ನಡುವೆ ಎಡಬಲದಲ್ಲಿ ಮಡದಿ ಪುರುಷರನೂ |
ಸಡಗರದಿ ಕೂಡ್ರಿಸುತ ಮೂಹರ್ತ ಮಾಡಿದನೂ ||
ಒಡಲೊಳಗೆ ಇರ್ದ ಕಲ್ಮಶವ ಬಿಡಿಸಿದನೂ |
ಒಡೆಯರನು ಬೇಗ ಒಂದು ಮಾಡಿದನೂ ||       ೭೬

ಇಬ್ಬರನು ಒಂದು ಮಾಡಿದನು ಮಾಹೇಶಾ |
ಕಬ್ಬು ಸಕ್ಕರೆಯು ಬೆರೆದಂತೆ ವಿಶೇಷ ||
ಹಬ್ಬವಾಯಿತು ಮನಕೆ ಪ್ರೀತಿ ಸಂತೋಷ |
ಮಬ್ಬು ಹರಿಯಿತು ಹೃದಯ ಬೆಳಗು ಪ್ರಕಾಶಾ ||          ೭೭

ಸಂತೋಷದಿಂದವರ ಒಂದು ಮಾಡಿದನೂ |
ಪಂತುಳ್ಳ ಅರಸು ನೀನೆಂದು ಕೇಳಿದನೂ ||
ಮುಂತಿರುವ ಭಕ್ತರ ಪರಿಯ ನೋಡುವೆನೂ |
ಸಂತಸದಿ ಸ್ತ್ರೀಯ ಕೊಡುಯೆಂದು ಕೇಳಿದನೂ ||            ೭೮

ಬೇಡಿದರೆ ಕಾಂತಿಯನು ಕೊಡುವದೇನರಿದೂ |
ಒಡೆಯ ನೀವಿರುವಂಥ ಸ್ಥಳವ ಹೇಳುವದೂ ||
ಬಿಡಲಾರೆ ನಾ ನಿಮ್ಮ ಪಾದವನು ನೆನೆದೂ |
ಸಡಗರದಿ ಉಂಡುಟ್ಟು ಸುಖದಿ ಬಾಳುವದೂ ||            ೭೯

ಪರದೇಶ ತಿರುಗುವದು ನಮಗೆ ಸುಖವಿಲ್ಲಾ |
ಅರಮನಿಯ ಗೊತ್ತಿನಲಿ ಎಂದು ಇರಲಿಲ್ಲಾ ||
ಗುರುವುಂಟು ಶಾವಿ ಮಾಡುವರು ಮುನ್ನಿಲ್ಲಾ |
ಅರಸುತಲಿ ಬಂದು ಕೊಲ್ಲುವರು ನಮಗೆಲ್ಲಾ ||           ೮೦

ಕರೆತಂದು ತೋರುವದು ನಿಮ್ಮ ಒಡೆಯರನೂ |
ಅರಮನೆಯ ಸೌಭಾಗ್ಯವೆಲ್ಲ ತೋರುವೆನೂ ||
ಪರಮ ಸಂತೋಷದಿ ಪೂಜೆ ಮಾಡುವೆನೂ |
ಹೊರತು ನಾರಿಯರ ಮಿಕ್ಕದನು ಕೊಡುಸುವೆನೂ ||       ೮೧

ಕೊಟ್ಟು ತಪ್ಪದಿರೆಂದು ಇಟ್ಟು ಭಸಿತವನೂ |
ಬಟ್ಟ ಬಯಲಾಗಲೆಂದು ಮನದಿ ಹರಸಿದನೂ ||
ಇಟ್ಟ ಗುರುತನೂ ನೋಡಿ ಕನ್ನ ಕೊರದವನೂ |
ದಿಟ್ಟ ಕಳ್ಳನು ಹೊಕ್ಕ ರಜತಾದ್ರಿಯನ್ನೂ ||    ೮೨

ಇಳಿಯಿಂದ ಬಂದ ಕೈಲಾಸಕೆ ಬೇಗದಲಿ |
ಮಲಹರನ ಕಂಡು ಸ್ತೋತ್ರವನು ಮಾಡುತಲಿ ||
ಚೆಲುವಾಗಿ ತಾ ಹೋದ ಕಥನ ಹೇಳುತಲಿ |
ನಲುವಿಂದ ಕನ್ನಹತ್ತಿಯನು ಮಾಡಿಸಲಿ ||        ೮೩

ಕಳೆವುಳ್ಳ ವಿಶ್ವಕರ್ಮನಿಗೆ ಮರೆಮಾಡಿ |
ತಿಳಿಸಿದರು ಕನ್ನಗತ್ತಿಯ ಸಿದ್ಧಮಾಡಿ ||
ಘಳಿಗೆಯೊಳು ಬೇಕು ಮರಿಜೀವಿಣಿಗೆ ನೋಡಿ |
ಸೆಳೆದು ತಂದು ಹರನ ಸನ್ನಿಧಿಗೆ ಓಡಿ ||            ೮೪

ಮಾಡಿದಂತವರಿಗೆ ಹರಕಿಯನು ಕೊಟ್ಟು |
ಕೂಡಿರ್ದ ಸಭೆಗೆಲ್ಲ ಅಪ್ಪಣಿಯ ನಿಟ್ಟೂ ||
ನಾಡಯೇಕಾಂತಕೆ ಬಂದು ಕೈಗೊಟ್ಟೂ |
ನೋಡಿ ಶೃಂಗಾರವಾದರು ಮನಸಿನಲ್ಲಿಟ್ಟು ||೮೫

ಹಸುರ ಬೆತ್ತದ ಕೋಲು ಧಸುರಿ ಚಲ್ಲಣವು |
ಎಸೆವ ಕಸ್ತೂರಿ ಹುಲಿಯ ಚರ್ಮದಾಂಬರವು ||
ಕುಶಲಗಳ್ಳರು ತಮ್ಮ ಮನದ ಶೃಂಗಾರವು |
ಉಸುರಿದರು ಗಿರಿಜೆಯೊಳು ತಮ್ಮ ಮನದಿರವು ||          ೮೬

ಕಳವಿಂಗೆ ಹೋಗದನು ಶಿವ ಗೌರಿ ಕೇಳಿದನೂ |
ಇಳೆಯೊಳಗೆ ಹೊಕ್ಕು ಸುಲುತರುವೆಯೆನಲವನೂ ||
ಬಳೆ ಮೂಗುತಿ ಕಾಲುಂಗರ ತಾಮ್ರ ಬಿಡು ನೀನೂ |
ಸಳೆ ನಡುವಿನ ಬಾಲೆ ಕೇಳು ಮಾತವನೂ ||       ೮೭

ಮೂಗುತಿ ಕಾಲುಂಗರ ಎನಗೆ ಬೇಕಾಗಿ |
ಸೊಗಸಾದಲೆ ಹನ್ನೆರಡು ವರುಷ ತಪವಾಗಿ ||
ಅಗಹರನೆ ನೀ ಎನಗೆ ಗಂಡ ಬೇಕಾಗಿ |
ವಗೆಮಿಗೆಯ ಪಡಕೊಂಡೆ ನೀನು ಇದಕಾಗಿ ||     ೮೮

ದೂರ ಹೋಗುವದೇನು ಇದು ನಿಮಿತ್ತದಲ್ಲಿ |
ನಾರಿ ಗಿರಿಜೆ ಕೇಳು ಓರುಗಲ್ಲಿನಲೀ ||
ವೀರಗಣಪತಿ ರಾಯನೆಂಬ ಅರಸನಲಿ |
ಸಾರುವುದು ಬಿರಿದು ಪಂಥವನು ನೋಡುತಲಿ ||            ೮೯

ಏಳುಸುತ್ತಿನ ಕೋಟಿ ನೀವು ಹೋಗಬೇಡಿ |
ಕಾಳ ರಕ್ಕಸರಂತೆ ಕಾದಿಹರು ನೋಡಿ ||
ಬಾಳಾಕ್ಷನೆಂದರೆ ಬಿಡರು ಮಾತಾಡಿ |
ಬೊಳಂಬಿಲಿರಿದು ಕೆಡಹುವರು ತೆಗಿದಾಡಿ ||      ೯೦

ತೆಗೆದು ಗುದ್ದಿದರೆ ಬಿಡುವವರು ನಾವಲ್ಲಾ ||
ಹೊಗುವೆ ಗಣಪತಿರಾಯನ ಅರಮನಿಯೊಳೆಲ್ಲಾ |
ತೆಗೆದು ತರುವೆನು ಭಾಗ್ಯ ಹೊನ್ನು ಬದುಕೆಲ್ಲಾ ||
ಮಿಗಿಲಾಗಿ ನೀ ಮಾಡು ವಸ್ತ್ರ ಮೈಗೆಲ್ಲಾ ||     ೯೧

ವಸ್ತ್ರ ಒಡವೆಯು ಸುಡಲಿ ಒಲ್ಲೆ ನಾನದನೂ |
ವಿಸ್ತಾರದ ಭಿಕ್ಷದನ್ನವನು ಉಂಬುವೆನೂ ||
ಮಸ್ತವನುಳಹಿಕೋ ರಂಡೆಯಾಗುವೆನೂ |
ಹಸ್ತವನು ಮುಗಿಯುತಿಹೆ ನಿಮಗೆ ಬೇಡದನೂ ||           ೯೨

ಅಡವಿಯೊಳು ಮಳೆ ಹೊಯ್ದು ಗಿಡ ನಡುಗಿದಂದೂ |
ಉಡಿಯೊಳಗೆ ತಾವರೆಯು ಬಿತ್ತಿ ಬೆಳೆದಂದೂ ||
ಕಡು ಚೆಲುವೆ ರಂಡೆಯಹೆ ನೀನಂದಿಗಂದೂ |
ನುಡಿಯ ಕೇಳಲಿಬಹುದೆ ಮಡದಿಯಾದೊಂದೂ ||         ೯೩

ಮಡದಿ ಮಕ್ಕಳ ಮಾತು ಎಂದು ಮೀರಿಲ್ಲಾ |
ತುಡಗ ಗೂಳಿಯ ಮಗನು ನಾರಂದ ಖುಲ್ಲಾ ||
ಬಿಡದೆ ಬೂದಿಯ ತುಂಬಿ ಹೇಳಿದನು ಸೊಲ್ಲಾ |
ಪೊಡವಿಯೊಳು ಹೊಗುವದು ಮೃಡತಾನೆ ಬಲ್ಲಾ ||      ೯೪

ಪೊಡವಿಯೊಳು ತರುವೆ ಬೇಕಾದ ಒಡವೆಯನೂ |
ಕಡಗ ಕಂಕಣಹಾರ ಹಿರಿದಾದ ಸರನೂ ||
ಬಿಡಿಮುತ್ತು ಕೊಪ್ಪ ಚಿಂತಾಕ ಸರಗಿಯನೂ |
ನಡಿವಿನೊಡ್ಯಾಣ ಚೌರಿ ತುಂಬುರಾಗಟಿಯನೂ ||          ೯೫

ಕಾಲಗೆಜ್ಜೆಯು ತಾಯ್ತ ಕೊರಳ ಸರಪಳೆಯೂ |
ವಾಲಿ ಬಳಿ ಹವಳ ಸರಹರಡಿ ಬಾವಲಿಯೂ ||
ಕಾಲಲಂದಿಗೆ ಸಿಸುಪಿಲ್ಲೆಜೆ ಗುರಿಯೂ |
ಶಾಲು ಕುಪ್ಪಸ ಮಿಕ್ಕ ಹಚ್ಚೆ ನಾಲಿಗೆಯೂ ||   ೯೬

ಹೆಚ್ಚಾಗಿ ಐದು ಮನೆ ಭಿಕ್ಷವನು ಬೇಡಿ |
ನಿಚ್ಚ ಭೋಜನ ಉಂಡು ಸುಖದಿ ಮಾತಾಡಿ ||
ಅಚ್ಚ ಮುತ್ತೈದೆ ತನಯನಗೆ ನೀ ಮಾಡಿ |
ಹೆಚ್ಚು ಕೊಲ್ಲುವರವರು ತಲೆಯ ಚೆಂಡಾಡಿ ||೯೭

ತಲೆ ಹೊಡೆದು ರುಂಡ ಮಾಲಿಯನು ಧರಿಸಿಹೆನೂ |
ಬಲವುಳ್ಳ ಮುತ್ತೈದೆ ಮೂಜಗಕೆ ನೀನೂ ||
ಛಲವುಳ್ಳ ಭಕ್ತರು ಮನವ ನೋಡುವೆನು |
ಗೆಲುವಾಗಿ ಬಾರೆಂದು ಹರಕೆ ಕೊಡು ನೀನೂ ||   ೯೮

ಹರಸಿದಳು ಗೌರಮ್ಮ ಪರಿಪರಿಯಲಿಂದೂ |
ಅರಸು ಗಣಪತಿ ಭಾಗ್ಯ ಬಯಲಾಗಲೆಂದೂ ||
ವರ ಗುಂಡಬ್ರಹ್ಮ ನಮ್ಮ ಬೆರೆಯೆಂದೂ |
ಎರಗಿದಳು ಚರಣಕ್ಕೆ ನೀವು ಹೋಗೆಂದೂ ||      ೯೯

ಹರನು ನಾರದಮುನಿಯು ಧರಿಯ ನೋಡುತಲಿ |
ಕುರುಕ್ಷೇತ್ರ ಕಾಶೀ ಕೇದಾರವ ತೋರುತಲಿ ||
ಶರಣ ಮುನಿಜನಗಳಿಗೆ ವರವನೀವುತಲಿ |
ಹರುಷದಿಂದಲಿ ಮುಂದಕೆ ಬಿಜಯ ಮಾಡುತಲಿ ||          ೧೦೦

ಬಿಜಯ ಮಾಡುತ ಬಂದು ಹೊಳಿಯ ದಾಟಿದರೂ |
ರಜತಾದ್ರಿಯೆಂತೆಸೆವ ಕೋಟಿ ನೋಡಿದರೂ ||
ಗಜಗುಸಿಗೆಯ ಮಳೆಯ ಬಗೆದು ನುಸುಳಿದರೂ |
ನಿಜವಾಗಿ ಕಂದಕವ ಕಂಡು ಹೆದರಿದರೂ ||        ೧೦೧

ಅಗಳಿತಿಯ ಹೇಗೆ ದಾಟುವನುಯೆಂಬುತಲಿ |
ನಗೆಯೆಲ್ಲ ನೀರು ಆನುದ್ದ ಮಡುವಿನಲಿ ||
ಜಗಿದು ತಿಂಬವು ಮೀನು ಮೊಸಳೆ ಸಿಟ್ಟಿನಲಿ |
ಬಗೆಯು ತಿಳಿಯದು ಇದರ ನೆಲೆಯ ನೋಡುತಲಿ ||        ೧೦೨

ಉಟ್ಟ ಹುಲಿಯ ಚರ್ಮವನು ಬಿಚ್ಚಿ ಹಾಸಿದರೂ |
ದಿಟ್ಟ ಗಳ್ಳರು ಕುಳಿತು ಅದನು ದಾಟಿದರೂ ||
ಇಟ್ಟ ಗುಂಡಿನ ಮೇಲೆ ಮೆಟ್ಟಿ ನೋಡಿದರೂ |
ಮುಟ್ಟಿ ಕನ್ನಗತ್ತಿ ಪೂಜೆ ಮಾಡಿದರೂ ||         ೧೦೩

ಕತ್ತಿ ಪೂಜೆಯ ಮಾಡಿ ನೆನದು ಶರಣರನೂ |
ಅರ್ತಿಯಲಿ ಕನ್ನದ ಬ್ರಹ್ಮ ತಂದಿಹನೂ ||
ಎತ್ತಿಕೋಟಿಯ ಮೇಲೆ ಕತ್ತಿ ಹಾಕಿದರೂ |
ಕತ್ತರಿಸಿ ಹಾಳಾಗಿ ಬಿತ್ತು ಕೋಟಿಯನೂ ||        ೧೦೪

ಕೋಟೆಕೊತ್ತಲ ಮೆಟ್ಟಿದಾಟಿದರು ಬೇಗಾ |
ಈಟೆ ಬಂಟರ ಮೇಲೆ ತಳಿದು ಜವೆಯಾಗ ||
ದಾಟಿ ಯೀ ಪರಿಯಲ್ಲಿ ಏಳು ಸುತ್ತಾಗಾ |
ನೀಟಿತಲಿ ಕಂಡರು ಅರಮನಿಯ ಬೇಗಾ ||         ೧೦೫

ಅರಮನಿಯ ಗೋಡಿಯನು ಹೊಂದಿ ನೋಡಿದರೂ |
ಭರದಿಂದ ಅಳತಿಯನು ಹಿಡಿದು ಮಾಡಿದರೂ ||
ಥರವಲ್ಲ ಕಳವಿಂಗೆ ಬಂದು ಅಳುವರೂ |
ಕೊರೆದು ಭಾಗವ ಮಾಡಿ ತೆರೆಯ ಹಿಡಿಸಿದರೂ ||           ೧೦೬

ಮುಂದೆ ಹೊಕ್ಕರೆ ಶಿವನೆ ಮೂರಡಿಯು ನಮಗೆ |
ಹಿಂದೆ ಬಂದರೆ ಪಾಲುವೊಂದಯ್ಯ ನಿಮಗೆ ||
ಚಂದದಿಂದಲಿ ಹಂಚಿ ಕೊಂಬುವದು ಹೀಗೆ |
ಮುಂದೆ ಜಗಳವು ಬಿಡದುಯೆಂದು ನಮನಿಮಗೆ ||           ೧೦೭

ಬೇಡೆಂದು ನೂಕಿದನು ಕೋಪದಲಿ ಶಿವನೂ |
ನೋಡಿ ಮುನ್ನೂರು ವಣೆಯ ಕನ್ನಕ ನಿಂತಭವನೂ ||
ಮೂಢ ನಾರದನೆನ್ನ ತಲೆಯ ಕೊಯ್ಯಿ ನೀನೂ |
ನೋಡು ಪಾರ್ವತಿಗೊಯ್ದು ತೋರು ಗುರುತವನೂ ||   ೧೦೮

ಗುರುದೇವ ತಂದೆ ತಾಯಿಯು ಬಂಧುವೆಂದೂ |
ವರದೇವ ಶಾಸ್ತ್ರ ಪುರಾಣದೊಳಗೆಂದೂ ||
ಮರಣರಹಿತನೆ ನಿಮಗೆ ಸಾವು ಇಲ್ಲೆಂದೂ |
ಹರುಷದಲಿ ಆಡಿದೆವು ಲೀಲೆ ನಮಗಿಂದೂ ||     ೧೦೯

ನಲುವಿಂದ ನಾರದನು ಬಿನ್ನಹವ ಮಾಡಿ |
ಚೆಲುವಾಗಿ ಕನ್ನದೊಳು ಹೋಗುವೆ ನೀನೊಡಿ ||
ಒಲವುತ್ತ ಕನ್ನಕೆ ಪಾದವನು ಮಾಡಿ |
ಮಲಹರನ ಚರಣಕ್ಕೆ ತಲಿಯನು ನೀಡಿ ||         ೧೧೦

ಒಳಹೊಕ್ಕು ನಾರಂದ ಅರಮನಿಯ ಕಂಡಾ |
ಕಳೆಯುಳ್ಳ ಶಿವನ ತಾ ಬಂದು ಕರಕೊಂಡಾ ||
ಇಳೆಯೊಳಗೆ ಸರಿಯಿಲ್ಲ ಇವನು ಪ್ರಚಂಡಾ |
ಹೊಳೆವ ಅರಮನಿ ಕದವ ತೆಗೆದ ಬಲು ಪುಂಡಾ ||           ೧೧೧

ಬೀಗ ಮುದ್ರಿಯ ಕಿತ್ತಿ ಹೊರಗೆ ಚೆಲ್ಲಿದರೂ |
ಬಾಗಿ ಒಳಹೊಕ್ಕು ಅರಮನಿಯ ನೋಡಿದರೂ ||
ತೂಗು ಮಂಚದಿ ಅರಸು ರಾಣಿ ಮಲಗಿಹರೂ |
ಭೋಗ ಕಡೆಯಾಟ ನಿಮಗೆಂದು ಅರಸಿದರೂ ||  ೧೧೨

ಮಂಚದೆಡಬಲದಲ್ಲಿ ಜ್ಯೋತಿ ತುಂಬಿಹರೂ |
ಕುಂಚ ಕಾಳಂಜಿಗಿಡಿ ಬಿಡಿಯ ವರದವರೂ ||
ಅಂಚಗಮನೆಯರು ಕಾದುಕೊಂಡು ಮಲಗಿಹರೂ |
ಮಿಂಚುಳ್ಳ ಚಿತ್ರದ ತೆರೆಯ ಕಟ್ಟಿಹರೂ ||        ೧೧೩

ತೆರೆಯ ಸೀರಿಯ ಹರಿದು ನಿಂತು ನೋಡಿದನೂ |
ಹಿರಿದರಸು ರಾಮಸೀತೆಯ ಕಂಡು ಹಿಗ್ಗಿದನೂ ||
ಹರಳು ಮಾಣಿಕದಂತೆ ಮುಖವ ನೋಡಿದನೂ |
ಬೆರಗಾಗಿ ಗಲ್ಲದೊಳು ಉಗುರುನಿಕ್ಕಿದನೂ ||   ೧೧೪

ನಾಡೊಳಗೆ ಚೆಲುವೆ ರಾಮರ ಮಡದಿ ನೋಡಯ್ಯ |
ರೂಢಿಯೊಳು ಜನಿಸಿದ್ದು ನಾ ಬಲ್ಲೆನಯ್ಯ ||
ಹೇಡಿ ಮಾದಿಗರ ಒಳಗಾಕಿ ಕಾಣೆಯಯ್ಯ |
ಪಾಡು ಪಂಥದಲಿರ್ದ ಅರಸು ನೋಡಯ್ಯ ||    ೧೧೫

ಹೊಲೆಯೆಂದ ಮಾತಿಗೆ ತೊಲಗಿದನು ಶಿವನೂ |
ಹಲವು ಮನೆಗಳನೆಲ್ಲ ನೋಡುತಲಿ ಭವನೂ ||
ಒಲಿದು ಹೇಳಿದನು ನಾರದಗೆ ಪರಶಿವನೂ |
ಸಲುವಷ್ಟು ತೆಕ್ಕೊಂಡು ಹೊರಡುವದು ನೀನೂ ||        ೧೧೬

ಅರಮನಿಯ ಪೆಟ್ಟಿಗೆ ದ್ರವ್ಯವನುಯಲ್ಲಾ |
ಅರಸು ಹಿಡಿದಂತ ಖಂಡೆವ ಮುಂತೆಲ್ಲಾ ||
ಅರಸಿಯಳ ಮೇಲಿರ್ದ ಮೈ ತೊಡಿಗಿಯಲ್ಲಾ |
ಹೊರೆ ಮಾಡಿಯಿಟ್ಟ ನಾರಂದ ಹೊರಗೆಲ್ಲಾ ||೧೧೭

ಇಟ್ಟರಾಯನ ಕಾಲ ಪೆಂಡೆನಿಳಹಿದರೂ |
ಪಟ್ಟದರಸಿಯ ತುರುಬು ಕೊರೆದು ಚಲ್ಲಿದರೂ ||
ಬಿಟ್ಟಿರ್ದ ಸಂದಿಗೊಂದಿಯನು ಅರಸಿದರೂ |
ಬಟ್ಟ ಬಯಲನೆ ಮಾಡಿ ಹೊರಗೆ ನೋಡಿದರೂ ||          ೧೧೮

ಹವಣಿಯಲಿ ಚಾವಡಿಯ ಕಾಯ್ವ ನಾಯಕರೂ |
ಅವರ ಚೆಂಡಿಕಿ ಹಗ್ಗ ಇವರಿಗಚ್ಚಿದರೂ ||
ಇವರ ಮೀಸೆಯ ಗಂಟು ಅವರಿಗಿಕ್ಕಿದರೂ |
ಅವರವರ ಆಯುಧವ ಮುರಿದು ಹಾಕಿದರೂ ||೧೧೯

ಈ ಪರಿ ಸಡಗರದಿ ಇಬ್ಬರು ಕೂಡಿ |
ಆ ಪೆಂಡೆ ನಾಲ್ಕೆಂಟು ಹೊರಿಯ ಮಾಡಿ ||
ಆ ಪುರದ ಬಜಾರದಿ ಹೊನ್ನು ಚೆಲ್ಲಾಡಿ |
ಶ್ರೀಪರ್ವತೀಶ ಹೋರುಯೆಂದು ಕೊಂಡಾಡಿ ||  ೧೨೦

ತಲೆಯ ಮೇಲೊರುವದು ನಮಗೆ ಸಲುವಲ್ಲ |
ಚೆಲುವಾದದೊಂದು ಬಂಡಿಯನು ತರಲಿಲ್ಲಾ ||
ಗೆಲುವಾದ ಮಂದಿಯೆಂಚೆತ್ತು ಬೇಕಲ್ಲಾ |
ಮಲಹರನೆ ಕಳ್ಳರಿಗೆ ಬಂಡಿ ತರವಲ್ಲಾ ||        ೧೨೧

ಅರಮನೆಯ ಪಟ್ಟದಾನೆಗಳ ಹಿಡಿತಂದಾ |
ವರ ರತ್ನ ಮಾಣಿಕ್ಯವ ಹೇರಿ ನಲುವಿಂದಾ ||
ಹೊರಿಯ ತಲೆಯಲಿ ಹೊತ್ತು ಅವಚಿಬಗಲಿಂದಾ |
ಪುರದಾಟುತ ಮೂಲಿ ಕೊರೆದು ಚೆಲ್ಲೆಂದಾ ||   ೧೨೨

ಸುರಿದವರು ಹೊನ್ನು ಹಾದಿಯಲಿ ಬಿತ್ತುತಲಿ |
ತರುಮರಕೆ ಜೇಬಿನಾಣ್ಯವನು ಕಟ್ಟುತಲಿ ||
ಪರಿಪರಿಯ ವಸ್ತು ಒಡವಿಯನು ಚೆಲ್ಲುತಲಿ |
ಹರ ಗುಂಡಬ್ರಹ್ಮನ ಪುರಕೆ ಹರುಷದಲಿ ||        ೧೨೩

ಪುರದ ಬಸವಣ್ಣನ ಗುಡಿಯ ಹೊಕ್ಕವರೂ |
ಅರಸಿನ ಪೆಂಡೆವ ಬಸವಗಿಕ್ಕಿದರೂ ||
ಬರುವ ಪವಾಡ ನಿಮ್ಮದೆಂದು ಹೇಳಿದರೂ |
ಹರ ಶರಣರಾಲಯಕೆ ತಾವು ಓಡಿದರೂ ||        ೧೨೪

ಬಂದ ಕಳುವಿನ ಕಥನ ಹೇಳಿ ಶರಣರಿಗೆ |
ಹಿಂದೆ ಹುಯ್ಯಲು ಬಂತು ಮುಂದೆ ಹೇಗೆಮಗೆ ||
ಇಂದು ನಮಗಾಗಿ ಕೆಡುಬೇಡ ಕಳ್ಳರಿಗೆ |
ಮುಂದೆ ಹಾದಿಯ ತೋರು ಹೋಗುವೆವು ಎಮಗೆ ||       ೧೨೫

ತೂರಿ ಹೋಗುವದು ಮತವಲ್ಲ ನೋಡೆಂದಾ |
ಆರಾದಡೆಯ ಬರಲಿ ಅಂಜ ಬೇಡೆಂದಾ ||
ಘೋರ ಮಾತಲ್ಲ ಶಿರಕೊಡುವೆ ನಿಮ್ಮಿಂದಾ |
ಸಾರ ಅಭಯವ ಕೊಟ್ಟು ತಾವು ಸುಖದಿಂದಾ ||            ೧೨೬

ಇತ್ತ ಓರ್ಗಲ್ಲ ಪುರದೊಳಗೆ ಗಣಪತಿಗೆ |
ಕತ್ತಲೆಯು ಹೋಗಿ ದಿನಪನು ಬಂದ ಇಳೆಗೆ ||
ನಿತ್ಯದ ಹಾಗೆ ಎದ್ದು ನೋಡಿದನು ಕನ್ನಡಿಗೆ |
ಮತ್ತೆ ಕಂಡ ಕನ್ನ ಕೊರೆದುದರಮನೆಗೆ ||          ೧೨೭

ಅರಮನೆಯ ಭಾಗ್ಯ ಸೆರೆಸೂರೆಯಾಗಿರಲೂ |
ಕೊರೆದು ನಾರಿಯ ತುರಬು ತಾನು ಬಿದ್ದಿರಲೂ ||
ಬಿಂದು ಕಾಲು ಪೆಂಡೆಯು ಉಚ್ಚಿರಲೂ |
ಅರಸು ಉರಿದೆದ್ದು ಚಾವಡಿಗೆ ತಾ ಬರಲೂ ||   ೧೨೮

ಚಾವಡಿಯ ಮಂದಿ ಹೆಡಗುಡಿಯ ಕಟ್ಟಿದನೂ |
ಆವಾಗ ಮಂತ್ರಿ ಮಾನ್ಯರನು ಕರೆಸಿದನೂ ||
ದಾವ ಕಳ್ಳನೊ ನೋಡು ಕೇಡುಯಿಂಥನೂ |
ಭೂವಳೆಯೊಳು ಕಾಣೆನೆಂದು ಹೇಳಿದನೂ ||      ೧೨೯

ಹೇಳಿ ಮಾಡುವದೇನು ಕರೆಸು ತಳವಾರ(ನ)ನೂ |
ಕಾಲ ಹೆಜ್ಜೆಯ ಹಿಡಿದು ಹಚ್ಚು ಕಳ್ಳರನೂ ||
ಹೊಳು ಮಾಡಿಯೆ ಕಡಿದು ಶಿರವ ಹೊಡೆಸುವೆನೂ |
ಸೀಳುಸುವೆನೆಂದು ಪ್ರಧಾನ ಬರುತಿಹನೂ ||      ೧೩೦

ಹೊರಗೆ ಕಂಡರು ಹೊನ್ನ ಸುರಿದರಾಶಿಯನೂ |
ಅರಸಿ ನೋಡದೆ ಅಡವಿಯಲಿ ರತ್ನವನೂ ||
ಬರದಿಂದ ಹೆಜ್ಜೆಯನು ಹಿಡಿದ ತಳವಾರನೂ |
ಪುರದ ಬಸವನ ಮುಂದಿಟ್ಟು ಪೆಂಡೆವನೂ ||     ೧೩೧

ಪೆಂಡೆವ ತೆಕ್ಕೊಂಡು ಪುರದೊಳಗೆ ಬಂದೂ |
ಕಂಡು ಶರಣರಿಗೆ ತೋರಿದರು ಅದನೆಂದೂ ||
ದಿಂಡೆಗಳ್ಳರು ಹೀಗೆ ಮಾಡುವರೆಯೆಂದೂ |
ಪುಂಡಗಾರಿಕೆ ಬೇಡ ಕೊಡಿರಿ ನಮಗಿಂದೂ ||      ೧೩೨

ಕೊಡಲಾಗದಯ್ಯ ಮೊರೆಹೊಕ್ಕ ಕಳ್ಳರನೂ |
ಬಡವರೆಂದೆನಬೇಡ ನಮ್ಮ ಶರಣರನೂ ||
ಒಡೆಯ ಗಣಪತಿಗೆ ಹೇಳೆದರು ದೂರವನು|
ನಡೆ ತಿರಿಗಿ ಬಂದು ನೀ ಮಾಡುವದು ಇನ್ನೇನೂ ||          ೧೩೩

ತಿರುಗಿ ಬಂದರು ತಮ್ಮ ಒರ್ಗಲ್ಲ ಪುರಕೆ |
ಅರಸು ಗಣಪತಿಗೆ ಹೇಳಿದರು ಅಂತದಕೆ ||
ಪರಿಯೇನು ಮುಂದೆ ಕಳ್ಳರನು ತರುವದಕೆ |
ಹರ ಗುಂಡಬ್ರಹ್ಮಯ್ಯ ಕೊಡು ಕಳ್ಳರನು ವಶಕೆ ||          ೧೩೪

ಕೊಡದವನ ಹೆಡಗುಡಿಯ ಕಟ್ಟಿ ತರುಸುವೆನೂ |
ಮಡದಿ ಮುಡಿ ಕೊಯ್ದವನ ಶೂಲ ಹಾಕುವೆನೂ |
ಘಡಿ ಘಡಿಸಿ ಮೂರ್ಬಲಕೆ ಡಂಗುರ ಹೊಡೆಸಿದನೂ |
ಬಿಡೆನೆಂದು ಆರ್ಭಟಿಸಿ ಕರ್ನೆ ಹಿಡಿಸಿದನೂ ||       ೧೩೫

ಹಿಡಿಸಿ ಕರ್ನಿಯ ಭದ್ರ ತುರುಗ ಶೃಂಗರಿಸಿ |
ತುಡುಮು ವಾದ್ಯವು ಕಹಳೆ ಬೇರಿಯನು ಹೊಡಿಸಿ ||
ಬಿಡದೆ ರಥ ಬಂಟಮಾನ್ಯ ಕಾಲಾಳನೆರಸಿ |
ನಡದು ಮುತ್ತಿದರು ಶಿವಪುರಕೆ ದಾಳಿಡಿಸಿ ||      ೧೩೬

ಪುರದ ಚಾವಡಿಯೊಳಗೆ ದಂಡು ನಿಳಸಿದರೂ |
ಅರಸು ಮಂತ್ರಿಯು ಮಾನ್ಯ ಸದರು ಮಾಡಿದರೂ ||
ಕರೆಸು ಶರಣರನೆಂದು ಚರರ ನಟ್ಟಿದರೂ |
ವರ ಗುಂಡಬ್ರಹ್ಮ ನಡಿಯೆಂದು ಮುತ್ತಿದರೂ ||            ೧೩೭

ಇಷ್ಟೊಂದು ಕೋಪ್ಯಾಕ ಬರುವೆ ನಡಿಯೆಂದೂ |
ಶ್ರೇಷ್ಠ ಶರಣರು ಖಡ್ಗ ಜಡಿದು ಮುದದಿಂದಾ ||
ದೃಷ್ಟ ಆನೆಯ ಬಳಿಗೆ ಖಂಡ ಪದದಿಂದಾ |
ಸೃಷ್ಟಿ ಪಾಲಕನೆಡಿಗೆ ಬಂದನಲುವಿಂದಾ ||        ೧೩೮

ನೋಡಿದನು ಉರಿಯೆದ್ದು ಬಂದ ಶರಣರನೂ |
ಮಾಡಿ ಕಳವನು ನಿನ್ನ ಮೊರೆಯ ಹೊಕ್ಕವನೂ ||
ರೂಢಿಯೊಳು ಯಾರು ಕೊಡು ಶೀಘ್ರದಿಂ ನೀನೂ |
ನೀಡುವೆನು ಶೂಲಕೆ ಅವರ ದೇಹವನೂ ||       ೧೩೯

ಕಟ್ಟಿ ಶೂಲಕೆ ನಾವು ಅಂಜುವರು ಅಲ್ಲಾ |
ತೊಟ್ಟ ಪಂಥದ ವ್ರತವು ಬಿಡೆವು ನಾವೆಲ್ಲಾ ||
ದಿಟ್ಟ ಕಳ್ಳರನು ಹಿಡಿದು ಕೊಡುವವರು ಅಲ್ಲಾ |
ಕಟ್ಟಾಗ್ನಿಯನು ಮಾಡುವದು ನಮಗೆಲ್ಲಾ ||  ೧೪೦

ಕದ್ದಕಳ್ಳರಿಗಾಗಿ ಶೂಲ ತರಿಸೆಂದಾ |
ಬದ್ದುಳ್ಳ ಶ್ರೀಗಂಧ ಮರನ ಕಡಿಸೆಂದಾ ||
ತಿದ್ದಿ ಕೆತ್ತಿದರು ಕೂರಾಗಿ ನಲುವಿಂದಾ |
ಎದ್ದೀರಿ ಕೂಡುವದು ನಿಮಗೆ ಬಿಡವೆಂದಾ ||    ೧೪೧

ಮಿಂದು ಗುರುಲಿಂಗದಾರ್ಚನೆಯ ಮಾಡಿದನೂ |
ಚಂದವಾಗಿ ತೀರ್ಥ ಪ್ರಸಾದ ಸಲಿಸಿದನೂ ||
ಅಂದ ವಸ್ತ್ರಾಭರಣಗಳನು ಧರಿಸಿದನೂ |
ಇಂದು ಮುಖಿಯರ ಕೈಯ ಆರತಿ ಹಿಡಿಸಿದನೂ ||          ೧೪೨

ಮಡದಿ ಪುರುಷರು ಕೂಡಿ ಶೂಲವಿದ್ದೆಡೆಗೆ |
ನಡಸಿದರು ಅಷ್ಟ ವಿಧ ಪೂಜೆ ಮಿಗಿಲಾಗೆ ||
ಒಡನೆ ತೆಲೆಯೊಳು ಹೊತ್ತು ಪುರದಿಂದ ಹೊರಗೆ |
ಜಡಿದು ಬಿದ್ದರು ಶೂಲ ಹರನು ತಲೆದೂಗೆ ||   ೧೪೩

ಬೆರಗಾಗಿ ನೋಡಿದರು ಶೂಲ ಚಿಗುತಿರಲೂ |
ಅರಸು ಮಂತ್ರಿ ಜನರು ಧರೆಗೆ ಒರಗಿದಲೂ ||
ಹರನು ದಶಭುಜ ಪಂಚಮುಖವ ತೋರಿಸಲೂ |
ಹರ ಚಾಂಗಭಲರೆಯೆಂದು ಉಗ್ಗಡಿಸುತಿರಲೂ ||           ೧೪೪

ಭಲರೆಂದು ಭಾವಮೈದುನರ ಸ್ತ್ರೀಜನರೂ |
ಹಲವು ಮಣಿ ಖಚಿತದ ಪುಷ್ಪಕೇರಿದರೂ ||
ಗೆಲುವಾಗಿ ಪುಷ್ಪ ಪರಿಮಳವ ಧರಿಸಿದರೂ |
ಮಲಹರನ ಪದವಿಯನು ಪಡೆದು ಸುಖವಿಹರೂ ||        ೧೪೫

ಈ ಕಥೆಯೊಳಗೆ ಅಕ್ಷರವನೊಂದೂ |
ಸಂತಸದಿ ಬರೆದೋದಿ ಕೇಳಿದರೆ ಚಂದಾ ||
ಅಂತು ಶಿವ ಸಜ್ಜನರು ಕೇಳಿ ಮುದದಿಂದಾ |
ಕಂತುಹರ ನೊಲಿವನು ನಿಮಗೆ ದಯದಿಂದಾ ||   ೧೪೬

ಮೇಧಿನಿಯೊಳಗಧಿಕ ಓರ್ಗಲ್ಲವೋದಿಸುವಾ |
ಸಾಧುಭಕ್ತನು ಮಡಿವಾಳಯ್ಯನಿಗೆ ಶಿವ ಸುಖವಾ ||
ಆದರದಿ ಕೊಟ್ಟು ಹೇಳಿಸಿದ ನೀ ಪದವಾ |
ಕಾದು ರಕ್ಷಿಸು ಹರನೆ ಮುಕ್ತಿ ಸಂಪದವಾ ||       ೧೪೭

ಶರಣಾರ್ಥಿ ಮಹಾದೇವ ಶರಣು ಶರಣಾರ್ಥಿ |
ಶರಣಾರ್ಥಿ ಬಸವ ಪ್ರಮಥರಿಗೆ ಶರಣಾರ್ಥಿ ||
ವರಗುರುವೆ ಶರಣಾರ್ಥಿ ಶರಣು ಶರಣಾರ್ಥಿ |
ಪರಮ ಪಾವನ ಮೂರ್ತಿ ಪ್ರಭುವೆ ಶರಣಾರ್ಥಿ ||            ೧೪೮

ಗುಂಡಬ್ರಹ್ಮಯ್ಯನ ಚೌಪದನ ಸಂಪೂರ್ಣ
ಮಂಗಳ ಮಹಾ ಶ್ರೀ ಶ್ರೀ ಶ್ರೀ