ಗುರುದತ್ತ ಭಟಾರರ ಕಥೆಯಂ ಪೇೞ್ವೆಂ :

ಗಾಹೆ || ಹಶ್ಥಿಣಪುರ ಗುರುದತ್ತೋ ಸಮ್ಮಲಿಥಾಳೀವ ದೊಣ್ಣಿಮಂತಮ್ಹಿ
ದಜ್ಜಂತೋ ಅಯಾಸಿಯ ಪಡಿವಣ್ಣೋ ಉತ್ತಮಂ ಅಟ್ಠಂ ||

*ಹತ್ಥಿಣಪುರ – ಹಸ್ತಿನಾಪುರಮುಮಂ ಮುನ್ನಾಳ್ವ, ಗುರುದತ್ತೋ – ಗುರುದತ್ತರಿಸಿ, ಸಮ್ಮಲಿಥಾಳೀವ – ಸೂಡಿವೊತ್ತಿಸೆಪಟ್ಟನಂತೆ, ದೊಣ್ಣಿಮಂತಮ್ಹಿ – ದೋಣಿಮಂತಮೆಂಬ ಪರ್ವತದ ಸಾರೆ, ದಜ್ಜಂತೋ – ಬೇಯುತ್ತಿರ್ದೊನಾಗಿ, ಅಯಾಸಿಯ – ಉಪಸರ್ಗಮಂ ಸೈರಿಸಿ, ಪಡಿವಣ್ಣೋ – ಪೊರ್ದಿದೊಂ, ಉತ್ತಮಂ ಅಟ್ಠಂ – ಮಿಕ್ಕ ದರ್ಶನಜ್ಞಾನಚಾರಿತ್ರಂಗಳಾರಾಧನೆಯಂ*

ಅದೆಂತೆಂದೊಡೆ: ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ಕುಣಾಳಮೆಂಬುದು ನಾಡಲ್ಲಿ ಸಾವಸ್ತಿಯೆಂಬುದು ಪೊೞಲದನಾಳ್ವೊನುಪರಿಚರನೆಂಬೊನರಸನಾತನ ಮಹಾದೇವಿಯರ್ ಪದ್ಮಾವತಿ ಅಮಿತಪ್ರಭೆ ಸುಪ್ರಭೆ ಪ್ರಭಾವತಿ ಅಂತು ನಾಲ್ವರುಂ ಮಹಾದೇವಿಯರ್ ಮೊದಲಾಗಿ ಅರಸಿಯರ್ಕಳಯ್ನೂರ್ವರ್ ಪದ್ಮಾವತಿ ಮಹಾದೇವಿಯ ಮಗನನಂತವೀರ್ಯನಮಿತಪ್ರಭೆಯ ಮಗಂ ವಜ್ರಪಾಣಿ ಸುಪ್ರಭೆಯ ಮಗಂ ವಜ್ರಬಾಹು ಪ್ರಭಾವತಿಯ ಮಗಂ ವಜ್ರಧರನಿಂತೀ ನಾಲ್ವರುಂ ಮಹಾದೇವಿಯರ ಮಕ್ಕಲ್ ಉೞದರಸಿಯರ ಮಕ್ಕಳಯ್ನೂರ್ವರಂತವರ್ಗಳಿಪ್ಪವಿಷಯ ಕಾಮ ಭೋಗಂಗಳನನುಭವಿಸುತ್ತಂ ಪಲಕಾಲಂ ಸಲೆ ಮತ್ತೊಂದು ದಿವಸಂ ವಸಂತಕಾಲದೊಳ್ ಅಂಕುರಿತ ಪಲ್ಲವಿತ ಕೋರಕಿತ ಕುಸುಮಿತ ಫಲಿತಮಪ್ಪ ಮನೋಹರೋದ್ಯಾನಕ್ಕಯ್ನೂರ್ವರ

ಗುರುದತ್ತ ಭಟಾರರ ಕಥೆಯನ್ನು ಹೇಳುವೆನು – ಹಿಂದೆ (ಹಿಂದೆ, ಹಸ್ತಿನಾಪುರವನ್ನು ಆಳುತ್ತಿದ್ದ ಗುರುದತ್ತನೆಂಬ ಋಷಿ ದೋಣಿಮಂತವೆಂಬ ಬೆಟ್ಟದ ಸಮೀಪದಲ್ಲಿ ಸುಟ್ಟು ಹೋಗಿ, ಉಪಸರ್ಗವನ್ನು ಸಹಿಸಿಕೊಂಡು, ಶ್ರೇಷ್ಠವಾದ ದರ್ಶನ – ಜ್ಞಾನ – ಚಾರಿತ್ರಗಳೆಂಬ ರತ್ನತ್ರಯದ ಆರಾಧನೆಯನ್ನು ಮಾಡಿ ಅದರ ಫಲವನ್ನು ಪಡೆದನು.) ಅದು ಹೇಗೆಂದರೆ – ಈ ಜಂಬೂದ್ವೀಪದಲ್ಲಿರುವ ಭರತಕ್ಷೇತ್ರದಲ್ಲಿ ಕುಣಾಳ ಎಂಬ ನಾಡಿನಲ್ಲಿ ಶ್ರಾವಸ್ತಿ ಎಂಬ ಪಟ್ಟಣವಿದೆ. ಅದನ್ನು ಉಪರಿಚರನೆಂಬ ರಾಜನು ಆಳುತ್ತಿದ್ದನು. ಅವನಿಗೆ ಪದ್ಮಾವತಿ, ಅಮಿತಪ್ರಭೆ, ಸುಪ್ರಭೆ, ಪ್ರಭಾವತಿ – ಎಂಬ ನಾಲ್ವರು ಮಹಾ ರಾಣಿಯರು ಮುಂತಾಗಿ ಐನೂರು ಮಂದಿ ಅರಸಿಯರಿದ್ದರು. ಪದ್ಮಾವತೀ ಮಹಾದೇವಿಯ ಮಗ ಅನಂತವೀರ್ಯ ; ಅಮಿತಪ್ರಭೆಯ ಮಗ ವಜ್ರಪಾಣಿ ; ಸುಪ್ರಭೆಯ ಮಗ ವಜ್ರಬಾಹು; ಪ್ರಭಾವತಿಯ ಮಗ ವಜ್ರಧರ. ಹೀಗೆ ಈ ನಾಲ್ಕು ಮಂದಿ ಮಹಾರಾಣಿಯರ ಮಕ್ಕಳೂ ಉಳಿದ ಅರಸಿಯರ ಮಕ್ಕಳೂ ಐನೂರು ಮಂದಿ ಇದ್ದರು. ಅಂತು ಅವರು ತಮಗೆ ಇಷ್ಟವಾದ ಕಾಮ ಸುಖಗಳನ್ನು ಅನುಭವಿಸುತ್ತ ಹಲವು ಕಾಲ ಕಳೆಯಿತು. ಅನಂತರ ಒಂದು ದಿನ ವಸಂತಋತುವಿನ ಕಾಲದಲ್ಲಿ, ಮನೋಹರ ಎಂಬ ಉದ್ಯಾನವು ಮೊಳಕೆ ಮೂಡಿ, ಚಿಗುರಿ, ಟಿಸಲುಗಳೊಡೆದು, ಹೂಬಿಟ್ಟು, ಹಣ್ಣುಗಳಿಂದ ತುಂಬಿರಲು – ಆ ಮನೋಹರೋದ್ಯಾನಕ್ಕೆ ಉಪರಿಚರ ರಾಜನು ಐನೂರು ಮಂದಿ ಅರಸಿಯರನ್ನೂ

ರಸಿಯರ್ಕಳುಮಣುಗರ್ಕಳುಂಬೆರಸು ಪೋಗಿ ಮಹಾವಿಭೂತಿಯಿಂ ವನಕ್ರೀಡೆಯಂ ಪಿರಿದು ಬೇಗಮಾಡಿ ಬೞಕ್ಕಾ ನಂದನವನದೊಳಗಣ ಸುದರ್ಶನಮೆಂಬ ಮಣಿಕುಟ್ಟಿಮಮಪ್ಪ ಬೊಡ್ಡಣ ಬಾವಿಯೊಳ್ ಕರ್ಪೂರ ಕಾಳಾಗರು ತುರುಷ್ಕ ಕುಂಕುಮ ಚಂದನಾದಿ ಸುಗಂಧದ್ರವ್ಯಂಗಳಿಂ ಬೆರಸೆ ಪಟ್ಟುದಱೊಳ್ ಮತ್ತಂ ನೀಲೋತ್ಪಲ ಕುವಳಯಂ ಮೊದಲಾಗೊಡೆಯ ನಾನಾಪ್ರಕಾರದ ಪುಷ್ಪಜಾತಿಗಳಿಂದಂ ಸಂಛನ್ನಮಪ್ಪುದಱೊಳ್ ಚಕ್ರವಾಕ ಬಕ ಬಳಾಕ ಹಂಸ ಮಂಡೂಕ ಜೀವಂ ಜೀವಕ ಚಕೋರಾದಿ ಜಲಚರ ಹಂಗವಿ ಸಮೂಹಂಗಳನೊಡೆಯದಱೊಳ್ ನಾಲ್ವರುಂ ಮಹಾದೇವಿಯರ್ ವೆರಸೊಂದೊರ್ವರಂ ನಾನಾಪ್ರಕಾರದ ಯಂತ್ರಂಗಳಿಂದಂ ಜೀರ್ಕೊಳವಿಗಳಿಂದಂ ತಳಿಯುತ್ತಂ ನೀರ್ಗಳಂ ಸೂಸುತ್ತಂ ಜಲಕ್ರೀಡೆಯಂ ಮನಕ್ಕೆ ವಂದರಸಿಯರ್ಕಳೊಡನೆ ನೀಡುಂ ಬೇಗಮಾಡುತ್ತಿರ್ಪನ್ನೆಗಂ ಮತ್ತಿತ್ತ ವಿಜಯಾರ್ಧಪರ್ವತದ ಉತ್ತರಶ್ರೇಣಿಯೊಳಳಕಾಪುರಮೆಂಬುದು ಪೊೞಲದನಾಳ್ವೊಂ ವಜ್ರದಾಡನೆಂಬ ವಿದ್ಯಾಧರನನೇಕ ವಿದ್ಯಾಬಲಕರ್ವಿತನಾತನ ಮಹಾದೇವಿ ಮದನವೇಗೆಯೆಂಬೊಳಂತವರಿರ್ವರುಮೊಂದು ದಿವಸಂ ರಮ್ಯ ಪ್ರದೇಶಂಗಳೊಳ್ ಕ್ರೀಡಿಸಲ್ವೇಡಿ ಭೌಮವಿಹಾರಕ್ಕೆಂದು ವಿಚಿತ್ರಮಾಗುತ್ತಿರ್ದ ವಿಮಾನಮನೇಱಯಾಕಾಶಪಥದೊಳ್ ಪೋಗುತ್ತಿರ್ದವರ್ಗಳ್ ದೇವಸಮಾನರಪ್ಪ ಸಾಮಂತ ಮಹಾಸಾಮಂತರ್ಕಳಿಂದಂ ದೇವಗಣಿಕೆಯರಪ್ಸರೆಯರ್ಕಳಂ ಪೋಲ್ವಯ್ನೂರ್ವರರಸಿಯರ್ಕಳಿಂದಂ ಪೆಂಡವಾಸದೆಳವೆಂಡಿರಿಂದಂ ಪರಿವಾರ ಜನಂಗಳಿಂದಮಿಂತು ದಿವ್ಯಮಪ್ಪ ಸಭೆಯಿಂದಂ ಪರಿವೇಷ್ಟಿತನಾಗಿ ಪಟುಪಟಹ ಪಣವ ತುಣವ ಭಂಭಾ ಮರ್ದಳ ಝಲ್ಲರಿ ಮುಕುಂದ ಶಂಖ ವಂಶ ತಾಳ ಭೇರೀ ಮೃದಂಗ ವೀಣಾ ಕಹಳಾದಿ ನಾನಾಪ್ರಕಾರದ

ಮಕ್ಕಳನ್ನೂ ಕೂಡಿಕೊಂಡು ಹೋದನು. ಅಲ್ಲಿ ಮಹಾವೈಭವದಿಂದ ಬಹಳ ಹೊತ್ತಿನವರೆಗೆ ವನಕ್ರೀಡೆಯನ್ನು ಆಡಿದನು. ಆಮೇಲೆ, ತನ್ನ ನಾಲ್ವರು ರಾಣಿಯನ್ನು ಕೂಡಿಕೊಂಡು ಆ ನಂದನವನದಲ್ಲಿರುವ ಸುದರ್ಶನವೆಂಬ ಕೊಳಕ್ಕೆ ಜಲಕ್ರೀಡೆಗೆ ಹೋದನು. ಆ ಕೊಳವು ರತ್ನಖಚಿತವಾದ ನೆಲಗಟ್ಟಿನಿಂದ ಕೂಡಿದ್ದಿತು. ಕರ್ಪೂರ, ಕಾಳಾಗರು, ಲೋಬಾನ, ಕುಂಕುಮ, ಶ್ರೀಗಂಧ ಮುಂತಾದ ಸುವಾಸನೆಯ ವಸ್ತುಗಳಿಂದ ಮಿಶ್ರಿತವಾಗಿದ್ದಿತು. ನೀಲೋತ್ಪಲ, ಕನ್ನೈದಿಲೆ ಮುಂತಾಗಿ ಉಳ್ಳ ಹಲವಾರು ವಿಧದ ಯಂತ್ರಗಳಿಂದಲೂ ಪಿಚಕಾರಿಗಳಿಂದಲೂ ಪರಸ್ಪರವಾಗಿ ನೀರನ್ನು ಚಿಮುಕಿಸುತ್ತಲೂ ನೀರನ್ನು ಚೆಲ್ಲುತ್ತಲೂ ಬಹಳ ಹೊತ್ತಿನವರೆಗೆ ಜಲಕ್ರೀಡೆಯನ್ನು ಆಡುತ್ತಿದ್ದನು. ಈ ರೀತಿಯಾಗಿ ಆಡುತ್ತಿದ್ದಾಗ ಮುಂದಿನ ಘಟನೆ ನಡೆಯಿತು. ಇತ್ತ ವಿಜಯಾರ್ಧಪರ್ವತದ ಬಡಗಣ ಸಾಲಿನಲ್ಲಿ ಅಳಕಾಪುರವೆಂಬ ಪಟ್ಟಣವನ್ನು ವಜ್ರದಾಡನೆಂಬ ವಿದ್ಯಾಧರನು ಆಳುತ್ತಿದ್ದನು. ಅವನು ತನಗೆ ಅನೇಕ ವಿದ್ಯೆಗಳ ಸಾಮರ್ಥ್ಯವಿದೆಯೆಂದು ಗರ್ವಗೊಂಡಿದ್ದನು. ಅವನ ರಾಣಿ ಮದನವೇಗೆಯೆಂಬವಳು. ಅವರಿಬ್ಬರೂ ಒಂದು ದಿವಸ ಮನೋಹರವಾದ ಪ್ರದೇಶಗಳಲ್ಲಿ ಆಡಬೇಕೆಂದು ಭೂಮಿಯ ಸಂಚಾರಕ್ಕಾಗಿ ಆಶ್ಚರ್ಯಕರವಾಗಿರುವಂತಹ ಒಂದು ವಿಮಾನದಲ್ಲಿ ಕುಳಿತು ಆಕಾಶಮಾರ್ಗದಲ್ಲಿ ಹೋಗುತ್ತಿದ್ದರು. ಅವರಿಬ್ಬರೂ ಉಪರಿಚರನು ಜಲಕ್ರೀಡೆಯಾಡುವುದನ್ನು ಕಂಡರು. ಉಪರಿಚರನು ದೇವತೆಗಳಂತಿರುವ ಸಾಮಂತ – ಮಹಾಸಾಮಂತರಿಂದಲೂ ದೇವನರ್ತಕಿಯರನ್ನು ಹೋಲುವ ಐನೂರು ರಾಣಿಯರಿಂದಲೂ ಅಂತಃಪುರದ ಕೋಮಲೆಯರಿಂದಲೂ ಪರಿವಾರದವರಿಂದಲೂ ಇಂತಹ ದಿವ್ಯವಾದ ಸಭೆಯಿಂದ ಆವೃತನಾಗಿದ್ದನು. ಸಮರ್ಥವಾದ ಪಟಹ, ಪಣವ, ತುಣವ, ಭಂಭಾ, ಮದ್ದಳೆ, ಝಲ್ಲರಿ, ಮುಕುಂದ, ಶಂಖ ಕೊಳಲು, ತಾಳ, ಭೇರಿ,

ತೂರ್ಯಧ್ವನಿಗಳ್ ದೇವದುಂದುಭಿ ಮೊೞಗುವಂತೆ ಭೋರ್ಗರೆದು ಮೊೞಗಿ ಮಹಾವಿಭೂತಿಯಿಂದಂ ಜಲಕ್ರೀಡೆಯನಾಡುತ್ತಿರ್ಪುಪರಿಚರ ಮಹಾನೃಪತಿಯನಿರ್ವರುಂ ಕಂಡು ವಿಮಾನಮಂ ನಿಱಸಿ ನೀಡುಂ ಬೇಗಂ ನೋಡಿ ಮದನವೇಗೆಯಿಂತೆಂದಳ್ ನಾಮಾಕಾಶದೊಳ್ ಕಾಗೆಗಳಂತಿರೆ ಪಾಱುವನಿತಲ್ಲದೆ ನಮಗಿನಿತು ವಿಭವಮುಮೈಶ್ಯರ್ಯಮುಂಟೆ ಶ್ರೀಯೊಳಂ ರೂಪಿನೊಳಂ ವಿಭವದೊಳಂ ನಾನಾಪ್ರಕಾರದ ವಿನೋದಂಗಳಿಂದಮುಪರಿಚರ ಮಹಾರಾಜನಿಂದಗ್ಗಳಂ ಪೆಱರಾರುಮಿಲ್ಲಮೀ ಸಂಸಾರದೊಳ್ ಬರ್ದ ಬಾೞನೀತನೆ ಬರ್ದನೆಂದು ಪೊಗೞ್ದೊಡೆ ವಜ್ರದಾಡಂ ಕೇಳ್ದು ಮನದೊಳ್ ಮುಳಿದು ಪುರುಡಿಸಿ ತನ್ನ ಪೊೞಲ್ಗೆವೋಗಿ ಮದನವೇಗೆಯನಲ್ಲಿಟ್ಟು ತಾನೊರ್ವನೆ ವಿಮಾನಮನೇಱ ತುರಿಪದಿಂ ಬಂದು ಜಲಕ್ರೀಡೆಯನಾಡುತ್ತಿರ್ಪುಪರಿಚರ ಮಹಾನೃಪತಿಯ ಮೇಗೆ ವಿದ್ಯೆಯಿಂದಂ ವಿಗುರ್ವಿಸಿ ಪಿರಿದೊಂದು ಶಿಲೆಯನೆತ್ತಿಕೊಂಡು ಬಂದು ಮಣಿಕುಟ್ಟಿಮಮಪ್ಪ ಸುದರ್ಶನಮೆಂಬ ಬಾವಿಯ ಬಾಗಿಲೆಲ್ಲಮಂ ನಿಶ್ಛಿದ್ರಮಾಗಿ ಮುಚ್ಚಿ ಕವಿದಿಕ್ಕಿ ಪೋದಂ ಪೋದೊಡೆ ಪದ್ಮಾವತಿ ಮೊದಲಾಗೊಡೆಯ ನಾಲ್ವರ್ ಮಹಾದೇವಿಯರುಂ ಮೋಹಿಸದ ಬುದ್ಧಿಚಿiನೊಡೆಯರಗಮ ಸಮಗಯಗ್ದೃಷ್ಟಿಗಳ್ ಚತುರ್ವಿಧಮಪ್ಪಾಹಾರಕ್ಕಂ ಶರೀರಕ್ಕಂ ಜಾವಜ್ಜೀವಂ ನಿವೃತ್ತಿಗೆಯ್ದು ಪಂಚನಮಸ್ಕಾರಮನುಚ್ಚಾರಿಸುತ್ತಂ ದೇವರಂ ಜಾನಿಸುತ್ತಂ ದರ್ಶನ ಜ್ಞಾನಚಾರಿತ್ರಂಗಳನಾರಾಸಿ ಮುಡಿಪಿ ಸೌಧರ್ಮಕಲ್ಪದೊಳ್

ಮೃದಂಗ, ವೀಣೆ, ತುತ್ತೂರಿ – ಮುಂತಾದ ಹಲವಾರು ವಿಧದ ವಾದ್ಯಧ್ವನಿಗಳು ದೇವ ಲೋಕದ ದುಂದುಭಿವಾದ್ಯ ಶಬ್ದಮಾಡುವಂತೆ ಭೋರೆಂದು ಶಬ್ದಮಾಡುತ್ತಿರಲು ಮಹಾವೈಭವದಿಂದ ಜಗಕ್ರೀಡೆಯಾಡುತ್ತಿದ್ದನು. ಅವನನ್ನು ಕಂಡು ವಜ್ರದಾಡನೂ ಮದನವೇಗೆಯೂ ವಿಮಾನವನ್ನು ನಿಲ್ಲಿಸಿ ಬಹಳ ಹೊತ್ತು ನೋಡಿದರು. ಮದನವೇಗೆ ಹೀಗೆಂದಳು – “ನಾವು ಆಕಾಶದಲ್ಲಿ ಕಾಗೆಗಳ ಹಾಗೆ ಹಾರಾಡುವಷ್ಟಲ್ಲದೆ, ನಮಗೆ ಇವರಷ್ಟು ವೈಭವವವೂ ಐಶ್ವರ್ಯವೂ ಇದೆಯೆ ? ಸಂಪತ್ತಿನಲ್ಲಿ ಸೌಂದರ್ಯದಲ್ಲಿ ವೈಭವದಲ್ಲಿ ಹಲವಾರು ರೀತಿಯ ವಿನೋದಗಳಲ್ಲಿ ಉಪರಿಚರ ಮಹಾರಾಜನಿಂದ ಶ್ರೇಷ್ಠನು ಬೇರೆ ಯಾರೂ ಇಲ್ಲ. ಈ ಸಂಸಾರದಲ್ಲಿದ್ದು ಬದುಕಲು ತಕ್ಕುದಾದ ಬಾಳನ್ನು ಬದುಕಿದವನು ಈತನೆ* – ಹೀಗೆ ಅವಳು ಹೊಗಳಿದಳು. ಇದನ್ನು ವಜ್ರದಾಡನು ಕೇಳಿ, ಮನಸ್ಸಿನಲ್ಲಿ ಕೋಪ ಮತ್ಸರಗಳನ್ನು ತಾಳಿ ತನ್ನ ಪಟ್ಟಣಕ್ಕೆ ತೆರಳಿ, ಮದನವೇಗೆಯನ್ನು ಅಲ್ಲಿ ನಿಲ್ಲಿಸಿದನು. ತಾನೊಬ್ಬನೇ ವಿಮಾನದಲ್ಲಿ ಕುಳಿತನು. ತ್ವರೆಯಾಗಿ ಒಂದು, ಜಲಕ್ರೀಡೆಯನ್ನಾಡುತ್ತದ್ದ ಉಪರಿಚರ ಮಹಾರಾಜನ ಮೇಲೆ, ತನ್ನ ಮಾಯಾವಿದ್ಯೆಯನ್ನ ಪ್ರಯೋಗಿಸಿದನು. ದೊಡ್ಡದೊಂದು ಬಂಡೆಕಲ್ಲನ್ನು ಎತ್ತಿಕೊಂಡು ಬಂದು ರತ್ನದ ನೆಲಗಟ್ಟುಳ್ಳ ಸುದರ್ಶನವೆಂಬ ಕೊಳದ ಬಾಗಿಲುಗಳೆಲ್ಲವನ್ನೂ ಎಲ್ಲಿಯೂ ರಂಧ್ರವುಳಿಯದ ಹಾಗೆ ಮುಚ್ಚಿ ಕವಿಯುವಂತೆ ಇಟ್ಟುಹೋದನು. ಅವನು ಹೋಗಲು, ಪದ್ಮಾವತಿ ಮೊದಲಾಗಿರುವ ನಾಲ್ಕು ಮಂದಿ ಮಹಾರಾಣಿಯರು ಯಾವ ಆಸೆಯನ್ನೂ ಮನಸ್ಸಿನಲ್ಲಿಡದೆ ಸಮ್ಯಕ್ದೃಷ್ಟಿಯನ್ನು ಹೊಂದಿದವರಾಗಿ ಜೀವವಿರುವಷ್ಟು ಕಾಲವು ಭಕ್ತ, ಭೋಜ್ಯ, ಚೋಷ್ಯ, ಲೇಹ್ಯ – ಎಂಬ ನಾಲ್ಕು ವಿಧದ ಆಹಾರಕ್ಕೂ ಶರೀರಕ್ಕೂ ನಿವೃತ್ತಿಯನ್ನು ಮಾಡಿ, ಐದು ವಿಧದ ನಮಸ್ಕಾರದ ಮಂತ್ರಗಳನ್ನು ಉಚ್ಚಾರಣೆ ಮಾಡುತ್ತ, ದೇವರನ್ನು ಧ್ಯಾನ ಮಾಡುತ್ತ, ಸಮ್ಯಗ್ದರ್ಶನ, ಸಮ್ಯಗ್ಜ್ಞಾನ, ಸಮ್ಯಗ್ ಚಾರಿತ್ರಗಳನ್ನು ಸರಿಯಾಗಿ ನಡೆಸಿ ದೇಹತ್ಯಾಗ

ಸ್ವಸ್ತಿಕಾವರ್ತಮೆಂಬ ವಿಮಾನದೊಳೊಂದು ಸಾಗರೋಪ ಮಾಯುಷ್ಯಮನೊಡೆಯರ್ ಸಾಮಾನಿಕದೇವರಾಗಿ ನಾಲ್ವರುಂ ಪುಟ್ಟಿದರ್ ಮತ್ತುಪರಿಚರನಪ್ಪರಸಂ ಮಿಥ್ಯಾದೃಷ್ಟಿಯಪ್ಪುದಱಂ ತನ್ನುದ್ಯಾನವನದೊಳ್ ರಾಜ್ಯವಿಭೂತಿಯೊಳಾದಮಾನುಂ ಮೋಹಿಸಿದ ಬುದ್ಧಿಯನೊಡೆಯನಾರ್ತಧ್ಯಾನದಿಂ ಸತ್ತು ತನ್ನ ಮನೋಹರೋದ್ಯಾನವನದೊಳ್ ಪೆರ್ವಾವಾಗಿ ಪುಟ್ಟಿದಂ ಮತ್ತೆರಡನೆಯ ದಿವಸದಂದು ಸಾಮಂತ ಮಹಾಸಾಮಂತರ್ಕಳುಂ ಪರಿವಾರಮುಂ ನೆರೆದು ಅನಂತವೀರ್ಯನೆಂಬ ಷಿರಿಯ ಮಗಂಗೆ ರಾಜ್ಯಪ್ಪಟಂಗಟ್ಟಿದರ್ ಮೂಱನೆಯ ದಿವಸದಂದು ಸಾರಸ್ವತರೆಂಬಾಚಾರ್ಯರವಜ್ಞಾನಿಗಳಯ್ನೂರ್ವರ್ ಋಷಿಯರ್ವೆರಸು ಗ್ರಾಮನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತಂ ಆ ಪೊೞಲ್ಗೆವಂದು ಮನೋಹರವೆಂಬ ನಂದನವನದೊಳಗಣ ಸಟಿಕಶಿಳಾತಳದ ಮೇಗಿರ್ದೊರಂ ಋಷಿನಿವೇದಕಂ ಕಂಡು ಬಂದನಂತವೀರ್ಯ ನೃಪತಿಗೆ ಪೇೞ್ದೊಡಾತನುಂ ಸಪರಿವಾರಂ ಭಟಾರರಲ್ಲಿಗೆ ವಂದನಾಭಕ್ತಿಗೆ ವೋಗಿ ಬಲಗೊಂಡು ಗುರುಭಕ್ತಿಗೆಯ್ದು ವಂದಿಸಿಯುೞದ ರಿಸಿಯರೆಲ್ಲರುಮಂ ಗುರುಪರಿವಿಡಿಯಿಂದಂ ವಂದಿಸಿ ಪಿರಿದು ಬೇಗಂ ಧರ್ಮಮಂ ಕೇಳ್ದು ಬೞಕಿಂತೆಂದು ಬೆಸಗೊಂಡಂ ಭಟಾರಾ ಎಮ್ಮ ತಂದೆಗಂ ತಾಯ್ವಿರ್ಕಳ್ಗಮಾಕಸ್ಮಿಕಮೊರ್ಮೊದಲನಿಬರ್ಗಮೇ ಕಾರಣಂ ಸಾವಾದುದಾರ್ ಕೊಂದರೆಂದು

ಮಾಡಿದರು. ಅವರು ಸೌಧರ್ಮ ಎಂಬ ಸ್ವರ್ಗದಲ್ಲಿ ಏಳು ಉಪ್ಪರಿಗೆಗಳುಳ್ಳ ಅರಮನೆಯಲ್ಲಿ ಒಂದು ಸಾಗರಕ್ಕೆ ಸಮಾನವಾಗುವ ಆಯಷ್ಯವುಳ್ಳವರಾದ ಸಾಮನಿಕದೇವತೆಗಳಾಗಿ ಆ ನಾಲ್ವರೂ ಹುಟ್ಟಿದರು. ಅನಂತರ ಆ ಉಪರಿಚರ ರಾಜನು ಮಿಥ್ಯಾದೃಷ್ಟಿಯುಳ್ಳವನಾದುದರಿಂದ ತನ್ನ ಉದ್ಯಾನವನದಲ್ಲಿ ಹುಟ್ಟಬೇಕಾಯಿತು. ಅವನು ರಾಜ್ಯೈಶ್ವರ್ಯದಲ್ಲಿ ಅತ್ಯಂತ ಮೋಹಗೊಂಡ ಬುದ್ಧಿಯವನಾಗಿ ಆರ್ತಧ್ಯಾನದಿಂದ ಸತ್ತು ತನ್ನ ಮನೋಹರವಾದ ಉದ್ಯಾನವನದಲ್ಲಿ ಒಂದು ಹೆಬ್ಬಾವಾಗಿ ಜನಿಸಿದನು. ಆಮೇಲೆ ಎರಡನೆಯ ದಿವಸದಂದು ಸಾಮಂತರಾಜರೂ ಮಹಾಸಾಮಂತರೂ ಪರಿವಾರದವರೂ ಒಟ್ಟಾಗಿ ಉಪರಿಚರನ ಹಿರಿಯ ಮಗನಾದ ಅನಂತವೀರ್ಯನಿಗೆ ರಾಜ್ಯಪಟ್ಟವನ್ನು ಕಟ್ಟಿದರು. ಮೂರನೆಯ ದಿವಸದಂದು ಅವ ಜ್ಞಾನಿಗಳಾದ ಸಾರಸ್ವತರೆಂಬ ಆಚಾರ್ಯರು ಐನೂರು ಮಂದಿ ಋಷಿಗಳನ್ನು ಕೂಡಿಕೊಂಡು ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳೆಂಬ ಭೂಭಾಗಗಳಲ್ಲಿ ಸಂಚಾರ ಮಾಡುತ್ತ ಆ ಪಟ್ಟಣಕ್ಕೆ ಬಂದರು. ಅಲ್ಲಿ ಮನೋಹರ ಎಂಬ ಉದ್ಯಾನದೊಳಗಿರತಕ್ಕ ಚಂದ್ರಕಾಂತಶಿಲೆಯ ಮೇಲೆ ಕುಳಿತಿದ್ದರು. ಆ ಮೇಳೆಗೆ, ಋಷಿಗಳ ಆಗಮನವನ್ನು ವಿಜ್ಞಾಪಿಸತಕ್ಕ ಸೇವಕನು ಕಂಡು, ಅನಂತವೀರ್ಯನ ಬಳಿಗೆ ಬಂದು ತಿಳಿಸಿದನು. ಅನಂತವೀರ್ಯನು ಪರಿವಾರ ಸಹಿತನಾಗಿ ಋಷಿಗಳ ಬಳಿಗೆ ವಂದನಾಭಕ್ತಿಯನ್ನು ಸಲ್ಲಿಸುವುದಕ್ಕಾಗಿ ಹೋದನು. ಅವರಿಗೆ ಪ್ರದಕ್ಷಿಣೆ ಮಾಡಿ ಗುರುಭಕ್ತಿಯಿಂದ ನಮಸ್ಕರಿಸಿ, ಬಹಳ ಸಮಯದವರೆಗೆ ಧರ್ಮಶ್ರವಣವನ್ನು ಮಾಡಿದನಂತರ ಹೀಗೆ ಪ್ರಶ್ನಿಸಿದನು – “ಪೂಜ್ಯರೇ, ನನ್ನ ತಂದೆಗೂ ತಾಯಂದಿರಿಗೂ ಆಕಸ್ಮಾತ್ತಾಗಿ ಅವರೆಲ್ಲರಿಗೂ ಒಟ್ಟಿಗೇ ಮರಣವಾಗಲು ಕಾರಣವೇನು ? ಯಾರು ಕೊಂದರು ? ಎಂದು ಕೇಳಿದನು. ಆಗ ಸಾರಸ್ವತಾಚಾರ್ಯರು ಈ ರೀತಿಯಾಗಿ ಹೇಳಿದರು –

ಬೆಸಗೊಂಡೊಡೆ ಭಟಾರರಿಂತೆಂದು ಪೇೞ್ದರ್ ಸುದರ್ಶನಮೆಂಬ ಬೊಡ್ಡಣ ಬಾವಿಯೊಳ್ ನಿಮ್ಮ ತಂದೆಯುಂ ನಾಲ್ವರ್ ತಾಯ್ವಿರ್ಕಳುಂ ಜಳಕ್ರೀಡೆಯನಾಡುತ್ತಿರ್ಪನ್ನೆಗಂ ಭೌಮವಿಹಾರಾರ್ಥಂ ವಿಮಾನಮನೇಱ ಪೋಗುತ್ತಿರ್ದ ವಜ್ರದಾಡನೆಂಬ ವಿದ್ಯಾಧರನುಮಾತನ ಮಹಾದೇವಿ ಮದನವೇಗೆಯೆಂಬೊಳಾಯಿರ್ವರುಂ ಕಂಡು ನಿಮ್ಮ ತಂದೆಯ ವಿಭವಮಂ ಮದನವೇಗೆ ಪೊಗೞ್ದೊಡೆ ವಜ್ರದಾಡಂ ಪುರುಡು ಪುಟ್ಟಿ ಬಾವಿಯ ಬಾಗಿಲಂ ನಿಶ್ಛಿದ್ರಮಾಗಿ ಮುಚ್ಛಿ ಮೇಗೆ ಪಿರಿದೊಂದು ಶಿಲೆಯನಿಕ್ಕಿ ಪೋದೊಡೀ ಪಾಂಗಿನೊಳವರ್ಗಳನಿಬರ್ಗಂ ಮೃತ್ಯುವಾದುದೆಂದು ಪೇೞ್ದೊಡೆ ಮತ್ತಮವರೆಲ್ಲಿ ಪುಟ್ಟಿದರೆಂದು ಬೆಸಗೊಂಡೊಡೆ ಭಟಾರರಿಂತೆಂದರ್ ನಿಮ್ಮ ತಾಯ್ವಿರ್ಕಳ್ ಬ್ರತಮಂ ಪರಿಪಾಲಿಸಿ ಸಾವ ಕಾಲದೊಳಾಹಾರಕ್ಕಂ ಶರೀರಕ್ಕಂ ಜಾವಜ್ಜೀವಂ ನಿವೃತ್ತಿಗೆಯ್ದು ಸಮಾಮರಣದಿಂದಂ ಮುಡಿಪಿ ಸೌಧರ್ಮಕಲ್ಪದೊಳ್ ಸ್ವಸ್ತಿಕಾವರ್ತಮೆಂಬ ವಿಮಾನದೊಳೊಂದು ಸಾಗರೋಪಮಾಯುಷ್ಯ ಮನೊಡೆಯರ್ ಕಾಂತನುಂ ಸುಕಾಂತನುಂ ನಂದಣುಂ ಸುನಂದನುಮೆಂಬ ದೇವರ್ಕಳಾಗಿ ಪುಟ್ಟಿದವರ್ಗಳ್ ನಿಮ್ಮುಮಂ ನಿಮ್ಮ ತಂದೆಯುಮಂ ಪ್ರತಿಬೋಸಲ್ಕೀಗಳೆ ಬಂದಪ್ಪರೆಂದು ಪೇೞ್ದು ಮತ್ತೆ ನಿಮ್ಮ ತಂದೆಯುಂ ತನ್ನ ಪೆಂಡಿರ್ ಮಕ್ಕಳ್ ಪರಿವಾರಂ ಕಸವರಮೆಂದಿವಱೊಳ್ ಮೋಹಿಸಿದ ಬುದ್ಧಿಯನೊಡೆಯನಾಗಿ ಅಲ್ಲಿಯ ನಂದನವನದೊಳಗಣ ಸರ್ಪಾಶ್ರಯಮೆಂಬ ಗುಹೆಯೊಳ್ ಮಹಾಕಾಯಂ ಪೆರ್ವಾವಾಗಿ ಪುಟ್ಟಿದನೆಂದೊಡೆ ಧರ್ಮಮಂ ಕೈಕೊಳ್ಗುಮೊ ಕೈಕೊಳ್ಳನೊ ಎಂದು

“ನಿಮ್ಮ ತಂದೆಯೂ ನಾಲ್ಕು ಮಂದಿ ತಾಯಿಯರೂ ‘ಸುದರ್ಶನ’ ಎಂಬ ಕೊಳದಲ್ಲಿ ನೀರಾಟವನ್ನು ಆಡುತ್ತಿದ್ದರು. ಆಗ ಭೂಮಿಯ ಸಂಚಾರಕ್ಕಾಗಿ ವಿಮಾನವನ್ನೇರಿ ಹೋಗುತ್ತಿದ್ದ ವಜ್ರದಾಡನೆಂಬ ವಿದ್ಯಾಧರನೂ ಅವನ ಮಹಾರಾಣಿ ಮದನವೇಗೆಯೂ ಇಬ್ಬರೂ ಕಂಡರು. ನಿಮ್ಮ ತಂದೆಯ ವೈಭವವನ್ನು ಮದನವೇಗೆ ಹೊಗಳಿದಳು. ಆಗ ವಜ್ರದಾಡನಿಗೆ ಅವರ ಮೇಲೆ ಅಸೂಯೆಯುಂಟಾಯಿತು. ಅವನು ಕೊಳದ ಬಾಗಿಲನ್ನು ರಂಧ್ರವುಳಿಯದಂತೆ ಮುಚ್ಚಿ, ಅದರ ಮೇಲೆ ದೊಡ್ಡದೊಂದು ಬಂಡೆಗಲ್ಲನ್ನು ಇಟ್ಟುಹೋದನು. ಈ ರೀತಿಯಾಗಿ ಅವವೆಲ್ಲರಿಗೂ ಮರಣವುಂಟಾಯಿತು. ಹೀಗೆ ಋಷಿಗಳು ಹೇಳಿದಾಗ ರಾಜನು “ಆ ಮೇಲೆ ಅವರೆಲ್ಲ ಎಲ್ಲಿ ಜನಿಸಿದರು?* ಎಂದು ಕೇಳಿದನು. ಆಗ ಋಷಿಗಳು ಹೀಗೆ ಹೇಳಿದರು – “ನಿಮ್ಮ ತಾಯಂದಿರು ಸಾಯುವ ಕಾಲದಲ್ಲಿ ವ್ರತವನ್ನು ಆಚರಿಸಿದ್ದಾರೆ. ಪ್ರಾಣವಿರುವರೆಗೂ ಆಹಾರಕ್ಕೂ ಲಕ್ಷ ಕೊಡದೆ ಇದ್ದರು. ಸಮಾಮರಣದಿಂದ ದೇಹತ್ಯಾಗ ಮಾಡಿದ್ದಾರೆ. ಆದುದರಿಂದ ಸೌಧರ್ಮವೆಂಬ ಸ್ವರ್ಗದಲ್ಲಿ ಒಂದು ಸಾಗರದಷ್ಟು ಪರಿಮಾಣವುಳ್ಳವರಾಗಿ ‘ಸ್ವಸ್ತಿಕಾವರ್ತ’ ಎಂಬ ಏಳುಪ್ಪರಿಗೆಯ ಅರಮನೆಯಲ್ಲಿ ಕಾಂತ, ಸುಕಾಂತ, ನಂದ, ಸುನಂದ – ಎಂಬ ದೇವತೆಗಳಾಗಿ ಹುಟ್ಟಿದ್ದಾರೆ. ಅವರು ಈಗ ತಾನೆ ನಿಮಗೂ ನಿಮ್ಮ ತಂದೆಗೂ ಎಚ್ಚರಿಕೆ ಹೇಳುವುದಕ್ಕಾಗಿ ಬರುತ್ತಾರೆ. ಅದಲ್ಲದೆ ನಿಮ್ಮ ತಂದೆ ತನ್ನ ಹೆಂಡಿರು, ಮಕ್ಕಳು, ಪರಿವಾರ, ಚಿನ್ನ (ಸಂಪತ್ತು) ಎಂಬೀ ವಿಷಯಗಳಲ್ಲಿ ಮೋಹಗೊಂಡ ಬುದ್ಧಿಯುಳ್ಳವನಾಗಿ ಅದೇ ಸ್ಥಳದ ನಂದನೋದ್ಯಾನದಲ್ಲಿರುವ ಸರ್ಪಾಶ್ರಯವೆಂಬ ಗುಹೆಯಲ್ಲಿ ದೊಡ್ಡದಾದ ದೇಹವುಳ್ಳ ಹೆಬ್ಬಾವಾಗಿ ಹುಟ್ಟಿದ್ದಾನೆ* – – ಎಂದು ಸಾರಸ್ವತಾಚಾರ್ಯರು ಹೇಳಿದರು. ಆಗ ಅನಂತವೀರ್ಯನು – “ಅವನು ಧರ್ಮವನ್ನು ಸ್ವೀಕರಿಸುವನೋ? ಸ್ವೀಕರಿಸನೊ?* ಎಂದು

ಬೆಸಗೊಂಡೊಡೆ ಭಟಾರರಿಂತೆಂದರ್ ನೀನ್ ಪೇೞೆ ಧರ್ಮಮಂ ಕೈಕೊಳ್ಗುಮೆಂದೊಡೆ ತಮ್ಮಂದಿರುಂ ಪರಿವಾರಮುಂಗಬೆರಸು ಪೋಗಿ ಗುಹೆಯ ಬಾಗಿಲೊಳಿರ್ದಿಂತೆಂದನೆಲೆಯುಪರಿಚರ ಮಹಾರಾಜಾ ಪೆರ್ವಾವಾಗಿ ಪುಟ್ಟಿಯುಮಿಂತಪ್ಪವಸ್ಥೆಯೊಳಂ ಬಾೞ್ಕೆಯೊಳಂ ಇನ್ನುಂ ನಿನಗೞಯೆ ನೆನಗೆ ದೋಷ ಮಿಲ್ಲೇಕೆಂದೊಡೆ ಜೀವಂಗಳ ಸ್ವಭಾವಮಿಂತುಟು

ಶ್ಲೋಕ || ಯತ್ರ ಯತ್ರೋಪಪದ್ಯಂತೇ ಜೀವಾಃ ಕರ್ಮವಶಾನುಗಾಃ
ತತ್ರ ತತ್ರ ರತಿಂ ಯಾಂತಿ ಸ್ವೇನ ಸ್ವೇನೈವ ಕರ್ಮಣಾ

ಎಂಬುದು ತಮ್ಮ ಕರ್ಮವಶದಿಂ ಸಂಸಾರಿ ಜೀವಂಗಳೆಲ್ಲ ಪುಟ್ಟುಗುಮಲ್ಲಿಯಲ್ಲಿಯೞಯುಂ ಮೆಚ್ಚುಗೆಯುಮಕ್ಕುಂ ಮುನ್ನೆ ನೀನ್ ಕರುಮಾಡದೊಳ್ ಸಿಂಹಾಸನಮಸ್ತಕಸ್ಥಿತನಾಗಿ ಸಾಮಂತ ಮಹಾಸಾಮಂತ – ರ್ಕಳಿಂದಮಯ್ನೂರ್ವರರಸಿಯರ್ಕಳಿಂದಂ ಪೆಂಡವಾಸದಗ್ಗಳದ ಸೂಳೆಯರ್ಕಳಿಂದಂ ಪರಿವಾರದಿಂದಮಿಂತಪ್ಪ ದಿಬ್ಯಸಭೆಯಿಂದಂ ಪರಿವೇಷ್ಟಿತನಾಗಿ ಆಟಪಾಟ ವಿನೋದಂಗಳಿಂದಿರ್ಪಾತನಯ್ ಈಗಳ್ಪೆರ್ವಾವುಗಳೊಡನೆ ನೆರೆದಿರಮಾಯ್ತು ಮತ್ತೆ ದಿವ್ಯಮಪ್ಪ ಶಯ್ಯಾತಳದೊಳ್ ನಿದ್ರೆಗೆಯ್ವಾತನಯ್ ಈಗಳ್ ಪೆಟ್ಟೆಗಳುಂ ಕಿಱುಗಲ್ಗಳುಮೊತ್ತೆ ನಿದ್ರೆಗೆಯ್ವೆಯಾದಯ್ ಮತ್ತಮೃತೋಪಮಮಪ್ಪ ದಿಬ್ಯಾಹಾರ ಮನುಣ್ಬಾತನಯ್ ಈಗಳ್ ಕಪ್ಪೆಗಳುಮೆಸಡುಗಳುಮಿಲಿಗಳುಮೊಂತಿಗಳುಂ ಮೊದಲಾಗೊಡೆಯ ಜೀವರಾಶಿಗಳಂ ಕೊಂದು ತಿನ್ಬೆಯಾದಯ್ ಇನ್ನವಂ ತಿಂದು ನರಕಂಬುಗಲಾಟಿಸಿದಪ್ಪಯ್ ಎಂದು

ಕೇಳಿದನು. “ನೀನು ಹೇಳಿದರೆ ಧರ್ಮವನ್ನು ಸ್ವೀಕರಿಸುವನು* ಎಂದು ಋಷಿಗಳು ಹೇಳಲು, ಅನಂತವೀರ್ಯನು ತನ್ನ ತಮ್ಮಂದಿರನ್ನೂ ಪರಿವಾರವನ್ನೂ ಕೂಡಿಕೊಂಡು ಹೋಗಿ ಗುಹೆಯ ಬಾಗಿಲಲ್ಲಿ ಇದ್ದುಕೊಂಡು ಹೀಗೆಂದನು – “ಎಲೈ ಉಪರಿಚರ ಮಹಾರಾಜನೇ, ಹೆಬ್ಬಾವಾಗಿ ಹುಟ್ಟಿ ಈ ರೀತಿಯ ಅವಸ್ಥೆಯಲ್ಲಿಯೂ ಜೀವನದಲ್ಲಿಯೂ ಇನ್ನೂ ನಿನಗೆ ಇಷ್ಟವೇ? ನಿನಗೆ ಏನೂ ದೋಷವಿಲ್ಲ. ಏಕೆಂದರೆ ಜೀವಗಳ ಸ್ವಭಾವವೇ ಈ ರೀತಿಯದು – (ಕರ್ಮಕ್ಕೆ ವಶರಾಗಿ ಹೋಗತಕ್ಕ ಜೀವರು ಎಲ್ಲೆಲ್ಲಿ ಹುಟ್ಟುವರೋ ಅಲ್ಲಲ್ಲೇ ತಮ್ಮತಮ್ಮ ಕರ್ಮಗಳಿಂದ ಆಸಕ್ತಿಯನ್ನು ಹೊಂದುತ್ತಾರೆ. ತಮ್ಮ ಕರ್ಮವಶದಿಂದ ಸಂಸಾರಿಜೀವಿಗಳು ಎಲ್ಲಿ ಜನಿಸುತ್ತಾರೋ ಅಲ್ಲಲ್ಲಿ ಅವರಿಗೆ ಪ್ರೀತಿಯೂ ಮೆಚ್ಚುಗೆಯೂ ಆಗುವುದು. ಹಿಂದೆ ನೀನು ಅರಮನೆಯಲ್ಲಿ ಸಿಂಹಾಸನದ ಮೇಲೆ ಕುಳಿತುಕೊಂಡು ಸಾಮಂತ ಮಹಾ ಸಾಮಂತರಿಂದಲೂ ಐನೂರು ಮಂದಿ ರಾಣಿಯರಿಂದಲೂ ಅಂತಃಪುರದ ಶ್ರೇಷ್ಠರಾದ ಸ್ತ್ರೀಯರಿಂದಲೂ ಪರಿವಾರದವರಿಂದಲೂ ಇಂತಹ ದಿವ್ಯವಾದ ಸಭೆಯಿಂದಲೂ ಆವೃತನಾಗಿ ಆಟ – ಪಾಟ – ವಿನೋದಗಳಿಂದ ಇರತಕ್ಕವನಾಗಿದ್ದೆ. ಈಗ ಹೆಬ್ಬಾವುಗಳೊಡನೆ ಸೇರಿಕೊಂಡಿರುವ ಸ್ಥಿತಿ ಆಗಿಹೋಯಿತು ! ಅದಲ್ಲದೆ, ದಿವ್ಯವಾಗಿರುವ ಹಾಸಿಗೆಯ ಮೇಲೆ ನಿದ್ದೆಮಾಡುವವನಾಗಿದ್ದಿ ! ಈಗ ನೀನು ಮಣ್ಣಗಟ್ಟಿಗಳೂ ಸಣ್ಣ ಕಲ್ಲುಗಳೂ ದೇಹಕ್ಕೆ ಒತ್ತುತ್ತಿರುವಾಗ ನಿದ್ದೆಮಾಡುವುವನಾಗಿರುತ್ತಿ ! ಮಾತ್ರವಲ್ಲದೆ, ಅಮೃತಕ್ಕೆ ಸಮಾನವಾದ ದಿವ್ಯವಾಗಿರುವ ಆಹಾರವನ್ನು ಉಣ್ಣುತ್ತಿದ್ದವನಾಗಿದ್ದಿ, ಈಗ ಕಪ್ಪೆಗಳು, ಏಡಿ (ನಳಿ)ಗಳು, ಇಲಿಗಳು, ಓತಿಗಳು – ಮುಂತಾಗಿರತಕ್ಕ ಜೀವಿಗಳ ಸಮೂಹವನ್ನು ಕೊಂದು ತಿನ್ನುವವನಾಗಿದ್ದೀಯೆ! ಇಂತಹವನ್ನೆಲ್ಲ ತಿಂದು ನರಕಕ್ಕೆ ನುಗ್ಗಲು ಇಷ್ಟಪಡುತ್ತೀಯಾ? ಎಂದು ಹೇಳಲು ಆ ಹೆಬ್ಬಾವಿಗೆ ಜನ್ಮದ ನೆನಪು ಬಂತು. ಅದು

ಪೇೞೆ ಜಾತಿಸ್ಮರನಾಗಿ ಗುಹೆಯ ಬಾಗಿಲೊಳ್ ಬಂದಿರ್ದು ಧರ್ಮಮಂ ಕೇಳುತ್ತಿರ್ಪನ್ನೆಗಮಾ ಸೌಧರ್ಮಕಲ್ಪದೊಳ್ ಪುಟ್ಟಿರ್ದ ನಾಲ್ವರುಂ ದೇವರ್ಕಳ್ ತಮ್ಮ ಮುನ್ನಿನ ಪೆಣ್ಣ ರೂಪಂಗಳಂ ಕೈಕೊಂಡು ಬಂದು ಮುಂದೆ ನಿಂದಾಗಳ್ ಮಕ್ಕಳ್ ತಮ್ಮ ತಾಯ್ವಿರ್ಕಳ್ಗೆ ಕ್ಷೇಮಂಗುಡಲೆಂದು ಪೋದೊಡನ್ನೆಗಂ ಅವರ್ ಮುಟ್ಟದೆ ಮೇಗಣ್ಗೆ ನೆಗೆದಿರ್ದೊಡಿದೇನೆಂದ ಬೆಸಗೊಂಡೊಡವರ್ ವಜ್ರದಾಡಂ ಕೊಲೆ ಸತ್ತು ತಮ್ಮ ದೇವಗತಿಯೊಳ್ ಪುಟ್ಟಿದ ತೆಱನೆಲ್ಲಮಂ ಪೇೞ್ದು ಉಪರಿಚರ ಮಹಾನೃಪತಿಯಂ

ವೃತ ||ಏತತ್ಕ್ಷೇತ್ರಂ ಮದೀಯಂ ಗೃಹಮಿದಮಪರಂ ಮಾತೃಭಾರ್ಯಾಮಮೈತಾಃ
ಪುತ್ರೋಮೇಯಂ ಸುಕಾಂತ ಸ್ವಸೃ ದುಹಿತೃಜನೋ ಮಾನುಷೋ ಬಂಧುವರ್ಗಃ
ಅಶ್ವಾದಾಸಾ ಮನುಷ್ಯಾ ಮಮ ಪರಮಹಿತಾ ದ್ರವ್ಯಗಾವೋ ಮಹಿಷ್ಯಃ
ಇತ್ಯೇವಂ ಮೇ ಬ್ರುವಾಣೋ ನರಪಶುರನಿಶಂ ನಾಶಯತ್ಯಾತ್ಮಕಾರ್ಯಂ

ಆರ್ಯೆ || ಅರ್ಥೋ ಮೇ ಭಾರ್ಯಾ ಮೇ ಪುತ್ರೋ ಮೇ ಸ್ವಜನಬಂಧುವರ್ಗೋ ಮೇ
ಇತಿಮೇ ಮೇ ಕುರ್ವಾಣಂ ಪುರುಷಂ ಪಶುಂ ಹಂತಿ ಕಾಲವೃಕಃ

ಎಂದಿವರರ್ಥಮನಿಂತೆಂದು ಪೇೞ್ದೊಡೆ ಎನ್ನ ಮಾಡಮೆನ್ನ ಪೊೞಲೆನ್ನ ನಾಡೆನ್ನ ತಾಯೆನ್ನ ಪೆಂಡಿರೆನ್ನ ಮಕ್ಕಳೆನ್ನ ತಂಗೆವಿರೆನ್ನ ಮಾವಂದಿರೆನ್ನ ಮಾವಂದಿರೆನ್ನ ಬಂಧುವರ್ಗಮೆನ್ನಾನೆಗಳೆನ್ನ ಕುದುರೆಗಳೆನ್ನಮ್ಮೆಗಳೆನ್ನ ಪಶುಗಳೆನ್ನ

ಗುಹೆಯ ಬಾಗಿಲಿಗೆ ಬಂದು, ಅಲ್ಲಿದ್ದುಕೊಂಡು ಧರ್ಮವನ್ನು ಕೇಳುತ್ತಿದ್ದಿತು. ಅಷ್ಟರಲ್ಲಿ ಸೌಧರ್ಮವೆಂಬ ಸ್ವರ್ಗದಲ್ಲಿ ಹುಟ್ಟಿದ್ದ ನಾಲ್ಕು ಮಂದಿ ದೇವತೆಗಳು ತಮ್ಮ ಹಿಂದಿನ ಸ್ತ್ರೀರೂಪಗಳನ್ನು ಧರಿಸಿದೊಂಡು ಬಂದು ಎದುರಿಗೆ ನಿಂತರು. ಆಗ ಮಕ್ಕಳು ತಮ್ಮ ತಾಯಂದಿರಿರಿಗೆ ಕ್ಷೇಮವನ್ನು ಸಲ್ಲಿಸುವುದಕ್ಕೆಂದು ಅವರ ಸಮೀಪಕ್ಕೆ ಹೋದರು. ಆದರೆ, ಮುಟ್ಟದೆಯೆ ಆಕಾಶದ ಕಡೆಗೆ ಏರಿದರು. ಇದೇಕೆ ಹೀಗೆ? – ಎಂದು ಕೇಳಿದಾಗ ಅವರು ವಜ್ರದಾಡನು ತಮ್ಮನ್ನು ಕೊಂದುದರಿಂದ ಸತ್ತು ತಾವೆಲ್ಲರೂ ದೇವತೆಗಳಾಗಿ ಹುಟ್ಟಿದ ವೃತ್ತಾಂತವನ್ನೆಲ್ಲ ಹೇಳಿದರು. ಆಮೇಲೆ ಉಪರಿಚರ ಮಹಾರಾಜನೊಡನೆ ಹೀಗೆಂದರು – ಈ (ನೆಲ ನನ್ನದು. ಈ ಮನೆ ಬೇರೆಯವರದಲ್ಲ (ನನ್ನದೇ). ಈ ತಾಯಿ, ಹೆಂಡಿರು ನನ್ನವರು. ಈ ಮಗನು, ಈ ಸುಂದರಿಯರಾದ ಸೊಸೆಯರು, ಹೆಣ್ಣುಮಕ್ಕಳು, ಮನುಷ್ಯರು ನಂಟರ ಸಮುದಾಯ ನನ್ನವು – ಹೀಗೆ ನನ್ನವೆಂದು ಹೇಳಿಕೊಳ್ಳುವ ಮನುಷ್ಯರೂಪದ ಪ್ರಾಣಿ ಯಾವಾಗಲೂ ಆತ್ಮೋನ್ನತಿಯ ಕಾರ್ಯವನ್ನು ಕೆಡಿಸಿಕೊಳ್ಳುತ್ತಾನೆ.) ಐಶ್ವರ್ಯವು ನನಗೆ, ಹೆಂಡತಿ ನನಗೆ, ಮಗನೂ ನನಗೆ, ಸ್ವಜನರು ಬಂಧುವರ್ಗದವರು ನನಗೆ. ಈ ರೀತಿಯಾಗಿ ನನಗೆ ನನಗೆ (ಮೇ ಮೇ) ಎಂದು ಮಾಡಿಕೊಳ್ಳತಕ್ಕ ನರಜಂತುವನ್ನು (ಮನುಷ್ಯನೆಂಬ ಆಡನ್ನು) ಯಮನೆಂಬ ತೋಳನು ಕೊಲ್ಲುತ್ತದೆ.) ಹೀಗೆಂದು ಈ ಪದ್ಯಗಳ ಅರ್ಥವನ್ನು ಹೇಳಿದರು – “ನನ್ನ ಮನೆ, ನನ್ನ ಪಟ್ಟಣ, ನನ್ನ ನಾಡು, ನನ್ನ ತಾಯಿ, ನನ್ನ ಹೆಂಡತಿ, ನನ್ನ ಮಕ್ಕಳು, ನನ್ನ ತಂಗಿಯರು, ನನ್ನ ಮಾವಂದಿರು, ಬಂಧುವರ್ಗ, ಆನೆಗಳು, ಕುದುರೆಗಳು, ನನ್ನ ಎಮ್ಮೆಗಳು ಹಸುಗಳು, ನನ್ನ ಪರಿವಾರ, ನನ್ನ ಸೇವಕರು, ನನ್ನ

ಪರಿವಾರಮೆನ್ನ ತೊೞರೆನ್ನ ಮಾಣಿಕಭಂಡಾರಂ ಸುವರ್ಣಭಂಡಾರಂ ಪಟ್ಟಿಸಭಂಡಾರಮೆಂದಿವಱೊಳ್ ಮೋಹಿಸಿದ ಬುದ್ಧಿಯನೊಡೆಯನಾಗಿಯಾರ್ತಧ್ಯಾನದಿಂ ಸತ್ತು ಪೆರ್ವಾವಾಗಿ ಪುಟ್ಟಿರ್ದೊಡೀಗಳಾಮುಂ ಪೆಂಡಿರಾಗಿಯುಮಿನಿವಿರಿದು ಶ್ರೀಯುಂ ವಿಭವಮುಮನೆಯ್ದಿದೆಮೆಂದು ಪೇೞ್ದುಂ ತಮ್ಮ ದೇವತ್ವಮಂ ತೋಱಲ್ವೇಡಿ ಆಕಾಶಮೆಲ್ಲಂ ಚಿತ್ರಪಟಂಗೆದಱದಂತೆ ವಿಮಾನಂಗಳಿಂ ಸಂಛನ್ನಮಾಗಿ ವ್ಯಾಪಿಸೆ ಪರಿವಾರ ದೇವಿಯರ್ಕಳಿಂದಂ ದೇವರ್ಕಳಿಂದಂ ಗಣಿಕೆಯರ್ಕಳಿಂದಮಪ್ಸರೆಯರ್ಕಳಿಂದಂ ಪರಿವೇಷ್ಟಿತರಾಗಿ ನಾಲ್ವರುಂ ದೇವರ್ಕಳ್ ಘಂಟಾಜಾಳ ಮುಕ್ತಾಜಾಳ ಸಮನ್ವಿತಮಪ್ಪ ರತ್ನಮಯಮಾಗುತ್ತಿರ್ದ ವಿಚಿತ್ರಮಪ್ಪ ವಿಮಾನಂಗಳನೇಱ ದೇವಿಯರ್ಕಳ್ ಚಾಮರಮಿಕ್ಕೆಯಾಟಪಾಟವಿನೋದಂಗಳಿಂದಿಂತು ತಮ್ಮೈಶ್ವರ್ಯಮೆಲ್ಲಮಂ ತೋಱ ಇಂತೆಂದರ್ ಇದೆಲ್ಲಮೆಮಗೆ ಜೆನಧರ್ಮದ ಪರಮಸತ್ವದ ಪ್ರಸಾದದಿನಾದುದು ಮತ್ತುಪರಿಚರಮಹಾರಾಜಂ ಪುರುಷನಾಗಿಯುಂ ಮಹಾಸತ್ವಮ ನೊಡೆಯನಾಗಿಯುಂ ಮಿಥ್ಯಾತ್ವಂ ಕಾರಣಮಾಗಿಯಾರ್ತಧ್ಯಾನದಿಂ ಸತ್ತು ಪೆರ್ವಾವಾಗಿ ಪುಟ್ಟಿದನೆಂದು ಪೇೞ್ದು ಮಕ್ಕಳಂ ಪೆರ್ವಾವುಮಂ ಪ್ರತಿಬೋಸಿ ತಮ್ಮ ಸ್ವರ್ಗಲೋಕಕ್ಕೆ ವೋದರ್ ಮತ್ತೆ ಪೆರ್ವಾವೆನ್ನರಸಿಯರ್ಕಳ್ ದೇವರಾಗಿ ಪುಟ್ಟಿದರೆಂದಾದಮಾನುಂ ಸಂತೋಷಂಬಟ್ಟು ಪರಿಣಾಮದೊಳ್ ಕೂಡಿರ್ದುದಂ ಸಾರಸ್ವತಭಟಾರರಱದು ಋಷಿಸಮುದಾಯಂಬೆರಸು ಪೆರ್ವಾವಿರ್ದೆಡೆಗೆ ಪೋಗಿ ಇಂತೆಂದು ಧರ್ಮಮಂ ಪೇೞ್ದಪರ್

ಮಾಣಿಕ್ಯ ಭಂಡಾರ, ಹೊನ್ನ ಭಂಡಾರ, ರೇಷ್ಮೆವಸ್ತ್ರಭಂಡಾರ – ಎಂದು ಇವುಗಳಲ್ಲಿ ಮೋಹಗೊಂಡು ಬುದ್ಧಿಯುಳ್ಳವನಾಗಿ ಆರ್ತ ಧ್ಯಾನದಿಂದ ಸತ್ತು ಹೆಬ್ಬಾವಾಗಿ ನೀನು ಹುಟ್ಟಿರುವಿ. ನಾವು ಹೆಂಡಿರಾಗಿಯೂ ಇಷ್ಟೊಂದು ಹೆಚ್ಚಿನ ಐಶ್ವರ್ಯ ವೈಭವವನ್ನು ಹೊಂದಿದೆವು* ಎಂದು ಹೇಳಿ, ತಮ್ಮ ದೇವತ್ವವನ್ನು ಪ್ರದರ್ಶಿಸಿಬೇಕೆಂಬ ಉದ್ದೇಶದಿಂದ ಆಕಾಶವನ್ನೆಲ್ಲ ಚಿತ್ರಪಟಗಳನ್ನು ಕೆದರಿದಂತೆ ವಿಮಾನಗಳಿಂದ ಮುಚ್ಚಿ ಆವರಿಸಿದರು. ಪರಿವಾರದೇವಿಯರಿಂದಲೂ ದೇವತೆಗಳಿಂದಲೂ ವೇಶ್ಯೆಯರಿಂದಲೂ ದೇವತಾಸ್ತ್ರೀಯರಿಂದಲೂ ಆವೃತರಾಗಿ ಆ ನಾಲ್ಕು ಮಂದಿ ದೇವತೆಗಳು ಗಂಟೆಗಲ ಮತ್ತು ಮುತ್ತುಗಳ ಸಮೂಹದಿಂದ ಕೂಡಿ ರತ್ನಮಯವಾಗಿದ್ದ ಆಶ್ಚರ್ಯಕರವಾದ ವಿಮಾನಗಳನ್ನೇರಿದರು. ದೇವಿಯರು ಚಾಮರವನ್ನು ಬೀಸುತ್ತಿರಲು ಆಟ ಪಾಟ ವಿನೋದಗಳಿಂದ ತಮ್ಮ ಐಶ್ವರ್ಯವನ್ನೆಲ್ಲ ತೋರಿಸಿ ಹೀಗೆಂದರು – “ನಮಗೆ ಇವೆಲ್ಲವೂ ಜೈನಧರ್ಮದ ಪರಮಸತ್ವದ ಅನುಗ್ರಹದಿಂದ ಆಗಿವೆ. ಉಪರಿಚರ ಮಹಾರಾಜನು ಗಂಡುಸಾಗಿಯೂ ಮಹಾ ಸತ್ವವುಳ್ಳವನಾಗಿಯೂ ಮಿಥಾತ್ವದಿಂದ ಆರ್ತಧ್ಯಾನದಿಂದ ಸತ್ತು ಹೆಬ್ಬಾವಾಗಿ ಹುಟ್ಟಿದನು.* ಹೀಗೆ ಹೇಳಿ, ಮಕ್ಕಳನ್ನೂ ಹೆಬ್ಬಾವನ್ನೂ ಬೋಧನೆ ಮಾಡಿ ತಮ್ಮ ಸ್ವರ್ಗಲೋಕಕ್ಕೆ ಹೋದರು. ಆನಂತರ, ಆ ಹೆಬ್ಬಾವು ನನ್ನ ಹೆಂಡಿರು ದೇವತೆಗಳಾಗಿ ಹುಟ್ಟಿದರೆಂದು ಅತ್ಯಂತ ಸಂತೋಷಪಟ್ಟು ಧರ್ಮದ ಪರಿಣಾಮವನ್ನು ಹೊಂದಿದೆಯೆಂಬುದನ್ನು ಸಾರಸ್ವತ ಋಷಿಗಳು ತಿಳಿದು ಋಷಿಗಳ ಸಮೂಹವನ್ನೂ ಕೂಡಿಕೊಂಡು ಆ ಹೆಬ್ಬಾವಿದ್ದಲ್ಲಿಗೆ ಹೋಗಿ, ಈ ರೀತಿಯಾಗಿ ಧರ್ಮೋಪದೇಶವನ್ನು

ಗಾಹೆ ಸೋ ಧಮ್ಮೋ ಜತ್ಥ ದಯಾ ಸೋವಿ ತಓ ವಿಸಯಣಿಗ್ಗಹೋ ಜತ್ಥ
ದಸ ಅಟ್ಠದೋಸರಹಿಓ ಸೋ ದೇವೋ ಣತ್ಥಿ ಸಂದೇಹೋಮತ್ತಂ

ವೃತ್ತ || ಯತ್ನೇನ ಪಾಪಾನಿ ಸಮಾಚರಂತಿ
ಧರ್ಮಂ ಪ್ರಸಂಗಾದಪಿ ನಾಚರಂತಿ
ಆಶ್ಚರ್ಯಮೇತದ್ಧಿ ಮನುಷ್ಯಲೋಕೇ
ಕ್ಷೀರಂ ಪರಿತ್ಯಜ್ಯ ವಿಷಂ ಪಿಬಂತಿ

ಸಮಾಗಮಾಃ ಸ್ವಾವಸಮಾಹಿ ಸರ್ವೇ
ವಿಭೂತಯೋಪಿ ಪ್ರತಿಭಂಗುರಾಃ ಸ್ಯುಃ
ಧರ್ಮೋರ್ಹತಾಮೇವ ಸುಶಾಶ್ವತೋ
ಮಿತಿ ಪ್ರಜಂತ್ಯಾತ್ಮರತಿರ್ಬಭೂವ

ನಿಶ್ಚಯಮುದಿತಸ್ಯ ರವೇಃ
ಪತನಂ ಜಾತಸ್ಯ ಮರಣಮಪಿ ಸರ್ವಸ್ಯ
ತಸ್ಮಾದ್ವಿದುಷಾ ಭಾವ್ಯಂ
ಸದೈವ ಜಾತೇನ ಧರ್ಮಕರ್ಮರತೇನ

ಮಾಡಿದರು – ಎಲ್ಲಿ ದಯೆ ಇದೆಯೋ ಅದು ಧರ್ಮವು ಮತ್ತು ಎಲ್ಲಿ ಇಂದ್ರಿಯ ನಿಗ್ರಹವಿದೆಯೋ ಅದು ಕೂಡ ಧರ್ಮವು. ಹದಿನೆಂಟು ದೋಷಗಳಿಲ್ಲದವನೇ ದೇವನು. ಇದರಲ್ಲಿ ಸಂದೇಹವಿಲ್ಲ. ಅದವಲ್ಲದೆ, ಪ್ರಯತ್ನದಿಂದ ಪಾಪಗಳನ್ನು ಮಾಡುತ್ತಾರೆ. ಂಚಿದರ್ಭವಶದಿಂದಾದರೂ ಧರ್ಮವನ್ನು ಮಾಡುವುದಿಲ್ಲ. ಇದು ಮಾನವಲೋಕದಲ್ಲಿ ಆಶ್ವರ್ಯವಲ್ಲವೆ ? ಹಾಲನ್ನು ಬಿಟ್ಟು ವಿಷವನ್ನು ಕುಡಿಯುತ್ತಾರೆ. ಎಲ್ಲಾ ಒಡನಾಟಗಳು ತನ್ನ ವಶದಲ್ಲಿ ಇಲ್ಲವಷ್ಟೆ ? ಐಶ್ವರ್ಯಗಳು ಕೂಡ ಅಲ್ಪಕಾಲದಲ್ಲಿಯೇ ನಾಶವಾಗುವುವಲ್ಲವೆ? ಅರ್ಹಂತರು ಉಪದೇಶಿಸಿರುವ ಈ ಜಿನಧರ್ಮವೇ ಅತ್ಯಂತ ಶಾಶ್ವತವಾದುದು – ಹೀಗೆಂದು ವಿಶೇಷವಾಗಿ ಚಿಂತಿಸಿಕೊಂಡರೆ ಆತ್ಮನಲ್ಲಿ ಆಸಕ್ತಿ ಹುಟ್ಟೀತು. ಉದಯಿಸಿದ ಸೂರ್ಯನು ಮುಳುಗುವುದು ನಿಶ್ಚಯ. ಹುಟ್ಟಿಬಂದಿರುವ ಎಲ್ಲಕ್ಕೂ ಸಾವು ಕೂಡ ನಿಶ್ಚಯ. ಆದುದರಿಂದ ಹುಟ್ಟಿಬಂದವನೂ ಧರ್ಮಕರ್ಮದಲ್ಲಿ ಆಸಕ್ತಿಯುಳ್ಳವನೂ ಆದ ವಿದ್ವಾಂಸನು ಇದನ್ನು ಭಾವಿಸಬೇಕಾದುದು ಅವಶ್ಯವಾಗಿದೆ. ಯೌವನ, ಶಕ್ತಿ, ವೈಭವ, ರೂಪ, ಸೌಭಾಗ್ಯಗಳು ಹೂ ಹಣ್ಣುಗಳ ಭಾರವುಳ್ಳ ಮರದಂತೆ. ಎಲ್ಲರ ಬದುಕೂ ಬೆಟ್ಟದ ಝರಿಯ ನೀರಿನಂತೆ ಬೇಗ ಓಡುತ್ತದೆ. ಜೀವನು ಒಬ್ಬನಾಗಿಯೇ ಸಾಯುತ್ತಾನೆ. ಒಬ್ಬನೇ ಹುಟ್ಟುತ್ತಾನೆ. ಜೀವಿಗಳ ಜನ್ಮ ಜನ್ಮಗಳಲ್ಲಿ ಬೇರೆ ಬೇರೆಯಾದವರು ಯಾರ ತಾಯಿಯೋ ಯಾರ ತಂದೆಯೋ ಯಾರ ಹೆಂಡತಿಯೋ ಮತ್ತೆ ಯಾರ ಮಗನೋ ಆಗುವರಲ್ಲವೇ ? ದ್ರವ್ಯಗಳು ಮನೆಗಳಲ್ಲಿ ನಿಲ್ಲುತ್ತವೆ. ಬಂಧುಗಳು ಮಸಣದವರೆಗೆ ಬಂದು ನಿಲ್ಲುತ್ತಾರೆ. ದೇಹವು ಬೆಂಕಿಯ ಮಾಲೆಯಲ್ಲಿ ನಿಲ್ಲುತ್ತದೆ. ಪುಣ್ಯವೂ ಪಾಪವೂ ಮಾತ್ರ ಜೊತೆಯಲ್ಲಿ

ಪುಷ್ಪ ಫಲಭಾರಾ ತರುವದ್ಯೌವನ ಬಲವಿಭವರೂಪ ಸೌಭಾಗ್ಯಾನಿ
ಗಿರಿಸರಿದಂಭಃ ಪ್ರತಿಮಂ ಸರ್ವೇಷಾಂ ಜೀವಿತಂ ಧಾವತಿ ಶೀಘ್ರಮ್

ಗಾಹೆ || ಏಗೋ ಮರದಿ ಜೀವೋ ಏಗೋ ದಿವಂ ಉವವಜ್ಜ
ಏಗೋ ಜಾ ಮರಣಂ ಏಗೋ ಸಜ್ಜಾ ಣಿರಯಂ ವಾ

ಶ್ಲೋಕ|| ಕಸ್ಯ ಮಾತಾ ಪಿತಾ ಕಸ್ಯ ಕಸ್ಯ ಭಾರ್ಯಾ ಸುತೋಪಿ ವಾ
ಜಾತೌ ಜಾತೌ ಹಿ ಜೀವಾನಾಂ ಭವಿಷ್ಯಂತಿ ಪರೇ ಪರೇ

ಅರ್ಥಾ ಗೃಹೇಷು ತಿಷ್ಠಂತಿ ಶ್ಮಶಾನೇಷು ಬಾಂಧವಾಃ
ಶರೀರ ಜ್ವಾಲಾಮಾಲಾಯಾಂ ಸುಕೃತಂ ದುಷ್ಕೃತಂ ವ್ರಜೇತ್

ಎಂದಿಂತು ಪಿರಿದು ಬೇಗಂ ಧರ್ಮಮಂ ಪೇೞ್ದು ಶ್ರಾವಕಬ್ರತಂಗಳನೇಱಸಿ ಮತ್ತಮಿಂತೆಂದರ್ ನಿನಗಾಯುಷ್ಯಂ ಪದಿನಯ್ದು ದಿವಸಮೆಂದು ಪೇೞ್ದೋಡಾ ಮಾತಂ ಕೇಳ್ದು ಆಹಾರ ಶರೀರಕ್ಕಂ ಜಾವಜ್ಜೀವಂ ನಿವೃತ್ತಿಗೆಯ್ದು ಸಂನ್ಯಸನಂಗೆಯ್ದಿರ್ದೊಡದಂ ಭಟಾರರಱದನಂತವೀರ್ಯಂಗೆ ಪೇೞ್ದರಿದು ಸಂನ್ಯಸನಂಗೆಯ್ದಿರ್ದುದಿದರ್ಕೆ ಪೂಜೆಯಂ ಮಾಡಿಮೆನೆ ಆತನುಂ ಪಿರಿಯ ಪಂದರಂ ಮಾಡಿಸಿಯಲ್ಲಿ ನಾನಾಪ್ರಕಾರದ ನೇತ್ರ ಪೞಯುಲ್ಲವಂಗಳುಮಂ ಧ್ವಜಂಗಳುಮಂ ಕಟ್ಟಿಸಿ ದೇವತಾಪ್ರತಿಮೆಯಂ

ಬರುತ್ತವೆ. ಈ ರೀತಿಯಾಗಿ ಬಹಳ ಬೇಗನೆ ಸಾರಸ್ವತ ಋಷಿಗಳು ಧರ್ಮೋಪದೇಶ ಮಾಡಿ, ಶ್ರಾವಕಗಳನ್ನು ಸ್ವೀಕಾರಮಾಡಿಸಿ – “ನಿನಗೆ ಹದಿನೈದು ದಿವಸಗಳ ಆಯುಷ್ಯವಿದೆ ಎಂದರು. ಆ ಮಾತನ್ನು ಕೇಳಿ ಹೆಬ್ಬಾವು ಜೀವಿಸಿರುವವರೆಗೂ ಆಹಾರವನ್ನು ಬಿಟ್ಟು ಸಂನ್ಯಾಸವನ್ನು ಕೈಗೊಂಡಿತು. ಇದನ್ನು ಋಷಿಗಳು ತಿಳಿದು ಅನಂತವೀರ್ಯನೊಡನೆ – “ಇದು ಸಂನ್ಯಾಸವನ್ನು ಮಾಡಿಕೊಂಡಿದೆ. ಇದಕ್ಕೆ ನೀವು ಪೂಜೆ ಮಾಡಿ* ಎಂದು ಹೇಳಿದರು. ಅದರಂತೆ ಅನಂತವೀರ್ಯನು ದೊಡ್ಡದೊಂದು ಚಪ್ಪರವನ್ನು ಮಾಡಿಸಿದರು. ಅಲ್ಲಿ ಹಲವಾರು ವಿಧವಾದ ನೇತ್ರವೆಂಬ ಹೆಸರುಳ್ಳ ರೇಷ್ಮೆವಸ್ತ್ರದ ಮೇಲ್ಕಟ್ಟುಗಳನ್ನೂ ಪತಾಕೆಗಳನ್ನೂ ಕಟ್ಟಿಸಿದನು. ಅಲ್ಲಿ ದೇವತಾಪ್ರತಿಮೆಯನ್ನು ಇಟ್ಟು ಅಭೀಷೇಕವನ್ನು ಮಾಡುತ್ತ ಮೂರು ಹೊತ್ತೂ ಮಹಾಮಹಿಮೆಯನ್ನೂ ಪೂಜೆಗಳನ್ನೂ ನಡೆಸುತ್ತ ನಮಸ್ಕಾರಗಳನ್ನು ಮಾಡಿಸುತ್ತ ಇರಲು, ಋಷಿಗಳು ಆರಾಧನಾ ಎಂಬ ಗ್ರಂಥವನ್ನು ಪೂಜೆಮಾಡಿ ವ್ಯಾಖ್ಯಾನವನ್ನು ಮಾಡತೊಡಗಿದರು – ಪ್ರಾಣವು ಗಂಟಲಿಗೆ ಬಂದಾಗ ಕೂಡ ಯಾವನು ಸಂನ್ಯಾಸದಲ್ಲಿ ಮನಸ್ಸುಳ್ಳವನಾಗಿರುವನೋ ಅವನು ಹಿಂದಿರುಗಿ ಬರುವುದೆಂಬುದು ಎಲ್ಲದ ಮೋಕ್ಷವೆಂಬ ಮನೆಗೆ ಹೋಗುತ್ತಾನೆ. ಈ ಜನ್ಮದಲ್ಲಿ ಮಾಡಿದ ಪಾಪವು, ಹಿಂದೆ ಮಾಡಿದ ಪಾಪವು ಯಾವುದೋ ಅದೆಲ್ಲ ಅಗ್ನಿಯಿಂದ ಸೌದೆ ಹೇಗೋ ಹಾಗೆ, ಸಂನ್ಯಾಸದಿಂದ ಸುಟ್ಟುಹೋಗುತ್ತದೆ. ಹೃದಯದಲ್ಲಿಯೂ ಹಣೆಯಲ್ಲಿಯೂ (ಹುಬ್ಬುಗಳ ನಡುವೆಯೂ), ಆತ್ಮವನ್ನೂ ಕೈಯನ್ನೂ ಒಂದು ಮುಹೂರ್ತಕಾಲವಾದರೂ ಇಟ್ಟುಕೊಂಡು ಸಮತ್ವದಿಂದ ನಿಂತಿರುವವನ ಅಜ್ಞಾನತೆಯಿಂದಾಗಿ ಮಾಡಲ್ಪಟ್ಟು ಪುಣ್ಯರೂಪವಾದ ಕರ್ಮಗಳ ಭಾರವು ಸಂನ್ಯಾಸದಿಂದ ಒಳ್ಳೆಯ ವಿನಾಶವನ್ನು ಹೊಂದುತ್ತದೆ. ಊರ್ಧ್ವಲೋಕ(ಸ್ವರ್ಗ)ದಲ್ಲಿ,

ನಿಱಸಿಯಭಿಷೇಕಂಗೆಯ್ಯುತ್ತಂ ಮೂಱು ಪೋೞ್ತುಂ ಮಹಾಮಹಿಮೆಯಂ ಪೂಜೆಗಳುಮಂ ಪೊಡೆಮಡಿಸುತ್ತಿರೆಭಟಾರರು ಮಾರಾಧನೆಯನರ್ಚಿಸಿ ಸ್ವಾಧ್ಯಾಯಂಗೊಂಡಿತೆಂದಾರಾಧನೆಯಂ ವಕ್ಖಾಣಿಸಲ್ ತಗುಳ್ದರ್

ಶ್ಲೋಕ || ಸಂನ್ಯಸನೇಸ್ತಿ *ಮತಿರ್ಯೋ?* ಪಾಣೈಃ ಕಂಠಗತೈರಪಿ
ಗಚ್ಛೇನ್ಮೋಕ್ಷಸದನಂ ಪುನರಾಗಮವರ್ಜಿತಮ್

ಇಹ ಜನ್ಮಕೃತಂ ಪಾಪಂ ಯಚ್ಚ ಪಾಪಂ ಪುರಾಕೃತಂ
ಸಂನ್ಯಸನೇನ ತತ್ಸರ್ವಂ ದಹತ್ಯಗ್ನಿರಿವೇಂಧನಂ

ಅಜ್ಞಾನಾಭಾವಾತ್ ಕೃತ ಕರ್ಮಭಾರಃ
ಸಂನ್ಯಾಸನಾತ್ ಸತ್ಪ್ರಲಯಂ ಪ್ರಯಾತಿ
ಮುಹೂರ್ತ ಕಾಲೇ ಹೃದಯೇ ಲಲಾಟೇ
ಜೀವಂ ಕರಂ ನ್ಯಸ್ಯ ಸಮಸ್ಥಿತಸ್ಯ

ಗಾಹೆ || ಉಡ್ಧಮಹೇ ತಿರಿಯಮ್ಹಿಯ ಮದಾಣಿ ಯಕಾಮಗಾಣಿ ಮರಣಾಣಿ
ದಂಸಣ ಣಾಣ ಸಮಗ್ಗೋ ಪಂಡಿಯ ಮರಣಂ ಅಣುಮಲಿಸ್ಸಂ

ಉವ್ವೆಯ ಮರಣಂ ಜಾ ಮರಣಂ ಣಿರಯೇ ಸುವೇದಣಾ
ಏದಾಣಿ ಸಂಚರಂತೋ ಪಂಡಿಯ ಮರಣಂ ಅಣುಮಲಿಸ್ಸಂ

ಎಕ್ಕಂ ಪಂಡಿಯ ಮರಣಂ ಛಿಂದ ಜಾಈಸದಾಣಿ ಬಹುಗಾಣಿ
ತಂ ಮರಣಂ ಮರಿದವ್ವಂ ಜೇಣ ಮದಂ ಸುಮ್ಮದಂ ಹೋ

ಕೆಳಗಿನ ಲೋಕಗಳಾದ ನರಕಭವನ ವ್ಯಂತರ ಜ್ಯೋತಿಷ್ಕಲೋಕಗಳಲ್ಲಿ ಏಕೇಂದ್ರಿಯಾದಿ ಜೀವಜಾತಿಗಳಲ್ಲಿ ಅನೇಕ ಬಾಲಮರಣಗಳನ್ನು ಪಡೆದಿದ್ದೇನೆ ಇನ್ನುಮೇಲೆ ಸಮ್ಯಗ್ದರ್ಶನ ಜ್ಞಾನಗಳಿಂದ ಕೂಡಿದ ಪಂಡಿತಮರಣವನ್ನು ಪಡೆಯುತ್ತೇನೆ. ಉದ್ವೇಗಯುಕ್ತ ಮರಣ, ಜಾತಿಮರಣ (ಹುಟ್ಟುವಾಗಲೇ ಸಾಯುವುದು), ನರಕಗಳಲ್ಲಿ ನೋವು ಹಿಂಸೆಗಳು, ಇವನ್ನು ಚೆನ್ನಾಗಿ ಸ್ಮರಿಸಿಕೊಳ್ಳುತ್ತ ನಾನು ಪಂಡಿತಮರಣವನ್ನು ಹೊಂದುತ್ತೇನೆ, ಒಂದು ಪಂಡಿತಮರಣವು ನೂರು ಜನ್ಮಗಳನ್ನೂ ಅನೇಕವಾದವುಗಳನ್ನೂ ನಾಶಗೊಳಿಸುತ್ತದೆ. ಯಾವುದರಿಂದ ಸಾವು ಒಳ್ಳೆಯ ಮರಣವಾಗುತ್ತದೋ ಆ ಮರಣವೇ ಪಡೆಯಬೇಕಾದ ಮರಣ. ಸಂನ್ಯಾಸಕಾಲದಲ್ಲಿ ಉತ್ಪನ್ನವಾಗುವ ಹಸಿವು ಮುಂತಾದ ಹಿಂಸೆಗಳು ನರಕದುಃಖದ ಸ್ವರೂಪವನ್ನು ತೋರಿಸುತ್ತವೆ. ಹೀಗಿರುವಾಗ ಸಂಸಾರದಲ್ಲಿ ಸುತ್ತುತ್ತಿರುವ ನನಗೆ ದುಃಖ ಬಾರದಿರುವುದೇ ? – ಎಂದು ಚಿಂತಿಸಬೇಕು. ಸಂಸಾರವೆಂಬ ಚಕ್ರದಲ್ಲಿ ಸುತ್ತುತ್ತಿರುವ ನಾನು ಎಷ್ಟೋ ಬಾರಿ ಅನೇಕ ರೀತಿಯ. ಪುದ್ಗಲಗಳನ್ನು (ಮೊಸರು, ಸಕ್ಕರೆ, ಬೆಲ್ಲ ಮುಂತಾದ ಭೋಗ್ಯವಸ್ತುಗಳನ್ನು) ತಿಂದು ಜೀರ್ಣಿಸಿದ್ದೇನೆ. ಆದರೂ ತೃಪ್ತಿಯಾಗಲಿಲ್ಲ – ಎಂದು ಚಿಂತಿಸತಕ್ಕುದು. ಮೀನುಗಳು ಆಹಾರಕ್ಕಾಗಿ ಏಳನೆಯ ಪೃಥ್ವಿ (ಅವಸ್ಥಾನ)ಯನ್ನು ಪ್ರವೇಶಿಸುತ್ತವಲ್ಲವೆ ? ಚೇತನದಿಂದ ಕೂಡಿದ (ಪ್ರಾಣಿ ಹಿಂಸೆಯಿಂದ ಬಂದ) ಅಯೋಗ್ಯ