ಅಂದು ಭಾನುವಾರ, ಬೆಳಗ್ಗೆ ಸುಮಾರು ಒಂಬತ್ತು ಗಂಟೆ. ಮಹಾಪುರಷಜಿ ಅವರ ಕೋಣೆಯಲ್ಲಿ ಒಂದು ಮಂಚದ ಮೇಲೆ ಕುಳಿತಿದ್ದಾರೆ. ಅನೇಕ ಭಕ್ತರು ನೆರೆದಿದ್ದಾರೆ; ಸ್ವಾರಸ್ಯವಾದ ವಿಷಯಗಳನ್ನು ಕುರಿತು ಸಂಭಾಷಣೆ ಸಾಗುತ್ತಿದೆ. ಭಕ್ತನೊಬ್ಬನು ಕುತೂಹಲದಿಂದ “ಮಹಾರಾಜ್, ನಿಮಗೆ ಎಷ್ಟು ವಯಸ್ಸು?” ಎಂದು ಕೇಳಿದನು.

ಸ್ವಾಮೀಜಿ: “ನೀನು ಕೇಳುತ್ತಿರುವುದು ದೇಹದ ವಯಸ್ಸನ್ನಲ್ಲವೆ? ನನಗೆ ಅಷ್ಟು ಸರಿಯಾಗಿ ಗೊತ್ತಿಲ್ಲ. ಹೆಚ್ಚು ಕಡಿಮೆ ಎಪ್ಪತ್ತು ಎಪ್ಪತ್ತೆರಡರ ಹತ್ತಿರ ಇರಬಹುದು.”

ಭಕ್ತ: “ಹಾಗಾದರೆ ನಮಗಿಂತ ಮೂರರಷ್ಟು ವಯಸ್ಸಾಗಿದೆ ನಿಮಗೆ.”

ಸ್ವಾಮೀಜಿ: “ಇರಬಹುದು. ಮೂರರಷ್ಟೆ! ಮೂರರಷ್ಟೆ ಏಕೆ? ನಾನು ಅನಾದಿಕಾಲದಿಂದಲೂ ಇದ್ದೇನೆ. ರೋಗ ರುಜೆ ಜರಾ ಮರಣಗಳಿಗೆ ಅತೀತವಾಗಿರುವ ಆತ್ಮ ಅನಾದಿ, ಅನಂತ, ನಿತ್ಯ, ಅಮೃತ. ಶುದ್ಧ ಬುದ್ಧ ಮುಕ್ತಸ್ವರೂಪವಾದ ಅದು ಚೈತನ್ಯರೂಪದಿಂದ ಎಲ್ಲರಲ್ಲಿಯೂ ಇದೆ. ಈ ವಯಸ್ಸಿನ ಲೆಕ್ಕಾಚಾರ-ಹತ್ತು, ಇಪ್ಪತ್ತು, ಐವತ್ತು ನೂರು ಇದೆಲ್ಲ ಬರಿಯ ಅಜ್ಞಾನದ ಕಲ್ಪನೆ. ಸತ್ಯಸ್ವರೂಪವೂ ನಿರ್ವಿಕಾರವೂ ಆಗಿರುವ ಆತ್ಮ ಯಾವ ಕಾಲದೇಶಕವಾದ ಪರಿಣಾಮಕ್ಕೂ ಒಳಗಾಗದೆ ಅನಾದಿಯಿಂದಲೂ ಇದೆ.”

“ಅವಿದ್ಯೆಯಿಂದ ನಿರ್ಮಿತವಾದ ಈ ಮಿಥ್ಯೆಯನ್ನು ಸತ್ಯವೆಂದು ಭ್ರಮಿಸಿರುವುದೇ ನಮ್ಮೆಲ್ಲ ಕಷ್ಟಗಳಿಗೂ ಮೂಲ ಕಾರಣ. ಮರುಮರೀಚಿಕೆಯನ್ನು ನಿಜವಾದ ನೀರಿನ ಸರೋವರವೆಂದೇ ಭ್ರಮಿಸಿ ಜಿಂಕೆಗಳೆಲ್ಲ ಒಟ್ಟಿಗೆ ಅಲ್ಲಿಗೆ ನುಗ್ಗುತ್ತವೆ. ದೂರದಿಂದ ಮರಳಿನ ಹರವು ಅಲೆ ಅಲೆಯಾಗಿ ನಲಿಯುವ ನೀರಿನ ವಿಸ್ತರದಂತೆ ಕಾಣಿಸುತ್ತದೆ. ಆ ತೋರಿಕೆಗೆ ಮೋಸಹೋಗಿ ಜಿಂಕೆಯ ಹಿಂಡು ಬಾಯಾರಿಕೆಯನ್ನು ಆರಿಸಿಕೊಳ್ಳುತ್ತೇವೆಂದು ಅದರ ಕಡೆ ಓಡಿ ಓಡಿ ಧಾವಿಸಿ ಕಡೆಗೆ ಆ ಸುಡು ಮರಳುಗಾಡಿನಲ್ಲಿ ಪ್ರಾಣಬಿಡುತ್ತವೆ. ಅದರಂತೆಯೆ ಅನಿತ್ಯವನ್ನು ನಿತ್ಯವೆಂದು ಭ್ರಮಿಸುವ ಮನುಷ್ಯನೂ ಅನಂತ ದುಃಖಕ್ಕೆ ಭಾಜನನಾಗುತ್ತಾನೆ. ಕಾವಲಿಯ ಮೇಲೆ ಹುರಿದ ಹಾಗೆ ಆಗುತ್ತಾನೆ. ಇಂದಲ್ಲ ನಾಳೆ ಒಂದು ದಿನ ತಾನು ಈ ಲೋಕವನ್ನು ಬಿಡಬೇಕಾಗುತ್ತದೆ ಎಂಬುದನ್ನು ಅವನು ಒಂದು ಕ್ಷಣವೂ ಆಲೋಚಿಸುವುದಿಲ್ಲ. ತನ್ನ ವ್ಯವಹಾರವನ್ನೆಲ್ಲ ತಾನಿಲ್ಲ ಶಾಶ್ವತ ಎಂಬಂತೆಯೇ ನಿರ್ವಹಿಸುತ್ತಿರುತ್ತಾನೆ. ಬಂಗಲೆ ಕೊಳ್ಳುತ್ತಾನೆ; ಜಮೀನು ಸಂಪಾದಿಸುತ್ತಾನೆ; ಏನೇನೂ ಮಾಡುತ್ತಾನೆ. ಅವನ್ನೆಲ್ಲ ಶಾಶ್ವತಗೊಳಿಸಲಿಕ್ಕೆ ಅವನು ಎಷ್ಟೇ ಪ್ರಯತ್ನಿಸಲಿ, ಅದೆಲ್ಲ ಎಷ್ಟು ದಿವಸ ನಿಲ್ಲುತ್ತದೆ?”

ನೆರೆದಿದ್ದವರಲ್ಲಿ ವಯಸ್ಕರೊಬ್ಬರನ್ನು ಕುರಿತು ಸ್ವಾಮೀಜಿ ಹೀಗೆಂದರೆ: “ಗಂಗಾವಾರಿಯಲ್ಲಿ ಕೈಕಾಲುಮುಖ ತೊಳೆದುಕೊಂಡು ನೀವು ಪೂಜಾಮಂದಿರಕ್ಕೆ ಹೋಗಿಬನ್ನಿ. ನಮ್ಮ ಪೂಜಾಮಂದಿರವನ್ನು ಸಾಕ್ಷಾತ್ ಕೈಲಾಸ ಅಥವಾ ವೈಕುಂಠವನ್ನಾಗಿ ಮಾಡಿದ್ದೇವೆ ನಾವು. ಅಲ್ಲಿ ಭಗವಾನ್ ಶ್ರೀರಾಮಕೃಷ್ಣರ ಸಾಕ್ಷಾತ್ ಸಾನ್ನಿಧ್ಯವಿದೆ. ಶ್ರೀ ಮಹಾಮಾತೆ, ಸ್ವಾಮೀಜಿ ಮತ್ತು ಶ್ರೀಗುರುಮಹಾರಾಜರ ಇತರ ಶಿಷ್ಯವರ್ಗವೆಲ್ಲವೂ ಅಲ್ಲಿದ್ದಾರೆ. ಮಂದಿರ ಪ್ರವೇಶ ಮಾಡಿದಾಗಲೆಲ್ಲ ಸಾಕ್ಷಾತ್ ಕೈಲಾಸದಲ್ಲಿರುವಂತೆಯೆ ನನಗೆ ಅನುಭವವಾಗುತ್ತದೆ. ನಾನು ಅಲ್ಲಿಗೆ ಪದೇ ಪದೇ ಹೋಗಿ ಧ್ಯಾನಕ್ಕೆ ಕುಳಿತುಕೊಳ್ಳುತ್ತೇನೆ. ನನ್ನ ಹೃದಯ ಆನಂದದಿಂದ ತುಂಬಿಹೋಗುತ್ತದೆ.”

ಹತ್ತಿರದಲ್ಲಿಯೇ ಕುಳಿತಿದ್ದ ಸಂನ್ಯಾಸಿಯೊಬ್ಬರನ್ನು ಕುರಿತು ಸ್ವಾಮೀಜಿ “ನೀವು ಯಾವಾಗ ಹೋಗುತ್ತೀರಿ ದೇವರ ಮನೆಗೆ?” ಎಂದು ಕೇಳಿದರು.

ಸಂನ್ಯಾಸಿ: “ಬೆಳಿಗ್ಗೆ ಸುಮಾರು ಒಂಬತ್ತು ಹತ್ತು ಗಂಟೆಯ ಹೊತ್ತಿಗೆ ಮತ್ತೆ ಸಾಯಂಕಾಲ.”

ಸ್ವಾಮೀಜಿ: “ಬೆಳ್ಳಿಗ್ಗೆ ಮುಂಜಾನೆ ಹೋಗುವುದಿಲ್ಲವೆ?”

ಸಂನ್ಯಾಸಿ: “ಇಲ್ಲ, ಮಹಾರಾಜ್; ಬೆಳಿಗ್ಗೆ ಹಾಸಿಗೆಯಲ್ಲಿಯೆ ಕುಳಿತು ಧ್ಯಾನಮಾಡುತ್ತೇನೆ.”

ಸ್ವಾಮೀಜಿ: “ಹಾಸಿಗೆಯಲ್ಲಿಯೆ ಏಕೆ? ಬೆಳಿಗ್ಗೆ ಮುಂಚೆ ಎದ್ದು ಮುಖ ತೊಳೆದುಕೊಂಡು ಮೇಲೆ, ನೆಟ್ಟಗೆ ದೇವರ ಮನೆಗೆ ಹೋಗಿ ಅಲ್ಲಿಯೆ ಧ್ಯಾನ ಮಾಡಬೇಕು. ಎಲ್ಲಾ ಬಿಟ್ಟು ಹಾಸಿಗೆಯಲ್ಲಿಯೆ ಧ್ಯಾನ ಮಾಡುವುದು? ಇಷ್ಟೊಂದು ಪ್ರಶಸ್ತ ಸ್ಥಳ ಇರುವಾಗ? ಆ ಅಭ್ಯಾಸ ಒಳ್ಳೆಯದಲ್ಲ. ಕುಳಿತುಕೊಳ್ಳುವುದಕ್ಕೆ ಬೇರೆ ಅನುಕೂಲವಾದ ಸ್ಥಳ ಇಲ್ಲದೆ ಇರುವಾಗ ಹಾಗೆ ಮಾಡಿದರೆ ಚಿಂತೆಯಿಲ್ಲ. ನಮಗೆ ಅನುಭವದಿಂದ ಗೊತ್ತಾಗಿದೆ. ಹಾಸಿಗೆಯ ಮೇಲೆ ಕುಳಿತೆ ಅಂದರೆ ನಿದ್ದೆ ಬರುವ ಹಾಗೆ ಆಗುತ್ತೆ. ಆಕಳಿಕೆಗೂ ಶುರುವಾಗುತ್ತೆ. ಹಾಸಿಗೆ ತಲೆದಿಂಬುಗಳಿಗೂ ನಮ್ಮನ್ನು ಕೆಳಗೆಳೆಯುವ ಪ್ರಭಾವವಿರುವುದರಿಂದ ಅವು ನಿದ್ದೆಯ ಕಡೆಗೇ ತಳ್ಳುತ್ತವೆ. ಸಾಧ್ಯವಾದಮಟ್ಟಿಗೂ ನಾವೇನೂ ಹಾಸಿಗೆಯ ಮೇಲೆ ಕುಳಿತುಕೊಳ್ಳುವುದಿಲ್ಲ. ಬೆಳಗಿನ ಜಾವ ಬಹಳ ಮುಂಚೆ, ಪೂಜಾಮಂದಿರ ಇನ್ನೂ ತೆರೆಯದಿದ್ದಾಗ, ನಾನು ಸ್ವಲ್ಪ ಹೊತ್ತು ಹಾಸಿಗೆಯ ಮೇಲೆಯೆ ಕುಳಿತುಕೊಳ್ಳುವುದುಂಟು; ಆದರೆ ಬಾಗಿಲು ತೆರೆದಮೇಲೆ ಮಂದಿರಕ್ಕೆ ಹೋಗಿ ಧ್ಯಾನ ಮಾಡುವುದರಲ್ಲಿಯೆ ನನಗೆ ತುಂಬ ಆನಂದ.”

ಹೊತ್ತಾರೆ ಧ್ಯಾನಕ್ಕೆ ಬಹಳ ಪ್ರಶಸ್ತಕಾಲ. ನಿಶ್ಯಬ್ದವಾಗಿರುತ್ತದೆ; ಪ್ರಶಾಂತವಾಗಿರುತ್ತದೆ. ಸುತ್ತಣ ನಿಸರ್ಗದಲ್ಲಿಯೂ ಶಾಂತಿ ನೆಲೆಸಿರುತ್ತದೆ. ಹೆಚ್ಚು ಪ್ರಯತ್ನವಿಲ್ಲದೆಯೆ ಮನಸ್ಸು ಧ್ಯಾನಮಗ್ನವಾಗಬಲ್ಲುದು. ನಾನಂತೂ ರಾತ್ರಿ ಮಲಗುವುದು ಅದೆಷ್ಟೇ ಹೊತ್ತಾಗಲಿ, ಬೆಳಗಿನ ಜಾವ ಮೂರು ಗಂಟೆಗೇ ಎದ್ದುಬಿಡುತ್ತೇನೆ.

ನಾವು ಕಂಡಹಾಗೆ ಗುರುಮಹಾರಾಜರು ಕೂಡ ಬೆಳಗಿನ ಜಾವ ಮೂರು ಗಂಟೆ ಹೊಡೆದ ಮೇಲೆ ಎಂದಿಗೂ ನಿದ್ದೆ ಮಾಡುತ್ತಿರಲಿಲ್ಲ. ಅವರು ನಿದ್ದೆ ಮಾಡುತ್ತಿದ್ದುದೆ ಬಹಳ ಸ್ವಲ್ಪಕಾಲ-ಒಂದೂ, ತಪ್ಪಿದರೆ ಎರಡು ಗಂಟೆ ನಿದ್ದೆಮಾಡಿದರೆ ಹೆಚ್ಚು. ಹಾಸಿಗೆಯಿಂದ ಏಳುತ್ತಿರುವಾಗಲೆ ಭಗವನ್ನಾಮೋಚ್ಚಾರಣೆಗೆ ಮೊದಲಾಗುತ್ತಿತ್ತು. ಒಮ್ಮೆ ಓಂಕಾರ ಘೋಷಣೆ ಮಾಡುವರು; ಒಮ್ಮೆ ಕೈ ಚಪ್ಪಾಳೆ ಹಾಕಿಕೊಂಡು ಜಗನ್ಮಾತೆಯ ನಾಮಸಂಕೀರ್ತನೆ ಮಾಡುವರು; ಒಮ್ಮೆ ಹರಿನಾಮ ಹೇಳಿಕೊಂಡು ಅದರ ಲಯಕ್ಕೆಂಬಂತೆ ಶತಪಥ ತಿರುಗಾಡುವರು. ಅವರು ಕೊಠಡಿಯಲ್ಲಿ ಮಲಗಿರುತ್ತಿದ್ದವರನ್ನು ಎಬ್ಬಿಸುತ್ತಿದ್ದರು. ಒಬ್ಬೊಬ್ಬರ ಬಳಿಗೂ ಬಂದು ‘ಮಗೂ, ಎಚ್ಚರವಾಗಿದ್ದೀಯಾ? ಏಳು; ದೇವರ ಹೆಸರು ಹೇಳು’ ಎಂದು ಹೇಳುತ್ತಿದ್ದರು. ಇಷ್ಟೆಲ್ಲ ಮಾಡುತ್ತಿದ್ದಾಗಲೂ ಅವರ ಭಾವದೀಪ್ತ ಭಗವನ್ನಾಮ ಸ್ಮರಣೆ ನಿರಂತರವಾಗಿ ಸಾಗಿರುತ್ತಿತ್ತು. ಅವರಿಗೆ ಬಹಿರ್‌ಲೋಕದ ಪ್ರಜ್ಞೆ ಇರುತ್ತಿರಲಿಲ್ಲ. ನಾಮಸಂಕೀರ್ತನೆ ಮಾಡುತ್ತಾ ಮಾಡುತ್ತಾ ಪಕ್ಕದ ಹೊರ ಜಗಲಿಗೂ ಹೋಗುತ್ತಿದ್ದರು- ಮಕ್ಕಳಂತೆ ಬತ್ತಲೆಯಾಗಿ.

“ಕೆಲವು ದಿನವಂತೂ ಅವರು ತಾಳಮದ್ದಲೆಯೊಡನೆ ಸಂಕೀರ್ತನಕ್ಕೆ ಶುರುಮಾಡುತ್ತಿದ್ದರು; ಸರಿ, ನಾವು ಸೇರುತ್ತಿದ್ದೆವು. ಅವರು ಹಾಡುತ್ತಿದ್ದುದೆಲ್ಲಾ ಹೆಚ್ಚಾಗಿ ದೇವರ ನಾಮಗಳನ್ನೆ;- ಅಲ್ಲಲ್ಲಿ ಪದಗಳನ್ನೂ ಪಂಕ್ತಿಗಳನ್ನೊ ತಾವೇ ರಚಿಸಿ ಸೇರಿಸಿಕೊಳ್ಳುತ್ತಿದ್ದುದ್ದೂ ಉಂಟು. ಒಂದೊಂದು ಸಾರಿ ಭಾವಾನಂದಮತ್ತರಾಗಿ ನರ್ತಿಸುತ್ತಿದ್ದರು. ಆಃ! ಅವರ ಆ ನಾಟ್ಯದಲ್ಲಿ ಎಂತಹ ದಿವ್ಯ ಲಾವಣ್ಯ ಶೋಭಿಸುತ್ತಿತ್ತು! ಅವರ ನಿರುಪಮ ದಿವ್ಯೋನ್ಮಾದವನ್ನು ಹೇಗೆತಾನೆ ವರ್ಣಿಸಲು ಸಾಧ್ಯ! ಅವರ ಕಂಠದ ದಿವ್ಯ ಮಾಧುರ್ಯವೋ ಅನನ್ಯ ಮಾನುಷವಾಗಿರುತ್ತಿತ್ತು. ಅದಕ್ಕೆ ಎಣೆಯಾಗುವುದನ್ನು ನಾವು ಇನ್ನೆಲ್ಲಿಯೂ ಯಾವಾಗಲೂ ಆಲಿಸಿಲ್ಲ.  ಸಂಕೀರ್ತನೆ ಬೆಳಗಾಗಿ ಹೊತ್ತೇರುವವರೆಗೂ ಸಾಗುತ್ತಿತ್ತು. ಗುರುಮಹಾರಾಜರ ಭಾವೋನ್ಮಾದದ ಸಾಂಕ್ರಾಮಿಕ ಪ್ರಭಾವದಿಂದ ಅಲ್ಲಿ ನೆರೆದಿದ್ದವರೆಲ್ಲರಿಗೂ ಭಾವಸ್ಥಿತಿಯುಂಟಾಗುತ್ತಿತ್ತು. ನಿರಂತರವಾದ ಆ ಭಗವನ್ನಾಮ ಘೋಷಣೆಯಿಂದ ಆ ಕ್ಷೇತ್ರ ಪರಿವರ್ತಿತವಾಗಿ, ದಿವ್ಯವಾಗಿ ಪವಿತ್ರವಾಗಿ, ಸ್ವರ್ಗೀಯವಾಗುತ್ತಿತ್ತು. ಗುರುದೇವನೊಡನೆ ಅದೆಂತಹ ಆನಂದದಲ್ಲಿ ದಿನಗಳನ್ನು ಕಳೆಯುತ್ತಿದ್ದೆವು ನಾವಂದು!”

ಶ್ರೀರಾಮಕೃಷ್ಣರ ದಿವ್ಯ ಸಂಗದ ಸುಖಸ್ಮೃತಿಯ ರಸಸಮುದ್ರದಲ್ಲಿ ಮನವು ಮಗ್ನವಾಗಿ ಸ್ವಾಮಿ ಶಿವಾನಂದರು ಮುಂದೆ ಮಾತನಾಡಲಾರದೆ ಅಂತಸ್ಥಚಿತ್ತರಾಗಿ ಸುಮ್ಮನೆ ಕುಳಿತುಬಿಟ್ಟರು.

* * *