ನಾನು ನ್ಯೂಯಾರ್ಕ್‌ನ್ನು ಬಿಟ್ಟು ಹೊರಟದ್ದು ಅಕ್ಟೋಬರ್ ೨೯ರ ಸಂಜೆ. ಅಂದರೆ ಕರಾರುವಾಕ್ಕಾಗಿ ಇಲ್ಲಿಗೆ ಬಂದ ಎರಡು ತಿಂಗಳ ಅನಂತರ. ಈ ಅವಧಿಯಲ್ಲಿ ಅಮೆರಿಕಾವನ್ನು ಅವಸರದಲ್ಲಿ ಒಂದು ಸುತ್ತು ಹಾಕುವುದರ ಮೂಲಕ, ಈ ದೇಶದ ಒಂದು ಸ್ಥೂಲವಾದ ಪರಿಚಯ ಮಾಡಿಕೊಳ್ಳಲು ಸಾಧ್ಯವಾಯಿತಾದರೂ ಈ ದೇಶದ ಮುಖ್ಯ ನಗರವಾದ ನ್ಯೂಯಾರ್ಕನ್ನೆ ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲವಲ್ಲ ಎಂಬ ಕೊರಗೊಂದು ಉಳಿದುಕೊಂಡಿತು.

ಹಾಗೆ ನೋಡಿದರೆ ಅಮೆರಿಕಾದಲ್ಲಿ ಯಾವುದೇ ನಗರವನ್ನು ಸರಿಯಾಗಿ ನೋಡಲಾಗಲಿಲ್ಲ ಎಂಬುದು ಕೊರಗಿನ ಸಂಗತಿಯಾಗಬಾರದು. ಯಾಕೆಂದರೆ ಈ ನವನಾಗರಿಕ ಭೂಖಂಡದಲ್ಲಿ ನಗರಗಳೆಲ್ಲ ಹೆಚ್ಚು ಕಡಮೆ ಒಂದೇ ಥರ. ಆಕಾಶದೆತ್ತರಕ್ಕೆ ಹುತ್ತಗಳಂತೆ ಎದ್ದ ಗಗನಚುಂಬಿಗಳ ನಿಬಿಡತೆ; ಅವುಗಳ ನಡುವೆ ಸಮಾನ ರೇಖೆಗಳಲ್ಲಿ ಚಾಚಿಕೊಂಡ ಬೀದಿಗಳು; ಬೀದಿಯ ಎರಡೂ ಬದಿಗೆ ಝಗ ಝಗ ವ್ಯಾಪಾರದ ಮಳಿಗೆಗಳು; ವಾಣಿಜ್ಯ ಸಂಕೀರ್ಣಗಳು; ಉದ್ಯೋಗದ ಕಛೇರಿಗಳು; ಮನರಂಜನೆಯ ವಿಲಾಸ ಭವನಗಳು; ಉದ್ಯಾನಗಳು; ಬಡಾವಣೆಗಳು; ಬಡಾವಣೆಗಳಲ್ಲಿ ಹಸುರು ಹುಲ್ಲಿನ ಹಾಸಿನ ಮೇಲೆ ತೊಳೆದು ಇರಿಸಿದಂಥ ಮನೆಗಳು; ಊರಿಂದ ಊರಿಗೆ ಹೋಗುವ ದಾರಿಗಳ ನಡುವೆ, ಜಲ ವಿಸ್ತೀರ್ಣಗಳನ್ನು ದಾಟಲು ನಿರ್ಮಿಸಿರುವ ಬೃಹದಾಕಾರದ ವಿಲಕ್ಷಣ ವಿನ್ಯಾಸದ ಸೇತುವೆಗಳು; ಅಲ್ಲಲ್ಲಿ ಆದಿಶೇಷನ ಹೊಟ್ಟೆಯೊಳಕ್ಕೆ ಹೊಕ್ಕು ಹೊರಬಂದಂಥ ಭ್ರಮೆಯನ್ನುಂಟು ಮಾಡುವ, ಮೈಲಿ ಮೈಲಿ ಉದ್ದದ ಕೊಳವೆಯಾಕಾರದ ನುಣುಪು ಭಿತ್ತಿಗಳ, ಝಗಝಗಿಸುವ ದೀಪಮಾಲೆಯ ಸುರಂಗ ಮಾರ್ಗಗಳು; ಮತ್ತೆ ಎರಡೂ ಬದಿಯ ದಟ್ಟ ಹಸುರಿನ ದೃಶ್ಯಗಳ ನಡುವೆ ಹಾದು ಮುಂದಿನ ನಗರವನ್ನು ಪ್ರವೇಶಿಸಿದರೆ, ಅದೇ ಬೀದಿಗಳು; ಬೀದಿಗಳ ತುಂಬ ಹುಳುಗಳಂತೆ ಗಿಜಿಗಿಜಿ ವಾಹನಗಳು; ಅದೇ ಎತ್ತರದ ಹುತ್ತಗಳ ಹಾವುಗಣ್ಣಿನ ಬೆಳಕಿನ ದಿಗ್ಭ್ರಮೆಗಳು. ಹೀಗಾಗಿ ಯಾವ ಒಂದು ನಗರವನ್ನು ನೋಡಿದರೂ, ಅದಕ್ಕೂ ಇನ್ನೊಂದಕ್ಕೂ ಅಂತಹ ವ್ಯತ್ಯಾಸವೇನೂ ಇಲ್ಲವೇನೋ ಅನ್ನಿಸಿ ಬಿಡುತ್ತದೆ. ಆದರೆ ರಾಷ್ಟ್ರೀಯ ಅರಣ್ಯಧಾಮಗಳು; ನಿಸರ್ಗದ ವಿಸ್ಮಯಾದ್ಭುತಗಳು; ಪರಿಸರದಿಂದ ಪರಿಸರಕ್ಕೆ ಬದಲಾಗುವ ನೆಲ – ಜಲಗಳ ನೋಟಗಳು; ಮತ್ತು ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಮಹತ್ವದ ಕೆಲವು ಸಾಧನೆಗಳು, ಇವುಗಳೇ ನನಗೆ ಈ ದೇಶದ ನಗರಗಳಿಗಿಂತ ಹೆಚ್ಚು ಪ್ರಿಯವಾಗಿವೆ.

ಇಂಥ ಪ್ರಿಯವಾದ ನೆನಪುಗಳನ್ನು ತುಂಬಿಕೊಂಡು, ನನ್ನನ್ನು ಕಳುಹಿಸಿಕೊಡಲು ಬಂದ ಡಾ. ರಾಮಕೃಷ್ಣ ಮತ್ತು ಉಮೇಶ್ ಅವರಿಗೆ ಕೃತಜ್ಞತೆಯ ಮಾತು ಹೇಳಿ, ಏರ್‌ಫ್ರಾನ್ಸ್ ವಿಮಾನವನ್ನು, ನಾನು ಪ್ರವೇಶಿಸಿದಾಗ, ನಾನು ಆಶಿಸಿದಂತೆ ಕಿಟಕಿಯ ಪಕ್ಕದ ಸೀಟೊಂದು ಸಿಕ್ಕಿತು. ವಿಮಾನ ಸಂಚಾರ ಪ್ರಾರಂಭದ ‘ಶಾಸ್ತ್ರ’ಗಳೆಲ್ಲ ಮುಗಿದು, ಈ ವಿಮಾನ ಈಗ ಪ್ಯಾರಿಸ್‌ಗೆ ಹೊರಡಲಿದೆ, ಅದು ಪ್ಯಾರಿಸ್ ಅನ್ನು ತಲುಪುವುದು ಬೆಳಿಗ್ಗೆ ಏಳುಗಂಟೆಗೆ; ಅನಂತರ ಬೆಳಿಗ್ಗೆ ಹತ್ತು ಗಂಟೆಗೆ ಪ್ಯಾರಿಸ್ ಅನ್ನು ಬಿಟ್ಟು ಮುಂಬೈ ಕಡೆಗೆ ಹೊರಡುತ್ತದೆ – ಎಂಬ ವಿವರಗಳು ಸುಮಧುರ ಕಂಠದ ಮೂಲಕ ಘೋಷಿತವಾಗುತ್ತಿದ್ದಂತೆ, ವಿಮಾನದ ಗಾಲಿಗಳು ಉರುಳತೊಡಗಿದವು. ಕೊಂಚ ಹೊತ್ತಿನಲ್ಲೇ ಭೋರ್ಗರೆಯುತ್ತಾ ಆಕಾಶಪಥಕ್ಕೆ ಏರಿದಾಗ, ಕೆಳಗೆ ನ್ಯೂಯಾರ್ಕ್ ಮಹಾನಗರದ ಝಗ ಝಗ ದೀಪಮಾಲೆ ಬೆಳಕಿನ ಬಲೆಯಾಗಿತ್ತು. ಕೆಳಗೆ ಹಡ್ಸನ್ ನದಿ, ಅದರ ಆಚೆ – ಈಚೆ ಹರಡಿಕೊಂಡ ಕಡಲು, ಕಡಲ ನಡುವೆ ನಾನು ನೋಡಲು ಸಾಧ್ಯವಾಗದಿದ್ದ ಸ್ವಾತಂತ್ರ್ಯದೇವಿಯ ಪ್ರತಿಮೆಯ ಮಸುಕು ನೋಟ; ಮತ್ತೆ ಕಡಲ ಮೇಲೆ ಮಿನುಗದೀಪದ ಮೈಯ ದೋಣಿಗಳು – ಹಡಗುಗಳು, ಇವೆಲ್ಲ ಕೆಲವೇ ಕ್ಷಣಗಳ ಕಾಲ ಕಂಡು, ಮತ್ತೆ ಎರಡು ನೀಲಿಗಳ ನಡುವಣ ಕತ್ತಲ ಮಹಾಶೂನ್ಯದಲ್ಲಿ ಪಯಣ ಮುಂದುವರಿಯಿತು.

– 1988