ಬೇಲೂರು ಮಠ 
೧೯೩೨

ಈಗೀಗ ಮಹಾಪುರುಷಜಿ ಮಹಾರಾಜ್ ಅಹೋರಾತ್ರಿಯೂ ಒಂದು ಅನಿರ್ವಚನೀಯವಾದ ದಿವ್ಯಭಾವದಲ್ಲಿ ಅವಸ್ಥಾನ ಮಾಡಿರುತ್ತಾರೆ. ಒಮ್ಮೊಮ್ಮೆ ಆ ಭಾವ ಎಷ್ಟು ಅತಿಶಯವಾಗಿರುತ್ತದೆ ಎಂದರೆ ಇಡೀ ರಾತ್ರಿಯೂ ನಿದ್ದೆಯಿಲ್ಲದೆ ಆ ಗಭೀರಭಾವದಲ್ಲಿ ನಿಮಗ್ನರಾಗಿರುತ್ತಾರೆ. ಶರೀರದ ಕಡೆ ಲಕ್ಷ್ಯವಿರುವುದಿಲ್ಲ. ಆ ವಿಚಾರವಾಗಿ ಯಾರಾದರೂ ಪ್ರಶ್ನೆ ಕೇಳಿದರೆ, ಹಸುಳೆಯೋಪಾದಿ ಮುಗುಳು ನಗೆ ಬೀರಿ, ಹೇಳುತ್ತಾರೆ “ಕಾಯೆ ಕೃಷ್ಣ, ಕೊಲುವರಾರು?’ ಎಲ್ಲಿಯವರೆಗೆ ಶ್ರಿ ಗುರುಮಹಾರಾಜ್ ತನ್ನ ಕೆಲಸ ಮಾಡಿಕೊಳ್ಳುವುದಕ್ಕಾಗಿ ಇದನ್ನು ಇಲ್ಲಿ ಇರಿಸುತ್ತಾರೆಯೊ ಅಲ್ಲಿಯವರೆಗೆ ಈ ಶರೀರ ಏನು ಮಾಡಿದರೂ ಇದ್ದೆ ಇರುತ್ತದೆ.” ಬಹಳ ಕಾಲ ನಿದ್ದೆ ಇಲ್ಲದೆ ಇರುವುದರಿಂದ ದೇಹಕ್ಕೆ ತುಂಬ ತೊಂದರೆ ಯಾಗುತ್ತದೆ ಎಂದು ಯಾರಾದರೂ ವಾದಿಸಿದರೆ ಅದಕ್ಕೆ ಅವರು ಹೇಳುತ್ತಾರೆ; “ಯೋಗಿಯಾದವನಿಗೆ ಮತ್ತೆ ನಿದ್ದೆಯಿಂದೇನು ಪ್ರಯೋಜನ? ಮನಸ್ಸು ಸಮಾಧಿಸ್ಥಿತಿಯಲ್ಲಿರುವಾಗ ಅದಕ್ಕೆ ನಿದ್ದೆಯ ಅವಶ್ಯಕತೆಯಿರುವುದಿಲ್ಲ. ಅದೂ ಅಲ್ಲದೆ ಧ್ಯಾನದಲ್ಲಿಯೇ ಒಂದು ಅವಸ್ಥೆ ಇದೆ; ಆ ಅವಸ್ಥೆಗೆ ಮನಸ್ಸು ಏರಿದರೆ ಶರೀರದ ಸಮಸ್ತ ಶ್ರಾಂತಿಯೂ ದೂರವಾಗಿ ಹೋಗುತ್ತದೆ. ಸುಷುಪ್ತಿಯ (ಅಂದರೆ ಗಾಢನಿದ್ರೆಯ) ಅನಂತರ ಶರೀರಕ್ಕೆ ಹೇಗೆ ಒಂದು ತೇಜಸ್ಸಿನ ಮತ್ತು ಉಲ್ಲಾಸದ ಬೋಧವಾಗುತ್ತದೆಯೊ ಹಾಗೆಯೆ ಧ್ಯಾನದ ಅಂತಹ ಅವಸ್ಥೆಯಲ್ಲಿ ಅದಕ್ಕಿಂತಲೂ ಅತಿಶಯವಾದ ತೇಜೋಲ್ಲಾಸದ ಬೋಧವಾಗುತ್ತದೆ. ಅದೂ ಅಲ್ಲದೆ ಏನೊ ಒಂದು ಅವ್ಯಕ್ತ ಆನಂದದಲ್ಲಿ ದೇಹ ಮನಸ್ಸುಗಳೆಲ್ಲ ಮುಳುಗಿ ತೇಲಿ ಹೋಗುತ್ತವೆ. ನಾನೂ ದೇಹಕ್ಕೆ ದಣಿವಾಗಿದೆ ಎಂಬ ಬೋಧವಾದೊಡನೆಯೆ ಶರೀರದಿಂದ ಮನಸ್ಸನ್ನು ಮೇಲಕ್ಕೆತ್ತಿ ಆ ಸಮಾಧಿಭಾವದಲ್ಲಿ ಧ್ಯಾನಸ್ಥನಾಗಿಬಿಡುತ್ತೇನೆ – ಸರಿ, ಆನಂದ! ಠಾಕೂರರನ್ನು ನೋಡಿದ್ದೇವೆ = ಅವರು ಬಹುಮಟ್ಟಿಗೆ ನಿದ್ದೆ ಮಾಡುತ್ತಿರಲಿಲ್ಲ. ಹೆಚ್ಚು ಅಂದರೆ ಯಾವಾಗಲಾದರೂ ಒಂದು ಗಂಟೆ ಅರ್ಧ ಗಂಟೆ ಮಲಗುತ್ತಿದ್ದರು. ಅವರೂ ಅನೇಕ ವೇಳೆ ಸಮಾಧಿಸ್ಥರಾಗಿಯೆ ಇದ್ದು ಬಿಡುತ್ತಿದ್ದರು. ಮತ್ತೆ ಬಾಕಿ ಸಮಯವನ್ನೆಲ್ಲ ಭಾವಾವಸ್ಥೆಯಲ್ಲೆ ಕಳೆಯುತ್ತಿದ್ದರು. ಅದರಲ್ಲಿಯೂ ಈ ಭಾವಾವಸ್ಥೆಯ ಆಧಿಕ್ಯ ರಾತ್ರಿಯಲ್ಲಿಯೆ ಹೆಚ್ಚಾಗುತ್ತಿತ್ತು. ರಾತ್ರಿಯನ್ನೆಲ್ಲ ತಾಯಿಯ ನಾಮೋಚ್ಛಾರಣೆ ಮಾಡುತ್ತಾ ಹರಿನಾಮ ಜಪಿಸುತ್ತಾ ಕಳೆಯುತ್ತಿದ್ದರು. ನಾವು ದಕ್ಷಿಣೇಶ್ವರದಲ್ಲಿ ಉಳಿದುಕೊಂಡು ಠಾಕೂರರ ಬಳಿಯೆ ರಾತ್ರಿಯನ್ನು ಕಳೆಯುತ್ತಿದ್ದಾಗಲೆಲ್ಲಾ ಹೆದರಿ ಹೆದರಿಕೊಂಡೆ ಇರುತ್ತಿದ್ದೆವು, ಏನೊ ಒಂದು ಭವ್ಯ ಭಯಾನುಭವದಿಂದ. ಅವರು ಸುಮಾರಾಗಿ ನಿದ್ದೆ ಮಾಡಿ ಎದ್ದರು ಅಂದರೆ ಕೇಳಿಬರುತ್ತಿತ್ತು, ತಾಯಿಯೊಡನೆ ಭಾವಾವೇಶದಲ್ಲಿ ಅವರು ನಡೆಸುತ್ತಿದ್ದ ಸಂಭಾಷಣೆ; ಇಲ್ಲದಿದ್ದರೆ ಬಿರುಬಿರನೆ, ಏನನ್ನೊ ವಟಗುಟ್ಟುತ್ತಾ, ಕೊಠಡಿಯಲ್ಲಿ ಹಿಂದೆ ಮುಂದೆ ಶತಪಥ ತಿರುಗಾಡುತ್ತಿದ್ದರು. ಒಮ್ಮೊಮ್ಮೆ ನಡುರಾತ್ರಿಯೆ ‘ಲೋ ಏನೋ, ನಿದ್ದೆ ಮಾಡೋಕೇನೋ ನೀನಿಲ್ಲಿಗೆ ಬಂದದ್ದು? ಇಡೀ ರಾತ್ರಿಯನ್ನೆಲ್ಲ ಮಲಗಿಯೆ ಕಳೆದುಬಿಟ್ಟರೆ ದೇವರನ್ನು ಕರೆಯೋದು ಯಾವಾಗ್ಲೋ?’ ಎಂದು ಕೂಗಿ ಎಬ್ಬಿಸಿಬಿಡುತ್ತಿದ್ದರು. ಅವರ ಧ್ವನಿ ಕೇಳಿಸಿತೊ ಇಲ್ಲವೊ ನಾವು ದಡಬಡನೆ ಎದ್ದು ಕುಳಿತು ಧ್ಯಾನಮಾಡಲು ತೊಡಗುತ್ತಿದ್ದೆವು.”

ಕೆಲವು ದಿನಗಳು ಮಹಾಪುರುಷಜಿಗೆ ಏನೊ ಒಂದು ವಿಶೇಷ ಅವಸ್ಥೆ ಬಂದುಬಿಟ್ಟಿತು. ಯಾರಾದರಾಗಲಿ ಅವರ ದರ್ಶನಕ್ಕೂ ಪ್ರಣಾಮ ಸಲ್ಲಿಸುವುದಕ್ಕೊ ಬಂದರೆ ಸಕಲರಿಗೂ ಅವರು ಕೈಜೋಡಿಸಿ ಭಕ್ತಿಭರದಿಂದ ಪ್ರಣಾಮ ಮಾಡುತ್ತಿದ್ದರು. ಮಠದ ವಯಸ್ಸಾದ ಹಳೆಯ ಸಂನ್ಯಾಸಿಗಳಾಗಲಿ ಅಥವಾ ಕಿರಿ ವಯಸ್ಸಿನ ನೂತನ ಸಂನ್ಯಾಸಿಗಳಾಗಲಿ ಅಥವಾ ಬ್ರಹ್ಮಚಾರಿಗಳಾಗಲಿ, ಸ್ತ್ರೀಪುರುಷ ಭಕ್ತರಾಗಲಿ, ಬಾಲಕ ಬಾಲಕೆಯರಾಗಲಿ, ದರ್ಶನಾಕಾಂಕ್ಷಿಗಳಾದ ಸಕಲರಿಗೂ ಅವರು ಕಂಡೊಡನೆ ಅವರಿಗಿಂತ ಮೊದಲೆ ಕೈಮುಗಿದು ಹಣೆಗಿಟ್ಟು ಬಾಗಿ ಪ್ರಣಾಮಮಾಡಿದ ಅನಂತರವೆ ಕುಶಲಪ್ರಶ್ನೆ ಕೇಳುತ್ತಿದ್ದರು. ಅವರು ಹಾಗೆ ಮಾಡುವುದನ್ನು ಕಂಡು ಎಲ್ಲರಿಗೂ ಬೆಪ್ಪು ಬೆರಗಾಗುತ್ತಿತ್ತು; ಮನಸ್ಸಿಗೆ ಏನೋ ಸಂಕೋಚಾನುಭವವಾಗುತ್ತಿತ್ತು. ಅಲ್ಲದೆ ಯಾರೆ ಆಗಲಿ ಸಾಧುಗಳೂ ಭಕ್ತರೂ ದರ್ಶನಕ್ಕಾಗಿ ಬಂದರೆ ಅವರಿಗೆಲ್ಲ ಏನನ್ನಾದರೂ ತಿನ್ನುವುದಕ್ಕೆ ಕೊಟ್ಟ ಹೊರತೂ ಅವರಿಗೆ ತೃಪ್ತಿಯಾಗುತ್ತಿರಲಿಲ್ಲ. ಅದರಲ್ಲಿಯೂ ಚಿಕ್ಕ ಹುಡುಗರೂ ಹುಡುಗಿಯರೂ ಬಂದರೆ ಅವರಿಗೆ ನಾರಾಯಣಾರ್ಪಿತ ಫಲಮಿಷ್ಟಾನ್ನಾದಿಗಳನ್ನು ಪರಿತೋಷವಾಗಿತ್ತು ಉಣಿಸದಿದ್ದರೆ ಆಗುತ್ತಲೆ ಇರಲಿಲ್ಲ.

ಒಂದು ದಿನ ರಾತ್ರಿ ಸುಮಾರು ಎರಡು ಗಂಟೆ. ವಿಶ್ವಪ್ರಕೃತಿ ಶಾಂತ ಮತ್ತು ನಿಶ್ಶಬ್ದವಾಗಿತ್ತು. ಮಹಾಪುರುಷಜಿ ಕೊಠಡಿಯಲ್ಲಿ ಒಂದು ಹಸುರು ದೀಪ ಮಂದಕಾಂತಿಯಿಂದ ಉರಿಯುತ್ತಿತ್ತು. ಅವರು ತಮ್ಮ ಹಾಸಗೆಯ ಮೇಲೆ ಚಕ್ಕಲು ಬಕ್ಕಲು ಹಾಕಿ ಕುಳಿತಿದ್ದರು. ಸರದಿಗೆ ಇಬ್ಬಿಬ್ಬರಂತೆ ಸೇವಕರು ರಾತ್ರಿಯೆಲ್ಲಾ ಮಹಾಪುರುಷಜಿಯ ಬಳಿ ಎಚ್ಚರವಾಗಿರುತ್ತಿದ್ದರು; ಯಾವಾಗಾ ಯಾವ ಸೇವೆ ಬೇಕಾದರೆ ಅದನ್ನು ಮಾಡುತ್ತಿದ್ದರು. ರಾತ್ರಿ ಎರಡು ಗಂಟೆ. ಸೇವಕರ ಬದಲಾವಣೆಯ ಸಮಯ. ಹೊಸ ಸರದಿಗಾಗಿ ಪ್ರವೇಶಿಸಿದ ಸೇವಕರೊಬ್ಬರು ಅವರ ಹಾಸಗೆಯ ಸಮೀಪಕ್ಕೆ ಬಂದುದನ್ನು ಗಮನಿಸಿ ಮಹಾಪುರುಷಜಿ ಧೀರ ಗಂಭೀರ ಸ್ವರದಿಂದ “ಯಾರು?” ಎಂದರು. ಸೇವಕ ತನ್ನ ಹೆಸರನ್ನು ತಿಳಿಸಿದೊಡನೆಯೆ ಮಹಾಪುರುಷಜಿ ಕೈ ಜೋಡಿಸಿಕೊಂಡು ಪ್ರಣಾಮ ಮಾಡಿದರು. ಈ ಸೇವಕಸಾಧು ಅವರ ದೀಕ್ಷಿತ ಶಿಷ್ಯನೇ; ಆದ್ದರಿಂದ ತನ್ನ ಗುರುವೆ ತನಗೆ ಈ ರೀತಿ ಪ್ರಣಾಮ ಸಲ್ಲಿಸಿದ್ದನ್ನು ಕಂಡು ಆತನ ಪ್ರಾಣಕ್ಕೇ ದಾರುಣ ಆಘಾತವಾಯಿತು. ಆತ ಅಶ್ರುಪೂರ್ಣಲೋಚನನಾಗಿ ಆವೇಗಭರದಿಂದ ಕೈ ಮುಗಿದುಕೊಂಡು ಬಿನ್ನಯಿಸಿದನು: ‘ಮಹಾರಾಜ್, ತಾವು ನನಗೆ ಪ್ರಣಾಮ ಮಾಡಿದ್ದೇಕೆ? ನಾನಾದರೋ ತಮ್ಮವನೆ ಚರಣಾಶ್ರಿತ ಸೇವಕ. ಇದರಿಂದ ನನಗೇನೋ ದೊಡ್ಡ ಅಕಲ್ಯಾಣವಾಗುತ್ತದೆಯೊ ಏನೊ! ‘ಸೇವಕನ ಈ ರೀತಿಯ ಕಾತರೋಕ್ತಿಯಿಂದ ಮಹಾಪುರುಷಜಿ ಸ್ವಲ್ಪ ವಿಚಲಿತರಾಗಿ ಗಾಢಗುರುಸ್ವರದಿಂದ ಹೇಳಿದರು : “ಅಯ್ಯಾ, ದುಃಖಿಸಬೇಡ. ಇದರಿಂದ ನಿನಗೇನೂ ಹಾನಿಯಾಗುವುದಿಲ್ಲ. ನನ್ನ ಮಾತಿನಲ್ಲಿ ವಿಶ್ವಾಸವಿಡು. ನಿನ್ನ ಹೃದಯದಲ್ಲಿ ಏನು ತಳಮಳ ಉಂಟಾಯಿತೋ ಅದು ನನಗೂ ಚೆನ್ನಾಗಿ ಅರ್ಥವಾಗುತ್ತದೆ. ಆದರೆ ಏನು ಮಾಡಲಿ ಹೇಳು? ನಾನು ನಿನ್ನಲ್ಲಿ ನಾರಾಯಣನನ್ನೆ ನೋಡುತ್ತಿದ್ದೇನಲ್ಲಾ. ನಾನೇನು ನಿನಗೆ ಪ್ರಣಾಮ ಮಾಡಿದೆನೆ? ನಿನ್ನ ಒಳಗೆ ಯಾವ ನಾರಾಯಣ ಇದ್ದಾನೆಯೋ ಆತ ನನಗೆ ಪ್ರತ್ಯಕ್ಷವಾಗಿ ಕಾಣುವುದರಿಂದ ಆತನಿಗೆ ಪ್ರಣಾಮ ಮಾಡುತ್ತೇನೆ. ನೀನು ತಿಳಿದುಕೊಳ್ಳುತ್ತೀಯ, ನಿನಗೇ ಪ್ರಣಾಮ ಮಾಡಿದೆ ಎಂದು. ಆದರೆ ಹಾಗಲ್ಲ. ಠಾಕೂರರು ಯಾವ ಯಾವ ರೀತಿಗಳಿಂದ ಎಂಥೆಂಥ ಭಾವಗಳಿಂದ ಕೃಪೆ ದೋರುತ್ತಿದ್ದಾರೆ – ಅದನ್ನೆಲ್ಲ ಯಾರಿಗೆ ಹೇಳಲಿ?” ಇಷ್ಟನ್ನು ಮಾತ್ರ ಹೇಳಿ ಮೌನವಾಗಿಬಿಟ್ಟರು.

ಮತ್ತೊಂದು ಸಮಯದಲ್ಲಿ ಸೇವೆ ಮಾಡುತ್ತಿದ್ದವರೊಬ್ಬರು, ಅವರು ಎಲ್ಲರಿಗೂ ಹಾಗೆ ಪ್ರಣಾಮ ಸಲ್ಲಿಸುವುದಕ್ಕೆ ಕಾರಣವೇನೆಂದು ಕೇಳಿದಾಗ ಮಹಾಪುರುಷಜಿ ಹೇಳಿದನು : “ಯಾರೆ ಆಗಲಿ ನನ್ನೆದುರು ಬಂದರೆ ತತ್‌ಕ್ಷಣವೆ ಅವರೊಡನೆ ಅವರವರ ಬೇರೆಬೇರೆ ದೇವದೇವಿ ಮೂರ್ತಿಗಳು ಕಾಣಿಸಿಕೊಳ್ಳುತ್ತಾರೆ; ಆದ್ದರಿಂದಲೆ ನಾನು ಆ ದೇವತೆಗಳಿಗೆ ಪ್ರಣಾಮ ಮಾಡುತ್ತೇನೆ. ಯಾರಾದರೂ ಬಳಿಗೆ ಬಂದರು ಎಂದರೆ, ಮೊದಲು ಅವರ ಅಂತರಾಕಾರ ಯಾ ಸತ್ತೆಯದೊ ಆ ಸತ್ತೆಗೆ ಅನುಸಾರವಾಗಿ ಒಂದು ಈಶ್ವರೀಯ ಜ್ಯೋತಿರ್ಮಯ ರೂಪ ನನ್ನ ಮುಂದೆ ಅವಿರ್ಭೂತವಾಗುತ್ತದೆ. ಆ ಬಂದ ವ್ಯಕ್ತಿ ಏನೋ ಒಂದು ಛಾಯೆಯಂತೆ ಅಸ್ಪಷ್ಟವಾಗಿ, ಅದರ ಸ್ಥಾನದಲ್ಲಿರುವ ಈಶ್ವರೀಯ ರೂಪವೆ ಸ್ಪಷ್ಟವೂ ಜೀವಂತವೂ ಆಗಿ ತೋರುತ್ತದೆ. ಅದಕ್ಕೇ ಅಲ್ಲವೆ ನಾನು ಪ್ರಣಾಮ ಮಾಡುವುದು! ನಾನು ನಮಸ್ಕಾರ ಮಾಡಿದ ಮೇಲೆ ಆ ಈಶ್ವರೀಯ ರೂಪ ಅಂತರ್ಧಾನವಾಗುತ್ತದೆ. ಆಮೇಲೆಯೆ ಬಂದ ಲೌಕಿಕ ವ್ಯಕ್ತಿ ಸ್ಪಷ್ಟವಾಗಿ ಕಾಣತೊಡಗಿ, ಆತನ ಗುರುತೂ ಸಿಗುತ್ತದೆ.”

ಸೇವಕ : “ಮಹಾರಾಜ್, ತಾವೇನೋ ದಿವ್ಯದೃಷ್ಟಿಯಿಂದ ಸಕಲರ ಒಳಗೂ ಭಗವಂತನ ದರ್ಶನ ಮಾಡಿ ಎಲ್ಲರಿಗೂ ಪ್ರಣಾಮ ಮಾಡುತ್ತೀರಿ; ಆದರೆ ನಾವು ಅದನ್ನು ಅರಿಯುವ ಬಗೆ ಹೇಗೆ? ನಮ್ಮ ಮನಸ್ಸಿಗೆ ಇದೇನಪ್ಪಾ, ಇದು ಈ ವಿಚಿತ್ರ ವ್ಯಾಪಾರ ! ಎನ್ನುವ ಹಾಗಾಗುತ್ತದೆ. ಬಂದವರೆಲ್ಲ ತಮಗೆ ಮೊದಲು ಪ್ರಣಾಮ ಮಾಡುವುದು ಹೇಗೆ? ತಾವೇನೇ ಅವರೆಲ್ಲರಿಗೂ ಮೊದಲೇ ಪ್ರಣಾಮ ಮಾಡುವುದು ಹೇಗೆ? ಸಾಧು ಭಕ್ತಾದಿಗಳ ಮನಸ್ಸಿನಲ್ಲಿ ತಾವು ಮೊದಲೇ ಪ್ರಣಾಮ ಮಾಡುವುದನ್ನು ಕಂಡು ತುಂಬ ದುಃಖವಾಗುತ್ತದೆ; ಅಲ್ಲದೆ ಅವರ ಮನಸ್ಸಿನಲ್ಲಿ ಏನೇನೋ ಮೂಡಿ ನಾನಾ ತರಹದ ಭಯಾಶಂಕೆಯ ಭಾವನೆಗಳಿಗೂ ಅವಕಾಶವಾಗುತ್ತದೆ.”

“ಅವರ ಇಷ್ಟ ಬಂದಹಾಗೆ ಕಲ್ಪಿಸಿಕೊಳ್ಳಲಿ” ಮಹಾಪುರುಷಜಿ ಮುಂದುವರಿದರು “ನಾನೇನು ಇವನ್ನೆಲ್ಲ ನಾನಾಗಿಯೆ ಮಾಡುತ್ತೇನೆಯೆ? ನನಗೇ ಎಷ್ಟೋ ಸಾರಿ ಏಕೆ ಹಾಗೆ ಮಾಡುತ್ತೇನೆ ಎನ್ನುವುದೇ ಗೊತ್ತಾಗುವುದಿಲ್ಲ, ಅವಾಕ್ಕಾಗಿಬಿಡುತ್ತೇನೆ. ಇನ್ನು ಬೇರೆಯವರಿಗೆ ಗೊತ್ತಾಗುವುದು ಹೇಗೆ? ಈ ಶರೀರ ಪಂಜರದೊಳಗೆ ಠಾಕೂರರಲ್ಲದೆ ಮತ್ತೇನೂ ಇಲ್ಲ. ಅವರು ಏನು ಮಾಡಿಸುತ್ತಾರೊ ಅದರಂತೆ ನಾನು ಮಾಡುತ್ತೇನೆ; ಏನನ್ನು ಹೇಳಿಸುತ್ತಾರೊ ಅದನ್ನೆ ಹೇಳುತ್ತೇನೆ. ಠಾಕೂರರು ಈ ಶರೀರವನ್ನು ಆಶ್ರಯಮಾಡಿಕೊಂಡು ಏನೇನು ಆಟ ಆಡುತ್ತಿಲ್ಲ ಎಂಬುದನ್ನು ಯಾರಿಗೆ ಹೇಳಲಿ? ಹೇಳಿದರೂ ತಿಳಿದುಕೊಳ್ಳುವವರು ಈ ಸಮಯದಲ್ಲಿ ಮಹಾರಾಜ್ ಇಲ್ಲವೆ ಶರತ್ ಮಹಾರಾಜ್‌ ಇಲ್ಲಿ ಇರುತ್ತಿದ್ದರೆ ಅವರಿಗೆ ಇದೆಲ್ಲ ಚೆನ್ನಾಗಿ ಅರ್ಥವಾಗುತ್ತಿತ್ತು. ಅಲ್ಲದೆ ನಾನು ಅವರ ಹತ್ತಿರ ನನ್ನ ಹೃದಯದ ಅಂತರ್ಹದ ಅನುಭವಗಳನ್ನೆಲ್ಲ ಹೇಳಿಕೊಂಡು ಸಮಾಧಾನ ಪಡೆಯುತ್ತಿದ್ದೆ. ಸರಿ, ಗುರುಮಹಾರಾಜರ ಇಚ್ಛೆ ಇದ್ದ ಹಾಗೆ ಆಗುತ್ತದೆ, ಬಿಡು. ಆತನ ಸಾಮಾನು; ತನಗೆ ಇಚ್ಛೆ ಬಂದ ಹಾಗೆ ಆತ ಆಟ ಆಡುತ್ತಾನೆ. ಇತ್ತೀಚೆಗೆ ದಿನದಿನವೂ ಶರೀರದ ಕರ್ಮ ಎಷ್ಟು ಕಡಿಮೆಯಾಗುತ್ತದೆಯೋ ಅಷ್ಟೆ ಹೆಚ್ಚಾಗುವಂತೆ ಅನುಭವವಾಗುತ್ತಿದೆ ಅಂತರ್ಯದ ವ್ಯಾಪಾರ. ಇದೇ ರೀತಿ ಶರೀರ ಇನ್ನೆಷ್ಟು ದಿನ ಇರಬೇಕೊ ಅವನೊಬ್ಬನಿಗೆ ಗೊತ್ತು.”

ಲೀಲಾ ಲಬ್ಧ ಸ್ಥಾಪಿತ ಲುಪ್ತಾಖಿಲ ಲೋಕಾಂ
ಲೋಕಾತೀತೈರ್ಯೋಗಿಭಿರಂತಶ್ಚಿರಮ್ಯಗ್ಯಾಂ
ಬಾಲಾದಿತ್ಯ ಶ್ರೇಣಿ ಸಮಾನ ದ್ಯುತಿ ಪುಂಜಾಂ
ಗೌರೀಮಂಬಾಮಂಬುರುಹಾಕ್ಷೀಮಹಮೀಡೇ|

ಚಂದ್ರಾಪೀಡಾನಂದಿತ ಮಂದಸ್ಮಿತ ವಕ್ತ್ರಾಂ
ಚಂದ್ರಾಪೀಡಾಲಂಕೃತ ನೀಲಾಲಕೆ ಭಾರಾಂ
ಇಂದ್ರೋಪೇಂದ್ರಾದ್ಯರ್ಚಿತ ಪಾದಾಂಬುಜ ಯುಗ್ಮಾಂ
ಗೌರೀಮಂಬಾಮಂಬುರುಹಾಕ್ಷೀಮಹಮೀಡೇ |  – ಶಂಕರಾಚಾರ್ಯ

* * *