ಭಾಷೆಗಳು ಸಾವಿರಾರು. ಒಂದೊಂದೂ ಇನ್ನೊಂದರಿಂದ ಬೇರೆಯಾಗಿದೆ ಎಂದು ತೋರುವ ಭಾಷೆಗಳನ್ನು ಗೊತ್ತಾದ ಕ್ರಮದಲ್ಲಿ ಗುಂಪುಗುಂಪಾಗಿ ಅಳವಡಿಸುವ ಯತ್ನವನ್ನು ಮಾಡುತ್ತ ಬಂದಿದ್ದಾರೆ. ಭಾಷೆಗಳನ್ನು ರಚನೆಯನ್ನು ಆಧರಿಸಿ ವರ್ಗೀಕರಿಸುವ ವಿಧಾನ ಒಂದೆಡೆ ಬೆಳೆದಿದೆ. ಇನ್ನೊಂದೆಡೆ ಅವುಗಳನ್ನು ವಾಂಶಿಕವಾಗಿ ವರ್ಗೀಕರಿಸುವ ವಿಧಾನವಿದೆ. ಜಗತ್ತಿನ ಹಲವು ಭಾಷೆಗಳು ಈ ಎರಡೂ ವಿಧಾನಗಳ ಮಾನದಂಡಗಳನ್ನು ಅನ್ವಯಿಸಿದರೂ ಯಾವ ಗುಂಪಿಗೂ ಸೇರದೇ ಉಳಿಯುವುದು ಕಂಡುಬಂದಿದೆ. ಅಂದರೆ ಈ ಕೆಲವು ಭಾಷೆಗಳು ವಾಂಶಿಕವಾಗಿ ಇಂಥದೇ ಮೂಲದಿಂದ ಕವಲೊಡೆಯುತ್ತ ಕೊನೆಗೆ ಇಂದಿನ ಸ್ಥಿತಿಯನ್ನು ತಲುಪಿದೆ ಎಂದು ತೋರಿಸುವುದು ಸಾಧ್ಯವಾಗು ತ್ತಿಲ್ಲ. ಅಲ್ಲದೆ ರಾಚನಿಕವಾಗಿಯೂ ಯಾವುದೇ ರಾಚನಿಕ ವರ್ಗದ ಲಕ್ಷಣಗಳನ್ನು ಹೋಲುತ್ತಿಲ್ಲ. ಇಂಥ ಭಾಷೆಗಳನ್ನು ಎಡೆ ತಪ್ಪಿದ ಭಾಷೆಗಳು ಅಥವಾ ಭಾಷಾ ದ್ವೀಪಗಳೆಂದು ಕರೆಯಬಹುದು.

ಎಷ್ಟೋ ಭಾಷೆಗಳನ್ನು ನಾವು ಯಾವುದೇ ವಾಂಶಿಕ ಅಥವಾ ರಾಚನಿಕ ವರ್ಗಕ್ಕೆ ಸೇರಿಸಲು ಸಾಧ್ಯವಾಗದಿರಲು ಈ ಭಾಷೆಗಳ ವಿವರವಾದ ಅಧ್ಯಯನ ನಡೆಯದಿರುವುದೂ ಒಂದು ಮುಖ್ಯ ಕಾರಣ. ಅವುಗಳ ಬಗೆಗೆ ಇರುವ ಮಾಹಿತಿಯ ಕೊರತೆಯಿಂದಾಗಿ ಯಾವ ರೀತಿ ವರ್ಗೀಕರಿಸುವುದಕ್ಕೂ ಸಾಧ್ಯವಾಗದು. ಅಲ್ಲದೆ ಎಷ್ಟೋ ಭಾಷೆಗಳ ಪ್ರಾಥಮಿಕ ಮಾಹಿತಿಯೂ ದುರ್ಲಭ. ಭಾಷೆಗಳ ಅಧ್ಯಯನ ವ್ಯಾಪಕವಾಗಿ ನಡೆದಂತೆ ಮಾಹಿತಿಯೂ ದೊರಕಿ ವರ್ಗೀಕರಣಕ್ಕೆ ಅವಕಾಶಗಳು ಹೆಚ್ಚಲಿವೆ. ಭಾರತದಲ್ಲೇ ಹಲವಾರು ಆದಿವಾಸಿಗಳ ಭಾಷೆಗಳ ಅಧ್ಯಯನ ನಡೆದಿಲ್ಲ. ಈ ಭಾಷೆಗಳು ಅನ್ಯ ಭಾಷಾ ಸಮುದಾಯಗಳ ಸಂಪರ್ಕ ಮತ್ತು ಸಾಮಾಜಿಕ ಪರಿವರ್ತನೆಗಳಿಂದಾಗಿ ಕೆಲವೇ ವರ್ಷಗಳಲ್ಲಿ ನಾಶ ಹೊಂದುವ ಸಾಧ್ಯತೆ ಇದೆ. ಅಂದರೆ ಆ ಭಾಷೆಗಳನ್ನು ಆಡುತ್ತಿರುವವರು ಕ್ರಮೇಣ ಬೇರೊಂದು ಭಾಷೆಯನ್ನು ಬಳಸಲು ಮೊದಲು ಮಾಡಿ ತಮ್ಮ ಮೂಲಭಾಷೆಯ ಬಳಕೆಯನ್ನು ನಿಲ್ಲಿಸುತ್ತಾರೆ. ಈ ಭಾಷಾನಾಶ ಸಂಭವಿಸುವುದರೊಳಗೆ ಈ ಭಾಷೆಗಳ ಅಧ್ಯಯನ ನಡೆಯುವ ಸಂಭವವೂ ಇದ್ದಂತಿಲ್ಲ. ಜಗತ್ತಿನಾದ್ಯಂತ ಹೀಗೆ ವರ್ಗೀಕರಣಕ್ಕೆ ಒಳಗಾಗದ ಹಲವಾರು ಭಾಷೆಗಳು ಪರೋಕ್ಷವಾಗಿ ವಿನಾಶಗೊಳ್ಳುತ್ತಿರುವ ಭಾಷೆಗಳೇ ಆಗಿವೆ. ಮತ್ತೆ ಕೆಲವು ಭಾಷೆಗಳ ಮಾಹಿತಿ  ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದರೂ ಅವುಗಳನ್ನು ವರ್ಗೀಕರಿಸುವುದು ಸಾಧ್ಯವಾಗದಿರುವ ಪ್ರಸಂಗಗಳಿವೆ. ಕೊರಿಯನ್ ಮತ್ತು ಜಪಾನೀ ಭಾಷೆಗಳು ಇಂಥ ಪ್ರಸಂಗಕ್ಕೆ ನಿದರ್ಶನಗಳು.

ಕೊರಿಯನ್ ಭಾಷೆಯನ್ನು ಸಾಮಾನ್ಯವಾಗಿ ಆಲ್‌ಟೈಕ್ ಭಾಷಾವಂಶಕ್ಕೆ ಸೇರಿಸುವುದುಂಟು. ಆಲ್‌ಟೈಕ್ ಭಾಷೆಗಳು ಪ್ರಪಂಚದ ಬಹುವಿಸ್ತಾರವಾದ ಭೂ ಪ್ರದೇಶದಲ್ಲಿ ಹರಡಿಕೊಂಡಿದೆ. ಇಂದಿನ ರಷ್ಯಾ, ಕಜಕ್‌ಸ್ಥಾನ, ಉಜ್ಬೆಕ್ ಸ್ಥಾನ, ಕಿರ‌್ಗಿಜ್, ಮಂಗೋಲಿಯಾ ಚೈನಾ ಮುಂತಾದ ಕಡೆಗಳಲ್ಲಿ ಈ ಭಾಷೆಗಳಿವೆ. ಕೊರಿಯನ್ ಈ ಭಾಷಾವಂಶದಿಂದ ಕವಲಾಗಿ ಒಡೆದು ಬಂದಿದೆಯೋ ಅಥವಾ ಬಹುಪಾಲು ಈ ವರ್ಗದ ಭಾಷೆಗಳೊಡನೆ ನಡೆದ ಸಂಪರ್ಕದಿಂದ ಅಧಿಕ ಪ್ರಮಾಣದ ಸಮಾನ ಲಕ್ಷಣಗಳನ್ನು ಮೈಗೂಡಿಸಿ ಕೊಂಡಿದೆಯೋ ಹೇಳಲು ಸಾಧ್ಯವಾಗಿಲ್ಲ. ಒಂದು ಭಾಷೆ ಮತ್ತೊಂದು ಪ್ರಬಲವಾದ ಭಾಷೆಯೊಡನೆ ನಿಡುಗಾಲದ ಸಂಪರ್ಕ ಹೊಂದಿದಾಗ ಪ್ರಬಲ ಭಾಷೆಯ ಎಷ್ಟೋ ಅಂಶಗಳನ್ನು – ಧ್ವನಿ, ಪದ ಮತ್ತು ವಾಕ್ಯ ಎರವಲು ಪಡೆದು ಆ ಪ್ರಬಲ ಭಾಷೆಯ ಲಕ್ಷಣಗಳನ್ನೇ ಹೊಂದುವ ಪ್ರಸಂಗಗಳು ಸಾಕಷ್ಟಿವೆ. ಕೊರಿಯನ್ ಭಾಷೆಯೂ ಇಂಥದೇ ಸಂದರ್ಭವನ್ನು ಎದುರಿಸಿ ರುವುದರಿಂದ ಈ ಭಾಷೆಯ ವರ್ಗೀಕರಣ ತೊಡಕಿನದಾಗಿದೆ. ಸುಮಾರು 5 ಕೋಟಿ ಜನರು ಈ ಭಾಷೆಯನ್ನು ಆಡುವವರಿದ್ದಾರೆ. ಚೀನಾ ದೊಡನೆ ಈ ಭಾಷೆಯನ್ನಾಡುವವರು ಶತಮಾನಗಳ ಕಾಲ ವ್ಯವಹರಿಸಿದ್ದರ ಪರಿಣಾಮವಾಗಿ ಈ ಭಾಷೆಯ ಶಬ್ದಕೋಶದಲ್ಲಿ ಅರ್ಧಕ್ಕೂ ಮಿಗಿಲಾಗಿ ಚೀನೀ ಪದಗಳಿವೆ. ಬರೆವಣಿಗೆಗೆ 12 ನೇ ಶತಮಾನದಿಂದಲೂ ಚೀನೀ ಲಿಪಿಯನ್ನೇ ಬಳಸುತ್ತಿದ್ದರು.

ಜಪಾನಿ ಭಾಷೆಯದ್ದೂ ಇದೇ ಸಮಸ್ಯೆ. ಸುಮಾರು 12 ಕೋಟಿ ಜಪಾನಿ ಭಾಷಿಕರು ತಮ್ಮ ತಾಯ್ನಡಿನಲ್ಲಿ ಈ ಭಾಷೆಯನ್ನಾಡುತ್ತಾರೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಈ ಭಾಷೆಯ ವಲಸೆಗಾರರು ಹರಡಿಕೊಂಡಿದ್ದಾರೆ. ಈ ಭಾಷೆಯನ್ನು ವರ್ಗೀಕರಿಸುವವರು ಇದು ಆಲ್‌ಟೆಕ್ ವಂಶಕ್ಕೆ ಸೇರುವುದೆಂದು ಹೇಳುತ್ತಾರೆ. ಆದರೆ ಜಪಾನಿ ಭಾಷೆಯ ಉಪಭಾಷೆಗಳಲ್ಲಿ ಕೆಲವು ತಮ್ಮದೇ ಆದ ವಿಶಿಷ್ಟ ಲಕ್ಷಣಗಳನ್ನು ಹೊಂದಿದ್ದು ಈ ವರ್ಗೀಕರಣ ಸೂಕ್ತವಲ್ಲವೆಂದು ತಿಳಿಯಲು ಕಾರಣವಾಗಿದೆ. ರ‌್ಯುಕ್ಯು ದ್ವೀಪದ ಜಪಾನಿಯು ಟೊಕಿಯೋ ಪ್ರದೇಶದ ಶಿಷ್ಟ ಜಪಾನಿಗಿಂತ ಬಹುವಾಗಿ ಭಿನ್ನ. ಈ ಉಪಭಾಷೆಯನ್ನು ಗಮನಿಸಿದರೆ ಆಲ್ಟ್ರೆಕ್ ವಂಶದಿಂದ ಜಪಾನಿಯು ಕವಲೊಡೆದು ಬಂದಿದೆ ಯೆಂದು ತೀರ್ಮಾನಿಸುವುದು ಸಾಧ್ಯವಾಗದು. ವರ್ಗೀಕರಣ ಸಾಧ್ಯವಾಗದ ಕೆಲವು ಭಾಷೆಗಳ ವಿವರಗಳು ಈ ಕೆಳಕಂಡಂತಿವೆ.

1. ಐಬೆರಿಯನ್ : ಈ ಭಾಷೆಯನ್ನು ಆಡುವವರು ಈಗ ಯಾರೂ ಇಲ್ಲ. ಈ ಭಾಷೆಯ ಶಾಸನಗಳು ಮುಖ್ಯ ದಾಖಲೆಗಳಾಗಿವೆ. ಸ್ಪೇನ್ ದೇಶದ ಆಗ್ನೇಯ ಎಬ್ರೋ ನದಿಯ ಆಸುಪಾಸಿನಲ್ಲಿ ಈ ಭಾಷೆಯನ್ನು ಆಡುವವರು ಇದ್ದಿರಬೇಕು. ಪಶ್ಚಿಮ ಯುರೋಪಿನ ಬಹುಭಾಗಗಳಲ್ಲಿ ಈ ಭಾಷೆ ವ್ಯಾಪಕವಾಗಿ ಬಳಕೆಯಲ್ಲಿತ್ತೆಂದು ಊಹಿಸಲು ಸಾಧ್ಯವಿದೆ. ಈ ಭಾಷೆಯ ಲಿಪಿಯಲ್ಲಿ 28 ಚಿಹ್ನೆಗಳಿವೆ. ಗ್ರೀಕ್ ಮತ್ತು ಫೋನೀಶಿಯನ್ ಲಿಪಿಯ ಪ್ರಭಾವ ಎದ್ದು ಕಾಣುವುದು. ಕೆಲವು ಶಾಸನಗಳನ್ನು ಓದಿದ್ದಾರೆ. ಹೀಗಿದ್ದರೂ ಈ ಭಾಷೆಯ ಸ್ವರೂಪ ಅಸ್ಪಷ್ಟವಾಗಿದೆ.

2. ಬಾಸ್ಕ್ : ಇಂಡೋ ಯುರೋಪಿಯನ್ ವಸಾಹತುಗಾರರು ಯುರೋಪಿನ ನೈರುತ್ಯ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವ ಮೊದಲು ಆ ಪ್ರದೇಶದಲ್ಲಿ ಜನರು ಬಳಸುತ್ತಿದ್ದ ಭಾಷೆಗಳಲ್ಲಿ ಈಗ ಬಾಸ್ಕ್ ಭಾಷೆಯೊಂದೇ ಉಳಿದಿರುವುದು. ಸುಮಾರು 5 ರಿಂದ 7 ಲಕ್ಷ ಜನರು ಈ ಭಾಷೆಯನ್ನೀಗ ಆಡುತ್ತಿದ್ದಾರೆಂದು ಅಂದಾಜು  ಮಾಡಲಾಗಿದೆ. ಸ್ಪೇನ್ ದೇಶದ ಉತ್ತರಭಾಗ ಮತ್ತು ಫ್ರಾನ್ಸ್‌ನ ನೈರುತ್ಯ ಭೂ ಪ್ರದೇಶದ ಸುಮಾರು 4,000 ಚ. ಮೈ. ಪ್ರದೇಶದಲ್ಲಿ ಈ ಭಾಷಿಕರು ಇದ್ದಾರೆ. ಸ್ಪೇನ್‌ನಲ್ಲಿ ನಡೆದ ಅಂತರ್ಯುದ್ಧದ ಸಂದರ್ಭದಲ್ಲಿ ಬಹುಪಾಲು ಜನರು ಅಮೇರಿಕಾಕ್ಕೆ ವಲಸೆ ಹೋದರು. ಬಾಸ್ಕ್ ಭಾಷೆಯನ್ನು ಕೆಲವರು ಕಕೇಸಿಯನ್ ಭಾಷಾವರ್ಗಕ್ಕೆ ಸೇರಿಸುತ್ತಾರೆ. ಕಕೇಸಿಯನ್ ಪರ್ವತ ಪ್ರದೇಶದಲ್ಲಿ ಈ ಭಾಷಾವಂಶದ ಭಾಷಿಕರು ನೆಲೆಸಿದ್ದಾರೆ. ಸುಮಾರು 40 ವಿವಿಧ ಭಾಷೆಗಳು ಈ ಭಾಷಾ ವಂಶಕ್ಕೆ ಸೇರಿವೆ. ಜಾರ್ಜಿಯಾ, ಆರ್ಮೇನಿಯಾ, ಅಜೆರ್ ಬೈಜಾನ್‌ಗಳಲ್ಲಿ ಈ ಭಾಷಿಕರಿದ್ದಾರೆ. ಮತ್ತೆ ಕೆಲವರು ಬಾಸ್ಕ್ ಉತ್ತರ ಅಮೆರಿಕದ ಭಾಷಾ ವಂಶಕ್ಕೆ ಸೇರಿದೆಯೆನ್ನು ವರು. ಈಗ ವಿನಾಶವಾಗಿರುವ, ಮೆಡಿಟರೇನಿಯನ್ ಪ್ರದೇಶದಲ್ಲಿ ಬಳಕೆ ಯಲ್ಲಿದ್ದ ಐಬೆರಿಯನ್ ಭಾಷೆಯೊಡನೆ ವರ್ಗೀಕರಿಸುವವರೂ ಇದ್ದಾರೆ. ಈ ಯಾವ ವರ್ಗೀಕರಣವೂ ಪರಿಪೂರ್ಣವಾಗಿಲ್ಲ. ಈ ಭಾಷೆಯನ್ನು ಪುನರುತ್ಥಾನಗೊಳಿಸುವ ಪ್ರಯತ್ನಗಳು ತೀವ್ರಗತಿಯಲ್ಲಿ ನಡೆಯುತ್ತಿವೆ.

3. ಎತ್ರುಸ್ಕಾನ್ : ಆಧುನಿಕ ಇಟಲಿಯ ತುಸ್ಕನಿ ಪ್ರದೇಶದಲ್ಲಿ ಪ್ರಾಚೀನ ಸಂಸ್ಕೃತಿಯೊಂದು ಅಸ್ತಿತ್ವದಲ್ಲಿತ್ತು. ಆಗ ಈ ಭಾಗವನ್ನು ಎತ್ರುರಿಯಾ ಎಂದು ಕರೆಯಲಾಗುತ್ತಿತ್ತು. ಕ್ರಿ.ಪೂ. ಆರನೆೇ ಶತಮಾನದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಈ ಸಂಸ್ಕೃತಿಯ ಜನರ ಭಾಷೆ ಎತ್ರುಸ್ಕಾನ್. ಈಗ ಲಭ್ಯವಿರುವ ದಾಖಲೆಗಳೆಂದರೆ ಸುಮಾರು 10,000 ಶಾಸನಗಳು. ಮೊದಲು ಗ್ರೀಕ್ ಲಿಪಿ ಅನಂತರ ಲ್ಯಾಟಿನ್ ಲಿಪಿಯನ್ನು ಈ ಶಾಸನಗಳಲ್ಲಿ ಬಳಸಿದ್ದಾರೆ. ಅವುಗಳನ್ನು ಓದಿ ಅರಿಯುವುದು ಸಾಧ್ಯವಾಗಿಲ್ಲ. ಯಾವ ಪರಿಚಿತ ಭಾಷೆಯ ರಚನೆಯನ್ನೂ ಈ ಲಿಖಿತ ಭಾಷೆಯಲ್ಲಿ ಕಂಡುಹಿಡಿಯು ವುದು ಸಾಧ್ಯವಾಗಿಲ್ಲ. ಈ ಲಿಪಿಯಲ್ಲಿರುವ ಭಾಷೆ ಇಂದಿಗೂ ಅಧ್ಯಯನ ಕಾರರಿಗೆ ಸವಾಲಾಗಿದೆ.

4. ಲೀನಿಯರ್ : ಕ್ರಿ.ಪೂ. 2ನೇ ಶತಮಾನದ ಕ್ರೀಟ್ ದ್ವೀಪದಲ್ಲಿ ಬಳಕೆಯಲ್ಲಿದ್ದ ಲಿಪಿಯಿದು. ಈ ಲಿಪಿಯನ್ನು ಬಳಸಿ ಬರೆದಿರುವ ಭಾಷೆಯೊಂದಿದೆ. ಈ ಲಿಪಿಯನ್ನು ‘ಓದುವುದು’  ಸಾಧ್ಯವಾಗಿಲ್ಲ. ಆದ್ದರಿಂದ ಭಾಷೆಯೂ ಅಪರಿಚಿತ. ಕೆಲವರು ಈ ಭಾಷೆಯನ್ನು ಮಿನಿಯೋನ್ ಅಥವಾ ಎತಿಯೋ ಕ್ರೀಟನ್ ಎನ್ನುವರು. ಈ ಹೆಸರಿನಿಂದ ತಿಳಿಯುವುದಿಷ್ಟೇ. ಈ ಲಿಪಿಯನ್ನು ಎಡದಿಂದ ಬಲಕ್ಕೆ ಸಾಲುಸಾಲಾಗಿ ಬರೆಯುತ್ತಿದ್ದರು. ಇದೇ ಅವಧಿಯಲ್ಲಿ ಗ್ರೀಕ್ ಭಾಷೆಯನ್ನು ಬರೆಯಲು ಬಳಸುತ್ತಿದ್ದ ಲಿಪಿಯನ್ನು ಲಿಪಿಯರ್ ಬಿ ಎಂದು ಕರೆಯಲಾಗಿದೆ.

5. ಸುಮೇರಿಯನ್ : 19 ನೇ ಶತಮಾನದಲ್ಲಿ ಕ್ಯೂನಿಫಾರಂ ಲಿಪಿಯನ್ನು ಓದಲು ಸಾಧ್ಯವಾದಾಗಲೇ ಸುಮೇರಿಯನ್ ಭಾಷೆ ಇದ್ದುದು ಗೊತ್ತಾಯಿತು. ಈ ಲಿಪಿಯನ್ನು ಬಳಸಿ ಹಲವಾರು ಭಾಷೆಗಳನ್ನು ಬರೆಯುತ್ತಿದ್ದರು. ಆ ಭಾಷೆಗಳಿಗಿಂತ ಭಿನ್ನವಾಗಿದ್ದುದರಿಂದ ಸುಮೇರಿಯನ್ ಭಾಷೆಯನ್ನು ಗುರುತಿಸುವುದು ಸಾಧ್ಯವಾಯಿತು. ಈಗ ನಮಗೆ ತಿಳಿದು ಬರುವಂತೆ ಕ್ರಿ.ಪೂ. 3100ರ ಸುಮಾರಿನಲ್ಲಿ ಬರೆದ ಈ ಭಾಷೆಯ ದಾಖಲೆಗಳು ಲಭಿಸಿವೆ. ಅಂದರೆ ಲಿಖಿತ ರೂಪದಲ್ಲಿ ಇದಕ್ಕಿಂತ ಹಿಂದಿನ ಕಾಲದ ಯಾವ ಭಾಷಾ ದಾಖಲೆಯೂ ಸಿಕ್ಕಿಲ್ಲ. ಇಂದಿನ ಇರಾಕ್‌ನಲ್ಲಿರುವ ಮೆಸಪುಟೋಮಿಯಾ ಪ್ರದೇಶದಲ್ಲಿ ಈ ಭಾಷೆಯನ್ನು ಆಡುವವರು ಇದ್ದರು. ಕ್ರಿ.ಪೂ. 2000 ದವರೆಗೂ ಈ ಭಾಷೆಯ ಬಳಕೆಯಾಗುತ್ತಿದ್ದುದಕ್ಕೆ ದಾಖಲೆಗಳಿವೆ. ಅನಂತರ ಸೆಮಿಟಿಕ್ ಭಾಷಾವಂಶದ ಅಕ್ಕಾಡಿಯನ್ ಭಾಷೆಯನ್ನಾಡುವ ಅಧಿಪತ್ಯಕ್ಕೆ ಒಳಗಾಗಿ ಸುಮೇರಿಯನ್ ಭಾಷೆಯ ಬಳಕೆ ತಗ್ಗಿತು. ಆಡುಮಾತನ್ನಾಗಿ ಅದನ್ನು ಬಳಸುವುದು ನಿಂತು ಹೋಯಿತಾದರೂ ಮುಂದಿನ ಎರಡು ಸಾವಿರ ವರ್ಷಗಳ ಅವಧಿಯಲ್ಲಿ ಸುಮೇರಿಯನ್ ಲಿಖಿತ ರೂಪದಲ್ಲಿ ಬಳಕೆಯಾಗುತ್ತಲೇ ನಡೆಯಿತು. ಈಗ ಬಹು ಸಂಖ್ಯೆಯ ಲಿಖಿತ ದಾಖಲೆಗಳು ಲಭ್ಯ. ವಿವಿಧ ವಿಷಯಗಳನ್ನು ಕುರಿತು ಈ ದಾಖಲೆಗಳಲ್ಲಿ ಮಾಹಿತಿಯಿದೆ. ಈ ಭಾಷೆಯ ಉಪಭಾಷಾ ಪ್ರಭೇದಗಳೂ ಈ ಲಿಖಿತ ದಾಖಲೆಗಳಲ್ಲಿ ಕಂಡುಬರುತ್ತವೆ. ಆಲ್ಟೈಕ್ ಮತ್ತು ದ್ರಾವಿಡ ಭಾಷಾವಂಶ ಗಳೊಡನೆ ಸುಮೇರಿಯನ್ ಭಾಷೆಯನ್ನು ವರ್ಗೀಕರಿಸಲು ಯತ್ನಿಸಿದ್ದಾರೆ. ಆದರೆ ಈ ಪ್ರಯತ್ನಗಳಿಗೆ ಪೂರ್ಣ ಯಶ ದೊರಕಿಲ್ಲ.

6. ಎಲಮೈಟ್ : ಇಂದಿನ ಇರಾನ್ ದೇಶದ ನೈರುತ್ಯ ಭೂಭಾಗ ಖುಜಿಸ್ತಾನದಲ್ಲಿದ್ದ ಪ್ರಾಚೀನ ದೇಶ ಎಲಮ್. ಅಲ್ಲಿನ ಜನರ ಭಾಷೆ ಎಲಮೈಟ್. ಕ್ರಿ.ಪೂ. ಮೂರು ಸಾವಿರ ವರ್ಷಗಳ ಹಿಂದಿನ ಚಿತ್ರಲಿಪಿಯ ದಾಖಲೆಗಳು ದೊರಕಿವೆ. ಈ ಭಾಷೆಯನ್ನು ಆನಂತರ ಕ್ಯೂನಿಫಾರಂ ಲಿಪಿಯಲ್ಲೂ ಬರೆದಿದ್ದಾರೆ. ಕ್ರಿ.ಶ. ದ ಮೊದಲ ಸಹಸ್ರ ವರ್ಷಗಳಲ್ಲಿ ಈ ಭಾಷೆ ಬಳಕೆಯಲ್ಲಿತ್ತು. ಈ ಭಾಷೆಯನ್ನು ದ್ರಾವಿಡ ಭಾಷಾವಂಶಕ್ಕೆ ಸೇರಿಸುವ ಯತ್ನಗಳು ನಡೆದಿವೆ.

7. ಮೊಹೆಂಜೊ ದಾರೊ : ಇಂದಿನ ಪಾಕಿಸ್ತಾನದಲ್ಲಿ ಸಿಂಧೂ ನದಿಯ ದಡದಲ್ಲಿರುವ ಪ್ರಾಚೀನ ಸಂಸ್ಕೃತಿಯ ಕುರುಹುಗಳಲ್ಲಿ ಕೆಲವು ಲಿಖಿತ ದಾಖಲೆಗಳಿವೆ. ಕ್ರಿ.ಪೂ. 3000 ವರ್ಷಗಳಷ್ಟು ಹಳೆಯದಾದ ನಗರವೊಂದು ಈ ಪ್ರದೇಶದಲ್ಲಿ ಇದ್ದುದಾಗಿ 1920ರಲ್ಲಿ ನಡೆದ ಉತ್ಖನನಗಳು ತಿಳಿಸಿವೆ. (ಮೊಹೆಂಜೊ – ದಾರೊ ಎಂದರೆ ಸತ್ತವರ ದಿಬ್ಬ ಎಂದು ಅರ್ಥ). ಈ ಲಿಖಿತ ದಾಖಲೆಗಳ ಭಾಷೆಯನ್ನು ಅರಿಯಲು ಹತ್ತಾರು ಪ್ರಯತ್ನಗಳು ನಡೆದಿವೆ. ಯತ್ನಗಳು ಯಶಸ್ವಿಯಾಗಿಲ್ಲ. ಆದ್ದರಿಂದ ಈ ಲಿಪಿಗತ ಭಾಷೆಯ ವರ್ಗೀಕರಣವೂ ಆಗಿಲ್ಲ.

8. ಬುರಶಸ್ಕಿ : ಕಾಶ್ಮೀರ ವಾಯುವ್ಯದಲ್ಲಿ ಪಾಕಿಸ್ತಾನಕ್ಕೆ ಹತ್ತಿ ಕೊಂಡಂತಿರುವ ಪ್ರದೇಶದಲ್ಲಿ ವಾಸಮಾಡುವ ಬುರುಶೋ ಜನರಾಡುವ ಭಾಷೆ. ಸುಮಾರು 20,000 ಬುರಶೋಗಳಿದ್ದಾರೆ. ಲಿಪಿಯಿಲ್ಲದ ಈ ಭಾಷೆಯನ್ನು ವರ್ಗೀಕರಿಸುವುದು ಸಾಧ್ಯವಾಗಿಲ್ಲ.

9. ನಹಾಲಿ : ನಮ್ಮ ದೇಶದ ಮಧ್ಯಪ್ರದೇಶದ ನೈಋತ್ಯ ಭಾಗದಲ್ಲಿ ಈ ಭಾಷೆಯನ್ನಾಡುವ ಜನರಿದ್ದಾರೆ. ಅವರ ಒಟ್ಟು ಸಂಖ್ಯೆ ಸುಮಾರು 1,000. ಆಸ್ಟ್ರೋ ಎಸಿಯಾಟಿಕ್ ಭಾಷಾವಂಶದ ಮುಂಡಾ ಭಾಷೆಗಳ ಕವಲಿಗೆ ಈ ಭಾಷೆ ಸೇರುವುದೆಂದು ಕೆಲವರು ತಿಳಿಯುತ್ತಾರೆ. ಆದರೆ ಇದೊಂದು ಸ್ವತಂತ್ರ ಭಾಷೆಯೆಂದು ವಾದಿಸುವವರೂ ಇದ್ದಾರೆ.

10. ಗಿಲಿಯಕ್ : ಇಂದಿನ ರಷ್ಯಾ ದೇಶದ ಈಶಾನ್ಯ ಭೂಭಾಗದ ಮತ್ತು ಅದಕ್ಕೆ ಅಂಟಿಕೊಂಡಿರುವ ಸಖಲಿನ್ ನಡುಗಡ್ಡೆಯಲ್ಲಿ ಸುಮಾರು 2000 ಜನ ಈ ಭಾಷೆಯನ್ನಾಡುವವರಿದ್ದಾರೆ. ತಮ್ಮ ಭಾಷೆಯನ್ನವರು ನಿವ್‌ಖಿ ಎಂದು ಕರೆದುಕೊಳ್ಳುತ್ತಾರೆ. ಈ ಭಾಷೆಯನ್ನು ನೆರೆಯ ಭೂಭಾಗದ ಪೆಲಿಯೋ ಸೈಬೀರಿಯನ್ ಭಾಷಾ ವಂಶದಲ್ಲಿ ಸೇರಿಸುವುದುಂಟು. ಆದರೆ ಈ ಭಾಷೆಯ ಲಕ್ಷಣಗಳು ಪೆಲಿಯೋ ಸೈಬಿರಿಯನ್ ಭಾಷಾವಂಶದ ಭಾಷೆಗಳ ಸಾಮಾನ್ಯ ಲಕ್ಷಣಗಳಿಂದ ಸಾಕಷ್ಟು ಬೇರೆಯಾಗಿದೆ. ಆದ್ದರಿಂದ ಈ ವರ್ಗೀಕರಣವು ವಿವಾದಾಸ್ಪದವಾಗಿದೆ.

11. ಐನು : ಈ ಭಾಷೆಯನ್ನು ಆಡುವ ಸುಮಾರು 16,000 ಜನರು ಜಪಾನಿನ ಹೊಕೀಡೋ ಪ್ರದೇಶ, ಸಖಲಿನ್ ಮತ್ತು ಕುರಿಲ್ ದ್ವೀಪಗಳಲ್ಲಿ ವಾಸಿಸುತ್ತಾರೆ. ಇವರ ಭಾಷೆ ಸಂಸ್ಕೃತಿಗಳು ಜಪಾನೀಯರ ಅಧಿಪತ್ಯಕ್ಕೆ ಒಳಗಾಗಿದೆ. ಈಗ ಈ ಭಾಷೆಯನ್ನಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಐನು ಜನರ ದೇಹದ ಚಹರೆಗಳು ಜಪಾನೀಯರಿಗಿಂತ ಪೂರ್ಣ ಭಿನ್ನವಾಗಿದ್ದು ಕಕಸಾಯಿಡ್ ವರ್ಗದ ಲಕ್ಷಣಗಳಿಗೆ ಸಮೀಪವಾಗಿವೆ.

12. ಕುಟೆನಲ್ : ಉತ್ತರ ಅಮೆರಿಕದ ಮೂಲ ನಿವಾಸಿಗಳ ಗುಂಪೊಂದು ಬಳಸುವ ಭಾಷೆ. ಈ ಭಾಷೆಗೆ ಬೇರೆ ಹೆಸರೂ ಇವೆ. ಕೂಟೆನಯ್, ಕೂಟೆನಾಯಿಸ್, ಸ್ಕಲ್ಜಿ, ಆರ್ಕ್-ಅ-ಪ್ಲಟ್, ಫ್ಲಾಟ್‌ಬೆೋ ಇವೇ ಮುಂತಾದವು ಆ ಹೆಸರುಗಳು. ಬ್ರಿಟಿಶ್ ಕೊಲಂಬಿಯಾದ ಆಗ್ನೇಯ ಭಾಗ, ಆಲ್ಬರ‌್ಟಾಗಳಲ್ಲದೆ ಇದಾಹೋ, ವಾಷಿಂಗ್‌ಟನ್, ಮತ್ತು ಮೋಂಟಾನಾಗಳಲ್ಲೂ ಈ ಭಾಷಿಕರು ಹರಡಿಕೊಂಡಿದ್ದಾರೆ. 1970 ರ ಸುಮಾರಿಗೆ ಈ ಭಾಷೆಯನ್ನು ಬಳಸುವವರ ಸಂಖ್ಯೆ 500 ರ ಆಸುಪಾಸಿನಲ್ಲಿತ್ತು. ಈ ಸಂಖ್ಯೆ ಕ್ಷೀಣಿಸುತ್ತಲೇ ಇದೆ. ಉತ್ತರ ಅಮೆರಿಕಾದ ಇತರ ಬುಡಕಟ್ಟುಗಳ ಭಾಷೆಗಳೊಡನೆ ಇದನ್ನು ವರ್ಗೀಕರಿಸುವ ಯತ್ನ ಸಫಲವಾಗಿಲ್ಲ.

13. ಕೆರೆಸ್ : ನ್ಯೂ ಮೆಕ್ಸಿಕೋದ ಫ್ಲೂಬೋ ಇಂಡಿಯನ್ನರು ಆಡುವ ಭಾಷೆ. ನಲವತ್ತು ವರ್ಷಗಳ ಹಿಂದಿನ ಲೆಕ್ಕದಂತೆ ಈ ಭಾಷೆಯನ್ನಾಡುವವರ ಸಂಖ್ಯೆ ಸುಮಾರು 7,000ವಿತ್ತು. ಮೊದಮೊದಲು ಈ ಭಾಷೆಯನ್ನು ಹೊಕನ್ ಸಿಯೂನ್ ಭಾಷಾವಂಶದಲ್ಲಿ ಸೇರಿಸುವ ಯತ್ನ ನಡೆಯಿತು. ಈಗ ಈ ವರ್ಗೀಕರಣವನ್ನು ನಿರಾಕರಿಸಲಾಗಿದೆ. ಕೆರೆಸನ್, ಕೈರೆಸ್ ಇವು ಈ ಭಾಷೆಯ ಪರ್ಯಾಯ ನಾಮಗಳು.

14. ತರಸ್ಕ : ತರಸ್ಕನ್, ಪೊರೆಪೆಚ, ಮೆಕೊಕನ್ ಇವು ಈ ಭಾಷೆಯ ಇತರ ಹೆಸರುಗಳು. ಮೆಕ್ಸಿಕೋದ ಆಗ್ನೇಯದಲ್ಲಿ ಮತ್ತು ಕೇಂದ್ರ ಪ್ರದೇಶದಲ್ಲಿ ಈ ಭಾಷೆಯನ್ನು ಆಡುವವರಿದ್ದಾರೆ. 1960 ರ ಸುಮಾರಿನಲ್ಲಿ ಇವರ ಸಂಖ್ಯೆ ಸುಮಾರು 60,000ವಿತ್ತು. ಈ ಭೂ ಪ್ರದೇಶದ ಇತರ ಕೆಲವು ಭಾಷೆಗಳನ್ನು ಪೆನುಶಿಯನ್ ಭಾಷಾವಂಶವೆಂದು ವರ್ಗೀಕರಿಸುತ್ತ ಅದೇ ವರ್ಗಕ್ಕೆ ತರಸ್ಕ ಭಾಷೆಯನ್ನು ಸೇರಿಸುವ ಯತ್ನ ನಡೆದಿದೆ. ಈ ಸಂಬಂಧ ಅಸ್ಪಷ್ಟವಾಗಿದೆ. ಈ ಭಾಷೆಯನ್ನು ಆಡುವವರು ಕಡಿಮೆಯಾಗುತ್ತಿ ದ್ದಾರೆ. ಪರಿಸರದ ಪ್ರಬಲ ಭಾಷೆ ಮತ್ತು ಸಂಸ್ಕೃತಿಗಳಲ್ಲಿ ಲೀನವಾಗುತ್ತಿದ್ದಾರೆ.

15. ಹೆಟ್ : ಚೆಚೆಹೆಟ್ ಎಂದೂ ಈ ಭಾಷೆಯನ್ನು ಕರೆಯುವರು. ದಕ್ಷಿಣ ಅಮೆರಿಕಾದ ಬುಡಕಟ್ಟು ಜನರ ಭಾಷೆ. 18 ನೇ ಶತಮಾನದ ಕೊನೆಗೆ ಈ ಭಾಷೆ ನಶಿಸಿ ಹೋಯಿತು. ಅರ್ಜೆಂಟೈನಾ ದೇಶದಲ್ಲಿ ಬಳಕೆಯಾಗುತ್ತಿದ್ದ ಈ ಭಾಷೆಯ ಕೆಲವು ಪದಗಳು ಸ್ಥಳನಾಮಗಳು ಮಾತ್ರ ಈಗ ಉಳಿದಿವೆ.

16. ಕರಂಕವ : ಕ್ಲಾಮ್ ಕೊಯೆಟ್ಸ್ ಎಂದೂ ಈ ಭಾಷೆ ಯನ್ನು ಕರೆಯುವರು. 18 ನೇ ಶತಮಾನದವರೆಗೂ, ಟೆಕ್ಸಸ್ ಕರಾವಳಿಯಲ್ಲಿದ್ದ ಆದಿವಾಸಿಗಳು ಈ ಭಾಷೆಯನ್ನು ಆಡುತ್ತಿದ್ದರು. ಈ ಪ್ರದೇಶದಲ್ಲಿ ಬಿಳಿಯರು ನೆಲೆಸಲು ತೊಡಗಿದ ಮೇಲೆ 19 ನೇ ಶತಮಾನದ ನಡುಭಾಗದ ವೇಳೆಗೆ ಈ ಭಾಷೆ ನಶಿಸಿಹೋಯಿತು.

೧೭. ಕೆಲಸ: ಫ್ಲೋರಿಡಾ: (ಉತ್ತರ ಅಮೆರಿಕಾ) ದಲ್ಲಿ ಒಂದು ರೆಡ್ ಇಂಡಿಯನ್ ಬುಡಕಟ್ಟು ಜನರು 18 ನೇ ಶತಮಾನದ ಕೊನೆಯವರೆಗೂ ಈ ಭಾಷೆಯನ್ನು ಬಳಸುತ್ತಿದ್ದರು. ಮೊದಮೊದಲು ಅನ್ಯ ಬುಡಕಟ್ಟುಗಳಿಂದ ಅನಂತರ ಬ್ರಿಟಿಶರಿಂದ ಅಕ್ರಮಣಕ್ಕೆ ಒಳಗಾದ ಈ ಬುಡಕಟ್ಟು ಕ್ಯೂಬಾ ದೇಶವನ್ನು ಸೇರಿಕೊಂಡಿತು.

18. ಬೊಥುಕ್ : ನ್ಯೂ ಫೌಂಡ್‌ಲ್ಯಾಂಡನಲ್ಲಿ ಒಂದು ಇಂಡಿಯನ್ ಬುಡಕಟ್ಟಿನ ಜನರು ಬಳಸುತ್ತಿದ್ದ ಭಾಷೆ. ಈಗ ಮರೆಯಾಗಿದೆ. 1829 ರ ಸುಮಾರಿಗೆ ಈ ಭಾಷೆಯನ್ನಾಡುತ್ತಿದ್ದ ಕೊನೆಯ ವ್ಯಕ್ತಿ ತೀರಿಕೊಂಡನಂತೆ. ಅಲ್ಗಾಂಕಿಯನ್ ಭಾಷಾವಂಶಕ್ಕೆ ಈ ಭಾಷೆಯನ್ನು ಸೇರಿಸುವ ಯತ್ನವನ್ನು ಕೆಲವರು ಮಾಡಿದ್ದಾರೆ. ಆದರೆ ಈ ವರ್ಗೀಕರಣ ವಿವಾದಾಸ್ಪದವಾಗಿದೆ.