ಬೇಲೂರು ಮಠ
೧೯೩೨

ಈ ಸಮಯದಲ್ಲಿ ಮಹಾಪುರುಷ ಮಹಾರಾಜರಿಗೆ ಹೆಚ್ಚೇನೂ ನಿದ್ದೆ ಬರುತ್ತಿರಲಿಲ್ಲ. ಯಾವಾಗಲೂ ಒಂದಲ್ಲ ಒಂದು ದಿವ್ಯಭಾವದಿಂದ ಪ್ರೇರಿತವಾದ ವಿಮಲಾನಂದದಲ್ಲಿ ಮುಳುಗಿಯೆ ಇರುತ್ತಿದ್ದರು. ಹಗಲು ಹೊತ್ತು ಮಠದ ಸಾಧು ಬ್ರಹ್ಮಚಾರಿಗಳೊಡನೆಯೂ ಮತ್ತು ಅಗಣಿತ ಭಕ್ತರೊಡನೆಯೂ ನಾನಾವಿದ ಪ್ರಸಂಗದಲ್ಲಿ ತೊಡಗಿರುವಾಗ ಅವರ ಹೃದಯದ ಆ ಆನಂದಭಾವದ ಒಂದಿನಿತೆ ಪ್ರಕಾಶನಾಂಶವನ್ನು ಕಾಣಬಹುದಾಗಿತ್ತು. ಒಮ್ಮೊಮ್ಮೆ ಎಂತಹ ಉಚ್ಚಾವಸ್ಥೆಯ ವಿಚಾರವಾಗಿ ಮಾತಾಡುತ್ತಿದ್ದರು ಎಂದರೆ, ಅನೇಕರು ಅದರ ಮರ್ಮಗ್ರಹಣ ಮಾಡಲು ಸಮರ್ಥರಾಗುತ್ತಿರಲಿಲ್ಲ. ರಾತ್ರಿಯಲ್ಲಿ ಭಾವಾವಸ್ಥೆಯನ್ನು ವಿಶೇಷ ರೀತಿಯಲ್ಲಿ ಲಕ್ಷಿಸಬಹುದಾಗಿತ್ತು. ಒಮ್ಮೊಮ್ಮೆ ಆತ್ಮಾರಾಮರಾಗಿ, ಹೃದಯದ ಆನಂದ ತುಂಬಿ ತುಳುಕಿ, ಗುನು ಗುನು ಗುನು ಗಾನದಲ್ಲಿ ಹೊರ ಹೊಮ್ಮುತ್ತಿದ್ದುದನ್ನು ಕಾಣಬಹುದಾಗಿತ್ತು. ಒಮ್ಮೊಮ್ಮೆ ಉಪನಿಷತ್ತು, ಗೀತೆ, ಚಂಡಿ ಅಥವಾ ಭಾಗವತ ಮೊದಲಾದ ಪವಿತ್ರ ಗ್ರಂಥಗಳಿಂದ ಶ್ಲೋಕಗಳನ್ನು ಹೇಳಿಕೊಳ್ಳುತ್ತಿದ್ದರು. ಮತ್ತೆ ಹಾಗೆ ಹೇಳಿಕೊಳ್ಳುತ್ತಿದ್ದಾಗಲೆ ನಡುನಡುವೆ ಒಂದೆರಡು ಕ್ಷಣ ಸುಮ್ಮನೆ ಕುಳಿತುಬಿಡುತ್ತಿದ್ದರು. ಅನೇಕ ವೇಳೆ ಅವರಿಗೆ ಹೊರಗಣ ಜಗತ್ತಿನ ಅಥವಾ ಸುತ್ತಮುತ್ತಣ ಪರಿಸ್ಥಿತಿಯ ಜ್ಞಾನ ಇರುವಂತೆ ತೋರುತ್ತಿರಲಿಲ್ಲ.

ಒಂದು ದಿನ ರಾತ್ರಿ ವೇಳೆ ಅವರು ತಮ್ಮ ಹಾಸಗೆಯ ಮೇಲೆ ಮೌನವಾಗಿ ಕುಳಿತಿದ್ದರು; ಕಣ್ಣು ಮುದ್ರಿತವಾಗಿದ್ದುವು. ರಾತ್ರಿ ಸುಮಾರು ಎರಡು ಗಂಟೆ. ಸಮಗ್ರ ಮಠ ನಿಶ್ಶಬ್ದ. ಬಹಳ ಹೊತ್ತು ಆ ಭಾವದಲ್ಲಿ ಧ್ಯಾನಸ್ಥರಾಗಿದ್ದು ತರುವಾಯ ಮೆಲ್ಲಮೆಲ್ಲನೆ ಮನದಲ್ಲಿಯೆ ಹೇಳಿಕೊಳ್ಳತೊಡಗಿದರು :

‘ಅಪೂರ್ಯಮಾಣಮಚಲ ಪ್ರತಿಷ್ಠಂ
ಸಮುದ್ರಮಾಪಃ ಪ್ರವಿಶಂತಿ ಯದ್ವತ್ |
ತದ್ವತ್ ಕಾಮಾ ಯಂ ಪ್ರವಿಶನ್ತಿ ಸರ್ವೇ
ಸ ಶಾನ್ತಿಮಾಪ್ನೋತಿ ನ ಕಾಮಕಾಮೀ ||

ವಿಹಾಯ ಕಾಮಾನ್ ಯಃ ಸರ್ವಾನ್
ಪುಮಾಂಶ್ಚರತಿ ನಿಃಸ್ಪೃಹಃ |
ನಿರ್ಮಮೋ ನಿರಹಂಕಾರಃ
ಸ ಶಾಂತಿಮಧಿಗಚ್ಛತಿ ||’

ಆಮೇಲೆ ಹತ್ತಿರ ಇದ್ದ ಸೇವಾರ್ಥಿಯನ್ನು ಕುರಿತು ಕೇಳಿದರು : “ಇದರ ಅರ್ಥ ಏನೆಂದು ಗೊತ್ತೆ?” ಸೇವಾರ್ಥಿ ಮೌನವಾಗಿದ್ದುದರಿಂದ ತಾವೆ ಹೇಳತೊಡಗಿದರು: “ಯಾವಾಗಲೂ ಪರಿಪೂರ್ಣವೂ ಅಚಲವೂ ಆಗಿರುವ ಸಮುದ್ರಕ್ಕೆ ನಾನಾ ನದನದಿಗಳಿಂದ ಹರಿದುಬರುವ ಜಲರಾಶಿ ಪ್ರವೇಶಿಸಿದರೂ ಅದರಿಂದ ಆ ಸಮುದ್ರ ಒಂದಿನಿತೂ ಉದ್ವೇಲಿತವಾಗದಿರುವಂತೆ, ಸದಾ ಪರಿಪೂರ್ಣವೂ ಬ್ರಹ್ಮಾನಂದ ಸ್ಥಿತವೂ ಆಗಿರುವ ಜ್ಞಾನಿಯ ಹೃದಯದಲ್ಲಿ ಪ್ರಾರಬ್ಧವಶದಿಂದ ಕಾಮನೆಗಳನೇಕ ಪ್ರವೇಶ ಮಾಡುವುದೇನೋ ಸತ್ಯ; ಆದರೂ ಅದರಿಂದ ಆತನ ಮನಸ್ಸು ವಿಚಲಿತವಾಗುವುದಿಲ್ಲ. ಆತನು ಕೈವಲ್ಯರೂಪನಾದ ಶಾಂತಿಲಾಭದಿಂದ ಆತ್ಮಾರಾಮನಾಗಿ ಇದ್ದುಬಿಡುತ್ತಾನೆ. ಆದರೆ ಭೋಗ ಕಾಮನಾಶೀಲನಾದ ವ್ಯಕ್ತಿಗೆ ಶಾಂತಿ ಪ್ರಾಪ್ತವಾಗುವುದಿಲ್ಲ. ಯಾವ ವ್ಯಕ್ತಿ ಸಮಸ್ತ ಕಾಮನೆಗಳನ್ನೂ ಪರಿತ್ಯಾಗಮಾಡಿ, ನಿಸ್ಪೃಹನಾಗಿ, ನಿರಹಂಕಾರನಾಗಿ, ಮಮತ್ವ ಬುದ್ಧಿ ಇಲ್ಲದವನಾಗುತ್ತಾನೆಯೋ ಅವನಿಗೇ ನಿಜವಾದ ಶಾಂತಿ ಲಾಭಾವಾಗುತ್ತದೆ.”

“ಕಾಮನೆ ವಾಸನೆಗಳಿದ್ದರೆ ಚಿರಶಾಂತಿಲಾಭವಾಗುವುದು ಅಸಂಭವ. ಆ ಕಾಮನೆ ವಾಸನೆಗಳೂ ಭಗವತ್‌ ಕೃಪೆಯಿಲ್ಲದ ಸಮೂಲ ವಿನಷ್ಟವಾಗುವುದೂ ಸಂಭವಪರವಲ್ಲ. ನನ್ನ ವಿಷಯದಲ್ಲಿ ಶ್ರೀ ಗುರುಮಹರಾಜ್ ಕೃಪೆದೋರಿ ಎಲ್ಲ ಕಾಮನೆ ವಾಸನೆಗಳನ್ನೂ ಆಮೂಲಾಗ್ರವಾಗಿ ಒಂದೇ ಏಟಿಗೆ ಅಳಿಸಿಹಾಕಿಬಿಟ್ಟಿದ್ದಾರೆ. ನನ್ನಲ್ಲಿ ಯಾವ ವಾಸನೆಯೂ ಇಲ್ಲ. ಈ ಶರೀರವೂ ಕೇವಲ ಅವರ ಇಚ್ಛೆಯಿಂದ, ಅವರ ಕೆಲಸಕ್ಕೆ ಮಾತ್ರ ಉಳಿದಿದೆ. ನಾನೋ ಶುದ್ಧ ಬುದ್ಧ ಮುಕ್ತಸ್ವಭಾವನಾದ ಆತ್ಮನಲ್ಲದೆ ಬೇರೆ ಅಲ್ಲ. ಈ ಶರೀರವಾದರೂ ಅದು ಇದೆ ಎಂಬುದೆ ಅನೇಕ ವೇಳೆ ನನ್ನ ಮನಸ್ಸಿಗೆ ಬರುವುದಿಲ್ಲ; ಆದರೂ ಪ್ರಭುವಿನ ಅನೇಕ ಕಾರ್ಯಗಳು ಈ ಶರೀರದ ಮೂಲಕ ನಡೆಯುತ್ತವೆ ಎಂಬುದೂ ನಿಜ; ಅದಕ್ಕಾಗಿಯೆ ಅವನು ಇದುವರೆಗೂ ಅದನ್ನು ಕಾಪಾಡಿಟ್ಟಿದ್ದಾನೆ. ಆದರೆ ನನಗೆ ಯಾವ ವಾಸನೆಯೂ ಇಲ್ಲ, ಗೊತ್ತಾಯಿತೆ? ನಾನು ಬ್ರಹ್ಮಾನಂದಸ್ವರೂಪ.”

ಹೀಗೆ ಹೇಳಿ ಧೀರ ಸ್ಥಿರರಾಗಿ ಕುಳಿತಿದ್ದರು. ಆ ಸಮಯದಲ್ಲಿ ಅವರ ಮುಖ ಮುದ್ರೆಯು ಬದಲಾಯಿಸಿಹೋದಂತೆ ತೋರುತ್ತಿತ್ತು. ಯಾರೊ ಒಬ್ಬ ಬೇರೆಯ ನೂತನ ವ್ಯಕ್ತಿ ಎಂಬಂತೆ. ಅವರ ಕಡೆ ನೋಡಲೂ ಭಯವಾಗುತ್ತಿತ್ತು. ಬಹಳ ಹೊತ್ತಾದ ಮೇಲೆ ಅವರು ತಮ್ಮಷ್ಟಕ್ಕೆ ತಾವೆ ಮಾತಾಡಿಕೊಳ್ಳತೊಡಗಿದರು. “ತಾಯಿ ಕೃಪೆಮಾಡಿ ನನಗೆ ಎಲ್ಲವನ್ನೂ ಕೊಟ್ಟುಬಿಟ್ಟಿದ್ದಾಳೆ. ತನ್ನ ಭಂಡಾರವನ್ನೆಲ್ಲ ಖಾಲಿ ಮಾಡಿ ನನ್ನನ್ನು ಪರಿಪೂರ್ಣ ಮಾಡಿಬಿಟ್ಟಿದ್ದಾಳೆ. ನನಗೆ ಇನ್ನು ಬೇಕಾಗಿರುವುದು ಏನೂ ಇಲ್ಲ. ಅವಳ ಕೃಪೆಯಿಂದ ಸರ್ವವೂ ಲಭಿಸಿಬಿಟ್ಟಿದೆ – ‘ಯಂ ಲಬ್ಧ್ವಾ ಚಾಪರಂ ಲಾಭಂ ಮನ್ಯತೇ ನಾಧಿಕಂ ತತಃ ‘. ಆದರೂ ಏಕೆ ಅವಳು ಈ ಶರೀರವನ್ನು ಇನ್ನೂ ಇಟ್ಟಿದ್ದಾಳೊ ಅವಳಿಗೇ ಗೊತ್ತು.”

ಗಭೀರ ರಾತ್ರಿ. ಮಹಾಪುರುಷಜಿ ತಮ್ಮ ಮಂಚದ ಮೇಲೆ ಕುಳಿತಿದ್ದಾರೆ- ಧ್ಯಾನಸ್ಥರಾಗಿ. ಬಹಳ ಹೊತ್ತು ಧ್ಯಾನಮಗ್ನರಾಗಿದ್ದು, ತರುವಾಯ ಅನೈಚ್ಛಿಕವಾಗಿಯೊ ಎಂಬಂತೆ ಒಂದೊಂದು ಸಾರಿ ಕಣ್ಣು ತೆರೆಯುವುದೂ ಮತ್ತೆ ಕಣ್ಣುಮುಚ್ಚಿ ಕುಳ್ಳಿರುವುದೂ ಮಾಡತೊಡಗಿದರು. ಅದೇ ಸಮಯದಲ್ಲಿ ಒಂದು ಬೆಕ್ಕು ಕೊಠಡಿಯ ಒಳಕ್ಕೆ ಬಂದು ಮಿಯಾಂವ್ ಮಿಯಾಂವ್ ಎಂದು ಕರೆಯತೊಡಗಿತು. ಅವರು ಆ ದಿಕ್ಕಿಗೆ ತಿರುಗಿ ಕೈ ಜೋಡಿಸಿ ಬೆಕ್ಕಿಗೆ ಪ್ರಣಾಮ ಮಾಡಿದರು. ಬಳಿ ಇದ್ದ ಸೇವಾರ್ಥಿಗೆ ಮೊದಲು ಅವರು ಬೆಕ್ಕಿಗೆ ನಮಸ್ಕಾರ ಮಾಡುತ್ತಿದ್ದಾರೆಂದು ತಿಳಿಯಲಿಲ್ಲ. ಆದ್ದರಿಂದ ಆತನು ಒಂದಿನಿತು ಸಂದಿಗ್ಧಚಿತ್ತನಾಗಿ ಅವರ ಕಡೆಗೆ ಪ್ರಶ್ನದೃಷ್ಟಿ ಬೀರಲು ಅವರು ಹೇಳಿದರು: “ನೋಡು ಠಾಕೂರರು ನನ್ನನ್ನು ಈಗ ಎಂತಹ ಸ್ಥಿತಿಯಲ್ಲಿ ಇಟ್ಟಿದ್ದಾರೆ ಎಂದರೆ ಎಲ್ಲವು ಚಿನ್ಮಯವಾಗಿ ಕಾಣುತ್ತದೆ; ಮನೆ-ಬಾಗಿಲು, ಮಂಚ-ಹಾಸಿಗೆ, ಸಕಲ ಪ್ರಾಣಿಗಳ ಆಂತರ್ಯ, ಎಲ್ಲವೂ ಒಂದೇ ಚೈತನ್ಯದ ಖೇಲನ-ಕೇವಲ ನಾಮಭೇದ ಮಾತ್ರ; ಆದರೆ ಮೂಲದಲ್ಲಿ ಮಾತ್ರ ಎಲ್ಲವೂ ಒಂದೇ. ಇದನ್ನೆಲ್ಲ ಅತ್ಯಂತ ಸ್ಪಷ್ಟವಾಗಿ ಕಾಣುತ್ತಿದ್ದೇನೆ. ನಾನೆಷ್ಟೆ ಪ್ರಯತ್ನಪಟ್ಟರೂ ಆ ಭಾವವನ್ನು ತಡೆಗಟ್ಟಲಾರೆ. ಸರ್ವವೂ ಚೈತನ್ಯಮಯ. ಈ ಬೆಕ್ಕಿನ ಒಳಗೂ ಆ ಚೈತನ್ಯದ ಪ್ರಕಾಶವೆ ಪ್ರಜ್ವಲಿಸುತ್ತಿದೆ. ಶ್ರೀ ಗುರು ನನ್ನನ್ನೀಗ ಆ ಭಾವದಲ್ಲಿ ಸಂಪೂರ್ಣವಾಗಿ ತುಂಬಿಬಿಟ್ಟಿದ್ದಾರೆ. ಜನ ಬರುತ್ತಾರೆ, ಹೋಗುತ್ತಾರೆ; ಮಾತುಕತೆ ಆಡಬೇಕು, ಮಾಡುತ್ತೇನೆ. ಅವೆಲ್ಲ ಅಭ್ಯಾಸಬಲದಿಂದ ನಡೆಯುತ್ತಾ ಇವೆ. ಆದರೆ ಈ ಎಲ್ಲದರಿಂದ ಮನಸ್ಸು ಒಂದಿನಿತು ಮೇಲಕ್ಕೆತ್ತಿದೆ ಎಂದರೆ ಗೋಚರವಾಗುತ್ತದೆ, ಎಲ್ಲೆಲ್ಲಿಯೂ ಆ ಚೈತನ್ಯದ ಖೇಲನ. ನಾಮ ರೂಪ ಇವೆಲ್ಲ ತುಂಬ ಕೆಳಗಣ ಭೂಮಿಯ ವ್ಯಾಪಾರ. ನಾಮರೂಪಗಳಿಂದ ಮನಸ್ಸು ಏರಿತು ಎಂದರೆ, ಅಯ್ತು! ಆಗ ಎಲ್ಲ ಚೈತನ್ಯಮಯ, ಆನಂದಮಯ. ಅವೆಲ್ಲ ಬಾಯಿಂದ ಆಡತಕ್ಕಂತಹ ವಿಷಯಗಳಲ್ಲ. ಯಾರಿಗೆ ಆ ಅನುಭೂತಿ ಉಂಟಾಗುತ್ತದೆಯೊ ಅವರು ಅರಿಯುತ್ತಾರೆ.” ಇನ್ನೂ ಅನೇಕ ವಿಚಾರ ಮಾತನಾಡುವ ಮನಸ್ಸಿದ್ದಂತೆ ತೋರಿತು; ಆದರೆ ಬಾಯೆತ್ತಿದವರು ಹಠಾತ್ತನೆ ಸುಮ್ಮನಾಗಿಬಿಟ್ಟರು. ಸೇವಕ ಸಾಧು ಮುಗ್ಧ ಪ್ರಾಣನಾಗಿ ತಾನು ಕೇಳಿದುದಕ್ಕೆ ವಿಸ್ಮಯಸ್ತಂಭಿತನಾಗಿ ನಿಂತುಬಿಟ್ಟನು.

ಬರಿಯ ಗುರುಸೇವೆ ಮಾಡುವುದರಿಂದಲೇ ಎಲ್ಲವೂ ಆಗಿಬಿಡುವುದಿಲ್ಲ. ಜೊತೆಜೊತೆಗೆ ಸಾಧನೆ ಭಜನೆಯೂ ವಿಶೇಷವಾಗಿ ಆವಶ್ಯಕ, ಹೀಗೆಂದು ಮಹಾಪುರುಷ ಮಹಾರಾಜ್ ತಮ್ಮ ಸೇವೆಯಲ್ಲಿ ತೊಡಗಿದ್ದ ಸಾಧುಗಳಿಗೆ ಒತ್ತಿ ಹೇಳುತ್ತಿದ್ದರು. ಸಾಧನೆ ಭಜನೆ ಮಾಡದೆ, ಬರಿದೆ ಮಹಾಪುರುಷರಾದವರ ಸಂಗದಲ್ಲಿದ್ದು ಅವರ ಸೇವೆ ಮಾಡುವುದರಿಂದ, ಅನೇಕ ವೇಳೆ ಮನಸ್ಸಿನಲ್ಲಿ ಅಹಂಕಾರ ಅಭಿಮಾನಗಳು ಹುಟ್ಟಿಕೊಳ್ಳುವ ಸಂಭವ ವಿಶೇಷವಾಗಿರುತ್ತದೆ, – ಎಂಬ ವಿಷಯದಲ್ಲಿಯೂ ತಮ್ಮ ಸೇವಾರ್ಥಿಗಳಿಗೆ ಚೆನ್ನಾಗಿ ಸತರ್ಕವಾಗಿ ತಿಳಿಯಹೇಳುತ್ತಿದ್ದನು.

ಒಂದು ದಿನ ಗಭೀರ ರಾತ್ರಿಯಲ್ಲಿ ಒಬ್ಬ ಸೇವಕ ಸಾಧುವಿಗೆ ಹೇಳಿದರು : “ನೋಡು, ನನ್ನ ಸೇವೆ ಮಾಡುತ್ತಿದ್ದೀಯೆ, ಅದೇನೊ ಬಹಳ ಒಳ್ಳೆಯದೆ. ಠಾಕೂರರು ತಮ್ಮ ಅಪಾಯ ಕೃಪೆಯಿಂದಲೆ ನಿನಗೆ ತಮ್ಮ ಸಂತಾನನೊಬ್ಬನ ಸೇವೆ ಮಾಡುವ ಅವಕಾಶವನ್ನು ದಯಪಾಲಸಿದ್ದಾರೆ. ಆಧರೆ, ಅಯ್ಯಾ, ಜೊತೆಗೆ ಸಾಧನೆ ಭಜನೆಯೂ ಬೇಕು. ನಿಯಮಿತವಾದ ಜಪ ಧ್ಯಾನ ಸಾಧನೆ ಭಜನೆ ಮಾಡಿದರೆ ಆವಾಗಲೆ ಠಾಕೂರರು ಯಾರು? ಏನಾಗಿದ್ದರು? ಎಂಬುದರ ಯಥಾರ್ಥಜ್ಞಾನ ಉಂಟಾಗುತ್ತದೆ. ನಮ್ಮನ್ನು ನೀನು ಸಾಮಾನ್ಯ ಮನುಷ್ಯ ಮಾತ್ರರೆಂಬಂತೆ ಭಾವಿಸಿದರೆ ಹಾಳಾಗಿಹೋಗುತ್ತಿಯೆ, – ಚೆನ್ನಾಗಿ ಮನಸ್ಸಿನಲ್ಲಿ ಇಟ್ಟುಕೊ. ಈ ಭಗವದ್ ಭಾವವನ್ನು ಚಿತ್ತದಲ್ಲಿ ಬರೆಯಬೇಕಾದರೆ ಸಾಧನೆ ಬೇಕ. ಭಗವಂತನ ನಾಮ ಜಪ, ಆತನ ಧ್ಯಾನ ಮಾಡುತ್ತಾ ಮಾಡುತ್ತಾ ಮನಸ್ಸು ಸಂಸ್ಕೃತವಾಗಿ ಆ ಶುದ್ಧ ಮನದಲ್ಲಿ ಭಗವದ್‌ಭಾವ ಉದ್ದೀಪಿತವಾಗುತ್ತದೆ. ನಾವು ಠಾಕೂರರನ್ನು ನೋಡಿದ್ದೆವು. ಅವರ ಸಂಗದಲ್ಲಿದ್ದೆವು. ಅವರ ಕೃಪೆ ಪಡೆದಿದ್ದೆವು; ಆದರೂ ಅವರು ನಮ್ಮ ಕೈಲಿ ಎಂತಹ ಉಗ್ರ ಸಾಧನೆಗಳನ್ನೆಲ್ಲ ಮಾಡಿಸಿದರು ! ಅವರು ಭಗವಂತ ಎಂಬುದಾಗಲಿ, ಜಗತ್ತಿಗೆ ಮುಕ್ತಿ ನೀಡಲು ಬಂದಿರುವರು ಎಂಬುದಾಗಲಿ ನಮಗೂ ಪ್ರಥಮದಲ್ಲಿಯೆ ಸ್ಪಷ್ಟವಾಗಿ ಗ್ರಹಿಸಲು ಸಾಧ್ಯವಾಗಿತ್ತೇನು? ಕ್ರಮೇಣ ಸಾಧನೆ ಭಜನೆಯ ಮೂಲಕ ಆ ಜ್ಞಾನ ನಮ್ಮಲ್ಲಿ ಪರಿಪಕ್ವವಾಯಿತು ನಿಜ, ಅವರ ಕೃಪೆಯಿಲ್ಲದೆ ಏನೂ ಸಾಧ್ಯವಾಗುವುದಿಲ್ಲ; ಆಗಿದ್ದೆಲ್ಲ ಅವರ ಕೃಪೆಯಿಂದಲೆ. ಆದರೂ ಕಾತರತೆಯಿಂದ ಕರೆದರೆ, ವ್ಯಾಕುಲತೆಯಿಂದ ಬೇಡಿದರೆ, ಅವರು ಕೃಪೆ ಮಾಡಿಯೆ ಮಾಡುತ್ತಾರೆ ಎಂಬುದೂ ಅಷ್ಟೇ ನಿಜ. ಅವರೇ ಭಗವಾನ್, ಸಾಕ್ಷಾತ್‌ ದೇವಾದಿದೇವ ಜಗನ್ನಾಥ, ಎಂಬುದನ್ನು ಅರಿಯಲು ನಾನೂ ಕ್ರಮೇಣ ಸಮರ್ಥನಾದೆ. ತಮ್ಮ ನೈಜ ನಿಜಸ್ವರೂಪ ಏನು ಎಂಬುದನ್ನು ನನಗೆ ಅವರು ಕೃಪೆಮಾಡಿ ತೋರಿಸಿಕೊಟ್ಟಿದ್ದಾರೆ.”

“ಗಭೀರ ರಾತ್ರಿಯಲ್ಲಿ ಜಪ ಕೈಕೊಳ್ಳು. ಮಹಾನಿಶೆಯಲ್ಲಿ ಜಪ ಮಾಡಿದರೆ ಅತ್ಯಂತ ಶೀಘ್ರ ಫಲದೊರೆಯುತ್ತದೆ; ಸಮಸ್ತ ಮನಃ ಪ್ರಾಣವೂ ಆನಂದಭರಿತವಾಗುತ್ತದೆ. ಎಷ್ಟು ಆನಂದವಾಗುತ್ತದೆ ಎಂದರೆ ಜಪ ನಿಲ್ಲಿಸಿ ಮೇಲೇಳಲು ಮನಸ್ಸೆ ಆಗುವುದಿಲ್ಲ. ಎಂತಿದ್ದರೂ ನನ್ನ ಸೇವೆಗಾಗಿ ನೀನು ಎಚ್ಚರವಾಗಿರಬೇಕಾಗುತ್ತದೆ. ಆ ಸಮಯದಲ್ಲಿ ಸಾಧ್ಯವಾದಾಗಲೆಲ್ಲ ಜಪಮಾಡು. ಇಲ್ಲೇನು ಸದಾಕಾಲವೂ ಕೆಲಸ ಇರುತ್ತದೆಯೆ? ಯಾವಾಗಲಾದರೂ ಆಗೊಮ್ಮೆ ಈಗೊಮ್ಮೆ ಕೆಲಸ ಬೀಳುತ್ತದೆ. ಆದ್ದರಿಂದಲೆ ಒಳ್ಳೆ ಅವಕಾಶ ಇದೆ. ಚೆನ್ನಾಗಿ ಜಪಮಾಡು; ತಿಳಿಯಿತೆ? ಅಯ್ಯಾ, ವೃಥಾ ಕಾಲಹರಣವಾಗಲು ಬಿಡಬೇಡ. ಆತನ ನಾಮದಲ್ಲಿ ಒಮ್ಮಿಂದೊಮ್ಮೆಗೆ ಮುಳುಗಿಬಿಡಬೇಕು; ಮೇಲೆ ಮೇಲೆ ತೇಲಿದರೆ ಏನೂ ಆಗುವುದಿಲ್ಲ. ಅಲ್ಪಸ್ವಲ್ಪವಾದರೂ ಮಾಡುವುದನ್ನೆಲ್ಲ ತನ್ಮಯತೆಯಿಂದ ಮಾಡು; ಆಗ ಮಾತ್ರವೆ ನಿನಗೆ ಆನಂದ ದೊರೆಯುವುದು. ಅದಕ್ಕಾಗಿಯೆ ಠಾಕೂರರು ಹೀಗೆ ಹಾಡುತ್ತಿದ್ದುದು: ‘ಓ ಮನವೆ, ಮುಳುಗು ಕಾಳಿಯನು ಕರೆದೊರಲಿ, ಹೃದಯ ರತ್ನಾಕರದ ಅಗಾಧ ಜಲಧಿಯಲಿ.’ ಯಾರೆ ಆಗಲಿ, ಯಾವ ಕೆಲಸದಲ್ಲಿಯೆ ಆಗಲಿ, ಸಂಪೂರ್ಣವಾಗಿ ಮಗ್ನವಾಗದಿದ್ದರೆ ಆನಂದವರಿವುದಿಲ್ಲ. ಭಗವಂತ ನೋಡುತ್ತಾನೆ, ನಿನ್ನ ಪ್ರಾಣದ ಅಭೀಪ್ಸೆಯನ್ನು, ಹೃದಯದ ಆಂತರಿಕತೆಯನ್ನು. ಅವನು ನೋಡುವುದು ಹೊತ್ತಿನ ಕಡೆಗಲ್ಲ, ಚಿತ್ತದ ಕಡೆಗೆ. ಅಲ್ಲದೆ ನಿತ್ಯವೂ ನಿಯಮಿತ ಭಾವದಲ್ಲಿ ಧ್ಯಾನ ಜಪಮಾಡುತ್ತಿದ್ದರೆ ಮನಸ್ಸು ಶುದ್ಧವಾಗುತ್ತದೆ; ಜೊತೆಗೆ ಆ ಭಾವವೂ ಹೃದಯದಲ್ಲಿ ಪರಿಪಕ್ವವಾಗಿ ಸ್ಥಾಯಿಯಾಗುತ್ತದೆ. ನಿತ್ಯ ನಿರಂತರ ಅಭ್ಯಾಸ ಮಾಡಬೇಕು. ಗೀತೆಯಲ್ಲಿ ಭಗವಂತ ಹೇಳುತ್ತಾನೆ : ‘ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ’ ‘ಓ ಅರ್ಜುನ ಅಭ್ಯಾಸದಿಂದಲೂ ವೈರಾಗ್ಯದಿಂದಲೂ ಮನಸ್ಸನ್ನು ಹಿಡಿತಕ್ಕೆ ತಂದುಕೊಳ್ಳಲು ಸಾಧ್ಯವಾಗುತ್ತದೆ.’ ವ್ಯಾಕುಲನಾಗಿ ಅಳುತ್ತಾ ಅಳುತ್ತಾ ನಿತ್ಯವು ಕರೆಯುತ್ತಾ ಹೋಗು; ನೋಡುತ್‌ಈಯೆ, ಆ ಬ್ರಹ್ಮ ಶಕ್ತಿ, ಕುಲಕುಂಡಲಿನೀ, ಎಚ್ಚರಗೊಂಡೇಳುತ್ತದೆ. ಬ್ರಹ್ಮಾನಂದದ ಹೆದ್ದಾರಿಗೆ ಬಾಗಿಲು ತೆರೆದುಕೊಡುತ್ತದೆ. ಈ ಬ್ರಹ್ಮಮಯೀ ತಾಯಿ ಪ್ರಸನ್ನೆಯಾದರೇನೆ ಎಲ್ಲ ಆಗುವುದು. ಚಂಡಿಯಲ್ಲಿದೆ: ‘ಸೈಷಾ ಪ್ರಸನ್ನಾ ವರದಾ ನೃಣಾಂ ಭವತಿ ಮುಕ್ತಯೇ.’ ಆಕೆಯ ಪ್ರಸನ್ನೆಯಾಗಿ ಮಾನವ ಗಣದ ಮುಕ್ತಿಗಾಗಿ ವರಪ್ರದಾನ ಮಾಡುತ್ತಾಳೆ. ಅವಳ ಎರಡೂ ಕೈಗಳನ್ನು ಚಾಚಿದ್ದಾಳೆ ಕೊಡುವುದಕ್ಕಾಗಿ; ಆದರೆ ತೆಗೆದುಕೊಳ್ಳುವವರು ಯಾರು? ಅವಳ ಬಳಿ ಒಂದಿನಿತೆ ಕಾತರ ಹೃದಯದರಿಂದ ಬೇಡಿದರೆ ಸಾಕು, ಅವಳು ಎಲ್ಲವನ್ನೂ ಕೊಟ್ಟುಬಿಡುತ್ತಾಳೆ – ಭಕ್ತಿ ಮುಕ್ತಿ ಎಲ್ಲ.”

“ಮನೆಗಿನ ಎಲ್ಲ ಬಿಟ್ಟು ಬಂದಿದ್ದೀಯೆ, ಭಗವತ್ ಸಾಕ್ಷಾತ್ಕಾರ ಪಡೆಯುತ್ತೇನೆ ಎಂದು. ಅದೇ ಜೀವನದ ಉದ್ದೇಶ. ಯಾವ ಉದ್ದೇಶಕ್ಕಾಗಿ ಬಂದಿದ್ದೀಯೊ ಅದನ್ನೆ ಮರೆತುಬಿಡಬಾರದು, ಪಟ್ಟು ಹಿಡಿದು ನಿರಂತರ ಜಪ ಧ್ಯಾನ ಸ್ಮರಣ ಮನನ ಮಾಡಿ ಶ್ರೀ ಗುರು ಮಹಾರಾಜರನ್ನು ಹೃದಯದಲ್ಲಿ ಪ್ರತಿಷ್ಠಿತ ಮಾಡಿಕೊಂಡುಬಿಡು; ಆಮೇಲೆ ಬರಿಯ ಆನಂದ, – ಮಜವೋ ಮಜವಾಗಿ ಇರುತ್ತೀಯೆ! ಎಲ್ ದೇಹಗಳಿಗೂ ನಾಶವಿದ್ದೇ ಇದೆ. ನನ್ನ ದೇಹವಾದರೂ, ಅಯ್ಯಾ, ಇನ್ನೆಷ್ಟು ದಿನ? ಇದಂತೂ ವೃದ್ಧ ಶರೀರ! ಯಾವತ್ತಾದರೂ ಬಿದ್ದುಹೋಗಬಹುದು; ಆಗ ನಿನಗೆಲ್ಲವೂ ಅಂಧಕಾರ ಕವಿದಂತಾಗುತ್ತದೆ. ಆದರೆ, ಜಪ ಧ್ಯಾನ ಮಾಡಿ ಇಷ್ಟದರ್ಶನ ಪಡೆದುಕೊಂಡುಬಿಟ್ಟೆ, ಎಂದರೆ ಆಗ ಗೊತ್ತಾಗುತ್ತದೆ ಗುರು ಮತ್ತು ಇಷ್ಟ ಇಬ್ಬರೂ ಒಂದೇ ಎಂದು: ಆಗ ಗುರು ನಿನ್ನ ಹೃದಯ ಮಂದರದಲ್ಲಿಯೆ ಚಿರಪ್ರತಿಷ್ಠಿತವಾಗಿರುತ್ತಾನೆ. ಸ್ಥೂಲದೇಹ ನಾಶದಿಂದ ಗುರುವಿನ ನಾಶವಾಗುವುದಿಲ್ಲ, ನಿನ್ನ ಮೇಲಣ ಅಕ್ಕರೆಯಿಂದ ಇದನ್ನೆಲ್ಲ ನಿನಗೆ ಹೇಳುತ್ತಿದ್ದೇನೆ. ಯಾವುದು ನಿಜವಾದ ಕಲ್ಯಾಣವೊ ಅದು ನಿನಗೆ ದೊರೆಯಬೇಕೆಂಬುದೆ ನನ್ನ ಏಕಮಾತ್ರ ಪ್ರಾರ್ಥನೆ.”

* * *

ನೀನು ನನ್ನ ಹತ್ತಿರವೆ ಇರುತ್ತಿದ್ದೀಯೆ. ನನ್ನ ಶರೀರ ಅಸ್ವಸ್ಥವಾಗಿರುವುದರಿಂದ ಹಗಲೂ ಇರುಳೂ ಸೇವೆ ಮಾಡುತ್ತಿದ್ದೀಯೆ. ಅದೇನೊ ಒಳ್ಳೆಯದೆ. ಆದರೆ ನೀನೊಬ್ಬನೆ ಸೇವೆ ಮಾಡುತ್ತಿರುವೆ ಎಂದೂ, ಆದ್ದರಿಂದ  ನಿನಗೊಬ್ಬನಿಗೇ ಏನೋ ದೊಡ್ಡದು ಲಭಿಸುತ್ತಿದೆ ಎಂದೂ ನೀನೆಲ್ಲಿಯಾದರೂ ಭಾವಿಸಿದೆ ಎಂದರೆ ಅದು ನಿನ್ನ ತಲೆಗೇಡು, ಬರಿಯ ಭ್ರಮೆ, ತಿಳಿಯಿತೇ? ಏನೋ ಅದು ಇದು ಒಂದಿಷ್ಟು ನನಗೆ ತಂದುಕೊಟ್ಟ ಮಾತ್ರಕ್ಕೆ, ಒಂದಿಷ್ಟು ದೇಹದ ಸೇವೆ ಮಾಡಿದ ಮಾತ್ರಕ್ಕೆ, ನನಗೇನೊ ಮಹಾಸೇವೆ ಸಲ್ಲಿಸಿಬಿಟ್ಟೆ ಎಂದು ತಿಳಿದುಕೊಂಡಿದ್ದೀಯಾ? ಹಾಗೇನಿಲ್ಲ. ನಮ್ಮಿಂದ ಬಹುದೂರ ಇದ್ದರೂ ಮನಃಪ್ರಾಣ ಪೂರ್ವಕವಾಗಿ ಯಾರು ಪ್ರಭುವಿನ ಕೆಲಸ ಮಾಡಿದ್ದಾರೆಯೊ ಅವರೂ ನಮ್ಮ ಅಂತರಾತ್ಮ ಆಗಿದ್ದಾರೆ. ಯಾರು ಸಹಸ್ರ ಸಹಸ್ರ ಮೈಲಿಗಳಾಚೆ ದೂರದಲ್ಲಿದ್ದರೂ ಕಾಯ ಮನೋವಾಕ್ಯಗಳಿಂದ ಪ್ರಭುವಿನ ಕೆಲಸ ಮಾಡುತ್ತಾ, ಸಾಧನೆ ಭಜನೆಯ ಮೂಲಕ ಪ್ರಭುವನ್ನು ತಮ್ಮ ಹೃದಯದಲ್ಲಿ ಪ್ರತಿಷ್ಠಿತನನ್ನಾಗಿ ಮಾಡಿಕೊಳ್ಳುತ್ತಾರೊ, ಅವರೂ ನಮಗೆ ಅತ್ಯಂತ ಪ್ರಿಯರು, ಅವರೂ ನಮ್ಮ ಸೇವೆಯನ್ನೆ ಮಾಡುತ್ತಿದ್ದಾರೆ. ತಮ್ಮ ಸೇವೆಯಿಂದ ಆತನನ್ನು ತೃಪ್ತಿ ಗೊಳಿಸಿದರೂ ನಾವು ತೃಪ್ತರೆ.  ‘ತಸ್ಮಿಂಸ್ತುಷ್ಟೇ ಜಗತ್ತುಷ್ಟಮ್’ ‘ಆತ ತೃಪ್ತನಾದರೆ ಜಗತ್ತೆಲ್ಲ ತೃಪ್ತ’ ಪ್ರಬುವಿನ ಕಾರ್ಯದಲ್ಲಿ ತೊಡಗಿರುವ ಅವರು ಗುರುಸೇವಾ ಫಲಕ್ಕಿಂತಲೂ ಹೆಚ್ಚಿನ ಫಲವನ್ನು ಪಡೆಯುತ್ತಾರೆ.”

ಆದಿಕ್ಷಾಂತಾಮಕ್ಷರ ಮೂರ್ತ್ಯಾ ವಿಲಸಂತೀಂ
ಭೂತೇ ಭೂತೇ ಭೂತಕದಂಬ ಪ್ರಸವಿತ್ರೀಂ
ಶಬ್ದ ಬ್ರಹ್ಮಾನಂದಮಯೀಂ ತಾ ತಡಿದಾಭಾಂ
ಗೌರೀಮಂಬಾಮಂಬುರುಹಾಕ್ಷೀಮಹಮೀಡೇ |

ನಿತ್ಯಃ ಶುದ್ಧೋ ನಿಷ್ಕಲ ಏಕೋ ಜಗದೀಶಃ
ಸಾಕ್ಷೀ ಯಸ್ಯಾಃ ಸರ್ಗವಿಧೌ ಸಂಹರಣೇ ಚ
ವಿಶ್ವತ್ರಾಣ ಕ್ರೀಡನ ಲೋಲಾಂ ಶಿವಪತ್ನೀಂ
ಗೌರೀಮಂಬಾಮಂಬರುಹಾಕ್ಷೀಮಹಮೀಡೇ | – ಶಂಕರಾಚಾರ್ಯ

* * *