ಬೇಲೂರು ಮಠ
ಜುಲೈ ೨೭, ೧೯೩೨

ಸಾಯಂಕಾಲ. ಮಹಾಪುರುಷಜಿಯ ಕೋಣೆಯನ್ನು ಗುಡಿಸಿ ಶುಚಿ ಮಾಡುತ್ತಿದ್ದರು. ಅದಕ್ಕಾಗಿ ಮಹಾಪುರುಷ ಮಹಾರಾಜರು ಪಕ್ಕದ ಕೊಠಡಿಯಲ್ಲಿ ಗಂಗೆಯ ದಿಕ್ಕಿಗೆ ಮುಖ ಮಾಡಿಕೊಂಡು ಕುಳಿತು ಬ್ರಹ್ಮಚಾರಿಯೊಬ್ಬರಿಗೆ  ‘ಕಾಳಿಯ ಹೆಸರಿನ ಮಂತ್ರದ ಗೆರೆ ಸುತ್ತಿರೆ ನನ್ನ, ನಿಂತಿಹೆ ನಾ ದೃಢವಾಗಿ’ ಎಂಬ ಅರ್ಥದ ಗೀತೆಯೊಂದನ್ನು ಕಲಿಸತೊಡಗಿದರು. ಕಲಿಸುತ್ತಿದ್ದಾಗ ಒಮ್ಮೊಮ್ಮೆ ಹಾಡುತ್ತಾ ಹಾಡುತ್ತಾ ಅವರು ಗಂಟಲು ಕಟ್ಟಿದಂತಾಗಿ ಕೆಮ್ಮುತ್ತಿದ್ದರು. ನಡುನಡುವೆ ಶ್ಲೇಷ್ಮದಿಂದ ಗಂಟಲು ಕಟ್ಟಿ ಬರಲು, ಕೆಮ್ಮಿ ಸರಿಮಾಡಿಕೊಂಡು, ಮತ್ತೆ ಹಾಡುತ್ತಾ ಹಾಡುತ್ತಾ “ಕಂಠವೆ ಇಲ್ಲ; ಮತ್ತೆ ಹೇಗೆ ಹಾಡುವುದು?” ಎನ್ನುತ್ತಿದ್ದರು. ಆದರೂ ಅವರ ಕಂಠ ಎಷ್ಟು ಮಧುರ!

ಆಮೇಲೆ ಬ್ರಹ್ಮಚಾರಿ ಕೇಳಿದರು : “ಠಾಕೂರರು  ‘ನಿನ್ನ ನಾಮವನಾರು ಅಳಿಸಿದರು, ಹೇಳು, ಓ ಕೃಷ್ಣ?’ ಎಂಬ ಹಾಡನ್ನೂ ಹಾಡುತ್ತಿದ್ದರೇನು?”

ಮಹಾಪುರುಷಜಿ : “ಹೌದು, ಠಾಕೂರರು ಆ ಹಾಡನ್ನೂ ಹಾಡುತ್ತಿದ್ದರು” ಎಂದು ತಾವೆ ಅದನ್ನು ಹಾಡತೊಡಗಿದರು:

“ನಿನ್ನ ನಾಮವನಾರು ಅಳಿಸಿದರು, ಹೇಳು ಓ, ಕೃಷ್ಣ, ವಜ್ರದ ಬೆಣ್ಣೆಗಳ್ಳ?
ಎಲ್ಲಿಹುದೊ ನಿನ್ನ ಪೀತಾಂಬರ? ಹೇಳೆಲ್ಲಿ ನಿನ್ನ ಮೋಹನದ ಚೂಡಾಮಣೀ?
ನದಿಯಾಕೆ ಬಂದು ನೀ ಬೋಳು ತಲೆಯಾಗಿರುವೆ; ಉಡಿದಾರ ಕೌಪೀನಧಾರಿ!*

ಇದು ಏನು ಭಾವವೋ, ಓ ಕೃಷ್ಣ, ಅಲ್ಲವೆ ಅಭಾವವೋ ಹೇಳು ಬೈರಾಗಿ?
ತ್ಯಾಗ ಮಾಡಿದೆ ಷಡೈಶ್ವರ್ಯವನು ಉಡಿದಾರ ಕೌಪೀನಧಾರಿಯಾಗಿ
ಆಶ್ರು ಕಂಪ ಸ್ವರಭಂಗ, ಪುಲಕ ಪೂರ್ಣಿತ ಅಂಗ,
ಸಂಗಾತಿಗಳ ಸಹಿತ ಹರಿನಾಮದಲಿ ನೀನು ಲೀನ.”

ಹಾಡು ಮುಗಿದ ಮೇಲೆ ಅವರು ತುಸು ಹೊತ್ತು ನೀರವವಾಗಿ ಕುಳಿತರು. ಆಮೇಲೆ ಇಂತೆಂದರು: “ಆಹಾ, ಠಾಕೂರರು ಎಷ್ಟು ಇಂಪಾಗಿ ಹಾಡುತ್ತಿದ್ದರು!

ಹಾಡುತ್ತಾ ಹಾಡುತ್ತಾ ಭಾವಸ್ಥರಾಗಿ ಬಿಡುತ್ತಿದ್ದರು. ಅಷ್ಟು ಮಧುರ ಮತ್ತು ಚೇತೋಹಾರಿಯಾದ ಗಾನವನ್ನು ನಾನು ಮತ್ತಾರಿಂದಲೂ ಕೇಳಿಲ್ಲ. ಅವರ ಗಾನಗಳಿಂದ ನಮ್ಮ ಮನಸ್ಸು ಪ್ರಾಣ ತುಂಬಿಹೋಗಿವೆ. ಅಲ್ಲದೆ ಅವರದು ಅದೆಂತಹ ಮನೋಹರ ನೃತ್ಯ ! ದಿವ್ಯಭಾವದಲ್ಲಿ ತನ್ಮಯರಾಗಿ ಕುಣಿಯುತ್ತಿದ್ದರಲ್ಲವೆ? ಅದಕ್ಕಾಗಿಯೆ ಅಷ್ಟು ಸುಂದರವಾಗಿ ಕಾಣುತ್ತಿತ್ತು. ಅವರ ದೇಹವೂ ಅತಿ ಸುಷ್ಠು ಮತ್ತ ಅತ್ಯಂತ ಕೋಮಲವಾಗಿತ್ತು. ಭಾವದ ಆನಂದದಲ್ಲಿ ಭರಪೂರಿತರಾಗಿ ಅವರು ನೃತ್ಯ ಮಾಡುತ್ತಿದ್ದರು. ಆ ದೃಶ್ಯವೆಲ್ಲ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಅವರ ಆ ಮನೋಹರ ನೃತ್ಯವನ್ನು ನೋಡಿ ನಮಗೂ ಒಳಗೊಳಗೆ ಕುಣಿಯುವ ಹಾಗೆ ಇಚ್ಛೆಯಾಗುತ್ತಿತ್ತು. ಅವರೂ ಕೂಡ ನಮ್ಮನ್ನು ಎಳೆದು ಜೊತೆ ಕುಣಿಯುವಂತೆ ಮಾಡುತ್ತಿದ್ದರು. ಒಮ್ಮೊಮ್ಮೆ ‘ಯಾಕೋ ನಾಚಿಕೆ? ಹರಿನಾಮ ಹೇಳಿಕೊಂಡು ಕುಣಿದಾಡಬೇಕು. ಅದಕ್ಕೇಕೆ ಈ ಲಜ್ಜೆ? ಲಜ್ಜೆ, ಘೃಣಾ, ಭಯ – ಇವು ಮೂರು ಇರಬಾರದು. ಯಾರು ದೇವರನಾಮ ಹೇಳಿಕೊಂಡು ನೃತ್ಯ ಮಾಡಲಾರರೊ ಅವರ ಜನ್ಮವೇ ವ್ಯರ್ಥ!’ – ಹೀಗೆಲ್ಲ ಹೇಳುತ್ತಿದ್ದರು. ವರಾಹನಗರದ ಮಠದಲ್ಲಿ (ಕಲ್ಕತ್ತಾಕ್ಕೆ ಸಮೀಪದಲ್ಲಿ ಮೊತ್ತ ಮೊದಲು ಶ್ರೀರಾಮಕೃಷ್ಣ ಮಠ ಪ್ರಾರಂಭವಾದ ಸ್ಥಳ) ಆ ಮುರುಕಲು ಮನೆಯ ಮಹಡಿಯ ಮೇಲೆ ನಾವು ಎಂತಹ ಭಕ್ತಿಭರದಿಂದ ನೃತ್ಯಮಾಡುತ್ತಿದ್ದೆವು ಎಂದರೆ, ಒಂದೊಂದು ಸಾರಿ, ಮನೆ ಎಲ್ಲಿ ಮುರಿದು ಬೀಳುವುದೋ ಎಂದು ಹೆದರಿಕೆಯಾಗುತ್ತಿತ್ತು. ಆಹಾ ಧನ್ಯ ಮಹಾಪ್ರಭು (ಶ್ರೀಚೈತನ್ಯ) ! ಜೀವರ ಕಲ್ಯಾಣಕ್ಕಾಗಿ ಆತ ಎಂತಹ ಅನರ್ಘ್ಯವನ್ನು ಕೊಟ್ಟಿದ್ದಾನೆ? ಈ ಉಚ್ಚನಾಮಸಂಕೀರ್ತನೆ (ಶ್ರೀಚೈತನ್ಯ ಪ್ರಾರಂಭಿಸಿದ್ದು), ಹರಿನಾಮಧ್ವಿ ಎಲ್ಲಿಯವರೆಗೆ ಹೋಗುತ್ತದೆಯೊ ಅಲ್ಲಿಯವರೆಗೂ ಎಲ್ಲವೂ ಪವಿತ್ರವಾಗುತ್ತವೆ. ಗಿರೀಶಬಾಬು ರಚಿಸಿದ ಈ ಹಾಡು ತುಂಬ ಚೆನ್ನಾಗಿದೆ:

ಹರಿಯನು ಕರೆ, ಹರಿಯನು ಕರೆ, ಹರಿಯನು ಕರೆ, ಓ ಮನವೇ;
ಕಾನನ ಕುಂಜವನಲೆಯುವ, ಓ ಕೇಶವ, ಕರುಣಿಸು ನೀ ನನಗೆ;

ಇತ್ಯಾದಿ.

ಸ್ವಲ್ಪ ಹೊತ್ತಿನ ಮೇಲೆ ಮಹಾಪುರುಷಜಿ ಮೆಲ್ಲಮೆಲ್ಲನೆ ನಡೆದು ಗಂಗೆಯ ದಿಕ್ಕಿನ ವರಾಂಡಕ್ಕೆ ಹೋದರು. ಅವರಿಗೆ ನಡೆಯುವುದಕ್ಕೆ ತುಂಬ ಕಷ್ಟವಾಗುತ್ತಿತ್ತು. ಕಟಕಟೆಯ ಕಂಬಿ ಹಿಡಿದು ನಿಂತುಕೊಂಡು ಹರಿಯುತ್ತಿದ್ದ ಗಂಗೆಯನ್ನೂ ಗಂಗಾದೃಶ್ಯಮಂಡಲವನ್ನೂ ನೋಡತೊಡಗಿದರು. ಶಿಷ್ಯನೊಬ್ಬನು ತನಗೆ ಅದುವರೆಗೂ ಭಗವಲ್ಲಾಭವಾಗದಿರುವುದನ್ನು ಹೇಳಿ, ತನ್ನ ಮನದ ಮಹಾ ಅಶಾಂತಿಯ ವಿಚಾರವಾಗಿ ತಿಳಿಸಲು, ಅವರು ಹೇಳಿದರು: “ಠಾಕೂರರ ಹತ್ತಿರ ಅಳು; ಅವರನ್ನು ಕರೆ; ಅವರಿಗೆ ಮೊರೆಯಿಡು; ಕ್ರಮೇಣ ಎಲ್ಲ ಆಗುತ್ತದೆ. ಅಯ್ಯಾ, ಶಾಂತಿಯು ಮನಸ್ಸಿಗೇನು ಸುಮ್ಮನೆ ಬಂದುಬಿಡುತ್ತದೆಯೆ? ಕೂಗಿ ಕರೆ, ಮೊರೆಯಿಡು, ಅಳು.” ಗಂಗೆಯಲ್ಲಿ ಒಂದು ದೋಣಿ ಗಾಳಿಗೆ ಡೊಳ್ಳೇರುವಂತೆ ತನ್ನ ಪಟವನ್ನು ಕೆದರೆ ವೇಗವಾಗಿ ಹೋಗುತ್ತಿತ್ತು. ಅದನ್ನು ತೋರಿಸಿ ಶಿಷ್ಯನಿಗೆ ಹೇಳಿದರು: “ದಕ್ಷಿಣದ ಗಾಳಿಗೆ ನೌಕೆ ಹೇಗೆ ಪಟಗೆದರಿ ಹೋಗುತ್ತಿದೆ, ನೋಡು! ಗೊತ್ತಾಯಿತೆ? ಗುರುಕೃಪೆ ಸಾಧನೆ ಭಜನೆಗೆ ಅನುಕೂಲ ಪವನನಂತೆ. ತಾಯಿಯ ಕೃಪೆಯಿಂದ ನಿನಗಾಗಲೆ ಅದು ಲಭಿಸಿದೆ. ಈಗ ಸಾಧನೆ ಭಜನೆಯಲ್ಲಿ ಮಗ್ನನಾಗು. ರಾತ್ರಿ ಕಡಿಮೆ ಊಟಮಾಡು; ಮತ್ತೆ ಚೆನ್ನಾಗಿ ಜಪ ಧ್ಯಾನ ಮಾಡು. ಧ್ಯಾನಕ್ಕೂ ಜಪಕ್ಕೂ ತುಂಬ ಪ್ರಶಸ್ತ ಸಮಯ ರಾತ್ರಿ. ಎಲ್ಲಕ್ಕೂ ಮಿಗಿಲಾಗಿ, ಇದು ಗಂಗಾತೀರ, ಇಲ್ಲಿ ಗುರುಸ್ಥಾನ, ಅಲ್ಲದೆ ಈ ಎಲ್ಲ ಸಾಧುಸಂಗ; ಖಂಡಿತ ನಿನಗೆ ಬಹು ಬೇಗನೆ ಲಭಿಸುತ್ತದೆ. ಮಧ್ಯೆ ಮಧ್ಯೆ ಒಂದೊಂದು ಸಾರಿ ರಾತ್ರಿಯ ಊಟವನ್ನು ಸಂಪೂರ್ಣವಾಗಿ ಬಿಟ್ಟು, ಸಾಯಂ ಸಂಧ್ಯೆಯಿಂದ ಹಿಡಿದು ಪ್ರಾತಃಸಂಧ್ಯೆಯವರೆಗೂ ಜಪಮಾಡು. ನಿನ್ನೆಲ್ಲ ಮನಃಪ್ರಾಣಪೂರ್ವಕವಾಗಿ ಆತನಿಗೆ ಮೊರೆಯಿಡು; ಕರೆ. ಕೆಲಸ ಬಕ್ಷಿ ಮಾಡುತ್ತಿರು; ಆದರೆ ಮನಸ್ಸು ಸರ್ವದಾ ಹರಿಪಾದಪದ್ಮದಲ್ಲಿ ಲೀನವಾಗಿರಲಿ.” ಆಮೇಲೆ ತಮ್ಮೊಳಗೆ ತಾವೆ ಮೆಲ್ಲನೆ ಹಾಡಿಕೊಂಡರು :

‘ಕುಡಿಯಯ್ಯ, ಅವಧೂತ, ಹರಿನಾಮ ಪ್ರೇಮರಸ ಭರಿತ
ಮಧುರ ಮದಿರೆಯಿನಾಗು ನೀ ಉನ್ಮತ್ತ:’

ಇತ್ಯಾದಿ.

* * ** ಬೃಂದಾವನದ ಶ್ರೀಕೃಷ್ಣನೆ ನದಿಯಾದಲ್ಲಿ ಶ್ರೀ ಚೈತನ್ಯನಾಗಿ ಅವತರಿಸಿದನು ಎಂಬ ನಂಬಿಕೆಯಿದೆ. ಅಲ್ಲಿ ಗೋಪಾಲ ಬಾಲನಾಗಿದ್ದ; ಇಲ್ಲಿ ಬೈರಾಗಿಯಾಗಿದ್ದಾನೆ ಎಂಬ ಭಾವ.