ಬೇಲೂರು ಮಠ
ಬುಧವಾರ, ಜೂನ್ ೨೩, ೧೯೩೨

ಇವತ್ತು ಬೆಳಿಗ್ಗೆಯಿಂದಲೂ ತುಂಬ ಮಳೆಹೊಯ್ಯುತ್ತಿದೆ. ಮಹಾಪುರುಷ ಮಹಾರಾಜರಿಗೆ ತುಂಬ ಆನಂದವಾಗಿಬಿಟ್ಟಿದೆ. ಕೈಜೋಡಿಸಿಕೊಂಡು ಜಗನ್ಮಾತೆಯನ್ನುದ್ದೇಶಿಸಿ ಹೇಳುತ್ತಾರೆ: “ಅಮ್ಮಾ, ನೀನು ಬದುಕಿಸದಿದ್ದರೆ ಇನ್ನಾರು ಬದುಕಿಸಬಲ್ಲರು ನಿನ್ನ ಸೃಷ್ಟಿಯನ್ನು? ಮಳೆ ಇಲ್ಲದೆ ಎಲ್ಲ ಧ್ವಂಸವಾಗುತ್ತಾ ಇತ್ತು!” ತರುವಾಯ ಅವರ ನಿರ್ದೇಶನದಂತೆ ಪಕ್ಕದ ತಾರಸಿಯ ಮೇಲೆ ಗುಬ್ಬಚ್ಚಿ, ಪಾರಿವಾಳ ಮತ್ತು ಇತರ ಹಕ್ಕಿಗಳಿಗಾಗಿ ಧಾನ್ಯ ಎರಚಲಾಯಿತು. ಗುಂಪು ಗುಂಪಾಗಿ ಹಕ್ಕಿಗಳೆಲ್ಲ ಹಾರಿಬಂದು ನಾಮುಂದೆ ತಾಮುಂದೆ ಎಂದು ನುಗ್ಗಿ ಕಾಳುಗಳನ್ನು ಮುಕ್ಕುತ್ತಿರುವುದನ್ನು ನೋಡಿ ಮಹಾಪುರುಷಜಿಗೆ ಆನಂದವೇ ಆನಂದ. ಅವರು ಹೇಳಿದರು ; “ನಾನಂತೂ ಹೊರಗೆ ಹೋಗುವ ಹಾಗಿಲ್ಲ; ನನಗೆ ಇದರಿಂದಲೆ ಮಹದಾನಂದ.”

ಹಗಲಿನ ಊಟವಾದ ಅನಂತರ ತುಸು ವಿಶ್ರಾಂತಿ ನಿದ್ರೆ ಮಾಡಿ ಎದ್ದು ತಮ್ಮ  ಹಾಸಗೆಯ ಮೇಲೆ ಅಂತರ್ಮುಖಿಯಾಗಿ ಕುಳಿತಿದ್ದರು. ಆಮೇಲೆ ಅನುಚರರೊಬ್ಬರಿಗೆ ಭಾಗವತ ಓದುವಂತೆ ಹೇಳಿದರು. ಉದ್ಧವ ಸಂವಾದದ ಭಾಗದಿಂದ ಓದು ಮುಂದುವರಿಯಿತು. ದ್ವಾದಶ ಅಧ್ಯಾಯದಲ್ಲಿ ಸತ್ಸಂಗ ಮಹಾತ್ಮೆಯ ವಿಚಾರವಾಗಿ ಶ್ರೀ ಭಗವಂತನು ಉದ್ಧವನಿಗೆ ಹೇಳುತ್ತಾನೆ :

‘ನ ರೋಧಯತಿ ಮಾಂ ಯೋಗೋ ನ ಸಾಂಖ್ಯ ಧರ್ಮ ಏವ ಚ ||
ನ ಸ್ವಾಧ್ಯಾಯಸ್ತಪಸ್ ತ್ಯಾಗೋ ನೇಷ್ಟಾಪೂರ‍್ತಂ ನ ದಕ್ಷಿಣೌ |
ವ್ರತಾನಿ ಯಜ್ಞಶೃಂದಾಂಸಿ ತೀರ್ಥಾನಿ ನಿಯಮಾ ಯಮಾಃ |
ಯಥಾವರುನ್ಧೇ ಸತ್ಸಂಗಃ ಸರ್ವಸಂಗಾಪಹೋ ಹೀ ಮಾಮ್‌ ||’

– ‘ಹೇ ಉದ್ಧವ, ಅಷ್ಟಾಂಗಯೋಗ, ಸಾಂಖ್ಯಯೋಗ, ಲೌಕಿಕ ಧರ್ಮಾಚರಣ, ಸ್ವಾಧ್ಯಾಯ, ತಪಸ್ಯೆ, ತ್ಯಾಗ, ಇಷ್ಟಾಪೂರ್ತ, ದಾನದಕ್ಷಿಣೆ, ವ್ರತ ಯಜ್ಞ, ವೇದಾಧ್ಯಯನ ತೀರ್ಥಸೇವಾದಿ, ಯಮನಿಯಮ ಪ್ರಭೃತಿ ಯಾವ ಕ್ರಿಯಾ ದ್ವಾರದಿಂದಲೂ ಮನುಷ್ಯ ನನ್ನನ್ನು ವಶೀಭೂತನನ್ನಾಗಿ ಮಾಡಿಕೊಳ್ಳಲಾರನು. ಎಲ್ಲ ಆಸಕ್ತಿಗಳನ್ನು ನಿವಾರಿಸುವ ಸತ್ಸಂಗವೊಂದರಿಂದಲೆ ನಾನು ಆಕೃಷ್ಟನಾಗುತ್ತೇನೆ. ಅದೊಂದರಿಂದಲೆ ಮನುಷ್ಯ ನನ್ನ ಸಾನ್ನಿಧ್ಯ ಲಾಭ ಪಡೆಯಲು ಸಮರ್ಥನಾಗುತ್ತಾನೆ.’

‘ಯಥಾವರುನ್ಧೇ ಸತ್ಸಂಗಃ ಸರ್ವಸಂಗಾಪಹೋ ಹಿ ಮಾಮ್’ ಎಂಬ ಪಂಕ್ತಿಯನ್ನು ಕೇಳಿ ಮಹಾಪುರಷಜಿ ತದ್ಗತಭಾವರಾಗಿ ಹೇಳಿದರು: “ಆಹಾ! ಆಹಾ! ಎಂತಹ ಸೊಗಸಾದ ಮಾತು! ನೋಡಿದೆಯೊ, ಸ್ವಯಂ ಭಗವಾನ್ ಹೇಳುತ್ತಾನೆ, ಸತ್ಸಂಗಕ್ಕೆ ಎಣೆಯಿಲ್ಲ. ಸಾಧುಸಂಗದ ಫಲ ಎಂದರೆ ಸರ್ವ ಸಂಗಾಪಹ, ಅಂದರೆ ಸರ್ವ ಆಸಕ್ತಿ ವರ್ಜಿತ ಅವಸ್ಥೆಯೊದಗುತ್ತದೆ. ಎಲ್ಲ ಕಾಮನೆಗಳೂ ವಾಸನೆಗಳೂ ಸಮೂಲವಾಗಿ ವಿನಷ್ಟವಾಗಿ ಹೋಗುತ್ತವೆ ಮತ್ತು ಅದರಿಂದ ಶ್ರೀ ಭಗವಂತನ ಸಾನ್ನಿಧ್ಯ ಅನುಭೂತವಾಗುತ್ತದೆ. ಮನುಷ್ಯ ತನ್ನ ಕ್ಷುದ್ರಶಕ್ತಿಯನ್ನು ನೆಮ್ಮಿ ಎಷ್ಟೆಂದು ಸಾಧನೆ ಭಜನೆ ಮಾಡಿಯಾನು? ಅದೂ ಅಲ್ಲದೆ ಸಾಧನೆ ಭಜೆಯಿಂದಾಗಲಿ ತಪಸ್ಯೆಯಿಂದಾಗಲಿ ಅವನನ್ನೇನು ಹಿಡಿಯುವುದಕಾಗುತ್ತದೆಯೆ? ಭಗವಂತ ಭಕ್ತವತ್ಸಲ. ಅವನು ತುಷ್ಟನಾಗುವುದು ಪ್ರೇಮ ಮತ್ತು ಭಕ್ತಿ ಒಂದರಿಂದಲೆ. ಎಲ್ಲಿ ವ್ಯಾಕುಲತೆ ಮತ್ತು ಅನುರಾಗ ಇದೆಯೊ ಅಲ್ಲಿಯೆ ಆತನ ಪ್ರಕಾಶ. ಅದಕ್ಕಾಗಿಯೆ ಠಾಕೂರರು ಹೇಳುತ್ತಿದ್ದುದು – ‘ಭಕ್ತನ ಹೃದಯ ಭಗವಂತನ ಸ್ವಸ್ಥಾನ (ಬೈಠಕ್ ಖಾನೆ)’ ಎಂದು. ಸಾಧನೆ ಭಜನೆ, ತ್ಯಾಗತಪಸ್ಯೆ ಇವುಗಳಿಂದ ಚಿತ್ತ ನಿರ್ಮಲವಾಗುತ್ತದೆ; ಅಂತಹ ವಿಶುದ್ಧವಾದ ಚಿತ್ತದಲ್ಲಿ ಭಗವದ್‌ಭಕ್ತಿಯ ಸ್ಫುರಣವಾಗುತ್ತದೆ; ಆಗಲೆಯೆ ಶ್ರೀ ಭಗವಾನ್ ಪ್ರಕಾಶಿತನಾಗುತ್ತಾನೆ. ಮುಖ್ಯವಾದ್ದೆಂದರೆ ಭಗವಂತನು ತನ್ನವನೇ ಎಂಬ ಜ್ಞಾನದಿಂದ ಆತನನ್ನು ಪ್ರೀತಿಸುವುದು. ಗೋಪಿಯರು ತಿಳಿದಿದ್ದರು ‘ಕೃಷ್ಣ ನಮ್ಮವನೇ’ ಎಂದು. ಭಗವಂತ ನಮ್ಮವನೇ ಎಂಬ ಬೋಧೆ ಎಂಥಾದ್ದೆಂದು ಸ್ವಲ್ಪ  ಆಲೋಚಿಸಿನೋಡು. ಅಲ್ಲಿ ಭಗವದ್‌ಬುದ್ಧಿಯೂ ಇಲ್ಲ; ಮುಕ್ತಿ ಕಾಮನೆ ಕೂಡ ಇಲ್ಲ; ಅಲ್ಲಿ ಇರುವುದು ಅಹೈತುಕಿಯಾದ ಪ್ರೀತಿ ಮತ್ತು ಶುದ್ಧಾಭಕ್ತಿ.

“ಅಲ್ಲದೆ ಸಾಧುಸಂಗದಲ್ಲಿಯೆ ಅಂತಹ ಮಾಹಾತ್ಮ್ಯ ಇದೆ; ಸಾಧುಸಂಗದಿಂದ ಭಗವತ್‌ಪ್ರೇಮ ತನಗೆ ತಾನೆ ಉದಯವಾಗುತ್ತದೆ. ನಿಜವಾದ ಸಾಧು ಯಾರು? ಯಾರ ಹೃದಯದಲ್ಲಿ ಶ್ರೀ ಭಗವಂತನು ಪ್ರತಿಷ್ಠಿತನೋ ಆತನೆ. ಬಹುಜನ್ಮಗಳ ಸುಕೃತದ ಫಲವಾಗಿ ಸಾಧುಸಂಗವೂ ಸಾಧು ಕೃಪೆಯೂ ಲಭಿಸುತ್ತದೆ. ನೀನೂ ಜನ್ಮಜನ್ಮಾಂತರದ ಅನೇಕ ಪುಣ್ಯದ ಫಲವಾಗಿಯೆ ಠಾಕೂರರ ಈ ಪವಿತ್ರ ಸಂಘದೊಳಗೆ ಪ್ರವೇಶ ಪಡೆದಿದ್ದೀಯೆ. ಸತ್ಸಂಗದ ಫಲವಾಗಿ ಮನುಷ್ಯನ ಸಮಗ್ರ ಜೀವನದ ಗತಿಯೆ ಒಮ್ಮೆಗೇ ಬದಲಾಯಿಸಿಬಿಡುತ್ತದೆ. ಅಲ್ಲದೆ ಅದರ ಫಲವೂ ಅತ್ಯಂತ ದೀರ್ಘಕಾಲ ಸ್ಥಾಯಿಯಾಗಿರುತ್ತದೆ. ನಮ್ಮ ಜೀವನದಲ್ಲಿಯೂ ನೋಡಿದ್ದೇನೆ, ಠಾಕೂರರ ಹತ್ತಿರ ಒಂದೊ ಎರಡೊ ಗಂಟೆ ಮಾತ್ರ ಇರುತ್ತಿದ್ದೆವು; ಎಲ್ಲ ದಿನಗಳಲ್ಲಿಯೂ ಅವರೊಡನೆ ಹೆಚ್ಚು, ಮಾತುಕತೆ ನಡೆಸಲೂ ಆಗುತ್ತಿರಲಿಲ್ಲ; ಆದರೂ ಅವರ ಪ್ರಭಾವ ಬಹುದಿನಗಳವರೆಗೂ ಇರುತ್ತಿತ್ತು. ನಮ್ಮ ಮನಸ್ಸಿಗೆ ಏನೋ ಒಂದು ದಿವ್ಯವಾದ ಅಮಲೇರಿದಂತೆ ತೋರುತ್ತಿತ್ತು. ಸರ್ವಕ್ಷಣವೂ ಭಗವದ್ ಭಾವದಲ್ಲಿ ಅದ್ದಿರುತ್ತಿದ್ದೆವು. ಅವರ ಮಾತೇ ಬೇರೆ ಅಂದುಕೊ. ಅವರು ಸಾಕ್ಷಾತ್‌ ಭಗವಂತನೆ ಆಗಿದ್ದರು – ಯುಗಾವತಾರ. ಅವರ ಕೃಪಾಕಟಾಕ್ಷ ಮಾತ್ರದಿಂದ ಸಮಾಧಿಯೆ ಲಭಿಸುತ್ತಿತ್ತು; ಅವರು ತಮ್ಮ ಸ್ಪರ್ಶಮಾತ್ರದಿಂದ ಭಗವದ್ದರ್ಶನವನ್ನೆ ದಯಪಾಲಿಸಲು ಸಮರ್ಥರಾಗಿದ್ದರು.”

‘‘ಸಿದ್ಧಪುರುಷನ ಸಂಸ್ಪರ್ಶ ಒದಗಿದರೆ ಒಡನೆಯೆ ಮಾನವನಿಗೆ ಮನಸ್ಸಿನಲ್ಲಿ ಭಗವದ್‌ಭಾವ ಸ್ಫುರಣ ಆಗಿಯೆ ಆಗುತ್ತದೆ. ಅದು ನಿಜಕ್ಕೂ ಅದ್ಭುತ ಸಂಗತಿ. ಯಾರಾದರೂ ವಾಸ್ತವಿಕವಾಗಿ ಭಗವತ್ ಸಾಕ್ಷಾತ್ಕಾರ ಪಡೆದಿದ್ದಾರೆಯೊ ಇಲ್ಲವೊ ಎಂಬುದನ್ನು ಗೊತ್ತು ಹಚ್ಚುವುದಕ್ಕೂ ಅದೊಂದು ಪರೀಕ್ಷೆಯ ಒರೆಗಲ್ಲೂ ಆಗುತ್ತದೆ. ಭಗವದ್‌ದ್ರಷ್ಟನಾದ ಪುರುಷನ ಸಾನ್ನಿಧ್ಯ ಮಾತ್ರದಿಂದಲೆ ಹೃದಯದಲ್ಲಿ ಈಶ್ವರೀಯ ಭಾವ ಜಾಗ್ರತವಾಗುತ್ತದೆ. ವೈಷ್ಣವ ಗ್ರಂಥಗಳಲ್ಲಿ ಒಂದು ಅತಿ ಸುಂದರ ಉಕ್ತಿ ಇದೆ, – ‘ಯಾರನು ಕಂಡೊಡನೆಯೆ ಹೃದಯದಿ ಕೃಷ್ಣ ಹೆಸರುಕ್ಕುವುದೊ! ತಿಳಿ ನೀನಾತನು ವೈಷ್ಣವ ಭಕ್ತಾಗ್ರಣಿಯೆಂದು!!” ಹೇಗೆ ಬೆಂಕಿಯ ಬಳಿ ಹೋದರೆ ಬೇಗೆಯ ಅನುಭೂತಿಯಾಗುವುದೋ ಹಾಗೆಯೆ ಯಥಾರ್ಥ ಸಾಧುಪುರುಷರ ಬಳಿ ಹೋದರೆ ಮನಸ್ಸೂ ಪ್ರಾಣವೂ ಭಗವದ್ ಭಾವದಿಂದ ದೀಪ್ತವಾಗುತ್ತವೆ.

‘ಕುಸುಮಸಂಗದೊಳೆಂತು ಕೀಟವೂ ಏರುವುದೊ ಸುರಕಿರೀಟಕ್ಕೆ
ಸಾಧುಸಂಗದೊಂತೆ ಅಧಮರೂ ಏರುವರು ಪರಮಪೀಠಕ್ಕೆ’

ಸಂಸಾರ ತಾಪದಲ್ಲಿ ದುಃಖಕಷ್ಟಗಳಿಗೆ ಸಿಕ್ಕಿದವರಿಗೆ ಮಾತ್ರವೆ ಸಾಧುಸಂಗದ ಪ್ರಯೋಜನ, ಉಳಿದವರಿಗೇನಿಲ್ಲ, ಎಂದಲ್ಲ. ಯಾರು ಸುಖದ ತೊಡೆಯ ಮೇಲೆಯೆ ಲಾಲಿತ ಪಾಲಿತರಾಗಿ ಭೋಗವಿಲಾಸಗಳಲ್ಲಿ ಮತ್ತರಾಗಿರುತ್ತಾರೆಯೊ ಅವರೂ ಸುಕೃತಫಲದಿಂದ ಸಾಧುಸಂಗಮಾಡಿದರೆ ಅದರ ಫಲವಾಗಿ ಅವರ ಮನದಲ್ಲಿರುವ ಅನಿತ್ಯಸುಖಭೋಗದ ಆಕಾಂಕ್ಷೆ ಚಿರತರವಾಗಿ ತೊಲಗಿ ಹೋಗುತ್ತದೆ; ನಿತ್ಯಸುಖದ ಕಡೆಗೆ ಧಾವಿತವಾಗಿ, ಎಲ್ಲಕ್ಕಿಂತಲೂ ಮಿಗಿಲಾಗಿ ಆನಂದವನ್ನು – ‘ಆ ಸಚ್ಚಿದಾನಂದ ಆಸ್ವಾದವನ್ನು’ ಪಡೆದು ಅವರ ಜೀವನ ಧನ್ಯವಾಗುತ್ತದೆ. ಠಾಕೂರರ ಬಳಿಗೆ ಕೂಡ ಎಷ್ಟು ಜನ ಧನಿಕರೂ ದೊಡ್ಡ ಮನುಷ್ಯರೂ ಬರುತ್ತಿದ್ದರು. ಅವರೂ ದಯೆತೋರಿ ಅವರ ಮನಸ್ಸುಗಳನ್ನು (ಭೋಗದ ಕಡೆಯಿಂದ ದೇವರ ಕಡೆಗೆ) ತಿರುಗಿಸಿ ಬಿಡುತ್ತಿದ್ದರು. ಆಗ ಅವರೆಲ್ಲ ಭಗವದಾನಂದದಿಂದ ತುಂಬಿತುಳುಕಾಡುತ್ತಿದ್ದರು.

ನಮಗೂ ಠಾಕೂರರ ದರ್ಶನ ಲಭಿಸದೆ ಇದ್ದಿದ್ದರೆ, ಅವರ ಕೃಪಾಲಾಭ ದೊರೆಯದಿದ್ದರೆ ನಾವೂ ಹೀಗಾಗಲು ಸಾಧ್ಯವಾಗುತ್ತಿತ್ತೆ? ಅವರ ಕೃಪೆಯ ವಿಚಾರ ಏನೆಂದು ಹೇಳಲಿ?… ಠಾಕೂರರು ಬೇರೆ ಯಾರೂ ಅಲ್ಲ. ತಾಯಿ ಕಾಳಿಯೆ ಅವರ ರೂಪದಿಂದ ಪ್ರಕಾಶಿತಳಾಗಿ ಜಗತ್ತನ್ನು ಉದ್ಧರಿಸುತ್ತಿದ್ದಾಳೆ. ಆಹಾ ಏನು ದಯೆ, – ಎಷ್ಟು ದಯೆ! ನಮ್ಮ ಮಹಾಭಾಗ್ಯವೆಂದರೆ ಅಂತಹ ಅವತಾರಪುರುಷನ ಸಂಗಲಾಭ ಪಡೆದದ್ದು. ನಮ್ಮ ಜೀವನ ಧನ್ಯವಾಗಿ ಹೋಗಿದೆ! ನಿಮಗೂ ಹೇಳುತ್ತೇನೆ – ಅವರು ಯುಗಾವತಾರ; ಜೀವಗಳ ರಕ್ಷಾಕರ್ತ ತ್ರಾಣಕರ್ತ – ಭಗವಾನ್. ಆತನಿಗೆ ಶರಣಾಗತರಾಗಿ ಇದ್ದುಬಿಡಿ; ಎಲ್ಲ ಆಗಿಹೋಗುತ್ತದೆ. ಭಕ್ತಿ, ಮುಕ್ತಿ ಎಲ್ಲವೂ ದೊರೆಯುತ್ತದೆ. ನಾವು ಹೇಳಬೇಕಾದ್ದೆಲ್ಲ ಅದೊಂದೇ ಮಾತಿನಲ್ಲಿದೆ.”

ಯಸ್ಯಾಃ ಕುಕ್ಷೌ ಲೀನಮಖಂಡಂ ಜಗದಂಡಂ
ಭೂಯೋ ಭೂಯಃ ಪ್ರಾದುರಭೂದುತ್ಥಿತಮೇವ
ಪತ್ಯಾ ಸಾರ್ಧಂ ತಾಂ ರಜತಾದ್ರೌ ವಿಹರಂತೀಂ
ಗೌರೀಮಂಬಾಮಂಬುರುಹಾಕ್ಷಿಮಹಮೀಡೇ | – ಶಂಕರಾಚಾರ್ಯ

* * *