹೇಳುತೀನಿ
ಜ್ಞಾನದಿಂದ ಕೇಳು ಮನದಲ್ಲಿ

ಹಿರಿಯೋಳ ತರಲಾಗಿ ಸಿರಿಲಕ್ಷ್ಮಿದೇವಿಯು
ತಾನಾಗಿ ಬಂದಿದ್ದಳು ವಲಿದು ನಿನಗೆ

ಕಿರಿಯೋಳು ಬರಲಾಗಿ ತೊಲಗಿದಳು ಅವಳೆಂದು
ಚಿಂತೆ ಕಾಡುವುದು ನಿನ್ನ ಮನದಲ್ಲಿ

ಆ ಶಾಸ್ತ್ರಿಕನ ಮಾತ ಕೇಳಿದನು ತಳವಾರ
ಜೋಜಿಗವ ಮಾಡಿದನು ಮನದಲ್ಲಿ

ಅವನಿಗೆ ಐದು ಹಣದ ಸಂಬಳವಿತ್ತು. ಬಡವರಮನೆ ಹೆಣ್ಣುತಂದು ಮಾಲೆ ಹಾಕಿಸಿಕೊಂಡಿದ್ದ. ಅವಳು ಬಂದಾಗ ಮಣ್ಣು ಹೊನ್ನಾಯಿತು. “ನಾನು ಹೆಣ್ಣು ತಂದಿದ್ದು ಗರೀಬರ ಮನೆ. ಅವರು ದಂಡೇಲಿ ಕೂತುಕೊಂಡು ಮಾತಾಡಿದರೆ ತಡೆಯೋಲ್ಲ. ದೊಡ್ಡೋರ ಮನೆಯಲ್ಲಿ ತರಬೇಕೂಂತ ಕಿರಿಯೋಳ ತಂದೆ. ನನ್ನ ಹೊನ್ನೆಲ್ಲ ಕರಿಗಿ ಹೋಯಿತು ಸ್ವಾಮಿ ನೀವು ಹೇಳಿದ್ದೆಲ್ಲ ನಿಜ ನಮ್ಮ ಮಂತ್ರಿ ಇದಾನಲ್ಲ ಅಲ್ಲಿಗೆ ಬರಬೇಕು”

ತಳವಾರ ಸಯಿವಾಗಿ ಶಾಸ್ತ್ರಿಕ ಸಯಿವಾಗಿ
ಧೀರ ಮಂತ್ರಿಯ ಹತ್ರ ಬರುತಾರೆ

ಧೀರ ಮಂತ್ರಿಯ ಹತ್ರ ಬಂದಂಥ ಯಾಳ್ಯದ ಒಳಗೆ
ಆ ಮಂತ್ರಿ ಏನ ನುಡಿದಾನು

ಹರದೇಶಿ ಪರದೇಶಿ ಪಟ್ಟಣದಲ್ಲಿ ತಾ ತಿರಿದು
ಬದುಕು ಹೊರೆಯುವ ಧರಣಿ ಪಾತಕನ – ಇವನನ್ನು
ತಳವಾರ ಇಲ್ಲಿಗೇಕೆ ಕರೆತಂದೆ

ಪರದೇಶಿ ಅಂದದಲಿ ಪಟ್ಟಣವ ನುಗ್ಯವನೆ
ಹಾದಿ ಬೀದಿಯನೆಲ್ಲ ತಿಳಿದವನೆ – ಕಡೆಗಾಲಕೆ
ನಮ್ಮ ದೊರೆಯ ಸಿರಸಕೆ ಕಂಟಕವ ತರುತಾನೆ

ಕಂಡ ಕನಸನು ಉಂಡ ಊಟವನು ಹೇಳುವನು ದುಡ್ಡು ದುಗ್ಗಾಣಿಗಳ ಕೊಡುವುದಿಲ್ಲ

ಕಾಟಕ ಬೂಟಕವ ಹೇಳುವನು ಇವನಲ್ಲ
ಸುಮ್ಮನೆ ಧರ್ಮ ಶಾಸ್ತ್ರವ ಹೇಳುವನು ಕೇಳಿ

ಇವರ ಮನಸಿನ ಕಳವಳವ ನೀನು ಹೇಳಿದ ಮೇಲೆ
ನಾನೊಂದು ಗುರುತುಕೊಂಡಿವ್ನಿ ಹೇಳುತೀಯ

ಶಾಸ್ತ್ರವ ಹೇಳುತ ಸೂಸ್ತ್ರವ ಪಿಡಿಯುತ್ತ
ಚಿತ್ತದಲಿ ಶಿವನ ನೆನೆಯುತ್ತ – ಶಾಸ್ತ್ರಿಕನು
ಕಲ್ಲಿನ ಸಂದಿಗೆ ಬರುತಾನೆ

ಕಲ್ಲಿನ ಸಂದಿಯಲಿ ಕದವಿನ ಮರೆಯಲ್ಲಿ
ಅಲ್ಲೊಂದು ಕನ್ನಕೆ ಹೋಗಿ ಗುರುತಿಟ್ಟ

ಕಂಚಿನ ಬುಡು ಬುಡಕೆ ಬಲಗೈಲಿ ಹಿಡಕಂಡು
ನಮ್ಮ ತಂತ್ರಿ ಶಾಸ್ತ್ರಕೆ ನಿಂತವನೆ

ನೆನ್ನೆ ಇರುಳಲ್ಲಿ ನಿಮ್ಮ ರಾಜನ ಮಡದಿ
ನಿನ್ನ ಮಂಚಕೆ ಅವಳು ಬಂದಿದ್ದಳು

ದಾಯಿ ಪಗಡೆಯನಾಡಿ ಇನಿವಂದವನೆ ಆಡಿ
ಅವಳು ಹೋದಳು ತನ್ನ ಅರಮನೆಗೆ ಇನ್ನು-ಎಂಬುವ
ಚಿಂತೆ ಕಾಡುವುದು ನಿನ್ನ ಮನದಾಗೆ

ರಾಮಾಯಿ ದೊರೆಯ ಮಡದಿಯ ಕಣ್ಣುಮಂತ್ರಿಯ ಮೇಲಿತ್ತು. ಅರಮನೆಯ ಒಳಗಿದ್ದ ಭಾಗ್ಯಲಕ್ಷ್ಮಿ ಈಗ ಹೊರಗೆ ಹೋಗಬೇಕಾದ ಕಾಲ ಬಂತು. ರಾಜ,  ರಾಜನ ಮಡದಿಗೆ ಜಗಳವಾಯಿತು. ಮುನಿಸಿನಿಂದ ಬೇರೆ ಬೇರೆ ಮಂಚದಲ್ಲಿ ಮಲಗಿದ್ದಾರೆ. ಲಕ್ಷ್ಮಿದೇವಿ ದೊರೆ ಮಡದಿ ಯಾಸ ಹಾಕಿ ಕೊಂಡಳು. ಮಂತ್ರಿ ಸ್ವಪ್ನಕ್ಕೆ ಬಂದು ದಾಯ ಪಗಡೆ ಆಡಿದಂಗೆ ಕಂಡಿತು. ದೊರೆಯ ಮಡದಿಯೆ ಬಂದಿದ್ದಳು ಎನ್ನುವ ಶಂಕೆ ಅವನಿಗೆ. ಅನುಮಾನ ಬಂದು ಮನಸ್ಸಿನಲ್ಲೆ ಇಟ್ಟುಕೊಂಡಿದ್ದ. ಇವನು ಇಕ್ಕಿದ ನಾಮ ಇಕ್ಕಿದಂಗೇ ಬರೆದ. “ಕೈಮುಗಿತೀನಿ ಬಾಯಿ ಮುಚ್ಚು. ನಿನ್ನ ಶಾಸ್ತ್ರ ದೊರೆಯವರಿಗೆ ಹೇಳೀಯ ನಮ್ಮ ದೊರೆ ಹತ್ತಿರ ನೀನು ಬರಬೇಕು. ”

ಮಂತ್ರಿಯ ಸೈವಾಗಿ ಶಾಸ್ತ್ರಿಕ ಸೈವಾಗಿ
ಧೀರ ಘನಪತಿ ಹತ್ತಿರ ಬರುತಾರೆ

ಬಂದಂಥ ನಾರಾಯಣನ ಕಂಡನು ಘನಪತಿಯು
ಮಹರಾಜ ಏನ ನುಡಿದನು

ಪರದೇಶಿ ಅಂದದಲಿ ಪಟ್ಟಣವ ನುಗ್ಯವನೆ
ಹಾದಿ ಬೀದಿಯನೆಲ್ಲ ತಿಳಿದವನೆ –ಕಡೆಗಾಲಕೆ
ನನ್ನ ಶಿರಸಕೆ ಕಂಟಕವ ತತ್ತಾನೆ – ಮಂತ್ರೀಶ
ಇವನ್ಯಾಕೆ ಇಲ್ಲಿಗೆ ತರೆತಂದೆ

ಸ್ವಾಮಿ ಇವನು ಶಾಸ್ತ್ರದಲ್ಲಿ ಬಹಳ ಗಟ್ಟಿಗ. ಅದಕ್ಕಾಗಿ ತಮ್ಮ ಬಳಿಗೆ ಕರೆದುಕೊಂಡು ಬಂದೆ. ‘‘ಹಾಗಿದ್ದ ಮೇಲೆ ನಾನು ಗುರುತು ಕೊಂಡದ್ದನ್ನು ಹೇಳಲಿ”

ಶಾಸ್ತ್ರವ ಹೇಳೂತ ಸೂಸ್ತ್ರವ ಪಿಡಿಯುತ
ಏಕಾಂತ ಧರನ ನೆನೆವೂತ ನಾರಾಯಣ
ಕಲ್ಲಿನ ಸಂದೀಯ ಕದವಿನ –ಮರೆಯಲ್ಲಿ
ಅಲ್ಲೊಂದು ಕನ್ನಕೆ ಗುರುತಿಟ್ಟ

ನಿಮ್ಮ ಮನಸಿನ ಕಳವಳವ ಚನ್ನಾಗಿ ಹೇಳ್ತೀನಿ
ಜಾನದಿಂದ ಕೇಳೋ ಘನಪತಿಯೆ

“ನೆನ್ನೆ ಇರುಳಿನಲ್ಲಿ ನಿನಗೂ ನಿನ್ನ ಮಡದಿಗೂ ಕಾಳಗ ಹತ್ತಿ ಕದ ನಿಕ್ಕಿ ರಾಮಾಯಿ ಅನ್ನ ಉಣ್ಣದೆ ನೀರು ಕುಡಿಯದೆ ಬೇರೆ ಮಂಚದಲ್ಲಿ ಹೋಗಿ ಮನಗ್ಯವಳೆ. ”

ಬೇರೊಂದು ಮಂಚದಲ್ಲಿ ಮನಗ್ಯವಳೆ ರಾಮಾಯಿ
ಎಂಬುವ ಚಿಂತೆ ನಿನ್ನ ಮನದಲ್ಲಿ

ಲಗ್ನವಾದಾಗಿನಿಂದ ಇವಳು ನನ್ನನ್ನು ಅಗಲಿರಲಿಲ್ಲ; ಈಗ ಏನು ಕಾರಣ ಎಂದು ಇದನ್ನೆ ಕುರಿತು ಯೋಚನೆ ಮಾಡುತ್ತಾ ಇದ್ದೀಯ. ಇತ್ತ ಕಡೆ

ಅರಸನೊಂದಿಗೆ ಈಗ ಸರಸವು ಸಲ್ಲದು
ಎನ್ನೂತ ನಿನ್ನ ಮನೆಯ ಲಕ್ಷ್ಮೀದೇವಿ – ಘನಪತಿಯೆ
ತೊಳಗೋದಳು ನೀನು ಕೇಳಯ್ಯ

ರಾಮಾಯಿ ಹೆಣ್ಣು ಪದುಮ ಜಾತಿಯ ಹೆಣ್ಣು
ಶಾಸ್ತ್ರಿಕನ ಮಾತ ಕೇಳಿದಳು

ಎದ್ದು ರಾಜನ ಮಡದಿ ಬಿದ್ದು ಪಾದದ ಮೇಲೆ
ಬುದ್ಧಿ ಕಲಿಸೋಗಿ ಗುರುಸ್ವಾಮಿ –ಅಂದರೆ
ವಾಲೆ ಭಾಗ್ಯದಲಿ ಒರಗಮ್ಮ

“ನಿನ್ನ ಮುತ್ತೈದೆತನ ಸ್ಥಿರವಾಗಿದೆ. ದೊರೆಗೂ ನಮಗೂ ಮಾತು ಮುಗಿದಿಲ್ಲ. ನಿನ್ನ ಸ್ಥಳಕ್ಕೆ ನೀನು ಹೋಗು ತಾಯಿ. ” ಹಾಗಂದ ಮಾತನ್ನು ಕೇಳಿ ರಾಮಾಯಿ ಏಳು ನೆಲೆ ಸೆಜ್ಜೆಗೆ ಹೋಗಿ ಮಲಗಿದಳು. ಸ್ವಾಮಿ ಅಷ್ಟರಲ್ಲಿ ಬಿಳಿಯ ಪಲ್ಲಿಯ ರೂಪಿನಲ್ಲಿ ಬಂದಿದ್ದ

ಆ ಧೀರ ಘನಪತಿ ರಾಜನು ಅರಮನೆಯಲ್ಲಾದರೆ
ಒರಗುಂವಂಥ ಎಳೆಯ ಗಾಜಿನ-ಕಂಬದ ಮೇಲೆ
ಹೊಳೆಯು ವಾಟಕದ ಗೌಳಿ ಶಕುನಾಯ್ತು

ಎಲ್ಲ ಶಕುನಗಳನ್ನು ಬಲ್ಯಯಲ್ಲೊ ಶಾಸ್ತ್ರೀಕ
ಈ ಪಲ್ಲಿಯ ಶಕುನ ನಿನ್ನವೊಳಗುಂಟೆ

ಕಂಡ ಮಾತ ಕಂಡಂಗೆ ಹೇಳಿದರೆ ದೊರೆರಾಯ
ಕೆಂಡ ತುಳಿದಂಗೆ ಆಯ್ತದೆ ಮನದಲ್ಲಿ

“ನಾನು ಹೇಳೋದಿಲ್ಲ” ಎಂದು ಶಾಸ್ತ್ರಿಕ ಹೇಳುತ್ತಾನೆ. “ಎಂಥಾ ಕ್ವಾಪ ಬಂದರೂ ಶಾಂತಿ ಮಾಡಿಕೋತೀನಿ ಹೇಳು” ಎಂದು ಘನಪತಿ ರಾಯ ನುಡಿಯುತ್ತಾನೆ

ಶಿಶುವು ಆಡಿದ ಮಾತು ಹೊಸಕೋಟೆಗೆ ಕಂಟಕ
ದಸೆಗೆ ಬಲ್ಲಿದರು ಅರಮನೆಯ –ನುಗ್ಗುವರು
ನಿನ್ನ ರಾಮಾಯಿ ತೊಟ್ಟ ತೊಡಗೇಯು – ಘನಪತಿಯೆ
ಸುರಲೋಕದ ಕಳ್ಳರಿಗೆ ಸೂರೆ ಹೋಯ್ತದೆ

ಏಳು ದಿನ ಸರಿರಾತ್ರಿ ಹೊತ್ತಿಗೆ ನಿನ್ನ ಮಡದಿ ರಾಮಾಯಿ ತೊಟ್ಟ ಮತ್ತು ಬಂಗಾರ ಎಲ್ಲವು

ಸುರಲೋಕದ ಕಳ್ಳರಿಗೆ ಸೂರೆ ಹೋಯ್ತದೆ
ಘನಪತಿರಾಯ ಅರಮನೆಲ್ಲಿ –ಅಂತೇಳಿ
ಹೇಳುತದೆ ಸ್ವಾಮಿ ಆ ಪಲ್ಲಿ

ಗಲಗುಟ್ಟುತಾದೆ ನಿನ್ನ ಮನದಲ್ಲಿ ಘನಪತಿಯೆ
ಛಲ ಹುಟುತಾದೆ ನಿನ್ನ ಮನದಲ್ಲಿ –ಸುರಲೋಕದ
ಕಳ್ಳರು ಬರುತಾರೆ ಇನ್ನೇಳು ದಿನಕೆ

ಗಲಗುಟ್ಟುತಾದೆ ನಿನ್ನ ಪಟ್ಟಣದಲ್ಲಿ ಎನ್ನುವಂತ
ಮಾತ ಕೇಳಿದನು ಘನಪತಿ-ಆವಾಗ
ರಾಜನಿಗೆ ಕ್ವಾಪ ಬರುತಾದೆ

ಏಳು ಸುತ್ತಿನ ಕೋಟೆ ಕನ್ನವಾಗುವಗಂಟ
ನನ್ನ ಅರಸಿ ರಾಮಾಯಿ ತೊಟ್ಟಂಥ – ತೊಡುಗೇಯ
ಮುತ್ತು ಬಂಗಾರದ ಒಡವೆಯು – ಸುರಲೋಕದ
ಕಳ್ಳರಿಗೆ ಸೂರೆ ಹೊಯಿಗಂಟ-ಶಾಸ್ತ್ರಿಕನ
ಬಾಗಿಲಿಂದಾಚೆಗೆ ಬಿಡಬೇಡಿ

ರಾಜ ಕೋಪವನ್ನು ಶಾಂತಿ ಮಾಡಿಕೊಂಡು “ಏಳು ದಿನ ಸರಿರಾತ್ರಿಗೆ ಕಳ್ಳತನವಾದರೆ ಉಡುಗೊರೆ ಬಹುಮಾನ ಕೊಡುತೀನಿ,  ಇಲ್ಲವಾದರೆ ನಿನ್ನನ್ನು ಹೆಬ್ಬಾಲಿಗೆ ತೋರಣ ಕಟ್ಟುಸ್ತಿನಿ” ಎಂದ

ಇರಹೇಳಿ ನನ್ನ ವೀರಭದ್ರ ತಡೆದ
ಧಾರುಣಿಯ ಒಳಗೆ ಹರಿಶ್ಚಂದ್ರ – ಮಾರಾಯ
ಯಾರ್ಯಾರು ತಡದರುವೆ ಇರಲಿಲ್ಲ

ಇನ್ನೊಂದು ಘಳಿಗೆ ನಾ ಇಲ್ಲಿಯೆ ಇದ್ದರೆ
ಅವರು ಇಲ್ಲಿಗೇ ಬರುತಾರೆ ಘನಪತಿ

ವೀರಭದ್ರನೆ ಬರಲಿ ಹರಿಶ್ಚಂದ್ರನೆ ಬರಲಿ
ಏನಿಲ್ಲ ನನ್ನ ಅರಮನೆಲ್ಲಿ –ಅವರಿಗೆ
ಬೇಡಿದ ಭಾಗ್ಯ ಕೊಡುತೀನಿ

ಐದಾನೆ ಮೇಲೆ ಐದು ಒಂಟೆಯ ಮೇಲೆ
ಅವರನಾದರ ಕಳುಸ್ತೀನಿ

ಏಳು ಸುತ್ತಿನ ಪಾರದ ಜನಕೆಲ್ಲ
ಮಾಯದ ಬಲೆಯ ಬೀಸಿಬಿಟ್ಟು-ನಾರಾಯಣ
ಆಳ್ವೇರಿ ಮೇಲೆ ಬಂದು ನಿಲ್ಲುತಾನೆ

ಏಳು ಅರಮನೆಗೆ ಸೂಸ್ತ್ರವ ಪಿಡಿದನು
ಕನ್ನೆ ಕನ್ನೆಗೆ ಸೂಸ್ತ್ರ ಪಿಡಿದನು – ನಾರಾಯಣ
ತನ್ನ ಊರಿಗೆ ಮುಂದಾಗಿ ಕಡೆದನು

ಊರನೆ ಬಳಸಿದ ಸುಳಿದಾಡಿ ನೋಡಿದ
ತನ್ನ ಊರಿಗೆ ಮುಂದಾಗಿ ಕಡೆದನು

ಕೋಟಿ ರಾಕ್ಷರವೊಂದಿಗೆ ಕದನವ ಮಾಡಿಕೊಂಡು
ತಮ್ಮನೆಂಬೋ ರಾಕ್ಷ ಬರುತಾನೆ –ರಾಕ್ಷನ
ಕನ್ನಕೆ ಬಲಿಯ ಕೊಡಬೇಕು

ಗುಳ ಗುಳನೆ ಓಡೋಗಿ ಅವನ ಜುಟ್ಟು ಹಿಡಿದು
ಎಳೆತಂದು ಕಲ್ಲುಗವಿಗೆ ಕೂಡುತಾನೆ

ಕಲ್ಲುಗವಿಗಾದರೆ ದೊಡ್ಡ ಗುಂಡನೆ ಚಾಚಿ ಅಲ್ಲಿಂದ
ಕೈಲಾಸ ಪುರಕೆ ಬರುತಾರೆ

ಕೋಟಿ ಆನೆಯೊಂದಿಗೆ ಕದನ ಮಾಡಿಕೊಂಡು
ಮದ್ದಾನೆ ಸಾಗಿ ಬರುತಾದೆ

ವೀರ ಮಂಡಿವೂರಿ ಆನೆ ಅಂಬಲಿ ಹೊಡೆದು
ಚರ್ಮ ಚಂದಾಗಿ ಸುಲಕಂಡು-ನಾರಾಯಣ
ಮಡಚಿ ಕಂಕುಳಲ್ಲಿ ಮಡಗಿದ

ರಾತ್ರಿ ಕಳ್ಳತನಕ್ಕೆ ಬರುತ್ತೇವೆ. ಹರಿಗೋಲು ಮಾಡಿಕೊಳ್ಳಲಿಕ್ಕೆ ಬೇಕಾಗುತ್ತದೆ ಎಂದು ಅದನ್ನು ಇಟ್ಟುಕೊಂಡ.

ಮುಕ್ಕಣ್ಣನೋಲಗ ಲಕ್ಷಯೋಜನ ಗಂಟ
ಸತ್ಯ ಮಹಾತ್ಮರು ಇರುತಾರೆ

ಹರನು ಮಲ್ಲಯ್ಯನ ಓಲಗ ಅರವತ್ತು ಯೋಜನ ಗಂಟ
ಶರಣ ಪುಣ್ಯಾತ್ಮರು ಇರುತಾರೆ

ಹರನ ಒಡ್ಡೋಲಗ ಮುಗಿದೇ ಇಲ್ಲ. ಇನ್ನೂ ನಡೆಯುತ್ತಲೇ ಇದೆ. ನಾ ಹೆಚ್ಚು ಎಂದು ನುಗ್ಗಿದರೆ ಶರಣರಿಗೆ ಕೈಕಾಲು ತಾಕಿದರೇನು ಗತಿ.

ಬುಡು ಬುಡುಕೆ ಅವತಾರವ ಕಳೆದನು ನಾರಾಯಣ
ಮರಳಿ ಯಾಸವ ತಾಳಿದನು

ಕಿವಿಗೆ ಬೆಂಡಿಕ್ಕೊಂಡ ಮರದ ತಾಳ ಹಿಡುಕೊಂಡ
ಪಟ್ಟೆ ಪಟ್ಟೆ ನಾಮವ ಬರಕೊಂಡು

ಕಕ್ಕೆ ಸೊಪ್ಪು ಹಿಡುಕೊಂಡ ಕಕ್ಕೆ ದೊಣ್ಣೆ ಹಿಡುಕೊಂಡ
ತಕ್ಕತೈ ಎಂದು ಕುಣಿದನು

ಆ ಅಲ್ಲ ಎನ್ನಲು ಊ ಅಲ್ಲ ಎನ್ನಲು
ದೇವ ಸಭೆಯೆಲ್ಲ ನಗುತಾದೆ

ವಿದ್ಯಾವಂತ ಬಂದಾನಂತ ಇದ್ದಂತ ಜನರೆಲ್ಲ
ಬಗ್ಗಂತ ದಾರಿ ಬಿಡುತಾರೆ

ಅಲ್ಲಿ ಶರಣರ ಕೈಲಿ ದಾರಿ ಬಿಡಿಸಿಕೊಂಡು
ನನ್ನ ಸಿದ್ಧರಾಮಯ್ನ ಬಳಿಗ್ಹೋಗಿ – ನಾರಾಯಣ
ಮುದ್ದಿಸಿ ಕರವ ಮುಗಿದನು

ಹೋದ ಕಾರ್ಯವು ಹ್ಯಾಗಂತ ವೇದ ಪಿರಿಯನ ಕೇಳಿದನು
ವೇದನುಳ್ಳೋನೆ ವರಮುನಿಯೆ-ನಾರಾಯಣ
ಮುದ್ದಿಸಿ ಕರವ ಮುಗಿದನು

ಹೋದ ಕಾರ್ಯವು ಹ್ಯಾಗಂತ ವೇದ ಪಿರಿಯನ ಕೇಳಿದನು
ವೇದನುಳ್ಳೋನೆ ವರಮುನಿಯೆ – ನಾರಾಯಣ
ಹೋಗಿದ್ದ ಮೇದುನಿ ಮಾತ ಶಿವಗೇಳು

ಹಿಂಡು ದೇವರಿಗೆಲ್ಲ ಗುಂಡುದೇವರ ಕೇಳಪ್ಪ
ಗುಂಡುಬ್ರಹ್ಮರೆಂಬ ಶರಣರ ಮಠವೊಕ್ಕು
ಕಂಡುಬಂದೆ ಅಲ್ಲಿದ್ದ ಬರುದುಗಳ

ಸುತ್ತ ಧರ್ಮದ ಕೋಟೆ ಅವನ ಭಕ್ತಿ ಆಳ್ವೇರಿಯು
ಭಕ್ತಿ ಸಾರಿಗಳು ಬಲಬೀಗ-ಗುಂಡುಬ್ರಹ್ಮಯ್ಯ
ಈ ಮರ್ತ್ಯದಲ್ಲಂಥ ಶರಣರಿಲ್ಲ

“ಆ ಶರಣರ ಮಠದ ಮಾತ ಹೇಳಿದೆ ನಾರಾಯಣ ದೊರೆ ಇರುವಂಥ ತೆರಹ್ಯಾಗೆ”

ಅವನಿಗೆ ಅಗಳುದ್ದ ಅಳ್ವೇರಿ ಮುಗುಳು ಕೊತ್ತಳ
ಜಗಳಕ್ಕೆ ಮಾರಿ ಕಲಿ ಉಂಟು-ನನ್ನೊಡೆಯ
ಈ ಜಗದೊಳಗೆ ಅಂತ ದೊರೆಯಿಲ್ಲ

ಅಲ್ಲದೆ
ಕಾದ ಕಂಚಿನ ಕೋಟೆ ಸೋಸಿದ ಉಕ್ಕಿನ ಗುಂಡು
ಕಾಯೆ ಕಾರಣನಿಗೆ ಅಸದಳ – ಕ್ವಾಟೆ ತೆನೆ
ಅದು ಹೋಗ್ಯಾದೆ ಮುಗಿಲ ಸೆರಗಿಗೆ

ಕೆತ್ತು ಗಲ್ಲಿನ ಕೋಟ ಸುತ್ತ ಆಳ್ವೇರಿಯು
ಮೊತ್ತದ ಬಿದಿರು ಹುಸಲಿಗೆ – ನನ್ನೊಡೆಯ
ಹತ್ತುವನಿಗೈದು ತಲೆಬೇಕು

“ಅಯ್ಯ ಹಿಂದೆ ಬ್ರಹ್ಮನಿಗೆ ಐದು ತಲೆ ಇತ್ತು. ಅದನ್ನು ಹಾರಿಸಿದೆ ಈಗ ನನಗೆ ಐದು ತಲೆ ಇದೆ. ನಾನೇ ಬರುತ್ತೇನೆ. ” ತಾವು ಬಂದರೆ ಕಬ್ಬಿನ ಮೇಲೆ ಜೇನು ಇಕ್ಕಿದಂಗೆ ಆಯ್ತದೆ ಮುಂದಿನ ವಿಚಾರವನ್ನು ಕೇಳು

ಮನ್ನಯ್ಯನ ಕೋಟಗೆ ಬಿನ್ನವಿಲ್ಲದ ಕಲ್ಲು
ಇನ್ನಾವ ಬುದ್ಧಿ ಇದಕಾದರೆ – ನನ್ನೊಡೆಯ
ಕನ್ನಗತ್ತರಿಯ ಮಾಡಿಸು

“ಏನಯ್ಯ ಏನು ಹೇಳಿದೆ ಕನ್ನಗತ್ತರಿ!”

ಕನ್ನಗತ್ತರಿ ಅಂದರೆ ಸಟಾಟಿ ಆಯತೇನಪ್ಪ
ಬ್ರಹ್ಮಲೋಕಕ್ಕೆ ಹೋಗಪ್ಪ-ನವತಂತ್ರಿ
ಇಸು ಬ್ರಹ್ಮನ ಕರೆತಂದು

ಕನ್ನಗತ್ತರಿಯ ಮಾಡಿಸು ನಾರಾಯಣ
ತಂತ್ರದಿಂದ ಕಳ್ಳತನಕ್ಕೆ ಕಳಬೇಕು

ಇಸುಬ್ರಹ್ಮನ ಕರತಂದು ಹಸನು ಮಾಡಿಸು ಅದನು
ನಾವು ಹೊಸದೆ ಹೊಳ್ಳೋಗಿ ಕಳಬೇಕು

ಪರಮೇಶ್ವರನ ಮಾತ ಕೇಳಿದ ನಾರಾಯಣ
ಬ್ರಹ್ಮಲೋಕಕೆ ತಾನು ಬರುತಾನೆ

ಬ್ರಹ್ಮಲೋಕಕೆ ತಾನು ಬಂದಂತ ಯಾಳ್ಯದಲಿ
ವಂದಿಸಿ ಕರವ ನಮಿಸಿದ – ಬಿನ್ನೈಸಿದ
ಬಂದ ಕಾರಣವೆ ಬಗೆ ಏನು

“ನಮ್ಮ ತಿಟ್ನಂಕಾರ ಮಾಡಿದಂಥ ಪ್ರಭು ಏನುಕಾರಣ ಬಂದಿರಿ”? ಎಂದ. “ಅದೇನು ಕಾರಣವೊ ನನಗೆ ಗೊತ್ತಿಲ್ಲ. ಲೋಕಕ್ಕೆ ದೊಡ್ಡೋರು ಬರಹೇಳಿದರು. ಹೋಗೋಣ ಬಾ. ” ಎಂದು ಇಸುಬ್ರಹ್ಮಲೋಕದಿಂದ ಕೈಲಾಸಪುರಕ್ಕೆ ಬಂದರು.

ಕೈಲಾಸ ಪುರಕೆ ಬಂದನು ಇಸುಬ್ರಹ್ಮ
ಬಾಗಿ ಪಾದಕೆ ಹೋಗಿ ಶರಣಂದ

ಏನಪ್ಪ ಇಸುಬ್ರಹ್ಮ ಲೋಕಕೆ ದೊಡ್ಡೋನೆ
ನಾಡಿನ ಮೇಲೆ ಅತಿ ಚೋಜ್ಗ – ಹುಟ್ಟಿದೆ
ನಾವೊಂದು ಬಿರುದ ಗೆಲ್ಲಬೇಕು – ಲೋಕದಮೇಲೆ
ಹೋಗು ಮಿಗಿಲಾಗಿ ನಡೆಸು ನೀನು

ಲೋಕಕೆ ದೊಡ್ಡೋರು ನೀವು ಆಡುವ ಆಟಿಕೆ
ನಾವು ನಿಮ್ಮ ಪಾದಕೆ ಒಳಗು

ಲೋಕಕೆ ದೊಡ್ಡೋರು ನೀವು ಆಡುವ ಆಟಿಕೆ
ನಾವು ನಿಮ್ಮ ಪಾದಕೆ ಒಳಗು

ಪಾದ ಮುಟ್ಟಿ ಭಾಷೆ ಮಾಡಿಸಿದರು. ಆವಾಗ ಹೇಳುತ್ತಾರೆ ಪರಮೇಶ್ವರ

ನೀನು ನಮ್ಮ ಪಾದಕ್ಕೆ ಒಳಗಾದರೆ ಶಕ್ಯಿಲ್ಲ
ಮಾಡಯ್ಯ ಕನ್ನಗತ್ತರಿ ಶೀಘ್ರದಲಿ

ಕನ್ನಗತ್ತರಿ ಅಂದರೆ ಸಸಾಟಿ ಆಗೋಯ್ತೆ ನನ್ನೊಡೆಯ
ಪನ್ನಂಗ ಏಳುವಾಗ ದಯಮಾಡಿ – ಬಂದಾರೆ
ನಾನು ಕಂಡ ಭಾಮದಲಿ ಕತ್ತರಿ ಮಾಡುತೀನಿ

ಪನ್ನಂಗ ಏಳುವಾಗ ಅಂದರೆ ಯಾರ ಕಾಣಬೇಕು
ನೀ ಹೇಳಿದರೆ ನಾವೋಗಿ ತರಬಲ್ಯೊ

ಬುಧವಾರ ಬೇಸ್ತವಾರ ಮೇಲೆ ಬರುವುದು ಶುಕ್ರವಾರ
ಸೂರ್ಯನಿಗೆ ಗ್ರಹಣ ಅಮವಾಸೆ – ಒಳಗೋಗಿ
ಸುಡುಗಾಡಲಿದ್ದು ಕಬ್ಬಿಣ ನೀ ತರಬೇಕು

ಹುಟ್ಟಿದ ನಿರ್ವಾಣದಲ್ಲಿ ಹೋಗಿ ಮಸಾಣದಲ್ಲಿ
ಕಬ್ಬಿಣವ ನೀವು ತರಬೇಕು

ಶನಿವಾರ ಆಯಿತವಾರ ಮೇಲೆ ಬರೋದು ಸೋಮವಾರ
ಚಂದ್ರನಿಗೆ ಬರುವುದು ಪೋರಮಿ – ಒಳಗೋಗಿ
ಸುಡುಗಾಡಲಿದ್ದು ಕಬ್ಬಿಣ ನೀ ತರಬೇಕು

ಮುಕ್ಕಣ್ಣಯ್ಯ ನಿನ್ನ ಹಕ್ಕಿ ಗೂಡಲಿದ್ದು ಸಿಕ್ಕಿದ ಕಬ್ಬಿಣವ ತರಬೇಕು
ಮುಕ್ಕಣ್ಣಯ್ಯ ನೀನು ಮೂರೂರು ಸುಟ್ಯಲ್ಲ ಬರಸಿಡಿಲ ಕುಡ ಈಗ ತರಬೇಕು

“ಬರಸಿಡಿಲ ಕುಡ ಪಾತಾಳ ಲೋಕದಲ್ಲಿದೆ. ಅದರ ತುದಿ ಜಲದ ಕಣ್ಣಲ್ಲಿದೆ. ಓರುಗಲ್ಲು ಪಟ್ಟಣಕ್ಕೆ ಹೋಗಿ ಶಾಸ್ತ್ರ ಹೇಳಿ ಬಂದಿದ್ದೇನೆ. ಏಳು ದಿನ ಸರಿರಾತ್ರಿಲಿ ಕಳ್ಳತನ ಆಗಬೇಕು. ಹನ್ನೆರಡು ವರ್ಷ ತಡಕಿ ಹುಡಕಿದರೆ ಸಿಗದು. ನಮಗೆ ಸಾಧ್ಯವಿಲ್ಲ” ಎಂದು ನವತಂತ್ರಿ ನಾರಾಯಣ ಹೇಳಿದ. “ಸಾಧ್ಯವಿಲ್ಲದಿದ್ದರೆ ನಾನು ಬ್ರಹ್ಮಲೋಕಕ್ಕೆ ಹೋಗುವೆ” ಎಂದು ಇಸುಬ್ರಹ್ಮ ಹೇಳುತ್ತಾನೆ. ಆವಾಗ ತರುವ ಪ್ರಯತ್ನ ಮಾಡುತ್ತೇವೆ ಎಂದು

ಮುಕ್ಕಣ್ಣೇಶ್ವರನ ತಂತ್ರಿ ಇಸುಬ್ರಹ್ಮನ ಮೇಲೆ
ಪಾರಾವನಾದರೆ ಇಟ್ಟನಲ್ಲ – ಆ ತಂತ್ರಿ
ಕುಡವ ತರುವುದಕೆ ಹೊರಟಾನು

ಕೊಂಟು ಕುಳಿ ಹಾಕಿಸಿ ಇಜ್ಜಿಲು ಮಾಡಿಸುವಂತೆ ಹೇಳಿ ಸೂರ್ಯ ಲೋಕಕ್ಕೆ ನಾರಾಯಣ ಹೋದನು.

ಚಂದ್ರ ಸೂರ್ಯರಿಬ್ಬರ ಕರೆದರು ನಾರಾಯಣ
ತಂತ್ರ ಹೇಳಿದರು ಬಿರುದುಗಳ

ಚಂದ್ರ ಸೂರ್ಯಾದಿಗಳೆ ಲೋಕಕೆ ದೊಡ್ಡೋರೆ
ನಾಡಿನ ಮೇಲೆ ಅತಿ ಚೋಜಿಗ-ಹುಟ್ಟಿದೆ
ನಾವೊಂದು ಬಿರುದ ಗೆಲಬೇಕು

ನಾವೊಂದು ಬಿರುದ ಗೆದ್ದು ಲೋಕದ ಮೇಲೆ
ಹೋಗುಮಿಲಿಗಾಲಿ ನಡೆಸೇವು-ಚಂದ್ರಸೂರ್ಯರೆ
ನೀವು ನಮ್ಮ ಪಾದಕ್ಕೆ ಒಳಗೊ ಹೊರಗಯ್ಯ

ಲೋಕಕೆ ದೊಡ್ಡೋರು ನೀವಾಡುವ ಆಟಕೆ
ನಾವು ನಿಮ್ಮ ಪಾದಕೆ ಒಳಗಯ್ಯ

ಚಂದ್ರ ಸೂರ್ಯಾದಿಗಳು ಪಾದ ಮುಟ್ಟಿ ಭಾಷೆ ಮಾಡಿದ್ದಾರೆ. ಮುನ್ನೂರು ಮೂವತ್ತು ಗಳಿಗೇಲಿ ಅಮೃತ ಗಳಿಗೇಲಿ ಸೂರ್ಯ ಹುಟ್ಟಿ ಬರುವ ವೇಳೆಗೆ ಗ್ರಹಣ,  ಚಂದ್ರ ನೀ ಹುಟ್ಟಿಬರೋ ಕಾಲದಲ್ಲಿ ಪೋರಮ್ಮಿ. ಮೈಮೇಲೊಂದು ಉಡುದಾರವಿಲ್ಲದೆ ಹುಟ್ಟಿದ ನಿರ್ವಾಣದಲ್ಲಿ ಸರಿ ರಾತ್ರಿ ಒಳಗೆ ಸ್ವಾಮಿ ಚಂಚಾರ ಕಡೆದ. ಪಂಚಲೋಹ ಪಡಕಾಕೆ ಮಸಾಣಕ್ಕೆ ಹೋದ. ಮೂಡಲ ಸಮುದ್ರಕ್ಕೂ ಪಡುವಲ ಸಮುದ್ರಕ್ಕೂ ಒಂದು ಪಾದ ಮಡಗಿ ತೆಂಕ ಸಮುದ್ರಕ್ಕೆ ಒಂದು ಪಾದ ಮಡಗಿ ನಾಕು ಲೋಕಾನು ದಿಕ್ಕು ಚಂಚರಿಸಿ ಬಿಟ್ಟು ಕಣ್ಣಿಗೆ ಯಾವ ಲೋಹ ಸಿಕ್ಕುವುದೋ

ಮುಕ್ಕಣ್ಣೇಶ್ವರ ಹಕ್ಕಿಗೂಡಲ್ಲಿದ್ದ
ಸಿಕ್ಕುದ ಕಬ್ಬಿಣವ ತಗೆತನ್ನ

ಭೂಮಿಯ ಒದ್ದು ಇಬ್ಬಾಗವನು ಮಾಡಿ
ಬರಸಿಡುಲ ಕುಡವ ತಗೆತನ್ನ

ಪಾತಾಳ ಲೋಕಕ್ಕೆ ಹೋದನು ನಾರಾಯಣ
ಏಳೇಳು ಲೋಕವ ತಿರುಗಿದನು- ಅವನಿನ್ನು
ಏಳು ಲೋಹವ ತೆಗೆತನ್ನ

ಕೈಲಾಸಕೆ ಬಂದು ಕಂಕುಳ ಚೀಲ ತೆಗೆದು ಸುರಿದು “ಕನ್ನಗತ್ತರಿ ಮಾಡಯ್ಯ” ಎಂದು ಹೇಳಿದ. ಆಗ

ಇಜ್ಜಿಲ ಗೂಡೆಯ ಸಿದ್ದಯ್ಯ ಹೊತ್ತಾನೆ
ಕಬ್ಬಿಣದ ಮುದ್ದೆಯ ಹೊತ್ತನೆ ಇಸುಬ್ರಹ್ಮ – ಮೂರು ಮಂದಿ
ಸಿದ್ದರು ಕಳ್ಳತನಕೆ ಅನುವಾದರು
ಕೈಲಾಸವಾದಲಿ ಮಾಡಬರದಂದು ಕೊಂಡು

ಆರಂದಡವೀಗೆ ಜೇನುಕಲ್ಲೊತ್ತಿಗೆ
ಮೂರು ದಾರಿಯ ಎಡೆಯಲ್ಲಿ – ಶಿವನಾರಾಯಣ
ಮೂರು ಮಂದಿ ಕಳ್ಳರುವೆ ಒಂದು ಗೂಡಿ – ಆಕ್ಷಣದಲ್ಲಿ
ಮಾಡಯ್ಯ ಕನ್ನಗತ್ತರಿ ಶೀಘ್ರದಲಿ

ಆಗ ಮೂರು ಜನವು ಕುಳಿತರು. “ಇಬ್ಬರು ಕಳ್ಳರ ಜೊತೆಯಲ್ಲಿ ಒಬ್ಬ ಸಣ್ಣವನು ಸೇರಿದರೆ ಅವನೂ ಕಳ್ಳನೆ. ಏನು ಸ್ವಾಮಿ ಕನ್ನಗತ್ತರಿ ಆಗಿಹೋಯಿತೆ. ಇಕ್ಕಳ ಅಡಿಗಲ್ಲು,  ರಾವುಗೋಲು,  ಸುತ್ತಿಗೆ ಇವೆಲ್ಲಾ ಎಂಟು ಆಯುಧ ಆಗಬೇಕು. ಇಲ್ಲಿ ಕೂತಿರಿ ನಾನು ತೆಗೆದುಕೊಂಡು ಹೋಗಿ ಮನೆಯಲ್ಲಿ ಮಾಡಿ ತರುತ್ತೇನೆ. ಅಲ್ಲಿ ಯಾರೂ ಬರುವುದಿಲ್ಲ” ಎಂದನು ಇಸುಬ್ರಹ್ಮಚಾರಿ. “ಸಾವಿರ ಜನ ಬರುವರು ಸಾವಿರ ಜನ ಹೋಗುವರು. ಸಾಲಗಾರರು ತಡೆದರೆ” ಎಂದು ಅವರು ಕೇಳಿದರು

ಲೋಕಕೆ ದೊಡ್ಡೋರ ಕಳ್ಳರ ಮಾಡುವೆ
ಎಲ್ಲರಿಗೂ ಈ ಮಾತ ಹೇಳುವೆ – ಶಿವನಾರಾಯಣ
ನಿಮಗೆ ಎಂಟಾಯುಧವ ನಾವು ತರುವೀ

ಎಂಟು ದಿಕ್ಕು ಪಾಲಕರ ಕರೆಸಿದರು ಶಿವನಾರಾಯಣ
ತಂತ್ರ ಹೇಳಿದರು ಬಿರುದುಗಳ

ಏನಪ್ಪ ಎಂಟು ದಿಕ್ಕು ಪಾಲಕರೆ ಲೋಕಕೆ ದೊಡ್ಡವರೆ
ನಾಡಿನ ಮೇಲೆ ಅತಿ ಚೋಜಿಗ-ಹುಟ್ಟಿದೆ
ನಾವೊಂದು ಬಿರುದ ಗೆಲ್ಲಬೇಕು-ಎಂಟು ದಿಕ್ಕುಪಾಲಕರೆ
ನೀವು ನಮ್ಮ ಪಾದಕೆ –ಒಳಗಯ್ಯ

ಅವರಿಂದ ಪಾದ ಮುಟ್ಟಿ ಭಾಷೆ ಪಡೆದರು.

ನೀವು ನಮ್ಮ ಪಾದಕೆ ಒಳಗಾದರೆ ಸಿಕ್ಕಿಲ್ಲ
ಎಂಟು ಆಯುಧವಾಗಿ ನೀವು ನಿಲ್ಲಿರಯ್ಯ

ಅಗ್ನಿ ಕಿಡಿಯಾದ ಮಂದೆಮಾರುದ್ದ ವಾಲೆ ಸರುವಾದ
ಫಣಿರಾಜ ರಾವುಗೋಲಾದ

ಹಿಡಿವ ಇಕ್ಕಳುಕೆ ಬಡಗಲು ಕುಭೇರನಾದ
ಬಡಿದ ಗೂಟಕ್ಕೆ ಯಮನಾದ –ನೈನುತ್ತರ
ರಾವುಗಲ್ಲಾದ ಮಗರಾಜ

ಎಂಟು ದಿಕ್ಕುಪಾಲರು ಎಂಟಾಯುಧವಾದರು
ತಿದಿಯ ಒತ್ತುವರು ಯಾರಯ್ಯ

ಇಬ್ಬರು ರಾಕ್ಷಸರು ಚದುರುಮುಖದ ಬ್ರಹ್ಮ ಪಂಚಮುಖದ ಪರಮಾತ್ಮ ನಮ್ಮ ಏನು ಅನ್ನೋದಿಲ್ಲ. ಆ ಗಂಟು ನಾಮದ ದಾಸ ಕಂಡ್ರೆ ಬಿಟ್ಟಾನೆ ಎಂದು ಇಬ್ಬರು ಅಣ್ಣತಮ್ಮಂದಿರು ಮಾತಾಡಿಕೊಂಡು ಹಿಂದಕ್ಕೆ ಓಟ ಹೊಡೆಯುತ್ತಿದ್ದರು. ಓಡುತ್ತಿರುವ ನೋಡಿ ನಾರಾಯಣ ಎರಡು ಕೈಲಿ ಹಿಡಕೊಂಡ. ಒಂದು ಪರ್ವತ ದಾಟಲು ಸಾಧ್ಯವಾಗಲಿಲ್ಲ. ಇಲಿಯಾಗಿ ಅವರು ನುಗ್ಗಿದರು

ಬೆಟ್ಟದ ಕುರುಗಲ್ಲ ಕಟ್ಟಿ ಕುರುವೆಯ ಮಾಡಿ
ಮೆಟ್ಟಿ ರಾಕ್ಷಸರ ತಿದಿಮಾಡಿ- ಆ ಕ್ಷಣದಲ್ಲಿ
ನೀ ಮಾಡಯ್ಯ ಕನ್ನಗತ್ತರಿ ಶೀಘ್ರದಲಿ

ನಾರಾಯಣ ನವತಂತ್ರಿ. ಒಂದು ಗಳಿಗೇಲಿ ವದಗಿಸು ಅಂದರೆ ಕನ್ನಗತ್ತರಿ ಮಾಡಿದರೂ ಅದು ತಿವಿದಾಗ ಮೂರು ತುಂಡಾಗುವಂತೆ ಮಾಡುವೆ. ಇನ್ನೊಂದು ಹೇಳುತ್ತೇನೆ ಕೇಳು.

ಕನ್ನಗತ್ತರಿ ಅಂದರೆ ಸುಮ್ಮನೆ ಸುಟ್ಟಾಟಿ ಆಯಿತೆ
ಮರಿ ಜವಳಿಕಡ್ಡಿ ತರಬೇಕು – ಅದಕೀಗ
ಜಪಿಸಿ ಜೀವಕಳೆ ತುಂಬಬೇಕು

“ಇಂಥ ಕನ್ನಗತ್ತಿರಿ ಮಾಡಿ ಅರೆಕಲ್ಲ ಮೇಲೆ ಹೊಡೆದರೆ ಆ ಅರೆಕಲ್ಲು ಚೂರು ಚೂರಾಗಬೇಕು”

“ತರಲೇ ಬೇಕೆ?”
“ತರಲೇ ಬೇಕು!”

ನಾರಾಯಣವತಾರವ ಕಳೆದು ಮಡಗಿ ನಾರಾಯಣ
ರಾಮಾವತಾರವ ಎತ್ತಿದನು
ರಾಸಾದ್ರಿ ಪರ್ವತಕೆ ಒಂದು ಪಾದ ಮಡಗಿದ
ಸಿರಿಸೈಲ ಪರ್ವತಕೆ ಒಂದು ಪಾದ

ಶ್ರೀಶೈಲ ಪರ್ವತಕ್ಕೆ ಒಂದು ಪಾದ ಮಡಗಿ ನವತಂತ್ರಿ ನಾರಾಯಣ,  “ಮರಿ ಜವಳಿ” ಅಂತ ಕೂಗಿದ. ಬೆಟ್ಟವೆ “ಹೋಯ್” ಅಂತು. ಕಡ್ಡಿ ಮತ್ತು ಪರ್ವತ ತಂದು ಇಸುಬ್ರಹ್ಮನ ಪಕ್ಕದಲ್ಲಿ ಮಡಗಿ ಕನ್ನಗತ್ತರಿ ಮಾಡಿ ಎಂದ. ಕನ್ನಗತ್ತರಿ ಮಾಡೋದರಲ್ಲಿ ಹದಬೇಕು

ಅತ್ತಿಮರದಡಿಯ ಇಕ್ಕಿದರು ಕುಲುಮೆಯ
ಅತ್ತಿ ತಲ್ಲಣಿಸಿ ಎಲೆ ನಡುಗಿ-ಕುಲಮಿಗೆ
ಬೆಟ್ಟ ಗಟ್ಟಿ ಒಂದು ಎದುರಿಲ್ಲ

ಆಲದ ಮರದಡಿಗೆ ಹೂಳಿದರು ಕುಲುಮೆಯ
ಮರಿಯಾಲ ತಲ್ಲಣಿಸಿ ಎಲೆ ನಡುಗಿ-ಕುಲುಮೆಗೆ
ಆರಣ್ಯ ಲೋಕ ಎದುರಿಲ್ಲ

ಸತ್ಯಲೋಕದ ನೀರು ಮರ್ತ್ಯಲೋಕದ ಮಣ್ಣು
ತುಂಬಿ ನೇಪದಲಿ ಒಲೆ ಒರೆದು

ಆಗ ಇಜ್ಜಿಲು ಸುರಿದರು. ನಾರಾಯಣನಿಗೆ ಇಸುಬ್ರಹ್ಮನಲ್ಲಿ ಇರುವ ಇಸಯಗೊತ್ತು.

ಕನ್ನಗತ್ತರಿ ಮಾಡೊ ಬಿನ್ನಾಣಿ ನೀ ಕೇಳೊ
ಹೋದಲ್ಲಿ ಕಳವು ದೊರಕಲಿ

ಹೋದಲ್ಲಿ ಕಳವು ದೊರಕಿದ್ದುಂಟಾದರೆ
ಸಾಲೆ ಬಂಗಾರವೆಲ್ಲ ಸಮಪಾಲು

ಕತ್ತಿಯ ಮಾಡುವ ಬಿತ್ರಪ್ಪ ನೀಕೇಳೊ
ವಾದಂತ ಕಳವು ದೊರಕಲಿ
ವಾದಂತ ಕಳವು ದೊರಕಿದ್ದುಂಟಾದರೆ
ಹೊನ್ನು ಬಂಗಾರವೆಲ್ಲ ಸಮಭಾಗ

“ಸಾಮಾನ್ಯವಾದ ಕೋಟೆಯಲ್ಲ. ಇಲ್ಲಿಗೆ ನಿನ್ನ ಬಳಿಗೆ ತಂದು ನವರತ್ನ ಮೂರು ಭಾಗ ಮಾಡಿಕೊಳ್ಳೋಣ” ಎಂದ ನಾರಾಯಣ. “ಪರವಾಗಿಲ್ಲ ಬಿಡು ಕಳ್ಳತನ ಮಾಡೋದು ಇದಿವರೇ ತಾನೆ” ಎಂದ ಮನಸ್ಸು ಪೂರ್ತಿಯಿಂದ ಮಾಡ್ತಾ ಇದಾನೆ.

“ತಿದಿ ಒತ್ತಿ”
“ನಮ್ಮಪ್ಪನ ಕಾಲದಿಂದ ತಿದಿ ಒತ್ತಿ ಬಲ್ಲವೆ”
“ಬ್ರಹ್ಮ ಲೋಕಕ್ಕೆ ಹೋಗಿ ಕರೆತರುವೆ”
“ಅಯ್ಯೋ ಸಾಧ್ಯವಿಲ್ಲ”

ಇಬ್ಬರು ಒತ್ತುವ ತಿದಿಯು ಹೆಬ್ಬಾವು ಮೊರೆದಾಗೆ
ಕಬ್ಬಿಣವು ಕಾದು ಹದವಾದೊ-ಕುಲುಮೆಯಲ್ಲಿದ್ದ
ಸಿದ್ದ ರಸವೆಲ್ಲ ಹದವಾಯ್ತು

ಸಿದ್ದರಸವೆಲ್ಲ ಹದವಾಯ್ತು ಹೂವಾಡಿ ತಾಂಡವವಾಡಿ
ಇವರಿಬ್ಬರು ಗೂಡವ ಹಿಡಿದವರೆ

ಭಾಮೈಕಳಿಬ್ಬರುವೆ ಬಾಗಿ ಗೂಡ ಹೊಡೆದಾರೆ
ಏಳು ಕೋಟಿ ಸಿಡಿಲು ಹೊಡೆದಾಗೆ

ಭಾಮೈಕಳಿಬ್ಬರು ಎತ್ತಿ ಗೊಡ ಹೊಡೆದಾರೆ
ಮುಂಗಾರು ಸಿಡಿಲು ಹೊಡೆದಾಗೆ

ಅದುರಿತು ಆಕಾಶ ಉದುರಿತು ನಕ್ಷತ್ರ
ಗದವಾಕ್ಷಿಗೊಂಡ ಶಿವನಿದ್ದ – ರವಪೀಠಕೆ
ಹೆದರಿ ಮಂಡಲವ ತುಡುಕೋಯ್ತು

ಆವಾಗ ದೊಡ್ಡೇಟನೆಲ್ಲ ಸ್ವಾಮಿಯವರ ಕೈಲಿ ಹೊಡೆಸಿ,  ಸಣ್ಣೇಟನೆಲ್ಲ ಅವರೆ ಹೊಡೆದುಕೊಳ್ಳುವರು.

ಹಿಡಿಗೆ ವಿಷ್ಣುವಿನ ರೂಪ ತುದಿಗೆ ಬ್ರಹ್ಮನ ರೂಪು
ನಡುತಾವ ಪರಮೇಶ್ವರನ ಪ್ರತಿರೂಪವು

ಇಂಥ ಕನ್ನಗತ್ತರಿಗೆ ಮರಿಜವಳಿ ಕಡ್ಡಿತಂದು ಜಪಿಸಿ ಜೀವಕಳೆ ತುಂಬಿದರು.

ಮರಿಜವಳಿ ಕಡ್ಡಿಯನೆ ತಂದು ಜೀವಕಳೆಯನೆ ತುಂಬಿ
ಕನ್ನಗತ್ತರಿಯ ಪಾದಾದ ಮುಂದುಗಡೆ-ಆವಾಗ
ಸ್ವಾಮಿಯವರು ಬಂದು ನಿಂತವರೆ

ಅರಳಿ ಎಲೆ ಮಂದಕ್ಕೆ ಹುರುಳಿಕಾಯಿನ ಮಾಟಕ್ಕೆ
ಎಳೆನಾಗ ಬಾಯಿ ತೆರೆದಾಗೆ – ಕನ್ನಗತ್ತರಿ
ಶಿರಪಾದಕೆ ಬಾಳ ಹಸನಾಯ್ತು

ಕನ್ನಗತ್ತರಿ ಮಾಟಣವ ನಮ್ಮ ಪನ್ನಂಗಧರ ಕಂಡಾರು
ಹನ್ನೆರಡು ಮೂರು ಕೊಡುಗೇಯ – ಬಿಟ್ಟಾರು
ಬಿನ್ನಾಣಕೆ ಬಿಟ್ರು ನಡುನಾಡ

ಅಕ್ಕಿಗೆ ಆರೂರು ತುಪ್ಪಕ್ಕೆ ಮೂರೂರು
ಮುಕ್ಕಣ್ಣಯ್ಯ ಧಾರೆ ಎರುದಾರು – ಇಸುಬ್ರಹ್ಮನ
ಸಂತೋಷಮಾಡಿ ನಿಲ್ಲಿಸಿದರು

ನಡು ಊರಿನಲ್ಲಿ ಬಿಟ್ಟರು ಪರಮೇಶ್ವರ. ನಾರಾಯಣನಿಗೆ ಕೋಪ ಬಂದಿತು. ಕಷ್ಟಪಟ್ಟವನು ನಾನು ಕಷ್ಟ ಪಡದವನಿಗೆ ಭಾಗ್ಯ ಕೊಟ್ಟನಲ್ಲ ಎಂದು ಸಿಟ್ಟುಮಾಡಿಕೊಂಡ. “ನಾನೂ ಕೊಡಬಲ್ಲೆ ಕಿತ್ತಿಕೊಬಲ್ಲೆ. ಆದರೆ ಲೋಕಕೆ ದೊಡ್ಡೋರು ಕೊಟ್ಟ ಭಾಗ್ಯ,  ನಾನೂ ಬಾಗ್ಯಕೊಡುವೆ ತಗದುಕೋ. ಬಾಯಿ ಆ ಎನ್ನೂ” ಎಂದ. ಅವನು ಅಂದ. ಅದಕ್ಕೆ ಹೊನ್ನು ಹಾಕಿದ. ಒಂದು ಹೊನ್ನೇನಾದರೂ ಬಾಯಿಂದ ಕೆಳಕ್ಕೆ ಬಿತ್ತು ನನ್ನ ಚಕ್ರ ಆಡತಾ ಇದೆ ಚಕ್ರಕೆ ಕೊಡುತ್ತೇನೆ. ಚಿನ್ನವನ್ನ ಬಾಯಲ್ಲಿಟ್ಟುಕೊಂಡು ಬೇಡಬೇಕು. ಮೂಡಲ ಸಮುದ್ರಕ್ಕೂ ಪಡುವಲ ಸಮುದ್ರಕ್ಕೂ ನನಗೇ ಇರಲಿ ಎಂದ ನಾರಾಯಣ. ನಾಲ್ಕು ಸಮುದ್ರ ಸುತ್ತಲೂ ನನಗೇ ಇರಲಿ ಎಂದು ಸನ್ನಿ ಮಾಡಿದ. ನಾಲೆ ಕಾವಲಿ ಸುತ್ತಿ ಸುತ್ತಿ ಬರುವುದೆಲ್ಲಾ ಒಂದು ಹೊರೆಹಲ್ಲು ಒಂದು ಕೊಳಗ ಬತ್ತ ನನಗೆ ಬರಬೇಕು ಎಂದು ಹೇಳಿದ.

ಬೆಟ್ಟದ ಗಾತ್ರದ ಕಬ್ಬಿಣವ ಸಂದೆಗಂಟ ಬಡಿದರೆ
ಹಾಗದೆ ಕಾಸಲ್ಲದೆ ಹಣವಿಲ್ಲ

ಸಂಜೆಯ ಸಿರಿ ಮುಂಜಾವದ ಬಡಸ್ಥಾನ
ನಿನಗೆ ಉಂಟಾಗಲೆಂದು ನಾರಾಯಣ –ಘನಲಿಂಗು
ಶಾಪನಾದರೆ ಕೊಡುತಾರೆ

ಕೊಂಡು ತಂದ್ರುವೆ ನಿನ್ನ ಮನೆಯಲ್ಲಿ ಇಸುಕರ್ಮ
ತೊಂಬೆಕಾತ್ರದ ಬರಬರಲಿ – ಹಗಲಾದ್ರೆ
ನಿನ್ನ ಹೆಂಡತಿ ರೈತರ ಮನೆಗೆ ಅಲೆಯಲಿ

ಭಾಗ್ಯ ಕೊಟ್ಟು ಭಾಗ್ಯ ಕಿತ್ತುಕೊಂಡರು ಅವನಿಗೆ. ಹೊಟ್ಟೆ ಉರಿ ಬಂತು. ಹೊನ್ನನ್ನು ವಸ್ತ್ರಕೆ ಉಗಿದುಬಿಟ್ಟು ಗಂಟು ಕಟ್ಟಿದ. ಸ್ವಾಮಿಯ ಪಾದದಲ್ಲಿ ಕನ್ನಗತ್ತರಿ ಅತ್ತ ಇತ್ತ ಆಡತಾ ಇತ್ತು. ಗುಡು ಗುಡನೆ ಓಡಿ ಹೋಗಿ ಅದನ್ನೆತ್ತಿಕೊಂಡ. ಕಿವಿದಂಡೆಯಲ್ಲಿ ಮೆಲ್ಲನೆ ಅದಕ್ಕೆ ಶಾಪಕೊಡುತಾನೆ-

ಆಳು ಗಾತ್ರದ ಕಲ್ಲು ಏರನೆ ಬಲುಗಲ್ಲು
ಸೀಳು ಸೀಳಾಗಿ ಹೊಡೆಯಲಿ – ಶಿವನಾರಾಯಣ
ನನ್ನ ಕನ್ನಗತ್ರಿ ರಾವು ನಿಮ್ಮ ಬಡಿಯಲಿ

ಬೆಟ್ಟಗಾತ್ರದ ಮಣ್ಣು ಕುಪ್ಪರಿಸಿ ಬೀಳಲಿ
ಉಪ್ಪು ಮಣ್ಣಾಗಿ ಉದುರಲಿ – ಶಿವನಾರಾಯಣ
ನನ್ನ ಕನ್ನಗತ್ತರಿ ರಾವು ನಿಮ್ಮ ಬಡಿಯಲಿ

ಹುಟ್ಟರೆ ಕಲ್ಲ ಮೇಲೆ ಕನ್ನಗತ್ತರಿ ಮಡಗಿದರೆ
ಬಿದರತಟ್ಟೆ ಹೊಡೆದಂಗೆ ಹೊಡೆಯಲಿ – ಶಿವನಾರಾಯಣ
ನನ್ನ ಕನ್ನಗತ್ತರಿ ರಾವು ನಿಮಗೆ ಬಡಿಯಲಿ

ಕೊಟ್ಟ ಭಾಗ್ಯ ಕಿತ್ತುಕೊಂಡದ್ದಕ್ಕೆ ಇಸುಬ್ರಹ್ಮ ಶಾಪ ಕೊಟ್ಟು ಬ್ರಹ್ಮಲೋಕಕ್ಕೆ ಹೊರಟ. ಹಾಗದ ಕಾಸನ್ನು ಎಸೆದರು. ಅದನ್ನೆತ್ತಿಕೊಂಡು ಎಡಚೋರಿ ಸೊಂಟಕ್ಕೆ ಸಿಕ್ಕಿಸಿಕೊಂಡು ಬ್ರಹ್ಮಲೋಕಕ್ಕೆ ಹೊರಟ.

ಕನ್ನಗತ್ತಿಯನ್ನೆ ಮಾಡಿಸಿದೆವು ನಾರಾಯಣ
ಇದಕೆ ತಕ್ಕಾದ ಬೇಳ್ಮೆ ನೀಂ ತರಬೇಕು

ಬೇಳ್ಮೆ ಬೂದಿ ಎಂದರೆ ಹೇಗೆ ಕಾಣಬೇಕು
ನೀ ಹೇಳು ನಾವೋಗಿ ತರುತೀನಿ

ಕಾಮನ ಸುಟ್ಟೆವಲ್ಲ ಜಾಮಿಗೆ ಬೂದಿಯ ತತ್ತ
ನಾವು ಮಾಯದಲ್ಲೋಗಿ ಕಳಬೇಕು

ಉರುಗನ ಸುಟ್ಟೆವಲ್ಲ ಮಾಯದ ಬೂದಿಯತತ್ತ
ನಾವು ತಂತ್ರದಿಂದೋಗಿ ಕಳಬೇಕು

ದಕ್ಷ ಬ್ರಹ್ಮನ ಸುಟ್ಟ ಜಾಮಿಗೆ ಬೂದಿಯತತ್ತ
ನಾವು ಮಾಯದಲ್ಲೋಗಿ ಕಳಬೇಕು

ಕನ್ನಗತ್ತರಿ ತೆಗೆದು ಜಡೆಯಲಿ ಆವಿಸಿಕೊಂಡು
ಬರುತಾರೆ ಗೌರಮ್ಮನ ಗುರು ಮಠಕೆ

ತಾನು ಬೇಳ್ಮೆ ಬೂದಿ ತೆಗೆದುಕೊಂಡು ಬರುವುದರಲ್ಲಿ ಶಿವಪೂಜೆ ಮುಗಿಸಿರು ಎಂದು ನಾರಾಯಣ ತಿಳಿಸಿದ್ದ. ಗೌರಿ ಅಗ್ಗಣಿ ತಂದು ಪಾದ ತೊಳದಳು. ಆರತಿ ನೈವೇದ್ಯ ಆಯಿತು. ಸ್ವಾಮಿ ಮಂಚದ ಮೇಲೆ ಕುಳಿತರು. ನಾರಾಯಣ,  ಪಾರ್ವತಿ ಜೊತೆಯಲ್ಲಿ ಇದನ್ನು ಹೇಳಬೇಡಿ ಎಂದಿದ್ದ. ಆದರೂ ಹೇಳಬೇಕು ಎನಿಸಿತು ಶಿವನಿಗೆ. ಹೋಗಿ ಬನ್ನಿ ಎಂದು ಅವಳು ಒಂದೇ ದೃಢದಲ್ಲಿ ಹೇಳಿದರೆ ಹೋದಕಾರ್ಯ ಜಯವಾಗುತ್ತದೆ ಎಂದು ಶಿವಪಾರ್ವತಿಯ ದಂಡೆಗೆ ಬಂದ

ಕಳವಿಗೆ ಹೋಯ್ತಿನಂತ ಶ್ರೀಗೌರಿಗೆ ಹೇಳಿದರು
ಕಳಬೇಡ ಸ್ವಾಮಿ ಬೋ ಕಷ್ಟ-ಕೈಲಾಸದೊಳಗೆ
ಶರಣರು ನೋಡಿ ನಗುತಾರೆ

ಎಂದು ಜೋರಾಗಿಯೇ ಹೇಳಿದರು

ನಗಲ್ಯಾಕೆ ಗೌರಾಯಿ ಜಗದೊಳಗೆ ನಮ್ಮ ಬಿರುದ
ಹೊಗ ಮಿಗಿಲಾಗಿ ನಡೆಸುವೆ – ಲಗುಬಗಿಯ
ಬಗೆನೋಡು ಶರಣರ ಮರೆಹೊಕ್ಕು

ಶರಣು ಎಂದರೆ ಹೇಡಿ ಅಂಬುವರು ನನ್ನೊಡೆಯ
ಅವರ ಬಿರುದಿಗೆ ಹೀನಾಯ ತರುತೀರಿ-ನೀವೊದ್ರೆ
ಬರಿದೆ ಕದ್ದ ದೂರು ಬರುವದಲ್ಲ

ದೂರೇಕೆ ಗೌರಾಯಿ ಓರುಗಲ್ಲಿಗೆ ಹೋಗಿ
ಆರು ಕಂಡವರೆ ಕಳುವುದಕೆ –ಎಲೆಗೌರಿ
ಪಂತಾವ ಹೊತ್ತು ಬಿಡುವುದಿಲ್ಲ – ಎಲೆಗೌರಿ
ನಾ ಹೊಗುಮಿಗಿಲಾಗಿ ನಡೆಸೂವೆ

ವಾಟವನು ತಕ್ಕೊಂಡು ದಾಟ್ತೀನಿ ಕೋಟೆಯ
ಪಾಟೆಸಿ ಪಾರಿ ಸರ ಗುರುಜ –ಕೋಟೆಯ
ಜಗದಾಟದಿಂದಲೆ ಗೌರಿ ನಾ ಮುಗಿಲೇರಿ

“ಪಾರ್ವತಾ ಓಟ ತಕ್ಕೊಂಡು ಹೋಗಿ ಪಟ್ಟಣದಲ್ಲಿ ಕಳ್ಳತನ ಮಾಡ್ತೀವಿ. ನೆತ್ತಿ ಮೇಲೆ ಹೂವಿನ ರಥ ಆಡುತ್ತೆ. ಅದೇ ರಥದ ಮೇಲೆ ಕೂತು ಬರುತ್ತೇವೆ. ಯಾರಾದರು ಹಿಡಿಯಲು ಬಂದರೆ ಕೂಗ ಬೇಡ ಸುಮ್ಮನಿರು” ಎಂದರು.

ಮುಗಿಲೇರಿ ಬರುವಾಗ ಜಗದೊಡೆಯ ಎಂಬುದ ಅರಿಯರು
ಬಿಗುವಾರು ನಿಮ್ಮ ಜಡೆಯಲ್ಲಿ – ನನ್ನೊಡೆಯ
ತಗುವಾರು ತಮ್ಮ ಮನದಣಿಯ

ರಥದ ಮೇಲೆ ಆತುರದಲ್ಲಿ ಹತ್ತುವಾಗ ಜಡೆ ಬಿಚ್ಚಿಕೊಂಡರೆ ಅದನ್ನೆ ಹಿಡಿಯುವರು. ಕೋಟೆಯ ಅಗಳಲ್ಲಿ ಮುಳುಗಿಸಿ ಮುಳುಗಿಸಿ ತೆಗೆಯುವರು.

ಎಂಟು ಸುತ್ತಿನ ಕೋಟೆ ಗಂಟೆಯ ಒಳಪಾರಿ
ಮಂಟದ ಮಲ್ಲವನೆ ಘನಪತಿ

ಮಂಟದ ಮನೆಹೋಗಿ ಕಳವು ಕದ್ದು ಬರುವಾಗ
ಒಂಟಂಬಲ್ಲೆ ಎತ್ತಿಕೊಲ್ಲುವನಯ್ಯ

ಆರು ಸುತ್ತಿನ ಕೋಟೆ ಕಾಳೇಯ ಒಳಪಾರಿ
ಮಾಳಿಗೆ ಮಲ್ಲವನೆ ಘನಪತಿ

ಆ ಮಾಳಿಗೆ ಮನೆಗೋಗಿ ನೀವು ಕಳವು ಮಾಡುವಾಗ
ನಿಮ್ಮ ಬೋಲಂಬಲ್ಲೆತ್ತಿ ಕೊಲ್ಲುವನಯ್ಯ

ಕೋಟೆ ಬುರುಜಿನ ಮೇಲೆ ಕನ್ನವ ಕೊರೆವಾಗ
ಕೆಳಗೋಡಿದ್ದ ಶೂಲ ಬಲಕಂಡು-ಅತ್ತಾರೆ
ಅಲ್ಲಿ ಗೋಳಾಡಿದವರು ಯಾರು ಅರಿಯರು

ಕೆತ್ತುಗಲ್ಲಿನ ಕೋಟೆ ಹತ್ತಿ ಕನ್ನ ಕೊರೆಯುವಾಗ
ಕೆತ್ತಿದ ಶೂಲಬಲ ಕೊಂಡು – ಅತ್ತಾರೆ
ಗೋಳಾಡಿದರಲ್ಲಿ ಯಾರು ಅರಿಯಾರು

ಕೆಳಗೆ ಉಕ್ಕಿನ ಗೂಟ ಬಗಿನಿ ಗೂಟಗಳನ್ನು ನಟ್ಟಿದ್ದಾರೆ

ಕದರಿ ಕೈ ಕೊಯ್ಯುವರು ಹಗ್ಗದಗಟ್ಟು ಕಟ್ಟಿಸುವರು
ಅಜ್ಜಜ್ಜಿ ಜಲದಲ್ಲಿ ತಗುವರು-ನನ್ನೊಡೆಯ
ಬುದ್ಧಿ ತರವಲ್ಲ ಕಳವುದಕೆ

ಕಲ್ಲಮೇಲೆ ಮಳೆಹೂದರೆ ಕಲ್ಲೆದರಿಕೊಂಬುದೆ
ಕಲ್ಲಲ್ಲಿ ಕವಲ ಹೊಡೆವಾದೆ-ಎಲೆಗೌರಿ
ನಿನ್ನ ಸೊಲ್ಲು ಕೇಳಿದಾತ ಅವ ಹೆಡ್ಡ

ಅಡವಿಲಿ ಮಳೆಹೂದ್ರೆ ಗಿಡವು ಹೆದರಿಕೊಂಬುದೆ
ಮುಡಿಯಮೇಲೆ ಪಚ್ಚೆ ಹೊಳೆವುದೆ-ಎಲೆಗೌರಿ
ನಿನ್ನ ನುಡಿಯ ಕೇಳಿದಾತ ಅವ ಹೆಡ್ಡ

ಏಕಮುಖದ ರುದ್ರಾಕ್ಷಿ ಲೋಕಕ್ಕೆ ಅಳವಲ್ಲ
ಆಕೆ ರಾಮಾಯಿ ಧರಿಸ್ಯವಳೆ-ಕೊಳ್ಳಿನ ಕಂಠಿ
ಮಾಲೆಸರವ ಬೇಕಂತಲೆ ಗೌರಿ ತರುನೀನಿ

ರಾಮಾಯಿ ಧರಿಸಿರುವ ಹೊನ್ನೆ ಮಿರುಗದ ಚವರಿಯ
ಗಂಗೆಗೆ ಬೇಕಂತೂ ತರುತೀನಿ

ನೀನು ಕೂಗಬೇಡ ಸುಮ್ಮನಿರು ಅಂದರೆ ಅಮ್ಮನವರು

ಲೋಕಕಿಂತ ಬಡವನೆ ಸಾಕ್ಷಾದೀಸ್ವರನೆ
ಸಾಕ್ಷಾದಿನುಳ್ಳ ಹರಿಬ್ರಹ್ಮನ ಚಕ್ರವರ್ತಿಗೆ

ವರವ ಕೊಟ್ಟಂಥ ನನ್ನೊಡೆಯ –ನೀನಿಗ
ಬೇಕೆಂದು ಕಳವ ಬಯಸುವುದೆ

ಉಣಲುಂಟು ಉಡಲುಂಟು ತೊಡಲೂ ಉಂಟು ಮೈತುಂಬ
ಕೊಡಲುಂಟು ಬೇಡಿದವರಿಗೆ ವರಗೋಳ-ಕೈಲಾಸದ
ಕಿಡಿಗಣ್ಣಯ್ಯ ಕಳವ ಬಯಸಲುಬಹುದೆ

ಚಿಂತೆ ಏಕತೆ ಗೌರಿ ಕಂಥೆ ಧರಿಸಿ ಹೋಯಿತೀನಿ
ಅಂಜಿಕೆ ಬೇಡ ಮನದಲ್ಲಿ – ಎಲೆಗೌರಿ
ಈ ಪಂತ ಯಾವತ್ತು ಬಿಡುವುದಿಲ್ಲ

ನಾವು ವೇಷಾಂತರದಿಂದ ಹೋಗುತೀವಿ. ಬೂದಿ ಭಸ್ಮಾಂಗ ಮುಖಕ್ಕೆ ಕಪ್ಪು ಬಳಿದುಕೊಂಡು ಲಕ್ಕಿಗುದ್ದಿಗೆ ಹೆಗಲಮೇಲೆ ಇಟ್ಟುಕೊಂಡು ಕರಿಕಂಬಳಿ ಧರಿಸಿ ಹೋಗುತ್ತೇವೆ.

ಧೀರನಿರುವ ದಾರಿ ಆದರೆ ಯಾರು ಹೋಗದಿದ್ದ ದಾರಿ
ದಾರಿ ದಾರಿಯ ಒಳಗೆ ಬಲಿಭೂತ-ಕಾದವೆ
ಮಾರಿ ಮಸಣಿಯರು ಇರುವಂಥ-ದಾರಿಯಲಿ
ಮಾರಿಯರು ದೇವರು ಎನ್ನುವ ಗುರ್ತತಿಳಿಯವು

“ವೇಷ ಧರಿಸಿಹೋದರೆ ಅವೆಲ್ಲವೂ ಆಹಾರ ಸಿಕ್ಕಿತು ಎಂದು ಕೆಳಕ್ಕೆ ಕೆಡವಿ ನಿಮ್ಮನ್ನು ತಿನ್ನಲು ಬರುತ್ತವೆ. ” ಆವಾಗ ಸ್ವಾಮಿಯವರಿಗೆ ಸಿಟ್ಟುಬಂತು

ಕೆಟ್ಟ ನುಡಿಯ ನುಡಿದೆ ಮುಟ್ಟಾಗೊ ಹೆಂಗಸೆ
ಗುರು ಸತ್ಯದ ನುಡಿ ನಿನ್ನಲ್ಲಿ – ಇಲ್ಲದೆ ಹೋಯ್ತು
ಅಂಥೇಳಿ ಮೇಲೆ ಎದ್ದರು-ಪರಶಿವನು
ಹಸ್ತವೆತ್ತಿ ಮಂಡೆ ಕೆದರಿದರು

ಹಸ್ತವೆತ್ತಿ ಮಂಡೆ ಕೆದರಿದರೆ ಕನ್ನಗತ್ತರಿ
ಸಿಡಿದು ಗೌರಮ್ಮನ ಮುಂದೆ ಬಿದ್ದು-ಹೊರಳಿತು
ಬೆಚ್ಚಿಬಿದ್ದಳು ಶ್ರೀಗೌರಿ

ಕನ್ನಗತ್ತರಿಯನ್ನೆ ನೋಡಿದಳು ಗೌರಮ್ಮ
ಹೆಚ್ಚಿದರು ಧರೆಯಲ್ಲಿ ಕಳ್ಳರು-ಎನ್ನುತ
ಬೆಚ್ಚಿಬಿದ್ದಳು ಮನದಲ್ಲಿ

ಯಾರಿಂದ ಲೋಕದಲ್ಲಿ ಕಳ್ಳತನ ಘನವಾಯ್ತು
ಕೊಂಡುಗ ನಾರಾಯಣ ಅವನಿಂದ – ಕಳ್ಳತನ
ಘನವಾಯ್ತು ಈ ಲೋಕದಲ್ಲಿ

ಅಮ್ಮನೋರು ಹೋಗಿ ಒಂದು ಮಂಚದಲ್ಲಿ ಮಲಗಿದರು. ಸ್ವಾಮಿ ಹೋಗಿ ಒಂದು ಮಂಚದಲ್ಲಿ ಮಲಗಿದರು

ಅಕ್ಕನು ಭಾವನು ಜಗಳವಾಡಿಕೊಂಡು
ಮುನಿಸಿಕೊಂಡು ಅವರು ಮಲಗಿರಲು

ಮುನಿಸಿಕೊಂಡು ಅವರು ಮಲಗಿರುವ ಸುದ್ದೀಯು
ಬೇಳುಮೆಗೆ ಹೋಗಿದ್ದ ನಾರಾಯಣನಿಗೆ-ಅರಿವಾಯ್ತು
ಬೇಗನಾದರೆ ಅವನು ಬರುತಾನೆ

ಏಳೇಳು ಲೋಕವ ತಿರುಗಿ ನಾರಾಯಣನು
ಏಳೂದ ಬೀಳ್ಮೆಯ ತಗತನ್ನ

ಏಳೂದ ಬೀಳ್ಮೆಯ ತಕ್ಕೊಂಡು ನಾರಾಯಣ
ಬರುತಾನೆ ಗೌರಮ್ಮನ ಗುರು ಮಠಕೆ

ಒಬ್ಬರು ಮಾತಾಡಿಸಲಿಲ್ಲ. “ಹೆಡ್ಡಶಿವ ಅನ್ನೋದು ಇದಕ್ಕೆ ಬೇಸಯಿಸನಾರದ ಬೇಳೆಕಾಳ ಈಚೆಗೆ ತಳ್ಯವರೆ. ಸೂಸ್ತ್ರ ಇರೋದು ನಮ್ಮ ಅಕ್ಕನ ಹತ್ತಿರ” ಅಂದುಬಿಟ್ಟು ಸ್ವಾಮಿ

ಅಂದನೆ ಮುಡಿಯೋಳೆ ನನ್ನ ಅಪರಂಜಿ ಕುಂದಣವೆ
ದೊಡ್ಡೋರ ಮಗಳೆ ಪಾರ್ವತದೇವಿ-ಗೌರಮ್ಮ
ಈ ಹೆಡ್ಡಶಿವನ ಕೂಡೆ ಮುನಿಸ್ಯಾಕೆ

ಸಾಲು ಸೀರೆಯೋಳೆ ನಾರಿ ಕೇಳಿ ಗೌರಮ್ಮ
ಬಾಲಾನ ಗೆದ್ದೆ ನಿನ್ನ ತಪದಿಂದ – ಗೌರಮ್ಮ
ಹೋಗೋ ಕಳ್ಳರಿಗೆ ನೀ ಎಡೆಮಾಡು

ಕಂಕಣದ ಕೈಯವಳೆ ಅಕ್ಕ ಕೇಳೆ ಗೌರಮ್ಮ
ಶಂಕ್ರನ ಗೆದ್ದೆ ನಿನ್ನ ತಪದಿಂದ –ಗೌರಮ್ಮ
ಹೋಗೋ ಕಳ್ಳರಿಗೆ ನೀ ಎಡೆಮಾಡು

ದೊಡ್ಡೋರ ಮಗಳೆ ಗೌರಮ್ಮ ಎದ್ದೇಳು
ಎನ್ನುತ ನಾರಾಯಣ ನುಡಿದನು

ಭಾವಯ್ಯ ನೀ ಕೇಳೊ ನೀ ಕ್ಯಾಣುಳ್ಳ ಭಾವಯ್ಯ
ಈ ರಾಣಿಯ ಕೂಡೆ ಮುನಿಸ್ಯಾಕೆ

ಹೊತ್ತಾಯಿತು ಏಳು ಭಾವ ಕಳವುದಕೆ ಎನುತೇಳಿ
ಕರವೆತ್ತಿ ಕೈ ಮುಗಿದಾನು

ಕರೆದಿರ ಎನುತೇಳಿ ಸಡಗರದಿಂದ ನಸುನಗುತ
ಚಂಬಿನಗ್ಗಣಿಗೆ ಕೈಕೊಟ್ಟ

ಸ್ವಾಮಿಯ ಎಚ್ಚರಿಸಿ ನಂದಗೋಕುಲಕೋದ
ಅಂಗೈ ಹಸ್ತಾವ ತೊಳೆದಾರು-ಜಗದೀಶ
ಲಿಂಗದ ಶಿವಪೂಜೆಗೆ ಕುಳಿತರು