ನಾಡೊಳ್ ಪೋಗತ್ತಂ ಊರನೆಯ್ದದೆಡೆಯೊಳ್ ಪೊಲದೊಳ್ ನೇಸರ್ಪಟ್ಟೊಡೆ ಯತ್ರಾಸ್ತಮಿತವಾಸಿಯಲ್ಲಿ ನೇಸರ್ಪಟ್ಟೊಡಲ್ಲಿಯೆ ನಿಲ್ವರಪ್ಪುದಱಂ ಕುಮ್ಮರಿಯಂ ಸುಡಲೆಂದು ಕಡಿದೊಟ್ಟಿದ ಮರಂಗಳ ಮೇಗಿರುಳ್ ದೇವರಂ ಬಂದಿಸಿ ನಿಯಮಂಗೆಯ್ದು ಜೋಗಭಕ್ತಿಯಿಂದಿರ್ದರನ್ನೆಗಂ ಕುಮ್ಮರಿಯಂ ಸುಡಲೆಂದು ತುಂಗಭದ್ರನೆಂಬ ಪೋಡುಂಗಾಱಂ ಸೊರ್ಕಿ ತೂಂಕಡಿಂದಿರುಳ್ ಕೞಂಗಳ್ ಕಡುಗತ್ತಲೆಯೊಳ್ ಬಂದು ಕಿಚ್ಚಂ ತಗುೞಪೋದೊನಾ ಕಿಚ್ಚಿನಿಂದಂ ಹಳಮುಖರಿಸಿಯುಂ ಬೇಯುತ್ತಂ ಧರ್ಮಧ್ಯಾನಗಳಂ ಧ್ಯಾನಿಸಿ ಶುಭ ಪರಿಣಾಮದಿಂ ಮುಡಿಪಿ ಪದಿನಾಱನೆಯಚ್ಯುತ ಕಲ್ಪದೊಳ್ ಇರ್ಪತ್ತೆರಡು ಸಾಗರೋಪಮಾಯುಷ್ಯಮನ್ರೆಡೆಯೊನಚ್ಯುತೇಂದ್ರನಾಗಿ ಪುಟ್ಟಿದೊಂ ಮತ್ತಿತ್ತ ತುಂಗಭದ್ರನೆಂಬೊಂ ಪೋಡುಂಗಾಱಂ ನೇಸರ್ಮೂಡೆ ಕುಮ್ಮರಿಯುಂ ನೋಡಲೆಂದು ಪೋದನನ್ನೆಗಂ ಸತ್ತಿರ್ದ ರಿಸಿಯಂ ಕಂಡು ಪಂಚಮಹಾಪಾತಕನೆಂ ನಿಷ್ಕಾರಣಮಱಯದೆ ರಿಸಿಯರಂ ಕೊಂದೆನೆಂದು ನಿಂದಣೆ ಗರುಹಣೆ ಗೆಯ್ದು ತಾನುಮಲ್ಲಿಯೆ ಕಿಚ್ಚಂ ಪೊಕ್ಕು ಸತ್ತು ವ್ಯಂತರದೇವನಾಗಿ ಪುಟ್ಟಿ ಆಯುಷ್ಯಾಂತದೊಳ್ ಬಂದಿಲ್ಲಿ ವಿಂಧ್ಯಾಟವಿಯೊಳಾದಮಾನುಂ ರೌದ್ರಮಪ್ಪ ಬಿಳಿಯ ಪೇರಾನೆಯಾಗಿ ಪುಟ್ಟಿ ಬಟ್ಟೆಯೊಳ್ ಪೋಪ ಬರ್ಪ ಜನಂಗಳನೆೞ್ಬಟ್ಟಿ ಕೊಲುತ್ತಮಿರ್ಪುದಂ ಹಳಮುಖಚರನಪ್ಪ ಅಚ್ಯುತೇಂದ್ರನವಜ್ಞಾನದಿಂ ದಱದು ಬಂದು ಧರ್ಮಮಂ ಪೇೞ್ದು ಪ್ರತಿಬೋಸಿ ಶ್ರಾವಕವ್ರತಂಗಳ ಫಲಮಂ ಪೇೞ್ದು

ಊರಿಗೆ ಹೋಗದೆ ಮಧ್ಯದಲ್ಲಿ ಒಂದು ಹೊಲಕ್ಕೆ ತಲುಪಿದಾಗ ಸೂರ್ಯನು ಮುಳುಗಿದನು. ಯತ್ರಾಸ್ತಮಿತವಾಸಿಯಾದ ಸಂನ್ಯಾಸಿಗಳು ಎಲ್ಲಿ ಸೂರ್ಯಾಸ್ತವಾಯಿತೋ ಅಲ್ಲಿಯೇ ನಿಲ್ಲುವರಾದುದರಿಂದ ಕುಮ್ಮರಿಯನ್ನು ಸುಡುವುದಕ್ಕಾಗಿ ಕಡಿದು ರಾಶಿ ಹಾಕಿದ ಮರಗಳ ಮೇಲೆ ರಾತ್ರಿಯಲ್ಲಿ ದೇವನ್ನು ವಂದಿಸಿ ನಿಯಮಗಳನ್ನುಆಚರಿಸಿ ಯೋಗಯುಕ್ತವಾದ ಭಕ್ತಿಯಿಂದ ಇದ್ದರು. ಹೀಗಿರಲು, ಕಾಡುಕತ್ತರಿಸುವವನಾದ ತುಂಗಭದ್ರನೆಂಬವನು ಕುಮರಿಯನ್ನು ಸುಡುವುದಕ್ಕಾಗಿ ಅಮಲೇರಿದ್ದ ನಿದ್ದೆಯಿಂದ, ರಾತ್ರಿ ಅಮಾವಾಸ್ಯೆಯ ತೀವ್ರವಾದ ಕತ್ತಲೆಯಲ್ಲಿ ಬಂದು ಮರದ ರಾಶಿಗೆ ಬೆಂಕಿಯನ್ನು ಹಚ್ಚಿ ಹೋದನು. ಆ ಬೆಂಕಿಯಿಂದ ಹಳಮುಖ ಋಷಿ ಬೇಯುತ್ತಿರುವಾಗಲೇ ಆಜ್ಞಾವಿಚಯ, ಅಪಾಯ ವಿಚಯ, ವಿಪಾಕ ವಿಚಯ, ಸಂಸ್ಥಾನ ವಿಚಯ – ಎಂಬ ಧರ್ಮಧ್ಯಾನಗಳನ್ನು ಧ್ಯಾನಿಸಿ ಶುಭ ಪರಿಣಾಮದಿಂದ ಸತ್ತು, ಹದಿನಾರನೆಯ ಅಚ್ಯುತವೆಂಬ ಸ್ವರ್ಗದಲ್ಲಿ ಇಪ್ಪತ್ತೆರಡು ಸಾಗರವನ್ನು ಹೋಲುವ ಪರಿಮಾಣವುಳ್ಳ ಆಯುಷ್ಯವಿರತಕ್ಕ ಅಚ್ಚುತೇಂದ್ರನಾಗಿ ಹುಟ್ಟಿದರು. ಆಮೇಲೆ ಇತ್ತ ಕಾಡುಕಡಿವವನಾದ ತುಂಗಭದ್ರನು ಸೂರ್ಯೋದಯವಾಗಲು ಕುಮ್ಮರಿಯನ್ನು ನೋಡುವುದಕ್ಕಾಗಿ ಹೋದನು. ಆಗ ಸತ್ತು ಹೋಗಿದ್ದ ಋಷಿಯನ್ನು ಕಂಡು, “ಪಂಚಮಹಾಪಾಪ ಮಾಡಿದವನಾಗಿದ್ದೇನೆ. ಏನೂ ಕಾರಣವಿಲ್ಲದೆ, ತಿಳಿಯದೆ ಋಷಿಗಳನ್ನು ಕೊಂದೆನು* ಎಂದು ನಿಂದನೆ ಗರ್ಹಣೆ (ಬೈಗುಳು)ಗಳನ್ನು ಮಾಡಿಕೊಂಡು, ತಾನೂ ಅಲ್ಲಿಯೇ ಅಗ್ನಿಪ್ರವೇಶ ಮಾಡಿ ಸತ್ತು ವ್ಯಂತರ ದೇವನಾಗಿ ಹುಟ್ಟಿದನು. ಅಲ್ಲಿ ಆಯುಷ್ಯತೀರಲು ಭೂಲೋಕಕ್ಕೆ ಬಂದು ವಿಂಧ್ಯೆಯ ಕಾಡಿನಲ್ಲಿ ಅತ್ಯಂತ ಭಯಂಕರವಾದ ಬಿಳಿಯ ಮಹಾಗಜವಾಗಿ ಹುಟ್ಟಿ, ಆ ಆನೆ ದಾರಿಯಲ್ಲಿ ಹೋಗುವ ಬರುವ ಜನರನ್ನು ಎಬ್ಬಿಸಿ ಓಡಿಸಿ ಕೊಲ್ಲುತ್ತ ಇದ್ದಿತು. ಇದನ್ನು ಹಳಮುಖನಾಗಿ ಹಿಂದೆ ವರ್ತಿಸಿದ್ದ ಅಚ್ಯುತೇಂದ್ರನು ಅವಜ್ಞಾನದಿಂದ ತಿಳಿದು ಬಂದು, ಧರ್ಮವನ್ನು ತಿಳಿಸಿ, ಉಪದೇಶಿಸಿ ಶ್ರಾವಕವ್ರತಗಳಿಂದಾಗತಕ್ಕ ಫಲವನ್ನು ಹೇಳಿ ಜೈನಧರ್ಮದಲ್ಲಿ ಪರಿಪೂರ್ಣವಾದ

ಸಮ್ಯಕ್ತ ಪೂರ್ವಕಂ ಬ್ರತಂಗಳಂ ಕೈಕೊಳಿಸಿ ಪೋದನಾನೆಯುಂ ಕೊಲೆಯನುೞದು ಮಧು ಮದ್ಯಮಾಂಸಂಗಳಂ ತೊಱೆದು ಪಷ್ಠಾಷ್ಟಮ ದಶಮ ದ್ವಾದಶಾದಿ ನೋಂಪಿಗಳಂ ನೋನುತ್ತಂ ಪಾರಿಸುವ ದಿವಸಂ ಪ್ರಾಸುಕಮಾಗುತಿರ್ದ ತಱಗೆಲೆಗಳಂ ಮೇದು ಗಜಯೂಧಮುಂಡು ಪೋದ ಬೞಕ್ಕೆ ಕದಡಿದ ನೀರ್ಗಳನುಂಡಿಂತು ಪಲಕಾಲಂ ಸಂಯಮಮೆಂಬ ಬ್ರತಮಂ ಸಲಿಸುತ್ತಮಿರ್ಪನ್ನೆಗಂ ಮತ್ತೊಂದು ದಿವಸಮಡವಿಯೊಳ್ ಬೇಸಗೆಯ ದಿನಂ ಕಾೞಚ್ಚು ತಗುಳ್ದೊಡೆ ಕಿಚ್ಚಿಂಗಂಜಿ ಪಿರಿದೊಂದಾಲದ ಮರದ ಕೆೞಗೆ ಗಜಯೂಧದೊಡನೆ ಬಂದಿರ್ದುದಾ ಮರದೊಣಗಿದ ಕೊಂಬುಗಳೊಳ್ ಕಿಚ್ಚು ತಗುಳ್ದು ತನ್ನಂ ಸುಡುವನ್ನೆಗಮೊಂದು ಮೊಲಂ ಕಿಚ್ಚಿನಿಂದಂ ಬೆಂದುರಿಯ ಬಣ್ಣಮಾಗಿ ಪರಿತಂದು ತನ್ನ ಕಾಲ ಕೆೞಗೆ ಪೊಕ್ಕೊಡದಂ ಕಂಡು ದಯೆಯಿಂದಕ್ಕಟ ಅಯ್ಯೋ ಎಂದು ಕಾರುಣ್ಯಮಪ್ಪ ಮನದೊಳ್ ಕೂಡಿ ಸತ್ತು ಪನ್ನೆರಡನೆಯ ಸಹಸ್ರಾರ ಕಲ್ಪದೊಳ್ ಪದ್ಮಗುಲ್ಮಮೆಂಬ ವಿಮಾನದೊಳ್ ಪದಿನೆಂಟು ಸಾಗರೋಪಮಾಯಷ್ಯಮನೊಡೆಯೊಂ ಸಾಮಾನಿಕ ದೇವನಾಗಿ ಪುಟ್ಟಿದೊಂ ಪುಟ್ಟಿ ದೇವಲೋಕದ ಸುಖಮಂ ಪಲಕಾಲಮನುಭವಿಸಿಯಾಯುಷ್ಯಾಂತದೊಳ್ ಬೞ ಬಂದಿಲ್ಲಿ ಜಂಬೂದ್ವೀಪದ ಭರತಕ್ಷೇತ್ರದೊಳ್ ಮಗಧೆಯೆಂಬುದು ನಾಡಲ್ಲಿ ರಾಜಗೃಹಮೆಂಬುದು ಪೊೞಲದನಾಳ್ವೊಂ ಶ್ರೇಣಿಕ ಮಹಾರಾಜನೆಂಬೊನರಸಂ ಮಹಾಮಂಡಳಿಕನೆಣಾಸಿರಮಕುಟಬದ್ಧರ್ಕಳ್ಗ

ನಂಬಿಕೆಯೊಂದಿಗೆ ವ್ರತಗಳನ್ನು ಸ್ವೀಕಾರಗೊಳಿಸಿ ತೆರಳಿದನು. ಆನೆಯು ಕೊಲೆ ಮಾಡುವುದನ್ನು ಬಿಟ್ಟು, ಮಧು ಮದ್ಯ ಮಾಂಸ ಸೇವನೆಯನ್ನೂ ಬಿಟ್ಟು ಆರನೆಯ ಎಂಟನೆಯ ಹತ್ತನೆಯ ಹನ್ನೆರಡನೆಯದೇ ಮುಂತಾದ ವ್ರತಗಳನ್ನು ಆಚರಿಸುತ್ತ ಪಾರಣೆ ಮಾಡುವ ದಿವಸ ಜೀವರಹಿತ (ನಿರ್ಮಲ)ವಾಗಿದ್ದ ತರಗೆಲೆಗಳನ್ನು ಮೇದು ಆನೆಗಳ ಹಿಂಡು ಸೇವಿಸಿ ಹೋದನಂತರ ಕದಡಿದ ನೀರುಗಳನ್ನು ಸೇವಿಸಿ – ಹೀಗೆ ಹಲವು ಕಾಲದ ತನಕ ಸಂಯಮ ವ್ರತವನ್ನು ನಡೆಸುತ್ತಾ ಇದ್ದಿತು. ಆನಂತರ ಒಂದು ದಿವಸ ಕಾಡಿನಲ್ಲಿ ಬೇಸಗೆಯ ದಿನದಂದು ಕಾಡುಗಿಚ್ಚು ಅಟ್ಟಿಕೊಂಡು ಬಂದಿತು. ಆ ಕಾಡುಗಿಚ್ಚಿಗೆ ಹೆದರಿ ಆನೆಯು ದೊಡ್ಡದಾದ ಒಂದು ಆಲದ ಮರದ ಕೆಳಗೆ ಆನೆಗಳ ಹಿಂಡಿನೊಡನೆ ಬಂದಿದ್ದಿತು. ಆ ಮರದ ಒಣಗಿದ ಕೊಂಬೆಗಳಿಗೆ ಬೆಂಕಿ ತಗಲಿ ಅಲ್ಲಿದ್ದ ಒಂದು ಮೊಲದ ಮೈಸುಡುತ್ತಿರಲು, ಆ ಮೊಲವು ಬೆಂಕಿಯಿಂದ ಬೆಂದ ಬೆಂಕಿಯ ಬಣ್ಣವಾಗಿ ಬಂದು ಆ ಆನೆಯ ಕಾಲ ಕೆಳಗಡೆ ಹೊಕ್ಕಿತು. ಅದನ್ನು ಆನೆ ಕಂಡು, ಕರುಣೆಯಿಂದ “ಅಕ್ಕಟಾ, ಅಯ್ಯೋ ಎಂದು ದಯೆಯಿಂದ ಕೂಡಿದ ಮನಸ್ಸು ಉಳ್ಳುದಾಗಿ ಸತ್ತು ಹನ್ನೆರಡನೆಯ ಸಹಸ್ರಾರ ಕಲ್ಪದಲ್ಲಿ ಪದ್ಮಗುಲ್ಮವೆಂಬ ಏಳು ಅಂತಸ್ತಿನ ಅರಮನೆಯಲ್ಲಿ ಹದಿನೆಂಟು ಸಾಗರಕ್ಕೆ ಸಮಾನವಾದ ಆಯುಷ್ಯವನ್ನುಳ್ಳ ಸಾಮಾನಿಕ ದೇವನಾಗಿ ಹುಟ್ಟಿದನು. ಹಾಗೆ ಹುಟ್ಟಿ ದೇವಲೋಕದ ಸುಖವನ್ನು ಹಲವು ಕಾಲದವರೆಗೆ ಅನುಭವಿಸಿ ಆಯುಷ್ಯವು ತೀರಿದಾಗ ಕೆಳಕ್ಕೆ ಜಾರಿ ಬಂದನು. ಇಲ್ಲಿ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಮಗಧೆ ಎಂಬ ನಾಡಿನ ರಾಜಗೃಹವೆಂಬ ಪಟ್ಟಣದಲ್ಲಿ ಆಳತಕ್ಕ ಶ್ರೇಣಿಕ ಮಹಾರಾಜನೆಂಬ ಅರಸನು ಮಹಾಮಾಂಡಳಿಕನಾಗಿ ಎಂಟು ಸಾವಿರ ಮಂದಿ ಕಿರೀಟಧಾರಿ ರಾಜರಿಗೂ ಎಂಟು ಸಾವಿರ ಮಂದಿ ರಾಣಿಯರಿಗೂ ಒಡೆಯನಾಗಿದ್ದಾನೆ. ಆತನಿಗೆ ಎಂಟು ಮಂದಿ

ಮೆಣಾಸಿರ್ವರ್ ಅರಸಿಯರ್ಕಳ್ಗಮೆಱೆಯನಪ್ಪೊನಾತಂಗೆ ಎಣ್ಬರ್ ಮಹಾದೇವಿಯರವರೊಳಗೆ ಧನಶ್ರೀಯೆಂಬ ಮಹಾದೇವಿಯ ಗರ್ಭದೊಳ್ ನೆಲಸಿದನ್ ಆಕೆಗಮಿಂತಪ್ಪುದೊಂದು ಬಯಕೆಯಾದಪುದ ಮೞೆಗಾಲದೊಳಾನೆಯನೇಱಯೆಲ್ಲಾ ಪಡೆಯೊಡನೆಯಡವಿಗೆ ಪೋಗಿಯಾಲದ ಮರದ ಪಣ್ಗಳಂ ಕೊಯ್ವಂತಪ್ಪ ಮತ್ತೆ ಬಯ್ಯಿರುಳಿನ ಮನೋಹರಿಯೆಂಬ ಜಾವದಾಗಳ್ ಬಿಳಿದಪ್ಪ ಕಾಡಾನೆಯಂ ಕಾಣ್ಬುದುಮಿಂತೀ ಬಯಕೆಯುಂ ಕನಸುಮನರಸಂಗೆ ಪೇೞ್ದೊಡರಸಂ ಕಾಲಮಲ್ಲದ ಕಾಲದೊಳ್ ಮೞೆಗಾಲಮನೆಂತು ಪಡೆಯಲಕ್ಕುಮೀ ಬಯಕೆಯಂ ತೀರ್ಚುಚುದರಿದೆಂದು ಚಿಂತಾಕುಳಿತಮನದವನಾಗಿರ್ದು ತನ್ನ ಮಗನಪ್ಪಭಯಕುಮಾರಂಗೆ ಬೞಯಟ್ಟಿ ಬರಿಸಿಯರಸಿಯ ಬಯಕೆಯ ಪಾಂಗೆಲ್ಲಮಂ ಪೇೞದರ್ಕೇಗೆಯ್ವಮೆಂದರಸಂ ಬೆಸಗೊಂಡೊಡಭಯಕುಮಾನುಪಾಯಮಂ ಬಗೆಯಲಕ್ಕುಂ ನೀಮೇನುಂ ಚಿಂತಿಸಲ್ವೇಡ ನಿಶ್ಚಿಂತರಾಗಿರಿಮೆಂದರಸನಂ ಸಂತವಿಸಿ ಪೋದನ್ ಅನ್ನೆಗಮಿತ್ತ ವಿಜಯರ್ಧಪರ್ವತದ ದಕ್ಷಿಣ ಶ್ರೇಣಿಯೊಳ್ ಗಗನತಿಲಕಮೆಂಬುದು ಪೊೞಲದನಾಳ್ವೊಂ ಮನೋಗತಿಯೆಂಬ ವಿದ್ಯಾಧರನಾತನ ಮಹಾದೇವಿ ಕನಕಮಾಳೆಯೆಂಬೊಳಾಯಿರ್ವರ್ಗ್ಗಂ ಮಗಳ್ ಕನಕಚಿತ್ರೆಯೆಂಬೊಳ್ ಕನ್ನೆಯಾಕೆಯೊಂದು ದಿವಸಂ ಪೇರಡವಿಗೆ ವೋಗಿ ವಿದ್ಯೆಯಂ ಸಾಸುತ್ತಿರ್ಪನ್ನೆಗಂ ಚಿಂತಾಗತಿಯೆಂಬ ವಿದ್ಯಾಧರನಾಕೆಯ ರೂಪ ಲಾವಣ್ಯ ಸೌಭಾಗ್ಯ ಕಾಂತಿತ್ವಮಂ ಕಂಡಾಟಿಸಿ ನೀನೆನಗೆ ಪೆಂಡತಿಯಾಗೆಂದು ಕೈಯಂ ಪಿಡಿದು ಕಾಡುತ್ತಿರ್ಪನ್ನೆಗಮಾಕೆಯ ತಂದೆ ಮಗಳ್ ಪಿರಿದುಂ ಬೇಗಂ ತಡೆದಳೆಂದವಳೋಕಿನೀ ವಿದ್ಯೆಯಂ ನೋಡಲಟ್ಟಿದೊಡದು ನೋಡಿ ಬಂದು ಕೂಸಂ ಚಿಂತಾಗತಿಯೆಂಬ

ಮಹಾರಾಣಿಯರು. ಅವರಲ್ಲಿ ಧನಶ್ರೀ ಎಂಬ ಮಹಾರಾಣಿಯ ಬಸುರಲ್ಲಿ ದೇವಲೋಕದಿಂದ ಜಾರಿಬಂದ ಜೀವನು ಹುಟ್ಟಿದನು. ಧನಶ್ರೀಗೆ ಈ ರೀತಿಯ ಬಯಕೆಯಾಯಿತು – ಮಳೆಗಾಲದಲ್ಲಿ ಆನೆಯ ಮೇಲೆ ಕುಳಿತು ಎಲ್ಲಾ ಸೈನ್ಯದೊಡನೆ ಕಾಡಿಗೆ ಹೋಗಿ ಆಲದ ಮರದ ಹಣ್ಣುಗಳನ್ನು ಕೊಯ್ಯುವಂತಹ, ಆಮೇಲೆ ಸಂಜೆಯನಂತರದ ರಾತ್ರಿಯ ಮನೋಹರಿಯೆಂಬ ಜಾವದಲ್ಲಿ ಬಿಳಿಯದ ಕಾಡಾನೆಯನ್ನು ಕಾಣುವುದು – ಇಂತಹ ಈ ಬಯಕೆಯನ್ನೂ ಕನಸನ್ನೂ ಅವಳು ರಾಜನಿಗೆ ಹೇಳಿದಳು. ಆಗ ರಾಜನು ಕಾಲವಲ್ಲದ ಕಾಲದಲ್ಲಿ ಮಳೆಗಾಲವನ್ನು ಹೇಗೆ ಪಡೆಯಬಹುದು ? ಈ ಬಯಕೆಯನ್ನು ಈಡೇರಿಸುವುದು ಅಸಾಧ್ಯವೆಂದು ಬೆಂಕಿಯಿಂದ ಕದಡೆದ ಮನಸ್ಸಿನವನಾಗಿದ್ದುಕೊಂಡು ತನ್ನ ಮಗನಾದ ಅಭಯಕುಮಾರನ ಬಳಿಗೆ ಜನ ಕಳುಹಿಸಿ ಅವನನ್ನು ಬರಮಾಡಿ ರಾಣಿಯ ಬಯಕೆಯ ರೀತಿಯನ್ನು ಎಲ್ಲವನ್ನೂ ತಿಳಿಸಿ ‘ಇದಕ್ಕೆ ಏನು ಮಾಡೋಣ?’ – ಎಂದು ಅರಸನು ಕೇಳಿದನು. ಅದಕ್ಕೆ ಅಭಯಕುಮಾರನು – “ಇದಕ್ಕೆ ಉಪಾಯವನ್ನು ಯೋಚಿಸಲು ಸಾಧ್ಯವಿದೆ. ನೀವು ಏನೂ ಚಿಂತಿಸಬೇಕಾಗಿಲ್ಲ, ನಿಶ್ಚಿಂತರಾಗಿರಿ ಎಂದು ರಾಜನನ್ನು ಸಮಾಧಾನಪಡಿಸಿ ಹೋದನು. ಹೀಗಿರಲು, ಇತ್ತ ವಿಜಯಾರ್ಧ ಪರ್ವತದ ದಕ್ಷಿಣದ ಶ್ರೇಣಿಯಲ್ಲಿ ಗಗನತಿಲಕವೆಂಬ ಪಟ್ಟಣವಿದೆ. ಅದನ್ನು ಮನೋಗತಿಯೆಂಬ ವಿದ್ಯಾಧರನು ಆಳುತ್ತಿದ್ದನು. ಅವನಿಗೆ ಕನಕಮಾಲೆಯೆಂಬ ಮಹಾರಾಣಿಯಿದ್ದಳು. ಆ ದಂಪತಿಗಳಿಗೆ ಕನಕಚಿತ್ರೆ ಎಂಬ ಕನ್ಯೆ ಮಗಳಾಗಿದ್ದಳು. ಅಕೆ ಒಂದು ದಿವಸ ದೊಡ್ಡ ಕಾಡಿಗೆ ಹೋಗಿ ಅಲ್ಲಿ ವಿದ್ಯಾಸಾಧನೆಯನ್ನು ಮಾಡುತ್ತದ್ದಳು. ಆ ಸಂದರ್ಭದಲ್ಲಿ ಚಿಂತಾಗತಿಯೆಂಬ ವಿದ್ಯಾಧರನು ಅವಳ ರೂಪವನ್ನೂ ಲಾವಣ್ಯವನ್ನೂ

ವಿದ್ಯಾಧರಂ ಕಾಡಿದಪ್ಪೊನೆಂದು ಪೇೞ್ದೊಡದಂ ಕೇಳ್ದು ಮನೋಗತಿ ಪ್ರಭೃತಿ ವಿದ್ಯಾಧರರ್ಕಳೆಲ್ಲಂ ಕೂಡಿ ಪೋಗಿಯಾತನ ವಿದ್ಯೆಯೆಲ್ಲಮಂ ಕೊಱೆದಿಕ್ಕಿ ಪನ್ನೆರಡುವರುಷಂಬರಂ ಭೂಮಿಗೋಚರನಾಗಿರೆಂದು ಶಾಪಂಗೊಟ್ಟೊಡಾತನುಮದಂ ನೀಗಲ್ವೇಡಿ ರಾಜಗೃಹಕ್ಕೆ ವಂದು ಪೆಂಡವಾಸದಗ್ಗಳದ ಸೂಳೆ ಕಾಮಲತೆಯೆಂಬೊಳಾಕೆಯೊಡನೆ ಬಾೞುತ್ತಮಾಕೆಯ ಮನೆಚಿiಳ್ ಪನ್ನೆರಡು ವರುಷಂಬರೆಗಮಿರ್ದು ಅವಯ ವರ್ಷಂ ನೆಱೆ ದೊಡೆ ತನ್ನ ವಿದ್ಯಾಧರಶ್ರೇಣಿಗೆ ವೋಗಲ್ ಬಗೆದೊಂದು ದಿವಸಂ ಶ್ಮಶಾನಕ್ಕೆ ವೋಗಿ ಇರುಳ್ ವಿದ್ಯೆಗಳೆಲ್ಲಂ ಸಾಸುವಲ್ಲಿಯಾಕಾಶಕ್ಕೆ ನೆಗೆಯುತುಂ ಬೀೞುತುಮಿರ್ಪನ್ನೆಗಮಭಯಕುಮಾರಂ ತಂದೆಯ ಬೆಸನಂ ತೀರ್ಚಲೆಂದುಪಾಯಮಂ ಬಗೆಯಲ್ವೇಡಿ ಕೞಂಗಳೊಳ್ ನಟ್ಟನಡುವಿರುಳೊಳ್ ಮಣಿಖೇಟಮನುರದೊಳ್ ಸಾರ್ಚಿ ಕಿೞ್ತ ಬಾಳ್ವೆರಸು ಪೊಱಮಟ್ಟು ಪೊೞಲೊಳೆಲ್ಲಂ ತೊೞಲ್ದು ಪೊಱವೊೞಲಂ ತೊೞಲ್ವನ್ನೆಗಂ ಶ್ಮಶಾನದೊಳ್ ಮೇಗಣ್ಗೊಗೆಯುತ್ತಂ ಬೀೞುತ್ತಮಿರ್ದ ಪುರುಷನಂ ಕಂಡು ನೀನಾರ್ಗೇನೆಂಬೆಯಲ್ಲಿರ್ಪೆಯಾಕಾಶಕ್ಕೆ ನೆಗೆದು ಮತ್ತಂ ನೆಲದೊಳೇಕೆ ಬೀೞ್ವೆಯೆಂದು ಬೆಸಗೊಂಡೊಡಾತನಿಂತೆಂದಂ ಆಂ ವಿದ್ಯಾಧರನೆಂಬೆಂ

ಸೌಭಾಗ್ಯವನ್ನೂ ಕಾಂತಿಯುಕ್ತತೆಯನ್ನೂ ಕಂಡು ಅವಳ ಮೇಲೆ ಮೋಹಗೊಂಡನು. ‘ನೀನು ನನ್ನ ಹೆಂಡತಿಯಾಗು’ ಎಂದು ಅವಳ ಕೈಯನ್ನು ಹಿಡಿದು ಕಾಡತೊಡಗಿದನು. ಹೀಗಿರಲು ಅವಳ ತಂದೆಯು ತನ್ನ ಮಗಳು ಬಹಳ ಹೊತ್ತು ಏಕೆ ತಡಮಾಡಿದಳು ? – ಎಂದುಕೊಂಡು ಅವಲೋಕಿನೀ ವಿದ್ಯೆಯನ್ನು ಈ ಸಂಗತಿಯನ್ನು ನೋಡಲಿಕ್ಕಾಗಿ ಕಳುಹಿಸಿಕೊಟ್ಟನು. ಆ ವಿದ್ಯೆಯು ಹೋಗಿ ನೋಡಿ ಬಂದು’ ನಿನ್ನ ಮಗಳನ್ನು ಚಿಂತಾಗತಿ ಎಂಬ ವಿದ್ಯಾಧರನು ಕಾಡುತ್ತಿದ್ದಾನೆ. ಎಂದು ತಿಳಿಸಿತು. ಅದನ್ನು ಕೇಳಿ, ಮನೋಗತಿ ಪ್ರಮುಖರಾದ ವಿದ್ಯಾಧರರೆಲ್ಲರೂ ಒಟ್ಟುಗೂಡಿ ಹೋಗಿ ಚಿಂತಾಗತಿಯ ವಿದ್ಯೆಯನ್ನೆಲ್ಲ ಕತ್ತರಿಸಿ ಹಾಕಿ “ನೀನು ಹನ್ನೆರಡು ವರ್ಷಗಳವರೆಗೆ ಭೂಮಿಯಲ್ಲಿ ಕಾಣಿಸುತ್ತಿರುವವನಾಗು* ಎಂದು ಶಾಪವನ್ನು ಕೊಟ್ಟರು. ಚಿಂತಾಗತಿಯು ಆ ಶಾಪವನ್ನು ಪರಿಹರಿಸಲಿಕ್ಕಾಗಿ ರಾಜಗೃಹಕ್ಕೆ ಬಂದು ರಾಣಿವಾಸದಲ್ಲಿರತಕ್ಕ ಶ್ರೇಷ್ಠ ದಾಸಿಯಾದ ಕಾಮಲತೆ ಎಂಬಾಕೆಯೊಡನೆ ಬಾಳುತ್ತ, ಅವಳ ಮನೆಯಲ್ಲಿ ಹನ್ನೆರಡು ವರ್ಷಗಳವರೆಗೆ ಇದ್ದನು. ಶಾಪದ ಅವಯ ವರ್ಷವು ಪೂರ್ಣವಾದಾಗ ತನ್ನ ವಿದ್ಯಾಧರ ಶ್ರೇಣಿಗೆ ಹೋಗಬೇಕೆಂದು ಭಾವಿಸಿಕೊಂಡು, ಒಂದು ದಿವಸ ಶ್ಮಶಾನಕ್ಕೆಹೋಗಿ ರಾತ್ರಿಯಲ್ಲಿ ವಿದ್ಯೆಗಳನ್ನೆಲ್ಲ ಸಾಸುವ ಸಂದರ್ಭದಲ್ಲಿ ಆಕಾಶಕ್ಕೆ ನೆಗೆಯುತ್ತಲೂ ಬೀಳುತ್ತಲೂ ಇದ್ದನು. ಹೀಗಿರಲು ಅಭಯಕುಮಾರನು ತಂದೆಯ ಅಪ್ಪಣೆಯನ್ನು ನೆರವೇರಿಸುವುದಕ್ಕೆ ಒಂದು ಉಪಾಯವನ್ನು ಭಾವಿಸಿಕೊಂಡನು. ಅಮಾವಾಸ್ಯೆಯ ನಟ್ಟನಡುವಿನ ರಾತ್ರಿಯಲ್ಲಿ ರತ್ನಖಚಿತವಾದ ಗುರಾಣಿಯನ್ನು ಎದೆಗೆ ಅವಚಿಕೊಂಡು, ಒರೆಯಿಂದ ಹೊರಕ್ಕೆಳೆದ ಖಡ್ಗದೊಡನೆ ಹೊರಗೆ ಬಂದು ಪಟ್ಟಣದಲ್ಲೆಲ್ಲ ಸುತ್ತಾಡಿ ಪಟ್ಟಣದ ಹೊರಗಿನ ಪ್ರದೇಶದಲ್ಲಿ ಸುತ್ತಾಡುತ್ತಿದ್ದನು. ಅಷ್ಟರಲ್ಲಿ ಸ್ಮಶಾನದಲ್ಲಿ ಮೇಲೆ ಆಕಾಶಕ್ಕೆ ಹಾರುತ್ತಲೂ ಬೀಳುತ್ತಲೂ ಇದ್ದ ಗಂಡು ವ್ಯಕ್ತಿಯನ್ನು ಕಂಡು “ನೀನು ಯಾರು ? ಏನೆನ್ನುತ್ತಿರುವೆ? ಎಲ್ಲಿ ಇರುತ್ತಿ? ಆಕಾಶಕ್ಕೆ ಹಾರಿ ಆಮೇಲೆ ನೆಲದ ಮೇಲೆ ಏಕೆ ಬೀಳುತ್ತಿ? ಎಂದು ಕೇಳಿದನು. ಆಗ ಅವನು ಹೀಗೆಂದನು – ‘ನಾನು ವಿದ್ಯಾಧರನು

ಚಿಂತಾಗತಿ ನಮಧೇಯನೆನೆಂದು ತನ್ನ ವೃತ್ತಾಂತಮೆಲ್ಲಮಂ ಪೇೞ್ದೊಡೆ ಮತ್ತೀಗಳ್ ನೀನೇಗೆಯ್ದಪ್ಪೆಯೆಂದು ಬೆಸಗೊಂಡೊಡಾತನಿಂತೆಂದಂ ನಾಂ ವಿದ್ಯೆಗಳಂ ಸಾಸಿಯೆನ್ನ ವಿದ್ಯಾಧರಲೋಕಕ್ಕೆ ಪೋಗಲ್ ಬಗೆದಪ್ಪೆಂ ವಿದ್ಯೆಗಳ್ ಸಾಧನೆಗೆ ಸಲ್ಲವಾಗಪ್ಪುದಱಂದಾಕಾಶಕ್ಕೊಗೆದು ಮತ್ತಂ ನೆಲದೊಳ್ ಬೀೞ್ವೆನೆಂದೊಡಾ ವಿದ್ಯಾಮಂತ್ರಂಗಳನೆನಗೆ ಪೇೞೆಂದಭಯಕುಮಾರಂ ಬೆಸಗೊಂಡು ಮಂತ್ರ ವ್ಯಾಕರಣದೊಳಾದಮಾನುಂ ಕುಶಲನಪ್ಪುದಱಂ ಪ್ರಸ್ತಾರಿಸಿ ನೋೞ್ಪೂಗಳ್ ಮಂತ್ರಂಗಳ್ ಹೀನಾಕಾಕ್ಷರ ಸಹಿತಂಗಳೆಂದಱದು ಹೀನಮಪ್ಪಲ್ಲಿಯಕ್ಷರಂಗಳ – ನಿಟ್ಟಕಮಪ್ಪಲ್ಲಿಯಕ್ಷರಂಗಳಂ ಕಳೆದು ತಿರ್ದೇ ಪಾಂಗಿನೊಳ್ ಮಂತ್ರಂಗಳನೋದೆಂದು ಪೇೞ್ದೊಡಾತನುಮಾ ಪಾಂಗಿನೊಳ್ ಮಂತ್ರಂಗಳನೋದಿದೊಡೆ ವಿದ್ಯೆಗಳ್ ಸಾಧನೆಗೆ ಸಂದುವು ಸಂದೊಡೆ ವಿದ್ಯಾಧರನೆಚಿದನೆನಗುಪಕಾರಿಯಯ್ ವರಮಿತ್ರನಯ್ ನಿನಗಾಂ ಬೆಸಕೆಯ್ವೆನೆನಗೇನಪ್ಪೊಡಮೊಂದು ಬೆಸನಂ ಪೇೞೆಂದೊಡೆ ಅಭಯಕುಮಾರನೆಂದಂ ಎಮ್ಮಬ್ಬೆಯ ಬಯಕೆಯಂ ತೀರ್ಚೆಂದೊಡಾತನುಂ ಬಯಕೆಯಂ ಬೆಸಗೊಂಡು ನೇಸರ್ಮೂಡಿದೊಡೆ ವಿದ್ಯೆಗಳಿಂದಮೆ ಬೇಸಗೆಯನೆ ಮೞೆಗಾಲಂ ಮಾಡಿ ಬಿಳಿಯಾನೆಯನರಸಿಯನೇಱಸಿ ಪರಿವಾರಮುಂ ಪಡೆಯುಂ ಬೆರಸು ಗಂಧಪುಷ್ಪವೃಷ್ಟಿಯಂ ಕಱೆಯುತ್ತಂ ಪಟು ಪಟಹ ಪಣವ ತುಣವ ಭಂಭಾ

ಎನ್ನುತ್ತಿದ್ದೇನೆ; ಚಿಂತಾಗತಿ ಎಂಬ ಹೆಸರುಳ್ಳವನಾಗಿರುವೆನು ಎಂದು ಅವನು ತನ್ನ ವೃತ್ತಾಂತವನ್ನೆಲ್ಲ ಹೇಳಿದನು. ಆಗ ಅಭಯ ಕುಮಾರನು – “ಮತ್ತೆ ನೀನೀಗ ಏನು ಮಾಡುತ್ತಿರುವೆ ಎಂದು ಕೇಳಿದನು. ಆಗ ಅವನು – “ನಾನು ವಿದ್ಯೆಗಳನ್ನು ಸಾಧನೆಮಾಡಿ ನನ್ನ ವಿದ್ಯಾಧರ ಲೋಕಕ್ಕೆ ಹೋಗಲು ಇಚ್ಛಿಸುತ್ತಿದ್ದೇನೆ. ವಿದ್ಯೆಗಳನ್ನು ಸಾಧನೆಮಾಡಿ ನನ್ನ ಸಾಧನೆಗೆ ವಶವಾಗದೆ ಇರುವುದರಿಂದ ಆಕಾಶಕ್ಕೆ ಹಾರಿ ಮತ್ತೆ ನೆಲದಲ್ಲಿ ಬೀಳುತ್ತಿದ್ದೇನೆ ಎಂದನು. “ಆ ವಿದ್ಯಾಮಂತ್ರಗಳನ್ನು ನನಗೆ ತಿಳಿಸು* ಎಂದು ಅಭಯ ಕುಮಾರನು ಅವನನ್ನು ಕೇಳಿದನು. ಅವನು ಹೇಳಿದಾಗ – ಅಭಯಕುಮಾರನು ಸ್ವತಃಮಂತ್ರ ವ್ಯಾಕರಣಗಳಲ್ಲಿ ಅತ್ಯಂತ ಕುಶಲನಾಗಿದ್ದುದರಿಂದ ಆ ಮಂತ್ರಕ್ಕೆ ಪ್ರಸ್ತಾರ ಹಾಕಿ ನೋಡಿದನು. ಆ ಮಂತ್ರಗಳು ಕೆಲವೆಡೆ ಕಡಮೆ ಅಕ್ಷರದಿಂದಲೂ ಕೆಲವೆಡೆ ಹೆಚ್ಚಿನ ಅಕ್ಷರದಿಂದಲೂ ಕೂಡಿ ತಪ್ಪಾಗಿರುವುದನ್ನು ತಿಳಿದು, ಕಡಿಮೆಯಿರುವಲ್ಲಿ ಅಕ್ಷರಗಳನ್ನು ಸೇರಿಸಿ ಅಕವಿರುವಲ್ಲಿ ಅಕ್ಷರಗಳನ್ನು ಕಳೆದು ತಿದ್ದಿ, ‘ಈ ರೀತಿಯಾಗಿ ಅಕ್ಷರಗಳನ್ನು ಓದು’ ಎಂದು ಹೇಳಿದನು. ಚಿಂತಾಗತಿ ಆ ರೀತಿಯಲ್ಲಿ ಮಂತ್ರಗಳನ್ನು ಉಚ್ಚಾರಣೆ ಮಾಡಲು ಅವನಿಗೆ ವಿದ್ಯೆಗಳು ಸಿದ್ಧಿಯಾದವು. ಸಿದ್ಧಿಯಾಗಲು ವಿದ್ಯಾಧರನು ಹೀಗೆ ಹೇಳಿದನು – “ನೀನು ನನಗೆ ಉಪಕಾರ ಮಾಡಿದವನಾಗಿರುವೆ. ಶ್ರೇಷ್ಠ ಮಿತ್ರನಾಗಿರುವೆ. ನಿನಗೆ ನಾನು ಆಜ್ಞಾಧಾರಕನಾಗುವೆನು. ನನಗೇನಾದರೂ ಒಂದು ಕೆಲಸವನ್ನು ಹೇಳು. ಹೀಗೆ ಹೇಳಿದಾಗ, ಅಭಯಕುಮಾರನು “ನನ್ನ ತಾಯಿಯ ಬಯಕೆಯನ್ನ ಈಡೇರಿಸು* ಎಂದನು. ಆತನು ಬಯಕೆ ಏನೆಂಬುದನ್ನು ಕೇಳಿಕೊಂಡು, ಸೂರ್ಯನು ಉದಯಿಸಿದೊಡನೆ ತನ್ನ ವಿದ್ಯೆಗಳಿಂದಲೇ ಬೇಸಗೆಯನ್ನು ಮಳೆಗಾಲವನ್ನು ಮಾಡಿದನು. ಬಿಳಿಯಾದ ಆನೆಯ ಮೇಲೆ ರಾಣಿಯನ್ನು ಕುಳ್ಳಿರಿಸಿ ಪರಿವಾರವನ್ನೂ ಸೈನ್ಯವನ್ನೂ ಕೂಡಿ ಸುವಾಸನೆಯ ಹೂಗಳ ಮಳೆಯನ್ನು ಸುರಿಸುತ್ತಾ,

ಮರ್ದಳೆ ಝಲ್ಲರಿ ಮೃದಂಗ ಶಂಖ ವಂಶ ಕಹಳಾದಿಗಳುಂ ಮುಂದೆ ಬಾಜಿಸೆ ಪೊೞಲಂ ಪೊಱಮಟ್ಟು ವಿಂಧ್ಯಾಟವಿಗೆ ವೋಗಿಯಡವಿಯೆಲ್ಲಮಂ ತೊೞಲ್ದು ನೋಡಿಯಾಲದ ಪಣ್ಗಳಂ ತಾನೆಯಾಯ್ದು ಸೋಂಕಿಲಂ ತೀವಿಕೊಂಡಾಗಳ್ ಬಯಕೆ ನೆಱೆದೊಡೆ ಮತ್ತಾ ಪೊೞಲ್ಗರಸಿಯಂ ತಂದು ಕರುಮಾಡಮಂ ಪುಗಿಸಿದ ಬೞಕ್ಕಭಯಕುಮಾರಂಗಿಂತೆಂದನಾನಿಂ ಪೋಪೆನೆಂದಾನುಂ ನಿನಗೆ ಬಾೞ್ತೆಯಾಂದೆನ್ನಂ ನೆನೆವ್ಯದೆಂದಭಯಕುಮಾರನಂ ಬೀೞ್ಕೊಂಡು ಕಾಮಲತೆಗಂ ಪೇೞ್ದು ತನ್ನ ವಿದ್ಯಾಧರಲೋಕಕ್ಕೆ ಪೋದಂ ಮತ್ತೆ ಧನಶ್ರೀ ಮಹಾದೇವಿಯುಂ ನವಮಾಸಂ ನೆಱೆದು ಬೆಸಲೆಯಾಗಿ ಮಗಂ ಪುಟ್ಟಿದೊಡಾತಂಗೆ ತಾಯುಂ ತಂದೆಯುಂ ಗಜಕುಮಾರನೆಂದು ಪೆಸರನಿಟ್ಟರ್ ಇಂತಿಷ್ಟ ವಿಷಯ ಕಾಮ ಭೋಗಂಗಳನನುಭವಿಸುತ್ತಂ ಪಲಕಾಲಂ ಸಲೆ ಮತ್ತೊಂದುದಿವಸಂ ರಾಜಗೃಹದ ನೈಋತಿಯ ದೆಸೆಯೊವಿಳ್ವಿಪುಳಗಿರಿಯೆಂಬ ಪರ್ವತದ ಮೇಗೆ ವರ್ಧಮಾನ ಭಟಾರರ ಸಮವಸರಣಂ ಬಂದಿರ್ದೊಡೆ ಋಷಿನಿವೇದಕಂ ಕಂಡು ಪೋಗಿ ಶ್ರೇಣಿಕ ಮಾಹಾರಾಜಂಗೆ ಭಟಾರರ ಬರವಂ ಪೇೞ್ದೊಡಾತನುಂ ಸಿಂಹಾಸನದಿಂದೆರ್ದಾ ದೆಸೆಯತ್ತೇೞಡಿಯಂ ನಡೆದು ಸಾಷ್ಟಾಂಗಮೆಱಗಿ ಪೊಡೆವಟ್ಟು ಪೇೞ್ದತಂಗೆ ತುಷ್ಟಿದಾನಂಗೊಟ್ಟು ಆನಂದಭೇರಿಯಂ ಪೊಯ್ಸಿ ಪುತ್ರ ಪೌತ್ರ ಕಳತ್ರ ಮಿತ್ರ ಪರಿವಾರ ಸಹಿತಂ ವಂದನಾಭಕ್ತಿಗೆ ಪೋಗಿ ಸಟಿಕಮಣಿಮಯಮಪ್ಪ ಸೋಪಾನಪಂಕ್ತಿಗಳಿಂದೇಱ

ಸಮರ್ಥವಾದ ಪಟಹ, ಪಣವ, ತುಣವ, ಭಂಭಾ, ಮದ್ದಳೆ, ಝಲ್ಲರಿ, ಮೃದಂಗ, ಶಂಖ, ಕೊಳಲು, ಕಹಳೆ – ಮುಂತಾದವುಗಳು ಶಬ್ದ ಮಾಡುತ್ತ ಮುಂದೆ ಬರುತ್ತಿರಲು, ಪಟ್ಟಣವನ್ನು ಹೊರಟು ವಿಂಧ್ಯಪರ್ವತದ ಕಾಡಿಗೆ ಹೋಗಿ, ಕಾಡನ್ನೆಲ್ಲ ಸುತ್ತಾಡಿ ನೋಡಿ ಆಲದ ಹಣ್ಣುಗಳನ್ನು ತಾನೇ ಆಯ್ದುಕೊಂಡು ಮಡಿಲಲ್ಲಿ ತುಂಬಿಸಿಕೊಂಡಳು. ಆಗ ಅವಳ ಬಯಕೆ ಪೂರ್ಣವಾಯಿತು. ಆಮೇಲೆ ಆ ಪಟ್ಟಣಕ್ಕೆ ರಾಣಿಯನ್ನು ಕರೆತಂದು ಅರಮನೆಯನ್ನು ಪ್ರವೇಶಗೊಳಿಸಿದ ನಂತರ ಚಿಂತಾಗತಿ ವಿದ್ಯಾಧರನು ಅಭಯಕುಮಾರನಿಗೆ ಹೀಗೆಂದನು – “ನಾನೀಗ ಹೋಗುತ್ತೇನೆ. ಎಂದಾದರೂ ನಿನಗೆ ಉಪಯುಕ್ತವಾದಂದು ನನ್ನನ್ನು ಸ್ಮರಿಸುವುದು* ಹೀಗೆ ಹೇಳಿ, ಅಭಯಕುಮಾರನನ್ನು ಬೀಳ್ಕೊಂಡು ಕಾಮಲತೆಗೂ ಹೇಳಿ, ತನ್ನ ವಿದ್ಯಾಧರಲೋಕಕ್ಕೆ ತೆರಳಿದನು. ಆಮೇಲೆ ಧನಶ್ರೀ ಮಹಾದೇವಿಗೆ ಒಂಬತ್ತು ತಿಂಗಳು ತುಂಬಿ, ಹೆರಿಗೆಯಾಗಿ ಮಗನು ಹುಟ್ಟಲು ಅವನಿಗೆ ತಾಯಿಯೂ ತಂದೆಯೂ ಗಜಕುಮಾರನೆಂದು ಹೆಸರಿಟ್ಟರು. ಈ ರೀತಿಯಾಗಿ ಇಷ್ಟವಿಷಯದ ಕಾಮಸುಖಗಳನ್ನು ಅನುಭವಿಸುತ್ತ ಹಲವು ಕಾಲ ಕಳೆಯಲು ಮತ್ತೊಂದು ದಿವಸ ರಾಜಗೃಹದ ನೈಋತ್ಯದಿಕ್ಕಿನ ವಿಪುಳಗಿರಿಯೆಂಬ ಪರ್ವತದ ಮೇಲೆ ವರ್ಧಮಾನತೀರ್ಥಂಕರರ ಧರ್ಮೋಪದೇಶದ ಸಭೆ ಬಂದಿರಲು ಋಷಿನಿವೇದಕನು ಕಂಡು, ಶ್ರೇಣಿಕ ಮಹಾರಾಜನ ಬಳಿಗೆ ಹೋಗಿ ತೀರ್ಥಂಕರರ ಬರವನ್ನು ತಿಳಿಸಿದನ್ನು. ಶ್ರೇಣಿಕನು ಸಿಂಹಾಸನದಿಂದ ಎದ್ದು ಆ ದಿಕ್ಕಿನ ಕಡೆಗೆ ಏಳು ಹೆಜ್ಜೆಯನ್ನು ನಡೆದು ಸಾಷ್ಟಾಂಗವಂದನೆಯನ್ನು ಮಾಡಿ, ಈ ಸಂಗತಿಯನ್ನು ಹೇಳಿದವನಿಗೆ ಸಂತೃಪ್ತಿಯಾಗತಕ್ಕ ದಾನವನ್ನು ಕೊಟ್ಟು ಆನಂದಭೇರಿಯನ್ನು ಹೊಡೆಸಿದನು. ಮಕ್ಕಳು, ಮೊಮ್ಮಕ್ಕಳು, ಹೆಂಡತಿ, ಗೆಳೆಯರ ಪರಿವಾರ ಸಮೇತವಾಗಿ ಭಕ್ತಿಯ ವಂದನೆ

ಸಮವಸರಣಂಬೊಕ್ಕು ಗಂಧ ಕುಟಿ ಪ್ರಾಸಾದಮಂ ತ್ರಿಃಪ್ರದಕ್ಷಿಣಂಗೆಯ್ದು ಮುಂದೆ ನಿಂದು ಸ್ತುತಿಶತಸಹಸ್ರಂಗಳಿಂ ಸ್ತುತಿಯಿಸಿ ಬಂದಿಸಿ ಗಂಧ ಪುಷ್ಪ ದೀಪ ಧೂಪಾಕ್ಷತಂಗಳಿಂರ್ಚಿಸಿ ಗಣಧರದೇವರ್ ಮೊದಲಾಗೊಡೆಯ ರಿಸಿಯರ್ಕಳುಮಂ ಗುರು ಪರಿವಿಡಿಯಿಂದಂ ವಂದಿಸಿ ತಮ್ಮಿರ್ಪೋವರಿಯೊಳಿರ್ದು ಪಿರಿದು ಬೇಗಂ ಧರ್ಮಮಂ ಕೇಳ್ದು ತದನಂತರಮೆ ಗಜಕುಮಾರಂ ತನ್ನ ಭವಾಂತರಂಗಳಂ ಬೆಸಗೊಂಡೊಡೆ ಗಣಧರದೇವರಿಂತೆಂದು ಪೇೞ್ದರೀ ಭವದಿಂ ತೊಟ್ಟು ಅಯ್ದನೆಯ ಭವದಂದು ನೀಂ ಕೊಂಕಣ ನಡೊಳ್ತುಂಗಭದ್ರನೆಂಬ ಪೋಡುಂಗಾಱನಯ್ ನೀಂ ಕುಮ್ಮರಿಯಂ ಸುಟ್ಟು ಪೋಗಿ ಪೊೞ್ತಡೆ ಬಂದು ನೋಡುವನ್ನೆಗಮಾ ಕಿರ್ಚಿನೊಳ್ ಸತ್ತ ಋಷಿರೂಪಂ ಕಂಡು ಕರುಣಿಸಿಯಲ್ಲಿಯೆ ಕಿರ್ಚಂ ಪೊಕ್ಕು ಸತ್ತು ವ್ಯಂತರದೇವನಾಗಿಯಾಯುಷ್ಯಾಂತದೊಳ್ ವಿಂಧ್ಯಾಟವಿಯೊಳ್ ಬಿಳಿಯಾನೆಯಾಗಿ ಪುಟ್ಟಿಯಚ್ಯುತೇಂದ್ರಂ ಪ್ರತಿಬೋಸೆ ಸಮ್ಯಕ್ತ್ವ ಪೂರ್ವಕಂ ಶ್ರಾವಕವ್ರತಂಗಳಂ ಕೈಕೊಂಡು ಪ್ರತಿಪಾಳಿಸಿಯಾಯುಷ್ಯಾಂತದೊಳ್ ಪದಿನೆಂಟು ಸಾಗರೋಪಮಾಯುಷ್ಯಮನೊಡೆಯ ಸಹಸ್ರಾರಕಲ್ಪದೊಳ್ ದೇವನಾಗಿ ಪುಟ್ಟಿ ಅಲ್ಲಿಂ ಬಂದೀಗಳ್ ಗಜಕುಮಾರನೆ ಆದೆಯೆಂದು ಪೇೞ್ದೊಡೆ ತನ್ನ ಭವಂಗಳಂ ಕೇಳ್ದು ವೈರಾಗ್ಯಮನೊಡೆಯನಾಗಿ ಎರ್ದು ವರ್ಧಮಾನ ಭಟಾರರ್ಗಿದಿರಂ ನಿಂದು ಕೈಗಳಂ ಮುಗಿದು ದೀಕ್ಷಾಪ್ರಸಾದಂಗೆಯ್ಯಿಮೆಂದು ಬೇಡಿ ತಪಂಬಟ್ಟಾಗಮಂಗಳೆಲ್ಲಮಂ ಕಲ್ತೇಕವಿಹಾರಿಯಾಗಿ ಗ್ರಾಮೇಕರಾತ್ರಂ ನಗರೇ ಪಂಚರಾತ್ರಂ

ಸಲ್ಲಿಸಲು ಹೋಗಿ ಸಟಿಕ ರತ್ನಮಯವಾದ ಮೆಟ್ಟಿಲುಗಳ ಸಾಲುಗಳನ್ನು ಹತ್ತಿ ಧರ್ಮಸಭೆಯನ್ನು ಹೊಕ್ಕನು. ಗಂಧಕುಟಿಯ ಮಹಾಗೃಹವನ್ನು ಮೂರು ಪ್ರದಕ್ಷಿಣೆ ಹಾಕಿ ಮುಂದೆ ನಿಂತು ಸಾವಿರಾರು ಸ್ತುತಿಗಳಿಂದ ಸ್ತುತಿಸಿ, ವಂದಿಸಿ, ಗಂಧ ಪುಷ್ಪ ದೀಪ ಧೂಪ ಅಕ್ಷತೆಗಳಿಂದ ಪೂಜಿಸಿ ಗಣಧರ ದೇವರೇ ಮುಂತಾಗಿ ಉಳ್ಳ ಋಷಿಗಳನ್ನು ಗೌರವಾನುಕ್ರಮದಿಂದ ನಮಿಸಿ ತಾವು ಇರಬೇಕಾದ ಕೊಠಡಿಯಲ್ಲಿದ್ದು ಬಹಳ ಹೊತ್ತು ಧರ್ಮವನ್ನು ಕೇಳಿ, ಆಮೇಲೆ ಗಜಕುಮಾರನು ತನ್ನ ಜನ್ನಾಂತರದ ಸಂಗತಿಗಳನ್ನು ಕೇಳಿದನು. ಆಗ ಗಣಧರದೇವರು ಈ ರೀತಿಯಾಗಿ ಹೇಳಿದರು – “ಈ ಜನ್ಮದಿಂದ ಹಿಡಿದು ಐದನೆಯ ಜನ್ಮದಂದು ನೀನು ಕೊಂಕಣ ನಾಡಿನಲ್ಲಿ ತುಂಗಭದ್ರನೆಂಬ ಕಾಡು ಕಡಿವವನಾಗಿದ್ದಿ. ನೀನು ಕುಮ್ಮರಿಯನ್ನು ಸುಟ್ಟು ಹೋಗಿ, ಹೊತ್ತಾರೆ ಬಂದು ನೋಡುವಾಗ ಆ ಬೆಂಕಿಯಲ್ಲಿ ಸತ್ತಿದ್ದ ಋಷಿರೂಪವನ್ನು ಕಂಡು ದುಃಖಿತನಾಗಿ ಅಲ್ಲಿಯೇ ಬಿಂಕಿಯನ್ನು ಹೊಕ್ಕು ಸತ್ತು ವ್ಯಂತರದೇವನಾದೆ. ಅಲ್ಲಿ ಆಯುಷ್ಯವು ಕೊನೆಗೊಂಡಾಗ ವಿಂಧ್ಯೆಯ ಕಾಡಿನಲ್ಲಿ ಬಿಳಿಯ ಆನೆಯಾಗಿ ಹುಟ್ಟಿದೆ. ಅಚ್ಯುತೇಂದ್ರನ ಉಪದೇಶದಿಂದ ಸಮ್ಯಕ್ತ ಪೂರ್ವಕವಾಗಿ ಶ್ರಾವಕ ವ್ರತಗಳನ್ನು ಸ್ವೀಕರಿಸಿ, ನಡೆಸಿ, ಆಯುಷ್ಯ ಕೊನೆಯಾಗಲು ಹದಿನೆಂಟು ಸಾಗರವನ್ನು ಹೋಲುವ ಆಯುಷ್ಯವುಳ್ಳ ಸಹಸ್ರಾರಕಲ್ಪದಲ್ಲಿ ದೇವನಾಗಿ ಹುಟ್ಟಿ ಅಲ್ಲಿಂದ ಬಂದು ಈ ಗಜಕುಮಾರನಾಗಿರುವೆ* – ಎಂದು ಗಣಧರರು ಹೇಳಿದಾಗ ಗಜಕುಮಾರನು ತನ್ನ ಹಿಂದಿನ ಜನ್ಮಗಳ ಸಂಗತಿಯನ್ನು ಕೇಳಿ ವೈರಾಗ್ಯವುಳ್ಳವನಾದನು. ಎದ್ದು ವರ್ಧಮಾನತೀರ್ಥಂಕರರ ಎದರಿನಲ್ಲಿ ನಿಂತು ಕೈಗಳನ್ನು ಮುಗಿದು ‘ದೀಕ್ಷೆಯನ್ನು ಅನುಗ್ರಹಿಸಿರಿ’ ಎಂದು ಬೇಡಿಕೊಂಡನು. ತಪಸ್ಸನ್ನು ಸ್ವೀಕರಿಸಿದನು. ಶಾಸ್ತ್ರಗಳೆಲ್ಲವನ್ನೂ ಕಲಿತು ಪರಿವ್ರಾಜಕರಾಗಿ ‘ಗ್ರಾಮದಲ್ಲಿ ಒಂದು ರಾತ್ರಿ, ನಗರದಲ್ಲಿ ಐದು ರಾತ್ರಿ, ಕಾಡಿನಲ್ಲಿ ಹತ್ತು ರಾತ್ರಿ’ ಎಂಬೀ

ಅಟವ್ಯಾಂ ದಶರಾತ್ರಮೆಂಬೀ ನ್ಯಾಯದಿಂ ಗ್ರಾಮ ನಗರ ಖೇಡ ಕರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತಂ ಕಳಿಂಗನಾಡನೆಯ್ದಿಯಲ್ಲಿ ದಂತಪುರಮೆಂಬ ಪೊೞಲ ಪಡುವಣ ಬೆಟ್ಟದ ಮೇಗೇಕಸ್ಥಿರ ಯೋಗಂಗೊಂಡು ಕಲ್ನೆಲೆನಿಂದರನ್ನೆಗಂ ಆ ಪೊೞಲನಾಳ್ವೊಂ ನರಸಿಂಹನೆಂಬರಸನಾತನ ಮಹಾದೇವಿ ವಸುಮತಿಯೆಂಬೊಳಾಯಿರ್ವ್ವರ್ಗ್ಗಂ ಮಗಂ ನರಪಾಳನೆಂಬೊಂ ಮಂತ್ರಿ ಬುದ್ಧದಾಸನೆಂಬೊನಂತವರ್ಗಳ್ವೆರಸೊಂದು ದಿವಸಂ ಕರುಮಾಡದ ಮೇಗಣ ನೆಲೆಯೊಳಿರ್ದರಸಂ ದಿಶಾವಳೋಕನಂ ಗೆಯ್ಯುತ್ತಿರ್ದಾತಂ ಬೆಟ್ಟದ ಮೇಗಾ ತಪಮಿರ್ದ ಋಷಿಯರಂ ಕಂಡೀ ತಪಸ್ವಿ ಬೇಸಗೆಯೊಳ್ ಬೆಟ್ಟದ ಮೇಗಿರ್ದ್ದೆಕೆ ಬಿಸಿಲ್ಗಾಯ್ದಪ್ಪೊನೆಂದು ಮಂತ್ರಿಯಪ್ಪ ಬುದ್ಧದಾಸನಂ ಬೆಸಗೊಂಡೊಡಾತಂ ಕೌಟಿಲ್ಯ ಭಾವದಿಂದಿಂತೆಂದನೀ ತಪಸ್ವಿಗೆ ಮಹಾವಾತಂ ತಗುಳ್ದುದರಿಂದಂ ನಿಂದಿರ್ದೊನೆಂದೊಡರಸನಿದರ್ಕೆ ಮರ್ದೇನೆಂದು ಬೆಸಗೊಂಡೊಡಾತನಿಂತೆಂದನಾ ತಪಸ್ವಿಯೇಱರ್ದ ಶಿಲೆಯಂ ಕಾಸುವ್ಯದೆಂದೊಡಂತಪ್ಪೊಡೆ ನೀಂ ಪಕ್ಕದಿರ್ದು ಕಾಸೆಂದು ಬೆಸವೇೞ್ದೊಡಾತನಂತೆ ಗೆಯ್ವೆನೆಂದು ಪೋಗೆಯಾ ಋಷಿಯರ್ ಚರಿಗೆವೋದರನ್ನೆಗಂ ಯೋಗಪೀಠದ ಸಿಲೆಯಂ ಕಿಚ್ಚಿನ ಬಣ್ಣದಂತಾಗಿ ಕಾಸಿ ಪೋದನನ್ನೆಗಂ ಚರಿಗೆವುಗುತ್ತಿರ್ದ ರಿಸಿಯರಂ ದೇವತೆ ಕಂಡಿಂತೆಂದಳ್ ನಿಮಗಾಯುಷ್ಯಮಿಲ್ಲೇಕೆ ಚರಿಗೆ ಮಾಡಲ್ ಪೋಪಿರೆಂದೊಡೆ ಚರಿಗೆವುಗದಂತ ಮಗುೞ್ದು ಬರ್ಪೊರನ್ನೆಗಂ

ನ್ಯಾಯದಂತೆ ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳನ್ನು ಸಂಚಾರಮಾಡುತ್ತ ಕಳಿಂಗನಾಡಿಗೆ ಹೋದರು. ಅಲ್ಲಿ ದಂತಪುರ ಎಂಬ ಪಟ್ಟಣದ ಪಶ್ಚಿಮದ ಬೆಟ್ಟದ ಮೇಲೆ ಒಂದೇ ಆದ ಸ್ಥಿರವಾದ ಯೋಗವನ್ನು ಕೈಕೊಂಡು ಕಲ್ಲಿನಂತೆ ನೆಲೆನಿಂತರು. ಆ ಪಟ್ಟಣವನ್ನು ನರಸಿಂಹನೆಂಬ ರಾಜನು ಆಳುತ್ತಿದ್ದನು. ಅವನಿಗೆ ವಸುಮತಿ ಎಂಬವಳು ಮಹಾರಾಣಿಯಾಗಿದ್ದಳು. ಆ ದಂಪತಿಗಳಿಗೆ ನರಪಾಳನೆಂಬವನು ಮಗನು. ಬುದ್ಧದಾಸನು ಮಂತ್ರಿ. ಒಂದು ದಿವಸ ನರಸಿಂಹ ರಾಜನು ಅವರನ್ನೆಲ್ಲ ಕೂಡಿಕೊಂಡು ಅರಮನೆಯ ಮೇಲಣ ಉಪ್ಪರಿಗೆಯಲ್ಲಿ ಇದ್ದುಕೊಂಡು ದಿಕ್ಕುಗಳನ್ನು ನೋಡುತ್ತಾ ಇದ್ದನು. ಆತನು ಬೆಟ್ಟದ ಮೇಲುಗಡೆ ತಪಸ್ಸನ್ನು ಮಾಡುತ್ತಿದ್ದ ಋಷಿಗಳನ್ನು ಕಂಡು – ‘ಈ ತಪಸ್ವಿಯು ಬೇಸಿಗೆಯಲ್ಲಿ ಬೆಟ್ಟದ ತುದಿಯಲ್ಲಿದ್ದು ಯಾಕೆ ಬಿಸಿಲನ್ನು ಕಾಯಿಸುತ್ತ ಇದ್ದಾನೆ? ಎಂದು ಮಂತ್ರಿಯಾದ ಬುದ್ಧದಾಸನನ್ನು ಕೇಳಿದನು. ಆಗ ಅವನು ಕಹಕದ ಭಾವನೆಯಿಂದ ಹೀಗೆಂದನು – “ಈ ಋಷಿಗೆ ಮಹತ್ತರವಾದ ವಾತರೋಗ ಸೇರಿದೆ. ಅದರಿಂದ ಬಿಸಿಲಲ್ಲಿ ನಿಂತಿದ್ದಾನೆ* – ಎಂದಾಗ ರಾಜನು ‘ಇದಕ್ಕೆ ಮದ್ದೇನಿದೆ ? ಎಂದು ಕೇಳಿದನು. ಬುದ್ಧದಾಸನು ಆಗ ಹೀಗೆ ಹೇಳಿದನು – ‘ಆ ತಪಸ್ವಿ ಕುಳಿತುಕೊಂಡಿರುವ ಶಿಲೆಯನ್ನು ಕಾಯಿಸುವುದೇ ಮದ್ದು’ ಎಂದಾಗ ರಾಜನು ‘ಹಾಗಾದರೆ ನೀನು ಬಳಿಯಲ್ಲಿದ್ದು ಕಾಯಿಸು’ ಎಂದು ಆಜ್ಞೆಮಾಡಿದನು : ಮಂತ್ರಿಯ ‘ಹಾಗೆಯೇ ಮಾಡುವೆನು’ ಎಂದುಕೊಂಡು ತೆರಳಿದನು. ಋಷಿಗಳು ಭಿಕ್ಷೆಗೆ ಹೋದ ವೇಳೆಗೆ ಅವರ ಯೋಗಪೀಠದ ಶಿಲೆಯನ್ನು ಬೆಂಕಿಯ ಬಣ್ಣದ ಹಾಗೆ ಆಗುವಂತೆ ಕಾಯಿಸಿ ಹೋದನು. ಆ ವೇಳೆಗೆ ಭಿಕ್ಷಾಟನೆ ಮಾಡುತ್ತಿದ್ದ ಋಷಿಗಳಿಗೆ ದೇವತೆ ಕಂಡು “ನಿಮಗೆ ಆಯುಷ್ಯವಿಲ್ಲ ಏಕೆ ಭಿಕ್ಷೆಗೆ ಹೋಗುತ್ತೀರಿ? ಎನ್ನಲು ಮತ್ತೆ ಭಿಕ್ಷೆಗೆ ಹೋಗದೆ ಹಾಗೆಯೇ ಹಿಂದೆರಳಿ

ಕಿಚ್ಚಿನ ಬಣ್ಣಮಾಗಿ ಕಾಯ್ದಿರ್ದ ಶಿಲೆಯಂ ಕಂಡೆಮಗಿನೆತೆಯಾಯುಷ್ಯಮೆಂದು ಪರಿಚ್ಛೇದಿಸಿ ಸಿದ್ಧಭಕ್ತಿ ಜೋಗಭಕ್ತಿಗೆಯ್ದು ಚತುರ್ವಿಧಮಪ್ಪಾಹಾರಕ್ಕಂ ಶರೀರಕ್ಕಂ ಯಾವಜ್ಜೀವಂ ನಿವೃತ್ತಿಗೆಯ್ದಾಚಾರ್ಯ ಭಕ್ತಿಗೆಯ್ದು ಕಾಯ್ದಿರ್ದ ಯೋಗಪೀಠಮನೇಱ ಬಾಹ್ಯಾಭ್ಯಂತರ ಪರಿಗ್ರಹಂಗಳಂ ತೊಱೆದು ಸಮತ್ವೀ ಭಾವನೆಯಂ ಭಾವಿಸಿ ಕಿಚ್ಚಿನುಪಸರ್ಗಮಂ ಸೈರಿಸಿ ಚತುರ್ವಿಧಮಪ್ಪ ಧರ್ಮಧ್ಯಾನಮಂ ನಾಲ್ಕುಂ ತೆಱದ ಶುಕ್ಮಧ್ಯಾನಂಗಳುಮಂ ಧ್ಯಾನಿಸಿ ಎಂಟು ಕರ್ಮಂಗಳನೊರ್ಮೊದಲೆ ಕಿಡಿಸಿ ಮೋಕ್ಷಕ್ಕೆ ವೋದರ್ ಅನ್ನೆಗಂ ಚತುರ್ವಿಧ ದೇವನಿಕಾಯಂ ಬಂದು ದಿವ್ಯಮಪ್ಪ ಗಂಧ ಪುಷ್ಪ ದೀಪಧೂಪಾಕ್ಷತಂಗಳಿಂ ಶ್ರೀಪಾದಮನರ್ಚಿಸಿ ಪೊಡೆವಟ್ಟು ಮತ್ತೆ ಬುದ್ಧದಾಸನಂ ದೇವರ್ಕಳ್ ಜಡಿದು ನುಡಿದೊಡವನಂಜಿಯೆಂದನಾನಱಯದೆ ಪಂಚಮಹಾಪಾತಕನೆಂ ಪೊಲ್ಲಕೆಯ್ದೆನೆನಗೊರ್ಮಿಂಗೆ ಕ್ಷಮಿಯಿಸಿಮೆಂದು ನುಡಿದೊಡೆ ದೇವರ್ಕಳ್ ಕ್ಷಮಿಯಿಸಿ ತಂತಮ್ಮ ಸ್ಥಾನಂಗಳ್ಗೆ ಪೋದರ್ ಇತ್ತ ಬುದ್ಧದಾಸನುಮಾ ರಿಸಿಯರ ತಪದ ಮಹಾತ್ಮ ಕಮುಮಂ ದೇವರ್ಕಳ್ ಬಂದು ಪೂಜಿಸಿದುದುಮಂ ಕಂಡಿದುವೆ ಧರ್ಮಮಿದುವೆ ತಪಮೆಂದು ನಂಬಿ ಸಮ್ಯಕ್ತ ಪೂರ್ವಕಂ ಶ್ರಾವಕವ್ರತಂಗಳಂ ಕೈಕೊಂಡು ನೆಗೞ್ದಂ ಮತ್ತಾ ನರಸಿಂಹನೃಪತಿಯುಂ ಪಶ್ಚಾತ್ತಾಪಮಾಗಿ ಋಷಿವಧೆಗೆಯ್ದ ಪಾಪಮಿಂತಲ್ಲದೆ ನೀಗದೆಂದು ನರಪಾಳನೆಂಬ ಪಿರಿಯ ಮಗಂಗೆ ರಾಜ್ಯಪಟ್ಟಂಗಟ್ಟಿ ಪಲಂಬರರಸು ಮಕ್ಕಳ್ವೆರಸು ಸುಧರ್ಮರೆಂಬ

ಬರುತ್ತಿದ್ದರು. ಆಗ ಬೆಂಕಿಯ ಬಣ್ಣವಾಗಿ ಕಾಯ್ದ ಶಿಲೆಯನ್ನು ಕಂಡು, ನಮಗೆ ಇಷ್ಟೇ ಆಯಷ್ಯವಿರುವುದೆಂದು ನಿಶ್ಚಯ ಮಾಡಿಕೊಂಡು ಸಿದ್ಧಭಕ್ತಿ ಯೋಗಭಕ್ತಿಯನ್ನು ಮಾಡಿ ನಾಲ್ಕು ವಿಧದ ಆಹಾರಕ್ಕೂ ಶರೀರಕ್ಕೂ ಪ್ರಾಣವಿರುವವರೆಗೂ ನಿವೃತ್ತಿಮಾಡಿ, ಆಚಾರ್ಯರಲ್ಲಿ ಭಕ್ತಿಯನ್ನು ಮಾಡಿ ಕಾಯ್ದಿದ್ದ ಯೋಗಪೀಠದ ಮೇಲೆ ಕುಳಿಗು ಭೂಮಿ, ಮನೆ, ಧನ, ಧಾನ್ಯ – ಮುಂತಾದ ಬಾಹ್ಯ ಪರಿಗ್ರಹಗಳನ್ನೂ ಮಿಥ್ಯಾತ್ವ, ರಾಗ, ದ್ವೇಷ – ಮುಂತಾದ ಆಂತರಿಕ ಪರಿಗ್ರಹಗಳನ್ನೂ ತ್ಯಜಿಸಿ ಸಮತ್ವದ ಭಾವನೆಯನ್ನು ಭಾವಿಸಿ ಅಗ್ನಿಯಿಂದಾದ ಉಪಸರ್ಗವನ್ನು ಸಹಿಸಿ ನಾಲ್ಕು ವಿಧವಾದ ಧರ್ಮಧ್ಯಾನಗಳನ್ನೂ ನಾಲ್ಕು ರೀತಿಯ ಶುಕ್ಲಧ್ಯಾನಗಳನ್ನೂ ಧ್ಯಾನಿಸಿ ಘಾತಿ – ಅಘಾತಿರೂಪದ ಎಂಟು ಕರ್ಮಗಳನ್ನು ಒಮ್ಮೆಗೇ ನಾಶಪಡಿಸಿ ಮೋಕ್ಷಕ್ಕೆ ಹೋದರು. ಅಷ್ಟರಲ್ಲಿ ನಾಲ್ಕು ವಿಧದ ದೇವತಾ ಸಮೂಹವು ಬಂದು ದಿವ್ಯವಾದ ಗಂಧ, ಪುಷ್ಪ, ದೀಪ, ಧೂಪ, ಅಕ್ಷತೆಗಳಿಂದ ಋಷಿಗಳ ಶ್ರೀಪಾದವನ್ನು ಪೂಜಿಸಿ ಸಾಷ್ಟಾಂಗವಂದನೆ ಮಾಡಿದರು. ಆಮೇಲೆ ಬುದ್ಧದಾಸನನ್ನು ದೇವತೆಗಳು ಗದರಿಸಿ ನುಡಿಯಲು ಅವನು ಹೆದರಿ – “ಪಂಚಮಹಾಪಾತಕನಾದ ನಾನು ತಿಳಿಯದೆ ಕೆಟ್ಟುದನ್ನು ಮಾಡಿದೆನು. ನನಗೆ ಒಮ್ಮೆಗೆ ಕ್ಷಮೆಯನ್ನು ಕೊಡಿ* ಎಂದು ಹೇಳಲು ದೇವತೆಗಳು ಅವನನ್ನು ಕ್ಷಮಿಸಿ ತಂತಮ್ಮ ಸ್ಥಳಗಳಿಗೆ ಹೋದರು. ಇತ್ತ ಬುದ್ಧದಾಸನು ಈ ಋಷಿಗಳ ತಪಸ್ಸಿನ ಮಹಿಮೆಯನ್ನೂ ದೇವತೆಗಳು ಬಂದು ಪೂಜಿಸಿದುದನ್ನೂ ಕಂಡು – “ಇದೇ ಧರ್ಮವು, ಇದೇ ತಪಸ್ಸು* ಎಂದು ನಂಬಿ ಜೈನಧರ್ಮದಲ್ಲಿ ಪೂರ್ಣವಾದ ನಂಬಿಕೆಯೊಂದಿಗೆ ಶ್ರಾವಕಧರ್ಮವನ್ನು ಸ್ವೀಕರಿಸಿ, ಅವುಗಳನ್ನು ಆಚರಿಸಿದನು. ಅನಂತರ ಆ ನರಸಿಂಹರಾಜನು ಪಶ್ಚಾತ್ತಾಪಗೊಂಡವನಾಗಿ ಋಷಿಯನ್ನು ಕೊಂದ ಪಾಪವು ಈ ರೀತಿಯಿಂದಲ್ಲದೆ ಪರಿಹಾರವಾಗದೆಂದು ನರಪಾಳೆನೆಂಬ ಹಿರಿಯ ಮಗನಿಗೆ ರಾಜ್ಯಪಟ್ಟವನ್ನು ಕಟ್ಟಿ ಹಲವರು ರಾಜಕುಮಾರರೊಂದಿಗೆ ಸುಧರ್ಮರೆಂಬ ಋಷಿಗಳ

ಭಟಾರರ ಪಕ್ಕದೆ ತಪಂಬಟ್ಟು ಪಲಕಾಲಮುಗ್ರೋಗ್ರ ತಪಶೄರಣಂ ಗೆಯ್ದು ಸಮಾ ಮರಣದಿಂದಂ ಮಿಕ್ಕ ರತ್ನಂಗಳಂ ಸಾಸಿ ಸರ್ವಾರ್ಥಸಿದ್ಧಯೊಳ್ ಮೂವತ್ತುಮೂಱು ಸಾಗರೋಪ ಮಾಯುಷ್ಯಮನೊಡೆಯೊನಹಮಿಂದ್ರದೇವನಾದೊನ್ ಇಂತೀ ಕಥೆಗಳೆಲ್ಲಂ ಗುರುದತ್ತ ಭಟಾರರ ಕಥೆಗೆ ಪ್ರತಿಬದ್ಧಂಗಳ್ ಮತ್ತಂ ಪೆಱರ್ ಸಂನ್ಯಸನಂಗೆಯ್ದ ಭವ್ಯರ್ಕಳ್ ಗುರುದತ್ತ ಭಟಾರರುಮಂ ಹಳಮುಖ ಋಷಿಯರುಮಂ ಗಜಕುಮಾರ ಭಟಾರರುಮನಿಂತಿವರ್ಗಳಂ ಮನದೊಳ್ ಬಗೆದುಪಸರ್ಗಂಗಳುಮಂ ಪಸಿವುಂ ನೀರೞ್ಕೆ ಮೊದಲಾಗೊಡೆಯ ಇರ್ಪತ್ತೆರಡು ಪರೀಷಹಂಗಳಂ ಸೈರಿಸಿ ಸಮಾ ಮರಣದಿಂದಂ ಪರಮ ಶುದ್ಧ ಸಹಜ ದರ್ಶನ ಜ್ಞಾನ ಚಾರಿತ್ರಂಗಳಂ ಸಾಸಿ ಸ್ವರ್ಗಾಪವರ್ಗ ಸುಖಂಗಳನೆಯ್ದುಗೆ

ಬಳಿಯಲ್ಲಿ ತಪಸ್ಸನ್ನು ಸ್ವೀಕಾರಮಾಡಿ, ಅತ್ಯಂತ ಘನಘೋರವಾದ ತಪಸ್ಸನ್ನು ಆಚರಿಸಿ ಸಮಾ ಮರಣದಿಂದ ಶ್ರೇಷ್ಠವಾದ ದರ್ಶನ ಜ್ಞಾನ ಚರಿತ್ರಗಳೆಂಬ ರತ್ನತ್ರಯವನ್ನು ಸಾಸಿ ಸವಾರ್ಥಸಿದ್ಧಿಯೆಂಬ ಉನ್ನತವಾದ ಸ್ವರ್ಗದಲ್ಲಿ ಮೂವತ್ತಮೂರು ಸಾಗರವನ್ನು ಹೋಲುವ ಆಯುಃ ಪರಿಮಾಣವುಳ್ಳ ಅಹಮಿಂದ್ರದೇವನಾದನು. ಹೀಗೆ ಈ ಕಥೆಗಳೆಲ್ಲವೂ ಗುರುದತ್ತಭಟಾರರ ಕಥೆಗೆ ಅನುಬಂಧಗಳಾಗಿವೆ. ಮತ್ತು ಸಂನ್ಯಾಸ ಮಾಡಿದ ಇತರ ಭಟ್ಟರು ತಮ್ಮ ಮನಸ್ಸಿನಲ್ಲಿ ಗುರುದತ್ತ ಋಷಿಗಳನ್ನೂ ಹಳಮುಖ ಋಷಿಗಳನ್ನೂ ಸುಕುಮಾರಭಟಾರರನ್ನೂ ಹೀಗೆ ಇವರನ್ನು ಭಾವಿಸಿಕೊಂಡು ಉಪಸರ್ಗಗಳನ್ನೂ ಹಸಿವು ಬಾಯಾರಿಕೆ ಮುಂತಾಗಿರುವ ಇಪ್ಪತ್ತೆರಡು ಪರೀಷಹಗಳನ್ನೂ ಸಹಿಸಿಕೊಂಡು ಸಮಾಮರಣದಿಂದ ಶ್ರೇಷ್ಠವೂ ಪವಿತ್ರವೂ ಸಹಜವೂ ಆದ ದರ್ಶನಜ್ಞಾನ – ಚಾರಿತ್ರಗಳನ್ನು ಸಾಸಿ ಸ್ವರ್ಗ – ಮೋಕ್ಷ ಸುಖಗಳನ್ನು ಪಡೆಯಲಿ !