ಆಧ್ಯಾತ್ಮಿಕ ವಿಭೂತಿಪುರುಷರ ಜೀವನಪರಿಚಯ ಮಾಡಿಕೊಡುವಾಗಲೆಲ್ಲ ನಾವು ಕೆಲವು ಅಲಂಘನೀಯ ಅನಿವಾರ್ಯಗಳಿಗೆ ಒಳಗಾಗುತ್ತೇವೆ. ಅವರ ಬದುಕಿನ ಬಹುಭಾಗ ಬಹಿರ್ಲೋಕಕ್ಕೆ ಸೇರಿದುದಲ್ಲ. ಅಲ್ಲಿ ನಡೆಯುವ ಘಟನಾವಳಿ ಹೊರಗಣ್ಣಿಗೆ ಗೋಚರವಾಗತಕ್ಕದಲ್ಲ. ಆ ಅತೀಂದ್ರಿಯ ಪ್ರಪಂಚದ ಕೆಲಸ ಕಾರ್ಯಗಳನ್ನು ದೃಗ್ಗೋಚರ ಸೇಂದ್ರಿಯ ಜಗತ್ತಿನ ಕರ್ಮ ವ್ಯಾಪಾರಾದಿಗಳನ್ನು ಅಳೆಯುವಂತೆ ತೂಗುವಂತೆ ತೂಗಿ ಅಳೆಯಲಾಗುವುದಿಲ್ಲ. ಅಲ್ಲದೆ ಈ ಲೋಕಕ್ಕೆ ಅನ್ವಯವಾಗುವ ಅಳತೆಯ ಮತ್ತು ತೂಕದ ಮೂಲಮಾನಗಳು ಆ ಲೋಕದ ಸ್ವರೂಪಕ್ಕೆ ಒಂದಿನಿತೂ ಹೊಂದದೆ ಹೋಗಬಹುದು. ಇಲ್ಲಿಯ ಘಟನೆ ಮತ್ತು ನಡತೆಗಳಿಗೆ ಬೆಲೆ ಕಟ್ಟುವಂತೆ ಅಲ್ಲಿಯವಕ್ಕೆ ಬೆಲೆ ಕಟ್ಟುವುದೂ ಅರ್ಥಹೀನ ಮತ್ತು ಹಾಸ್ಯಾಸ್ಪದ.

ಲೋಕದೃಷ್ಟಿಗೆ ಅಲ್ಪವಾದುದು ಆತ್ಮದೃಷ್ಟಿಗೆ ಭೂಮವಾಗುತ್ತದೆ. ಲೋಕ ಗೌರವಕ್ಕೆ ಪಾತ್ರವಾಗಿ ಇಲ್ಲಿಯ ಸ್ತುತಿಗೆ ಮೆಚ್ಚುಗೆಗೆ ಭಾಜನವಾದದ್ದು ಆತ್ಮಶ್ರೀಯ ದೃಷ್ಟಿಗೆ ಅತ್ಯಲ್ಪವಾಗಿ ಯಃಕಶ್ಚಿತವಾಗಿ ಅನರ್ಥಕರವಾಗಿ ತಿರಸ್ಕಾರಾರ್ಹವಾಗಿ ತೋರಬಹುದು. ಆ ಶ್ರೇಯಸ್ಸಿನ ಸಾಹಸ ಈ ಪ್ರೇಯಸ್ಸಿನ ಕಣ್ಣಿಗೆ ಗಾಳಿ ಗುದ್ದುವ ಹುಚ್ಚುತನದಂತೆ ನಗೆಗೀಡಾಗುತ್ತದೆ. ಯಾರೂ ಇದುವರೆಗೆ ಏರಲಾಗದಿದ್ದ ಹಿಮಗಿರಿಯ ಶಿಖರವನ್ನೇರಿ ನಿಂತವನ ಸಾಧನೆ ಸಾಹಸ ಸಿದ್ಧಿಗಳು ಜನರಿಗೆ ಹೇಗೆ ತಟಕ್ಕನೆ ಸುಷ್ಪಷ್ಟವಾಗಿ ಮುಷ್ಟಿಗ್ರಾಹ್ಯವೆನ್ನುವಂತೆ ಗೋಚರವಾಗುತ್ತವೆಯೊ ಹಾಗೆ ಅರಿಷಡ್ವರ್ಗಗಳನ್ನು ಗೆದ್ದು, ಮಾಯೆಯ ಆವರಣಗಳನ್ನು ಸೀಳಿ, ಲೋಕದಿಂದ ಲೋಕಕ್ಕೇರಿ ಬ್ರಹ್ಮ ಸಾಕ್ಷಾತ್ಕಾರ ಮಾಡಿಕೊಳ್ಳುವ ಮಹಾಯೋಗಿಯ ಸಾಧನೆ ಸಿದ್ಧಿಗಳ ಸಾಹಸವಾಗಲಿ ದಿಗ್ವಿಜಯವಾಗಲಿ ಸಾಮಾನ್ಯ ಜನಪ್ರಜ್ಞೆಗೆ ಒಳಗಾಗುವುದು ಅತ್ಯಪೂರ್ವ. ಅಲ್ಲದೆ ಲೋಕಸಾಹಸಗಳನ್ನು ಕೈಕೊಳ್ಳುವವರು ತಮ್ಮನ್ನು ತಾವು ಪ್ರಕಟಿಸಿಕೊಳ್ಳುವಂತೆ ಪ್ರದರ್ಶಿಸಿಕೊಳ್ಳುವಂತೆ ಪ್ರಶಂಸಿಸಿಕೊಳ್ಳುವಂತೆ ಮೆರೆಯುವುದಿಲ್ಲ. ತಮ್ಮನ್ನು ತಾವು ಮರೆಯುವುದೆ ಅವರ ಸಹಜ ಸ್ವಭಾವ ಮತ್ತು ವಿಶೇಷ ಲಕ್ಷಣ. ಜೊತೆಗೆ ತಮ್ಮನ್ನು ತಾವು ಮುಚ್ಚಿಕೊಳ್ಳುವ ಪ್ರವೃತ್ತಿಯೂ ಅವರಲ್ಲಿ ಬೇರೂರಿರುವುದರಿಂದ ಅವರ ಇರವು ಬಹಿರಂಗಕ್ಕೆ ಬರುವುದೆ ಕಷ್ಟ. ಒಂದು ವೇಳೆ ಬಂದರೂ ಅದಕ್ಕೆ ಬಹುಕಾಲ ಬೇಕಾಗುತ್ತದೆ. ಅಷ್ಟರಲ್ಲಿ, ಅನೇಕ ವೇಳೆ, ಅವರು ತಮ್ಮ ಇಹಲೋಕದ ದೈಹಿಕ ಯಾತ್ರೆಯಿಂದ ಬಿಡುಗಡೆ ಹೊಂದಿಯೂ ಇರುತ್ತಾರೆ. ತಮ್ಮನ್ನು ತಾವೆ ಇಲ್ಲಗೈಯುವುದನ್ನೆ ಸಾಧನೆಯ ಸರ್ವೋಚ್ಚಗಂತವ್ಯವನ್ನಾಗಿ ಮಾಡಿಕೊಂಡಿರುವ ಅವರಿಗೆ ತಮ್ಮ ಅನೇಕ ಜನ್ಮಗಳ ಅಸಂಖ್ಯನಾಮಗಳಲ್ಲಿ ಯಾವುದೊ ಒಂದು ಮಾತ್ರವಾಗಿರುವ ಈ ಜನ್ಮದ ಈ ಒಂದು ಹೆಸರಾಗಲಿ, ಅದರ ಕೀರ್ತಿಯಾಗಲಿ, ಅದನ್ನು ಪೋಷಿಸುವ ಅಥವಾ ಶಾಶ್ವತಗೈಯುವ ಪ್ರಯತ್ನವಾಗಲಿ, ಕನಷ್ಠವನ್ನೆ ಹೇಳುವುದಾದರೆ, ಅತ್ಯಂತ ಅಪ್ರಕೃತವಾಗುತ್ತದೆ.

ಆದರೆ ಅವರ ತಪಃಪ್ರಭಾವ ಲೋಕದ ಬದುಕಿನ ಮೇಲೆ ತನ್ನ ಚಿರಮುದ್ರೆಯನ್ನೊತ್ತಿ ಅದರ ದಾರಿಯನ್ನೂ ಗತಿಯನ್ನೂ ನಿರ್ಣಯಿಸುವುದರಲ್ಲಿ ನಿಸ್ಸಂದೇಹವಾಗಿ ಪರಿಣಾಮಕಾರಿಯಾಗುತ್ತದೆ. ಭೂನಿವಾಸಿಗಳ ಕಣ್ಣಿಗೆ ಕಾಣಿಸದೆ ನಿಸ್ಸಂದೇಹವಾಗಿ ಪರಿಣಾಮಕಾರಿಯಾಗುತ್ತದೆ. ಭೂನಿವಾಸಿಗಳ ಕಣ್ಣಿಗೆ ಕಾಣಿಸದೆ ಮನಸ್ಸಿಗೂ ಅಗೋಚರವಾಗಿರುವ ಅತಿದೂರದ ನಕ್ಷತ್ರದ ಪ್ರಭಾವ ಭೂಮಿಯ ಮತ್ತು ಅಲ್ಲಿಯ ನಿವಾಸಿಗಳ ಜೀವನದ ಮೇಲೆ ಹೇಗೆ ಪರಿಣಾಮಕಾರಿ ಆಗಿಯೆ ಆಗುತ್ತದೆಯೊ ಹಾಗೆ. ಅವರ ಹೆಸರನ್ನು ಕ್ಷಣಭಂಗುರವಾದ ಪತ್ರಿಕೆಯ ಜಲಲಿಪಿ ತನ್ನ ಕೂಷ್ಮಾಂಡಾಕ್ಷರಗಳಲ್ಲಿ ಪ್ರಕಟಿಸದಿರಬಹುದು; ರಾಷ್ಟ್ರವು ವಾರ್ಷಿಕವೂ ಸಾರ್ವಜನಿಕವೂ ಆದ ಜನ್ಮೋತ್ಸವಾದಿ ರೂಪದ ಶಿಲಾಲಿಪಿಯಲ್ಲಿ ಅವರ ಗೌರವದ ಪ್ರತಿಮೆಯನ್ನು ಕಂಡರಿಸದಿರಬಹುದು; ಇತಿಹಾಸಕಾರನೂ ಅವರಿಗಾಗಿ ತನ್ನ ಅಮೂಲ್ಯ ಲೇಖನಿಯ ಮಷೀವ್ಯಯ ಮಾಡಲು ಮರೆತುಬಿಡಬಹುದು ಅಥವಾ ಒಪ್ಪದಿರಬಹುದು. ಆದರೂ ಅವರ ತಪೋವೃಕ್ಷದ ಕ್ಷೀರಶಕ್ತಿ ಲೋಕದ ಲಕ್ಷಾಂತರ ತಪ್ತಜೀವರಾಶಿಗಳಿಗೆ ಪೀಯೂಷದಾನಮಾಡುತ್ತಿರುತ್ತದೆ. ನೀರವವಾಗಿ ನಿರಾಡಂಬರವಾಗಿ ಜಗತ್ಕಲ್ಯಾಣಕರವಾಗಿ ಲೋಕಸಂಗ್ರಹ ಮಾಡುವ ದಯಾಮಯವಾದ ಭಗವತ್ ಕಾರ್ಯದಲ್ಲಿ ನಿರಂತವೂ ದಿವ್ಯಕರ್ಮಿಯಾಗಿರುತ್ತದೆ.

ಅಂತಹ ಭಗವಚ್ಚೇತನವೊಂದರ ಪರಿಚಯಮಾಡಿಕೊಡುವ ಪ್ರಯತ್ನದಲ್ಲಿ ಪ್ರಾರ್ಥನಾಭಂಗಿಯಲ್ಲಿ ಮೊಳಕಾಲೂರಿರುವ ಈ ಮುನ್ನುಡಿ ವಿಫಲವಾದರೂ ಚಿಂತೆಯಿಲ್ಲ. ಏಕೆಂದರೆ ಅಂತಹ ವಿಫಲತೆ ಮೇಲೆ ಹೇಳಿರುವುದಕ್ಕೆ ಮತ್ತೊಂದು ನಿದರ್ಶನವೂ ಸಾಕ್ಷಿಯೂ ಆಗಿ ತನ್ನ ಸಫಲತೆಯನ್ನೆ ಸಮರ್ಥಿಸಿದಂತಾಗುತ್ತದೆ.

ಶ್ರೀರಾಮಕೃಷ್ಣರ ಅಂತರಂಗ ಶಿಷ್ಯಕೋಟಿಗೆ ಸೇರಿದವರಲ್ಲಿ ಸ್ವಾಮಿ ವಿವೇಕಾನಂದರು ತಾವು ಜಗತ್ ಪ್ರಸಿದ್ಧರಾಗುವ ನಿಮಿತ್ತದಿಂದಲೆ ತಮ್ಮ ಗುರುದೇವನ ಹೆಸರಿನ ನೆಲದರಿಕೆಗೂ ಕಾರಣರಾದರೆಂಬುದು ಸರ್ವವಿದಿತ ಇತಿಹಾಸದ ವಿಷಯವಾಗಿದೆ. ಪರಮಹಂಸರ ಸಹಧರ್ಮಿಣಿಯಾಗಿ ಎಲೆಮರೆಯ ಹೂವಾಗಿದ್ದ ಶ್ರೀ ಶಾರಾದಾದೇವಿಯವರು ಗುರುದೇವನ ಮಹಾ ಸಮಾಧಿಯ ಅನಂತರ ಅವರ ಶಿಷ್ಯವರ್ಗದ ಪೂಜೆಗೆ ಪಾತ್ರರಾಗುವ ನಿಮಿತ್ತದಿಂದ ಲೋಕಲೋಚನಕ್ಕೆ ಗೋಚರವಾಗತೊಡಗಿ ಶ್ರೀ ಶ್ರೀಮಾತೆ ಎಂಬ ಮಹಾ ಗೌರವಕ್ಕೆ ಪಾತ್ರರಾಗಿ ಕೀರ್ತಿವೆತ್ತಿದ್ದಾರೆ. ತಪಸ್ಯೆಯಲ್ಲಾಗಲಿ ಸಾಧನೆಯಲ್ಲಾಗಲಿ ಗುರುಕೃಪೆಗೆ ಪಾತ್ರವಾಗುವುದರಲ್ಲಾಗಲಿ ಲೋಕಸೇವೆಯಲ್ಲಾಗಲಿ ಆತ್ಮಶ್ರೀಯಲ್ಲಾಗಲಿ ಸ್ವಾಮಿ ವಿವೇಕಾನಂದರಿಗೆ ಯಾವ ವಿಧದಿಂದಲೂ ಹೆಚ್ಚೇನೂ ದ್ವಿತೀಯರಲ್ಲದ ಇತರ ಅಂತರಂಗ ಶಿಷ್ಯವರೇಣ್ಯರ ಹೆಸರಾಗಲಿ ಜೀವನವಾಗಲಿ ವಿಶಾಲಲೋಕದ ಕಿವಿಗೆ ಇನ್ನೂ ವಿಶೇಷವಾಗಿ ಬಿದ್ದಿಲ್ಲ. ಬೀಳುವುದರ ಅವಶ್ಯಕತೆಯೂ ಇಲ್ಲವೆಂದೆ ತೋರುತ್ತದೆ. ಬೀಳಲೇಬೇಕೆಂದು ಹಂಬಲಿಸಿ ಹಟಮಾಡುವುದೂ ನಮ್ಮ ಎಂದರೆ ಪ್ರಾಪಂಚಿಕರ ಕೀರ್ತಿಶನಿಯ ವ್ಯಾಮೋಹದ ಮತ್ತು ಪ್ರಲೋಭನದ ಲಕ್ಷಣವಾಗುತ್ತದೆ.  ಏಕೆಂದರೆ ಅವರು ತಮ್ಮ ಬದುಕನ್ನೆಲ್ಲ ತಮ್ಮ ಪ್ರತ್ಯೇಕತೆಯ ನಿರ್ಮೂಲನಕ್ಕಾಗಿಯೆ ಸವೆಸಿ, ಸಮರ್ಪಿಸಿ, ತಮ್ಮತನವನ್ನು ಸಂಪೂರ್ಣವಾಗಿ ಗುರುಚರಣಕರ್ಪಿಸಿ, ತಮ್ಮ ಬೇರೆಯತನವನ್ನು ಬೇರುಳಿಯದಂತೆ ಕಿತ್ತು ಭಗವಂತನಲ್ಲಿ ಐಕ್ಯರಾಗಿದ್ದಾರೆ.

ಆದರೂ ಅವರನ್ನು ಕಾಣುವ, ಅವರ ಚರಣತಲದಲ್ಲಿ ದೀಕ್ಷೆಗೊಳ್ಳುವ, ಅವರ ಅನುಗ್ರಹಕ್ಕೆ ಪಾತ್ರರಾಗುವ ಅಪೂರ್ಣ ಭಾಗ್ಯಕ್ಕೆ ಭಾಜನರಾಗಿರುವವರು ಅವರ ಸಂವಾದ ಸಾನ್ನಿಧ್ಯಗಳು ಸೂಸುವ ಶಾಂತಿಗೆ ಇತರರೂ ಪಾಲುಗಾರರಾಗಿ ಉದ್ಧಾರವಾಗಲಿ ಸುಖಿಗಳಾಗಲಿ ಎಂದು ಆಶಿಸುವುದೂ ಅದಕ್ಕಾಗಿ ಶ್ರಮಿಸುವುದೂ ಮನುಷ್ಯ ಜನ್ಮವೆತ್ತಿದ್ದಕ್ಕೆ ಕೈಕೊಳ್ಳಬೇಕಾದ ಧರ್ಮ, ಕರ್ತವ್ಯಕರ್ಮ.

ಸ್ವಾಮಿ ಶಿವಾನಂದರ ಈ ಮಾತುಕತೆ ಬರವಣಿಗೆಯ ರೂಪಕ್ಕೆ ತಿರುಗುತ್ತವೆ ಎಂದಾಗಲಿ ಗ್ರಂಥರೂಪಧಾರಣೆಮಾಡಲಿ ಎಂಬ ಉದ್ದೇಶದಿಂದಾಗಲಿ ಹೊರ ಹೊಮ್ಮಿದುವಲ್ಲ. ತುಂಬು ಬಾಳಿನ ಪರಿಣತ ಮನಸ್ಸಿನ ಪರಿಪಕ್ವ ಹೃದಯದ ಸಿದ್ಧಜೀವವೊಂದು ಬದ್ಧ ಜೀವರ ಉದ್ಧಾರಕ್ಕಾಗಿ ದಯೆಯಿಂದ ಕರುಣೆಯಿಂದ ಕನಿಕರದಿಂದ ಮರುಕದಿಂದ ಉತ್ತೇಜನ ರೂಪವಾಗಿ, ಉದ್ಭೋಧನ ಕಾರಣವಾಗಿ, ಬಳಿಗೆ ಬಂದವರಿಗೆ, ನೊಂದವರೊಡನೆ, ಆಡಿದ ಮಾತುಗಳಿವು. ಅವುಗಳಲ್ಲಿ ಶಾಸ್ತ್ರದ ಕ್ರಮವಿಲ್ಲದಿರಬಹುದು; ಆದರೆ ತತ್ತ್ವದ ಆಳವಿದೆ; ಹೃದಯದ ತಮಸ್ಸನ್ನು ಪರಿಹರಿಸಿ ಜ್ಯೋತಿಃಸ್ಥಾಪನೆ ಮಾಡುವ ಶಕ್ತಿಯಿದೆ; ಎಂತಹ ಶಾಸ್ತ್ರೀಯವಾದ ಉಪನ್ಯಾಸದಿಂದಲೂ ಸಾಧ್ಯವಲ್ಲದ ಶಾಂತಿ ಸಮಾಧಾನಗಳನ್ನು ನೇರವಾಗಿ ಹೃದಯಕ್ಕೆ ತಂದುಕೊಡುವ ಮಾಂತ್ರಿಕತೆಯಿದೆ; ಭಕ್ತಿಯನ್ನುದ್ದೀಪಿಸಿ ಭಗವಂತನೆಡೆಗೆ ನಮ್ಮನ್ನು ಕೊಂಡೊಯ್ಯುವ ದಿವ್ಯತೆಯಿದೆ.

ಯಾರ ಈ ಸಾಧಾರಣವಾದ ದೈನಂದಿನ ಮಾತುಕತೆಗಳಲ್ಲಿಯೂ ದಿವ್ಯಸ್ಫೂರ್ತಿ ಮೈದೋರುತ್ತಿದೆಯೊ ಆ ಮಹಾಪುರುಷನ ಜೀವನ ಕಥೆ ನಮಗೆ ಬರಿಯ ಕುತೂಹಲ ಮಾತ್ರ ವಿಷಯವಾಗುವುದಿಲ್ಲ. ಅದನ್ನು ತಿಳಿದುಕೊಳ್ಳುವುದರಿಂದಲೇ ನಮ್ಮ ಹೃದಯದ್ವಾರ ತೆರೆದು ಆ ದಿವ್ಯ ವಾಣಿಗೆ ಅಲ್ಲಿ ಸುಲಭವೂ ಆದರಪೂರ್ವಕವೂ ಆದ ಪ್ರವೇಶ ದೊರೆಯುತ್ತದೆ. ಅರ್ಥವಾಗುತ್ತದೆ. ಯಾರೋ ಆಡಿದ ಮಾತಾಗುತ್ತಿದ್ದುದೂ ‘ಆಪ್ತ’ನೊಬ್ಬನ ‘ಆಪ್ತವಾಕ್ಯ’ವಾಗಿ ಪರಿಣಮಿಸಿ, ಅತ್ಯಂತ ಪರಿಣಾಮಕಾರಿಯಾಗುತ್ತದೆ.

ಒಮ್ಮೆ ೧೯೨೩ರಲ್ಲಿ ಸ್ವಾಮಿ ಶಿವಾನಂದರೊಡನೆ ಮಾತನಾಡುತ್ತಿದ್ದ ಕೆಲವು ತರುಣರಲ್ಲಿ ಒಬ್ಬನು ಕುತೂಹಲಕ್ಕಾಗಿ ಅವರಿಗೆ ವಯಸ್ಸು ಎಷ್ಟು ಎಂದು ಕೇಳಿದನು. ಅದಕ್ಕೆ ಅವರು “ನೀನು ಕೇಳುತ್ತಿರುವುದು ದೇಹದ ವಯಸ್ಸನ್ನಲ್ಲವೆ? ನನಗೆ ಅಷ್ಟು ಸರಿಯಾಗಿ ಗೊತ್ತಿಲ್ಲ. ಹೆಚ್ಚು ಕಡಿಮೆ ಎಪ್ಪತ್ತು ಎಪ್ಪತ್ತೆರಡರ ಹತ್ತಿರ ಇರಬಹುದು” ಎಂದು ಹೇಳಿದರು. ವಾಸ್ತವವಾಗಿಯೂ ಅವರು ಹುಟ್ಟಿದ ವರುಷ ಯಾವುದೊ ಅದು ಸರಿಯಾಗಿ ಗೊತ್ತಿಲ್ಲ. ಅದರ ವಿಚಾರವಾಗಿ ಅವರು ಸಂಪೂರ್ಣ ಅಲಕ್ಷ್ಯದಿಂದಿದ್ದರು. ಸುಮಾರು ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಅವರು ಜನ್ಮವೆತ್ತಿದರೆಂದು ಅವರ ಜೀವನ ವಿಷಯ ಬರೆದವರು ಊಹಿಸಿದ್ದಾರೆ. ಅವರು ಹುಟ್ಟಿದ ತಿಥಿಯನ್ನು ಮಾತ್ರ ಮಾರ್ಗಶೀರ್ಷ ಏಕಾದಶಿ ಎಂದು ನಿರ್ಣಯಿಸಿ ವರ್ಷವರ್ಷವೂ ಅವರ ಶಿಷ್ಯರು ಆ ದಿನವನ್ನು ಗುರುವಿನ ಜನ್ಮೋತ್ಸವದ ದಿವಸವನ್ನಾಗಿ ಆಚರಿಸುತ್ತಿದ್ದಾರೆ.

‘ಸ್ವಾಮಿ ಶಿವಾನಂದ’ ಎಂಬುದು ಅವರ ಸಂನ್ಯಾಸಾಂಕಿತ. ಆದರೆ ಅವರ ಶಿಷ್ಯಕೋಟಿಗೆ ಪರಿಚಿತವಾಗಿರುವ ಹೆಸರು ‘ಮಹಾಪುರುಷ ಮಹಾರಾಜ್’. ಅವರ ಪೂರ್ವಾಶ್ರಮದಲ್ಲಿ ಅವರ ತಂದೆ ತಾಯಿ ಇಟ್ಟಿದ್ದ ಹೆಸರು ‘ತಾರಕನಾಥ ಘೋಷಾಲ್.’

ಅವರಿಗೆ ‘ಮಹಾಪುರುಷ’ ಎಂದು ಹೆಸರು ಬರಲು ಕಾರಣವಾದ ಸನ್ನಿವೇಶ ತುಂಬ ಧ್ಯಾನಯೋಗ್ಯವಾದುದಾಗಿದೆ. ಆ ಸಂದರ್ಭವನ್ನು ಕುರಿತು ಅವರೆಹೇಳಿದಾಗ ಅದೇನೊ ಬಹಳ ಸಾಮಾನ್ಯವಾದುದು ಎಂಬಂತೆ ಮಾತನಾಡಿದ್ದರೂ ನಮಗೆ ಮಾತ್ರ ಅದು ಪರಿಭಾವಿಸಿದಷ್ಟೂ ಮಹತ್ತರವಾಗಿ ತೋರುತ್ತದೆ. ತಾರಕನಾಥ ಘೋಷಾಲನಿಗೆ ಮದುವೆಯಾಗಿತ್ತು. ಆದರೆ ಆತನ ಮನಸ್ಸೆಲ್ಲ ದಕ್ಷಿಣೇಶ್ವರದ ಗುರುದೇವನಿಗೆ ಸಮರ್ಪಿತವಾಗಿದ್ದುದರಿಂದ ಗಂಡ ಹೆಂಡಿರ ಲೌಕಿಕ ಸಂಬಂಧದ ಕಡೆಗೆ ಅದು ಒಲೆಯಲೊಪ್ಪಲಿಲ್ಲ. ಆದರೂ ದಕ್ಷೀಣೇಶ್ವರದಿಂದ ಮತ್ತೆ ಮತ್ತೆ ಮನೆಗೆ ಹೋಗಬೇಕಾಗುತ್ತಿತ್ತು. ಮನೆಗೆ ಹೋದಾಗ ರಾತ್ರಿಯನ್ನೆಲ್ಲ ದೇವರ ನಾಮ ಜಪ ಮಾಡುತ್ತಾ ಹೇಗೋ ಕಳೆಯುತ್ತಿದ್ದನು. ಪತಿಯ ಆ ವಿಲಕ್ಷಣ ವರ್ತನೆಯನ್ನು ಕಂಡು ಅವನ ಹೆಂಡತಿಗೆ ತುಂಬ ದುಃಖವಾಗಿ ಅಳುತ್ತಿದ್ದಳು. ಅದನ್ನು ನೋಡಿ ತಾರಕನಾಥನಿಗೂ ತುಂಬ ಸಂಕಟವಾಗುತ್ತಿತ್ತು. ಒಂದು ದಿನ ಇದ್ದ ವಿಚಾರವನ್ನೆಲ್ಲ ಶ್ರೀರಾಮಕೃಷ್ಣರೊಡನೆ ಹೇಳಿ ‘ನನ್ನ ಲೌಕಿಕ ಬಂಧನ ಹರಿಯುವಂತೆ ಕೃಪೆಮಾಡಬೇಕು’ ಎಂದು ಅವರನ್ನು ಪ್ರಾರ್ಥಿಸಿದರು. ಪರಮಹಂಸರು ಒಂದು ವ್ರತಾಚಾರಣೆಮಾಡಲು ಉಪದೇಶದಮಾಡಿ ‘ನೀನೇನೂ ಹೆದರಬೇಡ. ನಿನ್ನನ್ನು ರಕ್ಷಿಸಲು ನಾನಿದ್ದೇನೆ. ನನ್ನನ್ನು ಧ್ಯಾನಿಸುತ್ತ ವ್ರತವನ್ನು ಆಚರಿಸು. ನಿನಗೆ ಯಾವ ಅಪಾಯವೂ ಆಗುವುದಿಲ್ಲ. ಒಂದೇ  ಕೋಣೆಯಲ್ಲಿ ನಿನ್ನ ಹೆಂಡತಿಯ ಜೊತೆಯಲ್ಲಿಯೆ ನೀನು ಮಲಗಿದರೂ ನಿನಗೆ ಯಾವ ಅಪಾಯವೂ ತಟ್ಟುವುದಿಲ್ಲವೆಂದು ಭರವಸೆ ಕೊಡುತ್ತೇನೆ. ಅಷ್ಟೇ ಅಲ್ಲ, ಅದಕ್ಕೆ ಬದಲಾಗಿ ನಿನ್ನ ವೈರಾಗ್ಯ ಬುದ್ಧಿ ಇನ್ನೂ ಪ್ರೋಜ್ವಲವಾಗುವುದನ್ನೂ ನೀನು ನೊಡಬಹುದು’ ಎಂದು ಧೈರ್ಯ ಹೇಳಿದರು.

ಪರಮಹಂಸರ ಉಪದೇಶದಂತೆ ಅವರು ಆಚರಿಸಿ ಯಾವ ಅಪಾಯಕ್ಕೂ ಒಳಗಾಗಿದ್ದ ಸಂಗತಿಯನ್ನು ಸ್ವಾಮಿ ಶಿವಾನಂದರು ಒಮ್ಮೆ ಸ್ವಾಮಿ ವಿವೇಕಾನಂದರಿಗೆ ಯಾವುದೊ ಮಾತಿನ ಮಧ್ಯೆ ಪ್ರಾಸಂಗಿಕವಾಗಿ ಹೇಳಿದಾಗ ಅವರು ಅತ್ಯಂತ ವಿಸ್ಮಿತರಾಗಿ ‘ಅದೇನು ಅಲ್ಪ ವಿಷಯವೆ? ಅದು ಮಹಾಪುರುಷನ ಲಕ್ಷಣ. ನೀವು ನಿಜವಾಗಿಯೂ ಮಹಾಪುರುಷ!’ ಎಂದರಂತೆ. ಅದುವರೆಗೆ ‘ತಾರಕ್‌ ದಾ’ ಎಂದು ಕರೆಯುತ್ತಿದ್ದವರು ಆಮೇಲೆ ‘ಮಹಾಪುರುಷ!’ ಎಂದೇ ಕರೆಯಲು ಪ್ರಾರಂಭಮಾಡಿದರಂತೆ. ಹೀಗೆ ಅನ್ವರ್ಥವಾಗಿ ಮೂಡಿದ ಆ ಹೆಸರು ಅಂಕಿತವೂ ಆಗಿ ಪರಿಣಮಿಸಿತು.

ತಾರಕನಾಥನ ತಂದೆ ರಾಮಕನ್ಯೆ ಘೋಷಾಲ್ ಅವರು ರಾಣಿ ರಾಸಮಣಿಯ ಜಮೀನ್ದಾರಿಯ ವಕೀಲರಾಗಿದ್ದುದರಿಂದ ಕೆಲಸದ ನಿಮಿತ್ತವಾಗಿ ಆಗಾಗ್ಗೆ ದಕ್ಷಿಣೇಶ್ವರಕ್ಕೆ ಬಂದುಹೋಗುತ್ತಿದ್ದರು. ಅವರು ಸ್ವತಃ ನಿಷ್ಠಾವಂತರಾದ ತಾಂತ್ರಿಕ ಸಾಧಕರಾಗಿದ್ದರು. ಒಮ್ಮೆ ಕೆಲಸದ ಮೇಲೆ ಬಂದಿದ್ದಾಗ ಅವರಿಗೆ ಶ್ರೀರಾಮಕೃಷ್ಣರ ಪರಿಚಯವಾಯಿತು. ಆಗ ಶ್ರೀರಾಮಕೃಷ್ಣರಿಗೆ ಅವರುಕೈಕೊಂಡಿದ್ದ ಉಗ್ರಸಾಧನೆಗಳ ಪರಿಣಾಮವಾಗಿ ಮೈಯೆಲ್ಲ ಉರಿಯುವ ಅನುಭವವಾಗತೊಡಗಿತ್ತು. ಏನೇನು ಮಾಡಿದರೂ ಆ ಉರಿ ಇಳಿದಿರಲಿಲ್ಲ. ರಾಮಕನ್ಯೆ ಘೋಷಾಲರೂ ಒಬ್ಬ ಮಹಾತಾಂತ್ರಿಕ ಸಾಧಕರೆಂದು ಗೊತ್ತಾದ ಮೇಲೆ ಶ್ರೀರಾಮಕೃಷ್ಣರು ಅವರಿಗೆ ತಮ್ಮ ಉರಿಯ ಅನುಭವವನ್ನು ಹೇಳಿ, ಅದಕ್ಕೇನಾದರೂ ಪರಿಹಾರವಿದ್ದರೆ ತಿಳಿಸುವಂತೆ ಕೇಳಿಕೊಂಡರು. ಇಷ್ಟದೇವತೆಯ ನಾಮ ಮಂತ್ರವುಳ್ಳ ಒಂದು ‘ಕವಚ’ ಧರಿಸುವಂತೆ ಅವರು ಸೂಚನೆಕೊಟ್ಟರು. ಅದನ್ನು ಧರಿಸಿದ ಮೇಲೆ ಅದ್ಭುತ ಎನ್ನುವಂತೆ ಆ ಉರಿ ತಟಕ್ಕನೆ ಶಮನವಾಯಿತಂತೆ!

ರಾಮಕನ್ಯೆ ಘೋಷಾಲರ ಹಿರಿಮೆ ಗೋಚರವಾಗುವ ಮತ್ತೊಂದು ಸನ್ನಿವೇಶ ನಮಗೆ ಪ್ರಕೃತದಲ್ಲಿ ಗಮನಾರ್ಹವಾಗಿದೆ. ಮುಂದೆ ‘ಮಹಾಪುರುಷ’ ‘ಸ್ವಾಮಿ ಶಿವಾನಂದ’ರೆಂದು ನಮಗೆ ಮೈದೋರುವ ವ್ಯಕ್ತಿಯ ಜೀವನವನ್ನೆ ಪರಿಣಾಮಕಾರಿಯಾಗುವ ರೀತಿಯಲ್ಲಿ ತಿರುಗಿಸಿದುದು ಆ ಸನ್ನಿವೇಶ.

ತಾರಕನಾಥ ಚಿಕ್ಕಂದಿನಿಂದಲೂ ಆಲೋಚನಾಪರ, ಅಂತರ್ಮುಖಿ. ಆತನ ತಾಯಿ ಅವನು ಸಣ್ಣವನಾಗಿದ್ದಾಗಲೆ ತೀರಿಕೊಂಡಿದ್ದರು. ಸ್ವಾಮಿ ಶಿವಾನಂದರ ಸಂವಾದಗಳಲ್ಲಿ ಒಂದೆಡೆ ಅವರ ಮಾತೃದೇವತೆಯ ಸವಿನೆನಪಿನ ಚಿತ್ರ ಬರುತ್ತದೆ. ಆದರೆ ಅದು ದೂರದ ಸ್ಮೃತಿ, ಅಸ್ಪಷ್ಟ. ತಾರಕನಾಥನ ತಂದೆಯ ಆದಾಯ ತಕ್ಕಮಟ್ಟಿಗೆ ವಿಪುಲವಾಗಿದ್ದರೂ ಅವರ ಔದಾರ್ಯ ಅದನ್ನು ಬಹುಬೇಗ ಕರಗಿಸುತ್ತಿದ್ದಿತು. ಬರಬರುತ್ತಾ ಆದಾಯವೂ ಕಡಿಮೆಯಾಯಿತು. ತಾರಕನಾಥ ಕಾಲೇಜನ್ನು ಹತ್ತದೆಯೆ ಸಂಪಾದನೆಗೆ ಕಾಲಿಡಬೇಕಾಯಿತು. ದೆಹಲಿಯವರೆಗೂ ಹೋಗಿ ಕೆಲಸಕ್ಕೆ ಸೇರಿದುದೂ ಆಯಿತು. ಆಗಿನ ಕಾಲದ ಇತರ ಎಲ್ಲ ಹೋಗಿ ಕೆಲಸಕ್ಕೆ ಸೇರಿದುದೂ ಆಯಿತು.  ಆಗಿನ ಕಾಲದ ಇತರರ ಎಲ್ಲ ಕಲ್ಕತ್ತೆಯ ವಿದ್ಯಾರ್ಥಿಗಳಂತೆ ತಾರಕನಾಥನೂ ಬ್ರಹ್ಮಸಮಾಜಕ್ಕೆ ಸೇರಿದ್ದನು. ದೇವರು ಧರ್ಮ ಮೊದಲಾದ ಆಧ್ಯಾತ್ಮಿಕ ವಿಷಯಗಳಲ್ಲಿ ಆತನ ಆಸಕ್ತಿ ಕೆರಳಿತ್ತು. ದೆಹಲಿಯಲ್ಲಿಯೂ ಪ್ರಸನ್ನ ಎಂಬ ಸ್ನೇಹಿತನೊಡನೆ ಈ ವಿಚಾರಗಳನ್ನು ಕುರಿತು ಜಿಜ್ಞಾಸೆ ಮಾಡುತ್ತಿದ್ದನು. ಒಂದು ದಿನ ಸಮಾಧಿಸ್ಥಿತಿಯ ಅತ್ಯಪೂರ್ವತೆಯ ವಿಷಯವಾಗಿ ಮಾತನಾಡುತ್ತಿದ್ದಾಗ ಪ್ರಸನ್ನ ತಾನು ಅಂತಹ ಒಬ್ಬರನ್ನು ಮಾತ್ರ ನೋಡಿದುದಾಗಿ ತಿಳಿಸಿ, ದಕ್ಷಿಣೇರ್ಶವರದ ಶ್ರೀರಾಮಕೃಷ್ಣರ ಹೆಸರನ್ನು ಹೇಳಿದನು. ಇದಾದ ಕೆಲವು ಕಾಲದ ಅನಂತರ ತಾರಕನಾಥ ಕಲ್ಕತ್ತೆಗೆ ಹಿಂತಿರುಗಿ ಅಲ್ಲಿಯ ಒಂದು ವ್ಯಾಪಾರ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡನು. ಆ ಸಮಯದಲ್ಲಿಯೆ ಶ್ರೀರಾಮಕೃಷ್ಣರ ಗೃಹೀಭಕ್ತರಲ್ಲೊಬ್ಬರಾದ ರಾಮಚಂದ್ರ ದತ್ತರ ಬಂಧುವೊಬ್ಬನಿಂದ ಪರಮಹಂಸರ ವಿಚಾರವಾಗಿ ಬಹಳ ವಿಷಯ ತಿಳಿದುಕೊಂಡನು.

ಒಂದು ದಿನ ೧೮೮೦ ಅಥವಾ ೮೧ರಲ್ಲಿ ಕಲ್ಕತ್ತೆಯಲ್ಲಿದ್ದ ರಾಮಚಂದ್ರದತ್ತನ ಮನೆಗೆ ಶ್ರೀರಾಮಕೃಷ್ಣರು ಬರುತ್ತಾರೆಂದು ಗೊತ್ತಾಗಿ ಅಲ್ಲಿಗೆ ಹೋದನು. ಆ ದಿವ್ಯದಿನದಲ್ಲಿ ತಾರಕನಾಥನ ಭವಿಷ್ಯ ಜೀವನ ನಿರ್ಣಯವಾಯಿತು. ಶ್ರೀರಾಮಕೃಷ್ಣರ ಅರ್ಧಬಾಹ್ಯಸ್ಥಿತಿಯನ್ನೂ ದಿವ್ಯೋನ್ಮಾದವನ್ನೂ ಅದ್ಭುತ ಮಧುರ ಸಂವಾದ ಸರಣಿಯನ್ನೂ ಕೊನೆಗೆ ಬಹುದಿನದಿಂದ ನೋಡಲು ಬಯಸಿದ್ದ ಸಮಾಧಿಸ್ಥಿತಿಯನ್ನೂ ನೋಡಿ, ಆಲಿಸಿ, ಕುಡಿದು, ಅನುಭವಿಸಿ ಮಾರುಹೋದನು. ಪರಮಹಂಸರ ದಿವ್ಯ ಆಕರ್ಷಣೆಗೆ ಸಿಲುಕಿ, ಬರುವ ಶನಿವಾರವೆ ದಕ್ಷೀಣೇಶ್ವರಕ್ಕೆ ಹೋಗಿ ಅವರನ್ನು ಕಾಣಲು ಮನಸ್ಸು ಮಾಡಿದನು.

ತಮ್ಮ ಕೊಠಡಿಯಲ್ಲಿ ಪುಂಜೀಭೂತ ಶಾಂತಿಯಂತೆ ಕುಳಿತಿದ್ದ ಶ್ರೀರಾಮಕೃಷ್ಣರನ್ನು ನೋಡಿದಾಗಲೆ ತಾರಕನಾಥನಿಗೆ ತನ್ನ ಜೀವನ ಗಂತವ್ಯದ ಪರಮಾಪ್ತನನ್ನು ನೋಡಿದಂತಾಗಿ ಸಂಪೂರ್ಣ ಶರಣಾದನು. ಆವೋತ್ತಿನ ಸಂಭಾಷಣೆಯಲ್ಲಿ ಪರಮಹಂಸರು ‘ನಿನಗೆ ಸಾಕಾರ ದೇವರು ಇಷ್ಟವೊ? ನಿರಾಕಾರ ದೇವರು ಇಷ್ಟವೊ?’ ಎಂದು ಕೇಳಿದರು. ಬ್ರಾಹ್ಮಸಮಾಜಿಯಾಗಿದ್ದ ತಾರಕನಾಥ ‘ನಿರಾಕಾರದಲ್ಲಿ’ ಎಂದು ಉತ್ತರವಿತ್ತನು. ‘ಆದಿಶಕ್ತಿಯನ್ನು ಒಪ್ಪದೆ ಇರುವುದಕ್ಕಾಗುತ್ತದೆಯೆ?’ ಎಂದವರು ತುಸು ಹೊತ್ತಿನಲ್ಲಿಯೆ ಕಾಳಿಕಾದೇವಾಲಯಕ್ಕೆ ಹೊರಟರು, ತಾರಕನಾಥನೂ ಹಿಂಬಾಲಿಸಿದ. ಪರಮಹಂಸರು ದೇವಿಯ ವಿಗ್ರಹದ ಮುಂದೆ ಅಡ್ಡಬಿದ್ದಾಗ ತಾರಕನಾಥನ ಮನಸ್ಸು ಹಾಗೆ ಮಾಡಲು ಹಿಂಜರಿಯಿತು. ಏಕೆಂದರೆ ಬ್ರಾಹ್ಮ ಸಮಾಜದ ಬೋಧನೆಯ ಪ್ರಕಾರ ಅದು ಬರಿಯ ಕಲ್ಲಿನ ಮೂರ್ತಿ. ಅದಕ್ಕೇಕೆ ನಮಸ್ಕರಿಸಬೇಕು? ಆದರೆ ತಟಕ್ಕನೆ ಮತ್ತೊಂದು ಆಲೋಚನೆಯೂ ಹೊಳೆದು ದೇವರು ಎಲ್ಲೆಲ್ಲಿಯೂ ಇರುವಾಗ ಕಲ್ಲಿನಲ್ಲೇಕೆ ಇರಬಾರದು? ಎಂದುಕೊಂಡು ಕಾಳೀಮೂರ್ತಿಗೆ ನಮಸ್ಕಾರ ಮಾಡಿದನು.

ಇನ್ನೊಂದು ದಿನ ಪರಮಹಂಸರು ತಾರಕನಾಥನ ನಾಲಗೆಯ ಮೇಲೆ ಏನನ್ನೊ ಬರೆದರು. ಅದರ ಪರಿಣಾಮ ಅದ್ಭುತವಾಗಿತ್ತು. ಕಣ್ಣುಮುಂದಿನ ಇಂದ್ರಿಯ ಜಗತ್ತು ಕರಗಿಹೋಯಿತು. ಮನಸ್ಸು ಅತ್ಯಂತ ಅಂತರ್ಮುಖಿಯಾಯಿತು. ತನ್ನ ಸರ್ವಸ್ವವೂ ಭಾವಸಮಾಧಿಯಲ್ಲಿ ವಿಲೀನವಾದಂತೆ ಅನುಭವವಾಯಿತು.

೧೮೮೫ರಲ್ಲಿ ಶ್ರೀರಾಮಕೃಷ್ಣರ ಗಂಟಲುಕಾಯಿಲೆ ಉಲ್ಭಣಾವಸ್ಥೆಗೆ ಮುಟ್ಟಿತು. ವೈದ್ಯಚಿಕಿತ್ಸೆಗಾಗಿ ಅವರನ್ನು ಕಾಶೀಪುರದ ತೋಟದ ಮನೆಗೆ ಸಾಗಿಸಿದರು. ತಾರಕನಾಥನು ಇತರ ಶಿಷ್ಯರೊಡನೆ ಹಗಲಿರುಳೂ ಅವರ ಸೇವಾ ಶುಶ್ರೂಷೆಯಲ್ಲಿ ಮಗ್ನನಾದನು.

ಇಷ್ಟು ಹೊತ್ತಿಗಾಗಲೆ ತಾರಕನ ಹೆಂಡತಿ ತೀರಿಹೋಗಿದ್ದಳು. ಪ್ರಿಯವಾದ ತರುಣ ಜೀವವೊಂದರ ಸಾವು ಸಂಕಟರವಾಗಿದ್ದರೂ ಹೆಂಡತಿಯ ಸಾವಿನಿಂದ ತನಗೂ ಲೋಕಕ್ಕೂ ಇದ್ದ ಕೊಟ್ಟಕೊನೆಯ ಏಕಮಾತ್ರ ಬಂಧನ ಹರಿದುಹೋದಂತಾಯಿತು. ಶ್ರೀರಾಮಕೃಷ್ಣರು ದೇಹಧಾರಿಯಾಗಿದ್ದಾಗಲೆ ಸಂನ್ಯಾಸ ಸ್ವೀಕಾರ ಮಾಡುತ್ತೇನೆಂದು ನಿಶ್ಚಯಿಸಿ ತಾರಕನಾಥನು ತಂದೆಯ ಅನುಮತಿ ಪಡೆಯಲು ಅವರೆಡೆಗೆ ಹೋದನು. ಮಗನ ನಿಶ್ಚಯವನ್ನು ಕೇಳಿ ರಾಮಕನೈ ಘೋಷಾಲರ ಕಣ್ಣಿಂದ ನೀರು ಉಕ್ಕಿ ಕಪೋಲಗಳ ಮೇಲೆ ಧಾರಾಕಾರವಾಗಿ ಹರಿಯತೊಡಗಿತು. ಸ್ವಲ್ಪ ಹೊತ್ತು ಚಿಂತಾಮಗ್ನರಾಗಿದ್ದ ತರುವಾಯ ಕುಳಿತಿದ್ದ ಪೀಠದಿಂದ ಎದ್ದು ಮಗನಿಗೆ ಹಿಂಬಾಲಿಸುವಂತೆ ಇಂಗಿತಮಾಡಿ ಪಕ್ಕದಲ್ಲಿದ್ದ ದೇವರ ಮನೆಗೆ ಹೋದರು. ತಾವೂ ಮನೆದೇವರಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಮಗನಿಗೂ ಹಾಗೆಯೆ ಮಾಡುವಂತೆ ಹೇಳಿದರು. ತಾರಕನಾಥನೂ ಹೃದಯತುಂಬಿ ಮನೆದೇವರಿಗೆ ಅಡ್ಡಬಿದ್ದನು. ತಂದೆ ಮಗನ ತಲೆಯ ಮೇಲೆ ಕೈಯಿಟ್ಟು ಅನುಮತಿಯಿಯುತ್ತ ಆಶೀರ್ವದಿಸಿದರು: ‘ನಿನಗೆ ಭಗವತ್ ಸಾಕ್ಷಾತ್ಕಾರವಾಗಲಿ. ನನಗೂ ಸಂಸಾರತ್ಯಾಗಮಾಡಿ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂಬ ಆಸೆ ಬಲವಾಗಿತ್ತು. ಆದರೆ ಫಲಿಸಲಿಲ್ಲ. ಆದ್ದರಿಂದ ನಿನಗೆ ಆಶೀರ್ವಾದ ಮಾಡುತ್ತೇನೆ: ನಿನಗಾದರೂ ಅವನು ಕೃಪೆ ಮಾಡಲಿ!’

ಪೂಜ್ಯ ಪಿತೃವಿನ ಅನುಮತಿ ಪಡೆದ ಸಂತಸದಿಂದ ಹಿಗ್ಗಿ, ಸಂಸಾರ ತ್ಯಾಗಮಾಡಿ, ತಾರಕನಾಥನು ಶಿವಾನಂದಾಭಿಮುಖನಾಗಿ ಶ್ರೀರಾಮಕೃಷ್ಣರ ದಿವ್ಯ ಪದತಲದ ಸನ್ನಿಧಿಗೆ ತೆರಳಿದನು. ರುಗ್ಣಶಯೈಯಲ್ಲಿದ್ದ ಶ್ರೀಗುರು ನಡೆದುದೆಲ್ಲವನ್ನೂ ಆಲಿಸಿ ತುಂಬ ಸಂತೋಷದಿಂದ ಹೇಳಿದನು: “ಒಳ್ಳೆಯದು, ಹಾಗಾದದ್ದು ತುಂಬ ಮಂಗಳಕರ!”

ಶ್ರೀಗುರುವಿನ ನಿಧನಾನಂತರ ಅವರ ಅಂತರಂಗ ಶಿಷ್ಯರು ವರಾಹಣಗರದ ಮಠದಲ್ಲಿ ನೆರೆದರು. ಮಠಕ್ಕೆ ಮೊದಲು ಸೇರಿದವರಲ್ಲಿ ತಾರಕನೆ ಮೊದಲಿಗನಾಗಿದ್ದನು. ಈಶ್ವರಸಾಕ್ಷಾತ್ಕಾರವೊಂದಲ್ಲದೆ ಬೇರೆ ಯಾವುದನ್ನೂ ಅವರು ಲಕ್ಷಿಸದೆ ಆಧ್ಯಾತ್ಮ ಮಾರ್ಗದಲ್ಲಿ ದಿನದಿನಕ್ಕೂ ಮುಂಬರಿಯುತ್ತಿದ್ದರು.

ಈ ಹೊತ್ತಗೆಯಲ್ಲಿರುವ ಸಂವಾದಗಳಲ್ಲಿ ಅಲ್ಲಲ್ಲಿ ಅವರ ಆಗಿನ ಕಾಲದ ತಪಸ್ಯೆಯ, ಸಾಧನೆಯ ಮತ್ತು ಪರಿವ್ರಾಜಕ ಜೀವನದ ವಿಷಯ ಸುಳಿಯುತ್ತದೆ. ಆ ಅಪೂರ್ವ ಗವಾಕ್ಷೆಗಳಲ್ಲಿ ಇಣಿಕಿನೋಡಿ, ಅಲ್ಲಿ ಮಿಂಚುವ ನೋಟಗಳಿಂದ ನಾವು ಆ ಯೌಗಿಕ ಜೀವನದ ಗಂಭೀರತೆ ವೈಶಾಲ್ಯ ಮಹಿಮೆಗಳನ್ನು ಯಥಾಸಾಮರ್ಥ್ಯ ಕಲ್ಪಿಸಿಕೊಳ್ಳಬೇಕಷ್ಟೆ.

ಸ್ವಾಮಿ ವಿವೇಕಾನಂದರು ಚಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ಜಗದ್‌ವಿಜಯಿಯಾಗಿ ೧೮೯೭ರಲ್ಲಿ ಭಾರತಕ್ಕೆ ಹಿಂದಿರುಗುವವರೆಗೂ ಸ್ವಾಮಿ ಶಿವಾನಂದರು ತಮ್ಮ ಇತರ ಕೆಲವು ಗುರುಭಾಯಿಗಳಂತೆಯೆ ಅಧ್ಯಯನ, ಆಲೋಚನೆ, ತೀರ್ಥಯಾತ್ರೆ, ಪವಿತ್ರಕ್ಷೇತ್ರ ಪರ್ಯಟನ, ಪರಿವ್ರಾಜನ, ಧ್ಯಾನ ಜಪತಪಾದಿ ಸಾಧನೆಗಳಲ್ಲಿ ನಿರತರಾಗಿ ಆಸೇತುಹಿಮಾಚಲ ಭರತವರ್ಷದ ಪುಣ್ಯಭೂಮಿಯಲ್ಲಿ ಭಗವಚ್ಚಿಂತನೆಯೊಂದೆ ಗುರಿಯಾಗಿ ಸಂಚರಿಸುತ್ತಿದ್ದರು. ಸ್ವಾಮಿ ವಿವೇಕಾನಂದರು ‘ಕೊಲಂಬೊ ಇಂದ ಆಲ್ಮೋರಕೆ’ಬಿರುಗಾಳಿಯಾಗಿ ಬೀಸಿ ರಾಷ್ಟ್ರ ಕುಂಡಲಿನಿಯನ್ನು ಎಚ್ಚರಗೊಳಿಸಿದ ಮೇಲೆ ದಿಕ್ಕು ದೃಷ್ಟಿ ಎಲ್ಲವೂ ಬದಲಾಯಿಸಿತು. ಶ್ರೀರಾಮಕೃಷ್ನರ ಸಂನ್ಯಾಸಿ ಶಿಷ್ಯರೂ ಇತರ ಸಂನ್ಯಾಸಿಗಳಂತೆ ಸಂಪ್ರದಾಯದ ಜೀವನ ನಡೆಸಿಕೊಂಡು ಹೋಗುವ ಬೃಹದ್ದುರಂತವೊಂದು ಭರತರಾಷ್ಟ್ರದ, ಏಕೆ, ಸಮಗ್ರ ಪ್ರಪಂಚದ, ಪುಣ್ಯವಶದಿಂದ ತಪ್ಪಿತು. ತಮ್ಮ ನಾಯಕವರೇಣ್ಯನ ಮೊರೆಗೂ ಕರೆಗೂ ಕಿವಿಗೊಟ್ಟು ಎದೆಗೊಟ್ಟು, ಆತ್ಮದ ಮೋಕ್ಷಾರ್ಥವಾಗಿಯೂ ಜಗತ್ತಿನ ಹಿತಕ್ಕಾಗಿಯೂ ಸಂನ್ಯಾಸಿಗಳು ಸಂಘಬದ್ಧರಾದರು. ನವಯುಗಾವತಾರ ಶ್ರೀರಾಮಕೃಷ್ಣರ ದಿವ್ಯ ಸಂದೇಶವನ್ನು ಹೊತ್ತು, ಲೋಕದ ಹೃದಯಕ್ಕೆ ದಿವ್ಯಾಮೃತ ಸೇವನೆಮಾಡುವ ಮಹೋದ್ದೇಶದಿಂದ ದಿಕ್ಕುದಿಕ್ಕಿಗೂ ದೇಶದೇಶಗಳಿಗೂ ಹರಿದರು. ಮಾತನಾಡಿದರು, ಉಪನ್ಯಾಸಮಾಡಿದರು, ಮನೆಕಟ್ಟಿದರು, ಶಾಲೆ ತೆರೆದರು,  ಔಷಧೋಪಚಾರ ಮಾಡಿದರು, ಸಂಕ್ರಾಮಿಕ ರೋಗಗಳನ್ನು ತಡೆಗಟ್ಟಿದ್ದರು, ಕ್ಷಾಮಪೀಡಿತರಿಗೆ ನಿವಾರಣಾಕ್ಷೇತ್ರಗಳನ್ನು ತೆರೆದರು, ಗ್ರಂಥರಚನೆ ಮಾಡಿದರು, ಗ್ರಂಥಪ್ರಕಟನೆ ಮಾಡಿದರು, ಪ್ರಾಚೀನವನ್ನು ಪ್ರವೇಶಿಸಿ ನವೀನಕ್ಕೆ ಬೇಕಾದ ಚಿರಂತನವಾಗಿರುವ ಅಲ್ಲಿಯ ಉತ್ತಮಾಂಶಗಳನ್ನೆಲ್ಲ ಎತ್ತಿತಂದು ದೇಶದೇಶಕ್ಕೂ ಭಾಷೆಭಾಷೆಗೂ  ಬಿತ್ತಿದರು. ಮತಾಂಧತೆಯ ವಿಷವನ್ನು ಪರಿಹರಿಸುವ ಸಮನ್ವಯ ಧರ್ಮವನ್ನು ಹೃದಯ ಹೃದಯಕ್ಕೂ ಬಿತ್ತಿದರು. ಆತ್ಮಪ್ರತ್ಯಯ ಆತ್ಮಗೌರವ ಆತ್ಮ ಶ್ರೀಗಳನ್ನು ದಾಸ್ಯ ಸಮುದ್ರದ ತಲದಿಂದ ಧೈರ್ಯ ಶಿಖರದ ನೆತ್ತಿಗೆತ್ತಿದರು. ಲೋಕದ ಬದುಕಿನಲ್ಲಿಯೆ ಅಭೂತಪೂರ್ವವಾದ ನವೋನವ ಶಕ್ತಿಯೊಂದನ್ನು ಪ್ರಚೋದಿಸಿ ಆರಕ್ತ ನೀರವವಾದ ಅದ್ಭುತ ಕ್ರಾಂತಿಯೊಂದಕ್ಕೆ ಶಂಕುಸ್ಥಾಪನೆ ಮಾಡಿದರು!

ಅದನ್ನೆಲ್ಲ ಸಾಧಿಸಿದ ಆ ಆಧ್ಯಾತ್ಮಿಕ ಯೋಧರ ಪ್ರಥಮ ಪಂಕ್ತಿಯಲ್ಲಿ ದ್ವಿತೀಯವೊ ತೃತೀಯವೊ ಆಗಿ ವಿರಾಜಿಸುತ್ತಾರೆ ಸ್ವಾಮಿ ಶಿವಾನಂದರೆಂದು ಹೆಸರಾಂತ ‘ಮಹಾಪುರುಷಜಿ’.

ಸಾಧಿಸಿದ ಕೆಲಸಗಳ ಉದ್ದವಾದ ಪಟ್ಟಿಯೊಂದನ್ನು ಕೊಟ್ಟಮಾತ್ರಕ್ಕೆ ಹೃದಯದ ಮಹಿಮೆ ಗೋಚರವಾಗುತ್ತದೆಯೆ? ಮಹಾಪುರುಷಜಿ ತಮ್ಮ ದಿವ್ಯ ಜೀವಮಾನದಲ್ಲಿ ಕೈಗೂಡಿಸಿದ ಸಾಧನೆ ಸಿದ್ಧಿಗಳ ಪಟ್ಟಿಯ ದೀರ್ಘತೆ ಅಲ್ಪವಾದುದೇನೂ ಅಲ್ಲ, ಆದರೆ ಅದರ ಒಕ್ಕಣೆ ಇಲ್ಲಿ ಸಲ್ಲ; ಓದುಗರಿಗೆ ಅವರ ಹೃದಯ ಪರಿಚಯಕ್ಕೆ ಅದರಿಂದ ಅಷ್ಟೇನೂ ಪ್ರಯೋಜನವಾಗುವುದೂ ಇಲ್ಲ.

ಸ್ವಾಮಿ ಶಿವಾನಂದರು ೧೯೨೨ರಿಂದ ೧೯೩೪ನೆಯ ಫೆಬ್ರವರಿ ೨೦ನೆಯ ತೇದಿ ಅವರು ಮಹಾಸಮಾಧಿಯನ್ನೈದುವವರೆಗೂ ಶ್ರೀರಾಮಕೃಷ್ಣ ಮಠ ಸಂಸ್ಥೆಯ ಮಹಾಸಂಘದ ಮಹಾಧ್ಯಕ್ಷರಾಗಿ ಆ ಜಗದ್ವಿಸ್ತಾರವಾಗಿರುವ ಬೃಹತ್ ಸಂಸ್ಥೆಯನ್ನು ದಿಕ್ಕುಕೆಡದಂತೆ, ದಾರಿತಪ್ಪದಂತೆ, ಹೇರಲೆಗಳಲ್ಲಿ ಎದ್ದು ಬಿದ್ದು ತಲೆಕೆಳಗಾದಂತೆ, ಬಿರುಮಳೆ ಬಿರುಗಾಳಿಗಳಲ್ಲಿ ಸಿಕ್ಕಿ ಕಡಲಡಿಯ ಹುದುಗುಬಂಡೆಗೆ ಬಡಿದು ಬಿರಿಯದಂತೆ ದೃಢಮುಷ್ಟಿಯ ದೃಢಮನಸ್ಸಿನ ದೃಢಲಕ್ಷ್ಯದ ದಿವ್ಯ ಕರ್ಣಧಾರನಾಗಿ ನಡೆಸಿದರು.

ಅದಕ್ಕಿಂತಲೂ ಮಿಗಿಲಾಗಿ ಆಲ್ಲೋಕಲ್ಲೋಲಮಯವಾಗಿ ಸಂಸಾರದ ಅಪಾಯ ಬಹುಳವಾದ ಅಪಾರ ಸಾಗರದಲ್ಲಿ ಮುಳುಮುಳುಗಿ ತೇಲುವ ಲಕ್ಷೋಪಲಕ್ಷ ಆರ್ತಜೀವರುಗಳಿಗೆ ಅವರವರ ಕೈ ಹಿಡಿದೆತ್ತಿ ದಡಕ್ಕೊಯ್ಯುವ ತಾರಕನಾಥರಾಗಿದ್ದಾರೆ. ಅದರ ದಿವ್ಯತೆ ಅದರ ಧನ್ಯತೆ ಅದರ ಕೃತಕೃತ್ಯತೆ ಆಯಾ ಜೀವದ ಅಂತಃಕರಣಕ್ಕಲದೆ ಲೇಖನಿಯ ಭಾಷೆಯ ಬಹೀಕರಣಕ್ಕೆ ನಿಲುಕಬಲ್ಲುದೆ?

ದುರ್ಜನಃ ಸಜ್ಜನೋ ಭೂಯಾತ್
ಸಜ್ಜನಃ ಶಾಂತಿಮಾಪ್ನುಯಾತ್
ಶಾಂತೋ ಮುಚ್ಯೇತ ಬಂಧೇಭ್ಯೋ
ಮುಕ್ತಶ್ಚಾನ್ಯಾನ್ ವಿಮೋಚಯೇತ್

“ದುರ್ಜನರ್‌ ಸಜ್ಜನರ್‌ ತಾಮಕ್ಕೆ; ಸಜ್ಜನರ್ಗಕ್ಕೆ ಶಾಂತಿ; ಶಾಂತರ್ಗಕ್ಕೆ ಬಂಧಮುಕ್ತಿ; ಮುಕ್ತರನ್ಯರ್ಗೆ ಮುಕ್ತಿಯಂ ಕೊಡುಗೆ!” ಎಂಬ ಆಶೀರ್ವಾದ ಮಂತ್ರದ ಮೂರ್ತಸ್ವರೂಪರಾಗಿದ್ದಾರೆ ಶ್ರೀಮಹಾಪುರುಷಜಿ. ಅವರ ಆ ಆಶೀರ್ವಾದಕ್ಕೆ ಪ್ರತಿಮಾರೂಪವಾಗಿದೆ ಅವರ ಈ ಮಾತುಕತೆ-‘ಗುರುವಿನೊಡನೆ ದೇವರಡಿಗೆ’.* ಆ ಆಶೀರ್ವಾದದ ಅಮೃತಪಾನದಿಂದ ಸರ್ವರೂ ಸಜ್ಜನರಾಗಲಿ ಶಾಂತರಾಗಲಿ ಮುಕ್ತರಾಗಲಿ ಎಂಬುದೆ ನಮ್ಮ ಹಾರೈಕೆ.

ಕುವೆಂಪು
ಮೈಸೂರು
೯-೬-೧೯೫೪

 * ಸ್ವಾಮಿ ಅಪೂರ್ವಾನಂದರು ತಮ್ಮ ಗುರುಸೇವಾ ಸಮಯದಲ್ಲಿ ಬರೆದಿಟ್ಟುಕೊಂಡ ಸಂವಾದಗಳನ್ನು ಬಂಗಾಳಿ ಭಾಷೆಯಲ್ಲಿ ‘ಶಿವಾನಂದವಾಣಿ’ ಎಂಬ ಹೆಸರಿನ ಹೊತ್ತಗೆಯಲ್ಲಿ ಪ್ರಕಟಿಸಿದ್ದಾರೆ. ಅದರ ಇಂಗ್ಲಿಷ್ ಅನುವಾದ “For Seekers of God” ಎಂಬ ಹೆಸರಿನಲ್ಲಿ ಹೊರಬಿದ್ದಿದೆ. ಈ ಕನ್ನಡ ಅನುವಾದ ವಿಶೇಷವಾಗಿ ಬಂಗಾಳಿಯನ್ನೂ, ಅಲ್ಲಲ್ಲಿ ಸಹಾಯರೂಪ ಮಾತ್ರವಾಗಿ ಇಂಗ್ಲಿಷನ್ನು ಅನುಸರಿಸಿದೆ.