ಎರಡು ಪಕ್ಷ ಹಂಡಿ ಮಾಡಲು ಎಷ್ಟು ಅಂಕ ಗಳಿಸಬೇಕೆಂಬುದನ್ನು ಮೊದಲೇ ನಿರ್ಧರಿಸುತ್ತಾರೆ. ಆಡುವ ಪಕ್ಷದ ಒಬ್ಬನು ಕುಳಿಯ  ಹತ್ತರ ನಿಂತುಕೊಂಡು ಕುಳಿಯ ಮೇಲೆ ಗೆಂಡೆ ಇಟ್ಟು ಎದುರು ಪಕ್ಷದವರೆಡೆಗೆ ಗೆಂಡೆ ಎಸೆಯುತ್ತಾನೆ. ಎದುರು ಪಕ್ಷದವರು ಗೆಂಡೆಯನ್ನು ಕುಳಿಯ ಮುಂದೆ ನೆಲದ ಮೇಲಿಟ್ಟ ಹಾಣೆಗೆ ಗುರಿಯಿಡುವರು. ತಾಗಿದರೆ ಔಟು, ಎಸೆಯುವುದಲ್ಲದೆ ಕೊಜ್ಯಾ ಹೊಡೆದು ಕೂಡ ಆಟ ಆರಂಭಿಸಬಹುದು. ಗೆಂಡೆ ಹಾಣೆಗಳನ್ನು ಬಲಗೈಯಲ್ಲಿ ಹಿಡಿದು, ಗೆಂಡೆ ಹಾರಿಸಿ ಹಾಣೆಯಿಂದ ಬಡಿದು ದೂರ ತಳ್ಳುವದು. ಎದುರು ಪಕ್ಷದವರು ಮೇಲಿನಂತೆ ಹಾಣೆಗೆ ಗುರಿಯಿಡುವರು.

ಎರಡನೆಯ ಹಂತದಲ್ಲಿ ಹಾಣೆಯ ಬಳಿ ಬಿದ್ದ ಗೆಂಡೆಯನ್ನು ಹಾರಿಸಿ ಹೊಡೆಯುವನು. ಈ ಆಟದಲ್ಲಿ ಗೆಂಡೆಯ ಎರಡು ಬದಿ ಚೂಪಾಗಿದ್ದು ಹಾಣೆಯಿಂದ ಒಂದು ಬದಿಗೆ ಹೊಡೆದ ಕೂಡಲೇ ಪುಟಿಯುವದು. ಅದು ಕೆಳಗೆ ಬೀಳುವುದರೊಳಗೆ ಎರಸು ಮೂರು ಸಾರೆ ಬಡಿ ಬಡಿದು ದೂರ ಎಸೆಯುವರು. ಒಂದೊಮ್ಮೆ ಗೆಂಡೆ ಹಾರದಿದ್ದರೆ ಮೂರು ಅವಕಾಶಗಳನ್ನು ಕೊಡುವರು.

ಗೆಂಡೆಯನ್ನು ಹಾಣೆಯಿಂದ ಎರಡು ಸಾರೆ ಬಡಿದರೆ ಗಿಲ್ಲಿ ಅಥವಾ ಜಿಲ್ಲಿ ಎನ್ನುವರು. ಆಗ ಕುಳಿಯಿಂದ ಗೆಂಡೆ ಬಿದ್ದ ಅಂತರವನ್ನು ಗೆಂಡೆಯಿಂದಲೇ ಅಳೆಯುವರು. ಗೆಂಡೆಯ ಅಳತೆಯ ಮೊತ್ತದಷ್ಟು ಅಂಕ ಅವನಿಗೆ ಲಭಿಸುತ್ತದೆ. ಒಂದೇ ಪೆಟ್ಟಿನಿಂದ ಗೆಂಡೆ ಹಾರಿದ್ದರೆ ಹಾಣೆಯಿಉಂದ ಅಳೆಯುವರು. ಆಗ ಕಡಿಮೆ ಅಂಕ ದೊರೆಯುತ್ತದೆ. ಹಾಣೆ ದೊಡ್ಡದಿರುವ ಕಾರಣ ಅಂಕ ಕಡಿಮೆಯಾಗುತ್ತದೆ. ಮೂರು ಸಾರೆ ಹಾಣೆಗೆ ಗೆಂಡೆ ತಾಗಿದ್ದರೆ ಗೆಂಡೆಯ ಅಳತೆಯ ೨ ಪಟ್ಟು ಅಂಕ. ನಾಲ್ಕು ಸಾರೆ ತಾಗಿದರೆ ೩ ಪಟ್ಟು ಅಂಕ. ಒಟ್ಟು ಆಟದ ಅಂಕ ಕೂಡಿಸಿಕೊಳ್ಳುತ್ತಾರೆ. ಎರಡೋ ಹೆಚ್ಚೊ ಗಿ (ಜಿ) ಲ್ಲಿ ಮಾಡಿ ದೂರ ಎಸೆದಾಗ ಗೆಂಡೆಯಿಂದ ಅಳೆಯುವುದು ತಡವೆಂದು ಹಾಣೆಯಿಂದಲೇ ಅಳೆದು ಮುಂದೆ ಗೆಂಡೆಗೂ ಹಾಣೆಗೂ ಅಳತೆಮಾಡಿ, ಅದು ಎಷ್ಟು ಪಟ್ಟು ದೊಡ್ದದೆಂದು ನೋಡಿ, ಅಷ್ಟು ಸಂಖ್ಯೆಯಿಂದ ಗುಣಿಸಿ ಗೆಂಡೆಯ ಲೆಕ್ಕದಲ್ಲಿ ಅಂತರವನ್ನು ಪಡೆದುಕೊಳ್ಳುತ್ತಾರೆ. ಹೆಚ್ಚು ಅಂಕ ಗಳಿಸಿದ ಪಕ್ಷ ಗೆಲ್ಲುತ್ತದೆ.