ಸ್ವಾಮಿ ಶಿವಾನಂದರು ಬೇಲೂರು ಮಠದ ಉಪ್ಪರಿಗೆಯ ತಮ್ಮ ಕೊಠಡಿಯಲ್ಲಿ ಅಂತರ್ಮುಖಿಗಳಾಗಿ ಗಾಂಭೀರ್ಯವೆ ಮೂರ್ತಿವೆತ್ತಂತೆ ಕುಳಿತಿದ್ದಾರೆ. ಆಗತಾನೆ ಬೆಳಗಾಗಿದೆ. ದಿನನಿತ್ಯದ ಪದ್ಧತಿಯಂತೆ ಮಠದ ಸಂನ್ಯಾಸಿಗಳೆಲ್ಲ ಶ್ರೀ ಸ್ವಾಮಿಗಳ ಸನ್ನಿಧಿಯಲ್ಲಿ ನೆರೆದಿದ್ದಾರೆ. ಸ್ವಲ್ಪ ಹೊತ್ತಾದ ಮೇಲೆ, ದೂರದೂರಿನ ಶ್ರೀರಾಮ ಕೃಷ್ಣಾಶ್ರಮವೊಂದರಿಂದ ಕೆಲವು ದಿನಗಳ ಹಿಂದೆ ಬೇಲೂರು ಮಠಕ್ಕೆ ಬಂದಿದ್ದ ಸಂನ್ಯಾಸಿಯೊಬ್ಬರು ತಮ್ಮ ಮನಸ್ಸಿನಲ್ಲಿ ಕೊರೆಯುತ್ತಿದ್ದ ಕ್ಲೇಶವೊಂದನ್ನು ಗುರುವಿನ ಮುಂದೆ ಹೀಗೆಂದು ಅರಿಕೆ ಮಾಡಿದರು:

“ಮಹಾರಾಜ್, ನಾನೇನೊ ನನ್ನ ಕೈಯಲ್ಲಿ ಸಾಧ್ಯವಾದ ಮಟ್ಟಿಗೆ ಧ್ಯಾನಾಭ್ಯಾಸಮಾಡುತ್ತಿದ್ದೇನೆ. ಆದರೂ ಅದರಲ್ಲಿ ನನಗೆ ಸ್ವರಸ ಹುಟ್ಟಿಲ್ಲ: ಸ್ವಲ್ಪವೂ ಸಂತೋಷ ತೋರುವುದಿಲ್ಲ. ಅನೇಕಸಾರಿ ಗಮನಿಸಿದ್ದೇನೆ: ನಿತ್ಯಾಚಾರ, ಮಾಡಬೇಕಲ್ಲ ಎಂದು ಮಾಡುತ್ತಿರುವಂತೆ ತೋರುತ್ತದೆ. ಅದರಿಂದ ನನ್ನ ಹೃದಯಕ್ಕೂ ತೃಪ್ತಿಯಿಲ್ಲ; ಮನಸ್ಸಿಗೂ ಶಾಂತಿಯಿಲ್ಲ.”

ಸ್ವಾಮಿ ಶಿವಾನಂದರು ಪ್ರಶಾಂತಧ್ವನಿಯಿಂದ ಹೇಳಿದರು: “ವತ್ಸ, ಹೇಳುತ್ತೇನೆ ಕೇಳು: ಶಾಂತಿ ಎಂಬುದು ಅಷ್ಟು ಸುಲಭವಾಗಿ ಲಭಿಸುವುದಿಲ್ಲ, ಶಾಂತಿ ಸಾಧನೆ ಬಹಳ ಕಷ್ಟ; ಅದಕ್ಕೆ ದಾರಿ ಕಂಟಕಮಯ. ‘ಕ್ಷುರಸ್ಯ ಧಾರಾ ನಿಶಿತಾ ದುರತ್ಯಯಾ ದುರ್ಗಂ ಪಥಸ್ತತ್ಕವಯೋ ವದಂತಿ’. ಕ್ಷೌರದ ಕತ್ತಿಯ ಅಲಗಿಗಿಂತಲೂ ಹರಿತ; ದಾಟಲು ಕಠಿನ; ಸೇರಲು ಕಷ್ಟ; ಹೀಗಿದೆ ದ್ರಷ್ಟಾರರಾದ ಋಷಿಗಳ ವಾಣಿ. ಆ ಪಥ ನಿಜವಾಗಿಯೂ ಅತ್ಯಂತ ಕ್ಲೇಶಕರವಾದದ್ದು. ಆ ದಾರಿಯಲ್ಲಿ ನಡೆಯಲು ಪ್ರಯತ್ನಿಸದವರಿಗೆ ಎಷ್ಟೇ ಸುಲಭ ಎಂದು ತೋರಿದರೂ ಅದು ಅತ್ಯಂತ ಕಷ್ಟಕರ. ಆಧ್ಯಾತ್ಮದ ಭೂಮಿಕೆಯಲ್ಲಿ ಮುಂದುವರಿಯಬೇಕಾದರೆ ತಪಸ್ಯೆ ಆವಶ್ಯಕ. ಆದರೆ ಭಗವತ್ ಸಾಕ್ಷಾತ್ಕಾರದ ಬಯಕೆ ತೀವ್ರವಾಗಿದ್ದರೆ ಸಾಧಕನಿಗೆ ದೇವರ ಕೃಪೆ ದೊರಕುವುದರಲ್ಲಿ ಸಂದೇಹವಿಲ್ಲ. ನೀನು ಓದಿರಬೇಕಲ್ಲವೆ ಶ್ರೀರಾಮಕೃಷ್ಣರ ಜೀವನ ಚರಿತ್ರೆಯಲ್ಲಿ : ಅವರೂ ಕೂಡ ದೇವಿಯ ದರ್ಶನಕ್ಕಾಗಿ, ಅದಕ್ಕೆ ಪೂರ್ವಭಾವಿಯಾಗಿ, ಎಂತಹ ಭಯಂಕರವಾದ ಸಾಧನೆಗಳಲ್ಲಿ ತೊಡಗಬೇಕಾಯ್ತು!

ಆದರೆ ಬರಿಯ ಸಾಧನೆಗಳಿಂದಲೆ ಎಲ್ಲವೂ ಆಗುತ್ತದೆಂದು ತಿಳಿಯಬಾರದು. ಹೃತ್ಪೂರ್ವಕವಾದ ಶ್ರದ್ಧಾಭಕ್ತಿಗಳಿಲ್ಲದಿದ್ದರೆ ಏನೂ ಆಗುವುದಿಲ್ಲ. ಭಕ್ತಿಯೆ  ಪರಮ ತಪಸ್ಯೆ. ಗುರುಮಹಾರಾಜರು ಹೇಳುತ್ತಿದ್ದರು: ಪತಿವ್ರತೆಗೆ ಪತಿಯ ಮೇಲಿರುವ ಪ್ರೇಮ, ತಾಯಿಗೆ ತನ್ನ ಮಗುವಿನ ಮೇಲಿರುವ ವಾತ್ಸಲ್ಯ, ಕೃಪಣನಿಗೆ ತನ್ನ ಹಣದ ಮೇಲಿರುವ ಮೋಹ – ಈ ಮೂರರ ಶಕ್ತಿಗಳೂ ಭಗವಂತನ ಮೇಲಣ ಭಕ್ತಿಯಲ್ಲಿ ಮುಪ್ಪರಿಗೊಂಡರೆ ಈಶ್ವರ ಸಾಕ್ಷಾತ್ಕಾರವಾಗುತ್ತದೆ ಎಂದು. ಆ ಮೂರು ಆಕರ್ಷಣೆಗಳೂ ಒಟ್ಟಾಗಿ ಭಗವಂತನನ್ನು ಎಳೆದಾಗ ಮಾತ್ರ ಯಾರಿಗಾದರೂ ಅವನ ದರ್ಶನವಾಗಿಯೆ ಆಗುತ್ತದೆ. ತೀವ್ರವಾದ ಭಕ್ತಿಯಿಂದ ಮಾತ್ರ ಭಗವತ್ ಸಾಕ್ಷಾತ್ಕಾರ ಸಾಧ್ಯ. ಅಂತಹ ಸಾಕ್ಷಾತ್ಕಾರದಿಂದಲೆ ಲಭ್ಯ ನಿಜವಾದ ಶಾಂತಿ, ನಿತ್ಯವಾದ ಆನಂದ.

ಆದರೆ ಅಂತಹ ಭಕ್ತಿ ಈಶ್ವರ ಕೃಪೆಯಿಲ್ಲದೆ ತಟಕ್ಕನೆ ಸಿದ್ಧವಾಗುವುದಿಲ್ಲ, ಮಂತ್ರದ ಮಾವಿನಕಾಯಿಯಂತೆ. ಅದಕ್ಕೆ ಕ್ರಮವಾದ ಸಾಧನೆ ಬೇಕು. ‘ಸ್ವಾಮೀ ಕರುಣೆಯಿಡು. ನಾನೊಬ್ಬ ಸಾಮಾನ್ಯ; ಕ್ಷುದ್ರಜೀವಿ. ನಾನು ಹೇಗೆ ನಿನ್ನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಸಾಧ್ಯ, ನೀನೇ ಕೃಪೆತೋರಿ ದರ್ಶನವೀಯದಿದ್ದರೆ? ಹೇ ಕರುಣಾಕರ, ನನ್ನ ಮೇಲೆ ದಯೆದೋರು. ದುರ್ಬಲನಾದ ಈ ಅಲ್ಪನಿಗೆ ಕೃಪೆಮಾಡಯ್ಯ, ಸ್ವಾಮೀ.’ ಹೀಗೆ ದಿನದಿನವೂ ಭಗವಂತನನ್ನು ಪ್ರಾರ್ಥಿಸು. ದೇವರಲ್ಲಿ ಎಷ್ಟು ನೀನು ಮೊರೆಯಿಟ್ಟರೆ ಅಷ್ಟು ನಿರ್ಮಲವಾಗುತ್ತದೆ ನಿನ್ನ ಮನಸ್ಸು. ಪರಿಶುದ್ಧವಾದ ನಿರ್ಮಲ ಮನಸ್ಸಿನಲ್ಲಿ ಭಗವಂತನು ಆವಿರ್ಭಾವವಾಗಿ ದರ್ಶನವೀಯುತ್ತಾನೆ.

ಪವಾಹಾರಿ ಬಾಬರು ಸ್ವಾಮಿ ವಿವೇಕಾನಂದರಿಗೆ ಹೇಳಿದಂತೆ ‘ಗುರುವಿನ ಪಾದಮಂದಿರದ ದ್ವಾರದೆಡೆ ನಾಯಿಯಂತೆ ಬಿದ್ದಿರಬೇಕು’ ಎಂದು. ಆ ಮಾತನ್ನು ಸ್ವಾಮೀಜಿ ನಮಗೆ ಮತ್ತೆ ಮತ್ತೆ ಹೇಳುತ್ತಿದ್ದರು. ಅನ್ನ ಹಾಕಲಿ ಬಿಡಲಿ, ತಲೆ ತಟ್ಟಿ ಮುದ್ದಿಸಲಿ, ಬೆನ್ನ ಮೇಲೆ ಬಡಿಯಲಿ, ನಾಯಿ ಯಜಮಾನನ ಮನೆ ಬಿಟ್ಟು ಹೋಗುವುದಿಲ್ಲ. ಹಾಗೆಯೆ ನಾವು ಭಗವಂತನ ಪಾದಾರವಿಂದದಲ್ಲಿ ಶರಣುಹೋಗಬೇಕು. ಯಾರು ಅವನ ಚರಣಕಮಲದಲ್ಲಿ ಶರಣಾಗಿ, ಏನೇ ಆಗಲಿ ಕೊನೆಯವರೆಗೂ ಅದನ್ನು ಬಿಡದೆ ಆಶ್ರಯಿಸಿ ಸೇವಿಸುತ್ತಾರೊ ಅಂತಹವರಿಗೆ ಭಗವತ್ ಕೃಪೆ ಸಿದ್ಧಿಸಿಯೇ ಸಿದ್ಧಿಸುತ್ತದೆ. ಆ ವಿಚಾರದಲ್ಲಿ ನಿನಗೆ ತಳಮಳ ಬೇಡ. ಏಕೆಂದರೆ ನೀನು ಅವನಲ್ಲಿ ಶರಣು ಹೊಕ್ಕಿದ್ದೀಯೆ; ಅವನ ಪವಿತ್ರನಾಮ ರೂಪವಾದ ಈ ಪುಣ್ಯ ಸಂಸ್ಥೆಯಲ್ಲಿ ಆಶ್ರಯಪಡೆದಿದ್ದೀಯೆ, ನಿನಗಿನ್ನು ಭಯಬೇಡ. ಗುರುಮಹಾರಾಜರು ಹೇಳುತ್ತಿದ್ದರು: ‘ಅಪ್ಪನ ಕೈಹಿಡಿದು ನಡೆಸುವ ಮಗುವಿಗೆ ಬೀಳುವ ಭಯವಿಲ್ಲ’. ಎಲ್ಲಿಯವರೆಗೆ ನೀನು ಅವನ ಈ ಆಶ್ರಯವನ್ನು ತ್ಯಜಿಸುವುದಿಲ್ಲವೋ ಅಲ್ಲಿಯವರೆಗೆ ಅವನು ನಿನ್ನನ್ನು ರಕ್ಷಿಸಿಯೆ ರಕ್ಷಿಸುತ್ತಾನೆ.

ನೀನು ಶ್ರೀರಾಮಕೃಷ್ಣರನ್ನು, ಅವರ ಪಾರ್ಥಿವ ಕಳೇಬರವನ್ನು ಕಣ್ಣಿಂದ ನೋಡದಿದ್ದರೂ ಅವರ ಚರಣದಾಸರಾದ ನಮ್ಮನ್ನು ನೋಡುತ್ತಿದ್ದೀಯೆ. ನಮ್ಮ ಬಾಯಿಂದ ಅವರ ಮಾತುಗಳನ್ನು ಕೇಳುತ್ತಿದ್ದೀಯೆ. ಇದು ನಿಜವಾಗಿಯೂ ನಿನ್ನ ಪುಣ್ಯವಿಶೇಷ: ಏಕೆಂದರೆ ಮುಂದಿನ ತಲೆಮಾರಿನ ಸಂನ್ಯಾಸಿಗಳಿಗೆ ಇದೂ ಅಲಭ್ಯವಾಗುತ್ತದೆ. ಪರಮಹಂಸರವನ್ನು ಕಾಣುವುದಿರಲಿ; ಅವರ ಅಂತರಂಗ ಶಿಷ್ಯರನ್ನೂ ಕಾಣುವುದಿಲ್ಲ. ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಸ್ವಾಮೀಜಿ ಈ ಮಹಾಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥಾರೂಪದ ಅಪರ ಶರೀರದಲ್ಲಿ ಶ್ರೀಗುರಮಹಾರಾಜರ ದಿವ್ಯಚೈತನ್ಯ ಸುಪ್ರಕಟವಾಗಿಯೆ ಅಭಿವ್ಯಕ್ತವಾಗಿದೆ, ಮತ್ತು ಜಗತ್ತಿನ ಕಲ್ಯಾಣಕ್ಕಾಗಿ ಅನೇಕ ಶತಮಾನಗಳವರೆಗೂ ಹಾಗೆಯೆ ಇರುತ್ತದೆ. ಇನ್ನು ಮುಂದೆ ಅವರು ತಮ್ಮ ಕೆಲಸವನ್ನೆಲ್ಲ ಈ ಸಂಸ್ಥೆಯ ಮೂಲಕ ನಡೆಸುತ್ತಾರೆ. ಮರೆಯದೆ ಸದಾ ನೆನಪಿನಲ್ಲಿಡು, ಸಂಸ್ಥೆಗೆ ತೋರುವ ನಿಷ್ಠೆ ಗುರುಮಹಾರಾಜರಿಗೆ ತೋರುವ ನಿಷ್ಠೆ. ಶ್ರೀರಾಮಕೃಷ್ಣರ ಪ್ರತ್ಯಕ್ಷ ಆಜ್ಞೆಗೆ ಅನುಸಾರವಾಗಿ ಸ್ವಾಮೀಜಿ ಈ ಧರ್ಮ ಸಂಸ್ಥೆಯನ್ನು ಕಟ್ಟಿದರು. ನಾವು ಹೀಗೆ ಮಾತನಾಡುತ್ತಿರುವುದೂ ಲೋಕಕಲ್ಯಾಣಾರ್ಥವಾಗಿ ಮತ್ತು ನಿನ್ನ ಶ್ರೇಯಸ್ಸಿಗಾಗಿ. ಸತ್ಯವಲ್ಲದ್ದು ನಮ್ಮ ಬಾಯಿಂದ ಬರುವುದಿಲ್ಲ. ನಾವು ಈ ಪ್ರಪಂಚಕ್ಕೆ ಬಂದಿರುವುದು ಜನರಿಗೆ ದಾರಿತಪ್ಪಿಸುವುದಕ್ಕಲ್ಲ.

ಈ ಮಹಾಸಂಸ್ಥೆಯಲ್ಲಿ ಇರುವವರೆಲ್ಲರೂ ಆಧ್ಯಾತ್ಮಿಕವಾಗಿ ಮುಂದುವರೆಯುತ್ತಿದ್ದಾರೆ; ಹಾಗೆಯೆ ನೀನೂ. ಗುರುದೇವನು ಶರಣಹೊಕ್ಕವರ ಮೇಲೆ ಕೃಪೆದೋರಿಯೆ ತೋರುತ್ತಾನೆ, ಇದನ್ನು ನಂಬು. ದೇಹ ಮನಸ್ಸು ಆತ್ಮ ಎಲ್ಲವನ್ನೂ ಯಾರು ಆತನಡಿಯಲ್ಲಿ ಸಂಪೂರ್ಣವಾಗಿ ಸಮರ್ಪಿಸುತ್ತಾರೊ ಅಂತಹವರನ್ನು ಸರ್ವವಿಧಿದಿಂದಲೂ ಸಂರಕ್ಷಿಸುತ್ತಾನೆ. ನೀನು ಈಶ್ವರ ಸಾಕ್ಷಾತ್ಕಾರಕ್ಕಾಗಿಯೂ ಶಾಂತಿಲಾಭಕ್ಕಾಗಿಯೂ ಸಂಸಾರತ್ಯಾಗ ಮಾಡಿ ಸಂನ್ಯಾಸ ಸ್ವೀಕಾರ ಮಾಡಿದ್ದೀಯೆ. ಏನು ಕಷ್ಟ ಬರಲಿ, ಅವನಲ್ಲಿ ಮೊರೆಯಿಡು. ಏನು ಸಂಕಟವೊದಗಲಿ, ಅವನನ್ನು ಮರೆಹೋಗು. ಅವನು ನಿನ್ನನ್ನು ಆಶೀರ್ವದಿಸಿ, ನಿನ್ನ ಮನಸ್ಸಿಗೆ ಶಾಂತಿ ಬರುವಂತೆ ಮಾಡಿಯೆ ಮಾಡುತ್ತಾನೆ.

ನೀನು ಮಾತ್ರ ಅವನ ಆಜ್ಞೆಯನ್ನು ಪರಿಪಾಲಿಸಬೇಕು. ಅವನು ಹಾಕಿಕೊಟ್ಟ ಹಾದಿಯಲ್ಲಿಯೇ ನಡೆಯಬೇಕು. ನೀನು ಸಂನ್ಯಾಸಿ. ಆದ್ದರಿಂದ ಕಾಮಿನಿ ಕಾಂಚನಗಳ ಮೋಹದಿಂದ ಬಹುದೂರವಾಗಿರಲು ಸರ್ವವಿಧದಿಂದಲೂ ಪ್ರಯತ್ನಿಸುವುದು ನಿನ್ನ ಆದ್ಯ ಕರ್ತವ್ಯ. ಪರಿಶುದ್ಧ ಹೃದಯ ಸರಳ ಸ್ವಭಾವ ಇವು ನಿನ್ನ ಹೃದಯ ಶ್ವಾಸಕೋಶಗಳಾಗಿರಬೇಕು. ಶ್ರೀಗುರು ಇನ್ನೆಲ್ಲವನ್ನೂ ಕ್ಷಮಿಸುತ್ತಾನೆ. ಆದರೆ ಆತ್ಮವಂಚನೆ ಮತ್ತು ಅನ್ಯವಂಚನೆ ಎರಡನ್ನು ಸಹಿಸುವುದಿಲ್ಲ. ವಂಚಕರಿಗೂ ವಂಚನೆಯ ಮಾರ್ಗದಲ್ಲಿ ನಡೆಯುವವರಿಗೂ ಇಲ್ಲಿ ಸ್ಥಳವಿಲ್ಲ. ಅವರು ಇಲ್ಲಿಗೆ ಸೇರಿದವರಲ್ಲ, ಶ್ರೀಗುರು ಅಂಥವರನ್ನು ಈ ಶ್ರೀಸಂಘದಲ್ಲಿರಲು ಬಿಡುವುದಿಲ್ಲ; ಅವರನ್ನು ಕಳೆಕೀಳುವಂತೆ ಕಿತ್ತೆಸೆಯುತ್ತಾನೆ. ಕಳೆಗಲ್ಲ; ಬೆಳೆಗೆ ಮಾತ್ರ ಇಲ್ಲಿ ಸ್ಥಾನ. ಋಜುಮನಸ್ಸರು ಮಾತ್ರ ಇಲ್ಲಿ ನಿಲ್ಲಬಲ್ಲರು.

ಸಂನ್ಯಾಸಿ: “ನಾನು ಎಂದೆಂದಿಗೂ ಗುರುಮಹಾರಾಜರ ದಿವ್ಯಾಶ್ರಯದಲ್ಲಿಯೆ ಇರುವಂತೆ ನನಗೆ ಆಶೀರ್ವಾದ ಮಾಡಬೇಕು. ಕೆಲವು ಸಾರಿ ನಾನು ಮಹಾಸಂಕಟದಲ್ಲಿ ಸಿಕ್ಕಿ ಒದ್ದಾಡುತ್ತೇನೆ. ಏಕೆಂದರೆ ಬರಬಾರದ ಆಲೋಚನೆಗಳು ಮನಸ್ಸಿನಲ್ಲಿ ಸುಳಿಯುತ್ತವೆ. ಅವುಗಳಿಂದ ಪಾರಾಗುವುದು ಹೇಗೆ ದಯಮಾಡಿ ಅನುಗ್ರಹಿಸಬೇಕು.”

ಮಹಾಪುರುಷಜಿ (ಸ್ವಾಮಿ ಶಿವಾನಂದರು) ಅತ್ಯಂತ ಸಕರುಣ ಧ್ವನಿಯಿಂದ ಸಂತೈಸಿದರು: ವತ್ಸ, ಅಂತಃಕರಣಪೂರ್ವಕವಾಗಿ ನಿನ್ನನ್ನು ಹರಸುತ್ತೇನೆ, ನೀನು ಎಂದೆಂದೂ ಗುರುದೇವನ ಪದತಲದ ಆಶ್ರಯದಲ್ಲಿಯೆ ನಿಲ್ಲು. ಯಾವುದು ಜನ್ಮಧಾರಣೆಯ ಪರಮೋದ್ದೇಶವೊ, ಯಾವುದು ಬದುಕಿನ ಪರಮ ಪ್ರಯೋಜನವೊ ಆ ಸಿದ್ಧಿ ನಿನಗಾಗಲಿ! ದುರಾಲೋಚನೆಗಳನ್ನು ನಿರ್ಲಕ್ಷಿಸಿಬಿಡು. ನಿನಗೆ ಗೊತ್ತಿಲ್ಲವೆ ಭಗವಾನ್ ಶ್ರೀ ರಾಮಕೃಷ್ಣರು ಪರಮಶುದ್ಧಿಯ ಪರಂಜ್ಯೋತಿ ಎಂದು? ಅವರ ದಿವ್ಯರೂಪವನ್ನು ಕುರಿತು ಧ್ಯಾನಿಸಿದರೆ, ಅವರ ದಿವ್ಯ ನಾಮ ಜಪವನ್ನು ಮಾಡಿದರೆ ದುರ್ಭಾವನೆಗಳೆಲ್ಲ ಲಜ್ಜೆಯಿಂದ ತಲೆತಗ್ಗಿಸಿ, ಕುಗ್ಗಿ ಕ್ಷಣಮಾತ್ರದಲ್ಲಿ ಅಳಿದುಹೋಗುತ್ತವೆ. ಮನಸ್ಸಿನಲ್ಲಿ ಅಶುದ್ಧ ಭಾವ ಸಂಚಾರವಾದೊಡನೆ, ಆತನಿಗೆ ಮೊರೆಯಿಡು, ಬೇಡು, ಪ್ರಾರ್ಥಿಸು. ‘ಹೇ ದೇವ, ನಾನು ದುರ್ಬಲ. ನನ್ನನ್ನು ಕಾಪಾಡು ನೀನು ಕಾಪಾಡದಿದ್ದರೆ ಮತ್ತೆ ಯಾರು ಕಾಪಾಡುತ್ತಾರೆ? ನಾ ನಿನ್ನ ದಾಸನಲ್ಲವೆ? ನಿನಗೆ ಶರಣಾಗಿಲ್ಲವೆ? ನಿನ್ನನ್ನು ಮೊರೆಹೊಕ್ಕಿಲ್ಲವೆ? ಎಂದು ಅಂಗಲಾಚಿ ಬೇಡಿಕೊ. ನಿನ್ನ ದೌರ್ಬಲ್ಯವನ್ನು ಕುರಿತು ಅವನಿಗೆ ಹೀಗೆಲ್ಲ ಹೇಳಿಕೊ. ನಿನ್ನ ಮೊರೆ ಅವನಿಗೆ ಕೇಳಿಸಿಯೆ ಕೇಳಿಸುತ್ತದೆ.

“ನೀನು ಬೆಳಗಾಗುವುದಕ್ಕೆ ಬಹಳ ಮೊದಲೆ ಹಾಸಿಗೆ ಬಿಟ್ಟೇಳುತ್ತೀಯೆಷ್ಟೆ? ಹಾಗೇ ಮಾಡಬೇಕು. ಸಂನ್ಯಾಸಿಯಾದವನು ಬೆಳಗಿನ ಜಾವ ಮೂರು ಅಥವಾ ನಾಲ್ಕು ಗಂಟೆಯ ಮೇಲೆ ನಿದ್ದೆ ಮಾಡಬಾರದು. ರಾತ್ರಿಯೂಟ ಬಹಳ ಹಗುರವಾಗಿರಬೇಕು. ಆಗ ಮೂರು ಮೂರುವರೆ ಗಂಟೆಗೆ ಎಚ್ಚರವಾಗಿಯೆ ಆಗುತ್ತದೆ; ಮನಸ್ಸಿಗೂ ಉಲ್ಲಾಸವಿರುತ್ತದೆ. ಗುರುಮಹಾರಾಜ್ ಹೇಳುತ್ತಿದ್ದರು: ‘ರಾತ್ರಿಯೂಟ ಉಪಾಹಾರ ಮಾತ್ರವಾಗಿರಬೇಕು’ ಎಂದು. ಅವರ ಸನ್ನಿಧಿ ಸೇರಿದ ಮೊದಲಿನಿಂದಲೂ ನಾವು ಅವರ ಉಪದೇಶದಂತೆ ಆಚರಿಸುತ್ತಿದ್ದೇವೆ.”

ಅಷ್ಟು ಹೊತ್ತಿಗೆ ಉಗ್ರಾಣದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದ ಸಾಧುವೊಬ್ಬರು ಒಳಗೆ ಬಂದು ಮಹಾಪುರಷಜಿಗೆ ಪ್ರಣಾಮಮಾಡಿ “ಯಾರೊ ಒಬ್ಬರು ಮಹನೀಯರು ಗತಿಸಿದ ತಮ್ಮ ಪತ್ನಿಯ ಹೆಸರಿನಲ್ಲಿ ಶ್ರೀರಾಮಕೃಷ್ಣರಿಗೆ ಪೂಜೆ ಸಲ್ಲಿಸಬೇಕೆಂದು ಸ್ವಲ್ಪ ಹಣವನ್ನು ಕಾಣಿಕೆ ಕೊಟ್ಟಿದ್ದಾರೆ” ಎಂದು ತಿಳಿಸಿದರು.

ಅದಕ್ಕೆ ಸ್ವಾಮಿ ಶಿವಾನಂದರು ಹೀಗೆ ಹೇಳಿದರು. “ಗುರುಮಹಾರಾಜರು ಅವರ ಕರ್ಮಕ್ಕೆ ಸಂಬಂಧಿಸಿದ ಯಾವ ರೂಪದ ಕಾಣಿಕೆಯನ್ನೂ ಸ್ವೀಕರಿಸಲು ಸಮರ್ಥರಾಗುತ್ತಿರಲಿಲ್ಲ. ಅದನ್ನು ತಿಳಿದೂ ತಿಳಿದೂ ಈ ಹಣವನ್ನು ಅವರ ಪೂಜೆಗೆ ಹೇಗೆ ನಿವೇದಿಸಲು ಸಾಧ್ಯ? ಹಾಗೆಂದು ಆ ಭಕ್ತರಿಗೆ ತಿಳಿಸು. ಇಲ್ಲಿ ನಮ್ಮ ಗುರು ಇರುವುದು ಬರಿಯ ಒಂದು ಕಲ್ಪನೆಯಲ್ಲ, ಇಲ್ಲಿರುವುದು ಅವರ ಸಾಕ್ಷಾತ್ ಸಾನ್ನಿಧ್ಯ. ಸೇವೆಯಲ್ಲಿ ಏನಾದರೂ ಅಪಚಾರ ಅಚಾತುರ್ಯ ನಡೆದರೆ ತತ್‌ಕ್ಷಣವೆ ನಮಗೆ ತಿಳಿಯುವಂತೆ ಮಾಡುತ್ತಾರೆ.”

* * *