ಬೇಲೂರು ಮಠ
೧೯೩೨

ಬೆಳಗಿನ ಹೊತ್ತು. ಮಠದ ಸಾಧು ಮತ್ತು ಬ್ರಹ್ಮಚಾರಿಗಳಲ್ಲಿ ಅನೇಕರು ಮಹಾಪುರುಷ ಮಹಾರಾಜರಿಗೆ ಪ್ರಣಾಮ ಮಾಡಿ ಹೊರಟುಹೋದ ತರುವಾಯ, ಸಂನ್ಯಾಸಿಯೊಬ್ಬರು ಪ್ರಣಾಮ ಸಲ್ಲಿಸಿ, ತಮ್ಮ ಹೃದಯದಲ್ಲಿ ಉಂಟಾಗಿರುವ ಮಹಾ ಅಶಾಂತಿಯನ್ನೂ ಮತ್ತು ಮನಸ್ಸಿನಲ್ಲಿರುವ ನೈರಾಶ್ಯವನ್ನೂ ಕುರಿತು ಅತಿ ಕಾತರಭಾವದಿಂದ ನಿವೇದನ ಮಾಡಿದಾಗ ಮಹಾಪುರುಷಜಿ ಹೇಳಿದರು : “ಭಯವೇಕಯ್ಯಾ? ಆತನ ಬಾಗಿಲೆಡೆ ಶರಣಾಗತನಾಗಿ ಬಿದ್ದಿರು; ಆಶ್ರಿತರಿಗೆ ಆತನು ವಿಮುಖನಾಗುವುದಿಲ್ಲ.”

ಸಂನ್ಯಾಸಿ : “ಇಷ್ಟುಕಾಲವೂ ವೃಥಾ ಹಾಳಾಗಿ ಹೋಯಿತು; ಇದುವರೆಗೂ ಭಗವಲ್ಲಾಭವಾಗಿಲ್ಲ; ಶಾಂತಿಯೂ ಲಭಿಸಿಲ್ಲ. ಒಂದೊಂದು ಸಾರಿ ದಾರುಣವಾದ ಅವಿಶ್ವಾಸವೂ ಇದ್ದಕ್ಕಿದ್ದ ಹಾಗೆ ಮನಸ್ಸನ್ನೆಲ್ಲ ಆಕ್ರಮಿಸಿಬಿಡುತ್ತದೆ. ಇದುವರೆಗೂ ತಮ್ಮಿಂದ ಪಡೆದ ಎಲ್ಲ ಉಪದೇಶ ವಾಕ್ಯಗಳ ವಿಚಾರದಲ್ಲಿಯೂ ಸಂದೇಹ ಬಂದುಬಿಡುತ್ತಿದೆ.”

ಈ ಮಾತುಗಳನ್ನೆಲ್ಲ ಕೇಳಿ ಮಹಾಪುರುಷ ಮಹಾರಾಜರ ಮುಖಮಂಡಲವೆಲ್ಲ ಒಮ್ಮೆಂದೊಮ್ಮೆಗೆ ಕೆಂಪಾಗಿಹೋಯಿತು. ಅವರು ಒಂದಿನಿತು ಉತ್ತೇಜಿತ ಧ್ವನಿಯಿಂದಲೆ ಹೀಗೆ ಹೇಳಿದರು : “ಅಯ್ಯಾ ಗುರುಮಹಾರಾಜರು ಸತ್ಯವಾದರೆ ನಾವೂ ಸತ್ಯವೆ. ನಾವು ಏನನ್ನೆ ಹೇಳಲಿ ಸತ್ಯವನ್ನಲ್ಲದೆ ಬೇರೆ ಏನನ್ನೂ ಹೇಳುವುದಿಲ್ಲ. ನಾವು ಜನರನ್ನು ಮೋಸಗೊಳಿಸುವುದಕ್ಕಾಗಿ ಬಂದಿಲ್ಲ. ನಾವು ಮುಳುಗಿಹೋದರೆ ನೀನೂ ನಮ್ಮ ಜೊತೆ ಮುಳುಗಿ ಹೋಗುವೆ. ಆದರೆ ಆತನ ಕೃಪೆಯಿಂದ ನಮಗೆ ಗೊತ್ತಾಗಿದೆ, ನಾವೆಂದೂ ಮುಳುಗುವುದಿಲ್ಲ; ಹಾಗೆಯೆ ನೀನೂ ಮುಳುಗುವುದಿಲ್ಲ.”

* * *

ಮಹಾಪುರುಜಿ ಹೆಚ್ಚಾಗಿ ನಡೆದೂಗಿಡದೂ ಮಾಡುವುದಕ್ಕೆ ಆಗುತ್ತಿರಲಿಲ್ಲ. ಆದಕಾರಣ ಒಬ್ಬ ಸೇವಾರ್ಥಿಯ ಮೇಲೆ ಆ ಭಾರ ಬಿದ್ದಿತು. ಏನೆಂದರೆ, ದಿನವೂ ಆತ ಮಠವನ್ನೆಲ್ಲ ಸುತ್ತಿ, ಅಸ್ವಸ್ಥರಾಗಿದ್ದ ಸಾಧು ಮತ್ತು ಬ್ರಹ್ಮಚಾರಿಗಳ ಯೋಗಕ್ಷೇಮವನ್ನು ವಿಚಾರಿಸಿ, ದನಕರುಗಳಿಗೆ ಹುಲ್ಲು ಮೇವು ಹಾಕಿದ್ದಾರೆಯೆ ಇಲ್ಲವೆ ಎಂಬುದನ್ನು ತಿಳಿದುಕೊಂಡು, ಮತ್ತು ಮಠದ ಆವೊತ್ತಿನ ಎಲ್ಲ ಕೆಲಸ ಕಾರ್ಯಗಳ ಆಗುಹೋಗನ್ನು ನೋಡಿಮಾಡಿ ಅರಿತು, ಸಾಯಂಕಾಲ ಸುಮಾರು ಒಂದು ಗಂಟೆಕಾಲ  ಆ ವಾರ್ತೆಯನ್ನೆಲ್ಲ ಮಹಾಪುರುಷಜಿಗೆ ವಿವರವಾಗಿ ವಿಸ್ತಾರವಾಗಿ ನಿವೇದಿಸಬೇಕಾಗಿತ್ತು. ಒಂದು ದಿನ ಎಂದಿನಂತೆ ಮಠವನ್ನೆಲ್ಲ ಸುತ್ತಿ, ಎಲ್ಲ ಕೆಲಸ ಕಾರ್ಯಗಳನ್ನೂ ತಿಳಿದು, ಆ ಸೇವಾರ್ಥಿ ಅದನ್ನೆಲ್ಲ ವರದಿ ಮಾಡಲು ಉಪ್ಪರಿಗೆಗೆ ಹೋಗಿ ನೋಡುತ್ತಾನೆ, ಮಹಾಪುರುಷಜಿ ಒಬ್ಬರೆ ಕೊಠಡಿಯಲ್ಲಿ ಗಂಭೀರ ಭಾವಮಗ್ನರಾಗಿ ಕುಳಿತಿದ್ದಾರೆ! ಕಣ್ಣು ಅರೆ ಮುಚ್ಚಿದ್ದುವು, ಪ್ರಯತ್ನಪೂರ್ವಕವಾಗಿ ಬಾಹ್ಯಜಗತ್ತಿನ ಕಡೆಗೆ ತೆರೆಯಲೆಳೆಸಿಯೂ ತೆರೆಯಲಾರದಿವೆಯೊ ಎಂಬಂತೆ. ಸೇವಕಸಾಧು ಬಳಿಗೆ ನಡೆದು ಎದುರಿಗೆ ನಿಂತೂ ಅನ್ಯದಿನಗಳಲ್ಲಿ ಕೇಳುತ್ತಿದ್ದಂತೆ ಯಾವ ಪ್ರಶ್ನೆಯನ್ನೂ ಹಾಕಲಿಲ್ಲ. ಸೇವಕನು ಹತ್ತಿರ ಬಂದದ್ದೆ ಅವರ ಗಮನಕ್ಕೆ ಬಿದ್ದಂತೆ ತೋರಲಿಲ್ಲ. ಅವರ ಆ ಪ್ರಕಾರವಾದ ಭಾವಾವಸ್ಥೆಯನ್ನು ಕಂಡು ಸ್ತಂಭಿತನಾಗಿ ಸೇವಕನು ಒಂದು ಪಾರ್ಶ್ವಕ್ಕೆ ಸರಿದು ನಿಂತನು. ಆ ಭಾವದಲ್ಲಿಯೆ ಅನೇಕಕ್ಷಣ ಕಳೆದುಹೋದ ಮೇಲೆ ಅವರು ಈ ಕಡೆ ತುಸು ನೋಡತೊಡಗಲು ಅವರ ಸಮೀಪಕ್ಕೆ ಹೋಗಿ, ಹೇಳಲಾರಂಭಿಸಿದೊಡನೆಯೆ, ಮಹಾಪುರುಷಜಿ ಧೀರಭಾವದಿಂದ ಹೇಳಿದರು : “ನೋಡು, ನನ್ನ ಪಾಲಿಗೆ ಇನ್ನು ಈ ಜಗತ್ತಿಗೆ ಯಾವ ಅಸ್ತಿತ್ವವೂ ಇಲ್ಲ; ಇರುವುದೆಂದರೆ ಏಕಮಾತ್ರ ಬ್ರಹ್ಮವೆ. ಮನಸ್ಸನ್ನು ಕೆಳಗಿಳಿಸಿ ಇಡುವ ಸಲುವಾಗಿಯೆ ಈ ಮಾತುಕತೆ ಎಲ್ಲ ಆಡುತ್ತೇನೆ ; ಮತ್ತು ಇತರ ಕೆಲಸಗಿಲಸಗಳಲ್ಲಿ ಆಸಕ್ತಿ ತೋರಿಸುತ್ತೇನೆ.” ಇಷ್ಟನ್ನು ಮಾತ್ರ ಹೇಳಿ ಮತ್ತೆ ಮೊದಲಿನಂತೆ ಗಂಭೀರವಾಗಿ ಕುಳಿತುಬಿಟ್ಟರು. ಮತ್ತೆ ಆ ದಿನ ಯಾವುದರ ವಿಚಾರವಾಗಿಯೂ ಮಾತೆತ್ತಲಿಲ್ಲ.

* * *

ಒಂದು ದಿನ ಮಹಾಪುರುಷಜಿ ಕಾಶೀಪುರದ ತೋಟದ ಮನೆಯಲ್ಲಿ (ಕಾಯಲೆಯಾಗಿದ್ದ ಶ್ರೀ ಗುರುಮಹಾರಾಜರ ಜೊತೆಯಲ್ಲಿ) ಇರುತ್ತಿದ್ದಾಗ ಸ್ವಾಮೀಜಿಯ (ಸ್ವಾಮಿ ವಿವೇಕಾನಂದರ) ಸಂಬಂಧವಾಗಿ ತಾವು ಕಂಡ ಒಂದು ದರ್ಶನದ ವಿಷಯ ಹೇಳಿದರು : “ನೋಡು, ಕಾಶೀಪುರದಲ್ಲಿ ಸ್ವಾಮೀಜಿಯ ಸಂಗಡ ಇದ್ದಾಗ ಒಂದು ಆಶ್ಚರ್ಯ ಘಟನೆ ನಡೆಯಿತು. ಆಗ ನಾವೆಲ್ಲ ಕೆಳಗಿನ ಒಂದು ಕೊಠಡಿಯಲ್ಲಿ ಒಟ್ಟಿಗೆ ಪಕ್ಕಪಕ್ಕದಲ್ಲಿ ಮಲಗುತ್ತಿದ್ದೆವು; ಕಾರಣ, ಹಾಸಿಗೆ ಬಟ್ಟೆ ಮಗಿದ್ದುದೂ ಅಷ್ಟಕಷ್ಟೆ. ದೊಡ್ಡದೊಂದು ಸೊಳ್ಳೆ ಪರದೆ ಇತ್ತು; ಅದನ್ನು ಕಟ್ಟಿಕೊಂಡು ಎಲ್ಲರೂ ಒಂದೇ ಪರದೆಯ ಒಳಗೆ ಮಲಗಿಬಿಡುತ್ತಿದ್ದೆವು. ಒಂದಿರುಳು ನಾನು ಸ್ವಾಮಿಜಿಯ ಪಕ್ಕದಲ್ಲಿ ಮಲಗಿದ್ದೆ; ಅದೇ ಪರದೆಯ ಒಳಗೆ ಶಶಿ ಮಹಾರಾಜ್ (ಸ್ವಾಮಿ ರಾಮಕೃಷ್ಣಾನಂದರು) ಮತ್ತು ಇನ್ನೂ ಯಾರಾರೊ ಕೆಲವರೂ ಇದ್ದರು. ಗಭೀರ ರಾತ್ರಿಯಲ್ಲಿ ಹಠಾತ್ತನೆ ನಿದ್ರಾಭಂಗವಾಯಿತು; ಎಚ್ಚತ್ತು ನೋಡುತ್ತೇನೆ, ಪರದೆಯೆ ಒಳಗೆಲ್ಲ ಒಂದು ಬೆಳಕಿನ ಹೊನಲೆ ತುಂಬಿಹೋಗಿದೆ! ಸ್ವಾಮೀಜಿ ನನ್ನ ಪಕ್ಕದಲ್ಲಿಯೆ ಮಲಗಿದ್ದರೇನೊ ಹೌದು; ಆದರೆ ನೋಡುತ್ತೇನೆ, ಸ್ವಾಮೀಜಿ ಕಾಣಿಸಲೆ ಇಲ್ಲ. ಅವರಿಗೆ ಬದಲಾಗಿ ಏಳೆಂಟು ವರ್ಷ ವಯಸ್ಸಿನ ಬಾಲಕರನ್ನು ಹೋಲುವ ಕೆಲವರು ಪುಟ್ಟ ಪುಟ್ಟ ಶಿವರು ಮಲಗಿದ್ದಾರೆ; ಬತ್ತಲೆಯಾಗಿದ್ದಾರೆ; ಜಟಾಜೂಟ ಧಾರಿಗಳಾಗಿದ್ದಾರೆ; ಶ್ವೇತವರ್ಣದಿಂದ ರಂಜಿಸುತ್ತಿದ್ದಾರೆ; ಅವರ ಮೆಯ್ಗಳಿಂದಲೆ ಹೊಮ್ಮುತ್ತಿದ್ದ ಆಲೋಕದಿಂದ ಪರದೆಯ ಒಳಭಾಗವೆಲ್ಲ ಬೆಳಗುತ್ತಿದ್ದದ್ದು. ಮೊದಲಂತೂ ನನಗೆ ಅದೇನು ವ್ಯಾಪಾರ ಎಂದು ಅರಿಯಲೂ ಆಗಲಿಲ್ಲ; ಏನೋ ಕಣ್ಣಿನ ಭ್ರಮೆ ಇರಬೇಕು ಎಂದೆ ಊಹಿಸದೆ. ಪ್ರಯತ್ನಪೂರ್ವಕವಾಗಿ ಕಣ್ಣನ್ನು ಸರಿಯಾಗಿ ಅಗಲಿಸಿ ಉಜ್ಜಿಕೊಂಡು ಮತ್ತೆ ನೋಡಿದೆ. ಏನು ನೋಡುವುದು? ಅದೇ ರೀತಿಯಲ್ಲಿ ಪುಟ್ಟ ಪುಟ್ಟ ಶಿವರು ದಿವ್ಯವಾಗಿ ಮಲಗಿದ್ದಾರೆ! ಆಗ ಕಿಂಕರ‍್ತವ್ಯ ವಿಮೂಢನಾಗಿ ಕುಳಿತುಬಿಟ್ಟೆ; ಮಲಗಲೂ ಮನಸ್ಸಾಗಲಿಲ್ಲ, ಭಯವೂ ಆಯಿತು. ಏಕೆಂದರೆ ಗಾಢನಿದ್ರೆಯಲ್ಲಿ ಗೊತ್ತಿಲ್ಲದೆ ನಾನೆಲ್ಲಿಯಾದರೂ ಅವರ ಮೈಗೆ ಕಾಲು ತಗಲಿಸಬಹುದು ಎಂದು. ಆ ರಾತ್ರಿಯನ್ನೆಲ್ಲ ಧ್ಯಾನ ಮಾಡುತ್ತಲೆ ಕಳೆದೆ. ಬೆಳಕು ಹರಿಯುತ್ತಲಿದ್ದ ವೇಳೆ ನೋಡುತ್ತೇನೆ, ಸ್ವಾಮೀಜಿ ಹೇಗೆ ಮಲಗಿದ್ದರೋ ಹಾಗೆಯೆ ಮಲಗಿ ನಿದ್ರೆ ಮಾಡುತ್ತಿದ್ದಾರೆ! ಹೊತ್ತಾರೆ ಸ್ವಾಮೀಜಿಗೆ ನಾನು ಎಲ್ಲವನ್ನೂ ಹೇಳಿದೆ. ಎಲ್ಲವನ್ನೂ ಆಲಿಸಿದ ಮೇಲೆ ಅವರು ಗಟ್ಟಿಆಗಿ ನಗತೊಡಗಿದರು.”

“ಅದಾದ ಬಹುಕಾಲದ ಮೇಲೆ ಅಕಸ್ಮಾತ್ತಾಗಿ ಶ್ರೀ ವೀರೇಶ್ವರ ಶಿವ ಸ್ತೋತ್ರವನ್ನು ಓದುತ್ತಿದ್ದಾಗ ಆತನನ್ನು ಕುರಿತು ಒಂದು ಧ್ಯಾನಮಂತ್ರದಲ್ಲಿ ನಾನು ಕಂಡ ದರ್ಶನದ್ದೇ ಒಂದು ರೀತಿಯ ವರ್ಣನೆಯನ್ನು ಎದುರುಗೊಂಡೆ.

[1] ಆಗ ಅರ್ಥಾತ್ – ವಿಭೂತಿಭೂಷಿತನಾದ ಎಂಟು ವರ್ಷ ವಯಸ್ಸಿನ ಬಾಲಕ; ಅವನ ಕಣ್ಣು ಅಕರ್ಣ ವಿಸ್ತೃತವಾದದ್ದು; ಮುಖ ಮತ್ತು ಹಲ್ಲುಗಳು ಸುಂದರವಾಗಿವೆ; ತಲೆಯಲ್ಲಿ ಸುಂದರವಾದ ಪಿಂಗಳ ವರ್ಣದ ಜಟೆಯಿದೆ. ಅವನು ಬೆತ್ತಲೆಯಾಗಿದ್ದಾನೆ; ಅವನ ಮೊಗವೊ ಮುಗುಳುನಗೆಯಿಂದ ಮುಗ್ಧ ಮನೋಹರವಾಗಿದೆ, ಮತ್ತು ಅವನ ಶರೀರದಲ್ಲಿ ಶೈಶವೋಚಿತವಾಗಿ ಕಂಗೊಳಿಸುವ ಅಲಂಕಾರಗಳಿವೆ. ಗೊತ್ತಾಯಿತು ನಾವು ಕಂಡದ್ದು ಸತ್ಯ ಎಂದು. ಸ್ವಾಮೀಜಿಯ ಸ್ವರೂಪವೇ ಅದು. ಆ  ‘ವೀರೇಶ್ವರ’ ಶಿವನ ಅಂಶವಾಗಿಯೆ ತಾನೆ ಅವರು ಸಂಭವಿಸಿದ್ದು? ಆದ್ದರಿಂದಲೆ ನನಗೆ ಆ ತರಹದ ದರ್ಶನವಾದದ್ದು.”

* * *

ಮಹಾಪುರುಷ ಮಹಾರಾಜರ ಸ್ವಾಸ್ಥ್ಯ ಕ್ರಮೇಣ ಕೆಡುತ್ತಲೆ ಹೋಯಿತು. ತಿರುಗಾಡುವುದು ಹೆಚ್ಚು ಕಡಿಮೆ ಒಮ್ಮೆಗೇ ನಿಂತುಬಿಟ್ಟಿತು. ಉಪ್ಪರಿಗೆಯಿಂದ ಇಳಿದು ಕೆಳಗೆ ಹೋಗುವುದಂತೂ ದೂರದ ಮಾತೇ ಆಯಿತು; ಉಪ್ಪರಿಗೆಯ ಮೇಲೆಯೂ ಕಾಲಾಡುವುದೆ ಕಷ್ಟವಾಯಿತು. ಇನ್ನೊಬ್ಬರ ನೆರವಿಲ್ಲದೆ ನಡೆದಾಡುತ್ತಿರಲಿಲ್ಲ. ಆಗ ಒಂದು ದಿನ ಹೀಗೆ ಹೇಳಿದರು : “ಹೊರಗಣ ಕ್ರಿಯೆ ಕಡಿಮೆಯಾದಂತೆಲ್ಲ ಒಳಗಣದು ಹೆಚ್ಚು ಹೆಚ್ಚಾಗುತ್ತಿದೆ. ಆ ಪರಮಾನಂದದ ಖನಿ ಇರುವುದಾದರೂ ಒಳಗೇ. ಸದ್ಯಕ್ಕೆ ಹಾಗೆಯೇ ನಡೆದುಕೊಂಡು ಹೋಗುತ್ತಿದೆ; ಅದೇ ಠಾಕೂರರ ಇಚ್ಛೆ.” ಅಲ್ಲದೆ ಮತ್ತೆ ಮತ್ತೆ ಈ ಹಾಡನ್ನು ತಮ್ಮೊಳಗೇ ಹೇಳಿಕೊಳ್ಳುತ್ತಿದ್ದರು: “ಮನದ ಸಂದೆಯ ದೂರವಾಗಿದೆ; ಮೃತ್ಯುದಾರಿಯೆ ಮುಚ್ಚಿಹೋಗಿದೆ,” ಇತ್ಯಾದಿ. ತಮಗಾಗುತ್ತಿದ್ದ ದರ್ಶನಗಳ ಕುರಿತೂ ಆಗಾಗ್ಗೆ ಪ್ರಸ್ತಾವಿಸುತ್ತಿದ್ದರು. ಒಂದು ದಿನ ಸಂಧ್ಯಾವೇಳೆ; ಇನ್ನೂ ದೇವರ ಮನೆಯಲ್ಲಿ ಆರತಿ ಪ್ರಾರಂಭವಾಗಿರಲಿಲ್ಲ; ಕೋಣೆಗಳಿಗೆಲ್ಲಾ ಆಗತಾನೆ ದೀಪ ಹಚ್ಚಿದ್ದರು. ಶ್ರೀ ಶ್ರೀ ಗುರುಮಹಾರಾಜರ ಕಡೆ ಮುಖ ಹಾಕಿಕೊಂಡು ಮಹಾಪುರುಷ ಮಹಾರಾಜ್ ನೀರವವಾಗಿ ಕುಳಿತಿದ್ದರು. ಇದ್ದಕ್ಕಿದ್ದ ಹಾಗೆ ಹೇಳಿದರು : “ಕೊಡು, ಕೊಡು, ನನಗೆ ವಿಶ್ವನಾಥನ (ಕಾಶಿಯ) ವಿಭೂತಿ ಕೊಡು; ಬೇಗ ಹಾಸಿಗೆ ಮೇಲೆ ಒಂದು ರೇಶ್ಮೆ ಮಡಿ ಹರಡು. ಆಹಾ ಇಲ್ಲಿಯೆ ಬಂದಿದ್ದಾರೆ ಠಾಕೂರರು; ಮಹಾದೇವನೂ!” ಹೀಗೆ ಹೇಳುತ್ತಾ ಹಠಾತ್ತನೆ ಧ್ಯಾನಸ್ಥರಾಗಿಬಿಟ್ಟರು. ಆ ದಿನ ಬಹಳ ರಾತ್ರಿ ಗಳೆಯವವರೆಗೂ ಹಾಗೆಯೆ ಧ್ಯಾನಸ್ಥರಾಗಿದ್ದರು.

* * *

ಮತ್ತೂ ಒಂದು ದಿನ ಬೆಳಗಿನ ಹೊತ್ತು ಹೇಳಿದರು. “ಇದೇ ತಾನೆ ಬಂದಿದ್ದರು, ಸ್ವಾಮೀಜಿ ಮತ್ತು ಮಹಾರಾಜ್ (ಸ್ವಾಮಿ ವಿವೇಕಾನಂದರು ಮತ್ತು ಸ್ವಾಮಿ ಬ್ರಹ್ಮಾನಂದರು) ನನ್ನನ್ನು ಕರೆದರು  ‘ಬಂದುಬಿಡು ತಾರಕ್‌ದಾ’ ಎಂದು. ನೀ ನೋಡಲಿಲ್ಲವೆ ಅವರನ್ನ? ಇಲ್ಲಿಯೆ ಎದುರಿಗೇ ನಿಂತಿದ್ದರಲ್ಲಾ!”

ಆತ್ಮಜ್ಞ ಪುರುಷನ ಸಣ್ಣಪುಟ್ಟ ಕೆಲಸಕಾರ್ಯಗಳಲ್ಲಿಯೂ ಮಾತುಕತೆಗಳಲ್ಲಿಯೂ ಏನೊ ಒಂದು ಗೂಢ ರಹಸ್ಯ ಇದ್ದೇ ಇರುತ್ತದೆ. ಸಾಧಾರಣ ಮಾನವರು ತಮ್ಮ ಕ್ಷುದ್ರ ಬುದ್ಧಿಯ ಅಳತೆಗೋಲಿನಿಂದ ಬ್ರಹ್ಮಜ್ಞ ಪುರುಷನ ಕಾರ್ಯಗಳನ್ನು ವಿಚಾರಕ್ಕೆ ಒಳಪಡಿಸಿ ಯಾವುದಾದರೊಂದು ಸಿದ್ಧಾಂತಕ್ಕೆ ಬಂದರೂ ಅನೇಕ ವೇಳೆ ಆ ಸಿದ್ಧಾಂತವು ನಿಜದಿಂದ ಬಹುದೂರವಾಗಿರುತ್ತದೆ. ಸುಮಾರು ೧೯೧೩ ರಲ್ಲಿ ಅವರು ಕಠಿನ ರಕ್ತಭೇದಿಯ ರೋಗದಿಂದ ನರಳಿದ ಮೇಲೆ ಮಹಾಪುರುಷಜಿ ತಮ್ಮ ಆಹಾರ ಪಥ್ಯದ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಿನ ನಿಷ್ಠೆಯನ್ನು ಅನುಸರಿಸತೊಡಗಿದರು. ಅವರ ಹಗಲೂಟವೆಲ್ಲ ಸ್ವಲ್ಪ ಅನ್ನ, ಸಾಮಾನ್ಯವಾದ ಕಾಯಿಪಲ್ಯದ ಸಾರು, ಮತ್ತು ಬೇಯಿಸಿದ ತರಕಾರಿ – ಇಷ್ಟರಲ್ಲೆ ಪರ್ಯವಸಾನವಾಗುತ್ತಿತ್ತು. ಪೂಜನೀಯ ಶರತ್ ಮಹಾರಾಜರು (ಸ್ವಾಮಿ ಶಾರದಾನಂದರು) ಅವರು ಸೇವಿಸುತ್ತಿದ್ದ ನೀರುಸಾರಿಗೆ ವಿನೋದಕ್ಕಾಗಿ “ಮಹಾಪುರುಷರ ಸಾರು!” ಎಂದೇ ಹೆಸರಿಟ್ಟಿದ್ದರು. ರಾತ್ರಿಯೂಟವೂ ಅಷ್ಟೆ ಸರಳ ಮತ್ತು ಸ್ವಲ್ಪವಾಗಿರುತ್ತಿತ್ತು. ಆದರೆ ೧೯೩೩ನೆಯ ವರ್ಷದಲ್ಲಿ ಅವರು (ಪಾರ್ಶ್ವವಾಯು) ಆಕ್ರಾಂತರಾಗಿ ಅವರ ವಾಕ್‌ಶಕ್ತಿ ಒಮ್ಮಿಂದೊಮ್ಮೆಗೆ ನಿಂತುಹೋದಕಾಲಕ್ಕೆ ಮೊದಲು, ಸುಮಾರು ಒಂದು ವರ್ಷಕಾಲ ಅದೇ ಮಹಾಪುರುಷ ಮಹಾರಾಜ್ ಸೇವಕಸಾಧುಗಳಿಗೆ ಬಗೆಬಗೆಯ ಒಳ್ಳೊಳ್ಳೆಯ ಪದಾರ್ಥಗಳನ್ನು ಅಟ್ಟುಕೊಡುವಂತೆ ಒತ್ತಾಯಪಡಿಸುತ್ತಿದ್ದರು; ಅಲ್ಲದೆ ವಿಶೇಷ ರೀತಿಯ ಭಕ್ಷ್ಯಭೋಜ್ಯಗಳನ್ನು ತಿನ್ನಲು ಇಚ್ಛೆಪಡುತ್ತಿದ್ದರು. ಅವರ ಈ ಪ್ರಕಾರವಾದ ಭಾವಾಂತರ ಮಠದ ಸಮಗ್ರ ಸಾಧುಮಂಡಲಿಗೂ ಸೇವಕವರ್ಗಕ್ಕೂ ಮನಸ್ಸಿನಲ್ಲಿ ಒಂದು ವಿಸ್ಮಯವನ್ನೆ ಉಂಟುಮಾಡಿತು. ಅದರಲ್ಲಿಯೂ ಅದೇ ಸಮಯದಲ್ಲಿ ಅವರ ಶರೀರ ತೀರಾ ಕೆಟ್ಟುಹೋಗಿದ್ದುದರಿಂದ ಡಾಕ್ಟರಗಳೂ ಅವರಿಗೆ ಕೇವಲ ಮಾತ್ರ ಜಲೀಯಪದಾರ್ಥಗಳನ್ನೇ ಪಥ್ಯವಾಗಿ ನೇಮಿಸಿದ್ದರು.

ಒಂದು ದಿನ ಬೆಳಿಗ್ಗೆ ಅವರು ಬಹಳಹೊತ್ತು ಸುಮ್ಮನೆ ಕುಳಿತಿದ್ದು ಹಠಾತ್ತನೆ ಹೇಳಿದರು : “ನೋಡು, ಶ್ರೀಗುರುಮಹಾರಾಜರ ಮಾತುಕತೆಗಳಲ್ಲಿ ಕೆಸರುಮೀನಿನ[2] ವಿಚಾರ ಬರುತ್ತದೆ. ಅವರು ಹೇಳುತ್ತಾರೆ ‘ಕೆಸರುಮೀನು ಕೆಸರಿನಲ್ಲೇನೊ ಇರುತ್ತದೆ. ಆದರೆ ಅದರ ಮೈಗೆ ಕೆಸರು ಒಂದಿನಿತೂ ಅಂಟಿಕೊಳ್ಳುವುದಿಲ್ಲ. ಅದೇ ರೀತಿ ಕೆಲವರು ಭಗವಂತನನ್ನು ಪಡೆದುಕೊಂಡ ಮೇಲೆ ಸಂಸಾರದಲ್ಲಿದ್ದರೂ ಸಂಸಾರಕ್ಕೆ ಅಂಟಿಕೊಳ್ಳದಂತಿರುತ್ತಾರೆ? – ಸರಿ, ಆ ಕೆಸರುಮೀನು ಯಾವ ತರಹ ಇರುತ್ತದೆ. ಒಂದು ಸಾರಿ ನೋಡಿಬಿಡುತ್ತೇನೆ; ಅಲ್ಲದೆ ಅದನ್ನು ತಿಂದೂ ನೋಡಬೇಕು, ಕೆಸರು ಮೀನಿನ ರುಚಿ ಹೇಗಿರುತ್ತದೆ ಎಂದು.’ ಬಹಳ ಪ್ರಯತ್ನ ಮಾಡಿ ವರಾಹನಗರದ ಒಬ್ಬ ಬೆಸ್ತಗಿತ್ತಿಯ ಸಹಾಯದಿಂದ ಮೂರು ನಾಲ್ಕು ಕೆಸರುಮೀನುಗಳನ್ನು ಸಂಪಾದಿಸಲಾಯಿತು. ಮಹಾಪುರುಷಜಿಗೆ ಆ ಕೆಸರುಮೀನುಗಳನ್ನು ನೋಡಿ ಭಾರಿ ಖುಷಿ! ಮಕ್ಕಳಂತೆ ಆನಂದಪಡತೊಡಗಿದರು. ಆಮೇಲೆ ಅವರಿಗಾಗಿ ಆ ಮೀನುಗಳನ್ನು ಪಲ್ಯಮಾಡಿಕೊಡಲಾಯಿತು. ಅವರು ಎಲ್ಲಿಯೊ ಒಂದು ಚೂರನ್ನು ಬಾಯಿಗೆ ಹಾಕಿಕೊಂಡು ರುಚಿನೋಡಿಬಿಟ್ಟು ನಗುತ್ತಾ ಹೇಳಿದರು : “ಸರಿ, ಪೂರೈಸಿತಲ್ಲಾ ಇನ್ನು ಈ ಕೆಸರು ಮೀನನ್ನು ತಿಂದು ನೋಡುವುದೂ? ಇಚ್ಛೆಯಾಯಿತು, ಅದನ್ನೊಂದಿಷ್ಟು ತಿಂದು ನೋಡಬೇಕೆಂದು. ಠಾಕೂರರು ಹೇಳುತ್ತಿದ್ದರು, ಇಂಥ ಸಣ್ಣ ಪುಟ್ಟ ವಾಸನೆಗಳನ್ನು ಅನುಭವಿಸಿ ಮುಗಿಸಿಬಿಡಬೇಕೆಂದು.” ಹಾಗೆಂದು ಮತ್ತೆ ನಗುತ್ತಾ ಹೇಳಿದರು : “ಯಾರಿಗೆ ಗೊತ್ತಯ್ಯಾ ಇಂಥ[3] ಸಣ್ಣಪುಟ್ಟ ವಾಸನೆಗಳಿಗಾಗಿಯೆ ಮತ್ತೆ ಜನ್ಮ ಎತ್ತಬೇಕಾಗಿ ಬಂದರೆ?”

ಅವರಿಗೆ ಪಾರ್ಶ್ವವಾಯು ಪ್ರಾಪ್ತವಾಗುವುದಕ್ಕೆ ಕೆಲವೆ ದಿನಗಳ ಮುನ್ನ ಅವರಿಗೆ ಮಾವಿನಹಣ್ಣು ತಿನ್ನಬೇಕೆಂಬ ಇಚ್ಛೆಯಾಯಿತು. ಆಗಿನ್ನೂ ಒಳ್ಳೆಯ ಮಾವಿನಹಣ್ಣು ಮಾರ್ಕೆಟಿಗೆ ಬಂದಿರಲಿಲ್ಲ. ಕಲ್ಕತ್ತೆಯ ಬಜಾರುಗಳಲ್ಲೆಲ್ಲಾ ಹುಡುಕಿಸಿ ಕೆಲವು ಹಣ್ಣುಗಳನ್ನು ತರಲಾಯಿತು. ಅವರು ತಮಗಾಗಿ ಒಂದನ್ನು ಮಾತ್ರ ಇಟ್ಟುಕೊಂಡು ಉಳಿದವುಗಳನ್ನು ಶ್ರೀಗುರುಮಹಾರಾಜರ ನೈವೇದ್ಯಕ್ಕಾಗಿ ಕೊಟ್ಟುಬಿಟ್ಟರು; ಮತ್ತು ಊಟದ ವೇಳೆ ಆ ಹಣ್ಣಿನ ರಸವನ್ನು ಹಿಂಡಿ ತಮಗೆ ಕೊಡಬೇಕೆಂದು ಸೇವಕನಿಗೆ ಆದೇಶವಿತ್ತರು. ಆಗ ಅವರು ಉಬ್ಬಸರೋಗದಿಂದ ನರಳುತ್ತಿದ್ದರು; ಅವರ ಮೇಲೆ ಮಾವಿನಹಣ್ಣಿನ ರಸ ಸೇವಿಸುವುದರಿಂದ ಭಯಾನಕವಾದ ಅನಿಷ್ಟವಾಗಬಹುದೆಂದು ಸೇವಕಸಾಧುಗಣ ಉತ್ಕಂಠಿತವಾಯಿತು. ಆದ್ದರಿಂದ, ತಮ್ಮತಮ್ಮೊಳಗೆ ಬಹಳ ಆಲೋಚಿಸಿದ ಮೇಲೆ, ಸೇವಕಸಾಧುಗಳಲ್ಲಿ ಮುಖ್ಯರಾದವರೊಬ್ಬರು, ಅವರಿಗೆ ಡಾಕ್ಟರ ಹೆಸರು ಹೇಳಿ ಅದನ್ನು ಮುಂದುಮಾಡಿಕೊಂಡು, ಮಾವಿನಹಣ್ಣಿನ ರಸ ಅವರ ಕಾಯಿಲೆಗೆ ಕೆಡಕಾಗುವುದರಿಂದ ಅದನ್ನು ಸೇವಿಸಬಾರದೆಂದು ಬಹಳವಾಗಿ ಕೇಳಿಕೊಂಡರು. ಹೀಗೆ ಬಾರಿಬಾರಿಗೂ ಅನುರೋಧ ಮಾಡಲು ಮಹಾಪುರುಷಜಿ ಸ್ವಲ್ಪ ಗಂಭೀರಭಾವದಿಂದಲೆ ಬಿಗಿಯಾಗಿ ಉತ್ತರಕೊಟ್ಟರು: “ನಾನು ಹೇಳ್ತೇನೆ, ತಿಂದೆ ತಿನ್ನುತ್ತೇನೆ.” ಅವರ ಊಟ ಮುಗಿಯುವಷ್ಟರಲ್ಲಿ ಮಾವಿನಹಣ್ಣಿನ ರಸ ತಯಾರು ಮಾಡಿಕೊಟ್ಟಾಗ, ಆ ಹಣ್ಣಿನ ರಸಕ್ಕೆ ತುದಿಬೆರಳನ್ನು ಅದ್ದಿ ಬಾಯಿಗಿಟ್ಟು, ಅದನ್ನು ಹಿಂದಕ್ಕೆ ಕೊಟ್ಟು ಹೇಳಿದರು :

“ಅಂತೂ ಮಾವಿನಹಣ್ಣಿನ ರಸ ರುಚಿ ನೋಡಿಯೆಬಿಟ್ಟೆ, ಇಚ್ಛೆಯಾಯಿತು, ಅದಕ್ಕೇ ಒಂದು ಸ್ವಲ್ಪ ಬಾಯಿಗೆ ಹಾಕಿಕೊಂಡೆ… ನಾನೇನು ಲೋಭದಿಂದ ತಿನ್ನುತ್ತೇನೆಯೆ? ನಾನೇಕೆ ಅದನ್ನೂ ಇದನ್ನೂ ಅಷ್ಟೂ ಇಷ್ಟೂ ತಿನ್ನುತ್ತಿದ್ದೇನೆ ಎಂದು ಇತರರು ಯಾರಿಗೆ ತಾನೆ ಅರ್ಥವಾಗುತ್ತದೆ?” ಮತ್ತೆ ಸ್ವಲ್ಪ ಸುಮ್ಮನಿದ್ದು ತುಸು ಹೊತ್ತಿನ ಮೇಲೆ ಒಂದಿಷ್ಟು ಉತ್ತೇಜಿತರಾಗಿ ಹೇಳಿದರು, “ತಿನ್ನೋ ವಿಚಾರದಲ್ಲಿ ನನಗೆ ಹೇಳೋಕೆ ಬರ‍್ತಾನೆ! ತಿಳುಕೋ, ಇಚ್ಛೆಪಟ್ಟರೆ ಈ ಕ್ಷಣ ಈ ಶರೀರವನ್ನೆ ಬಿಟ್ಟುಬಿಡಲಾರೆನೇನು? ಇನ್ನು ನಿನ್ನ ಬಡಪಾಯಿ ತಿಂಡಿ ಗಿಂಡಿಯ ಮಾತಂತೆ! ಸ್ವಾಮೀಜಿ ಏನು ಸುಮ್ಮನೆ ಹೆಸರಿಟ್ಟರೇನು ನನಗೆ ‘ಮಹಾಪುರುಷ’ ಎಂದು?…” ಇತ್ಯಾದಿಯಾಗಿ ಆ ದಿನ ಅನೇಕ ವಿಚಾರ ಹೇಳಿಬಿಟ್ಟರು; ಆವೊತ್ತು ಇಡೀ ದಿನ ಅವರು ತುಂಬಾ ಗಂಭೀರವಾಗಿದ್ದರು. ನೋಡಿದರೆ ಅನಿಸುತ್ತಿತ್ತು, ಅವರ ಮನಸ್ಸು ಅನ್ಯಲೋಕದಲ್ಲಿ ವಿಚರಣ ಮಾಡುತ್ತಿದ್ದಂತೆ.

* * *

ಭಕ್ತೆಯೊಬ್ಬಳ ಒಬ್ಬನ ಮಗನಿಗೆ ತುಂಬಾ ಕಾಯಿಲೆಯಾಗಿತ್ತು. ಯಾವ ಚಿಕಿತ್ಸೆಯಿಂದಲೂ ರೋಗ ಉಪಶಮನವಾಗದೆ, ಡಾಕ್ಟರೂ ಹೇಳಿದಂತೆ ರೋಗಿ ಬದುಕುವ ಆಸೆ ಏನೂ ಇಲ್ಲದಾಗಲು, ಆಕೆ ಬೇರೆ ಯಾವ ದಾರಿಯನ್ನೂ ಕಾಣದೆ ಮಹಾಪುರುಷಜಿಯ ಚರಣಪ್ರಾಂತದೆಡೆ ಶರಣಾಗತಳಾಗಿ  ಅಳುತ್ತಾ ಅಳುತ್ತಾ ಪ್ರಾರ್ಥಿಸಿದಳು: “ತಂದೆ, ನನ್ನ ಮಗನಿಗೆ ಗುಣವಾಗುತ್ತದೆ ಎಂದು ತಾವು ಒಂದು ಬಾರಿ ಹೇಳಿಬಿಡಿ!” ಮಹಾಪುರುಷಜಿ ಧೀರಭಾವದಿಂದ ಎಲ್ಲವನ್ನು ಆಲಿಸಿದರು. ಭಕ್ತೆ ಮತ್ತೆ ಮತ್ತೆ ಕಾತರಳಾಗಿ ಪ್ರಾರ್ಥಿಸಿದ ಅನಂತರ ಅವರು ‘ಠಾಕೂರರ ಇಚ್ಛೆ ಹಾಗಿದ್ದರೆ ನಿನ್ನ ಮಗುವಿಗೆ ಗುಣವಾಗುತ್ತದೆ’ ಎಂದರು. ಆದರೆ ಆ ಮಗು ಕೆಲವು ದಿನಗಳ ಮೇಲೆ ತೀರಿಹೋಯಿತು. ಆಗ ತನ್ನೊಬ್ಬನೆ ಮಗನ ಸಾವಿನಿಂದ ಸಂತಪ್ತಳಾಗಿ ಆ ಭಕ್ತೆ ಮಹಾಪುರುಷಜಿ ಬಳಿಗೆ ಬಂದು ಗೋಳಿಡುತ್ತಾ ಅಳುತ್ತಾ ತನ್ನ ದುಃಖವನ್ನು ತೋಡಿಕೊಂಡಳು:  ‘ಮಗುವಿಗೆ ಗುಣವಾಗುತ್ತದೆ ಎಂದು ತಾವೆ ಹೇಳಿದ್ದಿರಿ:ಆದರೂ ಅದೇಕೆ ಬಾಳದೆ ಹೋದ? ಇನ್ನು ನಾನು ಯಾರೊಡನೆ ಬದುಕಲಿ?” ಎಂದೆಂದು ಮತ್ತೆ ಮತ್ತೆ ಅದನ್ನೆ ಹೇಳುತ್ತಾ ಗೋಳಾಡತೊಡಗಿದಳು. ಅದಾದರೂ ಎಂತಹ ಗೋಳಾಟ? ಹೇಳತೀರದು! ಆಗ ಮಹಾಪುರುಷಜಿ ಹೇಳಿದರು: “ನೋಡಮ್ಮಾ, ನನಗೇನೊ ಗೊತ್ತಿತ್ತು, ಮಗು ಬದುಕುವುದಿಲ್ಲ ಎಂದು. ಆದರೆ ಎಷ್ಟಾದರೂ ನೀನು ಆ ಮಗುವಿನ ತಾಯಿ. ಹೆತ್ತ ತಾಯಿಯ ಹತ್ತಿರ ಅವಳ ಮಗ ಸಾಯುತ್ತಾನೆ ಎಂದು ಹೇಗೆ ತಾನೆ ಹೇಳುವುದು? ಆದ್ದರಿಂದ ‘ಠಾಕೂರರ ಇಚ್ಛೆ ಹಾಗಿದ್ದರೆ ಮಗುವಿಗೆ ಗುಣವಾಗುತ್ತದೆ’ ಎಂದು ಒಂದು ರೀತಿಯ ಒತ್ತಾಯಕ್ಕೆ ಸಿಕ್ಕಿ ಹೇಳಬಾಯಿತು. ಅಳಬೇಡ, ತಾಯೀ, ನಾನು ಹೇಳುತ್ತೇನೆ. ಠಾಕೂರರೂ ಕೃಪೆಮಾಡಿ ನಿನ್ನ ಪ್ರಾಣ ಎಲ್ಲ ಶೋಕತಾಪಗಳನ್ನು ಪರಿಹರಿಸಿಕೊಡುತ್ತಾರೆ. ಇವೊತ್ತಿನಿಂದ ಠಾಕೂರರನ್ನೆ ನಿನ್ನ ಮಗು ಎಂದು ಭಾವಿಸಿಕೊ. ಅವರು ದಯೆತೋರಿ ನಿನ್ನೆಲ್ಲ ಅಭಾವವನ್ನು ಪೂರ್ಣ ಮಾಡಿ ಕೊಡುತ್ತಾರೆ; ನಿನ್ನ ಹೃದಯಕ್ಕೆ ಅಪಾರ್ಥಿವ ಶಾಂತಿ ದಯಪಾಲಿಸುತ್ತಾರೆ.” ಅವರ ಆಶ್ವಾಸ ವಾಣಿಯೂ ಮತ್ತು ಆಶೀರ್ವಾದವೂ ಭಕ್ತೆಯ ಹೃದಯವನ್ನು ಶಾಂತಗೊಳಿಸಿದುವು. ಅಲ್ಲದೆ ತರುವಾಯ ಆಕೆಯ ಜೀವನದಲ್ಲಿ ಅದ್ಭುತ ಪರಿ ವರ್ತನೆಯೂ ಉಂಟಾಯಿತು.

* * *

ಒಂದು ದಿನ ಬೇಲೂರು ಮಠದಲ್ಲಿ ಕೃ-ಮಹಾರಾಜ್ ಒಬ್ಬ ಬ್ರಹ್ಮಚಾರಿಯ ವಿಷಯದಲ್ಲಿ ಮಹಾಪುರುಷಜಿಯ ಹತ್ತಿರ ನಾನಾ ದೂರು ಹೇಳಿದರು. ಅವರು ಅದನ್ನೆಲ್ಲ ಗಮನವಿಟ್ಟು ಆಲಿಸಿ ಹೇಳಿದರು : “ನೋಡು, ಕೃ-, ಠಾಕೂರ್ ಹೇಳುತ್ತಿದ್ದರು ‘ಬಿಂದುವಿನಲ್ಲಿ ಸಿಂಧು ನೋಡಬೇಕೆಂದು,’ ಅವರು ಅದನ್ನು ಬರಿಯ ಬಾಯಿಂದಾಡಿ ಪೂರೈಸುತ್ತಿರಲಿಲ್ಲ, ಅವರ ಸಮಗ್ರ ದೃಷ್ಟಿಯೂ ಅದರಂತೆಯೆ ಇತ್ತು. ಹಾಗಲ್ಲದಿದ್ದರೆ ನಾವೂ ಕೂಡ ಅವರ ಆಶ್ರಮದಲ್ಲಿ ಹೇಗೆ ತಾನೆ ಇರುವುದಕ್ಕಾಗುತ್ತಿತ್ತು? ದೋಷವೇನನ್ನೂ ನೋಡದೆ, ಕೃಪೆತೋರಿ ನಮ್ಮನ್ನು ತಮ್ಮೆಡೆಗೆ ಎಳೆದುಕೊಂಡುದರಿಂದಲೆ ನಮಗೆ ಅವರ ಆಶ್ರಯ ದೊರೆಯುವಂತಾಯಿತು. ಒಂದೇ ಬಾರಿಗೆ ದೋಷಗಳೆಲ್ಲವನ್ನೂ ಬಿಟ್ಟಿರುವವರು ಯಾರಿದ್ದಾರೆ? ಇಲ್ಲಿಗೆ ಬಂದಿರುವ ಎಲ್ಲರೂ ಪೂರ್ಣ ನಿರ್ದೋಷರಾಗಲೆಂದೆ ಬಂದಿದ್ದಾರೆ; ಆದರೆ ಪೂರ್ಣ ನಿರ್ದೋಷರಾಗಿಯೆ ಯಾರೂ ಬಂದಿಲ್ಲ. ಇರಬಹುದಾದ ಅಷ್ಟಿಷ್ಟು ದೋಷವೂ ಗುರುಮಹಾರಾಜರ ಕೃಪೆಯಿಂದ ಕ್ರಮೇಣ ಶುದ್ಧವಾಗುತ್ತದೆ. ಹೇಗಾದರೂ ಅವರ ಆಶ್ರಯದಲ್ಲಿ ಬಿದ್ದುಕೊಂಡಿರಲು ಸಮರ್ಥರಾದರಾಯಿತು; ಇಂದೊ ನಾಳೆಯೊ ಅವರು ಕೃಪೆಮಾಡಿ ಎಲ್ಲವನ್ನೂ ಸರಿಗೊಳಿಸುತ್ತಾರೆ.”

ಮಹಾಪುರುಷಜಿಯ ಈ ಮಾತನ್ನು ಕೇಳಿಯೂ ಕೃ-ಮಹಾರಾಜರು ಮತ್ತೆ ಹೇಳಿದರು : “ತಾವು ಆತನನ್ನು ಕರೆದು ಒಂದಿಷ್ಟು ಛೀಮಾರಿ ಮಾಡಿದರೆ ಒಳ್ಳೆಯದಾಗುತ್ತಿತ್ತು. ಆತನ ವಿಚಾರವಾಗಿ ತಾವು ಹಿಂದೆ ಏನನ್ನು ಕೇಳಿದ್ದೀರೊ ಅದೆಲ್ಲ ವಾಸ್ತವವಲ್ಲ ಎಂದು ತೋರುತ್ತದೆ. ನಾನು ಚೆನ್ನಾಗಿ ತಿಳಿದೇ ತಮಗೆ ಹೇಳುತ್ತಿದ್ದೇನೆ.”

ಒಡನೆಯೆ ಮಹಾಪುರುಷಜಿ ಹಠಾತ್ತನೆ ಅತ್ಯಂತ ಗಂಭೀರವಾಗಿ ಒಂದಿನಿತು ದೃಢಸ್ವರದಿಂದಲೆ ಹೇಳಿದರು : “ನೋಡು, ಕೃ-, ನೀನೇನು ನಮಗಿಂತಲೂ ಹೆಚ್ಚು ಅಂತರ್ದೃಷ್ಟಿಸಂಪನ್ನನಾಗಿಬಿಟ್ಟೆಯೇನು? ಠಾಕೂರರ ಕೃಪೆಯಿಂದ ನಾವು ಒಂದೇ ನೋಟದಲ್ಲಿ ಎಲ್ಲವನ್ನೂ ಅರಿಯಬಲ್ಲೆವು. ಜನರ ಒಳಗೂ ಹೊರಗೂ ಎಲ್ಲವನ್ನೂ ಕಾಣಬಲ್ಲೆವು. ಠಾಕೂರರು ಅನೇಕ ರೀತಿಯಿಂದ ನಮಗೆಲ್ಲವನ್ನೂ ಕಲಿಸಿಕೊಟ್ಟಿದ್ದಾರೆ. ಅದನ್ನೆಲ್ಲ ನಿನಗೆ ಹೇಗೆ ಹೇಳಲಿ? ಯಾರಿಗೂ ಹೇಳಲೂ ಬಾರದು ಅದನ್ನು. ಯಾರು ಎಂಥ ಮನುಷ್ಯರು? ಯಾರಿಗೆ ದೊರೆಯುತ್ತದೆ, ಯಾರಿಗೆ ದೊರೆಯುವುದಿಲ್ಲ? ಅದನ್ನೆಲ್ಲ ನಾವು ಚೆನ್ನಾಗಿ ತಿಳಿದಿದ್ದೇವೆ. ಬರಿದೆ ಹೇಳಿದ ಮಾತ್ರಕ್ಕೆ ಅಥವಾ ಭರ್ತ್ಸನೆ ಮಾಡಿದ ಮಾತ್ರಕ್ಕೆ ಮನುಷ್ಯ ದೋಷವಿಮುಕ್ತನಾಗುವುದಿಲ್ಲ. ನಿನಗೆ ಸಾಧ್ಯವಾಗುತ್ತದೆಯೋ? ಸಾಧ್ಯವಾದರೆ ನಿನ್ನ ಆಧ್ಯಾತ್ಮಿಕ ಶಕ್ತಿಯಿಂದ ಜನರ ಮನಸ್ಸಿನ ಸಂಸ್ಕಾರವನ್ನು ಪರಿವರ್ತಿಸಿಕೊಡು.”

ಮಹಾಪುರುಷಜಿಯ ಗಾಂಭೀರ್ಯವನ್ನೂ ಮುಖನಯನ ಭಂಗಿಯನ್ನೂ ಕಂಡು ಕೃ-ಮಹಾರಾಜ್ ಇದ್ದಕ್ಕಿದ್ದಂತೆ ಕೈಮುಗಿದು ಅವರ ಚರಣತಲಕ್ಕೆ ತಮ್ಮ ಹಣೆಯಿಟ್ಟು ಸಾಷ್ಟಾಂಗ ನಮಸ್ಕಾರ ಮಾಡಿ: ‘ಮಹಾರಾಜ್, ನನಗೆ ಗೊತ್ತಾಗಲಿಲ್ಲ. ನನ್ನ ಅಪರಾಧ ಮನಸ್ಸಿಗೆ ತೆಗೆದುಕೊಳ್ಳಬೇಡಿ; ನನ್ನನ್ನು ಕ್ಷಮಿಸಿ’ ಎಂದರು. ಅದಕ್ಕೆ ಮಹಾಪುರುಷಜಿ ಹೇಳಿದರು “ಯಾರನ್ನಾದರೂ ನೀನು ದೋಷಮುಕ್ತನನ್ನಾಗಿ ಮಾಡಬೇಕೆಂದಿದ್ದರೆ ಅವರಿಗಾಗಿ ಠಾಕೂರರ ಹತ್ತಿರ ಹೃತ್ಪೂರ್ವಕವಾಗಿ ಪ್ರಾರ್ಥನೆ ಮಾಡ, -ಠಾಕೂರರಿಗೇ ಹೇಳಿಕೊ. ಅವರು ದಯೆತೋರಿದರು ಎಂದರೆ ಮನುಷ್ಯನ ಮನದ ಗತಿ ಕಣ್ಣುಮುಚ್ಚಿ ಬಿಡುವುದರಲ್ಲಿ ಪರಿವರ್ತಿತವಾಗಿ ಹೋಗುತ್ತದೆ.” ಕೃ-ಮಹಾರಾಜ್ ಅಲ್ಲಿಂದ ಹೊರಟುಹೋದ ಮೇಲೆಯೂ ಅವರು ತಮಗೆ ತಾವೆ ಮಾತಾಡಿಕೊಳ್ಳುವಂತೆ ಹೇಳಿಕೊಳ್ಳುತ್ತಿದ್ದರು. ಹೀಗೆಂದು : “ಠಾಕೂರರ ಆಶ್ರಯಕ್ಕೆ ಯಾರು ಬರುತ್ತಾರೊ ಅವರೇನು ಕಡಿಮೆ ಜನರೇನೂ? ಯಾರೊಬ್ಬರೂ ಕಡಿಮೆ ಅಲ್ಲ; ಅವರೆಲ್ಲರೂ ಹಿರಿಯ ವಂಶಕ್ಕೆ ಸೇರಿದವರೆ, ಹೊಸದಾಗಿ ಸೇರಿದ ಬ್ರಹ್ಮಚಾರಿಗಳಾಗಲಿ, ಅಥವಾ ಬಹಳ ಹಳೆಯ ಸಾಧುಗಳೆ ಆಗಲಿ. ಎಷ್ಟು, ಜನ್ಮಗಳ ಸುಕೃತಿಯು ಫಲದಿಂದ ಅವರಿಗೆ ಈ ಪವಿತ್ರ ಸಂಘದಲ್ಲಿ ಆಶ್ರಯ ಲಭಿಸಿದೆ!”

* * *

ಮಹಾಪುರುಷ ಮಹಾರಾಜರ ಕೃಪೆ ಸಕಲರ ಮೇಲೆಯೂ ಸಮಭಾವದಿಂದ ವರ್ಷಿತವಾಗುತ್ತಿತ್ತು; ಅಲ್ಲದೆ ಸರ್ವರ ಕಲ್ಯಾಣ ಕಾಮನೆಗಾಗಿ ಅವರು ಸದಾ ನಿರತರಾಗಿದ್ದರು. ಎಷ್ಟೋ ವೇಳೆ ನೋಡಬಹುದಾಗಿತ್ತು, ಯಾರು ಹೀನ ವೃತ್ತಿ ಅವಲಂಬನ ಮಾಡಿ ಶ್ರೀ ಶ್ರೀಠಾಕೂರರ ಪವಿತ್ರ ಸಂಘವನ್ನೆ ವಿಚ್ಛಿನ್ನಗೊಳಿಸಲೂ ಹಿಂಜರಿಯುತ್ತಿರಲಿಲ್ಲವೋ ಅಂಥವರಿಗಾಗಿಯೂ ಪ್ರತ್ಯೇಕ ಪ್ರತ್ಯೇಕವಾಗಿ ಅವರವರ ಹೆಸರುಗಳನ್ನು ಹೇಳಿ ಅವರು ಠಾಕೂರರ ಹತ್ತಿರ ಕಾತರ ಭಾವದಿಂದ ಪ್ರಾರ್ಥನೆ ಸಲ್ಲಿಸುತ್ತಿದ್ದರು.

ಸರ್ವಭಾವಮಯರಾದ ಶ್ರೀ ಶ್ರೀಠಾಕೂರರ ಅಂತರಂಗ ಪಾರ್ಷದರ ಜೀವನದಲ್ಲಿಯೂ ನಾನಾ ದಿವ್ಯಭಾವಗಳ ಪ್ರಕಾಶವನ್ನು ನೋಡಬಹುದಾಗಿದೆ. ಅವರೂ ಬೇರೆ ಬೇರೆ ಸಮಯಗಳಲ್ಲಿ ಬೇರೆ ಬೇರೆ ಭಾವಗಳನ್ನು ಆಶ್ರಯಿಸಿ ಭಗವಲ್ಲೀಲೆಯನ್ನು ಆಸ್ವಾದಿಸುತ್ತಿದ್ದರು. ಬೇಲೂರು ಮಠದಲ್ಲಿ ತಮ್ಮ ಅವಸಾನ ಕಾಲದಲ್ಲಿ (೧೯೩೨) ಒಂದೊಂದು ದಿನ ಬೆಳಿಗ್ಗೆ ಮಹಾಪುರುಷಜಿ ತಮ್ಮ ಹಾಸಿಗೆಯ ಮೇಲೆ ಕಥಾಮೃತ, ಗೀತಾ, ಚಂಡೀ, ಹಿತೋಪದೇಶ, ‘ಠಾಕೂರ್ ಮಾರ್ ಝಾಲಿ’ ಒಂದು ಖಂಜನಿ[4], ಲಾಠಿ, ಚಿತ್ರದ ಪುಸ್ತಕ ಇತ್ಯಾದಿ ನಾನಾ ಪದಾರ್ಥಗಳನ್ನು ತಮ್ಮ ಸುತ್ತಲೂ ಕೆದರಿಕೊಂಡು ಕುಳಿತಿರುತ್ತಿದ್ದುದನ್ನು ಕಾಣಬಹುದಿತ್ತು, ಐದು ವರ್ಷದ ಬಾಲಕನಂತೆ! ಮತ್ತು ಹೇಗೆ ಮನಸ್ಸು ಬಂದರೆ ಹಾಗೆ ಆ ವಸ್ತುಗಳನ್ನೆಲ್ಲ ಎತ್ತಿ ಇಟ್ಟು ಅತ್ತ ಇತ್ತು ಹಾಕಿ ಕಿತ್ತಲಪತ್ತಲ ಮಾಡಿ ನೋಡುತ್ತಿದ್ದರು. ಇಚ್ಛೆಯಾಯಿತೊ ಖಂಜನಿ ಬಾಜಿಸುತ್ತಿದ್ದರು; ಇಲ್ಲವೆ ‘ಠಾಕೂರ್‌ ಮಾರ್ ಝಾಲಿ’ ಓದುತ್ತಿದ್ದರು; ಇಲ್ಲವೆ ಒಮ್ಮೊಮ್ಮೆ ನಗುತ್ತಾ ನಗುತ್ತಾ ಲಾಠಿ ಎತ್ತಿ ಹೊಡೆಯುವಂತೆ ನಟಿಸುತ್ತಾ ಸೇವಕರನ್ನು ಅಂಜಿಸುತ್ತಿದ್ದರು. ಅವರೇಕೆ ಹಾಗೆ ವರ್ತಿಸುತ್ತಾರೆ ಎಂಬುದನ್ನು ಕುರಿತು ಒಂದು ದಿನ ಸೇವಕನೊಬ್ಬನಿಗೆ ಹೀಗೆ ಹೇಳಿದರು : “ನೋಡು, ಮನಸ್ಸು ಸಹಜವಾಗಿಯೆ ಯಾವಾಗಲೂ ನಿರ್ಗುಣದ ಕಡೆಗೆ ಭಾವಿಸಿ ಹೋಗಲು ಆಶಿಸುತ್ತದೆ; ಈ ಎಲ್ಲ ಚಿತ್ರ ವಿಚಿತ್ರ ವಸ್ತುಗಳ ಸಹಾಯದಿಂದ ಅದನ್ನು ಕೆಳಗಿರಿಸಲು ಪ್ರಯತ್ನಿಸುತ್ತೇನೆ. ತಾಯಿ ಮಗುವಿಗೆ ಗೊಂಬೆ ಕೊಟ್ಟು ಅದರ ಮನಸ್ಸನ್ನು ಆಟದಲ್ಲಿ ಮಗ್ನವಾಗಿಸಿ ತನ್ನನ್ನು ಮರೆಯುವಂತೆ ಮಾಡುತ್ತಾಳಲ್ಲ ಹಾಗೆ. ನಾನೂ ಈ ವಿಚಿತ್ರ ವಸ್ತುಗಳ ಸಹಾಯದಿಂದ ಮನಸ್ಸಿಗೆ ಮರೆವು ಬರುವಂತೆ ಮಾಡಲು ಪ್ರಯತ್ನಿಸುತ್ತೇನೆ.”

ಮಹಾಪುರುಷ ಮಹಾರಾಜರ ಜೀವನದ ಕೊನೆಯ ಮೂರು ನಾಲ್ಕು ವರ್ಷಗಳಲ್ಲಿ ಅವರ ಬಳಿಗೆ ಪ್ರತಿದಿನವೂ ಅಗಣಿತ ದೀಕ್ಷಾಪ್ರಾರ್ಥಿಗಳೂ ಭಕ್ತರೂ ಬರತೊಡಗಿದ್ದರು. ಅವರೂ ಕೂಡ ತಮ್ಮ ಶರೀರದ ಕಡೆಗೆ ಬಿಂದುಮಾತ್ರವೂ ಭ್ರೂಕ್ಷೇಪ ಮಾಡದೆ ಅಕಾತರತೆಯಿಂದ ಸಕಲರಿಗೂ ಕೃಪೆದೋರುತ್ತಿದ್ದರು. ಆ ಸಮಯದಲ್ಲಿ ಅವರು ಬೆಳಗ್ಗೆ ೯ ಗಂಟೆಗಾಗಲೆ ಬಟ್ಟೆ ಬದಲಾಯಿಸಿ ಗಂಗಾಜಲದಲ್ಲಿ ಕೈಕಾಲು ಮುಖ ತೊಳೆದುಕೊಂಡು ದೀಕ್ಷಾರ್ಥಿಗಳಿಗೆ ಕೃಪೆಮಾಡಲು ಸನ್ನದ್ಧರಾಗುತ್ತಿದ್ದುದನ್ನು ಕಾಣಬಹುದಾಗಿತ್ತು. ಅವರು ಯಾರೊಬ್ಬರಿಗೂ ಬಲ್ಲೆ ಎಂದುದಿಲ್ಲ. ಒಂದು ದಿನ ಅನೇಕ ಭಕ್ತರಿಗೆ ದೀಕ್ಷೆ ಕೊಟ್ಟಾದಮೇಲೆ ಹೇಳಿದರು: “ಅಯ್ಯಾ, ಠಾಕೂರ್ ಹೇಳುತ್ತಿದ್ದರು, ಚೆನ್ನಾಗಿ ಕೇರಿ ತೂರಿ ಪರೀಕ್ಷೆಮಾಡಿ, ಒಬ್ಬರನ್ನೊ ಇಬ್ಬರನ್ನೊ ಶಿಷ್ಯರನ್ನಾಗಿ ಸ್ವೀಕರಿಸಬೇಕೆಂದು; ಆದರೆ ಈಗಲೊ ಒಂದೆ ಬಾರಿಗೆ ಕಟ್ಟೆಯೆ ಒಡೆದುಹೋಗಿದೆ. ಅವರು ಏಕೆ ಇಷ್ಟೊಂದು ಜನರ ಹೃದಯದಲ್ಲಿ ಪ್ರೇರಣೆ ನೀಡಿ ಇಲ್ಲಿಗೆ ಕಳುಹಿಸಿಕೊಡುತ್ತಿದ್ದಾರೊ ಅವರಿಗೇ ಗೊತ್ತು. ಎಲ್ಲ ಅವರ ಇಚ್ಛೆ; ನಾನು ಇನ್ನೇನು ಮಾಡಲಿ ಹೇಳು? ಈ ರೀತಿ ಇನ್ನೆಷ್ಟು ದಿನ ನಾನು ಈ ಮುದಿ ಶರೀರ ಹೊತ್ತುಕೊಂಡು ಹೋಗಬಲ್ಲೆನೊ ಏನೊ ಅವರೆ ಬಲ್ಲರು.”

* * *

ಬೇಲೂರು ಮಠದಲ್ಲಿ ಒಂದು ದಿನ ಮಾತುಮಾತಿನ ನಡುವೆ ಸೇವಾರ್ಥಿಯೊಬ್ಬರನ್ನು ಕುರಿತು ಹೀಗೆಂದರು : “ನೋಡಯ್ಯಾ, ನಿನ್ನ ಜೀವನದ ಆದರ್ಶವಾಗಿದ್ದಾರೆ ಠಾಕೂರರು. ಅವರು ತ್ಯಾಗಿಗಳ ಚಕ್ರವರ್ತಿ ಆಗಿದ್ದರು. ನೀನು ಅವರ ಆಶ್ರಯಕ್ಕೆ ಬಂದಿದ್ದೀಯೆ; ಇದನ್ನು ನೀನು ಸರ್ವಕ್ಷಣವೂ ಸ್ಮರಣ ಮಾಡುತ್ತಿರಬೇಕು. ಅವರ ಈ ಪವಿತ್ರ ಸಂಘದಲ್ಲಿ ಸ್ಥಾನ ದೊರೆತಿದೆ ನಿನಗೆ; ಅದೇ ಒಂದು ಮಹಾಸೌಭಾಗ್ಯದ ವಿಷಯ. ನಿನ್ನ ಮೇಲೆ ಎಂತಹ ಮಹತ್ತಾದ ಹೊಣೆ ಬಿದ್ದಿದೆ ಎಂಬುದನ್ನು ಚೆನ್ನಾಗಿ ಭಾವಿಸಿ ನೋಡಬೇಕು. ನಮ್ಮ ಈ ಶರೀರ ಇನ್ನೆಷ್ಟು ದಿನ ತಾನೆ ಇರುತ್ತದೆ? ಆ ತರುವಾಯ ನಿಮ್ಮನ್ನು ನೋಡಿ ತಾನೆ ಜನ ಕಲಿಯುತ್ತಾರೆ. ತ್ಯಾಗವೇ ಸಂನ್ಯಾಸಿ ಜೀವನದ ಭೂಷಣ. ಯಾರು ಎಷ್ಟೆಷ್ಟು ತ್ಯಾಗ ಮಾಡಲು ಸಮರ್ಥರಾಗುತ್ತಾರೊ ಅಷ್ಟಷ್ಟು ಭಗವಂತನ ಕಡೆಗೆ ಮುಂಬರಿಯುತ್ತಾರೆ. ನಿಜವಾದ ಸಂನ್ಯಾಸಿಯಾಗುವುದು ತುಂಬ ಕಠಿನ; ಬರಿ ವಿರಜಾಹೋಮ ಮಾಡಿ ಕಾವಿಬಟ್ಟೆ ಉಟ್ಟುಕೊಂಡ ಮಾತ್ರಕ್ಕೆ ಸಂನ್ಯಾಸಿಯಾಗುವುದಿಲ್ಲ. ಯಾರು ಕಾಯಮನೋ ವಾಕ್ಯಗಳಲ್ಲಿ ಸರ್ವ ವಿಷಯಗಳನ್ನೂ ತ್ಯಾಗಮಾಡಬಲ್ಲರೊ ಅವರೇ ನಿಜವಾದ ಸಂನ್ಯಾಸಿ. ಎಷ್ಟು ಸಾಧ್ಯವೋ ಅಷ್ಟೂ ತ್ಯಾಗಮಾಡು. ನೋಡುತ್ತೀಯೆ, ನಿನಗೆ ಅವಶ್ಯಬಿದ್ದಾಗ ತಾಯಿ ಎಷ್ಟೆಷ್ಟು ಕೊಡುತ್ತಾಳೆ ಅಂದರೆ, ಅದನ್ನೆಲ್ಲಿ ಹೇಗೆ ವ್ಯಯಮಾಡಲಿ ಎಂಬುದೆ ನಿನಗೆ ಸಮಸ್ಯೆಯಾಗಿಬಿಡುವಷ್ಟು. ಎಂದೂ ಸಂಚಯ ಮಾಡಬೇಡ; ಅಷ್ಟೆ ಅಲ್ಲ, ಸಾಧುವಾದವನ ಬಳಿ ಸಂಚಯಬುದ್ಧಿ ಸುಳಿಯಲೂ ಕೂಡದು. ಏನಿದ್ದರೂ ಸಂಕದ ನೀರಿನಂತೆ ಒಂದು ಕಡೆಯಿಂದ ಹರಿದುಬಂದದ್ದು ಇನ್ನೊಂದು ಕಡೆ ಹರಿದುಹೋಗುತ್ತಿರಬೇಕು; ಆದರೆ ಸಂಚಯ ಮಾಡತೊಡಗಿದೊಡನೆ ಬರುವುದು ನಿಂತುಹೋಗುತ್ತದೆ; ಆಗ ನಿಂತ ನೀರಿನಲ್ಲಿ ಕೊಳೆಕಟ್ಟಲು ಮೊದಲಾಗುತ್ತದೆ. ಅಲ್ಲದೆ ಏನೆ ಬರಲಿ ಎಂದು ಏನನ್ನೂ ಬೇಡಬಾರದು. ಆತನ ಮೇಲೆ ಸಂಪೂರ್ಣ ಭಾರಹಾಕಿ, ಆತನ ಆಶ್ರಯದಲ್ಲಿಯೆ ಬಿದ್ದಿರಬೇಕು. ಯಾವಾಗ ಆವಶ್ಯಕವೋ ಆಗ ತಾಯಿಯೆ ಕೊಡುತ್ತಾಳೆ. ಇಲ್ಲಿ ಕಾಣುವುದಿಲ್ಲವೆ ಏನೇನು ತುಂಬಿಹೋಗಿದೆ- ಮಿಠಾಯಿ ಗಠಾಯಿ, ಬಟ್ಟೆ ಬರೆ, ಏನೇನೊ ಪದಾರ್ಥಗಳ ರಾಶಿ ರಾಶಿ – ಸುಮ್ಮನೆ ಬಂದು ಬೀಳುತ್ತಿವೆ; ಅವನ್ನೆಲ್ಲ ಏನು ಮಾಡಬೇಕೊ ಅದೇ ತೋಚದಾಗಿದೆ! ಠಾಕೂರರ ಇಚ್ಛೆ ಏನಿದು ಎಂದು ಬೆರಗಾಗಿದ್ದೇನೆ. ಅಂದು ವರಾಹನಗರದ ಮಠದಲ್ಲಿ ಹಗಲು ಎಲ್ಲಿಗಾದರೂ ಹೊರಗೆ ಹೋಗಬೇಕಾಗಿ ಬಂದಾಗ ಉಟ್ಟುಕೊಳ್ಳಲು ನಮಗೆಲ್ಲರಿಗೂ ಒಟ್ಟು ಇದ್ದುದು ಒಂದೆ ಬಟ್ಟೆ. ಇಂದೋ ದಿನವೂ ಒಂದೊಂದು ಹೊಸದುಕೂಲ ಉಪಯೋಗಿಸಿದರೂ ಮುಗಿಯುವಂತಿಲ್ಲ, ಅಷ್ಟಿವೆ. ಆದರೆ ಏನು ಅಂತೀಯ? ಆತನ ದಯೆಯಿಂದ ನನ್ನ ಮನಸ್ಸು ಅವೊತ್ತು ಹೇಗಿದ್ದಿತೋ ಇವೊತ್ತು ಹಾಗೆಯೆ ಇದೆ. ಆಗ ಬಟ್ಟೆ ಇಲ್ಲ ಎಂದು ಮನಸ್ಸಿಗೆ ಏನೂ ದುಃಖವಾಗುತ್ತಿರಲಿಲ್ಲ; ಯಾವ ವಿಧವಾದ ಅಭಾವಬೋಧೆಯೂ ಇರುತ್ತಿರಲಿಲ್ಲ. ಶ್ರೀಗುರು ಕೃಪೆಮಾಡಿ ತುಂಬಿ ತುಳುಕುವಷ್ಟು ಆನಂದ ಕೊಟ್ಟಿದ್ದರು. ಇಲ್ಲಿ ನೋಡು, ಎಷ್ಟು ತಡಿಗಳ ಮೇಲೆ ಎಂಥ ಬಟ್ಟೆ ಹಾಸಿ ನೀನು ನನಗೆ ಮಲಗಲು ಅಣಿಮಾಡಿದ್ದೀಯೆ. ಆದರೆ ನನ್ನ ಮನಸ್ಸಿಗೆ ಬರುತ್ತಿದೆ, ಆ ಕಾಶಿಯ ಕಥೆ; ಅಲ್ಲಿ ನಾನು ಚಳಿಗಾಲದಲ್ಲಿ ಕೇವಲ ನೆಲ್ಲುಹಲ್ಲಿನ ಮೇಲೆ ಮಲಗಿ ನಿದ್ದೆಮಾಡುತ್ತಿದ್ದೆ; ಆ ಆನಂದದ ಮುಂದೆ ಇದನ್ನು ಹೋಲಿಸುವುದಕ್ಕೂ ಆಗುವುದಿಲ್ಲ.”

* * *

ಒಂದು ದಿನ ಬೆಳಗ್ಗೆ ದೀಕ್ಷಾವಿಧಿಗಾಗಿ ಎಲ್ಲ ಆಯೋಜನೆಗಳನ್ನೂ ಅಣಿಮಾಡಿ ಸೇವಕಸಾಧು ಎಂದಿನಂತೆ ಹೊರಗೆ ಹೊರಡುವುದರಲ್ಲಿದ್ದನು. ಆದರೆ  ಆ ದಿನ ಸೇವಕನು ಹೊರಹೋಗಲು ಅಣಿಯಾಗುತ್ತಿರುವುದನ್ನು ನೋಡಿ ಮಹಾಪುರುಷಜಿ “ನೀನಿಲ್ಲಿಯೆ ಇದ್ದರೇನಂತೆ? ಹೊರಹೋಗುವುದೇನೂ ಆವಶ್ಯಕವಿಲ್ಲ. ಯಾರಿಗೆ ತಾನೆ ಗೊತ್ತಿಲ್ಲ ದೀಕ್ಷೆಯ ಮಂತ್ರ? ಅಲ್ಲದೆ ಆ ಮಂತ್ರಗಳೆಲ್ಲ ಪುಸ್ತಕದಲ್ಲಿ ಅಚ್ಚು ಆಗಿಲ್ಲವೇನು? ಆದರೆ, ಅಯ್ಯಾ, ಒಂದು ವಿಷಯ ಮಾತ್ರ ತಿಳಿದುಕೊ, ಏನೆಂದರೆ ಅಚ್ಚಾಗಿರುವ ಅದೇ ಮಂತ್ರವೆ ಸಿದ್ಧಗುರುವಿನ ಮುಖದಿಂದ ಬಂದಾಗ ಅದರಲ್ಲಿ ಚೇತನ ಸಂಚಾರವಾಗುತ್ತದೆ. ಹಾಗಾಗದಿದ್ದರೆ ಅದು ಬರಿಯ ಶಬ್ದಮಾತ್ರ. ಗುರು ತನ್ನ ಶಕ್ತಿಬಲದಿಂದ ಮಂತ್ರಕ್ಕೆ ಚೈತನ್ಯ ನೀಡಿ ಕೊಡುತ್ತಾನೆ; ಅಲ್ಲದೆ ಶಿಷ್ಯನ ಕುಂಡಲಿಯನ್ನೂ ತನ್ನ ಶಕ್ತಿಯಿಂದ ಜಾಗ್ರತಗೊಳಿಸುತ್ತಾನೆ. ಅದೀಗ ಅದರ (ಮಂತ್ರದೀಕ್ಷೆಯ) ನಿಜವಾದ ರಹಸ್ಯ.”

* * *

ನಿತ್ಯಸಿದ್ಧರಾದ ಮಹಾಪುರುಷರು ಶ್ರೀ ಭಗವಂತನ ಜೀವಂತ ವಿಗ್ರಹಗಳೊ ಎಂಬಂತಿದ್ದಾರೆ. ಅಂತಹವರ ಸಾಹಚರ್ಯ ಮತ್ತು ಸೇವೆ ಜೀವರುಗಳಿಗೆ ಭಗವತ್ ಸಾನ್ನಿಧ್ಯವನ್ನು ತಂದುಕೊಡುತ್ತದೆ. ಆದರೆ ಅವರ ಸೇವೆ ಮತ್ತು ಸಂಗ ತುಂಬ ಕಠಿನ ವ್ಯಾಪಾರವೆ! ಅದಕ್ಕೆ ಹೋಲಿಸಿದರೆ ದೇವ ವಿಗ್ರಹಗಳನ್ನು ಸೇವಿಸುವುದೂ ಪೂಜಿಸುವುದೂ ಎಷ್ಟೋ ಸುಲಭತರ ಎಂದು ಹೇಳಬೇಕಾಗುತ್ತದೆ. ಸಾಧನೆ ಭಜನೆಯ ಮುಖಾಂತರ ಶುದ್ಧಚಿತ್ತರಾಗಿರದಿದ್ದರೆ ಮಹಾಪುರುಷರನ್ನು ನಿಜವಾಗಿಯೂ ಸೇವಿಸುವುದು ಸಾಧ್ಯವಲ್ಲ. ಅಲ್ಲದೆ ಜೊತೆಗೆ ಐಕಾಂತಿಕ ನಿಷ್ಠೆಯೂ ಬೇಕು. ಸಾಧನ ಚತುಷ್ಟಯ ಸಂಪನ್ನರಾಗಿರದಿದ್ದರೆ ಮಹಾಪುರುಷರ ಸೇವೆ ಮಾಡಲು ಹೋಗಿ ಅವರ ಸೇವಾಪರಾಧಕ್ಕೆ ಭಾಜನರಾಗುವ ಸಂಭವೂ ಬಹಳ ಉಂಟು.

ಮಹಾಪುರುಷಜಿ ಮಹಾರಾಜರ ಸೇವೆಯಲ್ಲಿ ತೊಡಗಿದ್ದ ಒಬ್ಬ ಸೇವಕ ಸಾಧು ತಾನು ಸೇವಾಪರಾಧ ಮಾಡಿ ಅಪರಾಧಿಯಾಗಿದ್ದೇನೆಂದು ತನ್ನ ಮನದಲ್ಲಿಯೆ ಭಾವಿಸಿಕೊಂಡು ಒಂದು ದಿನ ಅವರನ್ನೇ ಕೇಳಿದನು: “ಮಹಾರಾಜ್, ತಮ್ಮ ಸೇವೆ ಮಾಡುತ್ತಾ ಅನೇಕ ವೇಳೆ ತಮಗೆ ಬೇಸರ ಹುಟ್ಟುವಂತೆ ಮಾಡುತ್ತೇನೆ; ಅದಕ್ಕಾಗಿ ತಾವೂ ತುಂಬ ಅಸಂತೋಷ ವ್ಯಕ್ತಪಡಿಸುತ್ತೀರಿ. ತಾವು ಸತ್ಯಸಂಕಲ್ಪರಾಗಿದ್ದೀರಿ; ತಮ್ಮ ಬಾಯಿಂದ ಏನು ಹೊರಬೀಳುತ್ತದೆಯೊ ಅದು ಆಗಿಯೇ ತೀರುತ್ತದೆ; ಅಲ್ಲದೆ ತಮ್ಮನ್ನು ಅಸಂತುಷ್ಟುಪಡಿಸಿದ ನಮಗೆ ಮಹಾ ಅಮಂಗಳ ಆಗುವುದೂ ನಿಶ್ಚಯ. ಇಂಥ ಪರಿಸ್ಥಿತಿಯಲ್ಲಿ ನನಗೆ ಏನು ಮಾಡುವುದು ಉಚಿತವೋ ಅದೇ ತಿಳಿಯದಾಗಿದೆ.” ಸೇವಾರ್ಥಿಯ ಮಾತನ್ನು ಕೇಳಿ ಮಹಾಪುರುಷಜಿ ಸ್ವಲ್ಪ ಹೊತ್ತು ಆತನ ಕಡೆಗೇ ನೋಡುತ್ತಾ ಮೌನವಾಗಿ ಕುಳಿತರು. ಸ್ನೇಹ ಮತ್ತು ಕರುಣೆಗಳಿಂದ ಅವರ ಮುಖಮಂಡಲ ಒಂದು ಸ್ವರ್ಗೀಯ ಕಾಂತಿಯಿಂದ ಶೋಭಿಸತೊಡಗಿತು. ಆಮೇಲೆ ಅತ್ಯಂತ ಆವೇಗಭರರಾಗಿ ಸ್ನೇಹಪೂರ್ಣ ಸ್ವರದಿಂದ ಹೇಳಿದರು : “ಅಯ್ಯಾ, ಠಾಕೂರರು ಅವತರಿಸಿದ್ದು ಜಗತ್ತಿನ ಕಲ್ಯಾಣಕ್ಕಾಗಿ. ನಾವೂ ಕೂಡ ಅವರೊಡನೆ ಬಂದೆವು. ಜೀವರ ಕಲ್ಯಾಣ ಕಾಮನೆಯಲ್ಲದೆ ಬೇರೆ ಯಾವ ಕಾಮನೆಯೂ ನಮಗಿಲ್ಲ. ಸ್ವಪ್ನದಲ್ಲಿ ಕೂಡ ಯಾವಾಗಲೂ ಯಾರಿಗೂ ಅಕಲ್ಯಾಣ ಬಯಸಲಾರೆವು. ಅಲ್ಲದೆ ಠಾಕೂರರೂ ನಮ್ಮಿಂದ ಯಾರಿಗೂ ಯಾವ ಪ್ರಕಾರವಾದ ಅನಿಷ್ಟವಾಗಲಿ ಅಕಲ್ಯಾಣವಾಗಲಿ ಆಗಲು ಬಿಡುವುದಿಲ್ಲ. ನೀನು ನಮ್ಮ ಹತ್ತಿರ ಇದ್ದೀಯೆ, ಸರ್ವಕ್ಷಣವೂ ನಮ್ಮ ಸೇವೆ ಮಾಡುತ್ತಿದ್ದೀಯೆ, ನಿನ್ನ ಒಳ್ಳೆಯದು ಕೆಟ್ಟದ್ದು ಎಲ್ಲ ಭಾರವನ್ನೂ ಠಾಕೂರರು ನಮ್ಮ ಮೇಲೆಯೆ ಹೊರಿಸಿದ್ದಾರೆ. ಅದಕ್ಕಾಗಿಯೆ ನಿನ್ನಲ್ಲಿರುವ ತಪ್ಪು ಕೊಂಕು ಕೊರೆ ಎಲ್ಲವನ್ನೂ ತಿದ್ದಬೇಕಾಗಿದೆ. ನಿನ್ನ ಒಳ್ಳೆಯದಕ್ಕಾಗಿಯೆ ಅನೇಕ ವೇಳೆ ಚೆನ್ನಾಗಿ ಬೈಯುವವರೆಗೂ ಹೋಗುತ್ತೇನೆ; ಆದರೆ ಅದೆಲ್ಲ ಹೊರಗೆ. ಒಳಗಿರುವುದೆಲ್ಲ ಅಕ್ಕರೆ, ಸ್ನೇಹ, ದಯೆ. ಹಾಗಿಲ್ಲದಿದ್ದರೆ ಹತ್ತಿರ ಏಕೆ ಇರಗೊಡಿಸುತ್ತಿದ್ದೆ? ಇದನ್ನು ಚೆನ್ನಾಗಿ ಮನದಲ್ಲಿಟ್ಟುಕೊ, ನಾವು ಮಾಡುವುದೆಲ್ಲ ನಿನ್ನ ಒಳ್ಳೆಯದಕ್ಕಾಗಿಯೆ, ನಿನ್ನನ್ನು ತಿದ್ದುವುದಕ್ಕಾಗಿಯೆ; ನಿನ್ನ ಜೀವನದ ಗತಿ ಸರ್ವತೋ ಭಾವದಿಂದಲೂ ಭಗವನ್ಮುಖಿಯಾಗಲಿ ಎಂದು. ಉದ್ದೇಶಪೂರ್ವಕವಾಗಿಯೆ, ಅನೇಕವೇಳೆ ಕಠಿನವಾಗಿ ವರ್ತಿಸುತ್ತೇವೆ. ನಾವು ಏನು ಮಾಡುತ್ತಿದ್ದೇವೆ? ಏತಕ್ಕಾಗಿ? ಎಂಬುದೂ ನಮ್ಮ ಗಮನದಲ್ಲಿ ಇದ್ದೇ ಇರುತ್ತದೆ; ಕ್ರೋಧವಶವಾಗಿ ನಾವು ಏನನ್ನೂ ಮಾಡುವುದಿಲ್ಲ. ಠಾಕೂರರ ಹತ್ತಿರ ನಿನ್ನ ಮಂಗಳಕ್ಕಾಗಿ ಎಷ್ಟೊಂದು ಪ್ರಾರ್ಥನೆ ಮಾಡುತ್ತಾ ಇರುತ್ತೇವೆ ಎಂಬುದರ ಅರಿವು ನಿನಗೆ ಒಂದಿನಿತಾದರೂ ಇದ್ದಿದ್ದರೆ ನಿನ್ನ ಮನದಲ್ಲಿ ಇಂತಹ ಅಶಂಕೆ ಎಂದಿಗೂ ಉದಿಸುತ್ತಿರಲಿಲ್ಲ. ಅದೂ ಅಲ್ಲದೆ- ‘ಕ್ರೋಧೋಪಿ ದೇವಸ್ಯ ವರೇಣ ತುಲ್ಯಃ’ (ಭಗವಂತನ ಕ್ರೋಧವೂ ವರಕ್ಕೆ ಸಮಾನ)- ನಮ್ಮ ಕ್ರೋಧವೂ ವರ ಎಂದೇ ಭಾವಿಸಿಕೊ.”

ಪಾರ್ಶ್ವವಾಯುವಿನಿಂದ ಆಕ್ರಾಂತರಾಗುವುದಕ್ಕೆ, ಕೆಲವು ತಿಂಗಳ ಮುನ್ನ ಮಹಾಪುರುಷ ಮಹಾರಾಜ್, ಆ ವಾರವೆ, ಬೇಲೂರು ಮಠದಲ್ಲಿಯೆ, ಪ್ರತಿಮೆಯಲ್ಲಿ ವಾಸಂತೀ ಪೂಜೆ ಮಾಡುವ ಆಶೆ ಪ್ರಕಟಿಸಿದರು; ಆದರೆ ಸಮಯಾಭಾವದಿಂದ ಅದು ಸಾಧ್ಯವಾಗುವಂತಿರಲಿಲ್ಲ. ಆ ಸಂಬಂಧವಾಗಿ ಒಂದು ದಿನ ಮಾತಿನ ನಡುವೆ ಒಬ್ಬ ಸೇವಾರ್ಥಿ “ಮಹಾರಾಜ್, ಯಾವಾಗ ತಮ್ಮಲ್ಲಿ ಶ್ರೀ ವಾಸಂತೀ ಪೂಜೆ ಮಾಡುವ ‘ವಾಸನಾ’ ಉಂಟಾಯಿತೋ ಆವಾಗಲೆ ಅದು ನಿಶ್ಚಯವಾಗಿಯೂ ಕೈಗೂಡಿಯೆ ತೀರುತ್ತದೆ” ಎಂದರು. ಸೇವಕ ಸಾಧು ಈ ಮಾತನ್ನು ತುಂಬ ಸಾಧಾರಣ ಭಾವದಿಂದಲೆ ಹೇಳಿದ್ದರು. ಆದರೆ “ತಮ್ಮಲ್ಲಿ ವಾಸನಾ ಉಂಟಾಯಿತೋ” ಎಂಬ ಮಾತನ್ನು ಕೇಳಿದೊಡನೆ ಮಹಾಪುರುಷಜಿ ಚಕಿತರಾದಂತಾಗಿ “ಹ್ಞಾ! ಏನಂದೆ? ನನ್ನಲ್ಲಿ ‘ವಾಸನಾ’ ಉಂಟಾಯಿತೇ? ಠಾಕೂರರ ಕೃಪೆಯಿಂದ ನನ್ನಲ್ಲಿ ಯಾವೊಂದು  ‘ವಾಸನಾ’ ಇಲ್ಲ. ಬಿಂದೂಮಾತ್ರವೂ ಇಲ್ಲ” ಎಂದುಬಿಟ್ಟರು. ಒಡನೆಯೆ ಸೇವಾರ್ಥಿಗೆ ತನ್ನ ತಪ್ಪು ಅರಿವಾಗಿ ಪಕ್ಕನೆ ತಿದ್ದಿಕೊಂಡಂತೆ ಹೇಳಿದರು : “ಹಾಗಲ್ಲ, ಮಹಾರಾಜ್, ತಮ್ಮಲ್ಲಿ ಆ ಶುಭೇಚ್ಛೆ ಯಾವಾಗ ಉಂಟಾಯಿತೊ? – ಒಡನೆಯೆ ಮಹಾಪುರುಷಜಿ ಸಮ್ಮತಿಸುವಂತೆ “ಹ್ಞಾ ಹೌದು. ನಮ್ಮ ಶುಭೇಚ್ಛೆಯಿಂದಲೂ ಆತನ ಕೃಪೆಯಿಂದಲೂ ಎಲ್ಲ ಆಗಬಹುದು. ಆದರೆ ನಮಗೆ ಠಾಕೂರರನ್ನು ಉಳಿದು ಪೃಥಕ್ ಅಸ್ತಿತ್ವೂ ಇಲ್ಲ; ಹಾಗೆಯೆ ಅವರಿಂದ ಬೇರೆಯಾದ ಯಾವ ಇಚ್ಛೆಯೂ ಇಲ್ಲ. ಅವರ ಇಚ್ಛೆ ಏನಾಗಿದೆಯೋ ಅದೇ ಆಗುತ್ತದೆ” ಎಂದರು.

ನಡೆದ ಘಟನೆ ಮತ್ತು ಮಾತುಕತೆಗಳೇನೊ ಸಾಮನ್ಯವೆ. ಆದರೆ ನಾವು ಒಳಹೊಕ್ಕು ತಿಳಿಯಬೇಕಾದ ಅತ್ಯಂತ ಮಹತ್ವದ ವಿಷಯ ಅದರಲ್ಲಿ ಅಡಗಿದೆ; ಅವರು ಕಾಯ ಮನೋವಾಕ್ಯಗಳಿಂದಲೂ ಎಷ್ಟರಮಟ್ಟಿಗೆ ಶ್ರೀಗುರುಗತಪ್ರಾಣರಾಗಿ ಹೋಗಿದ್ದರೆಂಬುದು; ಅಲ್ಲದೆ ಅಷ್ಟು ಅಹಂಕಾರಶೂನ್ಯರಾಗಿ ಈ ಜಗತ್ತಿನಲ್ಲಿದ್ದರು ಎಂಬುದು.

* * *
[1] ವಿಭೂತಿಭೂಷಿತಂ ಬಾಲಮಷ್ಟವರ್ಷಾಕೃತಿಂ ಶಿಶುಂ|
ಆಕರ್ಷಪೂರ್ಣನೇತ್ರಂ ಚ ಸುವಕ್ತ್ರಂ ದರ್ಶನಚ್ಛದಂ ||
ಚಾರುಪಿಂಗಜಟಾಮೌಲಿಂ ನಗ್ನಂ ಪ್ರಹಸಿತಾನನಂ|
ಶೈಶವೋಚಿತ ನೇಪಥ್ಯಧಾರಿಣಂ ಚಿತ್ರಹಾರಿಣಂ || ಇತ್ಯಾದಿ.

 

[2] ಕನ್ನಡದಲ್ಲಿ  ‘ಮುರುಗುಂಡು’ ಎಂದು ಕರೆಯುತ್ತಾರೆ ಆ ಜಾತಿಯ ಮೀನನ್ನು.

[3] ಯಾವ ಜೀವಗಳು ತಮ್ಮ ಯಾವ ಕರ್ಮದಿಂದ ಆ ಕೆಸರುಮೀನುಗಳಾಗಿ ಹುಟ್ಟಿ, ಬಿಡುಗಡೆಗಾಗಿ ಪ್ರಾರ್ಥಿಸಿ ಬಾಯಿಬಿಡುತ್ತಿದ್ದವೋ? – ಅನುವಾದಕ.

[4] ಅಜ್ಜಿ ಕಥೆಗಳ ಅಥವಾ ಮಕ್ಕಳ ಕಥೆಗಳ ಪುಸ್ತಕ