. ಕಥಾಸಾರ

‘ವ್ರತ’ ಪ್ರಾಚೀನ ಬದುಕಿನ ಅನಿವಾರ್ಯ ಆಚರಣೆ. ಗುಂಡಬ್ರಹ್ಮಯ್ಯರು ಮರೆಹೊಕ್ಕವರ ಕೊಡೆವೆಂಬ ವೀರವ್ರತವನ್ನು ತೊಟ್ಟ ಧೀರ ಶಿವಭಕ್ತರು. ಇವರು ತಮ್ಮ ಹಿಂದಿನ ಜನ್ಮದಲ್ಲಿ ಜಗದೇವ ಹಾಗೂ ಮಲ್ಲೆಬೊಮ್ಮರೆಂಬ ಹೆಸರುಗಳಿಂದ ಹುಟ್ಟಿ, ಕಲ್ಯಾಣ ಕ್ರಾಂತಿಯಲ್ಲಿ ಕಳಚೂರಿ ಬಿಜ್ಜಳನನ್ನು ಕೊಂದು ಮರಣದಂಡನೆಗೆ ಇಡಾದರೆಂಬ ಪ್ರತೀತಿಯಿದೆ. ಈ ಜಗದೇವ ಮಲ್ಲೆಬೊಮ್ಮರೇ ತೆಲುಗು ದೇಶದ ‘ಗವಚರ’ವೆಂಬ ಗ್ರಾಮದಲ್ಲಿ ಪುನರ್ಜನ್ಮತಾಳಿ ಆಗಲೂ ಕೂಡ ಶೈವಧರ್ಮ ಸಮಯಾಚಾರರಾಗಿ ಜೀವಿಸಿದ್ದರು. ಈ ಶೈವ ನಿಷ್ಠೆಯನ್ನು ಪ್ರಕಟಿಸುವ ಸಲುವಾಗಿ ಶಿವನಲ್ಲಿ ಹಾಗೂ ಶೈವಧರ್ಮದಲ್ಲಿ ನಿಷ್ಠೆಯುಳ್ಳ ಯಾರಿಗೆ ಆಗಲಿ ಅಗತ್ಯಬಿದ್ದರೆ ರಕ್ಷಣೆ ಕೊಡುವುದಾಗಿ ಘೋಷಿಸಿಕೊಂಡರು. ಇದಕ್ಕಾಗಿ ಅವರು “ಮರೆಹೊಕ್ಕವರ ಕಾಯ್ವೆವೆಂಬ” ಸಂದೇಶದ ಕಹಳೆಯನ್ನೂದಿದರು. 

ಇವರ ಅಚಲ ವ್ರತವನ್ನು ಪರೀಕ್ಷಿಸಲು ಶಿವನು ನಾರದನೊಡಗೂಡಿ ಕಳ್ಳನ ವೇಷಹಾಕಿಕೊಂಡು ಓರಂಗಲ್ಲಿನ ಕಾಕತೀಯ ಅರಸ ಗಣಪತಿರಾಯನ ಅರಮನೆಗೆ ಕನ್ನಹಾಕಿ, ಗುಂಡಬ್ರಹ್ಮಯ್ಯರಲ್ಲಿಗೆ ಹೋಗಿ ತಲೆಮರೆಸಿಕೊಂಡನು. ಬಂದ ಕಳ್ಳರನ್ನು ಜಂಗಮರೆಂದು ಭಾವಿಸಿದ ಗುಂಡಬ್ರಹ್ಮರು ಅವರಿಗೆ ರಕ್ಷಣೆ ನೀಡಿವುದಾಗಿ ಭಾಷೆಯನಿತ್ತರು. ಇತ್ತ ರಾಜನಿಗೆ ಕಳ್ಳತನದ ವಿಷಯ ತಿಳಿದು ಗುಂಡಬ್ರಹ್ಮಯ್ಯರಲ್ಲಿ ಆಶ್ರಯ ಹೊಂದಿದ ಕಳ್ಳರನ್ನು ಹಿಡಿದು ತರಲು ಆದೇಶಿದನು. ಕೊಟ್ಟ ಮಾತಿನಂತೆ, ಆಶ್ರಿತರಾದವರನ್ನು ರಕ್ಷಿಸುವ ವ್ರತದಂತೆ ತಾವು ಪ್ರಾಣತ್ಯಾಗ ಮಾಡಲು ಸಿದ್ಧರಾದರು ರಾಜಾಜ್ಞೆಯ ಪ್ರಕಾರ ಶೂಲವನ್ನೇರಿ ಕೈಲಾಸ ಪದವಿಗೇರುವುದು ಇಲ್ಲಿಯ ಕಥೆ.

ಇಂತಹ ಘಟನೆಗಳು ನಂತರದ ದಿನಮಾನಗಳಲ್ಲಿ ಜನಾದರಣೀಯನ್ನು ಪಡೆದು ಚಾರಿತ್ರಿಕ, ಸಾಹಸ, ಪ್ರಸಂಗಗಳೋಪಾದಿಯಲ್ಲಿ ಪ್ರಸಾರಕ್ಕೆ ಬಂದವು. ಈ ಪ್ರಸಾರ ಸಾಹಿತ್ಯ ಹಾಗೂ ಶಿಲ್ಪಮಾಧ್ಯಮಗಳಲ್ಲಿ ಅಭಿವ್ಯಕ್ತಗೊಂಡಿದೆ. ಪ್ರಾಯಶಃ ನಂಬಿದ ತತ್ವ ಸಿದ್ಧಾಂತಗಳಿಗೆ, ಆರಿಸಿಕೊಂಡ ಕೆಲಸಗಳಿಗೆ ಅನುಗುಣವಾಗಿ ನಿಷ್ಠೆಯಿಂದ ನಡೆದುಕೊಳ್ಳುವುದರ ಮೂಲಕ ಮರ್ತ್ಯದ ಬದುಕಿನಲ್ಲಿಯೇ ಕರ್ತಾರನ ಕಮ್ಮಟವನ್ನು ಅರಿಯುವುದು ಇಲ್ಲಿಯ ಕೇಂದ್ರಭಾವವಾಗಿದೆ.

. ಕವಿಗಳ ಇತಿವೃತ್ತ

“ದೇಶೀಯ” ಇತಿಹಾಸವನ್ನು ನಿರೂಪಿಸುವ ಇಂಥ ಕಥೆಯನ್ನು ಕುರಿತು ಹಲವು ಪ್ರಕಾರದ ಸಾಹಿತ್ಯ ಸೃಷ್ಟಿಯಾಗಿದೆ. ಪ್ರಸ್ತುತ ಸಂಪುಟದಲ್ಲಿ ಗುಂಡಬ್ರಹ್ಮಯ್ಯರನ್ನು ಕುರಿತಾಗಿ ತ್ರಿಪದಿ, ಚೌಪದಿ, ಸಾಂಗತ್ಯ, ನಾಂದ್ಯ, ಗದ್ಯ ಹಾಗೂ ಹಾಡು ಪ್ರಕಾರದ ಆರು ಕೃತಿಗಳನ್ನು ಸಮಗ್ರವಾಗಿ ಸಂಪಾದಿಸಿಕೊಡಲಾಗಿದೆ. ಇವುಗಳಲ್ಲಿ ಕವಿಚೆನ್ನ ತ್ರಿಪದಿಯನ್ನು, ಓದಿಸುವ ಮಡಿವಾಳಯ್ಯ ಚೌಪದಿಯನ್ನು, ಕಾಶೀಪತಿ ಸಾಂಗತ್ಯವನ್ನು ಆರಾಧ್ಯಶಂಕರ ನಾಂದ್ಯವನ್ನು ಬರೆದಿರುವುದು ತಿಳಿದುಬರುತ್ತದೆ. ಕಾವೋಕ್ತ ಹಾಗೂ ಶಾಸನೋಕ್ತ ಉಲ್ಲೇಖಗಳಿಂದ ಅವರ ಇತಿವೃತ್ತವನ್ನು ಹೀಗೆ ನಿರೂಪಿಸಬಹುದು.

. ಕವಿಚೆನ್ನ

ಕ್ರಿ. ಶ. ೧೭೦೦ರಲ್ಲಿ ಜೀವಿಸಿದ್ದ ಈತ ಗುಂಡಬ್ರಹ್ಮಯ್ಯಗಳ ತ್ರಿಪದಿಯನ್ನು ಬರೆದಿದ್ದಾನೆಂಬುದಕ್ಕೆ ಭಿನ್ನಾಭಿಪ್ರಾಯಗಳಿವೆ. ನಾನು ಸಂಪಾದನೆಗೆತ್ತಿಕೊಂಡ ಮೈಸೂರು ವಿಶ್ವವಿದ್ಯಾಲಯದ ಕಾಗದ ಪ್ರತಿ (ನಂ. ಕೆ. ಬಿ. ೩೫೧/೧)ಯಲ್ಲಾಗಲೀ ದಿ. ಡಾ. ವಿ. ಶಿವಾನಂದ ಅವರು ಸಂಪಾದಿಸಿಕೊಟ್ಟ ಪ್ರತಿಗಳಲ್ಲಾಗಲಿ ಕವಿಯ ಹೆಸರಿನ ಉಲ್ಲೇಖಗಳಿಲ್ಲ. ಆದರೆ ಮೈಸೂರು ವಿ. ವಿ. (ಕೆ.ಬಿ. ೩೫೧/೧)ಯ ಪ್ರತಿಯ ೧ನೇ ಸಂಧಿ ೪ನೇ ಪದ್ಯವಾದ

ಸಿರಿಯುಳ್ಳ ಶಿವರಾಯ ಧರೆಗೆ ಕಳವಿಗೆ ಬಂದು
ಶರಣರೊಂದಾಗಿ ಮೆರೆದರು
|| ಶ್ರೀಗಿರಿಯ
ವರೆದರೀ ಪುಣ್ಯಕಥೆಯನೂ

ಇಲ್ಲಿಯ “ಶ್ರೀಗಿರಿಯ ವರೆದರೀ ಪುಣ್ಯಕಥೆಯನೂ” ಎಂಬುದನ್ನು ಗಮನಿಸಿ. ನಟರಾಜ್ಅವರು ಕ್ರಿ. ಶ. ೧೫೨೫ರಲ್ಲಿ ಇದ್ದ ಸಾನಂದಗಳ ಸಾಂಗತ್ಯ, ಹರಿಶ್ಚಂದ್ರ ಸಾಂಗತ್ಯ ಬರೆದ ಓದುವ ಗಿರಿಯನು ಗುಂಡಬ್ರಹ್ಮಯ್ಯಗಳ ತ್ರಿಪದಿಯನ್ನು ಬರೆದಿರಬೇಕೆಂದು ಊಹಿಸುತ್ತಾರೆ. ದಿ. ವಿ. ಶಿವಾನಂದ ಅವರಿಗೆ ದೊರೆತ ಗುಂಡೇನಹಳ್ಳಿಯ ಪ್ರತಿಯಲ್ಲಿ

ಭಿನ್ನ ಮೇಲಣ ಪೀಠ ರತ್ನಹೇಮದ ಪಚ್ಚೆ
ಹೊನ್ನ ಗಂಗಳ ಹುರಿಗೆಜ್ಜೆ
ಭಿನ್ನವಿಲ್ಲದೆ ಮುತ್ತಿನ ದಂಡೆಯ ಕೊರಳೊಳು
ಚೆನ್ನನವಗೆ ಶರಣೆಂಬೆ

ಎಂಬ ಪದ್ಯದಲ್ಲಿಯ ‘ಚೆನ್ನ’ ಎಂಬುದು ಗುಂಡಬ್ರಹ್ಮಯ್ಯಗಳ ತ್ರಿಪದಿಯ ಕರ್ತೃ ಎನ್ನುತ್ತಾರೆ. ಇದಕ್ಕೆ ಪೂರಕವಾಗಿ ಲಕ್ಕುಂಡಿಯ ಬದ್ನಿಮಠದಲ್ಲಿ ದೊರೆತ ಗುಂಡಬ್ರಹ್ಮಯ್ಯಗಳ ತ್ರಿಪದಿ ಕಟ್ಟುಗಳಲ್ಲಿ “ಶಿಬಿರಾಯನ ಚರಿತ್ರೆ” ಹೆಸರಿನ ಕೃತಿಯೊಂದು ದೊರೆಯಿತು. ಅದರಲ್ಲಿ ೩ನೇ ಸಂಧಿ ೮೫ನೇ ಪದ್ಯದಲ್ಲಿ ಕವಿಚೆನ್ನ ಎಂದು ಉಲ್ಲೇಖಗೊಂಡಿರುವುದನ್ನು ತಿಳಿಸುತ್ತಾರೆ. ಈತನೇ ಗುಂಡಬ್ರಹ್ಮಯ್ಯಗಳ ಚರಿತ್ರೆ ಹಾಗೂ ಶಿಬಿರಾಯನ ಚರಿತ್ರೆಗಳನ್ನು ಬರೆದಿದ್ದಾನೆಂಬುದಕ್ಕೆ ಕೃತಿಗಳೆರಡಲ್ಲಿಯ ಸಾಮ್ಯತೆಯನ್ನು ಹೀಗೆ ವಿವರಿಸುತ್ತಾರೆ. (ಗುಂಡಬ್ರಹ್ಮಯ್ಯಗಳ ಚರಿತ್ರೆ, ಪು. ೩೦-೩೧)

ಗುಂಡಬ್ರಹ್ಮಯ್ಯಗಳ ಚರಿತೆ ಶಿಬಿರಾಯನ ಚರಿತೆ
೧. ಛಂದಸ್ಸು-ತ್ರಿಪದಿ, ಸಂಧಿ ೩, ಪದ್ಯ ೫೨೫ ೧. ಛಂದಸ್ಸ-ತ್ರಿಪದಿ, ಸಂಧಿ ೩, ಪದ್ಯ ೫೮೪
೨. ವಸ್ತು-ಮೊರೆ ಹೊಕ್ಕವರನ್ನು ಕಾಪಾಡುವುದು ೨. ವಸ್ತು-ಮೊರೆ ಹೊಕ್ಕವರನ್ನು ಕಾಪಾಡುವುದು
೩. ಮುಖ್ಯಪಾತ್ರಗಳು – ಹರ – ನಾರದ ಗುಂಡಬ್ರಹ್ಮಯ್ಯ ೩. ಮುಖ್ಯಪಾತ್ರಗಳು – ಹರ – ನಾರದ, ಶಿಬಿರಾಯ
೪. ಸಾಮ್ಯಪದ್ಯಗಳು – ಸಂಧಿ – ೧, ಪದ್ಯ ೧-೨೬-೩೭ ೪. ಸಾಮ್ಯಪದ್ಯಗಳು-ಸಂಧಿ-೧, ಪದ್ಯ – ೧೩-೧೪-೨೬

ಹೀಗೆ ಕಥೆಯ ಸಂದರ್ಭ, ಛಂದಸ್ಸು, ವಸ್ತು, ಪಾತ್ರ ಇತ್ಯಾದಿ ಸಂಗತಿಗಳನ್ನು ಎದುರಿಗಿಟ್ಟುಕೊಂಡು ಈ ಎರಡು ಚರಿತ್ರೆಗಳು ಏಕ ಕವಿಕೃತವೆಂಬುದನ್ನು ನಿರ್ಧರಿಸುತ್ತಾರೆ. ಮೇಲಾಗಿ “ಹತ್ತರಕಿಯ ಚಿಕ್ಕವೀರಣ್ಣನ ಬಲಗೊಂಬೆ” ಎಂಬ ಶಿಭಿರಾಯ ಚರಿತೆಯ (ಸಂಧಿ೧ ಪದ್ಯ ೮) ಹೇಳಿಕೆಯಿಂದ ಕವಿ ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಥರ್ಗಾ ಇಲ್ಲವೆ ಹತ್ತರಕಿಯವನಾಗಿರಬೇಕೆಂಬುದನ್ನು ಪ್ರತಿಪಾದಿಸಿದ್ದಾರೆ.

. ಓದಿಸುವ ಮಡಿವಾಳಯ್ಯ

ಗುಂಡಬ್ರಹ್ಮಯ್ಯಗಳ ಚೌಪದಿಯನ್ನು ಬರೆದ ಕವಿ ಮಡಿವಾಳಯ್ಯ. ಕ್ರಿ. ಶ. ಸುಮಾರು ೧೬-೧೭ನೇ ಶತಮಾನದಲ್ಲಿ ಜೀವಿಸಿದಂತೆ ತೋರುತ್ತದೆ. ಚೌಪದಿಯ ೧೪೭ನೆಯ ಪದ್ಯದಲ್ಲಿ

ಮೇಧಿನಿಯೊಳಧಿಕ ಓರ್ಗಲ್ಲ ವೋದಿಸುವಾ |
ಸಾಧುಭಕ್ತನು ಮಡಿವಾಳಯ್ಯನಿಗೆ ಶಿವಸುಖವಾ |
ಆದರದಿ ಕೊಟ್ಟು ಹೇಳಿಸಿದನೀ ಪದವಾ |
ಕಾದು ರಕ್ಷಿಸು ಹರನೆ ಮುಕ್ತಿಸಂಪವಾ ||

ಎಂಬ ಉಲ್ಲೇಖವಿದೆ. ಹೀಗಾಗಿ ಓದಿಸುವ ಕಾಯಕದವನಾದ ಮಡಿವಾಳಯ್ಯ ಓರಂಗಲ್ಲಿನವನು. ಕಲ್ಯಾಣ ಕ್ರಾಂತಿಯ ನಂತರ (ವೀರ)ಶೈವ ಸಾಹಿತ್ಯ ಸಂಸ್ಕೃತಿಗಳ ಅಸ್ತಿತ್ವವನ್ನು ಒಪ್ಪವಾಗಿ ಉಳಿಸಿಕೊಂಡು ಬಂದವರು ಓರಂಗಲ್ಲಿನ ಕಾಕತೀಯರು. ಪ್ರಾಯಶಃ ಇವರ ಆಶ್ರಿತ ಕವಿಯಾಗಿ ಓದಿಸುವ ಮಡಿವಾಳಯ್ಯನು ಈ ಶಿವಕಥೆಯನ್ನು ರಚಿಸಿರಬಹುದು.

. ಕಾಶೀಪತಿ

ಗುಂಡಬ್ರಹ್ಮಯ್ಯಗಳ ಸಾಂಗತ್ಯ ಬರೆದ ಕಾಶೀಪತಿ ಶ್ರೇಷ್ಠಮಟ್ಟದ ಕವಿಯಾಗಿದ್ದಾನೆ. ೧೮ ಸಂಧಿ ೧೬೧೩ ಪದ್ಯಗಳ ವಿಸ್ತಾರವಾದ ಕಾವ್ಯದಲ್ಲಿ ಲೋಕಜ್ಞಾನ, ಕಾವ್ಯಜ್ಞಾನಗಳನ್ನು ಮೇಳೈಸಿದ ಕವಿಯೀತ. ಆರಂಭದ ಸಂಧಿಯ ೨೩ನೇ ಪದ್ಯ ಹಾಗೂ ೧೮ನೇ ಪದ್ಯ ಹಾಗೂ ೧೮ನೇ ಸಂಧಿ ೧೪೬ನೆಯ ಪದ್ಯದಲ್ಲಿ ಕವಿ ತನ್ನ ಪರಿಚಯವನ್ನು ಹೀಗೆ ಹೇಳಿಕೊಂಡಿದ್ದಾನೆ.

ಶಿವಶರಣರ ಭೃತ್ಯ ಶಿವನ ಹಂಗಿಗನು
ಶಿವಕವಿಗಳ ಕಿಂಕರನೂ
ಭವನದೊಳಗೆ ಕಾಶೀನಾಥ ಹೊಗಳಿದ
ಶಿವಶರಣ ಕಾವ್ಯವನೂ

ಎಂದಿದ್ದಾನೆ. ಹೀಗಾಗಿ ಶಿವಶರಣರ, ಶಿವನ ಕಿಂಕರನಾದ ಕಾಶೀನಾಥ ಗುಂಡಬ್ರಹ್ಮಯ್ಯಗಳ ಕಾವ್ಯವನ್ನು ಹೇಳಿರುವುದಾಗಿ ಪ್ರಕಟಿಸಿದ್ದಾನೆ. ತನ್ನ ವಂಶಸ್ಥರನ್ನು ಕುರಿತು ಪದ್ಯವೊಂದರಲ್ಲಿ (ಸಂಧಿ ೧೮-೧೪೬) ಹೀಗೆ ತಿಳಿಸುತ್ತಾನೆ.

ಅಳಿಯ ಸೋಮ ಮಲ್ಲಿನಾಥ ಭೂಪಾಲನ
ಕರಣಿಕ ನರಸಪ್ಪನ ಸುತನೂ
ಇಳೆಯೊಳಾತನ ಸುತ ವಧುವರಸನ ಮಗ
ತಿಳಿದು ಹೇಳಿದ ಕಾಶೀಪತಿಯಾ

ಕಾಶೀನಾಥ, ಕಾಶೀಪತಿಯೆಂದು ಕರೆಸಿಕೊಳ್ಳುವ ಈತ ಮಧುವರಸನ ಮಗ ಮತ್ತು ಕರಣಿಕ ನರಸಪ್ಪನ ಮೊಮ್ಮಗ. ಈ ನರಸಪ್ಪ ಮಲ್ಲಿನಾಥ ಭೂಪಾಲನ ಆಸ್ಥಾನ ಕರಣಿಕ. ಮಲ್ಲಿನಾಥ ಭೂಪಾಲನು ಅಳಿಯ ಸೋಮನ ಮಗ. ಈ ಅಳಿಯ ಸೋಮನನ್ನು ಚಿತ್ರದುರ್ಗದ ಕ್ರಿ. ಶ. ೧೩೫೫ರ ಸಂಪಿಗೆ ಸಿದ್ದೇಶ್ವರ ಗುಡಿಯ ಶಾಸನದಲ್ಲಿ “ಅಳಿಯ ಸಾಯಿನಾಯಕ” ಎಂದು ಸಂಬೋಧಿಸಲಾಗಿದೆ. ಈತನನ್ನು ಸೋಮ, ಸೋಮಯ, ಸೋಮಯ್ಯ ಎಂದು ಕರೆಯುತ್ತಿದ್ದರು. ಈ ಸೋಮಯ್ಯ ಇಲ್ಲವೇ ಸಾಯಿನಾಯಕ ೧೩೦೫ರಲ್ಲಿ ಕುಮ್ಮಟದ ಕಂಪಿಲರಾಯನೆದರು ಹೋರಾಡಿ ಹೊಳಲ್ಕೆರೆ ಯುದ್ಧದಲ್ಲಿ ಸಾಯುತ್ತಾನೆಂಬುದನ್ನು ಹೊಳಲ್ಕೆರೆ ಶಾಸನ ತಿಳಿಯುತ್ತದೆ. ಈತ ಬುಕ್ಕರಾಯನ ಸಹೋದರಿಯನ್ನು ಮದುವೆಯಾಗಿದ್ದನು ಮತ್ತು ಮುಮ್ಮಡಿ ಬಲ್ಲಾಳನ ಮೈದುನನೂ ಆಗಿದ್ದನು. ಇಷ್ಟು ವಿಚಾರಗಳ ಹಿನ್ನೆಲೆಯಲ್ಲಿ ಚಿತ್ರದುರ್ಗವನ್ನಾಳಿದ ಮಲ್ಲಿನಾಥ ಭೂಪಾಲನ ಆಸ್ಥಾನ ಕರಣಿಕ ನರಸಪ್ಪ ಆಡಳಿತ ಸಂಬಂಧೀ ದಾಖಲೆಗಳ ಬರಹಕ್ಕೆ ತನ್ನನ್ನು ತೊಡಗಿಸಿಕೊಂಡಿದ್ದರೆ, ಆತನ ಮೊಮ್ಮಗ ಕಾಶೀಪತಿ ಮಲ್ಲಿನಾಥ ಭೂಪಾಲನ ಆಶ್ರಿತನಾಗಿ ಇಲ್ಲವೇ ಆನಂತರದಲ್ಲಿ ಈ ಕಾವ್ಯವನ್ನು ರಚಿಸಿರಬಹುದು. ಒಟ್ಟಿನಲ್ಲಿ ಗುಂಡಬ್ರಹ್ಮಯ್ಯಗಳ ಸಾಂಗತ್ಯದ ಕರ್ತೃವಾದ ಕಾಶೀಪತಿ ಚಿತ್ರದುರ್ಗದ ಪರಿಸರದವನೆಂದು ಹೇಳಲು ಸಾಧ್ಯವಾಗುತ್ತದೆ.

. ಆರಾಧ್ಯಶಂಕರ

ಶರಣರಿಗೆ ಶರಣಾರ್ಥಿನಾಂದ್ಯ ಬರೆದ ಕವಿ “ಹರಕೃತಿಯ ವಿಸ್ತರಿಸಿದಾರಾಧ್ಯಲೋಲ ಶಂಕರ” ಹಾಗೂ “ಪ್ರೇಮದಿಂ ಬಲಗೊಂಡು ಪೇಳ್ದೆ ಚೇರಮಾಂಕನ ಕಾವ್ಯವನು” ಎಂದು ಹೇಳುವಲ್ಲಿ ಈ ಕೃತಿಯ ಮತ್ತೊಂದು ಹಸರು ಚೇರಮಾಂಕನಕಾವ್ಯ. ಕನ್ನಡದಲ್ಲಿ ಚೇರಮಾಂಕ ವಿರಚಿತ ಚೇರಮಕಾವ್ಯವು ಇದೆ (ಸಂಪಾದಕರು ಎನ್. ಬಸವರಾಧ್ಯ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು). ಚೆನ್ನವೀರೇಶನ ಶಿಷ್ಯ ಗಂಗಪ್ಪ ಶೆಟ್ಟಿ ಚೇರಮಾಂಕನ ತಂದೆ. ೧೪೪೮ ಗುಬ್ಬಿಮಲ್ಲಣಾರ್ಯನ ಕೃಪೆಯಿಂದ ಚೇರಮಕಾವ್ಯ ರಚಿಸಿದೆನೆಂದು ಕವಿ ಹೇಳಿಕೊಂಡಿದ್ದಾನೆ. ವಾರ್ಧಕದಲ್ಲಿ ಸೃಷ್ಟಿಯಾದ ಈ ಕೃತಿಯನ್ನು ೬೩ತ ಪುರಾತನ ಶಿವಭಕ್ತರಲ್ಲಿ ಒಬ್ಬನಾದ ಚೇರಮನನ್ನು ಕುರಿತಾಗಿದೆ.

ಪ್ರಸ್ತುತ ಶರಣರಿಗೆ ಶರಣಾರ್ಥಿ ನಾಂದ್ಯ ಬರೆದ ಆರಾಧ್ಯಶಂಕರಕವಿ ಚೇರಮಾಂಕ ಕಾವ್ಯವೆಂದು ತನ್ನ ಕೃತಿಯನ್ನು ಕರೆದಿದ್ದರೂ ಚೇರಮಾಂಕನ ವಿಷಯ ಅಲ್ಲಿಲ್ಲ. ನಿಷ್ಠೆ, ತತ್ವ, ಸಿದ್ಧಾಂತಗಳಿಗೆ ಬಧ್ಧರಾಗಿ ಬದುಕಿದ ಶರಣರ ಕಥೆಗಳ ಸಂಕಲನವೆಂಬಂತೆ ರಚನೆಯಾಗಿದೆ. ಒಂದರ್ಥದಲ್ಲಿ ‘ಪ್ರೌಢರಾಯನ ಕಾವ್ಯ’ ಎಂದು ಹೆಸರಿಟ್ಟು ಶಿವಶರಣರ ಕಥೆಯನ್ನು ಹೇಳಿದ ಅದ್ರೀಶ ಕವಿಯ ಕಾವ್ಯಜಾತಿಗೆ ಈ ಕೃತಿ ಸೇರುತ್ತದೆ.

ಕವಿ ತನ್ನ ವಿಷಯವಾಗಿ ಹೇಳಿಕೊಂಡಿರುವುದು ಏನೂ ಇಲ್ಲ. ಗುಂಡಬ್ರಹ್ಮಯ್ಯರ ಕಥೆ ಹೇಳುವ ಮೊದಲು ಗುರುಸ್ತುತಿ ಮಾಡಿದ ಆರಾಧ್ಯಶಂಕರ ತನ್ನ ಗುರುವಿನ ಬಗ್ಗೆ ಹೀಗೆ ತಿಳಿಸುತ್ತಾನೆ.

ಮುನಿವರನು ಋಷಿಶೃಂಗನಾಶ್ರಮದ ಮಧ್ಯದೊಳು
ಘನತರದ ತುಂಗಭದ್ರೆಯ ತಡಿಯೊಳುಟ್ಟಿರುವ
ವಿನಯದಿಂ ರಾಜಿಸುವ ಶೃಂಗಪುರ ಪಟ್ಟಣವು
ಮನುಮುನಿಗಳೆರಗಿ ಪಡಮಡುವ ಮಲ್ಲೇಶ್ವರನ ಚರಣಕಮಲಾಧರನೂ

ಎಂದಿದ್ದಾನೆ. ಮತ್ತು ತನ್ನ ಕುರಿತು

ಪೇಳುತೀರ್ದನು ಬಳಿಕ ಆರಾಧ್ಯಶಂಕರನು
ಕೇಳುತೀರ್ದನು ಭೂಪ ಅತಿ ಹರುಷ ಕೊನರುತಲಿ
ದಾಳಿಸುವ ಜಿಹ್ವೆಯೊಳು ಹರಕೃತಿಯ ವಿಸ್ತರಿಸಿ
ಮೇಳೈಸಿ ಶರಣಕುಲಗಡಣದೊಗ್ಗಿನೊಳಲ್ಲಿ ಭವನು ತಲೆದೂಗಲು
||

ಆಲಿಸಲು ಕರ್ಣಕಮೃತದ ಸೋನೆ ಸುರಿವಂತೆ
ಸಾಲ್ಗೊಳಿಸಿ ಹರಕೃತಿಯ ವಿಸ್ತರಿಸಿದಾರಾಧ್ಯ
ಲೋಲಶಂಕರ ಚೇರಮಾಂಕನ ಕಾವ್ಯವನು
ಸೂರಿಯಂ ಘ್ರಿಯ ನೆನೆದು ಶರಣ ವಿಸ್ತರಿಸಿದನು ಕೇಳುತಿರ್ದರು ಭಕ್ತರು
||೨೧||

ಈ ಎರಡು ಪದ್ಯಗಳಿಂದ ಶರಣರಿಗೆ ಶರಣಾರ್ಥಿನಾಂದ್ಯದ ಕರ್ತೃ ಆರಾಧ್ಯಶಂಕರ ಈತನು ಗುರು ಹಂಪಿ ಪರಿಸರದ ಶೃಂಗಪುರ ಪಟ್ಟಣದವನಾದ ಮಲ್ಲೇಶ್ವರನು. ಈ ಶೃಂಗಪುರ ಪಟ್ಟಣ ಯಾವುದಾಗಿರಬೇಕೆಂಬುದು ಶೋಧಿಸಬೇಕಾದ ಸಂಗತಿ. ಕವಿ ಆರಾಧ್ಯಶಂಕರ ಹಂಪಿ ಪರಿಸರದಲ್ಲಿದ್ದುಕೊಂಡು ಸುಮಾರು ೧೬೫೦ರಲ್ಲಿ ಆಗಾಗಲೇ ಕಂಪ್ಲಿ ಭಾಗದಲ್ಲಿ ಜನಾದರಣೇಯನು ಪಡೆದಿದ್ದ ಗುಂಡಬ್ರಹ್ಮಯ್ಯಗಳ ಚರಿತ್ರೆಯನ್ನು ಬರೆದಿದ್ದಾನೆಂದು ಸದ್ಯಕ್ಕೆ ನಿರ್ಣಯಿಸಬಹುದಾಗಿದೆ.

. ಗುಂಡಬ್ರಹ್ಮಯ್ಯಗಳ ಇತಿವೃತ್ತ

ಗುಂಡಬ್ರಹ್ಮಯ್ಯರು ಬಸವೋತ್ತರ ಕಾಲದ ಶಿವಶರಣರು. ಕಾವ್ಯಗಳಲ್ಲಿ ಗುಂಡ ಬೊಮ್ಮಯ್ಯ, ಗುಂಡುಬೊಮ್ಮಯ್ಯ, ಶೂಲದಬ್ರಹ್ಮಯ್ಯ, ಗುಂಡುಬೊಮ್ಮ ಮುಂತಾಗಿ ಏಕವ್ಯಕ್ತಿಯಂತೆ ಪ್ರಸ್ತಾಪಿತಗೊಂಡಿದ್ದಾರೆ. ಗುಂಡಯ್ಯ ಬ್ರಹ್ಮಯ್ಯ ಎಂಬ ಇಬ್ಬರು ಭಾವಮೈದುನರು. “ಭಾವಮೈದುನ ಭೇದಗಳಿಲ್ಲ ಜೀವವೊಂದಾಗಿ ಇರುತಿಹರು, ಆತನು ನಮ್ಮಣ್ಣ ಗುಂಡಯ್ಯದೇವನು, ಆತ ಬೊಮ್ಮರ್ಣಣ ನಮ್ಮ ಭಾವ” ಎಂಬ ಕಾವೋಕ್ತ ಉಲ್ಲೇಖಗಳು ಇವರು ಭಾವಮೈದುನ ಸಂಬಂಧವುಳ್ಳವರೆಂದು ತಿಳಿಸುತ್ತವೆ. ವಿಶೇಷವಾಗಿ ಕರ್ನಾಟಕದಲ್ಲಿ ದೊರೆತ ಇವರ ಶಿಲ್ಪಗಳು ಏಕಶಿಲೆಯಲ್ಲಿ ಇಬ್ಬರನ್ನು ಕಡೆದು ನಿಲ್ಲಿಸಿರುವುದನ್ನು ಗಮನಿಸುವುದಾದರೆ “ಉಂಡಲ್ಲಿ ಉಡುವಲ್ಲಿ, ಸಾವಲ್ಲಿ ಸಮಬದುಕನ್ನು ಬಾಳಿದ ಏಕೋಭಾವ ನಿಷ್ಠೆಯ” ಶರಣದ್ವಯರು.

ಇವರು ಕ್ರಿ. ಶ. ೧೧೯೯-೧೨೬೨ರಲ್ಲಿ ಜೀವಿಸಿದ್ದ ಓರಂಗಲ್ಲಿನ ಗಣಪತಿರಾಯನ ಕಾಲದಲ್ಲಿ ಬದುಕಿದ್ದರೆಂಬುದನ್ನು ಎಲ್ಲ ವೀರಶೈವ ಕಾವ್ಯ-ಪುರಾಣಗಳು ಸಮರ್ಥಿಸಿಕೊಳ್ಳುತ್ತಿವೆ. ಇದಕ್ಕೆ ಪೂರಕವಾಗಿ ಪಂಡಿತಾರಾಧ್ಯರ ಕಾಲ ವಿಚಾರ, ಮರುಳಸಿದ್ಧರು ಮತ್ತು ಗುಂಡಬ್ರಹ್ಮರು ಓರಂಗಲ್ಲಿನಲ್ಲಿ ಸಂದರ್ಶಿಸಿದ ಕಾಲ, ಆನಂತರದ ದಿನಗಳಲ್ಲಿ ಇವರ ಹೆಸರಿನ ದೇವಸ್ಥಾನ ಓರಂಗಲ್ಲಿನಲ್ಲಿ ನಿರ್ಮಾಣಗೊಂಡಿರುವುದು ಮುಂತಾದ ಸಂಗತಿಗಳನ್ನು ಕ್ರೂಢೀಕರಿಸಿ ಹೇಳುವುದಾದರೆ ಕ್ರಿ. ಶ. ೧೨೬೨ರಲ್ಲಿ ಇವರು ಜೀವಿಸಿರಬೇಕು.

ಗುಂಡಬ್ರಹ್ಮಯ್ಯರ ಜನ್ಮಸ್ಥಳವನ್ನು ದಿ ಡಾ. ವಿ. ಶಿವಾನಂದ ಅವರು ಕರ್ನಾಟಕದಲ್ಲಿ ಹುಡುಕುತ್ತಾರೆ. ಹಾವೇರಿ ಜಿಲ್ಲೆ ಗುಂಡೇನಹಳ್ಳಿ, ಚಿಕ್ಕಮಗಳೂರು ಜಿಲ್ಲೆಯ ಆಣೆಗೆರೆ ಇವೆರಡರಲ್ಲಿ ಯಾವುದಾದರೂ ಒಂದು ಜನ್ಮಸ್ಥಳವಾಗಿರಬೇಕೆಂದು ಊಹಿಸುತ್ತಾರೆ. ಅವರು ಅದಕ್ಕೆ ಕೊಡುವ ಪುರಾವೆಗಳೆಂದರೆ ಆ ಗ್ರಾಮಗಳಲ್ಲಿ ಗುಂಡಬ್ರಹ್ಮಯ್ಯಗಳ ಹೆಸರಿನಲ್ಲಿ ದೇವಸ್ಥಾನ ನಿರ್ಮಾಣವಾಗಿರುವುದು, ಕಾರಹಬ್ಬದಲ್ಲಿ (ಕಾರಹುಣ್ಣಿಮೆ) ಗುಂಡಬ್ರಹ್ಮಯ್ಯಗಳ ಸ್ಮಾರಕ ಹಬ್ಬವೆಂಬಂತೆ ಆಚರಿಸುವುದು, ಶೂಲಸ್ತಂಭಗಳಿರುವುದು ಇನ್ನೂ ಮುಂತಾದ ಅವಶೇಷ ಮತ್ತು ಆಚರಣೆಗಳಿಂದ ಈ ನಿಲುವಿಗೆ ಬರುತ್ತಾರೆ. ಆದರೆ ಗುಂಡಬ್ರಹ್ಮಯರನ್ನು ಕುರಿತು ರಚನೆಯಾದ ಸ್ವತಂತ್ರ ಕೃತಿಗಳು ಶಿವಪುರ, ಹೊರಪುರ ಹಾಗೂ ಗವಚೆರಪುರ ಎಂಬ ಹೆಸರುಗಳನ್ನು ಉಲ್ಲೇಖಿಸುತ್ತವೆ.

ಇಲ್ಲಿಯ ‘ಗವಚೆರಪುರ’ ಸ್ಥಳವಾಚಿಯೋ, ಜನಾಂಗವಾಚಿಯೋ ಎಂಬುದನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕಾಗುತ್ತದೆ. ‘ಗವಚೇರ’ವೆಂಬುದು ಜನಾಂಗವಾಚಕವಾಗಿ ಬಳಕೆಯಾದಂತೆ ಗುಂಡಬ್ರಹ್ಮಯ್ಯಗಳ ಸಾಂಗತ್ಯದ ಈ ಕೆಳಗಿನ ಪದ್ಯಗಳಿಂದ ತಿಳಿದುಬರುತ್ತದೆ. ಕಳವಿಗೆ ಬಂದ ಶಿವ ನಾರಂದರು ಗುಂಡಬ್ರಹ್ಮಯ್ಯರ ಬಗ್ಗೆ ನೀರಿಗೆ ಬಂದ ಅವರ ತಂಗಿಯರನ್ನು ವಿಚಾರಿಸಿದಾಗ ಅದಕ್ಕವಳು

ಅವರೀ ಪಟ್ಟಣದೊಳಗಿಲ್ಲ ಗುರುವೆ
ಅವರತ್ತ ಗವಚೆರರಿಹರೂ
ಅವರು ಊರಾಡಿ ಬಂದರೆ ಹಿರಿಯರಿ
ಗವರು ಸೇವೆಯ ಮಾಡುತಿಹರು

ಹಾಗೆಯೇ ‘ಅವನು ಗುಂಡಬೊಮ್ಮನಿರುತಿಪ್ಪ ಗವಚೆರು’ (೬-೨೧) ‘ತೇವರ ಕೆಳಗೆ ಗವಚೆರೂ’ (೧೪-೪೭) ‘ನಿಟ್ಟೋಡಿದಲೋಡಿ ಗವಚೆರನೆ ಹೊಕ್ಕು’ (೧೨-೮೮) ‘ಗವಚೆರೊಳು ಕಳ್ಳರು ಇಲ್ಲೆಂದು’ (೧೫-೧೨) ‘ಪುರವ ಹೊಕ್ಕರು ಹೆಜ್ಜೆ ಗವಚೆರಪುರವನು’ (೧೫-೭) ಈ ಉಲ್ಲೇಖಗಳನ್ನು ಗಮನಿಸಿದರೆ ‘ಗವಚೆರು’ ಎಂಬುದು ಸ್ಥಳನಾಮವಾಗಿರದೆ ಜನಾಂಗವಾಚಿ ಪದವೆನಿಸುತ್ತದೆ. ಹೀಗಾಗಿ ಊರಾಡಿ ಬರುವ, ಹಿರಿಯರ ಸೇವೆ ಮಾಡುವ, ತೆವರು (ಬೆಟ್ಟದ) ಕೆಳಗೆ ವಾಸಿಸುವ ಬೇಡಜನಾಂಗದ ಬುಡಕಟ್ಟು ಸಮುದಾಯದವರಾಗಿರಬಹುದು. ಹೀಗಾಗಿ ಬಹುರೂಪಿ ಚೌಡಯ್ಯ, ಕಿನ್ನರಿಬೊಮ್ಮಯ್ಯ ಮುಂತಾದ ಶರಣರಂತೆ ಬುಡಕಟ್ಟು ವೃತ್ತಿಗಾಯಕರಾಗಿರಬಹುದಾದ ಇವರು ಶರಣ ತತ್ತ್ವಕ್ಕೆ ಮಾರುಹೋಗಿರಬಹುದು. ಗುಂಡಬ್ರಹ್ಮಯ್ಯರು ಬುಡಕಟ್ಟು ಸಮುದಾಯದ ಸಾಂಸ್ಕೃತಿಕ ವೀರರಾಗಿ, ‘ಮರೆಹೊಕ್ಕವರ ಕೊಡೆನೆಂಬ’ ವೀರವ್ರತದಿಂದ ಶೂಲಕ್ಕೆ ಆಹುತಿಯಾಗಿರುವುದು ಕುಮಾರರಾಮನಂಥ ವೀರರಿಗೆ ಆದರ್ಶವಾಗಿ ಕಂಡಿರಬೇಕು. ಆ ಕಾರಣವಾಗಿ ಅವರ ವೀರವ್ರತದ ಬದುಕನ್ನು ‘ಶೂಲದ ಹಬ್ಬದ’ ಮೂಲಕ ಕನ್ನಡ ನಾಡಿನಲ್ಲಿ ಪ್ರಸಾರಿಸುವ ಬಹುದೊಡ್ಡ ಕಾರ್ಯವನ್ನು ಕುಮಾರರಾಮ ಸಾಂಸ್ಕೃತಿಕ ವಲಯದಲ್ಲಿ ಮಾಡಿರಬೇಕು. ಓರಂಗಲ್ಲಿನ ಮೂಲದ ಇವರು ಕುಮಾರರಾಮ ಸಾಂಸ್ಕೃತಿಕ ವಲಯದಲ್ಲಿ ಮಾಡಿರಬೇಕು. ಓರಂಗಲ್ಲಿನ ಮೂಲದ ಇವರು ಕುಮಾರರಾಮನ ಕಾಲಕ್ಕೆ ಕನ್ನಡನಾಡಿನಾದ್ಯಂತ ಆಚರಣೆ ಆರಾಧನೆಗಳ ಮೂಲಕ ಪ್ರಸಿದ್ಧಿಗೆ ಬಂದಿರುವ ಸಾಧ್ಯತೆಗಳೆ ಹೆಚ್ಚು.

. ಓರಂಗಲ್ಲಿನ ಅರಸುಮನೆತನ ಮತ್ತು ಶೈವೋಪಾಸನೆ

ರಾಷ್ಟ್ರಕೂಟರ ಅನುಯಾಯಿಗಳಾಗಿ ಹಾಗೂ ಕಲ್ಯಾಣಚಾಲುಕ್ಯರ ಸಾಮಂತರಾಗಿದ್ದ ಕಾಕತೀಯರು ಮೊದಲಿಗೆ ಜೈನ ಮತಾವಲಂಬಿಗಳಾಗಿದ್ದು ನಂತರದಲ್ಲಿ ಕ್ರಿ.ಶ.೧೨೫೦ರಲ್ಲಿದ್ದ ಗಣಪತಿದೇವನ ಕಾಲದಲ್ಲಿ (ವೀರ)ಶೈವ ಮತಾವಲಂಬಿಗಳಾದರು. ವಿಜಯನಗರದ ಹಕ್ಕ ಬುಕ್ಕರ ಒಡನಾಟದಲ್ಲಿದ್ದ ಇವರು ಆಂಧ್ರದಲ್ಲಿ ತಮ್ಮ ರಾಜಕೀಯ ಅಸ್ತಿತ್ವವನ್ನು ಬಲಪಡಿಸಿಕೊಂಡಿದ್ದರು. ಕ್ರಿ.ಶ.೧೦೦೦-೧೦೨೦ರಲ್ಲಿ ಆಳ್ವಿಕೆ ನಡೆಸಿದ ೧ನೆಯ ಬೇತನಿಂದ ಆರಂಭವಾಗುವ ಕಾಕತೀಯರು ಮೊದಲಿಗೆ ಹನುಮಕೊಂಡವನ್ನು ರಾಜ್ಯಧಾನಿಯನ್ನಾಗಿ ಆಳ್ವಿಕೆ ಮಾಡಿದ್ದರು. ಆನಂತರ ಓರಂಗಲ್ಲಿಗೆ ರಾಜ್ಯಧಾನಿಯನ್ನು ಸ್ಥಳಾಂತರಿಸಿಕೊಂಡರು. ಆ ವೇಳೆಗಾಗಲೇ ಶ್ರೀಶೈಲ, ಕೊಲ್ಲೀಪಾಕಿ ಹಾಗೂ ಓರಂಗಲ್ಲುಗಳು (ವೀರ)ಶೈವ ಧರ್ಮದ ಕೇಂದ್ರಸ್ಥಾನಗಳಾಗಿದ್ದವು. ಕಲ್ಯಾಣ ಕ್ರಾಂತಿಯ ಪ್ರಭಾವ ಆಂದ್ರಕ್ಕೂ ಹರಡಿ ಪಂಡಿತರಾಧ್ಯರಂಥವರು ಶರಣ ಕ್ರಾಂತಿಗೆ ಪ್ರಭಾವಿತರಾದರು. ರುದ್ರದೇವನ ಕಾಲದಲ್ಲಿ (ಕ್ರಿ.ಶ. ೧೧೫೫-೧೧೬೫) ಪಂಡಿತರಾಧ್ಯರು ವೆಲ್ಲಾಳ ಜೋಳನ ಸಭೆಯಲ್ಲಿ ಜೈನ, ಬೌದ್ಧರನ್ನು ಗೆದ್ದು ಶೈವಸಿದ್ಧಾಂತವನ್ನು ಪ್ರಚಾರಿಸಿದರು.

ಗಣಪತಿದೇವನ ಕಾಲದಲ್ಲಿ ಆಂಧ್ರದಲ್ಲಿ ಶೈವಧರ್ಮ ಸುವರ್ಣಯುಗವನ್ನು ಕಂಡಿತು. ಈತನ ನಂತರ ರುದ್ರಾಂಬೆ ಅಧಿಕಾರಕ್ಕೆ ಬಂದಳು. ೧೩ನೆಯ ಶತಮಾನದಲ್ಲಿ ೨ನೆಯ ಪ್ರತಾಪರುದ್ರನಿಗೆ ಶ್ರೀಶೈಲದ ಶಾಖಾ ಮಠದಲ್ಲಿದ್ದ ಈಶ್ವರ ಶಿವಾಚಾರ್ಯರು ಗುರುಗಳಾಗಿದ್ದರು. ಇವರ ಕಾಲದಲ್ಲಿ ಶರಣ ಚಳುವಳಿಯ ಜಾತಿ, ವರ್ಗ, ವರ್ಣ ವೈಷಮ್ಯಗಳನ್ನು ನಿರಸಗೊಳಿಸಿದ ಸಾಮಾಜಿಕ ಸಿದ್ಧಾಂತಗಳ ಅನುಷ್ಠಾನ ತೀವ್ರವಾಗಿ ಜನಪ್ರಿಯಗೊಂಡಿತು. ಆಚರಣೆ ನಂಬಿಕೆಗಳಲ್ಲದೆ ಧಾರ್ಮಿಕ ತಿರುಳನ್ನು ಸಾಹಿತ್ಯದ ಮೂಲಕ ಹಿಡಿದಿಡುವ ಪ್ರಯತ್ನಗಳು ಬಹುರೀತಿ ಜರುಗಿದವು. ಸ್ವತಃ ರುದ್ರದೇವ ನೀತಿಸಾರವೆಂಬ ರಾಜ್ಯಶಾಸ್ತ್ರ ಕೃತಿಯನ್ನು ಬರೆದನು. ಈತ ವೀರಶೈವ ಕವಿಗಳಿಗೆ ಆಶ್ರಯ ನೀಡಿದನು. ಉಚ್ಚಮಟ್ಟದ ಶಿವಭಕ್ತನಾದ ನನ್ನಿ ಚೋಡನಿಂದ ಕುಮಾರಸಂಭವ ಕಾವ್ಯ ಸೃಷ್ಟಿಯಾಯಿತು. ಇದರಲ್ಲಿ ಶಿವಸಾಹಿತ್ಯವನ್ನು ನಿರೂಪಿಸಿದನು. ಮಲ್ಲಿಕಾರ್ಜುನ ಪಂಡಿತಾರಾಧ್ಯರು ‘ಶಿವತತ್ತ್ವಸಾರ’ದ ೫೦೦ ಪದ್ಯದಲ್ಲಿ ಶೈವಸಿದ್ಧಾಂತಗಳನ್ನು ಪ್ರತಿಪಾದಿಸಿದರು. ಹಂಪಿ ರಾಘವಾಂಕ “ಕೃತಿಗಧಿಪತಿ ಓರಂಗಲ್ಲ ವೀರೇಶನೆಂದು” ತಿಳಿಸಿ ಮೀಸಲುಗವಿತೆಯೆಂಬ ವೀರೇಶ ಚರಿತೆಯನ್ನು ಬರೆದನು. ಕಾಕತೀಯ ಗಣಪತಿಯ ಕಾಲದಲ್ಲಿ ಆಸ್ಥಾನದ ಏಕದಂಡಿ ತ್ರಿದಂಡಿಗಳನ್ನು ಸೋಲಿಸಿ ರಾಜನಿಂದ ಸನ್ಮಾನಿಸಿಗೊಂಡನು.

ಪಾಲ್ಕುರಿಕೆ ಸೋಮನಾಥ ಕವಿ ತನ್ನ ಸಾಹಿತ್ಯದ ಮೂಲಕ (ವೀರ)ಶೈವವನ್ನು ಆಂಧ್ರದಲ್ಲಿ ಪ್ರಸಾರಗೊಳಿಸಿದನು. ಈತನಿಂದ ರಚಿತವಾದ ಬಸವೇಶ್ವರ ಚರಿತ್ರೆಯನ್ನು ಭೀಮಕವಿ ಕನ್ನಡ ಬಸವಪುರಾಣವನ್ನಾಗಿ ಬರೆದನು. ಸೋಮನಾಥನಿಂದ ವೃಷಧೀ ಶತಕ, ಪಂಡಿತಾರಾಧ್ಯ ಚರಿತ್ರೆ ಮುಂತಾದವುಗಳಲ್ಲದೆ ಈತನ ಕನ್ನಡ ಕೃತಿಗಳಾಗಿ ಶೀಲಸಂಪಾದನೆ, ದಶವಿಧಪಾದೋದಕ, ಗಣಸಹಸ್ರನಾಮ, ಹರಗಣಮಾಲೆ ಮೂಡಿಬಂದವು. ಪಾಲ್ಕುರಿಕೆ ಸೋಮನಾಥನ ಮಗನಾದ ಚತುರ್ಮುಖ ಬಸವೇಶನಿಂದ ವೀರಭದ್ರ ವಿಜಯ, ಶಂಭುಲೀಲೆ ಮುಂತಾದ ಕೃತಿಗಳು ರಚನೆಯಾಗಿವೆ. ಬಹುಶಃ ಗುಂಡಬ್ರಹ್ಮಯ್ಯಗಳ ಚೌಪದಿ ಬರೆದ ಓದಿಸುವ ಮಡಿವಾಳಯ್ಯ ಕಾಕತೀಯ ಅರಸರ ಆಶ್ರಿತ ಕವಿಯಾಗಿ ಶಿವಶರಣರ ಕಥಯನ್ನು ಬರೆದಿರಬೇಕು. ಪ್ರತಾಪರುದ್ರನ ಕಾಲದಲ್ಲಿ ವಿಶ್ವೇಶ್ವರ ಶಿವದೇಶಿಕನಿಂದ ಶಿವತತ್ತ್ವರಸಾಯನ, ಪಡವರ್ತಿ ಬಸವಕವಿಯಿಂದ ವೀರಶೈವ ದೀಕ್ಷಾಬೋಧ, ಪಡವರ್ತಿ ಸೋಮನಾಥನಿಂದ ಬಸವಪುರಾಣ ಗ್ರಂಥಗಳು ಸೃಷ್ಟಿಗೊಂಡಿವೆ. ಕಾಕತೀಯ ಅರಸರನ್ನು ಕೆಲವು ಶಾಸನಗಳು ‘ಪರಮ ಮಾಹೇಶ್ವರ’,‘ಹನುಮಗೊಂಡ ಪುರಾಧೀಶ್ವರ’ ಎಂದು ಮುಂತಾಗಿ ದಾಖಲಿಸಿವೆ.

ಜಾನಪದ ಸಾಹಿತ್ಯದ ಮೂಲಕ (ವೀರ)ಶೈವ ಧರ್ಮವನ್ನು ಪ್ರಚಾರಿಸುವ ಕಾರ್ಯಗಳು ಕಾಕತೀಯ ಅರಸರ ಪ್ರೋತ್ಸಾಹದಿಂದ ನೆರವೇರಿದೆ. ಶಿವಧರ್ಮ ಪ್ರಚಾರಕ್ಕೆ ‘ಬುರ್ರಕಥಾ’ ಜನಪದ ಕಲೆಯನ್ನು ಪೂರ್ಣವಾಗಿ ಬಳಸಿಕೊಳ್ಳಲಾಯಿತು. ಬುರ್ರಯೆಂದರೆ ತೆಲುಗಿನಲ್ಲಿ ಬುರುಡೆ ಎಂದರ್ಥ. ತಟ್ಟಿವಾಧ್ಯ ಹಾಗೂ ತಾಳಗಳಿಂದ ಕಥೆಯನ್ನು ನಿರೂಪಿಸುವ ವೃತ್ತಿಗಾಯಕರಿಂದ, ಮುಖ್ಯವಾಗಿ ಜಂಗಮರಿಂದ ಶಿವಶರಣ, ಶಿವನ ಲೀಲಾ ಪ್ರಸಂಗಗಳು ಬಿಂಬಿತವಾದವು. ವೀರನಾಟ್ಯೆಂ ಎಂಬ (ವೀರ)ಶೈವ ಧರ್ಮದ ವೀರನೃತ್ಯಗಳು ಇಂದಿಗೂ ಬಳಕೆಯಲ್ಲಿದ್ದು ಪ್ರಾಯಶಃ ಇವುಗಳ ಪ್ರಭಾವ ಕನ್ನಡ ನಾಡಿನಲ್ಲಿ ‘ವೀರಗಾಸೆ’ಯ ಮೂಲಕ ನೆರವೇರಿರಬೇಕು. ಇವರ ಹಾಡುಗಳಿಗೆ ‘ಖಡ್ಗ’ಗಳೆಂದು ಕರೆಯುತ್ತಾರೆ. ಇಲ್ಲಿ ಖಡ್ಗ ಹೆಸರಿನ ಜೊತೆಗೆ ‘ವಡಬು’ಗಳೆಂದು ಕೆರಯುವ ರೂಢಿಯಿದೆ.

ಸಾಹಿತ್ಯ ಸಂವರ್ಧನೆಯ ಜೊತೆಗೆ ವಾಸ್ತುಶಿಲ್ಪಗಳ ಮೂಲಕ ಇವರು (ವೀರ)ಶೈವ ಧರ್ಮವನ್ನು ಪ್ರತಿನಿಧಿಸಿದ್ದರು. ಇವರ ದೇವಾಲಯಗಳು ಹೆಚ್ಚು ಶಿವಾಲಯಗಳಾಗಿವೆ ದೇಗುಲ ಭಿತ್ತಿಗಳು ಪುರಾಣ ಕಥಾ ಶಿಲ್ಪಗಳಿಂದ ಅಲಂಕಾರಗೊಂಡಿವೆ. ಓರಂಗಲ್ಲಿನ ವೀರಭದ್ರ ದೇವಾಲಯಗಳಲ್ಲದೆ ಆಂಧ್ರದ ‘ವೀರಬ್ರಹ್ಮಯ್ಯ’ ಮತ್ತು ‘ಗುಂಡಬ್ರಹ್ಮಯ್ಯ’ ಗಳ ದೇವಸ್ಥಾನಗಳಿಂದ್ದಂತೆ ತೋರುತ್ತದೆ. ಪ್ರತಾಪರುದ್ರನ ಕಾಲದ ಕ್ರಿ.ಶ. ೧೨೬೦ ರ ಶಾಸನದಲ್ಲಿ ಭೀಮದೇವ ಎಂಬುವವನು ಪಾತಳ್ಲಿಪಾಟ ಶ್ರೀ ಸೋಮನಾಥ, ಅನ್ನೇಶ್ವರ ಮತ್ತು ಕೋಮಠೇಶ್ವರ ದೇವರ ಅಂಗರಂಗ ವೈಭೋಗಕ್ಕೆ ನೀಡಿದ ವೃತ್ತಿ ಹೇಳುವಾಗ “ಗುಂಡಯ ಬ್ರಂಮಯಂಗಾರಕಿ” ಎಂದೂ ಅವರಿಗೂ “ಓಗರಮು, ನೇತಿಕಿ, ಪೆರಗುನಕ್ಕೂ, ಉದಯ ಮಜ್ಜನಮು ಪಾಲುಕು” ಎಂದು ದತ್ತಿ ಬಿಟ್ಟಿರುವುದನ್ನು ತಿಳಿಸುತ್ತದೆ (IAP Nal II, ಸಂ.೬೩). ಇಂತಹ ಗುಂಡಬ್ರಹ್ಮಯ್ಯ, ವೀರಬ್ರಹ್ಮಯ್ಯಗಳ ಶಿಲ್ಪಗಳು ಆಂಧ್ರ-ಕರ್ನಾಟಕದಲ್ಲಿ ಹೇರಳವಾಗಿ ದೊರೆಯುತ್ತಿವೆ, ಮುಂದೆ ಸಂಗಮ ಅರಸರಿಗೂ, ಕಾಕತೀಯರಿಗೂ ಸಂಬಂಧ ಹಾಗೂ ಪ್ರಭಾವಗಳು ಹೆಚ್ಚುಗೊಂಡಂತೆ ಹಂಪೆ ದ್ವಾರಸಮುದ್ರ ಮತ್ತು ಶಿವಗಂಗೆಯಲ್ಲಿ ಕ್ರಮವಾಗಿ ಆಂಧ್ರದ ಆಗಮಸಾಹಿತ್ಯ,, ಆರಾಧ್ಯಶೈವತತ್ತ್ವ ಮತ್ತು ಚತುರಾಚಾರ್ಯರ ಪೀಠ ಸಂಸ್ಥಾಪನೆಗಳಂಥ ಶೈವೋಪಾಸನೆಯ ಉಪಕ್ರಮಗಳು ನಡೆದವು.

ಇಂಥ ಶೈವೋಪಾಸನೆಯ ಕೇಂದ್ರವಾಗಿದ್ದ ಓರಂಗಲ್ಲಿನಲ್ಲಿ ಶಿವಶರಣರಾದ ಗುಂಡಬ್ರಹ್ಮಯ್ಯಗಳ ಚರಿತ್ರೆ ‘ವೀರಭದ್ರ ಸಂಪ್ರದಾಯ’ದಲ್ಲಿ ರಚನೆಯಾಗಿದೆ. ಯಾಕೆಂದರೆ ಶೈವಸಮಯದಲ್ಲಿ bಬರುವ ಪಂಚಗೋತ್ರಗಳಾದ ವೀರ,ನಂದಿ, ಭೃಂಗೀ, ವೃಷಭ, ಸ್ಕಂದಗಳಲ್ಲಿ ವೀರಗೋತ್ರಕ್ಕೆ ವೀರಭದ್ರ ಅಧಿಪತಿ. ಈ ಪರಂಪರೆಗೆ ಬರುವ ಶಿವಗಂಗೆ, ಹಂಪಿ, ಕುಂಭಕೋಣ, ಸುತ್ತೂರು, ನಿಜಗಲ್ಲುಬೆಟ್ಟ ಮುಂತಾದ ಕಡೆ ವೀರಭದ್ರನ ಆರಾಧನೆಯಿದೆ. ಪಂಚಾಚಾರಗಳಲ್ಲಿ ಬರುವ ‘ಗಣಾಚಾರ’ ಧರ್ಮರಕ್ಷಣೆಯ ಆಚಾರ ಸಿದ್ಧಾಂತ. ತಮ್ಮ ಸಿದ್ಧಾಂತಕ್ಕೆ, ತತ್ತ್ವಗಳಿಗೆ, ಆಪತ್ತೆಸಗುವವರನ್ನು, ಅಡ್ಡಿ ಮಾಡುವವರನ್ನು ಶಸ್ತ್ರಸಹಿತ ಹಿಮ್ಮೆಟ್ಟಿಸುವ ಶುದ್ಧ ಪ್ರತಿಭಟನೆಯ ಆಚಾರವೇ ‘ಗಣಾಚಾರ’. ಅಂಬಿಗರ ಚೌಡಯ್ಯ, ಆದಯ್ಯ, ಹಡಪದಪ್ಪಣ್ಣ, ವೀರಘಂಟಿ ಮಡಿವಾಳಯ್ಯ, ಮೊದಲಾದವರು ಗಣಾಚಾರ ಗುಂಪಿನ ಪ್ರಮುಖರು. ಇದಕ್ಕೆ ವಿರುದ್ಧವೆನ್ನುವಂತೆ ಪ್ರತಿಭಟನೆಯಿಲ್ಲದೆ ಅನ್ಯರಿಗಾಗಿ ತಾವು ಪ್ರಾಣಾರ್ಪಣ ಮಾಡಿಕೊಳ್ಳುವ ಗುಂಡಬ್ರಹ್ಮಯ್ಯಗಳೂ ‘ಗಣಾಚಾರ’ ಪರಂಪರೆಯ ವೀರಭದ್ರನ ಸಂಪ್ರದಾಯವರು. ಹೀಗಾಗಿ ಕರ್ನಾಟಕದಲ್ಲಿ ಸಿಗುವ ಗುಂಡಬ್ರಹ್ಮಯ್ಯಗಳ ಶಿಲ್ಪಗಳು ವೀರಭದ್ರನ ಗುಡಿಯಲ್ಲಿಯೇ ಹೆಚ್ಚು ಕಂಡುಬರುವುದನ್ನು ಇಲ್ಲಿ ಅನುಲಕ್ಷಿಸಬಹುದಾಗಿದೆ.