ಆ ಮಹಾವ್ಯೋಮವೀ ಮರ್ತ್ಯ ಭೂ ತತ್ತ್ವಕ್ಕೆ
ಕಣ್ಣು ಕಿವಿ ಮೂಗು ಬಾಯಿಂದ್ರಿಯಂಗಳನಪ್ಪಿ,
ಈರಡಿಯ ಮನುಜತೆಗೆ ಕೃಪೆಯಿಂ ಕುನುಗಲೊಪ್ಪಿ,
ನಮ್ಮ ನಮನದೊಳಿಳಿದು ಪೂಜ್ಯಪಾದತ್ವಕ್ಕೆ

ಈ ದಿವ್ಯ ಗುರುರೂಪದಿಂ ತಾನವತರಿಸಿತಿಲ್ಲಿ :
ಮಿಣಿ ಕಡಿದು ಬಾವಿಯಾಳದ ತಳದ ಪಂಕದೊಳ್
ಗಾಳಿಬೆಳಕುಗಳುಳಿದ ತಿಮಿರ ಪರ‍್ಯಂಕದೊಳ್
ನಿದ್ದೆಗದ್ದಿಹ ಕಲಶಚೇತನದ ಗುಹೆಯಲ್ಲಿ

ತಪಿಸುತಿಹ ನನ್ನಾತ್ಮಮಂ, ಪಾತಾಳಗರುಡದೋಲ್
ತೋಳ್ ಸುತ್ತಿ ಪಿಡಿದೆತ್ತು, ಹೇ ಕರ್ಬ್ಬೊನ್ ದಯೆಯ ಬಂಧು,
ಕರುಣಾ ನೃಸಿಂಹೋಗ್ರ ಭಗವನ್ ನಖಾಗ್ರದೋಲ್!
ನಿನ್ನ ಜ್ಯೋತಿರ್ವಕ್ಷದಮೃತವಜ್ರದಿ ಮಿಂದು

ಮುಳುಗಿ, ತುಂಬುತೆ, ಪಡೆವೆನಾಂ ಸುಧಾಪೂರ್ಣತ್ವಮಂ,
ಭುವನವಿಗ್ರಹ ರೂಪಿ ತವ ಚರಣ ಪಾದ್ಯತ್ವಮಂ!

ಕುವೆಂಪು
(೪-೧-೧೯೫೧)

* * *