ಸಂಧಿ : ಒಂದು

ಉತ್ತರದೇಶದೊಳೊಂದು ಓರುಗಲ್ಲೆಂಬುದು ಅದ
ರೊತ್ತೀಲೀ ಪುರುವು ಕೈಲಾಸ || ದೊಳಗಣ ಶಿವ
ಭಕ್ತರು ಮೆರೆದ ಕಥೆಗೇಳಿ     ೧

ಕಾಳಗದ ಕಥೆಯಲ್ಲ ಊಳಿಗದ ಮಾತಲ್ಲ
ಕೋಳು ಹೋದವರ ಕೊಲೆಯಲ್ಲ || ಶಿವಕಥೆಯ
ಕೇಳಿದರೆ ಪುಣ್ಯಫಲವುಂಟು  ೨

ಈ ಶಿವಕಥೆಯ ಕೇಳಿದವರಿಗೆ ಮುಕ್ತಿ
ಇದನಾವನೊಬ್ಬ ಜರಿದಾರೆ || ಅವರಿಗೆ
ವಿಧಿ ಬಂದು ಬೆನ್ನ ನುಲಿವವೂ          ೩

ಸಿರಿಯುಳ್ಳ ಶಿವರಾಯ ಧರೆಗೆ ಕಳವಿಗೆ ಬಂದು
ಶರಣರೊಂದಾಗಿ ಮರೆದಾರು || ಶ್ರೀಗಿರಿಯ
ವರೆದರೀ ಪುಣ್ಯಕಥೆಯನೂ              ೪

ಹರನು ನಾರಂದರನು ಧರೆಗೆ ಕಳುವಿಗೆ ಬಂದು
ಪುರ ವೋರುಗಲ್ಲ ಗಣಪತಿ || ರಾಯನ
ಸಿರಿಯ ಕದ್ದೊಯ್ದ ಕಥೆಗೇಳಿ           ೫

ಗುಂಡಬ್ರಹ್ಮಯಗಳು ಗಂಡುಗಲಿ ಧೀರರು
ಕಂಡವರು ಕದ್ದು ಮೊರೆಹೊಗಲು || ಕೊಡೆನೆಂದು ಕಾ
ಲ್ಪೆಂಡೆಯವನಿಟ್ಟು ಮೆರೆದಾರು        ೬

ಅತ್ತೆ ಮಾವನ ಮಕ್ಕಳರ್ತಿಯಲಿಬ್ಬರು ಶಿವ
ಭಕ್ತಿಗೆ ಹೋಗಿ ಮಥನಿಸಿ || ಶೂಲವ
ಹತ್ತುವರಂತೆ ಮೆರೆದಾರು    ೭

ಭಾವ ಮೈದುನ ಭೇದಗಳಿಲ್ಲ
ಜೀವವೊಂದಾಗಿ ಇರುತಿಹರು || ತಮಗಲ್ಲಿ
ಸಾವು ಬಂದಲ್ಲಿ ಸಮವಾಗಿ  ೮

ಉಂಬಲ್ಲಿ ಉಡುವಲ್ಲಿ ಕೊಂಬಲ್ಲಿ ಕೊಡುವಲ್ಲಿ
ಇಂಬು ಬಂದಲ್ಲಿ ಸುಖದಲ್ಲಿ || ಜಂಗಮಕೆ ಶರ
ಣೆಂಬುದೆ ತಮಗೆ ವ್ರತನೇಮ            ೯

ಜಂಗಮರು ಕಂಡಲ್ಲಿಂಗಿರಲರಿಯರು
ಅಂಗನೆಯರು ತಮ್ಮ ಪುರುಷನ || ನೆನೆವಂತೆ ಶಿವ
ಲಿಂಗದ ಸುಖವು ನಮಗಲ್ಲಿ             ೧೦

ಪಾದತೀರ್ಥವು ತಮ್ಮ ಪಾದಕ್ಕೆ ಆಧಾರ
ಶೋಧಿಸಿದ ಭಸಿತ ಮೈಜೋಡು || ಶರಣರಿಗೆ
ಕಾದುವರಿಲ್ಲ ನರರೊಳು    ೧೧

ಕೊಂಡ ಪ್ರಸಾದವೆ ಗುಂಡಿಗೆ ಎದೆಯೊಳು
ದಿಂಡೆಯತನವ ಪೆಟಿಲಂಬು || ಶರಣರ
ದಿಂಡೆಯಾತನಗಳಾ ಪರಿಗಳ ೧೨

ಅಷ್ಟಮದಂಗಳೆ ಕಟ್ಟಿದ ಮದಕರಿ
ಬಿಟ್ಟು ತೇಜಿಗಳೆ ಮನಧರ್ಮ || ಶರಣಾರು
ತೊಟ್ಟ ಪಂಥಗಳೆ ವ್ರತನೇಮ           ೧೩

ಸತ್ಯಸದಾಚಾರು ಭತ್ತೀಸಾಯುಧಗಳೂ
ಬಿಟ್ಟುಗೊಂಡೆಯ ಬಿರುದಿನ || ಶರಣಾರು
ಕಟ್ಟಳಾಯುವಾಗಿ ಹೊರಲಿ ೧೪

ಉಟ್ಟಬಟ್ಟೆಯ ದಟ್ಟಿದೊಂಕುಡಿದಾರವೂ
ಇಟ್ಟ ವಿಭೂತಿ ನೊಸಲಲ್ಲಿ || ಶರಣಾರು
ನಿಷ್ಠೆಯಿಂದೊಪ್ಪಿರುತಿಹರಲ್ಲಿ         ೧೫

ಇಂತಪ್ಪ ಶರಣರು ಸಂತೋಷದಿಂದಿರಲು
ಪಂಥದ ಕಾಳೆ ಹಿಡಿದಾವು || ಕೈಲಾಸ
ಅಂತು ಕೇಳಿದರು ಶರಣಾರು೧೬

ಮೊರೆಹೊಕ್ಕವರ ಕಾಯ್ವೆವೂ ಮಾರಂತರ ಕೊಲ್ವೆವೂ
ಶರಣಾಗತದ ವಜ್ರ ಪಂಜರವೆಂಬ || ಬಿರುದೀನ ಈ
ಶ್ವರನ ಕಾಳೆ ಹಿಡಿದಾವೂ     ೧೭

ಹರನ ಬಿರುದಿನ ಕಹಳೆ ಪುರವ ಬಂದುಲಿವಾಗ
ಶರಣರಿಬ್ಬರು ಕೇಳಿನಸುನಕ್ಕು || ಶಿವನಿಗೆ
ಎರವಾಗ ಬಂದು ಸಾವುವುದೇ           ೧೮

ಚಾರವಗೆ ಹೇಳಿದರೆ ಮುರಾರಿ ಮೊರೆಹೋಗೆ
ಕರುಣಾದಿ ನಂಬೆಣ್ಣ ನೊಡಗೊಂಡು || ಕೈಲಾಸಕ್ಕೆ
ಧಾರುಣೀ ಪತಿಯು ದಾಳಿಯನಿಟ್ಟು   ೧೯

ಮೊರೆಹೊಕ್ಕನಂಬಿಯನರಿದು ಚೇರಮಗಿತ್ತು
ಬರಿಯ ಬಿರುದುಗಳ ಮೆರೆವರೆ || ಶಿವನಿಗೆ
ಗುರುವೆ ನಿನಗೇ ಬಿರಿದು ಸಲುವಾದೆ    ೨೦

ಬಟೆಯೊಳಾಡುವ ಡಕ್ಕೆಯ ಗೊರವಗೆ
ಉಕ್ಕಡ ಗಾಳೆ ಸಲ್ಲುವದೆ || ಹೋಗೆಂದು
ಮುಕ್ಕಣ್ಣ ಶಿವನ ಜರಿದಾರು            ೨೧

ಆರಿಗೆ ಸಲುವುದು ಮುರಾರಿಯ ಬಿರಿದು
ವೀರಶೈವನ ವ್ರತ ನಮಗುಂಟು || ಬಿರಿದೀಗೆ
ಆರು ಸಮರ್ಥರು ಧರೆಯೊಳು           ೨೨

ಹೆಣ್ಣ ಕದ್ದರೆ ಕೊಡೆವು ಹೊನ್ನ ಕದ್ದರೆ ಕೊಡೆವು
ಬಣ್ಣ ಬಂಗಾರವ ತೆಗೆದೆಮ್ಮ || ಮೊರೆಹೊಗಲು
ಕಣ್ಣಾರೆ ಕಂಡು ಕೊಡೆವಯ್ಯ            ೨೩

ಎತ್ತು ಕದ್ದರೆ ಕೊಡೆವು ತೊತ್ತು ಕದ್ದರೆ ಕೊಡೆವು
ಮುತ್ತು ಬಂಗಾರವ ತೆಗೆದಮ್ಮ || ಮೊರೆಹೊಗಲು
ಕಣ್ಣಾರಕಂಡು ಕೊಡೆವಯ್ಯ೨೪

ಪರಧನ ಪರಸತಿಯರನೊಯಿದು ಬಂದೆಮ್ಮಾ
ಮೊರೆಹೊಗಲು ನಾವು ಕೊಡೆವಯ್ಯ || ಗುಂಡಬ್ರಹ್ಮಯ್ಯಗಳ
ಬಿರುದಿನ ಮಾತ ನುಡಿದಾರು            ೨೫

ಮೂರು ಹೊತ್ತಿನ ಕಹಳೆ ಸಾರಿದವು ಪುರದಲ್ಲಿ
ದೂರು ಮುಟ್ಟಿದವು ಶಿವನಿಗೆ || ಅರ್ಧಾಂಗನ
ಪಾರ್ವತಿ ಕೇಳಿ ನಸುನಕ್ಕು    ೨೬

ಕಂಡೆಯ ಶಿವರಾಯ ದಿಂಡೆಯತನಗಳಾ
ಮಂಡೆಯ ಹಂಗುತಮಗಿಲ್ಲ || ಶರಣಾರ
ಗಂಡಾಳುತನದ ಪರಿಗಳ      ೨೭

ಕೇಳಲೆ ಪಾರ್ವತಿ ಕಹಳೆಯ ಮಾತಿಗೆ
ಬಾಳಂಬುಯೆದೆಯೊಳುಗಿದಂತೆ || ಮರ್ತ್ಯದಲ್ಲಿ
ಕಾಳೆಯ ಹಿಡಿದಾವು ಶರಣರ೨೮

ಹಾಳು ಮಾಡುವೆನವರ ಗಾಳಿಗಿಟ್ಟು ತೂರುವೆನು
ಧೂಳಿಪಟವ ಮಾಡಿ ಕೆಡಿಸೂವೆ || ಶರಣರ
ಶೂಲದ ಬಳಿಗೆ ನಡೆಸೂವೆ    ೨೯

ಹಲವುದರಿಂದಲಿ ಒಲಿಸುವೆ ಶರಣರ
ಛಲದಿಂದ ಬಿರುದ ಗೆಲಿದಾರೆ || ಕಡೆಯಲ್ಲಿ

ಸಲಿಗೆಯನೀವೆ ಎನ್ನಪುರದೊಳು        ೩೦

ಹರನ ಓಲಗದೊಳು ನೆರೆದ ಗಣಂಗಳು
ಬಿರುದ ಕೇಳಿದರು ಶರಣರು || ಮರ್ತ್ಯದ
ಪರಿಯ ನೋಡುವರೈದುವರು         ೩೧

ಓರುಗಲ್ಲಿಗೆ ಹೋಗಿ ವೀರರ ನೋಡುವರೆ
ಆರುಂಟು ದೇವ ಸಭೆಯಲ್ಲಿ || ಎಂದರೆ
ನಾರಂದ ಕರವ ಮುಗಿದಾನು೩೨

ನಾನು ಹೋದೇನೆಂದು ತಾನೆದ್ದು ನಾರಂದ
ತಾನು ಮುರಾರಿಯೊಡನೆ ನಡಿದಾನು || ಶಿವರಾಯ
ಧರಣೆಗೆಯಿಳಿವ ಪರಿ ಹೇಗೆ   ೩೩

ಜಂಗಮ ರೂಪಿಂದ ಶೃಂಗಾರವಾಗೆಂದು
ಲಿಂಗಯ್ಯ ತನ್ನ ಮುರಿಗಳ || ನಾರದಗೆ ತ
ನ್ನಂಗಕ್ಕೆ ಮೆಚ್ಚಿ ಧರಿಸೀದ   ೩೪

ಉಟ್ಟ ಕಾವಿಯ ಧೋತ್ರ ಕಟ್ಟಾಂಗ ಕಿನ್ನರಿ
ಪಟ್ಟು ಸೀರೆಗಳು ಹೊಸಕಂಥೆ || ನಾರದಗೆ
ಕಟ್ಟಿದರು ರುದ್ರಾಕ್ಷಿ ಜಪಸರ            ೩೫

ಪಾದದ ಕಿರುಗೆಜ್ಜೆ ಪದ್ಮದ ಹಾವುಗೆ
ಆಧಾರ ಕೈಯ ಹೊಸಬೆತ್ತ || ಲಾಕುಳ
ವೇದ ಶಾಸ್ತ್ರಗಳ ಬರದೋಲೆ            ೩೬

ಕರದ ಕಮಂಡಲ ಭಸ್ಮಾಂಗ ಉರಸಜ್ಜೆ
ಮರ್ತ್ಯದಲ್ಲಾಡುವ ಬಗೆಯಲ್ಲಿ || ನಾರದಂಗೆ
ಚಿತ್ತದೊಳು ಲಿಂಗಾವಮಳಾಕ್ಷ          ೩೭

ಸೂಕ್ಷ್ಮದ ಕೆಂಜೆಡೆ ಸುಲಿಪಲ್ಲು ಕೊನೆಮೀಸೆ
ರೇಖೆಗಳ ಗಂಧಗಳ ಮುಖಭಸ್ಮ || ಕಾಮಾಕ್ಷ
ಲೋಕಮಾಣಿಕದ ಪ್ರತಿಭೆಯಂತೆ        ೩೮

ಹರನ ರೂಪನು ತಾಳಿ ಬರಲಾಗ ನಾರಂದ
ಶರಣರೆಲ್ಲರು ಕೂಡಿ ಧಿಗಿಲೆದ್ದು || ನಾರಂದ
ಮರಳಿ ಮತ್ತವರ ನಿಲ್ಲಿಸಿದ೩೯

ಮುರಾರಿ ಶಿವನೆಂದು ವೀರ ಪ್ರಥಮರೊಳೆ
ನಾರಂದನವರ ನಿಲ್ಲಿಸಿದರೆ || ಮತ್ತವರು ನೀ
ನಾರೆಂದು ಕೇಳಿ ಬೆಸಗೊಳೆ    ೪೦

ನಾರಂದ ಮುನಿ ನಾನು ಈರೇಳು ಜಗದೊಡೆಯ
ಧಾರುಣಿಯೊಳಗುಳ್ಳ ಶರಣರ || ನೋಡೆಂದು
ಮುರಾರಿ ಎನ್ನ ಕಳುಹಿಸಿದ  ೪೧

ಹರಗೆ ಬಿನ್ನವ ಮಾಡಿ ಧರೆಗಿಳಿದು ನಾರಂದ
ಪರಮೇಶ್ವರ ರೂಪ ಭರದಿಂದ || ನಾರಂದ
ಓರಗಲ್ಲ ಪುರದ ಬಸವನ ಗುಡಿಗಾಗಿ  ೪೨

ಬಸವನ ಗುಡಿಗಾಗಿ ಬಂದನು ನಾರಂದ
ಮಿಸುನಿ ದೇಗುಲವನೊಳ ಪೊಕ್ಕು || ಕಂಡಾನು
ವಸುಧಿಗೆ ಗುಂಡಬ್ರಹ್ಮಯ್ಯನ ಪುರವನು          ೪೩

ಪುರದೊಳಗೆ ಶಿವ ಪೂಜೆ ಹರನ ಕೊಂಡಾಟಗಳು
ಬುರುಗು ಜಾಗಟೆ ಕೈ ತಾಳ || ಶರಣರ
ಬಿರುದಿನ ಕಹಳೆ ಹಿಡಿದಾವು  ೪೪

ಊರೊಳಗೆ ಶಿವ ಪೂಜೆ ಮುರಾರಿಯೋಲಗ
ಘೋರೆಂಬ ನುಡಿವ ವಾದ್ಯ || ಘೊರೈಸಲು
ನಾರಂದ ಕೇಳೆ ನಸುನಕ್ಕ      ೪೫

ಹೀಗೆ ಹೋದರೆ ನಮ್ಮ ಆಗಮಿಕರು ಕಂಡು
ಭಾಗ್ಯ ಬಂದಂತೆ ತಡದಾರು || ನಾರಂದ
ಹೋಗೆ ಬಸವನ ಗುಡಿಗಾಗಿ  ೪೬

ಭಾರಿಯ ಕಂಥೆಯ ಬಿಟ್ಟು ಕಿರೀಟವ ಕಿನ್ನರಿ
ಮಾರಾರಿ ಕೊಟ್ಟ ತೊಡೆಗೆಯ || ಮಡಗಿದ
ಆರೈಕೆ ಬಸವ ನಿಮ್ಮೊಶವೆಂದ           ೪೭

ಚಿಕ್ಕ ಬೆತ್ತದ ಕೋಲು ಇಕ್ಕಿದ ಆಧಾರ
ಸುಕ್ಕು ಕೆಂಜೆಡೆಯ ಸುಲಿಪಲ್ಲು || ಮುಖಭಸ್ಮ
ಹೊಕ್ಕ ಗುಂಡಬ್ರಹ್ಮಯ್ಯನರ ಮನೆಯ           ೪೮

ಶರಣರ ಬಾಗಿಲ ಮುಂದೆ ಹಿರಿಯ ಸಿಂಹಾಸನ ಅ
ಲ್ಲಿರುವ ಮಹಾತ್ಮ ಪರಬ್ರಹ್ಮ || ಕಟ್ಟಂಗದ
ಹಿರಿಯರಿಗೆಲ್ಲ ಸಮವಾದ  ೪೯

ಕಟ್ಟಕಡೆಯಲಿ ಕುಳಿತ ಶರಣ ವೇಷದಲಿ
ದೃಷ್ಟಿ ಪಲ್ಲಟವು ಬಿರಿನೋಟ || ಶರಣರ
ದೃಷ್ಟಿಸಿ ನೋಡಿ ಮುನಿಕಂಡ            ೫೦

ಮಂಡೆಯ ಜೆಡೆಗಳು ಕಂಡೆಯ ಕರದಲ್ಲಿ
ಗೊಂಡೆಯ ದಟ್ಟಿ ಬಿರುದೀನ || ಶರಣರ
ಗುಂಡಬ್ರಹ್ಮಯ್ಯ ಮುನಿಕಂಡ          ೫೧

ಬಿರುದೇಕ ನಿಮಗೆಂದು ವರಮುನಿ ಕೇಳಿದರೆ
ಮರಳಿ ಗುಂಡಬ್ರಹ್ಮಯ್ಯನ ನುಡಿದಾರು || ಆರಾದರು
ಮೊರೆ ಹೊಗಲು ನಾವು ಕೊಡೆವೆಂದು  ೫೨

ಪರಧನ ಪರ ನಾರಿಯರ ಕದ್ದು ಬಂದೆಮ್ಮೆ
ಮೊರೆ ಹೊಗಲು ನಾವು ಕೊಡೆವೆಂದು || ಗುಂಡಬ್ರಹ್ಮಯ್ಯಗಳು
ಬಿರುದಿನ ಮಾತ ನುಡಿದಾರು            ೫೩

ಅರಮನೆಗಳ ಕದ್ದು ಬರಲು ನಮ್ಮೊಶವಾಗೆ
ಅರಸು ಗಣಪತಿಯು ಅರಿತಾರೆ || ಅವ ನಿಮ್ಮ
ಬಿರುದಿಗೆ ಅಂಜಿ ಕಳ್ಳರ ಬಿಡುವನೆ      ೫೪

ಕೊಲ್ಲಲೀಸೆವು ಕಳ್ಳರ ತಲೆಗೆ ತಲೆಯ ಕೊಟ್ಟು
ಗೆಲ್ಲುವೆವು ನಮ್ಮ ಬಿರುದುಗಳ || ಎಂದೆದ್ದು
ಛಲದಿಂದಲೆದ್ದು ನುಡಿದಾರು           ೫೫

ಅಣ್ಣಗಳಾರೆಂದು ಬಣ್ಣಿಸಿ ಕೇಳಿದರೆ
ಕಣ್ಣೊಳಗೆ ತಮಗೆಯುರಿ ಹೊಗೆ || ಬಾಯಾರಿ
ಬಣ್ಣನೆ ಮಾತು ಬಿರಿಗೋಪ            ೫೬

ನಾವಿರುವ ಆಗಮವನಾರ ಕೇಳಿದಿರಿ
ಆವ ದೇಶದಿಂದಾ ಇಳಿದಿರಿ || ಎಂದೆನುತ
ಪಾವನ ಮೂರ್ತಿ ಬೆಸಗೊಂಡ           ೫೭

ಎಲ್ಲಿಂದ ಬಂದಿರಿ ಯಾವ ದೇಶದೊಳುಳಿದೀರಿ
ಕಲ್ಯಾಣದಾಚೆ ಕಡೆಯಲ್ಲಿ || ವೈಕುಂಠವೆಂ
ಬಲ್ಲಂಟು ನಮ್ಮ ಮಠ ಮನೆ           ೫೮

ಅಲ್ಲಿರುವಂಥರು ಎಲ್ಲರು ದಾಸರು
ಅಲ್ಲಿಗೆ ನಾವೊಬ್ಬ ಒಡೆಯಾರು || ಶಿವಶಾಸ್ತ್ರವ
ಬಲ್ಲುವರಾಗಿರುತಿಹೆವು      ೫೯

ದಾಸೋಹಿಗಳ ಮನೆಯಲ್ಲಿ ಈಶ್ವರಾರ್ಚನೆ ಮಾಡಿ
ಲೇಸಾಗಿ ಉಂಡು ಇರುವೇವು || ನಾವು ನಿಮ್ಮ
ದೇಶವ ನೋಡಿ ಹೊರಟೇವು            ೬೦

ಒಳ್ಳೆ ಒಳ್ಳೆಯದೆಂದು ಭಲೈಸಿಕೊಂಡಾಡಿ
ಕೊಲ್ಲುವ ಕೋಪ ಎದೆಯಲ್ಲಿ || ನಾರಂದ
ಅಲ್ಲಿಂದ ಮುಂದಕೆ ನಡೆದಾನು         ೬೧

ವೀರರ ಪುರದಿಂದ ನಾರದ ಹೊರಟನು
ಊರ ಮುಂದಿರುವ ಬಸವನ || ಗುಡಿಯಲ್ಲಿ
ಭಾರಿ ಕಂಥೆಗಳ ಧರಿಸಿದ       ೬೨

ಭಾರಿ ಕಂಥೆಗಳ ತೊಟ್ಟು ನಾರಂದನು
ಓರಗಲ್ಲಿಗಾಗಿ ನಡದಾನು || ವೇಳೆಯಲ್ಲಿ
ಸೂರ್ಯ ಅಸ್ತಮಯವಾದ  ೬೩

ಓರುಗಲ್ಲಿನ ಜೀವ ನಾರಂದ ನೋಡಲು
ಆರಾವೆಯೊಳಗೆ ಸುಳಿದಾಡಿ || ಕಂಡನು
ದಾರಿ ಕಂಡಿಗಳ ಕಣುವೇಯ  ೬೪

ಹೆಬ್ಬಿದಿರು ಕಿರಿಬಿದಿರು ಹಬ್ಬಿದ ಕೆಂದಕೆಂಜಿಗೆ
ಬೊಬ್ಬಲಿ ಜಾಲಿ ಹುಣಸೇಯ || ಅಡಿಗಡಿಗೆ
ಹೆಬ್ಬಾವು ಕರಡಿ ಇಹವಲ್ಲಿ೬೫

ಎಲೆದೋಟದೊಳಗೆಲ್ಲ ಹುಲಿ ಕರಡಿ ಗಜ ಸಿಂಹ
ತಲೆಯ ಬೇರುಂಡ ಮದದಾನೆ || ಹೆಬ್ಬಾವು
ನೆಲದ ಮಾನ್ವರಿಗಳವಲ್ಲ   ೬೬

ಸಿಂಗಿ ಸೀಳ್ನಾಯ ನುಂಗವನೆಗಳಲ್ಲಿ
ತಂಗಿ ಹೆಬ್ಬುಲಿಯ ವರಹನು || ಕರಡಿಯ
ಹಿಂಗಿ ಬಸವಕೋಟೆ ವಶವಲ್ಲ          ೬೭

ಓರಗಲ್ಲಿನ ಸುತ್ತಲಿವೆ ಕೆರೆತೋಪುಗಳು
ಊರು ಸುತ್ತುಗಳು ಜಲದುರ್ಗಾ || ಕೋಟಿಯ
ಆರು ಕಾದುವರಿಗಳವಲ್ಲ    ೬೮

ಆಗಳೊಂದು ಪಾತಾಳ ಮುಗಿಲ ಮುಟ್ಟು ಕೋಟಿ
ಜಗಳಕ್ಕೆ ಮರಿಹುಲಿ ಮುಖ || ಆಳ್ಪರಿ
ಜಗದ ಮನ್ನೆಯರಿಗಳವಲ್ಲ            ೬೯

ಕೆತ್ತುಗಲ್ಲಿನ ಕೋಟಿ ಎತ್ತಬಾರದ ಗುಂಡು
ಕಿತ್ತು ಹಾಕುವರಳವಲ್ಲ || ಬಹುತೆನೆ
ಹತ್ತುವವರಿಗೆರಡು ತಲೆಬೇಕು          ೭೦

ಕರಿಯ ಕಲ್ಲಿನಕೋಟಿ ಹುಲಿಮುಖ ಡೆಂಕಣಿ
ಮೊರೆದಿಡುವ ಕವಣೆ ಪೆಟಲಂಬು || ದುರ್ಗದ
ಊರವಣೆಯನೇನ ಹೊಗಳೂವೆ        ೭೧

ಕಾದ ಕಂಚಿನಕೋಟಿ ಶೋಧಿಸಿದ ಸುರಿಗುಂಡು
ಕಾದುವರಿಲ್ಲ ನರರೋಳು || ಕೋಟಿಯ ತೆನೆ
ಹೋದವು ಮುಗಿಲ ತೆರನಾಗಿ            ೭೨

ಮೃತ್ಯುವಿನ ಬಾಯೊಳಗಣ ಇತ್ತರದ ಹಲ್ಲಿನಂತೆ
ಸುತ್ತೇಳು ಕೋಟಿ ತೆನೆಗಳು || ಮುಗಿಲಚ್ಚಣೆ
ಹತ್ತಿ ನೋಡಿಯೇ ದಿನಪನ   ೭೩

ಅಗಳೊಂದು ಪಾತಾಳ ಮಿಗಿದಿಡಿ ಕೊತ್ತಳ
ಜಗಳಕ್ಕೆ ಮರಿಹುಲಿ ಮುಖದ || ಆಳ್ಪರಿ
ಅಗಲವ ನಾನೇನಾ ಹೇಳುವೆ೭೪

ಕೇರಿಕೇರಿಗಳಲ್ಲಿ ವೀರರ ಕಾವಲು
ಭಾರಿಯ ಗಂಟೆ ತಳವಾರ || ಹುಲಿಯ
ಭೇರಿಯ ಹೊಯ್ದು ಧ್ವನಿ ಮಾಡಿ     ೭೫

ಆಳುವೇರಿಯ ಮೇಲೆ ಆಳಾಳು ನಿಲಬಾರದ
ಮೇಳದ ಜನರು ಕಥೆಗಳ || ಆಡುತ್ತ
ಸೂಳು ಮಾಡಿದರು ಬೆಳಗಾನ           ೭೬

ಓರುಗಲ್ಲ ಅರಸನ ಧೈರ್ಯವ ನೋಡುವರೆ
ನಾರಂದ ವನವ ಹೊರವಂಟು || ಬಂದನು
ಊರು ಬಾಗಿಲನೆ ಹೊಗುವಾಗ         ೭೭

ಅಂಕ ವಜ್ರದ ಕೋಟಿ ಡೆಂಕಣಿ ಹುಲಿಮುಖ
ಅಂಕುಶದ ಮೊಳೆಯು ಕದವೀಗೆ || ಬಲುದೀವೆ
ಶಂಕರನ ಅಲಗು ತೆಗೆದಂತೆ   ೭೮

ಊರ ನೋಡಿದೆವು ಊರು ತೆರಪಿನ ಹುಲಿಮುಖವ
ನೇರಿದ ಗುಂಡು ಗಜದಂತ || ನಾರಂದ
ಊರು ಬಾಗಿಲನು ಹೊಗುವಾಗ        ೭೯

ಷಡುದರ್ಶನಾದಿಗಳೆಳಯುರೆ ನಂಮ್ಮೂರ
ಒಡೆಯನಾಜ್ಞೆಯಲ್ಲಿ ಹೋಗಲಿ || ಎನ್ನುತ
ಕಡೆಯ ಬಾಗಿಲ ತಳವಾರ    ೮೦

ಬಾಗಿಲ ಗೊಲ್ಲರು ಕಂಡು ಹೋಗಲೀಸರು
ಈಗ ನಮ್ಮ ರಾಯನಿಗೆ ಅಸದಳ || ಜಂಗಮರ
ಹೋಗಲೀಸರೂರ ಹೊರಡಯ್ಯ       ೮೧

ಏನು ಕಾರಣವೊ ಊರು ಹೊರಗಿಲ ದೇಶಕ್ಕೆ
ನೀನ್ಯಾಕೊ ತಮ್ಮ ತಡದೀಯೊ || ಎಂದರೆ
ತಾನೊಡೆಯನೊಡನೆ ನುಡಿದಾನು      ೮೨

ಪರದೇಶಿಯ ವೇಷದಲಿ ಪರರಾಯರ ವೇಷದಲಿ
ಪುರದೊಳು ಪೊಕ್ಕು ನಮ್ಮ ರಸರ || ಕೊಂದಿಹರೆಂಬ
ಪರಿಯ ನಾನರಿತು ಹೊಗಲೀಸೆ          ೮೩

ಅಂದಕ ಪರದೇಶಿಯವರಂತವ ನಾನಲ್ಲ
ಶಾಂತ ಸ್ವರೂಪ ಜನವಂದ್ಯ || ಬಾಗಿಲಲ್ಲಿ
ನಿಂತರಾ ಬೇಡ ಕಥೆ ತಾನೊ  ೮೪

ಪರದೇಶಿ ಬಂದರೆ ತಿಂದುಣ್ಣಲೀಸರು
ಧರೆಗೆ ಪಾತಕವು ಇಡುತಾನೆ || ನಿಮ್ಮ ರಾಯ
ಸಿರಿಯ ಕಂಟಕನ ಕಳುಹೇನ   ೮೫

ಎಲ್ಲ ಶಕುನಗಳ ಬಲ್ಲವನಾದರೆ
ಇಲ್ಲದೆ ನಿನ್ನ ಹುಸಿ ದಿಟ || ಹಸುಬಾನ
ಸೊಲ್ಲ ಹೇಳೆಂದು ಬೆಸಗೊಂಡ         ೮೬

ನಾಡೊಳಗಾಡುವ ಮೂಢ ಜಂಗಮನಲ್ಲ
ನೋಡುವೆ ಶಾಸ್ತ್ರ ಶಕುನವಾ || ನೆಂದಡೆ
ಆಡಿತ್ತು ಹಸುಬ ಮರದಲ್ಲಿ            ೮೭

ಹಸುಬ ನಾಡಿದ ಮಾತು ಹೊಸ ಬಗೆ ನಿಮಗೆಂದಾ
ಹುಸಿಯಲ್ಲ ಶಕುನ ಶಿವನಾಣೆ || ಕಳ್ಳರ ಕೈಯ
ದಶ ಕಾಣೋ ನಿಮ್ಮಾರಮನೆ            ೮೮

ಹಿಂದೆ ಕೆಲವು ದಿನ ಬಂಧನದೊಳಗಿದ್ದೆ
ನೊಂದು ಚಿಂತೆಯಲಿ ಮಲಗಿದ್ದೆ || ಸ್ವಪ್ನದಲ್ಲಿ ಶಿವ
ಬಂದು ಬಂಧನವ ಬಿಡಿಸಿದಾ೮೯

ಎನ್ನ ಮನಸಿನ ಫಲ ಚೆನ್ನಾಗಿ ಹೇಳಿದೆ
ಇನ್ನು ನಿಮ್ಮಲ್ಲಿ ಹುಸಿಯಿಲ್ಲಾ || ಎಂದೆನುತ
ಮನ್ನಿಸಿ ಮುಂದಕ್ಕೆ ಕಳುಹಿದಾ          ೯೦

ಊರು ಬಾಗಿಲ ಕಾಯ್ವ ದೀರನ ಶಕುನಾವ
ನಾರಂದ ಹೇಳಿ ನಡದಾನು || ಮತ್ತೊಬ್ಬ
ಕೇರಿಯ ತಳವಾರ ತಡದಾನು            ೯೧

ಅವಗೆ ಹೇಳಿದ ಮಾತು ಮನದಿಟವಾಯಿತು
ಎನಗೊಂದು ಮಾತು ನುಡಿದಾರೆ || ಒಡೆಯರೆ
ನಿಮಗೆ ತೇಜಗಳ ಕೊಡುವೆನು           ೯೨

ನಿನ್ನ ಬೆನ್ನಿಲಿ ಒಬ್ಬ ಕನ್ನೆ ಬಂದಳು ಮೆಚ್ಚಿ
ಮನ್ನಣೆಯಾಗಿ ಸಿರಿಯಾಗಿ || ಮಗ್ಗುಲಿಗೊಬ್ಬ
ಚಿಣ್ಣನಿಲ್ಲದೆ ಚಿಂತೆ ಬಡುತಾಳೆ        ೯೩

ಅರಮನೆ ಬಾಗಿಲಾ ಹಿರಿಯ ಪ್ರಧಾನಿಗಳು
ಬರೆವ ಕರುಣೀಕ ಪರಿವಾರ || ಒಡೆಯರ
ಬರವ ಕಂಡವರು ಕರೆದಾರು೯೪

ಕರೆದಲ್ಲಿಗೆ ಹೋಗಿ ಹರಸೀದ ಮಂತ್ರಿಗಳ
ಹರನು ನಾರಂದ ಮುನಿದಾರೆ || ಮುಪ್ಪುರದ
ಪರಿಯಾಗಲೆಂದು ನಿಮ್ಮರಮನೆ        ೯೫

ಬೆಡಗಿನಿಂದಾ ಬಂದವನ ನುಡಿಯೊಳಗರಿತಾನು
ಒಡನೆ ಮಂತ್ರೀಶ ಬೆಸಗೊಂಡ || ಈ ಮಾತಿನ
ದೃಢವಾವುದೆಂದು ನುಡಿದಾನು         ೯೬

ಒಡನಿದ್ದ ತಳವಾರ ನುಡಿದ ಮಂತ್ರಿಯ ಕೂಡೆ
ಒಡೆಯರ ಮಾತು ನಿಜವಯ್ಯಾ|| ಚಾವಡಿಯಲ್ಲಿ
ತಡೆಯದೆ ಗವುಳಿ ನುಡಿಯೀತು          ೯೭

ಎಲ್ಲ ಶಕುನಂಗಳ ಬಲ್ಲವನಾದರೆ
ಇಲ್ಲಿದೆ ನಿಮ್ಮ ಹುಸಿದಿಟವು || ಗವುಳಿಯ
ಸೊಲ್ಲು ಹೇಳೆಂದು ನುಡಿದಾರು       ೯೮

ಗವುಳಿ ಆಡಿದ ಮಾತು ನಿಮ್ಮ ಪವುಳಿಗೆ ಕನಿಷ್ಠ
ಜವಳಿ ಜಾಳಿಗೆ ಕಳ್ಳರಿಗೆ || ಅರಮನೆಯ
ಪವಳ ಮುತ್ತುಗಳು ಸಹವಾಗಿ          ೯೯

ಇಂದಿನ ಶಕುನವು ಮುಂದಣ ಫಲವೈಸೆ
ಇಂದಿರುಳು ನನಗೊಂದು ಕನಸುಂಟು || ಅದಹೇಳಿದರೆ
ಇಂದಿನ ಶಕುನ ದಿಟವೆಂದಾ   ೧೦೦

ಇಂದು ಇರುಳಿನಲ್ಲಿ ಬಂದ ರಾಯನ ರಾಣಿ
ಮುಂದು ನಿಂದಿರ್ದಾ ನಸುನಕ್ಕು || ಮರೆಯಾದವ
ಳಂದಾವ ನೋಡಿ ಮನನೊಂದು        ೧೦೧

ಒಡೆಯಾರೆ ನಾ ನಿಮ್ಮ ಒಡೆಯನಿದ್ದಲ್ಲಿಗೆ
ಒಡೆಗೊಂಡು ಹೋದೆ ಬಿಜಮಾಡಿ || ಎಂದೆನುತ
ಮುಡಿಯನೆರಗುತ್ತಾ ಶರಣೆಂದಾ       ೧೦೨

ಅಂತರಂತರದಲ್ಲಿ ಅಂತರಿಸಿ ನೋಡುತ
ಮಂತ್ರಿಯ ಕೂಡೆ ನಡೆದಾನು || ನಾರಂದ
ತಂತ್ರದ (ಕಳ್ಳ) ಜಗಕೆಲ್ಲ    ೧೦೩

ಅಲ್ಲಿಗಲ್ಲಿಗೆ ( ಬಾಗಿಲ) ಗೊಲ್ಲರ ಕಾವಲು
ಕಳ್ಳಕೋಟಿಗಳು ಕದವೀನ || ಸಂದೀಲಿ
ಅಲ್ಲೊಂದು ಕನ್ನಕ್ಕೆ ಕುರುವಿಟ್ಟ      ೧೦೪

ಎತ್ತ ನೋಡಲು ಅರಮನೆ ಮತ್ತು ಮಾಣಿಕರತ್ನ
ಕೆತ್ತಿಸಿದ ಕಂಭ ತೊಲೆ ಪಚ್ಚೆ || ನವರತ್ನ
ಕತ್ತಲೆಯಿಲ್ಲ ಅರಮನೆಯಲ್ಲಿ                     ೧೦೫

ವಾಲಗದ ಚಾವಿಯೊಳಗೆ ಚಿನ್ನದಗೆಲಸ
ಮೇಲುಪ್ಪರಿಗೆ ಧ್ರುವಾಲೋಕ || ಹೊಳೆವಂತೆ
ಢಾಳಿಸುವ ಕಳಸ ರವಿಯಂತೆ೧೦೬

ವಿಸ್ತಾರದೋಲಗ ಸುತ್ತಾರು ಗಾವುದ
ನೆತ್ತಿಯ ಮುಕುಟಿದವರೊಂದು || ಶತಕೋಟಿ
ಸುತ್ತಲೋಲಗದವರು ಕಡೆಯಿಲ್ಲ     ೧೦೭

ಮುತ್ತಿನ ಚಾವಡಿ ರತ್ನದವೋಲಗ
ಅರ್ತಿಯಲಿ ರಾಯ ಕುಳಿತಿರ್ದ || ಠಾವಿಗೆ
ಸತ್ಯವಾದ ಮಂತ್ರಿ ಕರತಂದ೧೦೮

ಎಂದು ನಮ್ಮರಮನೆಗೆ ಜಂಗಮವು ಬರಲಿಲ್ಲ
ಇಂದ್ಯಾಕೆ ಇವನ ಕರ ತಂದೆ || ಎಂದರೆ
(ಮುಂದೆ) ಧರೆಗೆ ತಾವಯ್ಯಯಿವನೆಂದ            ೧೦೯

ಉಂಡ ಊಟವ ಬಲ್ಲ ಕಂಡ ಕನಸಾ ಬಲ್ಲ
ಕಂಡಿಹ ನರರ ಹೃದಯವ || ಲೋಕದ
ಪಂಡಿತರೊಡೆಯ ಇವರೆಂದಾ            ೧೧೦

ದೇಶ ದೇಶದ ರಾಯರ ಲೇಸು ಹೊಲ್ಲೆಹ ಬಲ್ಲ
ಭಾಷೆಯುಳ್ಳವರ ಗೆಲಿಸೂವೆ || ಎಂದೆಂಬ
ಶಾಸ್ತ್ರ ಶಕುನಗಳು ನಮಗುಂಟು        ೧೧೧

ವೇದ ಶಾಸ್ತ್ರಗಳನ್ನು ಓದುವರೆಲ್ಲಾರು
ಆಧಾರ ಯೀತೆಯೆನವಾಗಿ || ಅರಮನೆಯಲ್ಲಿ
ಆದಾವೆ ಗವುಳಿಯರ ಮಾತು            ೧೧೨

ಅರಮನೆಲಿ ಗವುಳಿ ಅರೆ ಮಾತನಾಡಿದೆ
ಅರಸಿಯರು ತೊಟ್ಡ ತೊಡಿಗೆ || ಬಂಗಾರವು ಕ
ಳ್ಳರ ಕೈವಶ ಅಹುದೆಂದಾ   ೧೧೩

ನನ್ನರಮನೆಯೊಳು ಕಳುವವರು ನರಲೋಕದೊಳಗಿಲ್ಲ
ಈ ಒಡೆಯನ ಶಕುನ ಸಟಿಯೆಂದು || ನನ್ನರಮನೆಲಿ
ಇರುವ ಕಾರಣದ ಪರಿಯೇನೂ          ೧೧೪

ನಿನ್ನ ಪಟ್ಟದ ರಾಣಿ ನಿನ್ನೊಳು ಮಥನಿಸಿ
ಅನ್ನವನೊಲ್ಲ ತೊಡಿಗೇಯ || ತೊಡುವಲ್ಲಿ
ತನ್ನರಮನೆಯ ಕದವಿಕ್ಕಿ     ೧೧೫

ಅರಮನೆಯೊಳಗಾದ ಪರಿಯನೆಲ್ಲಾವ ಬಲ್ಲಿರಿ
ನರರ ಚಿತ್ತದಲಿಯಿರುವೀರಿ || ಜಂಗಮ
ತಿರುಗೂತ ಅಲ್ಲಿ ಬಳಲಿದಿರಿ            ೧೧೬

ರಾಜ್ಯ ರಾಜ್ಯವ ಹೊಕ್ಕೆ ರಾಜ ರಾಜರ ಕಂಡೆ
ಪೂಜೆ ಮಾಡಿ ನಮ್ಮ ತಡದಾರು || ತಮ್ಮಗಳ
ತೇಜ ಭಾಗ್ಯಗಳ ನಮಗಿತ್ತು  ೧೧೭

ಧಾರಣೆಯೊಳು ನಿಮ್ಮ ಆರಾರು ತಡೆದಾರು
ವೀರಬಲ್ಲಾಳ ಹರಿಶ್ಚಂದ್ರ || ಮೊದಲಾದ
ಚೇರಮ ನಂಬಿ ತಡೆದಾರು    ೧೧೮

ಇಂತಪ್ಪ ಶರಣರ ಸಂತೋಷದಿಂ ಇರುತಿಹವು ನಿನ್ನ
ಪಂಥವ ಮಾಡಿ ನುಡಿದಾರು || ನಮಗೊಂದು
ಕಂಥೆಯ ಬೇಡಿಲ್ಲಿಳಿದೇವು   ೧೧೯

ಕಂಥೆಯ ಮಾತೇನು ನಮ್ಮ ಚಿಂತೆಯ ಬಿಡಿಸೈಯ್ಯ
ಎಂತಹುದು ನಮ್ಮ ಅರಮನೆ || ಎಂದರೆ
ಸಂತೋಷ ಕಟ್ಟ ಕಡೆಯಲ್ಲಿ            ೧೨೦

ಅರಸು ಗದ್ದಿಗೆಯಿಂದ ಹರುಷದಲಿ ತಾನೆದ್ದು
ಶಿರವ ಬಾಗಿದನು ಗುರುವೀಗೆ || ಮುನಿದಿರ್ದ
ಅರಸಿಯರ ಮನೆಗೆ ಕರೆ ತನ್ನಿ            ೧೨೧

ತನ್ನ ರಾಣಿಯರ ಮನೆಗೆ ಚಿನ್ನದ ಸೆಳೆಮಂಚ
ಪನ್ನಂಗಶಯನ ಕುಳಿತಿರ್ದ || ಠಾವಿಗೆ
ಅಲ್ಲೊಂದು ಕನ್ನಕ್ಕೆ ಕುರುವಿಟ್ಟ      ೧೨೨

ಚಲುವ ಮಂಚದ ಮೇಲೆ ಒಲವಿಂದ ಕುಳಿತಾರು
ಮಲಗಿರುವವಳು ಇವಳಾರು || ರಾಯನ
ಲಲನೆಯ ನೋಡಿ ನುಡಿಸೀದ            ೧೨೩

(ಎಲೆ) ಮಗಳೆ ರಾಯನ ಕೂಡೆ ಜಗಳ ಸಲ್ಲುದು ನಿನಗೆ
ತೊಲಗುವದು ನಿನ್ನ ಸಿರಿ ತಾನು || ಎದ್ದರೆ
ಮಲಗಿರ್ದ ಬಾಲೆ ಮೈಮುರಿದೆದ್ದು   ೧೨೪

ಎದ್ದು ಬಂದಳು ರಾಣಿ ಬಿದ್ದಳು ಪಾದದ ಮೇಲೆ
ಮುದ್ದು ಬಿನ್ನಗಳ ನುಡಿದಾಳು || ನಮ್ಮರಾಯಗ
ಬುದ್ಧಿಯ ಹೇಳಿ ಗುರುರಾಯ          ೧೨೫

ರಾಯ ಹೇಳಿದ ತನ್ನ ರಾಣಿಯ ಪರಿಗಳನು
ಆ (ಯಾ)ವ ವಿಚಾರಕ್ಕೆ ಮುನಿದಾಳು || ಆಕೆಗೆ
ದಯವ ಹೇಳಿ ಗುರುರಾಯ೧೨೬

ಮಡದೀಯ ಪುರುಷರ ಎಡಬಲದಲ್ಲಿ ಕುಳ್ಳಿರಿಸಿ
ನಡುವೆ ನಾರಂದ ಕುಳಿತಾನು || ಗಂಡ ಹೆಂಡಿರ
ಒಡಂಬಡಿಸಿ ತಾನು ನಗಿಸೀದ            ೧೨೭

ನಾರಂದನೆಂಬವ ಹೋರಾಟಗತಿ ಪ್ರಿಯ
ಆರಾರನೆಲ್ಲ ನಗಿಸುವ || ಅಳಿಸುವ
ಮಾರಿಬಂದಂತೆ ಸುಳಿದರೆ     ೧೨೮

ಪಂಥಗಾರರನೆಲ್ಲ ಸಂತಾಸ ಮಾಡಿದ
ಮಂತ್ರಿಗಳೊಡೆಯ ಗುರುರಾಯ || ಗಂಡ ಹೆಂಡಿರ
ಸಂತಸ ಮಾಡಿ ತೆರಳೀದ      ೧೨೯

ಒಡೆಯಾರೆ ನಾನಿಮ್ಮ ಬಿಡಲಾರೆ ಕಾಣಯ್ಯ
ತಡವೇನು ನಮ್ಮ ಅರಮನೆಲಿ || ತೇಜವ
ನೊಡಿಸುವೆ ನಾನಿಂದು ಮಿಗಿಲಾಗಿ       ೧೩೦

ಅರಮನೆಯಲಿ ನಾವು ಇರೆವು ದೇಶಾಂತ್ರಿಯು
ನಮಗೊಬ್ಬರುಂಟು ಹಿರಿಯರು || ಅವರನು
ಕರಕೊಂಡು ಇಲ್ಲಿಗೆ ಬರುವೇನು       ೧೩೧

ನಿಮಗಿಂತ ಹಿರಿಯರು ಅವರೆಲ್ಲಿ ಇರುವರು
ಧರೆಗಿಂದ ಮೇಲೆ ಪುರುವುಂಟು || ಕೈಲಾಸದಲ್ಲಿ
(ಅರಮನೆಯ) ಪಟ್ಟ ಅವರಿಗೆ          ೧೩೨

ಅಲ್ಲಿ ಬೆಳೆವಂತಾದ್ದು ಎಲ್ಲವು ರಾಜನ್ನ
ಪಲ್ಲೈಸಿ ಬೆಳೆವ ಬೆಳೆಯಲ್ಲ || ಷಡುರುಚಿ
ಎಲ್ಲರುಂಬೂಟ ಅಮೃತಾನ್ನ          ೧೩೩

ಅತ್ತಿತ್ತ ನೋಡುತ್ತ ಮಾತನಾಡುತ್ತ
ಆಯಪಾಯದಲ್ಲಿ ತಿರುಗೀದ || ನಾರಂದ
ದಾಯದ ಕಳ್ಳ ಜಗಕ್ಕೆಲ್ಲ   ೧೩೪

ಒಂದು ಬಾಗಿಲ ತಡದ ಎರಡು ಬಾಗಿಲ ತಡದ
ಬೆಡಗಿನಿಂದ ನಾರಂದ ಬರುವಾಗ || ಮಂತ್ರೀಶ
ಮುಡಿಯನೆರದತ್ತ ಶರಣೆಂದ            ೧೩೫

ಬಂದು ಪಾದಕ್ಕೆ ಬಿದ್ದು ವಂದನೆಯ ಮಾಡಿದ
ಮುಂದಕ್ಕೆ ನೀವು ಬಿಜ ಮಾಡಿ || ಹೋಗುವ
ಚಂದವೇನೆಂದು ಬೆಸಗೊಂಬೆ೧೩೬

ನಿನ್ನಂತಹ ಜಂಗಮನ ನಮ್ಮರ
ಮನೆಯಲ್ಲಿ ತಡೆವೆನು || ಎಂದೆನುತ
ದಾನ ಧರ್ಮವ ಕೊಟ್ಟು ಕಳುಹಿದ     ೧೩೭

ನಮ್ಮ ಒಡೆಯನಿಗಿಂದ ವೆಗ್ಗಳಸುವಾಗಿ ಕೊಡುವೆನು
ನಿಮ್ಮ ಒಡೆಯರ ಇಲ್ಲಿಗೆ ಕರೆ ತನ್ನಿ || ಎಂದೆನುತ
ಮುಡಿಗೆರಗಿ ಶರಣೆಂದ        ೧೩೮

ದೇಶ ದೇಶವ ತಿರುಗಿ ಬೇಸತ್ತು ನಾರಂದ
ಆ ಶಶಿಧರನ ಕರ ತರುವೆ || ವೆಂದು ಜಗ
ದೀಶ್ವರ ಓಲಗಕ್ಕೆ ನಡದಾನು           ೧೩೯

ಒಂದೊಂದು ಬೇಹಿನ ಚಂದವೆಲ್ಲ ನೋಡಿ
ಬಂದ ಕೈಲಾಸ ಪುರಕಾಗಿ || ನಾರಂದ
ನಿಂದಲ್ಲಿಗೆ          ೧೪೦

ನಾರಂದ (ನ) ಮನೆಯಲ್ಲಿ ವಾರದ ಜಂಗಮ
ವಿರಾಜಿಸಿ ಮಠದಲ್ಲಿ ಅಯಿನೂರು || ಅವರುಂಬ
ಹೋಳಿಗೆ ಕಜ್ಜಾಯ ಷಡುರಸ          ೧೪೧

ಅಲ್ಲಿಯು ಬಿಟ್ಟಗಾರಿಗೆ ಬಲ್ಲಿದ ನಾನೊಬ್ಬ
ಎಲ್ಲಿ ಹೊಕ್ಕಲ್ಲಿ ತರುವೆನು || ಕಮಲವ
ಎಲ್ಲರ ಪೂಜೆಗೆ ಮಿಗಿಲಾಗಿ  ೧೪೨

ಹೊತ್ತು ಹುಟ್ಟಿದ ಮುನ್ನ ಪ್ರತಿ ಪುಷ್ಪವ ತರುವೆ
ಬತ್ತಿ ಸಾವಿರವ ಬೆಳಗುವೆ || ಗುರುವಿಗೆ
ಅರ್ತಿ ನನ್ನಿಂದ ಗುರುವಿಗೆ    ೧೪೩

ಅಲ್ಲಿಯ ಪೂಜಿಗಿಂಥ ಇಲ್ಲಿವೆಗ್ಗಳವಾಗಿ
ಎಲ್ಲವನು ತರಿಸಿ ಕೊಡುವೇನು || ನಿಮೊಡೆಯನ
ಇಲ್ಲಿಗೆ ಕರೆ ತನ್ನಿ  ೧೪೪

ಏನ ಕೊಟ್ಟಿಯೆಂದು ನಾರಂದ ಕೇಳಿದರೆ
(ತನ್ನ) ರಾಣಿಯರೇಳು ಹೊರತಾಗಿ || ಅರಮನೆಯಲ್ಲಿ
ಎಲ್ಲ ಬಂಗಾರ ನಿಮಗಯ್ಯ೧೪೫

ನುಡಿದು ತಪ್ಪೆನೆಂದು ಆಡಿದನು ಪಾದವ
ಮಡದಿಯರೆಲ್ಲ ಹೊರತಾಗಿ || ಅರಮನೇಲಿ
ಒಡವೆ ಬಂಗಾರ ನಿಮಗಯ್ಯ೧೪೬

ಕೊಟ್ಟದ್ದು ಅಹುದೆಂದು ತೆಗೆದಿಟ್ಟಾರು ಭಸಿತಾದ
ಕಟ್ಟಿದರು ಶರಗ ಶಕುನಕ್ಕೆ || ನಾರಂದ
ನೆಟ್ಟಾ ಶೂಲವ ಜಡಿದೆದ್ದಾ            ೧೪೭

ರಾಣಿಯರ ಕೊಂಡಾಡಿ ರಾಯನ ಹರಸಿದರು
ಆಯಪಾಯದಲ್ಲಿ ತಿರುಗಿದರು || ನಾರಂದ
ನೀಡಾಯದ ಕಳ್ಳ ಜಗಕೆಲ್ಲಾ           ೧೪೮

ಪ್ರಥಮ ಸಂಧಿ ಸಮಾಪ್ತ
ಮಂಗಳ ಮಹಾ ಶ್ರೀ ಶ್ರೀ ಶ್ರೀ