. ಹಿರೇಗುಂಟೂರಿನ ಶಿಲ್ಪ

ಚಿತ್ರದುರ್ಗ ಜಿಲ್ಲೆಯ ಹಿರೇಗುಂಟೂರು ಗ್ರಾಮದ ಶಿಥಿಲಗೊಂಡ ದೇವಾಲಯದಲ್ಲಿ (ಪ್ರಾಯಶಃ ವೀರಭದ್ರ ದೇವಾಲಯವಾಗಿರಬೇಕು) ಗುಂಡಬ್ರಹ್ಮಯ್ಯಗಳ ಶಿಲ್ಪವಿದೆ. ೨೨’x ೧೮’ ಅಳತೆಯಲ್ಲಿರುವ ಗುಂಡಬ್ರಹ್ಮಯ್ಯಗಳ ಶಿಲ್ಪಗಳ ನಡುವೆ ಶೂಲಗಳನ್ನು ಊರಲಾಗಿದೆ. ಎಡಗೈಯಿಂದ ಇಷ್ಟಲಿಂಗ ಬಲಗೈಯಿಂದ ಶೂಲದ ಮೊನಚನ್ನು ಸ್ಪರ್ಶಿಸುವಂತೆ ಕೆತ್ತಲಾಗಿದೆ.

. ಹೊಸದುರ್ಗದ ಶಿಲ್ಪ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ವೀರಭದ್ರ ದೇವಾಲಯದಲ್ಲಿ ಗರ್ಭಗುಡಿಯ ಮುಂದಿನ ಎಡಭಾಗದ ಗೋಡೆಗೆ ಗುಂಡಬ್ರಹ್ಮಯ್ಯಗಳ ಶಿಲ್ಪಗಳನ್ನು ಪ್ರತಿಷ್ಠಾಪಿಸಲಾಗಿದೆ. ೨.೫ x ೨ ಅಳತೆಯ ಶಿಲ್ಪಗಳ ನಡುವೆ ಶೂಲಗಳನ್ನು ನಿಲ್ಲಿಸಲಾಗಿದೆ. ಕಠಾರಿಗಳನ್ನು ಬಲಗೈಯಿಂದ ಮೇಲಕ್ಕೆತ್ತಿ ಹಿಡಿದು ನಿಂತಿರುವ ಭಂಗಿಯಲ್ಲಿವೆ. ಗುಂಡಯ್ಯ ತನ್ನ ಎಡಗೈಯಿಂದ ಶೂಲ ಹಿಡಿದಿದ್ದರೆ, ಬ್ರಹ್ಮಯ್ಯ ಶೂಲಕ್ಕೆ ತಾಗಿದಂತೆ ಕಠಾರಿ ಹಿಡಿದು ಕೈ ಎತ್ತಿದ್ದಾನೆ. ಇವರಿಬ್ಬರ ಪಕ್ಕದಲ್ಲಿ ಆರತಿ ತಟ್ಟಿಗಳನ್ನಿಡಿದ ಗುಂಡಬ್ರಹ್ಮಯ್ಯಗಳ ಪತ್ನಿಯರನ್ನು ಕೆತ್ತಲಾಗಿದೆ. ರಟ್ಟೆ, ಮುಂಗೈಗಳ ಕಡಗಧಾರಿಗಳಾದ ಈ ಶಿಲ್ಪಗಳು ಕಿವಿಗೆ ದುಂಡನೆಯ ಆಭರಣ ಧರಿಸಿಕೊಂಡಿವೆ.

. ಶ್ರೀರಾಮಪುರ ಶಿಲ್ಪ

ಹೊಸದುರ್ಗ ತಾಲೂಕಿನ ಶ್ರೀರಾಮಪುರದ ವೀರಭದ್ರ ದೇವಾಲಯದಲ್ಲಿರುವ ೧೬x೨೨ ಅಳತೆಯ ಶಿಲ್ಪಗಳಿವೆ. ಇವರೀರ್ವರ ನಡುವೆ ಎರಡು ಶೂಲಗಳನ್ನು ನಡೆಲಾಗಿದೆ. ಎಡಗೈಯಲ್ಲಿ ಇಷ್ಟಲಿಂಗವಿಡಿದು ಕೈಯನ್ನು ಶೂಲಕ್ಕೆ ತಾಗಿಸಿದ್ದಾರೆ. ಕಠಾರಿ ಹಿಡಿದ ಬಲಗೈಯನ್ನು ಮೇಲಕ್ಕೆತ್ತಲಾಗಿದೆ. ತಲೆ ತುರುಬು, ಕೊರಳು ಮುಂಗೈಗಳಿಗೆ ರುದ್ರಾಕ್ಷಿಸರ, ಕಾಲಿಗೆ ಕಡಗ, ಪಂಜೆಯನ್ನು ಮೇಲಕ್ಕೆತ್ತಿ ಕಟ್ಟಿದ ಭಂಗಿಯಲ್ಲಿದೆ.

೧೦. ಕುಸ್ಕೂರಿನ ಶಿಲ್ಪ

ಶಿವಮೊಗ್ಗ ಜಿಲ್ಲೆ ಕುಸ್ಕೂರಿನ ಗುಂಡಬ್ರಹ್ಮಯ್ಯಗಳ ಶಿಲ್ಪಗಳು ಈಗ ಶಿವಪ್ಪನಾಯಕನ ಅರಮನೆಯ ವಸ್ತುಸಂಗ್ರಹಾಲಯದಲ್ಲಿವೆ. ೩೪ x ೧೪/ಅಳತೆಯ ಈ ಶಿಲ್ಪಗಳು ಗುಂಡಬ್ರಹ್ಮಯ್ಯಗಳ ಇದುವರೆಗೂ ದೊರೆತ ಶಿಲ್ಪಗಳಲ್ಲಿಯೇ ಸುಂದರವಾದವುಗಳಾಗಿವೆ. ಶೂಲದ ತಳಭಾಗ ಕಂಭದಾಕಾರವಾಗಿದ್ದು ಮೇಲೆ ಹೋದಂತೆ ಮೊನಚಾಗಿವೆ. ಗುಂಡಬ್ರಹ್ಮರು ಶೂಲದ ಮಣಿಯ ಮೇಲೆ ಕುಳಿತು ಕಾಲುಗಳನ್ನು ಇಳಿಬಿಟ್ಟಿದ್ದಾರೆ. ಎಡಗೈ ಇಷ್ಟಲಿಂಗ, ಬಲಗೈ ಕಠಾರಿವಿಡಿದು ಮೇಲಕ್ಕೆತ್ತಲಾಗಿದೆ. ಕೊರಳಲ್ಲಿ ಮಾಲೆ, ತಲೆಗೆ ಶಿರಸ್ತ್ರಾಣ ತಲೆಯ ಮೇಲೆ ಮುತ್ತಿನ ಕುಚ್ಚುಗಳಿಂದ ಶೋಭಿಸುವ ಛತ್ರಿಗಳಿಂದ ಶಿಲ್ಪಗಳು ಕಲಾತ್ಮಕವಾಗಿವೆ.

೧೧. ನೀತಿಗೆರೆಯ ಶಿಲ್ಪ

ಚನ್ನಗಿರಿ ತಾಲೂಕಿನ ನೀತಿಗೆರೆಯ ವೀರಭದ್ರ ದೇವಾಲಯದ ಗರ್ಭಗೃಹದ ಎಡಭಾಗದ ಗೋಡೆಯಲ್ಲಿ ಗುಂಡಬ್ರಹ್ಮಯ್ಯಗಳ ವಿಗ್ರಹವಿದೆ. ೩೪ x ೨೩ ಅಳತೆಯ ಶಿಲ್ಪದಲ್ಲಿ ಸಿಂಹಲಲಾಟ ಅದರ ಮೇಲೆ ಕುಂಭವನ್ನು ಕೆತ್ತಲಾಗಿದೆ. ಬಲಗೈಯಿಂದ ಮುಚ್ಚಿದಂತೆ ಎಡಗೈಯಲ್ಲಿ ಇಷ್ಟಲಿಂಗವಿಡಿದ ಶಿಲ್ಪಗಳ ನಡುವೆ ಎರಡು ಶೂಲಗಳನ್ನು ಊರಲಾಗಿದೆ. ಕೊರಳು, ರಟ್ಟೆ, ಮುಂಗೈಗಳು ರುದ್ರಾಕ್ಷಿ ಸರಗಳಿಂದ ಅಲಂಕಾರಗೊಂಡಿವೆ. ಸೊಂಟಕ್ಕೆ ಖಡ್ಗ, ಕಾಲಿಗೆ ಗಂಡಪೆಂಡೇರ ಧರಿಸಿದ ಈ ಶಿಲ್ಪಗಳ ಅಕ್ಕಪಕ್ಕದಲ್ಲಿ ಶ್ತ್ರೀ ಶಿಲ್ಪಗಳು ಆರತಿ ಹಿಡಿದು ನಿಂತಿವೆ. ಡಾ. ಎಂ. ಚಿದಾನಂತ ಮೂರ್ತಿಯವರು ಗುಂಡಬ್ರಹ್ಮಯ್ಯಗಳೊಂದಿಗೆ ಸತಿಹೋದ ಗುಂಡಾಯಿ-ಅಮರಾಯಿಗಳಾಗಿರಬೇಕೆಂದು ಊಹಿಸುತ್ತಾರೆ (ಸಾಧನೆ. ಸಂಪುಟ ೬, ಸಂಚಿಕೆ ೩, ಪು. ೫೦-೫೧).

೧೨. ಅಸಗೋಡಿನ ಶಿಲ್ಪ

ಜಗಳೂರು ತಾಲೂಕಿನ ಅಸಗೋಡಿನ ಶಂಭುಲಿಂಗೇಶ್ವರ ದೇವಾಲಯದ ರಂಗಮಂಟಪದ ದಕ್ಷಿಣ ಗೋಡೆಗೆ ಜೋಡಿಸಿದ ಶಿಲಾಫಲಕದಲ್ಲಿ ಶಿಲ್ಪವಿದೆ. ೩೧x೧೨ ಅಳತೆಯ ಈ ಶಿಲ್ಪ ನೀತಿಗೆರೆಯ ಗುಂಡಬ್ರಹ್ಮಯ್ಯಗಳ ಮಾದರಿಯಲ್ಲಿ ಕೆತ್ತಲಾಗಿದೆ. ಶೂಲಗಳೆರಡರ ಆಚೀಚೆ ನಿಂತಿರುವ ಗುಂಡಯ್ಯನ ಎಡಗೈ ಶೂಲವನ್ನು ಮುಟ್ಟಿದೆ, ಬಲಗೈ ಲಿಂಗವಿಡಿದಿದೆ. ಇವನ ಪತ್ನಿ ಗುಂಡಾಯಿ ಎಡಗೈಯಲ್ಲಿ ಆರತಿ ತಟ್ಟೆ ಹಿಡಿದಿದ್ದಾಳೆ. ಹಾಗೆಯೇ ಬ್ರಹ್ಮಯ್ಯನ ಬಲಗೈ ಶೂಲಹಿಡಿದರೆ, ಎಡಗೈ ಲಿಂಗವಿಡಿದಿದೆ. ಇವನ ಪತ್ನಿ ಅಮರಾಯಿ ಬಲಗೈಯಲ್ಲಿ ಆರತಿ ತಟ್ಟಿಯನ್ನು ಹಿಡಿದಿದ್ದಾಳೆ. ಕಾಲಿಗೆ ಕಡಗ, ಮುಂಗೈಗೆ ರುದ್ರಾಕ್ಷಿಸರ, ಧರಿಸಿರುವ ಈ ಮೂರ್ತಿಗಳಲ್ಲಿ ಗುಂಡಯ್ಯಗೆ ಮೀಸೆ ಇರುವುದಿಲ್ಲ. ಬ್ರಹ್ಮಯ್ಯಗೆ ಮೀಸೆ ಮೂಡಿಸಲಾಗಿದೆ.

೧೩. ಬುಕ್ಕಾಂಬುಂಧಿಯ ಶಿಲ್ಪ

ತರೀಕೆರೆ ತಾಲೂಕಿನ ಬುಕ್ಕಾಂಬುಧಿ ಗ್ರಾಮದ ಮೂಲ ವಿರೂಪಾಕ್ಷ ದೇವಾಲಯದಲ್ಲಿಯ ಕಂಭದ ಮೇಲಿರುವ ಶಿಲ್ಪ ೧೯ x ೧೩ ಅಳತೆಯಲ್ಲಿದೆ. ಗುಂಡಯ್ಯ ಬ್ರಹ್ಮಯ್ಯರ ನಡುವೆ ಶೂಲಗಳನ್ನು ನಿಲ್ಲಿಸಲಾಗಿದೆ. ಎಡಗೈಯಿಂದ ಶೂಲವಿಡಿದು, ಬಲಗೈಯಲ್ಲಿ ಇಷ್ಟಲಿಂಗಧಾರಿಯಾಗಿರುವ ಗುಂಡಬ್ರಹ್ಮಯ್ಯರುಗಳು ಕಾಲಿಗೆ ಕಡಗ, ಕೊರಳಿಗೆ ಸರ, ಕಿವಿಗೆ ದುಂಡನೆಯ ಆಭರಣ, ಮೇಲಕ್ಕೆತ್ತಿ ಕಟ್ಟಿದ ಪಂಜೆ, ಉದ್ದನೆಯ ಕೂದಲನ್ನು ಜಡೆಹೆಣೆದಂತೆ ಕೆತ್ತಲಾಗಿದೆ. ಎದುರಿಗೆ ವೀರಭದ್ರನ ಮೂರ್ತಿಯಿದೆ.

೧೪. ಗುಬ್ಬಿಯ ಶಿಲ್ಪ

ಗುಬ್ಬಿಯ ಅಮರಗೊಂಡ ಮಲ್ಲಿಜಾರ್ಜುನ ದೇವಾಲಯದಲ್ಲಿಯ ಶಿಲ್ಪವು ತೃಟಿತಗೊಂಡಿದೆ. ಮೂರ್ತಿಗಳ ನಡುವೆ ಶೂಲಗಳೆರಡನ್ನು ನೆಡಲಾಗಿದೆ. ಮೊದಲ ಶಿಲ್ಪದ ಎಡಗೈ ಮಧ್ಯೆ ಭಾಗ ಶೂಲಕ್ಕೆ ಸ್ಪರ್ಶಿಸಿ ಮುಂದೆ ಚಾಚಿದ ಹಸ್ತ, ಬಲಗೈಯಲ್ಲಿ ಇಷ್ಟಲಿಂಗ ಅದೇ ರೀತಿ ಎರಡನೆಯ ಶಿಲ್ಪ ಮೊಣಕೈಯನ್ನು ಶೂಲಕ್ಕೆ ತಾಗಿಸಿ ಕೈಯಲ್ಲಿ ಇಷ್ಟಲಿಂಗ. ಹಿಡಿದ ಭಂಗಿಯಲ್ಲಿದೆ. ಮಡಚಿದ ಎಡಗೈಯ ಹಸ್ತವನ್ನು ಇಷ್ಟಲಿಂಗದ ಹತ್ತಿರ ಚಾಚಲಾಗಿದೆ. ಇವರು ಉಟ್ಟ ಪಂಚೆಯ ನಿರಿಗೆಗಳು ಮೇಲಕ್ಕೆತ್ತಿ ಕಟ್ಟಿದಂತೆ ಕಾಣುತ್ತವೆ.

೧೫. ಹಾರನಹಳ್ಳಿಯ ಶಿಲ್ಪ

ಅರಸೀಕೆರೆ ತಾಲೂಕು ಹಾರನಹಳ್ಳಿಯ ಸೋಮೇಶ್ವರ ದೇವಾಲಯದಲ್ಲಿಯ ರಂಗಮಂಟಪದಲ್ಲಿಯ ದೇವಗೂಡಿನಲ್ಲಿ ಗುಂಡಬ್ರಹ್ಮಯ್ಯಗಳ ಶಿಲ್ಪಗಳಿವೆ. ಉಬ್ಬುಶಿಲ್ಪಗಳಲ್ಲಿ ಕೆತ್ತಲಾದ ಇವುಗಳನ್ನು ಬೇರೆಡೆಯಿಂದ ತಂದಿಡಲಾಗಿದೆ. ವೀರಗಾಸೆ ತೊಟ್ಟ ಗುಂಡಯ್ಯನ ಬಲಗೈಯಲ್ಲಿ ಚೂರಿ ಹಿಡಿದು ಮೇಲಕ್ಕೆತ್ತಿದ್ದರೆ, ಎಡಗೈಯಲ್ಲಿ ಇಷ್ಟಲಿಂಗ ಧರಿಸಿದ್ದಾನೆ. ಬ್ರಹ್ಮಯ್ಯನು ಎಡಗೈಯಲ್ಲಿ ಚೂರಿಹಿಡಿದು ಬಲಗೈಯಲ್ಲಿ ಲಿಂಗಧಾರಿಯಾಗಿದ್ದಾನೆ. ೧೩ x ೨೫ ಅಳತೆಯ ಶಿಲಾಫಲಕದಲ್ಲಿ ಸಣ್ಣ ಪ್ರಮಾಣದ ರಂಧ್ರಗಳನ್ನು ಕೊರೆಯಲಾಗಿದೆ.

೧೬. ದೊಡ್ಡಗದ್ದವಳ್ಳಿ ಶಿಲ್ಪ

ಹಾಸನ ಜಿಲ್ಲೆಯ ದೊಡ್ಡ ಗದ್ದವಳ್ಳಿ ಗ್ರಾಮದ ಶಿವದೇವಾಲಯದ ಮುಖಮಂಟಪದ ಹೊರಗೆ ದ್ವಾರಪಾಲಕರ ರೀತಿಯಲ್ಲಿ ಎರಡು ಪ್ರತ್ಯೇಕ ಶಿಲ್ಪಗಳಿವೆ. ೩೮/x ೧೯/ ಅಳತೆಯ ಒಂದು ಶಿಲ್ಪ, ೩೮ x ೧೭ ಅಳತೆಯ ಇನ್ನೊಂದು ಶಿಲ್ಪಗಳಿಗೆ ಉದ್ದನೆಯ ಕಿರೀಟವನ್ನು ಹಾಕಲಾಗಿದೆ. ಕೊರಳಲ್ಲಿ ರುದ್ರಾಕ್ಷಿ, ಬಲಗೈಯಲ್ಲಿ ಕಠಾರಿ ಹಿಡಿದು ಮೇಲೆತ್ತಿದ ಭಂಗಿ. ಅವರ ಪಕ್ಕದಲ್ಲಿ ಶೂಲವನ್ನು ಕೆತ್ತಲಾಗಿದೆ. ಎಡಗೈಯಲ್ಲಿ ಇಷ್ಟಲಿಂಗ ಧರಿಸಿರುವ ಈ ಶಿಲ್ಪಗಳಿಗೆ ಜನಿವಾರದ ಹಾಗೆ ರುದ್ರಾಕ್ಷಿ ಸರವನ್ನು ಹಾಕಲಾಗಿದೆ.

೧೭. ಯಳಂದೂರ ಶಿಲ್ಪ

ಚಾಮರಾಜನಗರ ಜಿಲ್ಲೆಯ ಯಳಂದೂರಿನ ಗೌರೇಶ್ವರ ದೇವಾಲಯದ ಪೌಳಿಯ ಮಂಟಪದ ಬಲಗಡೆ ಕಂಭದ ಮೇಲೆ ಶಿಲ್ಪವಿದೆ. ಮೂರ್ತಿಗಳ ನಡುವೆ ಒಂದೇ ತ್ರಿಶೂಲ ರೂಪದ ಶೂಲ ಕೆತ್ತಿರುವುದು ವಿಶೇಷ. ಉದ್ದವಾದ ಹೆಣೆದ ಜಡೆ, ತಲೆಗೊಂದು ಆಭರಣದ ಪಟ್ಟಿಕೆಯನ್ನು ಕಟ್ಟಲಾಗಿದೆ. ಸೊಂಟಕ್ಕೆ ಚೂರಿ ಸಿಕ್ಕಿಸಿಕೊಳ್ಳಲಾಗಿದೆ. ಕಾಚಾ ಧರಿಸಿರುವ ಗುಂಡಬ್ರಹ್ಮಯ್ಯಗಳು ಕೊರಳು, ರಟ್ಟೆ, ಮುಂಗೈ ರುದ್ರಾಕ್ಷಿಸರಗಳಿಂದ ಅಲಂಕೃತಗೊಂಡಿವೆ. ಮೊದಲ ಶಿಲ್ಪ ಎಡಗೈಯಲ್ಲಿ ಇಷ್ಟಲಿಂಗ ಹಿಡಿದು ಶೂಲಕ್ಕೆ ತಾಗಿಸಿದ್ದಾನೆ. ಕಠಾರಿ ಧಾರಿಯಾದ ಬಲಗೈಯನ್ನು ಮೇಲಕ್ಕೆತ್ತಲಾಗಿದೆ. ಎರಡನೆ ಶಿಲ್ಪ ಲಿಂಗವಿಡಿದ ಬಲಗೈಯನ್ನು ಮೇಲೆತ್ತಿದ್ದಾನೆ.

೧೮. ನಂದಿಬೆಟ್ಟ

ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟದ ಯೋಗನಂದೀಶ್ವರ ದೇವಾಲಯದಲ್ಲಿ ಗುಂಡಬ್ರಹ್ಮಯ್ಯಗಳ ಶಿಲ್ಪವಿದೆ. ಶೂಲದ ಮೇಲೆ ಕುಳಿತಿರುವ ಮೂರ್ತಿಗಳ ಎಡಗೈಯಲ್ಲಿ ಇಷ್ಟಲಿಂಗವಿದೆ. ಬಲಗೈಯಲ್ಲಿ ಕಠಾರಿ ಹಿಡಿದು ಮೇಲಕ್ಕೆತ್ತಲಾಗಿದೆ. ಮುಂಗೈ, ರಟ್ಟೆ, ಕೊರಳಲ್ಲಿ ರುದ್ರಾಕ್ಷಿಸರ ಕೆತ್ತಲಾಗಿದೆ.

೧೯. ಮೂರ್ಕಿಬಾವಿಯ ಶಿಲ್ಪ

ಬೈಲುಹೊಂಗಲ ತಾಲೂಕಿನ ಮುರ್ಕಿಬಾವಿಯಲ್ಲಿಯ ವೀರಗಲ್ಲಿನಲ್ಲಿ ಗುಂಡಬ್ರಹ್ಮಯ್ಯಗಳ ಶಿಲ್ಪವಿದೆ. ಚೌಕಾಕಾರದ ತಳ ಕಟ್ಟಿನ ಮೇಲೆ ಮೂರು ಕಮಾನುಗಳಿರುವ ಶಿಲ್ಪಗಳಲ್ಲಿ ಮೊದಲ ಕಮಾನಿನಲ್ಲಿ ಗುಂಡಬ್ರಹ್ಮಯ್ಯಗಳು ಎದುರು ಬದುರಾಗಿ ನಿಂತಿದ್ದಾರೆ. ಇಬ್ಬರ ಕೈಯಲ್ಲಿ ಶಿವಲಿಂಗಗಳಿದ್ದು ಮುಂಗೈ, ಕಿವಿ, ಕೊರಳು, ರಟ್ಟೆಗಳಲ್ಲಿ ಧರಿಸಿದ ಆಭರಣ ವಿಶೇಷ ಕೇಶಾಲಂಕಾರಗಳಿಂದ ಕೂಡಿದ ವೀರಗಲ್ಲು ಇದಾಗಿದೆ.

೨೦. ಉಜ್ಜಯನಿ ಶಿಲ್ಪ

ಬಳ್ಳಾರಿ ಜಿಲ್ಲೆಯ ಉಜ್ಜಯನಿ ಕ್ಷೇತ್ರದ ಮರುಳಶಿದ್ದೇಶ್ವರ ದೇವಾಲಯದ ಆವರಣದ ಚಿಕ್ಕದೇವಾಲಯದಲ್ಲಿ ಈ ಶಿಲ್ಪವಿದೆ. ಮೂರ್ತಿಗಳೆರಡರ ನಡುವೆ ಎರಡು ಶೂಲಗಳನ್ನು ನೆಡಲಾಗಿದೆ. ಎಡಗೈಯಲ್ಲಿನ ಇಷ್ಟಲಿಂಗವನ್ನು ಬಲಗೈಯಿಂದ ಮುಚ್ಚಿರುವಂಥ ಭಂಗಿ, ಕಾಲಿಗೆ ಗಂಡಪೆಂಡೇರ ಧರಿಸಲಾಗಿದೆ.

೨೧. ಬುಕ್ಕಸಾಗರದ ಶಿಲ್ಪಗಳು

ಹೊಸಪೇಟೆ ತಾಲೂಕು ಬುಕ್ಕಾಗರದ ವೀರಭದ್ರನ ಗುಡಿಯ ಕಂಭಗಳ ಮೇಲೆ ಈ ಶಿಲ್ಪಗಳಿವೆ. ಇಲ್ಲಿ ಮೂರು ಶಿಲ್ಪಗಳಿವೆ. ಮರೆಹೊಕ್ಕವರ ಕಾಯ್ವೆವೆಂಬ ಕಹಳೆಯ ಮೊಳಗಿನಲ್ಲಿ ತೊಡಗಿದ ಶಿಲ್ಪ, ಶೂಲಕ್ಕೇರಲು ಸಿದ್ಧವಾಗಿರುವ ಶಿಲ್ಪ ಹಾಗೂ ಗುಂಡಬ್ರಹ್ಮಯ್ಯರು ಶೂಲಕ್ಕೇರಿದ ಮೇಲೆ ಅವರ ಪತ್ನಿಯರು ಮಹಾಸತಿಯರಾಗಿರುವುದು, ಶಿವನು ಕೈಲಾಸಕ್ಕೆ ಕರೆದೊಯ್ಯುವ ಶಿಲ್ಪ.

ವೀರಗಾಸೆ ತೊಟ್ಟು, ಉದ್ದನೆಯ ಜಡೆಯನ್ನು ಬಿಟ್ಟು ಬಿರುದಿನ ಕಹಳೆಯನ್ನು ಊದುತ್ತಿರುವ ಗುಂಡಬ್ರಹ್ಮಯ್ಯಗಳು ಮರೆಹೊಕ್ಕವರನ್ನು ಕಾಯುವ ತಮ್ಮ ವ್ರತವನ್ನು ಸಾರಿ ಹೇಳುವಂತೆ ಕಂಡರಿಸಲಾಗಿದೆ. ಎರಡನೆಯ ಶಿಲ್ಪದಲ್ಲಿ ಗುಂಡಬ್ರಹ್ಮಯರು ಎರಡು ಶೂಲಗಳನ್ನು ಬಲಗೈಯಿಂದ ಹಿಡಿದು, ಎಡಗೈಯಲ್ಲಿ ಇಷ್ಟಲಿಂಗ ಧಾರಿಗಳಾಗಿ ನಿಂತಿದ್ದಾರೆ. ಇನ್ನು ಮೂರನೆಯ ಶಿಲ್ಪ ವಿಶೇಷವಾಗಿದೆ. ಗುಂಡಬ್ರಹ್ಮಯ್ಯರು ಶೂಲಕ್ಕೇರಿದಾಗ ಅವರ ಪತ್ನಿಯರು ಸತಿಹೋದುದನ್ನು ಇಲ್ಲಿ ನಿರೂಪಿಸಲಾಗಿದೆ. ಶೂಲದ ಮೇಲೆ ಗುಂಡಬ್ರಹ್ಮಯ್ಯರು ಕುಳಿತಿದ್ದಾರೆ. ಅವರ ಮೇಲ್ಭಾಗದಲ್ಲಿ ಶಿವ ಪ್ರತ್ಯೇಕ್ಷನಾಗಿದ್ದಾನೆ. ಶೂಲದ ಕೆಳಗೆ ಗುಂಡಾಯಿ ಅಮರಾಯಿಯರು ತಮ್ಮ ತಲೆಯನ್ನು ಕಡಿದುಕೊಂಡು ತಟ್ಟೆಯಲ್ಲಿಟ್ಟು ನಿಂತಿರುವ ಚಿತ್ರ ಮನೋಹರವಾಗಿದೆ. ಕಾಲನ್ನು ಹಿಂದಕ್ಕೆ ಮಡಚಿ ಕುಕ್ಕರಗಾಲಲ್ಲಿ ಕುಳಿತಿರುವ ಗುಂಡಬ್ರಹ್ಮಯ್ಯಗಳ ಶಿಲ್ಪ ಅಪೂರ್ವವಾಗಿದೆ.

೨೨. ಗರಗ ನಾಗಲಾಪುರದ ಶಿಲ್ಪಗಳು

ಹೊಸಪೇಟೆ ತಾಲೂಕು ಗರಗ ನಾಗಲಾಪುರ ಗ್ರಾಮದ ಅರಳಿಮರದ ಕೆಳಗಿನ ಎರಡು ಪ್ರತ್ಯೇಕ ಶಿಲೆಗಳ ಮೇಲೆ ಕಂಡರಿಸಿದ ಶಿಲ್ಪಗಳನ್ನು ಕನ್ನಡ ವಿಶ್ವವಿದ್ಯಾಲಯದ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ. ಎಡಗೈಯಲ್ಲಿ ಇಷ್ಟಲಿಂಗ ಪಕ್ಕದಲ್ಲಿ ಶೂಲ, ಕೊರಳು, ರಟ್ಟೆ, ಮುಂಗೈಗಳಲ್ಲಿ ರುದ್ರಾಕ್ಷಿ ಸರ ಹಾಕಲಾಗಿದೆ. ನಿಡಿಜಾಬಿಟ್ಟು ನಿಂತಿರುವ ಮೂರ್ತಿಗಳು ಪಂಜೆಯನ್ನು ಮೊಣಕಾಲು ಮೇಲಕ್ಕೆ ಎತ್ತಿ ಕಟ್ಟಿದ ಭಂಗಿಯಲ್ಲಿವೆ.

೨೩. ಚಿಕ್ಕಪುರದ ಶಿಲ್ಪ

ಚಿತ್ರದುರ್ಗ ಜಿಲ್ಲೆ ಚಿಕ್ಕಪುರ ಗ್ರಾಮದ ವೀರಭದ್ರದೇವರ ಹೊರಗೋಡೆಗೆ ಗುಂಡಬ್ರಹ್ಮಯ್ಯಗಳ ಶಿಲ್ಪವನ್ನು ಆನಿಸಿಡಲಾಗಿದೆ. ೩೮ x ೨೭ ಅಳತೆಯ ಈ ಶಿಲ್ಪದಲ್ಲಿ ಗುಂಡಬ್ರಹ್ಮರ ನಡುವೆ ಎರಡು ಶೂಲಗಳನ್ನು ನೆಡಲಾಗಿದೆ. ಗುಂಡಯ್ಯ ಎಡಗೈಯಿಂದ ಶೂಲ, ಬಲಗೈಯಿಂದ ಇಷ್ಟಲಿಂಗ ಹಿಡಿದಿದ್ದರೆ, ಬ್ರಹ್ಮಯ್ಯ ಬಲಗೈಯಿಂದ ಶೂಲ, ಎಡಗೈಯಿಂದ ಇಷ್ಟಲಿಂಗ ಹಿಡಿದಿದ್ದಾನೆ. ಕಾಲಿಗೆ ಗಂಡಪೇಡೇರ, ರಟ್ಟೆ, ಮುಂಗೈಗಳಿಗೆ ಕಡಗಗಳನ್ನು ಧರಿಸಿದ್ದಾರೆ. ವೀರಗಾಸೆಯಂತೆ ಪಂಚೆ ಉಡಿಸಲಾಗಿದೆ.

ಹೀಗೆ ನಾಡಿನಾದ್ಯಂತ ಗುಂಡಬ್ರಹ್ಮಯ್ಯಗಳ ಶಿಲ್ಪಗಳು ಕಾಣಸಿಗುವುದನ್ನು ಗಮನಿಸಿದರೆ ಇವರ ಆರಾಧನೆ, ಅನುಷ್ಟಾನಗಳು ಕರ್ನಾಟಕದಾದ್ಯಂತ ಆಚರಣೆಯಲ್ಲಿರುವುದು ಸ್ಪಷ್ಟವಾಗುತ್ತದೆ. ಇವರನ್ನು ಕುರಿತು ಚೌಪದಿ, ತ್ರಿಪದಿ, ಸಾಂಗತ್ಯ, ಗದ್ಯ, ನಾಂದ್ಯ, ಹಾಡು ಮತ್ತು ಕಥೆ ರೂಪದ ಸುಮಾರು ೬೦೦ ಪುಟಗಳಷ್ಟು ಸಾಹಿತ್ಯ ಲಭ್ಯವಾಗಿದೆ. ಈ ಸಾಹಿತ್ಯದ ಎಲ್ಲ ಸಂಗತಿಗಳು ಮನೋಂಬುಗುವಂತೆ ಶಿಲ್ಪಗಳಲ್ಲಿ ಕಂಡರಿಸಿದ ರೀತಿ ಶಿಲ್ಪಶಾಸ್ತ್ರ ಸಾಹಿತ್ಯಕ್ಕೆ ಹಿಡಿದ ಕನ್ನಡಿಯೆನಿಸಿದೆ. ಒಂದು ಕಾಲಕ್ಕೆ ‘ಶಿಲ್ಪ’ ಅಥವಾ ‘ಚಿತ್ರ’ ಭಾಷಾ ಸಂವಹನ ಮಾಧ್ಯಮಗಳಾಗಿದ್ದವು. ಹೀಗಾಗಿ ಸಾಹಿತ್ಯ ಭಾಷೆಯನ್ನು ಶಿಲ್ಪಭಾಷೆಯಲ್ಲಿ ತಿಳಿಸುವುದರ ಜೊತೆಗೆ ಅವುಗಳನ್ನು ದೈವೀಸ್ಥಾನದಲ್ಲಿಟ್ಟು ಆರಾಧಿಸುವುದರ ಮೂಲಕ ಅವರ ಬದುಕಿನ ಆದರ್ಶಗಳನ್ನು ಬಿತ್ತರಿಸಿದರು. ಈ ಕಾರಣವಾಗಿ ಶಿಲ್ಪಗಳಿಗೆ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಚಾರಿತ್ರಿಕ ಸ್ಥಾನಮಾನಗಳು ಲಭಿಸುತ್ತವೆ. ಹೀಗೆ ಮೇಲೆ ಪ್ರಸ್ತಾಪಿಸಲಾದ ಶಿಲ್ಪಗಳಲ್ಲದೆ ಇನ್ನೂ ಹೆಚ್ಚಿನ ಪ್ರಮಾಣದ ಶಿಲ್ಪಗಳು ಶೋಧನೆಯಾಗುತ್ತಲೇ ಇವೆ. ಇದರಿಂದಾಗಿ ಗುಂಡಬ್ರಹ್ಮಯ್ಯಗಳು ಆರಾಧ್ಯದೈವವಾಗಿ ಒಂದು ಕಾಲಕ್ಕೆ ನಾಡವರನ್ನು ಆಳಿರುವುದರಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ.

. ಗುಂಡಬ್ರಹ್ಮಯ್ಯರ ಕಾವ್ಯ ಮತ್ತು ಸಾಂಸ್ಕೃತಿಕ ಅನನ್ಯತೆ

ಮಧ್ಯಕಾಲೀನ ಕರ್ನಾಟಕದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಬದುಕನ್ನು ನಿರೂಪಿಸುವಲ್ಲಿ ಕುಮಾರರಾಮ ಸಾಂಗತ್ಯ, ನಿಂಬಸಾಮಂತ ಚರಿತೆ, ಮಾಲ್ಲೆಬೊಮ್ಮಯ್ಯಗಳ ಕಾವ್ಯಗಳಂತೆ ಗುಂಡಬ್ರಹ್ಮಯ್ಯಗಳ ಚರಿತ್ರೆಗೂ ಮಹತ್ವದ ಸ್ಥಾನ ಸಲ್ಲುತ್ತದೆ. ಐತಿಹಾಸಿಕ ವ್ಯಕ್ತಿಗಳಾಗಿದ್ದ ಗುಂಡಬ್ರಹ್ಮಯ್ಯರು ಬೇಡ ಜನಾಂಗದವರಾಗಿದ್ದು ಶರಣಚಳವಳಿಗೆ ಪ್ರಭಾವಿತರಾಗಿ ವೀರವ್ರತವನ್ನು ಬದುಕಿದವರಾಗಿದ್ದಾರೆ. ಆಚರಣೆ, ಆರಾಧನೆ, ಜನವದಂತಿ, ನಂಬಿಕೆಗಳಂಥ ಮೌಖಿಕ ಹಾಗೂ ಸಾಹಿತ್ಯ-ಶಿಲ್ಪಗಳಂಥ ಲಿಖಿತ ಸಂಪ್ರದಾಯಗಳಲ್ಲಿ ದಾಖಲಾಗುತ್ತಾ ಬಂದಿದ್ದಾರೆ. ಈ ಕಾರಣವಾಗಿ ಭೂತಕಾಲದ ಜೀವನ ಪದ್ಧತಿಯನ್ನು ವರ್ತಮಾನದಲ್ಲಿ ತಿಳಿಸಿಕೊಡುವುದರ ಮೂಲಕ ಪಾರಂಪರಿಕ ಪ್ರಜ್ಞೆಯನ್ನು ಈ ಕಾವ್ಯಗಳು ಪ್ರತಿನಿಧಿಸುತ್ತವೆ.

ಧಾರ್ಮಿಕವಾಗಿ ಆ ಕಾಲದ ಅನೇಕ ಸ್ಥಿತ್ಯಂತರಗಳು ಗುಂಡಬ್ರಹ್ಮಯ್ಯಗಳ ಕಾವ್ಯಗಳಲ್ಲಿ ಕಂಡುಬರುತ್ತವೆ. ಕಲ್ಯಾಣಕ್ರಾಂತಿಯ ನಂತರ ನೆಲದ ಮರೆಯ ನಿಧಾನದಂತೆ ಶರಣ ಸಾಹಿತ್ಯ, ಸಂಸ್ಕೃತಿಯನ್ನು ಓರಂಗಲ್ಲಿನ ಕಾಕತೀಯರು ಸಂರಕ್ಷಿಸಿಕೊಂಡು ಬಂದರು. ಆದರೆ ಈ ಸತ್ಯಾಸತ್ಯತೆಯನ್ನು ಓರೆಗೆ ಹಚ್ಚಿನೋಡಲು ಇಂಥ ಕಾವ್ಯಗಳು ಪ್ರಮುಖ ಆಕರಗಳಾಗುತ್ತವೆ. ಶಿವಶರಣರ ಕಥೆಗಳು ಮತ್ತು ಪುರಾಣ ಕಲ್ಪಿತ ಶಿವನ ೨೫ ಲೀಲೆಗಳು, ಶೂಲ ಮೆರೆಸುವ ಹಬ್ಬಗಳು, ಬೆನ್ನಸಿಡಿಯೇರಿಸುವ ಆಚರಣೆಗಳು, ಅಗ್ನಿಕುಂಡ ಹೋಗುವ ಸಂಪ್ರದಾಯಗಳು, ವಗ್ಗಯ್ಯ, ವೀರಗಾಸೆ, ಸಾರುವಯ್ಯಗಳಂಥ ಧಾರ್ಮಿಕ ವೃತ್ತಿಗಾಯಕರು ಆ ಕಾಲದ ವಚನಸಾಹಿತ್ಯ ಹಾಗೂ ಆಗಮಸಾಹಿತ್ಯಗಳ ಧಾರ್ಮಿಕ ಅನುಸಂಧಾನದ ಪ್ರತಿಬಿಂಬಗಳಾಗಿವೆ. ಇದರಿಂದ ಈ ಕಾವ್ಯ ಸೃಷ್ಟಿಯಾದ ಕಾಲದಲ್ಲಿ ಕರ್ನಾಟಕ, ಆಂಧ್ರ ಭಾಗಗಳಲ್ಲಿ ಶೈವೋಪಾಸನೆಯ ಬಿರುಸಿನ ಚಟುವಟಿಕೆಗಳು ನಡೆದಿರುವುದನ್ನು ಗುರುತಿಸಬಹುದಾಗಿದೆ.

ರಾಜಕೀಯವಾಗಿ ಅನೈಕ್ಯತೆಯ ಆಗರವಾಗಿದ್ದ ಆ ದಿನಮಾನಗಳಲ್ಲಿ ಮತಾಂತರ, ಪ್ರಕ್ರಿಯೆಗಳು, ಪರಸ್ಪರ ಧ್ವೇಷಾರೋಪಗಳು, ಕಪ್ಪಕಾಣಿಕೆ ಸ್ವೀಕಾರ, ಅರಸುಮನೆತನ ಉಲ್ಲೇಖ ಅವರ ಸಾಮಾಜಿಕ ಕಾರ್ಯಗಳನ್ನು ಕಾವ್ಯಗಳು ಪಟ್ಟಿ ಮಾಡಿಕೊಡುತ್ತವೆ. ಬಾಗಿಲ ಗೊಲ್ಲರು, ಓಲಗಚಾವಡಿ, ತಳವಾರ ಗಟ್ಟಿ, ಕಳ್ಳಸಂಧಿ, ಪೆಟಲಂಬು, ಹುಲಿಮುಖ ಡೆಂಕಣೆ, ಕವಣಿ, ಪೌಜು, ಕನ್ನಗತ್ತಿ ಮುಂತಾದ ಉಲ್ಲೇಖಗಳು ಓರಂಗಲ್ಲಿನ ಅರಮನೆಯ ವರ್ಣನೆಯನ್ನು ಬಣ್ಣಿಸುತ್ತವೆ.

ಸಾಮಾಜಿಕವಾಗಿ ಭಾವುಕರು, ಭಕ್ತಿಜನಶೀಲರು, ಮೇಲಾಗಿ ಕೋವಿದರಾಗಿದ್ದರು. ಕೌಟುಂಬಿಕವಾಗಿ ಇಬ್ಬರ ಹೆಂಡಿರ ಗೊಡವೆಗಳಿಂದಲು ದಿಬ್ಬ ದೇಹವು ಬರಲೇಸು ಎಂದು ರೋಷಿ ಹೋಗಿರುವ ಜನರಿದ್ದರು. ಕುಲವಿಹೀನಿಯ ತಂದು ತಲೆಯನೇರಿಸಿಕೊಂಡ ಎಂಬ ಗಾದೆ ನುಡಿ ಅಂದಿನ ಕೆಳವರ್ಗದ ಜನರನ್ನು ಕುರಿತು ಉನ್ನತ ವರ್ಗದ ಉನ್ನತ ವರ್ಗ ತೆಳೆದಿದ್ದ ಭಾವವನ್ನು ಸೂಚಿಸುತ್ತದೆ. ಕಷ್ಟಬಂದಾಗ ಅನ್ಯರಿಂದ ಸಾಲ ಪಡೆದು ತೀರಿಸಲಾಗದ ಅಸಹಾಯಕರು ಸಮಾಜದಲ್ಲಿ ತುಂಬಿದ್ದರು. ಋಣಭಾರದಿಂದ ಸತ್ತರೆ ಮುಂದಿನ ಜನ್ಮದಲ್ಲಿ ಕತ್ತೆ, ಕುದುರೆ ಹಾಗೂ ಎತ್ತುಗಳಾಗಿ ದುಡಿದು ಸಾಲ ತೀರಿಸುತ್ತಾರೆಂಬ ನಂಬಿಕೆ ಪ್ರಚಲಿತದಲ್ಲಿತ್ತು. ಗವುಳಿ, ಶಕುನ, ಹಸುಬನಾಡಿದ ಶಕುನಗಳಲ್ಲದೆ, ಅಪರಾಧಿಗಳಿಗೆ ಕಾದ ಎಣ್ಣೆಯ ಕೊಪ್ಪರಿಗೆಯೊಳಗಿಸುವ ತೈಲದಿವ್ಯ, ಹುತ್ತಕ್ಕೆ ಕೈಯನಿಕ್ಕಿಸುವ ನಾಗದಿವ್ಯ, ವಿಷ ಸೇವಿಸುವ ವಿಷದಿವ್ಯ, ಬೆಂಕಿ ಹೊಗುವ ಅಗ್ನಿದಿವ್ಯ ಇತ್ಯಾದಿ ಶಿಕ್ಷೆಗಳು ಜಾರಿಯಲ್ಲಿದ್ದವು. ಒಡನುಂಡು ಮಿತ್ರನ ಮಡದಿಗೆ ಕೂಡುವುದು, ಕೊಬ್ಬಿ ಪರಸತಿಗೆ ಅಪ್ಪುವುದು, ತಂದೆ ತಾಯಿಗಳನೊದೆಯುವ ಪಾತರಕ ಚಿತ್ರಣಗಳು ಯಥೇಷ್ಟವಾಗಿ ಸಿಗುತ್ತವೆ. ಲೋಕೋಪಕಾರಕವಾಗಿ ಅಗ್ಗಿಷ್ಠಿಕೆ, ಅನ್ನಛತ್ರ, ಅರವಟ್ಟಿಗೆಗಳು ನಿರ್ಮಾಣಗೊಳ್ಳುತ್ತಿದ್ದವು.

ಗಂಧಿಗರು, ಚಿಪ್ಪಿಗರು, ಕಂಚುಗಾರರು, ಮಾಲಿಗರು, ಗಾಣಿಗರು, ರತ್ನದಂಗಡಿ, ದವಸದಂಗಡಿ, ಎಲೆ ಅಡಿಕೆಗಳಂಗಡಿ, ಉತ್ತಮವಾದ ಎಳ್ಳು ಕುಸುಬೆ ಎಣ್ಣಿಯಂಗಡಿಗಳು ಸಾಲುಸಾಲಾಗಿ ಸಂಯೋಜನೆಗೊಂಡಿರುವ ವರ್ತಕ ಸಮುದಾಯವನ್ನು ಪರಿಚಯಿಸುತ್ತವೆ. ಕವಡೆ ಕಬ್ಬಿನ ಜೂಜಾಟ, ತೆಂಗಿನಕಾಯಿಯ ಜೂಟಾಗಳು ಅಂದಿನ ಸಾಂಸ್ಕೃತಿಕ ಬದುಕನ್ನು ಪ್ರತಿನಿಧಿಸುತ್ತವೆ. ಸೊಳೆಗೇರಿಗಳು ಅಲ್ಲಿಯ ಹರೆ-ಮುದಿ ಸೂಳೆಯರು, ಅವರ ವ್ಯವಹಾರಗಳು ಸಾಮಾಜಿಕ ಅನಿಷ್ಠ ಪದ್ಧತಿಗಳ ಅಧ್ಯಯನಕ್ಕೆ ಇಂದು ಆಕರಗಳಾಗುತ್ತವೆ. ಸ್ತ್ರೀಯರು ಧರಿಸುವ ಕಾಂತಾವಳಿ ಸೀರೆ, ನೇತ್ರಾವಳಿ ಸೀರೆ, ಕುಮುದಾವಳಿ ಸೀರೆ, ಮಕ್ಷಾವಳಿ ಸೀರೆ, ಚೌಕಳಿ ಸೀರೆಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದ್ದವು. ಎಮ್ಮೆ, ಮೊಸಳೆ, ಕೋಲುಮೊಸಳೆ, ಹೆಮ್ಮೊಸಳೆ ಹಾಗೂ ಹಾವು, ಮೀನು, ಮರಿಮೀನು, ಮುರಿಗೋಡಮೀನು, ಹಂದಿಮೀನು, ತುರುಗಿಮೀನು ಮುಂತಾದ ಸಸ್ತನಿಗಳನ್ನು ನೋಡಬಹುದು.

ದೇಶಿ ಭಾಷೆ, ಛಂದಸ್ಸುಗಳಿಂದ ಅಧ್ಯಯನ ಯೋಗ್ಯವಾದ ಕಾವ್ಯಗಳಿದ್ದವು. ಬೆನ್ನಚರ್ಮ ಸುಲಿ, ಮರೆಹೊಕ್ಕವರ ಕಾಯಿ, ಹಗ್ಗಚಿಲಕಣಿ, ಗಡ್ಡಕ್ಕೆ ಗಂಟಿಕ್ಕು ಮುಂತಾದ ನುಡಿಗಳು ಪ್ರಾದೇಶಿಕ ವೈಶಿಷ್ಟ್ಯವನ್ನು ಅನಾವರಣಗೊಳಿಸುತ್ತವೆ. ಸ್ಥಳನಾಮ, ವ್ಯಕ್ತಿನಾಮ ಸ್ವತಂತ್ರ ಅಧ್ಯಯನಕ್ಕೆ ಈ ಕೃತಿಗಳಲ್ಲಿ ಇಂಬು ದೊರೆಯುತ್ತದೆ. ಮಹತ್ವದ ಸಂಗತಿಯೆಂದರೆ ಓರಂಗಲ್ಲಿನ ಪರಿಸರದ ಶೂಲದ ಹಬ್ಬ ಕಂಪ್ಲಿ ಪರಿಸರದಲ್ಲಿ ಪ್ರಚಲಿತವಾದ ಸಂಗತಿಯನ್ನು ಹೊಸಕುಮಾರರಾಮನ ಸಾಂಗತ್ಯದಲ್ಲಿ ಒಂದು ಸಂಧಿ ಪೂರ್ಣ ತಿಳಿಸುತ್ತದೆ. ಹೀಗಾಗಿ ಮಧ್ಯಕಾಲೀನ ‘ಕರ್ನಾಟಕಾಂಧ್ರ’ ಸಾಂಸ್ಕೃತಿಕ ರಾಯಭಾರತ್ವದ ಅಧ್ಯಯನಕ್ಕೆ ಹೊಸ ಕುಮಾರರಾಮನ ಸಾಂಗತ್ಯದ ಶೂಲದ ಹಬ್ಬದ ಪ್ರಸ್ತಾಪ ಮುಡಿಕಿರೀಟವಾದರೆ, ಗುಂಡಬ್ರಹ್ಮಯ್ಯಗಳ ಶೂಲಕ್ಕೇರಿಸುವ ಕಥಾನಕ ಅಡಿದಾವರೆಯಾಗಿದೆ. ಹಾಗೆಯೇ ಕರ್ನಾಟಕದಾದ್ಯಂತ ದೊರೆಯುವ ಗುಂಡಬ್ರಹ್ಮಯ್ಯಗಳ ಶಿಲ್ಪಗಳು ಅಂತರ್ಶಿಸ್ತೀಯ ಅಧ್ಯಯನಕ್ಕೆ ಮಹತ್ವದ ಆಕರಗಳಾಗಿವೆ.

ಹೀಗೆ ಮಧ್ಯಕಾಲೀನ ಕರ್ನಾಟಕ ಜೀವನದ ಸಮಗ್ರ ಮುಖಗಳ ಅಧ್ಯಯನಕ್ಕೆ ಮಹತ್ವದ ಕೃತಿಗಳಾಗಿವೆ. “ಗುಂಡಬ್ರಹ್ಮಯ್ಯಗಳ ಸಾಹಿತ್ಯ”.

. ಸಂಪಾದನೆಯ ವೈಧಾನಿಕತೆ

ಗುಂಡಬ್ರಹ್ಮಯ್ಯಗಳ ಸಮಗ್ರ ಸಾಹಿತ್ಯ ಸಂಪುಟದಲ್ಲಿ ೬ ಕಾವ್ಯಗಳು ಸಮಾವೇಶಗೊಂಡಿವೆ. ಇವುಗಳಲ್ಲಿ ಘನಪತಿರಾಯನ ಕಥೆ (ನೀಲಗಾರರ ಹಾಡು) ಎಂಬ ಮೌಖಿಕ ಪಾಠ, ಉಳಿದಂತೆ ತ್ರಿಪದಿ, ಚೌಪದಿ, ಸಾಂಗತ್ಯ, ಷಟ್ಪದಿ ಹಾಗೂ ಗದ್ಯರೂಪದ ಲಿಖಿತ ಪಾಠಗಳೆಂದು ವರ್ಗೀಕರಿಸಿಕೊಳ್ಳಬಹುದು.

ಮೊದಲನೆಯದಾಗಿ, ‘ಗುಂಡಬ್ರಹ್ಮಯ್ಯಗಳ ತ್ರಿಪದಿ’ ಸಂಪಾದನೆ. ೧೯೭೪ರಲ್ಲಿ ಡಾ. ವಿ. ಶಿವಾನಂದ ಅವರು ಗುಂಡಬ್ರಹ್ಮಯ್ಯಗಳ ಚರಿತ್ರೆ ಹೆಸರಿನಲ್ಲಿ ಈ ಕೃತಿ ಸಂಪಾದಿಸಿದ್ದಾರೆ. ಆಗ ಅವರು ೧೪ ಪ್ರತಿಗಳಿರುವುದನ್ನು ತಿಳಿಸಿ ಕರ್ನಾಟಕ ವಿಶ್ವವಿದ್ಯಾಲಯದ ವಚನ ಭಾಂಡಾರದ ತಾಡೋಲೆ (ನಂ. ೪)ಯನ್ನು ಮೂಲ ಪಾಠವಾಗಿರಿಸಿಕೊಂಡು ಲಕ್ಕುಂಡಿ ಬದ್ನಿಮಠದ ಪ್ರತಿಯನ್ನು ಪರಿಷ್ಕರಿಸಿ ಸಂಪಾದಿಸಿದ್ದಾರೆ. ಹೀಗಾಗಿ ೩ ಸಂಧಿಯ ೫೮೪ ಪದ್ಯಗಳ ವ್ಯಾಪ್ತಿಯನ್ನು ಅವರ ಕೃತಿ ಹೊಂದಿದೆ. ನಾನು ಡಾ. ವಿ. ಶಿವಾನಂದ ಅವರ ಸಂಪಾದಿತ ಕೃತಿಯನ್ನು ಇಟ್ಟುಕೊಂಡು ಮೈಸೂರು ವಿಶ್ವವಿದ್ಯಾಲಯದ (ಕೆ.ಬಿ. ೩೫೧/೧ ಕಾಗದ) ಪ್ರತಿಯನ್ನು ಪರಿಷ್ಕರಿಸಿದ್ದೇನೆ. ಇವುಗಳ ಜೊತೆಗೆ ಕನ್ನಡ ವಿಶ್ವವಿದ್ಯಾಲಯದ (ತಾಳೆಪ್ರತಿ ೬೯೧), ಮೈಸೂರು ವಿಶ್ವವಿದ್ಯಾಲಯದ (ತಾಳೆಪ್ರತಿ ಕೆ. ೭೦೯), ಧರ್ಮಸ್ಥಳದ (ತಾಳೆಪ್ರತಿ ೧೩೫೮/೧) ಪ್ರತಿಗಳನ್ನು ಗಮನಿಸಿದ್ದೇನೆ. ಒಟ್ಟು ೪ ಸಂಧಿಯ ೭೯೯ ಪದಗಳ ಸಾಹಿತ್ಯವನ್ನು ಈ ಸಂಪುಟದಲ್ಲಿ ನೀಡಲು ಸಾಧ್ಯವಾಗಿದೆ. ಇದರಿಂದ ಡಾ. ಶಿವಾನಂದ ಅವರಿಗಿಂತ ೨೧೫ ಪದಗಳು ಹಚ್ಚು ಸೇರ್ಪಡೆಗೊಂಡತಾಯಿತು.

ಎರಡನೆಯದಾಗಿ, ‘ಗುಂಡಬ್ರಹ್ಮಯಗಳ ಚೌಪದಿ’ ಸಂಪಾದನೆ, ಕನ್ನಡ ವಿಶ್ವವಿದ್ಯಾಲಯದ (ಕಾಗದ ಪ್ರತಿ ೪೭೦.೪) ಪ್ರತಿಯನ್ನು ಬಿಟ್ಟರೆ ಉಳಿದಂತೆ ಬೇರೆಡೆಗೆ ಈ ಪ್ರಕಾರದಲ್ಲಿ ಸಾಹಿತ್ಯ ನನಗೆ ಕಂಡುಬರಲಿಲ್ಲ. ಈ ಕಾರಣವಾಗಿ ನಮ್ಮ ವಿಶ್ವವಿದ್ಯಾಲಯದ ಏಕೈಕ ಪ್ರತಿಯನ್ನೇ ಪರಿಷ್ಕರಿಸಿ ೧೪೮ ಪದಗಳನ್ನು ಸಂಪಾದಿಸಿ ಕೊಟ್ಟಿದ್ದೇನೆ.

ಮೂರನೆಯದಾಗಿ, ‘ಗುಂಡಬ್ರಹ್ಮಯ್ಯಗಳ ಸಾಂಗತ್ಯ’ ಸಂಪಾದನೆ. ಧರ್ಮಸ್ಥಳದ (ತಾಳಗರಿ ೪೨೯/೨)ಪ್ರತಿಯ ಸಹಾಯದಿಂದ ಸಮಗ್ರವಾಗಿ ದೊರೆತ ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಕೇಂದ್ರದ (ತಾಡೋಲೆ-೩೫) ಪ್ರತಿಯನ್ನು ಪರಿಷ್ಕರಿಸಿದ್ದೇನೆ. ೧೮ ಸಂಧಿಯ ೧೬೧೩ ಪದ್ಯಗಳ ವ್ಯಾಪ್ತಿಯನ್ನು ಈ ಕೃತಿ ಪಡೆದುಕೊಂಡಿದೆ.

ನಾಲ್ಕನೆಯದಾಗಿ ‘ಗುಂಡಬ್ರಹ್ಮಯ್ಯಗಳ ಗದ್ಯ’ ಸಂಪಾದನೆ. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕೋಗಳಿಯ ಚಕ್ರಸಾಲಿ ದೊಡ್ಡವೀರಪ್ಪನವರ ಮನೆಯಲ್ಲಿ ನಾನು ಸಂಗ್ರಹಿಸಿದ ಪ್ರತಿ. ಈಗ ಕನ್ನಡ ವಿಶ್ವವಿದ್ಯಾಲಯ ಭಂಡಾರದಲ್ಲಿ (ಕಾಗದ ೨೬೩) ಸಂರಕ್ಷಿಸಲಾಗಿದೆ. ಗುಂಡಬ್ರಹ್ಮಯ್ಯರ ಜೊತೆಗೆ ಕುಂಬಾರ ಗುಂಡಯ್ಯರ ಕಥಾ ನಿರೂಪಣೆಯನ್ನೊಳಗೊಂಡ ಈ ಪ್ರತಿಯ ಪಾಠವನ್ನು ಪರಿಷ್ಕರಿಸಿ ನೀಡಲಾಗಿದೆ.

ಐದನೆಯದಾಗಿ ‘ಶರಣರಿಗೆ ಶರಣಾರ್ಥಿ ನಾಂದ್ಯ’ ಸಂಪಾದನೆ, ಇದನ್ನು ಚೇರಮಾಂಕನ ಕಾವ್ಯವೆಂದು ಕರೆಯಲಾಗಿದೆ. ಶಿವಶರಣರ ನಿಷ್ಠೆ ವ್ರತಗಳನ್ನು ಗುಣಗಾನ ಮಾಡುವ ಈ ಕೃತಿಯಲ್ಲಿ ಗುಂಡಬ್ರಹ್ಮಯ್ಯರಿಗೆ ೩ ಸಂಧಿಗಳನ್ನು ಮೀಸಲಿರಿಸಿದ್ದಾನೆ. ಕನ್ನಡ ವಿಶ್ವವಿದ್ಯಾಲಯದ (ತಾಡೋಲೆ ೨೯೪) ಹಸ್ತಪ್ರತಿ ಭಂಡಾರದಲ್ಲಿರುವ ಈ ಕೃತಿಯನ್ನು ಪರಿಷ್ಕರಿಸಿ ೬೮ ಷಟ್ಪದಿಗಳನ್ನು ಸಂಪಾದಿಸಾಗಿದೆ.

ಆರನೆಯದಾಗಿ ‘ಘನಪತಿರಾಯನ ಕಥೆ’ (ನೀಲಗಾರರ ಹಾಡು) ಸಂಪಾದನೆ. ೧೯೮೨ರಲ್ಲಿ ಡಾ. ಜಿ. ಶಂ. ಪರಮಶಿವಯ್ಯನವರು ಸಂಪಾದಿಸಿದ ‘ಕನ್ನಡ ವೃತ್ತಿಗಾಯಕರ ಕಾವ್ಯಗಳು’ ಎಂಬ ಕೃತಿಯಲ್ಲಿ ಇದು ಪ್ರಕಟವಾಗಿದೆ. ಇದನ್ನು ಪರಿಷ್ಕರಿಸಿ ಸಂಪುಟದಲ್ಲಿ ಸೇರಿಸಿಕೊಳ್ಳಲಾಗಿದೆ.

ಏಳನೆಯದಾಗಿ, ‘ಕನ್ನಡ ಕಾವ್ಯ-ಪುರಾಣಗಳಲ್ಲಿ ಪ್ರಸ್ತಾಪವಾದ ಪಾಠಗಳ’ ಸಂಪಾದನೆ. ಇದುವರೆಗೆ ಪ್ರಾಸಂಗಿಕ ಪ್ರಸ್ತಾಪಗೊಂಡ ಕನ್ನಡ ಕಾವ್ಯ-ಪುರಾಣಗಳಲ್ಲಿಯ ಪದ್ಯಗಳು ಮುಂದಿನ ಅಧ್ಯಯನಕಾರರಿಗೆ ಒಂದೆಡೆ ದೊರೆಯಬೇಕೆಂಬ ಕಾರಣವಾಗಿ ಆ ಪಾಠ ಭಾಗಗಳನ್ನು ಅನುಬಂಧದಲ್ಲಿ ಆಯ್ದುಕೊಡಲಾಗಿದೆ.

ದೇಶಿ ಕಾವ್ಯ ಸಂಪಾದನೆಯಲ್ಲಿ ಕಡಿಮೆ ಪ್ರತಿಗಳನ್ನು ಬಳಸಿಕೊಂಡಷ್ಟು ಕವಿಯ ನಿಜ ಪಾಠವನ್ನು ನಿರ್ಧರಿಸಿಕೊಡಲು ಸಾಧ್ಯವಾಗುತ್ತದೆಂಬ ಇತ್ತೀಚಿನ ಸಂಪಾದನ ವೈಧಾನಿಕತೆಯು ಇಲ್ಲಿ ಅನ್ವಯವಾಗಿದೆಯೆಂಬುದು ನಾನು ಭಾವಿಸುತ್ತೇನೆ. ತೃಟಿತಗೊಂಡ ಪಾಠವನ್ನು x x x x x x ಸಂಕೇತಗಳ ಮೂಲಕ ಸೂಚಿಸಿದ್ದೇನೆ.

ಕೃತಜ್ಞತೆಗಳು

ಬಳ್ಳಾರಿ ಜಿಲ್ಲೆಯ ಹಸ್ತಪ್ರತಿ ಸರ್ವೇಕ್ಷಣೆ-ಸಂಗ್ರಹದಲ್ಲಿ ತೊಡಗಿದ್ದಾಗ ನನಗೆ ಕೋಗಳಿ ಗ್ರಾಮದ ಶ್ರೀ ಚಕ್ರಸಾಲಿ ದೊಡ್ಡವೀರಪ್ಪನವರ ಮನೆಯಲ್ಲಿ “ಗುಂಡಬ್ರಹ್ಮಯ್ಯಗಳ” ಚರಿತ್ರೆ ನಿರೂಪಿಸುವ ಕಾಗದ ದಾಖಲೆ ದೊರಕಿತು. ಅದಕ್ಕೆ ಸಂಬಂಧಿಸಿ ಹರಪನಹಳ್ಳಿಯಲ್ಲಿ ಸಮಾವೇಶಗೊಂಡಿದ್ದ ಕರ್ನಾಟಕ ಇತಿಹಾಸ ಅಕಾಡೆಮಿಯಲ್ಲಿ ಪ್ರಬಂಧ ಮಂಡಿಸಿದೆ. ಕನ್ನಡ ವಿಶ್ವವಿದ್ಯಾಲಯದ ಆಗಿನ ಕುಲಪತಿಗಳಾಗಿದ್ದ ಡಾ. ಎಂ. ಎಂ. ಕಲಬುರ್ಗಿಯವರು ಪ್ರಬಂಧವನ್ನು ಗಮನಿಸಿ ಗುಂಡಬ್ರಹ್ಮಯ್ಯಗಳ ಸಮಗ್ರ ಸಾಹಿತ್ಯ ಸಂಪಾದನೆಯ ಕಡೆಗೆ ಗಮನಸೆಳೆದರು. ಆ ಕಾರಣವಾಗಿ ೨೦೦೧-೦೨ರ ಹಸ್ತಪ್ರತಿ ವಿಭಾಗದ ವೈಯಕ್ತಿಕ ಯೋಜನೆಯಾಗಿ ಈ ಸಂಪುಟ ಸಂಪಾದನೆಗೊಂಡಿತು. ಯಾವುದೋ ಕಾರಣಗಳಿಂದ ಪ್ರಕಟಣೆಯಲ್ಲಿ ವಿಳಂಬವೂ ಆಯಿತು. ಮಾಡಿದ ಕೆಲಸ ಮಾನ್ಯತೆ ಪಡೆಯಬೇಕೆಂಬ ಕುಲಪತಿಗಳಾದ ಡಾ. ಬಿ. ಎ. ವಿವೇಕರೈ ಅವರ ಸಂಕಲ್ಪ ಕಾರಣವಾಗಿ ಈಗ ಪ್ರಕಾಶಗೊಳ್ಳುತ್ತಲಿದೆ. ಅಂದು ಯೋಜನೆ ರೂಪಿಸಿದ ಡಾ. ಎಂ. ಎಂ. ಕಲಬುರ್ಗಿಯವರಿಗೂ ಇಂದು ಪ್ರಕಟಣೆಗೆ ಚಾಲನೆ ನೀಡಿದ ಕುಲಪತಿ ಡಾ. ಬಿ. ಎ. ವಿವೇಕ ರೈ ಅವರಿಗೂ ನಾನೂ ಕೃತಜ್ಞನಾಗಿದ್ದೇನೆ.

ಶೈಕ್ಷಣಿಕ ಚಟುವಟಿಕೆಗಳಿಗೆ ಒತ್ತಾಸೆಯಾಗಿ ನಿಂತು ಆಡಳಿತಾತ್ಮಕ ಅನುಕೂಲತೆಗಳನ್ನು ಒದಗಿಸುತ್ತಿರುವ ಕುಲಸಚಿವರಾದ ಡಾ. ಕರೀಗೌಡ ಬೀಚನಹಳ್ಳಿ ಅವರನ್ನೂ, ಪುಸ್ತಕವನ್ನು ಪ್ರಕಟಿಸುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರನ್ನು ಹಾಗೂ ಪ್ರಸಾರಾಂಗದ ಹಿಂದಿನ ನಿರ್ದೇಶಕರಾದ ಡಾ. ಹಿ. ಚಿ. ಬೋರಲಿಂಗಯ್ಯನವರನ್ನು ಮತ್ತು ವಿಭಾಗದ ಮುಖ್ಯಸ್ಥ ಡಾ. ಎಫ್. ಟಿ. ಹಳ್ಳಿಕೇರಿ ಅವರನ್ನು ಸ್ಮರಿಸುವುದು ನನ್ನ ಕರ್ತವ್ಯದ ಭಾಗವೆಂದು ಭಾವಿಸುತ್ತೇನೆ.

ನಾಡಿನಾದ್ಯಂತ ಹಸ್ತಪ್ರತಿ ಭಾಂಡಾರದಲ್ಲಿ ಗುಂಡಬ್ರಹ್ಮಯ್ಯಗಳ ಸಾಹಿತ್ಯ ಹಂಚಿಹೋಗಿದೆ. ಸಂಗ್ರಹಕ್ಕಾಗಿ ಕ್ಷೇತ್ರಕಾರ್ಯ ಅನಿವಾರ್ಯವಾಯಿತು. ಆಗ ಸಹಕರಿಸಿದವರು ಹಲವರು. ವಿದ್ವಾಂಸರಾದ ಬಿ. ಎಸ್. ಸಣ್ಣಯ್ಯ ಅವರು ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಕೇಂದ್ರದ ಹಸ್ತಪ್ರತಿ ಭಂಡಾರದ ಸಾಂಗತ್ಯ ಪ್ರತಿಯನ್ನು ಕೊಟ್ಟಿದ್ದಾರೆ. ಮತ್ತು ಈ ಕೃತಿಯನ್ನು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಸಲಹೆ ಸೂಚನೆ ನೀಡಿದ್ದಾರೆ. ಹಾಗೆಯೇ ಪ್ರೊ. ಜಿ. ಎಂ. ಉಮಾಪತಿಶಾಸ್ತ್ರಿ, ಡಾ. ವೈ. ಸಿ. ಭಾನುಮತಿ ಅವರುಗಳು ತಾವು ಕೆಲಸ ಮಾಡುವ ಸಂಸ್ಥೆಗಳಲ್ಲಿಯ ಹಸ್ತಪ್ರತಿಗಳನ್ನು ನೀಡಿ ಪರಿಷ್ಕರಣಕ್ಕೆ ಅನುವು ಮಾಡಿ ಉಪಕರಿಸಿದ್ದಾರೆ ಅವರಿಗೆ ನನ್ನ ಕೃತಜ್ಞತೆಗಳು. ಡಾ. ಜೆ. ಎಂ. ನಾಗಯ್ಯನವರ ‘ಕರ್ನಾಟಕದ ಶಿಲ್ಪಗಳಲ್ಲಿ ಶಿವಶರಣರು’ ಎಂಬ ಕೃತಿಯಿಂದ ಮಾಹಿತಿ ಪಡೆದಿದ್ದೇನೆ. ಅವರಿಗೂ ಹಾಗೂ ಗುಂಡಬ್ರಹ್ಮಯ್ಯಗಳ ಭಾವಚಿತ್ರ ಒದಗಿಸಿದ ಡಾ. ಕೆ. ಎಂ. ಸುರೇಶ ಅವರಿಗೂ ನನ್ನ ನೆನೆಕಗಳು. ಪುಸ್ತಕ ವಿನ್ಯಾಸದಲ್ಲಿ ಶ್ರಮ ಹಾಕಿದವರು ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಶ್ರೀ. ಬಿ. ಸುಜ್ಞಾನಮೂರ್ತಿ ಹಾಗೂ ಕಲಾವಿದ ಕೆ. ಕೆ. ಮಕಾಳಿ ಅವರುಗಳಿಗೂ, ಅಚ್ಚುಕಟ್ಟಾಗಿ ಡಿ.ಟಿ.ಪಿ. ಕೆಲಸ ನಿರ್ವಹಿಸಿದ ಜೆ. ಶಿವಕುಮಾರ ಮತ್ತು ಜೆ. ಬಸವರಾಜ ಅವರುಗಳಿಗೆ ನನ್ನ ನೆನೆಕೆಗಳು.

ಪ್ರಸ್ತುತ ಸಂಪುಟ ಗುಂಡಬ್ರಹ್ಮಯ್ಯಗಳ ಆರು ಕಾವ್ಯಗಳನ್ನೊಳಗೊಂಡಿದೆ. ಇವುಗಳಲ್ಲಿ ೪ ಕೃತಿಗಳು ೩ ಜನ ಕವಿಗಳನ್ನು ಮೊದಲ ಬಾರಿಗೆ ಶೋಧಿಸಲಾಗಿದೆ. ಕನ್ನಡದಲ್ಲಿ ಗುಂಡಬ್ರಹ್ಮಯ್ಯಗಳ ಸಮಗ್ರ ಸಾಹಿತ್ಯವನ್ನು ಸಂಪಾದಿಸಿದ ಮೊದಲ ಪ್ರಯತ್ನ ಇದಾಗಿದೆ. ಈ ಸಂಪುಟವನ್ನು ವಿದ್ವಾಂಸರು ಮುಕ್ತವಾಗಿ ಸ್ವಾಗತಿಸುತ್ತಾರೆಂದು ಭಾವಿಸುತ್ತೇನೆ.

ಡಾ. ಕೆ. ರವೀಂದ್ರನಾಥ