ಎರಡು ಪಕ್ಷ, ಪ್ರತಿಯೊಂದರಲ್ಲಿ ಅಷ್ಟಷ್ಟೇ ಜನ. ಮೊದಲು ಆಡುವವರು ಯಾರೆಂಬುದನ್ನು ಆರಿಸಿಕೊಳ್ಳಬೇಕು. ಅವರಲ್ಲೊಬ್ಬನು ಕುಳಿಯ ಮೇಲೆ ಎರಡು ಗೆಂಡೆಯನ್ನಿಟ್ಟು ಎದುರು ಪಕ್ಷದವರ ಬಳಿಗೆ ಎಸೆಯುವನು. ಅವರು ಒಂದು ಗೆಂಡೆ ಹಿಡಿದರೆ ಒಂದೇ ಗೆಂಡೆಯಿಂದ ಆಡಬೇಕು. ಎರಡನ್ನೂ ಹಿಡಿದರೆ ಆಟಗಾರ ಔಟು. ಔಟಾಗದಿದ್ದರೆ; ಆಟಗಾರ ಕುಳಿಯಿಂದ ಒಂದು ಹಾಣೆ ಅಂತರದಲ್ಲಿ ಎದುರಾಳಿಯ ಕಡೆಗೆ ಅಡ್ಡವಾಗಿ ಹಾಣೆಯಿಡಬೇಕು. ಎದುರು ಪಕ್ಷದವರು ಗೆಂಡೆಯಿಂದ ಹಾಣೆಗೆ ಗುರಿಯಿಡುತ್ತಾರೆ. ಎರಡು ಗೆಂಡೆ ಇದ್ದರೆ ಎರಡರಿಂದಲೂ ಹೊಡೆಯುತ್ತಾರೆ. ಎರಡು ಗೆಂಡೆಯಿಂದ ಹೊಡೆದಾಗ ಒಂದು ಮಾತ್ರ ತಾಗಿದರೆ ಔಟಲ್ಲ. ಆದರೆ ಒಂದೇ ಗೆಂಡೆ ಇದ್ದು ಅದು ತಾಗಿದರೆ ಔಟು. ಔಟಾಗದಿದ್ದಲ್ಲಿ ಬಲಗೈಯಲ್ಲಿ ಹಾಣೆಯ ಹೆಚ್ಚು ಭಾಗ ಕೆಳಗಿದ್ದು ಸು. ೧/೨ ಇಂಚು ಮಾತ್ರ ಮೇಲೆ ಕಾಣುವಂತೆ ಮುಷ್ಟಿ ಕಟ್ಟಿ ಹಿಡಿದು, ಮುಷ್ಟಿಯ ಮೇಲೆ ಗೆಂಡೆ ಇಟ್ಟು ಹಾರಿಸಿ, ಹಾಣೆಯಿಂದ ಹೊಡಿಯುತ್ತಾನೆ. ಎದುರು ಪಕ್ಷದವರು ಕೆಳಗಿಟ್ಟ ಹಾಣೆಗೆ ಹೊಡೆಯುತ್ತಾರೆ. ಆಗ ಅದು ತಾಗದಿದ್ದರೆ ಎಡಗೈಯಲ್ಲಿ ಗೆಂಡೆ ಹಿಡಿದು ಅದನ್ನು ಹಾರಿಸಿ ಹಾಣೆಯಿಂದ ಹೊಡೆಯುತ್ತಾನೆ. ಹೀಗೆ ಮೂರು ಸಾರೆ ಹೊಡೆಯುತ್ತಾನೆ. ಮೂರು ಬಾರಿಯೂ ಔಟಾಗದೇ ಇದ್ದರೆ ಅತ್ತ ಕಡೆಯ ಒಬ್ಬರು (ಒಂದು ಗೆಂಡೆಯಿಂದ ಆಡಿದ್ದರೆ) ಅಥವಾ ಇಬ್ಬರು (ಎರಡು ಗೆಂಡೆಯಿಂದ ಆಡಿದ್ದರೆ) ಬಂದು ಕುದುರೆಯಂತೆ ಕುಳಿಯ ಹತ್ತಿರ ಕುಳಿತಯಕೊಳ್ಳಬೇಕು. ಕುದುರೆಯ ಮೇಲೆ ಆಡುವವನ ಪಕ್ಷದವರು ಕುಳಿತುಕೊಳ್ಳುತ್ತಾರೆ. ಆಗ ಆಟಗಾರ ಕೊನೆಗೆ ಆಡಿದ ರೀತಿಯಲ್ಲಿಯೇ ಆಡುತ್ತಿರುತ್ತಾನೆ. ಆಗ ಆಟಗಾರ ಔಟಾದರೆ ಕುದುರೆಗಳು ಹೋಗುತ್ತವೆ. ಇನ್ನೊಬ್ಬ ಆಟಗಾರ ಆಟ ಪ್ರಾರಂಭಿಸುತ್ತಾನೆ.