ಸಂಧಿ : ಎರಡು

ಹರನ ಕೈಲಾಸದ ಇರುವ ಕೊಂಡಾಡುವರೆ
ನರರ ನಾಲಿಗೆಗೆ ಅಳವಲ್ಲ || ಶರಣರ
ಸಿರಿಯ ಕೊಂಡಾಡ (ದ) ಕವಿಯಿಲ್ಲ   ೧

ಚಿನ್ನ (ದ) ಬೆಳ್ಳಿ (ಯ) ಕೋಟಿ ರನ್ನದ ತೆನೆ ವಜ್ರ
ಇನ್ನೊಂದು ಕೋಟಿ ಬಿಡಿಮುತ್ತು || ನಗಲವ
ವರ್ಣಿಸಬಲ್ಲಾ ಕವಿಯಿಲ್ಲ  ೨

ಸೂರ್ಯನ ಶಶಿಬೀದಿ ಕೇರಿ ಬಾಗಿಲವಾಡ
ಸೇರಿಸಿದ ಕಂಭ ತೊಲೆ ಪಚ್ಚೆ || ಶರಣರ
ಚಾರಿತ್ರದ ಪರಿಯ ಶಿವಬಲ್ಲ           ೩

ಜಡೆ ತೊಡೆಯಲ್ಲಿ ಮಡದಿಯರು ಎಡಬಲದಲ್ಲಿ ಹರಿಯಜರು
ನಡುವೆ ಕಿನ್ನರರೂ ಶ್ರುತಿಗಳು || ಪಾಡತ್ತ
ನುಡಿದ ನಂದೀಶ ಪ್ರಥಮರಿಗೆ            ೪

ಅವರ ಮೇಳದಲಿಹ ಕವಿರಾಜ ಭೃಂಗೀಶ
ಸವಿ ಮಾತನೆಲ್ಲ ಒದಗೀಸಿ || ಹೊಗಳುತ್ತ
ರವಿಯ ಶಂಕರನ ಹೊಗಳೀದ            ೫

ತೆರೆ ತೆಗೆಯುತ್ತನಿಂದ ಉರುಗನ ಮರಿಯಂತೆ
ಶಿರದದಂತೆಗಳು ಕವಡೆಯ || ಜಂತಾದ
ಕುರುವನಿಂದಾನು ಅನುವಾಗಿ            ೬

ಶರಣರನೆಲ್ಲರು ಕೂಡಿ ಶೂರನ ಕೊಂಡಾಡುತ್ತ
ಮರಣವ ಗೆಲಿದೆ ಮದನಾನು || ಸುರಕೊಂದ
ಚದುರ ಎನ್ನಯ್ಯ ಜಯ ಜಯ         ೭

ಹಾ ಹಾ ಬಲ್ಲಿದರೆಂದು ಹೋ ಹೋ ನಿಲ್ಲಲ್ಲೆಂದು
ಮೋಹಿಸಿ ಸಭೆಯು ನಗಲೆಂದು || ನಾರಂದ
ತಾ ಬಂದು ಕರವ ಮುಗಿದಾನು          ೮

ದೇವರೆಲ್ಲ(ರ) ದೇವ ಇವನೆ ವರಗಳ ಕಾವ
ಜಗವ ಕೃಪೆಯಿಂದ ಕಾವವನೆ || ಚಿತ್ತೈಸಿ
ಬೇಗನ ಹದನ ಉಸುರೀದ   ೯

ಹಿಂಡು ದೇವರಿಗೆಲ್ಲ ಗಂಡದೇವನೆ ಕೇಳು
ಗುಂಡಬ್ರಹ್ಮಯ್ಯಗಳ ಅರಮನೆಗಳ || ಹೊಕ್ಕು
ಕಂಡೆನವನ ಪರಿಗಳ            ೧೦

ಅಗಳು ಕೋಟಿಗಳುಂಟು ಆಳು ವೇರಿಗಳುಂಟು
ಜಗಳಾದ ಭಟರು ಕಲಿವುಂಟು || ಮಲತರೆ
ತುರಗಗಳುಂಟು ಶರಣರಿಗೆ   ೧೧

ಅಗಳು ಕೋಟೆಗಳಿಲ್ಲ ಆಳುವೇರಿಗಳಿಲ್ಲ
ಜಗಳಾದ ಭಟರು ಕಲಿಯಿಲ್ಲ || ಕಾದುವರೆ
ತುರಗಗಳಿಲ್ಲ ಅವರಿಗೆ       ೧೨

ಸತ್ಯ ಧರ್ಮದ ಕೋಟೆ ಸುತ್ತುಗಳು ಕ್ಷಮೆ ದಯೆ
ಭಕ್ತಿ ಸಾಯುದವು ಬಲುಬೀಗ || ಶರಣರಿಗೆ
ಚಿತ್ತವೆ ಕದವು ಹೊಗಬಾರ   ೧೩

ಕಾಡುವ ಕಾಮ್ಯಗಳು ಜೋಡಿಸಿದಾನೆರಡುಗಳು
ಹೊಡೆಯ ಕೋಟಿ ಹುಲಿಮುಖವು || ಬಾಗಿಲಿಗೆ
ನಲಿಡೆಲೆವ ಬೀಗ ಬಲುವುಂಟು          ೧೪

ವೀರರಾಪುರಕ್ಕೆ ಮತ್ತಾರು ಬರದ ಹಾಗೆ
ದಾರಿ ದಾರಿಯಲ್ಲಿ ಬಲು ಭೂತ || ಕಾದಿಹೆ
ಮಾರಿ ಮಸಣೆಗಳು ಸಹವಾಗಿ           ೧೫

ಹೋದ ಪರಿ ಹೇಗೆಂದು ನಾರದ ಪ್ರಿಯ ಕೇಳೆ
ವೇದವುಳ್ಳವನು ನುಡಿದನೆನುತ || ತಾ ಹೋದ
ಭೇದವನೆಲ್ಲ ಶಿವನೀಗೆ       ೧೬

ಧರೆಯ ಪಂಡಿತರಿಗೆ ಗುರುತಾನೆ ವಿದ್ಯದ
ಗುರುವು ನಮ್ಮಯ್ಯ ಜಗಕೆಲ್ಲ || ನಾ ನಿಮ್ಮ
ಬಿರುದಿನ ಮಾತ ನುಡಿದೇನು            ೧೭

ನಿಮ್ಮ ಬಿರುದಿನ ಮಾತ ಗಮ್ಮನೆ ನುಡಿದರೆ
ಕರ್ಮ ಕಂಟಕವು ಕಡೆಗೋಡಿ || ಮಾರಿ ಮಸಣೆ
ತಮ್ಮ ತಾವರಿತು ಬಯಲಾದೊ ನೆರೆಹಿಂಗಿ       ೧೮

ಒಡೆಯನ ಕೇಳಿದರೆ ನುಡಿದರೆ ಹೇಳಿಹೆನೆಂದು
ಒಡಗೊಂಡು ಹೋದ ಅರಮನೆಗೆ || ರಾಯನ
ಮಡದೀಯರಿರುವ ಬಳಿಗಾಗಿ            ೧೯

ಊರು ಬಳಸಿ ನೋಡಿ ಆರು ಮೇಗ ಬಂದೇನು
ಕೇರಿಗಟ್ಟಳೆ ಅರಮನೆಯ || ಒಳಹೊಕ್ಕು
ಹಾರುವ ಕಂಡೆ ಕಳುವಾರೆ    ೨೦

ಮಾರಾರಿ ಚಿತ್ತೈಸು ಒರುಗಲ್ಲಿನ ಕೋಟಿ
ಭಾರಿಯ ಕಲ್ಲು ಬಲುಗುಂಡು || ಸೇರಿಹವು
ಭಾರ ಗಜಕಿಂಥ ಮಿಗಿಲಾಗಿ   ೨೧

ಮನ್ನೆಯನ ಕೋಟಿಗೆ ಭಿನ್ನವಿಲ್ಲದ ಕಲ್ಲು
ಇನ್ನೇನು ಬುದ್ಧಿ ಇದಕೆಂದು || ನಾರಂದ
ಕನ್ನಗತ್ತಿಗಳ ತರಬೇಕು       ೨೨

ಕಲ್ಲು ಚಾರಿಸುವರೆ ಎಲ್ಲುಂಟು ಮರುಜವಳಿ
ಮಲ್ಲಿಕಾರ್ಜುನನ ಗಿರಿಯಲಿ || ಪರ್ವತದಲಿ
ಅಲ್ಲುಂಟು ಸಿದ್ಧರ ಸಭೆಯಲ್ಲ       ೨೩

ಎಂದ ಮಾತನು ಕೇಳಿ ಚಂದ್ರಶೇಖರ ನಸುನಕ್ಕು
ಒಂದೊಂದು ಪರಿಯ ಶರಣರ || ನೋಡುವರೆ
ನಿಂದು ನೋಡೆವೆ ಕದ್ದು ಮೊರೆಹೊಕ್ಕು           ೨೪

ಕರೆ ಕರೆ ವೀರನ ಕರೆ ಕರೆ ಗಣೇಶನ
ಕರೆಯೀರೊ ವಿಶ್ವಕರ್ಮನು || ಎನುತಲಿ
ಹರನು ಇವನೊಡನೆ ನುಡಿದನು         ೨೫

ಬಂದ ವಿಶ್ವಕರ್ಮ ನಿಂದ ನೋಲಗದಲ್ಲಿ
ಚಂದದಲಿ ಕರವ ಮುಗಿದನು || ಶಿವರಾಯ
ಬಂದ ಬಿನ್ನವ ಅವಧಾನ     ೨೬

ವಸಂತ ಕಾಲದಲ್ಲಿ ಶಿಶು ಪಕ್ಷಿಯ ಕರೆವಂತೆ
ಸಸಿ ಬಾಡಿ ಮಳೆಯ ಕರೆವಂತೆ || ಕರೆದವು
ವಿಶ್ವಕರ್ಮನ ನಿನ್ನ ಬರಗಳ  ೨೭

ಶಶಿಧರ ನುಡಿದನು ಹಸ ಮಾಡಿ ಕನ್ನಗತ್ತಿಯ
ವಸುಧೆಯೊಳ ಹೋಗಿ ಕಳಬೇಕು || ಎಂದೆನುತ
ಶಶಿಧರನು ನುಡಿದ ಕುಶಲದಿ೨೮

ಯಾಕೆ ಕದ್ದನೆಂದರಿ ದೇವಲೋಕಕ್ಕೆ ಹಿಡಿವಾರೇ
ಕೋಪ ನಾರಂದ ವಿಶ್ವಕರ್ಮನು || ಶಿವನೀಗೆ
ಬೇಕಾದ ಪರಿಯ ನೋಕಿದರು           ೨೯

ಹರಹರಯೆಂದೆನುತ ಕರವೆರಡು ಮುಗಿಯುತ್ತ
ಪರಶಿವ ನಡಿಗೆ ನಮಿಸೀದ || ಶಿವರಾಯ
ನೀವು ನೆನೆದಂತ ಕಳವು ಜಯಿಸಯ್ಯ    ೩೦

ಹಿಂಭಾನುವಾರು ಮುಂದೆ ಇಂದುವಾರ
ಚಂದ್ರನ ಗ್ರಹಣ ತಿಥಿಯಲ್ಲಿ || ಅಮವಾಸೆಲಿ
ಕಂಡ ಕಬ್ಬಿನವ ತರಿಸಯ್ಯ    ೩೧

ನಾಳೆ ಭಾನುವಾರದ ಮೇಲೆ ಇಂದುವಾರ
ಸೂರ್ಯನ ಗ್ರಹಣ ತಿಥಿಯಲ್ಲಿ || ಅಮವಾಸೆಲಿ
ಕಂಡ ಕಬ್ಬಿನ(ವ) ತರಿಸಯ್ಯ೩೨

ಹಕ್ಕಿಯ ಗೂಡಿನಲಿ ಶಿಶುಪಕ್ಷಿ ಕಾಣದ
ಸಿಕ್ಕಿರುವ ಉಕ್ಕುಗಳ ತರಿಸಯ್ಯ || ಎಂದರೆ
ಮುಕ್ಕಣ್ಣ ಶಿವನು ನಸುನಕ್ಕು           ೩೩

ಹೇಳಿದ ಮಾತಿಗೆ ಏಳುಲೋಕವ ಹೊಕ್ಕು
ಏಳು ಲೋಹಗಳ ತೆಗೆತಂದು || ನಾರಂದ
ಹೇಳಿದ ವಿಶ್ವಕರ್ಮನಿಗೆ ಮರೆಮಾಡಿ   ೩೪

ಜೋಳಿಗೆ ಒಳಗಣ ಹೇಳಿದ ಉಕ್ಕು ತೆಗೆತಂದು
ಭಾಳಾಕ್ಷ ತನ್ನ ಬಲಗೈಯ್ಯಲ್ಲಿ || ಹಿಡಿತಂದು
ಏಳು ಗಳಿಗೆಗಳೊಳಗೆ ಅನುಮಾಡಿ      ೩೫

ಕಕ್ಷ ಪಾಲದೊಳಗಣ ಉಕ್ಕಿನುಳಿಯ ತೆಗೆ ತಂದು
ಮುಕ್ಕಣ್ಣ ತನ್ನ ಬಲಗೈಯಲ್ಲಿ || ಹಿಡಿಕೊಂಡು
ಮುಕ್ಕಾಲು ಗಳಿಗೆಯೊಳಗೆ ಅನುಮಾಡಿ           ೩೬

ಅಡವೀಯ ಕಗ್ಗಲ್ಲ ಒಡೆದು ಚೂರ್ಣ ಮಾಡಿ
ಹಿಡಿದು ರಕ್ಕಸರ ತಿದಿಮಾಡಿ || ವಿಶ್ವಕರ್ಮನ
ಅಡವಿಯ ಒಳಗೆ ಎಸೆದಾನು೩೭

ಬಟ್ಟೆಯ ಕಗ್ಗಲ್ಲ ಕುಟ್ಟಿ ಚೂರ್ಣವ ಮಾಡಿ
ಮೆಟ್ಟಿ ರಕ್ಕಸರ ತಿದಿಮಾಡಿ || ವಿಶ್ವಕರ್ಮನು
ಅಟ್ಟಡವಿಯಲ್ಲಿ ಎಸೆದಾನು            ೩೮

ನಾಗಲೋಕದ ಮಣ್ಣು ದೇವಲೋಕದ ಉದಕ
ತೂಗಿ ಲೇಪನಗಳವರೆದಾರು || ಒಲೆ ಮೊಗ
ಸಾಗಿತು ಕುಲುಮೆ ಜಗವರಿಯೆ          ೩೯

ಮದನ ಸುರನ ಕೊಂದು ತಿದಿಗಳ ಜೋಡಿಸಿ
ಮೊದಲೆ ಮುಪ್ಪುರವನುರುಹೀದ || ಇದ್ದಲಿಯ
ಒದಗಿಸಿ ತಂದರು ಕುಲುಮೀಗೆ          ೪೦

ಆರೂರ ಇದ್ದಿಲ ಮೂರೂರ ಕಬ್ಬಿಣ ತಂದು
ಊರು ಗಾಳಿ ಪೂಜೆಯಲಿ ಒಲೆ ಮಾಡಿ || ವಿಶ್ವಕರ್ಮನು
ಆರಣ್ಯದೊಳಗೆ ಎಸೆದಾನು   ೪೧

ಆಲದ ಮರದಲ್ಲಿ ಹೂಡಿದರು ಕುಲುಮೆಯ
ಆಲ ತಲ್ಲಣಿಸಿ ನಡುಗೀತು || ವಿಶ್ವಕರ್ಮ
ಅರಣ್ಯದೊಳಗೆ ಎಸೆದಾನು   ೪೨

ಚಂದ್ರನು ಸೂರ್ಯನು ಒಂದಾದ ವ್ಯಾಳ್ಯೆದಲಿ
ತಂದು ಹೂಡಿದರು ಕುಲುಮೆಯ || ಕನ್ನಗತ್ತಿಯ
ಚಂದವ ಮಾಡಿ ಕಿಡಿಗಾಸಿ     ೪೩

ಇಂದ್ರನು ವರುಣನು ಒಂದಾದ ವ್ಯಾಳ್ಯೆದಲಿ
ನಿಂದು ಕುಭೇರ ಯಮನೀಗೆ || ಒಲೆಯ
ತಂದಾರು ಬೆಟ್ಟಗಳ ಎಡೆಯಲ್ಲಿ       ೪೪

ಮೂರು ಕಣ್ಣಿನ ದೇವ ಮೂರು ಪುರಗಳ ಸುಟ್ಟು
ಮೂರು ಬೆಟ್ಟಗಳ ಎಡೆಯಲ್ಲಿ || ಶಿವನಿಂದು
ಮೂವರು ಕಳ್ಳರು ಅನುವಾಗಿ          ೪೫

ಇಂದ್ರ ಅಡಿಗಲ್ಲಾದ ಬಂಧುಯಜ್ಞ ಕಿಡಿಯಾದ
ಮಂದ ಮಾರುತನು ತಿದಿಯಾದ || ಒತ್ತುವರೆ
ಬಂದವನಾದ ಮಾಯನಿಗೆ    ೪೬

ಬಡಗಣ ತಿದಿಯಾಗಿ ಕುಭೇರ ಹಿಡಿವ ಚಿಮ್ಮಟಿಗೆಯಾಗಿ
ಹಿಡಿವರಿಕ್ಕುಳವು ಯಮನಾದ || ಪಣಿರಾಜ
ಅಡಿಗಲ್ಲು ಆದ ಮಾಯನಿಗೆ            ೪೭

ಹಮ್ಮುಳಿಗರಿಬ್ಬರು ಚಿಮ್ಮಟಿಗೆ ಹಿಡುಕೊಂಡು
ಮುಮ್ಮುಖದ ಸಿಡಿಲು ಹೊಡೆದಂತೆ || ಹೊಡೆದರೆ
ಕನ್ನಗತ್ತಿಗಳು ಹಸನಾದೊ   ೪೮

ವಜ್ರದ ನಿಲುವಿ(ಯ)ಲಿಯಾದವು ಮೂರೆಸೆಳು
ಘರ್ಜಿಸಿ ಧರೆಯ ಹೊಳಚುವಂತೆ || ಕನ್ನಗತ್ತಿಯ
ಶುದ್ಧ ಮಾರ್ಗದಲ್ಲಿ ಹಸನಾದೊ     ೪೯

ಮುಡಿಗೆ ವಿಷ್ಣುವಿನ ರೂಪ ಕಡೆಗೆ ಬ್ರಹ್ಮನ ರೂಪ
ನಡುವೆ ಈಶ್ವರನ ಪ್ರತಿರೂಪ || ಕನ್ನಗತ್ತಿಯು
ಗಗನ ಮಾರ್ಗಕ್ಕೆ ಎಸೆದಾವು  ೫೦

ಪನ್ನಂಗ ಹೆಡೆಯಂತೆ ಕನ್ನಗತ್ತಿಯ ಮಾಡಿ
ಚೆನ್ನಾಗಿ ಕರುಣ ರಸಗೂಡಿ || ದನ್ನವ
ತಮ್ಮನ ಹಿಡಿತಂದು ಬಲಿಗೊಟ್ಟು     ೫೧

ವೇದ ಶಾಸ್ತ್ರಗಳಿಂದ ಮೋಡಿ ಮಂತ್ರವ ತುಂಬಿ
ಭೇದಕತನದಲ್ಲಿ ಅನುಮಾಡಿ || ಕನ್ನಗತ್ತಿಗೆ ನೈ
ವೇದ್ಯ ಬೋನಗಳಿಂದ ಬಲಗೊಂಡು   ೫೨

ಹಲವು ಗಂಧಾಕ್ಷತೆಯಿಕ್ಕಿ ಬಲಗೈಲಿ ಹಿಡುಕೊಂಡು
ಗೆಲುವಿಂದ ಶಿವನ ನೆನೆಯುತ್ತ || ಬಂದಾನು
ನಲಿದು ವಿಶ್ವಕರ್ಮ ಮುದದಿಂದ       ೫೩

ಕನ್ನಗತ್ತಿಯ ಮಾಡಿ ಚೆನ್ನಾಗಿ ವಿಶ್ವಕರ್ಮನು
ಪನ್ನಂಗಧರನ ಎಡೆಗೆ ತಾ ನಡೆದನು || ಕನ್ನಗತ್ತಿಯ
ಮುಂದಿರಿಸಿ ಕರವ ಮುಗಿದಾನು         ೫೪

ಆಳು ತೋರದ ಗುಂಡು ಸೀಳಾಗಿ ಬೀಳಲಿ
ಹಾಳು ಮಣ್ಣಾಗಿ ಉದುರಲೆಂದು || ವಿಶ್ವಕರ್ಮ
ಭಾಳಾಕ್ಷಗೆ ಬೆಸನ ಕೊಡುತಿರ್ದಾ         ೫೫

ಬೆಟ್ಟ ತೊರದ ಗುಂಡು ಉಪ್ಪಾಗಿ ಉದುರಲಿ
ಉಪ್ಪು ಮಣ್ಣಾಗಿ ಉದುರಲೆಂದು || ವಿಶ್ವಕರ್ಮ
ಒಪ್ಪದಲಿ ಬೆಸನ ಕೊಡುತಿರ್ದಾ         ೫೬

ಗುಂಡು ಗುಂಡುಗಳೆಲ್ಲ ಕಂಡಿಸಿ ಬೀಳಲಿ ಆನೆಯು
ಕೊಂಡೆಯ್ಯುವಂತೆ ಕೆಲವೀಗೆ || ಹೋಗೆಂದು
ಕೊಂಡಾಡಿ ಬೆಸನ ಕೊಡುತಿರ್ದಾ        ೫೭

ಕನ್ನಗತ್ತಿಯ ಮಾಟವು ಮಣ್ಣೆಲ್ಲ ನೀರಾಗಿ
ತನ್ನ ತಾನರಿತು ಬಯಲಾಗಿ || ಹೋಗೆಂದು
ಬಿನ್ನಾಣ ಬೆಸನ ಕೊಡುತಿರ್ದಾ          ೫೮

ಕನ್ನಗತ್ತಿಯ ಮಾಡಿದ ಚಿನ್ನಣ್ಣ ನೀ ಕೇಳು
ಚೆನ್ನಾಗಿ ಕಳವು ದೊರೆತಾರೆ ||ನಾವು ಕದ್ದ
ಹೊನ್ನು ಬಂಗಾರ ಸರಿಪಾಲು           ೫೯

ಕತ್ತಿಯ ಮಾಡಿದ ಚಿತ್ರೀಕ ನೀ ಕೇಳು
ಚಿತ್ರಾದಿ ಕಳವು ದೊರೆತಾರೆ || ನಾವು ತಂದ
ಹೊನ್ನು ಬಂಗಾರ ಸರಿಪಾಲು           ೬೦

ಕನ್ನಗತ್ತಿಯ ಚಂದವೆಲ್ಲವ ತಾ ನೋಡಿ
ಚಂದ ಚಂದದಲಿ ತೊಡಿಗೇಯ || ತೊಟ್ಟರು
ವಿಶ್ವಕರ್ಮ ನಿನ್ನ ಮನದಣಿಯೆ         ೬೧

ಏಳು ನಾರಂದನೆ ಬೇಳುವೆಯ ಕೊಂಡು ಬಾ
ಹೇಳಲಂಜುವೆನು ಶಿವರಾಯ || ನೀವಿರ್ದು
ಹೇಳಿದರೆ ನಾನು ತರಬಲ್ಲೆ  ೬೨

ಭಸ್ಮಾಸುರನು ಕೊಂದ ಭಸಿತವ ಕೊಂಡು ಬಾ
ಎಸೆವ ಅಂದಕನನುರುಹಿದ || ಬೂದಿಯ
ಹಸ ಮಾಡಿಕೊಂಡು ನಡೆಯೆಂದ        ೬೩

ಜವಿಯ ಬೂದಿಯ ತವಕದಲ್ಲಿ ಕೊಂಡುಬಾರೆಂದು
ಶಿವನು ನಾರಂದನ ಕಳುಹಿದರೆ || ಬಂದಾನು
ಯುವತಿ ಗೌರಮ್ಮನರಮನೆಗೆ           ೬೪

ನವರತ್ನ ರನ್ನದ ಪ್ರಭೆಯಂತೆ ಯುವತಿ
ಗೌವುರಮ್ಮ ಅರಮನೆಯ || ಶೃಂಗಾರವ
ಹವಣಿಸಬಲ್ಲ ಕವಿಯಾರು  ೬೫

ಕಳವ ಕದ್ದೆನೆಂದು ಗೌರಿಯ ಕೇಳಲು
ಕಳವೇಕೆ ಸ್ವಾಮಿ ಕರಕಷ್ಟಾ || ಮರ್ತ್ಯದ
ಶರಣರು ನಿಮಕಂಡು ನಗುವರು        ೬೬

ನಗಲೇಕೆ ಗಿರಿಜೆ ಜದಗೊಳಾಂಗನೆಯ ಬಿರಿದ
ಮಿಗಲಾಗಿ ಹಿಡಿಸೂವ ಶರಣರ || ಮನಗಳ
ಬಗೆಯ ನೋಡುವೆ ಕದ್ದು ಮರೆಹೊಕ್ಕು         ೬೭

ಮರೆಹೊಕ್ಕರೆ ಶರಣರು ಹಿಂದೆ ಸಾರುವರಲ್ಲಿ
ಬಿರಿದ ಹಾನಿಯ ಮಾಡಿಕೊಂಬುವರಲ್ಲ || ಶಿವರಾಯ
ಬಿರಿದ ಕದ್ದುದೂ ಹೊರಬೇಡ          ೬೮

ದೂರಕೆ ಗೌರಾಯಿ ಓರುಗಲ್ಲಿಗೆ ಹೋಗಿ
ವೀರ ಗಣಪತಿಯ ಅರಮನೆಯ || ಒಳಹೊಕ್ಕು
ಭಾರಿ ಬಂಗಾರವ ತರುವೆನು ನಿನಗೆಂದ೬೯

ಆರಿಗಾದರೆ ಕಾರ್ಯವು ಮುರಾರಿ ಶಿವರಾಯ
ದೂರುಗಳ ನುಡಿದಾನೂ || ಎಂದೆನುತ
ನಾರಿ ಗೌರಮ್ಮ ನುಡಿದಾಳು೭೦

ಚಿಂತೆಯಾಕೆ ಗೌರಾಂಬೆ ಕಂತೆಗಳ ಧರಿಸಿದರೆ
ಅಂತಸ್ತಮಾನ ನಿನಗೇಕೋ || ಕಳವೀನ
ಪಂಥವ ಬಿಡೆ ನಿನ್ನ ನುಡಿಗೇಳಿ           ೭೧

ನಾರಂದ ನುಡಿದನು ಶಿವರಾಯಗೆ ಬಿನ್ನೈಸಿ
ನಾರಿ ಗೌರಿಯೊಳು ನುಡಿದಾನು || ಓರುಗಲ್ಲ
ಭೂ ಭಂಡಾರವ ಕಳಬೇಕು   ೭೨

ಕದ್ದರೆ ಕೈ ಕೊಯಿದಾರು ಹದ್ದುಗಟ್ಟ ಕಟ್ಟುವರು
ಅದ್ದದ್ದಿ ಜಲದಲ್ಲಿ ತೆಗೆವರು || ಶಿವರಾಯ
ಬುದ್ಧಿಯಿಲ್ಲ ಸ್ವಾಮಿ ಕೇಳಬೇಡಿ     ೭೩

ಅಜ್ಜಗೆ ಬುದ್ಧಿಗಳುಂಟೆ ವಜ್ರಕೆ ವೆಜ್ಜಗಳುಂಟೆ
ಸಜ್ಜನರ ಮಾತು ಸಟೆವುಂಟೆ || ಹೆಣ್ಣಿನ ಬುದ್ಧಿಗೆ
ಮೆಚ್ಚುವರು ಮರುಳಾರು   ೭೪

ಕಲ್ಲಮೇಲೆ ಮಳೆ ಹೊಯ್ದರೆ ಕಲ್ಲು ಸಿಡಿಗೊಂಬುದೆ
ಕಲ್ಲ ಮೇಲೆ ತಾವರೆ ಬೆಳೆವುದೆ || ಹೆಣ್ಣಿನ
ಸೊಲ್ಲ ಮೆಚ್ಚುವರು ಮರುಳಾರು    ೭೫

ಒಡೆಯರೆ ಕಳುವಾರೆ ಜೆಡೆಯುಂಟು ನಿಮ್ಮಲ್ಲಿ
ಬಿಡದೊಡಿ ಬರಲು ತಲೆ ಬಿಚ್ಚಿ || ಮುಚ್ಚಿನ
ಗೆದ್ದು ನೀವು ಕಳುವರು       ೭೬

ಹೊಂಚಿ ಹೋಗುವಾಗ ಹಂಚು ಗಪ್ಪರಕೆ ಒಡೆದುದು
ಪಂಜೆ ಜಡೆ ಬಿಟ್ಟು ನೆಲಕ್ಕಿಳಿದು || ಬಿದ್ದಾವು
ವಂಚನೆಯೊಳಗೆ ಕಳಬೇಡ    ೭೭

ಅಡವೀಗೆ ಮಳೆ ಹೊಯಿದಾರೆ ಗಿಡ ಕಿಡಿಗೊಂಬುದೆ
ಮುಡಿಯ ಮೇಲೆ ಪಚ್ಚೆ ಬೆಳೆಯಾದೆ || ಹೆಣ್ಣೆಂಬ
ನುಡಿಯ ನೆಚ್ಚುವರೆ ಮರುಳಾರು      ೭೮

ಏಳುಸುತ್ತಿನ ಅರಮನೆಯ ಭಾಳಾಕ್ಷ ಹೊಗಬೇಕು
ಮಾಳಿಗೆಯೋಲಗೆ ಕಳ ಬೇಕು || ಸಿಕ್ಕಿದರೆ
ಬೋಳಂಬಿಲೆಜ್ಜಿ ಕೊಲುವಾರು         ೭೯

ಹಲಸು ಹೂವಾದಂದಿಗೆ ಬೆಲ್ಲ ಕಹಿಯಾದಂದಿಗೆ
ಕಲ್ಲು ಪ್ರತಿಮೆಗಳು ಕುಣಿದೊಂದು || ಹೆಣ್ಣಿನ
ಸೊಲ್ಲು ನೆಚ್ಚುವರೆ ಮರುಳಾರು      ೮೦

ಎಂಟು ಸುತ್ತಿನ ಕೋಟಿ ಗಂಟಿಯ ಒಳಪಾರ
ಮಂಟಪದೊಳ ಹೊಕ್ಕು ಕಳಬೇಕು || ಕಂಡರೆ
ಗಂಟಲ ಗಾಣ ತೆಗೆವಾರು     ೮೧

ಹತ್ತು ಸುತ್ತಿನ ಕೋಟಿ ಹತ್ತಿ ನೀವಿಳಿವಾಗ
ಕೆತ್ತಿದ ಶೂಲ ಘನವಯ್ಯ || ಶಿವರಾಯ
ಅತ್ತರೆ ಅವರು ಬಿಡುವಾರೆ   ೮೨

ಆ ಹೋಟಿನ ಕೈಕೊಂಡು ದಾಟುವೆ ಅಗಳನು
ಪಾಟಿಸುವೆ ನಾನು ಪರಿಪರಿಯಾ || ಶರಧೀಯ
ಗಾಟದಲಿ ನೆಗೆವೆ ಮುಗಿಲಿಗೆ  ೮೩

ಮುಗಿಲ ಹತ್ತಿಳಿವಾಗ ಒಡೆಯರೆಂದರೆ ಬಿಡರು
ಬಿಗಿದಾರು ಜಡೆಯ ಮುರಿ ಮಾಡಿ || ಒಳಗುದ್ದ
ತೆಗೆವರು ತಮ್ಮ ಮನದಣಿಯ          ೮೪

ಕೋಟಿ ಹತ್ತಿಳಿವಾಗ ನೋಟಕರು ಕಂಡರು
ಪಾಟಿಸಿ ನಿಮ್ಮಹಿಡಿವರು || ಸಿಕ್ಕದರೆ
ಬೇಟೆಂಬಿನಲ್ಲಿ ಯಚ್ಚಿ ಕೊಲುವರು   ೮೫

ಕೃತ್ಯ ನುಡಿವಾರೆ ಮೃತ್ಯು ಹೆಂಗಸು ನೀನು
ಸತ್ಯವ ನುಡಿಯೆ ಕಟಕೀಯೆ || ಬೇಡವೆಂದು
ಹಸ್ತದಲಿ ಮಂಡೆ ತಡೆಯಿದರು          ೮೬

ಮಡದಿ ಮಾತಾಡಿಸುತ ನುಡಿಗಳ ಕಂಪಿಸುತ
ಜಡೆಮುಡಿಯ ಮರದು ಕೊಡಹಿದರೆ || ಕನ್ನಗತ್ತಿ
ಸಿಡಿದು ಪಾರ್ವತಿಗೆ ಎದುರಾಗಿ          ೮೭

ಕಂಡಳು ಕನ್ನತ್ತಿಯ ಭೂಮಂಡಲ(ಲ)ದಲಿ ಬಿದ್ದುದನು
ಕೊಂಡೆಯರ ಕಳವು ಘನವೆಂದು || ಗೌರಮ್ಮ
ಕೆಂಡವ ತುಳಿದಂತೆ ಬೆರಗಾದ(ಳು)      ೮೮

ಬಚ್ಚಿಟ್ಟ ಕನ್ನಗತ್ತಿಯ ಅಚ್ಚನು ಕಂಡಳು
ಹೆಚ್ಚಿದರು ಕಳ್ಳರು ನಾಡೊಳಗೆಂದು || ಗೌರಮ್ಮ
ನಚ್ಚಿಂತನ ನೋಡಿ ಬೆರಗಾದ(ಳು)      ೮೯

ಕಾಡಿಗೆ ಕಣ್ಣವಳೆ ಸೂಡಂಗದ ತೊಳವಳೆ
ನಾಡಾಡಿ ತಪವ ಗೆಲಿದವಳೆ || ಗೌರಾಂಬಿ
ಗಡದಲಿ ಶಿವಗೆ ಎಡೆಮಾಡು೯೦

ಕಂಕಣದ ಕರದವಳೆ ಕುಂಕುಮದ ನರಿಯವಳೆ
ಶಂಕರನ ಗೆಲಿದೆ ತಪದಿಂದ || ಭೂವಳೆಯ
ನಾಂಕನ ವೈರಿಗೆ ಎಡೆಮಾಡು            ೯೧

(ಒ)ಪ್ಪಡಿ ನಡುವಿನವಳೆ ದರ್ಪ ಮುಖ ಕಳೆಯವಳೆ
ಪ್ರಾಣ ಮುಖದ ಕಳೆಯವಳೆ || ಗೌರಾಯಿ
ಸರ್ಪ ಭೂಷಣಗೆ ಎಡೆಮಾಡು           ೯೨

ಬಟ್ಟಗಂಗಳ ಬಾಲೆ ನಡುವಿನ ಬಾಲೆಯ
ಷಟ್ಪದರಿಸಿಯೆ ಪಾರ್ವತಿಯ ದೇವಿ || ಗೌರಮ್ಮ
ಸೃಷ್ಟಿಗೀಶ್ವರಗೆ ಎಡೆಮಾಡು           ೯೩

ದೇವಾಂಗದ ಸೀರೆಯ ಭಾವೆ ಕೇಳು ಗೌರಾಯಿ
ದೇವನ ಗೆಲಿದೆ ತಪದಿಂದ || ಭೂವಳೆಯ
ನಾವು ಹೋಗುವ ಕಳ್ಳರಿಗೆ ಎಡೆಮಾಡು           ೯೪

ಎಂದ ಮಾತಿಗೆ ಗಿರಿಜೆನಿಂದು ಬೆರಗಾದಳು
ಕಂದರ್ಪ ಹರನೆ ಶರಣೆಂದು || ಶಿವರಾಯ
ನೀವು ನೆನೆದಂತ ಕಳವು ಜಯಿಸಯ್ಯ    ೯೫

ಮೀಸಲಗ್ಗ(ವ)ಣಿ ತಂದು ಹೋಸಿದಳು ಮನೆಗಳ
ಸೋಸಿ ಪನ್ನೀರ ಜಳಕವ || ಮಾಡಿ
ಲೇಸಾಗಿ ಅಡಿಗೆಗೆದೊಡಗಿದಳು          ೯೬

ಕುಂಬಳದ ಕಾಯನ್ನು ಇಂಬರಿತು ಜಾರಿಸಿ
ಸಂಭಾರ ಸಾಸಿವೆಗಳನಿಕ್ಕೆ || ಗೌರಮ್ಮ
ಉಂಬುವರ ಮನವು ದಣಿವಂತೆ         ೯೭

ಮಟ್ಟ ಬದನೆಕಾಯ ತೊಟ್ಟಿ ತೆಗೆದು ಹೆಚ್ಚಿಸಿ
ಬಟ್ಟೆಣ್ಣೆಬಿಟ್ಟು ಪ್ರತಿ ಚೂರ್ಣಾ || ವಗ್ಗರಣೆಯು
ನೆಟ್ಟಾನೆ ಶಿವನೆ ಎಸೆದವು     ೯೮

ಧರೆ ಹೀರದಕಾಯ ನಾರ ತೆಗೆದು ಕತ್ತರಿಸಿ
ಬೇರಣ್ಣೆ ಹೊಯಿದು ಪ್ರತಿ ಚೂರ್ಣದ || ವಗ್ಗರಣೆ
ಮುರಾರಿಯಡೆಗೆ ಬಡಿಸಿದರು            ೯೯

ಹಾಗಲದ ಕಾಯನ್ನು ಹದನರಿತು ಅಡಿಗೆಯನು
ಮಾಡಿದರೆಣ್ಣಿಯ ಬಿಟ್ಟ ಪ್ರತಿ ಚೂರ್ಣ || ವಗ್ಗರಣೆ
ಮುರಾರಿಯೆಡೆಗೆ ಬಡಿಸಿದರು            ೧೦೦

ಬಲಿದ ಬಾಳೆಕಾಯ ಕಡಿದು ಕಾಕಡಿ ಮಾಡಿ
ವಡನಿಂಗೆ ಕೈಯ್ದ ಹದ ಮಾಡಿ || ವಗ್ಗರಣೆ
ಮೃಡನಿದ್ದ ಬಳಿಗೆ ಎಸೆದಾವು           ೧೦೧

ಕಸಾಂಬ ನಾ ಭೂಭಕ್ತ ಜರಿಗೆ ರಾಜ ನಾ
ಕೋದಂಡರಾಜನ ಕೊವಾಳೆ || ಅನ್ನವು
ಮಹಾದೇವನ ವಾಸಕ್ಕೆ ಎಸೆದಾವು      ೧೦೨

ಅನ್ನಂಗಿ ಜೆನ್ನಂಗಿ ಮದನಂಗಿ ಸೋವಂಸಲೆ
ಹೊನ್ನ ಕೇಸರಿ ಮದವುಳ್ಳಿಗನ || ಬೋನವು
ಮಲ್ಲಯ್ಯನೆಡೆಗೆ ಬಡಿಸಿದರು           ೧೦೩

ಅಪ್ಪಯೆ ನೆಲ್ಲುಂ ತುಪ್ಪಸಯ ನೆಲ್ಲು
ಕಪ್ಪೊತ್ತಿ ಬೆಳೆದ ಕರಿ ರಾಜನ || ಬೋನವು
ಸರ್ಪಭೂಷಣಗೆ ಎಡೆಯಾದು           ೧೦೪

ತುಂಬೆಯ ಪುಷ್ಟದಂತೆ ಉಂಬ ಬೋನವ ಮಾಡಿ
ಗಂಧ ಮೊದಲಾದ ತನಿವಣ್ಣ || ಸೂಸುವ
ಅಂದದಲಿ ತೋಯ ಹದಮಾಡಿ        ೧೦೫

ದೇಶದೊಳುಳ್ಳಂತ ಲೇಸು ಕಜ್ಜಾಯವು ಜಗ
ದೀಶ್ವರ ನಿಗರ್ಪಿತ ಅಡಿಗೇಯ || ಮಾಡಿದಳು
ಸೋಸಿ ಪನ್ನೀರ ಬೆರೆದಳು   ೧೦೬

ಯೇರಿ ದೇವರಿಗೆ ತಂದು ಗದ್ದಿಗೆಯಿಕ್ಕಿ
ಸಂಬ್ರಾಣಿ ಧೂಪದೊಡೆಯನೆ || ಚಂದ್ರಶೇಖರನ
ವಿನಯದಲಿ ಬಂದು ಕರದಾಳು          ೧೦೭

ಅಗ್ಗಣಿ ತಂದೀದೆ ಚಿತ್ತೈಸು ಮೂರುತಿ ಲಿಂಗ
ಮಡ್ಡಿಯ ಧೂಪದೊಡೆಯನೆ || ಬಾರೆಂದು
ಲೋಕ ಪಾವನೆಯು ಶಿವನ ಕರೆದಾಳು೧೦೮

ಮಂಗಳಾರತಿಯಿದೆ ಚೆತ್ತೈಸು ಮೂರುತಿಲಿಂಗ
ವೇದಶಾಸ್ತ್ರಕ್ಕೆ ಒಡೆಯನೆ || ಬಾರೆಂದು
ಗೌರಿಪಾರ್ವತಿಯು ಕರೆದಳು೧೦೯

ಪಟ್ಟಿಯ ಗದ್ದಿಗೆಯ ಇಟ್ಟಾಳು ಶಿವನಿಗೆ
ಅಷ್ಠ ಭಕ್ಷ್ಯಗಳೆಲ್ಲ ಬಡಿಸಿದರು || ಕುಳಿತಾಗ
ಕಟ್ಟಂಗದರನು ಸಲಿಸಿದರು  ೧೧೦

ಆರೋಹಣೆಗಳ ಮಾಡಿ ಪನ್ನೀರ ಹಸ್ತಕ್ಕೆ ನೀಡಿ
ನಾರಿ ತೆಗೆ ತಂದು ಬಿಳಿಯಲೆಯ || ಕರ್ಪೂರ
ಹೋಳು ವೀಳ್ಯವ ತೆಗೆದು ಕೊಡುತಿರ್ದ           ೧೧೧

ಪನ್ನೀರ ಕೈಗೆರದು ಸಣ್ಣ ಭಾಗದ ಹೋಳು
ಸುಣ್ಣ ಬಿಳಿಯಲೆಯ ಕೊಡುತಿರಲು || ಶಿವನೆದ್ದು
ಇನ್ನೊಂದು ಮಾತ ನುಡಿದಾನು        ೧೧೨

ಮರ್ತ್ಯಲೋಕಕ್ಕೆ ಹೋಗಿ ಸತ್ತೆನಾದರೆ ಸಿರಿ
ಮತ್ತೊಬ್ಬ ಬಾಲಗೆ ಅನುವಾಗಿ || ಹೋಗೆಂದು
ಅರ್ತಿಯಲಿ ಶಿವನು ನುಡಿಸಿದನು        ೧೧೩

ಚಂದ್ರಶೇಖರ ಶಿವನೆ ಕುಂದವ ನುಡಿದರೆ
ಬಂದೇನು ನಿಮ್ಮ ಬಳಿಗೊಂಡು || ನಾನೆಂದು
ಚಂದ್ರಕಂಗಳಿಗೆ ಜಲ ತುಂಬಿ  ೧೧೪

ಎತ್ತಿದಳು ಆರತಿಯ ಮತ್ತೊಂದು ಶಿವನೀಗೆ
ಮರ್ತ್ಯದ ಕಳವ ಜಯಿಸಯ್ಯ || ಎಂದೆನುತ
ಅರ್ತಿಯಲಿ ಹರಸಿ ನುಡಿದಳು            ೧೧೫

ಮಲ್ಲಯ್ಯ ದೇವರೆ ಎಲ್ಲ ವಿದ್ಯವ ಕೇಳಿ
ಚಲ್ಲುವ ಮಳಲು ಜೀವ ಮಾಡಿ || ಒಳಗಾದ
ಎಲ್ಲ ವಿದ್ಯೆಗಳ ಕೈಕೊಳ್ಳಿ   ೧೧೬

ಸಿದ್ಧರ ಹರವಿದ್ಯೆ ಎಲ್ಲ ಕೈಕೊಳ್ಳಿ
ನಿದ್ದೆ ಹೊತ್ತಿನಲಿ ಅಗುಳೀಯ || ತೆಗೆಯಂತ
ಸಿದ್ಧ ವಿದ್ಯೆಗಳ ಕೈಕೊಳ್ಳಿ    ೧೧೭

ಕಳವೀಗೆ ಹೋಗುವಾಗ ಶಿವನು ಹುಲಿದೊಗಲುಟ್ಟು
ಅಳವಡಿಸಿ ಜಡೆಯ ಮಡುದೀಯ || ಮರೆಮಾಡಿ
ತೊಡೆಯು ಪಾರ್ವತಿಯ ನಿಳುಹೀದಾ  ೧೧೮

ಲಿಂಗ ತಾ ಶಕುನವ ನಿಂದಲ್ಲಿ ನೋಡುತ್ತ
ತುಂಬಿದ ಕೊಡನ ಇದಿರಲ್ಲಿ || ಕಾಣುತ್ತ
ಮಂಡೆ(ಯ) ಮೇಲೆ ತಳಿದಾರು          ೧೧೯

ದೇವತಾ ಶಕುನವ ಭಾವದಲ್ಲಿ ನೋಡುತ್ತ
ಬಾಲೆಯರ ಕೊಡ ಇದಿರಲ್ಲಿ || ಕಾಣುತ್ತ
ಪಾದದ ಮೇಲೆ ತಳಿದಾರು   ೧೨೦

ಮಡದಿಯರಿಬ್ಬರ ಮಡಗಿ ಕೈಲಾಸದಲ್ಲಿ
ವಡನೆ ಕಾವಲಿಗೆ ಇರುಯೆಂದು || ಶಿವ ತಮ್ಮ
ಕಿಡಿಗಣ್ಣ ಮಗನ ಇರಿಸಿದನು            ೧೨೧

ಹಸಿಯ ಬೆತ್ತದ ಕೋಲು ಮಿಸುನಿಯ ಲಾಕುಳ
ನೊಸಲ ಬಂದೆಲವಿ ಕಿರುಜೆಡೆ || ಪರ್ವತದ
ಶಶಿಧರ(ನು) ಕಳವ ಬಯಸಿದ           ೧೨೨

ಚಿಕ್ಕ ಬೆತ್ತದ ಕೋಲು ಇಕ್ಕಿದ ಆಧಾರ
ಸೊಕ್ಕು ಕೆಂಜೆಡೆ ಸುಲಿಪಲ್ಲು || ಪರ್ವತದ
ಶಶಿಧರ(ನು)ಕಳವ ಜಯಸಿದ            ೧೨೩

ಸಣ್ಣ ಬೆತ್ತದ ಕೋಲು ಬಣ್ಣದ ಲಾಕುಳ
ಬೆನ್ನ ಬಂದೊಲೆವ ಕಿರುಜೆಡೆ || ಪರ್ವತದ
ಚೆನ್ನಮಲ್ಲಯ್ಯ ಕಳವ ಜಯಿಸಿದ     ೧೨೪

ಇನ್ನೆಯರಿಬ್ಬರು ಕೂಡಿ ಬರುವರು ಮರ್ತ್ಸಕ್ಕೆ
ಎಳೆಯ ಮಾದಾಳ ಮರದಲ್ಲಿ || ಶಿವ ನಿಂತು
ಎಳೆಯ ಸೇರಿದರು ಮನಗಳ  ೧೨೫

ಹರನು ನಾರಂದರನು ಬರಲಾಗಿ ವನವೆಲ್ಲ
ಸಿರಿಯಾದು ಬಂಜೆ ಫಲವದು || ದಾಳಿಂಬ
ಅರೆಬಾಯ ಬಿಟ್ಟು ನಗಿತಿತ್ತು            ೧೨೬

ವೀರರಿಬ್ಬರು ಕೂಡಿ ದಾರಿಯಲಿ ಬರುವಾಗ
ಎರಡು ಕಡೆ ಎರಡು ಶೂಲದ ಪೆಣವ || ಕಂಡು ಶಿವನು
ನಾರಂದನ ಬೆಸಗೊಂಡ        ೧೨೭

ನಮ್ಮ ಜತೆ ಕಳ್ಳರು ಇರುವಲ್ಲಿ ಬಂದರೆ
ಇವರೇನು ಕಳವ ಮಾಡಿದರೆಂದು || ಶೂಲಕ್ಕೆ
ತಾವು ಬಿದ್ದಂತ ಪರಿಯೇನು೧೨೮

ಅನ್ಯರ ಮನೆಯ ಸೊಮ್ಮುಗಳಿಲ್ಲದೆ ಸುಮ್ಮನೆಯವರಿಗೆ
ಬಂಧನ ಬರುವುದೆ || ಸ್ವಾಮಿಯೆಂದು
ನಾರದ ಶಿವಗೆ ನುಡಿದನು     ೧೨೯

ಶೂಲಕ್ಕಿಂಥ ಬಾಧೆ ಆವದುಯೆಂದೇಳು
ಹೇಳು ನಾರಂದ ನಮಗೊಂದು || ಎಂದರೆ
ಹೇಳಿದನು ಕೊಲುವ ಕೊನೆಗಳ          ೧೩೦

ಹೊಕ್ಕರೆ ಅರಮನೆಯ ಕಟ್ಟುವರು ಎಡಗೈಯ
ಮೆಟ್ಟುವರು ನಮ್ಮ ಜಲಧಿಯಲಿ || ಕಂಭಕ್ಕೆ
ಕಟ್ಟಿ ಕೊಳ್ಳುವರು ಧರೆಯೊಳಗೆ        ೧೩೧

ಅಂಗಾಲವ ಹೋಹಿಸುವಾಗ ಲಿಂಗವೆಂದರೆ ಬಿಡರು
ತೆಂಗೀನ ಹಗ್ಗದಲ್ಲಿ ಬಿಗಿವಾರು || ಶಿವ ನಮ್ಮ
ಗಂಗೆಯ ಲಜ್ಜೆ ತೆಗೆದಾರು   ೧೩೨

ಸಿಕ್ಕಿದರುಬ್ಬಸ ಕಾಣೊ ಮುಕ್ಕಣ್ಣತಕ ನಾನು
ದಿಕ್ಕಿಲ್ಲ ನಮ್ಮ ಪುರದೊಳು || ನಾರಂದ
ಮಕ್ಕಳು ಮೂವರು ತರುಳರು          ೧೩೩

ಇಷ್ಟಕ್ಕಂಜುವರೆ ದೃಷ್ಟ ಮೂರುತಿ ಶಿವನೆ
ಕಟ್ಟಿಕೊಲ್ಲುವರುಂಟೆ ನರರೊಳಗೆ || ಬೆಳುವೇಯ
ಕಟ್ಟಿಕೊಂಡಿರ್ದು ತಿಳಿವೆನು   ೧೩೪

ಏನಯ್ಯ ನಾರಂದ ವೇಳೆಗಳಾದವು
ಆಲಿಸುಬಲ್ಲ ಶಕುನವ || ಅವರುಂಡ
ಕೂಳ ಸೊಕ್ಕಿನಲಿ ಕಳಬೇಕು   ೧೩೫

ಹರನಾಡಿದ ಮಾತಿಗೆ ವರಮುನಿ ನಾರಂದ
ಮರುಗದ ಗಿಡಿವ ಮರೆಗೊಂಡು || ಅಲ್ಲಿರುವ
ವುಲಿವ ಪಕ್ಷಿಗಳ ಶಕುನವ     ೧೩೬

ಹಂಗನು ಹಸುಬನು ಶ್ರೀಗಂಧದ ಮರನೇರಿ
ಲಿಂಗಕ್ಕೆ ಶಕುನ ಕೊಡಿತೀದೆ || ಮರನೇರಿ
ಕೊಂಡವು ತುಟ್ಟ ತುದಿಗೊಂಬ         ೧೩೭

ಲೀಲೆಯಿಂದಲಿ ಪಕ್ಷಿ ಮೇಲುಗೊಂಬಿಗೆ ಹಾರಿ
ಕಾಲೊಂದ ನೂರಿ ತಿರುಗುತ್ತ || ನಾರಂದ
ಸೋಲದು ಶರಣರ ಭಕ್ತಿ ದೃಢವೆಂದ  ೧೩೮

ಒಂದು ಕೊಂಬಿನ ಪಕ್ಷಿ ಒಂದು ಕೊಂಬಿಗೆ ಹಾರಿ
ಮುಂದೆ ಮಾತಾಡಿ ನಲಿದವು || ಗಣಪತಿಯ
ರಂಬೆಯರ ತೊಡಿಗೆ ಶಿವಗೆಂದು         ೧೩೯

ಹುತ್ತಗೊಂಬಿನ ಪಕ್ಷಿ ಕಂತೆಗೊಂಬಿಗೆ ಹಾರಿ
ಮತ್ತೆ ಮಾತಾಡಿ ನಲಿದವು || ಗಣಪತಿ
ಕಾಂತೆಯರ ತೊಡಿಗೆ ಗೌರಿಗೆ೧೪೦

ಅಲ್ಲಿಂದ ನಡೆದರು ಮಲ್ಲಿಗೆಯ ವನಕ್ಕಾಗಿ
ಚನ್ನಮಲ್ಲಯ್ಯನಿಂದ ಶಕುನವ || ಕೇಳಿದರೆ
ಪಲ್ಲಿನುಡಿದೀತು ಹಸ ಮಾತ           ೧೪೧

ಹಲ(ವು) ಆಡಿದ ಮಾತು ಫಲವೇನು ನಾರಂದ
ಗೆಲವು ನಮಗುಂಟು ಇದರಿಂದ || ನಾವಿರುವ
ನೆಲೆಯ ಬಿಟ್ಟು ಮುಂದಕ್ಕೆ ಬಿಜಮಾಡಿ           ೧೪೨

ಮುಂದಕ್ಕೆ ನಡೆದಾರು ನಂದಿಬೆಟ್ಟದ ಮರಕೆ
ನಿಂದು ನೋಡಿದರು ಶಕುನವ || ದರುವಕ್ಕಿ
ಸಂದಿಸಿ ಕುಟುಕು ಕೊಡುತಿರ್ದ           ೧೪೩

ದರುವಕ್ಕಿಗೆ ಆವಾಗ ತೊರು ಕಂಟುಕ ಪರಿಯಂತೆ
ದೊರಕುವುದು ನಮಗೆ ಅರಮನೆ || ಭಂಡಾರ
ಬರುತದೆ ಸ್ವಾಮಿ ಬಿಜ ಮಾಡಿ          ೧೪೪

ದಾಳಿಂಬದ ಅಡಿನಿಂದು ಲಾಲಿಸಿದರು ಶಕುನವ
ಹೇಳಿತು ಹಸುಬ ನಿಜವಾಗಿ || ಅರಮನೆ
ಕೊಳು ಹೋಯಿತದೆ ಸ್ವಾಮಿ ಬಿಜ ಮಾಡಿ       ೧೪೫

ಬಳಲಿಕೆ ಎಲ್ಲವ ನೆಳಲೊಳಗೆಯಿಂ ಬಿಟ್ಟು
ಯಣಿಗೂಡಿ ಮುಂದಕ್ಕೆ ನಡದಾರು || ಓರುಗಲ್ಲ
ಹೊಳೆಯ ಲಿಂಗಗಳ ಬಳಿಗಾಗಿ           ೧೪೬

ಇದ್ದ ಸ್ಥಾನವ ಬಿಟ್ಟು ಎದ್ದರು ಮುಂದಕ್ಕೆ
ಹೊದ್ದ ಗಜ ಚರ್ಮವೆರಸೀರೆ || ಸಹವಾಗಿ
ಹೊದ್ದಿ ಸರಿದರು ಅಗಳನು  ೧೪೭

ಬಳಲೀದ ದೇವರಿಗೆ ತಳಲಿ ಕಾಡಿಗೆ ಹಾಕಿ
ಎಳೆಯ ಅಗ್ಗಣಿಯನಿಳುಹೀದ || ನಾರಂದ
ಕಳೆಯ ಮಾಡಿದನು ಶಿವ ನಾನು         ೧೪೮

ಮೂರಾರಿ ಶಿವರಾಯ ನಾರಂದನೊಡಗೂಡಿ
ನಾರಿವಾಣದ ಹಲಸಿನ || ಮರದಡಿಯ
ಸೇರಿನಿಂದರು ಕೊಟ್ಟಿ ಅನುವ           ೧೪೯

ಒಡನಳೆನಂಬರು ಕೊಡುವರೆ ಶರಧೀಯ
ಬಡವನ ಕಳವು ಮುನಿಪನ || ಓರಗಲ್ಲ
ಗಡಣದ ಶರಧಿಯೆಸೆದಾವು   ೧೫೦

ಅಗಳೀನ ಒಳಗೆಲ್ಲ ನೆಗಳು ಮೀನುಗಳಿದೇಕೊ
ಹೊಗಬಾರದಿಲ್ಲಿ ಅಸಮಾನ || ನಾರಂದ
ಗಗನ ಮಾರ್ಗದಲಿ ನಡೆಯಯ್ಯ         ೧೫೧

ಗಗನದಲಿ ನಡೆದರೆ ಜಗದೀಶನೆಂಬರು
ಬಗೆದು ಕನ್ನವನಿಕ್ಕಿ ಹೋಗಬೇಕು || ಎಂದೆನುತ
ನಾರಂದ ನುಡಿದನು           ೧೫೨

ಅಗಳ ದಾಟುವ ಬಗೆಯು ಹೇಗೆ ನಾರಂದನೆ
ಅಗಲ ಮೊಳುವುಳ್ಳ ಗಜ ಚರ್ಮವನು || ಹಾಸಿ
ಅಗಜ ವಲ್ಲಭನೆ ಬಿಜ ಮಾಡಿ           ೧೫೩

ಧೀರರಿಬ್ಬರು ಕೂಡಿ ಸೇರಿದರು ಕೋಟಿಯ
ನಾರಂದ ಶಿವನು ಒಡಗೂಡಿ || ಬಲುಗಳ್ಳ
ಹಾರ ವಿಕ್ಕಿದರ ಕಳುವಾರೆ    ೧೫೪

ನಗಬೇಡ ನಾರಂದ ಬಗೆಯ ಕನ್ನವ ನಿನ್ನ
ಭುಜದ ಅಳತೆಗೆ ತೆಗೆಯಯ್ಯ || ನಾರಂದ
ಹೊಗು ನಿಮ್ಮ ಶಿವನ ನೆನೆಯುತ       ೧೫೫

ಕಲ್ಲಿಗೆ ಕತ್ತಿಯ ಚನ್ನಮಲ್ಲಯ್ಯ ನೊತ್ತಲು
ಕಲ್ಲು ಮೆಲ್ಲನೆ ಜರಿದು ಆಗುಳಿಗೆ || ಬೀಳಲು
ತಲ್ಲಣಗೊಂಡು ಜಗವೆಲ್ಲ೧೫೬

ಆವುದೊಂದು ವಿದ್ಯಕ್ಕೆ ನಾರಂದ ಗುರು ಮೊದಲು
ಭಾವದ ಹೇಳೂ ಕಳುವೀನಾ || ಬಗೆ ನಿನಗೆ
ಗುರುವಾಗಬೇಕೆಂದು ಶಿವ ತಾನು       ೧೫೭

ಅರವತ್ತು ಮೂವರಿಗೆ ಕುರುಹೀಗೆ ಬಂದಹನೆ
ದೃಢ ಭಕ್ತ ನಿಮ್ಮ ಶರಣರು || ಎಲೆದೇವ
ಕನ್ನದ ಮಾರಯ್ಯ ತಂದೆಗಳು           ೧೫೮

ಅವರಿಗೆ ನಮ್ಮ ಗುರುವಾದ ವರಪಾದ
ದೃಢ ಭಕ್ತಿಯಿಂದ ನೆನೆವೇನೂ ನಮಗೀಗ
ಕಳವು ಸಾಧ್ಯವೆಂದು ನುಡಿದನು         ೧೫೯

ಕನ್ನಗತ್ತಿಗೆ ತಂದ ಹಣ್ಣು ತೆಂಗಿನ ಕಾಯಿ
ಮನ್ನಣೆಯ ದೀಪ ಧೂಪಗಳು || ಅರ್ಚಿಸಿ
ಚೆನ್ನಾಗಿ ಕರವ ಮುಗಿದನು  ೧೬೦

ಅಡ್ಡಬಿದ್ದೊಂದಾನೆಯ ಮಾಡಿದರು ಕಳ್ಳರು
ಬಿದ್ದು ಬೇಡಿದರು ಕಳವಿಗೆ || ಎಂದೆನುತ
ತೊಡಿಸಯ್ಯ ಕನ್ನಗತ್ತಿಯ   ೧೬೧

ಕನ್ನವು ಹರಿದರೆ ಕಳವು ಸಾಧ್ಯವಾದರೆ ನಮ್ಮ
ಗುರುವೀನ ಧರ್ಮವುಂಟೆಂದು || ಈಶನು
ಕನ್ನದ ಮಾರಯ್ಯನ ನೆನೆದಂತೆ          ೧೬೨

ಕನ್ನವನಿಕ್ಕುವಾಗ ಕಯ್ಯಗತ್ತೆಯ ಪೂಜೆಸಿ
ಚೆನ್ನಾಗಿ ಅದಕೆ ಬಲಗೊಂಡು || ಹಲಸಿನ
ಹಣ್ಣು ತೆಂಗಿನ ಕಾಯ ಕದಳೀಯೂ    ೧೬೩

ಕನ್ನವ ನಿಕ್ಕುವರೆ ಪನ್ನಂಗಧರ ತಾನು
ಕನ್ನದ ಬ್ರಹ್ಮಯ್ಯನ ಚರಣವ || ನೆನೆಯುತ್ತ
ಕನ್ನವ ನಿಕ್ಕುವರೆ ಅನುವಾದ            ೧೬೪

ಕನ್ನವ ನಿಕ್ಕುವಾಗ ಕಳವಳಿಸಿತು ಭೂಮಿ
ಪನ್ನಂಗ ಹೆಡೆಯ ಕೊಡಹೀದೊ || ಫಣಿರಾಜ
ಎನ್ನ ಭೂಷಣನೆ ಯಜವೆಂದ            ೧೬೫

ಒಂದು ಕೋಟಿಯ ನಡಿದು ಮುಂದಕ್ಕೆ ನಡೆದಾರು
ಮುಂದಣ ಕೋಟಿ ಅದು ಲೋಹ || ವಶವಲ್ಲ
ಎಂದು ಹೇಳಿದನು ಶಿವನಿಗೆ   ೧೬೬

ವಶವಲ್ಲದ ಕೋಟಿಗೆ ಶಶಿಧರನು ತಾ ಬಂದು
ನೊಸಲ ಕಣ್ಣುಗಳ ತೆರೆಯುತ್ತ || ಕನ್ನವ
ಹೊಸ ಪರಿಯಾಗಿ ತೆಗೆದಾರು            ೧೬೭

ಕನ್ನವ ನಿಕ್ಕಿದುದು ಚೆನ್ನಾಯಿತು ಏನಯ್ಯ
ಇನ್ನಿರ್ದ ಕೋಟಿ ನನಗೆಂದಾ || ನಾರಂದ
ಬಿನ್ನೈಸಿ ಕರವ ಮುಗಿದಾನು೧೬೮

ಇಕ್ಕಿದ ಕನ್ನಗತ್ತಿಗೆ ಸೊಕ್ಕೀಲಿ ಹರಿವದು
ಮುಕ್ಕಣ್ಣ ಶಿವನೆ ಗತಿಯೆಂದು || ಕೋಟಿಗೆ
ಇಕ್ಕಿದರು ಕನ್ನವ ತೆರಪಾಗಿ  ೧೬೯

ಉಕ್ಕಿನ ಕೋಟಿಗೆ ಇಕ್ಕಿದರು ಕನ್ನಗತ್ತಿಯ
ರಕ್ಕಸರಂತೆ ಖತಿಗೊಂಡು || ಕೋಟಿಗೆ
ಇಕ್ಕಿದರು ಕನ್ನವ ಲೋಕ ಉರಿವಂತೆ   ೧೭೦

ಒಂದೆರಡು ಮೂರು ನಾಲ್ಕೈದೆಂಬ ಕೋಟಿಗೆ
ಮುಂದಳ ಕೋಟಿ ಅದು ವಜ್ರಾ || ವಶವಲ್ಲ
ಎಂದು ಹೇಳಿದನು ಶಿವನಿಗೆ   ೧೭೧

ವಜ್ರವನಿಡುವಾಗ ಜಜ್ಜರಿಯಿತು ಭೂಮಿ
ಸಜ್ಜನರ ಹಿತವು ಮುನಿಕಾಯ || ಕೋಟಿಯ
ಚಿದ್ರಾವ ಮಾಡಿ ಹಿಡಿದಾನು೧೭೨

ಕಂಚಿನ ಕೋಟಿಯ ಕನ್ನವನಿಡುವಾಗ
ಪಂಚಮುಖವೆಲ್ಲ ಬೆವರೀತೊ || ಶಿವನಿಗೆ
ಕಂಚಿನ ಕೋಟಿ ಸಡಿಲಿತೂ    ೧೭೩

ಬಿಳಿಯ ಮುಗಿಲೋಲಾಡಿ ಬೆಳ್ಳಿಕೋಟಿಯ ಕಂಡು
ಹೊಳೆಯೆಂದು ಶಿವನು ಬೆಸಗೊಂಡ || ನಾರಂದ
ಒಳಗೆ ಹೇಳಿದನು ಶಿವನಿಗೆ    ೧೭೪

ಕತ್ತಿಯ ಎತ್ತಿಕೊಂಡು ಹಸ್ತವನೂದಾವು
ಮುತ್ತಿನ ಕೊತ್ತಳ ಸರಿದಾವು || ಮಿಸುನಕ್ಕು
ಶಿವನು ನಾರಂದನ ಮುಖನೋಡಿ       ೧೭೫

ಕಲ್ಲು ಕಂಚಿನ ಕೋಟಿ ಎಲ್ಲಕ್ಕು ಬಲಿಷ್ಠ
ಅಲ್ಲಾಡಿಸುವ ಮಿಸುನೀಯ || ಕೋಟಿಯಲ್ಲ
ಕನ್ನವನಿಕ್ಕಿ ನಡೆದಾರು        ೧೭೬

ಏಳು ಕೋಟಿಯ ಸವೆದು ಆರುವೇರಿಗೆ ಬಂದು
ಆಳು ನೋಡಿದರಾಗ ಅರಳನು || ನಾರಂದ
ಬೇಳುವೆನಿಟ್ಟು ಕೆಡುವುಯೆಂದ          ೧೭೭

ಗಾಳಿ ದಿಕ್ಕಿನಿಂದ ಬೇಳವೆಯ ನಿಡಲಾಗ
ಕಾಳಗತ್ತಲೆ ಕವಿದಾವು || ಕಣ್ಣಿಗೆ
ದಾಳವ ಹೂಡಿ ಮಲಗಿದರು೧೭೮

ಮಾಯದ ನಿದ್ರೆಗಳು ಆಯದಿಂದಲಿ ತಳಿಯೆ
ರಾಯನಪುರದ ಜನರೆಲ್ಲ || ಮಲಗಿದರು
ಆಯುಷ್ಯವಾದಂತೆ ಮರದಂತೆ          ೧೭೯

ಪಟ್ಟಣದೊಳು ತಿರುಗುವ ಪಹರೆ ಹರೆಕಾಳೆ
ತೊಟ್ಟೆಂದು ಬಾಯ ತೆಗೆಯಲು || ತಳವರರು ಮತಿ
ನೆಟ್ಟು ಮಂಕಾಗಿ ಮಲಗಿದರು           ೧೮೦

ತಳವಾರರ ಕಟ್ಟಿಯಲಿ ಮಲಗೀದವರ ಕಾಲ
ಎಳತಂದು ಕಟ್ಟಿ ಹೊರಿಮಾಡಿ || ನಾರಂದ
ಎಳದು ಹಾಕಿದನು ಅಗಳಿಗೆ   ೧೮೧

ಕತ್ತಿ ಕಠಾರಿ ಕಡಹುರಿ ಬಿಲ್ಲುಂಬು
ಬತ್ತಿಸಾಯುಧವು ಹರಿಗೆಯ || ಸಬಳವ
ಮತ್ತೆ ತೆಗೆ ತೆಗೆದು ಮಡಗಿದರು         ೧೮೨

ಕಾಳೆಯವ ಕೊರಳಿಗೆ ಡೊಳ್ಳನು ಕಟ್ಟಿದರು
ಮೇಳೈಸಿ ಬರುವ ಕೊಳಲವನ || ಕೊರಳಿಗೆ
ಕಾಳೆಯ ಕಟ್ಟಿ ಬಿಗಿದರು      ೧೮೩

ಒಬ್ಬರೊಬ್ಬರ ಕೈ ಮತ್ತೊಬ್ಬರಿಗೆ ಕಟ್ಟಿ
ಇಬ್ಬರ ಕೈಯ್ಯ ಹೆಡೆಗೈಯ್ಯ || ಕಟ್ಟಿ ತಾ
ಉಬ್ಬಿ ಹರುಷದಲ್ಲಿ ನಡೆದರು         ೧೮೪

ಮುಂದಲೆ ಹಿಂದಲೆಯ ಸಂದಿಕ್ಕಿ ಗಂಟಾಕಿ
ಹಿಂದೆ ಮುಂದಾಗಿ ಮಲಗಿಸಿ || ಪಹರೆಯ
ಅಂದವನೆಲ್ಲ ಅಳಿದಾರು     ೧೮೫

ದೊಡ್ಡ ದೊಡ್ಡ ರಾವುತರ ಗಡ್ಡವ ಗಂಟಿಕ್ಕಿ
ಅಡ್ಡದಿಡ್ಡಾಗಿ ಮಲಗಿಸಿ || ಪಹರೆಯ
ಒಡ್ಡಣೆಯನೆಲ್ಲ ಅಳಿದಾರು            ೧೮೬

ಬೆನ್ನ ಕನ್ನಡಿಯವರು ಸನ್ನೆ ಜಾಗಟಿಯವರು
ಉನ್ನತ ಪಹರೆ ತಿರುಗುವರು || ವೀರರ
ಬೆನ್ನು ಬಡಿದು ಮುಂದಕ್ಕೆ ನಡೆದಾರು೧೮೭

ಮನ್ನೆಯ ರಾವುತರ ಮುಖಗಳಲಿ
ಸುಣ್ಣದ ಬೊಟ್ಟು ಬಚ್ಚಣಿಸಿ || ನಾರಂದ
ಚೆನ್ನದೊಳ್ಳನೆ ಕೊರಳಿಗೆ ಬಿಗಿದರು     ೧೮೮

ಪಾರಿ ಕಾವಲಕಾವ ವೀರರ ಭಂಗಿತ ಮಾಡಿ
ಧೀರರಿಬ್ಬರು ಕೂಡಿ ನಡೆದರು || ಓರಗಲ್ಲ
ಧೀರಪತಿಯ ಅರಮನೆಗೆ      ೧೮೯

ಏಳಯ್ಯ ನಾರಂದ ಭೂಪಾಲನ ಅರಮನೆಗೆ
ಕಾಳಗತ್ತಲೆ ಕವಿದೀವೆ || ಬೆಳಗಾಗಿನ
ಬೇಳುವೆಯ ಪಂಜಲನು ಮಾಡು       ೧೯೦

ಬೇಳುವೆಯ ಪಂಜ ಢಾಳವ ಮಾಡಿದರು
ಊರೆಲ್ಲ ಉಂಡು ಮಲಗುವ || ಹೊತ್ತಿನಲ್ಲಿ
ಭೂಪಾಲನ ಅರಮನೆಗೆ ನಡೆದರು      ೧೯೧

ಹೊಳೆವ ಪಂಜಿನ ಪ್ರಭೆಗೆ ಎಳೆಯ ಗಾಜಿನ ಕೋಟೆ
ಹೊಳೆಯೆಂದು ಶಿವನು ಬೆಸಗೊಳ್ಳೆ || ನಾರಂದ
ಒಳಗೆ ಹೇಳಿದನು ಅರಮನೆಯ          ೧೯೨

ಹೊಳೆಯಲ್ಲ ಶಿವರಾಯ ಎಳೆ ಎಳೆಯ ಗಾಜಿನ ಕೋಟೆ
ಮೊಳಗುವ ಸಿಂಹ ಹುಲಿಯುಂಟು || ನಮ್ಮ ಕೈಯ್ಯಲ್ಲಿ
ಕೊಲಿಸಿ ಕೊಂಡಿರ್ದ ಭ್ರಮೆಯುಂಟು    ೧೯೩

ಮುಕ್ಕಣ್ಣನ ಮಾತಿಗೆ ನಕ್ಕನು ನಾರಂದ
ಮಕ್ಕಳಾಟಿಕೆಯ ನುಡಿಯಾಕೊ || ಶಿವರಾಯ
ಹೊಕ್ಕನೆ ಕನ್ನವ ಸವೆಯಯ್ಯ           ೧೯೪

ನಗಬೇಡ ನಾರಂದ ಬಗೆಯಯ್ಯ ಕನ್ನವ
ತೆಗೆ ನಿನ್ನ ಭುಜದ ಅಳತೆಗೆ || ನಾರಂದ
ಹೋಗು ನಿನ್ನ ಶಿವನ ನೆನೆಯುತ್ತ       ೧೯೫

ಅಲ್ಲಿಗಲ್ಲಿಗೆ ಪದ ಮಲ್ಲಿಗೆಯ ಕೋದಂತೆ
ಮಲ್ಲಿಕಾರ್ಜುನನ ಕೃಪೆಯಿಂದ || ಎಂತೆಂಬ
ಅಲ್ಲಿಗೆರಡು ಸಂಧಿ ಪದ ಮುಂದೆ      ೧೯೬

ಅಂತು ಸಂಧಿ ಎರಡಕ್ಕಂ ಪದನು ೩೪೪ಕ್ಕಂ
ಮಂಗಳ ಮಹಾ ಶ್ರೀ ಶ್ರೀ ಶ್ರೀ