ಬೇಲೂರು ಮಠ
ಸೋಮವಾರ, ಮೇ ೩೧, ೧೯೩೨

 

ಪಾಶ್ಚಾತ್ಯ ದೇಶಗಳಲ್ಲಿ ವಿಜ್ಞಾನದ ಉನ್ನತಿಯ ಫಲವಾಗಿ, ಅದರ ಜೊತೆ ಜೊತೆಗೇ, ಮಾನವನ ದೈನಂದಿನ ಜೀವನದಲ್ಲಿ ಸುಖಸ್ವಾಚ್ಛಂದ್ಯ ಮತ್ತು ಆರಾಮದ ವ್ಯವಸ್ಥೆ ಹಚ್ಚಿರುವುದೆಂದೂ, ಆ ದೃಷ್ಟಿಯಿಂದ ನೋಡಿದರೆ ಭಾರತೀಯರ ಬದುಕಿಗಿಂತಲೂ ಪಾಶ್ಚಾತ್ಯರು ಬದುಕಿನಲ್ಲಿ ಹೆಚ್ಚು ಸುಖಿಗಳಾಗಿರುವರೆಂದೂ ಮಾತು ಬಂದಾಗ ಮಹಾಪುರುಷಜಿ ಹೇಳಿದರು: “ ಆ ಎಲ್ಲ ಸುಖವೂ ಎಂಥಾದ್ದು? ಕ್ಷಣಿಕ ಸುಖ. ಅದರಲ್ಲೇನಿದೆ? ಅವರು ಭಗವದಾನಂದದ ಅಸ್ವಾದವನ್ನು ಯಾವಾಗಲೂ ಸವಿದಿಲ್ಲವಾದ್ದರಿಂದಲೆ ಈ ಕ್ಷಣಿಕ ಆನಂದದಿಂದ ಉನ್ಮತ್ತರಾಗಿದ್ದಾರೆ. ಅಯ್ಯಾ, ಯಾರು ಏನೇ ಹೇಳಲಿ, ಕಾಮಕಾಂಚನದಲ್ಲಿ ಸುಖವಿಲ್ಲ. ಸ್ವರ್ಗದಲ್ಲಿಯೇ ಇರು, ಅಥವಾ ಇನ್ನೆಲ್ಲಿಯಾದರೂ ಇರು – ವಿದ್ವಾಂಸನೇ ಆಗಿರು. ಅಥವಾ ಇನ್ನೇನು ಬೇಕಾದರೂ ಆಗಿರು; ಕಾಮಕಾಂಚನದಲ್ಲಿ ಸುಖವಿಲ್ಲ ಇಲ್ಲ, ಇಲ್ಲ, ಇಲ್ಲ. ಇದು ಭಗವಂತನೆ ಹೇಳಿರುವ ಮಾತು. ಛಾಂದೋಗ್ಯ ಉಪನಿಷತ್ತು ಕೂಡ ಹೇಳುತ್ತದೆ:

‘ಯೋ ವೈ ಭೂಮಾ ತತ್ಸುಖಂ, ನಾಲ್ಪೇ ಸುಖಮಸ್ತಿ,
ಭೂಮೈವ ಸುಖಂ, ಭೂಮಾ ತ್ವೇವ ವಿಜಿಜ್ಞಾಪಿತವ್ಯ ಇತಿ‘*

ನಿಜವಾದ ಸುಖವಿರುವುದು ಆ ಭೂಮ ವಸ್ತುವಿನಲ್ಲಿಯೆ. ಅದನ್ನೆ ಅರಿಯ ಬೇಕಾದದ್ದು. ವಿಜ್ಞಾನ ಆ ಭೂಮದ ವಿಚಾರವಾಗಿ ಏನನ್ನೂ ಹೇಳಲು ಸಮರ್ಥವಾಗಿಲ್ಲ. ವಿಜ್ಞಾನ ಜಡವಸ್ತುವಿನ ವಿಚಾರದಲ್ಲಿಯೆ ಆಸಕ್ತ ವಾಗಿದೆ. ಭೌತ ಲೌಕಿಕವೇ ಅದರ ಸಂಶೋಧನೆಯ ವಸ್ತು. ಲೌಕಿಕಭೋಗವನ್ನು ಅನುಭವಿಸುತ್ತಾ ಅನುಭವಿಸುತ್ತಾ ಭೋಗಾಭಿಲಾಷೆ ದಿನದಿನಕ್ಕೂ ಹೆಚ್ಚುತ್ತಾ ಹೋಗುತ್ತದೆ. ಅದರಲ್ಲಿ ತೃಪ್ತಿ ಎಲ್ಲಿ? ಅದರಲ್ಲಿ ಎಲ್ಲಿದೆ ಶಾಂತಿ? ಭೋಗಾನು ಭವದಲ್ಲಿಯೆ ಅಂತರ್ಗತವಾಗಿದೆ ಅಶಾಂತಿಯ ಬೀಜ.

‘ನ ಜಾತು ಕಾಮಃ ಕಾಮಾನುಮುಪಭೋಗೇನ ಶಾಮ್ಯತಿ!
ಹವಿಷಾ ಕೃಷ್ಣವರ್ತ್ಮೇವ ಭೂಯ ಏನಾಭಿವರ್ಧತೇ||‘**

ತರುವಾಯ, ಜೀವನದಲ್ಲಿ ಶಾಂತಿ ಪಡೆಯುವ ವಿಚಾರವನ್ನೆತ್ತಿ ಮಹಾ ಪುರುಷಜಿ ಹೇಳಿದರು : “ಅನಾತ್ಮ ವಸ್ತುವಿನಲ್ಲಿ ಶಾಂತಿ ಲಭಿಸುವುದಿಲ್ಲ; ನಿಜವಾದ ಶಾಂತಿ ಆತ್ಮಜ್ಞಾನಲಾಭದಿಂದಲೆ ಸಾಧ್ಯ. ಆ ಶಾಂತಿಯ ಅನುಸಂಧಾನವನ್ನೂ ಆತ್ಮದಲ್ಲಿಯೆ ಮಾಡಬೇಕು. ಶಾಂತಿಯಿರುವುದು ಒಳಗೆ, ಹೊರಗಲ್ಲ. ಜ್ಞಾನ, ಭಕ್ತಿ, ಭಗವತ್ ಪ್ರೇಮ – ಎಲ್ಲ ಒಳಗೇ. ಸಾಧನೆ ಭಜನೆ ಮಾಡಿ ಭಗವಂತನನ್ನು ಕರೆಯಬೇಕು. ಅಯ್ಯಾ, ಶಾಂತಿಯನ್ನು ಅವನು ಒಳಗಣಿಂದಲೆ ದಯಪಾಲಿಸುತ್ತಾನೆ; ನಿಶ್ಚಯ.” ರಾತ್ರಿ ದೀಕ್ಷೆಯ ಸಂಬಂಧವಾಗಿ ಇಂತೆಂದರು: “ದೀಕ್ಷೆಗಳಲ್ಲಿ ಅನೇಕ ತರಹಗಳಿವೆ. ಎಲ್ಲರಿಗೂ ಜಪ ಮಾಡಲು ಒಂದು ಮಂತ್ರ ಬೇಕೆಬೇಕು ಎಂಬ ಅನಿವಾರ್ಯ ನಿಯಮವೇನೂ ಇಲ್ಲ. ಎಲ್ಲರ ಭಾವವೂ ಒಂದೇ ತರಹದ್ದಾಗಿರುವುದಿಲ್ಲ; ‘ಆಧಾರ ‘ವೂ ಒಬ್ಬೊಬ್ಬರದೂ ಭಿನ್ನಭಿನ್ನ. ನಿಜ, ಸಾಧಾರಣ ಗುರುಗಳಿಂದ ಈ ಎಲ್ಲ ಸಾರ್ಥಕ್ಯವನ್ನೂ ಅರಿಯಲು ಸಾಧ್ಯವಾಗುವುದಿಲ್ಲ. ಒಬ್ಬನಿಗೆ ಸಾಕಾರ ಹಿಡಿಸುತ್ತದೆ; ಇನ್ನೊಬ್ಬನಿಗೆ ನಿರಾಕಾರ. ಈ ಸಾಕಾರ ನಿರಾಕಾರಗಳ ಮಧ್ಯೆಯೂ ಇನ್ನೂ ಅನೇಕ ತರಹಗಳಿವೆ. ಯಾರಿಗೆ ಧ್ಯಾನ ಹಿಡಿಸುತ್ತದೆಯೊ ಅವನು ಧ್ಯಾನ ಮಾಡಬೇಕು; ಯಾರಿಗೆ ಜಪ ಹಿಡಿಸುತ್ತದೆಯೊ ಅವರು ಜಪದಲ್ಲಿ ತೊಡಗಬೇಕು. ಕೆಲವರು ಧ್ಯಾನ ಜಪ ಎರಡನ್ನೂ ಮಾಡಬೇಕಾಗುತ್ತದೆ. ಯಾರದ್ದು ಯಾವ ಭಾವ, ಯಾರದ್ದು ಯಾವ ದಾರಿ, ಅದನ್ನು ತಿಳಿದು  ಆ ಭಾವದಲ್ಲಿಯೆ ಸಾಧಕನಿಗೆ ಉಪದೇಶ ಕೊಡಬೇಕು. ಹಾಗಲ್ಲದೆ ಎಲ್ಲರನ್ನೂ ಒಂದೆಡೆ ಒಟ್ಟುಹಾಕಿ ಏಕಮಂತ್ರ ಪ್ರಯೋಗ ಮಾಡಿದರೆ ಅವರ ಆಧ್ಯಾತ್ಮಿಕ ಪ್ರಗತಿ ವಿಲಂಬವಾಗುವುದು ನಿಶ್ಚಯ.”

ಸುಮ್ಮನೆ ಅಲೆಯುವ ಸಾಧು ಭಕ್ತಾದಿಗಳ ಸಂಬಂಧವಾಗಿ ಹೇಳಿದರು : “ನೋಡು, ಭಕ್ತರು ಬಹಳವಾಗಿ ಅಲೆಯುವುದು ಒಳ್ಳೆಯದಲ್ಲ. ಅವರ ಭಕ್ತಿ ಲಾಭಕ್ಕೆ ಹಾನಿಯುಂಟಾಗುತ್ತದೆ. ಆದ್ದರಿಂದ ಒಂದಿಷ್ಟೊ ಅಷ್ಟೊ ಪುಣ್ಯಕ್ಷೇತ್ರಗಳಲ್ಲಿ ಸಂಚರಿಸಿಯಾದ ಮೇಲೆ ಒಂದು ಕಡೆ ಕುಳಿತು ಸಾಧನೆ ಭಜನೆಯಲ್ಲಿ ತೊಡಗಿದರೆ ಮೇಲು. ಹಾಗೆ ಮಾಡಿದರೆ ಭಾವವೂ ಭಕ್ತಿಯೂ ವರ್ಧಿಸುತ್ತವೆ. ಬಹಳವಾಗಿ ಅಲೆಯುವುದರಿಂದ ಭಾವ ಶುಷ್ಕವಾಗುತ್ತದೆ, ಭಕ್ತಿ ಬತ್ತಿಹೋಗುತ್ತದೆ. ಸಾಧು ಜೀವನದ ಪ್ರಾರಂಭದಲ್ಲಿ ಕೈಗೊಳ್ಳುವ ಅವಶ್ಯಕವಾದ ಪರಿವ್ರಾಜಕ ಅವಸ್ಥೆಯ ವಿಷಯವೇ ಬೇರೆ. ಆಗ ಅದೊಂದು ಸ್ವಲ್ಪಕಾಲ ಮಾತ್ರ ನಡೆಸುವ ಒಂದು ವ್ರತದ ರೂಪವಾಗಿರುತ್ತದೆ.”


* ಯಾವುದು ಭೂಮವೋ ಅದರಲ್ಲಿಯೆ ಸುಖ; ಅಲ್ಪದಲ್ಲಿ ಎಂದರೆ ಅನಿತ್ಯ ವಸ್ತುವಿನಲ್ಲಿ ಸುಖವಿಲ್ಲ. ಭೂಮವೇ ಶಾಶ್ವತ ಸುಖ ಸ್ವರೂಪ; ಭೂಮವನ್ನೇ ಅನ್ವೇಷಣೆ ಮಾಡತಕ್ಕದ್ದು.

** ಕಾಮ್ಯವಸ್ತುಗಳ ಉಪಭೋಗದಿಂದ ಎಂದಿಗೂ ಕಾಮನೆಯ ಶಾಂತಿ ಉಂಟಾಗುವುದಿಲ್ಲ. ಹೇಗೆಂದರೆ, ತುಪ್ಪ ಹೊಯ್ಯುವುದರಿಂದ ಬೆಂಕಿ ಅಧಿಕತರವಾಗಿ ಉರಿದೇಳುವಂತೆ ಭೋಗಾನುಭವದಿಂದ ಕಾಮನೆಗಳು ಮತ್ತಷ್ಟು ಪ್ರಬಲವಾಗುತ್ತವೆ.