ನೀವು ಯಾವುದೇ ಶಾಲೆಗೆ ಹೋಗಿ, ಮಕ್ಕಳನ್ನು ಕೇಳಿ, ‘ನಿಮ್ಮ ಗುರಿ ಏನು, ನೀವೇನಾಗಬೇಕೆಂದು ಇಷ್ಟಪಡುತ್ತೀರಿ ಎಂಬ ಪ್ರಶ್ನೆಯನ್ನು ಅವರ ಮುಂದಿಡಿ. ಬಹು ಸಾಮಾನ್ಯವಾಗಿ ಕೇಳಿ ಬರುವ ಉತ್ತರಗಳೆಂದರೆ, ನಾನು

 • ಇಂಜಿನಿಯರ್
 • ಡಾಕ್ಟರ್
 • ಪೈಲಟ್
 • ಐ‌ಎ‌ಎಸ್ ಆಫೀಸರ್
 • ದೊಡ್ಡ ವಿಜ್ಞಾನಿ
 • ದೊಡ್ಡ ಬಿಸಿನೆಸ್‌ಮನ್
 • ಫ್ರೊಫೆಸರ್/ ಟೀಚರ್
 • ಸಂಗೀತಗಾರ, ಕಲಾವಿದನಾಗಬೇಕು, ಇತ್ಯಾದಿ.

ಬೆರಳೆಣಿಕೆಯ ಕೆಲವೇ ಮಕ್ಕಳು ತಮ್ಮ ಈ ಗುರಿಯನ್ನು ಮುಟ್ಟುತ್ತಾರೆ. ಬಹುತೇಕ ಜನ ‘ಬೇರೇನೋ ಆಗುತ್ತಾರೆ

ಹಾಗೆಯೇ ತಂದೆ-ತಾಯಿಗಳಿಗೂ ತಮ್ಮ ಮಗ-ಮಗಳು ಏನಾಗಬೇಕೆಂದು ಗುರಿ ಇಟ್ಟುಕೊಳ್ಳುತ್ತಾರೆ. ‘ನೀನು ಚೆನ್ನಾಗಿ ಓದಿ ಇಂಜಿನೀಯರ್ ಆಗು, ಡಾಕ್ಟರಾಗು ಎಂದು ಹೇಳುವವರೇ ಹೆಚ್ಚು. ಕೆಲವರು ಮಾತ್ರ ‘ನಾವು ನಮ್ಮ ಮಕ್ಕಳಿಗೆ ಯಾವುದೇ ರೀತಿಯ ಒತ್ತಡ ತರುವುದಿಲ್ಲ, ನೀವೇನಾಗಬೇಕೆಂಬುದನ್ನು ನೀವೇ ನಿರ್ಧರಿಸಿ, ಸ್ವಾವಂಲಂಬಿಗಳಾಗಿ ಚೆನ್ನಾಗಿ ಬದುಕಲು ಕಲಿಯಿರಿ. ಏನೇ ಮಾಡಿ ಅದರಲ್ಲಿ ಯಶಸ್ಸು, ಕೀರ್ತಿ,ಸ್ಥಾನಮಾಗಳನ್ನು ಗಳಿಸಿ. ನಾಲ್ಕಾರು ಜನರಿಂದ ಶ್ಲಾಘನೆ ಪಡೆಯಿರಿ ಎಂದು ಹೇಳುತ್ತೇವೆ ಎನ್ನುತ್ತಾರೆ.

ಹಾಗೇ ಪ್ರತಿಯೊಂದು ಹಂತ, ವಿಷಯದಲ್ಲೂ ಗುರಿ ಇರಲೇ ಬೇಕು.

 • ಪರೀಕ್ಷೆಗೆ ಹೋಗುವ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿ ಅತ್ಯಧಿಕ ಅಂಕಗಳನ್ನು ತೆಗೆದು ಉನ್ನತ ಶ್ರೇಣಿಯಲ್ಲಿ ಪಾಸಾಗಬೇಕು.
 • ಸ್ಪರ್ಧೆಗೆ ಹೋಗುವ ಪ್ರತಿಯೊಬ್ಬ ಅಭ್ಯರ್ಥಿಯ ಗುರಿ, ಮೊದಲ ಬಹುಮಾನ/ಸ್ಥಾನವನ್ನು ಪಡೆಯಬೇಕು. ಅದಾಗದಿದ್ದರೆ, ಎರಡನೆಯ ಸ್ಥಾನವನ್ನಾದರೂ ಪಡೆಯಲೇಬೇಕು.
 • ಪ್ರತಿಯೊಬ್ಬ ಹರೆಯದವರ ಗುರಿ- ಕಡಿಮೆ ಶ್ರಮ ಬೇಡುವ ಆದರೆ ಹೆಚ್ಚು ಹಣ ನೀಡುವ ಉದ್ಯೋಗ-ಹುದ್ದೆಯನ್ನು ಪಡೆಯಬೇಕು.
 • ಮದುವೆಗೆ ಸಿದ್ಧನಾದ/ಳಾದ ಪ್ರತಿಯೊಬ್ಬ ಯುವಕ/ಯುವತಿಯ ಗುರಿ ಸುಂದರ, ಸದೃಢ, ಸುಗುಣ ಮತ್ತು ನಂಬಿಕೆಗೆ ಅರ್ಹನಾದ/ಳಾದ ಸಂಗಾತಿಯನ್ನು ಪಡೆಯಬೇಕು, ಆದರ್ಶ, ಅನುರೂಪ ದಂಪತಿಗಳೆಂದು ಜನರಿಂದ ಹೊಗಳಿಸಿಕೊಳ್ಳಬೇಕು.
 • ಉದ್ಯೋಗ ದೊಡ್ಡ ನಗರದಲ್ಲಿರಬೇಕು. ಎಷ್ಟು ಬೇಗ ಅಷ್ಟು ಬೇಗ ಮನೆ ಕಟ್ಟಬೇಕು. ಕಾರಿನಲ್ಲಿ ಓಡಾಡಬೇಕು. ದೇಶ ಸುತ್ತಬೇಕು. ವಿದೇಶಗಳಿಗೆ ಹೋಗಿ ಬರಬೇಕು. ಎಲ್ಲ ಭೋಗ ಭಾಗ್ಯಗಳನ್ನು ಇತರರಿಗಿಂತ ಬೇಗ ಮತ್ತು ಅಧಿಕವಾಗಿ ಅನುಭವಿಸಬೇಕು.
 • ದೊಡ್ಡ ಪ್ರಮಾಣದ ಕೀರ್ತಿ, ಸ್ಥಾನಮಾನ ಗೌರವ ಅಧಿಕಾರಗಳನ್ನು ಪಡೆಯಬೇಕು. ಪತ್ರಿಕೆ ಟೀವಿಗಳಲ್ಲಿ ಪದೇ-ಪದೇ ಕಾಣಿಸಿಕೊಳ್ಳಬೇಕು.
 • ಎಲ್ಲರ ಮೆಚ್ಚುಗೆ, ಶ್ಲಾಘನೆ, ಪ್ರಶಸ್ತಿ ಪುರಸ್ಕಾರಗಳನ್ನು ಪಡೆಯಬೇಕು. ಹೀಗೆ ಪ್ರತಿಹಂತ, ಪ್ರತಿಸನ್ನಿವೇಶ, ಸಂದರ್ಭದಲ್ಲಿ ನಾವು ಗುರಿಗಳನ್ನು ಇಟ್ಟುಕೊಳ್ಳುತ್ತೇವೆ. ಗುರಿಮುಟ್ಟಲಾಗದಿದ್ದಾಗ  ಬೇಸರ, ಸಿಟ್ಟು, ದುಃಖ, ಹೀನಾಯ, ಅತೃಪ್ತಿ, ಕೀಳರಿಮೆ ಕಟ್ಟಿಟ್ಟ ಬುತ್ತಿಯಾಗುತ್ತದೆ. ಬಹುತೇಕ  ಜನ ತಮ್ಮ ಗುರಿಯಲ್ಲಿ ವಿಫಲರಾಗಿ ನೋವನ್ನು ಅನುಭವಿಸುತ್ತಾರೆ. ಅಧಿಕ ಗುರಿ, ಅವಾಸ್ತವಿಕ ಗುರಿ, ಗುರಿಸಾಧನೆಗೆ ಬೇಕಾದ ಸಂಪನ್ಮೂಲ, ಅವಕಾಶ, ಪ್ರೋತ್ಸಾಹ, ಮಾರ್ಗದರ್ಶನಗಳಿಲ್ಲದಿರುವುದೇ ಈ ವಿಫಲತೆ ನೋವಿಗೆ ಕಾರಣಗಳಾಗುತ್ತವೆ.

ಗುರಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ, ಪಾಲಿಸಬೇಕಾದ ಎಚ್ಚರಿಕೆಗಳಾವುವು, ಗುರಿ ಆಯ್ಕೆ ವಿಧಿವಿಧಾನಗಳೇನು, ಗುರಿ ಸಾಧನೆಗೆ ಯಾವುದು ಮುಖ್ಯ, ಶ್ರದ್ಧೆಯೇ, ಶ್ರಮವೇ, ಅದೃಷ್ಟವೇ, ಇತರರ ಆಸರೆ, ಮಾರ್ಗದರ್ಶನವೇ. ಒಂದು ಗುರಿಯನ್ನು ಮುಟ್ಟಲಾಗದಿದ್ದಾಗ ಏನು ಮಾಡಬೇಕು. ಎದುರಾದ ಅಡೆತಡೆಗಳನ್ನು ಹೇಗೆ ನಿಭಾಯಿಸಬೇಕು. ಬದಲೀ ಗುರಿಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು. ವಿಫಲತೆಯುಂಟಾದಾಗ, ಸಹಜವಾಗಿ ಬರುವ ನಿರಾಶೆ, ಅತೃಪ್ತಿಯನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಹರೆಯದ ಮಕ್ಕಳಿಗೆ ಹೇಳಿಕೊಡಬೇಕು.

ಗುರಿಯನ್ನು, ಗುರಿಗಳನ್ನು ಆಯ್ಕೆ ಮಾಡುವಾಗ, ಈ ಕೆಳ ಕಾಣುವ ಅಂಶಗಳನ್ನು ಗಮನಿಸಿ

 • ನಿಮ್ಮ ಬಲಾಬಲಗಳನ್ನು, ನಿಮಗಿರುವ ಸಂಪನ್ಮೂಲಗಳನ್ನು ಗಮನಿಸಿ ನಿಮ್ಮ ಸಾಮರ್ಥ್ಯ ಎಷ್ಟು? ನಿಮ್ಮ ಕೊರತೆ ದೌರ್ಬಲ್ಯ ನ್ಯೂನತೆಗಳೇನು ಲೆಕ್ಕಹಾಕಿ.
 • ನಿಮ್ಮ ಬಲಾಬಲಗಳ ಇತಿಮಿತಿಯಲ್ಲಿ ನಿಮ್ಮ ಗುರಿಗಳನ್ನಿಟ್ಟುಕೊಳ್ಳಿ, ಕೇವಲ ಸ್ಪರ್ಧೆಗಾಗಿ ಇತರರನ್ನು ಮೆಚ್ಚಿಸಲು ಇಟ್ಟುಕೊಳ್ಳಬೇಡಿ.
 • ವಾಸ್ತವಿಕ ನೆಲಗಟ್ಟಿನಲ್ಲಿ ಚರ್ಚಿಸಿ ಗುರಿಮುಟ್ಟಲು ಸಾಧಿಸಲು ನಿಮ್ಮಲ್ಲಿ ಶಕ್ತಿ, ಸಾಮರ್ಥ್ಯ, ಸವಲತ್ತುಗಳಿವೆಯೇ ಯೋಚಿಸಿ.
 • ಗುರಿಸಾಧನೆಗೆ ಬೇಕಾದ ಶ್ರದ್ಧೆ, ಶ್ರಮ, ಸಮಯವನ್ನು ಲೆಕ್ಕ ಹಾಕಿ. ಈ ವಿಚಾರದಲ್ಲಿ ನಮಗಿಂತ ಹಿರಿಯರ ಮತ್ತು ಅನುಭವಸ್ಥರ ಸಲಹೆ ಮಾರ್ಗದರ್ಶನವನ್ನು ಪಡೆಯಿರಿ.
 • ಒಂದು ಗುರಿ ಇಟ್ಟುಕೊಂಡಾಗ, ಬದಲೀ ಗುರಿಗಳನ್ನು ಇಟ್ಟುಕೊಳ್ಳಿ. ಗುರಿ ಮುಟ್ಟಲು ಅಡೆತಡೆ ಬಂದಾಗ ಅಥವಾ ಆಗದಿದ್ದಾಗ ಬದಲೀ ಗುರಿಗಳು ರೆಡಿ ಇದ್ದರೆ ಅವನ್ನು ಮುಟ್ಟಲು ಪ್ರಯತ್ನ ಪಡಬಹುದು. ಆಗಬಹುದಾದ ನಿರಾಶೆ ತಪ್ಪುತ್ತದೆ. ಮುಖ ಭಂಗವಾಗುವುದೂ ತಪ್ಪುತ್ತದೆ.
 • ಗುರಿಸಾಧನೆಯ ಪ್ರಯತ್ನವೇ ಹೆಚ್ಚು ಸುಖಕರ. ‘ಪ್ರಯತ್ನ ನನ್ನದು ಫಲ ದೇವರದು ಎನ್ನಿ ಫಲಿತಾಂಶದ ಬಗ್ಗೆ ಚಿಂತೆ/ಭಯಪಡಬೇಡಿ.
 • ಅಲ್ಪಕಾಲೀನ ಗುರಿ, ದೀರ್ಘಕಾಲೀನ ಗುರಿ, ಇಡೀ ಜೀವಮಾನದ ಗುರಿ ಹೀಗೆ ಸಮಯದ ದೃಷ್ಟಿಯಿಂದ ನಿಮ್ಮ ಗುರಿಗಳನ್ನು ಫಿಕ್ಸ್ ಮಾಡಿ. ಅಲ್ಪ ಅವಧಿಯಲ್ಲೇ ಸಾಧಿಸಬಹುದಾದ ಗುರಿ ಇಟ್ಟುಕೊಂಡು ಅದನ್ನು ಸಾಧಿಸಿದರೆ, ತೃಪ್ತಿ ಸಿಗುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಗುರಿಯನ್ನು ವಿಸ್ತರಿಸಲು ಅಥವಾ ಮತ್ತಷ್ಟು ದೊಡ್ಡ ಗುರಿಯನ್ನಿಟ್ಟುಕೊಳ್ಳಲು ಪ್ರೇರಣೆ/ಉತ್ಸಾಹ ಸಿಗುತ್ತದೆ.
 • ಗುರಿಮುಟ್ಟಲು ವಿಫಲರಾದಾಗ, ಅಧೀರರಾಗಬೇಡಿ, ಅವಮಾನವಾಯಿತೆಂದು ಕುಗ್ಗಬೇಡಿ, ವಿಫಲತೆಗೆ ಕಾರಣಗಳನ್ನು ಯೋಚಿಸಿ, ನಿಮ್ಮಲ್ಲೇ ಡಿಫೆಕ್ಟ್ ಇತ್ತೇ, ಗುರಿ ಮುಟ್ಟಲು ಬಳಸಿದ ಮಾರ್ಗ ಸರಿಬರಲಿಲ್ಲವೇ, ಶ್ರದ್ಧೆ, ಶ್ರಮ ಕಡಿಮೆಯಾಗಿತ್ತೇ, ಕಂಡು ಬಂದ ಅಡೆತಡೆಗಳು ಎಂಥವು, ಅವುಗಳ ಸ್ವರೂಪವೇನು, ಇತರರು ಪರಿಸರದ ಪಾತ್ರವೇನು ಎಂಬುದನ್ನು, ಯಾವುದೇ ಪೂರ್ವಾಗ್ರಹವಿಲ್ಲದೇ ವಿಶ್ಲೇಷಿಸಿ, ನಿಮ್ಮ ತಂದೆ-ತಾಯಿ, ಶಿಕ್ಷಕರು ಮತ್ತು ಶ್ರೇಯೋಕಾಂಕ್ಷಿಗಳ ಅಭಿಪ್ರಾಯವನ್ನು ಕೇಳಿ ಮರಳಿಯತ್ನವ ಮಾಡು ಎಂಬಂತೆ, ಗುರಿಸಾಧನೆಗೆ ಮತ್ತೆ ಟೊಂಕ ಕಟ್ಟಿನಿಲ್ಲಿ.

ಗುರಿ ನಿಮ್ಮ ಮುಂದಿರಲಿ

ಗುರು ನಿಮ್ಮ ಹಿಂದಿರಲಿ

ಮನೆಯವರು ಬಂಧು-ಮಿತ್ರರು

ಆಸರೆಗೆ ನಿಮ್ಮ ಪಕ್ಕದಲ್ಲಿರಲಿ

ಆಗ ಗುರಿ ಮುಟ್ಟುವುದು ಕಷ್ಟವಾಗದು.