ಸಂಧಿ : ಮೂರು

ಶ್ರೀ ಮನ್ಮಹದೇವ ಸೋಮನಾ ಸೂಡಿದ
ಕಾಮಿತಾರ್ಥವನೀವ ಪಶುಪತಿಯೇ || ಸಲಹೆಂದು
ಆ ಮಹಿಮಾ ಶಿವನ ಬಲಗೊಂಬೆ       ೧

ಕನ್ನವನಿಕ್ಕೆಂದು ಕತ್ತಿಯ ಶಿವಕೊಡಲು
ಮನ್ನೆಯನ ಅರಮನೆಯ ಹಿಡಿದರು || ನಾರಂದ
ತನ್ನ ಪ್ರಮಾಣ ಅಳತೆಯ    ೨

ಕನ್ನಗಳಾದವು ಇನ್ನೇಳು ಶಿವರಾಯ
ಚೆನ್ನಾಗಿ ತೆರೆಯ ಹಿಡಿಯೆಯ್ಯ || ನಾರಂದ
ಸನ್ನೆಗೋಲಿಕ್ಕಿ ತಡಹಿದ      ೩

ಅಡಿಯ ಕನ್ನಕ್ಕೆ ನೀಡಿ ಮುಡಿಯ ಶಿವನಿಗೆ ಕೊಟ್ಟು
ಎಡದ ಪಾದವ ಒಳಗಿಕ್ಕೆ || ನಾರಂದ
ಕೆಡವಿ ನೋಡಿದನು ಅರಮನೆಯ       ೪

ಮುಂದೆ ಹೊಕ್ಕವರಿಗೆ ಮೂರೆಡೆ ಬರಬೇಕು
ಹಿಂದೆ ಹೊಕ್ಕವರಿಗೆ ಅರೆಯೆಡೆ || ನಾರಂದ
ನಗುತ ಶಿವನೊಡನೆ ನುಡಿದನು          ೫

ಮೂರೆಡೆ ಏತಕುಂಟೆ ಮೀರಿ ಬಂದುದು ತಪ್ಪು
ದಾರಿ ತಪ್ಪಿಸದೆ ಕರಕೊಂಡು || ಹೋದರೆ
ಸಾಯೋಜ್ಯ ಪದವಿ ಕೊಡುವೇವು      ೬

ನಾನು ಅರಿಯದ ಕಳವ ನೀನೇನ ಬಲ್ಲೆಯೂ
ಕಾರುಣ್ಯಮೂರ್ತಿ ನುಡಿದರು || ನಾರಂದನ
ಮೇಲೆ ಕೋಪವ ತಾಳಿ ನುಡಿದರು      ೭

ಹಿಂದಕ್ಕೆ ಹೊರೆಸರು ಮುಂದೆ ಕನ್ನವೆಲೆಸೆವೆನೆಂದು
ಚಂದ್ರಶೇಖರನು ನುಡಿದನು || ನಾರಂದ
ಚೆನ್ನಾಗಿ ತೆರೆಯ ಹಿಡಿಯೆಂದು          ೮

ಎಚ್ಚರಿಕೆ ಅವಧಾನ ಚಿತ್ತದೊಳು ನಾರಂದ
ಎಚ್ಚೆತ್ತು ಮಾನವರು ಅರಿತಡೆ || ಈ ತಲೆಯ
ಪಟ್ಟದ ಪಾರ್ವತಿಗೆ ಕೊಡುಕೊಂಡು   ೯

ಕನ್ನವಿಬ್ಬರು ಹೊಕ್ಕು ಮನ್ನಣೆಯನರ ಮನೆಯಲ್ಲಿ
ಹೊನ್ನು ಬಂಗಾರಯಿರುವಲ್ಲಿ || ರಾಯನ
ಕನ್ನೆಯರು ಎಲ್ಲಿ ಮಲಗಿದರು         ೧೦

ಅರೆವಾಯಿ ಬಿಟ್ಟವಳು ತೆರೆಬಾಯಿ ತೆಗೆದವಳು
ಗೊರಕು ನಿದ್ರೆಗಳಗೈದಂತ || ಹೆಣ್ಣುಗಳ
ಕುರಿಗಳ ಜಾತಿಗೆ ಎಣೆಯೆಂದ೧೧

ಕಾಲನೆತ್ತರೆ ಹಾಕಿ ಕೈಯನೆತ್ತರೆ ಹಾಕಿ
ಮೇಲಿದ್ದ ಸೀರೆನಿಳಿಹಾಕಿ || ಮಲಗಿದ ಹೆಣ್ಣು
ಕತ್ತೆ ಜಾತಿಗೆ ಎಣೆಯೆಂದ      ೧೨

ಪಟ್ಟವಳಿಯ ಸೀರೆಯ ಸುತ್ತು ತೆಗೆದುಟ್ಟ(ವ)ಳು
ಒತ್ತನಿಕ್ಕಿದಳು ತುರುಬೀಗೆ || ಮಲಗಿದ ಹೆಣ್ಣು
ಚಿತ್ತಿನಿ ಜಾರಿಗೆ ಎಣೆಯೆಂದ              ೧೩

ಸೆರಗಿನ ಸೀರೆಯನರಿದೆಗದುಟ್ಟಿ
ಕದಂಬ ಕಸ್ತೂರಿಯ ತಿಲಕವ || ನಿಕ್ಕಿದ ಹೆಣ್ಣು
ಶಂಕಿನಿ ಜಾತಿಗೆ ಎಣೆಯೆಂದ   ೧೪

ಸವಿಯ ಸೀರೆಯ ಮೇಲುದೆಗದುಟ್ಟ(ವ)ಳು
ಲೋಲ ಸಂಪಿಗೆಯ ಮುಡಿದು || ಮಲಗಿದ ಹೆಣ್ಣು
ಹಸ್ತಿನಿ ಜಾತಿಗೆ ಎಣೆಯೆಂದ              ೧೫

ಪದ್ಮಿನಿ ಜಾತದ ಹೆಣ್ಣು ಇದರೊಳಗಿಲ್ಲವು
ಕದನ ಪ್ರಚಂಡ ಗಣಪತಿ || ರಾಯನ
ಮದವಣಿ ಇನ್ನೆಂತೋ ಶಿವಬಲ್ಲ      ೧೬

ಪರಿಪರಿಯ ನಾರಿಯರು ಮಲಗಿದರು ಹೆಣ್ಣುಗಳು
ಹರನು ನಾರಂದ ನೆರೆ ನೋಡಿ || ಗಣಪತಿಯ
ಮಲಗಿರುವ ಮನೆಗೆ ನಡೆದಾರು         ೧೭

ಮೂಡದಿಕ್ಕಿಲಿನಿಂದು ನೋಡಿದರು ಬಾಗಿಲ
ನಾಡನಾಳುವನ ಅರಮನೆಯ || ಕಳವುದಕೆ
ಮಾಡಿರ್ದ ಬೀಗ ವಶವಲ್ಲ  ೧೮

ಅಷ್ಟದಳದ ಬೀಗ ವಶವಲ್ಲ ಶಿವರಾಯ
ಮುಟ್ಟಿ ಕೀಳುವರೆ ಧ್ವನಿಗೈವವು || ನೀವು ತಂದ
ಮುಟ್ಟಿಸಿರಿ ಹೊಸ ಮದ್ದು೧೯

ಕಟ್ಟಂಗಧರ ತಮ್ಮ ದಟ್ಟಿಯೊಳಗಣ ಮದ್ದ
ಮುಟ್ಟಿಸಲು ಕೀಲು ಕಳೆದಾವು || ಆ ಬೀಗ
ತಟ್ಟನೆ ಬಿದ್ದವು ಧರಣಿಗೆ    ೨೦

ಬೀಗವ ಕಿತ್ತಿಟ್ಟು ಬಾಗಿಲೆರಡವ ದಾಟಿದರು
ಬಾಗಿ ನೋಡಿದರು ಅರಮನೆಯ || ಗಣಪತಿಯ
ಮೊಗದೊಳಿರುವ ಸೊಬಗನು            ೨೧

ಪುಷ್ಪದ ಹಾಸಿನ ಮೇಲೆ ಇಪ್ಪರಾಯನ ಕೊಡೆ
ಕೂರ್ಪರ ಗಂಧಿ ವರಗೀರೆ|| ರಾಮಾಯಿ
ಒಪ್ಪುವ ಮದನ ರತಿಯಂತೆ೨೨

ಮೇಲುಕಟ್ಟಿದರ ಮಂಚ ಮರೆ ಪುಷ್ಪದ ಹಾಸು
…. ಕೆಲಸಕ್ಕೆ ಕಲದಲ್ಲಿ || ಕೀಲು ಕೈಯ
ಆಯದು ದೊರೆ ಜಯಸಿದವು           ೨೩

ತೂಗು ತೊಟ್ಟಿಲ ಮಂಚ ಬಾಗುವ ಸೆಳೆಮಂಚ
ಭೋಗದ ಮಂಚ ಮಣಿಮಂಚ || ಶಕುನೀಯ
ರಾಗದ ಮಂಚ ಎಸೆದಾವು                ೨೪

ಕುಸುರಿ ಕೆಲಸದ ಮಂಚ ದಸುರಿ ಪಟ್ಟಿಯ ಹಾಸಿ
ಪದ್ಮೀನಿ ಪುರುಷ ವರಾಗಿರೆ || ರಾಮಾಯಿ
ಒಪ್ಪುವ ಮದನ ರತಿಯಂತೆ೨೫

ಗಂಧದ ಮಂಚಕ್ಕೆ ದುಂಡುಮಲ್ಲಿಗೆ ಹರವಿ
ನಂದದೀವಿಗೆಯ ಬೆಳಕಿನಲಿ || ಮಲಗಿದಳು
ಚಂದ್ರಮುನಿಗೊಲಿದ ರವಿಯೊಳು      ೨೬

ತರಳೆ ಮಲಗಿದಳು ಅರಳು ಮಲ್ಲಿಗೆ ಹಾಸಿ
ಹಲವು ದೀವಿಗೆಯ ಬೆಳಕಿನಲಿ || ಮಲಗಿದಳು
ಧರಣಿಯಾ(ನಾ)ಳುವನ ವಿಜಯಳು    ೨೭

ಸಂಪಿಗೆ ಹಾಸಿನ ಮೇಲೆ ಕೆಂಪಿಯ ನೋಡು ನಾರಂದ
ಸೊಂಪುಳ್ಳ ತಾವರೆ ಹೊಳೆವಂತೆ || ರಾಮಾಯಿ
ಕೆಂಪು ಸೂರ್ಯನ ಪ್ರಭೆಯಂತೆ           ೨೮

ಮಲ್ಲಿಗೆ ಹಾಸಿನ ಮೇಲೆ ನಲ್ಲೆಯ ನೋಡು ನಾರಂದ
ಜಲ್ಲೆಗಂಗಳ ಚಲುವೇಯ || ರಾಮಾಯಿ
ಗಲ್ಲದ ಭಾವಕದ ಚಂದ     ೨೯

ಜಾಜಿಯ ಹಾಸಿನ ಮೇಲಣ ಜಾಣಿಯ ನೋಡು ನಾರಂದ
ಕೇತಕಿಯ ಎಸಳು ತಲೆದಿಂಬು || ರಾಮಾಯಿ
ಮೂಗು ಸಂಪಿಗೆಯ ಎಸಳಂತೆ           ೩೦

ರಾಯನ ಮಂಚಕ್ಕೆ ಹೂವಿನ ಹಾಸಿಗೆ ಕಾ
ವಿಯ ಸೀರೆ ತೆರೆಹಾಕಿ ನಾಲ್ಕು || ದಿಕ್ಕಿಲಿ
ತಾಳ ದೀವಿಗೆಯ ಬೆಳಕಿನಲಿ  ೩೧

ಎಡಬಲದಲಿ ದೀಪ ನಡುವೆ ಪುಷ್ಟದ ಹಾಸು
ಮಡದಿ ಪುರುಷರು ಮಲಗಿದರು || ಮಲ್ಲಿಗೆಯ
ಮುಡಿಯ ತಲೆದಿಂಬು ಸುಖದಲಿ       ೩೨

ಅರಿರಾಯದಲ್ಲಣ ಸರರಾಯರೆದೆ ಶೂಲ
ದುರಧೀರ ಗಣಪತಿ ಮಲಗಿದ || ಅರಮನೆಯ
ಹರ ಕಂಡು ಮಕುಟವ ನೊಲಿದಾರು   ೩೩

ಕರಿಯ ಸೀರೆಯ ಕಂಡು ಹಿರಿಯ ಹೊಯ್ದನು ಶಿವ
ಹರದಿಯ ಮುಸುಕು ತೆಗೆದರು || ಮಾಣಿಕದ
ಹರಳ ಕಂಡಂತೆ ಬೆರಗಾದ     ೩೪

ಅಂಗದೊಳು ಅಂಗೈ ಪದ್ಮ ರೇಖೆ
ಉಂಗುರ ಹಿಡಿ ನಡುವಿನ || ಆಕೆಯ
ಕಂಡು ಗಂಗಾಧರ ಬೆರಗಾದ  ೩೫

ತೋಳು ತೊಡೆಗಳೆರಡು ಹೊನ್ನ ಬಾಳೆಯ ಕಂಬ
ಬಾಳೆಲೆ ಹೋಲುವ ತೆಳು ನಸುರು || ಆಕೆಯ ಮುಖ
ಬಾಲ ಚಂದಿರನ ಹೋಲುವಂತೆ         ೩೬

ಸುತ್ತಮುತ್ತ ನೋಡಿಕೊಂಡು ಬರುವ ಸಮಯದಲಿ
ಪಟ್ಟದ ರಾಣಿಯರು ಮಲಗಿದ || ನೋಡಿದರು
ಶಿರವ ತೆಲೆಯಾಗಿ ನಸುನಕ್ಕು            ೩೭

ಇದ್ದಂತೆ ನಾರಂದ ಸದ್ಧನ ಗೈದಾರು
ಚಿದ್ರೂಪಧರನು ಚಿತ್ತೈಸಿ || ಎಂದೆನುತ
ಮತ್ತೆ ನಾರದ ನುಡಿದನು     ೩೮

ಪಡಿಗ ಕೆಲದಲ್ಲಿ ಅಗ್ಗಣ ಚಂಬು ಕೈಯಲ್ಲಿ
ವಿಳ್ಯದ ತಟ್ಟಿ ಕೆಲದಲ್ಲಿ || ನಾರಂದ
ಇವರ ಸಂಭ್ರಮದ ನೋಡಿರಯ್ಯ       ೩೯

ಬಟ್ಟೆಯೊಳು ಪರಿಮಳ ತಟ್ಟಿಯೊಳು ಶ್ರೀಗಂಧ
ಇಟ್ಟ ವಿಭೂತಿ ನೊಸಲೊಳು || ಗಣಪತಿಯ
ಅಷ್ಠ ಭೋಗಗಳ ಶಿವಕಂಡ  ೪೦

ಸೃಷ್ಟಿಯೊಳು ಹುಟ್ಟಿದ ಮಾನವರಿಗೆ ಭೋಗ
ನಾರಂದ ಭಾಗ್ಯವ ಕೊಡುವರಾರು || ಧರೆಯೊಳೂ
ನಾರಂದ ನೀವೆ ಎನುತಲಿ      ೪೧

ಈಶ್ವರ ಶಿವನೆ ನಿಮ್ಮ ಮುಟ್ಟಿ ಪೂಜಿಸಲಾಗಿ
ಇಷ್ಟು ಭಾಗ್ಯಗಳ ಶಿವ ತಾನೆ || ಕೊಟ್ಟರೆಯೆಂದು
ನಾರಂದ ಮುನಿಯು ನಿಡುದನು         ೪೨

ಹಿಂದಣ ಜನ್ಮದಲಿ ನಿಮ್ಮ ಪೂಜಿಸಿದವರಿಗೆ
ಇಂದುಧರ ನೀವೇನು ಕೊಡುವಿರಿ || ಎಂದೆನುತ
ಮುಂದೆ ನಾರಂದ ನುಡಿದನು            ೪೩

ಹವಳದ ಹಲಗೆಯ ಅಳವಡಿಸಿದಂದಲಿ
ಇವಳ ನೋಡಿವಳ ಸುಲಿಪಲ್ಲ || ಮುತ್ತಿನ
ಧವಳಾವ ಹೋಲಲರಿಯವು            ೪೪

ನಾರಿಯ ಯೌವ್ವನ ಸರಿದು ಕಿರುದಿಲಿ
ದಾರ ಹೋಕುವರೆ ತೆರವಿಲ್ಲ || ಕಿನ್ನರಿಯ
ಬಾರಿಸುವಂತೆ ನೆಲೆ ಮೊಲೆ    ೪೫

ರಾಗ ಮಾಣಿಕದಂತೆ ಭೋಗದಲಿ ಹವಳದ
ಮಾಗದ ಜಂಬು ಅರಿಗೆಂಪು || ರಾಮಾಯಿ
ಮೂಗು ಸಂಪಿಗೆಯ ಎಸಳಂತೆ           ೪೬

ಸುರಚಾಪ ಬಾಗಿದ ಎಸಳಂತೆ ಹುಬ್ಬಿನ
ಹರಿಣಾಕ್ಷಿಯಂತೆ ನಯನವು || ಬಿದಿಗೆಯ
ಹೊರೆಯ ಚಂದ್ರಮನು ಹೋಲನರಿಯನು       ೪೭

ಕಾರ್ಮುಗಿಲ ವರ್ಣದ ಪೆರ್ಮೆಯ ನಾರಿಯ
ಸೊರ್ಮುಡಿಗೆ ನವಿಲು ನೆರೆನಾಚಿ || ರಾಮಾಯಿ
ಸೊರ್ಮುಡಿದರುಬ್ಬುಯಸೆದವು        ೪೮

ಇಂಗಡಲ ಸಿರಿಯಂತೆ ಸಂಗಡದ ಸತಿಯಂತೆ
ಕಂಗಳ ಜಡನು ಹರಿದಂತೆ || ರಾಮಾಯಿ
ಶೃಂಗಾರ ಮುಖದ ಚಲುವೀಕೆ          ೪೯

ಗಂಗಾಯಿ ಗೌರಾಯಿ ಸಂಗಡದ ಹೊನ್ನಾಯಿ
ತುಂಗಭದ್ರೆಯು ರತಿದೇವಿ || ಇವರೈವರು
ಅಂಗವ ಹೋಲಲರಿಯರು  ೫೦

ಮದ ಸೊಕ್ಕಿದಾನೆಯ ನಡಗಿರ್ದ ಮುಖರಾವು
ಮದನನ ಮನಕೆ ಸರಿಯಾಗಿ || ಅಮೃತವನೀವ
ಚದುರೆಯರ ಕರವ ಶಿವಕಂಡ            ೫೧

ಸತಿಯರಿಗೆ ಸತಿಯವಳು ಮುಖ ಹೊನ್ನ ಪದ್ಮವು
ಅತಿಭಾವ ಇವಳ ಮುಖದಲ್ಲಿ || ಕಂಗಳ ನೋಟ
ಯಾತಿಗಳ ತಪವ ಕೆಡಿಸಿದವು೫೨

ಪರನಾರಿ ಪರಸ್ತ್ರೀಯ ಮೈ ಮುಟ್ಟಬಾರದು
ಮುಟ್ಟಿದರೆ ಪಾಪ ಬರುವುದು || ನಾರಂದ
ಶಿವಗೆ ನುಡಿದನವಳ ಮಾತ  ೫೩

ನೋಡಿದರೆ ಕರ್ಮವು ನುಡಿಸಿದರೆರಡು ಕರ್ಮವು
ಮುಟ್ಟಿದರೆ ಕರ್ಮ ಸರಿಪಾಲು || ಶಿವರಾಯ
ಮುಟ್ಟಬಾರದು ಪರಸತಿಯರ          ೫೪

ಕರ್ಮಕ್ಕೆ ಬಂದೇವು ನಾರಂದ ಎನುತಲಿ
ಧರ್ಮಯಲ್ಲಿಯದೊ ಕರ್ಮ ಕಳೆದರೆ || ಕಾಶಿ
ಅರಸೀಗೆ ನಾವು ಕಳಕೊಂಬಾ೫೫

ಮಕ್ಕಳ ಕಂಡಂತೆ ಎತ್ತಿ ಮುದ್ದಾಡುವರು
ಮುಕ್ಕಣ್ಣ ನಿಮಗೆ ತರವಲ್ಲ || ಮೂರ್ಲೋಕ ಶಿವ
ಭಕ್ತರು ನಿಮ್ಮ ಕಂಡು ನಗುವರು       ೫೬

ಹಸ್ತ ಕಡಗದ ಮುಂದೆ ಕಸ್ತೂರಿ ಬಳೆ ತೊಟ್ಟವಳೀಗ
ಹೆಸರೆ ಹೇಳಿವಳ ಕುರುಹುವೇನು || ಹೇಳಿದರೆ
ಚಿತ್ತ ಬರಗಾಗಿ ತೊಲಗುವೆ   ೫೭

ಗಡಿಯ ಮನ್ನೆಯ ಮೇಲೆ ದಂಡು ಹೋಗಿ ಗಣಪತಿ
ದಂಡಿನಲ್ಲಿ ಕಂಡ ಚಲುವೇಯ || ರಾಮರಸಿಯ ತನ್ನ
ಅಂದಕೆ ತಂದ ಗಣಪತಿ        ೫೮

ಗಡಿಯ ಮನ್ನೆಯನೆಂಬ ಅವ ಶುದ್ಧ ಮಾದಿಗ
ಶುದ್ಧ ಮಾದಿಗರ ಮಗಳು || ರಾಮರಸಿಯ
ಮುದ್ದಿಗೆ ತಂದ ಗಣಪತಿ     ೫೯

ಹೋಗೆಂದ ಮಾತಿಗೆ ದೇವ ತಾ ತೊಲಗಿದ
ನೋವಿನ ಮನವ ಕೈಕೊಂಡು || ಶಿವರಾಯ
ಭಾವೆಯ ಮುಖವ ನೆರೆನೋಡಿ         ೬೦

ದೃಷ್ಟಿತಾಗಿತೆಂದು ತೆಗೆದಿಟ್ಟಾರು ಭಸಿತವ
ಕಟ್ಟಿನ ಬೆಳೆವೇಯ ಕಳೆದರು || ಶಿವರಾಯ
ಭಾವೆಯ ಮುಖವ ನೆರೆನೋಡಿ         ೬೧

ರಾಮಾಯಿ ನಾವು ನಿನ್ನ ಬಿಟ್ಟು ಹೊರಡುವದೆ ಮನವಿಲ್ಲ
ನಾರಂದ ಮುನಿಯ ಸುಳುವಿನ || ಮಾತುಗಳಿಂದ
ಅಲ್ಲದ ಮಾತುಗಳ ನೊರೆದನು        ೬೨

ಬಾಗಿ ಬರುವ ಶಿವನ ಭಾಗ್ಯ ದೇವತೆ ಕಂಡು
ಬೇಗದಿ ಬಂದು ಶರಣೆಂದು || ಅವ ತನ್ನ
ಭೋಗವಿದ್ದೆಡೆಗೆ ಕರೆತಂದ   ೬೩

ಪನ್ನಗಧರನಿಗೆ ಹೊನ್ನ ಗದ್ದಿಗೆ ಯಿಕ್ಕಿ
ಮನ್ನಣೆ ಮಾಡಿ ಲಕುಮಿಯ || ನುಡಿದಳು
ಎನ್ನ ಬಂಧನವ ಬಿಡಿಸೈಯ್ಯ            ೬೪

ಹೆತ್ತಯ್ಯ ಮುತ್ತಯ್ಯ ನಿತ್ತವರು ಗಡಿಯಿಲ್ಲ
ಮರ್ತ್ಯದೊಳಿಂದು ಸೆರೆಸಿಕ್ಕಿ || ಇರಲಾರೆ
ಕರ್ತೃ ಶೇಖರನೆ ಬಿಡಿಸಯ್ಯ  ೬೫

ಬೇಡಿಕೊಂಡ ಲಕ್ಷ್ಮಿಗೆ ರೂಢಿಗೀಶ್ವರ ಮೆಚ್ಚಿ
ನಾಡಿಂದ ನಾಡಿಗೆ ಕಳುಹೆವು || ಎಂದೆನುತ
ರೂಢಿಗೀಶ್ವರನು ನುಡಿದನು            ೬೬

ಆಗಲಿ ಲಕುಮಿ ಭೋಗವನೆಲ್ಲವ
ವೀಗ ಪುರಕೆ ಕಳುಹುವೆ || ಎಂದೆನುತ ರೂ
ಢಿಗೀಶ್ವರನು ನುಡಿದನು     ೬೭

ಕೊಂಡು ಹೋದನೆಂದು ನಂಬಿಗೆಯ ಕೊಟ್ಟರು
ಇಂಬು ಮಾಡಿದರು ಲಕುಮಿಯ || ಶಿವರಾಯ ಹೊ
ಗೆಂಬುತ ಮುಂದಕ್ಕೆ ನಡೆದರು           ೬೮

ಕತ್ತಲೆ ಹರಿವಂತೆ ಎತ್ತಿದರು ದೀಪವ
ಬತ್ತಿಗೂಡಿದರು ಹೊಸ ಮದ್ದು || ನಾರಂದ
ಸುತ್ತ ನೋಡಿದರು ಅರಮನೆಯ        ೬೯

ಅತ್ತಿತ್ತ ನೋಡುತ್ತ ಊರಣರ ಆಲಿಸುತ್ತ
ಚಿತ್ತದಲಿ ಶಿವನ ನೆನೆಯುತ್ತ | ನಾರಂದ
ಚಿತ್ರ ಶಾಲೆಗಾಗಿ ನಡೆದರು    ೭೦

ಅರಮನೆಗಳ ಹೊಕ್ಕು ಬರೆದ ಚಿತ್ರವ ಕಂಡು
ಹೊರಗೆ ನಾರಂದ ನುಡಿದಾರು || ಅದವೊಂದು
ಗಿರಿಜೇಯ ತಂದ ಪಟವೀದೆ  ೭೧

ಆಕಾಶದಗಲಕ್ಕೆ ಭೂಮಿಯ ನೀಳಕ್ಕೆ
ಹಾಕಿದರು ಶಿವನ ಕಿರುಜಡೆಯ || ಗಂಗಮ್ಮನ
ಪಾತಾಳಕಿಳಿದ ಪಟವೀದೆ     ೭೨

ಇಂದ್ರಕೀಲದಲಿ ಆಂದು ಅರ್ಜುನ ರಾಯ
ಒಂದಂಬಿಗಾಗಿ ತಪವೀರೆ || ದಾನವನು
ಹಂದಿ ರೂಪಾಗಿ ಸುಳಿದನು  ೭೩

ಹಂದಿ ಸೂಕರನು ಕೊಂದನೆಂದೆನುತಲಿ
ಬಂದಾಗ ತನ್ನ ಮೊರೆಹೊಗಲು || ಅರ್ಜುನನ
ಒಂದಾಗಿ ಕಾದಿದ ಪಟವಿದೆ   ೭೪

ಅಂದು ಸೂಕ್ಷ್ಮ ರಾಯ ನಂದಿಯ ನುಂಗಲು
ನಿಂದು ಒಡೆಲೊಳಗೆ ಬೆಳೆದಾನು || ಸಿಳೀಟ್ಟು
ಚಂದದ ಪಟವು ಬರೆದೀದೆ   ೭೫

ಉರಿಗಣ್ಣ ತನುಜಾರು ಪರವಾದಿ ದಕ್ಷನ
ಶಿರವ ಕೊಯಿದಿಟ್ಟ ಕುರಿದಲೆಯ || ಹತ್ತಿಸಿದ
ಕಿಡಿಗಣ್ಣ ರುದ್ರನ ಪಟವಿದೆ  ೭೬

ಹಲವು ಹುಲ್ಲನು ತಂದು ನುಲಿಯ ಕಾಯಕ ಮಾಡಿ
ಚೆಲುವ ಜಂಗಮಕೆ ಎಡೆಮಾಡಿ || ನೀಡುವ
ನುಲಿಯ ಚಂದಯ್ಯಗಳ ಪಟವಿದೆ      ೭೭

ಹೆಂಡದ ಮಾರಯ್ಯಗೆ ಖಂಡುಗಕ್ಕಿಯ ನೇಮ
ಕಂಡಲ್ಲಿ ಜಂಗಮಕೆ ಎಡೆಮಾಡಿ || ನೀಡಿದ
ಹೆಂಡದ ಮಾರಯ್ಯಗಳ ಪಟವಿದೆ      ೭೮

ಸಿರಿಯಾಳು ಚೆಂಗಳೆಯ ಮಗನ ಬಾಣಸ ಮಾಡಿ
ಉರುಗ ಭೂಷಣಗೆ ಉಣಲಿಕ್ಕಿ || ನೀಡಿದ
ಪುರ ಸಹ ಬಂದ ಪಟವಿದೆ    ೭೯

ಓದುವ ಸಣ್ಣವರೊಳು ಸೋದರರುಂಟೆಂದು
ವಾದಿಸಿ ಅಕ್ಕ ಭಾವಗಳ || ಕರತಂದ ನಿಮ್ಮ
ಮೈದ ಆ ರಾಮಯ್ಯನ ಪಟವಿದೆ       ೮೦

ಕೊಡದೀರೆ ಕಪ್ಪವ ನಡೆದನು ದಂಡೆತ್ತಿ
ದೃಢವೃಳ್ಳ ಶರಣ ಕಲಿಚೋಳ || ಜಡೆದಲೆಗೆ
ಮುಡಿದಲೆಯ ಕೊಟ್ಟ ಪಟವಿದೆ        ೮೧

ಸಿಂಧು ಬಲ್ಲಳನ ಹೆಂಡತಿಯ ಶಿವ ಬೇಡ
ಆ ಬಾಲೆಯನು ಕೊಟ್ಟ ಶಿವನಿಗೆ || ನೀವು ಅವಳ
ಕಂದನಾದಂತ ಪಟವಿದೆ       ೮೨

ಒಂದು ಪಾದದ ಮೇಲೆ ಒಂದು ಪಾದವನೂರಿ
ಚಂದದಿ ಕೊಳಲ ನುಡಿಸಿದ || ಗೊಲ್ಲಾಳನ
ಅಂದದ ಪಟವು ಬರೆದಿದೆ     ೮೩

ಸತ್ಯಕ್ಕ ಮುಕ್ತಾಯಿ ಒಪ್ಪುವ ಚೆಂಗಳದೇವಿ
ಮತ್ತೆ ಮಂಗಾಯಕ್ಕ ಅಮರವ್ವೆ || ಅಮ್ಮವ್ವೆ
ಭಕ್ತರಾದವರ ಪಟವಿದೆ       ೮೪

ನಂಬಿ ಪರಮರಾಯ ಕೆಂಬಾವಿ ಭೋಗಣ್ಣ
ತಂದೆಯ ಶಿರವ ತರದಾನು || ಗೊಲ್ಲಾಳನ
ಅಂದದ ಪಟವು ಬರೆದಿದೆ     ೮೫

ಕಡುಗಲಿ ಬಿಜ್ಜಳನ ಉಡಿಯ ಕೊಳೆಯಾದಡೆ
ನಡೆದವು ಕುದುರೆ ಗಜ ಮುಂದೆ || ಸೀಳಿದ
ಮಡಿವಾಳಯ್ಯಗಳ ಪಟವಿದೆ            ೮೬

ಇಬ್ಬರ ಕಳವಿಗೆ ಬಂದರೆಂದೆನುತ
ನಾರಂದ ವಂದಿ ಬಂದಹರೆ || ಶರಣರು ಮುಕ್ತರು
ನಂದಾದೀವಿಗೆಯ ತರಿಸಯ್ಯ            ೮೭

ಭಾವದಲಿ ರುದ್ರಾಕ್ಷಿ ಪವಳದ ಹಕ್ಕರಿಕೆ
ರಾವುತನೆಂಬುವನು ಇವನಾರೆ ……….
……………………………………….  ೮೮

ಹರನ ಕೈಲಾಸಕ್ಕೆ ಇರದೆ ದಾಳಿಯ ಮಾಡಿ
ವರದ ರಾಜೇಂದ್ರ ಈತನೆ ಎಂದೆನುತ || ನುಡಿದರೆ ಯ
ಮರಾಯ ಇವನೀಗೆ           ೮೯

ಬಟ್ಟೆಯ ಬಡಿದು ನಿಮಗಿಕ್ಕಿಸುವ ಮಾಡಿ
ಖಟ್ಟಾಂಗಧರನ ಒಲಿಸೀದ || ವಂಗೆ ಕಂದ
ಬಟ್ಟಿಯ ಮಾಡಿ ಅನಾಥ ಇವನೀಗ    ೯೦

ಬಡಗ ಮುಖವಾಗಿ ಕಾಗಡಿಯ ಪಿಡಿಕೊಂಡು
ದೃಢವಾಗಿ ನಿಂದಿಹಳು ಇವಳಾರೆ || ಸತಿ ಸೂರೆ
ಮಾಡಿದನಹುದು ಮನ್ನಿಸಿದಳಿವಳಯ್ಯ           ೯೧

ಗಡಿಗೆ ತುಂಬಿದ ಹಾಲ ನೀವು ಸಲಿಸೆಂದು ಬಂದಳು
ಒಡಲ ತುಂಬಿ ನೀವು ಸಲಿಸಯ್ಯ || ಹೇಳಿದವಳೀಗ
ಕೋಳೂರು ಕೊಡಗೂಸು ಪಟವು ಬರೆದಿದೆ       ೯೨

ಗಂಡನು ಭವಿಯೆಂದು ನಿಮ್ಮ ಪಾದವ ಬಿಡದೆ
ಗಂಡ ಹೆಂಡರು ಮುಖ ಮಾಗೆ || ಒಂದಾಗಿ
ಲಿಂಗ ಕೂಡಿಸಿದ ಹೇರೂರ ಹೆಣ್ಣು ಇವಳೀಗ     ೯೩

ನುಡಿದ ನಿರ್ವಾಣದ ಆ ಉಡಿಗೆಯ ಬೀಸಾಕಿ
ನಡೆದ ಕದಳೀಯ ವನಹೊಕ್ಕು || ದೇವರಿಗೆ
ಅಕ್ಕಮಹಾದೇವಿ ಇವಳೀಗ  ೯೪

ಗೋಡೆ ಗೋಡೆಗಳಲ್ಲಿ ನೋಡಿದರು ಚಿತ್ರವ
ಬೇಡರ ಕಣ್ಣಪ್ಪ ನಿಮಗಂದು || ಕಂಗಳ
ಜೋಡಿಸಿ ಕಿತ್ತ ಪಟವಿದೆ      ೯೫

ಗುರುವೆ ಶಿವನೊಡನೆ ವರ ಶಿಷ್ಯ ಹೇಸದೆ
ಕರವಂತ ಶಿಷ್ಯನಕೊಂಡು || ಕೈಲಾಸದ
ಪುರಕ್ಕೆ ಬಿಲ್ಲಮ ಹೋದ ಪಟವಿದೆ    ೯೬

ಸತ್ಯರು ಶರಣರು ಶಿವಭಕ್ತರನೆಲ್ಲರ
ಚಿತ್ರದ ಲೆಕ್ಕಕ್ಕೆ ಬರೆದನು || ಗಣಪತಿ
ಮಿಥ್ಯೆಂದು ತಾನೆ ಅರಿಯನೆ  ೯೭

ಚಿತ್ರವ ನೋಡುವರೆ ಹತ್ತೆಂಟು ದಿನ ಬೇಕು
ಕಟ್ಟು ನಾರಂದ ನವರತ್ನ || ಮಾಣಿಕವ
ಕಟ್ಟು ನಮಗೊಂದು ಹೊರೆ ಮಾಡಿ   ೯೮

ಕೂಳು ಕೆಚ್ಚಿಗೆ ಬರೆದ ಹಾಳು ಬೀಳುಗಳಲ್ಲಿ
ಏಳೆಂಟು ದಿನವು ಇದನೋಡ || ಬೇಕಯ್ಯ
ವೇಳ್ಯವಾದವು ಬಿಜ ಮಾಡಿ  ೯೯

ರಾಜರೆರ ಶಿವನು ತೇಜ ಉನ್ನತನಾಗಿ
ಮೂಜಗಕ್ಕೊಡೆಯ ಗಣಪತಿ || ರಾಯನ ಮನೆಯ
ಭೋಗಶಾಲೆಯ ಒಳಹೊಕ್ಕು           ೧೦೦

ಮುತ್ತಿನ ಗದ್ದುಗೆಯಲ್ಲಿ ಅರ್ತಿಯಲಿ ಶಿವನಿಂತ
ಕರ್ತುವಲ್ಲಭನೆ ಬಿಜ ಮಾಡಿ || ಶಿವಪೂಜೆಗೆ
ಹೊತ್ತುಗಳಾದವು ನಮಗೀಗ            ೧೦೧

ಹೊನ್ನು ತಂಬಿಗೆಯಲ್ಲಿ ಪನ್ನೀರು ಪರಿಮಳ
ಚೆನ್ನಾಗಿ ತುಂಬಿ ಇರಿಸಿದರು || ನಾರಂದ
ತನ್ನ ಸಾವಿರವು ಕಮಲವ    ೧೦೨

ಪಡಿಯ ಅಗ್ಗಣಿ ತುಂಬಿ ಸಡಗರದಿ ಪುಷ್ಪವ ಕಟ್ಟಿ
ಎಡೆಮಾಡಿ ಶಿವನೆ ಇರಸೀದ || ನಾರಂದ
ಮೃಡ ಶಿವ ಪೂಜೆಗನುವಮಾಡಿ        ೧೦೩

ಮಂತ್ರಿ ನಾರಂದ ಸಿಂಧು ಗಂಗೆಯ ತಂದು
ಕಂತುಹರನ ಮುಂದಿರಿಸೀದ || ಶಿವರಾಯ
ಸಂತೋಷದಿಂದ ಪೂಜೆಗನುವಾದ      ೧೦೪

ಕನ್ನೆ ಲಕ್ಷ್ಮಿಯು ಕೊಟ್ಟು ಹೊನ್ನ ಹರಿವಾಣವ
ಚೆನ್ನಾಗಿ ಬೆಳಗಿರಿಸೀದ || ನಾರಂದ
ಪನ್ನಂಗ ಧರೆಗೆ ಎಡೆಮಾಡಿ              ೧೦೫

ಈಳೆ ನಿಂಬೆಯ ಹಣ್ಣು ಹೋಳು ಮಾವಿನ ಕಾಯಿ
ದಾಳಿಂಬದ ಕಾಯಿ ಅರೆನಲ್ಲಿ || ಕಾಯನು
ಏಳವೇರಿಧರೆಗೆ ಎಡೆಮಾಡಿ   ೧೦೬

ಅಲ್ಲ ಮೆಣಸಿನಕಾಯಿ ಬೆಲ್ಲವತ್ತದ ಕಾಯಿ
ನೆಲ್ಲಿಯಕಾಯಿ ನೆಲಗುಳ್ಳ || ದುಪ್ಪಿನ ಕಾಯಿ
ಮಲ್ಲಿಕಾರ್ಜುನಗೆ ಎಡೆಯಾದೊ       ೧೦೭

ಉಂಡಲಗೆ ಕಜ್ಜಾಯ ಸೊಟ್ಟಿಗೆ ಪಾಯಸ
ಮುದ್ದು ನಾರಂದ ತೆಗೆ ತಂದು || ಎಡೆಮಾಡಿ
ಚಿದ್ರೂಪ ಧರನೆ ಸಲಿಸಯ್ಯ  ೧೦೮

ಅರಮನೆಯೊಳಗೆಲ್ಲ ತಿರುಗಾಡಿ ತಂದನು
ನೊರೆಹಾಲು ಮೊಸರು ಹರೆದುಪ್ಪ || ಸಕ್ಕರೆ
ಹರಗೆ ನಾರಂದ ಎಡೆಮಾಡಿ  ೧೦೯

ಸಣ್ಣಕ್ಕಿ ಅನ್ನವು ಹಣ್ಣು ಕಜ್ಜಾಯವು
ಕಣ್ಣು ಮೂರುಳ್ಳ ಶಿವನಿಗೆ || ಎಡೆಮಾಡಿ
ಸಲಿಸೆಂದು ಕರವ ಮುಗಿದನು            ೧೧೦

ಎಡೆ ಮಾಡಿದೆಡೆಯನ್ನು ಎರಡು ಭಾಗವ ಮಾಡಿ
ನಾರಂದನೀಗೆಡೆಯ ತೆಗೆದಾರು || ಶಿವರಾಯ
ಕಾರುಣ್ಯಮುನಿಯೇ ಸವಿಸಯ್ಯ        ೧೧೧

ಹರನು ಪ್ರಸಾದವ ಹರುಷದಿಂದಲಿ ಕೊಡಲು
ಶರಣೆಂದು ಮುನಿಯ ಸಲಿಸಿದ|| ……………..
………………………………………….           ೧೧೨

ಆರೋಗಣೆಗಳ ಮಾಡಿ ಪನ್ನೀರ ಹಸ್ತಕ್ಕೆ ನೀಡಿ
ಅಷ್ಟ ಭಾಗದ ಬಿಳಿಯೆಲೆಯ || ಕರ್ಪೂರದ
ಹೋಳು ವೀಳ್ಯಗಳ ಕೊಡುತಿರ್ದ       ೧೧೩

ಆರೋಗಣೆಯ ಮಾಡಿ ವೀಳ್ಯವ ತೆಕ್ಕೊಂಡು
ನಾರಂದ ತಂದ ಪರಿಮಳವ || ತಟ್ಟೆಯಲಿ
ಪರಿಮಳವನಿತ್ತ ಶಿವನಿಗೆ      ೧೧೪

ವೀಳ್ಯವ ತಕ್ಕೊಂಡು ಏಳೆಂದು ಶಿವರಾಯ
ಜಾಳಿಗೆಯ ಬಾಚಿ ಹೊರಸಿದ || ನಾರಂದ
ಪೌಳಿಂದಾಚೆ ಯತ್ನಿಸಿದ      ೧೧೫

ಮುತ್ತು ಮಾಣಿಕವನು ಕಿತ್ತು ರಾಶಿಯ ಮಾಡಿ
ಎತ್ತೆತ್ತಿ ನೋಡಿ ಮಡಗಿದ || ನಾರಂದ
ಒಟ್ಟಿ ಹಾಕಿದ ಹೊರೆಗಳ     ೧೧೬

ಝುಲ್ಲಿ ಚಾಮರಗಳ ಭಲ್ಲೆ ಕಠಾರಿಯ ಹರಿ
ಬಲ್ಲಿದ ಹಿಡಿವ ಬಲಗೈಯ || ಕಂಕಣವ
ಮಲ್ಲಯ್ಯ ಕದ್ದು ತನಗೆಂದು          ೧೧೭

ಉಡುವ ವಸ್ತ್ರವನು ತೊಡುವ ಬಂಗಾರವನು
ಕೊಡು ಕುಡಿನೀರ ಗಿಂಡಿ ಹರಿವಾಣ || ಕೆಲ ತಟ್ಟೆಯ
ಮಡಿಗೆಂದು ಶಿವನು ಕೊಡಿಸಿದ          ೧೧೮

ಏಕಮುಖದ ರುದ್ರಾಕ್ಷಿ ಲೋಕ ಮಾಣಿಕ ಚಿನ್ನ
ಆಕೆ ರಾಮಾಯಿ ಧರಿಸುವ || ಆಭರಣವ
ಬೇಕೆಂದು ಗಿರಿಜೆಗೆ ಶಿವ ಕದ್ದ            ೧೧೯

ಒಡ್ಯಾಣ ಮುಡಿ ಸೂಡಂಗ ಕರದ ಕಡಗ
ಹವಳ ಗಟ್ಟಿ ಕರಡಿಗೆ ಬಿಡಿ ಮುತ್ತ || ಪದಕವು
ಗಿರಿಜೆ ಕೊರಳಿಗೆ ತಮಗೆಂದು೧೨೦

ಉಟ್ಟು ಕೊಟ್ಟದವುಳಿದ ಮಿಕ್ಕವನೆಲ್ಲವ ತೆಗೆದು
ಕೊಟ್ಟು ಬಂಗಾರವ ತೆಗೆದರೆ || ಪರಸತಿಯ ಮೈ
ಮುಟ್ಟಿ ತೆಗೆವ ಪರಿಹ್ಯಾಗೆ   ೧೨೧

ಕಟ್ಟಿಗೆಗಳ ತಂದು ಕಟ್ಟಿದರು ಮರುಜೇವಣಿಗೆಯ
ಮುಟ್ಟಿಸಲು ಕೀಲು ಕಳೆದವು || ನಾರಂದ
ಖಟ್ಟಾಂಗ ಧರೆಗೆ ನುಡಿದನು            ೧೨೨

ದಿಂಡು ದಿಂಡಿನ ಸೀರೆ ಗಿಂಡಿ ಹರಿವಾಣವ
ಕೊಂಡು ಹೋಗುವರೆ ಅಳವಲ್ಲ || ನಾರಂದ
ಬಂಡಿಯ ತರದೆ ಮರೆತೇವೂ            ೧೨೩

ಬಂಡಿ ಕಳವೀಗೆ ತರವಲ್ಲ ಬಡವನಿಗೆ ಹೋರಾಟವಲ್ಲ
ಕೊಂಡಗವಲ್ಲ ಅರಸಿಗೆ || ಶಿವರಾಯ
ಬಂಡಿ ಕಳವೀಗೆ ತರವಲ್ಲ    ೧೨೪

ಕಳ್ಳರು ತವನಿಧಿಯ ಕಂಡು ತಾ ಗಿಳಿರಾಮ
ತಮ್ಮವರ ಕೂಡೆ ಅರುಹೀತು || ಗಿಳಿರಾಮ
ತಲ್ಲಣಗೊಂಡು ಕರೆಯಿತು  ೧೨೫

ಕೋಲ ಮೇಲಣ ಗಿಳಿ ಕೋಪವ ತಾಳಿತು
ಪಾಪಿಗಳು ನಿಮ್ಮ ನಿದ್ರೆ ತಿಳಿಯಾದರೆ || ರಾಮಾಯಿ
ನಿದ್ರೆ ತಿಳಿಯಾದೆ    ೧೨೬

ಅಕ್ಕಕ್ಕ ಅರಮನೆಯ ಹೊಕ್ಕರು ಕಳ್ಳರು
ಇಕ್ಕಿದ ಬಂಗಾರ ತೆಗೆದರು || ರಾಮಾಯಿ
ಅಕ್ಕ ನಿಮ್ಮ ನಿದ್ರೆ ತಿಳಿಯಾದೆ            ೧೨೭

ಭಾವಯ್ಯ ಅರಮನೆ ಕಾವಲವರಿದಂತೆ
ಆವ ಪರಿಯಲಿ ಕಳವರು || ಭಾವಯ್ಯ
ಹೋಳಾಯಿತು ಇಂದು ಅರಮನೆ       ೧೨೮

ಅಂಜದೆ ಅಳುಕದೆ ಕುಂಜರ ನಿದ್ದಡೆಯಲ್ಲಿ
ರಂಜಿಸುವ ಸಿಂಹ ಬರುವಂತೆ || ಬರುವವರ
ಪಂಜರದ ಗಿಳಿಯು ನುಡಿಸೀತು         ೧೨೯

ಸಿಕ್ಕಿದರುಬ್ಬಸನಿವಗೆ ಮಕ್ಕಳಾಟಿಕೆಯಲ್ಲಿ
ದಿಕ್ಕಿಲ್ಲವೆ ಇವನ ಪುರದಲ್ಲಿ || ಚೋರರೆ
ಮಕ್ಕಳಾಟಿಕೆ ಬೇಡ ತೆರಳಯ್ಯ           ೧೩೦

ಅರಸು ಎಚ್ಚರವಾದರೆ ಶಿರಸವ ಹೊಡೆಯಿಸುವ
ಗರಗಸದೊಳಗೆ ಕೊಯಿಸೂವ || ಚೋರರೆ
ಇರಬೇಡಿ ಬೇಗ ತೆರಳಯ್ಯ               ೧೩೧

ಬೇಳುವೇಯ ಪಂಜ ಢಾಳವ ಮಾಡಿಸಿಕೊಂಡು
ಢಾಳಿಸಿ ಬರುವರಿವರಾರೊ ಎಂದೆನುತ || ಮಹಾರಾಯ
ಸಾಕಿದ ಗಿಳಿ ನುಡಿಯಿತು      ೧೩೨

ಪಂಜರದೊಳಗಣ ಪಂಚವರ್ಣದ ಗಿಳಿಯು
ಎಚ್ಚತ್ತು ರಾಯನ ಕರೆಯಿತು || ರಾಯ ನಿನ್ನ
ಮಂಚಗಳು ಹೋಗುತಿವೆ     ೧೩೩

ಅಕ್ಕ ಮರದೊರೆಗೀರೆ ಹೊಕ್ಕರು ಕಳ್ಳರು ಬಂದು
ಇಕ್ಕಿದ ಬಂಗಾರವ ತೆಗೆದರು || ರಾಮಾಯಿ
ಅಕ್ಕ ನೀನೇಳ ತರಬೇಡಾ     ೧೩೪

ಭಾವ ಮರೆದೊರಗೀರೆ ಇವರಾರೆಂದು ಅರಿಯೇನು
ಪಾವನ್ನ ವೀರರೂ ಒಳಹೊಕ್ಕು || ರಾಯ ನಿನ್ನ
ಕಾಲ ಪೆಂಡಿಯವ ಕಳೆದರು   ೧೩೫

ಭಾವ ಭಾವಯೆಂದು ಬಾಯಾರಿಕೆಯಾಯಿತು
ಭಾವಯ್ಯ ನಿದ್ರೆ ತಿಳಿಯಾದೆ || ಎಂದೆನುತ ಮಹಾರಾಯ
ಸಾಕಿದ ಗಿಳಿಯು ನುಡಿಯಿತು            ೧೩೬

ಹೊನ್ನು ಬೇಕಾದರೆ ಹೋರುವಷ್ಟು ಕಟ್ಟಿಕೊಳ್ಳಿ
ಚೆನ್ನೆಯರ ಭಂಗ ಪಡಿಸದೆ || ಹೋಗೆಂದು
ಚನ್ನ ಸಾಕಿದ ಗಿಳಿಯು ನುಡಿಯಿತು     ೧೩೭

ಹವಳ ಬೇಕಾದರೆ ದಣಿವಷ್ಟು ಕಟ್ಟಿಕೊಳ್ಳಿ
ಹರದಿಯರ ಭಂಗ ಪಡಿಸದೆ || ಹೋಗೆಂದು
ಹರದಿ ಸಾಕಿದ ಗಿಳಿಯು ನುಡಿಯಿತು   ೧೩೮

ಮುತ್ತು ಬೇಕಾದರೆ ಮತ್ತೊಷ್ಟು ಕಟ್ಟಿಕೊಳ್ಳಿ
ಮಿತ್ರೆಯರ ಭಂಗ ಪಡಿಸದೆ || ಹೋಗೆಂದು
ರಾಮಕ್ಕ ಸಾಕಿದ ಗಿಳಿಯು ನುಡಿಯಿತು            ೧೩೯

ಸುಮ್ಮನಿರು ಗಿಳಿರಾಮ ಉನ್ನಷ್ಟ ಚಿಲುಪಾಲು
ಒಮ್ಮನ ಕಡಲೆ ತನಿವಣ್ಣು || ಕೊಟೇವು
ನಿಮ್ಮವರ ಕರೆಯದಿರು ಕಂಡಾ          ೧೪೦

ಬೇಡ ಗಿಳಿರಾಮನೆ ರೂಢಿಯೊಳಾಡ ಬೇಡ
ಗಾಡಿಸಿ ನಿನ್ನವರ ಕರೆಯದೆ || ಇದ್ದರೆ ನಿನಗೆ
ಹಣ್ಣು ಹಂಪಲವ ಕೊಡುವೆವು         ೧೪೧

ರಾಯ ನೀ ಮಲಗೀರೆ ಮಾಯದ ಕಳ್ಳರು ಬಂದು
ಮಂಚದ ಕೆಳಗೆ ಇರುವರು || ಭಾವಯ್ಯ
ಮಂತ್ರತಾಗಿ ಮರದೊರಗಿದೆಯೊ       ೧೪೨

ನಿಲ್ಲಲಾರದೆ ಗಿಳಿ ವಲ್ಲಭೆಯ ಕರೆಯಿತು
ನಲ್ಲಳೆ ನಿಮ್ಮ ನಿದ್ರೆ ತಿಳಿಯಾದೆ || ರಾಮಾಯಿ
ಜಲ್ಲಿ ಪುಟ್ಟಿಗಳು ಸೂರೆ ಹೋಗುತ್ತಿವೆ           ೧೪೩

ಕೋಲ ಮೇಲಣ ಗಿಳಿಯು ಕೋಪವ ನೆರೆ ತಾಳಿ
ಪಾಪಗಳು ನಿಮ್ಮ ನಿದ್ರೆ ತಿಳಿಯಾವೆ || ರಾಮಾಯಿ
ಹಾಳಯಿತೆಂದು ಅರಮನೆ    ೧೪೪

ನೋಡಿದೆಯ ನಾರಂದ ಗೂಡಿನ ಗಿಳಿ ಕೊಬ್ಬ
ಗೂಡನು ತೆಗೆದು ಬಿಸಾಡೆಂದು || ನೇಮಿಸಿದ
ರೂಢೀಗೀಶ್ವರರು ಮುರಿದೆದ್ದ         ೧೪೫

ಅಡವಿಯ ಪಕ್ಷಿಗೆ ನುಡಿಮಾತ ಕೊಟ್ಟರೆ
ನುಡಿಯದೆ ಸುಮ್ಮನಿರುವುದೆ || ನಾರಂದ
ನುಡಿವ ನಾಲಿಗೆಯ ಕೀಳು ಬೇಗ         ೧೪೬

ಸೊಕ್ಕಿದರ ಗಿಣಿರಾಮ ಬೆಕ್ಕಿಗೆ ಹೇಳ್ನಿನ್ನ
ಗಕ್ಕನೆ ನಿನ್ನ ಕೊಲಿಸುವೆ || ಗಿಳಿರಾಮ
ಇದರ ಹಲ್ಲ ಕಳಚುವೆ        ೧೪೭

ಕೂಗದಿರು ಗಿಳಿರಾಮ ಹಿರಿಯ ಭಾವುಗ ಬಂದು
ಮುರಿದಾವೂ ನಿನ ಕೊರಳನು || ಎನುತಾಗ
ಹೆದರಿ ಕಂಗಟ್ಟು ಕಳವಳಿಸಿ   ೧೪೮

ಮುಕ್ಕಣ್ಣನೆಂಬುದು ಅರಿಯೀತು ಗಿಳಿರಾಮ
ಗಕ್ಕನೆ ಶರಣು ಶರಣಾರ್ಥಿ || ಎಂದಾಗ
ಮುಕ್ಕಣ್ಣನೆಡೆಗೆ ನಮಿಸಿತ್ತು೧೪೯

ಲಿಂಗವೆ ನಾ ನಿಮ್ಮ ಘನಲಿಂಗವೆಂದರಿಯೆನು
ಲಿಂಗದ ಕಳವಿಗೊಳಗೆಯ್ಯ || ಎನ್ನುತ
ಪಂಜರದ ಗಿಳಿಯು ನುಡಿಯಿತು         ೧೫೦

ಅಂಗಲಿಂಗ ಭಸ್ಮಾಂಗ ಭವಲಿಂಗ
ಜಂಗಮಲಿಂಗ ಶರಣಯ್ಯ || ಎಂದು ನಾ ನಿಮ್ಮ
ಅಂಗದ ಕಳವೀಗೆ ಒಳಗಯ್ಯ೧೫೧

ಗಂಗಾಧರನೆ ನಿಮ್ಮ ಘನಲಿಂಗವೆಂದರಿಯೆನು
ಅಂದದ ಕಳವಿಗೆ ಒಳಗೆಂದು || ಪಂಜರದ
ಅರಗಿಳಿ ಶಿವ(ನೀ)ಗೆ ನುಡಿಯಿತು        ೧೫೨

ಪಕ್ಷಿಯ ಮಾತುಕೇಳಿ ಮುಕ್ಕಣ್ಣ ನುಸುನಕ್ಕು
ಮತ್ತೆ ಪಂಜರವ ಹಿಡಿಕೊಂಡು || ಶಿವ ತಮ್ಮ
ಹಸ್ತದಲಿ ಮಂಡೆ ತಡಹಿದನು           ೧೫೩

ಚಿಕ್ಕರಾಮಯ್ಯಗೆ ತನಿಗಡಲೆ ಕೊಡುವೇವು
ಸಕ್ಕರೆ ಮಾವಿನ ತನಿವಣ್ಣ || ಕೊಡುವೇವು ನಿ
ಮ್ಮಕ್ಕನಿಗೆ ಹೊದರು ಕಂಡಾ            ೧೫೪

ಬೆಳವೆಲ್ಲವ ಮೆದ್ದು ಹಾಲು ಹಣ್ಣನೆ ಸವಿದು
ಚಿನ್ನದ ಪಂಜರದಿ ಒರಗಯ್ಯ || ಗಿಳಿರಾಮ
ನಿಮ್ಮ ಭಾವನಿಗೆ ಹೇಳಬೇಡ            ೧೫೫

ತುಪ್ಪ ಬೋನವನುಂಡು ಸಕ್ಕರೆ ಹಾಲನು ಸವಿದು
ಮುತ್ತಿನ ಪಂಜರದಿ ಒರಗಯ್ಯ || ಗಿಳಿರಾಮ ನಿ
ಮ್ಮಕ್ಕಗಳ ನಿದ್ರೆ ಕೆಡಿಸಾದೆ   ೧೫೬

ಮಂಚದ ಮೇಲಣ ಪಂಚವರ್ಣದ ಗಿಳಿಯೆ
ಮಂಕುಮದ್ದುಗಳ ತಳಿದರೂ || ಗಣಪತಿಯ
ಮಂಚದ ಬಳಿಗೆ ನಡೆದರೂ   ೧೫೭

ಮಂಚದ ಸುತ್ತ ಕುಂಚು ಕಳಂಜೆಯವರು
ಸಂಚಿಯ ಹಿಡಿದ ಚಲುವೆಯರು || ಗಣಪತಿಯ
ಮಂಚದ ಕೆಳಗೆ ಮಲಗಿಹರೂ            ೧೫೮

ಸಿರಿಮಾಯಿ ತಿಮ್ಮಾಯಿ ಸಿರಿಮುಖದ ಪದ್ಮಾಯಿ
ಎರಳೆಗಣ್ಣ ಬಾಲೇ ವಿರುಪಾಯಿ || ರಾಮಾಯಿ
ಇರದೆ ಪುತ್ತಳೆ ಹೊಳಿವಂತೆ   ೧೫೯

ವಲ್ಲಿ ವಸ್ತ್ರವ ಕದ್ದು ಪಿಲ್ಲಿಕಾಲುಂಗರುವ
ನಲ್ಲಳ ಕಿವಿಯ ಮಣೆಕೊಪ್ಪ || ತೆಗೆದೆಲೊ
ಮಲ್ಲಿಕಾರ್ಜುನನು ಮುದದಿಂದ       ೧೬೦

ಕಾಲುಂಗುರವ ಕದ್ದು ಮೇಲೆ ಪಿಲ್ಲೆಯ ತೆಗೆದು
ಸಾಲು ಮಂಟಿಗೆಯ ಸಡಲಿಸಿದೆ || ಹಸ್ತದ ಕೈ
ಕಂಕಣವನಿಳುಹಿದೆ೧೬೧

ಕಡಗ ಹಿಂಬಳೆ ತೆಗೆದೆ ಬೆರಳುಂಗುರವ ತೆಗೆದೆ
ಕೊರಳ ಮುತ್ತುಗಳ ನಿಳುಹಿದೆ || ಶಿವರಾಯ
ಇರುಳೊಂದು ತನಗೆ ಹಗಲಾಗಿ          ೧೬೨

ತೊಟ್ಟ ಹೊಂಬಳೆ ಕದ್ದೆ ಬೊಟ್ಟಿನುಂಗುರವ ತೆಗೆದೆ
ತೊಟ್ಟ ಮುತ್ತುಗಳನಿಳುಹಿದೆ || ರಾಯನ
ಮುತ್ತೈದೆಯರು ತೊಟ್ಟ ತೊಡಿಗೇಯ           ೧೬೩

ವಾಲಿ ಮೂಗುತಿ ಉಟ್ಟ ಸೀರೆಯ ಮಡಗಿ
ಮೇಲಾದನೆಲ್ಲ ತೆಗೆದೆವು || ರಾಮಾಯಿ
ವಾಲಿ ಭಾಗ್ಯದಲಿ ವರಗಮ್ಮ            ೧೬೪

ಅರ್ಕನುದಯವಾದಲರಗಳಿಗೆ ಮೇಲಿವರ
ಸೊಕ್ಕು ನಿದ್ರೆಗಳು ತಿಳಿಯಲಿ || ನಾರಂದ
ಮತ್ತೆ ಬೆಳುವೆಯ ಕಳಿದನು   ೧೬೫

ಪಟ್ಟದರಾಯ ತೊಟ್ಟ ಬಿರುದಿನ ಕಡೆಹೋವ
ಪಟ್ಟಣದೊಳಗೆ ಕಳುವವರ || ಗಂಡನೆಂದು
ಕಟ್ಟಿರ್ದ ಬಿರಿಯಿದೆ ಕಂಡು   ೧೬೬

ಧರೆಯ ಕಳ್ಳರ ಮೇಲೆ ಬಿರಿದನಿಕ್ಕಿದ ಕಡೆ
ಅರಸು ಗಣಪತಿಗೆ ಇದಿರಿಲ್ಲ || ಎಂದೆನುತ
ನಾರಂದ ನಮಿಸಿದನು ಶಿವನ ಚರಣಕ್ಕೆ೧೬೭

ಅರಮನೆಯ ಕದ್ದೆವು ಬಿರುದುಗಳ ಗೆಲಿದೆವು
ಅರಸಿಯರು ತೊಟ್ಟ ತೊಡಿಗೆಯ || ತೆಗೆಯೆಂದರು
ಗಂಡರ ಗಂಡನೆಂಬನೊಡೆಯನ ಮೇಲೆ೧೬೮

ಮನ್ನೆಯನ ಅರಮನೆಯ ಹೊನ್ನ ಬಂಗಾರವ
ಚೆನ್ನಾಗಿ ಕದ್ದ ಮನದಣಿಯ || ನಾರಂದ
ನಿನ್ನಂಥ ಕಳ್ಳ ಧರೆಯೊಳಗಿಲ್ಲ         ೧೬೯

ಎಷ್ಟು ಕಳವ ಕದ್ದರು ಏನಾಯಿತು ನಾರಂದ
ಲೋಕದೊಳು ಹೆಸರು ನಮಗಾಯ್ತು || ಮುನಿರಾಯ
ಲೋಕದ ಕಳ್ಳರು ನಮಗೆ ಹೆಣೆಯಿಲ್ಲ            ೧೭೦

ಅದೇನು ಲಿಂಗವೆ ಅಳುವಿಲ್ಲದೆಯ್ಯನೆ
ಚೊದ್ಯದ ಮಾತು ನಿಮಗೆಯ್ಯೆ || ಎಂದು ನಾರಂದ
ಶಿವನ ಚರಣಕ್ಕೆ ನಮಿಸಿದ    ೧೭೧

ಜಲ್ಲೆ ಗಂಗಳ ಹೆಣ್ಣು ರಾಯನ ಮಡದಿಯ
ಬಿಟ್ಟರೆ ಘಳಿಗೆ ಬರಲಾರೆ || ನಾರಂದ
ಗಲ್ಲದ ಮೇಲೆ ರೇಖೆ ತೆಗೆದಾನು       ೧೭೨

ಪರಸ್ತ್ರೀಯ ರಾಮಯ್ಯ ಮುಟ್ಟಬಹುದೆ ಸ್ವಾಮಿ
ಮುಟ್ಟಿದರೆ ಕರ್ಮವು ಬರುವುದೆಂದು || ನಾರಂದ
ಕರ್ಣವ ಮುಚ್ಚಿ ಶಿರವನೊಲಿದನು     ೧೭೩

ಕರ್ಮ ಧರ್ಮಗಳನ್ನು ಎನ್ನೊಳಗರುಹೆಂದು
ನಿರ್ಮಳಾಂಗ ನಾರಂದ ಬೆಸಗೊಂಡ || ಶಿವರಾಯ
ಕರ್ಮ ಧರ್ಮದ ಕಥೆಯನುಸುರಿದ      ೧೭೪

ನೋಡಿದರೆ ಕರ್ಮ ಮಾಡಿಸಿದರೆರಡು ಕರ್ಮ
ಕೋಡಿ ನೆಡೆದರೈದು ಕರ್ಮವೆಂದು || ಶಿವನಿಗೆ
ನಾರಂದ ನುಡಿದು ಬೆಸಗೊಂಡ          ೧೭೫

ಕಳವೆಂಬುದು ಕರ್ಮ ಧರ್ಮ ಇನ್ನೆಲ್ಲೆಯದು ಕರ್ಮವ
ಕಳೆವದಕೆ ಪರ್ಣಶಾಲೆಗೆ ಹೋಗುವೆಂದು || ಶಿವರಾಯ
ಧರ್ಮಶಾಸ್ತ್ರಗಳ ಮರೆತರು  ೧೭೬

ನಲ್ಲಳ ಕೊರಳ ಪದಕವ ತೆಗೆವಾಗ
ಗಲ್ಲದ ಮೇಲೆ ಮೂರು ಉಗುರುಕ್ಕಿ || ರೇಖೆಯ
ಮೆಲ್ಲನೂರಿದರು ಶಿವರಾಯ           ೧೭೭

ಗಲ್ಲವ ಮುದ್ದಿಸಿ ನಲ್ಲಳ ಮುಖ ನೋಡಿ
ತಲ್ಲಣಗೊಳ್ಳುತ್ತ ಮನದಲ್ಲಿ || ರಾಮಾಯಿ ನಿನ್ನ
ಸಂಗಡವ ಬಿಟ್ಟು ಹೊರಡುವರ ಮನ ಬೇರೆ     ೧೭೮

ಮುಂಗೋಳಿ ಕೋಗಿತು ಮೂಡಣ ಕೆಂಪೇರಿತು
ತಿಂಗಳ ಬೆಳಕು ಹರಿದವು || ರಾಮಾಯಿ
ಸಂಗಡವ ಬಿಟ್ಟ ಹೊರಡಯ್ಯ          ೧೭೯

ಹಟ್ಟಿಗೆ ಬಂದರು ಅಷ್ಟು ದಿಕ್ಕು ನೋಡಿದರು
ಕೆಟ್ಟ ಜಂಗಮವೆ ಬೆಳಗಾಯ್ತು || ನಾರಂದ
ಹೊಟ್ಟೆ ಹೊಯಿಕೊಳುತ ನುಡಿದನು  ೧೮೦

ಹುಚ್ಚು ಜಂಗಮ ದೊಡ್ಡವನೆಂದು ನೆಚ್ಚಿ ನಾ ಬಂದೆ
ಕೆಟ್ಟ ಜಂಗಮವೆ ಬೆಳಗಾಯಿತು || ನಾರಂದ
ನೆಟ್ಟೆಯ ಮುರಿದು ತೆರಳಿಯೆಂದ       ೧೮೧

ಮರಳು ಜಂಗಮದೊಡನೆ ಬರುವಾಗ ಅಂಜಿದೆನು
ಹರಹರ ಬೆಳಗಾಯಿತು ಬಿಜಮಾಡಿ || ಎಂದು
ನಾರಂದ ಶಿವನ ಚರಣಕ್ಕೆ ಎರಗಿದ      ೧೮೨

ಬಂದೆವು ನಾರಂದ ರಂಭೆಯಿವಳಿರುವಂತ
ಸಂಭ್ರಮದ ಬಿಟ್ಟು ಹೊರಡುವರೆ || ಮನವಿಲ್ಲ
ಎಂದೆನುತ ಶಿವರಾಯ ನುಡಿದನು       ೧೮೩

ಅಲ್ಪಜಾತಿ ಅವಳ ಅನುಕೂಲ ಸಲ್ಲದು
ನಗುವರು ನಿಮ್ಮ ಶರಣರು || ಶಿವರಾಯ
ಅಲ್ಪಜಾತಿಯ ಬಿಟ್ಟು ಬಿಜಮಾಡಿ    ೧೮೪

ನಿದ್ರೆ ತಿಳಿದು ಎದ್ದೇಳುವ ಹೊತ್ತಾಯಿತು
ಎದ್ದರೆ ಕಷ್ಟ ಬರುವುದು || ಶಿವರಾಯ
ಕದ್ದದ್ದನ್ನೆಲ್ಲ ಹೊರಬೇಕು           ೧೮೫

ಗೆಳೆಯರಿಬ್ಬರು ಕೂಡಿ ಮನೆಯ ಬಾಗಿಲ ದಾಟಿ
ಕನಕ ಮಾಣಿಕವು ಇರುವಲ್ಲಿ || ನಾರಂದ
ನಿನ್ನ ಮನಕೆ ಬಂದಷ್ಟು ಹೊರಿಸೆಂದ   ೧೮೬

ಪಚ್ಚೆ ಮಾಣಿಕ್ಯ ಚಲ್ಲಿ ಹೆಚ್ಚಿನ ನವರತ್ನ
ಕಟ್ಟಾಣಿ ಮುತ್ತು ಹವಳದ || ನಾರಂದ
ಕಟ್ಟು ನನಗೊಂದೊರೆಯ ಬಿಗಿಮಾಡಿ೧೮೭

ಕಟ್ಟಿ ದೇವರ ಮೇಲೆ ಕೊಟ್ಟರೆ ಕರದೋಷ
ಪಟ್ಟದಾನೆಗಳ ತರಬೇಕೋ || ಹಿಡಿತಂದು
ಪಟ್ಟಣದಿಂದಾಚೆ ಹೊರಬೇಕೂ        ೧೮೮

ಆರಾನೆಗಳ ಮೇಲೆ ಹೇರಿದರು ಮಾಣಿಕವ
ಮೂರು ಕಣ್ಣುಗಳು ದಣಿವಂತೆ || ನಾರಂದ
ಹೋರೆಂದು ಹೊರಗೆ ಶಿರಗೊಟ್ಟ      ೧೮೯

ಮರಿಯಾನೆಗಳ ಮೇಲೆ ಹೊರಗೆಗಳೆಲ್ಲವ ಹೇರಿ
ನಾರಂದ ಮುಂದೆ ನಡೆಯೆಂದ || ಶಿವರಾಯ ಬೇರೊಂದು
ಹೊರೆಯ ಕಂಕುಳುಗೆ ಅವುಚೀದ        ೧೯೦

ಒಂದು ಬಾಗಿಲ ದಾಟಿ ಎರಡು ಬಾಗಿಲ ಕಳೆದು
ಮುಂದಣ ಬಾಗಿಲ ಕದವಿಗೆ || ಮೊಳೆಗಳಿಗೆ
ತಂದ ಜಲ್ಲಿಗಳ ನಿಳಿಬಿಟ್ಟು  ೧೯೧

ತಳವಾರ ಕಟ್ಟಿಯಲಿ ಉರಿವ ಜಲ್ಲಿಯ ಮಡಗಿ
ಇರಿವ ಭಲ್ಲೆಯದ ತುದಿಯಲ್ಲಿ || ರಾಯನು
ಮೆರೆವ ಬೊಂಬೆಗಳ ತಂದು ಮಡುಗಿದರು        ೧೯೨

ಸೂಳೆಗೇರಿಯ ಮುಂದೆ ಜಾಳಿಗೆಯ ಹರವಿದರು
ನಾಡನಾಳುವನ ಅಧಿಕನಾ || ಬಾಗಿಲ ಮುಂದೆ
ಜಾಳಿಗೆಯ ಹೊರೆ ಕೆಡಹಿದಿರು           ೧೯೩

ಅಂಕದ ಅರಮನೆಗೆ ಡೆಂಕಣಿಯ ಹೂಡಿದರು
ಶಂಕರಪ್ರಿಯನ ಗುಡಿ ದಾಟಿ || ಗಟ್ಟಿಸೀರೆಗಳ
ದಿಕ್ಕು ದಿಕ್ಕಿಗೆಸೆದರು           ೧೯೪

ಊರ ಬಾಗಿಲ ದಾಟಿ ಆಳುವೇರಿಗೆ ಬಂದಾಗ
ದಾರಿಯಲಿ ಮುತ್ತು ಹರವುತ್ತ || ಕಳ್ಳರು
ವೀರರ ಪುರಕೆ ನಡೆದರು       ೧೯೫

ಮುತ್ತು ಮಾಣಿಕವ ತುಂಬಿ ಎತ್ತಿದರು ಹೇರುಗಳ
ಕಿತ್ತು ಮಾಲೆಗಳ ಹರಿದಾರು || ಬಡವರ ಕೇರಿಯಲ್ಲಿ
ಬಿತ್ತುತ್ತ ಮುಂದಕ್ಕೆ ನಡೆದರು           ೧೯೬

ಬಂಗಾರವ ಹಾಕುತ್ತ ಹಿಂದೆ ತಿರುಗಿ ನೋಡುತ್ತ
ಬಂದರು ಬೇಗ ನಡೆಯೆನುತ || ಶರಣರ
ನಂದೀಯ ಗುಡಿಗೆ ನಡೆದರು೧೯೭

ಅಲ್ಲಲ್ಲಿ ಮುತ್ತುಗಳ ಬಿತ್ತುತ್ತ ಬಂದರು
ಬಲ್ಲಿದ ಗುಂಡಬ್ರಹ್ಮಗಳ || ಪುರಕಾಗಿ
ಕಳ್ಳರಿಬ್ಬರು ಬಂದು ನಲಿಯುತ್ತ       ೧೯೮

ಬಂದರು ಶರಣರು ನಂದಿಯ ಗುಡಿಗಾಗಿ
ತಂದ ಹೇರುಗಳ ಕೆಡಹಿದರು || ಮೇಲಕೆ
ಚಂದ ಮಾಡಿದರು ಬಸವನ  ೧೯೯

ಹೊರೆಗಳೆಲ್ಲವ ಬಿಟ್ಟು ಗುರುತಿನ ಬಂಗಾರವ
ಮೆರೆವ ನಂದೀಶ ನಿಮ್ಮ ವಶವೆಂದು || ನಾರಂದ
ಸರ್ವ ಆಭರಣವ ತೊಡಸಿದರು         ೨೦೦

ಅಂಕಣಂಕಣದಲ್ಲಿ ಡೆಂಕಣಿಗಳ ಹೂಡಿದರು ಮೀ
ನಾಂಕನ ವೈರಿ ಶೃಂಗರಿಸಿದ || ಬಸವನ
ಶಂಕರನ ವಾಹನನೆ ಜಯವೆನುತ್ತಾ     ೨೦೧

ಗೊಂಬೆ ಗೊಂಬೆಯ ಸೀರೆ ಕಂಬಕ್ಕೆ ಕಟ್ಟಿದರು
ಕಂಬಕ್ಕೆ ಕರಿದು ಬಿಳಿದನು || ದೇವಾಂಗವ
ಸಂಭ್ರಮದಿಂದ ಗುಡಿಗಟ್ಟಿ   ೨೦೨

ಬಟ್ಟೆಗಾರೆಯ ತೆಗೆದು ಕಟ್ಟಿದರು ಕಂಬ(ದ)ಮೇಲಕ್ಕೆ
ಬಟ್ಟೆ ಮತ್ತು ಹವಳವ || ದಂಡೆಗಳ
ಕಟ್ಟಿದರು ಚೆನ್ನಬಸವಗೆ     ೨೦೩

ಕೋಡಿಗೆ ಕಟ್ಟಿದರು ಕೊಡಹಿನ ಜವಳಿಯ
ನಾಡನಾಳುವನ ಕೊರಳೀನ || ಪದಕವ
ಜೋಡಿಸಿದರು ಚನ್ನಬಸವಗೆ            ೨೦೪

ಹರನ ಪಾದದಲಿದ್ದ ಬಿರುದೀನ ಕಡಗವ
ಧರಿಸಿದರು ಚನ್ನಬಸವಗೆ || ನಾರಂದ
ಬರುವ ಪವಾಡ ನಿಮಗೆಂದಾ            ೨೦೫

ಅರಮನೆಯಲಿ ಕದ್ದೇವು ಬರುತದೆ ಹುಯ್ಯಲು
ವರವುಳ್ಳ ನಂದಿ ಕಡೆಯಿಂದ || ಶರಣರ
ಪುರದ ಬಾಗಿಲಕ್ಕಾಗಿ ಶಿವಬಂದ         ೨೦೬

ಊರಬಾಗಿಲ ಹೊಗುವಾಗ ಮತ್ತಾರನು ನುಡಿಸಿದೆ
ಸೇರಿದ ಕಳ್ಳರು ಅಡವೀಯಲ್ಲಿ || ನಿಡಯದಂತೆ
ವೀರರ ಪುರಕ್ಕೆ ನಡೆದಾರು   ೨೦೭

ಕಂಡರು ಕನಸಿನಲಿ ಕಳ್ಳರು ಬಂದುದನು
ಗುಂಡಬ್ರಹ್ಮಯ್ಯಗಳು ತಿಳಿದೆದ್ದು || ತಮ್ಮ
ಹೆಂಡರ ಕೂಡೆ ನುಡಿದರು    ೨೦೮

ಎಂದಿನ ಹಾಗಲ್ಲ ಇಂದೊಂದು ಸ್ವಪ್ನವ
ಬಂದೀತು ನಮಗೆ ಬಲುಬಾಧೆ || ಜಯಸುವೆವು
ಮುಂದೆ ಕಾಣುವೆವು ಮುಕ್ತಿ ಫಲಗಳ   ೨೦೯

ನಿಮ್ಮ ಕನಸಿನ ಫಲವ ನಮ್ಮೊಳಗರುಹೆಂದು
ರಮಣೀಯರೆದ್ದು ಬೆಸಗೊಳೆ || ಗುಂಡಬ್ರಹ್ಮಯ್ಯ
ಎದ್ದು ತಾವಾಗ ನುಡಿದರು  ೨೧೦

ಮಾಯದ ಕಳ್ಳರು ಬಂದು ಮರೆಹೊಗುವರು ನಮ್ಮಲ್ಲಿ
ರಾಯ ದಂಡೆತ್ತಿ ಬರುವನು || ಅವನಿಗೆ ನಮ್ಮ
ಕಾಯವನು ಕೊಟ್ಟು ಕಳುಹುವೆವು     ೨೧೧

ಇಂತೆಂಬ ಕನಸನು ತಮ್ಮ ಕಾಂತೆಯರಿಗರುಹಿದರು
ಚಿಂತೆಗೊಳದೆ ತಮ್ಮ ಮನದಲ್ಲಿ || ಇರುತಿರೆ
ಪಂತದ ಕಹಳೆ ಹಿಡಿದಾವೆ     ೨೧೨

ಏರಿ ಮುತ್ತಿನ ಯೇರಿ ನೀರೆಲ್ಲ ಪನ್ನೀರು
ತೂಬೆಲ್ಲ ಹೊನ್ನ ಕಳಸವು || ಏರಿಯ ಮೇಲೆ
ನಾರಂದ ಶಿವ ನುಡಿಯುತಿರ್ದ           ೨೧೩

ತೊಡೆಗಳು ನಡುಗುತ್ತ ನುಡಿಗಳು ತೊದಲುತ್ತ
ದಡದಡಗೊಳ್ಳುತ್ತ ಎದೆಯಲ್ಲಿ || ಶರಣರ
ದೃಢವ ನೋಡುವರೆ ಶಿವಬಂದ        ೨೧೪

ಗುಂಡಬ್ರಹ್ಮಗಳ ಮನೆಗೆ ಖಂಡೆದ್ದುಧರ ಬರಲು
ಕಂಡು ನುಡಿಸಿದರು ಶರಣರು || ಕಳ್ಳರ
ಗಂಡಳುತನದ ಪರಿಗಳ        ೨೧೫

ಏನು ಬಂದರಿಯಂತವರಿತು ಕೇಳಿದರು
ಏನ ಹೇಳುವೆವು ನಿಮಗೀಗ || ಪವಾಡಕೆ
ಹಾನಿ ಬಂದಿದೆ ನಿಮ್ಮ ಬಿರುದಿಗೆ        ೨೧೬

ನಮ್ಮ ಬಿರುದಿಗೆ ಹಾನಿಯೆಂದಿಗೂ ಬರಲಿಲ್ಲ
ಗುಂಡುಬ್ರಹ್ಮಗಳು ನುಡಿದರು || ಶಿವರಾಯ
ಅರುಹಿದರು ತಮ್ಮ ಶರಣರಿಗೆ          ೨೧೭

ಮನ್ನೆಯನ ಅರಮನೆಗೆ ಕನ್ನವನಿಕ್ಕಿದೆವು
ಕನ್ನೆಯರು ತೊಟ್ಟ ತೊಡಿಗೆಯ || ರಾಯನ
ರನ್ನದ ಪೆಂಡೆಯ ತೆಗೆದೆವು   ೨೧೮

ಕನ್ನವನಿಕ್ಕುವರೆ ನಿಮ್ಮ ಕನ್ನಗತ್ತಿಗೆಳೆಲ್ಲಿ
ಮನ್ನೆಯನ ಕಡೆ ಹೊಕ್ಕ ಕುರುಹೇನು || ಎಂದರೆ
ಪನ್ನಂಗಧರನು ನುಡಿದರು   ೨೧೯

ಕೊಟ್ಟೆವು ನಿಮ್ಮಯ ಕಟ್ಟೆಯ ಬಸವಗೆ
ಬಟ್ಟಿ ಮುತ್ತುಗಳ ಹವಳದ || ದಂಡೆಯ
ಕಟ್ಟಿದೆವು ಚನ್ನಬಸವಗೆ      ೨೨೦

ಕಡೆಯನೇರಿಸಿದೆವು ಕಟ್ಟೆಯ ಬಸವಗೆ
ಒಡವೆ ಬಂಗಾರವ ಇರಿಸಿದೆವು || ಕನ್ನವ
ಹಿಡಿದ ಕತ್ತಿಗಳ ಕುರುಹೀಗೆ  ೨೨೧

ಹಿಡಿದ ಕತ್ತಿಯ ತೆಗೆದು ನೋಡಿದ ಶರಣ
ನಡುಗೀತು ಕರ್ಮ ಎದೆಯಲ್ಲಿ || ನಮಗೀಗ
ಕಡೆಗಾಲ ನಮ್ಮ ತಲೆಗಳಿಗೆ   ೨೨೨

ದಾಳಿ ಬರತುಲಿದೆ ಹೇಳಯ್ಯ ಬುದ್ಧಿಯ
ಆಳುವವ ಅರಿತರೆ ವಶವಲ್ಲ || ನಮಗಾಗಿ
ಬಾಳುವವರು ನೀವು ಕೆಡಬೇಡಿ          ೨೨೩

ದಾಳಿ ಬಂದರಸಿಗೆ ಹೇಳುವೆವು ಬುದ್ಧಿಯ
ಕೇಳದೆ ನಿಮ್ಮ ಹಿಡಿದರೆ || ನಿಮಗಾಗಿ ನಮ್ಮ
ಬಾಳು ತಲೆಯ ಕೊಡುವೆವು  ೨೨೪

ದಂಡೆತ್ತಿ ಬಂದರೆ ಕೊಂಡೋಗಲೀಸೆವು
ಮಂಡೆ ನಿಮಗಾಗಿ ಮೆರೆಯಲಿ || ಎಂದೆನುತ
ಗಂಡು ಮಾತುಗಳ ನುಡಿದರು           ೨೨೫

ಹಿಡಿದುಕೊಂಡು ಹೋದರೆ ಹೊಡೆಯಲೀಸೆವು ತಲೆಯ
ಮಡದಿಯರು ತಾವು ಸಹವಾಗಿ || ಶೂಲವ
ಜಡಿದು ಹತ್ತುವೆವು ಕುಣಿಯುತ್ತ       ೨೨೬

ತರವಲ್ಲದ ಠಾವಿನಲಿ ಅರಮನೆಯ ಕದ್ದೆವು
ಅರಸು ಗಣಪತಿಯ ಅರಿತಡೆ || ಅವ ನಿಮ್ಮ
ಬಿರುದಿಗೆ ಅಂಜ ಬಿಡುವನೆ   ೨೨೭

ನುಡಿದ ಮಾತನು ಕೇಳಿ ಘಡಿ ಘಡಿಸಿ
ಫಡ ಫಡಿಸಿ ಅಲಗ ಜಡಿಯುತ್ತ || ಶರಣರು
ನಡೆಯಯ್ಯ ನಮ್ಮ ಮಠಕ್ಕಾಗಿ         ೨೨೮

ಗುಂಡಬ್ರಹ್ಮಯ್ಯಗಳ ಹೆಂಡತಿಯರು ತಾವು ಬಂದು
ಕಂಡು ಕಳ್ಳರನು ನುಡಿಸಿದರು || ಕೇಳಿರಣ್ಣ
ದಿಂಡೇರು ನಮ್ಮ ಹೆಸರೇನು೨೨೯

ಹೆಸರು ಕೇಳಲು ತಾಯೆ ಹೊಸ ಕಳ್ಳ ದೇವಪ್ಪ
ವಸುಧೆಯೊಳು ಕಳದ ಕಳವಿಲ್ಲ || ಎಂದೀಗ
ಅಸಮಾನ ನಮ್ಮ ತಲೆಗಳಿಗೆ೨೩೦

ನಿಮಗೆ ಬಂದುದು ಸಟೆ ನಮಗೆ ಬಂದಿದು ದಿಟ
ಹರತಾನೆ ಕದ್ದು ಮರೆಹೊಗಲು || ಕೊಡೆನೆಂಬ
ಬಿರಿದುಂಟು ನಮಗೆ ತಿಳಿರಣ್ಣ           ೨೩೧

ಮರೆಹೊಕ್ಕರೆ ಕೊಡೆನೆಂಬ ಬಿರುದಿನ ಕಹಳೆಯ
ನೆರೆ ಕೇಳಿ ನೀವು ಅರಿಯರೆ || ನಮ್ಮ ಮನೆಯಲ್ಲಿ
ಇರಿರಣ್ಣ ತಣ್ಣಗೆ ಸುಖದಲ್ಲಿ          ೨೩೨

ಭಕ್ತರ ನುಡಿಗಳ ಅರ್ತಿಯಲಿ ಕೇಳುತ್ತ
ಇತ್ತ ಶಿವರಾಯ ಶಿವಪೂಜೆಗೆ || ಕುಳಿತರು
ಅರ್ತಿಯಲಿ ಬಂದ ರವಿರಾಜ೨೩೩

ಹೊತ್ತು ಮೂಡುವ ತನಕ ಎತ್ತಲೆಂದರಿಯದೆ
ಮತ್ತನಾಗಿಯು ರಾಯ ಮಲಗಿರಲು || ಎಚ್ಚರವರಿತಾಗ
ತತ್ವಕ್ಕೆ ಸಂಧಿ ಪದ ಮುಂದೆ೨೩೪

ಅಂತು ಸಂಧಿ ೩ಕ್ಕಂ ಪದನು ೫೭೮ಕ್ಕಂ
ಮಂಗಳ ಮಹಾ ಶ್ರೀಶ್ರೀಶ್ರೀ