ತರುಣ ಭಕ್ತನೊಬ್ಬನು ತನಗೆ ಸ್ವಪ್ನದಲ್ಲಿ ಮಹಾಪುರುಷಜಿಯ ದರ್ಶನವಾದ ವಿಚಾರವನ್ನು ಒಂದು ಕಾಗದ ಬರೆದು ತಿಳಿಸಿದ್ದನು. ಈಗ ಆತನು ಅವರ ಅಪ್ಪಣೆ ಪಡೆದು ಕೆಲವು ದಿನಗಳ ಮಟ್ಟಿಗೆ ಬೇಲೂರ ಮಠದಲ್ಲಿಯೆ ಇರಲು ಬಂದಿದ್ದನು. ಒಂದು ದಿನ ಬೆಳಗ್ಗೆ ಮಹಾಪುರುಷಜಿ ದೇವರ ಮನೆಯಿಂದ ಆಗ ತಾನೆ ಹಿಂತಿರುಗಿದ್ದ ಸಮಯದಲ್ಲಿ, ಆ ತರುಣ ಭಕ್ತನು ಕೊಠಡಿಯನ್ನು ಪ್ರವೇಶಿಸಿ, ಭಕ್ತಿಭರದಿಂದ ಪ್ರಣಾಮಮಾಡಿ, ಅವರಿಂದ ಮಂತ್ರ ದೀಕ್ಷೆಯನ್ನು ಪಡೆಯುವ ತನ್ನ ಪ್ರಾರ್ಥನೆಯನ್ನು ಮುಂದಿಟ್ಟನು. “ಮಹಾರಾಜ್, ತಾವು ದಯೆ ತೋರಿ ನನಗೆ ಕನಸಿನಲ್ಲಿ ದರ್ಶನವಿತ್ತಿರಿ. ನನ್ನ ಪ್ರಾಣದ ಐಕಾಂತಿಕ ಇಚ್ಛೆ ಏನೆಂದರೆ, ತಾವು ಕೃಪೆಮಾಡಿ ದೀಕ್ಷೆಕೊಡಬೇಕು ನನಗೆ.” ಹೀಗೆ ಹೇಳುತ್ತಾ ಆತ ಅಶ್ರುಪೂರ್ಣಲೋಚನವಾಗಿ ಮಹಾಪುರುಷಜಿಯ ಪದಯುಗಳವನ್ನು ಹಿಡಿದುಕೊಂಡನು. ಆ ಭಕ್ತನ ಆಗ್ರಹಾತಿಶಯವನ್ನು ನೋಡಿ ಅವರು ಸಸ್ನೇಹವಾಗಿ ಹೇಳಿದರು: “ಅಯ್ಯಾ, ನಿನಗೆ ಅಂತಃಕರಣಪೂರ್ವಕ ಆಶೀರ್ವಾದ ಮಾಡುತ್ತೇನೆ, ಠಾಕೂರರ ಶ್ರೀಪಾದಪದ್ಮದಲ್ಲಿ ನಿನ್ನ ಭಕ್ತಿ, ವಿಶ್ವಾಸ, ಪ್ರೇಮ ದಿನದಿನಕ್ಕೂ ಸಮಧಿಕವರ್ಧಿತವಾಗಲಿ. ನಿನ್ನ ಮನಸ್ಸು ಅವರ ಕಡೆಗೆ ಯಾವಾಗಲೂ ಮುಂಬರಿಯುತ್ತಿರಲಿ. ದೀಕ್ಷೆಯ ವಿಚಾರವಾಗಿ ನನಗೆ ಏನೂ ತಿಳಿಯದು. ನಾನು ಯಾರಿಗೂ ದೀಕ್ಷೆಕೊಡುವುದಿಲ್ಲ. ಇದುವರೆಗೂ ನನ್ನಲ್ಲಿ ಠಾಕೂರರು ಗುರುಬುದ್ಧಿಯನ್ನು ಎಂದೂ ಇಟ್ಟಿಲ್ಲ.* ನಾನು ಅವರ ಸೇವಕ, ಅವರ ದಾಸ, ಅವರ ಸಂತಾನ ಮಾತ್ರ. ಅದೂ ಅಲ್ಲದೆ ದೀಕ್ಷೆಕೊಡುವ ವಿಚಾರವಾಗಿ ನನಗೆ ಠಾಕೂರರಿಂದ ಇದುವರೆಗೂ ಯಾವ ಆದೇಶವೂ ದೊರೆತಿಲ್ಲ. ನಾನು ತಿಳಿದುಕೊಂಡಿದ್ದೇನೆ, ‘ರಾಮಕೃಷ್ಣ’ ನಾಮವೆ ಈ ಯುಗದ ಮಹಾಮಂತ್ರ. ಯಾರು ಭಕ್ತಿ ಭರತೆಯಿಂದ ಪತಿತಪಾವನ ಯುಗಾವತಾರ ಠಾಕೂರರ ನಾಮಜಪ ಮಾಡುತ್ತಾರೊ ಅವರಿಗೆ ಭಕ್ತಿ ಮುಕ್ತಿ ಎಲ್ಲಾ ಕರತಲಾಮಲಕದಂತೆ. ‘ರಾಮಕೃಷ್ಣ’- ಅದೇ ಈ ಯುಗದ ಮುಕ್ತಿದಾಯಕನಾಮ. ಜೀವನದ ಮುಕ್ತಿಗೆ ರಾಮಕೃಷ್ಣ ನಾಮದ ಜಪವೇ ಯಥೇಷ್ಟ. ಬೇರೆ ಪ್ರತ್ಯೇಕವಾದ ಯಾವ ದೀಕ್ಷೆಯಲ್ಲಿ ಏನು ಪ್ರಯೋಜನವಿದೆಯೋ ನನಗೆ ತೋರುವುದಿಲ್ಲ. ಯಾರು ಮನೋವಾಕ್ಕಾಯದಿಂದ ಶ್ರೀರಾಮಕೃಷ್ಣರಲಿ ಆಶ್ರಯ ಪಡೆಯುತ್ತಾರೋ ಅವರಿಗೆ ಮುಕ್ತಿ ಸಿದ್ಧವಸ್ತು, ಅದರಲ್ಲಿ ಬಿಂದುಮಾತ್ರ ಸಂದೇಹವಿಲ್ಲ. ಯಾರು ರಾಮನೋ ಯಾರು ಕೃಷ್ಣನೋ ಅವನೇ ಇಂದು ರಾಮಕೃಷ್ಣ ರೂಪದಲ್ಲಿ ಆವಿರ್ಭೂತವಾಗಿದ್ದಾನೆ- ಜೀವರಿಗೆ ಮುಕ್ತಿ ಕೊಡುವುದಕ್ಕಾಗಿ.”

ತರುಣಭಕ್ತ: “ಠಾಕೂರರ ನಾಮಜಪವನ್ನು ಹೃತ್ಪೂರ್ವಕ ಮಾಡುತ್ತಿದ್ದೇನೆ; ಅವರ ಹತ್ತಿನ ಪ್ರಾರ್ಥನೆಯನ್ನೂ ಮಾಡುತ್ತಿದ್ದೇನೆ. ಅವರು ಯುಗಾವತಾರ ಭಗವಾನ್ ಎಂಬುದರಲ್ಲಿಯೂ ಸಂಪೂರ್ಣ ವಿಶ್ವಾಸವಿದೆ. ತಾವು ಅವರ ಅಂತರಂಗ ಪಾರ್ಪದ; ತಮ್ಮ ಕೃಪೆ ಲಭಿಸಿದರೆ ನನ್ನ ಜೀವನ ಸಾರ್ಥಕವಾಗುತ್ತದೆ. ಇದು ನನ್ನ ದೃಢವಾದ ನಂಬಿಕೆ.

ಮಹಾಪುರುಷಜಿ: “ನನ್ನ ಕೃಪೆ ಏನೋ ಇದ್ದೇ ಇದೆ, ಇಲ್ಲದಿದ್ದರೆ ನಿನಗೆ ಇಷ್ಟೆಲ್ಲಾ ಹೇಳುತ್ತಿದ್ದೇನೆ? ನಿನಗೆ ಕಲ್ಯಾಣವಾಗಲಿ ಎಂದು ಮನಃಪೂರ್ವಕ ಪ್ರಾರ್ಥಿಸುತ್ತೇನೆ. ಆತನ ದಯೆಯಿಂದ ಆತನ ಅವತಾರತ್ವದಲ್ಲಿ ನಿನಗೆ ಪೂರ್ಣ ವಿಶ್ವಾಸ ಮೂಡಿರುವುದರಿಂದ ನಿನಗಿನ್ನು ಯಾವ ಶಂಕೆಯೂ ಬೇಡ. ನೀನು ಮಹಾ ಭಾಗ್ಯವಂತ-ಪೂರ್ವಜನ್ಮಾರ್ಜಿತ ಬಹು ಸುಕೃತಿಯ ಫಲವಾಗಿ ಭಗವಂತನ ಯುಗಾವತಾರತ್ವದಲ್ಲಿ ನಿನಗೆ ವಿಶ್ವಾಸ ಉಂಟಾಗಿದೆ. ನಿನಗಾಗಲೆ ಆ ಶ್ರದ್ಧೆ ಉದಿಸಿಬಿಟ್ಟಿದೆ. ನಿನಗೆ ಇನ್ನಾವ ಹೆದರಿಕೆ? ನಾನು ಹೇಳುತ್ತೇನೆ, ನನ್ನ ಮಾತಿನಲ್ಲಿ ವಿಶ್ವಾಸವಿಡು, ನೀನು ಈ ಭವಬಂಧನದಿಂದ ಮುಕ್ತನಾಗುವುದು ನಿಶ್ಚಯ. ಹೃದಯ ತುಂಬಿ ಆತನನ್ನು ಕರೆ. ಕಾತರನಾಗಿ ಪ್ರಾರ್ಥನೆಮಾಡು. ಆತನು ನಿನ್ನ ಈ ವಿಶ್ವಾಸವನ್ನು ಮತ್ತಷ್ಟು ಪರಿಪಕ್ವವನ್ನಾಗಿ ಮಾಡಿಕೊಡುತ್ತಾನೆ. ಭಕ್ತಿ ವಿಶ್ವಾಸಗಳಿಂದ ನಿನ್ನ ಹೃದಯ ತುಂಬಿತುಳುಕಿಹೋಗುತ್ತದೆ.”

ತರುಣಭಕ್ತಿ: “ಜಪ ಹೇಗೆ ಮಾಡಬೇಕು? ಅದಕ್ಕೇನಾದರೂ ವಿಶೇಷ ನಿಯಮ ಇದೆಯ?”

ಮಹಾಪುರುಷಜಿ: “ಪ್ರೀತಿಯಿಂದ ಮತ್ತೆ ಮತ್ತೆ ಹೆಸರು ಹೇಳುವುದೆ ಜಪ. ಹಾಗೆ ಮಾಡುತ್ತಾ ಹೋಗು; ಮಾಡುತ್ತಾ ಮಾಡುತ್ತಾ ಶಾಂತಿ ಆನಂದ ಅನುಭವಿಸುತ್ತೀಯೆ. ಜಪಕ್ಕೆ ಅಂಥಾ ವಿಶೇಷವಾದ ನಿಯಮ ಏನೂ ಇಲ್ಲ; ಸರ್ವಕಾಲಗಳಲ್ಲಿ, ಸರ್ವಸನ್ನಿವೇಶಗಳಲಿ, ನಡೆಯುತ್ತಿರು, ಉಣ್ಣುತ್ತಿರು, ಮಲಗಿರು. ಎಚ್ಚತ್ತಿರು, ನಿದ್ರೆಯಲ್ಲಿ, ಸ್ವಪ್ನದಲ್ಲಿ, ಎಲ್ಲಿ ಎಂದರೆ ಅಲ್ಲಿ ಯಾವಾಗಂದರೆ ಆವಾಗ ಸರ್ವಾವಸ್ಥೆಗಳಲ್ಲಿಯೂ ಜಪ ಮಾಡಬಹುದು. ಅಸಲು ಮುಖ್ಯವಾಗಿ ಇರಬೇಕಾದ್ದೆಂದರೆ-ಪ್ರೇಮ. ಎಷ್ಟು ಪ್ರೇಮಭರದಿಂದ ಆತನ ನಾಮಜಪ ಮಾಡುತ್ತೀಯೋ ಅಷ್ಟೂ ಹೆಚ್ಚಿನ ಆನಂದ ದೊರೆಯುತ್ತದೆ. ಅವನು ಅಂತರ‍್ಯಾಮಿ-ಅವನು ನೋಡುವುದು ಹೃದಯ. ಹೃದಯದಲ್ಲಿ ವ್ಯಾಕುಲತೆ ಇದ್ದರೆ, ವ್ಯಾಕುಲತೆಯಿಂದ ಅವನನ್ನು ಕರೆದರೆ, ಒಡನೊಡನೆ ಅದರ ಫಲ ಪ್ರತ್ಯಕ್ಷವಾಗಿಯೆ ತೋರುತ್ತದೆ. ಮಗುವು ಅಪ್ಪ ಅಮ್ಮರೊಡನೆ ಹೇಗೆ ರಚ್ಚೆಹಿಡಿದು ಅಳುತ್ತದೆಯೊ ಹಾಗೆಯ ವಿಶ್ವಾಸ ಭಕ್ತಿ ಪ್ರೇಮ ಇವುಗಳಿಗಾಗಿ ಆತನ ಸಂಗಡ ಹಠ ಹಿಡಿದು ಕೇಳು, ನಿಜವಾಗಿಯೂ ದೊರೆಯುತ್ತದೆ. ಅವನು ಜೀವಂತ ಜಾಗ್ರತದೇವತೆ-ಪತಿತಪಾವನ, ಕಲಿಕಲ್ಮಷಹಾರಿ, ಪರಮಕಾರುಣಿಕ, ಭಕ್ತವತ್ಸಲ ಮತ್ತು ಪ್ರೇಮಮಯ. ಸರ್ವದಾ ಅವನ ನಾಮ ಜಪ ಮಾಡು. ಈ ರೀತಿಯ ಸರ್ವದಾಸ್ಮರಣದ ಜೊತೆಗೆ ಸಾಯಂಕಾಲ ಮತ್ತು ಪ್ರಾತಃಕಾಲ ತಪ್ಪದೆ ಸಕ್ರಮ ಜಪ ಮಾಡುವುದೂ ಅತ್ಯಾವಶ್ಯಕ. ಹಾಗೆ ಮಾಡುತ್ತಾ ಹೋಗು.”

ತರುಣಭಕ್ತ: “ಧ್ಯಾನ ಹೇಗೆ ಮಾಡಬೇಕು, ಮಹಾರಾಜ್? ಧ್ಯಾನ ಮಾಡಲೇನೋ ಪ್ರಯತ್ನಿಸುತ್ತೇನೆ. ಧ್ಯಾನ ಏನು ಎಂಬುದು ನನಗೆ ಗೊತ್ತಿಲ್ಲದಿದ್ದರೂ. ಮನಸ್ಸನ್ನು ಏಕಾಗ್ರಗೊಳಿಸಿ ಧ್ಯಾನಮಾಡಲು ನನ್ನಿಂದಾಗುತ್ತಿಲ್ಲ.”

ಮಹಾಪುರುಷಜಿ: “ಮೊದಮೊದಲು ಧ್ಯಾನದಲ್ಲಿ ಏಕಾಗ್ರತೆ ಸಾಧಿಸುವುದು ಸ್ವಲ್ಪ ಕಷ್ಟವೆ. ಆತನ ಕೃಪೆಯಿಂದ ಆತನ ನಾಮೋಚ್ಚಾರಣೆ ಮಾಡತ್ತಾ ಮಾಡುತ್ತಾ, ಪ್ರಾರ್ಥನೆ ಮಾಡುತ್ತಾ ಮಾಡುತ್ತಾ ಯಾವಾಗ ಆತನ ಪರವಾಗಿ ನೈಜಪ್ರೇಮ ಹೃದಯದಲ್ಲಿ ಸಂಚರಿಸುತ್ತದೆಯೊ ಆಗ ಧ್ಯಾನ ಅತಿ ಸಹಜವಾಗಿ ಉದಯವಾಗುತ್ತದೆ. ಪ್ರಥಮದಲ್ಲಿಯೆ ಧ್ಯಾನ ಮಾಡಲು ಪ್ರಯತ್ನಿಸುವುದಕ್ಕಿಂತಲೂ ಚಿರಪವಿತ್ರ, ಕಾಮಕಾಂಚನ ವರ್ಚಿತ ‘ಶುದ್ಧಂ ಅಪಾಪವಿದ್ಧಂ’ ಪರಮಕಾರುಣಿಕ, ಯುಗಾಚಾರ್ಯ ಮತ್ತು ಜಗದ್ಗುರು ಆಗಿರುವ ಶ್ರೀರಾಮಕೃಷ್ಣರ ಶ್ರೀಮೂರ್ತಿಯ ಎದುರು ಕುಳಿತು ಅತ್ಯಂತ ಕಾತರಭಾವದಿಂದ ಬಾಲಕನಂತೆ ಅಳುತ್ತಾ ಅಳುತ್ತಾ ಪ್ರಾರ್ಥನೆ ಮಾಡುವುದು ಮೇಲು. ಹೀಗೆ ಪ್ರಾರ್ಥನೆ ಮಾಡು: ‘ಪ್ರಭೂ, ನೀನು ಜಗತ್ತಿನ ಉದ್ಧಾರಕ್ಕಾಗಿ ನರದೇಹಧಾರಣೆ ಮಾಡಿದ್ದೀಯೆ; ಅಲ್ಲದೆ ಜೀವಕೋಟಿಗಾಗಿ ಎಷ್ಟು ಕಷ್ಟ ಸಹಿಸಿದ್ದೀಯೆ. ನಾನೊ ಅತಿ ದೀನ-ಹೀನ, ಭಜನಹೀನ, ಪೂಜನಹೀನ, ಜ್ಞಾನಹೀನ, ಭಕ್ತಿಹೀನ, ವಿಶ್ವಾಸಹೀನ, ಪ್ರೇಮಹೀನ. ನನ್ನ ಮೇಲೆ ಕೃಪೆದೋರಿ ನನಗೆ ವಿಶ್ವಾಸ, ಭಕ್ತಿ, ಜ್ಞಾನ, ಪ್ರೀತಿ, ಪವಿತ್ರತೆಗಳನ್ನು ದಯಪಾಲಿಸು. ನನ್ನ ಮಾನವಜನ್ಮ ಸಫಲವಾಗಲಿ. ಕೃಪೆಯಿಟ್ಟು ನನ್ನ ಹೃದಯದಲ್ಲಿ ಪ್ರಕಾಶಿತನಾಗು. ನನಗೆ ನಿನ್ನ ದರ್ಶನ ನೀಡು, ಕಾಣಿಸಿಕೊ. ನಿನ್ನ ಸಂತಾನದಲ್ಲಿಯೆ ಒಬ್ಬರಾದವರು ನಿನ್ನನ್ನು ಈ ರೀತಿ ಬೇಡುವಂತೆ ನನಗೆ ಹೇಳಿಕೊಟ್ಟಿದ್ದಾರೆ. ನೀನು ಕರುಣಿಸಿ ಕೃಪೆ ತೋರಲೇಬೇಕು.’ ಈ ಭಾವದಿಂದ ಪ್ರಾರ್ಥನೆ ಮಾಡುತ್ತಾ ಮಾಡುತ್ತಾ ಆತನ ಕೃಪೆಯಾಗುತ್ತದೆ. ಆಗ ಮನಸ್ಸು ಸ್ಥಿರವಾಗಿ ನಿಲ್ಲುತ್ತದೆ. ಜಪಧ್ಯಾನಗಳಲ್ಲಿ ಮನಸ್ಸು ದೃಢವಾಗುತ್ತದೆ. ಹೃದಯದಲ್ಲಿ ಪ್ರೇಮದ, ಆನಂದದ, ಅನುಭವವಾಗುತ್ತದೆ; ಪ್ರಾಣದಲ್ಲಿ ಆಶಾಜ್ಯೋತಿ ಸಂಚರಿಸುತ್ತದೆ. ಭಾವಪೂರ್ಣವಾಗಿ ಹೀಗೆ ಪ್ರಾರ್ಥನೆಮಾಡಿ, ಆಮೇಲೆ ನಾನು ಹೇಳಿದಂತೆ ಜಪಮಾಡು. ಆತನ ಪವಿತ್ರ ನಾಮಜಪ ಮಾಡುತ್ತಾ ಮಾಡುತ್ತಾ ತಾನಾಗಿಯೆ ಧ್ಯಾನಸ್ಥಿತಿ ಒದಗುತ್ತದೆ. ಜಪ ಮಾಡುವಾಗ ಠಾಕೂರರು ನಿನ್ನ ಕಡೆಗೆ ಸಸ್ನೇಹದೃಷ್ಟಿ ಬೀರುತ್ತಿದ್ದಾರೆ ಎಂದು ಏಕಾಗ್ರಭಾವದಿಂದ ಭಾವಿಸಿಕೊ. ಆ ಭಾವನೆ ಏಕಭಾವದಲ್ಲಿ ದೀರ್ಘಕಾಲ ಸ್ಥಾಯಿಯಾಗುವುದೇ ಧ್ಯಾನ. ಜಪ ಮಾಡುತ್ತಾ ಪ್ರಾರ್ಥಿಸು: ‘ಪ್ರಭು, ನನ್ನ ಧ್ಯಾನ ಸ್ಥಾಯಿಯಾಗುವಂತೆ ಅನುಗ್ರಹಿಸು’ ಎಂದು. ನಿಶ್ಚಯವಾಗಿ ತಿಳಿ, ನಿನ್ನ ಪ್ರಾರ್ಥನೆ ಕೈಗೂಡುತ್ತದೆ. ಸಕಲ ಹೃದಯಗಳಲ್ಲಿಯೂ ಆತನೆ ಗುರು; ಆತನೆ ಪಥದರ್ಶಕ, ಪ್ರಭು, ಪಿತ, ಮಾತೆ, ಸಖ. ನಿನಗೆ ಸಾಧ್ಯವಾಗುವ ಯಾವ ರೀತಿಯಿಂದಾಗಲಿ, ಪ್ರೇಮಸಹಿತವಾಗಿ, ಆತನ ಶ್ರೀಮೂರ್ತಿಯನ್ನಾಗಲಿ ಆತನ ಗುಣವನ್ನಾಗಲಿ ಭಾವಿಸುವುದೇ ಧ್ಯಾನ. ಸದ್ಯಕ್ಕೆ ಈ ರೀತಿ ಮಾಡುತ್ತಾ ಹೋಗು; ಆಮೇಲೆ ನೀನು ಮುಂದುವರಿದಂತೆಲ್ಲ ಆತನೆ ಸಮಯ ಸಂದರ್ಭ ಪ್ರಯೋಜನಾನುಸಾರಿಯಾಗಿ ಒಳಗೊಳಗಿಂದಲೆ ಮಾರ್ಗದರ್ಶನ ಮಾಡುತ್ತಾನೆ. ತುಂಬ ವ್ಯಾಕುಲವಾಗಿ ಕರೆ, ಅತ್ತು ಕರೆ. ಅಳುತ್ತಾ ಅಳುತ್ತಾ ಹೃದಯದ ಎಲ್ಲ ಮಾಲಿನ್ಯ ದೂರವಾಗುತ್ತದೆ. ಆತನೆ ಕೃಪೆಮಾಡಿ ತನ್ನ ಸ್ವರೂಪ ಪ್ರಕಾಶ ಪಡಿಸುತ್ತಾನೆ. ಇದೆಲ್ಲ ಒಂದೆ ದಿನದಲ್ಲಾಗಲಿ ಹಠತ್ತಾಗಿಯಾಗಲಿ ಆಗುವುದಿಲ್ಲ. ಜಪಮಾಡುತ್ತಾ ಹೋಗು. ಕರೆಯುತ್ತಾ ಹೋಗು. ನಿಶ್ಚಯವಾಗಿಯೂ ಆತನ ಉತ್ತರ ಬರುತ್ತದೆ, ಓಕೊಳ್ಳುತ್ತಾನೆ, ಅದರ ಜೊತೆಗೆ ಮಹದಾನಂದವೂ ಲಭಿಸುತ್ತದೆ.”

ತರುಣಭಕ್ತ: “ಆದರೆ ಏನು ಮಾಡೋದು, ಮಹಾರಾಜ್, ಆ ವ್ಯಾಕುಲತೆ ನನಗಿಲ್ಲವಲ್ಲ. ಆತನನ್ನು ಪಡೆಯುವುದಕ್ಕಾಗಿ ಈ ವ್ಯಾಕುಲತೆಯನ್ನು ಹೇಗೆ ವೃದ್ಧಿ ಮಾಡಿಕೊಳ್ಳುವುದು?”

ಮಹಾಪುರುಷಜಿ: “ಅಯ್ಯಾ, ವ್ಯಾಕುಲತೆಯನ್ನು ಯಾರು ಯಾರಿಗೂ ಹೇಳಿಕೊಡಲಾರರು. ಅದಕ್ಕೆ ಅದೇ ಬರುತ್ತದೆ, ಕಾಲ ಬಂದಾಗ, ಭಗವಂತನಿಗಾಗಿ ಪ್ರಾಣದಲ್ಲಿ ಎಷ್ಟು ಹೆಚ್ಚು ಅಭಾವಬೋಧೆ ಉಂಟಾದರೆ ಅಷ್ಟು ಹೆಚ್ಚು ವ್ಯಾಕುಲತೆ ಹೃದಯದಲ್ಲಿ ತೋರುತ್ತದೆ. ಒಂದು ವೇಳೆ ಅಂತಹ ಅಭಾವ ಅನುಭವಕ್ಕೆ ಬಾರದಿದ್ದರೆ ಕಾಲ ಇನ್ನೂ ಬಂದಿಲ್ಲ ಎಂದು ತಿಳಿದುಕೊಳ್ಳಬೇಕು. ತಾಯಿಗೆ ಗೊತ್ತು ಯಾವ ಮಗುವಿಗೆ ಯಾವಾಗ ಹಾಲು ಕೊಡಬೇಕು ಎಂದು. ತಡ ಏನಾದರೂ ಆದರೆ, ತಾಯಿಯೇ ಬಲ್ಲಳು, ಈ ಮಗುವಿಗೆ ತಡವಾಗಿಯೆ ಆಹಾರ ಕೊಡುವುದರ ಆವಶ್ಯಕತೆ ಇದೆ ಎಂದು. ಇನ್ನೇನು ಕಾರಣಗಳಿದ್ದರೂ ಆಕೆಯ ಕಾರಣ ಆಕೆಗೇ ಗೊತ್ತು. ಪ್ರಭುವೇ ತಾಯಿಯೂ. ತಾಯಿಯ ಮೇಲೆ ಸಂಪೂರ್ಣವಿಶ್ವಾಸ ಮತ್ತು ನಿರ್ಭರತೆ ಇಟ್ಟು ಶರಣಾಗರಾಗಬೇಕು. ಅವಳೇನು ನಮ್ಮನ್ನು ಹೆತ್ತ ಲೌಕಿಕ ಮಾತೆಯರಂತೆಯೇ? ಅವಳು ಅಂತರ್ಯಾಮಿ. ಯಾವ ಮಗುವಿಗೆ ನಿಜವಾಗಿಯೂ ತನ್ನನ್ನು ನೋಡಲೇಬೇಕಾಗಿದೆ ಎಂಬುದನ್ನು ಅವಳು ಚೆನ್ನಾಗಿ ಅರಿಯುತ್ತಾಳೆ; ಹಾಗೆಯ ಸರಿಯಾದ ಕಾಲಕ್ಕೆ ದರ್ಶನವನ್ನು ದಯಪಾಲಿಸುತ್ತಾಳೆ. ಮನಸ್ಸಿಟ್ಟು ಕರೆಯುತ್ತಾ ಇರು; ಎದೆತುಂಬಿ ನಾಮಜಪ ಮಾಡುತ್ತಾ ಹೋಗು. ಸಂಪೂರ್ಣ ನಿರ್ಭರತೆಯಿಂದ ಆಕೆಯ ಚರಣಕಮಲಗಳಲ್ಲಿ ಶರಣಾಗತನಾಗು. ಸರಿಯಾದ ಕಾಲ ಬರಲು ಅವಳು ಎಲ್ಲವನ್ನೂ ಕೊಡುತ್ತಾಳೆ. ಪವಿತ್ರತೆಯೆ ಧರ್ಮಜೀವನದ ಭಿತ್ತಿ. ಪವಿತ್ರ ಹೃದಯದಲ್ಲಿ ಭಗವಂತನು ಬೇಗ ಪ್ರಕಟಿತನಾಗುತ್ತಾನೆ. ಮೆಯ್, ಮನಸ್ಸು, ಮಾತು ಈ ಮೂರರಲ್ಲಿಯೂ ಪವಿತ್ರತೆಯನ್ನು ಸಾಧಿಸುವ ಯತ್ನಮಾಡು. ಈಗ ನೀನು ವಿದ್ಯಾರ್ಥಿ; ವಿದ್ಯಾರ್ಥಿ ಜೀವನ ತುಂಬ ಪವಿತ್ರವಾದುದ್ದು. ಶ್ರೀಠಾಕೂರರಿಗೆ ಪವಿತ್ರ ಹೃದಯರೂ ವಿಷಯವಾನಾವಿಹೀನರೂ ಆದ ಹುಡುಗರನ್ನು ಕಂಡರೆ ತುಂಬಾ ಪ್ರೀತಿ. ವಿಷಯ ಮೋಹಕ್ಕೆ ಒಳಗಾಗದ ಮನಸ್ಸಿನಲ್ಲಿ ಬೇಗ ಚೈತನ್ಯ ಉದ್ಬೋಧನವಾಗುತ್ತದೆ. ಮುಖ್ಯ ಬೇಕಾದ್ದು ಶ್ರದ್ಧೆ ಮತ್ತು ವಿಶ್ವಾಸ. ನಾನು ನಿನಗೆ ಏನೇನು ಹೇಳಿದ್ದೇನೆಯೊ ಅದರಂತೆಯೆ ಸರಳ ಹೃದಯದಿಂದ ಸರ‍್ವವನ್ನೂ ವಿಶ್ವಾಸ ಪೂರ್ವಕವಾಗಿ ಗ್ರಹಿಸಿ ಸಾಧನೆಮಾಡುತ್ತ ಹೋಗು. ನಿನಗೇ ಗೊತ್ತಾಗುತ್ತದೆ ಆತನ ದಯೆ. ಜೊತೆಗೆ ಮಹತ್ತಾದ ಆನಂದವನ್ನೂ ಅನುಭವಿಸುತ್ತೀಯೆ. ಮುಖ್ಯವಾದ್ದು, ಕೆಲಸ ಮಾಡಬೇಕು. ಠಾಕೂರ್ ಹೇಳುತ್ತಿದ್ದರು: ‘ಬರಿದೆ ಸಿದ್ಧಿ ಸಿದ್ಧಿ* ಎಂದು ಬಾಯಲ್ಲಿ ಹೇಳುತ್ತಾ ಹೋದಮಾತ್ರಕ್ಕೆ ನಿಶಾ ಏರುತ್ತದೆಯೇ? ಹಾಗೆಯ ಭಗವಂತನ ಹೆಸರು ಹೇಳು; ಅವನ ಧ್ಯಾನಮಾಡು; ಅವನ ಕಾಲುಹಿಡಿದು ಹೃತ್ಪೂರ್ವಕ ಪ್ರಾರ್ಥನೆಮಾಡು. ಹಾಗೆ ಮಾಡಿದರೇನೆ ನಿನಗೆ ಆನಂದಾನುಭವ ಆಗುವುದು.”

ತರುಣಭಕ್ತ: “ದೊಡ್ಡ ಆಶೆ ಇಟ್ಟುಕೊಂಡು ತಮ್ಮೆಡೆಗೆ ಬಂದಿದ್ದೇನೆ, ತಾವು ಕೃಪೆಮಾಡಿ ದೀಕ್ಷೆ ಕೊಡುತ್ತೀರೆಂದು. ತಾವು ನನ್ನ ಮೇಲೆ ಕೃಪೆದೋರಬೇಕು, ಮಹಾರಾಜ್.”

ಮಹಾಪುರುಷಜಿ: “ಅಯ್ಯಾ ನಿನಗೆ ನಾನು ಹೇಳಿದ್ದೇನೆ, ದೀಕ್ಷಾ ಸಂಬಂಧವಾಗಿ ಇದುವರೆಗೆ ಠಾಕೂರರಿಂದ ನನಗೆ ಯಾವ ಆದೇಶವೂ ಬಂದಿಲ್ಲ. ನೀನು ದೀಕ್ಷೆಯ ಸಲುವಾಗಿ ಗೋಳಿಡುವುದು ಬೇಡ, ಹೃತ್ಪೂರ್ವಕವಾಗಿ ಆತನನ್ನು ಕರೆಯುತ್ತಾ ಹೋಗು; ನಿನ್ನ ಪ್ರಾರ್ಥನೆಗೆ ಆತ ಓಗೊಡುತ್ತಾನೆ. ನಿನ್ನ ಮನೋವಾಂಛೆಯನ್ನು ಪೂರ್ಣಗೊಳಿಸುತ್ತಾನೆ. ಇದನ್ನು ನಿಶ್ಚಯ ಎಂದು ತಿಳಿ, ನಿನಗೆ ದೀಕ್ಷೆ ಪಡೆಯುವ ಕಾಲ ಬಂದಾಗ ಅದನ್ನು ಆತನೆ ಹೇಗಾದರೂ ನಿಯೋಜಿಸುತ್ತಾನೆ. ನಾನೂ ಪ್ರಾಣಭರನಾಗಿ ಪ್ರಾರ್ಥಿಸುತ್ತೇನೆ: ‘ಪ್ರಭುಪದದಲ್ಲಿ ನಿನಗೆ ಪೂರ್ಣ ವಿಶ್ವಾಸ, ಪೂರ್ಣ ನಿರ್ಭರತೆ ಉಂಟಾಗಲಿ; ಪ್ರೇಮಪವಿತ್ರತೆಗಳಿಂದ ನಿನಗೆ ಪೂರ್ಣ ವಿಶ್ವಾಸ, ಪೂರ್ನ ನಿರ್ಭರತೆ ಉಂಟಾಗಲಿ; ಪ್ರೇಮಪವಿತ್ರತೆಗಳಿಂದ ನಿನ್ನ ಹೃದಯ ತುಂಬಲಿ; ನಿನ್ನ ವಿಶ್ವಾಸ, ಭಕ್ತಿ, ಪ್ರೀತಿ ದಿನದಿನಕ್ಕೂ ವರ್ಧಿಸುವಂತೆ ಪ್ರಭು ಅನುಗ್ರಹಿಸಲಿ.’ ಅದೇ ನನ್ನ ಹೃತ್ಪೂರ್ವಕ ಪ್ರಾರ್ಥನೆ.”

ಹೀಗೆ ಹೇಳುತ್ತಾ ಸ್ವಲ್ಪಕಾಲ ಕಣ್ಣುಮುಚ್ಚಿ ಸುಮ್ಮನೆ ಕುಳಿತಿದ್ದರು. ಆಮೇಲೆ ಭಕ್ತನ ಮಸ್ತಕದ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿದರು. ಭಕ್ತನೂ ಹೃದಯದ ಅತ್ಯಧಿಕ ಆವೇಗದಿಂದ ಕಂಬನಿಗರೆಯತೊಡಗಿದನು. ಆತ ಸ್ವಲ್ಪ ಶಾಂತನಾದ ಮೇಲೆ ಮಹಾಪುರುಷಜಿ ತಮ್ಮ ಕೈಯಿಂದಲೆ ಶ್ರೀ ಗುರು ಮಹಾರಾಜರ ಪ್ರಸಾದವನ್ನು ಆತನಿಗೆ ತಿನಲಿತ್ತರು.

ಆ ಸಮಯದಲ್ಲಿ ಶ್ರೀ ಶ್ರೀ ಮಾತಾ ಠಾಕೂರಾಣಿಯವರು ಬಾಗಬಜಾರಿನ ಮುಖರ್ಜಿ ಲೇನಿನ, (ಈಗಿನ ಉದ್ಬೋಧನ ಲೇನ್) ಮನೆಯಲ್ಲಿ ವಾಸವಾಗಿದ್ದರು. ಸ್ವಾಮಿ ಬ್ರಹ್ಮಾನಂದರೂ ಸ್ವಾಮಿ ತುರೀಯಾನಂದರೂ ದಿವಂಗತ ಬಲರಾಮ ಬಸುವಿನ ಮಂದಿರದಲ್ಲಿ ಇರುತ್ತಿದ್ದರು. ಬೇಲೂರು ಮಠದಲ್ಲಿ ಕೆಲವು ದಿನ ಕಳೆದಮೇಲೆ ತರುಣಭಕ್ತನಿಗೆ ಕಲ್ಕತ್ತಾದಲ್ಲಿರುವ ಶ್ರೀಮಾತೆಯವರನ್ನೂ ಮತ್ತು ಇತರ ಶ್ರೀರಾಮಕೃಷ್ಣರ ಅಂತರಂಗ ಶಿಷ್ಯರನ್ನೂ ಸಂದರ್ಶಿಸುವ ಮನಸ್ಸಾಗಿ ಶ್ರೀಮಹಾಪುರುಷಜಿಯ ಅಪ್ಪಣೆ ಬೇಡಿದಾಗ ಅವರು ಇಂತೆಂದರು: “ಹೌದು, ನಿಶ್ಚಯವಾಗಿಯೂ ನೀನು ಹೋಗಲೇಬೇಕು. ಅವರಿಗೆ ಇಷ್ಟು ಸಮೀಪದಲ್ಲಿದ್ದೂ ಈಗ ನೀನು ಅವರ ದರ್ಶನ ಮಾಡದಿದ್ದೃಎ! ಅವರೆಲ್ಲರೂ ಈಗ ಕಲ್ಕತ್ತಾದಲ್ಲಿರುವುದು ನಿನ್ನ ಮಹಾಭಾಗ್ಯವೇ ಸೈ. ಅಂಥಾ ಸುಯೋಗ ಲಭಿಸುವುದೆಂದರೆ ಸಾಧಾರಣವೆ? ಮೊದಲು ಬಾಗಬಜಾರಿಗೆ ಹೋಗಿ ತಾಯಿಯ ದರ್ಶನಮಾಡು. ಅವರು ನಮ್ಮೆಲ್ಲರ ತಾಯಿ; ಸಾಕ್ಷಾತ್ ಜಗಜ್ಜನನಿ, ಠಾಕೂರರ ಲೀಲಾಪುಷ್ಟಿಗಾಗಿ ನರದೇಹಧಾರಣೆ ಮಾಡಿದ್ದಾರೆ. ಅವರ ಇರುವಿಕೆ ಮಾತ್ರದಿಂದಲೆ ಜಗತ್ತು ಧನ್ಯವಾಗಿದೆ. ನಾವು ಯಾರೂ ತಾಯಿಯನ್ನು ತಿಳಿಯಲಾರೆವು. ಅವರು ತಮ್ಮ ದಿವ್ಯ ಭಾವನೆಗಳನ್ನೆಲ್ಲಾ ಎಚ್ಚರಿಕೆಯಿಂದಲೆಂಬಂತೆ ಮುಚ್ಚಿಕೊಂಡಿದ್ದಾರೆ. ಯಾರುತಾನೆ ಅವರನ್ನು ಅರಿಯಲು ಸಮರ್ಥರಾಗುತ್ತಾರೆ? ಯಾರ ಬುದ್ಧಿಗೂ ಅವರು ಗ್ರಾಹ್ಯತೀತರೆ. ಸಾಧಾರಣ ಗೃಹಸ್ಥರ ಮನೆಯ ಹೆಣ್ಣುಮಗಳಂತೆ ಇರುತ್ತಾ ಎಲ್ಲ ಕೆಲಸ ಭಕ್ಷಿ ಮಾಡುತ್ತಾರೆ. ಯಾರಿಗೆ ತಾನೆ ಗೊತ್ತಗಲು ಸದ್ಯ, ಅವರು ಸಾಕ್ಷಾತ್ ಭಗವತಿ ಎಂದು?. ಠಾಕೂರರು ನನಗೆ ಒಮ್ಮೆ ಹೇಳಿದ್ದರು: “ಈ ಕಾಳಿಮಂದಿರದಲ್ಲಿ ಇರುವ ತಾಯಿಗೂ ಆ ನಹಬತ್ತುಖಾನೆಯಲ್ಲಿ ವಾಸಿಸುತ್ತಿರುವ ತಾಯಿಗೂ ಅಭೇದ ಸಂಬಂಧ” ಎಂದು. ಅಮ್ಮಗೆ ಪ್ರಣಾಮಮಾಡಿ ಅವರ ಹತ್ತಿರ ಭಕ್ತಿ ವಿಶ್ವಾಸಗಳಿಗಾಗಿ ಬೇಡಿಕೊ. ಅವರು ಪ್ರಸನ್ನರಾದರು ಎಂದರೆ ಜೀವಕ್ಕೆ ಭಕ್ತಿ ಮುಕ್ತಿ ಎಲ್ಲ ದೊರೆತುಬಿಡುತ್ತದೆ. ಉದ್ಬೋಧನದಲ್ಲಿ ಶರತ್ ಮಹಾರಾಜರೂ ಇದ್ದಾರೆ. ತಾಯಿಯ ಮಹಾ ವೀರಸೇವಕ; ಅವರನ್ನೂ ದರ್ಶನಮಾಡು. ಅವರನ್ನೇ ಕೇಳಿಕೊಂಡರೆ ನಿನಗೆ ತಾಯಿಯ ದರ್ಶನ ಮಾಡಿಸುತ್ತಾರೆ. ತಾಯಿಯ ಆಶೀರ್ವಾದ ಪಡೆದ ಮೇಲೆ ಬಲರಾಮ ಮಂದಿರಕ್ಕೆ ಹೋಗು. ಅಲ್ಲಿ ಮಹಾರಾಜ್ ಇದ್ದಾರೆ; ಹರಿಮಹಾರಾಜ್ ಇದ್ದಾರೆ. ಅವರ ಹತ್ತಿರ ಹೋಗಿ, ನನ್ನ ಹೆಸರು ಹೇಳಿ ಹೇಳು, ಬೇಲೂರು ಮಠದಿಂದ ನನ್ನನ್ನು ಕಳಿಸಿದ್ದಾರೆ, ತಮ್ಮ ಆಶೀರ್ವಾದ ಪಡೆಯುವುದಕ್ಕಗಿ ಎಂದು. ಅವರೂ ಆಶೀರ್ವಾದ ಮಾಡುತ್ತಾರೆ. ಮಹಾರಾಜ್(ಸ್ವಾಮಿ ಬ್ರಹ್ಮಾನಂದರು) ಅವರು ಶ್ರೀಠಾಕೂರರ ಸಾಕ್ಷಾತ್ ಮಾನಸಪುತ್ರರಾಗಿದ್ದಾರೆ. ಅವರ ಆಶೀರ್ವಾದ ಪಡೆಯುವಾಗ ಸಾಕ್ಷಾತ್ ಶ್ರೀಗುರುಮಹಾರಾಜರೆ ಆಶೀರ್ವಾದ ಮಾಡುತ್ತಿದ್ದಾರೆ ಎಂದು ಮನಸ್ಸಿನಲ್ಲಿ ಭಾವಿಸಿಕೊ. ಠಾಕೂರರ ಆಧ್ಯಾತ್ಮಿಕ ಶಕ್ತಿ ಈಗ ಅವರ ಮೂಲಕ ಜಗತ್ತಿಗೆ ಹರಿಯುತ್ತಿದೆ. ಹರಿಮಹಾರಾಜರು ಸಾಕ್ಷಾತ್‌ಶುಕದೇವ, ಮೂರ್ತಿಮತ್ತಾದ ವೇದಾಂತಸ್ವರೂಪಬ್ರಹ್ಮಜ್ಞಪುರುಷ. ಇವರೆಲ್ಲರೂ ಎಲ್ಲಿಯವರೆಗೆ ಸ್ಥೂಲ ಶರೀರದಲ್ಲಿರುತ್ತಾರೊ ಅಲ್ಲಿಯವರೆಗೆ ಯಾರು ಅವರ ದರ್ಶನ, ಪವಿತ್ರಸಂಗ ಮತ್ತು ಆಶೀರ್ವಾದ ಪಡೆಯುತ್ತಾರೊ ಅವರು ಧನ್ಯರಾಗುತ್ತಾರೆ. ಆದರೆ ಧ್ಯಾನ ಬಲದಿಂದ ಅವರ ದರ್ಶನ ಮಾಡುವುದು ತುಂಬ ಕಷ್ಟಸಾಧ್ಯವಾಗುತ್ತದೆ. ಇಷ್ಟು ದಿನ ನೀನು ಗಂಗಾ ತೀರದಲ್ಲಿ ಠಾಕೂರರ ಈ ದಿವ್ಯಸ್ಥಾನದಲ್ಲಿದ್ದೆ; ಮಹಾತ್ಮರಾದ ಸಾಧುಗಳ ಸಂಗವೂ ನಿನಗೆ ಲಭಿಸಿದೆ; ಮನೆಗೆ ಹಿಂತಿರುಗಿದ ಮೇಲೆ ಇದನ್ನೆಲ್ಲ ಕುರಿತು ಪರಿಭಾವಿಸು. ಅದರಿಂದ ಚಿತ್ತ ಶುದ್ಧಿಯಾಗುತ್ತದೆ. ನೀನು ಭಾಗ್ಯಶಾಲಿ!”

ಓಂ
ಸಚ್ಚಿದಾನಂದ ತ್ರಿತ್ವಮುಖವಾದ ಪರಬ್ರಹ್ಮದಲ್ಲಿ
ಅಭವದೊತ್ತಾದೆ ಭವದ ಬಿತ್ತಾದೆ ಋತದ ಚಿತ್ತಾದೆ ನೀ;
ಇಳಿದು ಬಾ ಇಳೆಗೆ, ತುಂಬಿ ತಾ ಬೆಳಗೆ ಜೀವ ಕೇಂದ್ರದಲ್ಲಿ;
ಮತ್ತೆ ಮೂಡಿ ಬಾ ಒತ್ತಿ ನೀನೆನ್ನ ಚಿತ್ತಪೃಥಿವಿಯಲ್ಲಿ!  – ಋತಚಿನ್ಮಯೀ ಜಗನ್ಮಾತೆಗೆ (ಅಗ್ನಿ ಹಂಸದಿಂದ)

* * ** ಅವರು ೧೯೨೨ ರಲ್ಲಿ ಶ್ರೀ ರಾಮಕೃಷ್ಣ ಮಠ ಮತ್ತು ಮಿಶನ್ನಿನ ಅಧ್ಯಕ್ಷರಾದ ಮೇಲೆಯೆ ಮಂತ್ರ ದೀಕ್ಷೆ ಕೊಡಲು ಪ್ರಾರಂಭ ಮಾಡಿದ್ದು.

* ಬಂಗಿಯ ಸೊಪ್ಪಿನಿಂದ ತಯಾರುಮಾಡಿದ ಒಂದು ವಿಧದ ಪಾನೀಯ.