೧೯೪೮ರಲ್ಲಿ ಅಂದಿನ ಪ್ರಜಾಮತ ಪತ್ರಿಕೆಯ ಉಪಸಂಪಾದಕರಾಗಿದ್ದ ಒಬ್ಬ ಆಜಾನುಬಾಹು, ಕನ್ನಡದ ಕವಿಗಳ ಗೀತೆಗಳನ್ನು  ಮಧುರವಾಗಿ ಹಾಡುತ್ತಾರೆ ಎಂಬ ಸುದ್ಧಿ ಉತ್ತರ ಕರ್ನಾಟಕದಿಂದ ಕೊಡಗಿನವರೆಗೆ ಅವರಿವರ ಬಾಯಿಂದ, ಕಿವಿಯಿಂದ ಕಿವಿಗೆ ಹಬ್ಬಿತ್ತು. ಅಂದು ಪ್ರಚಾರ ಮಾಧ್ಯಮಗಳಿರಲಿಲ್ಲ. ಆಕಾಶವಾಣಿಯೂ ಸಂಪೂರ್ಣವಾಗಿ ಅಸ್ತಿತ್ವದಲ್ಲಿರಲಿಲ್ಲ. ಒಬ್ಬ ಕಲಾವಿದ ತನ್ನ ಕಲಾಪ್ರದರ್ಶನ ಮಾಡಬೇಕಾದರೆ, ಆತ ಒಬ್ಬ ಅಲೆಮಾರಿಯಾಗಿ ತಿರುಗಬೇಕಾಗಿತ್ತು. ಅಂತಹ ಒಬ್ಬ ಸಂಗೀತದ ಅಲೆಮಾರಿ ಶ್ರೀ ಗುಡಿಬಂಡೆ ರಾಮಾಚಾರ್ಯರು. ಇವರ ತಮ್ಮ ದೈಹಿಕ ಆಕಾರಕ್ಕೆ ತಕ್ಕಂತೆ ಅಂದಿನ ಕಾಲದಲ್ಲಿ ಮಿಲಿಟರಿಯಲ್ಲೋ, ಪೊಲೀಸ್‌ ಇಲಾಖೆಯಲ್ಲೋ, ಉನ್ನತ ಹುದ್ದೆ ಪಡೆಯಬಹುದಿತ್ತು. ಆದರೆ ಇವರಿಗೆ ಸಿಕ್ಕಿದ ಕೆಲಸ ಬೇಸಾಯ ಹಾಗೂ ವ್ಯವಸಾಯ ಇಲಾಖೆಯಲ್ಲಿ ಮಾಸ್ತರ ಕೆಲಸ! ಅಲ್ಲಿಂದ ಮುಂದಕ್ಕೆ ಮಲೇರಿಯಾ ಇಲಾಖೆಯಲ್ಲಿ ಕೆಲಸ! ಸಂಗೀತದ ಗೀಳು ಹಿಡಿದಿದ್ದ ಈ ಅಲೆಮಾರಿಗೆ ಬೇಸಾಯ ಬೇಸರವಾಗಿ, ಮಲೇರಿಯಾ ಇಲಾಖೆಯಲ್ಲಿ “ಸೊಳ್ಳೆಗಳನ್ನ ಸಾಯಿಸೊ ಕೆಲಸ ಬೇಡಾಂತ” ಅದನ್ನು ಬಿಟ್ಟು ಹಿಡಿದದ್ದು “ತಾಳ ತಂಬೂರಿ”! ಅಲ್ಲಿಂದ ಇಲ್ಲಿಯವರೆಗೆ ಅವರಾಯಿತು ಅವರ ಸಂಗೀತವಾಯಿತು. ಕವಿಗಳ ಕವಿತಾ ವಾಹಿನಿಯನ್ನು ಮನೆಮನೆಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ, ಊರು ಊರುಗಳಲ್ಲಿ ಪಸರಿಸಿದ ಕೀರ್ತಿ ಮೊದಲಿಗೆ ಶ್ರೀ ರಾಮಾಚಾರ್ಯರಿಗೆ ಸಲ್ಲಬೇಕು. ಹಾಡುವುದನ್ನು  ಅನಿವಾರ್ಯ ಕಾಯಕ ಮಾಡಿಕೊಂಡು ಸುಗಮ ಸಂಗೀತದ ಮೊದಲ ಪಂಕ್ತಿಯ ಮೇರು ಗಾಯಕರಾಗಿ ಮೆರೆದಿದ್ದಾರೆ.

ಕೋಲಾರ ಜಿಲ್ಲೆಯ ಗುಡಿಬಂಡೆಯಲ್ಲಿ ತಾ. ೫-೯೦೧೯೧೧೭ರಂದು ಶ್ರೀಮತಿ ಸೀತಮ್ಮ ಬಂಗಾರ್ ಕಡಿಯಾಲ್‌ ಶ್ರೀನಿವಾಸಚಾರ್ಯ ದಂಪತಿಗಳ ಪುತ್ರರಾಗಿ ಜನಿಸಿದರು. ಮುತ್ತಾತ ಶ್ರೀ ಕಂದಾಳ ವೆಂಕಟಾಚಾರ್ಯರು ಸಂಸ್ಕೃತ ಪಂಡಿತರು. ಮುಮ್ಮಡಿ ಕೃಷ್ಣರಾಜ ಒಡೆಯರು ಇವರಿಗೆ ಬಂಗಾರದ ಕಡಗ ತೊಡಿಸಿ, ಒಂದು ಗ್ರಾಮವನ್ನೇ ಕೊಡುಗೆಯಾಗಿ ಕೊಟ್ಟಿದ್ದರು. ಇವರ ತಾಯಿ, ತಂದೆ, ಅಜ್ಜಿ, ತಾತ ಎಲ್ಲರೂ ಸಂಗೀತ ಬಲ್ಲವರಾಗಿದ್ದರು. ತ್ಯಾಗರಾಜರ ಕೃತಿಗಳು, ಭದ್ರಾಚಲ ರಾಮದಾಸರ ಕೃತಿಗಳು, ಜಯದೇವನ ಅಷ್ಟಪದಿಗಳು, ದಾಸರಪದಗಳು ಎಲ್ಲರ ಬಾಯಲ್ಲಿ ಗುನುಗುಟ್ಟುತ್ತಿದ್ದವು. ಹೀಗಾಗಿ ಆಚಾರ್ಯರಿಗೆ ಸಂಗೀತ ಹುಟ್ಟಿನಿಂದ ಬಂದ ಬಳುವಳಿ. ಸಂಗೀತ ವಿದ್ವಾನ್‌ ವೆಂಕೋಬಾಚಾರ್ಯರು ಇವರ ಮೊದಲ ಸಂಗೀತ ಗುರುಗಳು. ಅನಂತರ ಬೆಳಕವಾಡಿ ಶ್ರೀನಿವಾಸ ಐಯಂಗಾರ್ಯರಿಂದ ಹೆಚ್ಚಿನ ಶಿಕ್ಷಣ ಪಡೆದರು. ಸಂಗೀತದ ಜೊತೆಗೆ ಗಮಕದ ಬಗ್ಗೆ ವಿಶೇಷ ಆಕರ್ಷಣೆ ಹುಟ್ಟಿ, ಖ್ಯಾತ ಗಮಕಿಗಳಾದ ಬಿಂದೂರಾಯರು, ಕೃಷ್ಣಗಿರಿ ಕೃಷ್ಣರಾಯರು, ಕಳಲೆ ಸಂಪತ್ಕುಮಾರಾಚಾರ್ಯರು ಹಾಗೂ ಕೊಡಗಿನ ಮೈ.ಶೇ. ಅನಂತಪದ್ಮನಾಭರಾಯರ ಗಮಕ ವಾಚನ ಕೇಳಿ, ಪ್ರಭಾವಿತರಾಗಿ ಕಾವ್ಯಗಾಯನ ಕಲೆಯನ್ನು ರೂಢಿಸಿಕೊಂಡರು. ಎಷ್ಟೇ ಶಾಸ್ತ್ರೀಯ ಸಂಗೀತದ ಪರಿಶ್ರಮವಿದ್ದರೂ ರಾಮಾಚಾರ್ಯರ ಮನಸ್ಸನ್ನು ಸೂರೆಗೊಂಡದ್ದು ಕನ್ನಡ ಕವಿಗಳ ಆಧುನಿಕ ಗೀತೆಗಳು. ಆಗಿನ ಕಾಲದ ಲಘುಸಂಗೀತ ಪ್ರಕಾರವಾದ ಸಿನಿಮಾಪದ, ಜಾನಪದ ಹಾಡುಗಳು ಇವರಿಗೆ ಖುಷಿ ಕೊಟ್ಟಿದ್ದೆವು. ಅಂದಿನಿಂದ ಪ್ರಾರಂಭವಾಯಿತು ರಾಮಾಚಾರ್ಯರ ಗಾಯನ ಪ್ರತಿಭೆಯ  ಭೋರ್ಗರೆತ. ಕನ್ನಡದ ಕವಿಗಳ ಕಾವ್ಯ ಕಾವೇರಿಯ ಪ್ರವಾಹ.

ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಒಂದು ಕಾರ್ಯಕ್ರಮದಲ್ಲಿ ರಾಮಾಚಾರ್ಯರು ಪ್ರಾರ್ಥನೆ ಮಾಡಿದರು. ಅಲ್ಲಿ ಉಪಸ್ಥಿತರಿದ್ದ ವರಕವಿ ದ.ರಾ. ಬೇಂದ್ರೆಯವರು ಇವರ ಗಾಯನದ ಶೈಲಿಯನ್ನು ಕೇಳಿ ಮೂಕವಿಸ್ಮಿತರಾದರು. ಇವರ ಕಂಠ ಮಾಧುರ್ಯಕ್ಕೆ ಮನಸೋತರು. ಕನ್ನಡ ಗೀತೆಗಳನ್ನು ಹಾಡುವಂತೆ ಪ್ರೇರೇಪಿಸಿದರು. ವರಕವಿಗಳ ಆಶೀರ್ವಾದವೇ ಕನ್ನಡ ಸುಗಮಸಂಗೀತ ಕ್ಷೇತ್ರಕ್ಕೆ ವರವಾಗಿ ರಾಮಾಚಾರ್ಯರು ಒಬ್ಬ ಭಾವುಕ ಗಾಯಕರಾಗಿ ಹೊರಹೊಮ್ಮಿದರು. ಬೇಂದ್ರೆಯವರ ಗಂಗಾವತರಣವೇ ಇವರ ಗಾಯನ ಕಾರ್ಯಕ್ರಮದ ಮುಖ್ಯ ಆಕರ್ಷಣೆ. ಬಿಜಾಪುರದ ತೊರವೆ ನರಸಿಂಹದೇವರ ಗುಡಿಯಲ್ಲಿ ಕ್ಷಾಮಕಾಲದಲ್ಲಿ “ಇಳಿದು ಬಾ ತಾಯೆ ಇಳಿದು ಬಾ” ಹಾಡಿದಾಗ ಮಳೆಗರೆದು ಜನರು ರಾಮಾಚಾರ್ಯರಿಗೆ ಸುಗಮ ಸಂಗೀತದ ಖುಷ್ಯಶೃಂಗ ಎಂದು ಬಿರುದು ನೀಡಿದರು. ಧರ್ಮಸ್ಥಳದಲ್ಲಿ ನಡೆದ ಸರ್ವಧರ್ಮ ಸಾಹಿತ್ಯ ಸಮ್ಮೇಳನದಲ್ಲಿ ಬೇಂದ್ರೆಯವರ ಸಮ್ಮುಖದಲ್ಲೇ ಅವರ ಗಂಗಾವತರಣ ಹಾಡಿದಾಗ ಹದಿನೈದು ನಿಮಿಷ ಮಳೆ ಬಂದು ಕಾರ್ಯಕ್ರಮವನ್ನು ವಸಂತಮಹಲಿನಲ್ಲಿ ಮುಂದುವರೆಸಬೇಕಾಗಿ ಬಂತು. ಅಂದು ರಾಮಾಚಾರ್ಯರಿಗೆ ಎಲ್ಲರಿಂದಲೂ ಶಹಭಾಸ್‌ ಗಿರಿ. ಭಕ್ತಿಯಿಂದ ಹಾಡಿದಾಗ ಪ್ರಕೃತಿಯೂ ಓಗೊಡುವುದೆಂಬ ನಂಬಿಕೆ ರಾಮಾಚಾರ್ಯರನ್ನು ಕೈ ಬಿಡಲಿಲ್ಲ. ಇಲ್ಲಿಂದ ಮುಂದಕ್ಕೆ ಕಾವ್ಯಗಾಯನದತ್ತ ಹೆಚ್ಚು ಹೆಚ್ಚು ಮಾಡಿದಾಗ ಪ್ರಕೃತಿಯೂ ಓಗೊಡುವುದೆಂಬ ನಂಬಿಕೆ ರಾಮಾಚಾರ್ಯರನ್ನು ಕೈ ಬಿಡಲಿಲ್ಲ. ಇಲ್ಲಿಂದ ಮುಂದಕ್ಕೆ ಕಾವ್ಯಗಾಯನದತ್ತ ಹೆಚ್ಚು ಹೆಚ್ಚು ಒಲವುದೋರಿ ನೂರಾರು ಕವಿತೆಗಳಲ್ಲದೆ ಇಂದಿನ ಹಾಗು ಹಿಂದಿನ ಮಹಾಕವಿಗಳ ಕಾವ್ಯಗಳಿಗೆ ರಾಗ ಸಂಯೋಜನೆ ಮಡಿ ಜನಸಾಮಾನ್ಯರೆದುರು ಪ್ರಸ್ತುತಪಡಿಸುವ ಕೈಂಕರ್ಯವನ್ನು ಕೈಗೊಂಡರು.

ಇಂದು ಪ್ರಚಾರಮಾಧ್ಯಮಗಳಿವೆ. ಐವತ್ತು ವರ್ಷಗಳ ಹಿಂದೆ ಯಾವ ಯಾಂತ್ರಿಕ ಸೌಲಭ್ಯವೂ ಇಲ್ಲದ ದಿನಗಳು. ಕೌಟುಂಬಿಕ ಕಷ್ಟ ಕಾರ್ಪಣ್ಯದ ನಡುವೆ ಕಲಾವಿದನಾಗುವುದು ಸುಲಭದ ಮಾತಾಗಿರಲಿಲ್ಲ. ಶಾಸ್ತ್ರೀಯ ಸಂಗೀತದ ಮಡಿವಂತ ವಿದ್ವಾಂಸರ ವಕ್ರ ದೃಷ್ಟಿಯನ್ನು ಭೇದಿಸಿ ಸುಗಮ ಸಂಗೀತ, ಜಾನಪದ ಸಂಗೀತ ಗಾಯಕನಾಗುವುದು ಮುಳ್ಳಿನ ಹಾದಿಯಾಗಿತ್ತು. ಸರ್ಕಾರಿ ಹುದ್ದೆಯಲ್ಲಿ ರಾಮಾಚಾರ್ಯರು ಮುಂದುವರಿದಿದ್ದರೆ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾಗಬಹುದಿತ್ತು. ಆದರೆ ಇವರು ಹಿಡಿದದ್ದು ಕೈಲೊಂದು ಏಕನಾದ! ಕವನ, ಲಾವಣಿ ಕಟ್ಟಿ ಸಂಗೀತ ಸಾಧಕನಾಗುವ ಉನ್ಮಾದ. ಸ್ವಾತಂತ್ಯ್ರದ ಗೀತೆಗಳನ್ನು ಹಾಡುವ ಯೋಧನಾಗಿ, ಊರೂರು, ಹಳ್ಳಿ ಹಳ್ಳಿ, ಗಲ್ಲಿ ಗಲ್ಲಿಗಳಲ್ಲಿ ತತ್ವಪದಗಳನ್ನು  ಹಾಡುವ ದಾರ್ಶನಿಕವಾಗಿ ತಮ್ಮ ಜೀವನವನ್ನು ಯಾವ ಫಲಾಪೇಕ್ಷೆಯಿಲ್ಲದೆ ಹಾಡುವಿಕೆಗಾಗಿಯೇ ತೊಡಗಿಸಿಕೊಂಡ ನೈಜ ಕಲಾವಿದರು ರಾಮಾಚಾರ್ಯರು. ಇಂದಿನ ಕಲಾವಿದರಿಗೆ ಹೇರಳ ಹಣ ನೀಡುವ ಸಂಸ್ಥೆಗಳಿವೆ. ಪ್ರಾಯೋಜಕರಿರುತ್ತಾರೆ. ವಸತಿ ನೀಡುವ ಪಂಚತಾರ ಹೊಟೆಲುಗಳಿವೆ. ಉತ್ತಮ ಮಟ್ಟದ ಧ್ವನಿವರ್ಧಕಗಳಿರುತ್ತವೆ. ಕಾರ್ಯಕ್ರಮದ ಯಶಸ್ಸಿಗೆ ಕಲಾವಿದನ ಪ್ರಯತ್ನಕ್ಕಿಂತ ಯಂತ್ರಗಳೇ ಆ ಕೆಲಸ ಮಾಡಿ ಮುಗಿಸುತ್ತವೆ. ರಾಮಾಚಾರ್ಯರ ಕಾಲದಲ್ಲಿ ಅವರು ಕಾರ್ಯಕ್ರಮಕ್ಕೆ ಹೋದಾಗ ಅವರು ಅನುಭವಿಸಿದ ಕಷ್ಟ ಕಾರ್ಪಣ್ಯಗಳು ಅಷ್ಟಿಷ್ಟಲ್ಲ. ಹಳ್ಳಿಗಳ ಗ್ರಾಮ ಪಂಚಾಯಿತಿ ಜಗಲಿ ಮೇಲೆ ರಾತ್ರಿಗಳನ್ನು ಕಳೆದದ್ದುಂಟು. ಸಸ್ಯಾಹಾರಿ ಹಾಗೂ ಸಂಪ್ರದಾಯಸ್ಥರಾದ ಇವರಿಗೆ ಬೇಕಾದ ಆಹಾರ ಸಿಗದೆ, ಹಣ್ಣು ಹಂಪಲುಗಳನ್ನೇ ಸರಸ್ವತಿ ಪ್ರಸಾದ ಎಂದು ತಿಂದು ನೀರು ಕುಡಿದು ಮಲಗಿದ ದಿನಗಳುಂಟು. ಸಂಭಾವನೆಯ ಪ್ರತಿಫಲಾಪೇಕ್ಷೆ, ಮುಂದಿನ ಊರಿಗೆ ಹೋಗುವಷ್ಟು ಬಸ್‌ ಚಾರ್ಜ್ ಸಿಕ್ಕಿದರೆ ಸಾಕು ಎನ್ನುವಷ್ಟು ಮಾತ್ರ!.

ಹುಬ್ಬಳ್ಳಿಯಲ್ಲೊಮ್ಮೆ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದ ಶ್ರೀ ಮೊಹರೆ ಹಣಮಂತರಾಯರ ಮನೆಯಲ್ಲಿ ಗಾಯನ ಕಾರ್ಯಕ್ರಮ ನೀಡುವ ಉತ್ಸಾಹದಲ್ಲಿ ತಮ್ಮ ಮೊದಲ ಮಗುವಿನ ನಾಮಕರಣ ಮಹೋತ್ಸವ ಎಂಬುದನ್ನು ಮರೆತು ಕುಟುಂಬದವರ ಅವಕೃಪೆಗೆ ಪಾತ್ರರಾದರು.

ಮಡಿಕೇರಿಯಲ್ಲೊಮ್ಮೆ ಕಾರ್ಯಕ್ರಮ ನೀಡುವ ಸಲುವಾಗಿ ಅವರು ಕೆಲಸ ಮಾಡುತ್ತಿದ್ದ ಪ್ರಜಾಮತ ಸಂಸ್ಥೆಯ ಅಧಿಕಾರಿಗೆ ರಜೆ ಅರ್ಜಿ ಸಲ್ಲಿಸಿದರು. ಆ ಅಧಿಕಾರಿ ರಜೆ ಮಂಜೂರು ಮಾಡಲಿಲ್ಲ. ಆದರೆ ಈ ಹಠಮಾರಿ ಗಾಯಕನೂ ಬಗ್ಗಲಿಲ್ಲ! ರಾಜಿನಾಮೆ ನೀಡಿ ಮಡಿಕೇರಿಗೆ ಧಾವಿಸಿ ಮೈ ಮರೆತು ಹಾಡಿದರು. ಯಾಕೆ ಬೇಕಾಗಿತ್ತು . ಈ ಸಂಗೀತದ ಹುಚ್ಚು ಎಂದು ಮೂಗುಮುರಿದಿದ್ದವರೇ ಬಹಳ ಮಂದಿ. ಸರ್ಕಾರಿ ನೌಕರಿ ಬಿಟ್ಟು, ಕವನ, ಲಾವಣಿ, ತತ್ವಪದ, ಗಮಕ, ಇವುಗಳನ್ನು ಹಾಡುವುದಲ್ಲದೆ, ಪಿಟೀಲು, ಮ್ಯಾಂಡೊಲಿನ್‌, ಬಾರಿಸುತ್ತ ಅಲೆಮಾರಿಯಾಗಿದ್ದು, ಯಾವುದರಲ್ಲೂ ಪಾಂಡಿತ್ಯ ಪಡೆಯಲಾಗದೆ, ಸಂಸಾರದ ಬಂಧುಗಳೊಂದಿಗೆ ವೈಷಮ್ಯ ಕಟ್ಟಿಕೊಂಡು  ನಿರಾಶರಾದಾಗ ಜಾತಕ ತೋರಿಸಿ ಅವಲಕ್ಷಣ ಎನ್ನಿಸಿಕೊಂಡದ್ದೂ ಆಯಿತು. ಆ ಜ್ಯೋತಿಷಿ ಹೇಳಿದನಂತೆ, ಇಲ್ಲಿನ “ಗುರು ಪಾಪಿ” ಯಾವುದರಲ್ಲೂ ಏಳಿಗೆ ಇಲ್ಲ. ಅದಕ್ಕೆ ಹೀಗೆ. “ಬುಧ, ಶುಕ್ರರ ಯೋಗದಿಂದ ಸ್ವಲ್ಪ ಗಂಧರ್ವ ಅಂಶ ಬಂದಿದೆ ಅಷ್ಟೆ! ಇವನನ್ನು ಅವನ ಪಾಡಿಗೆ ಬಿಟ್ಟುಬಿಡಿ ಅಂತ!”

ಆದರೆ ಆ ವೇಳೆಗಾಗಲೇ ರಾಮಾಚಾರ್ಯರು ಅವರಿಗೆ ತಿಳಿಯದಂತೆ ಕವಿ, ಗಮಕಿ, ವಾದಿ, ವಾಗ್ಮಿ ಎಲ್ಲವೂ ಆಗಿಬಿಟ್ಟಿದ್ದರು. ಅವರಿಗೆ ದೊರೆಯಬೇಕಾಗಿದ್ದ ಸ್ಥಾನಮಾನಗಳು ದೊರೆತಿರಲಿಲ್ಲ ಅಷ್ಟೆ. ಆಕಾಶವಾಣಿ ಕಾರ್ಯಕ್ರಮಕ್ಕೆ ಸಿಗುತ್ತಿದ್ದ ಸಂಭಾವನೆ ಕೇವಲ ೨೫ ರೂ ಮಾತ್ರ. ಭಾರತ ಸರ್ಕಾರದ ಪ್ರಚಾರ ಇಲಾಖೆಯ ವತಿಯಿಂದ ಕುಟುಂಬ ಯೋಜನೆ, ಉಳಿತಾಯ ಯೋಜನೆ ಮುಂತಾದ, ಪ್ರಚಾರ ಗೀತೆಗಳನ್ನು ಇಷ್ಟವಿಲ್ಲದಿದ್ದರೂ ಹೊಟ್ಟೆ ಪಾಡಿಗೆ ಹಾಡಬೇಕಾದಂತಹ ಸಂದಿಗ್ಧ ಪರಿಸ್ಥಿತಿ. ರಾಮಾಚಾರ್ಯರು ಮಾತ್ರ ಆ ಪ್ರಚಾರ ಇಲಾಖೆಗೆ ಎರಡು ಬಗೆಯದೆ ತಮ್ಮ ನಿಸ್ಪೃಹ ಸೇವೆಯನ್ನು ಮುಡಿಪಾಗಿಟ್ಟರು.

ಇಡೀ ಭಾರತದೇಶ ಸುತ್ತಿದರು. ಸಿಗುತ್ತಿದ್ದ ೫೦ ರೂ ಸಂಭಾವನೆ ಕೇವಲ ಶೃತಿಪೆಟ್ಟಿಗೆ, ತಾಳಕ್ಕೆ ದಮ್ಮಡಿ ಅಷ್ಟೆ. ಪ್ರಚಾರ ಇಲಾಖೆಯ ಕಾರ್ಯಕ್ರಮದ ಜೊತೆಯಲ್ಲಿ ರಾಮಾಚಾರ್ಯರು ತಾವು ಹೋದ ಕಡೆಯೆಲ್ಲ ಅಲ್ಲಿನ ಸ್ಥಳೀಯ ಕವಿಗಳು , ವಿದ್ವಾಂಶರ ಮನೆಗಳಿಗೆ ಹೋಗಿ ಅವರನ್ನು ಭೇಟಿ ಮಾಡುವ ಲಾಭ ಪಡೆದು, ಅವರ ಆತ್ಮೀಯತೆಯನ್ನು ಗಳಿಸಿಕೊಂಡು ಪರೋಕ್ಷವಾಗಿ ತಮ್ಮನ್ನು ತಾವೇ ಬೆಳೆಸಿಕೊಂಡರು.

ಹೀಗೆ ಪ್ರಾರಂಭವಾಯಿತು ಅವರ ಸಂಗೀತ ಯಾತ್ರೆ. ಈ ಯಾತ್ರೆಯಲ್ಲಿ ಅವರು ಸಾಹಿತ್ಯ ಹಾಗೂ ಸಂಗೀತದ ದಿಗ್ಗಜಗಳ ಒಡನಾಟದಲ್ಲಿ ಗಳಿಸಿದ್ದೇ ಹೆಚ್ಚು. ಆಯಾ ಜಿಲ್ಲೆಯ, ಆಯಾ ಪ್ರಾಂತ್ಯದ ಸಾಹಿತಿಗಳು, ಸಂಗೀತಗಾರರು ಇವರ ಆತ್ಮೀಯರಾದರು. ಅವರ ಈ ಸಂಗೀತ ಯಾತ್ರೆಯಲ್ಲಿ ರಾಮಾಚಾರ್ಯರನ್ನು ಅಕ್ಕರೆಯಿಂದ ಕಂಡ ಜಿಲ್ಲೆ ಕೊಡಗು. ಮಡಿಕೇರಿ ಕರ್ನಾಟಕ ಸಂಘದ ವಾರ್ಷಿಕೋತ್ಸವದಲ್ಲಿ ಕೊಡಗಿನ ಅಂದಿನ ಪ್ರಖ್ಯಾತ ಗಮಕಿ, ಕವಿಗಳಾಗಿದ್ದ ಶ್ರೀ.  ಮೈ.ಶೇ. ಅನಂತಪದ್ಮನಾಭರಾಯರು ೧೯೪೮ರಲ್ಲಿ ರಾಮಾಚಾರ್ಯರ ಕಾರ್ಯಕ್ರಮವನ್ನು ಏರ್ಪಡಿಸಿದರು. ಅದರ ಪರಿಣಾಮ ಸತತವಾಗಿ ಇಪ್ಪತ್ತು ವರ್ಷ ಇವರ ಕಾರ್ಯಕ್ರಮ ಮಡಿಕೇರಿಯಲ್ಲಿ ನಡೆಯಿತು. ರಾಮಾಚಾರ್ಯರು, ಅನಂತಪದ್ಮನಾಭರಾಯರ ಕೌಟುಂಬಿಕ ಅತಿಥಿಗಳಷ್ಟೇ ಅಲ್ಲದೆ ಕಲಾ ಬಂಧುಗಳೂ ಆಗಿ ಬಿಟ್ಟಿದ್ದರು . ಕುವೆಂಪುರವರ “ದೋಣಿ ಸಾಗಲಿ”, ಜಿ.ಎಸ್‌. ಶಿವರುದ್ರಪ್ಪನವರ”ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ” ಹಾಗೂ “ಜೀವ ಜಾತ್ರೆಯಲ್ಲಿ ಪ್ರಾಣ ಪಾತ್ರೆಯಲಿ”, ಗುಂಡಯ್ಯನ ರಗಳೆಯ “ಆಡಿದನಾಡಿದನಾಹಶಂಕರ”, ಮುಂತಾದ ಗೀತೆಗಳನ್ನು ಇವರು ಹಾಡುತ್ತಿದ್ದ ಶೈಲಿ, ಭಾವುಕತೆ, ಕೊಡಗಿನ ಉಕ್ಕಿನೆದೆಯ ಸಿಪಾಯಿಗಳ ಹೃದಯವನ್ನು ಕರಗಿಸುತ್ತಿತ್ತು. ಇವರೇ ಸ್ವತಃ ರಚನೆ ಮಾಡಿದ “ನೋಡು ಕುಣಿದು ಬರುತಲಿಹಳು ಕೊಡಗ ತನ್ನ ಕಾವೇರಿ” ಎಂಬ ಗೀತೆ ಕೊಡಗಿನಲ್ಲಿ ಇಂದೂ ಸುಪ್ರಸಿದ್ಧ. ಇವರ ಗಾಯನದ ಶೈಲಿಗೆ ಮಾರುಹೋದವರಲ್ಲಿ ನಾನು ಒಬ್ಬ. ರಾಮಾಚಾರ್ಯರು ಸ್ವತಃ ಶಿಷ್ಯರನ್ನು ತಯಾರುಮಾಡಿಲ್ಲದಿದ್ದರೂ, ತಮ್ಮ ಗಾಯನದ ಪ್ರಭಾವದಿಂದ ನನ್ನಂಥಹ ನೂರಾರು ಜನರ ಮನಸ್ಸನ್ನು ಭಾವಗೀತಾ ಪ್ರಪಂಚಕ್ಕೆ ಸೆಳೆದೊಯ್ಡು ತಾವಾಗಿಯೇ ಹಾಡುವ ಸದಭಿರುಚಿಯನ್ನು  ಬೆಳೆಸಿಕೊಳ್ಳುವಂತೆ ಪ್ರೇರಪಿಸಿದ್ದಾರೆ.

ಒಮ್ಮೆ ಕಾಸರಗೋಡು ಸಾಹಿತ್ಯ ಸಮ್ಮೇಳನದಲ್ಲಿ ಶ್ರೀಧರ ಕಕ್ಕಿಲಾಯರ ಮನೆಯಲ್ಲಿ ರಾತ್ರಿ ಒಂದು ಗಂಟೆಯವರೆಗೆ ಹಾಡುತ್ತಾ ಕುಳಿತರು . ಕಕ್ಕಿಲಾಯರವರದ್ದೇ ಪಿಟೀಲು. ಶೋತೃಗಳ  ಸಂಖ್ಯೆ ಕಡಿಮೆಯಿದ್ದರೂ ಸಭೆಗೆ ತೂಕವಿತ್ತು. ಕಾರಣ ಅಲ್ಲಿ ಪತ್ರಿಕಾ ಪ್ರಪಂಚದ ಭೀಷ್, ಪ್ರಸಿದ್ಧ ಸಾಹಿತಿ ಶ್ರೀ. ತಿರುಮಲೆ ತಾತಾಚಾರ್ಯ ಶರ್ಮರು ಉಪಸ್ಥಿತರಿದ್ದರು!

ಮುಂಬಯಿಯಲ್ಲಿ ಅಮೆರಿಕನ್‌ ಎಂಬೆಸಿಗೆ ಹೋಗಿ ಪು.ತಿ.ನ ರವರ “ಬಾನ್‌ ತಿಳಿದಿತ್ತು” ಗೀತೆಯನ್ನು ಪಾಶ್ಚಾತ್ಯ ಶೈಲಿಯಲ್ಲಿ ಹಾಡಿ ಅಪಾರ ಮೆಚ್ಚುಗೆ ಪಡೆದರು. ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದವರು ಅವರ ಆಪ್ತ ಗೆಳೆಯ, ಸುಪ್ರಸಿದ್ಧ ಪತ್ರಿಕೋದ್ಯಮಿ ಹೆಚ್‌.ವೈ. ಶಾರದಾಪ್ರಸಾದ್‌.

ಸೊಲ್ಲಾಪುರದಲ್ಲಿ ಸುಪ್ರಸಿದ್ಧ ಸಾಹಿತಿ ಶ್ರೀಮತಿ ಶ್ರೀಮತಿ ಜಯದೇವಿ ಲಿಗಾಡೆ ಅವರ ಮನೆಯಲ್ಲಿ ಒಂದು ಸಂಜೆ ಪೂರ್ತಿ ಇವರ ಗಾಯನ. ಜನ ಎಷ್ಟು ಸೇರಿದ್ದರೆಂದರೆ, ಅಂದು ರಾಮಾಚಾರ್ಯರ ಚಪ್ಪಲಿ ಕಳೆದು ಹೋಯಿತು! ಶ್ರೀಮತಿ ಜಯದೇವಿಯವರು ಬಲವಂತವಗಿ ಹೊಸ ಚಪ್ಪಲಿ ತೆಗೆಸಿಕೊಟ್ಟರು ಎಂದು ಹೇಳುತ್ತಾ ನಗುವಾಗ ರಾಮಾಚಾರ್ಯರ ಮುಖದಲ್ಲಿ ಭಾವುಕತೆ ಗೋಚರವಾಗುತ್ತದೆ.

ಪುಣೆಯಲ್ಲೊಮ್ಮೆ ಮಲಯಾಳಿ ಸಂಘದವರು ಓಣಂ ಹಬ್ಬಕ್ಕೆ ಇವರನ್ನು ಅತಿಥಿಯಾಗಿ ಕರೆಸಿದಾಗ ಕನ್ನಡ ಗೀತೆಗಳ ಜೊತೆ ಮಲಯಾಳಂ ಹಾಡುಗಳನ್ನು ಹಾಡಿದಾಗ ಇವರಿಗೆ ಖಾದಿ ಜುಬ್ಬವೊಂದನ್ನು ನೀಡಿ ದೇಶದ ಕಲಾ ಪ್ರತಿನಿಧಿಗೆ ತಕ್ಕ ಸನ್ಮಾನ ಮಾಡಿದರಂತೆ. ಇದನ್ನು ತಿಳಿದ ಅಲ್ಲೆ ಇದ್ದ ವರಕವಿ ಬೇಂದ್ರೆಯವರು ಮರಾಠಿ ಸಂಘಕ್ಕೂ ಕರೆದೊಯ್ದು ಮರಾಠಿ ಸಂಘದಲ್ಲಿ ಕನ್ನಡದ ಹಾಡನ್ನು ಹಾಡಿಸಿ ತೃಪ್ತಿಪಟ್ಟರಂತೆ.

ದೆಹಲಿಯ ಅಖಿಲ ಭಾರತ ರೈತ ಸಮ್ಮೇಳನದಲ್ಲಿ ರವೀಂದ್ರನಾಥ ಠಾಕೂರರ ಗೀತೆ, “ಅಂತರಮಮ ವಿಕಸಿತಕರೋ ಅಂತರ ತರಹೇ” ಕವಿತೆಯನ್ನು ರವೀಂದ್ರ ಸಂಗೀತದ ಶೈಲಿಯಲ್ಲಿ ಹಾಡಿದಾಗ ನೆರೆದಿದ್ದವರ ಮೈ ರೋಮಾಂಚನಗೊಂಡಿತು.

ಕಲ್ಕತ್ತೆಯಲ್ಲಿ ಗೌಡೀಯ ಮಠಕ್ಕೆ ಹೋಗಿ ಗೀತಗೋವಿಂದ ಹಾಡಿದರು. ಅಲ್ಲಿಂದ ಯಾರದೊ ಜೊತೆ ಮಾಡಿಕೊಂಡು ಅಂದಿನ ಸುಪ್ರಸಿದ್ಧ ಸಂಗೀತ ನಿರ್ದೇಶಕ-ಗಾಯಕ ಪಂಕಜ್‌ ಮಲ್ಲಿಕ್‌ರವರ ಮನೆಗೆ ಹೋಗಿ ಅವರ ಪರಿಚಯಮಾಡಿಕೊಂಡು ಅವರಿಂದ ಭಕ್ತಿಗೀತೆ ಹಾಡಿಸಿ ಅವರ ಮುಂದೆ ತಾವೊಂದು ಬಂಗಾಲಿ ಹಾಡನ್ನು ಹಾಡಿ ಮೆಚ್ಚುಗೆ ಗಳಿಸಿದರು. ಅಲ್ಲೆ ಇದ್ದ ಮತ್ತೊಬ್ಬ ಹೆಸರಾಂತ ಜಾನಪದ ಗಾಯಕ ಭೂಪೆನ್‌ ಹಜಾರಿಕಾಗೆ (ದಾದಾಸಾಹೇಬ್‌ ಪ್ರಶಸ್ತಿ ವಿಜೇತ) ಕನ್ನಡದ ಜಾನಪದ ಗೀತೆಯೊಂದನ್ನು ಹೇಳಿಕೊಟ್ಟು ಬಂದ ರಾಮಾಚಾರ್ಯರ ಸಾಹಸ ಮೆಚ್ಚದಿರಲಾದೀತೆ? ಯಾವ ಪ್ರತಿಫಲಾಪೇಕ್ಷೆಯಿಲ್ಲದೆ ಒಬ್ಬ ಸಂಗೀತ ಗಾಯಕ ಇಡೀ ದೇಶದಲ್ಲಿ, ಮನೆ ಮಠಗಳನ್ನು ಮರೆತು, ಕನ್ನಡದ ಕಹಳೆಯನ್ನು ಊದಿದ್ದಾರೆಂದರೆ ನಂಬುವುದೇ ಕಷ್ಟ! ಇಂಥಹ ಒಬ್ಬ ಅಪೂರ್ವ ಗಾಯಕರನ್ನು ಸಂಗೀತದ ಅಲೆಮಾರಿ ಎಂದು ಕರೆಯುವುದು ಖಂಡಿತಾ ಸಲ್ಲ. ಈತ ಓರ್ವ ಸಂಗೀತ ಕ್ಷೇತ್ರದ ಹಠಯೋಗಿ ಎಂದು ಕರೆಯುವುದೇ ಸೂಕ್ತ!

ರಾಮಾಚಾರ್ಯರ ಕಾರ್ಯಕ್ರಮದಲ್ಲಿ ಮತ್ತೊಂದು ವೈಶಿಷ್ಯ್ಟವೆಂದರೆ ಬೇರೆ ಪ್ರಾಂತ್ಯಗಳಲ್ಲಿ ಕಾರ್ಯಕ್ರಮ ನೀಡುವಾಗ ಅಲ್ಲಿಯ ಭಾಷೆಯ ಹಾಡುಗಳನ್ನು  ಮಧ್ಯೆ ಹಾಡುತ್ತಿದ್ದುದು. ಇದರಿಂದ ಅಲ್ಲಿಯ ಶೋತೃಗಳಿಗೆ ಮಹದಾನಂದವಾಗುತ್ತದೆ ಎಂಬುದು ಅವರು ಕಂಡುಕೊಂಡ ಗುಟ್ಟು. ಒಮ್ಮೆ ವಿಜಯವಾಡದಲ್ಲಿ ಹಾಡುವಾಗ ತೆಲುಗು ಜನಪದ ಗೀತೆಯೊಂದನ್ನು  ಹಾಡಿದಾಗ ಅಲ್ಲಿಯೇ ಉಪಸ್ಥಿತರಿದ್ದ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಶ್ರೀ ವಿಶ್ವನಾಥ ಸತ್ಯನಾರಾಯಣರು ಸಂತೋಷಗೊಂಡು ಕೊನೆಯವರೆವಿಗೂ ಕನ್ನಡದ ಹಾಡನ್ನು ಸಹ ಕೇಳಿ ಆನಂದಪಟ್ಟರಂತೆ.

ರಾಮಾಚಾರ್ಯರು ಕೇವಲ ಸುಗಮಸಂಗೀತ ಗಾಯಕರು ಮಾತ್ರವಲ್ಲ. ಗಮಕಿಗಳೂ ಕೂಡ. ರಾಮಾಚಾರ್ಯರ ಜೀವ ಸುಗಮಸಂಗೀತಕ್ಕಾಗಿ ತುಡಿಯುತ್ತಿದ್ದರೂ ಅದು ಹೇಗೋ ಗಮಕವೂ ಅಂಟಿಕೊಂಡಿತು. ಇದು ಅವರಿಗೆ ದೇವರು ಕೊಟ್ಟ ವರವೆಂದೇ ಹೇಳಬೇಕು. ಯಾಕೆಂದರೆ ಮೊದಲು ರಾಮಾಚಾರ್ಯರಿಗೆ ಪ್ರಶಸ್ತಿ ತಂದುಕೊಟ್ಟದ್ದು ಗಮಕ (ಸಾಹಿತ್ಯ ಅಕಾಡೆಮಿ ಹಾಗೂ ರಾಜ್ಯ ಪ್ರಶಸ್ತಿ). ಸುಗಮಕ್ಷೇತ್ರದ ಗಾಯಕನಿಗೆ ಗಮಕ ಪ್ರಶಸ್ತಿ ಸಿಕ್ಕಾಗ ಅನೇಕ ಗಮಕಿಗಳು ಹುಬ್ಬೇರಿಸಿದ್ದೂ ಉಂಟು! ರಾಮಾಚಾರ್ಯರ ಪ್ರಕಾರ ಕವನ, ಕಾವ್ಯಗಳು ಸಾಹಿತ್ಯವೆಂಬ ಒಂದೇ ನಾಣ್ಯದ ಎರಡು ಮುಖಗಳು. ರಾಮಾಚಾರ್ಯರು ಎಲ್ಲೇ ಕಾರ್ಯಕ್ರಮ ನೀಡಿದರೂ ಅಲ್ಲಿ ಗಮಕಕ್ಕೂ ಅವರು ಪ್ರಾಶಸ್ತ್ಯ ನೀಡುತ್ತಿದ್ದರು. ಅವರದೇ ಆದ ಶೈಲಿಯಲ್ಲಿ ಕಾವ್ಯವಾಚನ ಮಾಡುತ್ತಿದ್ದರು. ವ್ಯಾಖ್ಯಾನ ಗಮಕಿಯ ವಾಚನಕ್ಕೊಂದು  ರಸಭಂಗ ಅಂಗ ಎಂಬುದು ಇವರ ಪ್ರಬಲವಾದ. ಬೇರೆ ಭಾಷೆಯ ಕಾವ್ಯಗಳನ್ನೂ ಅಭ್ಯಸಿಸಿ ವಾಚನ ಮಾಡಬಹುದೆಂಬ ನಿಲುವು ಇವರದು. ಬರೀ ಕನ್ನಡದ ಕುಮಾರವ್ಯಾಸನ ಭಾರತದ ಗಮಕಿಯಾಗದೆ ಸಮಗ್ರ ಭಾರತದ ಗಮಕಿಯಾಗುವ ಬಯಕೆಯೂ ಕೂಡ ಇತ್ತು. ಹರಿಹರನ ರಗಳೆ, ಕುಮಾರವ್ಯಾಸ ಭಾರತ, ಹರಿಶ್ಚಂದ್ರ ಕಾವ್ಯ ಇವರ ಮೆಚ್ಚಿನ ಕಾವ್ಯಗಳು.  ಕೈವಾರದಲ್ಲಿ ನಡೆದ ಜಿಲ್ಲಾಮಟ್ಟದ ಗಮಕ ಸಮ್ಮೇಳನದ ಅಧ್ಯಕ್ಷರಾಗಿ ಇವರನ್ನು ಸನ್ಮಾನಿಸಲಾಯಿತು.

ರಾಮಾಚಾರ್ಯರು ಗಮಕಿ, ಗಾಯಕರಷ್ಟೇ ಅಲ್ಲ. ಇವರು ಬಹಳ ಸರಸಿ, ಸದಾ ಹಸನ್ಮುಖಿ, ಹಾಸ್ಯಪ್ರಿಯ, ಅಂತೆಯೆ ಹಾಸ್ಯ ಬರಹಗಾರರು ಕೂಡ. ಸಾಹಿತಿಯಾಗಿಯೂ ಇವರ ಕನ್ನಡ ಸೇವೆ ಅನುಪಮ. ಕೊರವಂಜಿ ಹಾಸ್ಯ ಪತ್ರಿಕೆಯಲ್ಲಿ ಬೀ.ಸ್ರಾ ಎಂಬ ಹೆಸರಿನಲ್ಲಿ ಅನೇಕ ಅಣಕು ಗೀತೆಗಳು ಪ್ರಕಟವಾಗಿವೆ. ಸ್ವಾತಂತ್ಯ್ರ ಕಿನ್ನರಿ, ಮಧುಚಂದನ, ಮಂಜುಭಾಷಿಣಿ ಮುಂತಾದ ಕಿರುಹೊತ್ತಿಗೆಗಳನ್ನು ಹೊರತಂದಿದ್ದಾರೆ. ಜಯದೇವನ ಗೀತಗೋವಿಂದ, ಹಾಗೂ ತಮಿಳಿನ ತಿರುಕ್ಕುರುಳ್ಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಶಾಸ್ತ್ರೀಯ ಸಂಗೀತಕ್ಕಾಗಿ ಸುಮಾರು ನೂರು ಕೃತಿಗಳನ್ನು ರಚನೆ ಮಾಡಿದ್ದಾರೆ.

ವರಕವಿ ಬೇಂದ್ರೆಯವರಿಂದ ಪ್ರಚೋದಿತರಾಗಿ, ಸಿದ್ಧವನಹಳ್ಳಿ ಕೃಷ್ಣಶರ್ಮರಿಂದ ದೀಕ್ಷೆ ಪಡೆದು, ಮಾಸ್ತಿ, ತೀ.ನಂ.ಶ್ರೀ, ಪು.ತಿ.ನ. ಕುವೆಂಪು, ಗೋಕಾಕ್‌, ಅಡಿಗ, ನರಸಿಂಹಸ್ವಾಮಿ, ವೀ.ಸೀ. ಇಂಥವರ ಒಡನಾಟದಲ್ಲಿ ಬೆಳೆದ ೮೫ ವರ್ಷ ವಯಸ್ಸಿನ ವಯೋವೃದ್ಧ, ಸುಗಮ ಸಂಗೀತ ಕ್ಷೇತ್ರದ ಭೀಷ್ಮರಾಗಿರುವ ಗಾಯಕ ಗುಡಿಬಂಡೆ ರಾಮಾಚಾರ್ಯರು ಇಂದು ನಮ್ಮೊಡನಿದ್ದಾರೆಂಬುದೇ ನಮಗೆ ಹೆಮ್ಮೆ. ಇವರ ಸುಗಮ ಸಂಗೀತ ಕ್ಷೇತ್ರದ ಸೇವೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೦೨ರ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಯನ್ನು ನೀಡಿ ಗೌರವಿಸಿದೆ.

ತಮ್ಮ ಒಕ್ಕಲುತನದ ಓದು ವ್ಯರ್ಥವಾಯಿತು, ನೌಕರಿಬಿಟ್ಟು ಕಲಾವಿಲಾಸಿಯಾದೆ. ಕುಟುಂಬದ ಹೊಣೆಯನ್ನು ನನ್ನ ಚಿಕ್ಕಪ್ಪ ಹಾಗೂ ನನ್ನ ಅತ್ತೆ ಮಾವನ ತಲೆಗೆ ಕಟ್ಟಿ, ನಾನು ಯಾವ ಜವಾಬ್ದಾರಿಯನ್ನು ತೆಗೆದುಕೊಳ್ಳದೆ ಸೋಮಾರಿಯಾಗಿ, ಅಲೆಮಾರಿಯಾಗಿ, ಬೇಜವಾಬ್ದಾರಿಯ ಆಸಾಮಿಯಾದೆ ಎಂಬ ಕೊರಗಿನಿಂದ ನೊಂದಿರುವ ಆಚಾರ್ಯರು, ಇವರೆಲ್ಲರನ್ನೂ ಕೃತಜ್ಞತೆಯಿಂಧ ನೆನೆಯುತ್ತಾರೆ. ಶ್ರೀ ಗುಡಿಬಂಡೆ ರಾಮಾಚಾರ್ಯರು ಸ್ವಯಂ ಅಚಾರ್ಯರು. ಆಕಳು ತುಳಿಯದ ಹಾದಿಯಿಲ್ಲ, ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಗಾದೆ ಇವರಿಗೆ ಅನ್ವರ್ಥ. ಇವರು ಹಾಡದ ವೇದಿಕೆ ಇಲ್ಲ ಕೇಳದ ಶ್ರೋತೃಗಳಿಲ್ಲ. ಈ ಪ್ರಪಂಚದ ಪ್ರತಿಯೊಬ್ಬನೂ ಸಂಸಾರವೆಂಬ ಸರ್ಪಕ್ಕೆ ಸಿಕ್ಕಿ ಬಿಡಿಸಿಕೊಳ್ಳಲಾಗದೆ ಹೆಣಗಾಡುವುದನ್ನು ಕಾಣುತ್ತೇವೆ. ಅದನ್ನು ಮೆಟ್ಟಿನಿಂತು ತನ್ನ ಕಲಾಸೇವೆಯನ್ನು ಕೈ ಕೊಂಡು ತಾನೂ ಬೆಳೆದು ಸಂಗೀತವನ್ನೂ, ಸಾಹಿತ್ಯವನ್ನೂ, ಬೆಳೆಸಿ ಪ್ರಶಸ್ತಿಗಳಿಗೆ ಪಾತ್ರರಾದ ರಾಮಾಚಾರ್ಯರ ಆಳಲಿಗೆ ಕಾರಣ ಹುಡುಕುವುದು ಅನವಶ್ಯಕ. ಪು.ತಿ.ನ ರವರ ಕೃಷ್ಣನ ಕೊಳಲಿನ ಕರೆ ಕೇಳುತ್ತಾ ಪಕ್ಕದ ಗಂಡನನ್ನೇ ಮರೆಯಬಹುದಾದರೆ, ಕುವೆಂಪುರವರು ಕರೆಯಿತ್ತ ಹಾಗೆ ಕನ್ನಡದ ಡಿಂಡಿಮವನ್ನು ಬಾರಿಸಬೇಕಾದರೆ, ನಿಸ್ಸಾರ್ ಅಹಮದ್‌ ಹೇಳುವಂತೆ ನಾದವಿರದ ಬದುಕಿಗೆ ಉನ್ಮಾದ ಕೋರದಿರಬೇಕಾದರೆ, ಅಡಿಗರು ಹೇಳುವಂತೆ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ-ಇವೆಲ್ಲವನ್ನು ರಾಮಾಚಾರ್ಯರು ತಮಗರಿವಿಲ್ಲದಂತೆ ಅನ್ವರ್ಥವಾಗಿಸಿದ್ದಾರೆ. ಡಾ. ಜಿ.ಎಸ್‌. ಶಿವರುದ್ರಪ್ಪನವರು ತಮ್ಮ ಕವನದಲ್ಲಿ ಹೇಳುವಂತೆ “ಹೊಳೆಯಲ್ಲಿ ಮುಳು ಮುಳುಗಿ ಸಾಯುತಿರೆ, ದಡದಲ್ಲಿ ನಿಂತು ನಕ್ಕವರು ಈಜಿ ದಡಕ್ಕೆತರಲು ನಮ್ಮವನು ನೀನೆಂದು ಬೆನ್ನ ತಟ್ಟುವರು” ಇದು ಎಷ್ಟು ಸತ್ಯ!

ಬೇಂದ್ರೆಯವರು ಹೇಳುತ್ತಾರೆ, “ಸಂಗೀತವು ಪ್ರಾಣ ಮಾತ್ರ. ಕವನವು ಪ್ರಾಣದ ಗೋಚರ ಮೂರ್ತಿ. ಮೂರ್ತಿಯ ದೇಹಲಕ್ಷಣಗಳಲ್ಲಿ ಪ್ರಾಣದ ಪದವಿಯನ್ನು ಹೊಳೆಯಿಸುವುದು ಗಾಯಕನ ಕಾರ್ಯ. ಸಂಗೀತ ಬಲ್ಲ ನಿಜವಾದಕ ಗಾಯಕನದು ವಾಯುವಿಹಾರ!”. ಸುಗಮಸಂಗೀತ ಹಾಡುತ್ತಾ ವಾಯುವಿಹಾರ ಮಾಡಿ ವಿಶ್ರಾಂತಿ ತೆಗೆದು ಕೊಳ್ಳುತ್ತಿರುವ ರಾಮಾಚಾರ್ಯರಿಗೆ ಇಂದು ೮೫ ವರ್ಷ. ಇವರು ಕನ್ನಡದ “ಅಕರಕ್ಕರದ ನೆಲೆ ಅರಿತವರು-ಅಕ್ಕರಿಗರು”. ಕನ್ನಡ ಭುವನೇಶ್ವರಿಯ ಕೃಪೆಯಿರಲು-ವಾಣೀಪತಿಯು ದೀರ್ಘಾಯುಕೊಡಲಿ.