ಸ್ವಾಮಿ ಶುದ್ಧಾನಂದರು ಬೇಲೂರಿನಿಂದ ಕಾಶಿಗೆ ಹೊರಟಿದ್ದರು. ಆ ಸಂದರ್ಭದಲ್ಲಿ, ಪವಿತ್ರ ಕ್ಷೇತ್ರದಲ್ಲಿ ವಾಸಮಾಡುವುದರ ಆಧ್ಯಾತ್ಮಿಕ ಪ್ರಯೋಜನವನ್ನು ಕುರಿತು ಮಾತನಾಡುತ್ತಾ, ಮಹಾಪುರುಷಜಿ ಹೇಳೀದರು: “ಯಾರೋ ಒಬ್ಬರು ನಮಗೂ ಕಾಗದ ಬರೆದರು, ಕಾಶಿಗೆ ಬರಲು ಆಗ್ರಹಪೂರ್ವಕವಾದ ಆಹ್ವಾನವನ್ನು ನೀಡಿ. ಸ್ವಾಮಿ ಸಚ್ಚಿದಾನಂದರೂ ಅರ್ಥಪೂರ್ವಕವಾಗಿ ಎಂಬಂತೆ ಕಾಗದ ಬರೆದರು: ನಿಮ್ಮ ದೇಹಸ್ಥಿತಿ ಚೆನ್ನಾಗಿಲ್ಲ ಎಂದು ಕೇಳುತ್ತೇವೆ. ನಿಮ್ಮ ಜೀವಿತವೆಲ್ಲ ಸೇವಾಕಾರ್ಯದಲ್ಲಿ ಕಳೆದಿದೆ. ಇನ್ನು ಸಾಕು ಮಾಡಬಹುದಲ್ಲ! ಕಾಶಿಗೆ ಬಂದುಬಿಡಿ, ನಿಮಗೆ ಕಿರಿಯರಾದ ನಿಮ್ಮ ಮುಂದಿನ ಪೀಳಿಗೆಯವರಿಗೆ ಎಲ್ಲ ಕೆಲಸ ಕಾರ್ಯಗಳನ್ನೂ ವಹಿಸಿಕೊಡಿ. ನೀವಿನ್ನು ನಿಮ್ಮ ಬದುಕಿನ ಕೊನೆಯ ಸೋಪಾನವನ್ನು ಕಾಶಿಯಲ್ಲಿ ಕಳೆಯುವುದು ಉತ್ತಮ.”

“ಸ್ವಾಮಿ ಶುದ್ಧಾನಂದರೂ ಈ ದೇಹ ಇನ್ನು ಹೆಚ್ಚು ಕಾಲ ಬಾಳಲಾರದೆಂದು ಶಂಕಿಸುತ್ತಾರೆ. ಆದ್ದರಿಂದ ನಾನು ಆ ಪುಣ್ಯಕ್ಷೇತ್ರದಲ್ಲಿ ನನ್ನ ಕೊನೆಯ ದಿನಗಳನ್ನು ಕಳೆಯಬೇಕೆಂದು ಅವರ ಇಷ್ಟ. ಆದರೆ ನಮಗೆ ಎಲ್ಲ ಸ್ಥಳಗಳೂ ಕಾಶಿಯಂತೆಯೆ. ನಾವು ಎಲ್ಲಿಯೆ ದೇಹತ್ಯಾಗಮಾಡಲಿ, ಯಾವ ಸ್ಥಿತಿಯಲ್ಲಿಯೆ ತೀರಿಕೊಳ್ಳಲಿ ಕಾಶಿಯಲ್ಲಿ ಕಾಯ ಬಿಟ್ಟಂತೆಯೆ. ಎಲ್ಲಿಯವರೆಗೆ ಶ್ರೀಗುರುಮಹಾರಾಜರ  ಸೇವೆಗೆ ಈ ದೇಹ ಆವಶ್ಯಕವಾಗುತ್ತದೆಯೋ ಅಲ್ಲಿಯವರೆಗೆ ಮೃತ್ಯು ನಮ್ಮ ಬಳಿ  ಸುಳಿಯಲಾರದು. ‘ದೇವರ ಹೊರವೆಂದು ಕೊಲುವರಾರು? ‘ಸೆರೆಯಿಂದ ಹೊರಹೊರಡಲು ಭಗವಂತನಿಂದಲೆ ಕರೆ ಬಂದರೆ ಯಾರು ತಾನೆ ನಮ್ಮನ್ನಿಲ್ಲಿ ಹಿಡಿದಿಟ್ಟುಕೊಳ್ಳಲು ಸಮರ್ಥರಾದರು?”

“ಇಲ್ಲಿಂದ ತೆರಳಲು ನಾವು ಸದಾ ಸಿದ್ಧರಿದ್ದೇವೆ. ಮುದಿತನ ಬಂದಾಗ ಪಾರಲೌಕಿಕ ಪ್ರಯೋಜನಕ್ಕಾಗಿ ಕಾಶೀವಾಸ ಕೈಕೊಳ್ಳಲು ಆಶಿಸುವವರು ಪ್ರಾಪಂಚಿಕರು. ನಾವು ಆ ವರ್ಗಕ್ಕೆ ಸೇರಿದವರಲ್ಲ; ನಮ್ಮದೆ ಪ್ರತ್ಯೇಕ ವರ್ಗ. ಶ್ರೀಗುರು ಕೃಪಾಪೂರ್ವಕವಾಗಿ ನಮಗೆ ಎಲ್ಲವನ್ನೂ ದಯಪಾಲಿಸಿದ್ದಾರೆ. ಅವನ ಭಕ್ತರು ಎಲ್ಲಿ ಯಾವ ಸ್ಥಿತಿಯಲ್ಲಿ ದೇಹತ್ಯಾಗಮಾಡುತ್ತಾರೆ ಎಂಬುದು ಅಪ್ರಕೃತ. ಅವರ ಭವಿಷ್ಯತ್ತು ಸುನಿಶ್ಚಿತ. ಕಾಶಿಯಲ್ಲಿ ಸಾಯುವವನ ಭವಿಷ್ಯತ್ತು ಹೇಗೊ ಹಾಗೆ. ಸ್ವಾಮಿ ತ್ರಿಗುಣಾತೀತರು ಸ್ಯಾನ್‌ಫ್ರಾನ್ಸಿಸೊ ನಗರದಲ್ಲಿ ಪ್ರಾಣಬಿಟ್ಟರು. ಅವರಿಗೆ ಅದರಿಂದ ಊನವಾಯಿತೆ? ಅವರು ಮರಣಾನಂತರ ನಿಸ್ಸಂದೇಹವಾಗಿ ಗುರುವಿನಲ್ಲಿ ಐಕ್ಯ ಹೊಂದಿದರು. ವಿಶ್ವೇಶ್ವರನಾದ ದೇವರು ಯಾರ ಹೃದಯದಲ್ಲಿ ಗುಡಿ ಕಟ್ಟಿಕೊಳ್ಳುತ್ತಾನೆಯೊ ಆ ಹೃದಯ ಕಾಶಿಗೆ ಕಡಿಮೆಯಲ್ಲ. ಅದು ಪರಮ ಪುಣ್ಯಕ್ಷೇತ್ರವಾಗುತ್ತದೆ. ಅಂತಹವನಿಗೆ ಯಾವ ಭಯಕ್ಕೂ ಶಂಕೆಗೂ ಒಂದಿನಿತೂ ಕಾರಣವಿಲ್ಲ.”

* * *

ಶಿವನೆಂದಾ ಶೈವರಾರನ್ ಸಮುಪಾಸಿಪರ್, ಬ್ರಹ್ಮವೆಂದಾ ವೇದಾಂತಿಗಳ್,
ಜಿನನೆಂದಾ ಜೈನಶಾಸನರತರ್, ಕರ‍್ತನೆಂದಾ ನೈಯಾಯಿಕರ್.
ಗುರುವೆಂದಾ ಬುದ್ಧನಂ ಬೌದ್ಧರ್, ಕರ್ಮ ಮೆಂದಾ ಮೀಮಾಂಸಕರ್,
ಹರಿಯೆಂಬಾ ದೇವಂ ವಾಂಛಿತ ಫಲಂಗಳಂ ನೀಡುಗಾ ತ್ರೈಲೋಕ್ಯನಾಥಂ!

* * *