ಬೇಲೂರು ಮಠದ ತಮ್ಮ ಕೊಠಡಿಯಲ್ಲಿ ಸ್ವಾಮಿ ಶಿವಾನಂದರು ಕುಳಿತಿದ್ದಾರೆ. ಆತ್ಮಾನಂದದಿಂದ ಅವರ ಮುಖಮುದ್ರೆ ಪ್ರಭಾವಮಂಡಿತವಾಗಿದೆ. ಅವರ ಕಣ್ಣುಗಳಲ್ಲಿ ವಾತ್ಸಲ್ಯ ಕರುಣಗಳ ಅನುಗ್ರಹಪೂರ್ವಕವಾದ ಕಾಂತಿ ಹೊಮ್ಮುತ್ತಿತ್ತು. ಗಂಭೀರ ಶಾಂತಿಯ ಸ್ಥಳವನ್ನೆಲ್ಲ ತುಂಬಿತುಳುಕುತ್ತಿತ್ತು. ಆವೊತ್ತು ಶನಿವಾರವಾದ್ದರಿಂದ ಕಲ್ಕತ್ತದಿಂದಲೂ ಅನೇಕ ಭಕ್ತರು ಬಂದಿದ್ದರು. ಅವರಲ್ಲಿ ಅನೇಕರು ಆಫೀಸುಗಳಲ್ಲಿ ಕೆಲಸ ಮಾಡುತ್ತಿದ್ದ ತರುಣ ವಯಸ್ಸಿನವರು. ರಜಾ ದಿನಗಳಲ್ಲಿ ಮಠಕ್ಕೆ ಬಂದು ಮಹಾಪುರುಷಜಿಯ ದರ್ಶನಮಾಡಿ, ಅವರ ಉಪದೇಶವಾಣಿಯ ಅಮೃತಪಾನದಿಂದ ತೃಪ್ತರಾಗಿ ಶಾಂತವಾಗಿ ಹಿಂತಿರುಗುತ್ತಿದ್ದುದು ಅವರ ವಾಡಿಕೆ. ಆ ದಿನದ ಸಂವಾದ ಆಧ್ಯಾತ್ಮಿಕ ಸಾಧನೆಯ ವಿಷಯದ ಕಡೆಗೆ ತಿರುಗಿತು.

ಭಕ್ತರೊಬ್ಬರು ಕೇಳಿದರು: “ಮಹಾರಾಜ್, ಕೆಲವುಸಾರಿ ನಾನು ಧ್ಯಾನ ಮಾಡುವಾಗ ಮನಸ್ಸು ತುಂಬ ಸಂತೋಷವಾಗಿರುತ್ತದೆ. ಕೆಲವುಸಾರಿ ಧ್ಯಾನದಲ್ಲಿ ರುಚಿಯೇ ಇರುವುದಿಲ್ಲ. ಹೀಗಾಗುವುದು ಏಕೆ?”

ಸ್ವಾಮೀಜಿ ಹೇಳಿದರು: ಹೌದು ಹಾಗಾಗುವುದು ಸ್ವಾಭಾವಿಕ. ಕೆಲವುಸಾರಿ ಧ್ಯಾನಮಾಡುವಾಗ ಸುಖಾನುಭವವಿರುತ್ತದೆ, ಮತ್ತೆ ಕೆಲವು ಸಾರಿ ಅದಿರುವುದಿಲ್ಲ. ಪ್ರಾರಂಭದಲ್ಲಿ ಎಲ್ಲ ಸಾಧಕರೂ ಅನಿವಾರ್ಯವಾಗಿ ಅಂತಹ ಅನುಭವಗಳಿಗೆ ಒಳಗಾಗಿಯೆ ಆಗುತ್ತಾರೆ, ಆ ಕಾರಣದಿಂದ ಧ್ಯಾನದ ಅಭ್ಯಾಸವನ್ನು ಮಾತ್ರ ಬಿಡಬಾರದು. ಗುರುಮಹಾರಾಜರು ಜಾತಿ ರೈತನ ವಿಚಾರವಾಗಿ ಹೇಳಿಲ್ಲವೆ? ಅವನು ಹೇಗೆ ತನ್ನ ಕುಲದ ವೃತ್ತಿಗೆ ಬಿಡದೆ ಅಂಟಿಕೊಂಡಿರುತ್ತಾನೆಯೊ ಹಾಗೆಯೆ ನೀನು ಸಾಧನೆಗೆ ಅಂಟಿಕೊಂಡಿರಬೇಕು. ವಿಷಮ ಸನ್ನಿವೇಶಗಳು ಬಂದಾಗ ಭಗವಂತನಲ್ಲಿ ಮೊರೆಯಿಡಬೇಕು, ಹೀಗೆಂದು: ‘ಸ್ವಾಮಿ, ನಾವು ಪ್ರಾಪಂಚಿಕರು, ಸಂಸಾರದಲ್ಲಿದ್ದೇವೆ. ನಾವು ದುರ್ಬಲರು, ತಪಸ್ಸಿಲ್ಲ, ಸಾಧನೆಯಿಲ್ಲ, ಸಮಯವೂ ಸಾಲದು, ಶಕ್ತಿಯೂ ಇಲ್ಲ, ನಮಗೆ ನೀನಲ್ಲದೆ ಇನ್ಯಾರೂ ದಿಕ್ಕಿಲ್ಲ. ಗತಿಯಿಲ್ಲ. ಕೃಪೆಯಿಟ್ಟು ನಮ್ಮ ಚೇತನವನ್ನು ನಿನ್ನ ಕಡೆಗೆ ತಿರುಗಿಸಿಕೋ. ಹೇಗೆ ನಿನ್ನನ್ನು ಕರೆಯಬೇಕೋ ಹಾಗೆ ಕರೆಯುವುದನ್ನು ಕಲಿಸು; ಬದುಕಿಸು, ದುರ್ಬಲರಾದ ನಮಗೆ ನೀನು ಬಲವನ್ನು ದಯಪಾಲಿಸದಿದ್ದರೆ ಹೇಗೆತಾನಿ ನಿನ್ನನ್ನು ನೆನೆದೇವು? ವತ್ಸ, ಹೀಗೆ ದೇವರಲ್ಲಿ ಮೊರೆಯಿಡು. ಬೇಕಾದದ್ದು ಪ್ರಾರ್ಥನೆ, ಹೃದಯ ಸರ್ವಸ್ವವಾದ ಪ್ರಾರ್ಥನೆ. ಪ್ರಾರ್ಥಿಸುವಾಗ ಅಳು; ಅಶ್ರು ನೈವೇದ್ಯವನ್ನು ಅರ್ಪಿಸಿ ಮೊರೆಯಿಡು. ಆಗ ಅವನು ಕೃಪೆದೋರುತ್ತಾನೆ. ಅನುಗ್ರಹಿಸುತ್ತಾನೆ.’

ನೀನು ಓದಿಲ್ಲವೇ, ಗುರುಮಹಾರಾಜ್ ತಾಯಿಯ ಮುಂದೆ ಹೇಗೆ ಮೊರೆ ಇಡುತ್ತಿದ್ದರು ಎಂದು? ‘ತಾಯಿ, ಈ ಬದುಕಿನಲ್ಲಿ ಮತ್ತೊಂದು ದಿನ ಕಳೆದು ಹೋಯಿತು; ನನಗಿನ್ನೂ ನಿನ್ನ ದರ್ಶನವಾಗಿಲ್ಲ!’ ಎಂದು ಕಂಬನಿಗರೆದು ಗೋಳಿಡುತ್ತಾ ಧೂಳಿನಲ್ಲಿ ಹೊರಳಾಡಿ ನೆಲಕ್ಕೆ ಮೋರೆ ತೀಡುತ್ತಿದ್ದರು. ಶ್ರೀ ಚೈತನ್ಯ ದೇವರೂ ಕೂಡ ‘ಹೇ ಭಗವಾನ್, ನಿನ್ನ ನಾಮಜಪದಲ್ಲಿ ನನಗೇಕೆ ಇನ್ನೂ ಆನಂದ ಉಂಟಾಗುತ್ತಿಲ್ಲ!’ ಎಂದು ಸಂಕಟದಿಂದ ದೇವರಲ್ಲಿ ಮೊರೆಯಿಡುತ್ತಿದ್ದರು. ಹಾಗೆ ಗೋಳಿಡುತ್ತಾ ಅವರೂ ನೆಲದ ಹುಲ್ಲಿಗೆ ಮೋರೆ ತೀಡುತ್ತಿದ್ದರು. ಭಗವನ್ನಾಮಜಪವನ್ನು ಅಂತಹ ಹೃತ್ಪೂರ್ವಕವಾದ ಶ್ರದ್ಧೆಯಿಂದ ಮಾಡಬೇಕು. ದೇವರ ನಾಮ ಎಂದರೆ ಏನೆಂದುಕೊಂಡಿದ್ದೀಯೆ? ವತ್ಸ, ಭಗವತ್ ಸ್ವರೂಪವೆ ಭಗವನ್ನಾಮಜಪವನ್ನು ಎಂದಿಗೂ ಮರೆಯಬೇಡ. ಮತ್ತೆ ಮತ್ತೆ ಪ್ರಾರ್ಥನೆ ಮಾಡುವುದನ್ನು ತೊರೆಯಬೇಡ.

ಭಕ್ತರು: “ನಾಮಜಪವನ್ನು ಯಾವಾಗಂದರೆ ಆವಾಗ ಮಾಡಬಹುದೇ? ಉದಾಹರಣೆಗಾಗಿ, ಬೀದಿಯಲ್ಲಿ ನಡೆಯುತ್ತಿರುವಾಗಲೂ?”

ಸ್ವಾಮೀಜಿ: ಓಹೊ ನಿಸ್ಸಂಶಯವಾಗಿ! ಭಗವನ್ನಾಮೋಚ್ಚಾರಣೆ ಮಾಡುವುದಕ್ಕೆ ಆ ಕಾಲ ಈ ಕಾಲ ಎಂಬುದೇನಿಲ್ಲ. ಸಮಯ ದೊರೆತಾಗಲೆಲ್ಲ ಮಾಡಬಹುದು. ನಡೆಯುತ್ತಿರುವಾಗ ಮನಸ್ಸಿನಲ್ಲಿಯೆ ಜಪಮಾಡಬೇಕು. ಏಕೆಂದರೆ ಕೈಬೆರಳೆಣಿಕೆಯಿಂದಾಗಲಿ ರುದ್ರಾಕ್ಷಿಮಾಲೆ ಹಿಡಿದಾಗಲಿ ಬೀದಿಯಲ್ಲಿ ನಡೆವಾಗ ಜಪಮಾಡ ತೊಡಗಿದರೆ ಎಲ್ಲರ ಕಣ್ಣಿಗೂ ಬೀಳಬೇಕಾಗುತ್ತದೆ. ಭಗವನ್ನಾಮಜಪವನ್ನು ಅತ್ಯಂತ ಗೋಪ್ಯವಾಗಿ ಮಾಡಬೇಕು. ಅದರ ಸುಳಿವು ಕೂಡ ಯಾರಿಗೂ ತಿಳಿಯಬಾರದು.

ಮತ್ತೆ ಮತ್ತೆ ಭಗವಂತನನ್ನು ಸ್ಮರಿಸಿ ಧ್ಯಾನಮಾಡು. ಸಾಧಕನಾದವನು ಅದನ್ನೊಂದು ಅಭ್ಯಾಸವನ್ನಾಗಿ ಮಾಡಿಕೊಳ್ಳಬೇಕು. ನಡೆವಾಗ, ಉಣುವಾಗ, ಮಲಗಿರುವಾಗ, ಕೊನೆಗೆ ಕೆಲಸ ಮಾಡುತ್ತಿರುವಾಗಲೂ ದೇವರ ಸ್ಮರಣೆಮಾಡು, ಅವನ ಚಿಂತನೆ ಸದಾ ನಿನ್ನ ಮನಸ್ಸಿನ ವ್ಯಾಪಾರವಾಗಿರಲಿ. ಅದೊಂದು ಗುಪ್ತಗಾಮಿಯಾದ ಪ್ರವಾಹದಂತೆ ನಿನ್ನ ಅಂತಃಕರಣದಲ್ಲಿ ಪ್ರವಹಿಸುತ್ತಿರಲಿ. ಈ ರೀತಿ ಸ್ವಲ್ಪ ಕಾಲ ಅಭ್ಯಾಸ ಮಾಡಿದರೆ ಆಮೇಲೆ ಅವನ ಸ್ಮರಣ ಮತ್ತು ಧ್ಯಾನ- ನಿನಗರಿವಿಲ್ಲದಂತೆಯೆ ನಿನ್ನ ಮನಸ್ಸಿನಲ್ಲಿ ನಡೆಯುತ್ತಿರುತ್ತವೆ. ನಿದ್ದೆ ಮಾಡುತ್ತಿರುವಾಗಲೂ ನಾಮೋಚ್ಚಾರಣಾಕಾರ್ಯ ನಡೆಯುತ್ತಿರುತ್ತದೆ.

ಭಕ್ತರು: “ಮನಸ್ಸನ್ನು ಹಿಡಿದಿಡುವುದು ಎಷ್ಟು ಕಷ್ಟ! ಎಷ್ಟೋ ಸಾರಿ ನಾನು ಜಪಮಾಡುತ್ತಾ ರುದ್ರಾಕ್ಷಿಮಣಿ ಎಣಿಸುತ್ತಿರುವಾಗ ಬಾಯಿಯೇನೋ ತನ್ನ ಕೆಲಸ ಮಾಡುತ್ತಿರುತ್ತದೆ. ಮನಸ್ಸು ಮಾತ್ರ ಎಲ್ಲೆಲ್ಲಿಯೋ ಅಲೆದಾಡುತ್ತಿರುತ್ತದೆ, ಹಿಂದೆಂದೂ ನಾನು ಊಹಿಸದಿದ್ದ ಭಾವನೆಗಳಲ್ಲಿ, ಆಲೋಚನೆಗಳಲ್ಲಿ, ಆಶೆಗಳಲ್ಲಿ.”

ಸ್ವಾಮೀಜಿ: ನಿಜ, ನಿಜ. ಎಲ್ಲ ಗೋಳಿಗೂ ಮನಸ್ಸೇ ಕಾರಣ; ಅಲೆಯುವವರಲ್ಲಿ ಅಗ್ರಗಣ್ಯ ಈ ಮನಸ್ಸು. ಅದನ್ನು ಒಂದು ನಿಯಮದಲ್ಲಿಡದಿದ್ದರೆ ನಿನ್ನನ್ನು ಪೋಲಿ ಅಲೆಸದೆ ಬಿಡುವುದಿಲ್ಲ. ಆದರೂ ಮನಃಪೂರ್ವಕವಾದ ಪ್ರಯತ್ನದಿಂದ ಆತ್ಮ ಸಂಯಮ ಸಾಧ್ಯ. ನಿಯಮಕ್ಕೆ ಕಟ್ಟುಗೊಂಡಿತೆಂದರೆ ಈ ದುಷ್ಟ ಮನಸ್ಸಿಗೆ ಋಜುತ್ವ ಒದಗುತ್ತದೆ. ಆಗ ಅದು ಗುರುವಿನ ಸ್ಥಾನದಲ್ಲಿಯೂ ನಿಲ್ಲುತ್ತದೆ. ಭಗಮನ್ನಾಮಸ್ಮರಣೆಯನ್ನೂ ಮಾಡುತ್ತದೆ; ಸಾಧಕನನ್ನು ಆಧ್ಯಾತ್ಮಿಕವಾದ ಊರ್ಧ್ವಪಥಗಳಲ್ಲಿ ಕೊಂಡೊಯ್ಯುತ್ತದೆ; ಉದ್ದಾಮ ಕಾರ್ಯಗಳಲ್ಲಿ ಆಸಕ್ತನಾಗಲು ಸಾಧಕನಿಗೆ ಬೇಕಾದ ಸ್ಫೂರ್ತಿಯನ್ನು ದಯಪಾಲಿಸುತ್ತದೆ. ಯಾವಾಗಲೂ ಎಚ್ಚರಿಕೆಯಿಂದ ಸಂಯಮಪಾಲನೆ ಮಾಡುತ್ತಿರಬೇಕು; ಹೃತ್ಪೂರ್ವಕವಾಗಿ ಭಗವಂತನನ್ನು ಪ್ರಾರ್ಥಿಸುತ್ತಿರಬೇಕು. ಯಾವುದು ನಿತ್ಯ, ಯಾವುದು ಅನಿತ್ಯ ಎಂಬ ವಿವೇಕ ವಿಚಾರದಲ್ಲಿ ತೊಡಗಿರಬೇಕು. ವತ್ಸ, ಬ್ರಹ್ಮ ಚರ್ಯ ಸಂಯಮ ಮನೋನಿಗ್ರಹ ಇವು ಒಂದೆರಡು ದಿನಗಳಲ್ಲಿ ಸಾಧಿಸತಕ್ಕ ವಿಷಯಗಳಲ್ಲ. ಭಗವಂತನು ಗೀತೆಯಲ್ಲಿ ಹೇಳಿರುವುದೇನು ಸುಳ್ಳಲ್ಲ.

ಅಸಂಶಯಂ ಮಹಾಬಾಹೋ ಮನೋ ದುರ್ನಿಗ್ರಹಂ ಚಲಮ್!
ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹತೇ!!

‘ಅಸಂಶಯವಾಗಿಯೂ, ಓ ಮಹಾಬಾಹು, ಮನಸ್ಸು ಚಂಚಲ ಮತ್ತು ಅಸ್ಥಿರ; ಆದರೂ ಕೌಂತೇಯ, ಅಭ್ಯಾಸಯೋಗದಿಂದಲೂ ವೈರಾಗ್ಯದಿಂದಲೂ ಅದನ್ನು ನಿಗ್ರಹಿಸುವುದು ಸಾಧ್ಯ.’

‘ಅಭ್ಯಾಸ ಸತತಾಭ್ಯಾಸ, ವಿವೇಕ ವಿಚಾರ ಇವು ಅವಶ್ಯಕ. ಭಗವಂತನೊಬ್ಬನೆ ನಿತ್ಯವಸ್ತು. ಶಾಶ್ವತಸತ್ಯ. ಈ ವಿಷಯದಲ್ಲಿ ಲವಲೇಶವೂ ಸಂಶಯಕ್ಕೀಡಾಗದ ಅಚಲ ಶ್ರದ್ಧೆ ನಮ್ಮ ಹೃದಯಲ್ಲಿ ಸಂಪೂರ್ಣವಾಗಿ ಸ್ಥಾಯಿಯಾಗಬೇಕಾದುದು ಅತ್ಯಂತ ಆವಶ್ಯಕ.’

ಸಂವಾದ ಮುಂದುವರಿದಂತೆಲ್ಲ ಹೆಚ್ಚು ಹೆಚ್ಚು ಅಂತರ್ಮುಖಿಗಳಾದರು. ಸ್ವಲ್ಪ ಹೊತ್ತಿನಲ್ಲೆಯೆ ಮಾತುನಿಲ್ಲಿಸಿ, ಕಣ್ಣುಮುಚ್ಚಿ, ಧ್ಯಾನಸ್ಥರಾದರು, ನೆರೆದಿದ್ದ ಭಕ್ತರು ಸ್ವಲ್ಪಕಾಲ ಅಲ್ಲಿಯೆ ಇದ್ದು ಆಮೇಲೆ ಒಬ್ಬೊಬ್ಬರಾಗಿ ಎದ್ದು ಧ್ಯಾನಮಾಡುವ ಸಲುವಾಗಿ ಪೂಜಾಮಂದಿರಕ್ಕೂ ಗಂಗಾತೀರಕ್ಕೂ ತೆರಳಿದರು.

* * *

ಸರ್ವಜ್ಞೋsಪೀಹ ಸರ್ವೇಶಃ ಸದಾ ಕಾರುಣಿಕೋsಪಿ ಸನ್ |
ಸಂಸಾರತಂತ್ರವಾಹಿತ್ವಾದ್ ರಕ್ಷಾಪೇಕ್ಷಾಮಪೇಕ್ಷತೇ ||

ಸರ್ವೇಶನು ಸರ್ವಜ್ಞನಾದರೂ, ಸದಾ ಕಾರುಣಿಕನೂ ಆಗಿದ್ದರೂ, ಸಂಸಾರ ತಂತ್ರಾವಾಹಿತ್ವವೆ ಕಾರಣವಾಗಿ ರಕ್ಷಾಪೇಕ್ಷೆಯನ್ನು ಅಪೇಕ್ಷಿಸುತ್ತಾನೆ.

* * *