ಕೆಲದಿನಗಳ ಹಿಂದೆ ನಾನು ಧಾರವಾಡದ ಬಳಿಯ ನರೇಂದ್ರ ಗ್ರಾಮಕ್ಕೆ ಹೋಗಿದ್ದೆ. ಅಲ್ಲಿಯ ಊರ ಹಿರಿಯರು ಒಂದು ಹಳೆಯ ಮನೆಯನ್ನು ಬೊಟ್ಟುಮಾಡಿ ತೋರಿಸುತ್ತ ಇದು ದೇಶಪಾಂಡೆ ನಾರಾಯಣರಾಯರ ಮನೆ. ದೇವರನಾಮಗಳನ್ನು ಅವರು ಚೆನ್ನಾಗಿ ಹಾಡುತ್ತಿದ್ದರು’ ಎಂದು ಪರಿಚಯಿಸಿದಾಗ ನಾನು ಒಮ್ಮೆಲೆ ಇವರು ನಮ್ಮ ಗುರುರಾಯರ ತಂದೆಯ ಆಗಿರಬೇಕು ಎಂದು ಸರಿಯಾಗಿಯೆ ಊಹಿಸಿದೆ. ಗುರುರಾಯರು ಇಂಗ್ಲಿಷ್‌ನಲ್ಲಿ G.N. Deshpande ಎಂದು ಸಹಿಮಾಡುವ ರೀತಿ ಅದರಲ್ಲೂ ಮೂರು ಗೀಟು ಹಾಕಿ N ಬರೆಯುವ ಅವರ ರೀತಿ ಕಣ್ಮುಂದೆ ಎದ್ದುಬಂತು.

ಗುರುರಾಯರು ಜನಿಸಿದ್ದು ೧೮೯೯ ಅಕ್ಟೋಬರ್ ೨೧.ಸರದಾರ ಪಟೇಲರು ಜನಿಸಿದ್ದು ಅಕ್ಟೋಬರ್‌ ೨೧. ಪಟೇಲ್‌ರಂತೆ ಗುರುರಾಯರದೂ ತುಂಬಿದ ಮುಖ, ತುಂಬಿದ ಮೈ. ಸ್ವಲ್ಪ ಎತ್ತರದ ನಿಲುವು. ಇವರೊಮ್ಮೆ ದಿಲ್ಲಿಗೆ ಫಸ್ಟ್‌ ಕ್ಲಾಸ್‌ನಲ್ಲಿ ಪ್ರವಾಸ ಮಾಡುತ್ತಿದ್ದಾಗ ಎಷ್ಟೋ ಪ್ರವಾಸಿಗರು ಇವರನ್ನು ಸರದಾರ ಪಟೇಲ್‌ರೆಂದೇ ಭಾವಿಸಿ ಮೆಲ್ಲಗೆ ಅವರ ಕಿಟಕಿಯ ಬಳಿ ಸುಳಿದು ಇವರನ್ನು ಹುಳುಹುಳು ನೋಡಿ ಹೋಗುತ್ತಿದ್ದರಂತೆ! ರೈಲು ಸ್ವಲ್ಪ ಹೊತ್ತು ನಿಲ್ಲುವ ನಿಲ್ದಾಣಗಳಲ್ಲೆಲ್ಲಾ ಗುರುರಾಯರಿಗೆ ಇದೇ ಅನುಭವ. ಅದು ಅವರಿಗೇ ವಿಚಿತ್ರ ಅನಿಸುತ್ತಿತ್ತಂತೆ. ಅನಿಸದೆ ಏನು?

ಅಂದು ಗುರುರಾಯರು ಆಕಾಶವಾಣಿಗೆ ಸಂಜೆ ನಾಲ್ಕರ ಸುಮರು ಅದೇ ಭರ್ಜರೀ ವಾಮಕುಕ್ಷಿ ಮುಗಿಸಿ, ದಾಡಿ ಮಾಡಿಕೊಂಡು ತುಂಬಿದ ಗಲ್ಲಗಳು ಇನ್ನೂ ತುಂಬಿ ಬರುವಂತೆ ಹೊಳೆಯುತ್ತಿರಲು ಅದೇ ಇಸ್ತ್ರಿಮಾಡಿದ ಬಿಳಿಯ ಮಿಂಚುವ ಶರ್ಟು, ಕಪ್ಪುಕ್ಲೋಸ್‌ ಕಾಲರ್ ನ ಸ್ವಲ್ಪ ಉದ್ದನೆಯ ಕೋಟು, ಕಪ್ಪು ಟೊಪ್ಪಿಗೆ ಧರಿಸಿ ಸ್ಟುಡಿಯೋ ಪ್ರವೇಶಿಸಿದಾಗ ರಂಗಭೂಮಿ ಪ್ರವೇಶಮಾಡಿದಂತಾಗಿತ್ತು. ಅಲ್ಲಿಯೆ ಜಾನಪದ ಕಾರ್ಯಕ್ರಮ ಧ್ವಮುದ್ರಿಸಲೆಂದು ಬಂದಿದ್ದ ಜಾನಪದ ಸರದಾರ ಬಾಳಪ್ಪ ಹುಕ್ಕೇರಿ-ಮೊದಲೆ ಚುರುಕು ಬುದ್ಧಿಯ ಹಾಸ್ಯಗಾರ-ಗುರುರಾಯರನ್ನು ಕತ್ತು ಓರೆಮಾಡಿ ಆಪಾದ ಮಸ್ತಕ ನೋಡುತ್ತ, “ಅಲಲಲಾ! ನಮ್ಮ ಗುರುಗೋಳ ಮುಖಾ ನೋಡಿದರ ಕೃಷ್ಣಾ ತೀರದ ಮ್ಯಾಗ ತಿಕ್ಕಿದ ತಾಮ್ರದ ಕೊಡಧಾಂಗ ಮಿಂಚು ಹೊಡೀತೈತಿ” ಎಂದು ಉದ್ಗಾರ ತೆಗೆದಾಗ ಸ್ಟುಡಿಯೋದವರೆಲ್ಲಾ ಈ ದೃಶ್ಯ, ಈ ಉದ್ಗಾರದಿಂದ ಚಪ್ಪಾಳೆ ಹೊಡೆದು ನಗಹತ್ತಿದರು.

ಹೀಗಿತ್ತು ಗುರುರಾಯರ ಪರ್ಸನಾಲಿಟಿ!

ಇಂತಹ ರಂಗಭೂಮಿಯ ನಟನಿಗೆ ಒಪ್ಪುವ ವ್ಯಕ್ತಿತ್ವದ ದೇಶಪಾಂಡೆ ಅವರು ಬಣ್ಣಹಚ್ಚಿಕೊಂಡು ವಾಮನರಾವ್‌ ಮಾಸ್ತರ್ ಕಂಪನಿಯ ‘ಕೃಷ್ಣಾರ್ಜುನ ಕಾಳಗ’ದಲ್ಲಿ ಅರ್ಜುನನಾಗಿ ಕೃಷ್ಣನ ಪಾತ್ರದ ವಾಮನರಾಯರೊಡನೆ ಪ್ರವೇಶಿಸುತ್ತ, ಯಮನ್‌ರಾಗದಲ್ಲಿ-

ಸುಖದಾ ರಮಣೀಯವಾಸ| ಸುಖದಾ|
ಗಂಗಾತಟ
| ಸಂತೋಷ ವನನಿವಾಸವಸಂತಮಾಸ
ಚಾರು ಚಂದ್ರಿಕಾ ನಿವಾಸ
| ಸುಖದಾ||
ಧನ್ಯ ಸುವನದೇವತಾ
| ವನಿತೆಯರ ವಿನೋದಭಾವ
ಮನಕೀವುದು ಅತಿಪ್ರಮೋದ
||
ಚಾರು ಚಂದ್ರಿಕಾ ನಿವಾಸ
||ಸುಖದಾ||

 

ಎಂಬ ಹಾಡು ಅದೇ ಸಂಗೀತದ ತರಬೇತಿಯನ್ನು ಗುರು ಪಿತ್ರೆ ವಕೀಲರ ಬಳಿ ಪಡೆದು ಪಳಗಿದ ಕಂಠದಿಂದ ಹಾಡಿದಗ ‘ಒನ್ಸಮೋರ್’ ಬೀಳದಿದ್ದೀತೆ? ಸ್ವತಃ ಕೃಷ್ಣನೇ (ಅರ್ಥಾತ್‌ ವಾಮನರಾಯರು) ವೈರಿಯ ಪಾತ್ರದಲ್ಲಿದ್ದೂ ಮೆಲ್ಲಗೆ ಅರ್ಜುನನ ಕಿವಿಯಲ್ಲಿ ‘ವಾಹವ್ವಾ ಗುರುರಾವ್‌’ ಎನ್ನಬೇಕು.

ಮುಂದೆ ಪಿತ್ರೆ ವಕೀಲರ ಬಳಿ ೧೯೧೦ರಿಂದ ೧೯೧೯ರವರೆಗೆ ಅವಿರತವಾಗಿ ಸಾಧನೆಮಾಡಿ ಗುರು ಸೇವೆಮಾಡುತ್ತ ಕಲಿತ ಶಾಸ್ತ್ರೀಯ ಸಂಗೀತ ಗುರುರಾಯರ ಹಸಿವೆಗೆ ಸಾಕಾಗಲಿಲ್ಲ. ಖಾನ್‌ಸಾಬ್‌ ಅಲ್ಲಾದಿಯಾ ಖಾನ್‌ ಅವರ ಜೈಪೂರ ಘರಾಣೆಯ ಅಭಿಜಾತ ಸಂಗೀತವನ್ನು ಕಲಿಯಬೇಕೆಂಬ ಹಂಬಲ ಗುರುರಾಯರಿಗೆ. ಆದರೆ ಯಾವುದೇ ರೀತಿಯಲ್ಲೂ ಪರಿಸ್ಥಿತಿ ಅನುಕೂಲವಾಗಿರಲಿಲ್ಲ.ಮುಖ್ಯವಾಗಿ ಆರ್ಥಿಕಸ್ಥಿತಿ! ನರೇಂದ್ರದಲ್ಲಿ ಹೊಲಮನೆಗಳೇನೊ ಇದ್ದವು. ಆದರೆ ಈ ಲೇಖಕನಿಗೆ ತಿಳಿದಮಟ್ಟಿಗೆ ಈ ಮೂವರು ಅಣ್ಣ ತಮ್ಮಂದಿರಲ್ಲಿ (ಗುರುರಾಯರು ನಡುವಿನವರು) ಹಂಚಿಹೋಗಿ ಗುರುರಾಯರ ಪಾಲಿನ ಭಾಗ ಸಾಲುವಂತಿರಲಿಲ್ಲ. ಮತ್ತಾರ ಗುರುವಿನ ನೆರಳು ಹುಡುಕಬೇಕು?

ಯಾವುದಕ್ಕೂ ಮೊದಲು ಕಾಂಚಾಣ. ಕಾಂಚಾಣಂ ಕಾರ್ಯಸಿದ್ಧಿಃ. ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲಿಕ್ಕೆ ಗುಳೇದಗುಡ್ಡ ಗಂಗೂಬಾಯಿ ಅವರ ಶ್ರೀಕೃಷ್ಣಸಂಗೀತ ನಾಟಕ ಮಂಡಲಿ ಸೇರಿದರು. ಅಲ್ಲಿಯೂ ಕೆಲದಿನಗಳಿದ್ದು ಸ್ವತಃ ಗಂಗೂಬಾಯಿ ಅವರಿಗೇ ತುಂಬ ಬೇಕಾದವರಾಗಿದ್ದು ಇವರಿಂದ ಕಂಪನಿಗೂ ಧನದ ಬಲ ಬಂತು.

ಗುಳೇದಗುಡ್ಡ ಗಂಗೂಬಾಯಿ ಮೊದಲು ವಾಮನರಾಯರ ಕಂಪನಿಯಲ್ಲೇ ಇದ್ದರು. ‘ಸಂತ ಸಖೂಬಾಯಿ’ ನಾಟಕದಲ್ಲಿ ಉಭಯತರ ಜೋಡಿ ಪ್ರೇಕ್ಷಕರನ್ನು ಮರುಳು ಮಾಡಿಬಿಡುತ್ತಿತ್ತು. ಮೈಸೂರು ಕಡೆಯ ಭಾಗಗಳಲ್ಲಂತೂ ವಾಮನರಾವ್‌ ಮತ್ತು ಗಂಗೂಬಾಯಿ ಹೀರೊ-ಹೀರೊಯಿನ್‌ ಜೋಡಿಯಿಂದಾಗಿ ‘ಸಂತಸಖೂ’ ನಾಟಕಕ್ಕೆ ಪ್ರೇಕ್ಷಕರು ಹುಚ್ಚಾಗಿ ಹೋಗಿದ್ದರು. ಆ ಸಂಗೀತ, ಆ ಶೃಂಗಾರ, ಆ ಹಾಸ್ಯ, ಆ ಭಕ್ತಿ ರಸಗಳಿಂದಾಗಿ ನಾಟಕ ರಂಗೇರುತ್ತಿತ್ತು. ಆದರೆ ಮುಂದೆ ಗಂಗೂಬಾಯಿಕ ಹೆಚ್ಚಿಗೆ ಹಣಗಳಿಸಬೇಕೆಂದೂ ಸ್ವತಂತ್ರ ನಾಟಕ ಮಂಡಲಿಯ ಮಾಲ್ಕಿಣಿ ಆಗಬೇಕೆಂದೂ ಎರಡೊಂದು ಉದ್ದೇಶದಿಂದ ಪ್ರೇರಿತರಾಗಿ ಸ್ವಂತ ಕಂಪನಿ ಸ್ಥಾಪಿಸಿ ಗುರುರಾಯರಿಗೂ ಹೆಚ್ಚನ ಸಂಬಳದ ಆಮಿಷ ಒಡ್ಡಿ ಅವರನ್ನು ತನ್ನ ಕಂಪನಿಗೆ ಎಳೆದುಕೊಂಡರು. ಗುರುರಾಯರು ಮಾತ್ರ ಇಲ್ಲಿಯೂ ಬಹಳ ಕಾಲ ನಿಲ್ಲಲಿಲ್ಲ. ಹೆಚ್ಚಿನ ಶಾಸ್ತ್ರೀಯ ಸಂಗೀತ ಕಲಿಯುವ ಹಂಬಲ ಹೆಚ್ಚಾಗಿ ಕೊನೆಗೆ ಶ್ರೀ ರಾಮಕೃಷ್ಣ ಬುವ ವಝೆ ಅವರ ಗ್ವಾಲ್ಹೇರ ಘರಾಣೆಯ ಗರಡಿಯನ್ನು ಬಹಳ ಕಷ್ಟಪಟ್ಟು ಸೇರಿದರು. ತತ್ಪೂರ್ವರಲ್ಲಿ ಅಬ್ಬಿಗೇರಿ ನಾಟಕ ಮಂಡಳಿಯ ‘ಕಿತ್ತೂರ ಚೆನ್ನಮ್ಮ’ ನಾಟಕಕ್ಕೆ ಲೈಸನ್ಸ್ ರದ್ದಗಲು ಅದರ ಮಾಲಿಕರು ಗುರುರಾಯರ ಬೆನ್ನು ಬಿದ್ದರು. ಗುರುರಾಯರು ತಮ್ಮ ಶಿಷ್ಯೆ ಭಾಗೀರಥಮ್ಮನೊಂದಿಗೆ ‘ಮಹಾನಂದಾ’ ನಾಟಕವನ್ನು ಕೂಡಿಸಿದರು. ಇದರಲ್ಲಿ ಗುರುರಾಯರೇ ದೇವೇಂದ್ರನ ಪಾತ್ರವಹಿಸಿ, ಭಾಗೀರಥಮ್ಮನಿಗೆ ಮಹಾನಂದೆಯ ಪಾತ್ರವನ್ನು ಕಲಿಸಿ ತಯಾರಿಸಿ ಸಾಗ್ರಸಂಗೀತವಾಗಿ ಯಶಸ್ವಿಯಾಗಿ ಪ್ರಯೋಗಿಸಿದರು. ಗುರುರಾಯರ ಅಣ್ಣಂದಿರು ಧಾರವಾಡದ ವಿಕ್ಟೋರಿಯಾ ಹೈಸ್ಕೂಲ್‌ನಲ್ಲಿ ಗಣಿತ ಶಿಕ್ಷಕರಾಗಿದ್ದರು. ( ಈ ಲೇಖಕನರೂ ಕೆಲಕಾಲ ವಿಕ್ಟೋರಿಯಾ ಹೈಸ್ಕೂಲ್‌ನಲ್ಲಿ ದೇಶಪಾಂಡೆ ಮಾಸ್ತರರಿಂದ ಗಣಿತ ಶಿಕ್ಷಣ ಪಡೆದವನಾಗಿದ್ದಾನೆ.) ಗುರುರಾಯರ ತಮ್ಮ ಚಿದಂಬರ ದೇಶಪಾಂಡೆ ಹೈದರಾಬಾದ್‌ಗೆ ಹೋಗಿ ತಮ್ಮದೇ ವೃತ್ತಿಯನ್ನು ಕೈಕೊಂಡರು.

ಗುರುರಾಯರು ಸ್ವತಃ ಇಂಟರ್ ವರೆಗೂ ಕಾಲೇಜ್‌ ಶಿಕ್ಷಣ ಪಡೆದಿದ್ದರು. ಚುರುಕು ಬುದ್ಧಿ. ಅದರಿಂದಾಗಿ ಸಂಗೀತದಲ್ಲಿ ಸೃಂಜಿಕೆಯನ್ನು ಬಳಸಿಕೊಂಡು ತಮ್ಮ ಕಲೆಯನ್ನು ಬೆಳೆಸಿಕೊಳ್ಳಲು ಅನುಕೂಲವಾಯಿತು. ಕಾಲೇಜ್‌ ಶಿಕ್ಷಣವನ್ನೇ ಮುಂದರಿಸಿದ್ದರೆ ಸಹಜವಾಗಿ ಗ್ಯ್ರಾಜುಯೇಟ್‌ ಆಗುತ್ತಿದ್ದರು. ತಾವು ಇಂಟರ್ ನಲ್ಲಿ ಓದಿದ ಕಾರ್ಲೈಲ್‌ನ `Past and present’ ಮತ್ತು ಶೇಕ್ಸ್ ಪಿಯರ್ ಪುಸ್ತಕಗಳನ್ನು ಆಗಾಗ ಮಗುಚಿ ಹಾಕುವರು. ಸಂಗೀತದ ಒಲವೇ ಪ್ರಬಲವಾಗಿಬಿಟ್ಟುದರಿಂದ ಅಷ್ಟಕ್ಕೇ ಕಾಲೇಜ್‌ ಶಿಕ್ಷಣಕ್ಕೆ ವಿರಾಮ ಹೇಳಿದರು. ಆದರೆ ತಮ್ಮ ಸಾಹಿತ್ಯಾಭಿರುಚಿಯನ್ನು ಕಳೆದುಕೊಳ್ಳಲಿಲ್ಲ. ಮರಾಠಿಯಲ್ಲೂ ಗುರುರಾಯರಿಗೆಕ ಒಳ್ಳೆಯ ಗತಿ. ಸಂತ ಜ್ಞಾನೇಶ್ವರೀ, ತುಕಾರಾಂ ಮೊದಲಾದವುಗಳ ಓದು ಹಾಗೂ ಅಭಂಗ ಗ್ರಂಥಗಳ ಪಾರಾಯಣ ನಡೆದೇ ಇರುತ್ತಿತ್ತು.

ರಂಗಭೂಮಿಯಿಂದ ನಿಷ್ಕ್ರಮಿಸಿದ ಮೇಲೆ ವಝೆಬುವಾ ಅವರಲ್ಲಿ ಸಂಗೀತ ಅಧ್ಯಯನ ಮುಂದುವರಿಸಲು ತಕ್ಕಮಟ್ಟಿಗೆ ಹಣದ ಬೇಜ್ಮಿ ಮಾಡಿಕೊಂಡಿದ್ದರೂ ತುಂಬ ಕಷ್ಟಪಟ್ಟು ಎಷ್ಟೋ ಉಪವಾಸ, ಅರೆ ಉಪವಾಸಗಳನ್ನು ನುಂಗಿಕೊಂಡು, ಗುರುವಿನಿಂದ ಎಷ್ಟು ಬೇಕೊ ಅಷ್ಟು ವಿದ್ಯಾಸಂಪನ್ನರಾಗಿ ಧಾರವಾಡಕ್ಕೆ ಮರಳಿದರು. ರೈಟರ್ ಗಲ್ಲಿಯಲ್ಲಿ ಒಂದು ಮನೆಯ ಮಹಡಿಯ ಮೇಲೆ ಒಂದು ಸಣ್ಣ ಕೋಣೆಯನ್ನು ಬಾಡಿಗೆಗೆ ಹಿಡಿದು ಸಂಗೀತ ಟ್ಯೂಶನ್‌ ಮಾಡತೊಡಗಿದರು. ೧೯೩೨ರಲ್ಲಿ ಈ ಲೇಖಕನು ಧಾರವಾಡ ಕರ್ನಾಟಕ ಕಾಲೇಜ್‌ನಲ್ಲಿ ಪ್ರಥಮ ವರ್ಷದಲ್ಲಿ ಓದುತ್ತಿದ್ದಾಗ ಕಾಲೇಜ್‌ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಬಂದ ಖ್ಯಾತ ಮರಾಠಿ ಕಾದಂಬರಿಕಾರರೂ ಕೊಲ್ಹಾಪುರ ರಾಜಾರಾಂ ಕಾಲೇಜಿನ ತತ್ವಜ್ಞಾನ ಪ್ರಾಧ್ಯಾಪಕರೂ ಆದ ಪ್ರೊ. ಎನ್‌.ಎಸ್‌. ಫಡಕೆ ಅವರು ಮುದ್ದಾಂ ದೇಶಪಾಂಡೆ ಗುರುರಾಯರ ಸಂಗೀತ ಕೇಳಲೆಂದೆ ಅವರ ಕೋಣೆಯವರೆಗೂ ಹೋಗಿ ಆಸಕ್ತಿಯಿಂದ ಕುಳಿತು ಗುರುರಾಯರ ಆಲಾಪನೆಯನ್ನು ಆಲಿಸಿದುದನ್ನು ನೋಡಿದ್ದೇನೆ, ಕೇಳಿದ್ದೇನೆ. ಆಗ ಅದೇ ಹೊಸತಾಗಿ ಗುರುರಾಯರು ಹಾಡಿದ ಎರಡು ಧ್ವನಿಮುದ್ರಿಕೆಗಳು H.M.V. ಕಂಪನಿಯಿಂದ ಬಿಡುಗಡೆಯಾಗಿದ್ದವು. ಅವುಗಳಲ್ಲಿ ಒಂದು ಶಾಸ್ತ್ರೀಯ ಸಂಗೀತದ ತೋಡಿ ರಾಗದ ‘ಬರಸರಸತಿ’ ಎಂಬ ಚೀಜು ಮತ್ತು ಯಮನ್‌ ರಾಗದ ‘ಮೌಂದರ ಮನಲಾಗೇ’ ಎಂಬ ಚೀಜು. ಇವಲ್ಲದೆ ಇನ್ನೊಂದು ಧ್ವನಿಮುದ್ರಿಕೆ ಎರಡು ಕನ್ನಡ ಗೀತಗಳುಳ್ಳದ್ದು-‘ಮನಸನಿಟ್ಟಿಹಳು ಎನ್ನೊಳು ಬಾಲೆ’ ಎಂಬ ಚುರಮರಿಯವರ ‘ಕನ್ನಡ ಶಾಕುಂತಲ’ದ ಗೀತ, ಇನ್ನೊಂದು ‘ಕೋಮಲೆ ಶುಭಾಂಗಿಯೆ’ ಎಂಬ ವಾಮನರಾವ್‌ ಮಾಸ್ತರಕೃತ ರಂಗಗೀತೆ. ಇದರಿಂದಾಗಿ ಗುರುರಾಯರ ಜನಪ್ರಿಯತೆ ಹೆಚ್ಚಿತ್ತು.

ಆದರೆ ಮುಂದೆ ದುರ್ದಿನಗಳು ಈ ನಿಂಬಾಳದ ಸಂತ ರಾನಡೆ ಸಾಹೇಬರ ಶಿಷ್ಯರನ್ನು ತಿಕ್ಕಿ ಮುಕ್ಕಿ ಕಾಡಲು ಕಾದಿದ್ದವು. ಕಾಟ-ಕಸರಿನಿಂದ ತಮ್ಮ ಗುರುದೇವ ರಾನಡೆ ಮಹಾರಾಜರ ಕೃಪೆಯಿಂದ ಹೇಗೊ ಸಂಸಾರದ ಖರ್ಚು ವೆಚ್ಚಗಳನ್ನು ಬಾಯ್ಗೂಡಿಸುತ್ತ ವಿಧವೆಯಾದ ತಂಗಿ ಶಾರಕ್ಕ (ಇವರೂ ರಾನಡೆ ಮಹಾರಾಜರ ಭಕ್ತರೆ), ಮೂವರು ಹೆಣ್ಣು ಮಕ್ಕಳು ಒಬ್ಬನೇ ಮಗ ಅಣ್ಣೂ ಇವರನ್ನು ಜೋಪಾನ ಮಾಡಿಕೊಂಡಿರುವಾಗ ಇವರ ಧರ್ಮಪತ್ನಿ ಏಕಾಏಕಿ ಕಟ್ಟಿನ ಜ್ವರದಿಂದಾಗಿ ಸ್ವರ್ಗವಾಸಿಗಳಾಗಿ ಬಿಟ್ಟರು. ಗುರುರಾಯರು Ship-wrecked brother (ಬುಡಮೇಲಾದ ಸಂಸಾರ ನೌಕೆಯ ಚಾಲಕ) ಆದಂತಾದರು. ಮುಂದೇನು ಎಂಬ ಪ್ರಶ್ನೆ ಕಾಡತೊಡಗಿತು. ಇವರ ಮೂರೂ ಮಂದಿ ಹೆಣ್ಣು ಮಕ್ಕಳಾದ ಸುನಂದಾ, ಮಾಲತೀ ಮತ್ತು ವಿಜಯಾ ಇವರನ್ನು ಶಾರಕ್ಕನ ರಕ್ಷಣೆಯಲ್ಲಿ ಇಟ್ಟರು. ಆ ಹೆಣ್ಣುಮಕ್ಕಳಿಗೆ ಸಂಗೀತ ವಿದ್ಯೆಯು ತಂದೆಯಿಂದ ಬಂದ ಉಂಬಳಿಯಾಗಿತ್ತು.

೧೯೮೦ರಲ್ಲಿ ಭಾರತ ಬಿಂದೂರಾಯರು ಧಾರವಾಡದ ವಿದ್ಯಾವರ್ಧಕ ಸಂಘದ ಅಟ್ಟದ ಮೇಲೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಯೋಜನೆಯಿಂದಾಗಿ ಉಚಿತವಾಗಿ ಗದುಗಿನ ಕುಮಾರವ್ಯಾಸ ಭಾರತದ ಗಮಕವಾಚನವನ್ನು ಆಸಕ್ತಿಯುಳ್ಳ ಸುಸ್ವರ ಕಂಠವುಳ್ಳ ಜಿಜ್ಞಾಸುಗಳಿಗೆ ಕಲಿಸಿಕೊಡುವ ಯೋಜನೆಯೊಂದನ್ನು ಅಲ್ಲಲ್ಲಿ ಹಲವೆಡೆಗಳಲ್ಲಿ ಹಮ್ಮಿಕೊಂಡಿದ್ದರು. ಈ ಮೇರೆಗೆ ಧಾರವಾಡದಲ್ಲಿ ನಡೆದ ಈ ಗಮಕ ಸತ್ರಕ್ಕೆ ಗುರುರಾಯರೂ ಆಕರ್ಷಿತರಾಗಿ, ಬಿಂದೂರಾಯರ ಶಿಷ್ಯತ್ವವನ್ನು ವಹಿಸಿ ಈ ಗ್ವಾಲ್ಹೇರ ಘರಾಣೆಯ ಗಾಯಕ ಭಾರತವಾಚನವನ್ನು ಕಲಿಯತೊಡಗಿದರು. ಬಿಂದೂರಾಯರಿಂದ ಈ ಗಮಕ ದೀಕ್ಷೆಯನ್ನು ಪಡೆದ ಮೇಲೆ ಗುರುರಾಯರಿಗೆ ಕುಮಾರವ್ಯಾಸ ಭಾರತದ ಹತ್ತೂ ಪರ್ವಗಳನ್ನು ಕರ್ನಾಟಕ ರಾಗಗಳ ಬಿಂದೂರಾಯರು ಬೋಧಿಸಿದ ಮೇರೆಗೆ ಗಮಕವಾಚನ ಮಾಡುವ ಹುಚ್ಚು ಹತ್ತಿಕೊಂಡಿತು. ಇದರಿಂದ ಗುರುರಾಯರ ತ್ರಸ್ತ ಮನಸ್ಸಿಗೆ ಸಾಂತ್ವನ ದೊರಕತೊಡಗಿತು.

ಮುಂದೆ ಗುರುರಾಯರು ಮನೆಯಲ್ಲಿಯೆ ಕುಮಾರವ್ಯಾಸನನ್ನು ಓದಿ ಆತ್ಮಾನಂದ ಪಡುತ್ತ, ತಮಗೆ ತಿಳಿಯದ ಪಠ್ಯಗಳ ಅರ್ಥವನ್ನು ಖ್ಯಾತ ಸಾಹಿತ್ಯ ವಿದ್ವಾಂಸರೂ ಹಳಗನ್ನಡ ನಡುಗನ್ನಡ ಹೊಸಗನ್ನಡಗಳ ಪಂಡಿತರೂ ವಿಮರ್ಶಕರೂ ಆಗಿದ್ದ ಕವಿಭೂಷಣ ಬೆಟಗೇರಿ ಕೃಷ್ಣಶರ್ಮರಿಂದ ಹೇಳಿಸಿಕೊಂಡು ಕುಮಾರವ್ಯಾಸನ ವ್ಯಾಸಂಗವನ್ನು ಮುಂದುವರಿಸಿದರು. ಹಿಂದುಸ್ತಾನಿ ಗಾಯಕರದ ಸ್ವಂತ ಚುರುಕು ಬುದ್ಧಿಯ ಗುರುರಾಯರು ಕುಮಾರವ್ಯಾಸನ ಅನೇಕ ಪದ್ಯಗಳಿಗೆ ಅವುಗಳ ಸಂದರ್ಭ, ಸನ್ನಿವೇಶಗಳಿಗೆ ಸರಿಯಾಗಿ ಹೊಂದಿಕೆಯಾಗುವ ಹಿಂದುಸ್ತಾನಿ ರಾಗಗಳನ್ನು ಜೋಡಿಸಿ ಗಮಕ ಮಾಡುತ್ತ ತಮ್ಮದೇ ಒಂದು ಗಮಕವಾಚನದ ವಿಶಿಷ್ಟ ಶೈಲಿಯನ್ನು ನಿರ್ಮಾಣ ಮಾಡಿದರು. ಇಷ್ಟೆಲ್ಲ ಕುಮಾರವ್ಯಾಸನನ್ನು ಕರಗತ ಮಾಡಿಕೊಂಡ ಮೇಲೆ ಸಾಹಿತ್ಯ ಪ್ರೇಮಿ ಡಾ. ಕಮಲಾಪುರ ಕಾಂತರಾಯರ ಮನೆಯಲ್ಲಿ (ಡಾ. ಕಮಲಾಪುರರು ಕರ್ನಾಟಕ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿಯಾಗಿ ಸುದೀರ್ಘ ಕಾಲ ಅರ್ಪಿತ ಸೇವೆಯನ್ನು ಸಂಘಕ್ಕಗಿ ಸಲ್ಲಿಸಿದವರು. ಪ್ರಸಂಗ ಬಂದಾಗ ಸಂಘಕ್ಕಾಗಿ ಆರ್ಥಿಕವಾಗಿ ಕೂಡ ಕೈಯಿಂದ ಹಣ ತೆತ್ತವರು.) ಗುರುರಾಯರ ಭಾರತವಾಚನ, ಬೆಟಗೇರಿ ಅವರ ವಿವರಣೆಯೊಂದಿಗೆ ವರ್ಷಾನುಗಟ್ಟಲೆ ನಡೆಯಿತು. ಕೆ.ಜಿ. ಹಲಸಗಿ ಮಾಸ್ತರರ ಮನೆಯಲ್ಲಿ ನಡೆಯುತ್ತಿದ್ದ ಈ ಗಮಕ ಸತ್ರಕ್ಕೆ ಆಸಕ್ತರು ಸುತ್ತು ಮುತ್ತಲಿನಿಂದ ಬರುತ್ತಿದ್ದರು. ನಾನು ನಮ್ಮಣ್ಣನೊಡನೆ ನಿತ್ಯವೂ ಮಾಳಮಡ್ಡಿಯಿಂಧ ಮುದಿ ಹಣಮಂತದೇವರ ಗುಡಿಯವರೆಗೆ ಪ್ರತಿ ರಾತ್ರಿ ರಸಯಾತ್ರೆ ಮಾಡುತ್ತಿದ್ದೆವು. ಹಲಸಗಿ ಅವರ ಮನೆಯ ಭಾರತವಾಚನ ಮಂಗಳವಾದ ಮೇಲೆ ಮುಂದೆ ದೇಸಾಯಿಗಲ್ಲಿಯ ವಿಠೋಬ ದೇವರ ಗುಡಿಯಲ್ಲಿ ನಡೆಯಿತು. ಅಲ್ಲಿಗೂ ನಮ್ಮ ಹಾಜರಾತಿ ಇದ್ದದ್ದೆ. ಅದು ಇಳಿಹೊತ್ತಿನಲ್ಲಿ ನಡೆಯುತ್ತಿತ್ತು. ಆದರೆ ಗುರುರಾಯರಿಗೆ ಮನೆತನ ಸಾಗಿಸುವುದೆ ಸ್ವಲ್ಪ ದುಸ್ತರವಾಗತೊಡಗಿತು. ಹೀಗಾಗಿ ಮುಂಬಯಿಗೇ ಹೋಗಿ ನೆಲೆನಿಂತು ತಮ್ಮ ಸಂಗೀತ ಪಾಠಗಳ ಮೂಲಕವೂ, ಅಲ್ಲಿಯ ಆಕಾಶವಾಣಿಯ ಪ್ರಸಾರದ ಅವಕಾಶಗಳ ಮೂಲಕವೂ,ಅಲ್ಲಿಯ ಆಕಾಶವಾಣಿಯ ಪ್ರಸಾರದ ಅವಕಾಶಗಳ ಮೂಲಕವೂ ಗಳಿಕೆ ಮಾಡಬಹುದು ಎಂದುಕೊಂಡು ಅಲ್ಲಿ ದಾದರದಲ್ಲಿ ದೊಡ್ಡ ಉದ್ದಿಮೆದಾರರಾಗಿದ್ದ ಅಲ್ಲಿಯ ಸಂಗೀತ ಪಾಠದಿಂದ ಗಳಿಕೆ ಮಾಡಲು ನಿಂತರು. ಅವರ ಶ್ರೀಮತಿ ಸೌ. ಲಕ್ಷ್ಮೀಬಾಯಿ ದಾತಾರ ಅವರಿಗೆ ಪ್ರಥಮವಾಗಿ ಸಂಗೀತ ಹೇಳಿಕೊಡುವ ನಿಮಿತ್ತವಾಗಿ ಅವರು ತಿಂಗಳಿಗೆ ೭೫ರೂ. ಗೌರವಧನ ಗೊತ್ತು ಮಾಡಿದರು. ಮುಂಬಯಿ ಆಕಾಶವಾಣಿಯಿಂದಲೂ ಸಂಗೀತ ಪ್ರಸಾರಕ್ಕೆ ಅವಕಾಶ ದೊರೆತು ಒಂದು ಕಾರ್ಯಕ್ರಮಕ್ಕೆ ೭೫ರೂ. ಸಂಭಾವನೆ ಸಿಗುತ್ತಿತ್ತು. (ಆಗಿನ್ನೂ ಧಾರವಾಡ ಕೇಂದ್ರ ಆರಂಭವಾಗಿರಲಿಲ್ಲ.)

ಗುರುರಾಯರು ಮುಂಬಯಿಯಲ್ಲಿ ನೆಲೆನಿಂತು ಅಲ್ಲಿ ಪ್ರಾಪ್ತವಾಗುವ ಗಳಿಕೆಯಲ್ಲಿ ತಾವು ಒಂದೇ ಹೊತ್ತು ಹೋಟಲ್‌ ಊಟ ಮಾಡಿ, ಸಂಜೆ ಸೌ.ಲಕ್ಷ್ಮೀಬಾಯಿ ಅವರಗೆ ಪಾಠ ಹೇಳಲು ಹೋದಾಗ ಅಲ್ಲಿ ಚಹಾ-ಉಪಾಹಾರದ ಆತಿಥ್ಯತೆ ಅಂದಿಗೆ ಸಾಕಾಗುತ್ತಿತ್ತು. ಹೀಗೆ ಅತ್ಯಂತ ಕಾಟ-ಕಸರಿನಿಂಧ ತಮ್ಮ ಉದರಯಾತ್ರೆ ಸಾಗಿಸಿ ಉಳಿದ ಗಳಿಕೆಯನ್ನು ಊರಿಗೆ ಕಳಿಸುತ್ತಿದ್ದರು.

ಇದೇ ಸಂದರ್ಭದಲ್ಲಿ ಅಂದರೆ ಸುಮರು ೧೯೧೪ರಲ್ಲಿ ಮುಂಬಯಿಯ ಆಕಾಶವಾಣಿಯಲ್ಲಿ ನಿಲಯ ಕಲಾವಿದನಾಗಿ ನೇಮಕಗೊಂಡು ನಾನೂ ಮುಂಬಯಿ ವಾಸಿಯಾದೆ. ಅಲ್ಲಿದ್ದಾಗ ನನಗೂ-ಗುರುರಾಯರಿಗೂ ನಿಕಟ ಸಂಪರ್ಕವಾಗಿ ಆಗಾಗ ಸೇರುತ್ತಿದ್ದೆವು. ಅಂಥ ಸಮಯದಲ್ಲಿ ಅವರು ತಮ್ಮ ಸಂಗೀತ ಸಾಧನೆ ಅನುಭವಗಳನ್ನು ತೆರೆದಿಡುತ್ತಿದ್ದರು. “ಧಾರವಾಡದಲ್ಲಿ ೧೯೦೮ರ ಸುಮಾರಿಗೆ ಸಂಗೀತ ಶಿಕ್ಷಕರಾಗಿ ಭಾಸ್ಕರ ಬುವಾ ಬಖಲೆ” ಅವರು ಬಂದು ನಿಂತಮ್ಯಾಲೆ ಹಿಂದುಸ್ತಾನಿ ಸಂಗೀತ ಈ ಕಡೆ ಹರಡಲಿಕ್ಕೆ ಒಂದು ವಾತಾವರಣ ನಿರ್ಮಾಣ ಆಯಿತು.

“ಒಮ್ಮೆ ಕೊಲ್ಹಾಪುರದಲ್ಲಿ ಖಾನಸಾಹೇಬ ಅಲ್ಲಾದಿಯಾಖಾನ್‌-ಜೈಪೂರ್‌ ಘರಾಣೆಯ ಸಂಸ್ಥಾಪಕರು-ಸಾಹೇಬರ ಸಂಗೀತ ಕಾರ್ಯಕ್ರಮವಿದ್ದಾಗ, ನನ್ನ ಪಾಲಿಗೆ ಖಾನ್‌ ಸಾಹೇಬರ ಹಿಂದೆ ತಂಬೂರಿ ಸಾಥ್‌ ಮಾಡುವ ಒಂದು ಯೋಗಾಯೋಗಪ್ರಾಪ್ತವಾದದ್ದು ಒಂದು ಅವಿಸ್ಮರಣೀಯ ಸಂಗತಿ. ಅಲ್ಲೇ ಒಮ್ಮೆ ಅಲ್ಲಾದಿಯಾ ಖಾನರ ಮನೆಯೊಳಗೆ ಹಫೀಜ್‌ ಅಲಿಖಾನ್‌ ಅವರ ಸರೋದ್‌ ಕಾರ್ಯಕ್ರಮ ಇತ್ತು. ಅವರು ಬರಲಿಕ್ಕೆ ಬಹಳ ತಡ ಆಯ್ತು. ಮಂಜೀಖಾನ್‌ ಸಾಹೇಬರು ನನ್ನನ್ನು ವೇದಿಕೆಗೆ ಕರೆದರು. ಸ್ವಲ್ಪ ಸಂಕೋಚದಿಂದಲೇ ‘ನಟ್‌ಬಿಹಾನ್‌’ ಸುರುಮಾಡಿದೆ. ಆಮೇಲೆ ಮೈಛಳಿಬಿಟ್ಟು ಹಾಡಿದಾಗ ಜನ ಮೆಚ್ಚಿದರು-ಮುಖ್ಯವಾಗಿ ಮಂಜೀಖಾನ್‌ರು. ಫೈಯಾಜ್‌ ಖಾನ್‌ ಸಾಹೇಬ್‌, ಬಡೇ ಗುಲಂಅಲಿಖಾನ್‌ ಮೊದಲಾದ ಸಂಗೀತ ಕೇಸರಿಗಳ ಮೆಹಫಿಲ್‌ ಕೇಳುವ ಸದವಕಾಶವೂ ಮುಂಬಯಿಯಲ್ಲಿ ಆಗಾಗ ಪ್ರಾಪ್ತವಾದುದರಿಂದ ನನ್ನ ಸಂಗೀತ ಬೆಳೆವಣಿಗೆಗೆ ಒಂದು ಪೋಷಣೆ ದೊರೆಯಿತು” ಎಂದೆಲ್ಲಾ ಹೇಳುತ್ತಿದ್ದರು.

ಒಮ್ಮೆಕ ವಿಲೆಪಾರ್ಲಾದಲ್ಲಿ ಬಡೇಗುಲಾಂ ಅಲಿಖಾನ್‌ ಅವರ ಸಂಗೀತ ಕಚೇರಿಗೆ ನನ್ನನ್ನು ಕರೆದುಕೊಂಡು ಹೋಗಿದ್ದರು. ನಮ್ಮ ಆಲ್‌ ಇಂಡಿಯಾ ರೇಡಿಯೋದಲ್ಲಿಯ ನಮ್ಮ ಹಳ್ಳಿಯ ಬಂಧುಗಳ ಕಾರ್ಯಕ್ರಮದಲ್ಲಿ ಕೂಡ ಅಂದಿನ ನಮ್ಮ ಕಾರ್ಯಕ್ರಮಗಳಿಗೆ ಹೊಂದಿಕೆಯಾಗುವಂತೆ ನಾನೇ ರಚಿಸಿ ಕೊಟ್ಟ ಪದಗಳನ್ನು ಜಾಣಪದ ಧಾಟಿಯಲ್ಲಿ ಹಾಡುತ್ತಿದ್ದರು. ಈ ಶಾಸ್ತ್ರೀಯ ಸಂಗೀತಗಾರರಿಗೆ ನಮ್ಮ ಜಾನಪದ ಕಾರ್ಯಕ್ರಮ ಕಡಿಮೆ ಮಟ್ಟದ್ದೆನಿಸುತ್ತಿರಲಿಲ್ಲ. ಮೇಲಾಗಿ ನಾನು ನಮ್ಮ ವಿಭಾಗದಿಂದ ಸಲ್ಲಿಸುವ ಸಂಭಾವನೆ ಅಲ್ಪ ಮಟ್ಟದ್ದಾದರೂ ಅಷ್ಟೇ ಅವರಿಗೆ ಅನುಕೂಲವಾಗುತ್ತಿತ್ತು.

ಧಾರವಾಡ ಆಕಾಶವಾಣಿ ಕೇಂದ್ರ ಆರಂಭವಾದ ಮೇಲೆ ಗುರುರಾಯರು ಮುಂಬಯಿಕ ಬಿಟ್ಟು ಧಾರವಾಡಕ್ಕೆ ಬಂದು ಸಂಗೀತ ಪ್ರೊಡ್ಯೂಸರ್ ಎಂದು ನೇಮಕ ಹಿಂದಿದರು. ಈಗ ಮುಂಬಯಿ ಕೇಂದ್ರದ ಹೊರಗಿನ ಕಲಾವಿದರು-ಧಾರವಡ ಕಕ್ಷೆಯೊಳಗೆ ಬರುವವರೆಲ್ಲರೂ ಇಲ್ಲಿಯ ಕೇಂದ್ರದ ಕ್ಯಾಜುಯಲ್‌ ಆರ್ಟಿಸ್ಟ್‌’ ಎಂದು ಸ್ಥಳಾಂತರಿಸಲ್ಪಟ್ಟುದರಿಂದ ಗಂಗೂಬಾಯಿ ಹಾನಗಲ್‌, ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು, ಶಿವರಾಮಬುವಾ ವಝೆ ಮೊದಲಾದವರು ಧಾರವಾಡ ಕೇಂದ್ರದಿಂದ ಶಾಸ್ತ್ರೀಯ ಸಂಗೀತ ಪ್ರಸಾರ ಮಾಡತೊಡಗಿದರು. ಗುರುರಾಯರು ಪಳಗಿದ ಪ್ರಸಿದ್ಧ ಹಿರಿಯ ಸಂಗೀತಗಾರರಾಗಿದ್ದುದರಿಂದ ಗಂಗೂಬಾಯಿ ಮೊದಲಾದವರನ್ನು ಕೂಡ ವಿಮರ್ಶಿಸಿ, ಅವರ ಹಾಡುಗಾರಿಕೆ ಸುಧಾರಿಸಲು ಯೋಗ್ಯ ಸಲಹೆ ಸೂಚನೆ ಕೊಡುವ ಒಂದು ಅಧಿಕಾರವಾಣಿಯನ್ನು ಪಡೆದಿದ್ದರು. ಗುರುರಾಯರ ಶಿಷ್ಯರಾದ ನಾರಾಯಣ ಮಜುಮದಾರ, ಬಿ.ಎನ್‌.ಕೋಣಕಡಿ, ಡಿ.ಎಚ್‌.ಹಾವನೂರು, ವಿನಾಯಕ ತೊರವಿ, ಲತಾ ನಾಡಗೇರ ಇವರೆಲ್ಲಾ ತಮ್ಮ ಕಾರ್ಯಕ್ರಮಕ್ಕೆಂದು ಬಂದಾಗ ಗುರುಗಳಿಗೆ ಅಂಜಿಕೊಂಡು ಅವರನ್ನು ಗೌರವಭಾವದಿಂದ ಕಾಣುತ್ತಿದ್ದರು. ಒಮ್ಮೆ ಹಾವನೂರ ಅವರು ತಮ್ಮ ಬೆಳಗಿನ ಕಾರ್ಯಕಲ್ರಮ ಮುಗಿಸಿಕೊಂಡು ಹೊರಬರುತ್ತಲೆ-“ಏನಪಾ ಹಾವನೂರ, ನಿನ್ನ ತಾನಬಾಜಿ ಹ್ಯಾಂಗ್‌ ಇತ್ತು ಅಂದರ ಒಂದು ಹೆಗ್ಗಣ ಗೋಣೀಲದಾಗ ಹಾಕಿ ಬಡಿಧಾಂಗಿತ್ತು” ಎಂದು ಚೇಷ್ಠೆ ಮಾಡಿದಾಗಿ ಪಾಪ ಆತ ನಾಚಿಕೆಯಿಂದ ತಲೆತಗ್ಗಿಸಿದ್ದ.

ಮೂವರೂ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟು ಬಿಟ್ಟಿದ್ದರು. ಒಬ್ಬನೇ ಮಗ (ಅಣ್ಣು) ಮದುವೆ ಮಾಡಿಕೊಂಡು ಬೆಂಗಳೂರಿನಲ್ಲಿ ನೆಲೆನಿಂತುಕೊಂಡಿದ್ದ.

ಗುರುರಾಯರು ತಮ್ಮ ಗಾಳಿ ಓಣಿಯ ಮನೆಯಲ್ಲಿ ಒಬ್ಬರೇ ಒಬ್ಬರು. ನಾನು ಆಗಾಗಾ ಅವರ ಮನೆಗೆ ಹೋದಾಗ ಒಂದು ಕಂಭಕ್ಕೆ ಆತು ಕೊಂಡು ಎದೆಯ ಮೇಲೆ ಕುಮಾರವ್ಯಾಸನನ್ನು ಕುಳ್ಳಿರಿಸಿಕೊಂಡು ಆತನ ರಸವತ್ತಾದ ಭಕ್ತಿ-ಕರುಣೆಗಳ ಪದ್ಯಗಳನ್ನೋದಿ ಕೊಳ್ಳುತ್ತಿದ್ದಾಗ ದಳದಳ ಕಣ್ಣೀರು! ನಾನು ಮನೆಯೊಳಗೆ ಕಾಲಿಟ್ಟ ಕೂಡಲೆ ಅವೇ ಪದ್ಯಗಳನ್ನು ಓದಿ ತೋರಿಸುವರು. ಒಮ್ಮೆ ಮಾಲಕಂಸ ರಾಗದಲ್ಲಿ-

 

ಹೆಂಡತಿಯ ಹರಿಬದಲಿ ಒಬ್ಬನೆ
ಗಂಡನಾದರೆ ವೈರಿಯನು ಕಡಿ
ಖಂಡವನು ಮಾಡುವನುಮೇಣ್‌ ತನ್ನೊಡಲನಿಕ್ಕುವನು
|
ಗಂಡರೈವರಲಿ
, ಮೂರುಲೋಕದ
ಗಂಡರೊಬ್ಬಳನಾಳಲಾರಿರಿ

ಗಂಡರೋ ನೀವ್‌ ಷಂಡರೋ-ಹೇಳೆಂದಳಿಂದು ಮುಖ|

 

ಈ ಪದ್ಯವು ಇಷ್ಟೊಂದು ಆವೇಶದ ‘ಮಾಲಕಂಸ’ ರಾಗದಲ್ಲಿ ಸೂಸಿ ಬಂದರೆ ದ್ರೌಪದೀ ವಸ್ತ್ರಾಪಹರಣದ ಸಮಯಕ್ಕೆ ಆಕೆ ಶ್ರೀಕೃಷ್ಣನಲ್ಲಿ ಮೊರೆಯಿಟ್ಟು ಮನಮುಟ್ಟುವಂತೆ ಮಾಡಿದ ಪ್ರಾರ್ಥನಾ ಪದ್ಯಗಳು, ಕರುಣಾರಸದಲ್ಲದ್ದಿದಂತೆ ಆನಂದ ಭೈರವಿ, ಪೀಲು, ಜೋಗಿಯಾ ರಾಗಗಳಲ್ಲಿ ಸೂಸಿ ಬಂದಾಗ ಆ ಸೂಸಲು ಪದ್ಯಗಳು ಹೃದಯ ತಟ್ಟಿ, ಕರುಳ ಮುಟ್ಟಿ ಕಂಬನಿಯ ಪುಟಿಸುತ್ತಿದ್ದವು.

 

ಸುಲಿವರೊರೊಳಗುಟ್ಟ ಸೀರೆಯ
ನೆಲೆಮುರಾಂತಕ ರಕ್ಷಿಸೈ ಶಸಿ
ಕಳೆಗೆ ಸದರವೆ ರಾಹುರಚಿಸಿದ ತುಟಿಯ ತೋಟಿಯದು
|

ಸೆಳೆವರಸುವನು ಖಳರು ಸೀರೆಯ
ಸುಲಿದರುಳಿಯೆನು ಕೃಷ್ಣ ಕರುಣಾ
ಜಲಧಿಯೇ ಕೈಗಾಯಬೇಕೆಂದೊರಲಿದಳು ತರಳೆ
||
ಗತಿವಿಹೀನರಿಗಕಟ ನೀನೇ
ಗತಿಯೆಲೈ ಗೋವಿಂದ ರಿಪು ಬಾ
ಧಿತರಿಗಬಲರಿಗೆ ಆರ್ತರಿಗೆ ನೀ ಪರಮಬಂಧುವಲಾ
||
ಸತಿ ಪಶು ದ್ವಿಜ ಬಾಧೆಯಲಿ ಜೀ
ವಿತವ ತೊಡೆವರು ಗರುವರದು ಹಿಂ
ಗಿತೆ ಸುಯೋಧನ ಸಭೆಯೊಳೆಂದೊರಲಿದಳು ಲಲಿತಾಂಗಿ
||
ಚರಣ ಭಜಕರ ಮಾನ ಹಾನಿಯ
ಹರಿಬವಾದುದು ಕೃಷ್ಣ ನಾಮ
ಸ್ಮರಣ ಧನಿಕರಿಗುಂಟೆ ಘಲ್ಲಣೆ ಘೋರ ಪಾತಕದ
ಪರಮ ಭಕ್ತ ಕುಟುಂಬಕನು ನೀ
ಕರುಣೆಯಲ್ಲದೊಡೆ ಈ ಕುಟುಂಬಕೆ
ಶರಣದಾರೈ ಕೃಷ್ಣ ಸಲಹೆಂದೊರಲಿದಳು ತರಳೆ
||

 

ಎಂಬ ಪದ್ಯಗಳನ್ನು ಎದೆತುಂಬಿ ಹೇಳುವಾಗ ಕಂಬನಿ ತುಂಬಿದ ಅವರ ಕಣ್ಣೀರು ಕರುಣರಸವೆ ಮಡುಗಟ್ಟಿದಂತೆ ತೋರಿತು. ಇದನ್ನು ಕಂಡ ನನ್ನ ಕಣ್ಣೂ ಹನಿಗೂಡಿದವು.

ಜ್ಯೋತಿಷ್ಯ ಕೇಳಬೇಕೆಂದು ಗುರುರಾಯರ ಬಳಿ ಹೋದವನು, (ಅವರು ಜ್ಯೋತಿಷ್ಯ ಬಲ್ಲವರಾಗಿದ್ದರು), ಅವರ ಭಕ್ತಿಪೂರ್ಣವಾದ ಭಾವ ಪೂರ್ಣವಾದ ಕುಮಾರವ್ಯಾಸನ ಕರುಣಾ ಪೂರ್ಣವಾದ ಪದ್ಯಗಳನ್ನು ಕೇಳಿ ನನ್ನ ವೈಯಕ್ತಿಕ ನಾಳಿನ ಆಗುಹೋಗುಗಳ ವಿಚಾರ ಕ್ಷುಲ್ಲಕವೆನಿಸಿ ಹಾಗೇ ಮರಳಿಬಿಟ್ಟೆ.

ಗುರುರಾಯರು ಆಕಾಶವಾಣಿಯ ಸಂಗೀತ ನಿರ್ಮಾಪಕರಾಗಿ ಚುರಮರಿ ಶೇಷಗಿರಿರಾಯರ ‘ಕನ್ನಡ ಶಾಕುಂತಲ’ವನ್ನು ಪ್ರೊಡ್ಯೂಸ್‌ ಮಾಡಿದುದು ಒಂದು ಸ್ಮರಣೀಯ ಮೈಲುಗಲ್ಲಾಗಿ ಉಳಿಯಿತು. ಅವರ ನಿರ್ದೇಶನದ ಕಾರ್ಯಕ್ರಮಗಳಲ್ಲಿ. ಕನ್ನಡ ಶಾಕುಂತಲದ ಪದಗಳ  ಚೆಲುವಾದ ಧಾಟಿಮಟ್ಟುಗಳನ್ನು ಬಲ್ಲ ಇವರು ಈ ನಾಟಕದ ಪದಗಳನ್ನೆಲ್ಲ ಹದವರಿದು ನಯವಾಗಿ ಹೃದ್ಯವಾಗಿ ಹೇಳುವರು.

೧೯೬೯ರಲ್ಲಿ ಆಕಾಶವಾಣಿಯಿಂದ ನಿವೃತ್ತಿ ಹೊಂದಿದರು. ೧೯೭೧ರಲ್ಲಿ ಗುರುರಾಯರಿಗೆ ರಾಜ್ಯದ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿ ಗಾಯನಾಚಾರ್ಯರೆಂದು ಈ ಮೊದಲೆ ಬಿರುದು. ಆಮೇಲೆ ಗುರುರಾಯರು ಬೆಂಗಳೂರಿನಲ್ಲಿ  ಮಗನ  ಹತ್ತಿರ  ಇರತೊಡಗಿದರು.

ಸದಾಕಾಲವೂ ಶ್ರೀ  ರಾನಡೆ ಮಹಾರಾಜರ ಧ್ಯಾನಯೋಗದಲ್ಲಿಯೆ ಮಗ್ನರು. ೧೯೮೨ರ ಡಿಸೆಂಬರ್ ೩ ರಂದು ಕೊನೆಯುಸಿರೆಳೆದಾಗ ಅವರಿಗೆ ೮೩ ವರ್ಷ ವಯಸ್ಸು.