ಬೇಲೂರು ಮಠ
ಬುಧವಾರ, ಡಿಸೆಂಬರ್ ೨೮, ೧೯೩೨

ಇಡಿಯ ದಿನ ಬಿಡುವಿದಲ್ಲದ ದಿನವಾಗಿತ್ತು; ಭಕ್ತರೂ ದರ್ಶನಾಕಾಂಕ್ಷಿಗಳೂ ನಿಬಿಡವಾಗಿ ಬಂದು ಹೋಗುತ್ತಲೆ ಇದ್ದರೆ. ಢಾಕಾದ ಒಬ್ಬರು ದೊಡ್ಡ ಮನುಷ್ಯರು ಪರಲೋಕಗತನಾದ ತನ್ನ ಮಗನ ಒಂದು ಪೆಟ್ಟಿಗೆಯಲ್ಲಿ ಮಹಾಪುರುಷ ಮಹಾರಾಜರ ಒಂದು ಫೋಟೋವನ್ನೂ ಒಂದು ಜಪಮಾಲೆಯನ್ನೂ ಕಂಡ ಮೇಲೆ ಸ್ವತಃ ಪ್ರಚೋದಿತರಾಗಿ ಮಹಾಪುರುಷಜಿಯ ದರ್ಶನಕ್ಕಾಗಿ ಸಾಯಂವೇಳೆ ಮಠಕ್ಕೆ ಬಂದರು. ಅವರು ತಮ್ಮ ಮಗನ ಮರಣದ ಸಂದರ್ಭದ ಎಲ್ಲ ಘಟನೆಗಳನ್ನೂ ಹೇಳಿ ಅವನಿಗಾಗಿ ತುಂಬ ಶೋಕಿಸತೊಡಗಿದರು. ಮಹಾಪುರುಷಜಿ ಧೀರಭಾವದಿಂದ ಎಲ್ಲವನ್ನೂ ಆಲಿಸಿ ಆಮೇಲೆ ಹೇಳಿದರು: “ನಿಮ್ಮ ಮಗ ಭಗವದ್‌ಭಕ್ತನಾಗಿದ್ದ; ಆತನ ಆತ್ಮಕ್ಕೆ ಸದ್ಗತಿ ನಿಶ್ಚಯ. ಆತನು ಮಹಾ ಭಾಗ್ಯವಾನ್. ಅವನಿಗಾಗಿ ನೀವು ಶೋಕಪಡುವುದು ಬೇಡ. ಆತ ಅತ್ಯಂತ ಶುಭ ಸಂಸ್ಕಾರಗಳೊಡನೆ ಜನ್ಮತಾಳಿದ್ದನು. ಆದ್ದರಿಂದಲೆ ಅಷ್ಟು ಚಿಕ್ಕ ವಯಸ್ಸಿನಲ್ಲಿಯೆ ಅವನ ಮನಸ್ಸು ಭಗವಂತನ ಕಡೆಗೆ ತಿರುಗಿತ್ತು; ತನ್ನ ಜೀವನದ ಉದ್ದೇಶ ಯಾವುದಾಗಿತ್ತೊ ಅದನ್ನು ಸಾಧಿಸಿ ಸ್ವಧಾಮಕ್ಕೆ ಹಿಂತಿರುಗಿದ್ದಾನೆ. ಅದೂ ಅಲ್ಲದೆ ಜನ್ಮ ಮೃತ್ಯು ಇವು ಯಾವ ಮನುಷ್ಯನ ಕೈಯಲ್ಲಿಯೂ ಇಲ್ಲ; ಅವೆಲ್ಲ ಈಶ್ವರೇಚ್ಛಾಧೀನ. ಅವನಿಗೆ ಮಾತ್ರ ಗೊತ್ತು, ಯಾರನ್ನು ಎಷ್ಟು ದಿನ ಈ ಸಂಸಾರದಲ್ಲಿ ಇರಿಸಬೇಕು ಎಂದು. ಎಲ್ಲ ದೇಹಗಳೂ ನಾಶವಾಗುತ್ತವೆ; ಈ ನಿಯಮದ ವ್ಯತಿಕ್ರಮ ಎಂದೂ ಇಲ್ಲ. ನಿಮ್ಮ ಮಗ ಹೋಗಿದ್ದಾನೆ; ನೀವೂ ಒಂದಲ್ಲ ಒಂದು ದಿನ ಹೋಗುತ್ತಿರಿ; ಹೆಂಡತಿ, ಮಗ, ಮಗಳು, ಯಾರನ್ನೆಲ್ಲ ತನ್ನವರು ಎಂದುಕೊಳ್ಳುತ್ತೇವೆಯೊ ಅವರೆಲ್ಲರೂ ಹೋಗುತ್ತಾರೆ. ಯಾರೂ ಚಿರಕಾಲ ಇರುವುದಿಲ್ಲ. ಗೀತೆಯಲ್ಲಿ ಶ್ರೀ ಭಗವಂತ ಹೇಳುತ್ತಾನೆ:

ಜಾತಸ್ಯ ಹಿ ಧ್ರುವೋ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ |
ತಸ್ಯಾದಪರಿಹಾರ್ಯೇsರ್ಥೇ ನ ತ್ವಂ ಶೋಚಿತಮರ್ಹಸಿ ||

ಯಾವ ವ್ಯಕ್ತಿ ಹುಟ್ಟುತ್ತಾನೊ ಅವನ ಸಾವೂ ನಿಶ್ಚಯ; ಯಾವ ವ್ಯಕ್ತಿ ಸಾಯುವನೊ ಅವನ ಹುಟ್ಟೂ ನಿಶ್ಚಯ. ಆದ್ದರಿಂದ ಆ ಅಪರಿಹಾರ್ಯವಾದ ವಿಷಯಕ್ಕಾಗಿ ಶೋಕಪಡಬಾರದು ಎನ್ನುತ್ತಾನೆ. ಹಾಗಾದರೆ ಮಾನವನ ಜೀವನದ ಉದ್ದೇಶವಾದರೂ ಏನು? ಹೇಳುತ್ತೀಯಾ? ಭಗವಂತನನ್ನು ಪಡೆಯುವುದೇ ಜೀವನದ ಉದ್ದೇಶ. ಹಾಗಾದರೆ ಹೆಂಡತಿ ಮಕ್ಕಳು ಇತ್ಯಾದಿ ಇದ್ದರೇನು ಹೋದರೇನು? ಒಬ್ಬೊಬ್ಬರೊ ಪ್ರತ್ಯೇಕ ಪ್ರತ್ಯೇಕವಾಗಿ ತಮ್ಮ ತಮ್ಮ ಕರ್ಮಗಳಿಗೆ ತಾವು ಹೊಣೆ. ನಿಮ್ಮ ಮಗ ಸುಕೃತಿಯಾಗಿದ್ದಾನೆ; ಆತನಿಗೆ ಸದ್ಗತಿಯೆ ದೊರಕೊಂಡಿದೆ. ಈಗ ನಿಮ್ಮ ಸ್ವಂತ ಸದ್ಗತಿಗೆ ಏನು ಬೇಕೊ ಅದನ್ನು ಮಾಡಿ. ನಿಮ್ಮ ಸಹಧರ್ಮಿಣಿಗೂ ಅದನ್ನೆ ಹೇಳಿ. ಬರಿದೆ ಬಾಯಲ್ಲಾಡಿದರೆ ಏನಾಗುತ್ತದೆ? ಕೆಲಸ ಮಾಡಬೇಕು. ಅತ್ಯಂತ ದೃಢ ಮನಸ್ಸಿನಿಂದ ಯಾವುದ ಭಗವಲ್ಲಾಭಕ್ಕೆ ಕಾರಣವಾಗುತ್ತದೆಯೊ ಅದನ್ನು ಕೈಗೊಳ್ಳಬೇಕು. ಸುರುಮಾಡಿ ಇವತ್ತಿನಿಂದಲೆ; ಕ್ಷಣಕ್ಷಣವೂ ಜೀವನ ಕ್ಷಯವಾಗಿ ಹೋಗುತ್ತಿದೆ. ಯಾರಿಗೆ ಯಾವಾಗ ಕರೆ ಬರುತ್ತದಯೋ ಯಾರಿಗೂ ಗೊತ್ತಿಲ್ಲ; ಆದ್ದರಿಂದ ಒಂದು ದಿನವನ್ನೂ ವೃಥಾ ಹಾಳಾಗಲು ಬಿಡಬಾರದು. ಅದನ್ನೆಲ್ಲ ಆಮೇಲೆ ಮಾಡಿದರಾಯಿತು ಎಂದು ಯಾರು ಭಾವಿಸುತ್ತಾರೊ ಅವರು ಏನನ್ನೂ ಸಾಧಿಸುವುದಿಲ್ಲ. ಅಂತಹವರು ಈ ಜನನ ಮರಣ ಪ್ರವಾಹ ಮಧ್ಯೆ ಅನಂತಕಾಲವೂ ಮುಳುಗಿ ತೇಲುತ್ತಿರುತ್ತಾರೆ. ಆಮೇಲೆ ಅತ್ಯಂತ ಭಾವಪೂರ್ಣವಾಗಿ ಹಾಡಿದರು:

ಕಾಣು ಭಾವಿಸಿ, ಮನವೆ: ಯಾರಿಗೂ ಯಾರಿಲ್ಲ;
ಬರಿದೆ ನೀ ಭ್ರಮಿಸುತಿಹೆ ಭೂಮಂಡಲದಲಿ
ಸಿಲುಕಿ ಮಾಯಾಜಾಲದಲ್ಲಿ ಓ ಮರೆಯದಿರು
ದಕ್ಷಿಣಾ ಕಾಳಿಯನು, ಓ ನನ್ನ ಮನವೆ!
ಯಾರಿಗಾಗಿಯೆ ನೀನು ಸಾಯಲೂ ಸಿದ್ಧನೋ
ಅವರೇನು ನಿನ್ನೊಡನೆ ಬರುವರೇನೋ?
ಆ ಪ್ರೇಯಸಿಯೆ, ಕೇಳ್, ಕಡೆಗೆ ನೀ ಹರಣ ತೊರೆದೆಡೆಗೆ
ತೀರ್ಥ ಚಿಮುಕಿಪಳಲ್ತೆ ಅಶುಭ ಕಳೆಯೆ?
ಒಂದೆರಡೆ ದಿನಕಾಗಿ ಒಡೆಯನೆಂಬನೊ ಬಾಗಿ
ಪ್ರೀತಿ ಗೌರವ ತೋರಿ ಸಕಲರಿಲ್ಲಿ;
ಕೆಲಕೆ ನೂಂಕುವರಯ್ಯ ಆ ಒಡೆಯನನೆ ತಳ್ಳಿ
ಕಾಲಕಾಲನು ಕರೆವ ಸಮಯದಲ್ಲಿ!

“ಸಂಸಾರದಲ್ಲಿ ಯಾರನ್ನು ತನ್ನವರು ಎಂದು ಭಾವಿಸುತ್ತೀಯೊ ಅವರು ಯಾರೂ ನಿಜವಾಗಿಯೂ ತನ್ನವರಲ್ಲ. ಶ್ರೀ ಭಗವಂತನೊಬ್ಬನೆ ಮಾತ್ರ ನಿನ್ನವನಾಗಿದ್ದಾನೆ. ಅವನೊಬ್ಬನೆ ಜನನ ಮರಣಗಳಲ್ಲಿ ನಿನ್ನ ಸಂಗಾತಿ, ನಿನ್ನ ಜೀವದ ಅಂತಾರಾತ್ಮ. ಆತನೊಡನೆ ನಮಗಿರುವ ಸಂಬಂಧವೆ ಚಿರಕಾಲಿಕ ಮತ್ತು ನಿತ್ಯ.”

ಯಸ್ಯಾಮೋತಂ ಪ್ರೋತಮಶೇಷಂ ಮಣಿಮಾಲಾ
ಸೂತ್ರೇ ಯದ್ವತ್ ಕ್ವಾಪಿ ಚರಂ ಚಾಪ್ಯಚರಂ ವಾ |
ತಾಮಧ್ಯಾತ್ಮ ಜ್ಞಾನಪದವ್ಯಾ ಗಮನೀಯಾಂ
ಗೌರೀಮಂಬಾಮಂಬುರಹಾಕ್ಷೀಮಹಮೀಡೇ ||

ನಾನಾಕಾರ್ಯೇಃ ಶಕ್ತಿ ಕದಂಬೈರ್ಭುವನಾನಿ
ವ್ಯಾಪ್ಯ ಸ್ವೈರಂ ಕ್ರೀಡತಿ ಯೇಯಂ ಸ್ವಯಮೇಕಾ |
ಕಲ್ಯಾಣೀಂ ತಾಂ ಕಲ್ಪಲತಾ ಮಾನತಿ ಭಾಜಾಂ
ಗೌರೀಮಂಬಾಮಂಬುರುಹಾಕ್ಷೀಮಹಮೀಡೇ ||

ಆಶಾಪಾಶಕ್ಲೇಶ ವಿನಾಶಾಂ ವಿದಧಾನಾಂ
ಪಾದಾಂಭೋಜಧ್ಯಾನ ಪರಾಣಾಂ ಪುರುಷಾಣಾಂ |
ಈಶಾಮೀಶಾರ್ಧಾಂಗಹರಾಂ ತಾಮಭಿರಾಮಾಂ
ಗೌರೀಮಂಬಾಮಂಬುರುಹಾಕ್ಷೀಮಹಮೀಡೇ ||  – ಶಂಕರಾಚಾರ್ಯ