ಹಲವು ತಿಂಗಳ ಹಿಂದೆ ಮುಂಬೈನಲ್ಲಿ ನಡೆದಂತಹ ಭಯೋತ್ಪಾದಕ ದಾಳಿಯ ಬಗ್ಗೆ ನಾವು ಈಗಾಗಲೇ ಸಾಕಷ್ಟು ವಿವರಗಳನ್ನು, ವ್ಯಾಖ್ಯಾನಗಳನ್ನು ಎಲ್ಲ ಮಾಧ್ಯಮಗಳಿಂದ ತಿಳಿದಿದ್ದೇವೆ. ಆ ಸಮಯದಲ್ಲಿ ಮುಂಬೈನ ಮೂವರು ಪೋಲಿಸ್ ಅಧಿಕಾರಿಗಳಿದ್ದ ವಾಹನವನ್ನು ಇಬ್ಬರು ಭಯೋತ್ಪಾದಕರು ಆಕ್ರಮಿಸಿ ಅವರ ಮೇಲೆ ಗುಂಡಿನ ಸುರಿಮಳೆಗರೆದು ಅಮಾನುಷವಾಗಿ ಕೊಂದಿದ್ದು ಸಹ ಈಗ ಚರಿತ್ರೆಯಾಗಿದೆ. ಇವೆಲ್ಲ ವಿಚಾರಗಳನ್ನು ಮೆಲುಕು ಹಾಕಿದಾಗ ಪೋಲಿಸರ ಆತ್ಮ ರಕ್ಷಣೆಗೆ ಬೇಕಾದ ಅನೇಕ ಸಾಧನಗಳು, ಆಧುನಿಕ ಶಸ್ತ್ರಾಸ್ತ್ರಗಳು ಇವುಗಳ ಕೊರತೆ ಎದ್ದು ಕಾಣುತ್ತದೆ. ಇವುಗಳಲ್ಲಿ ಅತಿ ಮುಖ್ಯವಾದುದೆಂದರೆ ಗುಂಡು ನಿರೋಧಕ ಕವಚ. ಇದನ್ನು ಅವರಾಗಲೀ ಅಥವಾ ಅವರ ವಾಹನವಾಗಲೀ ಹೊಂದಿದ್ದರೆ ಆ ದುರ್ಘಟನೆ ತಡೆಯಬಹುದಿತ್ತು ಎಂಬ ಅಂಶ ಎಲ್ಲರ ಬಾಯಲ್ಲೂ ಕೇಳಿ ಬರುತ್ತಿದೆ. ಈ ಗುಂಡು ನಿರೋಧಕ ವಸ್ತ್ರ, ಮತ್ತು ಅದರ ಉಪಯುಕ್ತತೆಯನ್ನು ಅರಿಯುವ ಮೊದಲು ನಮ್ಮ ದೇಹದ ರಚನೆ ಮತ್ತು ಅದರ ನಿರೋಧಕ ಶಕ್ತಿಯನ್ನು ಸ್ವಲ್ಪ ಮಟ್ಟಿಗೆ ವಿಚಾರ ಮಾಡೋಣ.

ಸಾರ್ವಜನಿಕ ವೇದಿಕೆಗಳಲ್ಲಿ ಭಾಷಣ ಮಾಡುವವರಿಗಾಗಿ ಗುಂಡು ನಿರೋಧಕ ಪೆಟ್ಟಿಗೆ

ನಮ್ಮ ದೇಹದ ರಚನೆಯಲ್ಲಿ ಒಂದು ಮಟ್ಟದವರೆಗೂ ಚಳಿ ಅಥವಾ ಶಾಖದ ತೀವ್ರತೆಯನ್ನು ತಡೆಯಬಲ್ಲ ನೈಸರ್ಗಿಕ ಗುಣಗಳಿರುತ್ತವೆ. ಅದೇ ರೀತಿ ನಮ್ಮ ದೇಹದ ಮೇಲೆ ಅನಿರೀಕ್ಷಿತವಾಗಿ ಬೀಳಬಹುದಾದ ಪೆಟ್ಟನ್ನು ಮಾಂಸ ಖಂಡಗಳು ತಕ್ಕ ಮಟ್ಟಿಗೆ ತಡೆಯಬಲ್ಲುವು ಮತ್ತು ದೇಹದ ಮೇಲಿನ ಗಾಯಗಳೂ ಸಹ ಒಂದು ನಿಶ್ಚಿತ ಸಮಯದಲ್ಲಿ ಗುಣವಾಗುತ್ತವೆ. ಆದರೆ, ಇದೇ ದೇಹ ಮಾನವನೇ ನಿರ್ಮಿಸಿಕೊಂಡ ಅನೇಕ ಅಪಾಯಗಳಿಂದ ಪಾರಾಗಲು ಹೆಣಗಬೇಕಾಗುತ್ತದೆ. ಈಗ ಸಾಕಷ್ಟು ಅಪಾಯವನ್ನು ತಂದೊಡ್ಡುತ್ತಿರುವ ಗುಂಡೇಟಿನಿಂದ ತಪ್ಪಿಸಿಕೊಳ್ಳುವುದಾಗಲೀ ಅಥವಾ ದೊಡ್ಡ ಬೆಂಕಿ ಅನಾಹುತದಿಂದ ಪಾರಾಗುವುದಕ್ಕಾಗಲೀ ಅವನ ದೇಹ ಶಕ್ತವಾಗಿಲ್ಲ. ಇವುಗಳ ಜೊತೆಗೆ ಸಮುದ್ರದ ಆಳದಲ್ಲಿ ಅಥವ ಅಂತರಿಕ್ಷದಲ್ಲಿ ವಾತಾವರಣದ ಒತ್ತಡವನ್ನು ಅಥವಾ ಅದರ ಕೊರತೆಯನ್ನು ಸಹ ತಾಳಿಕೊಳ್ಳಲಾಗುವುದಿಲ್ಲ. ಆದರೆ, ವಿಜ್ಞಾನ ಬೆಳೆದಂತೆ ನಾವು ಇಂತಹ ಅನೇಕ ಪ್ರಕೃತಿ ನಿಯಮಗಳನ್ನೂ ಮೀರಿದ ಆಕಸ್ಮಿಕಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವಲ್ಲಿ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದೇವೆ. ಮತ್ತು ಕೆಲವೊಮ್ಮೆ ಯಶಸ್ಸನ್ನೂ ಸಾಧಿಸಿದ್ದೇವೆ.

ಸಾವಿರಾರು ಸಂವತ್ಸರಗಳಿಂದಲೂ ಮಾನವ ಬೆಂಕಿಯ ಉಪಯೋಗ ಮಾಡುತ್ತಿದ್ದಾನೆ. ಆದರೆ, ಸುಮಾರು 20ನೇ ಶತಮಾನದವರೆಗೂ ಅದರಿಂದಾಗುವ ಅನಾಹುತಗಳಿಂದ ರಕ್ಷಣೆ ಪಡೆಯಲು ಆಗಿರಲಿಲ್ಲ. ಅಪರಿಮಿತವಾಗಿ ಬಳಕೆ ಮಾಡುತ್ತಿರುವ ವಿದ್ಯುತ್, ತೈಲಾಧಾರಿತ ಮತ್ತಿತರ ರಾಸಾಯನಿಕ ವಸ್ತುಗಳ ಬಳಕೆಯಿಂದ, ಅವನಿಗೆ ಸುರಕ್ಷತಾ ಸಾಧನಗಳನ್ನು ಕಂಡು ಹಿಡಿಯುವಂತಾಯಿತು. ಬೆಂಕಿ ಅನಾಹುತದಿಂದ ರಕ್ಷಿಸಬಲ್ಲ ಅನೇಕ ವಸ್ತುಗಳಿದ್ದು, ಇವು ಅದು ಹರಡುವುದನ್ನು ತಡೆಯುವುವಲ್ಲದೇ ತಾವೂ ಉರಿಯುವುದಿಲ್ಲ. ಕೆಲವು ರೀತಿಯ ಪ್ಲಾಸ್ಟಿಕ್ ಮತ್ತು ಅದರ ಮಿಶ್ರಿತ ವಸ್ತುಗಳು ಇಂಥಲ್ಲಿ ಪ್ರಮುಖವಾಗಿವೆ. ಪಿವಿಸಿ ಎಂದು ಸಾಮಾನ್ಯವಾಗಿ ಹೇಳುವ, ಪಾಲಿ ವೀನೈಲ್ ಕ್ಲೋರೈಡ್ ಅನ್ನು ಗೃಹ ಬಳಕೆಯ ವಿದ್ಯುತ್ ತಂತಿಗಳಿಗೆ ಹೊರ ಕವಚಗಳಾಗಿ ಬಳಸುವುದನ್ನು ಉದಾಹರಣೆಯಾಗಿ ಕೊಡಬಹುದು. ಸಿಲಿಕಾ ಮತ್ತು ಅಲ್ಯುಮಿನಿಯಮ್‌ಗಳು ಪ್ರಕೃತಿಯಲ್ಲಿ ಧಾರಾಳವಾಗಿ ಸಿಗುವ ವಸ್ತುಗಳಾಗಿದ್ದು, ಇವುಗಳ ಮಿಶ್ರಿತ ವಸ್ತು ಒಂದು ಉತ್ತಮ ಅಗ್ನಿ ನಿರೋಧಕ ವಸ್ತುವಾಗಿದೆ. ಇದನ್ನು ದೊಡ್ಡ ಕಟ್ಟಡಗಳಲ್ಲಿ ಬಳಕೆ ಮಾಡುತ್ತಾರೆ. ಸುಮಾರು 1200ಡಿಗ್ರಿ ಸೆಂ. (2200ಡಿಗ್ರಿ ಫ್ಯಾರನ್‌ಹೈಟ್)ವರೆಗೂ ಶಾಖವನ್ನು ತಡೆದುಕೊಳ್ಳಬಲ್ಲ ಶಕ್ತಿ ಇದಕ್ಕಿರುತ್ತದೆ. ಅಗ್ನಿ ನಿರೋಧಕ ವಸ್ತುಗಳ ಬಳಕೆಯ ಇನ್ನೊಂದು ಪ್ರಮುಖ ಕ್ಷೇತ್ರ ವಿಮಾನ. ಅದರಲ್ಲಿ ಒಳ ಮೈಗೆ ಬಳಸಿರುವ ವಸ್ತುಗಳು ಸುಲಭವಾಗಿ ಬೆಂಕಿಗೆ ಉರಿಯುವಂಥ ಪದಾರ್ಥಗಳು. ವಿಮಾನದಲ್ಲಿ ಬಳಸುವ ಇಂಧನದಷ್ಟೇ ಇದು ಅಪಾಯಕಾರಿ ಎನ್ನಬಹುದು. ಜಿಯೋ ಪಾಲಿಮರ್ಎಂಬ ಹಗುರ ಅಗ್ನಿ ನಿರೋಧಕ ವಸ್ತುವನ್ನು ಇಲ್ಲಿ ಮೇಲ್ಪದರವಾಗಿ ಬಳಸುತ್ತಾರೆ. ಅಥವಾ ಕೆವ್ಲರ್ ಎಂಬ ಇನ್ನೊಂದು ದೃಢವಾದ ಪಾಲಿಮರ್ ಫೈಬರ್‌ನಿಂದ ತಯಾರಾದ ವಸ್ತುವನ್ನೂ ಬಳಕೆ ಮಾಡುತ್ತಾರೆ. ಅಗ್ನಿಶಾಮಕ ದಳದವರು, ಲೋಹ ತಯಾರಿಕೆ ಮತ್ತು ರಬ್ಬರ್ ವಸ್ತುಗಳ ತಯಾರಿಕೆಯಲ್ಲಿ ಕೆಲಸ ಮಾಡುವವರು ಬೆಂಕಿ ನಿರೋಧಕ ಮೇಲುಡುಗೆಗಳನ್ನು ಬಳಕೆ ಮಾಡುತ್ತಾರೆ. ಅಲ್ಯುಮಿನಿಯಮ್-ಸಿಲಿಕ ಆಧಾರಿತ ವಸ್ತುಗಳು ಇದರಲ್ಲಿ ಬಳಕೆಯಾಗುತ್ತಿವೆ. ಅವು ಬೆಂಕಿ ಮತ್ತು ಶಾಖ ನಿರೋಧಕವಷ್ಟೇ ಅಲ್ಲ ಯಾವುದೇ ರಾಸಾಯನಿಕ ಕ್ರಿಯೆಗೂ ಸ್ಪಂದಿಸುವುದಿಲ್ಲ. ತಲೆಗೆ ಧರಿಸುವ ಹೆಲ್ಮೆಟ್‌ಗಳಲ್ಲಿ ಬಳಕೆಯಾಗುವ ‘ಸ್ಟೈರೋಫೋಮ್’ಕೂಡ ಇದೇ ಗುಣಗಳನ್ನು ಹೊಂದಿರುತ್ತದೆ. ಕೆಲವು ವ್ಯಕ್ತಿಗಳಿಗೆ ಸೂರ್ಯನ ಅಲ್ಟ್ರಾ ವಯಲೆಟ್ (ನೇರಳಾತೀತ) ಕಿರಣಗಳನ್ನು ಸ್ವಾಭಾವಿಕವಾಗಿ ತಡೆದುಕೊಳ್ಳಬಲ್ಲ ಶಕ್ತಿ ಇರುವುದಿಲ್ಲ. ಇದನ್ನು ‘ಕ್ಷೆರೋಡರ್ಮಾ ಪಿಗಮೆಂಟೋಸಮ್’ಎನ್ನುತ್ತಾರೆ. ಇಂತಹವರಿಗಾಗಿ ಸೂರ್ಯನ ಕಿರಣ ಪ್ರಖರತೆ ತಡೆಯಬಲ್ಲ ಬೆಂಝೋಟ್ರೈಜೋಲ್ ಎಂಬ ರಾಸಾಯನಿಕ ಪದಾರ್ಥವನ್ನು ಬಳಸಿ ತಯಾರಿಸಿದ ರಕ್ಷಕ ವಸ್ತುಗಳು ದೊರೆಯುತ್ತವೆ.

ಗುಂಡು ನಿರೋಧಕ ಅಂಗಿ ಕವಚಗಳು

ಗುಂಡು ನಿರೋಧಕ ವಸ್ತುಗಳು, ಅದನ್ನು ಬಳಸಿದವರಿಗೆ ಗುಂಡೇಟಿನಿಂದಾಗುವ ಹೊಡೆತ ಮತ್ತು ಹೆಚ್ಚು ವೇಗದಲ್ಲಿ ಘಾಸಿಗೊಳಿಸುವ ವಸ್ತುಗಳಿಂದ ರಕ್ಷಣೆ ನೀಡುತ್ತವೆ. ಆದರೆ, ಅದನ್ನು ಧರಿಸಿದವರಿಗೆ ಇವು ಪೂರ್ಣ ರಕ್ಷಣೆ ನೀಡುವುದಿಲ್ಲ. ಹೊಡೆತದ ತೀವ್ರತೆ ಕಡಿಮೆ ಮಾಡಿದರೂ ಸಣ್ಣ ಚೂರುಗಳು ದೇಹವನ್ನು ಹೊಗುವ ಸಾಧ್ಯತೆ ಇರುತ್ತದೆ. ಇದು ಪ್ರಾಣಾಪಾಯವನ್ನು ತಡೆಯಬಹುದಾದರೂ ಗಾಯಗಳಾಗುವುವು, ಮುಖ್ಯ ಅಂಗಗಳಿಗೆ ಹಾನಿಯಾಗುವುದು ಇದ್ದೇ ಇರುತ್ತದೆ. ಹೀಗಾಗಿ ಇದನ್ನು ‘ಗುಂಡು ಪ್ರತಿರೋಧಕ’ಕವಚಗಳೆಂದು ಕರೆಯುತ್ತಾರೆ. ವಿವಿಧ ರೀತಿಯ ಪಿಸ್ತೂಲುಗಳಿಗೆ ಅನುಗುಣವಾಗಿ ಬುಲೆಟ್ಟುಗಳು ತಯಾರಾಗಿರುತ್ತವೆ. 9 ×ೊ19ಮಿ.ಮೀ. ಗುಂಡುಗಳು, 7.62 ×ೊ39ಮಿ.ಮೀ. ಗಿಂತ ಕಡಿಮೆ ಕ್ಷೀಣತೆಯ ಗುಂಡುಗಳು. 7.62 ×ೊ39ಮಿ.ಮೀ. ಗುಂಡಿನಲ್ಲಿ ಸೀಸ ಬಳಕೆಯಾಗಿದ್ದರೆ ಅದು ಉಕ್ಕನ್ನು ಬಳಸಿ ತಯಾರಾಗಿದ್ದಕ್ಕಿಂತ ಕಡಿಮೆ ತೀಕ್ಷ್ಣತೆಯನ್ನು ಹೊಂದಿರುತ್ತದೆ.

ಗುಂಡು ನಿರೋಧಕ ಕವಚಗಳು ಗಟ್ಟಿ ಮತ್ತು ದೃಢವಾಗಿರುತ್ತವೆ. ಇದಕ್ಕಾಗಿ ಸಾಮಾನ್ಯವಾಗಿ ಬಳಸುವ ವಸ್ತುಗಳೆಂದರೆ ಕೆವ್ಲರ್, ಲಾಕ್ಸಾನ್ ಮತ್ತು ಅದೇ ರೀತಿಯ ಪಾಲಿಮರ್ ಎಳೆಗಳು. ಉಕ್ಕು ಅಥವಾ ಟೈಟಾನಿಯಂ ಕೂಡ ಇಲ್ಲಿ ಉಪಯೋಗವಾಗುತ್ತದೆ. ಅಮೆರಿಕದಲ್ಲಿ ಇದರ ತಯಾರಿಕೆಗೆ ನಿರ್ದುಷ್ಟ ಮಾನದಂಡಗಳಿವೆ. ಅದರಂತೆ ಮಾದರಿ 2ಮಟ್ಟದ ಗುಂಡು ನಿರೋಧಕ ಕವಚವು ದುಂಡು ಮೂತಿಯ ಪೂರ್ಣ ಲೋಹದಿಂದ ತಯಾರಾದ ಗುಂಡು 358ಮೀಟರ್/ಸೆಕೆಂಡ್ (1175ಅಡಿ/ಸೆ)ವೇಗದಲ್ಲಿ ಹೊಡೆದಾಗಲೂ ತಾಳಿಕೊಳ್ಳುವ ದೃಢತೆ ಹೊಂದಿರುತ್ತದೆ. ಅದೇ ರೀತಿ ಮಾದರಿ-3ಮಟ್ಟದ ಕವಚವು 427ಮೀಟರ್/ಸೆಕೆಂಡ್ (1400 ಅಡಿ/ಸೆ)ವೇಗವನ್ನು ತಡೆದುಕೊಳ್ಳಬಲ್ಲುದಾಗಿದೆ.

ಕೆವ್ಲರ್ ಎಂಬ ಮಿಶ್ರ ಪಾಲಿಮರ್ ಎಳೆಗಳಿಂದ ತಯಾರಾಗುವ ಗುಂಡು ನಿರೋಧಕ ವಸ್ತು ತೂಕದಲ್ಲಿ ಉಕ್ಕಿಗಿಂತ ಐದು ಪಟ್ಟು ಹೆಚ್ಚಾಗಿದ್ದು, ವ್ಯಾಪಕವಾಗಿ ಬಳಕೆಯಾಗುತ್ತಿದೆ. ಇದರಲ್ಲಿ ಉದ್ದನೆಯ ಮಾಲಿಕ್ಯುಲರ್ ಸರಪಳಿಗಳಿಂದ ಕೂಡಿದ ಪಾಲಿಮರ್ ವಸ್ತುವಿರುತ್ತದೆ. ಇದನ್ನು ‘ಪಾಲಿ ಪ್ಯಾರಫಿನಲಿನ್ ಟೆರೆಫ್ತಾಲಮೈಟ್’ಎಂದು ಕರೆಯುತ್ತಾರೆ. ಇದರ ಎಳೆಗಳು ಬಿಗಿಯಾಗಿ ಹೆಣೆಯಲ್ಪಟ್ಟಿದ್ದು, ಅವುಗಳ ಗಟ್ಟಿತನದಿಂದಾಗಿ ಗುಂಡು ನಿರೋಧಕ ಶಕ್ತಿ ಬರುತ್ತದೆ. ಹರಿತವಾದ ವಸ್ತುಗಳ ಹೊಡೆತವನ್ನೂ ಸಹ ಇದು ತಡೆದುಕೊಳ್ಳಬಲ್ಲುದು. ಹೀಗೆ ಹೊಡೆತದ ತೀವ್ರತೆಯನ್ನು ತಡೆದು ದೇಹಕ್ಕೆ ತೊಂದರೆಯಾಗುವುದನ್ನು ಈ ಪದಾರ್ಥಗಳು ತಗ್ಗಿಸುತ್ತವೆ.

‘ಸ್ಪೆಕ್ಟ್ರಾ ಫೈಬರ್’ಎಂಬ ಇನ್ನೊಂದು ಪಾಲಿಮರ್ ಮಿಶ್ರಿತ ವಸ್ತುವಿನ ಎಳೆಗಳಿಂದ ಸಮಕೋನದಲ್ಲಿ ಅಡ್ಡಡ್ಡವಾಗಿ ಹೆಣೆದಿರುವ ವಸ್ತು ಕೆವ್ಲರ್‌ಗಿಂತ ಹೆಚ್ಚು ದೃಢ ಮತ್ತು ಹಗುರ. ಅಲ್ಲದೆ ಅನೇಕ ಸ್ವಯಂ ಚಾಲಿ ತುಪಾಕಿಗಳಿಂದ ಹಾರಿಸುವ ಗುಂಡುಗಳಿಂದಲೂ ಇದು ರಕ್ಷಣೆ ನೀಡುತ್ತದೆ. ಆದರೆ, ವ್ಯಕ್ತಿಯ ಮೈಮೇಲೆ ಯಾವಾಗಲೂ ಗುಂಡು ನಿರೋಧಕ ಕವಚ ಧರಿಸುವುದು ಸಾಧ್ಯವಿಲ್ಲ. ಹೀಗಾಗಿ, ಪೋಲಿಸ್/ರಕ್ಷಣಾ ದಳದವರು ಗುಂಡು ನಿರೋಧಕ ಹೊದಿಕೆಯನ್ನು ಹೊದಿಸಿದ ವಾಹನಗಳ ಬಳಕೆ ಮಾಡುತ್ತಾರೆ. ಇದರ ಮೇಲ್ಮೈಗೆ ಬಳಸಿರುವ ವಸ್ತು ವಾಹನದ ಮೂರನೇ ಒಂದು ಭಾಗದಷ್ಟು ಮಾತ್ರ ತೂಕವಿರುತ್ತದೆ. ಗುಂಡು ನಿರೋಧಕ ಗಾಜು ಕೂಡ ಗಾಜು ಮತ್ತು ಪಾಲಿ ಕಾರ್ಬೋನೆಟ್ ಹಾಳೆಗಳನ್ನು ಬೆಸೆದಿರುವ ವಸ್ತು.

ಇತ್ತೀಚೆಗೆ ಅಸ್ಟ್ರೇಲಿಯಾದ ಸಿಡ್ನಿಯಲ್ಲಿ ಗುಂಡು ನಿರೋಧಕ ವಸ್ತುವಿನ ತಯಾರಿಕೆಯಲ್ಲಿ ಹೊಸ ಪ್ರಯೋಗವನ್ನು ಮಾಡಿದ್ದಾರೆ. ಅದೆಂದರೆ ಕಾರ್ಬನ್ ನ್ಯಾನೋ ತಂತ್ರಜ್ಞಾನ ಬಳಸಿ ತಯಾರಾದ ಕವಚಗಳು. ಇದುವರೆಗೂ ತಯಾರಾದವು ಗುಂಡಿನ ಹೊಡೆತದ ತೀವ್ರತೆಯನ್ನು ಕಡಿಮೆ ಮಾಡಬಹುದೇ ಹೊರತು ಅದರ ಚೂರುಗಳು ದೇಹಕ್ಕೆ ಗಾಯ ಮಾಡುವುದನ್ನು ತಡೆಯಲು ಶಕ್ಯವಾಗಿಲ್ಲ. ನ್ಯಾನೋ ತಂತ್ರಜ್ಞಾನದ ಬಳಕೆಯಿಂದ ತಯಾರಾದ ಕವಚವು ಅದರ ಮೇಲೆ ಬಿದ್ದ ಗುಂಡು ಪುಟಿದು ಹಿಂದಕ್ಕೆ ಬೀಳುವಂತೆ ಮಾಡುತ್ತದೆ. ಇದು ವ್ಯಾಪಕವಾಗಿ ಬಳಕೆಗೆ ಬಂದಲ್ಲಿ ಅದನ್ನು ಧರಿಸಿರುವ ಪೋಲೀಸರು/ರಕ್ಷಣಾ ದಳದವರು ಯಾವುದೇ ಭಯವಿಲ್ಲದೆ ಶತ್ರುಗಳನ್ನು ಎದುರಿಸಬಲ್ಲವರಾಗುತ್ತಾರೆ. ಈ ಬಗೆಗೆ ಇನ್ನಷ್ಟು ಸಂಶೋಧನೆಗಳು ನಡೆಯುತ್ತಲಿವೆ. ಕಾರ್ಬನ್ ನ್ಯಾನೋ ಕೊಳವೆಗಳ ಗರಿಷ್ಠ ಸ್ಥಿತಿಸ್ಥಾಪಕತ್ವ ಅಂದರೆ ಎಲ್ಯಾಸ್ಟಿಸಿಟಿಯನ್ನು ಅಳತೆ ಮಾಡುವಲ್ಲಿ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಇದರ ಉದ್ದೇಶ ಅದರಿಂದ ತಯಾರಾದ ಗುಂಡು ನಿರೋಧಕ ಕವಚ ತನ್ನ ಮೇಲೆ ಅತಿ ವೇಗದಲ್ಲಿ ಬೀಳುವ ಗುಂಡುಗಳನ್ನು ಹಿಂದಕ್ಕೆ ಪುಟಿಯುವಂತೆ ಮಾಡುವಲ್ಲಿ ಅತಿ ಶಕ್ತವಾಗಿರಬೇಕೆಂಬುದಾಗಿದೆ. ಇದಕ್ಕೆ ಬಳಸುತ್ತಿರುವ ಅಳತೆಗೋಲು ಒಂದು ನ್ಯಾನೋ ಮೀಟರ್‌ನ ನ್ಯಾನೋ ಕೊಳವೆ (ಒಂದು ಮೀಟರಿನ ಒಂದು ಬಿಲಿಯನ್ ಭಾಗದಷ್ಟು). ಇದಕ್ಕೆ ಬಳಕೆಯಾಗುತ್ತಿರುವ ವಸ್ತು ಒಂದು ಅಣುವಿನಷ್ಟು ದಪ್ಪವಿರುವ ಗ್ರಾಫೈಟ್ ಹಾಳೆ. ಇದನ್ನು ಕೊಳವೆಯನ್ನಾಗಿ ಮಾರ್ಪಡಿಸಿ, ಅದನ್ನು ‘ಆರ್ಬಿಟಲ್ ಹೈಬ್ರಿಡೈಜೇಶನ್’ಎಂಬ ಸ್ಥಿರ ಬಾಂಡಿಂಗ್‌ನಿಂದ ಹಿಡಿದಿಟ್ಟು, ದೃಢವಾದ ಹಗ್ಗವಾಗಿ ಹೊಸೆಯಲಾಗುವುದು.

ಇಂತಹ ಕ್ರಾಂತಿಕಾರಿ ವೈಜ್ಞಾನಿಕ ಆವಿಷ್ಕಾರದ ಬಳಕೆಯಿಂದ ತಯಾರಾದ ಗುಂಡು ನಿರೋಧಕ ಕವಚವನ್ನು ಧರಿಸುವುದರಿಂದ ನಮ್ಮ ರಕ್ಷಣಾ ದಳದವರ ಸ್ಥೈರ್ಯ ಇನ್ನಷ್ಟು ಬಲಗೊಂಡು, ತಮ್ಮ ಜೀವ ರಕ್ಷಣೆಯ ಜೊತೆಗೆ ವಿಚ್ಛಿದ್ರಕಾರಿ ಶಕ್ತಿಗಳನ್ನು ದಮನ ಮಾಡುವುದರಲ್ಲಿ ಅವರ ಸಬಲರಾಗುತ್ತಾರೆ.