ನಾಟಕವೆಂದರೆ ಯಾರಿಗೆ ಇಷ್ಟವಿಲ್ಲ? ಎಲ್ಲರೂ ನಾಟಕ ನೋಡಲು ಆಸೆಪಡುತ್ತಾರೆ. ಚಿಕ್ಕ ಮಕ್ಕಳಿಂದ ಹಿಡಿದು ಮುದುಕವರೆಗೂ ನಾಟಕವೆಂದರೆ ಪಂಚಪ್ರಾಣ. ಶಾಲೆಗಳಲ್ಲಿಯೂ ನಾಟಕ ಆಡುತ್ತಾರೆ, ಅಲ್ಲವೆ? ಬಣ್ಣವನ್ನು ಮುಖಕ್ಕೆ ಬಳಿದುಕೊಂಡು ವಿಧವಿಧದ ಬಟ್ಟೆಗಳನ್ನು ಧರಿಸಿ ರಂಗದ ಮೇಲೆ ಬರುವುದೆಂದರೆ ಹುಡುಗರಿಗೂ ಎಷ್ಟು ಆಸೆ!

ಕನ್ನಡನಾಡಿನಲ್ಲಿ ಅನೇಕರು ಸ್ನೇಹಿತರನ್ನು ಗುಂಪು ಸೇರಿಸಿಕೊಂಡು ನಾಟಕಗಳನ್ನಾಡಿದ್ದಾರೆ. ವ್ಯಾಪಾರ ದೃಷ್ಟಿಯಿಂದ ನಾಟಕ ಕಂಪನಿಗಳನ್ನು ನಡೆಸಿದ್ದಾರೆ. ಹಾಗೆ ಪ್ರಸಿದ್ಧವಾದ ಕಂಪೆನಿಗಳಲ್ಲಿ ಗುಬ್ಬಿ ಶ್ರೀ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಲಿಯು ಮುಖ್ಯವಾದದ್ದು. ಬಹಳ ಹೆಸರುವಾಸಿಯಾದದ್ದು. ಇದರ ಹೆಸರನ್ನು ಎಲ್ಲ ಕನ್ನಡಿಗರೂ ಕೇಳಿದ್ದಾರೆ. ಅನೇಕರು ಇದರ ನಾಟಕಗಳನ್ನು ನೋಡಿ ಆನಂದಿಸಿದ್ದಾರೆ.

ಈ ಮಂಡಲಿಯ ಯಜಮಾನರಾಗಿ ಗುಬ್ಬಿ ವೀರಣ್ಣನವರು ಶಾಶ್ವತವಾದ ಕೀರ್ತಿಯನ್ನು ಪಡೆದರು. ಇವರು ಒಳ್ಳೆಯ ನಟರು. ಜನರನ್ನು ನಗಿಸುವುದೆಂದರೆ ಇವರಿಗೆ ತುಂಬ ಇಷ್ಟ. ಹಾಸ್ಯನಟರಾಗಿ, ಉತ್ತಮವಾದ ನಾಟಕಗಳ ನಿರ್ಮಾಪಕರಾಗಿ ನಾಟಕ ಕಲೆಗೆ ಇವರು ಸಲ್ಲಿಸಿದ ಸೇವೆ ಅಪಾರವಾದದ್ದು. ಬಡವರಾಗಿ ಹುಟ್ಟಿ, ಹತ್ತಾರು ಜನರೊಡನೆ ಬೆರೆತು ಸಿರಿವಂತರಾದ ವೀರಣ್ಣನವರ ಜೀವನ ಚರಿತ್ರೆ ಬಹಳ ಸುಂದರವಾದದ್ದು.

ಜನನ

ವೀರಣ್ಣನವರು ೧೮೯೦ ರಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ಹುಟ್ಟಿದರು. ಇವರ ತಂದೆ ಹಂಪಣ್ಣನವರು. ತಾಯಿ ರುದ್ರಾಂಬೆ. ಹಂಪಣ್ಣನವರು ಚಿಲ್ಲರೆ ಅಂಗಡಿ ನಡೆಸುತ್ತಿದ್ದರು. ಆಗಿನ ಕಾಲದಲ್ಲಿ ಪ್ರಸಿದ್ಧಿಗೆ ಬಂದಿದ್ದ ಗುಬ್ಬಿ ಬೀಗಗಳನ್ನು ತಯಾರು ಮಾಡುತ್ತಿದ್ದರು. ವೀರಣ್ಣನವರಿಗೆ ಇಬ್ಬರು ಅಕ್ಕಂದಿರಿದ್ದರು. ತಂದೆ ಹಂಪಣ್ಣನವರು ಎರಡನೆಯ ಮದುವೆ ಮಾಡಿಕೊಂಡರು. ರುದ್ರಾಂಬೆಯವರ ಮತ್ತು ಅವರ ಮೂವರು ಮಕ್ಕಳ ಯೋಗಕ್ಷೇಮಕ್ಕೆ ತಕ್ಕಷ್ಟು ಗಮನ ಕೊಡಲಿಲ್ಲ. ಅವರ ಆಶ್ರಯವಿಲ್ಲದ ಈ ತಾಯಿ ಮಕ್ಕಳಿಗೆ ಬಡತನದ ಬೇಗೆ ಭೀಕರವಾಯಿತು. ರುದ್ರಾಂಬೆಯವರು ನೆರೆಹೊರೆಯವರಲ್ಲಿ ಕೆಲಸ ಮಾಡಿ ಮಕ್ಕಳನ್ನು ಕಾಪಾಡಬೇಕಾಯಿತು. ಈ ಜೀತದಿಂದ ಆಗುತ್ತಿದ್ದ ಸಂಪಾದನೆ ಅರೆಹೊಟ್ಟೆಗೂ ಸಾಕಾಗುತ್ತಿರಲಿಲ್ಲ. ಇವರ ಕಷ್ಟವನ್ನು ನೋಡಲಾಗದೆ ವೀರಣ್ಣನ ಚಿಕ್ಕಪ್ಪನವರಾಗಿದ್ದ ವೀರಣ್ಣರೆಂಬುವರು ಸಹಾಯ ಮಾಡಲು ಮುಂದೆ ಬಂದರು.

ನಾಟಕ ಪ್ರವೇಶ

ಚಿಕ್ಕಪ್ಪನವರಾದ ವೀರಣ್ಣನವರು ಶ್ರೀ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಲಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಮಂಡಲಿಯು ೧೮೮೪ ರಲ್ಲಿ ಗುಬ್ಬಿಯ ಕೆಲವು ವರ್ತಕರಿಂದ ಪ್ರಾರಂಭವಾಗಿತ್ತು. ಇದಕ್ಕೆ ಯಜಮಾನರು ಚಂದಣ್ಣನವರು. ಆರು ವರ್ಷದ ಹಸುಳೆಯಾಗಿದ್ದ ಗುಬ್ಬಿ ವೀರಣ್ಣನವರನ್ನು ಅವರ ಚಿಕ್ಕಪ್ಪ ೧೮೯೬ ರಲ್ಲಿ ನಾಟಕ ಮಂಡಲಿಯಲ್ಲಿ ಕೆಲಸಕ್ಕೆ ಸೇರಿಸಿದರು.

ವೀರಣ್ಣನವರನ್ನು ಎಳೆಯ ವಯಸ್ಸಿನಲ್ಲೇ ನಾಟಕಗಳಲ್ಲಿ ಪಾತ್ರವಹಿಸಲು ರಂಗಭೂಮಿಗೆ ಕಳುಹಿಸಲು ಪ್ರಾರಂಭಿಸಿದರು. ‘ಹರಿಶ್ಚಂದ್ರ’ ನಾಟಕದಲ್ಲಿ ಲೋಹಿತಾಶ್ವನ ಪಾತ್ರ, ಚಿತ್ರಶೇಖರ-ಸೋಮಶೇಖರದಲ್ಲಿ ಅಗಸನ ಮಗ ಡೋಲನ ಪಾತ್ರ, ಚಿಲ್ಲಾಳ, ಸತ್ಯರಥ ಹೀಗೆ ಅನೇಕ ಪಾತ್ರಗಳನ್ನು ಮಗುವಾಗಿದ್ದ ವೀರಣ್ಣನವರು ಹಾಕುತ್ತಿದ್ದರು. ಜನರಿಗೆ ಇವರ ಪಾತ್ರವೆಂದರೆ ಬಹಳ ಪ್ರಿಯವಾಯಿತು.

ಒಂದು ಸಲ ‘ಪಾಂಡವ ವಿಜಯ’ ಎನ್ನುವ ನಾಟಕ. ಇದರಲ್ಲಿ ಬಾಲ ಸೂರ್ಯನ ಪಾತ್ರ ವೀರಣ್ಣನವರಿಗೆ ಕೊಟ್ಟಿದ್ದರು. ಸೂರ್ಯನು ಆಕಾಶದಲ್ಲಿ ನಿಂತು ಮಾತನಾಡಬೇಕು. ಇದಕ್ಕೆ ಇವರನ್ನು ಹಗ್ಗದ ಮೇಲೆ ಕೂಡಿಸಿ ಮೇಲಿನಿಂದ ಸ್ವಲ್ಪ ಕೆಳಕ್ಕೆ ಬಿಡುತ್ತಿದ್ದರು. ಇವರ ಮಾತು ಮುಗಿದನಂತರ ಮೇಲಕ್ಕೆ ಎಳೆಯುತ್ತಿದ್ದರು ಮೊದಲನೆಯ ದಿನ ಹೀಗೆ ಮೇಲಿನಿಂದ ಕೆಳಕ್ಕೆ ಬಿಟ್ಟಾಗ ವೀರಣ್ಣನವರಿಗೆ ಬಹಳ ಭಯವಾಗಿ, ಕೂಗಲೂ ಆಗದೆ, ಇಳಿಯಲೂ ಆಗದೆ, ಉಟ್ಟಿದ್ದ ಬಟ್ಟೆ ಎಲ್ಲ ಒದ್ದೆ ಆಯಿತಂತೆ-ಸಿಕ್ಕಾಪಟ್ಟೆ ಬೆವರಂತೆ! ಹೀಗೆ ಹೆದರಿದ ಈ ಬಾಲಕ ಮುಂದೆ ಪ್ರಸಿದ್ಧ ನಟನಾಗಿ ಲಕ್ಷಾಂತರ ಜನರನ್ನು ಸಂತೋಷಪಡಿಸಿದ.

ವಿದ್ಯಾಭ್ಯಾಸ

ವೀರಣ್ಣನವರಿಗೆ ಆಗ ತಿಂಗಳಿಗೆ ಐದು ರೂಪಾಯಿ ಸಂಬಳ. ತಾಯಿಯನ್ನು, ಅಕ್ಕಂದಿರನ್ನು ಸಲಹುವ ಜವಾಬ್ದಾರಿಯನ್ನು ಹತ್ತು ವರ್ಷದ ಹಸುಳೆ ಹೊತ್ತಿತ್ತು. ನಾಟಕಗಳಲ್ಲಿ ಪಾತ್ರವಹಿಸುತ್ತಿದ್ದರೂ ಶಾಲೆಗೆ ಹೋಗುವುದನ್ನು ತಪ್ಪಿಸಲಿಲ್ಲ. ವೀರಣ್ಣನವರಿಗೆ ನಾಟಕದ ಮೇಲೆ ಎಷ್ಟು ಪ್ರೀತಿಯಿತ್ತೋ ಓದಿನ ಮೇಲೂ ಅಷ್ಟೇ ಪ್ರೀತಿ ಇತ್ತು. ನಾಟಕ ಮಂಡಲಿಗಳು ಊರಿಂದ ಊರಿಗೆ ಯಾವಾಗಲೂ ಪ್ರಯಾಣ ಮಾಡುತ್ತಿದ್ದುದರಿಂದ ಒಂದೇ ಶಾಲೆಯಲ್ಲಿ ಪ್ರಯಾಣ ಮಾಡುತ್ತಿದ್ದುದರಿಂದ ಒಂದೇ ಶಾಲೆಯಲ್ಲಿ ಓದುವ ಅನುಕೂಲ ಇರಲಿಲ್ಲ. ಮಳೆಗಾಲದಲ್ಲಿ ನಾಟಕ ಮಂಡಲಿಯು ಊರಿಗೆ ಹಿಂದಿರುಗಿದಾಗ ಶಾಲೆಗೆ ಹೋಗುತ್ತಿದ್ದರು. ವೀರಣ್ಣನವರು. ನಾಟಕದ ಹುಡುಗನೆಂದು ಉಪಾಧ್ಯಾಯರಿಗೂ ಇತರ ವಿದ್ಯಾರ್ಥಿಗಳಿಗೂ ಇವರನ್ನು ಕಂಡರೆ ಬಹಳ ಅಭಿಮಾನ.

ವರ್ಷಗಳು ಕಳೆದಂತೆ ವೀರಣ್ಣನವರು ಬಾಲಕನ ಪಾತ್ರಗಳನ್ನು ಬಿಟ್ಟು ಹೆಂಗಸರ ಪಾತ್ರಗಳನ್ನು ಹಾಕಲು ಪ್ರಾರಂಭಿಸಿದರು.

ಆಗಿನ ನಾಟಕ ಮಂದಿರಗಳು

ಈಗ ನಾಟಕ ಮಂದಿರಗಳಲ್ಲಿ ರಂಗಭೂಮಿಎಷ್ಟು ಸಜ್ಜಾಗಿರುತ್ತದೆ, ಅಲ್ಲವೆ? ನಾವು ಬೆರಗಾಗುವಂತೆ ದೃಶ್ಯಗಳು ಬದಲಾಗುತ್ತವೆ. ಅಗತ್ಯವಾದರೆ, ಉದಾಹರಣೆಗೆ ರಾಜನ ದರ್ಬಾರಿನ ದೃಶ್ಯವಾದರೆ, ಏನು ವೈಭವ, ಏನು ಸೊಗಸು! ಎಷ್ಟು ಬಗೆಯ ವಿದ್ಯುತ್‌ ದೀಪಗಳು! ಆಗಿನ ಕಾಲದಲ್ಲಿ ನಾಟಕ ಮಂದಿರಗಳು ಶೈಶವಾವಸ್ಥೆಯಲ್ಲಿದ್ದವು. ಸರಿಯಾದ ಉಪಕರಣಗಳು ಇರುತ್ತಿರಲಿಲ್ಲ. ಎರಡು ಪರದೆಗಳಿದ್ದರೆ ಅದೇ ಹೆಚ್ಚು. ಆ ಪರದೆಗಳು ಮೇಲಕ್ಕೆ ಸುತ್ತಿಕೊಂಡು ಹೋದರೆ ಜನಕ್ಕೆ ಬಹಳ ಆಶ್ಚರ್ಯ. ಬೆಳಕು ಚೆಲ್ಲಲು ವಿದ್ಯುತ್‌ ದೀಪಗಳಿರಲಿಲ್ಲ. ಪಂಜುಗಳಿಂದ ಇಲ್ಲವೆ ಸೀಮೆಎಣ್ಣೆ ಬುಡ್ಡಿಗಳಿಂದ ರಂಗದ ಮೇಲೆ, ನಟರ ಮೇಲೆ ಬೆಳಕು ಚೆಲ್ಲಬೇಕಾಗಿತ್ತು. ಆ ಬೆಳಕಿಗೆ ವಿಧವಿಧವಾದ ಚಿಟ್ಟೆಗಳು, ಹುಳಗಳು ಬಂದು ಮುತ್ತುತ್ತಿದ್ದವು. ಅನೇಕ ಸಲ ನಟನು ಮಾತನಾಡಲು ಬಾಯಿ ತೆರೆದರೆ ಆ ಹುಳಗಳು ಬಾಯೊಳಕ್ಕೆ ಹೋಗಿಬಿಡುತ್ತಿದ್ದವು. ಆಗ ಅವನ ಅವಸ್ಥೆ ಯಾರಿಗೂ ಬೇಡ! ಸ್ತ್ರೀ ಪಾತ್ರಗಳನ್ನು ಗಂಡಸರೇ ಹಾಕುತ್ತಿದ್ದರು. ಎಲ್ಲರೂ ತಲೆಯನ್ನು ನುಣ್ಣಗೆ ಬೋಳಿಸಿ, ಟೋಪನ್‌ ಹಾಕಿಕೊಳ್ಳುತ್ತಿದ್ದರು. ಅನೇಕ ವೇಳೆ ಈ ಹುಳಗಳು ನಟರ ತಲೆಯ ಮೇಲಿದ್ದ ಟೋಪನ್‌ನಲ್ಲಿ ಸೇರಿಕೊಂಡು ವಿಲವಿಲ ಒದ್ದಾಡುತ್ತಿದ್ದರೆ, ಅವರಿಗೆ ನವೆ ತಡಯಲಾಗುತ್ತಿರಲಿಲ್ಲ. ರಾಣಿಯ ಪಾತ್ರ ಹಾಕಿರುವವನು ನವೆ ತಡಯಲಾಗದೆ ಟೋಪನ್‌ ತೆಗೆದು ತಲೆ ಕೆರೆದುಕೊಂಡು ಪುನಃ ಟೋಪನ್‌ ಹಾಕಿಕೊಂಡು ನಾಟಕ ಮುಂದುವರಿಸುತ್ತಿದ್ದ. ರಾಣಿಯು ತನ್ನ ಬೋಳು ತಲೆಯನ್ನು ಜನರಿಗೆ ಪ್ರದರ್ಶಿಸಿದಾಗ ಎಷ್ಟು ವಿಚಿತ್ರವಾಗಿ ಕಂಡಿರಬೇಕು! ಅನೇಕ ವೇಳೆ ನಾಟಕ ನೋಡಲು ಬಂದವರ ಬಳಿ ಒಳ್ಳೆಯ ಒಡವೆಗಳಿದ್ದರೆ ನಟ ಅವರ ಬಳಿ ಎರವಲು ಪಡೆದು ಹಾಕಿಕೊಳ್ಳುತ್ತಿದ್ದ. ಸಾಲ ಕೊಟ್ಟವರಿಗೆ ಅದು ತಮ್ಮ ಒಡವೆ ಎಂಬ ಸಂತೋಷ! ಈ ಬಗೆಯ ಬಾಲಿಶದಲ್ಲಿದ್ದ ರಂಗಮಂಟಪಕ್ಕೆ ಜೀವಕಳೆ ತುಂಬಿ ಆಧುನಿಕ ರೀತಿಯಲ್ಲಿ ಬದಲಿಸಿ ಪ್ರವರ್ಧಮಾನಕ್ಕೆ ತಂದ ಕೀರ್ತಿ ವೀರಣ್ಣನವರದು.

‘ಸದಾರಮೆ’ಯಲ್ಲಿ ಕಳ್ಳನ ಪಾತ್ರದಲ್ಲಿ ಗುಬ್ಬಿ ವೀರಣ್ಣ

ವೀರಣ್ಣನವರು  ಸ್ತ್ರೀ ಪಾತ್ರಗಳನ್ನು ಹಾಕುತ್ತಿದ್ದಾಗ ಅವರಿಗೆ ೧೪-೧೫ ವರ್ಷ.ಒಳ್ಳೆಯ ಹೆಸರು ಬಂದಿತ್ತು. ಜನಕ್ಕೆ ಇವರ ಸ್ತ್ರೀ ಪಾತ್ರ ಒಂದು ಮೋಜು. ಆದರೆ ಸ್ವಲ್ಪ ವಯಸ್ಸಾಗುತ್ತಲೆ ಧ್ವನಿ ಬದಲಾಯಿಸಿತು. ಕಂಠ ಒಡೆಯಿತು. ಆದ್ದರಿಂದ ಗಂಡಸರ ಪಾತ್ರಗಳನ್ನು ಹಾಕಬೇಕಾಗಿ ಬಂತು.

ನಾಟಕಗಳಲ್ಲಿ ಭಾಗವಹಿಸುತ್ತ ಓದಿನ ಕಡೆಗೂ ಗಮನ ಕೊಡುತ್ತಿದ್ದರು. ಒಳ್ಳೆಯ ಕನ್ನಡ ಓದಲು,ಬರೆಯಲು ಕಲಿತರು. ಇದರ ಜೊತೆಗೆ ನಾಟಕಗಳಿಗೆ ಅಗತ್ಯ ಭಾಗವಾಗಿರುವ ಸಂಗೀತದ ಕಡೆ ಗಮನ ಹರಿಸಿದರು. ಕಂಪೆನಿಯಲ್ಲಿದ್ದ ಸಂಗೀತ ವಿದ್ವಾಂಸರ ಹತ್ತಿರ ಸಂಗೀತ ಕಲಿತರು. ಬಾಯಿ ಹಾಡುಗಾರಿಕೆ, ತಬಲ, ಪಿಟೀಲು ನುಡಿಸುವುದರಲ್ಲಿ ನುರಿತವರಾದರು.

ಮೈಸೂರು ರಾಜ್ಯದಲ್ಲಿ ಮಾತ್ರ ಪ್ರವಾಸ ಮಾಡುತ್ತಿದ್ದ ಮಂಡಲಿಯನ್ನು ಬಳ್ಳಾರಿ, ಹಿಂದೂಪುರ, ಆದವಾನಿ ಮುಂತಾದ ನಗರಗಳಿಗೆ ಚಂದಣ್ಣನವರು ಕರೆದುಕೊಂಡು ಹೋದರು. ಅಲ್ಲಿ ನಾಟಕಗಳನ್ನಾಡಿ ಕನ್ನಡ ನಾಟಕಗಳ ಕೀರ್ತಿಯನ್ನು ಹೆಚ್ಚಿಸಿದರು. ನೆರೆಭಾಷೆಯಲ್ಲಿದ್ದ ನಾಟಕಗಳನ್ನು ನೋಡುವ ಅವಕಾಶವನ್ನು ವೀರಣ್ಣನವರು ಚೆನ್ನಾಗಿ ಉಪಯೋಗಿಸಿಕೊಂಡರು. ಅವರ ಸಾಧನೆಗಳನ್ನು ತಮ್ಮದನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದರು. ಚಿಕ್ಕ ವಯಸ್ಸಿನ ವೀರಣ್ಣನವರು ನಾಟಕಗಳಲ್ಲಿ ಆಗಬೇಕಾಗಿದ್ದ ಬದಲಾವಣೆಗಳನ್ನು ಗಮನಿಸಿದರು. ಇಷ್ಟಾದರೂ ಕನ್ನಡ ನಾಟಕಗಳು ಇತರ ಭಾಷೆಗಳ ನಾಟಕಗಳಿಗಿಂತ ಉತ್ತಮ ಸ್ಥಿತಿಯಲ್ಲಿದ್ದವು. ಇವರಿಂದ ಹೊರಗಿನವರು ಕಲಿತದ್ದೇ ಹೆಚ್ಚು.

ವೀರಣ್ಣನವರಿಗೆ ಇಪ್ಪತ್ತು ವರ್ಷಗಳು ತುಂಬುವ ವೇಳೆಗೆ ಉತ್ತಮ ನಟನೆ, ಪಾತ್ರಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ, ಆಕರ್ಷಕ ಮಾತುಕತೆ, ಸುಶ್ರಾವ್ಯ ಹಾಡುಗಾರಿಕೆ, ಇಂಪಾಗಿ ವಾದ್ಯಗಳನ್ನು  ನುಡಿಸುವುದು ಇವೇ ಮುಂತಾದವು ಚೆನ್ನಗಿ ಒಗ್ಗಿದ್ದವು. ‘ಸದಾರಮೆ’ ನಾಟಕದಲ್ಲಿ ಆದಿಮೂರ್ತಿ,ಕಳ್ಳ, ಸಾಬಿಗಳ ಪಾತ್ರಗಳು ವೈವಿಧ್ಯಪೂರ್ಣವಾದವು. ಈ ಮೂರು ಪಾತ್ರಗಳನ್ನು ಒಂದೇ ನಾಟಕದಲ್ಲಿ ಇವರು ಹಾಕಿ ಜನರಿಂದ ಮೆಚ್ಚುಗೆ ಪಡೆದರು. ಹಾಸ್ಯ ಪಾತ್ರಗಳ  ಬಗ್ಗೆ ಇವರಿಗೆ ಒಲವು ಜಾಸ್ತಿ. ಜನತೆ ಇವರನ್ನು ಉತ್ತಮ ನಗೆನಟನೆಂದು ಕರೆದು ಮೆಚ್ಚಿತು. ಜನರ ಅಭಿಮಾನನಟನಾಗಿ ಮೆರೆಯುತ್ತಿದ್ದ ಸಂದರ್ಭದಲ್ಲಿ ವೀರಣ್ಣನವರಿಗೆ ಗುಬ್ಬಿಯಲ್ಲಿ ವಿವಾಹವು ಜರುಗಿತು.

೧೯೧೨ ರಲ್ಲಿ ಮೈಸೂರಿನಲ್ಲಿ ಮಂಡಲಿಯು ನಾಟಕಗಳನ್ನಾಡಿತು. ಇವರು ಹಾಕುತ್ತಿದ್ದ ವಿದೂಷಕನ ಪಾತ್ರವನ್ನು ಮೆಚ್ಚಿ ಮೈಸೂರಿನ ಪ್ರಮುಖ ಜನರು ಸಮಾರಂಭವೊಂದರಲ್ಲಿ ಚಿನ್ನದ ಪದಕವನ್ನು ಕೊಟ್ಟು ಗೌರವಿಸಿದರು.

ತಮಗೆ ದೊರೆತ ಗೌರವಗಳಿಂದ ಹುರಿದುಂಬಿದವರಾಗಿ ಮೈಸೂರು ರಾಜ್ಯದ ಅನೇಕ ನಗರಗಳಲ್ಲಿ ನಾಟಕಗಳನ್ನಾಡಿ ಹೆಸರು ಪಡೆದರು. ಇಷ್ಟರಲ್ಲಿ ವೀರಣ್ಣನವರ ಗಂಡು ಮಗುವಿನ ಜನನವಾಯಿತು. ಆದರೆ ದೈವವಿಧಿ ಬೇರೆ ಇತ್ತು. ಇವರ ಹೆಂಡತಿಯವರು ಆ ಪುಟ್ಟ ಮಗುವನ್ನು ಬಿಟ್ಟು ತೀರಿಕೊಂಡರು. ಮಗುವನ್ನು ಬೆಳೆಸುವ ಜವಾಬ್ದಾರಿಯನ್ನು ತಮ್ಮ ಅಕ್ಕನಿಗೆ ವಹಿಸಿ, ದುಃಖವನ್ನು ಕಡಿಮೆ ಮಾಡಿಕೊಳ್ಳಲು ದೇಶ ಪರ್ಯಟನೆಯನ್ನು ತಮ್ಮ ನಾಟಕ ಮಂಡಲಿಯೊಡನೆ ಮುಂದುವರೆಸಿದರು.

ಲೇಖಕರ ಬಗ್ಗೆ ಗೌರವ

ನಾಟಕಕ್ಕೆ ಜೀವಾಳ ಅಥವಾ ತಳಹದಿ ಎಂದರೆ ನಾಟಕವನ್ನು ಬರೆದ ಲೇಖಕ. ಅವನಿಲ್ಲದಿದ್ದರೆ ನಾಟಕವೇ ಇಲ್ಲ. ಇದನ್ನು ಗಮನಿಸಿದ್ದ ವೀರಣ್ಣನವರು ನಾಟಕಕಾರನ ಬಗ್ಗೆ ವಿಶೇಷ ಗೌರವನ್ನು ತಳೆದಿದ್ದರು. ಈ ಅಭಿಮಾನವನ್ನು ತಮ್ಮ ಜೀವಮಾನದಲ್ಲಿ ಎಂದೂ ಕಳೆದುಕೊಳ್ಳಲಿಲ್ಲ. ಈ ಬಗೆಯ ಅಭಿಪ್ರಾಯಕ್ಕೆ ಪ್ರೇರಕವಾಗಿ ಒಂದು ಘಟನೆ ನಡೆಯಿತು.

ಚಂದಣ್ಣನವರಿಗೆ ಹೊಸ ನಾಟಕವಾಡಬೇಕೆನ್ನಿಸಿತು. ರತ್ನಾವಳಿ ನಾಟಕ ಮಂಡಲಿಯವರು ಆಡುತ್ತಿದ್ದ ‘ಪ್ರಹ್ಲಾದ ಚರಿತ್ರೆ’ ಎಂಬ ನಾಟಕದ ಮುದ್ರಿತ ಪುಸ್ತಕವನ್ನು ತರಿಸಿ ಅಭ್ಯಾಸ ಪ್ರಾರಂಭಿಸಿದರು. ಆ ಪುಸ್ತಕದ ಮೇಲೆ ಕವಿಯ ಅನುಮತಿಯಿಲ್ಲದೆ ನಾಟಕವನ್ನು ಯಾರೂ ಅಭಿನಯಿಸಬಾರದು ಎಂದಿತ್ತು. ಅದನ್ನು ಚಂದಣ್ಣನವರು ಗಮನಕ್ಕೆ ತೆಗೆದುಕೊಳ್ಳಲಿಲ್ಲ. ವೀರಣ್ಣನವರಿಗೆ ಈ ನಡವಳಿಕೆ ಹಿಡಿಸಲಿಲ್ಲ. ಆದರೆ ಹೇಳುವಂತಿರಲಿಲ್ಲ-ಯಜಮಾನರಿಗೆ ಬುದ್ಧಿ ಹೇಳುವುದುಂಟೆ! ಈ ಘಟನೆಯ ಪರಿಣಾಮ-ವೀರಣ್ಣನವರು ತಮ್ಮ ಜೀವನದಲ್ಲಿ ನಾಟಕಕಾರರಿಗೆ ವಿಶೇಷ ಗೌರವ ಸಲ್ಲಿಸಿದರು. ತಾವು ಆಡಿದ ನಾಟಕಗಳನ್ನು ಬರೆದವರಿಗೆ ಉದಾರವಾಗಿ ಸಂಭಾವನೆ ಸಲ್ಲಿಸಿ ತೃಪ್ತಿಪಡಿಸಿದರು.

ಸಹಕಲಾವಿದರ ಬಗ್ಗೆ ಗೌರವ

ಇದೇ ಸಂದರ್ಭದಲ್ಲಿ ಸಹಕಲಾವಿದರನ್ನು ಅಗೌರವದಿಂದ ಕಾಣಬಾರದೆಂಬ ಭಾವನೆ ಬೆಳೆಯುವ ಘಟನೆ ನಡೆಯಿತು.

ತೀರ್ಥಹಳ್ಳಿಯಲ್ಲಿ ನಾಟಕ ಶಿರೋಮಣಿ ಎ.ವಿ. ವರದಾಚಾರ್ಯರು ತಮ್ಮ ರತ್ನಾವಳಿ ನಾಟಕ ಮಂಡಲಿ ಯಲ್ಲಿ ನಾಟಕಗಳನ್ನಾಡುತ್ತಿದ್ದರು. ಆ ವೇಳೆಗೆ ಚಂದಣ್ಣನವರ ಗುಬ್ಬಿ ಕಂಪೆನಿಯೂ ಬಂದಿತು. ಪ್ರಖ್ಯಾತ ನಟರಾದ ವರದಾಚಾರ್ಯರನ್ನು ಗೌರವಿಸಬೇಕೆಂದು ನಿರ್ಧರಿಸಿ ಚಂದಣ್ಣನವರು, ತಮ್ಮ ನಾಟಕ ನೋಡಲು ರತ್ನಾವಳಿ ನಾಟಕ ಮಂಡಲಿಯವರನ್ನು ಆಹ್ವಾನಿಸಿದರು. ಸಂಜೆ ಉಪಾಹಾರವಾದ ನಂತರ, ನಾಟಕ ಮಂದಿರದ ಮುಂದಿನ ಸಾಲಿನಲ್ಲಿ ಅತಿಥಿಗಳನ್ನು ಕೂಡಿಸಿ, ನಾಟಕವನ್ನು ಪ್ರಾರಂಭ ಮಾಡಿದ್ದಾಯಿತು. ಆಡಿದ ನಾಟಕ ‘ಸುಭದ್ರಾ ಪರಿಣಯ’. ಎರಡು ಮೂರು ದೃಶ್ಯಗಳಾಗುವುದರಲ್ಲಿ ಆ ಊರಿನ ಲಬ್ಬೆ ಸಾಹುಕಾರರು ತಮಗೆ ೧೨ ರೂಪಾಯಿಗಳ  ೧೨ ಸೀಟುಗಳು ಬೇಕೆಂದು ಕೇಳಿದರು. ಆದರೆ ನಾಟಕವನ್ನು ಮೊದಲಿನಿಂದ ಪ್ರಾರಂಭಿಸಬೇಕು, ತಮಗೆ ಮೊದಲನೆಯ ಸಾಲಿನಲ್ಲಿ ಕೂಡಲು ಜಾಗ ಮಾಡಿಕೊಡಬೇಕು – ಇವು ಅವರ ಷರತ್ತುಗಳು. ಹಣಕ್ಕೇ ಪ್ರಾಧಾನ್ಯಕೊಡುತ್ತಿದ್ದ ಚಂದಣ್ಣನವರು ಎಲ್ಲ ಷರತ್ತುಗಳಿಗೂ ಒಪ್ಪಿ ನಾಟಕವನ್ನು ಮೊದಲಿನಿಂದ ಪ್ರಾರಂಭಿಸಿದರು. ಇದರಿಂದ ಬೇಸರಗೊಂಡು ಅವಮಾನವಾಯಿತೆಂದು ಬಗೆದು ವರದಾಚಾರ್ಯರು ಅವರ ಸಹನಟರೊಂದಿಗೆ ಮಧ್ಯದಲ್ಲೇ ಹೊರಟುಹೋದರು. ಈ ಘಟನೆಯಿಂದ ವೀರಣ್ಣನವರಿಗೆ ಕಲೆಗೆ ಬೆಲೆ ಕೊಡದಿದ್ದರೆ ಜೀವನವೇ ನಿಸ್ಸಾರವೆನಿಸಿತು. ಸಹಕಲಾವಿದರಿಗೆ ಗೌರವ ಕೊಡುವಾಗ ಹಣವನ್ನು ದೊಡ್ಡದಾಗಿ ಪರಿಗಣಿಸಬಾರದು ಎಂದು ಅವರಿಗೆ ಎನ್ನಿಸಿತು. ತಮ್ಮ ಜೀವಮಾನದಲ್ಲಿ ಯಾವ ಕಲಾವಿದನಿಗೂ ಅವಮಾನವಾಗದಂತೆ ನಡೆದುಕೊಂಡರು. ‘ಕಲಾ ಭೋಜ’ ನೆಂಬ ಹೆಸರನ್ನು ಸಂಪಾದಿಸಿಕೊಂಡರು.

ನಂಬಿಕೆಯ ಬಂಟ

ಚಂದಣ್ಣನವರಿಗೆ ವ್ಯವಹಾರ ಚತುರರಾದ ವೀರಣ್ಣನವರನ್ನು ಕಂಡರೆ ಬಹಳ ಪ್ರೀತಿ. ನಂಬಿಕೆಗೆ ತಾವು ಸಂಪೂರ್ಣ ಅರ್ಹರೆಂದು ವೀರಣ್ಣನವರು ಮನದಟ್ಟು ಮಾಡಿಕೊಟ್ಟಿದ್ದರು. ಮಂಡಲಿಯ ಸಂಪೂರ್ಣ ಆಡಳಿತವನ್ನು ವೀರಣ್ಣನವರಿಗೆ ವಹಿಸಿ ಚಂದಣ್ಣನವರು ಆರಾಮವಾಗಿ ಕಾಲಕಳೆಯಲು ಪ್ರಾರಂಭಿಸಿದರು. ಮಂಡಲಿಯ ಜವಾಬ್ದಾರಿಯೆಲ್ಲವನ್ನು ವೀರಣ್ಣನವರಿಗೆ ವಹಿಸಿದ ಮೇಲೆ ಚಂದಣ್ಣನವರು ನಿಶ್ಚಿಂತೆಯಿಂದಿದ್ದರು . ೨೬-೬-೧೯೧೭ ರಲ್ಲಿ ಚಂದಣ್ಣನವರು ದೈವಾಧೀನರಾದರು.

ಆಗ ವೀರಣ್ಣನವರು ತಮ್ಮ ನಂಬಿಕೆಯನ್ನು  ಉಳಿಸಿಕೊಂಡ ರೀತಿ ಅನುಕರಣೀಯ. ಮಂಡಲಿಯ ಎಲ್ಲ ವ್ಯವಹಾರವೂ ವೀರಣ್ಣನವರ ಕೈಯಲ್ಲಿತ್ತು. ಎಲ್ಲ ನಟರಿಗೂ ಇವರನ್ನು ಕಂಡರೆ ಅಪಾರ ಗೌರವವಿತ್ತು. ಹೀಗಿರುವಾಗ ವೀರಣ್ಣನವರು ಯಾವ ಮೋಸ ಮಾಡಿದ್ದರೂ ಯಾರಿಗೂ ತಿಳಿಯುತ್ತಿರಲಿಲ್ಲ. ಮೋಸ, ತಟವಟ ಎನ್ನುವ ಕಟ್ಟ ರೀತಿ ವೀರಣ್ಣನವರ ರಕ್ತಕ್ಕೆ ವಿರುದ್ಧವಾದುದು. ಚಂದಣ್ಣನವರ ಅಂತ್ಯಕ್ರಿಯೆಗಳು ಮುಗಿದ ಮೇಲೆ, ಸಂಘದಲ್ಲಿದ್ದ ಚಿನ್ನದ ಆಭರಣಗಳನ್ನು, ಸಾಮಾನು ಸರಂಜಾಮುಗಳನ್ನು ಲೆಕ್ಕಮಾಡಿ, ಚಂದಣ್ಣನವರ ಮಗ ಪದ್ಮರಾಜಯ್ಯನಿಗೆ ಪ್ರಮುಖರ ಮುಂದೆ ಒಪ್ಪಿಸಿದರು. ಅನಂತರ ಬೇರೆ ನಾಟಕ ಮಂಡಲಿಯನ್ನು ತಾವು ಪ್ರಾರಂಭಿಸಬೇಕೆಂದಿರುವುದಾಗಿ ತಿಳಿಸಿದರು. ಇದಕ್ಕೆ ಊರಿನ ಹಿರಿಯರು ಒಪ್ಪದೆ, ಈ ನಾಟಕ ಮಂಡಲಿಗೆ ವೀರಣ್ಣನವರು ಮತ್ತು ಚಂದಣ್ಣನವರ ಅಣ್ಣನ ಮಗ ನಾಗರಾಜಯ್ಯನವರು ಜೊತೆಯಾಗಿ ಮಾಲೀಕರಾಗಿರಬೇಕೆಂದು ತೀರ್ಮಾನಿಸಿದರು. ಇದರಂತೆ ೧೯೧೭ ಜುಲೈ ಹದಿಮೂರರಂದು ನಾಟಕ ಮಂಡಲಿಯ ಮಾಲೀಕರಲ್ಲಿ ಒಬ್ಬರಾದರು ವೀರಣ್ಣನವರು.

ಇತರ ರಾಜ್ಯಗಳಲ್ಲಿ ಸಂಚಾರ

ಇಲ್ಲಿಂದ ಮುಂದಕ್ಕೆ ಗುಬ್ಬಿ ನಾಟಕ ಮಂಡಲಿಯ ಇತಿಹಾಸದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಯಿತು. ದಕ್ಷಿಣ ಕನ್ನಡ ಜಿಲ್ಲೆಗೆ ಮಂಡಲಿಯನ್ನು ತೆಗೆದುಕೊಂಡು ಹೋಗಿ ಕುಂದಾಪುರ, ಉಡುಪಿ, ಮಂಗಳೂರು ನಗರಗಳಲ್ಲಿ ವಿಜೃಂಭಣೆಯಿಂದ ನಾಟಕಗಳನ್ನಾಡಿದರು.

ಮಂಗಳೂರಿನಲ್ಲಿದ್ದಾಗ ಕಂಪೆನಿಯ ನಟೀಮಣಿ ಶ್ರೀಮತಿ ಸುಂದರಮ್ಮನವರನ್ನು ವೀರಣ್ಣನವರು ವಿವಾಹವಾದರು. ಈ ವಿವಾಹದಿಂದ ಉತ್ತಮ ಕಲಾಭಿರುಚಿಯುಳ್ಳ ಎರಡು ಸುಸಂಸ್ಕೃತ ಜೀವಗಳು ಜೊತೆ ಸೇರಿದವು.

ಕರ್ನಾಟಕದಲ್ಲಿ ಸಂಚಾರಮಾಡುತ್ತಿದ್ದ ಮಂಡಲಿಯನ್ನು ತಮಿಳುನಾಡಿಗೆ ಕರೆದೊಯ್ಯಬೇಕೆಂದು ವೀರಣ್ಣನವರು ನಿರ್ಧರಿಸಿದರು. ಕನ್ನಡನಾಡಿಗೆ ಹತ್ತಿರವಾಗಿದ್ದ ಕೊಯಮತ್ತೂರಿನಲ್ಲಿ ಕನ್ನಡಿಗರು ಅನೇಕರಿದ್ದಾರೆ. ಅಲ್ಲಿಗೆ ನಾಟಕವನ್ನು ತೆಗೆದುಕೊಂಡು ಹೋದರು. ಕೆಲವು ಕಾಲದ ಹಿಂದೆ ಅಲ್ಲಿಗೆ ವರದಾಚಾರ್ಯರು ಹೋಗಿ ನಾಟಕಗಳನ್ನಾಡಿ ಕನ್ನಡ ನಾಟಕಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸಿದ್ದರು; ಕೀರ್ತಿ ಸಂಪಾದಿಸಿದ್ದರು. ಆ ಹೆಸರನ್ನು ಉಳಿಸುವ ಕಂಕಣತೊಟ್ಟು ವೀರಣ್ಣನವರು ‘ಸದಾರಮೆ’ ನಾಟಕದಿಂದ ತಮ್ಮ ಪ್ರವಾಸವನ್ನು ಪ್ರಾರಂಭಿಸಿದರು. ಅನೇಕ ಕಡೆ ನಾಟಕವಾಡಿ ಕೀರ್ತಿ ಸಂಪಾದಿಸಿದರು.

ಸತ್ವ ಪರೀಕ್ಷೆ

ತಿರುಚಿನಾಪಳ್ಳಿಯಲ್ಲಿದ್ದಾಗ ವೀರಣ್ಣನವರಿಗೆ ಸತ್ವ ಪರೀಕ್ಷೆಯ ಕಾಲ ಬಂತು. ನಾಟಕ ಮಂಡಲಿಯಲ್ಲಿದ್ದವರನ್ನೆಲ್ಲ ತಮ್ಮ ಮಕ್ಕಳಂತೆ ಅವರು ನೋಡಿಕೊಳ್ಳುತ್ತಿದ್ದರು. ತಮಗೆ ನಡೆಯುವ ಉಪಚಾರಗಳೇ ಎಲ್ಲರಿಗೂ ನಡೆಯಬೇಕು. ತಿರುಚ್ಚಿಯಲ್ಲಿ ಅದ್ದೂರಿಯಾದ ಪ್ರಚಾರ ಕಾರ್ಯ ನಡೆಸಲು ತಮ್ಮ ಹಣವನ್ನೆಲ್ಲ ಖರ್ಚು ಮಾಡಿ, ಬಳಿ ಇದ್ದ ಚಿನ್ನದ ಆಭರಣಗಳನ್ನು ಮಾರಿ ಬಂದ ಹಣದಿಂದ ರಂಗಮಂದಿರವನ್ನು ಅಲಂಕರಿಸಿ, ಮೊದಲನೆಯ ದಿನದ ನಾಟಕವನ್ನು ಪ್ರಾರಂಭಿಸಲು ಸಿದ್ಧರಾದರು. ದುರದೃಷ್ಟವಶಾತ್‌ ಅಂದು ವಿಪರೀತ ಮಳೆ ಬಂದದ್ದರಿಂದ ನಾಟಕಕ್ಕೆ ಪ್ರೇಕ್ಷಕರೇ ಬರಲಿಲ್ಲ. ಉತ್ಪತ್ತಿ ಇಲ್ಲದೆ ಬರಿಗೈ ಆಯಿತು. ರಾತ್ರಿಯನ್ನು ನಾಟಕ ಮಂದಿರದಲ್ಲಿ ಕಳೆದು ಬೆಳಗ್ಗೆ ಛತ್ರಕ್ಕೆ ಬಂದರು.  ಕೈಯಲ್ಲಿ ಹಣವಿಲ್ಲ. ತಳಿದವರಾದರೂ ಸಿಕ್ಕರೆ ಸಾಲ ಕೇಳಬೇಕೆಂದು ಊರೆಲ್ಲ ಸುತ್ತಿದರು. ಯಾರ ದರ್ಶನವೂ ಆಗಲಿಲ್ಲ. ಜೇಬನ್ನು ತಡಕಿದರೆ ಚಿಲ್ಲರೆ ಹಣ ಇತ್ತು. ಅದನ್ನು ಕಂಡ ತಕ್ಷಣ ತಮ್ಮ ಹಸಿವಿನ ನೆನಪು ಬಂತು ಉಪಾಹಾರ ಮಂದಿರಕ್ಕೆ ಹೋಗಿ ತಿಂಡಿ ತಿಂದು ಮತ್ತೆ ಸ್ವಲ್ಪ ಕಾಲ ಪರಿಚಿತರಾದವರು ಸಿಗುವರೇನೋ ಎಂದು ಸುತ್ತಾಡಿದರು. ನಿರಾಶೆ ಹೊಂದಿ ಮಧ್ಯಾಹ್ನ ಛತ್ರಕ್ಕೆ ಬಂದರೆ ಎಲ್ಲರೂ ಹಸಿದು ಕುಳಿತಿದ್ದರು. ಸುಮಾರು ನೂರು ಜನಕ್ಕೆ ಅಡಿಗೆಯಾಗಬೇಕಿತ್ತು. ಅಡಿಗೆಮನೆ ತಣ್ಣಗಿತ್ತು. ಇದನ್ನು ಕಂಡ ವೀರಣ್ಣನವರಿಗೆ ಕೈಕಾಲು ಉಡುಗಿದಂತಾಯಿತು. ತಾವು ಮಾತ್ರ ಚೆನ್ನಾಗಿ ತಿಂದು ಬಂದಿದ್ದಾರೆ, ತಮ್ಮನ್ನು ನಂಬಿದ ಜನ ಹಸಿದು ಕುಳಿತಿದ್ದಾರೆ. ತಮ್ಮ ಮೇಲೆ ತಮಗೇ ಅಸಹ್ಯ ಭಾವನೆ ಬಂತು. ಗುಬ್ಬಿಯ ಚನ್ನಬಸವೇಶ್ವರನನ್ನು ಪ್ರಾರ್ಥನೆ ಮಾಡಿ, ಹಳೆಯ ಸರಕುಗಳಲ್ಲಿ ಏನಾದರೂ ಬೆಲೆಯುಳ್ಳ ಪದಾರ್ಥ ಸಿಗುತುವುದೇನೊ ಎಂದು ಹುಡುಕಾಡಿದರು. ಭಗವಂತನ ಕೃಪೆಯಿಂದ ಪತ್ನಿ ಸುಂದರನಮ್ಮನವರ ಬಳಿ ಚಿನ್ನದ ತೋಡದ ಚೂರು ಸಿಕ್ಕಿತು. ಸಾಕ್ಷಾತ್‌ ಈಶ್ವರನೇ ಪ್ರತ್ಯಕ್ಷವಾದಷ್ಟು ಸಂತೋಷವಾಯಿತು. ಅದನ್ನು ಮಾರಿ ಬಂದ ಹಣದಿಂದ ಸಂಜೆ ೫ ಗಂಟೆಗೆ ಎಲ್ಲರ ಊಟವಾಯಿತು. ಆ ದಿನ ರಾತ್ರಿ ನಾಟಕ ಚೆನ್ನಾಗಿ ನಡೆದು ಉತ್ಪತ್ತಿ ತೃಪ್ತಿಕರವಾಗಿತ್ತು. ಈ ಘಟನೆ ವೀರಣ್ಣನವರ ಸತ್ವವನ್ನು ಪರೀಕ್ಷಿಸಿತು.

ಅಂದಿನಿಂದ ತಮ್ಮನ್ನು ನಂಬಿದವರನ್ನು ನಿರ್ಲಕ್ಷಿಸಬಾರದೆಂದೂ ಆಪತ್ಕಾಲಕ್ಕೆ ಯಾವಾಗಲೂ ಸಿದ್ಧವರಿಬೇಕೆಂದೂ ನಿರ್ಧರಿಸಿದರು. ದೇವರನ್ನು ನಂಬಿದರೆ ತಮ್ಮನ್ನು ಅವನು ಕೈಬಿಡುವುದಿಲ್ಲವೆಂದು ದೃಢವಾಗಿ ನಂಬಿದರು.

 

ಗುಬ್ಬಿ ವೀರಣ್ಣ ‘ಹಿಸ್ ಲವ್ ಅಫೇರ್’ ಮೂಕಚಿತ್ರದಲ್ಲಿ

 

 

‘ಜೀವನ ನಾಟಕ’ದಲ್ಲಿ ಬಿ. ಜಯಮ್ಮನವರೊಡನೆ

ಆಗ ತಮಿಳು ನಾಟಕಗಳು ಚೆನ್ನಾಗಿ ಬೆಳೆದಿರಲಿಲ್ಲ. ಜನರ ಅಭಿರುಚಿಯೂ ಹಾಗೇ ಇತ್ತು. ಅವರಿಗೆ ಪಾತ್ರಕ್ಕೆ ಬೇಕಾದ ವೇಷ, ಭಾಷೆಗಳು ತಿಳಿದಿರಲಿಲ್ಲ. ‘ವಳ್ಳೀ ಪರಿಣಯ’ದಲ್ಲಿ ಸುಬ್ರಹ್ಮಣ್ಯನ ಪಾತ್ರಧಾರಿಯು ಚಮಕಿ, ಹಂಟಿಂಗ್‌ ಸೂಟು, ಕಾಲುಚೀಲ, ಬೂಡ್ಸು, ಕೈಗಡಿಯಾರ ಕನ್ನಡಕ ಹಾಕಿಕೊಂಡು ಬರುತ್ತಿದ್ದನಂತೆ! ಜನಕ್ಕೆ ಸಂಗೀತ ಮುಖ್ಯವಾಗಿತ್ತೇ ವಿನಾ ಸಹಜತೆಯ ಕಡೆ ಗಮನವಿರಲಿಲ್ಲ ಒಳ್ಳೆಯ ಕ್ರಾಪ್‌ ಬಾಚಿಕೊಂಡು ದೇವರ ಸ್ತುತಿಯನ್ನು ರಾಗರಾಗವಾಗಿ ಹಾಡುತ್ತಿದ್ದರೆ ಅವರಿಗೆ ಸಂತೋಷ. ಹೀಗಿದ್ದ ತಮಿಳು ನಾಟಕವನ್ನು ಪರಿಷ್ಕರಿಸಿದ ಕೀರ್ತಿ ಗುಬ್ಬಿ ವೀರಣ್ಣನವರಿಗೆ ಸಲ್ಲುತ್ತದೆ.

ಮಂಡಲಿಯ ಯಜಮಾನತ್ವ

ಇದುವರೆಗೂ ಜಂಟಿ ಯಜಮಾನರಾಗಿ ವೀರಣ್ಣನವರಿದ್ದರು. ಇವರಿಗೆ ಮೋಸ ಮಾಡಬೇಕೆಂದು ಇವರ ಸಹಪಾಲುದಾರರು ಯೋಚಿಸಿ, ಇಲ್ಲದ ಲೆಕ್ಕಗಳನ್ನು ಕೊಡುವಂತೆ ಬಲಾತ್ಕಾರಪಡಿಸಿ, ಕಿರುಕುಳ ಕೊಡಲು ಪ್ರಾರಂಭಿಸಿದರು. ಈ ಬಗೆಯ ಬೆದರಿಕೆಗೆ ಜಗ್ಗದೆ, ಸಂಸ್ಥೆಯ ಎಲ್ಲ ಲೆಕ್ಕಗಳನ್ನು ಒಪ್ಪಿಸಿ, ಸಂಘದ ೯೦೦೦ ರೂ.ಗಳ ಸಾಲವನ್ನು ತಾವೇ ವಹಿಸಿಕೊಂಡರು. ಪಾಲುಗಾರಿಕೆ ಸಾಕೆಂದು ಹೇಳಿ, ತಾವೇ ಏಕೈಕ ಸ್ವಾಮಿತ್ವವನ್ನು ವಹಿಸಿಕೊಂಡರು. ೧೯೨೦ ರಲ್ಲಿ ವೀರಣ್ಣನವರು ಗುಬ್ಬಿ ಕಂಪೆನಿಯ ಮಾಲೀಕರಾದರು. ಇದರಿಂದ ವೀರಣ್ಣನವರಿಗೆ ತಮ್ಮಲ್ಲಿದ್ದ ಆತ್ಮವಿಶ್ವಾಸವು ವ್ಯಕ್ತಪಡುತ್ತದೆ.

ವಿದ್ಯಾ ಇಲಾಖೆಯಲ್ಲಿದ್ದ ಉತ್ತಮ ಪಂಡಿತರೂ, ಕವಿಗಳೂ ಆಗಿದ್ದ ಬೆಳ್ಳಾವೆ ನರಹರಿಶಾಸ್ತ್ರಿಗಳ ಸ್ನೇಹ ವೀರಣ್ಣನವರಿಗೆ ದೊರೆಯಿತು. ಈ ಸ್ನೇಹದಿಂದ ಸಂಘಕ್ಕೆ ಶುಕ್ರದೆಸೆ ಪ್ರಾರಂಭವಾಯಿತೆನ್ನಬಹುದು. ಈ ಕವಿಯನ್ನು ಆತ್ಮೀಯವಾದ ವಿಶ್ವಾಸ, ಗೌರವಗಳಿಂದ ವೀರಣ್ಣನವರು ಕಡೆಯವರೆಗೂ ನಡೆಸಿಕೊಂಡರು. ಇದರ ಫಲವನ್ನು ಸಂಘವು ಚೆನ್ನಾಗಿ ಪಡೆಯಿತು. ಶಾಸ್ತ್ರಿಗಳು ರಂಗಭೂಮಿಗೆ ಹೊಂದಿಕೊಳ್ಳುವ ಅನೇಕ ನಾಟಕಗಳನ್ನು ಬರೆದು ಮಂಡಲಿಗೆ ಕೊಟ್ಟರು. ಸುಸಂಸ್ಕೃತರಾದ ಶಾಸ್ತ್ರಿಗಳು ಸಂಘದ ನಟರಿಗೆ ಉಪಾಧ್ಯಾಯರಾಗಿ, ಮಾರ್ಗದರ್ಶಕರಾಗಿ ನಿಂತರು. ಈ ಸೇವೆಯಿಂದಲೇ ತಮ್ಮ ಮಂಡಲಿಯು ವಿದ್ಯಾವಂತ ಜನತೆಯ ಪ್ರೀತಿಗೆ ಪಾತ್ರವಾಯಿತೆಂದು ವೀರಣ್ಣನವರು ಕೃತಜ್ಞತೆಯಿಂದ ಸ್ಮರಿಸಿಕೊಂಡಿದ್ದಾರೆ.

ಮಾತೇ ಮಾಣಿಕ್ಯ

ಕೊಟ್ಟ ಮಾತಿಗೆ ತಪ್ಪಬಾರದೆಂಬ ನಿಯಮವನ್ನು ಪಾಲಿಸಿದವರು ವೀರಣ್ಣನವರು. ಇದ್ದಕ್ಕಿದ್ದಂತೆ ಅವರು ವಿಷಮ ಶೀತಜ್ವರಕ್ಕೆ ತುತ್ತಾದರು. ಬದುಕುವುದೇ ಕಷ್ಟವಾಯಿತು. ತಾವು ಬದುಕದಿದ್ದರೆ ಮಂಡಲಿಯನ್ನು ನೋಡಿಕೊಳ್ಳುವವರಿವುದಿಲ್ಲವೆನ್ನುವುದು ತಿಳಿಯಿತು. ಮಂಡಲಿಯಲ್ಲಿದ್ದ ಸಿ.ಬಿ. ಮಲ್ಲಪ್ಪನವರೆಂಬ ಆಪ್ತರನ್ನು ಕರೆದು, “ಸ್ವಾಮಿ, ನಾನು ಉಳಿಯುವ ನಂಬಿಕೆ ಇಲ್ಲ. ನಾನು ಈ ಕಾಯಿಲೆಯಿಂದ ಬದುಕಿದರೆ ಮುಂದೆ ಈ ಸಂಘವನ್ನು ನಾವಿಬ್ಬರೂ ಭಾಗದಲ್ಲಿ ನಡೆಸೋಣ. ಒಂದು ವೇಳೆ ಸತ್ತರೆ ಸಂಘವನ್ನು  ನಿಮ್ಮ ವಶಕ್ಕೆ ತೆಗೆದುಕೊಂಡು ನನ್ನ ಹೆಂಡತಿ ಮಕ್ಕಳಿಗೆ ಧರ್ಮದ ದೃಷ್ಟಿಯಿಂದ ಏನಾದರೂ ಕೊಡಿ” ಎಂದು ಹೇಳಿದರು. ಭಗವಂತನ ದಯೆಯಿಂದ ವೀರಣ್ಣನವರಿಗೆ ಗುಣವಾಯಿತು. ಕೊಟ್ಟ ಮಾತನ್ನು ಮರೆಯದೆ ಸಿ.ಬಿ. ಮಲ್ಲಪ್ಪನವರನ್ನು ಸಂಘದ ಪಾಲುದಾರರನ್ನಾಗಿ ತೆಗೆದುಕೊಂಡರು.

ಕೈಲಾಸಂರ ಮೆಚ್ಚುಗೆ

೧೯೨೧ ರಲ್ಲಿ ನಾಡಿನ ಹಿರಿಯ ಪಟ್ಟಣವಾದ ಬೆಂಗಳೂರಿಗೆ ಬಂದು ನಾಟಕವಾಡಲು ಪ್ರಾರಂಭಿಸಿದರು. ‘ಪ್ರಭಾಮಣಿ ವಿಜಯ’ವೆಂಬ ನಾಟಕದಲ್ಲಿ ಹುಚ್ಚನ ಪಾತ್ರವನ್ನು ವೀರಣ್ಣನವರು ಹಾಕುತ್ತಿದ್ದರು. ಕನ್ನಡ ನಾಟಕ ಪ್ರಪಿತಾಮಹ ಎನಿಸಿಕೊಂಡ ಪ್ರಸಿದ್ಧ ನಾಟಕಕಾರ ಕೈಲಾಸಂರವರು ಈ ನಾಟಕವನ್ನು ನೋಡಲು ಬಂದಿದ್ದರು. ವೀರಣ್ಣನವರ ಅಭಿನಯವನ್ನು ಮೆಚ್ಚಿ ತಮ್ಮ ಕೈಲಿದ್ದ ಬಹಳ ಬೆಲೆಬಾಳುವ ಕೈಗಡಿಯಾರವನ್ನು ಬಹುಮಾನವಾಗಿತ್ತು ಆಶೀರ್ವದಿಸಿದರು. ನಯವಾದ ಹಾಸ್ಯಕ್ಕೆ ಸಮಾಜದ ಓರೆಕೋರೆಗಳನ್ನು ತಿದ್ದಲು ಸಾಧ್ಯವಿದೆ ಎಂದು ನಿರೂಪಿಸಿದ ಕೈಲಾಸಂರವರು ಸಾಮಾನ್ಯರಲ್ಲ. ಅಂತಹವರಿಂದ ಅಪೇಕ್ಷಿಸದೆ ಗೌರವ, ಮೆಚ್ಚುಗೆ ಸಂಪಾದಿಸುವುದೆಂದರೆ ಸಾಮಾನ್ಯವಲ್ಲ.

ಬೆಂಗಳೂರಿನಲ್ಲಿ ನಾಟಕ ಮಂದಿರ ನಿರ್ಮಾಣ

ಬೆಂಗಳೂರಿನಲ್ಲಿ ಕೆಂಪೇಗೌಡ ಸರ್ಕಲ್ ನಲ್ಲಿರುವ ಸರ್ಪಭೂಷಣ ಮಠಾಧಿಪತಿಗಳು ವೀರಣ್ಣನವರನ್ನು ನಾಟಕ ಮಂದಿರ ಕಟ್ಟುವಂತೆ ಒತ್ತಾಯಪಡಿಸಿದರು. ಅದಕ್ಕೆ ಬೇಕಾದ ಖಾಲಿ ಜಾಗವನ್ನು ತಾವು ಕೊಡಲು ಮುಂದೆ ಬಂದರು. ಆದರೆ ನಾಟಕ ಮಂದಿರ ಕಟ್ಟುವುದು ಸಾಧಾರಣವಾದ ಕೆಲಸವಲ್ಲ. ಅದಕ್ಕೆ ಅಪಾರವಾದ ಹಣಬೇಕು. ಇದು ತಮ್ಮಲ್ಲಿಲ್ಲವೆಂದು ತಿಳಿದಿದ್ದ ವೀರಣ್ಣನವರು ಈ ಕೆಲಸ ತಮ್ಮಿಂದಾಗದೆಂದು ಸ್ವಾಮಿಗಳಿಗೆ ಹೇಳಿದರು . ಸ್ವಾಮಿಗಳಿಗೆ ವೀರಣ್ಣನವರಲ್ಲಿ ಅಪಾರ ನಂಬಿಕೆ ಇತ್ತು. ಯಾರಾದರೂ ನಾಟಕ ಮಂದಿರವನ್ನು ಕಟ್ಟುವಂತಿದ್ದರೆ ಅದು ವೀರಣ್ಣನವರೊಬ್ಬರಿಂದ ಮಾತ್ರ ಸಾಧ್ಯವೆಂದು ನಂಬಿದ್ದರು. ಕಷ್ಟಪಟ್ಟು ಅವರನ್ನು ಒಪ್ಪಿಸಿದರು.

ಈಗ ಗೀತಾ ಚಿತ್ರಮಂದಿರವಿರುವ ಜಾಗವನ್ನು ನಾಟಕ ಮಂದಿರಕ್ಕೆ ಸ್ವಾಮಿಗಳು ಕೊಟ್ಟರು. ವೀರಣ್ಣನವರು ಕೊಟ್ಟ ಮಾತಿನಂತೆ ಸಾಲಸೋಲ ಮಾಡಿ, ಕೆಲಸ ಪ್ರಾರಂಭಿಸಿದರು. ಸುತ್ತಮುತ್ತಲಿನ ಊರುಗಳಲ್ಲಿ ನಾಟಕವಾಡಿ ಬಂದ ಹಣವನ್ನು ಮಂದಿರದ ನಿರ್ಮಾಣಕ್ಕೆ ಉಪಯೋಗಿಸುತ್ತಿದ್ದರು.

ಹೀಗಿದ್ದಾಗ ಮಗ ರೇವಣ್ಣನಿಗೆ, ಮಗಳು ಸ್ವರ್ಣಮ್ಮನಿಗೆ ಸಿಡುಬು ತಗುಲಿತು. ಏನು ಪ್ರಯತ್ನ ಮಾಡಿದರೂ ವಾಸಿಯಾಗದೆ ಮಗ ರೇವಣ್ಣ ನಿಧನ ಹೊಂದಿದ. ವೀರಣ್ಣನವರು ಅಪಾರ ದುಃಖಕ್ಕೀಡಾದರೂ, ಕರ್ತವ್ಯವಿಮುಖರಾಗದೆ ನಾಟಕಗಳನ್ನಾಡುವುದನ್ನು ಮುಂದುವರಿಸಿದರು.

ಮೈಸೂರು ಮಹಾರಾಜರಿಂದ ಮನ್ನಣೆ

೧೯೨೩ ರಲ್ಲಿ ಮಂಡಲಿಯನ್ನು ಮೈಸೂರಿಗೆ ಕರೆತಂದಾಗ ವೀರಣ್ಣನವರಿಗೆ ಹೊಸ ಅನುಭವ ಕಾದಿತ್ತು. ಹಳ್ಳಿಯ ಸಂಘವೊಂದು ಬರುವುದೆಂದು ಜನರು ಅಸಡ್ಡೆಯಿಂದ ಇದ್ದರು. ಈ ಬಗೆಯ ಭಾವನೆಯನ್ನು ತೊಡೆದು ಹಾಕಬೇಕೆಂದು ನಿರ್ಧರಿಸಿ, ಭವ್ಯವಾದ ದೃಶ್ಯಗಳನ್ನು ತಯಾರಿಸಿ ‘ಸುಭದ್ರಾ ಕಲ್ಯಾಣ’, ‘ಭಕ್ತ ಕಬೀರ್’ ಮುಂತಾದ ನಾಟಕಗಳನ್ನು ಆಡಿದರು. ನಾಟಕಗಳು ಚೆನ್ನಾಗಿ ಬಂದದ್ದರಿಂದ ಜನರ ಅಭಿಮಾನ ಸಿಕ್ಕಿತು.

ವೀರಣ್ಣನವರ ನಾಟಕಗಳ ಕೀರ್ತಿ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ತಿಳಿಯಿತು. ಆ ನಾಟಕಗಳನ್ನು ನೋಡಬೇಕೆನ್ನಿಸಿತು ಮಹಾರಾಜರಿಗೆ. ದೇಶವನ್ನು ಆಳುತ್ತಿದ್ದ ಪ್ರಭುಗಳ ಮುಂದೆ ನಾಟಕವಾಡುವುದೆಂದರೆ ಸಾಮಾನ್ಯವೇ? ಅದರಲ್ಲಿಯೂ ಶ್ರೀ ಕೃಷ್ಣರಾಜ ಒಡೆಯರು ಸಂಗೀತ, ನಾಟಕ, ಸಾಹಿತ್ಯಗಳಿಗೆ ಬಹಳ ಪ್ರೋತ್ಸಾಹ ಕೊಡುವ ರಸಿಕರು, ಸ್ವತಃ ಚೆನ್ನಾಗಿ ಸಂಗೀತ ಬಲ್ಲವರು. ಅವರು ‘ಭೇಷ್‌’ ಎಂದರೆ ಯಾವ ಕಲಾವಿದನಿಗಾಗಲಿ ಹೆಮ್ಮೆ. ನಾಟಕ ಆಡಬೇಕೆಂದು ಕರೆಬಂದಾಗ ವೀರಣ್ಣನವರಿಗೆ ಬಹಳ ಸಂತೋಷವಾಯಿತು. ನಾಟಕ ಚೆನ್ನಾಗಿ ಆಡಬೇಕೆಂದು ನಿರ್ಧರಿಸಿದರು. ನಟರಿಗೆ ಒಳ್ಳೆಯ ತರಬೇತಿ ಕೊಟ್ಟರು. ಅಪಾರ ಯಶಸ್ಸನ್ನು ತಂದಿದ್ದ ‘ಸದಾರಮೆ’ ನಾಟಕವನ್ನು ಮಹಾರಾಜರ ಮುಂದೆ ಅಭಿನಯಿಸಿದರು. ಮಹಾರಾಜರಿಗೆ ಬಹಳ ಸಂತೋಷವಾಗಿ, “ವೀರಣ್ಣನವರೆ, ನಾಟಕವು ಬಹಳ ಚೆನ್ನಾಗಿತ್ತು” ಎಂದು ಹೇಳಿದರು.

ಅನಂತರ ‘ಕಬೀರ್’, ‘ಪ್ರಭಾಮಣಿವಿಜಯ’ ನಾಟಕಗಳನ್ನು ಮಹಾರಾಜರು ನೋಡಿ ಆನಂದಿಸಿದರು. ಅರಮನೆಗೆ ವೀರಣ್ಣನವರನ್ನು ಕರೆಸಿಕೊಂಡು, ತಾಂಬೂಲದೊಂದಿಗೆ ಎರಡು ಸಾವಿರ ರೂಪಾಯಿಗಳನ್ನು ಕೊಟ್ಟರು. ಆಗ ವೀರಣ್ಣನವರು, “ಮಹಾಸ್ವಾಮಿಗಳೇ, ತಮ್ಮ ಆಶೀರ್ವಾದಬಲದಿಂದ ಹಣವನ್ನು ಸಂಪಾದಿಸಿಕೊಳ್ಳುತ್ತೇನೆ. ತಮ್ಮ ಸನ್ನಿಧಿಯಲ್ಲಿ ಕಲಾಸೇವೆ ಮಾಡಿದ ಗುರುತು ಉಳಿಯುವುದಕ್ಕೆ ಏನಾದರೂ ದಯಪಾಲಿಸಬೇಕು” ಎಂದರು.

ಈ ವಿನಂತಿಯನ್ನು ಗಮನಿಸಿ ಮಹಾರಾಜರು ‘ಗುಲೇಬಕಾವಲಿ’ ನಾಟಕ ಆಡುವಂತೆ ಆಜ್ಞಾಪಿಸಿದರು. ನಾಟಕದಲ್ಲಿ ವೀರಣ್ಣನವರ ಮೂರು ಬಗೆಯ ಪಾತ್ರಗಳನ್ನು  ನೋಡಿ, ಅದರಲ್ಲಿ ಬರುವ ಹಾಸ್ಯವನ್ನು ತಡೆಯಲಾರದೆ ನಕ್ಕು ಸಂತೋಷಪರವಶರಾದರು. ಇದಾದನಂತರ ವೀರಣ್ಣನವರು ಬರುವ ದೃಶ್ಯಗಳನ್ನೊಳಗೊಂಡ ಪ್ರತ್ಯೇಕ ನಾಟಕವನ್ನು ನೋಡಿ ಮಹಾರಾಜರು, “ನಿಮ್ಮ ಪಾತ್ರಗಳು ಪ್ರತಿಯೊಂದೂ ಬಹು ಚೆನ್ನಾಗಿದ್ದಿತು” ಎಂದು ಹೊಗಳಿದರು. ತಮ್ಮ ಲಸಂತೋಷದ ನೆನಪಿಗಾಗಿ ‘ವರ್ಸಟೈಲ್‌ ಕಮೆಡಿಯನ್‌’ (ಬಹುರೀತಿಗಳ ವಿನೋದನಟ) ಎಂಬ ಬಿರುದನ್ನು ಕೊಟ್ಟು ವೀರಣ್ಣನವರನ್ನು ಗೌರವಿಸಿದರು.

೧೯೨೪ರ ನವೆಂಬರ್ ೧೪ರ ವೇಳೆಗೆ ಬೆಂಗಳೂರಿನಲ್ಲಿ ಕಟ್ಟುತ್ತಿದ್ದ ನಾಟಕ ಮಂದಿರ ಸಿದ್ಧವಾಯಿತು. ಅದಕ್ಕೆ ಚನ್ನಬಸವೇಶ್ವರ ನಾಟಕ ಮಂದಿರವೆಂದು ಹೆಸರಿಟ್ಟರು. ಇದರಿಂದ ತಾವು ಬಹು ಕಾಲದಿಂದಬೇಕೆಂದು ಹಂಬಲಿಸುತ್ತಿದ್ದ ನಾಟಕ ಮಂದಿರ ಸಿದ್ಧವಾದಂತಾಯಿತು.

ನಾಟಕದವರೆಂದರೆ ಕೀಳು ಜನ ಎಂಬ ಭಾವನೆ ಆ ಕಾಲದಲ್ಲಿತ್ತು. ಅದನ್ನು ತೊಡೆದುಹಾಕಲು ವೀರಣ್ಣನವರು ಬಹಳ ಶ್ರಮಿಸಿದರು. ತಮ್ಮ ಜೊತೆಯ ನಟ ನಟಿಯರ ಅಭ್ಯುದಯದ ವಿಷಯದಲ್ಲಿ ತುಂಬ ಆಸಕ್ತಿ ವಹಿಸುತ್ತಿದ್ದರು. ಅವರು ಮದುವೆ ಮಾಡಿಕೊಳ್ಳುವಾಗ ಅಗತ್ಯವಾದ ಸಹಾಯ ಮಾಡುತ್ತಿದ್ದರು. ಅವರು ಒಳ್ಳೆಯ ನಡೆತೆಯಿಂದ ಬಾಳಲು ಶ್ರಮಿಸಿದರು.

ಬಾಲಕಲಾವಿವರ್ಧಿನಿ

ಕಲೆಯ ಬೆಳೆಯನ್ನು ಎಳೆಯ ಹುಡುಗರಲ್ಲಿ ಕಾಣಬೇಕೆಂದು ವೀರಣ್ಣನವರಿಗೆ ಅನ್ನಿಸಿತು. ೧೯೨೫ ರಲ್ಲಿ ೧೪ ವರ್ಷಗಳೊಳಗಿದ್ದ ಹುಡುಗರಿಗೆ ನಾಟಕವಾಡುವುದರಲ್ಲಿ ತರಬೇತಿ ನೀಢಿ, ‘ಬಾಲಕಲಾವಿವರ್ಧಿನಿ’ ಎಂಬ ಸಂಘವನ್ನು ಸ್ಥಾಪಿಸಿದರು. ಆಡುವವರೆಲ್ಲ ಪುಟ್ಟ ಮಕ್ಕಳೇ! ದೊಡ್ಡವರನ್ನು ಮೀರಿಸುವಂತೆ ಅಭಿನಯಿಸಿದ ಈ ಮಕ್ಕಳು ಕೀರ್ತಿವಂತರಾದರು.

ವೀರಣ್ಣನವರು ಪ್ರಯೋಗಪ್ರಿಯರು. ಹೊಸದನ್ನು ಹುಡುಕುವವರು. ೧೯೨೬ ರಲ್ಲಿ ಪ್ರಥಮ ಬಾರಿಗೆ ವಿದ್ಯುಚ್ಛಕ್ತಿಯ ದೀಪಗಳಿಂದ ನಾಟಕವಾಡಲು ಪ್ರಾರಂಭಿಸಿದರು. ರಾತ್ರಿ, ಹಗಲು, ಸಂಜೆಗಳನ್ನು ವಿವಿಧ ಬೆಳಕುಗಳಿಂದ ತೋರಿಸಿ ನಾಟಕ ಕಲೆಗೆ ಹೊಸ ಚೈತನ್ಯವನ್ನು ತಂದರು.

ಚಿತ್ರ ಪ್ರಪಂಚ

೧೯೨೬ರ ವೇಳೆಗೆ ಭಾರತದಲ್ಲಿ ಚಲನಚಿತ್ರಗಳು ಪ್ರಸಿದ್ಧವಾಗತೊಡಗಿದವು. ಇವು ಮಾತಿಲ್ಲದ ಮೂಕ ಚಿತ್ರಗಳು. ವೀರಣ್ಣನವರಿಗೂ ಚಲನಚಿತ್ರಗಳನ್ನು ತೆಗೆಯಬೇಕೆನ್ನಿಸಿತು. ಮನಸ್ಸಿಗೆ ಹೊಸ ಭಾವನೆ ಬಂದರೆ ಅದನ್ನು ಕಾರ್ಯಗತ ಮಾಡುವ ಚೈತನ್ಯಶಾಲಿಗಳು ವೀರಣ್ಣನವರು. ಕನ್ನಡ ಸಾಹಿತ್ಯ ಪ್ರಪಂಚದ ಹಿರಿಯ ಲೇಖಕರಾಗಿದ್ದ ದೇವುಡು ನರಸಿಂಹಶಾಸ್ತ್ರಿಗಳ ಸಹಕಾರದಿಂದ ‘ಹರಿಮಾಯ’ ‘ಹಿಸ್‌ ಲವ್ ಆಫೇರ್’ ‘ಕಳ್ಳರ ಕೂಟ’ ಎಂಬ ಚಿತ್ರಗಳನ್ನು ತೆಗೆದರು. ಇದರಲ್ಲಿ ನಷ್ಟ ಸಂಭವಿಸಿತು. ಆದರೆ ವೀರಣ್ಣನವರು ನಂಬಿದ್ದ ಮಂತ್ರವೆಂದರೆ ‘ಧೈರ್ಯಂ ಸರ್ವತ್ರ ಸಾಧನಂ’ ಎಂಬುದು. ಧೈರ್ಯದಿಂದ ನಷ್ಟವನ್ನು ತಮ್ಮ ಸ್ವಂತ ಹಣದಿಂದ ತುಂಬಿ ಕಲಾಪ್ರಪಂಚದಲ್ಲಿ ನಂಬಿಕೆಗೆ ಮತ್ತೊಂದು ಹೆಸರಾಗಿ ವೀರಣ್ಣನವರು ಬೆಳಗಿದರು.

ಕುರುಕ್ಷೇತ್ರ

೧೯೩೪ರ ಡಿಸೆಂಬರ್ ಮೂವತ್ತೊಂದು ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಮರೆಯಲಾಗದ ದಿನ. ಹಿಂದೆಂದೂ ಕಾಣದ ವೈಭವವನ್ನು ಮೆರೆದ ‘ಕುರುಕ್ಷೇತ್ರ’ ನಾಟಕವನ್ನು ಅಂದು ವೀರಣ್ಣನವರು ಬೆಂಗಳೂರಿನ ಶಿವಾನಂದ ಥಿಯೇಟರಿನಲ್ಲಿ ಆಡಿದರು. ಪಾಂಡವ ಕೌರವರ ಮಹಾಯುದ್ಧ ಈ ನಾಟಕದ ವಸ್ತು. ಇದನ್ನು ಬಹು ವೈಭವದಿಂದ ವೀರಣ್ಣನವರು ಪ್ರದರ್ಶಿಸಿದರು. ನಿಜವಾದ ಆನೆ, ಕುದುರೆಗಳನ್ನು ರಂಗಮಂದಿರದ ಮೇಲೆ ತಂದಾಗ ಜನಕ್ಕೆ ಆದ ಆನಂದ ಹೇಳತೀರದು. ಈಗಲೂ ನಾಟಕಗಳಲ್ಲಿ ಜೀವಂತ ಪ್ರಾಣಿಗಳನ್ನು ತರುವ ಸಾಹಸಿಗಳಿಲ್ಲ.

ವೀರಣ್ಣನವರು ನಾಟಕಗಳಲ್ಲಿ ಅಭಿನಯ ಮಾಡುವುದನ್ನು ಪ್ರಾರಂಭಿಸಿದಾಗ, ರಂಗಭೂಮಿಗೆ ಸರಿಯಾದ ದೀಪಗಳು ಸಹ ಇರಲಿಲ್ಲ. ಪರದೆ ಮೇಲಕ್ಕೆ ಹೋಗಿ ಕೆಳಕ್ಕೆ ಬರುವುದೇ ಪ್ರೇಕ್ಷಕರಿಗೆ ಅದ್ಭುತವಾಗಿ ಕಾಣುತ್ತಿತ್ತು. ಈ ರಂಗಭೂಮಿಯ ಮೇಲೆ ವೀರಣ್ಣನವರು ಜೀವಂತ ಆನೆ, ಕುದುರೆಗಳನ್ನು ತಂದರು ಎಂದರೆ ಅವರು ರಂಗಭೂಮಿಯನ್ನು ಎಷ್ಟರ ಮಟ್ಟಿಗೆ ಮಾರ್ಪಡಿಸಿದರು ಎಂಬುದು ಸ್ಪಷ್ಟವಾಗುತ್ತದೆ.

ಚಿತ್ರಮಂದಿರ ಸ್ಥಾಪನೆ

೧೮೩೫ರಲ್ಲಿ ಬೆಂಗಳೂರಿನಲ್ಲಿದ್ದ ಚಿತ್ರಮಂದಿರಗಳು ಎರಡೇ ಎರಡು! ಈಗ ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿರುವ ಸಾಗರ್ ಟಾಕೀಸಿನ ಜಾಗವನ್ನು ವೀರಣ್ಣನವರು ಕೊಂಡರು. ಚಿತ್ರಮಂದಿರ ಕಟ್ಟಬೇಕೆಂದು ನಿರ್ಧರಸಿ ಅದರ ಕೆಲಸ ಪ್ರಾರಂಭಿಸಿದರು. ಆದರೆ ಅದಕ್ಕೆ ಬೇಕಾಗುವಷ್ಟು ಹಣ ಇರಲಿಲ್ಲ.

ನಾಲ್ಕನೆಯ ಬಾರಿಗೆ ತಮಿಳುನಾಡಿನಲ್ಲಿ ಪ್ರವಾಸ ಕೈಕೊಂಡ ವೀರಣ್ಣನವರು ಮಧುರೆಗೆ ಹೋಗುತ್ತಿದ್ದರು. ಚಿತ್ರಮಂದಿರ ಕಟ್ಟಲು ಮಾಡಿದ್ದ ಸಾಲದ ಬಗ್ಗೆ ಚಿಂತಿಸುತ್ತ ಭಗವಂತನನ್ನು ಪ್ರಾರ್ಥಿಸುತ್ತಿದ್ದರು. ರೈಲಿನಲ್ಲಿ ಅವರ ಎದುರುಗಡೆ ಕುಳಿತಿದ್ದ ಮುಸಲ್ಮಾನರೊಬ್ಬರು ಮಾತಿಗೆ ಪ್ರಾರಂಭಿಸಿದರು.

“ಏನೋ ಬಹಳ ಚಿಂತಿಸುತ್ತಾ ಇರುವ ಹಾಗಿದೆ.”

ಮೊದಲು ಸಂಕೋಚಪಟ್ಟ ವೀರಣ್ಣನವರು ತಮಗೆ ಒದಗಿದ ಹಣದ ತೊಂದರೆ ವಿವರಿಸಿದರು.

“ನಿಮಗೆ ಎಷ್ಟು ಹಣ ಬೇಕು?”

“ಒಂದು ಲಕ್ಷ.”

“ಒಂದು ವಾರ ಅವಕಾಶ ಕೊಡಿ. ತಂದುಕೊಡುತ್ತೇನೆ. ಒಂದು ವೇಳೆ ಹಣ ತಂದನಂತರ ನೀವು ಬೇಡ ಎಂದರೆ ಆರು ತಿಂಗಳ ಬಡ್ಡಿ ಕೊಡಬೇಕಾಗುತ್ತದೆ.”

ವೀರಣ್ಣನವರು ತಮ್ಮ ಕಿವಿಗಳನ್ನು ನಂಬಲಿಲ್ಲ. ಇದೇ ದೈವಲೀಲೆ! ಭಗವಂತನ ಕೃಪೆ! ಚನ್ನಬಸವೇಶ್ವರನ ಅನುಗ್ರಹ!

ತಮ್ಮ ಮಾತಿನಂತೆ ವಾರದೊಳಗೆ ಆತ ಹಣ ತಂದು ಒಪ್ಪಿಸಿದರು. ಇಷ್ಟೊಂದು ಹಣ ಎಲ್ಲಿಂದ ಬಂತು ಎಂದು ಮಿತ್ರರು ಕೇಳಿದರೆ ಸೌಜನ್ಯಮೂರ್ತಿ ವೀರಣ್ಣನವರು, “ಭಗವಂತ ದೊಡ್ಡವನು, ಕೊಡಿಸಿದ” ಎಂದರು.

೧೯೩೫ರಲ್ಲಿ ಚಿತ್ರಮಂದಿರ ಮುಗಿದು ತಾವು ಜೀವನದಲ್ಲಿ ಸಾಧಿಸಬೇಕೆಂದಿದ್ದದ್ದೆಲ್ಲ ತಮ್ಮದಾಯಿತು ಎನ್ನುವ ಭಾವನೆ ಅವರಿಗೆ ಬಂದಿತು. ಈ ಚಿತ್ರಮಂದಿರ ‘ಸಾಗರ್ ಟಾಕೀಸ್‌’. ಅಲ್ಲಿ ‘ಡಾಕ್ಟರ್’ ಎಂಬ ಹಿಂದಿ ಚಿತ್ರ ಬಿಡುಗಡೆಯಾಗಿ, ಉತ್ತಮ  ಚಿತ್ರಮಂದಿರವೆಂಬ ಕೀರ್ತಿಯನ್ನು ಪಡೆಯಿತು.

ಕರ್ಣಾಟಕಾಂಧ್ರ ನಾಟಕ ಸಾರ್ವಭೌಮ

ಆಂಧ್ರದಲ್ಲಿ ಪ್ರವಾಸ ಕೈಕೊಂಡಾಗ ತೆಲುಗಿಗೆ ತಮ್ಮ ನಾಟಕಗಳನ್ನು ಭಾಷಾಂತರಿಸಿ ಆಡಿದರು. ‘ಕುರುಕ್ಷೇತ್ರ’ ನಾಟಕಕ್ಕೆ ಅಭೂತಪೂರ್ವ ಸ್ವಾಗತ ದೊರೆಯಿತು. ವಿಜೃಂಭಣೆಯಿಂದ ನಾಟಕಗಳನ್ನು ಆಡಿದಾಗ ಸಂತೋಷಪಟ್ಟ ಜನತೆ ವೀರಣ್ಣನವರಿಗೆ, ‘ಕರ್ಣಾಟಕಾಂಧ್ರ ನಾಟಕ ಸಾರ್ವಭೌಮ’ ಎಂಬ ಬಿರುದನ್ನು ಕೊಟ್ಟು ಗೌರವಿಸಿತು. ಈ ಪ್ರಶಸ್ತಿಯನ್ನು ಆಂಧ್ರದ ಪ್ರಸಿದ್ಧ ಕವಿಗಳೂ, ಅಭಿನವ ವ್ಯಾಸಮುನಿ ಎಂದು ಹೆಸರು ಪಡೆದಿದ್ದವರೂ ಆಗಿದ್ದ ಶ್ರೀಪಾದ ಕೃಷ್ಣಮೂರ್ತಿಗಳಿಂದ ಕೊಡಿಸಿದರು.

೧೯೪೨ರಲ್ಲಿ ವೀರಣ್ಣನವರು ‘ಜೀವನ ನಾಟಕ’ ಎಂಬ ಕನ್ನಡ ಚಿತ್ರವನ್ನು ಸಿದ್ಧ ಮಾಡಿದರಲು. ಇದರ ಸಾಹಿತ್ಯವನ್ನು ಕನ್ನಡದಲ್ಲಿ ಬಹು ಜನಪ್ರಿಯ ಕಾದಂಬರಿಕಾರರಾಗಿದ್ದ ಅ.ನ. ಕೃಷ್ಣರಾಯರು ಬರೆದರು.

ನಾಟಕರತ್ನ

ಆ ವರ್ಷದ ದಸರಾ ಉತ್ಸವದಲ್ಲಿ ಆಗ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರು ‘ನಾಟಕರತ್ನ’ ಎಂಬ ಬಿರುದನ್ನು ವೀರಣ್ಣನವರಿಗೆ ಕೊಟ್ಟರು. ಈ ಬಿರುದು ವೀರಣ್ಣನವರ ಎರಡನೆಯ ಹೆಸರಾಗಿ ಜನಪ್ರಿಯತೆ ಗಳಿಸಿತು. ವೀರಣ್ಣನವರ ಹೆಸರು ಬಂದಾಗಲೆಲ್ಲ ಅವರನ್ನು ‘ನಾಟಕರತ್ನ ಗುಬ್ಬಿ ವೀರಣ್ಣನವರು’ ಎಂದೇ ಕರೆಯುವುದು ರೂಢಿಯಾಯಿತು.

೧೯೪೩ರಲ್ಲಿ ಬೆಂಗಳೂರಿನ ಗಾಂಧಿನಗರದಲ್ಲಿ ಗುಬ್ಬಿ ಥಿಯೇಟರ್ ಎಂಬ ನಾಟಕ ಮಂದಿರವನ್ನು ಕಟ್ಟಿದರು.

೧೯೪೪ರಲ್ಲಿ ಭಕ್ತಿರಸ ಪ್ರಧಾನವಾದ ‘ಹೇಮರೆಡ್ಡಿ ಮಲ್ಲಮ್ಮ’ ಎಂಬ ಚಿತ್ರವನ್ನು ತೆಗೆದರು.

೧೯೪೪ರಲ್ಲಿಯೇ ವೀರಣ್ಣನವರ ತಂದೆತಾಯಿಯರು ಇಬ್ಬರೂ ತೀರಿಕೊಂಡರು. ವೀರಣ್ಣನವರು ಚಿಕ್ಕವರಾಗಿದ್ದಾಗ ಅವರ ತಾಯಿಯವರು ‘ಗುಣಸಾಗರಿ’ ಎಂಬ ಕಥೆಯನ್ನು ಹೇಳುತ್ತಿದ್ದರು. ಈ ಕಥೆಯನ್ನು ಚಿತ್ರವನ್ನಾಗಿ ತಾಯಿಯವರ ನೆನಪಿಗಾಗಿ ತೆಗೆದರು. ಇದರಿಂದ ತಮ್ಮ ತಾಯಿಯ ಬಗ್ಗೆ ತಮಗೆ ಇದ್ದ ಅಗಾಧ ಪ್ರೀತಿ, ಭಕ್ತಿಗಳನ್ನು ವ್ಯಕ್ತಪಡಿಸಿದರು.

ಮನೋಸ್ಥೈರ್ಯ

೧೯೫೪ರಲ್ಲಿ ವೀರಣ್ಣನವರು ತಮ್ಮ ನಾಟಕ ಮಂಡಲಿಯೊಡನೆ ಬಳ್ಳಾರಿಗೆ ಬಂದಿದ್ದರು. ನಾಟಕಗಳು ಜನಪ್ರಿಯವಾಗಿದ್ದವು. ಅವರ ಮಕ್ಕಳಾದ ಸ್ವರ್ಣಮ್ಮ, ಮಾಲತಮ್ಮನವರು ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಡಿಸೆಂಬರ್ ೨೫ ರಂದು ‘ಸದಾರಮೆ’ ನಾಟಕದಲ್ಲಿನ ಕಳ್ಳನ ಪಾತ್ರ ವಹಿಸಿ ಜನರನ್ನು ನಕ್ಕುನಗಿಸುತ್ತಿದ್ದಾರೆ, ವೀರಣ್ಣನವರು. ರಂಗಮಂಟಪದ ಮೇಲಿದ್ದಾಗ, ಮನೆಯಲ್ಲಿ ಕಾಯಿಲೆ ಇದ್ದ ಹೆಂಡತಿ ಸುಂದರಮ್ಮನವರು ನಿಧನ ಹೊಂದಿದರೆಂದು ತಿಳಿಯಿತು. ನೂರಾರು ಜನ ನಾಟಕವನ್ನು ನೋಡಿ, ವೀರಣ್ಣನವರ ಅಭಿನಯವನ್ನು ನೋಡಿ ನಕ್ಕು ಸಂತೋಷಪಡುತ್ತಿದ್ದಾರೆ; ನಾಟಕವನ್ನು ನಿಲ್ಲಿಸಿದರೆ ಅಭಾಸವಾಗುತ್ತದೆ ಎಂದು ವೀರಣ್ಣನವರು ದುಃಖ ಉಕ್ಕಿಬರುತ್ತಿದ್ದರೂ ತಡೆದುಕೊಂಡು, ನಾಟಕವನ್ನು ಮುಂದುವರಿಸಿದರು. ತಮ್ಮಿಬ್ಬರು ಮಕ್ಕಳಿಗೂ ವಿಷಯ ತಿಳಿಸಲಿಲ್ಲ. ನಾಟಕ ಮುಗಿದ ಮೇಲೆ ಮನೆಗೆ ಧಾವಿಸಿ ದುಃಖದಲ್ಲಿ ಮುಳುಗಿಹೋದರು.

ಈ ಬಗೆಯ ಕರ್ತವ್ಯನಿಷ್ಠೆಯನ್ನು ವ್ಯಕ್ತಪಡಿಸಿದ ವೀರಣ್ಣನವರು ಸಾಮಾನ್ಯ ವ್ಯಕ್ತಿಯಲ್ಲ.

ಸಂಗೀತ ನಾಟಕ ಅಕಾಡೆಮಿಯ ಗೌರವ

ಭಾರತದ ಕೇಂದ್ರ ಸಂಗೀತ ನಾಟಕ ಅಕಾಡೆಮಿಉ ೧೯೫೩ ರಿಂದ ಪ್ರತಿವರ್ಷವೂ ಸಂಗೀತ ಕ್ಷೇತ್ರದಲ್ಲಿ ದುಡಿದ ಹಿರಿಯರನ್ನು ಗೌರವಿಸುತ್ತಿತ್ತು. ೧೯೫೫ ರಲ್ಲಿ ನಾಟಕ ಕ್ಷೇತ್ರದಿಂದ ಪ್ರಥಮ ಬಾರಿಗೆ ಗೌರವಿಸಲು ನಿರ್ಧರಿಸಿ, ದೇಶದ ಎಲ್ಲ ನಟರಿಗೂ ಹಿರಿಯರಾದ ವೀರಣ್ಣನವರನ್ನು ಉತ್ತಮ ನಟರೆಂದು ಗೌರವಿಸಿತು. ನಾಡಿನ ನಟನ ಕುಶಲಿಗಳಲ್ಲಿ ಇವರು ಗಳಿಸಿದ್ದ ಉನ್ನತ ಮಟ್ಟದ ಸಾಧನೆಯನ್ನು ಈ ಗೌರವ ಸೂಚಿಸುತ್ತದೆ. ಈ ಗೌರವವನ್ನು ಆಗಿನ ರಾಷ್ಟ್ರಾಧ್ಯಕ್ಷ ಬಾಬು ರಾಜೇಂದ್ರಪ್ರಸಾದರು ವೀರಣ್ಣನವರಿಗೆ ಕೊಟ್ಟರು.

ರಾಷ್ಟ್ರಪತಿ ರಾಜೇಂದ್ರಪ್ರಸಾದರಿಂದ ಕೇಂದ್ರ ಸಂಗೀತ ನಾಟಕ ಅಕಾಡೆಮೆ ಗೌರವ ಪಡೆದರು

‘ಕುರುಕ್ಷೇತ್ರ’ದಂತಹ ಭವ್ಯ ನಾಟಕವನ್ನು ರಂಗದ ಮೇಲೆ ತಂದು ೨೦ ವರ್ಷಗಳಾಗಿದ್ದವು. ಚಿತ್ರ ಪ್ರಪಂಚದಲ್ಲಿ ವಿಹರಿಸುವ ಕೆಲಸದಲ್ಲಿ ಹೊಸ ನಾಟಕಗಳನ್ನು ಅದ್ದೂರಿಯಾಗಿ ತರಲು ಸಾಧ್ಯವೇ ಆಗಿರಲಿಲ್ಲ.

‘ಕುರುಕ್ಷೇತ್ರ’ ನಾಟಕವನ್ನು ಬರೆದ ಉತ್ತಮ ನಾಟಕಕಾರರಾದ ಬಿ. ಪುಟ್ಟಸ್ವಾಮಯ್ಯನವರಿಂದ ವೀರಣ್ಣನವರು ‘ದಶಾವತಾರ’ ನಾಟಕ ಬರೆಸಿದರು. ಕಣ್ಣು ಕೋರೈಸಿ, ಹೃದಯವನ್ನು ಆಕರ್ಷಿಸುವ ದೃಶ್ಯಾವಳಿಗಳನ್ನು ತಯಾರು ಮಾಡಿ, ೧೯೫೫ ರ ಜೂನ್‌ ಹದಿನೈದರಂದು ‘ದಶಾವತಾರ’ ನಾಟಕವನ್ನು ಆಡಿದರು. ಆ ನಾಟಕದ ಪ್ರಾರಂಭದಲ್ಲಿ ಬರುತ್ತಿದ್ದ ವೈಕುಂಠದ ದೃಶ್ಯದ ವೈಭವ ಜನರನ್ನು ಬೆಕ್ಕಸಬೆರಗಾಗಿ ಮಾಡುತ್ತಿತ್ತು. ಜನಕ್ಕೆ ತಾವು ಚಲನಚಿತ್ರವನ್ನು ನೋಡುತ್ತಿರುವೆವೋ ಎನ್ನುವ ಭ್ರಾಂತಿಯನ್ನು ಈ ನಾಟಕ ದೃಶ್ಯಗಳು ಮೂಡಿಸುತ್ತಿದ್ದವು. ಈ ನಾಟಕದಿಂದ ವೀರಣ್ಣನವರ ಕೀರ್ತಿ ಗಗನಕ್ಕೇರಿತು.

ಇದಾದನಂತರ, ೧೯೬೧ರಲ್ಲಿ ‘ಅಣ್ಣ ತಮ್ಮ’ ಎಂಬ ನಾಟಕವನ್ನೂ ೧೯೬೨ ರಲ್ಲಿ ‘ಲವಕುಶ’ ನಾಟಕವನ್ನೂ ಆಡಿದರು. ವೀರಣ್ಣನವರು ಕನ್ನಡ ನಾಟಕಗಳಿಗೆ ಕೊಟ್ಟ ವಿಶೇಷ ಕೊಡುಗೆ ಎಂದರೆ ವೈಭವೋಪೇತ ದೃಶ್ಯಗಳು.

ಕಷ್ಟ ಪರಂಪರೆ

ಈ ವೇಳೆಗೆ ವೀರಣ್ಣನವರಿಗೆ ಎಪ್ಪತ್ತು ವರ್ಷಗಳಾಗಿದ್ದವು. ಉತ್ಸಾಹ ಮೇರೆ ಇಲ್ಲದೆ ಇತ್ತು. ಅಪಾರ ಸಾಧನೆಗಳ ಕನಸು ಕಾಣುತ್ತಿದ್ದಾಗ ವೀರಣ್ಣನವರಿಗೆ ಕೆಲವು ಆಘಾತಗಳು ಸಂಭವಿಸಿದವು.

೧೯೬೪ರಲ್ಲಿ ಮಗಳು ಮಾಲತಮ್ಮ ರಂಗಮಂದಿರದಲ್ಲಿ ನಾಟಕವಾಡುತ್ತಿದ್ದಾಗ ವಿದ್ಯುಚ್ಛಕ್ತಿಯ ತಂತಿ ಸೋಕಿ ಕಾಲು ಕುಂಟಾಯಿತು.

೧೯೬೫ರಲ್ಲಿ ಅವರ ಅಳಿಯ, ಉತ್ತಮ ನಟ ಆಗಿದ್ದ ಬಸವರಾಜು ಅಪಘಾತದಲ್ಲಿ ನಿಧನ ಹೊಂದಿದರು.

೧೯೬೬ರಲ್ಲಿ ಉತ್ತಮ ಚಿತ್ರನಟನಾಗಿ ಭವಿಷ್ಯತ್ತಿನತ್ತ ಆಸೆ ಮೂಡಿಸಿದ್ದ ಪ್ರೀತಿಯ ಮಗ ಶಿವರಾಜ್‌ ರಕ್ತ ಕ್ಷಯದಿಂದ ತೀರಿಕೊಂಡ.

ಏಟಿನ ಮೇಲೆ ಏಟು ಬಿದ್ದರೂ ಎದೆಗುಂದದೆ ‘ಬಂದದ್ದೆಲ್ಲಾ ಬರಲಿ-ಗೋವಿಂದನ ದಯೆಯೊಂದಿರಲಿ’, ‘ಈಸಬೇಕು-ಇದ್ದು ಜೈಸಬೇಕು’ ಎಂಬ ದಾಸರ ನುಡಿಯಂತೆ ವೀರಣ್ಣನವರು ಜೀವನವನ್ನು ಎದುರಿಸಿದರು.

ಗೌರವಗಳು

ವೀರಣ್ಣನವರು ವಿದ್ಯಾವಂತರಲ್ಲ. ಆದರೆ ವಿಶ್ವವಿದ್ಯಾನಿಲಯಗಳ ಕಣ್ಣು ಸೆಳೇಯುವಂತಹ ಸೇವೆಯನ್ನು ಮಾಡಿದ್ದರು. ನಟರಾಗಿ, ನಾಟಕ ಮಂಡಲಿಯ ಯಜಮಾನರಾಗಿ ವೀರಣ್ಣನವರು ನಾಟಕ ಕಲೆಗೆ ಸಲ್ಲಿಸಿದ್ದ ಸೇವೆಯನ್ನು ಮೈಸೂರು ವಿಶ್ವವಿದ್ಯಾನಿಲಯವು ಗಮನಿಸಿ, ೧೯೭೦ ರಲ್ಲಿ ‘ಡಾಕ್ಟರೇಟ್‌’ ಪದವಿಯನ್ನಿತ್ತು ಗೌರವಿಸಿತು.

ಈ ಎಲ್ಲ ಗೌರವಗಳಿಗೆ ಕಿರೀಟವಿದ್ದಂತೆ ೧೯೭೨ ರಲ್ಲಿ ರಾಷ್ಟ್ರಾಧ್ಯಕ್ಷರು ‘ಪದ್ಮಶ್ರೀ’ ಪ್ರಶಸ್ತಿಯನ್ನು ವೀರಣ್ಣನವರಿಗೆ ಕೊಟ್ಟರು.

ನಿಧನ

ಬಡವರಾಗಿ ಜನಿಸಿ, ತಮ್ಮಲ್ಲಡಗಿದ್ದ ಅಪೂರ್ವ ನಟನ ಕೌಶಲದಿಂದ, ಸಾಧನ ಸಾಮರ್ಥ್ಯದಿಂದ ಹಿರಿಯ ನಟರಾಗಿ, ನಾಟಕ ಮಂಡಲಿಯ ಮಾಲೀಕರಾಗಿ, ಸಹಸ್ರಾರು ಜನಕ್ಕೆ ಅನ್ನದಾತರಾಗಿ, ಅಪಾರ ಜನಪ್ರಿಯತೆಯನ್ನು ಗಳಿಸಿದ ಡಾ. ಜಿ.ಹೆಚ್‌ ವೀರಣ್ಣನವರು ೧೯೭೨ ರ ಅಕ್ಟೋಬರ್ ೧೮ ರಂದು ನಿಧನರಾದರು.

೧೯೩೧ ರಲ್ಲಿ ವೀರಣ್ಣನವರು ಶ್ರೀಮತಿ ಬಿ. ಜಯಮ್ಮ ಅವರನ್ನು ಮದುವೆಯಾಗಿದ್ದರು. ಜಯಮ್ಮನವರೂ ಚಲನಚಿತ್ರ, ನಾಟಕಗಳಲ್ಲಿ ಅಭಿನಯಿಸಿದ ಪ್ರಸಿದ್ಧ ನಟಿ. ಶ್ರೀ ವೀರಣ್ಣನವರ ಒಬ್ಬ ಮಗ ಶಿವಾನಂದ ಹವ್ಯಾಸಿ ರಂಗಭೂಮಿಯಲ್ಲಿ ಹೆಸರು ಗಳಿಸಿದ್ದಾರೆ.

ಶೈಶವಾಸ್ಥೆಯಲ್ಲಿದ್ದ ಕನ್ನಡ ನಾಟಕಕ್ಕೆ ಜೀವತುಂಬಿ, ಒಳ್ಳೆಯ ಸಾಹಿತಿಗಳ ನೆರವಿನಿಂದ ಹೊಸ ಚೈತನ್ಯವನ್ನು ತಂದು, ಅನೇಕ ನಟರನ್ನು ಹುರಿದುಂಬಿಸಿ, ಹಾಸ್ಯನಟರಾಗಿ ಬಾಳಿ ಬೆಳಗಿದ ವೀರಣ್ಣನವರ ಜೀವನ ಆದರ್ಶಮಯವೂ ಸ್ಪೂರ್ತಿದಾಯಕವೂ ಆದ ಜೀವನ.

ವೀರಣ್ಣನವರು ಎಷ್ಟು ದೊಡ್ಡ ನಟರೋ ಅಷ್ಟೇ ದೊಡ್ಡ ವ್ಯಕ್ತಿ. ಅಸಾಧಾರಣ ಸಾಹಸವಂತರು. ಬಡತನದಲ್ಲಿ ಬೆಳೆದು, ತಿಂಗಳಿಗೆ ಐದು ರೂಪಾಯಿಯ ಸಂಬಳದಿಂದ ಜೀವನ ಪ್ರಾರಂಭಿಸಿದರು; ತಾವೇ ಅನೇಕರನ್ನು ಸಂಬಳ ಕೊಟ್ಟು ತಮ್ಮ ಕಂಪೆನಿಯಲ್ಲಿಟ್ಟುಕೊಳ್ಳುವ ಭಾಗ್ಯವಂತರಾದರು. ಕನ್ನಡನಾಡಿನಲ್ಲಿ ಮಾತ್ರವಲ್ಲ, ತಮಿಳುನಾಡು, ಆಂಧ್ರಗಳಲ್ಲಿಯೂ ಅವರ ಕೀರ್ತಿ ಹಬ್ಬಿತು. ಆದರೂ ಅವರು ಬಹು ವಿನಯವಂತರು. ಇತರ ಕಲಾವಿದರಿಗೆ ಮರ್ಯಾದೆ ಸಲ್ಲುತ್ತದೆ ಎಂದರೆ ಅವರಿಗೆ ಹಿಗ್ಗು. ತೀರ ವಯಸ್ಸಾಗಿ ನಿಶ್ಶಕ್ತರಾಗಿದ್ದರೂ ಸಾಹಿತಿಗಳಿಗೆ, ಕಲಾವಿದರಿಗೆ ಸನ್ಮಾನ ಎಂದರೆ ಬರುತ್ತಿದ್ದರು. ತಾವು ಮಾಡಿದ ಕೆಲಸದಲ್ಲಿ ಬಹುಭಾಗ ತಮ್ಮ ಜೊತೆಯ ನಟರಿಂದ, ಸಾಹಿತಿಗಳಿಂದ ಸಾಧ್ಯವಾಯಿತು ಎನ್ನುತ್ತಿದ್ದರು. ‘ಕಲೆಯೇ ಕಾಯಕ’ ಎಂಬ ಅವರ ಆತ್ಮವೃತ್ತ ಓದಬೇಕಾದ ಪುಸ್ತಕ.