ಜನನ : ೧೯೧೭ – ಗುಡಿಬಂಡೆ, ಕೋಲಾರ ಜಿಲ್ಲೆ

ಮನೆತನ : ವೈದಿಕ ಹಾಗೂ ಕಲಾವಿದರ ಮನೆತನ. ಮುತ್ತಾತ ಕಂದಾಳ ವೆಂಕಟಾಚಾರ್ಯ ಅವರು ಸಂಸ್ಕೃತ ಪಂಡಿತರಾಗಿದ್ದವರು. ತಂದೆ-ತಾಯಿ ಅಜ್ಜಿ ಎಲ್ಲರೂ ಸುಶ್ರಾವ್ಯವಾಗಿ ದೇವರನಾಮಗಳನ್ನು ಹಾಡುತ್ತಿದ್ದರು.

ಗುರುಪರಂಪರೆ : ಸ್ವಯಂ ಪ್ರತಿಭೆಯಿಂದ ಗಾಯನ ಕ್ಷೇತ್ರದಲ್ಲಿ ಮುಂದೆ ಬಂದವರು. ಒಮ್ಮೆ ದ.ರಾ. ಬೇಂದ್ರೆಯವರು ಚಿತ್ರದುರ್ಗಕ್ಕೆ ಬಂದಿದ್ದಾಗ ಅಲ್ಲಿ ಪ್ರಾರ್ಥನೆ ಮಾಡಿದ ರಾಮಾಚಾರ್ಯರ ಕಂಠ ಮಾಧುರ್ಯಕ್ಕೆ ಮನಸೋತು ಕನ್ನಡ ಗೀತೆಗಳನ್ನು ಹಾಡಲು ಪ್ರೇರೇಪಿಸಿದರು. ಸಿದ್ಧವನಹಳ್ಳಿ ಕೃಷ್ಣಶರ್ಮರ ಒತ್ತಾಸೆ. ಇದರ ಜೊತೆಗೆ ಭಾರತದ ಬಿಂದೂರಾಯರು, ಕೃಷ್ಣಗಿರಿ ಕೃಷ್ಣರಾಯರು ಹಾಗೂ ಕಳಲೆ ಸಂಪತ್ಕುಮಾರಾಚಾರ್ಯರ ಗಮಕ ವಾಚನದ ಪ್ರಭಾವ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿ ಕಾವ್ಯಗಾಯನದ ಕಡೆಯೂ ಒಲವು ಮೂಡಿತು.

ಸಾಧನೆ : ವ್ಯವಸಾಯ ಕ್ಷೇತ್ರದಲ್ಲಿ ಕೃಷಿ ವಿಜ್ಞಾನದ ಪದವಿ ಪಡೆದಿದ್ದರೂ ಇವರು ಮಾಡಿದ್ದು ಗಾಯನ ಕ್ಷೇತ್ರದಲ್ಲಿನ ಕೃಷಿ ಕನ್ನಡ ಭಾವಗೀತೆ, ಜನಪದಗೀತೆ, ಲಾವಣಿ, ರಗಳೆ, ಕಾವ್ಯ ವಾಚನ ಕ್ಷೇತ್ರಗಳನ್ನು ಪೋಷಿಸಿ ಬೆಳೆಸಿದವರು. ೧೯೩೮ ರಲ್ಲಿ ರಾಷ್ಟ್ರಕವಿ ಕುವೆಂಪುರವರ ’ದೋಣಿ ಸಾಗಲಿ’ ಕವನದೊಂದಿಗೆ ಇವರ ಕಾರ್ಯಕ್ರಮಾರಂಭ. ಅಲ್ಲಿಂದ ಇವರು ಹಿಂದಿರುಗಿ ನೋಡಿದವರಲ್ಲ ಪುಂಖಾನು ಪುಂಖವಾಗಿ ಕನ್ನಡ ಗೀತೆಗಳು, ಲಾವಣಿಗಳು ಇವರ ಕಂಠಶ್ರೀಯಿಂದ ಹೊರಬಂತು. ವರಕವಿ ಬೇಂದ್ರೆಯವರ ಗಂಗಾವತರ, ಹರಿಹರನ ಗುಂಡಯ್ಯನ ರಗಳೆ, ಪು.ತಿ.ನ. ರವರ ಗೋಕುಲ ನಿರ್ಗಮನ ಇವರ ಅಚ್ಚುಮೆಚ್ಚಿನ ಗೀತೆಗಳು. ತಾವೇ ಸೃಜಿಸಿದ ಮ್ಯಾಂಡೊಲಿನ್ ವಾದ್ಯದಲ್ಲಿ ಹಲವಾರು ವಾದ್ಯಗಳ ನಾದ ತುಂಬಿದ್ದಾರೆ.

ಆಡು ಮುಟ್ಟದ ಸೊಪ್ಪಿಲ್ಲ – ಆಕಳು ತುಳಿಯದ ಹಾದಿಯಿಲ್ಲ ಎಂಬ ಮಾತು ರಾಮಾಚಾರ್ಯರಿಗೆ ಅನ್ವರ್ಥ. ಇವರು ಹಾಡದ ವೇದಿಕೆಯಿಲ್ಲ ಕೇಳದ ಶ್ರೋತೃಗಳಿಲ್ಲ ಕಳೆದ ೪೦ ವರ್ಷಗಳಿಂದ ಧರ್ಮಸ್ಥಳದ ಸರ್ವಧರ್ಮ ಸಮ್ಮೇಳನಕ್ಕೆ ಇವರದೆ ಪ್ರಾರ್ಥನಾ ಗೀತೆ.

ಬಿಸ್ರಾ ಎಂಬ ಕಾವ್ಯನಾಮದಲ್ಲಿ ಅನೇಕ ವಿಚಾರಾತ್ಮಕ ವಿಡಂಬನಾತ್ಮಕ ಕವನಗಳನ್ನು ಪದ್ಯಕಾವ್ಯಗಳನ್ನು ರಚನೆ ಮಾಡಿದ್ದಾರೆ. ೯೦ರ ಹರಯದಲ್ಲೂ ಇವರ ಉತ್ಸಾಹ ಕುಗ್ಗಿಲ್ಲ – ಕಂಠದಲ್ಲಿ ಕಂಪನವಿಲ್ಲ.

ಪ್ರಶಸ್ತಿ – ಸನ್ಮಾನ : ಕೋಲಾರದಲ್ಲಿ ನಡೆದ ಜಿಲ್ಲಾ ಗಮನ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಗಮಕಕ್ಕಾಗಿ ಪ್ರಶಸ್ತಿ, ಕರ್ನಾಟಕ ಗಾನ ಕಲಾ ಪರಿಷತ್ತಿನ ಸಂಗೀತ ವಿದ್ವಾಂಸರ ಸಮ್ಮೇಳನದ ವಿದ್ವತ್ಗೋಷ್ಠಿಯಲ್ಲಿ ಸನ್ಮಾನ. ರಾಜ್ಯೋತ್ಸವ ಪ್ರಶಸ್ತಿ. ೨೦೦೧-೦೨ ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಇವರಿಗೆ ಸಂದಿದೆ.