ಪಂ. ಗುರುರಾವ ದೇಶಪಾಂಡೆ ಗ್ವಾಲಿಯರ್ ಘರಾಣೆಯ ದಿಗ್ಗಜರಲ್ಲೊಬ್ಬರು. ರಾಮಕೃಷ್ಣ ಬುವಾ ವಝೇಯವರ ಶಿಷ್ಯರಾಗಿ, ಹೆಸರಾಂತ ಗಾಯಕರೆನಿಸಿ, ರಂಗಭೂಮಿ ನಟ-ಗಾಯಕರಾಗಿ, ಮುಂಬೈ-ಧಾರವಾಡ ಆಕಾಶವಾಣಿಯ ಸಂಗೀತ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಅನೇಕ ಶಿಷ್ಯರನ್ನು ತಯಾರಿಸಿ ಸಂಗೀತ ಲೋಕದಲ್ಲಿ ಅಮರರಾದವರು.

ಅವರು ಜನಿಸಿದ್ದು ೧೮೯೯ರ ಅಕ್ಟೋಬರ್ ೨೧ ರಂದು. ಧಾರವಾಡದಲ್ಲಿ. ತಂದೆ ನಾರಾಯಣರಾಯರು, ತಾಯಿ ಗಂಗೂಬಾಯಿ ಸುಸಂಸ್ಕೃತರು. ಮಗ ವಕೀಲನಾಗಬೇಕೆಂಬುದು ತಂದೆಯವರ ಇಚ್ಛೆ. ಆದರೆ ಮಗನ ಒಲವು ಸಂಗೀತದತ್ತ. ಬಾಲ್ಯದಲ್ಲಿಯೇ ಸುಮಧುರ ಕಂಠ ಹೊಂದಿದ ಗುರುರಾಯರು ಪಂ. ಭಾಸ್ಕರ ಬುವಾ ಬಖಲೆಯವರ ಶಿಷ್ಯ ಧಾರವಾಡದ ಟಿ.ಕೆ. ಪಿತ್ರೆ ವಕೀಲರಲ್ಲಿ ೧೯೧೦ರಲ್ಲಿ ದತ್ತೋಪಂಚ ಜೋಶಿಯವರಲ್ಲಿ ಸಂಗೀತ ಕಲಿಯಲಾರಂಭಿಸಿದರು. ೧೯೧೯ರಲ್ಲಿ ಬೆಳಗಾವಿಗೆ ಹೋಗಿ ಖ್ಯಾತ ಗ್ವಾಲಿಯರ್ ಘರಾಣೆಯ ಗಾಯಕ ಪಂ. ರಾಮಕೃಷ್ಣ ಬುವಾ ವಝೇಯವರ ಶಿಷ್ಯತ್ವ ವಹಿಸಿ ಸುದೀರ್ಘ ಕಾಲ ಹಿಂದೂಸ್ಥಾನಿ ಸಂಗೀತದ ಉನ್ನತ ಶಿಕ್ಷಣ ಪಡೆದು ಪ್ರಬುದ್ಧ ಗಾಯಕರೆನಿಸಿದರು. ಗುಳೇದಗುಡ್ಡ ಗಂಗೂಬಾಯಿಯವರ ಶ್ರೀಕೃಷ್ಣ ಸಂಗೀತ ಮಂಡಳಿ ಹಾಗೂ ವಾಮನರಾವ ಮಾಸ್ತರ ಅವರ ವಿಶ್ವ ಗುಣಾದರ್ಶ ನಾಟಕ ಕಂಪನಿಯಲ್ಲಿ ನಟರಾಗಿ, ನಟ ಗಾಯಕರಾಗಿ ರಂಗಭೂಮಿಯಲ್ಲಿ ಹೆಸರು ಪಡೆದರು. ಅವರು ಹಾಡಿದ ಅನೇಕ ರಂಗ ಗೀತೆಗಳನ್ನು ಹೆಚ್‌.ಎಂ.ವಿ. ಧ್ವನಿ ಮುದ್ರಿಸಿಕೊಂಡಿತು.

ಕೆಲ ದಿನ ಮುಂಬೈನಲ್ಲಿ ನೆಲೆಸಿದ ಅವರು ದೇಶದ ಮಹಾನ್‌ ಸಂಗೀತಗಾರರ ಸಂಪರ್ಕ ಪಡೆದರು. ಮುಂಬೈ ಆಕಾಶವಾಣಿಯಲ್ಲಿ ಮ್ಯೂಜಿಕ್‌ ಪ್ರೊಡ್ಯೂಸರ್ ಆಗಿ ಕೆಲಸಕ್ಕೆ ಸೇರಿದರು. ೧೯೫೦ರಲ್ಲಿ ಧಾರವಾಡದಲ್ಲಿ ಆಕಾಶವಾಣಿ ಕೇಂದ್ರ ಸ್ಥಾಪನೆಯಾದ ನಂತರ ಮುಂಬೈಯಿಂದ ಧಾರವಾಡ ಆಕಾಶವಾಣಿಗೆ ವರ್ಗವಾಗಿ ಬಂದು ೧೯೬೯ರಲ್ಲಿ ನಿವೃತ್ತಿ ಹೊಂದಿದರು. ಗಮಕ ಗಾಯನದಲ್ಲಿ ವಿಶೇಷ ಪರಿಣತಿ ಹೊಂದಿದ್ದ ಅವರು ಅನೇಕ ಕನ್ನಡ ಕಾವ್ಯಗಳನ್ನು ಹಿಂದೂಸ್ಥಾನಿ ಪದ್ಧತಿಯಲ್ಲಿ ಗಮಕ ಗಾಯನ ಮಾಡಿ ಗಮಕದಲ್ಲಿ ಅಪಾರ ಯಶಸ್ಸು ಪಡೆದರು.

ಗುರುರಾವ ದೇಶಪಾಂಡೆಯವರು ಕರ್ನಾಟಕದ ಮೊದಲ್ಗೊಂದು ದೇಶದ ಮಹಾನ್‌ ಸಂಗೀತ ಸಮ್ಮೇಳನಗಳಲ್ಲಿ ಸಂಗೀತ ಕಛೇರಿ ನೀಡಿದರು. ಪಾಕಿಸ್ತಾನದ ಲಾಹೋರಿನಲ್ಲೂ ಸಂಗೀತದ ಭೈಠಕ್‌ ನಡೆಸಿದರು. ೮೩ ವರ್ಷ ತುಂಬು ಜೀವನ ಬಾಳಿದ (ಮರಣ ೩-೧೨-೧೯೮೨) ಅವರಿಗೆ ಅನೇಕ ಪ್ರಶಸ್ತಿ-ಪುರಸ್ಕಾರ ಸಂದಿವೆ. ಅಂಥವುಗಳಲ್ಲಿ ಗಾಯನಾಚಾರ್ಯ (೧೯೬೯), ಗಮಕ ಗೌರಿಶಂಕರ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ (೧೯೬೯-೭೦) ಯ ಪ್ರಶಸ್ತಿ ಉಲ್ಲೇಖನೀಯವಾಗಿವೆ. ಅವರ ಶಿಷ್ಯ ಸಂಪತ್ತು ಅಪಾರ. ಅವರಲ್ಲಿ ನಾರಾಯಣರಾವ ಮುಜುಮದಾರ, ಲೋಣಕಡೆ, ಎಚ್. ಹಾವನೂರ, ಶ್ರೀಮತಿ ಲಕ್ಷ್ಮಿ ದಾತಾರ, ವಿನಾಯಕ ತೊರವಿ, ಡಾ. ಲತಾ ನಾಡಗೇರ ಮುಂತಾದವರು ಪ್ರಮುಖರಾಗಿದ್ದಾರೆ.