ಎರಡರಿಂದ ಹತ್ತಿಪ್ಪತ್ತರವರೆಗೆ ಆಟಗಾರರಿರಬಹುದು. ಅವರಲ್ಲಿ ಎರಡು ತಂಡ. ಎರಡರಲ್ಲೂ ಅಷ್ಟಷ್ಟೇ ಆಟಗಾರರು. ಒಂದು ಹಾಯುವ ತಂಡ. ಇನ್ನೊಂದು ಕಟ್ಟುವ ತಂಡ. ಒಂದು ಮೊಳ ಉದ್ದ ಹಾಣೆ, ಗೇಣುದ್ದ ಗೆಂಡೆ (ಚಿಣಿ) ಬೇಕು. ಕಟ್ಟಿಗೆಯ ತುಂಡಿನಿಂದ ಹಾಣೆ, ಗೆಂಡೆಗಳನ್ನು ಆಟಗಾರರೇ ತಯಾರಿಸಿಕೊಳ್ಳುತ್ತಾರೆ. ಹಾಣೆ ಮತ್ತು ಗೆಂಡೆ ದುಂಡು ಆಕಾರವಾಗಿದ್ದು ಹಾಣೆ ಸು. ೧ ೩/೪ ಅಂಗುಲ ವ್ಯಾಸವುಳ್ಳದ್ದು, ಗೆಂಡೆ ಸು. ೩/೪ ಅಂಗುಲ ವ್ಯಾಸವುಳ್ಳದ್ದು ಇರುವುದು. ಗೆಂಡೆಯ ಎರಡೂ ಬದಿಗಳನ್ನು ತುಸು ಚೂಪಾಗಿ ಕೆತ್ತುತ್ತಾರೆ. ಕೆಲವರು ಹಾಣೆಯ ಒಂದು ತುದಿಯನ್ನು ತುಸು ಚೂಪು ಮಾಡಿಕೊಳ್ಳುತ್ತಾರೆ. ಆಟದ ಬೈಲಿನಲ್ಲಿ ಸುಮಾರು ಆರು ಅಂಗುಲ ಉದ್ದ, ಎರಡು ಅಂಗುಲ ಆಳ, ಎರಡು ಅಂಗುಲ ಅಗಲದ ಒಂದು ಕುಳಿ ತೋಡಬೇಕು. ಕುಳಿಯ ಉದ್ದ ಆಟಗಾರರ ಕಡೆಗೆ ಮುಖವಾಗಿರುತ್ತದೆ. ಗೆಂಡೆಯನ್ನು ಕುಳಿಯ ಮೇಲೆ ಅಡ್ಡವಿಟ್ಟು ಹಾಣೆಯಿಂದ ಎಸೆಯುತ್ತಾರೆ.

ಕಟ್ಟುವವರು – ಎಸೆಯುವವನ ಎದುರಿಗೆ ನಿಂತಿರುತ್ತಾರೆ. ಆಡುವವ ಕುಳಿಯ ಮೇಲೆ ಗೆಂಡೆಯಿಟ್ಟು ನೇರವಾಗಿ ಎಸೆಯಬೇಕು. ಎಡಕ್ಕೋ ಬಲಕ್ಕೋ ಗೆಂಡೆ ಸಾಗಿದರೆ ಅದು “ಸಲ್ಲ”, ಆಗ ಮತ್ತೊಮ್ಮೆ ನೇರವಾಗಿ ಎಸೆಯಬೇಕು. ಕಟ್ಟುವವರು ತಮ್ಮೆಡೆ ಹಾರಿ ಬರುವ ಗೆಂಡೆಯನ್ನು ಹಿಡಿಯಲು ಪ್ರಯತ್ನಿಸುವರು. ಹಿಡಿಯಲಾಗದಿದ್ದಲ್ಲಿ ನೆಲಕ್ಕೆ ಬಿದ್ದ ಗೆಂಡೆಯನ್ನು ಎತ್ತಿ ಬಿದ್ದ ಸ್ಥಳದಿಂದಲೇ, ಆಡಗಾರನು ಕುಳಿಯ ಹಿಂದೆ ಹಿಡಿದ ಹಾಣೆಗೆ ಕಟ್ಟುವವನು ಗುರಿಯಿಡುವನು. ಅವರ ಗುರಿ ತಾಗಾದಾಗ ಆಟಗಾರ ನೆಟ್ಟಗೆ ಬಲಮುಷ್ಟಿಯಲ್ಲಿ ಹಾಣೆಯನ್ನು ಹಿಡಿದು, ಆ ಮುಷ್ಟಿಯ ಮೇಲೆ ಗೆಂಡೆಯಿಟ್ಟು, ಗೆಂಡೆಯನ್ನು ಮೇಲಕ್ಕೆ ಹಾರಿಸಿ ಹಾಣೆಯಿಂದ ಹೊಡೆದು ದೂರ ಎಸೆಯುವನು. ಆಟ ಕಟ್ಟುವವರು ಅದನ್ನು ಹೆಕ್ಕಿ ಕುಳಿಯತ್ತ ಹೊಡೆಯುವರು. ಆಟಗಾರ ಕುಳಿಯಿಂದ ತಾನು ಓಡಿ ಬಂದು ಹಾರಬಹುದಾದಷ್ಟು ಅಂತರದಲ್ಲಿ ನಿಂತಿರುತ್ತಾನೆ. ಆಟಗಾರ ತನ್ನತ್ತ ಬರುವ ಗೆಂಡೆಯನ್ನು ಬಡಿದು ದೂರ ಓಡಿಸುವನು. ಇದಕ್ಕೆ ಮರುಗೆಂಡೆಯೆನ್ನುವರು. ಗೆಂಡೆ ಬಿದ್ದಲ್ಲಿಂದ ಕುಳಿಯವರೆಗಿನ ಅಂತರವನ್ನು ಪಾಂವ್, ಚಟಮಿಟ್ ಎಂಗ ಶಬ್ದಾಂಕೆಯ ಸಹಾಯದಿಉಂದ ಅಳೆಯುವರು. ಅಳೆಯಲು ಉಪಯೋಗಿಸುವ ಶಬ್ದಾಂಕಗಳು ಇವು: ಪಾಂವ್, ಚಟಮಿಟ್ (ಚಟ್ಟಿ), ಬರಮುಟ್ (ಮುಟ್ಟಿ), ಗೋಡಾ, ಬು (ಗು) ಚ್ಚಿ, ಕಲಾಜೀ (ಜೂ) ರ್. ಜೀರ್ ವರೆಗೆ ಎಣಿಸುವಷ್ಟು ಅಂತರ ಬಂದರೆ ಒಂದು ಹಂಡಿ. ಪಟ ಹಾರಿಸಲು ಇಂತಹ ಎಷ್ಟು ಹಂಡಿಯನ್ನು ಪಡೆಯಬೇಕೆಂಬುದನ್ನು ಮೊದಲೇ ನಿರ್ಧರಿಸಿಕೊಂಡಿರುತ್ತಾರೆ. ಒಂದೇ ಎಸೆತಕ್ಕೆ ಐದಾರು ಹಂಡಿಗಳನ್ನು ಆಟಗಾರ ಗಳಿಸಬಹುದು. ಎಣಿಸುವ ಈ ಶಬ್ದಗಳು ಆಟದ ವಿಧಾನಕ್ಕೆ ಇರುವ ಹೆಸರುಗಳನ್ನೂ ಆಹುದು. ಎಣಿಸುತ್ತಲೇ ಕೊನೆಗೆ ಯಾವ ಶಬ್ದ ಬರುತ್ತದೆಯೋ ಆ ಶಬ್ದದ ಆಟದ ವಿಧಾನದಂತೆ ಆಟ ಮುಂದುವರೆಸಬೇಕು.

ಕಟ್ಟುವವರು ಗೆಂಡೆಯನ್ನು ಎತ್ತರಿಸಿ ಕೊಡದೆ ಕೆಳಗಿನಿಂದ ಕೊಟ್ಟಾಗ ಗೆಂಡೆಯನ್ನು ತಡೆಯುವ ಆಟಗಾರನ ಹಾಣೆ ನೆಲಕ್ಕೆ ತಾಗಬಹುದು. ಆಗ ಹಾಣೆ ನೆಲಕ್ಕೆ ತಾಗಿದಲ್ಲಿಂದ ಕುಳಿಯವರೆಗೆ ಅಳೆಯಬೇಕೆ ಹೊರತು ಗೆಂಡೆ ಸಿಡಿದು ಬಿದ್ದಲ್ಲಿಂದಲ್ಲ.

ಆಟ ಮುಂದುವರಿಯುವಾಗ ಅನುಸರಿಸುವ ವಿವಿಧ ವಿಧಾನಗಳು

ಪಾಂವ್:      ಗೆಂಡೆಯನ್ನು ಎಡಗಾಲ ಮೇಲಿಟ್ಟು ಆ ಕಾಲಿನಿಂದಲೇ ಗೆಂಡೆಯನ್ನು ಮೇಲಕ್ಕೆ ಹಾರಿಸಿ ಬಲಗೈಯಲ್ಲಿರುವ ಹಾಣೆಯಿಂದ ಗೆಂಡೆಗೆ ಗುರಿಹಿಡಿದು ಹೊಡೆಯಬೇಕು. ಮರುಗೆಂಡೆ ಹೊಡೆದಾಗ ಎಣಿಕೆ ಚಟಮಿಟ್ ದಿಂದ ಚಟಮಿಟ್ ! ಗೆಂಡೆಯ ಒಂದು ತುದಿಯನ್ನು ಎಡಗೈಯಲ್ಲಿ ಹಿಡಿದು, ಗೆಂಡೆಯ ಇನ್ನೊಂದು ತುದಿಗೆ ಹಾಣೆಯಿಂದ ಬಡಿದು ಬಿಟ್ಟಾಗ, ಅಂತರಾಳದಲ್ಲಿ ಅದು ಚಕ್ರಾಕಾರದಲ್ಲಿ ತಿರುಗುತ್ತದೆ. ಮತ್ತೊಂದು ಸಾರೆ ಹಾಣೆಯಿಂದ ಹೊಡೆದರೆ ಕಟ್ಟುವವರಲ್ಲಿಗೆ ಹೋಗುತ್ತದೆ.

ಮರುಗೆಂಡೆ : ಬರಮುಟ್ ದಿಂದ ಎಣಿಸಬೇಕು.

ಬರಮುಂಟ್ : ಗೆಂಡೆಯನ್ನು ಎಡಗೈ ಮುಷ್ಟಿಯ ಮೇಲಿಟ್ಟು ಅದನ್ನು ಮೇಲಕ್ಕೆ ಹಾರಿಸಿ ಬಲಗೈ ಹಾಣೆಯಿಂದ ಹೊಡೆಯಬೇಕು.

ಮರುಗೆಂಡೆ: ಗೋಡಾದಿಂದ ಎಣಿಕೆ.

ಗೋಡಾ : ಎಡಗೈ ಬೆನ್ನ ಮೇಲೆ (ಬೆಂಗೈ ಮೇಲೆ) ಗೆಂಡೆಯಿಟ್ಟು ಮೇಲೆ ಹಾರಿಸಿ ಹಾಣೆಯಿಂದ ಹೊಡೆಯುವದು.

ಬುಚ್ಚ : ಎಡ ಅಂಗೈ ಮೇಲೆ ಗೆಂಡೆಯಿಟ್ಟು ಗೆಂಡೆಯನ್ನು ಕೆಳಮುಖವಾಗಿ ಚೆಲ್ಲಿ, ಅದು ನೆಲಮುಟ್ಟುವ ಮೊದಲೇ ಹಾಣೆಯಿಂದ ಹೊಡೆಯಬೇಕು. ಮರು ಗೆಂಡೆ ಎಣಿಕೆ ಕಲದಿಂದ.

ಕಲ : ಗೆಂಡೆಯನ್ನು ಮುಖ ಮೇಲೆ ಮಾಡಿ ಕಣ್ಣ ಹುಬ್ಬಿನ ಮೇಲಿಟ್ಟು ಮುಖ ಕೆಳಕ್ಕೆ ತಗ್ಗಿಸಿ ಕೆಳಕ್ಕೆ ಬೀಳುವ ಗೆಂಡೆಯನ್ನು ಹಾಣೆಯಿಂದ ಹೊಡೆಯಬೇಕು. ಮರು ಗೆಂಡೆಯ ಎಣಿಕೆ ಜೀರ್ ದಿಂದ.

ಜೀರ್ : ಮುಷ್ಟಿಯ ಮೇಲೆ ಸುಮಾರು ನಾಲ್ಕು ಅಂಗುಲದಷ್ಟು ಮಾತ್ರ ಕಾಣುವಂತೆ ಬಲಗೈ ಮುಷ್ಟಿಯಲ್ಲಿ ಹಾಣೆ ಹಿಡಿದು, ಮುಷ್ಟಿಯ ಮೇಲೆ ಅಡ್ಡ ಗೆಂಡೆಯಿಟ್ಟು ಗೆಂಡೆ ಹಾರಿಸಿ ಹಾಣೆಯ ಕೆಳಭಾಗದಿಂದ ಹೊಡೆಯಬೇಕು. ಮರುಗೆಂಡೆ ಪಾಂವ್ ದಿಂದ ಎಣಿಕೆ. ಪಾಂವ್ ಆಡಿದ ಮೇಲೆ ಚಟಮಿಟ್ ದಿಂದ ಅನುಕ್ರಮವಾಗಿ ಆಡುವದಿಲ್ಲ. ಎಣಿಸುವಾಗ ಬಂದ ಕೊನೆಯ ಹೆಸರಿನ ಆಟದಿಂದ ಆಡಬೇಕು.

ಎರಡು ತಂಡದವರು ಒಪ್ಪಿಕೊಂಡಷ್ಟು ಹಂಡಿಯನ್ನು ಒಂದೇ ಆಟದಲ್ಲಿ ಮಾಡಬೇಕೆಂದಿಲ್ಲ. ಒಂದು ತಂಡದ ಎಲ್ಲರೂ ಔಟಾದರೆ ಇನ್ನೊಂದು ತಂಡವಾಡುತ್ತದೆ.

ನಂತರ ಮೊದಲ ತಂಡಕ್ಕೆ ಅವಕಾಶ. ಮೊದಲು ಕರಾರು ಮಾಡಿದಷ್ಟು ಹಂಡಿ ಮಾಡಿದ ಪಕ್ಷ ಗೆದ್ದಂತೆ. ಹಂಡಿ ಲೆಕ್ಕ ಮಾಡುವಾಗ ಎರಡು ಪಕ್ಷದ ಹಂಡಿಗಳನ್ನು ಬೇರೆ ಬೇರೆ ಕೂಡಿಸಿ ಒಮ್ಮೆಲೆ ಕಳೆಯುವದಿಲ್ಲ. ಎರಡೂ ಪಕ್ಷದವರು ಒಮ್ಮೆ ಆಡಿದ ಮೇಲೆ ಹೆಚ್ಚು ಹಂಡಿ ಗಳಿಸಿದವರ ಹಂಡಿಯಿಂದ ಕಡಿಮೆ ಗಳಿಸಿದವರ ಹಂಡಿಯನ್ನು ಕಳೆಯುತ್ತಾರೆ. ಉದಾಹರಣೆಗೆ ಮೊದಲ ಪಕ್ಷದವರು ೧೫ ಹಂಡಿ ಎರಡನೆಯ ಪಕ್ಷದವರು ೧೦ ಹಂಡಿ ಮಾಡಿದ್ದರೆ ಮೊದಲ ಪಕ್ಷದ ಹತ್ತು ಹಂಡಿಯನ್ನು ಅಳಿಸುತ್ತಾರೆ. (ನೆಲದ ಮೇಲೆ ಎಳೆದ ೧೦ ಗೆರೆಗಳನ್ನು) ಮತ್ತೆ ಆಡುವಾಗ ಮೊದಲ ಪಕ್ಷದವರು ಆರನೇಯ ಹಂಡಿಯೆಂತಲೂ ಎರಡನೆಯ ಪಕ್ಷದವರು ಒಂದನೆ ಹಂಡಿಯಿಂದಲೂ ಎಣಿಸುತ್ತಾರೆ. ಮತ್ತೆ ಆಟ ಮುಗಿದ ಮೇಲೆಯೂ ಹಾಗೆಯೇ ಕಡಿಮೆ ಮಾಡಿದವನಷ್ಟೇ ಹಂಡೆಯನ್ನು ಹೆಚ್ಚು ಮಾಡಿದವನ ಹಂಡಿಯಿಂದ ತೆಗೆಯುತ್ತಾರೆ. ಹೀಗಾಗಿ ನಿಶ್ಚಿತ ಹಂಡಿಮಾಡಲು ತಡವಾಗುತ್ತದೆ. ಬಹಳ ಹೊತ್ತು ಆಟವಾಡಬೇಕೆಂಬ ಕಾರಣದಿಂದಲೋ, ಪಟವಾಗಲು ತಡವಾಗಬೇಕೆಂದೋ (ಪಟ ತಿನ್ನುವುದು ಅವಮಾನಕರವೆಂಬ ಗ್ರಹಿಕೆಯಿರುವದರಿಂದ) ಈ ವಿಧಾನ ಅನುಸರಿಸುತ್ತಿರಬೇಕು. ಹಂಡಿಯ ಸಂಖ್ಯೆಯನ್ನು ನೆಲದ ಮೇಲೆ ಗೆರೆಯೆಳೆದು ಲೆಕ್ಕವಿಡುತ್ತಾರೆ. ನೂರುಗಟ್ಟಲೆ ಹಂಡಿಯಾದಾಗ ನೂರು ಗೆರೆ ಎಳೆಯುವ ತೊಂದರೆ ನಿವಾರಣೆಗೆಗಾಗಿ ಈ ಪದ್ಧತಿ ಬಂದಿರಬೇಕು. ಕರಾರಿನಂತೆ ಹಂಡಿ ಪಡೆದು ಗೆದ್ದ ಮೇಲೆಯೂ ಗೆದ್ದ ಪಕ್ಷದವರು ಆಟ ಮುಂದುವರಿಸುತ್ತಾರೆ. ಇದಕ್ಕೆ ಪಟಹಾರಿಸುವುದು ಎನ್ನುತ್ತಾರೆ. ಇನ್ನೊಂದು ಪಕ್ಷ ಪಟ ತಿನ್ನುವವರು.

ಪಟ ಹಾರಿಸುವುದು

ಇದು ಈ ಆಟದ ಕೊನೆಯ ಹಂತ. ಒಂದು ಗೆಂಡೆಯನ್ನು ಅಥವಾ ಕಲ್ಲಿ ತುಂಡನ್ನು ಕುಳಿಯ ಬದಿಯಲ್ಲಿಟ್ಟು ಅದರ ಮೇಲೆ ಇನ್ನೊಂದು ಗೆಂಡೆಯನ್ನು ನೆಟ್ಟಗಿಟ್ಟು ನೆಲದಿಂದ ಮೇಲಕ್ಕೆದ್ದ ಬದಿಗೆ ಹಾಣೆಯಿಂದ ಹೊಡೆದು ಗೆಂಡೆಯನ್ನು ಮೇಲಕ್ಕೆ ಚಿಮ್ಮಿಸಬೇಕು. ಗೆಂಡೆ ನೆಲಕ್ಕೆ ಬೀಳುವ ಪೂರ್ವದಲ್ಲಿಯೇ ಮರು ಗೆಂಡೆ ಹೊಡೆಯಬೇಕು. ಮರುಗೆಂಡೆ ಬಿದ್ದ ಸ್ಥಳದಿಂದ ತನ್ನ ಪಕ್ಷದ ಆಟಗಾರರ ಸಂಖ್ಯೆಯ ಮೂರುಪಟ್ಟು ಬುಚ್ಚಿಯನ್ನು ಹೊಡೆಯುತ್ತ ಮುಂದೆ ಸಾಗುವನು. ಇಲ್ಲಿ ಮರುಗೆಂಡೆ ಹೊಡೆಯುವ ಕ್ರಮವಿಲ್ಲ. ಆಡುವವನೇ ಪ್ರತಿಸಾರೆ ಗೆಂಡೆ ಹೆಕ್ಕಿ ಅಲ್ಲಿಂದಲೇ ಬುಚ್ಚಿ ಹೊಡೆಯುತ್ತ ಸಾಗುವನು. ಆಗ ಗೆಂಡೆ ಕುಳಿಯಿಂದ ಸುಮಾರು ಒಂದೆರಡು ಫರ್ಲಾಂಗದಟ್ಟು ದೂರ ಬೀಳುವದು. ಆಗ ಸೋತ ಪಕ್ಷದವರು ಗೆಂಡೆಯನ್ನು ಹಿಡಿದು ಕುಳಿಯತ್ತ “ಕಾವಡಿ ಕಕ್ಕವಡಿ” ಎನ್ನುತ್ತ ಉಸಿರು ಹಿಡಿದು ಓಡಬೇಕು. ಅವನು ಉಸಿರು ಬಿಟ್ಟೊಡನೆ ಪಕ್ಷದ ಇನ್ನೊಬ್ಬ ಹಾಗೇಯೆ ಹೇಳುತ್ತ ಉಸಿರು ಹಿಡಿದು ಕುಳಿಯೆಡೆಗೆ ಓಡಬೇಕು. ಹೀಗೆ ಸೋತ ಪಕ್ಷದ ಎಲ್ಲರೂ ಒಬ್ಬರ ನಂತರ ಇನ್ನೊಬ್ಬರಂತೆ ಕುಳಿಗೆ ಗೆಂಡೆ ತಂದು ಮುಟ್ಟಿಸಿದರೆ ಆಟ ಮುಗಿಯುವದು. ಒಂದೊಮ್ಮೆ ಸೋತವರು ಗೆಂಡೆ ಮುಟ್ಟಿಸಲಾಗದಿದ್ದರೆ ಮತ್ತೆ ಪಟಹಾರಿಸುವವ ಹಿಂದಿನಂತೆ ಬುಚ್ಚಿಗಳನ್ನು ಹೊಡೆದು ಗೆಂಡೆಯನ್ನು ದೂರ ಒಯ್ಯುವನು. ಆಗಲೂ ಮೇಲಿನ ಕ್ರಮದಂತೆ ಸೋತ ಪಕ್ಷದವರು ಗೆಂಡೆಯನ್ನು ಕುಳಿಗೆ ಮುಟ್ಟಿಸಬೇಕು.

ಆಟದ ಕೆಲವು ನಿಯಮಗಳು

೧. ಎಸೆಯುವಾಗ, ಮರುಗೆಂಡೆ ಹೊಡೆಯುವಾಗ, ಪಟ ಹಾರಿಸುವಾಗ ಕಟ್ಟುವವರು ಗೆಂಡೆ ಹಿಡಿದರೆ ಆಟಗಾರ ಔಟು.

೨. ಕುಳಿಯಿಂದ ಹಿಂದೆ ಹಾಣೆ ನಿಲ್ಲಿಸಿದಾಗ, ಹಾಣೆಗೆ ಗೆಂಡೆ ತಾಗಿದರೆ ಆಟಗಾರ ಔಟು

೩. ಗೆಂಡೆ ಕುಳಿಗೆ ಬೀಳದಂತೆ ಹಾಣೆಯಿಂದ ಅಡ್ಡಗಟ್ಟುವಾಗ, ಗೆಂಡೆ ಕುಳಿಯ ಮೇಲಾಗಲೀ, ಕುಳಿಯಿಂದ ಒಂದು ಹಾಣೆಯ ಅಳತೆಗಿಂತ ಹಿಂದಾಗಲೀ ಬಿದ್ದರೆ ಆಟಗಾರ ಔಟು.

೪. ಕುಳಿಗೂ ಗೆಂಡೆಗೂ ಅಂತರ ಒಂದು ಹಾಣೆ, ಎರಡು ಗೇಣಾದರೆ ಕಟ್ಟುವವರು ಆಟ ತಿನ್ನಲು ಪ್ರಯತ್ನಿಸುವರು.

ಕಟ್ಟುವವರಲ್ಲೊಬ್ಬನು ತನ್ನ ಕೈಗಳ ತುದಿಬೆರಳುಗಳನ್ನು ಗೆಂಚಿ ಕೈತಿರುಪಿ, ಒಂದು ಕೈ ಹೆಬ್ಬೆರಳು ತೋರ ಬೆರಳಿನಿಂದ ಗೆಂಡೆ, ಇನ್ನೊಂದಿ ಕೈ ಹೆಬ್ಬೆರಳು ತೋರ ಬೆರಳಿನಿಂದ ಹಾಣೆ ಹಿಡಿದು ಎಡವೊ? ಬಲವೊ? ಗಿಡಿಬಿಡಿಯೊ? ಎಂದು ಆಡುವವನನ್ನು ಕೇಳಬೇಕು. ಆಡುವವನು ಹೇಳಿದಂತೆ ಆಡಿ ಗೆಲ್ಲಬೇಕು. ಗೆಂಡೆ ಹಾಣೆಗಳನ್ನು ತಲೆಗಿಂತ ಮೇಲೆ ಹಾರಿಸಿ ಆಡುವವ ಕೇಳಿದಂತೆ ಎಡಗೈಯಲ್ಲಾಗಲೀ ಬಲಗೈಯಲ್ಲಾಗಲೀ ಎರಡನ್ನೂ ಹಿಡಿಯಬೇಕು. “ಗಿಡಿಬಿಡಿ” ಎಂದಿದ್ದರೆ ಎಡಗೈಯಲ್ಲಿರುವುದನ್ನು ಬಲಗೈಗೂ ಬಲಗೈಯಲ್ಲಿದ್ದುದನ್ನು ಎಡಗೈಗೂ ಸಾಗಿಸಬೇಕು. ಕಟ್ಟುವವ ಹೀಗೆ ತಪ್ಪದೆ ಹಾಣೆ, ಗೆಂಡೆ ಹಿಡಿದರೆ ಆಡುವವನು ಔಟು.

೫. ಮರುಗೆಂಡೆ ಹೊಡೆಯುವಾಗ ಗೆಂಡೆ ಸಿಡಿದು ಕುಳಿಯ ಮೇಲೆ ಬಿದ್ದರೆ ಆಟಗಾರ ಔಟು.

೬. ಹಾಣೆಯಿಂದ ಗೆಂಡೆಯನ್ನು ಹೊಡೆದಾಗ ಕುಳಿಯಿಂದ ಕಟ್ಟುವವ ಹಾರಿ ಮುಟ್ಟುವಷ್ಟು ಅಂತರದಲ್ಲಿ ಹಿಂಗಾಲಿನಿಂದ ಮೂರು ಸಾರೆ ಹಾರುವಷ್ಟು ಅಂತರದಲ್ಲಿ ಗೆಂಡೆ ಬಿದ್ದರೆ ಆಡುವವನು ಔಟು.

೭. ಆಡುವವ ಕುಳಿಯಿಂದ ತುಸು ಮುಂದಕ್ಕೆ ನಿಂತಿರಬೇಕು. ಆದರೆ ಅದು ಅವನು ಕುಳಿಯಿಂದ ಹಾರಿ ಮುಟ್ಟಲಾಗದಷ್ಟು ಇರಬಾರದು. ಹೆಚ್ಚಿದ್ದರೆ ವಿರುದ್ಧ ಪಕ್ಷದವರು ಹಾರಿಸಿ ನೋಡಿ, ಸಂಶಯ ಸ್ಥಿರಪಟ್ಟರೆ ಆಡುವವ ಔಟು.

೮. ಆಡುವವನು ಎಸೆದ ಗೆಂಡೆ ಬಹದೂರ ಬಿದ್ದಾಗ ಕಟ್ಟುವವರು ಮೂರೋ ನಾಲ್ಕೋ ಹಂಡೆಯಾಯಿತೆಂದು ತಿಳಿದಿಕೋ ಅಳೆಯುವದು ಬೇಡವೆನ್ನುವರು. ಉತ್ತಮ ಆಟಗಾರರು ತಮಗೆ ಹಾನಿಯಾಗುವಂತಿದ್ದರೂ ಎಣಿಕೆ ಮಾಡಿದರೆ ಕಠಿಣ ಆಟ ಪ್ರಾರಂಭಿಸುವ ಪ್ರಸಂಗ ಬರಬಹುದೆಂದು ಒಪ್ಪಿಕೊಂಡು ಬಿಡುವರು. (ಚಿಟ್ ಮುಟ್ ಕಠಿಣ-ಆಟ. ಈ ಆಟದಲ್ಲಿ ಔಟು ಹೆಚ್ಚ); ಹಾಗೂ ತಮಗೆ ಸುಲಭವಾದ ಆಟ ಪ್ರಾರಂಭಿಸುವರು.