ಇವೊತ್ತು ಬೆಳಿಗ್ಗೆ ೭-೩೦ರ ಹೊತ್ತಿಗೆ ಸ್ವಾಮಿ ಶಿವಾನಂದರು ಬೇಲೂರು ಮಠದ ಪೂಜಾಮಂದಿರದಿಂದ ಆಗತಾನೆ ಹಿಂತಿರುತ್ತಿದ್ದರು. ಈಗೀಗ ಅವರು ಪ್ರಾತಃಸಮಯದಲ್ಲಿ ಬಹಳ ಹೊತ್ತು ಧ್ಯಾನದಲ್ಲಿರುತ್ತಾರೆ. ಬೆಳಿಗ್ಗೆ ಮುಂಜಾನೆಗೇ, ಶ್ರೀರಾಮಕೃಷ್ಣರಿಗೆ ಪ್ರಥಮಪೂಜೆ ಸಲ್ಲುತ್ತಿರುವಾಗಲೆ ಸ್ವಾಮಿಗಳು ಒಂದು ಕೃಷ್ಣಾಜಿನ ತೆಗೆದುಕೊಂಡು ದೇವರ ಮನೆಗೆ ಹೋಗಿ ಧ್ಯಾನಕ್ಕೆ ಕುಳಿತುಕೊಳ್ಳುತ್ತಾರೆ. ಕೆಲವು ಸಾರಿ ಅವರು ಹಿಂತಿರುಗುವಾಗ ಬೆಳಿಗ್ಗೆ ಹೊತ್ತಾಗಿರುತ್ತದೆ. ಇವೊತ್ತು ದೇವರಮನೆಯಿಂದ ಹಿಂದಿರುಗಿದ ಮೇಲೆ ಕುರ್ಚಿಯಲ್ಲಿ ಕುಳಿತಿದ್ದರು. ಧ್ಯಾನದ ದಿವ್ಯೋನ್ಮಾದದಲ್ಲಿ ಅವರ ಮನಸ್ಸು ಇನ್ನೂ ಲೀನವಾಗಿತ್ತು; ತುಂಬ ಅಂತರ್ಮುಖಿಗಳಾದಂತೆ ತೋರುತ್ತಿದ್ದರು. ಆಶ್ರಮದ ಸಾಧುಸಂನ್ಯಾಸಿಗಳೂ ಬ್ರಹ್ಮಚಾರಿಗಳೂ ಇತರ ಭಕ್ತರೂ ಎಂದಿನಂತೆ ಪ್ರಣಾಮ ಸಲ್ಲಿಸುವ ಸಲುವಾಗಿ ಬಂದರು. ಅವರನ್ನೆಲ್ಲ ಬರಮಾಡಿಕೊಂಡು ಸಂಕ್ಷೇಪವಾಗಿ ಒಂದೆರಡು ಮಾತಿನಲ್ಲಿಯೇ ಕುಶಲಪ್ರಶ್ನೆ ಕೇಳಿದರು. ಹೆಚ್ಚಾಗಿ ಯಾವ ಮಾತಾನ್ನೂ ಆಡುವುದಕ್ಕೆ ಮನಸ್ಸಿಲ್ಲದವರಂತೆ ತೋರಿದರು.

ರಾಮೇಶ್ವರ, ದ್ವಾರಕ ಮತ್ತು ಇತರ ಪವಿತ್ರ ಕ್ಷೇತ್ರಗಳಿಗೆ ಯಾತ್ರೆ ಹೋಗಿದ್ದ ಆಶ್ರಮದ ಸಾಧುವೊಬ್ಬರು ನಿನ್ನೆ ತಾನೆ ಹಿಂತಿರುಗಿ ಬಂದಿದ್ದರು. ಆ ಸಾಧು ಪ್ರವೇಶಿಸಿ ನಮಸ್ಕರಿಸಿದೊಡನೆಯ ಮಹಾಪುರುಷಜಿ ಕೈಜೋಡಿಸಿ ದೇವರಿಗೆ ವಂದನಾರ್ಪಣೆ ಮಾಡಿ “ಜಯ್ ಭಗವಾನ್ ರಾಮೇಶ್ವರ! ಜಯ್ ಭಗವಾನ್ ದ್ವಾರಕೇಶ್ವರ!” ಎಂದು ಘೋಷಿಸಿ, ಆ ಸಾಧುವನ್ನು ಕುರಿತು ಇಂತೆಂದರು:

“ಈ ಪವಿತ್ರ ವಿಷಯಗಳನ್ನು ಕುರಿತು ಧ್ಯಾನಮಾಡು. ನೀನು ಧ್ಯಾನಕ್ಕೆ ಕುಳಿತಾಗ ಆ ತೀರ್ಥಕ್ಷೇತ್ರಗಳಲ್ಲಿ ನೀನು ಕಂಡುದನ್ನೆಲ್ಲ ಮನನಮಾಡು. ಯಾತ್ರೆ ಹೋಗುವುದಕ್ಕೆ ಇರುವ ಉದ್ದೇಶವೇ ಅದು. ಬರಿಯ ನೋಟ ನೋಡುವ ವಿಲಾಸ ಪ್ರವಾಸಿಯಂತೆ ಹೋಗಿ ಬಂದರೆ ಏನು ಪ್ರಯೋಜನ? ನಿಜವಾಗಿಯೂ ಭಕ್ತರಾದರು ತಾವು ಕಂಡು ಬಂದ ಕ್ಷೇತ್ರಗಳನ್ನೆಲ್ಲ ಮತ್ತೆ ಮನಸ್ಸಿಗೆ ತಂದುಕೊಂಡು ಅವುಗಳನ್ನು ಕುರಿತು ಧ್ಯಾನಿಸುತ್ತಾರೆ. ಭಗವಂತನೆ ಈ ಎಲ್ಲ ಕ್ಷೇತ್ರಗಳೂ ಆಗಿದ್ದಾನೆ. ಜಗತ್ತೆಲ್ಲವೂ ಅವನೇ ಆಗಿದ್ದರೂ ಯಾತ್ರಾ ಸ್ಥಳಗಳು ಅವನ ವಿಭೂತಿ ಸ್ಥಾನಗಳು. ಪವಿತ್ರ ಕ್ಷೇತ್ರಗಳಲ್ಲಿ ಅವನು ವಿಶೇಷವಾಗಿ ಆವಿರ್ಭೂತನಾಗಿ ಇರುತ್ತಾನೆ. ನಮ್ಮ ಪೂಜಾಮಂದಿರದಲ್ಲಿ ಮಾತ್ರವೇ ಅವನು ಕುಳಿತಿಲ್ಲ. ಲೋಕೇಶ್ವರನಾದ ಆತನು ಸರ್ವವ್ಯಾಪಿ; ಎಲ್ಲೆಲ್ಲಿಯೂ ಇದ್ದಾನೆ. ಆದರೆ ಪವಿತ್ರ ಕ್ಷೇತ್ರಗಳಲ್ಲಿಯೂ ವಿಭೂತಿಗಳಲ್ಲಿಯೂ ಒಂದು ವಿಶೇಷ ರೀತಿಯಿಂದ ಅವನು ಆವಿರ್ಭೂತನಾಗಿರುತ್ತಾನೆ.”

ಸಾಧು: “ಈ ಸಾರಿಯ ಯಾತ್ರೆಯಲ್ಲಿ ನನಗಾಗಿರುವ ಅಲ್ಪಸ್ವಲ್ಪ ಅನುಭವದಿಂದಲೆ ನನಗೆ ಚೆನ್ನಾಗಿ ಮಂದಟ್ಟಾಗಿದೆ-ಭಗವಂತನ ಅಭಿವ್ಯಕ್ತಿ ಯಾತ್ರಾ ಸ್ಥಳಗಳಲ್ಲಿ ವಿಶೇಷರೀತಿಯಲ್ಲಿರುತ್ತದೆಂದು; ಅಲ್ಲದೆ ಹೆಜ್ಜೆಹೆಜ್ಜೆಗೂ ಅವನು ಕೈಹಿಡಿದು ನಮ್ಮನ್ನು ನಡೆಸಿ ರಕ್ಷಿಸುತ್ತಾನೆ ಎಂದು. ಕನ್ಯಾಕುಮಾರಿಯಲ್ಲಿ ಮೂರು ದಿನ ಇದ್ದೆ. ತುಂಬಾ ಆನಂದವಾಗಿತ್ತು. ಧ್ಯಾನ ಜಪ ಪೂಜೆ ಅಧ್ಯಯನಗಳಲ್ಲಿ ಬಹಳ ಹೊತ್ತು ಕಳೆಯುತ್ತಿದ್ದೆ. ಅದರ ಸೌಂದರ್ಯವೋ ಹೇಳತೀರದು. ಅದನ್ನು ಬಿಟ್ಟು ಅಲ್ಲಿಂದ ಹೊರಟು ಬರುವುದೇ ಕಷ್ಟವಾಯಿತು. ಈಶ್ವರ ಕೃಪೆಯಿಂದ ಅಲ್ಲಿ ನೆಮ್ಮದಿಯಾಗಿ ಇಳಿದುಕೊಳ್ಳುವುದಕ್ಕೆ ಬೇಕಾದುದೆಲ್ಲವೂ ಅನಿರೀಕ್ಷಿತವಾಗಿಯೆ ಒದಗಿತು.”

ಸ್ವಾಮೀಜಿ: ಒಮ್ಮೊಮ್ಮೆ ಹಾಗೆ ಹೊರಟು ಪರಿವ್ರಾಜಕ ಜೀವನ ನಡೆಸಬೇಕು; ದೇವರ ಮೇಲೆ ಸಂಪೂರ್ಣ ಭಾರ ಹಾಕಿ ಬದುಕುವುದನ್ನು ಅಭ್ಯಾಸ ಮಾಡಬೇಕು. ಅದರಿಂದ ಸಂಪೂರ್ಣ ಸಮರ್ಪಣಭಾವವೂ ನಿರ್ಭರತೆಯೂ ಲಭಿಸುತ್ತದೆ. ಸಮರ್ಪಣವಿಲ್ಲದೆ ಏನನ್ನೂ ಸಾಧಿಸಲಾಗುವುದಿಲ್ಲ. ಭಗವಂತನ ಅಡಿದಾವರೆಗಳಲ್ಲಿ ಸಂಪೂರ್ಣ ಶರಣಾಗತಿಯೆ ಪರಮಗತಿ. ಎಲ್ಲ ಜಪ ಸಾಧನೆ ತೀರ್ಥಯಾತ್ರೆಗಳ ಗುರಿಯೂ ‘ಶರಣಾಗತಿ’ ‘ಸಮರ್ಪಣ’ ‘ಪ್ರಪತ್ತಿ’. ಯಾರು ಪೂರ್ಣಮನದಿಂದಲೂ ಮನಃಪೂರ್ವಕವಾಗಿಯೂ ದೇವರಲ್ಲಿ ಶರಣಾಗುತ್ತಾರೆಯೊ ಅವರ ರಕ್ಷನೆ, ಯೋಗಕ್ಷೇಮ ಎಲ್ಲವನ್ನೂ ಭಗವಂತನೆ ನೋಡಿಕೊಳ್ಳುತ್ತಾನೆ. ಗೀತೆಯಲ್ಲಿ ಭಗವಂತನು ಹೇಳಿರುವುದೂ ಅದನ್ನೆ:

ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ‍್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ ||

“ಅನನ್ಯಚಿತ್ತರಾಗಿ ನನ್ನನ್ನು ಯಾರು ಉಪಾಸಿಸುತ್ತಾರೆಯೊ ನಿತ್ಯವೂ ನನ್ನಲ್ಲಿಯೆ ಅಭಿಯುಕ್ತರಾಗಿರುವ ಅಂತಹವರ ಯೋಗಕ್ಷೇಮವನ್ನು ನಾನು ವಹಿಸಿಕೊಳ್ಳುತ್ತೇನೆ.”

ಹಾಗೆಯೆ ಮಾತುಕತೆ ಮುಂದುವರಿಯುತ್ತಾ ಸಂನ್ಯಾಸಾಶ್ರಮ ಮತ್ತು ಸಾಧುಜೀವನದ ಕಡೆಗೆ ತಿರುಗಿತು. ಹೊಸದಾಗಿ ಸಂನ್ಯಾಸ ಸ್ವೀಕಾರಮಾಡಿದವರೊಬ್ಬರು ಕೇಳಿದರು: “ಮಹಾರಾಜ್, ಸಾಧುಗಳಾಗಿ ನಾವು ಆಚರಿಸಬೇಕಾದ ನಿಯಮನಿಷ್ಠೆಗಳನ್ನು ತಿಳಿಸಿ ಅನುಗ್ರಹಿಸಬೇಕು. ನಾವು ಸೇವಾಕಾರ್ಯಗಳಲ್ಲಿ ತೊಡಗಿರುವಾಗ ಪರಮಹಂಸ ಮತ್ತು ನಾರಾಯಣ ಉಪನಿಷತ್ತುಗಳಲ್ಲಿ ಹೇಳಿರುವ ಸಂಪ್ರದಾಯದ ವಿಧಿ ನಿಷೇಧಗಳ ಪ್ರಕಾರ ನಡೆಯುವುದು ವ್ಯವಹಾರ ಸಾಧ್ಯವಾಗುವುದಿಲ್ಲ. ನಿನ್ನೆ ಸಂಜೆ ಸ್ವಾಮಿ ಶುದ್ಧಾನಂದರೊಡನೆಯೂ ಆ ವಿಚಾರವಾಗಿ ಚರ್ಚೆ ನಡೆಯಿತು.”

ಸ್ವಾಮೀಜಿ: “ಹೌದು, ಸಂನ್ಯಾಸಾಶ್ರಮಕ್ಕೆ ಸಂಬಂಧಿಸಿದಂತೆ ಅಂತಹ ಅನೇಕ ವಿಧಿನಿಷೇಧ ನಿಯಮಗಳು ಉಕ್ತವಾಗಿವೆ. ಆದರೆ ಅವು ನಿಮ್ಮನ್ನೆ ಉದ್ದೇಶಿಸಿ ರಚಿತವಾಗಿಲ್ಲ. ಆದ್ದರಿಂದ ನೀವು ಅವುಗಳನ್ನು ಆಚರಿಸುವ ಅವಶ್ಯಕತೆಯಿಲ್ಲ. ನೀವೆಲ್ಲ ಬೇರೊಂದು ರೀತಿಯ ಸಂನ್ಯಾಸವರ್ಗಕ್ಕೆ ಸೇರಿದವರು. ನಿಮ್ಮ ಸಂನ್ಯಾಸ ಕರ್ಮಯೋಗ ಸಂನ್ಯಾಸ. ನೀವು ಕರ್ಮಯೋಗಿಗಳೂ ಹೌದು, ಸಂನ್ಯಾಸಿಗಳೂ ಹೌದು. ಸ್ವಾಮೀಜಿ ನಿಮಗೆ ಒಂದು ಹೊಸ ಆದರ್ಶವನ್ನು ನೀಡಿದ್ದಾರೆ. ಆತ್ಮದ ಮೋಕ್ಷಾರ್ಥವಾಗಿ ಜಪ ತಪ ಸಾಧನೆಗಳಲ್ಲಿ ನಿರತರಾಗುವುದರ ಜೊತೆಗೆ ಅಂತಹ ಸಾಧನೆಗೆ ಪೋಷಕವಾಗುವಂತೆ ನಿಷ್ಕಾಮ ಬುದ್ಧಿಯಿಂದ ಸೇವಾಕಾರ್ಯಗಳಲ್ಲಿಯೂ ತೊಡಗಿರಬೇಕಾಗುತ್ತದೆ. ಆದ್ದರಿಂದ ಆ ಉಪನಿಷತ್ತುಗಳಲ್ಲಿ ಹೇಳಿರುವ ವಿಧಿ ನಿಷೇಧಗಳನ್ನು ಸಂಪ್ರದಾಯದಂತೆ ಅಕ್ಷರಶಃ ಆಚರಿಸುವುದು ವ್ಯವಹಾರ ಸಾಧ್ಯವಲ್ಲ. ಆದ್ದರಿಂದ ಅವು ನಿಮಗೆ ಅನ್ವಯಿಸುವುದಿಲ್ಲ ಅವೆಲ್ಲ ಧ್ಯಾನ ಆತ್ಮವಿಚಾರ ವಿವೇಕ ವೈರಾಗ್ಯಾದಿಗಳಲ್ಲದ ಅನ್ಯ ಕರ್ಮಗಳಲ್ಲಿ ಸಂಪೂರ್ಣವಾಗಿ ಅನಾಸಕ್ತರಾಗಿರುವ ಸಂನ್ಯಾಸಿಗಳಿಗಾಗಿ. ಇದೆಲ್ಲ ನಿನಗೇನು ತಿಳಿಯದುದಲ್ಲ. ವತ್ಸ; ಹೃದಯದಲ್ಲಿ ಋಜುಭಾವ ಒಂದಿದ್ದರೆ ಸಾಕು. ಉಳಿದುದೆಲ್ಲ ತನಗೆ ತಾನೆ ಸರಿಹೋಗುತ್ತದೆ. ಯಾವುದು ಮೂಲವೂ ಆ ಮುಖ್ಯವನ್ನು ಗಮನಿಸಿದರೆ ಸಾಕು. ಗೌಣ ಅದಕ್ಕದೇ ಹೊಂದಿಕೊಳ್ಳುತ್ತದೆ.”

ಸಾಧು: “ಮಹಾರಾಜ್, ಮುಖ್ಯ ಎಂದರೆ ಏನು? ಅಪ್ಪಣೆ ಕೊಡಸಬೇಕು.”

ಸ್ವಾಮೀಜಿ: “ಮುಖ್ಯ ಎಂದರೆ ಕಾಮಿನೀ ಕಾಂಚನ ತ್ಯಾಗ. ಹೆಣ್ಣು ಹೊನ್ನುಗಳನ್ನು ತ್ಯಜಿಸಲು ಸಮರ್ಥನಾದರೆ ಉಳಿದುದೆಲ್ಲ ಸರಿಹೋಗುತ್ತದೆ. ಒಂದು ದೈಹಿಕವಾದ ತೃಷ್ಣೆ; ಇನ್ನೊಂದು ಮಾನಸಿಕವಾದ ಲೋಭ. ಬರಿಯ ಹೊರಗಿನ ಪಾಶಗಳಿಂದ ಬಿಡುಗಡೆ ಹೊಂದಿದರೆ ಸಾಲದು; ಅಂತರಂಗದ ಬಂಧನಗಳಿಂದಲೂ ವಿಮುಕ್ತರಾಗಬೇಕು. ನೆನಪಿಲ್ಲವೆ? ನೀವು ಸಂನ್ಯಾಸ ಸ್ವೀಕಾರ ಮಾಡಿದಾಗ ಎಲ್ಲ ಕಾಮನೆಗಳನ್ನೂ ಸಾಂಕೇತವಾಗಿ ಆಜ್ಯಾಹುತಿಯಂತೆ ಅಗ್ನಿಗೆ ಅರ್ಪಿಸಲಿಲ್ಲವೆ? ಸರ್ವಕಾಮಗಳ ಮೂಲವೂ ಹೆಣ್ಣು ಹೊನ್ನು. ಸಂನ್ಯಾಸಿಯಾದವನು ಪರಿಪಾಲಿಸಬೇಕಾದ ಆದಕರ್ತವ್ಯಗಳೆಂದರೆ ಬ್ರಹ್ಮಚರ್ಯ ಮತ್ತು ಅಪರಿಗ್ರಹ. ಶ್ರದ್ಧಾಪೂರ್ವಕವಾಗಿ ಭಗವಂತನಿಗೆ ಸರ್ವವನ್ನೂ ಸಮರ್ಪಿಸಿ ಶರಣಾಗು. ಅವನು ತಿಳಿಯಬೇಕಾದುದೆಲ್ಲವನ್ನೂ ತಿಳಿಸುತ್ತಾನೆ. ಪೂರ್ಣಜ್ಞಾನವನ್ನೂ ದಯಪಾಲಿಸುತ್ತಾನೆ. ಅವನ ಅನುಗ್ರಹದಿಂದ ಕಾಲಕ್ರಮೇಣ ಸರ್ವವೂ ನಿಗೆ ವಿದಿತವಾಗುತ್ತದೆ. ಪೂರ್ಣದರ್ಶನ ಸಿದ್ಧಿಯಾಗುತ್ತದೆ.”

ಸಾಧು: “ಸ್ವಾಮೀ ಒಡಲು ಇರುವವರೆಗೆ ಅದನ್ನು ಸರಿಯಾಗಿಡುವುದಕ್ಕಾಗಿ ಯಾದರೂ ಏನಾದರೊಂದು ಆಶೆಯ ಅವಲಂಬನೆ ಬೇಕಾವುದಿಲ್ಲವೆ?”

ಸ್ವಾಮೀಜಿ: ಹೌದು, ಇರಬೇಕು. ಶಾಸ್ತ್ರಗಳೂ ಆ ವಿಚಾರವಾಗಿ ವಿಧಿ ನಿಷೇಧಗಳನ್ನು ಹೇಳುತ್ತವೆ. ಬೃಹದಾಕಾರಣ್ಯಕ ಉಪನಿಷತ್ತು ಆ ವಿಚಾರವಾಗಿ ಹೀಗೆ ಹೇಳುತ್ತದೆ: ‘ಆತ್ಮ ಸ್ವರೂಪವನ್ನರಿತು, ಪುತ್ರ, ವಿತ್ತ, ಕೀರ್ತಿ ಇವುಗಳ ಪರವಾದ ಏಷಣಗಳನ್ನು ತ್ಯಜಿಸಿ. ಬ್ರಹ್ಮಜ್ಞಾನಿಗಳು ಪರಿವ್ರಾಜಕ ಸಂನ್ಯಾಸಿಗಳಾಗಿ ಮಾಧುಕರೀವೃತ್ತಿಯ ಜೀವನವನ್ನು ಕೈಕೊಳ್ಳುತ್ತಾರೆ.’ ಆಶರೀರಧಾರಣಾವಧಿ, ಎಂದರೆ ಶರೀರಧಾರಣೆಗೆ ಎಷ್ಟು ಅಗತ್ಯವೋ ಅಷ್ಟು ಏಷಣವನ್ನಿಟ್ಟು ಕೊಂಡರೆ ಬಾಧೆಯಿಲ್ಲ. ಮಾಧುಕರೀವೃತ್ತಿಯೂ ಕೂಡ ಎಷ್ಟು ಅತ್ಯಂತ ಅವಶ್ಯಕವೊ ಅಷ್ಟಕ್ಕೆ ಮಾತ್ರ ನಿಲ್ಲಬೇಕು. ಸಂನ್ಯಾಸಿ ರುಚಿಭೋಜನ ಮಾಡಿ, ಹೊಟ್ಟೆತುಂಬ ತಿಂದು, ಭೋಗಜೀವ ನಡೆಸಬೇಕೆಂದು ಎಲ್ಲಿಯೂ ಯಾವ ಶಾಸ್ತ್ರದಲ್ಲಿಯೂ ಉಕ್ತವಾಗಿಲ್ಲ. ಶರೀರ ಸಂರಕ್ಷಣೆಯ ಮುಖ್ಯೋದ್ದೇಶವಾದರೂ ಏನು? ‘ಮನಸ್ಸನ್ನೆಲ್ಲ ಭಗವಂತನ ಕಡೆಗೆ ತಿರುಗಿಸಿ, ಅವನ ಪ್ರಾರ್ಥನೆ ಧ್ಯಾನ ಅವನ ಸೇವೆ ಮೊದಲಾದ ಸಾಧನೆಗಳಲ್ಲಿ ಜೀವಿತ ಸಾರ್ಥಕ್ಕೆ ಮಾಡಿಕೊಳ್ಳುವುದಷ್ಟೆ?

ಸಾಧು: “ಆದರೂ ಮಹಾರಾಜ್, ದ್ವೈತಭಾವದ ಜೀವಿಗಳಿಗೆ ಸಂಪೂರ್ಣ ತ್ಯಾಗಸಾಧನೆ ಸುಲಭವೆ?”

ಸ್ವಾಮೀಜಿ: “ಏಕೆ ಸಾಧ್ಯವಲ್ಲ? ತ್ಯಾಗ ಎಂದರೆ ಏಷಣತ್ರಯಗಳಿಂದ ವಿಮುಕ್ತರಾಗುವುದು, ಮೂರು ಪ್ರಬಲವಾದ ಆಸೆಗಳಿಂದ ಬಿಡುಗಡೆ ಹೊಂದುವುದು. ದ್ವೈತಿಯಾದ ಭಕ್ತನೂ ಕೂಡ ತನಗೆ ಭಗವಂತನೊಬ್ಬನೆ ಬೇಕು ಎಂಬ ಆಸೆಗಾಗಿ ಇತರ ಎಲ್ಲ ಆಸೆಗಳನ್ನೂ ಕಾಮನೆಗಳನ್ನೂ ತೊರೆಯುತ್ತಾನೆ. ಜೀವಿತ ಸಮಸ್ತದ ಪರಮಗಂತವ್ಯ ಭಗವಂತನೊಬ್ಬನೆ. ಭಗವತ್ ಸಾಕ್ಷಾತ್ಕಾರ ಮಾಡಿಕೊಳ್ಳಬೇಕೆಂಬ ಅಭೀಪ್ಸೆಯ ಸ್ವರೂಪವೇ ಬೇರೆ. ಅದು ಇತರ ಲೌಕಿಕ ತೃಷ್ಣೆಗಳಂತೆ ಕಾಮನೆಯೇ ಅಲ್ಲ.”

* * *

ಸಂಪೂರ್ಣಂ ಜಗದೇವ ನಂದನವಂ
ಸರ್ವೇಪಿ ಕಲ್ಪದ್ರುಮಾಃ
ಗಾಂಗ್ಯಂ ವಾರಿ ಸಮಸ್ತ ವಾರಿನಿವಹಃ
ಪುಣ್ಯಾಃ ಸಮಸ್ತಾಃ ಕ್ರಿಯಾಃ
ವಾಚಃ ಪ್ರಾಕೃತ ಸಂಸ್ಕೃತಾಃ ಶ್ರುತಿಶಿರೋ
ವಾರಾಣಸೀ ಮೇದಿನೀ
ಸರ್ವಾವಸ್ಥಿತಿರಸ್ಯ ವಸ್ತು ವಿಷಯಾ
ದೃಷ್ಟೇ ಪರೇ ಬ್ರಹ್ಮಣಿ!

–          ಶಂಕರಾಚಾರ್ಯ

ಬ್ರಹ್ಮ ಸಾಕ್ಷಾತ್ಕಾರವಾದವನಿಗೆ ಜಗತ್ತೆಲ್ಲ ನಂದನವನ, ಮರಗಳೆಲ್ಲ ಕಲ್ಪತರು, ನೀರೆಲ್ಲ ಗಂಗೋಧಕ, ಕೆಲಸವೆಲ್ಲ ಪುಣ್ಯಕರ್ಮ, ಪ್ರಾಕೃತ ಸಂಸ್ಕೃತಾದಿ ಭಾಷೆಗಳೆಲ್ಲವೂ ಶ್ರುತಿಶಿರಸ್ಸುಗಳೆ, ಸಮಸ್ತ ಪೃಥ್ವಿಯೆ ವಾರಾಣಸಿ!

* * *