ಗುಂಡ್ಲುಪೇಟೆ ತಾಲ್ಲೂಕು ಕರ್ನಾಟಕ ರಾಜ್ಯದ ದಕ್ಷಿಣ ತುತ್ತತುದಿಯಲ್ಲಿರುವ ಗಡಿ ತಾಲ್ಲೂಕು. ಚಾಮರಾಜನಗರ ಜಿಲ್ಲೆಯಿಂದ ೪೦ ಕಿ.ಮೀ. ದೂರದಲ್ಲಿದೆ. ಇದರ ವಿಸ್ತೀರ್ಣ – ೧೪೦೬.೨. ಚ.ಕೀ.ಗಳು. ಒಟ್ಟು ಜನಸಂಖ್ಯೆ – ೨,೧೩.೦೮೨ ಸಾಕ್ಷರತೆಯ ಪ್ರಮಾಣ ಸರಾಸರಿ – ೪೪.೮೮% ನಾಲ್ಕು ಹೋಬಳಿಗಳು ಇವೆ. ತಾಲ್ಲೂಕಿನಿಂದ ಪಶ್ಚಿಮಕ್ಕೆ ಕೇರಳ ರಾಜ್ಯ, ದಕ್ಷಿಣಕ್ಕೆ ತಮಿಳುನಾಡು, ಪೂರ್ವಕ್ಕೆ ಚಾಮರಾಜನಗರ ತಾಲ್ಲೂಕು, ಉತ್ತರಕ್ಕೆ ನಂಜನಗೂಡು ತಾಲ್ಲೂಕು ಹಾಗೂ ಹೆಗ್ಗಡದೇವನ ಕೋಟೆ ತಾಲ್ಲೂಕುಗಳಿವೆ.

ಗುಂಡ್ಲುಪೇಟೆ ಮುಖ್ಯ ಕೇಂದ್ರವಾಗಿದ್ದು, ಬೆಂಗಳೂರು – ನೀಲಗಿರಿ ರಸ್ತೆಯ ಮಧ್ಯದಲ್ಲಿದೆ. ಈ ತಾಲ್ಲೂಕು ಹೆಚ್ಚಾಗಿ ಮೈದಾನ ಪ್ರದೇಶವಿದೆ. ದಕ್ಷಿಣದಲ್ಲಿ ಬಂಡೀಪುರ ಅರಣ್ಯವಿದ್ದು, ಇಲ್ಲಿ ಹರಿಯುವ ಮೇಯರ್ ನದಿ ಗಡಿಯಾಗಿದೆ. ಪಶ್ಚಿಮ ಮತ್ತು ದಕ್ಷಿಣದಲ್ಲಿ ಹಬ್ಬಿರುವ ಬೆಟ್ಟಗಳು ನೀಲಗಿರಿ ಬೆಟ್ಟಗಳ ಸಾಲಿಗೆ ಸೇರಿಕೊಳ್ಳುತ್ತವೆ. ತೆರಕಣಾಂಬಿಯ ಹತ್ತಿರ ಅಡ್ಡಾಣಿ ಬೆಟ್ಟದ ಸಾಲು, ಹುಲಗನ ಮೊರಡಿ, ಸ್ಕಾಂದಗಿರಿ, (ಪಾರ್ವತಿಬೆಟ್ಟ) ಗೋಪಾಲಸ್ವಾಮಿ ಬೆಟ್ಟಗಳು ಕಂಡುಬರುತ್ತವೆ. ಗೋಪಾಲಸ್ವಾಮಿ ಬೆಟ್ಟದಲ್ಲಿ ಕೌಂಡಿನ್ಯ ನದಿ ಹುಟ್ಟಿ ನಂಜನಗೂಡಿನ ಹತ್ತಿರ ಕಪಿಲನದಿಗೆ ಸೇರುತ್ತದೆ.

ಭೂಪ್ರದೇಶವು ಕಪ್ಪು ಮಣ್ಣು, ಕೆಂಪು ಮಣ್ಣು, ಬೂದು ಮಣ್ಣು, ಸುಣ್ಣಕಲ್ಲು ಮಿಶ್ರಿತ ಮಣ್ಣು, ವ್ಯವಸಾಯಕ್ಕೆ ಅನುಕೂಲ. ಸುಣ್ಣದ ಕಲ್ಲು, ಅಮೃತಶಿಲೆ, ಮ್ಯಾಗ್ನಾಸೈಟು, ಕಬ್ಬಿಣದ ಅದಿರು, ನೀಲಮಣಿ, ಕಣಶಿಲೆ, ಪಟ್ಟಿಶಿಲೆ, ಖನಿಜಗಳು ದೊರಕುತ್ತವೆ.

ಜೋಳ, ರಾಗಿ, ಹುರುಳಿ, ಹಲಸಂದೆ, ನೆಲಗಡಲೆ, ಮಳೆ ಆಶ್ರಯದಲ್ಲಿ ಬೆಳೆಯುತ್ತಾರೆ. ಕಬ್ಬು, ಅರಿಶಿಣ, ತೆಂಗು, ಈರುಳ್ಳಿ, ವಾಣಿಜ್ಯ ಬೆಳೆಗಳು.

ಈ ತಾಲ್ಲೂಕಿನಲ್ಲಿ ಇತಿಹಾಸ, ಸಾಂಸ್ಕೃತಿಕ, ಸಾಹಿತ್ಯಗಳ ಮೇಲೆ ಬೆಳಕು ಚೆಲ್ಲುವ ೨೨೪ ಶಾಸನಗಳಿವೆ. ವೀರಗಲ್ಲು ಮತ್ತು ಮಾಸ್ತಿಕಲ್ಲುಗಳಿವೆ. ವೀರಗಾಸೆ, ಕಂಸಾಳೆ, ವೀರಮಕ್ಕಳ ಕುಣಿತ, ಯಕ್ಷಗಾನ, ಮುಂತಾದ ವೈವಿಧ್ಯಮಯವಾದ ಜಾನಪದ ಕಲೆಗಳಿವೆ.

 

ಶ್ರೀ ವಿಜಯ ನಾರಾಯಣ ಸ್ವಾಮಿ ದೇವಸ್ಥಾನ, ಗುಂಡ್ಲುಪೇಟೆ

ಚಾಮರಾಜನಗರದಿಂದ : ೪೦ ಕಿ.ಮೀ.  

ಗುಂಡ್ಲುಪೇಟೆಗೆ ೧೦ನೇ ಶತಮಾನದಲ್ಲಿ ಕುಡುಗೂರು, ೧೩ನೇ ಶತಮಾನದಲ್ಲಿ ಪ್ರಸನ್ನ ವಿಜಯಪುರ, ೧೭ನೇ ಶತಮಾನದಲ್ಲಿ “ದೇವನಗಿರಿ ಎಂಬ ಹೆಸರಿದ್ದು, ಈಗ ಗುಂಡ್ಲುಪೇಟೆ ಎಂಬ ಹೆಸರಿದೆ.

ವಿಜಯ ನಾರಾಯಣ ಸ್ವಾಮಿ ದೇವಸ್ಥಾನ ಪಟ್ಟಣದ ಮಧ್ಯದಲ್ಲಿದೆ. ಹೊಯ್ಸಳರ ದೊರೆ ವಿಷ್ಣುವರ್ಧನ ಗರ್ಭ ಗುಡಿಯಲ್ಲಿರುವ ಆರು ಅಡಿ ಎತ್ತರದ ವಿಜಯ ನಾರಾಯಣ ಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪಿಸಿದ ಎಂಬ ನಂಬಿಕೆ ಇದೆ. ಕ್ರಿ.ಶ. ೧೫೪೩ರಲ್ಲಿ ಆದಿತ್ಯರವರ ಮಕ್ಕಳು ರುಪ್ಪರಸವೊಡೆಯರು ಈ ದೇವಸ್ಥಾನದ ಫಾಳಿ ಮಂಟಪ ಕಲ್ಪಿಸಿ, ನೈವೇದ್ಯಕ್ಕಾಗಿ ದತ್ತಿ ಬಿಟ್ಟಿದ್ದಾರೆ. ತಲಕಾಡಿನ ವೈದ್ಯೇಶ್ವರ ದೇವಸ್ಥಾನವನ್ನು ಹೋಲುತ್ತದೆ. ಗರ್ಭಗುಡಿಯಲ್ಲಿರುವ ವಿಜಯ ನಾರಾಯಣ ಸ್ವಾಮಿಯ ವಿಗ್ರಹವಿದ್ದು, ಬಲಗೈ ಅಭಯಮುದ್ರೆಯಲ್ಲಿದ್ದು, ತಾವರೆಯನ್ನು ಹಿಡಿದಿದೆ. ಈ ವಿಗ್ರಹವು ಸರ್ಪಾಕಾರದ ತೋರಣದಲ್ಲಿದ್ದು, ಬುದ್ಧಾವತಾರವು ಸೇರಿದಂತೆ, ದಶಾವತಾರದ ವರ್ಣನೆ ಇದೆ. ಕಲ್ಲಿನ ಕಂಬಗಳ ಮೇಲೆ ಸಿಂಹ, ಶರಭಗಳ ಚಿತ್ರವಿದೆ.

 

ಲಕ್ಷ್ಮೀ ವರದ ರಾಜಸ್ವಾಮಿ ದೇವಸ್ಥಾನ, ತೆರಕಣಾಂಬಿ

ಚಾಮರಾಜನಗರದಿಂದ ೨೮ ಕಿ.ಮೀ.
ಗುಂಡ್ಲುಪೇಟೆಯಿಂದ ೧೨ ಕಿ.ಮೀ.

ತೆರಕಣಾಂಬಿಯು ಹಿಂದೆ ಅನೇಕ ರಾಜ ಮನೆತನಗಳ ರಾಜಧಾನಿಯಗಿ ಮೆರೆದ ಪಟ್ಟಣ. ಅರಮನೆ, ಕೋಟೆಗಳಿಂದ ಕೂಡಿತ್ತು. ಹೊಯ್ಸಳರು, ವಿಜಯನಗರದ ಅರಸರು, ಉಮ್ಮತ್ತೂರು ಅರಸರು, ಮೈಸೂರು ಒಡೆಯರು ಆಳಿದ್ದಾರೆ. ಕ್ರಿ. ಶ. ೧೭೭೪ರ ಮರಾಠರ ದಾಳಿಯಿಂದ ಅರಮನೆ, ಕೋಟಿ, ದೇವಾಲಯಗಳು ನಾಶವಾಗಿವೆ.

ಲಕ್ಷ್ಮೀ ವರದರಾಜ ಸ್ವಾಮಿ ದೇವಾಲಯವನ್ನು ಕ್ರಿ.ಶ. ೧೩೦೩ ರಲ್ಲಿ ಪೆರುಮಾಳೆ ದಂಡನಾಥನ ಸುಪುತ್ರ ರಾದ ಮಾಧವ ಡಣಾಯಕ ಮತ್ತು ಕೇತಯ್ಯ ಡಣಾಯಕರು ಕಟ್ಟಿಸಿದ್ದಾರೆ. ಹೊಯ್ಸಳರ ಕಾಲಕ್ಕೆ ಸೇರಿದೆ. ವರದರಾಜ ಸ್ವಾಮಿಯ ದಕ್ಷಿಣಕ್ಕೆ ಕುಳಿತಿರುವ ಭಂಗಿಯಲ್ಲಿ ಒಂದು ಮೀಟರ್ ಎತ್ತರದ ಲಕ್ಷ್ಮೀದೇವಿ ಗುಡಿಯಿದೆ. ಒಳ ಪ್ರದಕ್ಷಣದಲ್ಲಿ ಅನೇಕ ಕಂಬಗಳಿಂದ ಕೂಡಿದ ನವರಂಗ, ಕಲಾಸಾಕಾರದ ಅಲಂಕೃತಗೊಂಡ ಮಹಾದ್ವಾರವಿದೆ. ೨ನೇ ಕೃಷ್ಣರಾಜ ಒಡೆಯರ ಕಾಲದಲ್ಲಿ ರಚನೆಯಾದ ನವರಂಗಿವಿದೆ. ನವರಂಗದ ಳಗಡೆ ಶಿವಸ್ವರೂಪಿಯಾದ ಶಿಲ್ಪಗಳಿವೆ.

 

ಬಂಡೀಪುರ ರಾಷ್ಟ್ರೀಯ ಉದ್ಯಾನ

ಚಾಮರಾಜನಗರದಿಂದ ೫೮ ಕಿ.ಮೀ.
ಗುಂಡ್ಲುಪೇಟೆಯಿಂದ ೧೮ ಕಿ.ಮೀ.

ಬೆಂಗಳೂರು – ಉದಕ ಮಂಡಲದ ರಾಜ್ಯ ಹೆದ್ದಾರಿಯಲ್ಲಿ ಈ ಅರಣ್ಯವಿದೆ. ಗುಂಡ್ಲುಪೇಟೆಗೆ ೧೮ ಕಿ.ಮೀ. ದೂರದಲ್ಲಿದೆ. ೧೯೪೧ರಲ್ಲಿ ಮೈಸೂರು ರಾಜ್ಯದಲ್ಲಿ ಸ್ಥಾಪಿತವಾದ ವೇಣುಗೋಪಾಲ ರಾಷ್ಟ್ರೀಯ ಉದ್ಯಾನದ ವಿಸ್ತೀರ್ಣ ೮೦೩ ಚ.ಕಿಮೀ. ಗಳು ತಮಿಳುನಾಡಿನ ಮಧುಮಲೈ, ಕೇರಳದ ವೈನಾಡು ಬಂಡೀಪುರ ಅರಣ್ಯಕ್ಕೆ ಹೊಂದಿಕೊಂಡಿವೆ. ಮೇಯರ್ ನದಿ ಗಡಿರೇಖೆಯಾಗಿ ಹರಿಯುತ್ತದೆ. ಭಾರತ ಸರ್ಕಾರವು ಗುರುತಿಸಿರುವ ಹನ್ನೊಂದು ರಾಷ್ಟ್ರೀಯ ಉದ್ಯಾನ ಗಳಲ್ಲಿ ಬಂಡೀಪುರ ಅರಣ್ಯವು ಒಂದಾಗಿದೆ. ಹುಲಿ ಸಂತತಿಯ ರಕ್ಷಣೆ ಗಾಗಿ ಭಾರತ ಸರ್ಕಾರ ೧೯೭೩ರಲ್ಲಿ “ಹುಲಿ ಸಂರಕ್ಷಣ ಯೋಜನೆ” (ಟೈಗರ್ ಪ್ರಾಜೆಕ್ಟ್) ಜಾರಿಗೆ ತಂದಿದೆ. ಆನೆ, ಚಿರತೆ, ಹುಲಿ, ಕಾಟಿ, ಕಡವೆ, ಜಿಂಕೆ, ಕಾಡು ಹಂದಿ, ಕಾಡುನಾಯಿ, ಪ್ರಾಣಿಗಳು ಕಂಡುಬರುತ್ತವೆ. ನವಿಲು, ಕಾಡುಕೋಳಿ, ಕಾಜಾಣ, ಕೆಂಬೂತ, ಮರಕುಟುಕ, ನೊಣ, ಹಿಡುಕ, ಪಕ್ಷಿಗಳಿವೆ. ತೇಗ, ಬೀಟೆ, ಹೊನ್ನ, ನಂದಿ, ಮತ್ತಿ, ಬಿದಿರು, ಬೆಲೆಬಾಳುವ ಮರಗಳಿವೆ. ಅರಣ್ಯದೊಳಗೆ ಅನೇಕ ಕೆರೆಗಳಿದ್ದು, ಅಲ್ಲಲ್ಲಿ ಉಪ್ಪುನೆಲೆಗಳನ್ನು ನಿರ್ಮಿಸಿದ್ದಾರೆ. ಈ ಸ್ಥಳಗಳಲ್ಲಿ ವೀಕ್ಷಣ ಗೋಪುರಗಳನ್ನು ನಿರ್ಮಿಸಿ, ಪ್ರಾಣಿಗಳ ಚಲನವಲನಗಳನ್ನು ಗಮನಿಸಬಹುದಾಗಿದೆ. ವಸತಿ ಸೌಕರ‍್ಯವಿದೆ. ಪ್ರವಾಸಿಗರಿಗೆ ಏಪ್ರಿಲ್‌ನಿಂದ ಜೂನ್, ತಿಂಗಳು ಪ್ರಾಶಸ್ತ್ಯವಾದ ಕಾಲವಾಗಿದೆ.

 

ಗೋಪಾಲಸ್ವಾಮಿ ಬೆಟ್ಟ
ಚಾಮರಾಜನಗರದಿಂದ ೬೦ ಕಿ.ಮೀ.
ಗುಂಡ್ಲುಪೇಟೆಯಿಂದ ೨೦ ಕಿ.ಮೀ.

ಈ ಬೆಟ್ಟವು ವರ್ಷದ ಬಹುಕಾಲ ಹಿಮದಿಂದ ಕೂಡಿರುತ್ತದೆ. ಆ ಕಾರಣ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂಬ ಹೆಸರಿದೆ. ಬೆಟ್ಟಗುಡ್ಡಗಳನ್ನು ಚುಂಬಿಸುವಂತೆ, ಕಂಡುಬರುವ ಮುಗಿಲುಗಳು, ಎತ್ತರವಾದ ಕಾಡುಗಳು, ಪ್ರವಾಸಿಗರ ಮನಸ್ಸನ್ನು ಸೂರೆಗೊಳ್ಳುತ್ತದೆ. ಸಮುದ್ರಮಟ್ಟದಿಂದ ೫೭೭೦ ಅಡಿ ಎತ್ತರವಿದೆ. ಬೇಸಿಗೆಯಲ್ಲಿ ವಾತಾವರಣ ತಂಪಾಗಿರುತ್ತದೆ. ಈ ಬೆಟ್ಟಕ್ಕೆ ಗೋವರ್ಧನಗಿರಿ, ಕಮಲಾಚಲ, ಎಂಬ ಹೆಸರಿದೆ. ತೇಗ, ಬೀಟೆ, ಹೊನ್ನೆ, ಮತ್ತಿಮರಗಳು, ಸುರಗಿಸುರ ಹೊನ್ನೆಸಂಪಿಗೆ ಹೂವಿನ ಮರಗಳು,  ಅನೇಕ ಗಿಡ ಮೂಲಿಕೆಗಳು ಕಂಡು ಬರುತ್ತಿವೆ. ಇಲ್ಲಿ ೭೭ ಕೊಳಗಳಿವೆ. ಎಂಬ ಪ್ರತೀತಿ ಇದೆ.

ಪೌರಾಣಿಕ ಹಿನ್ನಲೆ : ಅಗಸ್ತ್ಯರು ವಿಂಧ್ಯಪರ್ವತದ ಬೆಳವಣಿಗೆಯನ್ನು ನಿಲ್ಲಿಸಿ, ದಕ್ಷಿಣಕ್ಕೆ ಬಂದು, ಈ ಸ್ಥಳದಲ್ಲಿ ತಪಸ್ಸು ಮಾಡಿದಾಗ, ಗೋಪಾಲಸ್ವಾಮಿ ಪ್ರತ್ಯಕ್ಷನಾಗಿ, ಅವರ ಪ್ರಾರ್ಥನೆಯಂತೆ, ರುಕ್ಮಿಣಿ, ಸತ್ಯಭಾಮೆಯೊಡನೆ ಇಲ್ಲಿ ನೆಲೆಸಿದ್ದಾನೆ.

ಐತಿಹಾಸಿಕ ಹಿನ್ನಲೆ : ಕ್ರಿ.ಶ. ೧೩೧೫ರಲ್ಲಿ ತೆರಕಣಾಂಬಿಯ ರಾಜ ಶ್ರೀ ಪೆರುಮಾಳ ಡಣಾಯಕನ ಮಗ ಶ್ರೀ ಮಾಧವ ಡಣಾಯಕ ಗೋಪಾಲಸ್ವಾಮಿ ವಿಗ್ರಹ ಪ್ರತಿಷ್ಠಾಪಿಸಿದ ಎಂಬುದು ಚಾರಿತ್ರಿಕ ದಾಖಲೆಯಾಗಿದೆ.

ಗೋಪಾಲಸ್ವಾಮಿ ಬೆಟ್ಟದ ದೇವಾಲಯ, ಹೊಯ್ಸಳ ಮತ್ತು ವಿಜಯನಗರ ಶಿಲ್ಪಿ ಕಲೆಯನ್ನು ಮೈಗೂಡಿಸಿಕೊಂಡಿದೆ. ಗರ್ಭಗುಡಿ, ನವರಂಗ, ಸುಕನಾಸಿಗಳಿಂದ ಕೂಡಿದೆ. ಗೋಪಾಲಸ್ವಾಮಿ ವಿಗ್ರಹ ೧೧/೨ ಮೀಟರ್ ಎತ್ತರವಿದ್ದು, ಪ್ರಭಾವಳಿಯು ಗಿಡಗಳಿಂದ ಕೂಡಿದೆ. ಮೂರ್ತಿಯ ಸುತ್ತ ರುಕ್ಮಿಣಿ, ಸತ್ಯಭಾಮ, ಗೋಪಾಲಕರು, ಕಾಮಧೇನು ವಿಗ್ರಹಗಳಿವೆ.

 

ಹುಲಿಗನ ಮೊರಡಿ ವೆಂಕಟರಮಣ ಸ್ವಾಮಿ ದೇವಸ್ಥಾನ

ಚಾಮರಾಜನಗರದಿಂದ ೩೫ ಕಿ.ಮೀ.
ಗುಂಡ್ಲುಪೇಟೆಯಿಂದ ೧೬ ಕಿ.ಮೀ.

ಈ ದೇವಸ್ಥಾನವನ್ನು ಕ್ರಿ.ಶ. ೧೪೯೮ರಲ್ಲಿ ತೆರಕಣಾಂಬಿಯ ದಾಸಕೇಶವ ಶೆಟ್ಟಿ ಕಟ್ಟಿಸಿದನು. ಕ್ರಿ.ಶ. ೧೬೭೮ರಲ್ಲಿ ಚಿಕ್ಕದೇವರಾಜರ ಹೆಂಡತಿ ದೊಡ್ಡಮುದ್ದಮ್ಮನವರು ಬೆಟ್ಟದ ಮೇಲೆ ಕೋಟೆ ಕಟ್ಟಿಸಿದ್ದಾರೆ. ಈಗ ದೇವಸ್ಥಾನದ ಮುಂದೆ ರಾಜಗೋಪುರ ನಿರ್ಮಾಣವಾಗಿದೆ.

ಈ ಬೆಟ್ಟಕ್ಕೆ ಶೇಷಾದ್ರಿ, ಕನಕಾದ್ರಿ, ವ್ಯಾಘ್ರಾದಿ ಮತ್ತು ವೆಂಕಟಾದ್ರಿ ಎಂಬ ಹೆಸರುಗಳಿವೆ. ಮಾಂಡ್ಯವ ಋಷಿಯು ತಪಸ್ಸು ಮಾಡಿದಾಗ, ವೆಂಕಟೇಶ್ವರ ಪ್ರತ್ಯಕ್ಷವಾಗಿ, ಅವರ ಪ್ರಾರ್ಥನೆಯಂತೆ, ಶ್ರೀದೇವಿ, ಭೂದೇವಿ ಮತ್ತು ನೀಳಾದೇವಿಯವರೊಡನೆ ಇಲ್ಲಿ ನೆಲೆನಿಂತ ಎಂಬ ಪೌರಾಣಿಕ ಕಥೆ ಇದೆ. ವಿಜಯನಗರದ ಅರಸರು ಕಟ್ಟಿಸಿದ ಶ್ರೀನಿವಾಸ ದೇವಾಲಯದಲ್ಲಿ ಮೂರು ಗರ್ಭಗುಡಿಗಳಿವೆ. ಶ್ರೀನಿವಾಸ ದೇವರ ಗುಡಿ, ಪದ್ಮಾವತಿಗುಡಿ, ಬಲಕ್ಕೆ ಕಂಚಿನ ಉತ್ಸವ ಮೂರ್ತಿ ಇದೆ. ಗರ್ಭಗುಡಿಗೆ ಶಿಖರ ಮತ್ತು ಸುಕಾಸನವಿದೆ. ನವರಂಗದಲ್ಲಿ ಕಂಡುಬರುವ ಸ್ತಂಭಗಳು ವಿಜಯನಗರ ಶೈಲಿಯನ್ನ ಹೋಲುತ್ತವೆ.

 

ಪಾರ್ವತಿ ಬೆಟ್ಟ (ಸ್ಕಂದಗಿರಿ)

ಚಾಮರಾಜನಗರದಿಂದ ೩೮ ಕಿ.ಮೀ.
ಗುಂಡ್ಲುಪೇಟೆಯಿಂದ ೧೦ ಕಿ.ಮೀ. 

ಗುಂಡ್ಲುಪೇಟೆಯಿಂದ ೧೦ ಕಿ.ಮೀ. ದೂರದಲ್ಲಿದೆ. ಗುಂಡ್ಲು ಪೇಟೆಯಿಂದ ತೆರಕಣಾಂಬಿಗೆ ಹೋಗುವ ರಸ್ತೆಯಲ್ಲಿ ಶಿಂಡಿನ ಪುರದ ಹತ್ತಿರ ದಕ್ಷಿಣಕ್ಕೆ ೩ ಕಿ.ಮೀ. ಪಯಣಸಿದರೆ ಈ ಬೆಟ್ಟ ಸಿಗುತ್ತದೆ. ಪೌರಾಣಿಕ ಕಥೆ ಈ ರೀತಿ ಇದೆ. ಷಣ್ಮುಖ ಸ್ವಾಮಿಯು ತಾರಕಾಸುರ ನನ್ನು ಸಂಹರಿಸಿ, ಬಳಿಕ ಶಿವನನ್ನು ಕುರಿತು ತಪಸ್ಸು ಮಾಡಿದ ಸ್ಥಳವಾದ್ದರಿಂದ ಇದಕ್ಕೆ ‘ಸ್ಕಂದಗಿರಿ’ ಎಂಬ ಹೆಸರು ಬಂದಿದೆ. ಸೋಮೇಶ್ವರ ಪ್ರತ್ಯಕ್ಷನಾಗಿ, ಕುಮಾರಸ್ವಾಮಿಯ ಕೋರಿಕೆಯಂತೆ ಪಾರ್ವತಿ ಸಹಿತ ಈ ಬೆಟ್ಟದಲ್ಲಿ ನೆಲೆಸಿದ್ದಾನೆ.

ಕಂದಗಾಲ ಅಗ್ರಹಾರವು ಹೊಯ್ಸಳರ ಕಾಲದಲ್ಲಿ ಅಂದರೆ ಕ್ರಿ.ಶ. ೧೨ನೇ ಶತಮಾನದಲ್ಲಿ ಬೆಳಕಿಗೆ ಬಂದಿತು. ಪಕ್ಕದಲ್ಲಿ ಪಾರ್ವತಿ ದೇವಿಯ ಗುಡಿಯಿದೆ. ಪ್ರತಿವರ್ಷ ವೈಶಾಕಮಾಸದ ಪೂರ್ಣಿಮೆ ದಿನ ಜಾತ್ರೆ, ರಥೋತ್ಸವ ನಡೆಯುತ್ತದೆ.

 

ತ್ರಿಯಂಬಕೇಶ್ವರ ದೇವಸ್ಥಾನ

ಚಾಮರಾಜನಗರದಿಂದ ೩೪ ಕಿ.ಮೀ.
ಗುಂಡ್ಲುಪೇಟೆಯಿಂದ ೧೦ ಕಿ.ಮೀ.

ತೆರಕಣಾಂಬಿಯಿಂದ ೬ ಕಿ.ಮೀ. ದೂರದಲ್ಲಿದೆ. ಹದಿನಾಡು (ಮೈಸೂರು) ಕೇರಳ ಮತ್ತು ತಮಿಳುನಾಡು ೩ ಗಡಿಕಲ್ಲುಗಳು ಸೇರುವ ಜಾಗದಲ್ಲಿ ಲಂಬಕರ್ಣರಾಯ ಎಂಬುವನು ತ್ರಿಯಂಬಕೇಶ್ವರನ್ನ ಪ್ರತಿಷ್ಠಾಪಿಸಿದನು ಎಂಬ ನಂಬಿಕೆ ಇದೆ.

ದೇವಾಲಯವು ಚಚ್ಚೌಕಾರದಲ್ಲಿ ನಿರ್ಮಿಸಲಾಗಿದೆ. ಪೂರ್ವದ್ವಾರದ ಮುಂದೆ ಭವ್ಯವಾದ ದೀಪಸ್ತಂಭ, ಬಲಿಪೀಠ, ನಂದಿಮಂಟಪಗಳಿವೆ. ದೇವಾಲಯದ ಉತ್ತರದಿಕ್ಕಿಗೆ ಪಾರ್ವತಿಗುಡಿ, ಪಶ್ಚಿಮಕ್ಕೆ ಪಂಚಲಿಂಗೇಶ್ವರ ಗುಡಿಗಳಿವೆ. ನೈರುತ್ಯ ದಿಕ್ಕಿನಲ್ಲಿ ೫೪ ಕಂಬಗಳುಳ್ಳ ಕಲ್ಯಾಣ ಮಂಟಪವಿದೆ. ಆಗ್ನೇಯ ಮೂಲೆಗೆ ಎರಡು ಗರ್ಭ ಗುಡಿಯಿದ್ದು, ಒಂದು ಮಹಿಷಾಸುರ ಮರ್ದಿನಿ, ಮತ್ತೊಂದರಲ್ಲಿ ಸಪ್ತ ಮಾತೃಕೆಗಳ ವಿಗ್ರಹಗಳೀವೆ. ಗರ್ಭಗುಡಿಯ ಮಧ್ಯದಲ್ಲಿ ತ್ರಿಯಂಬಕೇಶ್ವರ ಶಿವಲಿಂಗವಿದೆ. ನವರಂಗವು ದೊಡ್ಡದಾಗಿದ್ದು, ವಿಜಯನಗರದ
ಶೈಲಿಯನ್ನು ಒಳಗೊಂಡಿದೆ.

 

ಚಂದ್ರನಾಥ ಬಸಿದಿ ಕೆಲಸೂರು

ಚಾಮರಾಜನಗರದಿಂದ ೩೪ ಕಿ.ಮೀ.
ಗುಂಡ್ಲುಪೇಟೆಯಿಂದ ೧೦ ಕಿ.ಮೀ.

ಕೆಲಸೂರು ತೆರಕಣಾಂಬಿಯಿಂದ ೬ ಕಿ.ಮೀ. ದೂರದಲ್ಲಿದೆ. ೫.೬ನೇ ಶತಮಾನಕ್ಕೆ  ಸೇರಿರುವ ಚಂದ್ರನಾಥ ಬಸಿದಿ ಇದೆ. ೮ನೇ ತೀರ್ಥಂಕರರಾದ ಚಂದ್ರನಾಥರ ವಿಗ್ರಹವು ಐದು ಅಡಿ ಎತ್ತರವಿದ್ದು, ಲೆಪ್ಪ ಮತ್ತು ಮಣ್ಣಿನಿಂದ ಮಾಡಿದ್ದಾರೆ. ಸುಕನಾಸಿಯಲ್ಲಿ ಜ್ಞಾಲಮಾಲಿನಿ, ಮತ್ತು ವಿಜಯ, ಯಕ್ಷರ ಐದು ಅಡಿ ಮೂರ್ತಿಗಳಿವೆ. ದೇವಾಲಯದ ಸುಕನಾಸಿಯಲ್ಲಿ ಬಣ್ಣ ಬಣ್ಣದ ಗೋಡೆ, ವಿನ್ಯಾಸವಿದ್ದು, ಸುಕನಾಸಿಯ ಬಾಗಿಲಿಗೆ ಅನೇಕ ಸೂಕ್ಷ್ಮ ಕೆತ್ತನೆಗಳಿವೆ. ಅಡಿಪಾಯದ ಕಲ್ಲುಗಳ ಮೇಲೆ ತಮಿಳು ಲಿಪಿಯ ಬರಹ, ಕಲ್ಪವಲ್ಲಿಯ ಚಿತ್ರಗಳು, ಎಲೆಯ ಆಕಾರದ ಚಿತ್ರಗಳು ಕಂಡುಬರುತ್ತವೆ. ಚೋಳರು, ಮೈಸೂರಿನ ಒಡೆಯರು ಜೀರ್ಣೋದ್ಧಾರ ಮಾಡಿಸಿದ್ದಾರೆ. ಇದಕ್ಕೆ ‘ಸರ್ವ ಲೋಕಾಶ್ರಯ ಜಿನಾಲಯ’ ಎಂಬ ಹೆಸರು ಇದೆ.