ಬೇಲೂರು ಮಠ 
ಬುಧವಾರ, ಡಿಸೆಂಬರ್ , ೧೯೩೨

ವೇಳೆ ಅಪರಾಹ್ನ. ಮಹಾಪುರುಷ ಮಹಾರಾಜ್ ಒಬ್ಬ ಸೇವಾರ್ಥಿಗೆ ಹೇಳಿದರು: “ಶ್ರೀಮದ್ ಭಾಗವತ ತರುತ್ತೀಯಾ? ಅಜಾಮಿಳನ ಉಪಾಖ್ಯಾನ ಕೇಳಬೇಕು ಎಂದು ಒಂದಿಷ್ಟು. ಇಚ್ಛೆಯಾಗಿದೆ.” ತದನುಸಾರವಾಗಿ ಭಾಗವತವನ್ನು ತಂದು ಆ ಭಾಗವನ್ನು ಓದತೊಡಗಲಾಯಿತು.

ರಾಜಾ ಪರೀಕ್ಷಿತನು ಶುಕದೇವನನ್ನು ಕೇಳುತ್ತಾನೆ: “ಹೇ ಮಹಾಭಾಗ, ಮನುಷ್ಯನು ಪಾಪಕರ್ಮದಿಂದ ಯಾವ  ಪ್ರಕಾರ ನಿರತನಾಗಬಲ್ಲನು; ಮತ್ತು ಪಾಪಕರ್ಮಜನಿತವಾದ ವಿವಿಧ ಉಗ್ರ ಯಾತನಾಪೂರ್ಣ ನರಕ ಭೋಗದಿಂದ ಯಾವ ಪ್ರಕಾರವಾಗಿ ನಿಷ್ಕೃತಿ ಹೊಂದಲು ಸಮರ್ಥನಾಗುತ್ತಾನೆ?” ಅದಕ್ಕೆ ಉತ್ತರವಾಗಿ ಶುಕದೇವ ಹೇಳುತ್ತಾನೆ: “ದೊಡ್ಡದಾದ ಬಿದಿರ ಹಿಂಡಿಲವನ್ನು ಬೆಂಕಿ ಹೇಗೆ ಸುಟ್ಟುರಿಸುತ್ತದೆಯೋ ಹಾಗೆಯೆ ಶ್ರದ್ಧಾಯುಕ್ತನಾದ ವ್ಯಕ್ತಿಯೂ ತಪಸ್ಯೆ, ಬ್ರಹ್ಮಚರ್ಯ, ಶಮ, ದಮ, ತ್ಯಾಗ, ಸತ್ಯ, ಶೌಚ, ಯಮ, ನಿಯಮ ಇತ್ಯಾದಿಗಳ ಸಹಾಯದಿಂದ ಬುದ್ಧಿ, ಮತ್ತು ವಾಕ್ ಕೃತ ಪಾಪಗಳೆಲ್ಲವನ್ನೂ, ವಿನಷ್ಟಗೊಳಿಸಲು ಸಕ್ಷಮನಾಗುತ್ತಾನೆ” ಆದರೆ ಈ ಪ್ರಕಾರದ ಪ್ರಾಯಶ್ಚಿತ್ತ ಬಹಳ ಕಠಿನವಾದದ್ದು; ಆದ್ದರಿಂದ ಕೊಟ್ಟಕೊನೆಯಲ್ಲಿ ಶುಕದೇವನು ಭಕ್ತಿಸಂಬಂಧವಾಗಿ ಉಪದೇಶಮಾಡಿ ಹೇಳುತ್ತಾನೆ:

ಕೇಚಿತ್ ಕೇವಲಯಾ ಭಕ್ತ್ಯಾ ವಾಸುದೇವ ಪರಾಯಣಾಃ |
ಅಘಂ ಧುನ್ವಂತಿ ಕಾರ್ತ್ಸ್ನೇನ ನೀಹಾರಮಿವ ಭಾಸ್ಕರಃ ||

“ಅರ್ಥಾತ್, ಸೂರ್ಯೋದಯವಾದೊಡನೆ ಕಾವಣದ ರಾಶಿ ಹೇಗೆ ವಿದೂರಿತವಾಗುತ್ತದೆಯೋ, ಹಾಗೆ ವಾಸುದೇವ ಪರಾಯಣರಾದ ವ್ಯಕ್ತಿಗಳು ಕೇವಲ ಏಕಾಂತ ಭಕ್ತಿಯಿಂದಲೆ ಸಮಸ್ತ ಪಾಪಗಳಿಂದಲೂ ಮುಕ್ತರಾಗುತ್ತಾರೆ ಎಂಬುದರ ನಿದರ್ಶನ ರೂಪವಾಗಿ ಮುಂದೆ ಅಜಾಮಿಳನ ಉಪಾಖ್ಯಾನ ವರ್ಣಿತವಾಗಿದೆ. ಅಜಾಮಿಳ ಮೊದಲು ಸದಾಚಾರೀ ಬ್ರಾಹ್ಮಣನಾಗಿದ್ದನು. ಆಮೇಲೆ ತನ್ನ ವಿವಾಹಿತ ಪತ್ನಿಯನ್ನು ಪರಿತ್ಯಜಿಸಿ ಒಬ್ಬಳು ಸುರಾಪಾಯಿಯಾದ ದಾಸಿಯನ್ನು ಪತ್ನಿಯಂತೆ ಗ್ರಹಣ ಮಾಡಿದನು. ಆಮೇಲೆ ಕಾಲಕ್ರಮೇಣ ಅಕ್ಷಕ್ರೀಡೆ, ಜೂಜಾಟ, ಕಾಪಟ್ಯ, ವಂಚನೆ ಮತ್ತು ಚೌರ್ಯ ಮೊದಲಾದ ಕಲುಷಿತ ವೃತ್ತಿಯಲ್ಲಿ ಆಸಕ್ತನಾಗಿ ತನ್ನ ಸಮಗ್ರ ಜೀವನವನ್ನೂ ನಾನಾವಿಧ ಪಾಪಕರ್ಮಗಳಿಂದ ಲಿಪ್ತಗೈದನು. ಅಜಾಮಿಳನಿಗೆ ಮಕ್ಕಳು ಹತ್ತು ಮಂದಿ. ಕೊನೆಯ ಮಗನ ಹೆಸರು ನಾರಾಯಣ. ಅವನನ್ನೆ ಅಜಾಮಿಳ ಉಳಿದೆಲ್ಲ ಮಕ್ಕಳಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದನು. ತನ್ನ ಎಂಬತ್ತೆಂಟನೆಯ ವಯಸ್ಸಿನಲ್ಲಿ ಅಜಾಮಿಳನು ಮೃತ್ಯುಶಯ್ಯೆಯಲ್ಲಿದ್ದಾಗ ತನ್ನನ್ನು ಒಯ್ಯಲು ಬಂದ ಉಗ್ರಮೂರ್ತಿಗಳಾದ ಯಮದೂತರನ್ನು ಕಂಡು ಭಯದಿಂದ ತನ್ನ ಮಗ ‘ನಾರಾಯಣ ‘ನ ಹೆಸರನ್ನು ಕೂಗಿ ಕರೆಯತೊಡಗಿದನು. ಅಂತಿಮ ಸಮಯದಲ್ಲಿ  ‘ನಾರಾಯಣ’ ಎಂದು ಶ್ರೀ ಭಗವಂತನ ಆ ಹೆಸರನ್ನು ಉಚ್ಚರಿಸಿದುದರ ಫಲವಾಗಿ ಒಡನೆಯೆ ವಿಷ್ಣುದೂತರು ಬಂದು ಅಜಾಮಿಳನ ಆತ್ಮವನ್ನು ಯಮದೂತರ ಕೈಯಿಂದ ಬಿಡಿಸಿಕೊಂಡು ವೈಕುಂಠಕ್ಕೆ ಎತ್ತಿಕೊಂಡು ಹೋದರು.

ಮಹಾಪುರುಷಜಿ ಮಹಾರಾಜ್ ತುಂಬ ತನ್ಮಯರಾಗಿ ಅಜಾಮಿಳನ ಉಪಾಖ್ಯಾನ ಆಲಿಸಿದರು. ಕೊನೆಯ ಶ್ಲೋಕ ಹೀಗೆಂದಿತ್ತು:

ಮ್ರಿಯಮಾಣೋ ಹರೇರ್ನಾಮ ಗೃಣನ್ ಪುತ್ರೋಪಚಾರಿತಂ |
ಅಘಂ ಧುನ್ವಂತೇ ಕಾರ್ತ್ಸೇನ ನೀಹಾರಮಿವ ಭಾಸ್ಕರಃ ||

ಅರ್ಥಾತ್‌, ಹೇ ರಾಜನ್, ಶ್ರದ್ಧಾಹೀನನಾದ ಅಜಾಮಿಳನು ಮುಮೂರ್ಷ ಅವಸ್ಥೆಯಲ್ಲಿ ಮಗನ ಹೆಸರಿನ ನಿಮಿತ್ತಮಾತ್ರದಿಂದ ಭಗವಂತನ ಹೆಸರನ್ನು ಉಚ್ಚರಿಸಿದ್ದರೂ ಭಗವದ್‌‌ಧಾಮಕ್ಕೆ ಹೋದನು. ಹೀಗಿರಲು ಯಾರು ಶ್ರದ್ಧಾ ಪೂರ್ವಕವಾಗಿ ಭಗವಂತನ ನಾಮಕೀರ್ತನ ಮಾಡುತ್ತಾರೆಯೊ ಅಮತಹವರಿಗೆ ಭಗವತ್‌ ಸಾನ್ನಿಧ್ಯ ದೊರೆಯುವುದರಲ್ಲಿ ಸಂದೇಹವಿದೆಯೆ? ಮಹಾಪುರುಷಜಿ ಇದನ್ನು ಕೇಳಿ ಆವೇಶವಶರಾದಂದಾಗಿ ಹೇಳಿದರು : “ಆಹಾ! ನೋಡಿದೆಯಾ ಭಗವಂತನ ನಾಮದಲ್ಲಿ ಎಂತಹ ಅದ್ಭುತ ಶಕ್ತಿ! ಆಃ! ಎಷ್ಟು ಸೊಗಸು, ಎಷ್ಟು ಸುಂದರ ಕಥೆ! ಅದಕ್ಕೇ ಠಾಕೂರ್‌ ಹೇಳುತ್ತಿದ್ದುದ್ದು  ‘ನಾಮ-ನಾಮೀ ಅಭೇದ’ ಎಂದು. ಅದು ಅತ್ಯಂತ ಸತ್ಯ ಮತು. ದೇವರ ಹೆಸರಿನಲ್ಲಿ ಎಲ್ಲವೂ ಅಡಗಿದೆ; ನಾಮವೆ ಬ್ರಹ್ಮ. ಅವನು ನಾಮದ ಮಧ್ಯೆಯೆ ವಾಸಮಾಡುತ್ತಾನೆ. ಯಾವ ಸ್ಥಾನದಲ್ಲಿ ಭಗವಂತನ ನಾಮಕೀರ್ತನ ನಡೆಯುತ್ತದೆಯೊ ಆ ಸ್ಥಾನದಲ್ಲಿ ಭಗವಂತನು ಸರ್ವದಾ ವಿರಾಜ ಮಾನನಾಗಿರುತ್ತಾನೆ.”

ನಾಹಂ ತಿಷ್ಠಾಮಿ ವೈಕುಂಠೇ ಯೋಗೀನಾಂ ಹೃದಯೇ ನ ಚ |
ಮದ್‌ಭಕ್ತಾ ಯತ್ರ ಗಾಯನ್ತಿ ತತ್ರ ತಿಷ್ಠಾಮಿ ನಾರದ ||

ಭಗವಂತ ನಾರದನಿಗೆ ಹೇಳಿದ್ದಾನೆ: “ಹೇ ನಾರದ, ನಾನು ವೈಕುಂಠದಲ್ಲಿಯೂ ಇರುವುದಿಲ್ಲ; ಯೋಗಿಗಳ ಹೃದಯದಲ್ಲಿಯೂ ವಾಸಮಾಡುವುದಿಲ್ಲ; ಆದರೆ ಎಲ್ಲಿ ನನ್ನ ಭಕ್ತರು ನನ್ನ ನಾಮಗಾನ ಮಾಡುತ್ತಾರೆಯೊ ಅಲ್ಲಿ ನಾನಿರುತ್ತೇನೆ.” ಠಾಕೂರರು ಹರಿನಾಮಗಾನ ಮಾಡುವಂತೆ ನಮಗೆ ಮತ್ತೆ ಮತ್ತೆ ಹೇಳುತ್ತಿದ್ದರು. ಅವರು ಹೇಳುತ್ತಿದ್ದರು: ‘ಮರದ ಕೆಳಗೆ ನಿಂತು ಕೈಚಪ್ಪಾಳೆ ಹೊಡೆದರೆ ಮೇಲಿರುವ ಹಕ್ಕಿಗಳೆಲ್ಲ ಹೇಗೆ ಹಾರಿಹೋಗುತ್ತವೆಯೊ ಹಾಗೆಯೆ ಹರಿನಾಮ ಕೀರ್ತನೆ ಮಾಡಿದರೆ ಒಡನೆಯೆ ದೇಹದ ಎಲ್ಲ ಪಾಪಗಳೂ ತೊಲಗಿಹೋಗುತ್ತವೆ.’ ಠಾಕೂರರು ಸ್ವತಃ ತಾವೂ ಕರತಾಳ ಹಾಕುತ್ತಾ ಪದೇಪದೇ ನಾಮಕೀರ್ತನೆ ಮಾಡುತ್ತಿದ್ದರು. ನಾಮಕೀರ್ತನೆ ಸುರುಮಾಡುತ್ತಿದ್ದಂತೆಯೆ ಭಾವಸ್ಥರಾಗಿ ಬಹಳ ಹೊತ್ತು ಅವಿರಾಮ ನಾಮಗಾನ ಮಾಡತೊಡಗುತ್ತಿದ್ದರು.

ಆ ದಿನ ಅಜಾಮಿಳನ ಉಪಾಖ್ಯಾನ ಕೇಳಿ ಮಹಾಪುರುಷಜಿಗೆ ಖುಷಿಯೊ ಖುಷಿ! ಎಷ್ಟರಮಟ್ಟಿಗೆ ಎಂದರೆ, ಆಮೇಲೆ ದರ್ಶನಾರ್ಥಿಗಳು ಯಾರು ಬಂದರೂ ಎಲ್ಲರಿಗೂ ಈ ಅಜಾಮಿಳನ ಕಥೆಯನ್ನು ಆನಂದದಿಂದ ಹೇಳುತ್ತಿದ್ದರು.

* * *