ಅಂದು ಭಾನುವಾರ, ಅಪರಾಹ್ನದಲ್ಲಿ ಸ್ವಾಮಿ ಶಿವಾನಂದರ ಕೊಠಡಿಯಲ್ಲಿ ಅನೇಕ ಭಕ್ತರು ನೆರೆದಿದ್ದಾರೆ. ಕೆಲವರ ಆರೋಗ್ಯದ ವಿಚಾರವಾಗಿ ಕುಶಲ ಪ್ರಶ್ನೆ ಕೇಳಿದರು; ಮತ್ತೆ ಕೆಲವರು ಕೇಳಿದ ಕುಶಲ ಪ್ರಶ್ನೆಗಳಿಗೆ ಉತ್ತರ ಹೇಳಿದರು; ಆದರೆ ಅವರ ಮನಸ್ಸು ಬಹಿರ್ಮುಖವಾಗಲೊಲ್ಲದೆ ಮತ್ತೆ ಮತ್ತೆ ಅಂತರ್ಮುಖವಾಗುತ್ತಿದ್ದಂತೆ ತೋರಿತು. ಸುಮಾರು ಮೂರು ಗಂಟೆಯ ಹೊತ್ತಿಗೆ ದಕ್ಷಿಣೇಶ್ವರದಿಂದ ಆಗಮಿಸಿದ ಕೆಲವು ಭಕ್ತರು ಕೊಠಡಿಯನ್ನು ಪ್ರವೇಶಿಸಿದರು. ಅವರನ್ನು ನೋಡುತ್ತಲೆ ಸ್ವಾಮಿಗಳಿಗೆ ಆನಂದ ಉಕ್ಕಿತು; ಹೇಳಿದರು “ಬನ್ನಿ, ಬನ್ನಿ ! ನೀವೆಲ್ಲ ಎಲ್ಲಿಂದ ಬಂದಿದ್ದೀರಿ?”

ಅವರೆಲ್ಲರೂ ಗೌರವದಿಂದ ಬಾಗಿ ಸಾಷ್ಟಾಂಗ ಪ್ರಣಾಮಮಾಡಿ ಕುಳಿತುಕೊಂಡಮೇಲೆ ಒಬ್ಬರು ಹೇಳಿದರು: “ನಾವು ಇವತ್ತು ದಕ್ಷಿಣೇಶ್ವರಕ್ಕೆ ಹೋಗಿದ್ದೆವು. ಮಂದಿರಗಳನ್ನೆಲ್ಲ ದರ್ಶಿಸಿದ ಮೇಲೆ ತಾಯಿಯ ಪ್ರಸಾದವನ್ನು ಸ್ವೀಕರಿಸಿದೆವು. ದಿನವೆಲ್ಲ ಮಹಾನಂದದಲ್ಲಿ ಕಳೆಯಿತು. ಶ್ರೀಗುರುಮಹಾರಾಜರ ಕೊಠಡಿಗೆ, ಪಂಚವಟಿಗೆ, ಬೇಲದ ಮರದ ಬುಡಕ್ಕೆ ಹೋದಾಗ ನಮ್ಮ ಮನಸ್ಸು ‘ಇಲ್ಲಿಯೇ ಅಲ್ಲವೆ ಶ್ರೀಗುರು ಅದ್ಭುತವಾದ ಸಾಧನೆಗಳನ್ನು ಮಾಡಿದುದು’ ಎಂದು ನೆನೆದು ಪುಲಕಿತವಾಯಿತು.”

ಸ್ವಾಮೀಜಿ: “ಅಲ್ಲವೆ ಮತ್ತೆ! ಶ್ರೀರಾಮಕೃಷ್ಣರು ಅಲ್ಲಿ ಸುಮಾರು ಮೂವತ್ತು ವರ್ಷ ವಾಸ ಮಾಡಿದ್ದರು. ಅಲ್ಲಿ ಅವರು ಎಂತೆಂತಹ ಸಾಧನೆಗಳನ್ನು ಕೈಕೊಂಡಿದ್ದಾರೆ! ಎಂತೆಂತಹ ಭಾವಸಮಾಧಿಗಳನ್ನು ಅನುಭವಿಸಿದ್ದಾರೆ ಅಲ್ಲಿ! ಎಂತೆಂತಹ ಅಲೌಕಿಕ ಸಿದ್ಧಿಗಳಾಗಿವೆ ಅವರಿಗೆ ಅಲ್ಲಿ! ಅಲ್ಲದೆ, ಅವರಿದ್ದ ಆ ಕೊಠಡಿ-ಅದೇನು ಸಾಮಾನ್ಯ ಸ್ಥಳವೇ? ನನಗೇನೂ ದಕ್ಷಿಣೇಶ್ವರ ಸಾಕ್ಷಾತ್ ಕಾಶಿಯೇ-ಮತ್ತೇನೂ ಅಲ್ಲ. ಅದಕ್ಕೆ ನಾನು ಆಗಾಗ್ಗೆ ಅಲ್ಲಿಗೆ ಹೋಗುವುದು. ಪದೇ ಪದೇ ಅಲ್ಲಿಗೆ ಹೋಗುವುದಕ್ಕೆ ಆಗುತ್ತಿಲ್ಲ. ಇಲ್ಲಿಂದಲೇ ದಿನವೂ ಕೈಮುಗಿಯುತ್ತೇನೆ. ದಕ್ಷಿಣೇಶ್ವರಕ್ಕೆ ಎಣೆಯಾದ ಕ್ಷೇತ್ರ ಮತ್ತೊಂದಿದೆಯೇ? ಕಾಶಿ ಹೇಗೋ ಹಾಗೆ ಅದೂ ಮರ್ತ್ಯಲೋಕಕ್ಕೆ ಸೇರಿದುದಲ್ಲ.”

ಭಕ್ತರು: “ಮಹಾರಾಜ್, ನೀವು ಕಾಶೀಪುರದ ತೋಟಕ್ಕೆ ಹೋದದ್ದು ಯಾವಾಗ? ಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣ ಮಹಾಸಂಘವನ್ನು ಕಟ್ಟಿದ್ದು ಹೇಗೆ? ಈ ವಿಚಾರವಾಗಿ ತಿಳಿದುಕೊಳ್ಳಬೇಕು ಎಂದು ನಮಗೆ ತುಂಬ ಇಷ್ಟ.”

ಸ್ವಾಮಿ ಶಿವಾನಂದರು ಮೆಲ್ಲಮೆಲ್ಲಗೆ ತಮ್ಮ ಮನಸ್ಸನ್ನು ಬಹಿರ್ಮುಖಕ್ಕೆ ಎಳೆತರುತ್ತಿರುವರೊ ಎಂಬಂತೆ ಸ್ವಲ್ಪ ಹೊತ್ತು ನೀರವವಾಗಿದ್ದರು. ಮತ್ತೆ ನಮ್ರ ವಾಣಿಯಿಂದ ಹೇಳತೊಡಗಿದರು: “ಗುರುಮಹಾರಾಜರ ಗಂಟಲು ನೋವು ವಿಷಮ ಸ್ಥಿತಿಗೇರಲು ಔಷಧೋಪಚಾರಗಳ ಸೌಕರ್ಯಕ್ಕಾಗಿ ಅವರನ್ನು ಕಾಶೀಪುರದ ತೋಟಕ್ಕೆ ಸಾಗಿಸಲಾಯಿತು. ನಾವೆಲ್ಲರೂ ಅವರ ಸೇವಾ ಶುಶ್ರೂಷೆಗಾಗಿ ಅಲ್ಲಿ ಸೇರಿದೆವು. ಆಮೇಲೆ ಗುರುದೇವರು ಅಲ್ಲಿಯೆ ಕಳೇಬರ ತ್ಯಾಗಮಾಡಿದರು.”

ಭಕ್ತರು: “ಅವರು ನಿಜವಾಗಿಯೂ ತೀರಿಯೆಹೋದರೆಂಬುದನ್ನು ನೀವು ಗೊತ್ತು ಹಚ್ಚಿದಿರೇನು?”

ಸ್ವಾಮೀಜಿ: “ಇಲ್ಲ. ಮೊದಮೊದಲು ಅವರು ನಿಜವಾಗಿಯೂ ತೀರಿಕೊಂಡರೆಂದು ನಮಗಾರಿಗೂ ಅನ್ನಿಸಲಿಲ್ಲ. ಸಮಾಧಿಸ್ಥಿತಿ ಇರಬೇಕೆಂದೇ ಭಾವಿಸಿದೆವು; ಏಕೆಂದರೆ, ಅನೇಕ ವೇಳೆ ಅವರು ಎರಡು ಮೂರು ದಿನಗಳು ನಿರಂತರವಾಗಿ ಹಾಗೆ ಸಮಾಧಿ ಸ್ಥಿತಿಯಲ್ಲಿ ಇರುತ್ತಿದ್ದುದನ್ನು ನಾವು ಕಂಡಿದ್ದೆವು. ಆದ್ದರಿಂದ ಅವರಿದ್ದದ್ದು ನಿಗೂಢವಾದ ಸಮಾಧಿ ಸ್ಥಿತಿಯೇ ಇರಬೇಕೆಂದುಕೊಂಡು ನಾವೆಲ್ಲ ಭಗವನ್ನಾಮ ಘೋಷಣೆ ಮಾಡತೊಡಗಿದೆವು. ಆ ರಾತ್ರಿಯೆಲ್ಲ ಹೀಗೆಯೇ ಕಳೆಯಿತಾದರೂ ಅವರ ಸ್ಥಿತಿಯಲ್ಲಿ ಯಾವ ಬದಲಾವಣೆಯೂ ಗೋಚರವಾಗಲಿಲ್ಲ. ಮರುಬೆಳಿಗ್ಗೆ ಡಾಕ್ಟರ್ ಸರ‍್ಕಾರ್ ಅವರಿಗೆ ವರ್ತಮಾನ ಕಳಿಸಿದೆವು. ಅವರು ಬಂದು ಗುರುಮಹಾರಾಜರ ದೇಹವನ್ನು ವಿವರಗಾಗಿ ಸುಸೂಕ್ಷ್ಮವಾಗಿ ಪರೀಕ್ಷಿಸಿ ‘ದೇಹ ತ್ಯಾಗ’ ಮಾಡಿದ್ದಾರೆ, ಎಂದರು. ಪ್ರಾಣವಿರುವ ಯಾವ ಚಿಹ್ನೆಯೂ ಡಾಕ್ಟರಿಗೆ ತೋರಲಿಲ್ಲ. ಒಂದು ಫೋಟೋಗ್ರಾಫ್ ತೆಗೆದುಕೊಳ್ಳಬೇಕೆಂದು ಡಾಕ್ಟರ್ ಸೂಚನೆ ಕೊಟ್ಟರು. ಅದನ್ನು ತೆಗೆದುಕೊಳ್ಳಲಾಯಿತು. ಆ ದಿನವೆ ಅಪರಾಹ್ನ ಸುಮಾರು ಎರಡು ಎರಡೂವರೆ ಗಂಟೆಯ ಹೊತ್ತಿಗೆ ಗುರುಮಹಾರಾಜರ ಕಳೆಬರಕ್ಕೆ ಕಾಶೀಪುರದ ಶ್ಮಶಾನ ಭೂಮಿಯಲ್ಲಿ ಅಗ್ನಿಸಂಸ್ಕಾರ ನಡೆಯಿತು.”

ಭಕ್ತರು: “ಅಂದಿನ ದಿನಗಳು ನಿಮಗೆಲ್ಲ ತುಂಬ ಕಷ್ಟಸಂಕಟದ ದಿನಗಳಾಗಿರಬೇಕಲ್ಲವೆ?”

ಸ್ವಾಮಿಗಳು: “ಇಲ್ಲ. ಯಾವ ರೀತಿಯ ಕಷ್ಟವನ್ನಾಗಲಿ ಸಂಕಟವನ್ನಾಗಲಿ ನಾವು ಅನುಭವಿಸಲಿಲ್ಲ. ಆ ಕಾಲದಲ್ಲಿ ನಮ್ಮ ಮನಸ್ಸೆಲ್ಲ ಒಂದು ವಿಶೇಷ ಭಾವ ಸ್ಥಿತಿಯಲ್ಲಿ ಮಗ್ನವಾಗಿರುತ್ತಿತ್ತು. ಗುರುದೇವರ ಸೇವಾ ಶುಶ್ರೂಷೆಗಳಲ್ಲಿ – ಧ್ಯಾನ ಜಪತಪಸ್ಯೆಗಳಲ್ಲಿ – ಮನಸ್ಸು ಮುಳುಗಿರುತ್ತಿತ್ತಾದ್ದರಿಂದ ನಮಗೆ ಹಗಲಿರುಳುಗಳ ಪರಿವೆಯೆ ಇರುತ್ತಿರಲಿಲ್ಲ, ನಿಜವಾಗಿಯೂ ಅವು ಅದ್ಭುತ ದಿನಗಳು! ಶ್ರೀರಾಮಕೃಷ್ಣರ ಮಹಾಸಮಾಧಿಯ ಅನಂತರ ತರುಣ ಶಿಷ್ಯರಲ್ಲಿ ಅನೇಕರು ನಾನು, ಸ್ವಾಮಿ ಅದ್ಭುತಾನಂದ ಇಬ್ಬರ ಹೊರತು, ತಂತಮ್ಮ ಮನೆಗಳಿಗೆ ಹಿಂತಿರುಗಿದರು. ಸ್ವಾಮೀಜಿ ಮನೆಗೆ ಹಿಂತಿರುಗಿದರೂ ಕಾಶೀಪುರದ ತೋಟಕ್ಕೆ ಆಗಾಗ್ಗೆ ಬರುತ್ತಿದ್ದರು; ಅಲ್ಲದೆ ಗುರುದೇವನ ಶಿಷ್ಯವರ್ಗದವರೊಡನೆಲ್ಲ ತಪ್ಪದೆ ನಿಕಟ ಸಂಪರ್ಕವಿಟ್ಟುಕೊಂಡಿದ್ದರು.”

ಶ್ರೀ ಗುರುಮಹಾರಾಜರ ಕಳೇಬರದ ಭಸ್ಮಾವಶೇಷವನ್ನು ಕಾಶೀಪುರದ ತೋಟದ ಮನೆಯಲ್ಲಿ ಇಟ್ಟು ನಿತ್ಯವೂ ಪೂಜೆ ಸಲ್ಲಿಸುತ್ತಿದ್ದೆವು. ಅದೇ ಮನೆಯಲ್ಲಿ ಇದ್ದುದ್ದಕ್ಕೆ ಕಾರಣ, ಕೊಟ್ಟ ಬಾಡಿಗೆಯ ಅವಧಿ ಇನ್ನೂ ಪೂರೈಸಿರಲಿಲ್ಲ; ಅದು ಮುಗಿಯುವವರೆಗೂ ಅಲ್ಲಿರಬಹುದಾಗಿತ್ತು. ಭಸ್ಮಾವಶೇಷವನ್ನು ಭದ್ರವಾಗಿಟ್ಟು, ಗಂಗಾತೀರದಲ್ಲಿ ಒಂದೆಡೆ ಅದನ್ನು ಹೂಳಬೇಕೆಂದು ನಮ್ಮಲ್ಲಿ ಕೆಲವರೂ, ಸ್ವಾಮೀಜಿಯೂ ನಿಶ್ಚಯಮಾಡಿಕೊಂಡಿದ್ದೆವು. ಶ್ರೀಗುರುಮಹಾರಾಜರ ಇಚ್ಛೆಯೂ ಹಾಗೆಯೇ ಇತ್ತು. ಆದರೆ ಒಪ್ಪಮಾಡಲು ಸರಿಯಾದ ಸ್ಥಳ ದೊರೆಯಲಿಲ್ಲ.

“ಅಷ್ಟರಲ್ಲಿ ಆ ಭಸ್ಮಾವಶೇಷವನ್ನು ಕಾಕುರ್‌ಗಾಚಿಯ ತನ್ನ ತೋಟದ ಮನೆಗೆ ಕೊಂಡೊಯ್ಯಬೇಕೆಂದು ರಾಂಬಾಬು ಏರ್ಪಾಟು ಮಾಡುತ್ತಿದ್ದರು. ಇದನ್ನರಿತು ನಮಗೆಲ್ಲ ಬೇಸರವಾಯಿತು; ಅದರಲ್ಲಿಯೂ ಹಾಗೇನಾದರೂ ತೋಟದ ಮನೆಗೆ ಕೊಂಡೊಯ್ದರೆ ಶ್ರೀಗುರುಮಹಾರಾಜರ ಇಚ್ಛೆಗೆ ವಿರುದ್ಧವಾಗಿ ವರ್ತಿಸಿದಂತಾಗುತ್ತದೆ ಎಂಬುದೆ ನಮ್ಮ ಬೇಸರಕ್ಕೆ ಮುಖ್ಯ ಕಾರಣವಾಗಿತ್ತು. ಬಲರಾಂ ಬಾಬುಗೆ ಹೇಳಿಕಳಿಸಿದೆವು, ಒಂದು ಮಣ್ಣಿನ ಹೂಜಿ ತೆಗೆದುಕೊಂಡು ಬರುವಂತೆ. ಅವರು ಒಡನೆಯ ಬಂದರು. ಆ ರಾತ್ರಿಯೆ ಭಸ್ಮಾವಶೇಷದಲ್ಲಿದ್ದ ಅಸ್ಥಿಯನ್ನೆಲ್ಲ ಆಯ್ದು, ಮೃತ್ ಪಾತ್ರೆಯಲ್ಲಿಟ್ಟು, ಮಣ್ಣಿನ ಮೆತ್ತು ಹಾಕಿ ಭದ್ರಮಾಡಿ, ಬಲರಾಂ ಬಾಬುವಿನ ಮನೆಗೆ ಕಲ್ಕತ್ತೆಗೆ ಕಳಿಸಿದೆವು. ಅಲ್ಲಿ ಅವರ ಮನೆದೇವರು ನಿತ್ಯವೂ ಪೂಜೆಗೊಳ್ಳುತ್ತಿದ್ದ ಮಂದಿರದಲ್ಲಿ ಅದನ್ನಿಟ್ಟು ನಿತ್ಯಾರಾಧನೆ ನಡೆಯುವಂತೆ ಮಾಡಲಾಯಿತು. ಉಳಿದಿದ್ದ ಭಸ್ಮಾವಶೇಷವನ್ನು ರಾಂಬಾಬು ಕಾಕುರ್‌ಗಾಚಿಗೆ ಕೊಂಡಿಯ್ದರು. ನಾವು ಅವಶೇಷದಿಂದ ಅಸ್ಥಿಯನ್ನೆಲ್ಲ ತೆಗೆದುದರ ವಿಚಾರವಾಗಿ ಅವರಿಗೆ ಏನನ್ನೂ ಹೇಳಲಾಗಲಿಲ್ಲವಾದ್ದರಿಂದ ಅವರಿಗೆ ಅದು ಗೊತ್ತಾಗಲೂ ಇಲ್ಲ. ಅವೊತ್ತು ನಾವು ಒಪ್ಪಮಾಡಿದ ಅವಶೇಷವೆ ಈಗ ಇಲ್ಲಿ ಮಠದ ಪೂಜಾಮಂದಿರದಲ್ಲಿ ದಿನವೂ ಪೂಜಿತವಾಗುತ್ತಿದೆ. ಸ್ವಾಮಿಜಿಯೆ ಸ್ವಯಂ ಆ ಅವಶೇಷವಿದ್ದ ಮೃತ್ ಪಾತ್ರೆಯಲ್ಲಿ ಶಿರಸಾ ಧರಿಸಿ ಹೊತ್ತುಕೊಂಡು ಬಂದು ಈ ಮಠದಲ್ಲಿ ಸ್ಥಾಪಿಸಿದರು. ಅವರು ಆ ಮೃತ್ ಪಾತ್ರೆಯಲ್ಲಿ ‘ಆತ್ಮಾರಾಮ’ ಎಂದರೆ ‘ತನ್ನಾತ್ಮದಲ್ಲಿ ತಾ ತೃಪ್ತ’ ಎಂಬ ಅರ್ಥದ ಹೆಸರಿನಿಂದ ಗೌರವಿಸುತ್ತಿದ್ದರು. ಆಮೇಲೆ ನಾವು ಕೂಡ ಅದನ್ನು ಹಾಗೆಯೆ ಕರೆಯತೊಡಗಿದೆವು.”

ಭಕ್ತರು: “ಶ್ರೀ ಗುರುಮಹಾರಾಜರ ಮಹಾಸಮಾಧಿಯ ಅನಂತರ ನೀವು ಯಾವಾಗಲಾದರೂ ಅವರನ್ನು ನೋಡಿದಿರಾ?”

ಸ್ವಾಮೀಜಿ: “ಶ್ರೀಮಾತೆಗೆ ಒಮ್ಮೆ ಬೃಂದಾವನದಲ್ಲಿ ಶ್ರೀಗುರುಮಹಾರಾಜರ ದರ್ಶನವಾಯಿತು. ಅದೇನಾದರೂ ಇರಲಿ. ಅಷ್ಟರಲ್ಲಿ ನಾನೂ ಕೂಡ ಬೃಂದಾವನಕ್ಕೆ ಹೋದೆ. ಕಾಶೀಪುರದಲ್ಲಿ ಸ್ವಾಮಿ ಅದ್ಭುತಾನಂದರೂ ಮತ್ತೆ ಯಾರೋ ಇನ್ನೊಬ್ಬರು ಮಾತ್ರ ಉಳಿದುಕೊಂಡಿದ್ದರು. ಸ್ವಾಮೀಜಿ ಬಲರಾಮ ಬಸು ಅವರ ಮನೆಗೆ ನಿತ್ಯವೂ ಹೋಗಿ ಶ್ರೀರಾಮಕೃಷ್ಣ ಸಂಸ್ಥೆಯ ರಚನೆಯ ವಿಚಾರವಾಗಿ ಆಲೋಚಿಸುತ್ತಿದ್ದರು. ಒಂದು ದಿನ ಸುರೇಶಬಾಬು ಅನಿರೀಕ್ಷಿತವಾಗಿ ಅಲ್ಲಿಗೆ ಬಂದು ಸ್ವಾಮಿಜಿಯ ಹತ್ತಿರ ಹೇಳಿದರು: ‘ನರೇನ್, ನಿನ್ನೆ ರಾತ್ರಿ ಗುರುಮಹಾರಾಜರು ನನಗೆ ‘ಸುರೇಶ್, ನನ್ನ ಮಕ್ಕಳು ಅಲ್ಲಿ ಇಲ್ಲಿ ಅಲೆಯುತ್ತಿದ್ದಾರೆ. ಅವರಿಗಾಗಿ ನೀನು ಏನು ಮಾಡಿದ್ದೇಯೆ?’ ಎಂದರು. ಆ ಮಾತುಗಳನ್ನು ಕೇಳಿದ ನನಗೆ ತುಂಬ ಚಿಂತೆಯಾಗಿದೆ. ಆಲೋಚಿಸಿ ಏನಾದರೂ ಮಾಡು. ನೀನು ಏನು ಹೇಳಿದರೂ ನಾನದನ್ನು ಮಾಡಲು ಸಿದ್ಧವಾಗಿದ್ದೇನೆ.”

ತನ್ನ ಆಸೆ ಅಂತಹ ವಿಚಿತ್ರ ರೀತಿಯಲ್ಲಿ ಕೈಗೊಂಡಿದುದಕ್ಕಾಗಿ ಸ್ವಾಮೀಜಿಗೆ ಬಹಳ ಸಂತೋಷವಾಯಿತು. ‘ನಾನೂ ಸ್ವಲ್ಪ ಕಾಲದಿಂದ ಅದನ್ನೆ ಆಲೋಚನೆ ಮಾಡುತ್ತಿದ್ದೇನೆ. ಒಳ್ಳೆಯದು; ಹಾಗಾದರೆ ಮೊದಲು ಒಂದು ಮನೆ ಗೊತ್ತುಮಾಡಬೇಕಲ್ಲ; ಏನು ಹೇಳುತ್ತೀಯ?’ ಎಂದರು. ಇಬ್ಬರೂ ಸೇರಿ ಮನೆ ಹುಡುಕ ತೊಡಗಿದರು. ಕಡೆಗೆ ವರಾಹನಗರದಲ್ಲಿ ಉಪ್ಪರಿಗೆಯ ಮನೆ ತಿಂಗಳಿಗೆ ಹತ್ತು ರೂಪಾಯಿನ ಬಾಡಿಗೆಗೆ ಸಿಕ್ಕಿತು. ಮನೆ ಬಹಳ ಹಳೆಯದು; ಅಲ್ಲದೆ ನೆರೆಯ ಜನರಲ್ಲಿ ಅದು ದೆವ್ವದ ಮನೆ ಎಂದು ಖ್ಯಾತಿ ಪಡೆದಿತ್ತು. ಆದ್ದರಿಂದ ಯಾರೂ ಅದನ್ನು ಬಾಡಿಗೆಗೆ ತೆಗೆದುಕೊಳ್ಳಲು ಧೈರ್ಯಮಾಡುತ್ತಿರಲಿಲ್ಲ, ಅಂತೂ ಕಾಶೀಪುರದ ತೋಟದಮನೆಯಲ್ಲಿ ಉಳಿದಿದ್ದವರು ಆ ವರಾಹನಗರದ ಹೊಸ ಮನೆಗೆ ಹೋದರು, ನಾನು ಅಲ್ಲಿಗೆ ಹಿಂತಿರುಗಿದೆ ಬೃಂದಾವನದಿಂದ. ನನ್ನನ್ನು ಕಂಡೊಡನೆ ಸ್ವಾಮೀಜಿ ‘ತಾರಕ್‌ದಾ, ನೀನು ಬಂದದ್ದು ಬಹಳ ಸಂತೋಷ. ನಿನ್ನನ್ನೆ ನೆನೆಯುತ್ತಿದ್ದೆ. ವರಾಹ ನಗರದಲ್ಲಿ ಒಂದು ಬಾಡಿಗೆಮನೆ ಮಾಡಿದ್ದೇವೆ. ಅಲ್ಲಿಗೆ ಹೋಗೋಣ’ ಎಂದರು.

ಅಂದಿನಿಂದ ನಾವೆಲ್ಲ ಅಲ್ಲಿ ವಾಸಿಸುವುದಕ್ಕೆ ತೊಡಗಿದೆವು. ಆ ಕಾಲದಲ್ಲಿ ನಮಗೆಲ್ಲ ಭಗವತ್ ಸಾಕ್ಷಾತ್ಕಾರವಲ್ಲದೆ ಬೇರೆ ಚಿಂತನೆಯಿರಲಿಲ್ಲ. ಸಾಧನೆ, ತಪಸ್ಸು, ಪೂಜೆ, ಅಧ್ಯಯನ ಇವುಗಳಲ್ಲಿಯೆ ಹಗಲಿರುಳೂ ನಿರಂತರವಾಗಿ ಮಗ್ನರಾಗಿದ್ದೆವು. ಹಸಿವು ಬಾಯಾರಿಕೆ ಕೂಡ ತೊರೆದುಹೋಗಿತ್ತು. ಕೀರ್ತನೆಗಳಲ್ಲಿಯೂ ನಿರತರಾಗುತ್ತಿದ್ದೆವು. ಒಮ್ಮೊಮ್ಮೆ ಕೀರ್ತನೆಯ ಸಮಯದಲ್ಲಿ ನಮ್ಮ ಭಾವೋನ್ಮಾದದ ನೃತ್ಯದ ಪದಾಘಾತಕ್ಕೆ ಉಪ್ಪರಿಗೆಯೆ ಎಲ್ಲಿ ಕುಸಿದು ಬೀಳುವುದೊ ಎಂದು ಹೆದರಿಕೆಯಾಗುತ್ತಿತ್ತಂತೆ ಕೆಳಗಡೆ ಇರುವವರಿಗೆ. ಅಃ! ಎಂತಹ ಆನಂದಮಯ ಸಮಯವಾಗಿತ್ತು ಅದು! ಶ್ರೀರಾಮಕೃಷ್ಣ ಮಹಾಸಂಸ್ಥೆಯ ಅಸ್ತಿವಾರ ಅಂತಹ ತ್ಯಾಗ, ಸಾಧನೆ, ತಪಸ್ಯೆ, ಧ್ಯಾನ, ಜಪತಪಗಳಿಂದ ಸಿದ್ಧವಾಯಿತು.

* * *