ಬೇಲೂರು ಮಠ 
ಶನಿವಾರ, ಮೇ ೨೧, ೧೯೩೨

ಬೈಗಿನ ಹೊತ್ತು. ಭಕ್ತನೊಬ್ಬನು ಸಾಧನೆ ಭಜನೆಯಲ್ಲಿ ಮನಸ್ಸನ್ನು ಸ್ಥಿರಗೊಳಿಸಲಾರದೆ ಅತ್ಯಂತ ನೈರಾಶ್ಯದ ಭಾವದಿಂದ ಮಹಾಪುರುಷ ಮಹಾರಾಜರಿಗೆ ಅದನ್ನು ತಿಳಿಸಿದನು: “ಪ್ರಯತ್ನವನ್ನೇನೊ ತುಂಬ ಮಾಡುತ್ತೇನೆ; ಆದರೆ ಮನಸ್ಸು ಒಂದು ಕಡೆ ನಿಲ್ಲುವುದಿಲ್ಲ. ಏನು ಮಾಡಬೇಕು. ದಯವಿಟ್ಟು ತಿಳಿಸಬೇಕು. ನನ್ನಿಂದ ಏನೂ ಆಗುವುದೇ ಇಲ್ಲವೆ?”

ಮಹಾಪುರುಷಜಿ ದೃಢಭಾವದಿಂದ ಹೇಳಿದರು : “ಅಯ್ಯಾ ನಿನಗಿನ್ನೂ ಒಂದೂವರೆ ತಿಂಗಳು ರಜಾ ಇದೆ. ನಾನು ಏನು ಹೇಳುತ್ತೇನೆಯೊ ಅದನ್ನು ಮಾಡಿನೋಡುವುದಕ್ಕಾಗುವುದಿಲ್ಲವೆ? ಇಷ್ಟೊಂದು ಅಲ್ಪಕ್ಕೆಲ್ಲ ಇಷ್ಟು ಹತಾಶನಾದರೆ ಹೇಗೆ? ಶ್ರದ್ಧೆ ಬೇಕು, ಧೈರ್ಯ ಬೇಕು. ಪಟ್ಟುಹಿಡಿದು ಕೆಲಸಮಾಡಬೇಕು. ಪ್ರಾರಂಭ ಮಾಡುವುದರಲ್ಲಿಯೆ ಏನೂ ಆಗಲಿಲ್ಲ ಎಂದು ಮೊರೆಯಿಟ್ಟು ಗೋಳಾಡತೊಡಗಿದರೆ ಏನು ತಾನೆ ಆಗುತ್ತದೆ? ಮನಸ್ಸನ್ನು ಸ್ಥಿರಗೊಳಿಸುವುದಕ್ಕಾಗಲಿ, ಭಗವದಾನಂದವನ್ನು ಪಡೆಯುವುದಕ್ಕಾಗಲಿ, ಅಯ್ಯಾ, ನನಗೆ ಯಾವ ಕೃತ್ರಿಮ ಕ್ಷಿಪ್ರೋಪಾಯವೂ ಗೊತ್ತಿಲ್ಲ. ನನಗೆ ಗೊತ್ತಿರುವ ಉಪಾಯ ಎಂದರೆ ನಾನು ಯಾವುದನ್ನು ಶ್ರೀ ಠಾಕೂರರಿಂದ ಕಲಿತೆನೋ ಅದು; ಅದನ್ನು ನಿನಗೆ ಆಗಲೆ ಹೇಳಿಕೊಟ್ಟಿದ್ದೇನೆ. ಈಗಲೂ ನಿನಗೆ ಹೇಳುತ್ತೇನೆ, ಯಾವ ಅವಸರದ ಫಲವೂ ತಟಕ್ಕನೆ ಕೈಗೆ ಬೀಳುತ್ತದೆಂದು ನಿರೀಕ್ಷಿಸಬಾರದು. ನಿಯಮಿತ ಭಾವದಿಂದ ನಿಷ್ಠಾಸಹಿತವಾಗಿ ದಿನವಾದ ಮೇಲೆ ದಿನ ತಪ್ಪದೆ, ತಿಂಗಳುಗಟ್ಟಳೆ, ವರ್ಷಗಳ ಮೇಲೆ ವರ್ಷ ಉರುಳಿದರೂ ಒಂದೇ ಭಾವದಿಂದ, ಹಿಡಿದು ಪಟ್ಟು ಬಿಡದೆ, ಸಾಧನೆ ಭಜನೆಯಲ್ಲಿ ತೊಡಗಬೇಕು. ಯಾವ ಮನಸ್ಸು ಇಷ್ಟು ಕಾಲವೂ ನಾನಾ ವಿಷಯಗಳ ಹಿಂದೆ ಓಡುವುದರಲ್ಲಿ ಹರಿದು ಹಂಚಿಹೋಗಿತ್ತೋ ಅಂತಹ ಮನಸ್ಸನ್ನು ಮೆಲ್ಲಮೆಲ್ಲಗೆ ಹಿಂದಕ್ಕೆ ಎಳೆದುತಂದು ಭಗವಚ್ಚರಣದಲ್ಲಿ ಮಗ್ನವಾಗುವಂತೆ ಮಾಡಬೇಕು. ಠಾಕೂರರನ್ನು ಕರೆ, ಬೇಡಿಕೊ; ಪಟ್ಟು ಹಿಡಿದು ಕರೆದು ಬೇಡು. ಕ್ರಮೇಣ ಮನಸ್ಸು ಸ್ಥಿರವಾಗುತ್ತದೆ; ಆನಂದವೂ ಲಭಿಸುತ್ತದೆ. ಒಂದು ಶಕ್ತಿ ಇದೆ ಎಂದು ನಂಬುತ್ತಿಯಾ ತಾನೆ? ನಿನ್ನ ಸಂಸ್ಕಾರಕ್ಕೆ ಭಗವಂತನ ಸಗುಣ ಸಾಕಾರಭಾವವೆ ಮೇಲು – ಸಗುಣ ಸಾಕಾರದಲ್ಲಿ ಸುಲಭವಾಗಿ ಮನಸ್ಸನ್ನು ಸ್ಥಿರಗೊಳಿಸಲು ಸಮರ್ಥನಾಗಬಹುದು. ಹಿಂದೊಮ್ಮೆ ನಾನೂ ಬ್ರಾಹ್ಮ ಸಮಾಜಕ್ಕೆ ಹೋಗುತ್ತಿದ್ದೆ. ಆಮೇಲೆ ದಕ್ಷಿಣೇಶ್ವರದಲ್ಲಿ ಠಾಕೂರರ ಬಳಿ ಬಂದಾಗ ಅವರು ಒಂದು ದಿನ  ‘ನೀನು ಶಕ್ತಿಯನ್ನು ನಂಬುತ್ತೀಯಾ?’ ಎಂದು ಪ್ರಶ್ನೆ ಕೇಳಿದರು. ನಾನು ಹೇಳಿದೆ  ‘ಇಲ್ಲ; ನನಗೆ ನಿರಾಕಾರದಲ್ಲಿಯೆ ಹೆಚ್ಚು ಇಷ್ಟ. ಆದರೂ ಹೀಗೂ ಆಲೋಚಿಸುತ್ತೇನೆ. ಒಂದು ಶಕ್ತಿ ಸರ್ವತ್ರ ಓತಪ್ರೋತವಾಗಿ ಇರಲೇಬೇಕೆಂದು.’ ಆಮೇಲೆ ಅವರು ಕಾಳೀಗುಡಿಗೆ ಹೋದರು; ನಾನೂ ಅವರ ಜೊತೆ ಹೋದೆ. ಅವರು ಮಂದಿರದ ಕಡೆಗೆ ಹೋಗುತ್ತಾ ಹೋಗುತ್ತಾ ಭಾವಸ್ಥರಾಗಿಬಿಟ್ಟರು. ಹಾಗೆಯೆ ತಾಯಿಯ ಬಳಿಗೆ ಹೋದೊಡನೆಯೆ ಅತ್ಯಂತ ಭಕ್ತಿಭಾವದಿಂದ ಅವಳಿಗೆ ಪ್ರಣಾಮ ಮಾಡಿದರು. ನನಗೆ ಮನಸ್ಸು ಸ್ವಲ್ಪ ಅತ್ತ ಇತ್ತ ಆಗಿ, ಗಡಿಬಿಡಿಗೆ ಸಿಕ್ಕಿದೆ. ಕಾಳೀ ಮೂರ್ತಿಯ ಮುಂದೆ ನಮಸ್ಕಾರ ಮಾಡಲು, ಮೊದಮೊದಲು, ನನ್ನ ಮನಸ್ಸು ಒಂದಿನಿತು ದ್ವಿಧಾಬೋಧದಿಂದ ತೂಗುಯ್ಯಾಲೆ ಯಾಯಿತು. ಆದರೆ ಒಡನೆಯೆ ಅಂದುಕೊಂಡೆ, ಬ್ರಹ್ಮ ಸರ್ವವ್ಯಾಪಿ; ಅದು ನಿಜವಾಗಿದ್ದರೆ, ಅವನು ಈ ಮೂರ್ತಿಯ ಒಳಗೂ ಇರಲೇಬೇಕು. ಆದ್ದರಿಂದ ಅಡ್ಡಬಿದ್ದರೆ ಅದರಿಂದೇನೂ ತಪ್ಪಾಗುವುದಿಲ್ಲ. ಹಾಗೆ ಆಲೋಚಿಸಿದೊಡನೆಯೆ ನಾನೂ ಪ್ರಣಾಮ ಮಾಡಿಬಿಟ್ಟೆ. ಅದಾದ ಮೇಲೆ ಠಾಕೂರರ ಹತ್ತಿರಕ್ಕೆ ಹೋಗಿಬಂದು ಮಾಡುತ್ತಾ ಮೆಲ್ಲಮೆಲ್ಲಗೆ ಸಾಕಾರದಲ್ಲಿ ಅತ್ಯಂತ ವಿಶ್ವಾಸ ಹುಟ್ಟಿತು. ನನ್ನ ಮಹಾಭಾಗ್ಯವೆಂದರೆ ಠಾಕೂರರ ಸಂಗಲಾಭ ದೊರೆತದ್ದು, ಅವರ ಕೃಪೆ ಲಭಿಸಿದ್ದು.”

* * *