ಈ ಆಟಕ್ಕೆ ಲಗ್ಗೆ, ಹೊಡೆ ಚೆಂಡು ಎಂದು ಹೆಸರಿದೆ. ಅಂಗಳದಲ್ಲೊಂದು ಕಡೆ ಕಾಯಿಕತ್ವ (ಸಿಪ್ಪೆ) ನೆಟ್ಟಗೆ ಹೊಳಬೇಕು. ಕಾಯಿಕತ್ವದ ಬದಲಿಗೆ ಕಟ್ಟಿಗೆಯ ತುಂಡನ್ನು ಉಪಯೋಗಿಸಬಹುದು. ಆಟಗಾರರಲ್ಲಿ ಎರಡು ಪಂಗಡ. ಒಂದು ಪಂಗಡ ಹಾಯುವದು. ಇನ್ನೊಂದು ಪಂಗಡ ಕಟ್ಟುವದು. ಹಾಯುವವರಲ್ಲೊಬ್ಬರು ಕಾಯಿಕತ್ತ ಹೂಡಿದ ಮಂಡದಿಂದ ಸುಮಾರು ೧೫ – ೨೦ ಮಾರು ದೂರ ನಿಂತು ತಾವೇ ದೇಶೀಯ ರೀತಿಯಲ್ಲಿ ತಯಾರಿಸಿದ ಚೆಂಡಿನಿಂದ ಕತ್ತಕ್ಕೆ ಗುರಿಕಟ್ಟುವರು. ಕಟ್ಟುವ ಪಕ್ಷದವರು ಮಂಡದಲ್ಲಿ ಕಾಯಿಕತ್ತದ ಹಿಂದೆ ನಿಲ್ಲುವರು.ಕತ್ತಕ್ಕೆ ಗುರಿಯಿಟ್ಟ ಚೆಂಡು ಕತ್ತದ ಹಿಂದೆ ಬಂದಾಗ, ನೆಲಕ್ಕೆ ತಾಗಿ ಚಿಮ್ಮಿ ನೆಗೆದಾಗ, ಕಟ್ಟುವವರು ನೆಲಕ್ಕೆ ಕೈತಾಗಿಸದೆ ಚೆಂಡನ್ನು ಹಿಡಿದರೆ ಆಟಗಾರನು ಔಟಾಗುವನು. ಮೊದಲ ಹೊಡೆತ ಕತ್ತಕ್ಕೆ ತಾಗದೆ ಇದ್ದರೆ, ಕಟ್ಟುವವರು ಚೆಂಡನ್ನು ಹಿಡಿಯದಿದ್ದರೆ ಆಟಗಾರನಿಗೆ ಒಟ್ಟಿಗೆ ಮೂರು ಸಲ ಅವಕಾಶ ಕೊಡುವರು. ಆಗಲೂ ಗುರಿಯಿಡಲಾಗದಿದ್ದಲ್ಲಿ ಆಟಗಾರ ಔಟಾಗುವನು. ಬಳಿಕ ಹಾಯುವ ಪಕ್ಷದ ಇನ್ನೊಬ್ಬ ಆಡುವನು. ಹಾಯುವವರ ಚೆಂಡು ಕತ್ತಕ್ಕೆ ಬಡಿದರೆ ಹಾಯುವವರೆಲ್ಲ ಆ ಚೆಂಡು ತೆಗೆದುಕೊಂಡು ಬಂದು ಗುಪ್ತ ಸ್ಥಳಕ್ಕೆ ಹೋಗಿ, ತಮ್ಮ ಕೈಗೆ ಪಂಜೆ ಸುತ್ತಿ ಅಥವಾ ಅಂಗಿಯೊಳಗೆ ಕೈಹುದುಗಿಸಿಕೊಂಡು ಬರುತ್ತಾರೆ. ಹಾಯುವವರಲ್ಲಿ ಒಬ್ಬ ಮಂಡದಲ್ಲಿಯೂ ಉಳಿದವರು ಮಂಡದಿಂದ ದೂರದಲ್ಲಿಯೂ ನಿಲ್ಲುತ್ತಾರೆ. ಹಾಯುವವರು ತಮ್ಮ ಕೈಯಲ್ಲಿ ಚೆಂಡಿದ್ದಂತೆ ನಟಿಸುತ್ತೆ ಕಟ್ಟುವವರನ್ನು ಅಟ್ಟಿಸಿಕೊಂಡು ಹೋಗುವರು. ಕಟ್ಟುವವರಿಗೆ ಹಾಯುವವರಲ್ಲಿ ಯಾರ ಹತ್ತರ ಚೆಂಡಿದೆಯೆಂಬುದು ಗೊತ್ತಿರುವುದಿಲ್ಲ. ಚೆಂಡು ಇಲ್ಲದೆ ಚೆಂಡಿದ್ದಂತೆ ನಟಿಸಿ, ಬೆನ್ನಟ್ಟಿ ಹೋದವನ ಹತ್ತರ ಚೆಂಡಿಲ್ಲದ್ದನ್ನು ಕಂಡುಕೊಂಡ ಕಟ್ಟುವವನು ಈ ಹಾಯುವವನನ್ನೇ ಬೆನ್ನಟ್ಟುವನು. ಹಾಗೂ ಮುಟ್ಟುವನ್ನು ಅಥವಾ ಮಂಡದಲ್ಲಿದ್ದ ಕತ್ತವನ್ನು ಮುಟ್ಟಿ “ನಗೋರಿ” ಎನ್ನುವನು. ಈ ಎರಡು ಸಂದರ್ಭದಲ್ಲಿಯೂ ಹಾಯುವವರು ಔಟು. ಚೆಂಡಿಲ್ಲವೆಂದು ತಿಳಿದು ಚೆಂಡಿದ್ದವನನ್ನೇ ಕಟ್ಟುವವರು ಮುಟ್ಟಿದರೆ ಅಥವಾ ಚೆಂಡಿದ್ದವನು ಕಟ್ಟುವವನಿಗೆ ಹೊಡೆದರೆ, ಮುಟ್ಟಿದರೆ ಕಟ್ಟುವವರಿಗೆ ಒಂದು “ಹುಯ್ಲ” ಆಗುತ್ತದೆ. ಕಟ್ಟುವವರು “ನಗೋರಿ” ಮುಟ್ಟಲು ಹೋದಾಗ ಮಂಡದಲ್ಲಿ ನಿಂತವನ ಹತ್ತಿರವೇ ಚೆಂಡಿದ್ದರೆ ಅವನಿಗೆ ಗುರಿಯಿಟ್ಟು ಬಿಡುತ್ತಾನೆ. ಚೆಂಡಿಲ್ಲದವನನ್ನು ಕಟ್ಟುವವ ಅಟ್ಟಿಸಿಕೊಂಡು ಹೋದರೆ, ಚೆಂಡಿದ್ದವ ಬೆನ್ನಟ್ಟಿದ ಕಟ್ಟುವವನಿಗೆ ಚೆಂಡು ಗುರಿಯಿಡುತ್ತಾನೆ. ಹಾಯುವವರು ಕಟ್ಟುವವರ ಮೇಲೆ “ಹುಯ್ಲ” ಮಾಡಿ ಗೆದ್ದರೆ ಈ ಮನೊದಲು ಕತ್ತಕ್ಕೆ ಗುರಿಯಿಟ್ಟವನೇ ಚೆಂಡು ಎಸೆಯಲು ಮೂರು ಅವಕಾಶ ಪಡೆಯುತ್ತಾನೆ. ಹಾಯುವವರೆಲ್ಲ ಚೆಂಡು ಎಸೆದ ಮೇಲೆ ಕಟ್ಟುವವರು ಚಂಡೆಸೆಯುವವರು ಆಗುತ್ತಾರೆ. ಆಟದಲ್ಲಿ ಹೆಚ್ಚು ಹುಯ್ಲ ತಿಂದವರು ಸೋತಪಕ್ಷವೆಂದು ನಿರ್ಣಯವಾಗುವದು.

ಕೆಲವರು ಚೆಂಡಿನ ಬದಲಿಗೆ ಸುರಗಿಕಾಯಿ ಉಪಯೋಗಿಸುವರು. ಆಗ ಕಾಯಿ ಕತ್ತವನ್ನು ಅಡ್ಡವಿಡುವರು. ಸುರಗಿಕಾಯಿ ಕತ್ತಕ್ಕೆ ತಾಗಿದರೆ ಅದನ್ನು ಕೆಡವಿದಂತೆ. ಆಟದ ಉಳಿದ ವಿಧಾನವೆಲ್ಲ ಮೇಲಿನಂತೆಯೇ ಇರುವದು.