ತಾಲ್ಲೂಕು ಕೇಂದ್ರದಿಂದ: ೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೩೫ ಕಿ.ಮೀ

ಗುಡಿಬಂಡೆ

ಗುಡಿಬಂಡೆ

ಗುಡಿಬಂಡೆಯು ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ಚಿಕ್ಕ ತಾಲ್ಲೂಕು ಕೇಂದ್ರ. ಗುಡಿಬಂಡೆ ಇದರ ಹೆಸರೇ ಹೇಳುವಂತೆ ಸುತ್ತಲೂ ಬೆಟ್ಟಗುಡ್ಡಗಳಿಂದ ಕೂಡಿದ ಸುಂದರ ನಿಸರ್ಗ ನಿರ್ಮಿತ ಪ್ರದೇಶ. ಬಂಡೆಗಳ ಮೇಲೆಯೇ ಗುಡಿ ಇರುವುದರಿಂದ ಈ ಸ್ಥಳಕ್ಕೆ ಗುಡಿಬಂಡೆ ಎಂಬ ಹೆಸರು ಬಂದಿದೆ. ಗುಡಿಬಂಡೆಯಲ್ಲಿ ಕೆಲವು ವಿಶೇಷಗಳನ್ನು ನಿರ್ಮಿಸಿ ಬೆಳೆಸಿ ಅಭಿವೃದ್ಧಿ ಪಡಿಸಿದ ಕೀರ್ತಿ ೪೦೦ ವರ್ಷಗಳ ಹಿಂದೆ ಈ ಪ್ರದೇಶವನ್ನು ಆಳಿದ ಅಪ್ರತಿಮ ಹೋರಾಟಗಾರ, ಕ್ರಾಂತಿಕಾರಿ, ವಿಚಾರವಂತ ಎಂದೆಲ್ಲಾ ಕೊಂಡಾಡಬಹುದಾದ ಹಾವಳಿ ಭೈರೇಗೌಡ ಎಂಬ ಪಾಳೆಗಾರನಿಗೆ ಸಲ್ಲುತ್ತದೆ. ಇಲ್ಲಿನ ಪಂಚ ಮಹಾವೈಶಿಷ್ಟ್ಯಗಳೆಂದರೆ ಪಂಚ ಗಿರಿಗಳು, ಪಂಚ ಲಿಂಗಗಳು, ಪಂಚಾಂಜನೇಯರು, ಪಂಚ ಕಲ್ಯಾಣಿಗಳು, ಪಂಚ ಶಕ್ತಿ ಮಾತೃಕೆಯರು, ಹಾಗೂ ಭೂತಕಾಲದ ಸ್ಮಾರಕಗಳೊಡನೆ, ಜೊತೆಗೂಡಿರುವ  ವರ್ತಮಾನದ ಕೊಡುಗೆ ಎಂದರೆ ಪಂಚಮುಖಿ ಗಾಯತ್ರಿದೇವಿ. ಪುರಾಣಗಳನ್ನು ಸ್ಮರಿಸಿಕೊಂಡು ಇತಿಹಾಸ ನೆನೆಯಲೆತ್ನಿಸಿದರೆ ಕಾಲಗರ್ಭದಲ್ಲಿ ಅಡಗಿ ಹೋಗಿರುವ ಎಷ್ಟೋ ವಿಶೇಷಗಳನ್ನು ಮತ್ತು ಆಸಕ್ತಿ ಮೂಡಿಸುವ ಸಿರಿಪರಂಪರೆಯನ್ನು ಇಲ್ಲಿ ಕಾಣಬಹುದಾಗಿದೆ.

ಸುರಸದ್ಮಗಿರಿ

ತಾಲ್ಲೂಕು ಕೇಂದ್ರದಿಂದ : ೧ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೩೬ ಕಿ.ಮೀ

ಸುರಸದ್ಮಗಿರಿ

ಸುರಸದ್ಮಗಿರಿ ಬೆಟ್ಟ ಗುಡಿಬಂಡೆಯ ಪಾಳೇಗಾರಿಕೆ ಪಡೆದ ಬೈರೇಗೌಡ ಶತ್ರುಗಳಿಂದ ರಕ್ಷಣೆ ಪಡೆಯಲು ಊರಿನ ಸುತ್ತಲೂ ಅಗರತೆಗಳನ್ನು (ಕಂದಕ) ನಿರ್ಮಿಸಿ ಸುರದ ಗಿರಿಯ ಮೇಲೆ ಏಳು ಸುತ್ತಿನ ಕೋಟೆಯನ್ನು ನಿರ್ಮಿಸಿದ ಸುರಸದ್ಮಗಿರಿಯಲ್ಲಿ ಎಂಟು ಪ್ರಮುಖ ದೊಣೆಗಳು (ಕೊಳಗಳು) ಐದು ಉಪದೊಣೆಗಳೂ ಸೇರಿದಂತೆ ಹದಿಮೂರು ದೊಣೆಗಳಿದ್ದು, ಎಲ್ಲವೂ ನೀರಿನಿಂದ ತುಂಬಿವೆ. ಆನೆಕಾಲಿನ ದೊಣೆ, ಉಪ್ಪು ದೊಣೆ, ಆಂಜನೇಯ ದೊಣೆ, ಜೇನುತುಪ್ಪದ ದೊಣೆ, ನೇರಳೆ ಮರದ ದೊಣೆ, ಸೀತಾ ದೊಣೆ, ಲಕ್ಷ್ಮಣನ ದೊಣೆ ಮತ್ತು ರಾಮರ ದೊಣೆ. ರಾಮರ ದೊಣೆ ಎಲ್ಲದಕ್ಕಿಂತ ಎತ್ತರದಲ್ಲಿ ದೊಡ್ಡದಾಗಿದ್ದು ಸದಾಕಾಲ ಶುದ್ಧ ನೀರಿನಿಂದ ತುಂಬಿರುತ್ತದೆ. ಈ ಜಲ ಹಲವು ರೋಗಗಳ ಉಪಶಮನಕ್ಕೆ ಸಹಕಾರಿಯಾಗಿದೆ ಎಂಬ ನಂಬಿಕೆ ಇಲ್ಲಿದೆ. ಬೆಟ್ಟದ ಶಿಖರ ಭಾಗದಲ್ಲಿ ಎರಡು ದೇವಸ್ಥಾನಗಳಿದ್ದು, ಒಂದರಲ್ಲಿ ಶಿವಲಿಂಗವನ್ನು ಮತ್ತೊಂದರಲ್ಲಿ ಪಾರ್ವತಿದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಶ್ರೀರಾಮನು ನೂರ ಎಂಟು ಲಿಂಗಗಳನ್ನು ಪ್ರತಿಷ್ಠಾಪಿಸುತ್ತಾ ಅದರಲ್ಲಿ ಒಂದನು  ಇಲ್ಲಿ ಪ್ರತಿಷ್ಠಾಪಿಸನೆಂದು ಹೇಳಲಾಗಿದೆ. ಚಿತ್ರದುರ್ಗದಲ್ಲಿರುವಂತೆ ಸುರಸದ್ಮಗಿರಿಯೂ ಸಹ ಭದ್ರವಾದ ಏಳು ಸುತ್ತಿನ ಕೋಟೆಯನ್ನು ಹೊಂದಿದೆ.

 

ಬೈರಸಾಗರ ಕೆರೆ :

ತಾಲ್ಲೂಕು ಕೇಂದ್ರದಿಂದ: ೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೩೫ ಕಿ.ಮೀ

17_Kolar

ರಾಷ್ಟ್ರೀಯತೆಯ ಪ್ರತೀಕ ಗುಡಿಬಂಡೆ ತಾಲ್ಲೂಕಿನ ಜನರ ಏಕೈಕ ಜೀವ ಜಲನಾಡಿ ಬೈರಸಾಗರ ಕೆರೆ. ೧೬ನೇ ಶತಮಾನದಲ್ಲಿ ಪಾಳೇಗಾರ ಬೈರೇಗೌಡನು ಇದನ್ನು ನಿರ್ಮಿಸಿದನು. ಈ ಕೆರೆ ಭಾರತದ ಭೂಪಟ ಮಾದರಿಯಲ್ಲಿದೆ.  ಪಂಚಗಿರಿಗಳಲ್ಲೊಂದಾದ ಧೇನುಗಿರಿ(ಆವಲ ಬೆಟ್ಟ) ಯಲ್ಲಿ ಉಗಮವಾಗುವ ಕೇವಲ ಮಳೆಗಾಲದಲ್ಲಿ ಮಾತ್ರ ಹರಿಯುವ ಕುಶಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಅಂದಾಜಿನಂತೆ ಸುಮಾರು ೩೦೦೦ ಎಕರೆಗೂ ಅಧಿಕ ಅಚ್ಚುಕಟ್ಟು  ಪ್ರದೇಶದ ಬೆಳೆಗಳಿಗೆ ನೀರುಣಿಸಿ ತನ್ನನ್ನು ನಂಬಿದ ರೈತರ ಹಸಿವನು  ತಣಿಸುತ್ತದೆ.

ಒಂದು ಅಚ್ಚರಿಯ ಸಂಗತಿಯೆಂದರೆ ಕೆಂಪು ಸಮುದ್ರದಂತೆ ಇರುವ ಈ ಕೆರೆಯ ನೀರು ಸಂಪೂರ್ಣ ಮಣ್ಣು ಮಿಶ್ರಿತ ಕೆಂಪುಬಣ್ಣದಿಂದ ಕೂಡಿದ್ದು, ತುಂಬಿದ ಕೆರೆ ರುದ್ರ ರಮಣೀಯವಾಗಿ ಕಾಣುತ್ತದೆ.
ಎಲ್ಲೋಡು ಶ್ರೀ ಕೂರ್ಮಗಿರಿ ಕ್ಷೇತ್ರ

ತಾಲ್ಲೂಕು ಕೇಂದ್ರದಿಂದ: ೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೪೫ ಕಿ.ಮೀ

ಶ್ರೀ ಲಕ್ಷ್ಮೀ ಆದಿನಾರಾಯಣ ಸ್ವಾಮಿಯ ಮೂಲ ವಿಗ್ರಹ ಶ್ರೀ ಲಕ್ಷ್ಮೀಆದಿನಾರಾಯಣಸ್ವಾಮಿ ಬೆಟ್ಟ

ಶ್ರೀ ಲಕ್ಷ್ಮೀ ಆದಿನಾರಾಯಣ ಸ್ವಾಮಿಯ ಮೂಲ ವಿಗ್ರಹ
ಶ್ರೀ ಲಕ್ಷ್ಮೀಆದಿನಾರಾಯಣಸ್ವಾಮಿ ಬೆಟ್ಟ

ಪರಮಪವಿತ್ರ ಪಂಚನಾರಾಯಣ ಕ್ಷೇತ್ರಗಳಲ್ಲಿ ಒಂದೆನಿಸಿರುವ ಶ್ರೀ ಲಕ್ಷಿ  ಆದಿನಾರಾಯಣ ಸ್ವಾಮಿ ಉಗಮ ಸ್ಥಾನವೇ ಕೂರ್ಮಗಿರಿ. ಎಲ್ಲೋಡು ಗ್ರಾಮದ ಪೂರ್ವದಿಕ್ಕಿನಲ್ಲಿ ಪ್ರಕೃತಿ ಮಾತೆಯಿಂದ ಪವಿತ್ರ ಗಿರಿಯಾಗಿ ಕಂಗೊಳಿಸುತ್ತಿದೆ. ಪ್ರಕೃತಿಯಿಂದ ನಿರ್ಮಾಣವಾಗಿರುವ ಗುಹೆಯಲ್ಲಿ ಶ್ರೀ ಮಹಾವಿಷ್ಣುವು ಶ್ರೀ ಲಕ್ಷಿ  ಆದಿನಾರಾಯಣಸ್ವಾಮಿ ಎಂಬ ಹೆಸರಿನಿಂದ ಶಿಲಾ ಮೂರ್ತಿಯಾಗಿ ಉದ್ಭವಿಸಿ ಭಕ್ತರ ಕೋರಿಕೆಗಳನ್ನು ಈಡೇರಿಸಿ ಲೋಕ ಕಲ್ಯಾಣ ಮಾಡುತ್ತಿದ್ದಾನೆ ಎಂಬ ನಂಬಿಕೆ ಇದೆ. ಮಾಘಮಾಸದ ಮೂರನೆಯ ಭಾನುವಾರದಂದು ಶ್ರೀ ಲಕ್ಷಿ  ಆದಿನಾರಾಯಣ ಸ್ವಾಮಿಯ ಬ್ರಹ್ಮ ರಥೋತ್ಸವಾದಿಯಾಗಿ ಸಕಲ ಪೂಜಾ ಕೈಂಕರ್ಯಗಳೂ ಅತಿ ವೈಭವವಾಗಿ ಭಕ್ತಾದಿಗಳಿಂದ ನೆರವೇರಿಸಲ್ಪಡುತ್ತಿವೆ. ಶ್ರೀ ಕೂರ್ಮಗಿರಿ ಕ್ಷೇತ್ರದಲ್ಲಿ ಅನೇಕ ಧರ್ಮಶಾಲೆಗಳು ಧರ್ಮಾತ್ಮರಿಂದ ನೆರವೇರಿಸಲ್ಪಡುತ್ತಿವೆ. ಈ ಕ್ಷೇತ್ರವು ಅನ್ನ ಸಂತರ್ಪಣೆಗೆ ಹೆಸರುವಾಸಿಯಾಗಿದೆ. ಪ್ರತಿ ಭಾನುವಾರ ಬೆಟ್ಟಕ್ಕೆ ದೇವರ ದರ್ಶನಕ್ಕೆ ಬರುವ ಯಾತ್ರಾರ್ಥಿಗಳಿಗೆ ಇಲ್ಲಿನ ಆರ್ಯವೈಶ್ಯ ಸಂಘದವರು ಆರ್ಯವೈಶ್ಯ ಧರ್ಮ ಶಾಲೆಯಲ್ಲಿ ಉಚಿತ ಭೋಜನ ವ್ಯವಸ್ಥೆ ಮತ್ತು ವಸತಿ ವ್ಯವಸ್ಥೆಯನ್ನು ನಡೆಸಿಕೊಂಡು ಬರುತ್ತಿರುತ್ತಾರೆ.

 

ವೀರಾಪುರಪಕ್ಷಿಧಾಮ :

ತಾಲ್ಲೂಕು ಕೇಂದ್ರದಿಂದ : ೧೨ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೪೭ ಕಿ.ಮೀ

ವೀರಾಪುರ – ಪಕ್ಷಿಧಾಮ

20_Kolar

ಎಲ್ಲೋಡು ಆದಿನಾರಾಯಣಸ್ವಾಮಿ ಬೆಟ್ಟಕ್ಕೆ ಕೇವಲ ಎರಡು ಕಿ.ಮೀ. ದೂರದಲ್ಲಿರುವ ವೀರಾಪುರ ಎಂಬ ಹಳ್ಳಿ ಆಂಧ್ರ ಪ್ರದೇಶಕ್ಕೆ ಸೇರಿರುತ್ತದೆ. ಈ ಹಳ್ಳಿ ವರ್ಷದ ಆಗಸ್ಟ್ನಿಂದ ಸೆಪ್ಟೆಂಬರ್ ತಿಂಗಳುಗಳಲ್ಲಿ ಸಂತಾನ ಅಭಿವೃದ್ದಿಗಾಗಿ ದೂರದ ಸೈಬೀರಿಯಾದಿಂದ ವಲಸೆ ಬರುವ ನಾನಾರೀತಿಯ ಪಕ್ಷಿಗಳಿಂದ ಕೂಡಿರುತ್ತದೆ.

ಪೆಯಿಂಟೆಡ್ ಸ್ಟಾರ್ಕ್, ಹೆರಾನ್, ವೈಟ್ಬೀಸ್ ಐಬಿಸ್, ಪಾಂಡ್ ಹೆರಾನ್ ಮುಂತಾದ ಪಕ್ಷಿಗಳು ಈ ರೀತಿ ವಲಸೆ ಬರುವ ಪಕ್ಷಿಗಳಲ್ಲಿ ಮುಖ್ಯವಾದವು.