ಎರಡಕ್ಕಿಂತ ಹೆಚ್ಚು ಆಟಗಾರರು ಒಂದು ಸಮಪಾತಳಿಯ ಅಂಗಳದಲ್ಲಿ ಸೇರಿ ಅಂಗಳದಲ್ಲಿ ಉಸುಕಿರುವ ಕಡೆ ಉದ್ದಕ್ಕೆ ಸುಮಾರು ಎರಡು ಮೂರು ಎಂಚು ಎತ್ತರದ ಉಸುಕಿನ ಗೋಡೆ ಕಟ್ಟುವರು. ಆ ಗೋಡೆಯ ಮೇಲೆ ಪ್ರತಿಯೊಬನ್ಬರು ಸಾಲಾಗಿ ಕೆಳಗೆ ಚಿತ್ರದಲ್ಲಿ ತೋರಿಸಿದಂತೆ ಅಷ್ಟಷ್ಟೇ ಸುರಗಿ ಕಾಯಿ ಇಡುತ್ತಾರೆ. ಪ್ರತಿಯೊಬ್ಬರು ಮೂರು ಅಥವಾ ನಾಲ್ಕರಂತೆ ಗೋಡೆಯ ತುದಿಯ ಎಡಕ್ಕೆ ದೊಡ್ಡ ಸುರಗಿಕಾಯಿ ಇಡುತ್ತಾರೆ. ಇದೇ “ಪಿಕ್ಕಿ” ಆಟದ ಗೋಡೆಯಿರುವ ಸ್ಥಳವೇ ಮಂಡ. ಪ್ರತಿಯೊಬ್ಬರ ಹತ್ತರ ಒಂದು ಗುಂಡಗೆ ಇರುವ ಬಟ್ಟೆ (ಕಲ್ಲು) ಇರಬೇಕು. ಮಂಡದಲ್ಲಿ ನಿಂತು ಆಟಗಾರರು ತಮ್ಮ ತಮ್ಮ ಬೆಟ್ಟೆಗಳನ್ನು ತುಸು ದೂರ ಚೆಲ್ಲುತ್ತಾರೆ. ಮಂಡದಿಂದ ಹೆಚ್ಚು ದೂರ ಬೆಟ್ಟೆ ಬಿದ್ದವನು ತನ್ನ ಬೆಟ್ಟಿಯಿಂದ ಮಂಡದ ಸುರಗಿ ಕಾಯಿಯೆಡೆಗೆ ಗುರಿಯಿಡುತ್ತಾನೆ. ಗುರಿ ತಾಗಿದ ಕಾಯಿ ಹಾಗೂ ಅದರ ಕೆಳಗಿರುವ ಕಾಯಿಗಳೆಲ್ಲಿ ಗುರಿಕಾರನಿಗೆ ಸೇರುತ್ತವೆ. ಅಂದರೆ ಪಿಕ್ಕಿಯಿಂದ ಕೆಳಗೆ ನಾಲ್ಕನೆಯ ಕಾಯಿಗೆ ಗುರಿ ತಾಗಿದರೆ ಐದು, ಆರು, ಏಳು ಹೀಗೆ ಕೊನೆಯವರೆಗಿನ ಕಾಯಿಗಳೆಲ್ಲ ಗುರಿಕಾರನಿಗೆ ಸೇರುತ್ತವೆ. ಪಿಕ್ಕಿಗೆ ಗುರಿ ತಾಗಿದರೆ ಪಿಕ್ಕಿ ಹಾಗೂ ಉಳಿದೆಲ್ಲ ಕಾಯಿಗಳು ಗುರಿಕಾರನಿಗೆ ಸೇರುತ್ತವೆ. ಹೀಗಾದಾಗ ಉಳಿದವರಿಗೆ ಗುರಿಯಿಡಲು ಕಾಯಿ ಇರುವದಿಲ್ಲ. ಆದ್ದರಿಂದ ಅನುಕ್ರಮವಾಗಿ ಮುಂಡದಿಂದ ದೂರವಿದ್ದವರು ಒಬ್ಬೊಬ್ಬರಾಗಿ ಕೆಳಗೆ ಹೇಳಿದಂತೆ ಆಡುವರು. ಪಿಕ್ಕೆ ಉರುಳಿಸಿದವನ ಬೆಟ್ಟೆಗೆ ಒಬ್ಬನು ಗುರಿ ಕಟ್ಟುತ್ತಾನೆ. ಗುರಿಕಟ್ಟಿ ಪಿಕ್ಕಿ ಉರುಳಿಸಿದವನು ಪಡೆದ ಕಾಯಿಗಳ ಅರ್ಧ ಕಾಯಿ ತಾನು ಪಡೆಯುತ್ತಾನೆ. ಅರ್ಧ ಪಡೆದವನ ಬೆಟ್ಟೆ ಬಿದ್ದಲ್ಲಿಗೆ ಇನ್ನೊಬ್ಬನು ಗುರಿ ಇಡುತ್ತಾನೆ. ಗುರಿಯಿಟ್ಟರೆ ಅವನು ಪಡೆದ ಅರ್ಧ ಕಾಯಿಯಲ್ಲಿ ತಾನು ಅರ್ಧ ಪಡೆಯುತ್ತಾನೆ. ಕೊನೆಗೆ ಆಡಿದವರಿಗೆ ಕಡಿಮೆ ಕಾಯಿಗಳು ಸಿಗುತ್ತವೆ. ಪಿಕ್ಕಿ ಉರುಳಿಡಿದಾಗ ಪಡೆದ ಕಾಯಿಯನ್ನು ಇನ್ನೊಬ್ಬರೊಡನೆ ಹಂಚಿಕೊಳ್ಳಬೇಕಾವುದರಿಂದ ಜಾಣರು ಪಿಕ್ಕಿ ಉರುಳಿಸದೆ ಅದರಿಂದಾಚೆ ಎರಡು ಮೂರನೆಯ ಕಾಯಿಗೆ ಗುರಿ ಇಡಲು ಪ್ರಯತ್ನಿಸುವರು. ಪಿಕ್ಕಿ ಉರುಳಿಸಿದಾಗ ಪಿಕ್ಕಿಯೊಂದೇ ದೊರೆತರೆ ಪಾಲು ಕೊಡುವದಿಲ್ಲ.