ಒಯ್ಯೊಯ್ಯನೆ ನೀರವವಾಗುತ್ತಿದ್ದ ಪೃಥಿವಿಯ ಮೇಲೆ ಸಂಧ್ಯೆ ಕ್ರಮಕ್ರಮವಾಗಿ ಇಳಿದು ಹಬ್ಬುತ್ತಿತ್ತು. ಅಂದು ಅಮಾವಾಸ್ಯೆ. ದೂರದ ದೇವಾಲಯಗಳಲ್ಲಿಯೂ ಬೇಲೂರು ಮಠದಲ್ಲಿಯೂ ಗಂಟೆ ಜಾಗಟೆಗಳ ಪಾವನ ನಾಮಗಳೆದ್ದು ಸಂಧ್ಯಾಪೂಜೆಯ ಆರತಿಯ ಸಮಯವನ್ನು ಘೋಷಿಸುತ್ತಿದ್ದುವು. ಮಠದ ಸಂನ್ಯಾಸಿಗಳೂ ಭಕ್ತರೂ ಭಕ್ತಿಭಾವನಮ್ರರಾಗಿ ಪೂಜಾಮಂದಿರದ ಕಡೆಗೆ ಹೋಗತೊಡಗಲು ಸ್ವಾಮಿ ಶಿವಾನಂದರೂ ತಮ್ಮ ನಿತ್ಯ ಪದ್ಧತಿಯಂತೆ ಅಲ್ಲಿಗೆ ಬಿಜಯಮಾಡಿದರು. ಬಂದವರು ದಿವ್ಯ ಸಾನ್ನಿಧ್ಯಕ್ಕೆ ಪ್ರಣಾಮ ಸಲ್ಲಿಸಿ, ದೇವರ ಪೀಠಕ್ಕೆ ಆಗ್ನೇಯ ದಿಕ್ಕಿನಲ್ಲಿ ಹಾಕಿದ್ದ ಒಂದು ಕೃಷ್ಣಾಜಿನದ ಮೇಲೆ ಕುಳಿತರು. ಅವರ ಕೈಗಳು ನಮಸ್ಕಾರ ಮುದ್ರೆಯಲ್ಲಿದ್ದು, ಕಣ್ಣು ಧ್ಯಾನಭಂಗಿಯಲ್ಲಿ ಅಂತರ್ಮುಖವಾಗಿದ್ದುವು.

ಸಾಯಂಪೂಜೆ ಪ್ರಾರಂಭವಾಯಿತು. ಘಂಟಾಘೋಷಾದಿಗಳ ಮಧುರ ಗಂಭೀರ ನಾದವೂ ಸ್ವಾಮಿಗಳ ಸಾನ್ನಿಧ್ಯವೂ ಅಲ್ಲಿ ನೆರೆದಿದ್ದವರಿಗೆ ಧ್ಯಾನಕ್ಕೆ ಬೇಕಾದ ಏಕಾಗ್ರತೆಯನ್ನು ತಂದುಕೊಟ್ಟವು. ಗುರುಮಹಾರಾಜರಿಗೆ ಆರತಿ ಎತ್ತುವ ಸಮಯದಲ್ಲಿ ಸ್ತೋತ್ರಗಳನ್ನು ಹಾಡಿದರು. ಸ್ವಾಮಿ ಶಿವಾನಂದರೂ ಆ ಸ್ತೋತ್ರಪಠಣದಲ್ಲಿ ಭಾಗವಹಿಸಿದರು. ಸ್ತೋತ್ರ ಮುಗಿದ ಮೇಲೆ ಸಂನ್ಯಾಸಿಗಳೆಲ್ಲ ದಿವ್ಯಾಸನದ ಮುಂದೆ ಮಣಿದು, ಒಬ್ಬೊಬ್ಬರಾಗಿ ತಮ್ಮ ತಮ್ಮ ಧ್ಯಾನಾಸನಗಳಿಗೆ ಚಲಿಸಿದರು. ಸ್ವಾಮಿ ಶಿವಾನಂದರು ಕಣ್ಣುಮುಚ್ಚಿ ಧ್ಯಾನಮಗ್ನರಾದರು. ಆ ಧ್ಯಾನದ ಗಂಭೀರತೆಗೆ ಸಾಕ್ಷಿಯಾದಂತಿತ್ತು, ಅವರ ವದನದಲ್ಲಿಯ ಮಂಡಲದ ಪೂರ್ಣ ಪ್ರಶಾಂತಿ. ಬಹಳ ಹೊತ್ತು ಅವರು ಆ ಧ್ಯಾನಸ್ಥಿತಿಯಲ್ಲಿ ಮುಳುಗಿ ನಿಷ್ಪಂದರಾಗಿದ್ದರು.

ಸುಮಾರು ೮-೩೦ ಗಂಟೆಗೆ ಸ್ವಾಮಿಗಳು ಆಸನದಿಂದೆದ್ದು ತಮ್ಮ ಅಂತರಾತ್ಮನ ಆನಂದಕ್ಕೆ ಸಾಕ್ಷಿಯಾಗಿಯೊ ಎಂಬಂತೆ ಭಕ್ತಿಗೀತೆಯೊಂದನ್ನು ಮೆಲ್ಲುಲಿಯುತ್ತಾ ತಮ್ಮ ಕೊಠಡಿಗೆ ಹಿಂತಿರುಗಿದರು. ಅವರ ದನಿ ಎಂದಿಗಿಂತಲೂ ಅತಿಶಯವಾಗಿ ಅತ್ಯಂತ ಮಧುರವಾಗಿ ಭಕ್ತಿಪೂರ್ಣವಾಗಿತ್ತು. ಕೆಲವರು ಸಂನ್ಯಾಸಿಗಳೂ ಭಕ್ತರೂ ಅವರ ಕೊಠಡಿಯಲ್ಲಿ ಅವರ ಆಗಮನವನ್ನೆ ನಿರೀಕ್ಷಿಸುತ್ತಾ ಕಾದಿದ್ದರು, ತಮ್ಮ ಪ್ರಣಾಮಗಳನ್ನು ಅರ್ಪಿಸುವುದಕ್ಕಾಗಿ. ಗುರುಗಳು ನಮ್ಮಸ್ಕರಿಸಿದ ಆಶೀರ್ವಾದಾಕಾಂಕ್ಷಿಗಳಿಗೆ ಹರಕೆ ನೀಡಿದ ಬಳಿಕ ಎಲ್ಲರೂ ಕುಳಿತುಕೊಂಡರು. ಕೊಠಡಿ ನಿಶ್ಯಬ್ದವಾಗಿತ್ತು. ಯಾರೊಬ್ಬರಿಗೂ ಮಾತಾಡಿ ಆ ನೀರವತೆಯನ್ನು ಭಂಗಿಸುವ ಮನಸ್ಸಿರಲಿಲ್ಲ. ಕ್ರಮೇಣ ಸಂವಾದ ಪ್ರಾರಂಭವಾಗಿ, ಸಾಧನೆಯ ವಿಚಾರಕ್ಕೆ ತಿರುಗಿತು.

ಅಂತರ್ಮುಖಿಗಳಾಗಿ ಇನ್ನೂ ಧ್ಯಾನಸ್ಥಿತಿಯಲ್ಲಿಯೆ ಇದ್ದ ಸ್ವಾಮಿ ಶಿವಾನಂದರು ಹೀಗೆಂದರು: “ರಾತ್ರಿಯು ಸಾಧನೆಗೆ ಅತ್ಯುತ್ತಮವಾದ ಸಮಯ. ಹೃತ್ಪೂರ್ವಕ ಭಕ್ತಿಯಿಂದ ಧ್ಯಾನ ಜಪಗಳನ್ನು ತಪ್ಪದೆ ಆಚರಿಸಬೇಕು. ಅದರಿಂದ ಚಿತ್ತಶುದ್ಧಿಯಾಗುತ್ತದೆ. ಕೆಲಕಾಲ ಹಾಗೆ ಅಭ್ಯಾಸ ಮಾಡಿದರೆ, ಅಂತಹ ಸಕ್ರಮ ಸಾಧನೆಯಿಂದ ಆತ್ಮಕ್ಕೆ ಸಮಾಧಿರೂಪವಾದ ಒಂದು ನಿರಂತರ ಆಧ್ಯಾತ್ಮಿಕ ಸ್ಥಿತಿ ಒದಗಿ ಆತ್ಮಾನಂದದ ಪೂರ್ವರುಚಿಯೊಂದು ಅನುಭವಗೋಚರವಾಗುತ್ತದೆ. ಸಾಧಕನು ಧ್ಯಾನ ಮುಗಿದ ಕೂಡಲೆ ಆಸನದಿಂದ ಏಳಬಾರದು; ಅಲ್ಲಿಯೆ ತುಸುಹೊತ್ತು ಕುಳಿತು ತನ್ನ ಧ್ಯಾನದ ವಿಷಯವಾದ ಧ್ಯೇಯವನ್ನು ಕುರಿತು ಆಲೋಚಿಸಬೇಕು, ಎಂದರೆ ಮನನ ಮಾಡಬೇಕು. ತರುವಾಯ ತನ್ನ ಧ್ಯಾನದ ಭಾವಕ್ಕೆ ಅನುರೂಪಗಳಾದ ಸ್ತೋತ್ರಗಳನ್ನೂ ಕೀರ್ತನೆಗಳನ್ನೂ ಹಾಡಿಕೊಂಡು, ತನ್ನ ಅಂತರ‍್ಮಾತನ ದಿವ್ಯರಸಸ್ಥಿತಿ ಸುತೀಕ್ಷ್ಣವೂ ಸುಸ್ಥಿರವೂ ಆಗುವಂತೆ ಮಾಡಿಕೊಳ್ಳಬಹುದು. ಆಸನವನ್ನು ಬಿಟ್ಟೆದ್ದ ಮೇಲೆಯೂ ಅವನು ಯಾರೊಡನೆಯೂ ಒಡನೆಯೆ ಮಾತಿಗೆ ತೊಡಗಬಾರದು. ಕೊಂಚ ಕಾಲ ಅಂತರ್ಮುಖಿಯಾಗಿ ವಿವಿಕ್ತವಾಗಿಯೆ ಇರುವುದು ಒಳ್ಳೆಯದು. ಈ ರೀತಿಯಾದ ಸಾಧನೆಯಿಂದ ಸಾಧಕನ ಪ್ರಜ್ಞಾಭೂಮಿಯಲ್ಲಿ ಧ್ಯಾನಸ್ಥಿತಿಯ ನಿರಂತರ ಅಂತಃಸ್ತೋತ್ರವೊಂದು ಸಿದ್ಧವಾಗುತ್ತದೆ; ಹೃದಯಕ್ಕೂ ಆಧ್ಯಾತ್ಮಿಕವಾದ ಮಹದಾನಂದ ಅವತರಿಸುತ್ತದೆ.”

ಮಠದ ಸಂನ್ಯಾಸಿಯೊಬ್ಬರು ಹೇಳಿದರು: “ಮಹಾರಾಜ್, ನಾವು ಸ್ವಲ್ಪಕಾಲ ಆಗಾಗ್ಗೆ ಮಠದಿಂದ ಹೊರಗೆ ಎಲ್ಲಿಯಾದರೂ ದೂರ ಹೋಗಿ ಧ್ಯಾನ ತಪಸ್ಯೆ ಮೊದಲಾದ ಸಾಧನೆಯಲ್ಲಿ ನಿರತರಾಗುವುದು ಒಳ್ಳೆಯದಲ್ಲವೆ?”

ಸ್ವಾಮೀಜಿ: ವತ್ಸ, ನಾಣ್ಣುಡಿಯೊಂದಿದೆ ‘ಹೊರಳಾಡುವ ಕೊಡ ನೀರು ತಂದೀತೆ?’ ಎಂದು. ಗೊತ್ತುಗುರಿಯಿಲ್ಲದ ಅಲೆದಾಟದಿಂದ ಆಧ್ಯಾತ್ಮಿಕ ಭೂಮಿಕೆಯಲ್ಲಿ ಯಾವ ಪ್ರಯೋಜನವೂ ಸಿದ್ಧಿಸಲಾರದು; ಅದರಿಂದ ಈಶ್ವರ ಸಾಕ್ಷಾತ್ಕಾರಕ್ಕೂ ಸಹಾಯವೊದಗದು. ಆದರೆ ಅಹಂಕಾರವನ್ನು ತೊಲಗಿಸುವುದಕ್ಕಾಗಿಯೂ ಭಗವಂತನಲ್ಲದೆ ಅನ್ಯಾಶ್ರಯವಿಲ್ಲ ಎಂದು ದೇವರಿಗೆ ಎಲ್ಲವನ್ನೂ ಬಿಟ್ಟುಬಿಡುವ ಸಮರ್ಪಣ ಭಾವವನ್ನು ಅಭ್ಯಾಸಮಾಡುವುದಕ್ಕಾಗಿಯೂ ಸಾಧಕನಾದವನು ಆಗಾಗ್ಗೆ ಪರಿವ್ರಾಜಕನಾಗಿ ಮಾಧುಕರೀ ಭಿಕ್ಷೆಯಿಂದ ಕಾಲಯಾಪನೆ ಮಾಡುತ್ತಾ ತನ್ನದು ಎಂಬುದು ಏನನ್ನೂ ಇಟ್ಟುಕೊಳ್ಳದೆ ಏಕಾಂತವಾಸದಲ್ಲಿರಬಹುದು; ಬೇಕೆಂದರೆ ಸ್ವಲ್ಪ ಪರಿವ್ರಜನ ಮಾಡಲೂಬಹುದು. ಹಾಗೆ ಮಾಡುವುದರಿಂದ ಅನುಕೂಲವೇನೊ ಇದೆ, ನಿಸ್ಸಂದೇಹವಾಗಿ. ಆದರೆ ವರ್ಷವರ್ಷವೂ ಅದನ್ನು ಕೈಕೊಳ್ಳಬೇಕಾದ ಆವಶ್ಯಕತೆಯಿಲ್ಲ.

ಸ್ವಾಮಿ ಅದ್ಭುತಾನಂದರು ಹೇಳುತ್ತಿದ್ದರು: ‘ಏಕೆಂದು ಸುಮ್ಮನೆ ಅಲೆಯುವುದು? ಶ್ರೀರಾಮಕೃಷ್ಣರ ಮಕ್ಕಳು ಒಂದೆಡೆ ನಿಲ್ಲಬೇಕು.’ ಆ ಮಾತು ಬಹಳ ಸತ್ಯ. ಯಾರ ಹೃದಯದಲ್ಲಿ ಶಾಂತಿ ಇದೆಯೋ ಅವನಿಗೆ ಎಲ್ಲೆಲ್ಲಿಯೂ ಶಾಂತಿಯೆ. ಹೋಗುವುದಾದರೂ ಎಲ್ಲಿಗೆ? ಏತಕ್ಕೆ? ಅವನು, ಆ ಸ್ವಾಮಿ ಒಳಗಿದ್ದಾನೆ. ಅದಕ್ಕೆ ಗುರುಮಹಾರಾಜ್ ಈ ಹಾಡನ್ನು ಪದೇ ಪದೇ ಹೇಳುತ್ತಿದ್ದರು:

ನಿನ್ನಲ್ಲಿಯೆ ನೀನಿರು ಓ ಮನವೆ:
ಏಕಿಂತಲೆಯುವೆ ಅಲ್ಲಿಲ್ಲಿ?
ಕಾಣೊಳಗೆಯೆ ಎದೆಯಂತಃಪುರದಲ್ಲಿ
ಸಕಲಾಶೆಯ ಸುರತರುವಿಹುದಲ್ಲಿ
ಅವನಿಹನಲ್ಲಿಯೆ ಆ ದಿವ್ಯನು ಸ್ಪರ್ಶಮಣಿ
ನಿನ್ನಭಿಲಾಷೆಯ ಸರ್ವಾಪೇಕ್ಷೆಯ ರತ್ನಖನಿ,
ನೀನರಿಯೈ, ಓ ಮನವೆ,
ಚಿಂತಾಮಣಿಯಾತನ ಮಂದಿರದಾ ಬಾಗಿಲಮೂಲೆಯಲ್ಲಿ
ಸಕಲೇಷ್ಟಗಳಷ್ಟೈಶ್ವರ್ಯವೆ ಸೂಸಿದೆ ಬಿದ್ದಿದೆ ಕೆದರಿದೆ ಚೆಲ್ಲಿ!

ಸ್ವಾಮಿ ಶಿವಾನಂದರು ಆ ಗೀತೆಯನ್ನು ಮತ್ತೆ ಮತ್ತೆ ಹಾಡಿದರು, ತಮ್ಮ ಅಸಾಧಾರಣವಾದ ಸವಿಧ್ವನಿಯಲ್ಲಿ. ಸ್ವಲ್ಪ ತಡೆದು ಮತ್ತೆ ಹೇಳಿದರು: “ಆ ಗೀತೆಯ ಕೊನೆಯ ಚರಣದಲ್ಲಂತೂ ಅದ್ಭುತವಾದ ಅಗಾಧವಾದ ಸತ್ಯವಿದೆ. ಭಗವಂತನ ಬಾಗಿಲಲ್ಲಿ ಸರ್ವಸಿದ್ಧಿಗಳೂ ಬಿದ್ದುಕೊಂಡಿವೆ. ಭುಕ್ತಿ, ಮುಕ್ತಿ, ಬ್ರಹ್ಮಜ್ಞಾನ ಎಲ್ಲಾ. ಆದರೆ ವತ್ಸ ನೀನು ಹುಡುಕಬೇಕು, ಸಾಧನೆ ಮಾಬೇಕು; ಹಾರೈಸಬೇಕು. ವ್ಯಾಕುಲತೆಯಿಂದ ಆಶಿಸಬೇಕು; ತೀವ್ರವಾದ ಅಭಿಪ್ಸೆಯಿಂದ ಪ್ರಾರ್ಥಿಸಬೇಕು, ಅದನ್ನೇ ‘ಸಾಧನೆ ‘, ‘ತಪಸ್ಯೆ’ ಎಂದು ಕರೆಯುತ್ತೇವೆ. ನಾವು ಹೃತ್ಪೂರ್ವಕವಾದ ಅಭೀಷ್ಟೆಯಿಂದ ಅವನ ದರ್ಶನಕ್ಕಾಗಿ ಹಾತೊರೆದರೆ ಅವನ ಆಶೀರ್ವಾದ ಲಭಿಸದೆ ಹೋಗುವುದಿಲ್ಲ. ಒಮ್ಮೆ ಭಗವಂತನ ಕರುಣೆ ಬಾಗಿಲು ತೆರೆಯಿತೆಂದರೆ, ಒಮ್ಮೆ ಅವನ ಕೃಪೆಯಿಂದ ಕುಂಡಲಿನಿ ಎಚ್ಚರಗೊಂಡಿತೆಂದರೆ, ಮೂಲಾಧಾರದಲ್ಲಿ ಸುರುಳಿ ಸುತ್ತಿ ಮಲಗಿರುವ ಶಕ್ತಿ ಸುರುಳಿ ಬಿಚ್ಚಿತೆಂದರೆ, ಸರ್ವವೂ ನಿನ್ನೊಳಗೆ ಇರುವುದರ ಅರಿವು ನಿನಗಾಗುತ್ತದೆ. ಆದರೆ ಭಗವತ್ ಕೃಪೆಯಿಂದ ಕುಂಡಲಿನಿಯನ್ನು ಎಬ್ಬಿಸುವವರೆಗೆ ಏನನ್ನೂ ಸಾಧಿಸಲಾಗುವುದಿಲ್ಲ. ಭಕ್ತರೊಬ್ಬರು ಹೇಳಿದರು; “ಹೌದು, ಸ್ವಾಮಿ ಬ್ರಹ್ಮಾನಂದರೂ ಅದನ್ನೇ ಹೇಳುತ್ತಿದ್ದರು. ಮೂಲಾಧಾರ ಚಕ್ರದಲ್ಲಿ ಸುಪ್ತವಾಗಿರುವ ಕುಂಡಲಿನೀ ಶಕ್ತಿ ಎಚ್ಚತ್ತು ಸುಷುಮ್ನೆಯಿಂದ ಊರ್ಧ್ವಮುಖವಾಗಿ ಮೇಲೇರಿದರೆ ಮಾತ್ರ ಬ್ರಹ್ಮಜ್ಞಾನದ ಬಾಗಿಲು ತೆರೆಯುತ್ತದೆ ಎಂದು ಹೇಳುತ್ತಿದ್ದರು.”

ಸ್ವಾಮಿ ಶಿವಾನಂದರು: “ಸತ್ಯ, ಪೂರ್ಣ ಸತ್ಯ. ಆ ಉದ್ಬೋಧನವಿಲ್ಲದೆ ಆಧ್ಯಾತ್ಮಿಕ ಪ್ರಗತಿ ಸಾಧ್ಯವೇ ಇಲ್ಲ. ಅದಕ್ಕೇ ಶ್ರೀಗುರುಮಹಾರಾಜರು ದೇವಿಯ ಮುಂದೆ ‘ಏಳಮ್ಮ, ಏಳು. ಓ ತಾಯಿ ಕುಂಡಲಿನಿ!’ ಎಂದು ಪ್ರಾರ್ಥಿಸುತ್ತಿದ್ದುದು. ಹಾಡಿನ ಮೊದಲನೆಯ ಚರಣವನ್ನು ಹೇಳಿ ಸ್ವಾಮಿ ಶಿವಾನಂದರು ಇಡೀ ಹಾಡನ್ನೇ ಹಾಡಿದರು:

ಏಳಮ್ಮ ಏಳು, ಓ ತಾಯಿ ಕುಂಡಲಿನಿ!
ಏಳು, ಆನಂದಮಯಿ! ಏಳು, ಬ್ರಹ್ಮಾನಂದಮಯಿ!
ಏಳು, ಮೂಲಾಧಾರ ಪದ್ಮ ಮಂಚದಿ ಸುರುಳಿ ಸುತ್ತಿ
ಸುಪ್ತ ಸರ್ಪಿಣಿಯಂತೆ ಪವಡಿಸಿಹ ದೇವಿ!
ಕಾಯದಲಿ ಮನದಲಿ ಸಂಕಟಕ್ಲೇಶಗಳಿಗೆ
ಸಿಲುಕಿ ನಾಂ ನರಳುತಿಹೆನಮ್ಮ!
ಹರಸಮ್ಮ ಹರಸು, ನನ್ನನಾಶೀರ್ವದಿಸು,
ಕೃಪೆದೋರಿ ಮೂಲಚಕ್ರದ ಕಮಲ ಮಂಚವನಿಳಿದು ಬಾರಮ್ಮ!
ಓ ತಾಯೇ, ಮಾಯೆ, ಲೋಕಕಾರಣ ಪರಶಿವನ ಜಾಯೆ,
ಸುಷುಮ್ನೆಯಾ ತೇರೇರಿ ಏರು ಮೇಲೇರಮ್ಮ,
ಉತ್ತರಿಸಿ ಏರು ಸ್ವಾಧಿಷ್ಠಾನಮಂ ಮೀಂಟಿ;
ಮಣಿಪೂರ ಅನಾಹುತ ವಿಶುದ್ಧ ಆಜ್ಞಾ ಚಕ್ರಂಗಳಂ ದಾಂಟಿ
ನಿನ್ನ ಹೃದಯೇಶ ಪರಶಿವನೊಳೈಕ್ಯವಾಗಮ್ಮಾ
ಶಿರ ಶಿಖರದಾ ಸಹಸ್ರದಲ ಪದ್ಮದ ಸಹಸ್ರಾರಮಂಚದಲ್ಲಿ!
ನಲಿ ಅಲ್ಲಿ, ಓ ತಾಯಿ, ಪರಮ ಆನಂದಮಯಿ
ಸಚ್ಚಿದಾನಂದಮಯಿ, ಜಗದಂಬೆ, ದಿವ್ಯಮಾತೆ!

ಆಲಿಸಿದವರ ಹೃದಯದಲ್ಲಿ ಹರ್ಷವಿದ್ಯುತ್ ಸಂಚಾರವಾಗುವಂತೆ ಈ ಗೀತೆಯನ್ನು ಮೂರು ಸಾರಿ ಹಾಡಿ, ಸ್ವಾಮಿಗಳು ಮೌನವಾಂತರು. ಅವರ ವದನ ಮಂಡಲ ತೇಜಃಪುಂಜವಾಗಿ ಒಂದು ಮಾರ್ಮಿಕವಾದ ಆಧ್ಯಾತ್ಮಿಕ ಶಾಂತಿ ಹೊರಹೊಮ್ಮಿತು. ಆ ಕೊಠಡಿಯ ವಾತಾವರಣವೆಲ್ಲ ಆ ಗೀತೆಯ ಒಂದು ಅನಿರ್ವಚನೀಯವಾದ ತಪಸ್‌ಶಕ್ತಿಯಿಂದ ಆಕ್ರಾಂತವಾದಂತೆ ಭಾಸವಾಗುತ್ತಿತ್ತು. ಮಂದಿರ ಬಹಳ ಹೊತ್ತು ನಿಶ್ಯಬ್ದವಾಗಿತ್ತು. ಸ್ವಾಮಿಗಳು ಜಗನ್ಮಾತೆಯನ್ನು ಅತ್ಯಂತ ಸುಮಧುರವಾದ ಭಕ್ತಿಯುಕ್ತ ಧ್ವನಿಯಿಂದ ಮತ್ತೆ ಮತ್ತೆ ಕರೆದಾಗಲೇ ಆ ದಿವ್ಯನಿಶ್ಯಬ್ದತೆಗೆ ಇಷ್ಟಭಂಗವೊದಗಿದ್ದು. ತಮ್ಮ ಭಾವೋತ್ಸಾಹವನ್ನು ಸ್ವಲ್ಪಮಟ್ಟಿಗೆ ಸಂಯಮಿಸಿಕೊಳ್ಳುತ್ತಾ ಸ್ವಾಮಿಗಳೆಂದರು:

ಆಃ! ಎಷ್ಟು ಸಾರಿ ಆಲಿಸಿದ್ದೇವೆ, ಗುರುದೇವನು ಈ ಹಾಡನ್ನು ಹಾಡುತ್ತಿದ್ದಾಗ! ಕೆಲವು ಸಾರಿ ಹಾಡನ್ನು ತಾಯಿಗೆ ಚಾಮರವಿಕ್ಕುತ್ತಿದ್ದರು. ಈ ಹಾಡನ್ನು ಹಾಡುತ್ತಿದ್ದಾಗ ಅವರಿಗೊದಗುತ್ತಿದ್ದ ಭಾವೋನ್ಮಾದ ನಾನು ವರ್ಣಿಸಲು ಸಾಧ್ಯವೆ? ನಾವು ಆನಂಮೂರ್ಛಿತರಾಗುತ್ತಿದ್ದೆವು; ಅವರು ಸಮಾಧಿಸ್ಥರಾಗುತ್ತಿದ್ದರು. ದಿವ್ಯೋನ್ಮಾದಗ್ರಸ್ತರಾಗಿ ಅವರು ಆ ಹಾಡನ್ನು ಮಂದಛಂದದಲ್ಲಿ ಹಾಡುತ್ತಿರಲು ಆ ತಾಳಲಯಕ್ಕೆ ಅನುಸ್ಪಂದಿತವಾಗಿ ಕೈಯಲ್ಲಿದ್ದ ಚಾಮರ ಚಲಿಸುತ್ತಿತ್ತು. ಅವರ ಕಂಠಸ್ವರವೋ ದಿವ್ಯಾದ್ಭುತ! ಶ್ರೋತೃವರ್ಗವೆಲ್ಲ ಬಾಷ್ಟವಾರಿಯಲ್ಲಿ ತೊಯ್ದುಹೋಗುತ್ತಿತ್ತು. ಇನ್ನ ತಾಯಿ, ಜಗನ್ಮಾತೆ, ಅಂತಹ ಎದೆ ತುಂಬಿದ ಸವಿಕರೆಗೆ ಓಕೊಳ್ಳದೆ ಸುಮ್ಮನಿರುತ್ತಾಳೆಯೆ?

ಸ್ವಾಮಿ ವಿವೇಕಾನಂದರು ಒಮ್ಮೆ ಅಂದರು: ‘ಈ ಯುಗದಲ್ಲಿ ಬ್ರಹ್ಮಕುಂಡಲಿನಿ-ಸೃಷ್ಟಿ ಸ್ಥಿತಿ ಪ್ರಲಯ ಕಾರಣಳಾದ ಜಗನ್ಮಾತೆ-ಶ್ರೀರಾಮಕೃಷ್ಣ ಪರಮಹಂಸರ ದಿವ್ಯ ಪ್ರಾರ್ಥನೆಯ ಮತ್ತು ಮಧುರ ಕೀರ್ತನೆಯ ಕರೆಯಿಂದ ಎಚ್ಚತ್ತಿದ್ದಾಳೆ!’ ಎಂದು. ನಿಜ! ಬ್ರಹ್ಮ ಕುಂಡಲಿನಿಯ ಉದ್ಬೋಧನವಾದ ಮೇಲೆ ಕುಲಕುಂಡಲಿನಿ (ಎಂದರೆ ವೃಷ್ಟಿಯ ಕುಂಡಲಿನೀಶಕ್ತಿ) ಎಚ್ಚತ್ತಿರುವುದರಲ್ಲಿ ಅಚ್ಚರಿಯಿಲ್ಲ. ಆದ್ದರಿಂದಲೆ ದೇಶದಲ್ಲಿ ಎಲೆಲ್ಲಿಯೂ ಒಂದು ನವಚೇತನ ಉಕ್ಕುತ್ತಿರುವುದು ಕಾಣುತ್ತಿದೆ; ಯಾವುದೊ ಒಂದು ಆತ್ಮಶಕ್ತಿಯ ಉನ್ಮೀಲನೆಯ ಚಿಹ್ನೆಗಳನ್ನು ಎಲ್ಲ ದಿಕ್ಕುಗಳೂ ಧ್ವಜವೆತ್ತಿ ಸಾರುವುದನ್ನು ನೋಡುತ್ತಿದ್ದೇವೆ. ಈ ಸಾರಿ ತಾಯಿ ಆದಿಶಕ್ತಿ, ಲೋಕ ಕಲ್ಯಾಣಾರ್ಥವಾಗಿ ಶ್ರೀರಾಮಕೃಷ್ಣರ ದೇಹ ದೇವಾಲಯವನ್ನು ತನ್ನ ಜಗನ್ನಾಟಕ್ಕೆ ಲೀಲಾವೇದಿಯನ್ನಾಗಿ ಮಾಡಿಕೊಂಡಿದ್ದಾಳೆ. ನಾವಿನ್ನು ಶಂಕಿಸಬೇಕಾಗಿಲ್ಲ; ಅಧೈರ್ಯಪಡಬೇಕಾಗಿಲ್ಲ.

* * *