ಹಿಂದುಸ್ಥಾನಿ  ಸಂಗೀತದ ಹಿರಿಯ ತಲೆಮಾರಿನ ಖ್ಯಾತ ಗಾಯಕರು, ಪಂ. ಮಲ್ಲಿಕಾರ್ಜುನ ಮನಸೂರ ಅವರ              ಗುರು ಬಂಧುಗಳೂ ಆಗಿರುವ ಕರೂರು ಗುರುಬಸವವಾರ್ಯ ಹಿರೇಮಠರು ಕರ್ನಾಟಕದ ಹಿಂದುಸ್ಥಾನಿ ಸಂಗೀತ ಕ್ಷೇತ್ರದ  ದಿಗ್ಗಜರಲ್ಲೊಬ್ಬರು.

ಪಂ. ಗುರುಬಸವಾರ್ಯ ಹಿರೇಮಠರು ಜನಿಸಿದ್ದು ೧೯೦೯ರಲ್ಲಿ; ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕರೂರ ಎಂಬ ಗ್ರಾಮದಲ್ಲಿ ಅವರದು ವೈದಿಕ, ಸಂಸ್ಕೃತ ಪರಂಪರೆಯ ಮನೆತನ. ಅಜ್ಜ ಲಿಂ. ಕೊಟ್ರಯ್ಯನವರು ಕಾಶಿ ಪಂಡಿತರು. ಪುರಾಣ-ಪ್ರವಚನದಲ್ಲಿ ನಿಷ್ಣಾತರು. ತಂದೆ ಲಿಂ. ಬಸವಪ್ಪ ಶಾಸ್ತ್ರಿಗಳು ಲಿಂಗಪೂಜಾ ನಿಷ್ಠರು. ಸಂಸ್ಕೃತ ಪಂಡಿತರು. ತಾಯಿ ಲಿಂ. ರಾಚಮ್ಮನವರು ಶಿವಪೂಜಾ ಸಂಪನ್ನರು. ಇಂತಹ ವಾತಾವರಣದಲ್ಲಿ ಜನಿಸಿದ ಗುರುಬಸವಾರ್ಯರಿಗೆ ಸಂಸ್ಕೃತ, ಸಂಗೀತ ಬಾಲ್ಯದಲ್ಲಿಯೇ ಸೆಳೆದುಬಿಟ್ಟವು.

ಬಾಲಕ ಗುರುಬಸವಾರ್ಯರ ಪ್ರತಿಭೆ ಕಂಡ ಹಾನಗಲ್ಲ ಶ್ರೀ ಕುಮಾರಸ್ವಾಮಿಗಳು ೧೩ ವರ್ಷದ ಈ ಹುಡುಗನನ್ನು ತಮ್ಮೊಂದಿಗೆ ಶಿವಯೋಗ ಮಂದಿರಕ್ಕೆ ಕರೆದೊಯ್ದು ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿಗಳ ಶಿಷ್ಯನನ್ನಾಗಿಸಿದರು. ಬಾಲಕ ಗುರುಬಸವಾರ್ಯ ನಾಲ್ಕಾರು ವರ್ಷ ಪಂ. ಪಂಚಾಕ್ಷರಿ ಗವಾಯಿಗಳಲ್ಲಿ ನಂತರ ಮಿಂಜದ ಪಂ. ನೀಲಕಂಠ ಬುವಾ ಆಲೂರ ಮಠರಲ್ಲಿ ಐದಾರು ವರ್ಷ ಸಂಗೀತ ತರಬೇತಿ ಪಡೆದರು. ಹುಟ್ಟು ಪ್ರತಿಭೆ, ಗುರುವಿನ ಮಾರ್ಗದರ್ಶನ, ಕಠಿಣ ತಮ್ಮ ಸಾಧನೆಯಿಂದಾಗಿ ಗುರುಬಸವಾರ್ಯ ಹಿರೇಮಠರು ಪ್ರಬುದ್ಧ ಗಾಯಕರಾಗಿ ನಾಡಿನೆಲ್ಲೆಡೆ ಹೆಸರು ಪಡೆದರು. ಭದ್ರಾವತಿ, ಬೆಂಗಳೂರು, ಹೈದರಾಬಾದ್‌ ಹಾಗೂ ಧಾರವಾಡ ಆಕಾಶವಾಣಿ ಇವರ ಸಂಗೀತ ಕಾರ್ಯಕ್ರಮ ಪ್ರಸಾರ ಮಾಡಿದವು. ಗುರುಬಸವಾರ್ಯರು ರಾಣೆಬೆನ್ನೂರು ತಾಲ್ಲೂಕಿನ ಮೆಡ್ಲೇರಿಯಲ್ಲಿ ಸಂಗೀತ ಶಾಲೆ ಪ್ರಾರಂಭಿಸಿದರು. ಅನೇಕ ಆಸಕ್ತರಿಗೆ ಸಂಗೀತ ಶಿಕ್ಷಣ ನೀಡಿದರು. ೧೯೩೯ರ ಸುಮಾರಿನಲ್ಲಿ ಅವರು ಹಿಂದೂಸ್ಥಾನಿ ಖಯ್ಯಾಲ ಹಾಡುಗಾರಿಕೆಯ ಜೊತೆಗೆ ಶರಣರ ಅನೇಕ ವಚನಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಅನೇಕ ವಚನಗಳಿಗೆ ಹಿಂದುಸ್ಥಾನಿ  ಪದ್ಧತಿಯಲ್ಲಿ ಸ್ವರ ಪ್ರಸ್ತಾರ ಹಾಕಿದರು. ಅವರು ರಚಿಸಿದ ‘ವಚನ ಸಂಗೀತ’ ವೆಂಬ ಪುಸ್ತಕ ಬೆಂಗಳೂರಿನ ಬಸವ ಸಮಿತಿ (೧೯೬೮) ಪ್ರಕಟಿಸಿದೆ. ಬಹುಶಃ ಅದುವೇ ವಚನ ಸಂಗೀತದ ಸ್ವರ ಪ್ರಸ್ತಾರದ ಮೊಟ್ಟಮೊದಲ ಪುಸ್ತಕ. ಸಂಗೀತ ವಿಶಾರದ ಪರೀಕ್ಷೆಯನ್ನು ಪ್ರಥಮ ಶ್ರೇಣಿಯಲ್ಲಿ ಪಾಸಾದರು.

೧೯೪೪ರಲ್ಲಿ ಅವರು ಬ್ಯಾಡಗಿಯ ನಗರ ಸಭೆಯ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಾಧ್ಯಮಿಕ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಅನೇಕ ವರ್ಷ ಕಾರ್ಯ ನಿರ್ವಹಿಸಿದರು. ಪಂ. ಗುರುಬಸವಾರ್ಯರು ಉತ್ತಮ ನಟ ಹಾಗೂ ಅತ್ಯುತ್ತಮ ಸಂಗೀತ ನಿರ್ದೇಶಕರಾಗಿದ್ದರು. ಪಂ. ಪಂಚಾಕ್ಷರಿ ಗವಾಯಿಗಳ ಶ್ರೀ ಕುಮಾರೇಶ್ವರ ನಾಟಕ ಕಂಪನಿಯಲ್ಲಿ ಹಾಗೂ ಹಲಗೇರಿ ದೊಡ್ಡ ಚಟ್ಟೆಪ್ಪನವರ ಶಿಡೇನೂರ ಅವರ ನಾಟಕ ಕಂಪೆನಿಯಲ್ಲಿ ನಟ-ಗಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಸಂಗೀತ ಶಿಕ್ಷಕ ಹುದ್ದೆಯ ನಿವೃತ್ತಿಯ ನಂತರ ಅವರು ರಾಣಿ ಬೆನ್ನೂರಿನಲ್ಲಿ ‘ಗಂಧರ್ವ ಸಂಗೀತ ವಿದ್ಯಾಲಯ’ ವೆಂಬ ಸಂಗೀತ ಶಾಲೆ ಪ್ರಾರಂಭಿಸಿದರು. ಅನೇಕ ಶಿಷ್ಯರನ್ನು ತಯಾರಿಸಿ ೧೯೮೭ರ ಜೂನ್‌ ೨೪ ರಂದು ಲಿಂಗೈಕ್ಯರಾದರು. ಪಂ. ವೆಂಕಟೇಶ ಬುರ್ಲಿ (ಧಾರವಾಡ), ಬಸವರಾಜ ಗವಾಯಿ ಹನುಮಾಪೂರ, ಅಡಿವೆಯ್ಯನವರು, ಮಾರುತಿ-ಇನಾಮದಾರ, ಸದಾಶಿವಯ್ಯ ಹಮ್ಮಿಗಿಮಠ, ಬಸವಣೆಪ್ಪ ಅಂಗಡಿ, ಮಹೋಹರ ಖಟಾವಕರ, ಎಸ್‌.ಕೆ. ಶೆಟ್ಟರ್, ಗಿರಿಮಲ್ಲಪ್ಪ ಶಿರೂರ, ಬಸಪ್ಪ, ಇಂಚಲ, ನೀಲಕಂಠಾಚಾರ ಹಾಗೂ ಪ್ರೊ. ಶಿವಾನಂದ ಹಿರೇಮಠ (ಮಗ) – ಮುಂತಾದವರು ಅವರ ಶಿಷ್ಯರಾಗಿದ್ದಾರೆ. ಪಂ. ಗುರುಬಸವಾರ್ಯರಿಗೆ ‘ಗಾನಕೋಕಿಲ’ ‘ಸಂಗೀತ ವಿದ್ವಾನ್‌’, ‘ವಚನ ಕೇಸರಿ’ ಹಾಗೂ ಕರ್ನಾಟಕ (ಆಗಿನ ಮೈಸೂರು ಸಂಗೀತ ನಾಟಕ ಅಕಾಡೆಮಿ) ಸಂಗೀತ ನೃತ್ಯ ಅಕಾಡೆಮಿ (೧೯೬೬-೬೭) ಪ್ರಶಸ್ತಿ ನೀಡಿ ಗೌರವಿಸಿವೆ.