ಅದು ಅಸಹಕಾರ ಚಳುವಳಿಯ ಸಮಯ; ಸಮಗ್ರ ಭರತಖಂಡವೂ ಕುದಿಯುತ್ತಿದ್ದ ಕಾಲ. ಲಕ್ಷಾಂತರ ಜನರು ದೇಶಸೇವೆಯ ಕಾರಣದಿಂದಾಗಿ ಸೆರೆಮನೆಗೆ ನಗುನಗುತ್ತ ನುಗ್ಗುತ್ತಿದ್ದರು. ಮಹಾತ್ಮ ಗಾಂಧೀಜಿಯ ಸಂದೇಶ ಪಾಂಚಜನ್ಯದಿಂದ ದೇಶದ ನಿದ್ರೆ ತೊಲಗಿ ಹೋಗಿತ್ತು. ಮಾತೃಭೂಮಿಯ ರಾಜಕೀಯ ಸ್ವಾತಂತ್ರ್ಯವೇ ಜೀವನದ ಪರಮಾದರ್ಶವೆಂದೂ ಪರಮ ಪುರುಷಾರ್ಥವೆಂದೂ ಶ್ರದ್ಧಾನ್ವಿತರಾದ ಸ್ತ್ರೀಪುರುಷರು ಸಹಸ್ರಸಹಸ್ರ ಸಂಖ್ಯೆಯಲ್ಲಿ ತಾಯಿಯ ಬಂಧನ ವಿಮೋಚನೆಗೆ ದೀಕ್ಷಿತರಾಗಿ ತಮ್ಮ ತನುಮನಧನಪ್ರಾಣ ಸರ್ವವನ್ನೂ ಸಮರ್ಪಿಸಲು ಸಿದ್ಧರಾಗುತ್ತಿದ್ದ ನವೋದಯ ಸಮಯವದು.

ಆವೊತ್ತು ಸೋಮವಾರ, ಬೇಲೂರು ಮಠದ ಪೂಜಾಮಂದಿರದಲ್ಲಿ ಆಗತಾನೆ ಸಂಜೆಯ ಆರಾಧನೆ ಪೂರೈಸಿತ್ತು. ಪ್ರದೇಶವೆಲ್ಲ ನಿಶ್ಯಬ್ದವಾಗಿತ್ತು. ಸಾಧುಗಳೂ ಬ್ರಹ್ಮಚಾರಿಗಳೂ ಧ್ಯಾನ ಜಪಗಳಲ್ಲಿ ತೊಡಗಿದ್ದರು, ಸ್ವಾಮಿ ಶಿವಾನಂದರು ಧ್ಯಾನಮಗ್ನರಾಗಿ ತಮ್ಮ ಕೊಠಡಿಯಲ್ಲಿ ಮಂಚವೊಂದರ ಮೇಲೆ ಕುಳಿತಿದ್ದರು. ದೀಪದ ಮಂದಕಾಂತಿ ಅವರ ಗಂಭೀರ ಮುಖಮಂಡಲವನ್ನು ಮತ್ತಷ್ಟು ಗಂಭೀರತರವನ್ನಾಗಿಯೂ ತೇಜೋಮಯವನ್ನಾಗಿಯೂ ಮಾಡಿತ್ತು. ಕಾಲ ನುಣ್ಣಗೆ ಜಗುಳುತ್ತಿತ್ತು. ಕೊನೆಗೆ ಸ್ವಾಮಿಗಳು ಪುಷ್ಪದಂತೆ ವಿರಚಿತ ಶಿವಮಹಿಮ್ನ ಸ್ತೋತ್ರವನ್ನು ಹೇಳಿಕೊಳ್ಳಲು ತೊಡಗಿದರು. ಅವರ ಮನಸ್ಸು ಆನಂದಸಾಗರದಲ್ಲಿ ಸಂಮಗ್ನವಾದಂತೆ ತೋರುತ್ತಿತ್ತು.

ಅಷ್ಟು ಹೊತ್ತಿಗೆ, ಕಲ್ಕತ್ತೆಯಿಂದ ಬಂದಿದ್ದ ಭಕ್ತರೊಬ್ಬರು, ಪೂಜಾ ಮಂದಿರದಲ್ಲಿ ತಮ್ಮ ಭಕ್ತಿಯನ್ನು ನಿವೇದಿಸಿದ ಅನಂತರ, ಸ್ವಾಮಿಗಳ ಬಳಿಗೆ ಬಂದು ಪ್ರಣಾಮಮಾಡಿ, ನೆಲದಮೇಲೆ ಕುಳಿತರು. ಸ್ವಲ್ಪ ಹೊತ್ತಾದ ಮೇಲೆ ಮಹಾಪುರುಷಜಿ ‘ಯಾರದು? ಕಾ… ಏನು! ಯಾವಾಗ ಬಂದೆ?’ ಎಂದು ವಿಶ್ವಾಸದಿಂದ ಸ್ವಾಗತಿಸಿದರು.

ಆ ಭಕ್ತರು ಗೌರವಪೂರ್ವಕವಾಗಿ “ಹೌದು, ಮಹಾರಾಜ್. ಸಾಯಂಪೂಜೆಯ ಹೊತ್ತಿಗೇ ಬಂದಿದ್ದೆ.”

ಸ್ವಾಮೀಜಿ: “ಪೂಜಾಮಂದಿರದಲ್ಲಿಯೆ ಇದುವರೆವಿಗೂ ಇದ್ದಿರಬೇಕಲ್ಲವೆ?”

ಭಕ್ತ: “ಹೌದು, ಮಹಾರಾಜ್.”

ಸ್ವಾಮೀಜಿ: “ಏಕೆ ಬಹಳ ಖಿನ್ನನಾಗಿರುವಂತಿದೆ? ಏನು ಮನಸ್ಸು ಸರಿಯಾಗಿಲ್ಲವೆ? ಮನೆಯಲ್ಲೆಲ್ಲ ಕ್ಷೇಮ ತಾನೆ?”

ಭಕ್ತ: “ಹೌದು, ಮಹಾರಾಜ್, ನಿಮ್ಮ ಕೃಪೆಯಿಂದ ಎಲ್ಲರೂ ಕ್ಷೇಮವಾಗಿದ್ದಾರೆ. ಆದೆ, ಮನಸ್ಸೇಕೊ ನೆಮ್ಮದಿಯಾಗಿಲ್ಲ. ಈಚೀಚೆಗೆ ಒಂದು ಪ್ರಶ್ನೆ ಎದ್ದು ನನ್ನನ್ನು ತುಂಬಾ ಕಾಡುತ್ತಿದೆ. ಅದರ ದೆಸೆಯಿಂದ ನಾನು ತುಂಬ ಅಸುಖಿ. ಇವತ್ತು ಬಂದದ್ದು ಅದಕ್ಕಾಗಿಯೆ. ನಿಮ್ಮ ಮುಂದೆ ನನ್ನ ಆ ಹೃದಯದ ಹೊರೆಯನ್ನೆಲ್ಲ ಇಳಿಸಿಬಿಡಬೇಕೆಂದು. ಅಪ್ಪಣೆಯಾದರೆ ಹೇಳುತ್ತನೆ.”

ಸ್ವಾಮೀಜಿ: “ಒಳ್ಳೆಯದು, ಹೇಳು.”

ಆ ಭಕ್ತರ ಹೃದಯ ತುಂಬಿ ಬಂದು ಮಾತು ಉಕ್ಕಿ ಹರಿಯುವಂತೆ ತೋರುತ್ತಿತ್ತು. ಹೇಳಿದರು: “ಮಹಾರಾಜ್, ಈಗ ಮಹಾತ್ಮಾ ಗಾಂಧೀಜಿಯ ಅಸಹಕಾರ ಚಳುವಳಿಯಿಂದ ದೇಶದ ಪ್ರಾಣಸಮುದ್ರ ಬುಡಮಟ್ಟ ಕಲಕಿಹೋಗಿ ಅಲ್ಲೋಲಕಲ್ಲೋಲವಾಗುತ್ತದೆ, ಅಸಂಖ್ಯಾತ ಜನರು, ಹೆಂಗಸರು, ಗಂಡಸರು ಕೊನೆಗೆ ಮಕ್ಕಳೂ ಕೂಡ, ಸೆರೆಮನೆಗಳಲ್ಲಿ ಕೊಳೆಯುತ್ತಿದ್ದಾರೆ. ಅನೇಕರು ಆಗಲೆ ತಮ್ಮ ಪ್ರಾಣಗಳನ್ನೂ ಅರ್ಪಿಸಿದ್ದಾಗಿದೆ. ಸ್ವಯಂ ಮಹಾತ್ಮಾಜಿಯವರೆ ಪ್ರವಾಹದ ಅತ್ಯಂತ ಅಪಾಯಕರವಾದ ಆವರ್ತಗರ್ತಕ್ಕೆ ದುಮುಕಿದ್ದಾರೆ. ಸಮಸ್ತದೇಶ ಜೀವನವೂ ಚಳವಳಿಯ ಉರಿಯಲ್ಲಿ ಕುದಿದು ಬೆಂದು ತಲ್ಲಣಿಸುತ್ತಿರುವಾಗ ಶ್ರೀರಾಮಕೃಷ್ಣ ಸಂಸ್ಥೆ ಮಾತ್ರ ಏಕೆ ತೆಪ್ಪಗೆ ಕೂತಿದೆ? ದೇಶಕ್ಕೆ ನಿಮ್ಮ ಕಾಣಿಕೆ ಏನು? ಸ್ವಾತಂತ್ರ್ಯ ಸಂಪಾದನೆಗೆ ನೀವು ಮಾಡುವುದೇನೂ ಇಲ್ಲವೆ? ಶ್ರೀರಾಮಕೃಷ್ಣ ಸಂಸ್ಥೆಯ ಈ ವರ್ತನೆಯನ್ನು ಅರಿಯಲಾರದೆ ದೇಶವೆಲ್ಲ ಅಚ್ಚರಿಗೊಂಡಿದೆ. ರಾಷ್ಟ್ರೀಯ ಸ್ವಾತಂತ್ರ್ಯಸಂಗ್ರಾಮದಲ್ಲಿ ಈ ಮಹಾಸಂಸ್ಥೆಗೆ ಮಾಡಬೇಕಾದ ಕರ್ತವ್ಯವಾವುದೂ ಇಲ್ಲವೆ?” ಎಂದು ಸ್ವಲ್ಪ ತಡೆದು, ಅತ್ಯಂತ ದುಃಖಪೂರಿತವಾದ ಧ್ವನಿಯಲ್ಲಿ ಮುಂದುವರಿದು ಹೀಗೆಂದರು. “ನಿಮಗೆ ದೇಶದ ಗೋಳನ್ನು ನೋಡಿ ಮರುಕ ಹುಟ್ಟದೇ? ನಿಮಗೆ ಹೃದಯವಿಲ್ಲವೇ? ಅಥವಾ ಯಾವ ವಿಧವಾದ ನೆರವನ್ನೂ ನೀಡಲು ನಿಮಗೆ ಸಾಮರ್ಥ್ಯವೇ ಇಲ್ಲವೇ?”

ಸ್ವಾಮಿ ಶಿವಾನಂದರ ಮುಖಮಂಡಲದ ಪ್ರಶಾಂತಿ ಒಯ್ಯನೆ ಪರಿವರ್ತಿತವಾಯಿತು; ಒಂದು ಗುರುತರವಾದ ಗಂಭೀರತಾಮುದ್ರೆ ಅಲ್ಲಿ ಸಿಂಹಾಸನಸ್ಥವಾದಂತೆ ತೋರಿತು. ತುಸುಹೊತ್ತಾದ ಮೇಲೆ ಅವರ ಮೌನ ಮೊಳಗಿತಿಂತು: “ನೋಡು, ಕಾ… ಭಗವದವತಾರದ ನಡೆನುಡಿ ರೀತಿನೀತಿ ಸಾಮಾನ್ಯ ಮಾನವನ ವಿಚಾರ ಬುದ್ಧಿಗೆ ಮೀರಿವೆ. ನೀನಾಗಲಿ ರಾಷ್ಟ್ರವಾಗಲಿ ಆ ಭಗವತ್ ಕ್ರಿಯಾ ವಿಧಾನವನ್ನು ಹೇಗೆ ಅರಿಯಬಲ್ಲಿರಿ? ಭಗವಂತನು ಮನುಷ್ಯ ರೂಪಧಾರಣೆ ಮಾಡಿದಾಗ ಅವನು ಯಾವ ಒದು ರಾಷ್ಟ್ರಕ್ಕಾಗಿಯಾಗಲಿ ಜನಾಂಗಕ್ಕಾಗಿಯಾಗಲಿ ಹಾಗೆ ಮಾಡುವುದಿಲ್ಲ; ಸಮಗ್ರ ಜಗತ್ತಿನ ಕಲ್ಯಾಣಕ್ಕಾಗಿ, ಸಮಸ್ತ ಲೋಕಸಂಗ್ರಹಕ್ಕಾಗಿ ಅವತರಿಸುತ್ತಾನೆ. ಈ ಸಲದ ಅವತಾರವು ಭಗವಂತನ ಸರ್ವೋತ್ತಮ ಸಾತ್ತ್ವಿಕಾಂಶದ್ದಾಗಿದೆ. ಶ್ರೀರಾಮಕೃಷ್ಣಾವತಾರದಲ್ಲಿ ಪೂರ್ಣತ್ವವೆ ಮೂರ್ತಿಮತ್ತಾಗಿದೆ. ದಿವ್ಯವಾದ ಷಟ್ ಶಕ್ತಿಗಳಿಂದ ಸಮನ್ವಿತವಾಗಿದ್ದರೂ ಪರಮಹಂಸರು ಶುದ್ಧ ಸಾತ್ತ್ವಿಕ ಭಾವಗಳನ್ನು ಮಾತ್ರ ಪ್ರಕಾಶಪಡಿಸುವಂತೆ ದೇಹಧಾರಿಯಾಗಿದ್ದರು. ಅವರು ತಮ್ಮ ಇಡೀ ಜೀವಮಾನವನ್ನೆ ಗಂಗಾ ತೀರದಲ್ಲಿ ಒಂದು ದೇವಾಲಯ ಅಂಗಣದಲ್ಲಿ ಕಳೆದರು ಎಂಬುದನ್ನು ಮನನಮಾಡು. ನಿನಗೆ ಹೇಗೆ ಗೊತ್ತಾಗುತ್ತದೆ ಹೇಳು, ಇದೆಲ್ಲದರ ಆಧ್ಯಾತ್ಮಿಕವಾದ ಇಂಗಿತಾರ್ಥ?”

ತಮ್ಮ ತಾತ್ತ್ವಿಕಾಂಶದ ಧರ್ಮಶಕ್ತಿಯನ್ನೂ ಆಧ್ಯಾತ್ಮಿಕ ಚಿಂತನೆಗಳನ್ನೂ ಲೋಕದಲ್ಲಿ ಹರಡುವುದಕ್ಕಾಗಿಯೆ ಶ್ರೀರಾಮಕೃಷ್ಣರು ಸ್ವಾಮಿ ವಿವೇಕಾನಂದರಂತಹ ವಜ್ರೋಪಮವ್ಯಕ್ತಿಯನ್ನು ತಮ್ಮ ಜೊತೆಗೆ ಕರೆತಂದದ್ದು. ಸ್ವಾಮೀಜಿ ಸಮಸ್ತ ರಾಷ್ಟ್ರವನ್ನೂ ರಾಜಕೀಯವಾದ ಕ್ರಾಂತಿಗೆ ಬಡಿದೆಬ್ಬಿಸಲು ಸಮರ್ಥರಾಗಿದ್ದರು, ಹಾಗೆ ಇಷ್ಟಪಟ್ಟಿದ್ದರೆ. ಅವರನ್ನು ಮೀರುವ ದೇಶಭಕ್ತರಾದರೂ ಯಾರಿದ್ದಾರೆ? ದಲಿತರಿಗಾಗಿ ಪತಿತರಿಗಾಗಿ ದರಿದ್ರರಿಗಾಗಿ ಅವರು ಎದೆಗರಗಿದಂತೆ ಕರಗುವವರು ಯಾರಿದ್ದಾರೆ? ಸ್ವಾಮೀಜಿ ರಾಜಕೀಯ ಕ್ರಾಂತಿಯನ್ನು ಪ್ರಾರಂಭಿಸಲಿಲ್ಲ. ಹಾಗೆ ಮಾಡುವುದರಲ್ಲಿಯೆ ಭರತಖಂಡಕ್ಕೆ ನಿಜವಾದ ಶ್ರೇಯಸ್ಸು ಲಭಿಸುತ್ತದೆ ಎಂದು ಅವರು ಭಾವಿಸಿದ್ದರೆ ಅವರು ರಾಜಕೀಯ ಕ್ರಾಂತಿಯ ಮಾರ್ಗವನ್ನು ಹಿಡಿಯದೆ ಬಿಡುತ್ತಿರಲಿಲ್ಲ.

“ಹೋಗಲಿ: ಸ್ವಾಮಿ ವಿವೇಕಾನಂದರ ಮಾತಿರಲಿ; ನಾವು ಕೂಡ, ಗುರುಕೃಪೆಯಿಂದ ಎಂತಹ ಆತ್ಮಶಕ್ತಿಯನ್ನು ಪಡೆದಿದ್ದೇವೆ ಎಂದರೆ ಇಚ್ಛಾಮಾತ್ರದಿಂದ ದೇಶಜೀವನವನ್ನೆ ವಿಪ್ಲವಗೊಳಿಸಲು ಶಕ್ತರಾಗಿದ್ದೇವೆ. ಆದರೆ ಗುರುದೇವನು ನಮ್ಮನ್ನು ಆ ದಾರಿಗೆ ಬಿಡಲಿಲ್ಲ; ಹಾಗೆ ಮಾಡಲು ಅಪ್ಪಣೆಕೊಡಲಿಲ್ಲ. ಗುರುಮಹಾರಾಜ್ ನಮ್ಮನ್ನಿಲ್ಲಿಗೆ ಕರೆತಂದದ್ದು ತಮ್ಮ ಕಾರ್ಯಕ್ಕೆ ನೆರವಾಗಲೆಂದು. ಆದ್ದರಿಂದ ನಾವು ಕೈಕೊಳ್ಳುವ ಪ್ರತಿಯೊಂದು ಇತ್ಯರ್ಥದಲ್ಲಿಯೂ ನಾವು ಮಾಡುವ ಒಂದೊಂದು ಕಾರ್ಯದಲ್ಲಿಯೂ ಅವರು ನಮ್ಮನ್ನು ಕೈಹಿಡಿದು ನಡೆಸುತ್ತಿದ್ದಾರೆ. ದೇಶದ ಮತ್ತು ಜನತೆಯ ಹಿತಕ್ಕಾಗಿ, ನನ್ನ ಮಾತನ್ನು ನಂಬು; ನಮಗಿರುವುದೊಂದೇ ಆಶೆ: ಅದು ಜಗತ್ ಕಲ್ಯಾಣ. ಜನರ ಗೋಳು ಕಷ್ಟ ದುಃಖ ನಷ್ಟಗಳಿಗಾಗಿ ನಾವೆಷ್ಟು ಸಂಕಟಪಡುತ್ತಿದ್ದೇವೆ ಎಂಬುದನ್ನು ನಿನಗೆ ಹೇಗೆತಾನೆ ವಿವರಿಸಲಿ? ಸರ್ವ ಹೃದಯ ನಿವಾಸಿ ಆ ಭಗವಂತನೆ ಬಲ್ಲ.

“ಶರೀರ ತ್ಯಾಗ ಮಾಡುವುದಕ್ಕೆ ಮೊದಲು ಶ್ರೀ ಶ್ರೀ ಗುರುಮಹಾರಾಜರು ತಮ್ಮ ಶಕ್ತಿ ಸರ್ವಸ್ವವನ್ನೂ ಮತ್ತು ಇನ್ನೆಲ್ಲ ಹೊರೆ ಹೊಣೆಗಳನ್ನೂ ಸ್ವಾಮಿ ವಿವೇಕಾನಂದರಿಗೆ ಕೊಟ್ಟು, ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಬಿಟ್ಟುಹೋದರು. ತರುವಾಯ ಸ್ವಾಮೀಜಿ ಈ ತುದಿಯಿಂದ ಆ ತುದಿಯವರೆಗೆ ಭೂಮಂಡಲವನ್ನೆಲ್ಲ ಸುತ್ತಿ, ಸ್ವತಃ ಅದರ ಸರ್ವವನ್ನೂ ಕರತಲಾಮಲಕವಾಗಿ ಸಮೀಕ್ಷಿಸಿ ಸಮಸ್ತ ಪ್ರಪಂಚದ ಕಲ್ಯಾಣಾರ್ಥವಾಗಿಯೂ ಅದರಲ್ಲಿಯೂ ಭರತಖಂಡದ ಹಿತಾರ್ಥವಾಗಿಯೂ ಶ್ರೀ ಗುರುದೇವನ ನಿರ್ದೇಶನಕ್ಕನುಸಾರವಾಗಿ ಈ ಶ್ರೀರಾಮಕೃಷ್ಣ ಸಂಘವನ್ನೂ, ಮಠ ಸಂಸ್ಥೆಯನ್ನೂ ಪ್ರಾರಂಭಿಸಿದರು. ಒಬ್ಬೊಬ್ಬರನ್ನಾಗಿ ಸೆಳೆದು ನಮ್ಮನ್ನೂ ಈ ಕಾರ್ಯಗಳಲ್ಲಿ ತೊಡಗುವಂತೆ ಮಾಡಿದರು. ನಾವು ಇಷ್ಟಪಟ್ಟಿದರೆ ಏಕಾಂತವನ್ನು ಕೈಗೊಂಡು ಧ್ಯಾನ ಜಪತಪಗಳಲ್ಲಿ ಉದ್ಯುಕ್ತರಾಗಿ ಕಾಡುಬೆಟ್ಟಗಳಲ್ಲಿರಬಹುದಾಗಿತ್ತು. ವಾಸ್ತವವಾಗಿಯೂ ನಮ್ಮಲ್ಲಿ ಅನೇಕರು ಆಗಲೇ ಮಠದಿಂದ ಬಹುದೂರ ಪ್ರದೇಶಗಳಲ್ಲಿ ತಂಗಿ ಆಧ್ಯಾತ್ಮಿಕ ಸಾಧನೆಗಳಲ್ಲಿ ತೊಡಗಿದ್ದರು. ಸ್ವಾಮೀಜಿ ನಮ್ಮನ್ನೆಲ್ಲ ಕರೆದು ಸಂಘಬದ್ಧರನ್ನಾಗಿ ಮಾಡಿ ಸೇವಾಕಾರ್ಯದಲ್ಲಿ ತೊಡಗುವಂತೆ ಮಾಡಿದರು. ಈ ವೃದ್ಧಾಪ್ಯದಲ್ಲಿಯೂ ನಾವು ಆ ಕೆಲಸದಲ್ಲಿಯೇ ಅರ್ಪಿತಪ್ರಾಣರಾಗಿದ್ದೇವೆ.”

ಭಕ್ತರು: “ಮಹಾರಾಜ್, ಮಹಾತ್ಮಗಾಂಧಿ ಮತ್ತು ಇತರ ದೇಶಭಕ್ತರಾದ ಮುಂದಾಳುಗಳು ನಿಜವಾದ ಸೇವಾಕಾರ್ಯದಲ್ಲಿ ತೊಡಗಿಲ್ಲ ಎನ್ನುತ್ತೀರಾ? ಎಂತಹ ಅಪೂರ್ವವಾದ ಸೇವಾನಿಷ್ಠೆ, ಎಂತಹ ಅನ್ಯಾದೃಶವಾದ ಧಾರ್ಢ್ಯ! ಎಂತಹ ಮಹತ್ತಾದ ತ್ಯಾಗಶೀಲತೆ! ಇವುಗಳನ್ನೆಲ್ಲ ಅಲ್ಲಗಳೆಯಲಾಗುತ್ತದೆಯೆ? ದೇಶಕ್ಕಾಗಿ ಎಷ್ಟು ಹಿಂಸೆ ಅನ್ಯಾಯಗಳನ್ನೆಲ್ಲ ಸಹಿಸುತ್ತಿದ್ದಾರೆ ಅವರು.”

ಸ್ವಾಮೀಜಿ: ಉಂಟೇ? ಅದಲ್ಲ ನನ್ನ ಅರ್ಥ, ಅವರ ತ್ಯಾಗ, ಅವರ ಮನೋದಾರ್ಢ್ಯ, ಅವರ ರಾಷ್ಟ್ರಸೇವೆ ಎಲ್ಲವೂ ಸ್ತೋತ್ರಾರ್ಹವೆ, ಅವರ ಜೀವನ ನಿಜವಾಗಿಯೂ ಮಹಿಮಾಮಯವಾದದ್ದೆ; ಅನುಸರಣೀಯವಾದದ್ದೆ; ಭರತಖಂಡಕ್ಕೆ ಯಾವುದು ಶ್ರೇಯಸ್ಕರ ಎಂದು ಅವರು ಭಾವಿಸಿದ್ದಾರೆಯೋ ಅದಕ್ಕಾಗಿ ಅವರು ಮನಃಪೂರ್ವಕವಾಗಿ ಸೇವೆ ಸಲ್ಲಿಸಿ, ದೇಶಕ್ಕೆ ತುಂಬಾ ಉಪಕಾರ ಮಾಡಿದ್ದಾರೆ ನಿಜ. ಆದರೂ ನಮ್ಮ ಸೇವೆಯ ರೀತಿಯೆ ಬೇರೆ. ನಮ್ಮ ರಾಷ್ಟ್ರೀಯ ಮುಖಂಡರ ವಿಚಾರದಲ್ಲಿ ನಮ್ಮ ಭಾವನೆ ಏನು ನಿನಗೆ ಗೊತ್ತೆ? ಶ್ರೀರಾಮಕೃಷ್ಣರ ಮತ್ತು ಸ್ವಾಮಿ ವಿವೇಕಾಂದರ ಕೆಲವೆ ಭಾವ ಪ್ರಕಾರಗಳಿಂದ ಸ್ಫೂರ್ತಿಗೊಂಡು ಸೇವಾಕಾರ್ಯದಲ್ಲಿ ನಿರತರಾಗಿದ್ದಾರೆ. ಮಹಾತ್ಮ ಗಾಂಧಿ ಪ್ರಚಂಡ ಶಕ್ತಿಸಮನ್ವಿತರಾಗಿದ್ದಾರೆ ಎನ್ನುವುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. ಆದಿಶಕ್ತಿ ಜಗನ್ಮಾತೆಯ ಒಂದು ವಿಭೂತಿ ಅವರಲ್ಲಿ ಪ್ರಕಟವಾಗಿದೆ ಎನ್ನುವುದೂ ಸತ್ಯ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಳಿದ್ದಾನೆ:

ಯದ್ ಯದ್ ವಿಭೂತಿಮತ್ಸತ್ತ್ವಂ ಶ್ರೀಮದೂರ್ಜಿತಮೇವ ವಾ!
ತತ್ತ್ವದೇವಾವಗಚ್ಛ ತ್ತವಂ ಮಮ ತೇಜೋಂsಶಸಂಭವಂ!!

‘ಯಾವ ಯಾವ ವಸ್ತುಗಳಲ್ಲಿ ವಿಭೂತಿಮತ್ತಾದ ಸತ್ತ್ವವೂ ಶ್ರೀಮತ್ತಾದ ಊರ್ಜಿತವೂ ಪ್ರಕಾಶಿಸುತ್ತವೆಯೋ ಅವೆಲ್ಲವೂ ನನ್ನ ತೇಜಸ್ಸಿನ ಅಂಶದಿಂದಲೆ ಉದ್ಭವಿಸಿದವುಗಳೆಂದು ತಿಳಿ.’

ಯಾರಲ್ಲಿ ವಿಶೇಷ ಶಕ್ತಿ ಪ್ರಕಾಶವಾಗುತ್ತದೆಯೋ, ಯಾರು ಬಹು ಜನರ ಗೌರವ ಪೂಜೆಗಳಿಗೆ ಪಾತ್ರರಾಗುತ್ತಾರೆಯೊ ಅವರಲ್ಲಿ ನಿಜವಾಗಿಯೂ ಭಗವದ್ ವಿಭೂತಿ ಮೈದೋರಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಶ್ರೀರಾಮಕೃಷ್ಣರಿಂದ ಲೋಕಕಲ್ಯಾಣಾರ್ಥವಾಗಿ ಎಚ್ಚರಗೊಳಿಸಲ್ಪಟ್ಟ ಬ್ರಹ್ಮಕುಂಡಲಿನ ಶ್ರೀ ಜಗನ್ಮಾತೆ ಈಗ ಅನೇಕ ಪಾತ್ರಗಳ ಮೂಲಕ ಕೆಲಸ ಮಾಡುತ್ತಿದ್ದಾಳೆ ಎಂಬುದು ನಿರ್ವಿವಾದ. ಒಂದಲ್ಲ ಅನೇಕಸಾರಿ ಸ್ವಾಮಿ ವಿವೇಕಾನಂದರು ತಮ್ಮ ಉಪನ್ಯಾಸಗಳಲ್ಲಿ ಭರತ ಖಂಡದಲ್ಲಿ ಶ್ರೇಯಸ್ಸು ಯಾವುದರಲ್ಲಿದೆ ಎಂಬುದನ್ನು ಘೋಷಿಸಿದ್ದಾರೆ. ಭರತಖಂಡದ ಪುನರುಜ್ಜೀವನವನ್ನು ಹೇಗೆ ಸಾಧಿಸಬೇಕು ಎಂಬ ವಿಚಾರದಲ್ಲಿ ಅವರು ಇಪ್ಪತ್ತು ಇಪ್ಪತ್ತೈದು ವರ್ಷಗಳ ಹಿಂದೆಯೇ ಕೊಟ್ಟಿದ್ದ ಸಲಹೆ, ಸೂಚನೆ ಮತ್ತು ಆದೇಶಗಳನ್ನೆ- ಅಸ್ಪೃಶ್ಯತಾ ನಿವಾರಣೆ, ದಲಿತ ವರ್ಗದ ಉದ್ಧಾರ, ಸಾಮಾನ್ಯ ಜನತೆಯಲ್ಲಿ ವಿದ್ಯಾಪ್ರಚಾರ, ಇತ್ಯಾದಿ-ಇಂದು ಮಹಾತ್ಮಗಾಂಧಿ ಬೋಧಿಸುತ್ತಿದ್ದಾರೆ.

“ನಮ್ಮ ಭಾವನೆ, ಅಭಿಪ್ರಾಯ, ಆಲೋಚನೆಗಳನ್ನು ಪತ್ರಿಕೆಗಳ ಮೂಲಕ ನಾವು ಡಂಗುರ ಹೊಡೆದಿದ್ದರೂ ನಾವು ಅವುಗಳ ಸಾಧನೆಯಲ್ಲಿಯೆ ಸದಾ ನಿರತರಾಗಿದ್ದೇವೆ; ರಾಜಕೀಯ ವಿಧಾನದಿಂದಲ್ಲ ನಿಜ. ಆದರೆ ನಮ್ಮದೇ ಆದ ಬೇರೆ ರೀತಿಯಿಂದ. ಮಹಾತ್ಮಾಜಿ ಆ ಕಾರ್ಯಗಳನ್ನೇ ರಾಜಕೀಯ ರೀತಿಯಿಂದ ಸಾಧಿಸುತ್ತಿದ್ದಾರೆ. ಭರತಖಂಡದ ಹಿತದಲ್ಲಿ ಆಸಕ್ತರಾಗಿ ಇಲ್ಲಿ ಸ್ವದೇಶದಲ್ಲಿ ಹೇಗೆ ಕಾರ್ಯನಿರತರಾಗಿದ್ದೇವೆಯೋ ಹಾಗೆಯೆ ವಿದೇಶಗಳಲ್ಲಿಯೂ ಕೆಲಸಮಾಡುತ್ತಿದ್ದೇವೆ; ಏಕೆಂದರೆ ನಾವು ಭರತಖಂಡದ ಶ್ರೇಯಸ್ಸಿನಲ್ಲಿ ಎಷ್ಟು ಆಸಕ್ತರೋ ಅಷ್ಟೇ ಆಸಕ್ತರು ಇತರ ದೇಶಗಳ ಶ್ರೇಯಸ್ಸಿನಲ್ಲಿಯೂ. ಆದರೆ ಒಂದು ವಿಷಯ: ಎಲ್ಲ ದೇಶಗಳಲ್ಲಿಯೂ ಒಂದೇ ರೀತಿಯ ಕೆಲಸ ಮಾಡುವುದಿಲ್ಲ. ಆಯಾ ದೇಶಗಳ ಸ್ಥಿತಿಗತಿಗಳಿಗೆ ತಕ್ಕಹಾಗೆ ಅಲ್ಲಿಗಲ್ಲಿಗೆ ಹೊಂದುವ ಕೆಲಸಗಳನ್ನು ಕೈಗೊಳ್ಳುತ್ತೇವೆ. ಸ್ವಾಮಿ ವಿವೇಕಾನಂದರಿಂದ ಸಂಸ್ಥಾಪಿತವಾದ ಈ ಶ್ರೀರಾಮಕೃಷ್ಣ ಸಂಘ ಮತ್ತು ಮಠಕ್ಕೆ ಸೇರಿದ ಪ್ರತಿಯೊಬ್ಬ ಸಾಧುವೂ ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ ಎಂಬ ಮಹಾವಾಕ್ಯದಲ್ಲಿ ದೀಕ್ಷಿತನಾಗಿ, ಲೋಕದ ಹಿತಕ್ಕಾಗಿಯೂ ತನ್ನ ಮೋಕ್ಷಕ್ಕಾಗಿಯೂ ಶ್ರೀರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರ ಆಜ್ಞೆಯಂತೆ ಸೇವೆಯಲ್ಲಿ ತೊಡಗುತ್ತಾನೆ.”

ಭಕ್ತರು: “ಆದರೂ, ಮಹಾರಾಜ್, ಮಹಾತ್ಮಾಜಿಯ ಅಸಹಕಾರ ಚಳವಳಿಯಿಂದ ಉಂಟಾದ ರಾಷ್ಟ್ರೀಯ ಜಾಗ್ರತಿಗೆ ಮತ್ತಷ್ಟು ಪ್ರಚೋದನೆ ದೊರೆಯುತ್ತಿತ್ತಲ್ಲವೇ ಶ್ರೀರಾಮಕೃಷ್ಣ ಮಠ ಮತ್ತು ಸಂಘವೂ ಅದರೊಡನೆ ಸಹಕರಿಸಿದ್ದರೆ? ಈ ಅಭಿಪ್ರಾಯ ನನ್ನದು ಮಾತ್ರವಲ್ಲ, ತಿಳಿದವರು ಅನೇಕರು ಹೀಗೆ ಹೇಳುತ್ತಿದ್ದಾರೆ. ಮಹಾತ್ಮಾಜಿಯ ರಾಷ್ಟ್ರೀಯ ಚಳವಳಿಯಲ್ಲಿ ನೀವೇಕೆ ಸಹಕರಿಸಬಾರದು?”

ಸ್ವಾಮೀಜಿ: ನೋಡು, ನಾನು ನಿನಗೆ ಮೊದಲೇ ಹೇಳಿದೆನಲ್ಲವೆ? ನಾವು ನಮ್ಮ ರೀತಿಯಿಂದ ನಮ್ಮ ಆದರ್ಶಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಆ ಆದರ್ಶವು ಋಷಿಯೂ ದ್ರಷ್ಟಾರರೂ ಆದ ಸ್ವಾಮಿ ವಿವೇಕನಂದರಿಂದ ರೂಪಿತವಾಗಿ ನಮಗೆ ಬಂದದ್ದು. ಅವರ ದಿವ್ಯದೃಷ್ಟಿಗೆ ಭರತಖಂಡದ್ದು ಮಾತ್ರವಲ್ಲದೆ ಸಮಗ್ರ ಜಗತ್ತಿನ ಒಂದು ಸಾವಿರ ವರ್ಷಗಳ ಭವಿಷ್ಯದರ್ಶನ ಪ್ರಕಾಶಿತವಾಗಿತ್ತು. ಸರ್ವವನ್ನೂ ಸ್ಪಷ್ಟವಾಗಿ ಸಮೀಕ್ಷಿಸಿ ನಾವು ನಡೆಯಬೇಕಾದ ದಾರಿಯನ್ನು ಗೆರೆಹಾಕಿ ಗುರುತಿಸಿದ್ದಾರೆ. ಅವರೇನೂ ಕತ್ತಲೆಯಲ್ಲಿ ತಡುವುತ್ತಿರಲಿಲ್ಲ. ಬಹುದೂರದ ಭವಿಷ್ಯತ್ತನ್ನು ಸ್ಪಷ್ಟವಾಗಿ ಕಾಣುವ ಶಕ್ತಿ ಅವರಿಗಿತ್ತು.

ಈ ಯುಗದಲ್ಲಿ ಶ್ರೀರಾಮಕೃಷ್ಣರಲ್ಲಿ ಪ್ರಕಟಿತವಾಗಿರುವ ಭಗವದ್ ವಿಭೂತಿ ಅಸಾಧಾರಣವಾದದ್ದು. ಶತಶತಮಾನಗಳಿಂದಲೂ ಅಂತಹ ಭಗವದ್ ವಿಭೂತಿ ಮರ್ತ್ಯಕ್ಕೆ ಅವತರಿಸಿರಲಿಲ್ಲ. ಅವತರಣಗೊಂಡ ಆ ಆಧ್ಯಾತ್ಮಿಕಶಕ್ತಿಯ ಪ್ರಭಾವ ದುರ್ದಮ್ಯವಾದ ಪ್ರವಾಹದೋಪಾದಿಯಲ್ಲಿ ಇನ್ನೂ ಅನೇಕ ಕಾಲದವರೆಗೆ ಜಗತ್ತನ್ನೆಲ್ಲ ವ್ಯಾಪಿಸುವುದು. ಈಗ ನಿನಗೆ ತೋರುತ್ತಿರುವುದು ಆ ದಿವ್ಯನಾಟಕದ ನಾಂದಿ ಮಾತ್ರ. ಭಾರತೀಯ ದಿಗಂತದಿಂದ ಉದ್ಭವಿಸಿರುವ ಈ ಆತ್ಮಸೂರ್ಯನ ನಿರಂತರ ಪ್ರಕಾಶಮಾನವಾದ ದಿವ್ಯಜ್ಯೋತಿಯ ಕಿರಣಕೋಟಿ ಅಖಂಡ ಜಗತ್ತನ್ನೇ ದೀಪ್ಯಮಾನವನ್ನಾಗಿ ಮಾಡುವುದು. ಅದನ್ನು ಕಂಡೇ ಸ್ವಾಮೀಜಿ ಹೇಳಿದ್ದು. ‘ಈ ಸಾರಿಯ ಕೇಂದ್ರ ಭರತಖಂಡ’ ಎಂದು ಭರತಖಂಡವೆ ಕೇಂದ್ರವಾಗಿ ಧರ್ಮಚಕ್ರದ ಆಧ್ಯಾತ್ಮಿಕಶಕ್ತಿ ಹಬ್ಬುವುದು. ಈ ದಿವ್ಯಶಕ್ತಿಯ ಪ್ರಚಂಡ ಪ್ರವಾಹವನ್ನು ತಡೆಗಟ್ಟುವರಾರು? ಭರತಖಂಡದ ಪುನರುಜ್ಜೀವನ ಸುನಿಶ್ಚಿತ, ಸ್ವತಃಸಿದ್ಧ. ಕಲೆಗಳಲ್ಲಿ, ವಿಜ್ಞಾನಶಾಸ್ತ್ರಗಳಲ್ಲಿ, ತತ್ತ್ವಶಾಸ್ತ್ರದಲ್ಲಿ, ವಿದ್ಯಾಭ್ಯಾಸದಲ್ಲಿ-ಲೌಕಿಕ ಮತ್ತು ಧಾರ್ಮಿಕವಾದ ಸಕಲ ಕ್ಷೇತ್ರಗಳಲ್ಲಿಯೂ- ಭರತಖಂಡ ಸಾಧಿಸುವ ಅದ್ಭುತ ಉತ್ಕರ್ಷವನ್ನು ಕಂಡು ಜಗತ್ತು ಆಶ್ಚರ್ಯಚಕಿತವಾಗದಿರುವುದಿಲ್ಲ. ಆಕೆಯು ಭವಿಷ್ಯದಲ್ಲಿ ಸಾಧಿಸುವ ಸಿದ್ಧಿಯ ಮುಂದೆ ಆಕೆಯ ಪ್ರಾಚೀನ ವೈಭವವೂ ಮಬ್ಬಾಗಿ ತೋರುವುದು, ಯಃಕಶ್ಚಿತವೆಂದು ಪರಿಗಣಿತವಾಗುವುದು. ಆಗ ನಿಮಗೆ ಗೊತ್ತಾಗುತ್ತದೆ, ಗುರುಮಹಾರಾಜರೂ ಸ್ವಾಮಿಜಿಯೂ ಏಕೆ ಬಂದರೆಂದು, ಭರತಖಂಡದ ಶ್ರೇಯಸ್ಸಿಗೆ ಏನು ಕೆಲಸಮಾಡಿದ್ದಾರೆ ಎಂದು. ಆ ದಿವ್ಯಪುರುಷರ ಕೆಲಸ ಕಾರ್ಯಗಳ ರೀತಿ ನೀತಿ ಮಾನವನ ಅಲ್ಪಮತಿಗೆ ಗೋಚರವಾಗುವುದಾದರೂ ಹೇಗೆ? ಇಡೀ ಭರತಖಂಡದ ರಾಷ್ಟ್ರೀಯ ಕುಂಡಲಿನಿಯೆ ಅವರ ಶಕ್ತಿಸ್ಪರ್ಶದಿಂದ ಹೇಗೆ ಸುರುಳಿಬಿಚ್ಚಿ ಎಚ್ಚರಗೊಂಡಿದೆ? ಅದೂ ನಿನಗೆ ಕಾಣುವುದಿಲ್ಲವೆ? ಹೇಗೆ ದಲದಲದಲ ವಿಕಸಿತವಾಗುತ್ತಿದೆ? ಅದನ್ನಾದರೂ ಅರಿಯಲಾರೆಯಾ?

* * *