ಇದಕ್ಕೆ ಎಂಟು ಹತ್ತು ಜನರಾದರೂ ಆಟಗಾರರು ಬೇಕು. ಒಂದು ಕ್ರಿಕೆಟ್ ಚೆಂಡಿನಷ್ಟು ದೊಡ್ಡದಾದ ಮೆತ್ತನ್ನ ಚೆಂಡು ಬೇಕು. ರಬ್ಬರ್ ಚೆಂಡು ಇಲ್ಲದ ಪ್ರಸಂಗದಲ್ಲಿ ಚಿಂದಿ ಅರಿವೆ, ತೆಂಗಿನನಾರು, ಕಾಗದ ಮುಂತಾದವುಗಳಿಂದ ಚೆಂಡು ತಯಾರಿಸುತ್ತಾರೆ. ಕಾಗದದಿಂದ ಚೆಂಡು ತಯಾರಿಸುವಾಗ ನಡುವೆ ಸಣ್ಣ ಕಲ್ಲನ್ನು ಇಟ್ಟು ನಂತರ ಕಾಗದ ಸುತ್ತುವುದುಂಟು. ಆಡುವ ಸ್ಥಳದಲ್ಲಿ ನಡುವೆ ಒಂಧು ಅಗಲ ಕಲ್ಲನ್ನಾಗಲೀ, ಮರದ ಹಲಗೆಯನ್ನಾಗಲೀ ನೆಟ್ಟಗೆ ಇಟ್ಟಿರುತ್ತಾರೆ. ಅದರ ಸುತ್ತು ಇರುವ ಮನೆಯ ಹಿತ್ತಲ ಸ್ಥಳವೇ ಆಟದ ಕಣ.

ಆಟ ಪ್ರಾರಂಭಿಸುವ ಮೊದಲು ಪಕ್ಷ ಆರಿಸುವ ವಿಧಾನದಿಂದ ಪಕ್ಷದ ಜನರನ್ನು ಆರಿಸುತ್ತಾರೆ. ಅದಾದ ನಂತರ ಚೆಂಡು ಎಸುಯುವ ಪಕ್ಷವನ್ನು ನಿರ್ಧರಿಸುತ್ತಾರೆ. ಅದಕ್ಕಾಗಿ ಒಂದು ನಾಣ್ಯವನ್ನಾಗಲೀ, ಗುರುತು ಬರೆದ ಹಂಚಿನ ತುಂಡನ್ನಾಗಲೀ ಮೇಲಕ್ಕೆ ಎಸೆಯುವರು. ಯಾವ ಪಕ್ಷದ ನಾಯಕ ಬಯಸಿದ ಚಿನ್ನೆ ಮೇಲ್ಮುಖವಾಗಿ ಬೀಳುತ್ತದೆಯೋ ಆ ಪಕ್ಷಕ್ಕೆ ಚೆಂಡನ್ನು ಎಸೆಯಲು ನಿಲ್ಲುತ್ತದೆ.

ಚೆಂಡನ್ನು ಎಸೆಯಲು ನಿಂತ ಪಕ್ಷದ ಚೆಂಡು ನಡುವೆ ನೆಟ್ಟಗೆ ನಿಲ್ಲಿಸಿದ ಕಲ್ಲಿಗೆ ಬಡಿದರೆ ಆ ಪಕ್ಷ ಚೆಂಡನ್ನು ಗೆದ್ದಂತೆ. ಪ್ರತಿಯೊಬ್ಬರೂ ಮೂರು ಸಾರೆ ಚೆಂಡನ್ನು ಕಲ್ಲಿನೆಡೆಗೆ ಎಸೆಯುವ ಅವಕಾಶವನ್ನು ಪಡೆದಿರುತ್ತಾರೆ. ಆದರೆ ಎಸೆಯುವ (ಚಿನ್ನೆ ಗೆದ್ದ) ಪಕ್ಷದವರು ಚೆಂಡನ್ನು ಕಲ್ಲಿನಡೆಗೆ ಎಸೆಯುತ್ತಿದ್ದಾಗ ವಿರುದ್ಧ ಪಕ್ಷದವರು ಕಲ್ಲಿನ ಬುಡದಲ್ಲಿಯೇ ನಿಂತಿರುತ್ತಾರೆ. ಒಂದೊಮ್ಮೆ ಆ ಕಲ್ಲಿಗೆ ಬಡಿದು ಹಾರಿದ ಚೆಂಡನ್ನು ವಿರುದ್ಧ ಪಕ್ಷದವರು ಹಿಡಿದರೆ, ಚೆಂಡು  ಎಸೆಯುವವರ ಕೈಬಿಟ್ಟು, ಚೆಂಡನ್ನು ಹಿಡಿದ ಪಕ್ಷಕ್ಕೆ ಸೇರುತ್ತದೆ. ಹೀಗೆ ವಿರುದ್ಧ ಪಕ್ಷದವರೂ ಆಡಿ ಚೆಂಡು ಗೆಲ್ಲಬಹುದು. ಗೆಲ್ಲದಿರಬಹುದು.

ಇಷ್ಟು ಸಿದ್ಧತೆ ಮುಗಿದ ಮೇಲೆ ಆಟದ ಪ್ರಾರಂಭ. ಚೆಂಡನ್ನು ಗೆದ್ದವರು ಒಂದೆಡೆ ಗುಂಪಾಗಿ ನಿಂತು ಗುಟ್ಟಾಗಿ ಚೆಂಡನ್ನು ತಮ್ಮ ಶರ್ಟಿನ ಒಳಗೆ ಬಲಗೈಯಿಂದ ಹಿಡಿದು ಅಡಗಿಸಿಕೊಳ್ಳುವರು. ಆದರೆ ಇವರಲ್ಲಿ ಒಬ್ಬನು ಮಾತ್ರ ಚೆಂಡನ್ನು ನಿಜವಾಗಿಯೂ ಅಡಗಿಸಿಕೊಂಡಿರುತ್ತಾನೆ. ಆದರೆ ಉಳಿದವರೂ ಚೆಂಡು ತಮ್ಮ ಹತ್ತರವೇ ಇದ್ದ ಹಾಗೆ ನಟಿಸಿ ತಮ್ಮ ಬಲಗೈ ಮುಷ್ಟಿಯನ್ನು ತುಸು ಅಗಲಿಸಿ, ಶರ್ಟಿನ ಬುಡದಲ್ಲಿ ಹುದುಗಿಸಿಕೊಳ್ಳುತ್ತಾರೆ. ಹಾಗೂ ಅವರು “ಗಿರ್ ಗಿರ್ ಸಂತಾ” ಅನ್ನುತ್ತಾ ಚೆಂಡು ಇಲ್ಲದ ಪಕ್ಷದವರನ್ನು ಅಟ್ಟಲು ಪ್ರಯತ್ನಿಸುತ್ತಾರೆ. ಆಗ ಅವರು ಚೆಂಡಿನ ಪೆಟ್ಟು ತಪ್ಪಿಸಿಕೊಳ್ಳು, ಹಾಗೂ ಚೆಂಡು ಎಸೆದ ಕಲ್ಲನ್ನು ಮುಟ್ಟಲು, ಚೆಂಡು ಇಲ್ಲದ ಪಕ್ಷ ಪ್ರಯತ್ನಿಸುತ್ತದೆ. ಚೆಂಡು ಇದ್ದ ಪಕ್ಷದವರು ತಮ್ಮ ಕೈಯಲ್ಲಿ ಚೆಂಡು ಇಲ್ಲದಿದ್ದರೂ ಕಲ್ಲು ಮುಟ್ಟಲು ಬಂದವರನ್ನು ಹೊಡೆಯಲು ಹೋಗುವಂತೆ ದೂರ ಅಟ್ಟಿಸಿಕೊಂಡು ಹೋಗುತ್ತಾರೆ. ಅಟ್ಟಿಸಿಕೊಂಡು ಬಂದವರ ಕೈಯಲ್ಲಿ ಚೆಂಡು ಇಲ್ಲವೆಂದು ಗೊತ್ತಾದರೆ, ಹಿಂತಿರುಗಿ ಕಲ್ಲಿನತ್ತ ಬರುತ್ತಾರೆ. ಚೆಂಡಿದ್ದವನು ಸಮಸ ಸಾಧಿಸಿ ವಿರುದ್ಧ ಪಕ್ಷದವರನ್ನು ಓಡಿಸಿಕೊಂಡು ಹೋಗಿ, ಅವರಲ್ಲಿ ಒಬ್ಬನಿಗೆ ಚೆಂಡಿನಿಂದ ಬಡಿಯುವನು. ಬಡಿತ ತಪ್ಪಿ ಆತನಿಗೆ ತಾಗದೇ ಹೋದರೆ ಬಡಿದವನ ಪಕ್ಷ ಸೋತಿತು. ಬಡಿತ ತಾಗಿದರೆ ತಾಗಿಸಿಕೊಂಡವನ ಪಕ್ಷದ ಮೇಲೆ ಒಂದು ಹಂಡಿ. ಚೆಂಡಿದ್ದವನು ಪ್ರಕಟನಾದಾಗ ಉಳಿದವರು ಓಡಿಹೋಗಿ ಕಲ್ಲು ಮುಟ್ಟುವರು. ಇಲ್ಲಿಗೆ ಒಂದು ಆಟ ಮುಗಿಯಿತು. ಮರು ಆಟದಲ್ಲಿ ಚೆಂಡು ಗೆದ್ದವನ ಪಕ್ಷಕ್ಕೆ ಹೋಗುತ್ತದೆ.