ಆಟಗಾರರು ಸಮಸಂಖ್ಯೆಯಲ್ಲಿರಬೇಕು. ಆಟಗಾರರಷ್ಟೇ ಗೋಲಿಗಳು ಬೇಕು.

ಎರಡು ಗೋಲಿಗಳನ್ನು ಅಂಗಳದಲ್ಲಿ ಒಂದೆಡೆ ಜೋಡಿಸಿಡುವರು. ಅಲ್ಲಿಂದ ಎರಡು ಮಾರು ದೂರ ನಿಂತು, ಅಲ್ಲೊಂದು ಅಡ್ಡ ಗೆರೆ ಎಳೆದು ಆಡುವವರು. ಆ ಗೆರೆಯ ಹಿಂದೆ ನಿಂತು ಆಟ ಆರಂಭಿಸುತ್ತಾರೆ. ಮೊದಲು ಒಂದು ಪಕ್ಷ ಆಡುತ್ತಿದ್ದರೆ ಇನ್ನೊಂದು ಪಕ್ಷದವರು ಎಲ್ಲಿ ನಿಯಮ ತಪ್ಪಿ ಆಡುತ್ತಾರೆ, ಎಲ್ಲಿ ಸೋಲುತ್ತಾರೆ ಎಂಬುದನ್ನು ನಿರೀಕ್ಷಿಸುತ್ತ ಇರುತ್ತಾರೆ. ಒಂದೆಡೆ ಇಟ್ಟ ಆ ಜೋಡು ಗೋಲಿಗಳನ್ನು ತಮ್ಮ ಗೋಲಯ ಸಹಾಯದಿಂದ ಓಡಿಸಿ ಗೆರೆದಾಟಿಸುವದೇ ಎಲ್ಲ ಆಟಗಾರರ ಗುರಿ. ಆಟಗಾರನೊಬ್ಬನು ತನ್ನ ಗೋಲಿಯನ್ನು ಜೋಡು ಗೋಲಿಯಲ್ಲಿಗೆ ಉರುಳಿಸಿದಾಗ ಅದು ಜೋಡು ಗೋಲಿಗೆ ಬಡಿಯದಿದ್ದರೆ, ಆತನು ಆಟ ಬಿಡಬೇಕು. ಒಂದು ಪಕ್ಷದವರೆಲ್ಲ ಆಡಿ ಸೋತ ಮೇಲೆ ಇನ್ನೊಂದು ಪಕ್ಷದವರು ಆಡಬೇಕು.

ಹೊಡೆಯುವ ಗೋಲಿಗಳು ಒಂದಕ್ಕೊಂದು ತಾಗಬಾರದು. ಇಟ್ಟ ಗೋಲಿಗೂ ಹೊಡೆಯುವ ಗೋಲಿಗೂ ನಾಲ್ಕು ಅಂಗುಲಕ್ಕಿಂತ ಕಡಿಮೆ ಅಂತರವಿರಬಾರದು. ಕಡಿಮೆ ಇದೆ ಅನಿಸಿದಾಗ ಆಡುವ ಪಕ್ಷದವರು ಒಪ್ಪದೇ ಹೋದರೆ, ವಿರುದ್ಧ ಪಕ್ಷದವರು “ನಾಬಿ” ನೋಡುತ್ತಾರೆ. ಅಂದರೆ ತಮ್ಮ ನಾಲ್ಕು ಬೆರಳುಗಳನ್ನು ಆ ಗೋಲಿಗಳ ನಡುವೆ ಇಟ್ಟು ಅಳತೆ ಮಾಡುತ್ತಾರೆ. ವಿರುದ್ಧ ಪಕ್ಷದವರು ತಮ್ಮ ಅಂಗೈಯನ್ನು ಗಟ್ಟಿಯಾಗಿ ಕೈಯಿಂದ ಒತ್ತಿ ತುಸು ಅಗಲಿಸಿ ನಾಬಿ ನೋಡುವುದುಂಟು ಹಾಗೆ ಮೋಸಮಾಡಿರುವರೆಂದು ಅನಿಸಿದರೆ ಆಡುವ ಪಕ್ಷದವರು ಒಂದು ಹಿಡಿ ಕಡ್ಡಿಯನ್ನು ನಾಬಿ ಇಟ್ಟವರ ಬೆರಳಿನ ಸಂದಿನಲ್ಲಿ ಓಡಿಸುವರು. ಆಗ ಗೋಲಿ ಹಂದಿದರೆ ಮೋಸವಲ್ಲ.

ಗೋಲಿ ಉರುಳಿಸುವ ಕ್ರಮ

ಎಡಗೈ ಹೆಬ್ಬರೆಳು ಮತ್ತು ತೋರಬೆರಳಿನ ನಡುವೆ ಗೋಲಿಯಿಟ್ಟು, ಬಲಗೈ ಹೆಬ್ಬೆರಳನ್ನು ನೆಲಕ್ಕೆ ಊರಿ, ಬಲಗೈ ತೋರಬೆರಳನ್ನು ಗೋಲಿಯ ಮೇಲಿಟ್ಟು ಶಕ್ತಿಯನ್ನು ಗೋಲಿಯ ಮೇಲೆ ಪ್ರಯೋಗಿಸಬೇಕು. ಆಗ ಬಿಲ್ಲಿನಿಂದ ಬಾಣ ಹೋಗುವಂತೆ ಗೋಲಿ ಸಿಡಿಯುತ್ತದೆ. ಗೋಲಿಗಳನ್ನು ಗೆರೆದಾಟಿಸಿದ ಪಕ್ಷವೇ ಗೆದ್ದಂತೆ.