ಸಮಪಾತಳಿ ನೆಲದ ಮೇಲೆ ಸುಮಾರು ಎರಡು ಅಂಗುಲ ವ್ಯಾಸ, ಒಂದುವರೆ ಅಂಗುಲ ಆಳದ ಮೂರು ಕುಳಿಗಳನ್ನು, ಸುಮಾರು ಐದೈದು ಮೊಳ ಅಂತರದಲ್ಲಿ ಒಂದೇ ಸಾಲಿನಲ್ಲಿ ತೆಗೆಯಬೇಕು. ಒಂದನೆಯ ಕುಳಿಯಿಂದ ಸುಮಾರು ಹದಿನೈದಿಪ್ಪತ್ತು ಮೊಳ ದೂರದಲ್ಲಿ ಒಂದು ಅಡ್ಡ ಗೆರೆ ಎಳೆದು ಆಟಗಾರರೆಲ್ಲ ಅಲ್ಲಿಂದ “ಗೋಡ” ಎನ್ನುತ್ತ ತಮ್ಮ ಗೋಲಿಗಳನ್ನು ಮೊದಲನೆಯ ಕುಳಿಯತ್ತ ಎಸೆಯಬೇಕು. ಯಾರ ಗೋಲಿ ಕುಳಿಯ ಸಮೀಪ ಬೀಳುತ್ತದೆಯೋ ಅವರು ಕುಳಿ ತುಂಬಿ ಉಳಿದವರ ಗೋಲಿ ಓಡಿಸಬೇಕು. ಓಡಿಸಿ ಎರಡನೇಯ ಕುಳಿ ತುಂಬಬೇಕು.ಅವನಿಂದ ಎರಡನೇಯ ಕುಳಿ ತುಂಬಲಾಗದಿದ್ದಲ್ಲಿ ಉಳಿದ ಗೋಲಿಯವರು ಒಂದನೆಯ ಕುಳಿ ತುಂಬಲು ಬರುವರು. ಆಗ ಅವರು ಒಂದನೆಯ ಕುಳಿ ತುಂಬಿದರೆ, ಮೊದಲು ಆಡಿದವನ ಎರಡನೆಯ ಕುಳಿಯ ಹತ್ತರಿನ ಗೋಲಿಯನ್ನು ಇಲ್ಲವೇ ಇತರ ಆಟಗಾರರಿದ್ದರೆ, ಅವರ ಗೋಲಿಗಳನ್ನು ಓಡಿಸಬಹುದು. ಎರಡನೆಯ ಆಟಗಾರನಿಂದ ಒಂದನೆಯ ಕುಳಿ ತುಂಬಲಾಗದಿದ್ದಲ್ಲಿ ಉಳಿದ ಆಟಗಾರರು ಕುಳಿ ತುಂಬಲು ಪ್ರಯತ್ನಿಸುವರು. ಎಲ್ಲರೂ ಮುಗಿದ ಮೇಲೆ ಒಂದನೆಯ ಆಟಗಾರ ಎರಡನೆ ಕುಳಿ ತುಂಬಿ, ಮೂರನೆಯ ಕುಳಿಗೆ ಹೋಗಬಹುದು. ಇಲ್ಲವೇ ಒಂದನೆಯ ಕುಳಿಯತ್ತ ಬಂದ ಎರಡನೆಯ ಇಲ್ಲವೇ ಉಳಿದ ಆಟಗಾರರ ಗೋಲಿಯನ್ನು ಓಡಿಸಬಹುದು. ಪ್ರತಿಯೊಬ್ಬ ಆಟಗಾರನು ತಾನು ಕುಳಿ ತುಂಬಿ ಊಳಿದ ಆಟಗಾರರಿಗೆ ಕುಳಿ ತುಂಬಲು ಕೊಡದೆ ಓಡಿಸಬೇಕು. ಓಡಿಸುವಾಗ ಗುರಿ ತಪ್ಪಿದರೆ ಗೋಲಿ ಹೋಗಿಬಿದ್ದಲ್ಲಿಂದಲೇ ಇತರ ಆಟಗಾರರು ಆಡಿದ ಮೇಲೆ, ತಿರುಗಿ ಯಾವ ಕುಳಿ ತುಂಬಬೇಕೋ ಅದನ್ನು ತುಂಬಬೇಕು. ಇಲ್ಲವೆ ಇತರ ಆಟಗಾರರ ಗೋಲಿಗೆ ಗುರಿಯಿಟ್ಟು ಓಡಿಸಿದ ನಂತರ ಕುಳಿ ತುಂಬಬಹುದು. ಆಟಗಾರ ಒಂದರಿಂದ ಮೂರು ಕುಳಿ ತುಂಬಿ, ನಂತರ ಮೂರನೆಯ ಕುಳಿಯಿಂದ ಎರಡನೆಯ ಕುಳಿಯನ್ನು ಮತ್ತೆ ತುಂಬಿ, ಎರಡನೆಯ ಕುಳಿಯಿಂದ ಮತ್ತೆ ಒಂದನೆಯ ಕುಳಿ ತುಂಬಿ, ಯಾರ ಗೋಲಿಗೆ ಗುರಿಹಿಡಿದು ಹೊಡೆವನೋ ಅವನ ಮೇಲೆ ಹಂಡಿಯಾಗುತ್ತದೆ.ಐದು ಕುಳಿ ತುಂಬಿದ ಮೇಲೆ ತುಂಬುವದಿಲ್ಲ. ಉಳಿದ ಆಟಗಾರರ ಗೋಲಿಗೆ ಗುರಿಯಿಟ್ಟರಾಯ್ತು. ಗುರಿ ತಾಗುವವರೆಗೆ ಆಡಬೇಕು. ಇನ್ನೊಬ್ಬ ಆಟಗಾರ ಇವನ ಗುರಿ ತಪ್ಪಿಸಿಕೊಂಡು ಅವನೂ ಐದು ಕುಳಿ ತುಂಬಲು ಪ್ರಯತ್ನಿಸಿ ಹಂಡಿ ಮಾಡಬಹುದು. ಒಬ್ಬರು ಹಂಡಿ ಮಾಡಿದ ಮೇಲೆ ಎರಡನೆಯ ಆಟ ಪ್ರಾರಂಭವಾಗುವದು.