ನಮ್ಮ ದೇಶದ ರಾಜಧಾನಿ ದೆಹಲಿಯಲ್ಲಿ ೧೯೭೫ರ ಡಿಸೆಂಬರ್ ೮ ರಂದು ಒಂದು ಭಾರೀ ಸಮಾರಂಭ ನಡೆಯಿತು. ಮುನ್ನೂರು ವರ್ಷಗಳ ಹಿಂದೆ ಯಾವ ದಾರಿಯಲ್ಲಿ ಬಂದು ಗುರು ತೇಗ ಬಹಾದುರ್ ಹುತಾತ್ಮರಾಗಿದ್ದರೋ ಅದೇ ೫೦೦ ಕಿಲೋ ಮೀಟರ್ ದೂರದ ದಾರಿಯಲ್ಲಿ ಪಂಜಾಬಿನ ಆನಂದಪುರದಿಂದ ಎರಡು ಲಕ್ಷ ಸಿಖ್ಖರು ಅಂದು ‘ಬಲಿದಾನದ ಯಾತ್ರೆ’ಯಲ್ಲಿ ಬಂದು ದೆಹಲಿಯಲ್ಲಿ ಸೇರಿದ್ದರು. ಅಸಂಖ್ಯಾತ ಜನ ಅದರಲ್ಲಿ ಪಾದಯಾತ್ರೆ ಮಾಡಿಕೊಂಡೂ ಬಂದಿದ್ದರು. ಯಾತ್ರಾರ್ಥಿಗಳ ಬಾಯಿಂದ ‘ಜೋ ಬೋಲೇ ಸೋ ನಿಹಾಲ್, ಸತ್ ಶ್ರೀ ಅಕಾಲ್’ ಎಂಬ ಜಯಘೋಷ ಮುಗಿಲು ಮುಟ್ಟುತ್ತಿತ್ತು. ಅದೊಂದು ರೋಮಾಂಚಕಾರಿ ದೃಶ್ಯ.

ದೆಹಲಿಯ ವಿಶಾಲವಾದ ರಾಮಲೀಲಾ ಮೈದಾನದಲ್ಲಿ ಸುಮಾರು ೧೦ ಲಕ್ಷ ಜನ ಸೇರಿದ ಸಮಾರಂಭದಲ್ಲಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಹೇಳಿದರು: “ತೇಗ ಬಹಾದುರರಂತಹ ಮಹಾಪುರುಷರು ಇದ್ದುದರಿಂದಲೇ ಭಾರತವು ಶಕ್ತಿ ಹಾಗೂ ಗೌರವನ್ನು ಗಳಿಸಿತು.”

ಅಂದಿಗೆ ಸರಿಯಾಗಿ ಮುನ್ನೂರು ವರ್ಷಗಳ ಹಿಂದೆ ಅದೇ ದೆಹಲಿಯ ಚಾಂದನಿ ಚೌಕದಲ್ಲಿ ತೇಗ ಬಹಾದುರ್ ಹುತಾತ್ಮರಾಗಿದ್ದರು. ಅದಕ್ಕೇ ಅಂದು ಮುನ್ನೂರನೇ ಶತಮಾನೋತ್ಸವ ಸಮಾರಂಭ ಏರ್ಪಟ್ಟಿತ್ತು.

೧೯೭೫ರ ಡಿಸೆಂಬರ್ ೧೬ ರಂದು ಕೇಂದ್ರ ಸರ್ಕಾರ ಗುರು ತೇಗ ಬಹಾದುರರ ನೆನಪಿಗಾಗಿ ಒಂದು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು.

ಸಿಖ್ಖರಲ್ಲಿ ಕ್ಷಾತ್ರ ತೇಜಸ್ಸಿನ ಹೊಸ ರಕ್ತವನ್ನು ಉಕ್ಕಿಸಿ, ತಮ್ಮ ಧರ್ಮವನ್ನು ಅನುಸರಿಸಲು ಏನೇ ಅಡ್ಡಿ ಆತಂಕಗಳು ಬಂದರೂ ಅದನ್ನು ಎದುರಿಸುತ್ತೇವೆ ಎಂಬ ಮನೋಭಾವ ಬೆಳೆಸಿದವರು ಗುರು ತೇಗ ಬಹಾದುರ್. ಅವರ ಬಲಿದಾನದಿಂದ ಜನತೆಯಲ್ಲಿ ಪೌರುಷ ನಿರ್ಮಾಣವಾಯಿತು. ಮುಂದೆ ಅವರ ಮಗ ಗುರುಗೋವಿಂದಸಿಂಹ ಇಂತಹ ಹೋರಾಟದ ಕೆಚ್ಚನ್ನು ಬೇರೂರಿಸಿದ.

ಗುರು ತೇಗ ಬಹಾದುರ್ ಸಿಖ್ಖರ ಒಂಬತ್ತನೇ ಗುರು

ಖಡ್ಗ ಪ್ರಯೋಗ ಚತುರ

ಪಂಜಾಬ್ ಪ್ರಾಂತದಲ್ಲಿ ಅಮೃತಸರ ತುಂಬ ಪ್ರಸಿದ್ಧವಾದ ನಗರ. ಪವಿತ್ರ ಕ್ಷೇತ್ರವೂ ಹೌದು. ಸಿಖ್ಖರ ಆರನೇ ಗುರುವಾದ ಗುರು ಹರಗೋವಿಂದ್ ಅಲ್ಲೇ ಇದ್ದದ್ದು. ಅವನ ಹೆಂಡತಿ ನಾನಕಿ. ಈ ದಂಪತಿಗಳಿಗೆ ೧೬೨೧ರ ಏಪ್ರಿಲ್ ೧ ರಂದು ಒಂದು ಗಂಡಮಗು ಹುಟ್ಟಿತು. ಅದು ಅವರ ಐದನೆಯ ಮಗು.

ಮುದ್ದುಮುದ್ದಾಗಿದ್ದ ಮಗುವಿನ ಲಕ್ಷಣಗಳನ್ನು ನೋಡಿ ಎಲ್ಲರಿಗೂ ಸಂತೋಷವಾಯಿತು. ಮಗುವಿಗೆ ತ್ಯಾಗಮಲ್ ಎಂದು ಹೆಸರಿಟ್ಟರು.

ತ್ಯಾಗಮಲ್‌ನನ್ನು ಅವನ ತಂದೆತಾಯಿಗಳು ತುಂಬ ಮಮತೆಯಿಂದ ಸಾಕಿದರು. ಅವನಿಗೆ ಇತಿಹಾಸ, ತತ್ತ್ವಶಾಸ್ತ್ರ, ಭಾಷೆಗಳ ಅಭ್ಯಾಸದ ಜೊತೆಗೆ ಶಸ್ತ್ರಾಭ್ಯಾಸವೂ ಆಯಿತು. ಆಗ ಸಿಖ್ಖರಲ್ಲಿ ಸೈನಿಕ ಶಿಕ್ಷಣವನ್ನು ನೀಡುವ ಪದ್ಧತಿಯೂ ಇತ್ತು. ಬಾಣ ಪ್ರಯೋಗ, ಕುದುರೆ ಸವಾರಿ, ಮಲ್ಲವಿದ್ಯೆ ಎಲ್ಲವನ್ನೂ ಶ್ರದ್ಧೆಯಿಂದ ಕಲಿತ ತ್ಯಾಗಮಲ್.

ತ್ಯಾಗಮಲ್ ಯುವಕನಾದ ಮೇಲೆ ನನ್ನ ತಂದೆಯೊಡನೆ ಒಂದು ಯುದ್ಧದಲ್ಲಿ ಭಾಗವಹಿಸಿದ. ಯುದ್ಧದಲ್ಲಿ ಅವನು ತನ್ನ ವಯಸ್ಸಿಗೆ ಮೀರಿ ಕೆಚ್ಚು, ಕಲಿತನಗಳನ್ನು ಪ್ರದರ್ಶಿಸಿದ; ಎಲ್ಲರ ಹೊಗಳಿಕೆಗೆ ಪಾತ್ರನಾದ. ಮಗ ಇಷ್ಟು ಸಣ್ಣ ವಯಸ್ಸಿನಲ್ಲೇ ಅಷ್ಟೊಂದು ಕೌಶಲ ತೋರಿದ್ದನ್ನು ಕಂಡು ತಂದೆಗೆ ತುಂಬ ಹೆಮ್ಮೆಯಾಯಿತು. ತಂದೆ ಹರಗೋವಿಂದನಿಗೆ ತನ್ನ ಮಗ ಯೋಗಿಯೂ ಆಗಬಲ್ಲ, ಯೋಧನೂ ಆಗಬಲ್ಲ ಅನಿಸಿತು. ಇದರ ನೆನಪಿಗಾಗಿ ಅವನು ಮಗನಿಗೆ ತೇಗ ಬಹಾದುರ್ ಎಂದು ಹೆಸರಿಟ್ಟ. ತೇಗ ಎಂದರೆ ಖಡ್ಗ. ಬಹಾದುರ್ ಎಂದರೆ ಚತುರ. ತೇಗ ಬಹಾದುರ್ ಎಂದರೆ ಖಡ್ಗ ಪ್ರಯೋಗ ಮಾಡುವುದರಲ್ಲಿ ಚತುರ ಎಂದರ್ಥ.

ಆ ವೇಳೆಗಾಗಲೇ ಆಗಿನ ಕಾಲದ ಅಭ್ಯಾಸದಂತೆ ತೇಗ ಬಹಾದುರನಿಗೆ ಮದುವೆಯಾಗಿತ್ತು. ಕರ್ತಾರಪುರದಲ್ಲಿದ್ದ ಸುಶೀಲೆಯಾದ ಹುಡುಗಿ ಗುಜರಿ ಅವನ ಕೈಹಿಡಿದಿದ್ದಳು.

ಕರೆ ಬರುತ್ತದೆ

ಗುರು ಹರಗೋವಿಂದ್ ಸಿಖ್ಖರ ಆರನೇ ಗುರು. ಮಗ ತೇಗ ಬಹಾದುರ್ ಒಂಬತ್ತನೇ ಗುರು. ಇದು ಹೇಗೆ?

ಗುರು ಹರಗೋವಿಂದನಿಗೆ ವಯಸ್ಸಾಗತೊಡಗಿದಂತೆ ಅವನ ಉತ್ತರಾಧಿಕಾರಿಯನ್ನು ನೇಮಿಸುವ ದಿನವೂ ಬಂತು. ಎಲ್ಲರೂ ತೇಗ ಬಹಾದುರನೇ ಗುರು ಆಗುವನೆಂದು ಎಣಿಸಿದ್ದರು.

ಆದರೆ ಎಲ್ಲರನ್ನು ಆಶ್ಚರ್ಯಗೊಳಿಸಿ ತೇಗ ಬಹಾದುರನ ಅಣ್ಣನ ಮಗನಾದ ಹರಿರಾಯ್‌ನನ್ನು ಹರಗೋವಿಂದ ತನ್ನ ಉತ್ತರಾಧಿಕಾರಿಯನ್ನಾಗಿ ನೇಮಿಸಿದ.

ಮೊಮ್ಮಗನನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಿದ್ದನ್ನು ಕಂಡು ನಾನಕಿಗೆ ಸ್ವಲ್ಪ ಅಸಮಾಧಾನವಾಯಿತು. ಆದರೆ ಹರಗೋವಿಂದ್ ಸಮಾಧಾನ ಹೇಳಿದ: “ಸ್ವಲ್ಪ ತಾಳ್ಮೆ ವಹಿಸು. ಮುಂದೆ ಇನ್ನೂ ಅನೇಕ ಮಹತ್ಕಾರ್ಯಗಳನ್ನು ಮಾಡುವವರೆಗೂ ತೇಗ ಬಹಾದುರ್ ಬದುಕಿರುತ್ತಾನೆ. ಸದ್ಯಕ್ಕೆ ನೀವೆಲ್ಲ ಬಕಾಲಕ್ಕೆ ಹೋಗಿ. ಅಲ್ಲಿ ಅವನು ಸಾಧನೆ ಮಾಡಿಕೊಂಡಿರಲಿ. ಅನಂತರ ಕರೆ ಬರುತ್ತದೆ.”

ತಾಯಿ ನಾನಕಿಗೆ ಸಮಾಧಾನವಾಯಿತು. ಕೆಲವು ದಿನಗಳ ಮೇಲೆ ಹರಗೋವಿಂದನ ಸಾವು ಉಂಟಾಯಿತು. ಅನಂತರ ತೇಗ ಬಹಾದುರ್ ತಾಯಿ ಮತ್ತು ಹೆಂಡತಿಯರೊಡನೆ ಬಕಾಲಕ್ಕೆ ಹೋಗಿ ವಾಸಿಸತೊಡಗಿದ. ಸುಮಾರು ಇಪ್ಪತ್ತು ವರ್ಷಗಳ ಕಾಲ ಅವನು ಅಲ್ಲೇ ಇದ್ದು ಅಧ್ಯಯನ, ಪ್ರಾರ್ಥನೆ, ಪ್ರವಚನಗಳಲ್ಲಿ ಸಮಯ ಕಳೆಯುತ್ತಿದ್ದ.

ಬಾಬಾ ಬಕಾಲೇ

ಏಳನೆಯ ಗುರು ಹರಿರಾಯ್ ತನ್ನ ಸಾವಿನ ಮುಂಚೆ ತನ್ನ ಎರಡನೆಯ ಮಗ ಹರಿಕೃಷ್ಣನನ್ನು ಎಂಟನೆಯ ಗುರುವಾಗಿ ನೇಮಿಸಿದ. ಹರಿಕೃಷ್ಣನ್ ಆಗ ಇನ್ನೂ ೭ ವರ್ಷದ ಮಗು. ಎಲ್ಲರೂ ಮಗವನ್ನು ‘ಸಂತ ಮಗು’ ಎಂದು ಕರೆಯುತ್ತಿದ್ದರು.

ದೆಹಲಿಯಲ್ಲಿದ್ದಾಗ ಹರಿಕೃಷ್ಣನ್‌ಗೆ ಕಾಯಿಲೆ ಬಂತು. ಅದು ಉಲ್ಬಣಗೊಂಡು ಅಪಾಯದ ಹಂತ ತಲುಪಿತು. ಇದನ್ನು ಮನಗಂಡ ಅವನು ತನ್ನ ತಾಯಿಯ ಮೂಲಕ ಪ್ರಮುಖ ಸಿಖ್ಖರನ್ನು ಕರೆಸಿದ. ಉತ್ತರಾಧಿಕಾರಿಗೆ ನೀಡುವ ವೀಳ್ಯ ಅವನ ಇಚ್ಛೆಯಂತೆ ಸಿದ್ಧವಾಯಿತು. ಅವನು ಕೊನೆಯುಸಿರು ಎಳೆಯುವ ಮುನ್ನ ಅದನ್ನು ಮುಟ್ಟಿ ‘ಬಾಬಾ ಬಕಾಲೇ’ ಎಂದ. ಬಕಾಲದಲ್ಲಿರುವ ಬಾಬಾನೇ ಮುಂದಿನ ಗುರು ಎಂದು ಎಲ್ಲರಿಗೂ ಅರ್ಥವಾಯಿತು.

ಬಕಾಲದಲ್ಲಿ

ಈ ಸುದ್ದಿ ಬಕಾಲಕ್ಕೂ ತಲುಪಿತು. ಅಲ್ಲಿ ಕೆಲವರು ತಾವೇ ಬಾಬಾಗಳು, ತಮಗೇ ಗುರು ಪಟ್ಟ ದಕ್ಕಬೇಕು ಎಂದು ಹೇಳತೊಡಗಿದರು. ಇಂಥವರ ಸಂಖ್ಯೆ ೨೨ ಇತ್ತು. ಇದರಲ್ಲಿ ತೇಗ ಬಹಾದುರನ ಅಣ್ಣನ ಮಗ ಧೀರಮಲ್ ಸಹ ಒಬ್ಬ.

ತೇಗ ಬಹಾದುರನಿಗೂ ಬಾಬಾ ರಂದು ಕರೆಯುವ ವಿಷಯ ಎಲ್ಲರಿಗೂ ತಿಳಿದದ್ದೇ. ಆದರೆ ಅವನು ಮಾತ್ರ ಸ್ಪರ್ಧೆಗೆ ಇಳಿಯಲಿಲ್ಲ.

ವೀಳ್ಯವನ್ನು ತೆಗೆದುಕೊಂಡು ಸಿಖ್ ಅನುಯಾಯಿಗಳು ಬಕಾಲಕ್ಕೆ ಬಂದರು. ನಕಲಿ ಗುರುಗಳ ಬಳಿಗೆ ಹೋಗದೆ ಅವರು ನೇರವಾಗಿ ತೇಗ ಬಹಾದುರನ ಹತ್ತಿರ ಬಂದರು.

ತೇಗ ಬಹಾದುರ್ ಅವರನ್ನೆಲ್ಲ ವಾತ್ಸಲ್ಯದಿಂದ ಸ್ವಾಗತಿಸಿದ. ಅವರೆಲ್ಲ ಅವನನ್ನೇ ಗುರು ಎಂದು ನಿರ್ಣಯಿಸಿದ್ದರೂ ಅವನಿಗೆ ಅಹಂಕಾರ ಬರಲಿಲ್ಲ. ಊರಿನಲ್ಲಿ ಗುರುಪೀಠಕ್ಕೆ ಸ್ಪರ್ಧೆ ಏರ್ಪಟ್ಟಿರುವುದು ಅವನಿಗೆ ತಿಳಿದಿತ್ತು. ಅವನ ಬಳಗದವರಿಗೆ ಅವನು ತನ್ನ ಪರವಾಗಿ ಯಾರೂ ಪ್ರಚಾರ ಮಾಡಬಾರದೆಂದು ನಿಷ್ಠುರವಾಗಿ ಹೇಳಿದ್ದ. ಹಾಗೆ ಮಾಡುವುದು ಗುರು ಪರಂಪರೆಗೇ ದ್ರೋಹ ಮಾಡಿದಂತೆ ಎಂದು ಅವನು ಎಚ್ಚರಿಸಿದ. “ನಿಜವಾದ ಗುರು ಯಾರೆಂದು ತಾನಾಗಿಯೇ ಗೊತ್ತಾಗುತ್ತದೆ, ಅವಸರ ಬೇಡ” ಎಂಬ ಅವನು ಸಹನೆ ಹೇಳಿದ.

ಇವನೇ ಗುರು

ಹೊಸ ಗುರುವಿನ ದರ್ಶನ ಪಡೆದು ಕಾಣಿಕೆ ಅರ್ಪಿಸಲು ಭಕ್ತರು ಬಕಾಲಕ್ಕೆ ಬರತೊಡಗಿದರು. ೨೨ ಜನರಲ್ಲಿ ಯಾರು ನಿಜವಾದ ಗುರು ಎಂಬುದು ಯಾರಿಗೂ ತಿಳಿಯದಾಯಿತು.

ಹೀಗೆ ಕಾಣಿಕೆ ಅರ್ಪಿಸಲು ಬಂದವರಲ್ಲಿ ಮಕ್ಕಾನ್ ಶಹನೂ ಒಬ್ಬ. ಹಡಗುಗಳ ಒಡೆಯನಾಗಿದ್ದ ಅವನು ಬಹು ಶ್ರೀಮಂತ ವ್ಯಕ್ತಿ. ಕೆಲವು ದಿನಗಳ ಹಿಂದೆ ಅವನ ಹಡಗು ಅಪಾಯದಲ್ಲಿತ್ತು. ಅದು ಪಾರಾದರೆ ೫೦೦ ಚಿನ್ನದ ನಾಣ್ಯಗಳನ್ನು ಗುರುವಿಗೆ ಅರ್ಪಿಸುವುದಾಗಿ ಅವನು ಹರಕೆ ಹೊತ್ತಿದ್ದ. ಅದನ್ನು ಅರ್ಪಿಸಲೆಂದೇ ಈಗವನು ಬಂದಿದ್ದ.

ಅವನಿಗೂ ಈ ೨೨ ಮಂದಿ ಸ್ವಯಂಘೋಷಿತ ಗುರುಗಳನ್ನು ಕಂಡು ದಿಗ್ಭ್ರಮೆಯಾಯಿತು. ಪರೀಕ್ಷಿಸಲೆಂದು ಅವರಿಗೆಲ್ಲ ಎರಡೆರಡು ನಾಣ್ಯಗಳನ್ನು ಕೊಟ್ಟ. ಅವರು ಸುಮ್ಮನೆ ಸ್ವೀಕರಿಸಿದರು. ಅವರು ನಿಜವಾದ ಗುರುಗಳಲ್ಲವೆಂದು ಅವನಿಗೆ ಮನದಟ್ಟಾಯಿತು.

ಏನಾದರೂ ಮಾಡಿ ನಿಜವಾದ ಗುರುವನ್ನು ಕಾಣಬೇಕು, ಅವರಿಗೆ ಕಾಣಿಕೆ ಅರ್ಪಿಸಬೇಕು ಎಂದು ಅವನು ಮನಸ್ಸು ಮಾಡಿದ್ದ.

ತುಂಬ ದಿನ ಕಳೆದರೂ ಗುರು ಸಿಗದೆ ಅವನಿಗೆ ದುಃಖವಾಗತೊಡಗಿತು. ಒಂದು ದಿನ ಅವನ ನಿವಾಸದ ಮುಂದೆ ಸೇರಿದವರಿಗೆ, “ಬಕಾಲದಲ್ಲಿ ನಾನು ಇನ್ನೂ ನೋಡದಿರುವ ಬಾಬಾ ಯಾರಿದರೂ ಇದ್ದಾರೆಯೇ” ಎಂದು ಪ್ರಶ್ನಿಸಿದ. ಒಬ್ಬ ಹುಡಗ ಬಾಬಾ ತೇಗ ಬಹಾದುರನನ್ನು ನೋಡಬೇಕೆಂದು ಸೂಚಿಸಿದ. ಅಲ್ಲಿ ನೆರೆದಿದ್ದವರೆಲ್ಲ ಅದನ್ನು ಕೇಳಿ ಹಾಸ್ಯ ಮಾಡಿದರು.

 

‘ಗುರು ಯಾರೆಂದು ತಾನಾಗಿಯೇ ಗೊತ್ತಾಗುತ್ತದೆ, ಅವಸರ ಬೇಡ’.

ಮಕ್ಕಾನ್‌ಶಹನಿಗೆ ತೇಗ ಬಹಾದುರನನ್ನು ನೋಡುವ ಮನಸ್ಸಾಯಿತು. ಹುಡುಗನೊಡನೆ ಅವನ ಬಳಿಗೆ ಹೋದ.

ತೇಗ ಬಹಾದುರನನ್ನೂ ಪರೀಕ್ಷಿಸಲೆಂದು ಅವನಿಗೆ ನಮಸ್ಕರಿಸಿ ಎರಡು ನಾಣ್ಯಗಳನ್ನು ಕಾಣಿಕೆ ನೀಡಿದ. ಆಗ ತೇಗ ಬಹಾದುರ್ ಹೇಳಿದನಂತೆ: “ದೇವರು ನಿನ್ನನ್ನು ಕಾಪಾಡಲಿ, ಮೇಲೇಳು. ಆದರೆ ಎರಡೇ ನಾಣ್ಯ ಅರ್ಪಿಸಿ ನನ್ನ ಮನವೊಲಿಸಬೇಕೆಂದಿರುವಿಯೇನು? ನೀನು ಹರಕೆ ಹೊತ್ತಿದ್ದ ೫೦೦ ನಾಣ್ಯಗಳು ಎಲ್ಲಿ?”

ಅದನ್ನು ಕೇಳಿ ಮಕ್ಕಾನ್‌ಶಹನಿಗೆ ತುಂಬ ಸಂತೋಷವಾಯಿತು. ಗುರು ಸಿಗದೆ ಅವನು ಕಳವಳಗೊಂಡಿದ್ದ. ಇವರೇ ನಿಜವಾದ ಗುರು ಎಂದು ಮನವರಿಕೆ ಆಯಿತು. ಜನರನ್ನೆಲ್ಲ ಸೇರಿಸಿ ಅವನು ನಡೆದ ಸಂಗತಿಯನ್ನು ಹೇಳಿದ. ತೇಗ ಬಹಾದುರನೇ ಮುಂದಿನ ಗುರು ಎಂಬುದರ ಬಗ್ಗೆ ಯಾರಿಗೂ ಸಂಶಯ ಉಳಿಯಲಿಲ್ಲ.

೪೩ ವರ್ಷ ಬಹಾದುರ್ ಸಿಖ್ಖರ ಒಂಬತ್ತನೆಯ ಗುರು ಎಂದು ತೀರ್ಮಾನವಾಯಿತು. ಸೂರ್ಯ ಉದಯಿಸಿದ ಮೇಲೆ ಕತ್ತಲು ಕರಗುವಂತೆ ನಕಲಿ ಗುರುಗಳೆಲ್ಲ ಇಲ್ಲವಾದರು.

ಮಕ್ಕಾನ್‌ಶಹ ತೇಗ ಬಹಾದುರನ ನೆಚ್ಚಿನ ಶಿಷ್ಯನಾದ. ಇದಾದನಂತರ ೧೬೬೪ರ ನವೆಂಬರ್ ೨೨ ರಂದು ತೇಗ ಬಹಾದುರ್ ತನ್ನ ಹುಟ್ಟೂರಾದ ಅಮೃತಸರಕ್ಕೆ ಹೊರಟ. ಜೊತೆಗೆ ತಾಯಿ ಹಾಗೂ ಹೆಂಡತಿಯೂ ಇದ್ದರು.

ಅಮೃತಸರದಲ್ಲಿ ‘ಹರಿ ಮಂದಿರ’ ಎಂಬ ಸುವರ್ಣ ದೇವಸ್ಥಾನವಿದೆ. ಅದನ್ನು ತೇಗ ಬಹಾದುರ್‌ನ ಅಜ್ಜ ಕಟ್ಟಿಸಿದ್ದು; ತಂದೆ ಅಲ್ಲಿ ಪೂಜೆ, ಪ್ರವಚನಗಳು ನಡೆಯುವಂತೆ ವ್ಯವಸ್ಥೆ ಮಾಡಿದ್ದ.

ಇದಾದನಂತರ ತೇಗ ಬಹಾದುರ್ ಒಂದು ವಿಶಾಲವಾದ ಪ್ರದೇಶವನ್ನು ಕೊಂಡು ಹೊಸ ನಗರವೊಂದನ್ನು ಕಟ್ಟಲು ನಿರ್ಧರಿಸಿದ.

ಸೂಕ್ತ ಸ್ಥಳವೂ ದೊರೆಯಿತು. ತಾಯಿ ನಾನಕಿಯ ಗೌರವಾರ್ಥ ಅದನ್ನು ‘ನಾನಕಿ ಚೌಕ್’ ಎಂದೂ ಕರೆಯಲಾಯಿತು.

ದೇವಸ್ಥಾನಗಳು, ಮಂದಿರಗಳು, ಪುರಜನರಿಗೆ ಅನುಕೂಲವಾಗುವಂತಹ ಮನೆಗಳು ನಿರ್ಮಾಣವಾದವು. ದೈವಭಕ್ತಿಯಿಂದ ಕೂಡಿ ಶಾಂತರಾಗಿ ಇರುವವರಿಗೆ ಅದೊಂದು ಆಶ್ರಯಸ್ಥಾನವಾಯಿತು.

ಪ್ರವಾಸಗಳು

೧೬೬೫ರಲ್ಲಿ ಗುರು ತೇಗ ಬಹಾದುರ್ ಪ್ರವಾಸ ಕೈಗೊಳ್ಳುವ ಉದ್ದೇಶದಿಂದ ಆನಂದಪುರವನ್ನು ಬಿಟ್ಟು ಹೊರಟ.

ತಾನು ಹೋದಲ್ಲೆಲ್ಲ ಜನರ ಕಷ್ಟಸುಖಗಳನ್ನು ವಿಚಾರಿಸುತ್ತಿದ್ದ. ನೀರಿಲ್ಲದ ಹಳ್ಳಿಗಳಲ್ಲಿ ಬಾವಿ ತೋಡಿಸುವುದು, ಬಡವರಿಗೆ ಗುಡಿಸಲು ಕಟ್ಟಿಸಿಕೊಡುವುದು, ನಿರ್ಗತಿಕರಿಗೆ ಉಚಿತ ಊಟದ ಏರ್ಪಾಡು ಮಾಡಿಸುತ್ತಿದ್ದ.

ಕುರುಕ್ಷೇತ್ರ, ಕಾಶಿ, ಪ್ರಯಾಗ, ಮಥುರಾ, ಬೃಂದಾವನ, ದೆಹಲಿ ಮುಂತಾದ ಕಡೆಗಳಲ್ಲೆಲ್ಲ ಅವನು ಸಂಚರಿಸಿದ.

೧೬೬೬ರ ಡಿಸೆಂಬರ್ ೨೨ ರಂದು ಢಾಕಾದಲ್ಲಿರುವಾಗ ತನಗೆ ಒಂದು ಗಂಡುಮಗು ಹುಟ್ಟಿದ ಸುದ್ದಿ ಅವನಿಗೆ ತಿಳಿಯಿತು. ಮಗು ಮುಂದೆ ಗೋವಿಂದ ಸಿಂಹ ಎಂದು ಪ್ರಸಿದ್ಧವಾಯಿತು.

ರಾಜಾ ರಾಮಸಿಂಗ್ ಎಂಬವನು ಔರಂಗಜೇಬನ ಆಸ್ಥಾನದಲ್ಲಿದ್ದ ಸರದಾರ. ಅವನನ್ನು ಬಾದಶಹ ಪೂರ್ವದ ತುದಿಯಲ್ಲಿದ್ದ ಕಾಮರೂಪ (ಅಸ್ಸಾಂ)ದ ಮೇಲೆ ಯುದ್ಧಕ್ಕೆ ಕಳಿಸಿದ.

ಕಾಮರೂಪದ ರಾಜ ತುಂಬ ಪ್ರಬಲನಾಗಿದ್ದು. ಅವನನ್ನು ಸೋಲಿಸುವುದು ಕಠಿಣವಿತ್ತು.

ರಾಜಾ ರಾಮಸಿಂಗ್ ತೇಗ ಬಹಾದುರ್ ತನ್ನ ಜೊತೆಗಿದ್ದರೆ ದೈವಬಲ ಲಭಿಸುವುದೆಂದು ಅವನನ್ನು ಆಶ್ರಯಿಸಿದ.

ತೇಗ ಬಹಾದುರನಿಂದಾಗಿ ಯುದ್ಧ ನಡೆಯುವುದು ತಪ್ಪಿತು. ಕಾಮರೂಪದ ರಾಜ ಹಾಗೂ ರಾಮಸಿಂಗನ ನಡುವೆ ಸ್ನೇಹ ಏರ್ಪಟ್ಟಿತು.

ಕಾಮರೂಪದಿಂದ ಗುರು ತೇಗ ಬಹಾದುರ್ ಒರಿಸ್ಸಾವನ್ನು ಹಾದು ಪಟ್ನಾ ಸೇರಿದ. ನಾಲ್ಕು ವರ್ಷಗಳ ಅನಂತರ ಗುರುವನ್ನು ಕಂಡ ಜನರಿಗೆ ಅತೀವ ಹರ್ಷವಾಯಿತು.

ಗೋವಿಂದ ಸಿಂಹ ಆಗ ನಾಲ್ಕು ವರ್ಷದ ಹುಡುಗ. ಅದೇ ಮೊಟ್ಟಮೊದಲ ಬಾರಿಗೆ ತಂದೆಯನ್ನು ಕಾಣುವ ಸಂದರ್ಭ ಅವನಿಗೆ.

ಅನಂತರ ತೇಗ ಬಹಾದುರ್ ಆನಂದಪುರಕ್ಕೆ ಹೊರಟ. ಮಗನೊಡನೆ ಅವನು ಅಲ್ಲಿಗೆ ತಲುಪಿದ್ದಷು ೧೬೭೧ರ ಫೆಬ್ರುವರಿಯಲ್ಲಿ.

ತಾನು ಒಂದು ಐತಿಹಾಸಿಕ ಮಹಾಕಾರ್ಯ ಮಾಡಬೇಕಾಗಿದೆ ಎಂದು ಅವನಿಗೆ ಬಹುಶಃ ಗೊತ್ತೇ ಇರಲಿಲ್ಲ.

ಮತಾಂತರ

ಮುನ್ನೂರು ವರ್ಷಗಳ ಹಿಂದೆ ದೆಹಲಿ ಮೊಘಲ್ ಸಾಮ್ರಾಜ್ಯದ ರಾಜಧಾರಿ ಆಗಿತ್ತು. ಆಗ ಮೊಘಲ್ ಸಾಮ್ರಾಜ್ಯ ನಮ್ಮ ದೇಶದಲ್ಲಿದ್ದ ಎಲ್ಲ ರಾಜ್ಯಗಳಿಗಿಂತ ದೊಡ್ಡ ಸಾಮ್ರಾಜ್ಯ. ಅದರ ಬಾದಶಹ ಔರಂಗಜೇಬ, ಅವನಿಗೊಂದು ಹಟಮಾರಿತನವಿತ್ತು. ಭಾರತದಲ್ಲಿರುವ ಜನರೆಲ್ಲ ಮುಸಲ್ಮಾನರಾಗಬೇಕು ಎಂದು ಅವನು ಬಲಾತ್ಕಾರ ಮಾಡುತ್ತಿದ್ದ.

ತನ್ನ ಉದ್ದೇಶವನ್ನು ಪೂರೈಸುವುದಕ್ಕಾಗಿ ಔರಂಗಜೇಬ ಹಿಂದುಗಳಿಗೆ ನಾನಾ ರೀತಿಯ ಕಿರುಕುಳ ಕೊಡುತ್ತಿದ್ದ. ಭಾರತದಲ್ಲೇ ಸ್ವರ್ಗದ ಹಾಗಿರುವ ಕಾಶ್ಮೀರದ ಮೇಲೆ ಅವರ ಕಣ್ಣು ಬಿತ್ತು. ಕಾಶ್ಮೀರದ ಫಲವತ್ತಾದ ನೆಲದ ಖ್ಯಾತಿಯಂತೆಯೇ ಅಲ್ಲಿಯು ಜನರದೂ ಖ್ಯಾತಿ. ‘ಕಾಶ್ಮೀರಿ ಪಂಡಿತರು’ ಎಂದರೆ ವಿದ್ಯೆಗೆ, ಜಾಣತನಕ್ಕೆ ಹೆಸರುವಾಸಿ.

ಈ ಕಾಶ್ಮೀರಿ ಪಂಡಿತರನ್ನು ಮೊದಲು ಮುಸ್ಲಿಂ ಮತಕ್ಕೆ ಸೇರಿಸಿಕೊಳ್ಳಬೇಕು ಎಂದು ಅವನ ಯೋಚನೆ.

ಶೇರ್ ಆಫ್ಗನ್

ಮತಾಂತರದ ಕೆಲಸವನ್ನು ಮಾಡುವುದಕ್ಕೆ ಔರಂಗಜೇಬ ಒಬ್ಬ ಸರದಾರನನ್ನು ನೇಮಿಸಿದ. ಅವನ ಹೆಸರು ಶೇರ್ ಆಫ್‌ಗನ್. ಹಿಂದಿಯಲ್ಲಿ ‘ಶೇರ್’ ಎಂದರೆ ಹುಲಿ ಎಂದರ್ಥ.

ಅವನು ಕಾಶ್ಮೀರಕ್ಕೆ ಹೋದ. ತನ್ನ ಕೆಲಸ ನೋಡಿ ಬಾದಶಹ ‘ಶಹಬಾಸ್’ ಹೇಳಬೇಕು. ಹಾಗೆ ಮಾಡುತ್ತೇನೆ ಎಂದು ಅವನು ನಿರ್ಧರಿಸಿದ್ದ. ವಿರೋಧಿಗಳು ಉಸಿರೆತ್ತಿದರೆ ಸೊಂಟದಲ್ಲಿ ಖಡ್ಗವಿದ್ದೇ ಇದೆ ಎಂಬ ಧೈರ್ಯ ಅವನದು.

ಕಾಶ್ಮೀರಿ ಪಂಡಿತರನ್ನೆಲ್ಲ ಕರೆಸಿ ಅವನು ಹೇಳಿದ: “ನಿಮ್ಮಲ್ಲರ ಮತಾಂತರ ಮಾಡಬೇಕು ಅಂತ ಬಾದಶಹರಿಂದ ಫರ್ಮಾನ್ (ಆಜ್ಞೆ) ಆಗಿದೆ. ಒಂದು ದಿನ ನಿಶ್ಚಯ ಮಾಡಿ, ನೀವೆಲ್ಲ ಮುಸಲ್ಮಾನರಾಗಿ.”

ಅದನ್ನು ಕೇಳಿ ಪಂಡಿತರೆಲ್ಲ ಒಬ್ಬರ ಮುಖ ಒಬ್ಬರು ನೋಡಲು ಪ್ರಾರಂಭ ಮಾಡಿದರು. ಇದುವರೆಗೆ ಶಾಂತಿಯಿಂದ, ಸೌಹಾರ್ದದಿಂದ ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡಿದ್ದ ಅವರಿಗೆ ದಿಗ್ಬ್ರಮೆಯಾಯಿತು. ನಿಂತ ನೀರಿನ ಮೇಲೆ ಕಲ್ಲು ಎಸೆದಂತಾಯಿತು. ಇಷ್ಟು ದಿನ ನಿಷ್ಠೆಯಿಂದ ನಡೆಸಿಕೊಂಡು ಬಂದ ಆಚರಣೆಯನ್ನು ಬಿಡಲು ಮನಸ್ಸು ಒಪ್ಪಲಿಲ್ಲ. ಆದರೆ ಇದನ್ನು ಶೇರ್ ಸಾಹೇಬರಿಗೆ ಹೇಗೆ ಹೇಳುವುದು? ಕೊನೆಗೆ ಧೈರ್ಯ ಮಾಡಿಕೊಂಡು ಹಿರಿಯ ಪಂಡಿತರೊಬ್ಬರು ಹೇಳಿದರು: ಹುಜೂರ್, ನೀವು ಹೇಳುತ್ತಿರುವುದು ತುಂಬ ಮುಖ್ಯ ವಿಷಯ. ನಾವು ಸಭೆ ಸೇರಿ ಚರ್ಚಿಸುತ್ತೇವೆ.”

ಶೇರ್ ಆಫ್‌ಗನ್ ಅನುಮಾನದಿಂದಲೇ ಅದಕ್ಕೆ ಒಪ್ಪಿದ.

ಅವರೇ ಆಶಾಕಿರಣ

ಮಾರನೆ ದಿನ ಪಂಡಿತರೆಲ್ಲ ಸಭೆ ಸೇರಿದರು. ಎಲ್ಲರಿಗೂ ಆತಂಕ, ಉದ್ವೇಗ, ಮತಾಂತರಕ್ಕೆ ಒಪ್ಪದಿದ್ದರೆ ಬದುಕುವುದೇ ಕಷ್ಟ ಎಂಬ ಅರಿವಿತ್ತು ಅವರಿಗೆ. ಈಗ ನಮಗೆ ಯಾರು ಗತಿ, ಯಾರು ದಿಕ್ಕು ಎಂದು ಯೋಚಿಸುತ್ತಿದ್ದಾಗ ಅವರ ನೆನಪಿಗೆ ಬಂದವರು ತೇಗ ಬಹಾದುರ್. ಅವರ ಸ್ಮರಣೆ ಬರುತ್ತಲೇ ಅವರು ಸ್ವಲ್ಪ ನೆಮ್ಮದಿ ತಾಳಿದರು. ಅವರೇ ನಮ್ಮ ಆಶಾಕಿರಣ ಎಂದು ಅವರ ಮುಖ ಪ್ರಸನ್ನವಾಯಿತು.

ಸುಮಾರು ೫೦೦ ಜನ ಒಟ್ಟುಗೂಡಿದರು. ತೇಗ ಬಹಾದುರರನ್ನು ಕಾಣಲು ಅವರಿದ್ದ ಆನಂದಪುರಕ್ಕೆ ಹೊರಟರು.

ಅವರೆಲ್ಲ ಆನಂದಪುರವನ್ನು ತಲುಪಿದಾಗ ತೇಗ ಬಹಾದುರ್ ಸಭೆಯಲ್ಲಿದ್ದರು. ಅವರ ಮುಂದೆ ಹೋಗಿ ಪಂಡಿತರು ತಮ್ಮ ಅಂತರಂಗ ಬಿಚ್ಚಿ ಹೇಳಿದರು:

“ಸ್ವಾಮೀ, ನಮ್ಮ ದೇಹಬಲ, ಆತ್ಮಬಲಗಳು ಸೋತಿವೆ. ನಾವು ತೀರ ಅಸಹಾಯಕರಾಗಿದ್ದೇವೆ. ನೀವೇ ಈಗ ಧರ್ಮ ರಕ್ಷಣೆಯನ್ನು ಮಾಡಬೇಕಾಗಿದೆ. ಹಿಂದು ಧರ್ಮ ಸಂಪೂರ್ಣ ನಾಶವಾಗದಿರುವಂತೆ ನೀವೇ ಉಳಿಸಬೇಕು.”

ತೇಗ ಬಹಾದುರರಿಗೆ ಪಂಡಿತ ಅಸಹಾಯಕತೆಯನ್ನು ನೋಡಿ ದುಃಖವಾಯಿತು. ಅವರು ಬಂದವರಿಗೆ ಧೈರ್ಯಹೇಳಿ, ಸಮಾಧಾನಪಡಿಸಿದರು.

ಧ್ಯಾನದ ಸ್ಥಿತಿಯಲ್ಲಿ ಕುಳಿತರು.

ನೀವಲ್ಲದೆ ಮತ್ತಾರು?

ಅದೇ ಸಮಯಕ್ಕೆ ಸರಿಯಾಗಿ ತೇಗ ಬಹಾದುರರ ಮಗ, ಒಂಬತ್ತು ವರ್ಷದ ಗೋವಿಂದ ಸಿಂಹ ಅಲ್ಲಿಗೆ ಬಂದ. ತಂದೆ ಹಿಂದೆಂದೂ ಇಲ್ಲದ ಯೋಚನೆಯಲ್ಲಿ ಮುಳುಗಿರುವಂತೆ ಕಂಡಿತು. ಎದುರಿಗೆ ಸೋತ ಮುಖದ ಪಂಡಿತರು ಕುಳಿತಿದ್ದಾರೆ. ಅವನು ಮುಗ್ದವಾಗಿ ಕೇಳಿದ:

“ಏನಾಯಿತು ಅಪ್ಪಾ? ಏಕೆ ಇಷ್ಟೊಂದು ದುಃಖ?”

“ಹೌದು ಮಗೂ, ಔರಂಗಜೇಬ ಹೇಗೆ ಬಲಾತ್ಕಾರದಿಂದ ಹಿಂದುಗಳನ್ನು ಮತಾಂತರಗೊಳಿಸುತ್ತಿದ್ದಾನೆ ಎಂದು ನಿನಗೆ ತಿಳಿದೇ ಇದೆ. ಈಗ ಈ ಕಾಶ್ಮೀರಿ ಪಂಡಿತರು ಅದಕ್ಕೆ ಗುರಿಯಾಗಿದ್ದಾರೆ. ಇದಕ್ಕೆ ಏನಾದರೂ ಪರಿಹಾರ ಹುಡುಕಬೇಕಾಗಿದೆ.”

“ನಿಜ ಅಪ್ಪ, ಇದು ಖಂಡಿತ ನಿಲ್ಲಬೇಕು.”

ತೇಗ ಬಹಾದುರ್ ಸ್ವಲ್ಪ ಯೋಚಿಸಿ ಹೇಳಿದರು:

“ಧರ್ಮದ ಹೆಸರಿನಲ್ಲಿ ಹಿಂದುಗಳ ಮೆಲೆ ಅತ್ಯಾಚಾರ ನಡೆಯುತ್ತಿದೆ. ಹಿಂದುಗಳು ಹೆದರಿ ದಿಙ್ಮೂಢರಾಗಿದ್ದಾರೆ. ಅವರಲ್ಲಿ ಮತ್ತೆ ಪರಾಕ್ರಮ ತುಂಬಬೇಕು. ಹಿಂದುಗಳಲ್ಲಿ ಚೈತನ್ಯದ ಪ್ರಾಣ ಸಂಚಾರ ಮತ್ತೆ ಆರಂಭವಾಗಬೇಕು. ನನಗೆ ಒಂದೇ ಒಂದು ಪರಿಹಾರ ಕಾಣಿಸುತ್ತಿದೆ. ಯಾರಾದರೂ ಒಬ್ಬ ಮಹಾಪುರಷ ಔರಂಗಜೇಬನ ಹತ್ತಿರ ಹೋಗಬೇಕು. ಅವನ ಕ್ರೂರ ನೀತಿಯನ್ನು ಖಂಡಿಸಬೇಕು. ಅವನು ಯಶಸ್ವಿಯಾದರೆ ಧರ್ಮ ಉಳಿಯುತ್ತದೆ. ಇಲ್ಲದಿದ್ದರೆ ಅವನು ಪ್ರಾಣವನ್ನು ಕೊಡಬೇಕಾಗುತ್ತದೆ.”

ಹುಡುಗ ಗೋವಿಂದ ಸ್ವಾಭಾವಿಕವಾಗಿ ಕೇಳಿದ:

“ಅಪ್ಪಾ, ಈಗ ನಿಮಗಿಂತ ದೊಡ್ಡ ಮಹಾಪುರುಷರು ಬೇರೆ ಯಾರಿದ್ದಾರೆ?”

ಈ ಮಾತನ್ನು ಕೇಳಿ ತೇಗ ಬಹಾದುರರಿಗೆ ಒಂದು ಕ್ಷಣ ವಿಸ್ಮಯವಾಯಿತು. ಆದರೆ ಮರುಕ್ಷಣದಲ್ಲೇ ಅವರ ಚಿಂತೆ ದೂರವಾಯಿತು. ಅವರು ಕಾಶ್ಮೀರಿ ಪಂಡಿತರಿಗೆ ಹೇಳಿದರು.

“ನೀವಿನ್ನು ಆ ಸರದಾರ ಆಫ್‌ಗನ್‌ನ ಬಳಿ ಹೋಗಿ. ತೇಗ ಬಹಾದುರ್ ಒಬ್ಬನನ್ನು ಮುಸಲ್ಮಾನನನ್ನಾಗಿ ಮಾಡಿದರೆ ಉಳಿದ ಹಿಂದುಗಳೆಲ್ಲ ಮುಸಲ್ಮಾನರಾಗುವರೆಂದು ಹೇಳಿ.”

ಶೋಕಪೂರ್ಣ ದೃಶ್ಯ

ಈ ಸುದ್ದಿ ಔರಂಗಜೇಬನಿಗೆ ತಲುಪಲು ತಡವಾಗುವುದಿಲ್ಲವೆಂದು ತೇಗ ಬಹಾದುರರಿಗೆ ತಿಳಿದಿತ್ತು. ಬಾದಶಹನಿಂದ ಕರೆ ಬಂದೇ ಬರುತ್ತದೆ ಎಂದು ಅವರಿಗನ್ನಿಸಿತು. ಅದಕ್ಕಿಂತ ಮುಂಚೆ ತಾವೇ ಆನಂದಪುರವನ್ನು ಬಿಡುವ ಯೋಚನೆಯನ್ನು ಅವರು ಮಾಡಿದರು. ಊರೂರಿಗೆ ಹೋಗಿ ತಾನು ಕೈಗೊಂಡಿರುವ ಈ ಮಹತ್ಕಾರ್ಯದ ವಿಷಯವನ್ನು ಜನರಿಗೆ ತಿಳಿಸಬೇಕು, ಅವರಲ್ಲಿ ವಿಪತ್ತನ್ನು ಎದುರಿಸುವ ಧೈರ್ಯ ತುಂಬಬೇಕು ಎಂದು ಅವರು ಯೋಚಿಸಿದರು.

ತೇಗ ಬಹಾದುರ್ ಆನಂದಪುರವನ್ನು ಬಿಡುವ ಸುದ್ದಿ ಎಲ್ಲರಿಗೂ ಕಳವಳವನ್ನು ತಂದಿತು. ಜನ ಗುಂಪುಗುಂಪಾಗಿ ಗುರುವನ್ನು ಕಾಣಲು ಬಂದರು. ದುಃಖದಿಂದ ಅವರ ಕಣ್ಣುಗಳಲ್ಲಿ ನೀರು ತುಂಬಿದ್ದವು. ವೇದನೆಯಿಂದ ಅವರ ಮಾತು ಗದ್ಗದವಾಗಿ ಹೊರಡುತ್ತಿತ್ತು. “ನಾವೂ ನಿಮ್ಮೊಡನೆ ಬರುತ್ತೇವೆ, ಧರ್ಮಕ್ಕೋಸ್ಕರ ನಾವೂ ಪ್ರಾಣ ತ್ಯಜಿಸಲು ಸಿದ್ಧ” ಎಂದರು.

ತೇಗ ಬಹಾದುರರು ತಮ್ಮ ಕೈಲಾದಷ್ಟು ಅವರಿಗೆ ಧೈರ್ಯ ಹೇಳಿದರು: “ನೀವು ಹೀಗೆ ವಿವೇಕ ಕಳೆದುಕೊಳ್ಳಬಾರದು. ಧರ್ಮಕ್ಕಾಗಿ ಹೋರಾಟಕ್ಕೆ ನನ್ನ ಬಲಿದಾನ ಪ್ರಾರಂಭ ಅಷ್ಟೆ. ಅಗತ್ಯವಾದಾಗ ಅನ್ಯಾಯವನ್ನು ಪ್ರತಿಭಟಿಸಲು ಸಿದ್ಧರಾಗಿ.”

ಪೂಜ್ಯ ತಾಯಿ ನಾನಕಿಗಂತೂ ಮಗನನ್ನು ಕಂಡರೆ ಅಪಾರ ಮಮತೆ. ಅವನ ವಿಯೋಗವನ್ನು ಅವಳು ಹೇಗೆ ಸಹಿಸಿಯಾಳು? ತೇಗ ಬಹಾದುರ್ ಹೊರಡುವ ಮುನ್ನ ಅವಳ ಕಾಲು ಮುಟ್ಟಿ ನಮಸ್ಕರಿಸಿದಾಗ ಅವಳ ಕಣ್ಣಿಂದ ಒಂದೇ ಸಮನೆ ನೀರಿಳಿಯುತ್ತಿತ್ತು.

“ಬೇಟಾ, ನೀನಿಲ್ಲದೆ ನಾನು ಹೇಗೆ ಬದುಕಿರಲಿ?” ಎಂದು ಬಿಕ್ಕಿದಳು ತಾಯಿ.

“ಅಮ್ಮಾ, ನೀನು ಹೀಗೆ ದುಃಖಿಸುವುದು ಉಚಿತವಲ್ಲ. ಧರ್ಮ ನಾಶವಾಗುವ ಸಮಯ ಬಂದಿದೆ. ಹಿಂದುಗಳಿಗೆ ಉಳಿವು-ಅಳಿವಿನ ಕಾಲ ಇದು. ಧರ್ಮ ರಕ್ಷಣೆಗೆ ಇಷ್ಟು ಬೆಲೆ ತೆರಲೇಬೇಕಾಗುತ್ತದೆ” – ಎಂದು ತೇಗ ಬಹಾದುರ್ ಸಮಾಧಾನ ಹೇಳಿದರು.

ಗುಜರಿದೇವಿಗೆ ಮೂಕಸಂಕಟ. ಅವಳು ದುಃಖವನ್ನು ಒಳಗೇ ನುಂಗಿಕೊಳ್ಳುತ್ತಿದ್ದಳು. ಮುಖದಲ್ಲಿ ಮಾತ್ರ ಅದನ್ನು ಮರೆಮಾಚಲು ಆಗಿರಲಿಲ್ಲ. ಪುಟ್ಟ ಗೋವಿಂದ ಸಿಂಹ ಅವಳ ಪಕ್ಕದಲ್ಲೇ ನಿಂತಿದ್ದ. ಬಿಟ್ಟಗಣ್ಣುಗಳಿಂದ ಏನೋ ಆಶ್ಚರ್ಯ ನಡೆಯುತ್ತಿದೆ ಎಂಬಂತೆ ನೋಡುತ್ತಿದ್ದ.

ಗುಜರಿ ಗಂಡನಿಗೆ ತಲೆಬಾಗಿ ನಮಸ್ಕರಿಸಿದಳು. ಅವಳ ಕಣ್ಣುಗಳೇ ಮಾತನಾಡುತ್ತಿದ್ದವು.

ತೇಗ ಬಹಾದುರ್ ಅವಳ ತಲೆಯನ್ನು ನೇವರಿಸಿ ಹೇಳಿದರು: ಗೋವಿಂದನನ್ನು ಜೋಪಾನವಾಗಿ ನೋಡಿಕೋ. ಮುಂದೇ ಅವನೇ ಹಿಂದುಗಳಿಗೆ ಮಾರ್ಗದರ್ಶನ ಮಾಡಬೇಕಾದವನು. ಅದಕ್ಕಾಗಿ ಅವನಿಗೆ ಯೋಗ್ಯ ಶಿಕ್ಷಣವನ್ನು ಕೊಡು.”

ಅನಂತರ ಮುದ್ದು ಮಗನ ಬೆನ್ನು ತಟ್ಟಿ ಅವರು ಹೇಳಿದರು: “ಮಗೂ, ನೀನು ಅಮ್ಮ ಹೇಳಿದ ಹಾಗೆ ಕೇಳಿಕೊಂಡರು. ಮುಂದೆ ನೀನು ಪರಾಕ್ರಮಿಯಾಗಬೇಕು, ಧೈರ್ಯಶಾಲಿಯಾಗಬೇಕು.”

ಗೋವಿಂದ ಸಿಂಹ ತಾನೂ ತಂದೆಯೊಡನೆ ಬರುವುದಾಗಿ ಹಟ ಹಿಡಿದ. ಬೇಡವೆಂದು ಅವನನ್ನು ಒಪ್ಪಿಸುವುದೇ ಕಷ್ಟವಾಯಿತು.

ತೇಗ ಬಹಾದುರ್ ಆನಂದಪುರವನ್ನು ತ್ಯಜಿಸುವ ದೃಶ್ಯ ಅತ್ಯಂತ ಶೋಕಪೂರ್ಣವಾಗಿತ್ತು. ಅವರ ಜೊತೆಗೆ ಭಾಯಿ ಮತೀದಾಸ್, ಸತೀದಾಸ್, ದಯಾಳದಾಸ್ ಮತ್ತು ಪುರೋಹಿತ ಬಾಬಾ ಗುರ್ದಿತಾ ಮುಂತಾದ ಶಿಷ್ಯರೂ ಹೊರಟರು.

ಅಲ್ಲಿಂದ ಹೊರಟ ತೇಗ ಬಹಾದುರ್ ಊರೂರುಗಳನ್ನು ಸುತ್ತಿಕೊಂಡು ದೆಹಲಿಯ ಕಡೆ ಪ್ರಯಾಣ ಬೆಳೆಸಿದರು. ಎಲ್ಲ ಕಡೆಗಳಲ್ಲೂ ಜನರಿಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದರು. ಈ ಪರೀಕ್ಷೆಯ ಕಾಲವನ್ನು ಎದುರಿಸಲು ಎಲ್ಲರೂ ಸಿದ್ಧವಾಗಬೇಕೆಂದು ತಿಳಿಸಿದರು.

“ನಮ್ಮ ಪವಿತ್ರ ಧರ್ಮಕ್ಕಾಗಿ ಪ್ರಾಣತ್ಯಾಗ ಮಾಡಲು ಸಿದ್ಧವಾಗಿ ನಾನು ಹೊರಟಿದ್ದೇನೆ. ಏಳಿ. ಜಾಗೃತರಾಗಿ! ಮುಂದೆ ನನ್ನ ಮಗನೂ ನಿಮ್ಮನ್ನು ಯೋಧರನ್ನಾಗಿ, ಸಿಂಹಸಾಹಸಿಗಳನ್ನಾಗಿ ಮಾಡುವುದು ಖಂಡಿತ” – ಈ ಮಾತುಗಳು ತೇಗ ಬಹಾದುರರ ಬಾಯಿಂದ ಹೊರ ಹೊಮ್ಮಿದವು.

ತೇಗ ಬಹಾದುರ್ ಆಗ್ರಾಕ್ಕೆ ಬಂದು ತಂಗಿದರು. ಅಲ್ಲಿದ್ದಾಗ ಒಂದು ದಿನ ಕೊತ್ವಾಲನ ಕಣ್ಣಿಗೆ ಬಿದ್ದರು; ಸೆರೆಹಿಡಿಯಲ್ಪಟ್ಟರು.

ಕೊತ್ವಾಲ ಅವರನ್ನು ತನ್ನ ಅಧೀನದಲ್ಲಿಟ್ಟುಕೊಂಡು ದೆಹಲಿಗೆ ಸುದ್ದಿ ಮುಟ್ಟಿಸಿದ. ತೇಗ ಬಹಾದುರರನ್ನು ಆಸ್ಥಾನಕ್ಕೆ ಕರೆತರಲು ಅಲ್ಲಿಂದ ಹುಕುಂ ಬಂತು.

ಆಸ್ಥಾನದಲ್ಲಿ

ತೇಗ ಬಹಾದುರರನ್ನು ಜನ ‘ಸಚ್ಚಾ ಬಾದಶಹ’ (ನಿಜವಾದ ರಾಜ) ಎಂದು ಕರೆಯುತ್ತಿದ್ದರು. ಆದರೆ ಇದನ್ನು ಕೇಳಿದರೆ ಔರಂಗಜೇಬನ ಮನಸ್ಸಿಗೆ ಕುಟುಕಿದಂತಾಗುತ್ತಿತ್ತು. “ಇದರ ಅರ್ಥ ನಾನು ಸುಳ್ಳಾದ ರಾಜ ಎಂದಾಗುತ್ತದೆ” ಎಂದು ಅವನು ಯೋಚಿಸಿದ್ದ. ಅದರಿಂದಾಗಿ ಅವನಿಗೆ ತೇಗ ಬಹಾದುರರನ್ನು ಕಂಡರೆ ಮೊದಲೇ ಅಸೂಯೆ. ಈಗ ದ್ವೇಷ ಸಾಧಿಸಲು ಅವನಿಗೆ ಒಂದು ಅವಕಾಶ ಸಿಕ್ಕಿತು. ತೇಗ ಬಹಾದುರ್ ತಾನಾಗಿಯೇ ಬೋನಿಗೆ ಬಿದ್ದಿದ್ದ ವಿಷಯ ಅವನಿಗೆ ಹರ್ಷ ತಂದಿತ್ತು. ಅವರೊಬ್ಬರನ್ನು ಮತಾಂತರ ಮಾಡಿದರೆ ಉಳಿದವರೂ ಆಗುವರೆಂದು ಅವನು ಆನಂದಗೊಂಡಿದ್ದ.

ಔರಂಗಜೇಬನ ದರಬಾರಿಗೆ ತೇಗ ಬಹಾದುರರನ್ನು ಕರೆದುಕೊಂಡು ಹೋಗಲಾಯಿತು.

ತೇಗ ಬಹಾದುರ್ ಎದೆ ಎತ್ತಿಕೊಂಡು ದೃಢವಾದ ಹೆಜ್ಜೆ ಹಾಕುತ್ತಾ ಸಭೆಯನ್ನು ಪ್ರವೇಶಿಸಿದರು. ಸರದಾರರೂ ಸೇನಾಪತಿಗಳೂ ಅವರನ್ನೇ ಕಣ್ಣು ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದರು. ‘ಎಲಾ ಇವನಾ! ಸಲಾಮ್ ಮಾಡದೆ ನಿಂತುಕೊಂಡಿದ್ದಾನಲ್ಲ! ಇವನಿಗೇನು ಶಿಕ್ಷೆ ಕಾದಿದೆಯೋ ನೋಡೋಣ’ ಎಂದುಕೊಂಡರು.

ಔರಂಗಜೇಬ ಕೇಳಿದ:

“ನೀನೇನೋ ತೇಗ ಬಹಾದುರ್ ಅಂದರೆ?”

“ಹೌದು. ನಾನೇ ತೇಗ ಬಹಾದುರ್.

“ಆಹಹ್ಹಾ. ತೇಗ ಅಂದರೆ ಖಡ್ಗ. ಬಹಾದುರ್ ಅಂದರೆ ನಿಸ್ಸೀಮ. ಓಹೋ ನಿಮಗೆ ಖಡ್ಗ ಹಿಡಿದುಕೊಳ್ಳಲಿಕ್ಕೂ ಬರುತ್ತೋ? ನೋಡಿದರೆ ಸಾಧು ಥರಾ ಕಾಣಿಸುತ್ತೀಯ ಮತ್ತೆ?”

ತೇಗ ಬಹಾದುರ್ ತಾತ್ಸಾರದಿಂದ ನಿಂತಿದ್ದರು.

“ಹೋಗಲಿ. ನೀನೂ ಭಾರೀ ಆಸಾಮಿಯೇ ಇರಬೇಕು. ನಿನಗೆ ಸಾಕಷ್ಟು ಶಿಷ್ಯರು ಇರುವ ಹಾಗೆ ಕಾಣುತ್ತೆ. ನೀನು ಮುಸ್ಲಿಂ ಆದರೆ ಅವರೂ ಮುಸ್ಲಿಂ ಮತ ಸ್ವೀಕರಿಸುತ್ತಾರಂತಲ್ಲ? ನೀನೇನು ಯೋಚನೆ ಮಾಡಿದ್ದೀಯ?”

ತೇಗ ಬಹಾದುರ್ ಈಗ ಗಂಭೀರವಾಗಿ ಆತ್ಮವಿಶ್ವಾಸದಿಂದ ಹೇಳಿದರು: “ನಾನಲ್ಲ, ನನ್ನ ಕೂದಲೂ ಮುಸ್ಲಿಂ ಆಗಲ್ಲ. ನನ್ನ ಈ ನಿರ್ಧಾರ ಅಚಲ. ಅದಿರಲಿ, ನಿನಗೇಕೆ ಹೀಗೆ ಎಲ್ಲರನ್ನೂ ಮುಸ್ಲಿಮರನ್ನಾಗಿ ಮಾಡುವ ಹುಚ್ಚು ಬಾದಶಹ? ಇದರಿಂದ ನಿನಗೆ ಖಂಡಿತ ಒಳ್ಳೆಯದಾಗುವುದಿಲ್ಲ. ಈ ದಷ್ಟು ಯೋಜನೆಯನ್ನು ನೀನು ಬಿಟ್ಟುಬಿಡುವುದೇ ಕ್ಷೇಮ. ಅವರವರ ಧರ್ಮವನ್ನು ಅವರವರು ಅನುಸರಿಸಲಿ, ಬಿಟ್ಟುಬಿಡು.”

ಔರಂಗಜೇಬನಿಗೆ ಇದನ್ನು ಕೇಳಿ ಮನಸ್ಸು ಸ್ವಲ್ಪ ಅಳುಕಿತು. ಆದರೂ “ಏಯ್, ಸಾಕು ನಿಲ್ಲಿಸು ನಿನ್ನ ಬೊಬ್ಬೆಯನ್ನು. ಏನೋ ಗೌರವ ಕೊಟ್ಟರೆ ನಾಲಿಗೆಯನ್ನೇ ಉದ್ದ ಮಾಡುತ್ತೀಯಾ? ಯಾರ ಮುಂದೆ ನಿಂತಿರುವಿ ಎಂದು ಎಚ್ಚರವಿರಲಿ” ಎಂದ.

“ನಾನು ತಲೆ ಬಾಗುವುದು ದೇವರಿಗೆ, ಧರ್ಮಕ್ಕೆ, ಸತ್ಯಕ್ಕೆ ಮಾತ್ರ, ಭಗವಂತನ ಶಾಸನವನ್ನು ಒಪ್ಪಿಕೊಳ್ಳುವವನು ನಾನು. ಭಯಪಡಲು ನೀನೇನು ಹುಲಿಯೋ, ಸಿಂಹವೋ?”

ಔರಂಗಜೇಬನಿಗೂ ತೇಗ ಬಹಾದುರರಿಗೂ ಸ್ವಲ್ಪ ಕಾಲ ಚರ್ಚೆ ನಡೆಯಿತು. ಒಮ್ಮತಕ್ಕೆ ಬರಲು ಸಾಧ್ಯವೇ ಇರಲಿಲ್ಲ.

ಔರಂಗಜೇಬ, ಮುಸ್ಲಿಂ ಆದರೆ ನಿನಗೆ ಖಾಜಿಯ ಪದವಿ ಕೊಡುವೆನೆಂದು ತೇಗ ಬಹಾದುರರಿಗೆ ಹೇಳಿದ. ಏನೇನೋ ಆಸೆ ತೋರಿಸಿದ.

ಯಾವುದಕ್ಕೂ ತೇಗ ಬಹಾದುರ್ ಬಗ್ಗದಿದ್ದನ್ನು ನೋಡಿ ಕೊನೆಗೆ ಔರಂಗಜೇಬ ಹೇಳಿದ: ‘ಹೋಗಲಿ, ಖಡ್ಗ ಪ್ರವೀಣ ಎಂದು ಹೆಸರಿಟ್ಟುಕೊಂಡಿದ್ದೀಯಲ್ಲ, ಒಂದು ಚಮತ್ಕಾರವನ್ನಾದರೂ ಮಾಡಿ ತೋರಿಸು. ನಿನ್ನನ್ನು ಬಿಟ್ಟುಬಿಡುತ್ತೇನೆ. ಸಂನ್ಯಾಸಿಗಳಿಗೆ ಮಾಯ, ಮಂತ್ರ ಬರುತ್ತೆ ಅಂತ ಹೇಳುವುದನ್ನು ಕೇಳಿದ್ದೇನೆ. ನೀನು ಮಾಡುವ ಚಮತ್ಕಾರವನ್ನು ನೋಡಬೇಕು ಎಂದು ನಮಗೂ ಆಸೆ.”

ತೇಗ ಬಹಾದುರ್ ಖಡಾಖಂಡಿತವಾಗಿ ಹೇಳಿದರು: “ಕೇವಲ ಜೀವ ಉಳಿಸಿಕೊಳ್ಳಲು ಅಂತಹ ಚಮತ್ಕಾರವನ್ನು ನಾನು ಮಾಡಲಾರೆ.”

ಮಾತಿನ ಚಕಮಕಿ ಮುಕ್ತಾಯವಾಯಿತು. ತೇಗ ಬಹಾದುರ್ ಹಾಗೂ ಅವರ ಅನುಯಾಯಿಗಳನ್ನು ಕಬ್ಬಿಣದ ಸರಳುಗಳುಳ್ಳ ಸೆರೆಮನೆಯಲ್ಲಿ ಕೂಡಿಡಲಾಯಿತು.

ಮಗನ ಮನಸ್ಸು

ಔರಂಗಜೇಬ ಬದಲಾಗಬಹುದು, ತನ್ನ ಕ್ರೌರ್ಯವನ್ನು ಕೈಬಿಡಬಹುದು ಎಂದಿದ್ದ ಅಲ್ಪಸ್ವಲ್ಪ ಆಸೆಯೂ ಹೋಯಿತು. ಇನ್ನು ನಾವು ಬದುಕಿನ ಕೊನೆ ದಿನಗಳನ್ನು ಎಣಿಸಬೇಕು ಎಂದು ತೇಗ ಬಹಾದುರರಿಗೆ ಮನದಟ್ಟಾಯಿತು.

ಇದ್ದಕ್ಕಿದ್ದಂತೆ ತಮ್ಮ ಬಲಿದಾನವಾದರೆ ಸಿಖ್ ಅನುಯಾಯಿಗಳೆಲ್ಲ ದಿಕ್ಕುಗೆಡಬಹುದು; ಅವರ ಸಂಘಟನೆ ಮುರಿದುಬೀಳಬಹುದು; ಅದಕ್ಕೆ ಏನಾದರೂ ವ್ಯವಸ್ಥೆ ಮಾಡಬೇಕೆಂದು ತೇಗ ಬಹಾದುರ್ ಯೋಚಿಸಿದರು.

ಗೋವಿಂದ ಸಿಂಹ ಇನ್ನೂ ಬಾಲಕ. ಅವನು ಸಿಖ್ ಪಂಥದ ಜವಾಬ್ದಾರಿ ಹೊರಬಲ್ಲನೆ? ಅನುಯಾಯಿಗಳಿಗೆ ಸಮರ್ಪಕ ಮಾರ್ಗದರ್ಶನ ಮಾಡಬಲ್ಲನೆ? ದೇಶ ಬಾಂಧವರಲ್ಲಿ ಧೈರ್ಯ ತುಂಬಬಲ್ಲನೆ?

‘ಜೀವ ಉಳಿಸಿಕೊಳ್ಳಲು ಚಮತ್ಕಾರ ಮಾಡುತ್ತಾರೆ’

ಮಗನನ್ನು ಪರೀಕ್ಷಿಸಿ ನೋಡಬೇಕೆನಿಸಿತು ತೇಗ ಬಹಾದುರರಿಗೆ. ಅವನ ಮನಸ್ಸನ್ನು ತಿಳಿದುಕೊಳ್ಳಲು ಒಂದು ಪತ್ರ ಬರೆದರು:

‘ಮನುಷ್ಯ ಯತ್ನವೆಲ್ಲ ಈಗ ಸೋತಿದೆ,
ಮಾನವೀಯತೆ ಬೇಡಿಯಲ್ಲಿ ನರಳತೊಡಗಿದೆ;
ನೀತಿಯುಕ್ತ ಪ್ರಯತ್ನವೆಲ್ಲ ನಿಸ್ಸಹಾಯವಾಗಿದೆ,
ಓ ಪ್ರಭು ರಕ್ಷಿಸು, ಅವರನ್ನು ನೀನು ರಕ್ಷಿಸು-
ಮುಳುಗಿಹೋಗುತ್ತಿದ್ದ ಆನೆ ಮೊರೆಯ
ಕರುಣಾಪೂರ್ಣನಾದ ನೀನು ಕೇಳಿದಂತೆ!’

ಹೀಗೆ ಬರೆದ ಕಾಗದವನ್ನು ತೇಗ ಬಹಾದುರ್ ಗೋವಿಂದ ಸಿಂಹನಿಗೆ ಕಳಿಸಿದರು.

ಗೋವಿಂದ ಸಿಂಹನಿಂದ ಉತ್ತರ ಬಂತು:
‘ನಿನ್ನ ಕೃಪೆಯು ಇರಲು ಪ್ರಭುವೆ,
ಎಲ್ಲ ಶಕ್ತಿ ನನ್ನದು.

ದಾಸ್ಯ ಸಂಕೋಲೆ ಎಲ್ಲ ಮುರಿದು ನುರಿದು ಬೀಳ್ವುದು.

ಸತ್ಯ ಸ್ವಾತಂತ್ರ್ಯಕೆ ಅಸಾಧ್ಯವೇ ಇಲ್ಲವು

ಎಲ್ಲ ನಿನ್ನ ಲೀಲೆ ಪ್ರಭು, ನಿನ್ನ ಹರಕೆ ಮಾತ್ರ ಬೇಕು.

(ಈ ಎರಡು ಕಾಗದಗಳೂ ಸಿಖ್ಖರ ಧರ್ಮಗ್ರಂಥವಾದ ‘ಆದಿಗ್ರಂಥ’ದಲ್ಲಿ ಸೇರಿವೆ).

ಇದನ್ನು ಬರೆದ ಗೋವಿಂದ ಸಿಂಹ ತಂದೆ ಏರ್ಪಡಿಸಿದ್ದ ಪರೀಕ್ಷೆಯಲ್ಲಿ ಗೆದ್ದಿದ್ದ!

ತೇಗ ಬಹಾದುರರಿಗೆ ತಮ್ಮ ಮಗನ ಬಗ್ಗೆ ಹೆಮ್ಮೆಯುಂಟಾಯಿತು. ಮಗ ತನ್ನ ಉತ್ತರಾಧಿಕಾರಿಯಾಗಿ ಹತ್ತನೆ ಗುರು ಆಗಬಲ್ಲ ಎಂದು ಅವರಿಗೆ ಅನ್ನಿಸಿತು. ಆನಂದಪುರದಲ್ಲಿರುವ ಮಗನಿಗೆ ತಲುಪಿಸಲು ಉತ್ತರಾಧಿಕಾರಿಗೆ ನೀಡುವ ವೀಳ್ಯ ಸಿದ್ಧವಾಯಿತು.

ಆದರೆ ವೀಳ್ಯವನ್ನು ಯಾರು ಒಯ್ಯುವುದು? ಹೇಗೆ ತೆಗೆದುಕೊಂಡು ಹೋಗುವುದು?

ಸೆರೆಮನೆಗೆ ಬಿಗಿಯಾದ ಕಾವಲಿತ್ತು.

ತೇಗ ಬಹಾದುರರೊಡನೆ ಪುರೋಹಿತ ಬಾಬಾ ಗುರ್ದಿತಾ ಸಹ ಸೆರೆಯಲ್ಲಿದ್ದನಷ್ಟೆ? ಅವನು ಈ ಕೆಲಸವನ್ನು ನಿರ್ವಹಿಸಲು ಮುಂದಾದ. ಕಾವಲಿನವರ ಕಣ್ಣು ತಪ್ಪಿಸಿ ಅವನು ವೀಳ್ಯವನ್ನು ತೆಗೆದುಕೊಂಡು ಹೊರಟ. ಆನಂದಪುರಕ್ಕೆ ಹೋಗಿ ಅದನ್ನು ಗೋವಿಂದ ಸಿಂಹನಿಗೆ ಮುಟ್ಟಿಸಿದ.

ಶಿಷ್ಯರಿಗೆ ಶಿಕ್ಷೆ

ಸೆರೆಮನೆಯಿಂದ ಒಬ್ಬ ಶಿಷ್ಯ ತಪ್ಪಿಸಿಕೊಂಡಿರುವ ವಿಷಯ ಔರಂಗಜೇಬನಿಗೆ ತಿಳಿಯಿತು, ಇನ್ನು ತಡ ಮಾಡುವುದು ಉಚಿತವಲ್ಲವೆಂದು ಅವನಿಗೆ ಅನ್ನಿಸಿತು. ಕೊನೆಗೆ ತೇಗ ಬಹಾದುರರೂ ತಪ್ಪಿಸಿಕೊಂಡರೆ?

ಆಗ ಅವನಿಗೊಂದು ನೀಚ ಯೋಚನೆ ಹೊಳೆಯಿತು. ಗುರುವಿನ ಎದುರಿಗೇ ಅವನ ಶಿಷ್ಯರನ್ನು ಚಿತ್ರಹಿಂಸೆ ಕೊಟ್ಟು ಸಾಯಿಸಬೇಕು. ಆಗಲಾದರೂ ತೇಗ ಬಹಾದುರರ ಮನಸ್ಸು ಬದಲಾಗಿ ಅವರು ಮತಾಂತರಗೊಳ್ಳಬಹುದು ಎನ್ನುವ ಯೋಚನೆ ಅದು.

ಶಿಷ್ಯರಿಗೂ ಕೊನೆಯ ಬಾರಿ ಮುಸಲ್ಮಾನರಾಗುವಿರೋ ಇಲ್ಲವೋ ಎಂದು ಎಚ್ಚರಿಕೆ ಕೊಡಲಾಯಿತು. ಅವರಾರೂ ಈ ಬೆದರಿಕೆಗೆ ಅಂಜಲಿಲ್ಲ, ಅಳುಕಲಿಲ್ಲ. ಎಲ್ಲರೂ ಧೈರ್ಯವಾಗಿ ಮತಾಂತರವನ್ನು ತಿರಸ್ಕರಿಸಿದರು.

ಅವರನ್ನು ಗುರುವಿನ ಎದುರೇ ಚಿತ್ರಹಿಂಸೆ ಕೊಟ್ಟು ಕೊಲ್ಲುವಂತೆ ಹುಕುಂ ಹೊರಟಿತು.

ಭಾಯಿ ಮತೀದಾಸನನ್ನು ಎರಡು ಹಲಗೆಗಳ ನಡುವೆ ಬಿಗಿದು ಗರಗಸದಿಂದ ಕತ್ತರಿಸಲಾಯಿತು! ಆದರೆ ಅವನ ಬಾಯಿಂದ ಜೀವ ಹೋಗುವವರೆಗೂ ಭಗವಂತನ ನಾಮಸ್ಮರಣೆ ಹೊರಡುತ್ತಿತ್ತು!

ಉಳಿದವರನ್ನೂ ಬೇರೆಬೇರೆ ರೀತಿಯ ಹಿಂಸೆ ಕೊಟ್ಟು ಕೊಲ್ಲಲಾಯಿತು.

ಅದನ್ನು ಎದುರಿಗೇ ನೋಡುತ್ತಿದ್ದ ಗುರುವಿನ ಮನಸ್ಸು ಹೇಗಿದ್ದಿರಬಹುದು? ಧರ್ಮಕ್ಕಾಗಿ ಬಲಿಯಾಗುತ್ತಿರುವ ಅವರನ್ನು ಕಂಡು ಹೆಮ್ಮೆ ತಾಳಬೇಕೆ? ಅವರು ಪಡುತ್ತಿದ್ದ ಹಿಂಸೆಗಾಗಿ ದುಃಖಿಸಬೇಕೆ? ತೇಗ ಬಹಾದುರರ ಮನಸ್ಸು ಕುದಿಯಿತು, ಹೃದಯ ಬಂದಿತು.

ತೇಗ ಬಹಾದುರ್ ಆಗಲೂ ವಿವೇಕ ಕಳೆದುಕೊಳ್ಳಲಿಲ್ಲ. ತಾವು ಕಾಶ್ಮೀರಿ ಪಂಡಿತರಿಗೆ ಕೊಟ್ಟ ವಚನವನ್ನು ಅವರು ನೆನೆಸಿಕೊಂಡರು. ಹಿಂದು ಧರ್ಮ ನಶಿಸದಿರಲು ಈ ಹಿಂಸೆ ಅನುಭವಿಸಲೇಬೇಕು ಎಂದು ಮನಸ್ಸು ಗಟ್ಟಿಮಾಡಿಕೊಂಡರು.

ತೇಗ ಬಹಾದುರ್ ಗೆದ್ದರು.

ಔರಂಗಜೇಬನ ಎಣಿಕೆ ತಪ್ಪಿತು. ತೇಗ ಬಹಾದುರ್ ಮತಾಂತರವಾಗುವ ಯಾವ ಲಕ್ಷಣಗಳೂ ಕಂಡುಬರಲಿಲ್ಲ!

ಏನಾದರೂ ಚಮತ್ಕಾರ ಮಾಡಿ ತೋರಿಸು ಎಂದು ಕೊನೆಯ ಬಾರಿ ಔರಂಗಜೇಬ ಹೇಳಿದಾಗ ತೇಗ ಬಹಾದುರ್ ಉತ್ತರಿಸಿದರು:

“ನನ್ನ ತಲೆ ಕತ್ತರಿಸಿ ನೆಲಕ್ಕೆ ಬೀಳುವ ದಿನ ನೀನು ಒಂದು ಚಮತ್ಕಾರವನ್ನು ಕಾಣುವೆ. ಉಪಾಸನಾ ಸ್ವಾತಂತ್ರ್ಯಕ್ಕಾಗಿ, ಧರ್ಮನಿಷ್ಠೆಗಾಗಿ ಒಬ್ಬ ಮನುಷ್ಯ ಪ್ರಾಣವನ್ನೇ ತೆರುವ ಚಮತ್ಕಾರ ಅದು!”

ಬಲಿದಾನ

ತೇಗ ಬಹಾದುರರ ಬಲಿದಾನದ ದಿನವೂ ಬಂತು. ೧೬೭೫ರ ನವೆಂಬರ್ ೧೧ನೇ ದಿನಾಂಕ ಅದು. ದೆಹಲಿಯ ಚಾಂದನಿ ಚೌಕದಲ್ಲಿ ನಡೆಯುವ ಈ ಕೃತ್ಯ ನೋಡಲು ಸಹಸ್ರಾರು ಜನ ಸೇರಿದರು.

ಆ ದಿನ ಬೆಳಗ್ಗೆ ತೇಗ ಬಹಾದುರ್ ಬಾವಿಯಲ್ಲಿ ಸ್ನಾನ ಮಾಡಿದರು. ನಿತ್ಯದ ಪ್ರಾರ್ಥನೆಗಳನ್ನೆಲ್ಲ ಮಾಡಿ ಮುಗಿಸಿದರು.

ಚೌಕದ ಮಧ್ಯದಲ್ಲಿ ಒಂದು ಬಟ್ಟೆಯನ್ನು ಹಾಸಲಾಗಿತ್ತು. ಖಡ್ಗಧಾರಿಯೊಬ್ಬ ಸಿದ್ಧನಾಗಿ ನಿಂತಿದ್ದ. ಅವನ ಕೈಯಲ್ಲಿದ್ದ ಖಡ್ಗ ಚೆನ್ನಾಗಿ ಮಸೆಯಲ್ಪಟ್ಟು ಫಳಫಳ ಹೊಳೆಯುತ್ತಿತ್ತು.

ಅಲ್ಲೇ ಒಬ್ಬ ಮೌಲ್ವಿಯೂ ನಿಂತಿದ್ದ – ಕೊನೇ ಗಳಿಗೆಯಲ್ಲೇನಾದರೂ ತೇಗ ಬಹಾದುರ್ ಒಪ್ಪಿದರೆ ಮತಾಂತರ ವಿಧಿ ನೆರವೇರಿಸಲು.

ಭಾಯಿ ಜೈತಾ ಎಂಬವನೂ ಅಲ್ಲಿದ್ದ. ಹುಟ್ಟಿನಿಂದ ಅಂತ್ಯಜರ ಜಾತಿ ಅವನದು. ಆ ದಿನ ರಸ್ತೆಯನ್ನೆಲ್ಲ ಗುಡಿಸಿದ್ದು ಅವನೇ. ಭಾಯಿ ಜೈತಾ ತೇಗ ಬಹಾದುರರ ಮೆಚ್ಚಿನ ಶಿಷ್ಯ. ಗುರುವನ್ನು ನೋಡಿ ಅವನು ಕಣ್ಣುಗಳಿಂದಲೇ ನಮಸ್ಕರಿಸಿದ.

ಬಿಕ್ಕಿಬಿಕ್ಕಿ ಅಳುತ್ತಿದ್ದ ಜನರಿಗೆ ತೇಗ ಬಹಾದುರ್ ಕೈಯೆತ್ತಿ ಸಮಾಧಾನ ಹೇಳಿದರು. ಅನಂತರ ಧ್ಯಾನದ ಸ್ಥಿತಿಯಲ್ಲಿ ಬಟ್ಟೆಯ ಮೇಲೆ ಕುಳಿತರು.

ಅವರ ಕೊರಳಿನ ಸರಕ್ಕೆ ಒಂದು ಕಾಗದದ ಸುರುಳಿ ಇತ್ತು. ಕೆಲವರು ಅದು ಮಂತ್ರಶಕ್ತಿ ಇರಬಹುದೆಂದು ಊಹಿಸಿದರು. ಖಡ್ಗ ಬೀಸಿದರೆ ಅದೇ ಮುರಿದುಹೋಗಬಹುದು, ಅಥವಾ ಪ್ರಹಾರ ಗುರುವಿಗೆ ಏನೂ ಅಪಾಯ ಮಾಡದೇ ಹೋಗಬಹುದು ಎಂದು ಅವರು ಯೋಚಿಸಿದರು. ಏನಾಗುವುದೆಂದು ಕುತೂಹಲದಿಂದ ಕಾಯುತ್ತಿದ್ದರು.

ಖಡ್ಗಧಾರಿ ಖಡ್ಗವನ್ನು ಬೀಸಿದ. ಒಂದು ಮಿಂಚು ಹೊಳೆದಂತೆ ಆಯಿತು. ತೇಗ ಬಹಾದುರರ ತಲೆ ಉರುಳಿ ಬಿತ್ತು.

ಅವರ ಸರದೊಂದಿಗೆ ಇದ್ದ ಕಾಗದದ ಸುರುಳಿಯೂ ಬಿತ್ತು. ಅಧಿಕಾರಿಗಳು ಅದನ್ನು ಬಿಚ್ಚಿ ನೋಡಿದರು. ಅದರಲ್ಲಿ ಹೀಗೆ ಬರೆದಿತ್ತು:

‘ಸಿರ್ ದಿಯಾ ಪರ್ ಸಿರಹ್ ನ ದಿಯಾ’
(ತಲೆಯನ್ನು ಕೊಟ್ಟೆ, ಆದರೆ ನಂಬಿಕೆ ಬಿಡಲಿಲ್ಲ.)

ಶವ ಸಂಸ್ಕಾರ

ತೇಗ ಬಹಾದುರರ ಮೃತ ದೇಹ ಅಲ್ಲೇ ಬಿದ್ದಿರಬೇಕೆಂದು ಆಜ್ಞೆಯಾಗಿತ್ತು. ಸತ್ತಮೇಲೂ ಗುರುವಿಗೆ ಅವಮಾನವಾಗಬೇಕು ಎಂಬ ದುಷ್ಟ ಬುದ್ಧಿ!

ಮೃತ ದೇಹದ ಸುತ್ತಲೂ ಬಿಗಿಯಾದ ಪಹರೆ ನಿಂತಿತು. ದೇಹವನ್ನು ಯಾರೂ ಅಪಹರಿಸಿಕೊಂಡು ಹೋಗದಂತೆ ಕಾವಲು ಬಿತ್ತು.

ಶಿಷ್ಯರಿಗೆ ಆಲೋಚನೆ ಆರಂಭವಾಯಿತು. ಹಿಂದು ಧರ್ಮದ ಪ್ರಕಾರ, ಸಿಖ್ ಪದ್ಧತಿಯಂತೆ ಶವ ಸಂಸ್ಕಾರ ಆಗಬೇಕು. ಏನು ಮಾಡುವುದು? ಭಾಯಿ ಜೈತಾ ಪರಿಸ್ಥಿತಿಯ ಕರೆಗೆ ಓಗೊಟ್ಟ.

ಹಗಲು ಕಳೆದು ಕತ್ತಲು ಆವರಿಸಿತು. ಪಹರೆಯವರಿಗೂ ಕೊಂಚ ಆಲಸ್ಯ ಮೈಗೂಡಿತ್ತು.

ಇದ್ದಕ್ಕಿದ್ದಂತೆ ಭಾಯಿ ಜೈತಾ ಕಾವಲುಗಾರರ ಮಧ್ಯೆ ನಸುಳಿಕೊಂಡು ಮುನ್ನುಗ್ಗಿದ. ಗುರುವಿನ ತಲೆಯನ್ನು ಎತ್ತಿಕೊಂಡು ಮಿಂಚಿನಂತೆ ಪರಾರಿಯಾದ! ಅದನ್ನು ನೇರವಾಗಿ ಆನಂದಪುರಕ್ಕೆ ಕೊಂಡೊಯ್ದ. ದಾರಿಯುದ್ದಕ್ಕೂ ಯಾರಾದರೂ ತನ್ನ ಬೆನ್ನಟ್ಟಿದರೆ ಎಂಬ ಆತಂಕ, ಹೇಗಾದರೂ ಇದನ್ನು ಅಲ್ಲಿಗೆ ಮುಟ್ಟಿಸಬೇಕು ಎಂಬ ಛಲ ಅವನದು.

ತನ್ನ ಮಗನ ತಲೆಯನ್ನು ನೋಡಿ ತಾಯಿ ನಾನಕಿ ಬಿಕ್ಕಿ ಬಿಕ್ಕಿ ಅತ್ತಳು. ತೇಗ ಬಹಾದುರರ ಹೆಂಡತಿ ಗುಜರಿಗೂ ತಡೆಯಲಾರದ ದುಃಖವುಂಟಾಯಿತು. ಮೌನವಾಗಿಯೇ ಅವಳು ಕಣ್ಣೀರು ಹರಿಸಿದಳು. ಪತಿಯ ಶಿರಕ್ಕೆ ತನ್ನ ಅಂತಿಮ ನಮಸ್ಕಾರಗಳನ್ನು ಸಲ್ಲಿಸಿದಳು.

ಧೈರ್ಯ ಕಳೆದುಕೊಳ್ಳದಿದ್ದವನು ಗೋವಿಂದ ಸಿಂಹ ಒಬ್ಬನೇ. ಅವನು ಭಾಯಿ ಜೈತಾನ ಸಾಹಸವನ್ನು ಕೇಳಿ ರೋಮಾಂಚನಗೊಂಡ. ಒಲುಮೆಯಿಂದ ಅವನನ್ನು ಆಲಿಂಗಿಸಿಕೊಂಡ.

ಆನಂದಪುರದಲ್ಲಿ ಗುರುವಿನ ನಿವಾಸದ ಬಳಿ ತಲೆಗೆ ಅಗ್ನಿಸ್ಪರ್ಶ ಮಾಡಲಾಯಿತು.

ಭಾಯಿ ಜೈತಾ ತಲೆಯನ್ನು ಎತ್ತಿಕೊಂಡು ಹೋದ ಮೇಲೆ ಕೆಲವು ಸಿಖ್ಖರು ಹತ್ತಿ ತುಂಬಿದ ಎತ್ತಿನಗಾಡಿಗಳಲ್ಲಿ ಬಲಿದಾನದ ಸ್ಥಳಕ್ಕೆ ಬಂದರು. ಲಖೀಸಿಂಗ್ ಅವರ ಪ್ರಮುಖ. ‘ದೂರ ಸರಿಯಿರಿ, ದೂರು ಸರಿಯಿರಿ, ಎಂದು ಗಲಾಟೆ ಮಾಡಿಕೊಂಡು ವೇಗವಾಗಿ ಅವರು ಬಂದರು. ಗುರುವಿನ ದೇಹವನ್ನು ಗಾಡಿಯಲ್ಲಿ ಹಾಕಿಕೊಂಡು ಬಿರುಗಾಳಿಯಂತೆ ಮರೆಯಾದರು.

ಈಗ ಆ ದೇಹವನ್ನು ಚಿತಾಸ್ಪರ್ಶ ಮಾಡಬೇಕು. ಎಲ್ಲಾದರೂ ಅದನ್ನು ಮಾಡಿದರೆ ಆ ಜಾಗದಲ್ಲೇ ಬೇರೆ ಏನನ್ನಾದರೂ ಕಟ್ಟಿಸಲು ಬಾದಶಹ ಯೋಚಿಸಬಹುದು. ಚಿತೆಯ ಬೆಂಕಿಯನ್ನು ನೋಡಿ ಎಲ್ಲರ ಕುತೂಹಲ ಕೆರಳಬಹುದು. ಆ ಜಾಗವನ್ನು ಅಪವಿತ್ರ ಮಾಡುವ ಯತ್ನ ಮಾಡಬಹುದು ಅಧಿಕಾರಿಗಳು.

ಹೀಗೆ ಯೋಚಿಸಿ ಲಖೀಸಿಂಗ್ ದೇಹವನ್ನು ತನ್ನ ಗುಡಿಸಲಿಗೆ ಕೊಂಡೊಯ್ದ. ಅದರೊಳಗೆ ದೇಹವನ್ನಿಟ್ಟು ಗುಡಿಸಿಲಿಗೇ ಬೆಂಕಿ ಕೊಟ್ಟ. ಕೇಳಿದವರಿಗೆ ಅಕಸ್ಮಾತ್ ಗುಡಿಸಲಿಗೆ ಬೆಂಕಿ ತಗುಲಿದುದಾಗಿ ಹೇಳಿದ. ಅಂತೂ ಶವಸಂಸ್ಕಾರ ನೆರವೇರಿತು.

(ಗುರುವಿನ ದೇಹವನ್ನು ಚಿತಾಸ್ವರ್ಶ ಮಾಡಿದ ಜಾಗದಲ್ಲಿ ಈಗ ಒಂದು ಮಂದಿರವನ್ನು ಕಟ್ಟಿಸಲಾಗಿದೆ. ದೆಹಲಿಯ ಪಾರ್ಲಿಮೆಂಟ್ ಭವನದ ಎದುರು ಇರುವ ಈ ‘ರಕಬಗಂಜ್’ ಗುರುದ್ವಾರ ಸಿಖ್ಖರ ಒಂದು ಪವಿತ್ರ ಯಾತ್ರಾಸ್ಥಳ. ಚಾಂದನಿ ಚೌಕದಲ್ಲಿ ಗುರು ತೇಗ ಬಹಾದುರ್ ಪ್ರಾಣಾರ್ಪಣೆ ಮಾಡಿದ ಜಾಗದಲ್ಲಿ ಈಗ ‘ಸಿಸ್‌ಗಂಜ್’ ಗುರುದ್ವಾರವನ್ನು ಕಟ್ಟಲಾಗಿದೆ. ಅದೂ ಸಿಖ್ಖರ ಶ್ರದ್ಧಾಕೇಂದ್ರ.)

ಎಂದೆಂದಿಗೂ….

ಅಸಮಾನ ತೇಜೋಪುರುಷರ ಅಂತ್ಯ ಹೀಗಾಯಿತು. ಧರ್ಮನಿಷ್ಠೆಯ ಮಹತ್ವದ ಅರ್ಥಮಾಡಿಸಲಿಕ್ಕಾಗಿ ತೇಗ ಬಹಾದುರ್  ತಮ್ಮ ಜೀವವನ್ನೇ ಅರ್ಪಿಸಿದರು.

ತೇಗ ಬಹಾದುರ್ ಅನೇಕ ಪದ್ಯಗಳನ್ನು ಬರೆದಿದ್ದಾರೆ. ಸಾಮಾನ್ಯ ರೈತರಿಗೂ ಅರ್ಥವಾಗುವಂತೆ ಸರಳವಾಗಿದೆ ಅವರ ಭಾಷೆ. ಅವರ ೧೧೫ ಇಂತಹ ಪದ್ಯಗಳು ‘ಆದಿಗ್ರಂಥ’ದಲ್ಲಿ ಗೌರವದ ಸ್ಥಾನ ಪಡೆದಿವೆ. ದಿನವೂ ಸಹಸ್ರಾರು ಮಂದಿ ಅವನ್ನು ಪಠಿಸಿ ಜ್ಞಾನೋದಯ ಪಡೆಯುತ್ತಾರೆ.

ಮನುಷ್ಯನಿಗೆ ಬದುಕನ್ನು ಕಂಡರೆ ತುಂಬ ಪ್ರೀತಿ. ಆದರೆ ಸಾವಿರಾರು, ಲಕ್ಷಾಂತರ ಜನರ ಬದುಕನ್ನು ಉತ್ತಮಗೊಳಿಸುವುದಕ್ಕಾಗಿ ತಮ್ಮ ಜೀವವನ್ನು ಕಡೆಗಣಿಸಿ ಬಲಿದಾನ ಮಾಡುವವರು ಮಹಾಪುರುಷರಾಗುತ್ತಾರೆ. ಅಂತಹ ತ್ಯಾಗವನ್ನೂ ಕೆಚ್ಚನ್ನೂ ಪ್ರಕಟಿಸುವ ಸತ್ವವುಳ್ಳವರು ಸದಾಕಾಲ ಜನರ ಆದರಕ್ಕೆ ಪಾತ್ರರಾಗುತ್ತಾರೆ. ಗುರು ತೇಗ ಬಹಾದುರ್ ಆ ಪಂಕ್ತಿಗೆ ಸೇರಿದವರು.

ದೆಹಲಿಯ ಚಾಂದನಿ ಚೌಕ-ಈ ಹೆಸರು ಕೇಳಿದಾಕ್ಷಣ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ಧೀಮಂತರೊಬ್ಬರ ನೆನಪಾಗುತ್ತದೆ. ಗೌರವದಿಂದ ಕೃತಜ್ಞತೆಯಿಂದ ಕಣ್ಣುಗಳು ತೇವಗೊಳ್ಳುತ್ತವೆ.

ಹೀಗೆ ಎಂದೆಂದಿಗೂ ದೆಹಲಿಯ ಚಾಂದನಿ ಚೌಕ ತೇಗ ಬಹಾದುರರ ಕಥೆಯನ್ನು ಸಾರುತ್ತಾ ನಿಂತಿರುತ್ತದೆ.